ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಆದಿಮಾವಸ್ಥೆಯ ಕಾಲದಿಂದ ಇಲ್ಲಿಯ ತನಕವೂ ಮನುಷ್ಯನಿಗೆ ವಿಶ್ವಸೃಷ್ಟಿಯ ಮೂಲಕಾರಣವು ಏನಿರಬಹುದು? ಎಂಬ ಪ್ರಶ್ನೆ ಬಹಳವಾಗಿ ಕಾಡಿದೆ. ಬಯಸದೇ ಬಂದಿರುವ ಜೀವಿಗಳ ಹುಟ್ಟು, ಮರಣ, ರೋಗ ಹಾಗೂ ಅಸ್ಥಿರವಾದ ಬದುಕಿನ ಪರಮಾರ್ಥ ಏನಿರಬಹುದೆಂಬುದು ಅವನ ಕುತೂಹಲ ಕೆರಳಿಸಿದೆ. ನಿಸರ್ಗದ ಈ ರಹಸ್ಯವನ್ನು ಬೇಧಿಸಲೇ ಬೇಕೆಂದು ಮನುಷ್ಯ ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾನೆ.
ಈ ಪ್ರಯತ್ನದ ಭಾಗವಾಗಿ ಆಯಾ ಕಾಲಕ್ಕೆ ತಕ್ಕಂತೆ ಅವರವರ ಪರಿಸರಗಳಲ್ಲಿ ವಿಶ್ವ ಸೃಷ್ಟಿಯ ಮೂಲಕಾರಣಗಳನ್ನು ಜನಾಂಗಗಳು ವಿವರಿಸಿಕೊಂಡಿರುವುದು ಜಗತ್ತಿನುದ್ದಕ್ಕೂ ಕಂಡುಬರುತ್ತದೆ. ಈ ಚರ್ಚೆಯ ಆಲೋಚನೆಗಳೇ ಮುಂದಿನ ಜಗತ್ತಿನ ಧರ್ಮಗಳ ಉಗಮಕ್ಕೆ ಕಾರಣವಾಗಿರಲೂ ಬಹುದು. ಏಕೆಂದರೆ ವಿಶ್ವದ ಎಲ್ಲಾ ಧರ್ಮಗಳು ಸಹ ವಿಶ್ವ ಸೃಷ್ಟಿಯ ಮೂಲವನ್ನು ತಮ್ಮದೇ ಆದ ಬೇರೆ ಬೇರೆ ಪರಿಭಾಷೆಗಳಲ್ಲಿ ವಿವರಿಸಿಕೊಟ್ಟಿವೆ.
ಪ್ರಸ್ತುತ ದಾಖಲೆಗಳ ಪ್ರಕಾರ ಈ ಭೂಖಂಡದಲ್ಲಿ 78 ಧರ್ಮಗಳು ಇದ್ದಂತೆ ತೋರುತ್ತವೆ. ಇವುಗಳಲ್ಲಿ ಅನೇಕ ಧರ್ಮಗಳು ನಶಿಸಿಹೋಗಿವೆ. ಇಂಥವುಗಳಲ್ಲಿ 62 ಪಂಥಗಳು ಭಾರತದೇಶವೊಂದರಲ್ಲೇ ಇದ್ದವೆಂದು ಗುರುತಿಸಲಾಗಿದೆ.
ಈ ಎಲ್ಲಾ ಪಂಥಗಳೂ ವಿಶ್ವದ ಮೂಲ ಅವಸ್ಥೆ ಚೈತನ್ಯರೂಪವೇ ಅಥವಾ ವಸ್ತು ರೂಪವೇ? ನಿರ್ಗುಣವೇ ಅಥವಾ ಸಗುಣವೇ? ಚೈತನ್ಯದಿಂದ ವಸ್ತುವಿನ ಹುಟ್ಟುವಿಕೆ ಸಾಧ್ಯವಾಯಿತೇ ಇಲ್ಲವೆ ವಸ್ತುವಿನಿಂದ ಚೈತನ್ಯ ಉಗಮವಾಯಿತೇ? ಈ ಮೂಲಭೂತ ಪ್ರಶ್ನೆಗಳ ವಿವೇಚನೆಯ ಮೂಲಕ ತಮ್ಮತಮ್ಮ ದರ್ಶನಗಳನ್ನು ಮಂಡಿಸುತ್ತವೆ. ಭಾರತೀಯ ಎಲ್ಲಾ ದರ್ಶನಗಳ ತಿರುಳು ಸಹ ಇದೇ ಆಗಿದೆ.
ಭಾರತದ ಪಂಥಗಳು ಸಂಖ್ಯೆಯಲ್ಲಿ ಸಾಕಷ್ಟಿದ್ದರೂ ಇವೆಲ್ಲವೂ ‘ಪಾರಮಾರ್ಥಿಕ ಸತ್ಯ ಹಾಗೂ ಲೌಕಿಕ ಸತ್ಯ’ ಎಂಬೆರಡು ವಿಷಯಗಳ ಮೇಲಷ್ಟೇ ತಮ್ಮ ತಮ್ಮ ದರ್ಶನಗಳನ್ನು ರೂಪಿಸಿರುವುದು ಕಂಡುಬರುತ್ತದೆ.
ಪಾರಮಾರ್ಥಿಕ ಸತ್ಯವೇ ಅಂತಿಮವೆಂದು (universal) ಹೇಳುವ ದರ್ಶನಗಳೆಲ್ಲವೂ “ಸರ್ವಶಕ್ತವಾದ ಚೈತನ್ಯರೂಪಿ ಪರಮಾತ್ಮನೇ ಸರ್ವಕ್ಕೂ ಆಧಾರವಾಗಿದ್ದಾನೆ. ಈ ಸರ್ವಶಕ್ತನೇ ವಿಶ್ವದ ನಿಯಂತ್ರಣವನ್ನೂ, ಸಂಚಾಲನೆಯನ್ನೂ ಮಾಡುತ್ತಾನೆ. ಸೃಷ್ಟಿ ಸ್ಥಿತಿ ಲಯಗಳಿಗೆಲ್ಲ ಅವನೇ ಅಧಿಕಾರಿ! ಅದುವೇ ಪರಬ್ರಹ್ಮ! ಬ್ರಹ್ಮವೇ ಸ್ಥಿರ ಮತ್ತು ಸತ್ಯ; ಬ್ರಹ್ಮದ ಲೀಲೆಯೇ ಈ ವಿಶ್ವದ ಅವಸ್ಥೆಯೆಂದು ಸಾರುತ್ತವೆ. ಈ ತತ್ವವನ್ನು ಪ್ರತಿಪಾದಿಸಿದವರಲ್ಲಿ ಮನು, ಜೈಮಿನಿ, ಬಾದರಾಯಣ, ಯಜ್ಞವಲ್ಕ್ಯ, ಉಪನಿಷತ್ಕಾರರು, ಶಾಸ್ತ್ರ ಸಂಹಿತೆ, ಶೃತಿ, ಸ್ಮೃತಿಕಾರರು ಹಾಗೂ ಆದಿಶಂಕರಾಚಾರ್ಯರು ಹಾಗೂ ಸೂತ ಪುರಾಣಿಕರು ಪ್ರಮುಖವಾಗಿ ಕಾಣುತ್ತಾರೆ.
ಇವರುಗಳು ರಚಿಸಿದ ದಾರ್ಶನಿಕ ಗ್ರಂಥಗಳು ಬೆಟ್ಟದಷ್ಟು ಗಾತ್ರದಲ್ಲಿವೆ. ಅವುಗಳಲ್ಲಿ ವೇದಗಳು, ಬ್ರಾಹ್ಮಣಗಳು, ಅರಣ್ಯಿಕಗಳು, ಉಪನಿಷತ್ತುಗಳು, ಸಂಹಿತೆಗಳು, ಶೃತಿ ಸ್ಮೃತಿ, ಶಾಸ್ತ್ರ, ಸೂತ್ರ, ಭಾಷ್ಯಗಳು ಹಾಗೂ ಪುರಾಣಗಳು ಮುಖ್ಯವಾದವು.
ಪಾರಮಾರ್ಥಿಕ ಸತ್ಯ: ಇವುಗಳ ಪ್ರಕಾರ ಪಾರಮಾರ್ಥಿಕ ಸತ್ಯವು ವಸ್ತುನಿಷ್ಠವಾದುದಲ್ಲ, ಭಾವನಿಷ್ಠವಾದದ್ದು. ಪರಬ್ರಹ್ಮ ಸ್ವರೂಪವು ನಿರ್ಗುಣ, ನಿರಾಕಾರ, ಅವ್ಯಕ್ತ, ಅತರ್ಕ್ಯ, ಅಚಿಂತ್ಯ! ಆದ್ದರಿಂದ ಇಂದ್ರಿಯಾನುಭವಕ್ಕೆ ಅದು ಗೋಚರಿಸಲಾರದು ಎಂದು ಉಪನಿಷತ್ತುಗಳು ಸಾರುತ್ತವೆ. ಆದಾಗ್ಯೂ ವೈದಿಕ ಸಿದ್ಧಾಂತವು ಸಗುಣೋಪಾಸನೆ (-ಅಂದರೆ ರಾಮ, ಕೃಷ್ಣ, ಶಿವ, ಈಶ್ವರ, ಇತ್ಯಾದಿ ಅನಂತ ನಾಮರೂಪಾಕಾರಗಳುಳ್ಳ ದೈವಗಳು) ಮತ್ತು ನಿರ್ಗುಣೋಪಾಸನೆ ಎಂಬೆರಡು ವಿರೋಧಾಭಾಸವಾದ ಕರ್ಮಗಳನ್ನು ಸಮರ್ಥಿಸಿಕೊಳ್ಳುತ್ತದೆ. ಸಗುಣೋಪಾಸನೆಗೆ ಕರ್ಮಕಾಂಡಗಳಾದ ಯಜ್ಞ, ಯಾಗ, ವ್ರತ, ಭಕ್ತಿ, ಮನನ, ಸ್ಮರಣೆ, ಅಧಿಷ್ಠಾನ, ಉಪಾಸನೆ, ಭಜನೆ, ಆರಾಧನೆಗಳನ್ನು ಆದೇಶಿಸುವಂತೆಯೇ ನಿರ್ಗುಣೋಪಾಸನೆಗೆ ಜ್ಞಾನಕಾಂಡಗಳಾದ ಯೋಗ, ತರ್ಕ, ವೈರಾಗ್ಯ, ಮೋಕ್ಷಸಂನ್ಯಾಸ, ಇತ್ಯಾದಿ ಕ್ರಿಯೆಗಳನ್ನು ವಿಧಿಸುತ್ತದೆ. ಆಶ್ಚರ್ಯಕರವೆಂದರೆ ಉಪನಿಷತ್ತುಗಳ ಜ್ಞಾನಕಾಂಡಗಳಲ್ಲಿ ಇಂದ್ರಿಯಗಳಿಗೆ ವ್ಯಕ್ತವಾಗದ ಆತ್ಮವು ಕರ್ಮಕಾಂಡ ಭಾಗಗಳಲ್ಲಿ ದೇವರ ಅವತಾರಗಳಾಗಿ ಭಕ್ತರ ಮುಂದೆ ಪ್ರತ್ಯಕ್ಷವಾಗಿ ಮಾತನಾಡುತ್ತವೆ, ಆಶೀರ್ವದಿಸುತ್ತವೆ ಮತ್ತು ಕೆಲವೊಮ್ಮೆ ಶಪಿಸಿಬಿಡುತ್ತವೆ.
ವೇದಪ್ರಣೀತವಾದ ಈ ನಿಲುವುಗಳು ಅಂತಿಮಸತ್ಯವಾದುದರಿಂದ ಅಥವಾ ಶಾಸ್ತ್ರಸಮ್ಮತವಾಗಿರುವುದರಿಂದ ಇವುಗಳನ್ನು ತಮ್ಮತಮ್ಮ ಶಕ್ತ್ಯಾನುಸಾರವಾಗಿ ಪ್ರತಿಯೊಬ್ಬರೂ ಪಾಲಿಸಬೇಕೇ ವಿನಃ ಯಾರೂ ಪ್ರಶ್ನಿಸಬಾರದು, ಯಾವ ಕಾರಣಕ್ಕೂ ಇವನ್ನು ಉಲ್ಲಂಘಿಸಬಾರದೆಂದು ವೈದಿಕ ಸಾಹಿತ್ಯವು ಕಟ್ಟುನಿಟ್ಟಾಗಿ ಆದೇಶಿಸುತ್ತದೆ. ಕರ್ಮಕಾಂಡಗಳ ಮುಖ್ಯ ಲಕ್ಷಣವೆಂದರೆ ಅವು ನರಕ ಭೀತಿಯನ್ನು ಉಂಟುಮಾಡುತ್ತವೆ. ಅದೇ ಜ್ಞಾನಕಾಂಡಗಳು ಮೋಕ್ಷ ಭ್ರಾಂತಿಯನ್ನು ನೀಡುತ್ತವೆ. ಮೋಕ್ಷವೆಂದರೆ ಮನುಷ್ಯನಿಗೆ ಸತ್ತ ನಂತರ ಪರಲೋಕದಲ್ಲಿ ಸಿಗುವ ಪ್ರಾಪ್ತಿ.
“ಆಕಾರ ನಿರಾಕಾರವೆಂಬೆರಡೂ ಸ್ವರೂಪಂಗಳು
ಒಂದು ಆಹ್ವಾನ, ಒಂದು ವಿಸರ್ಜನ
ಒಂದು ವ್ಯಾಕುಳ, ಒಂದು ನಿರಾಕುಳ
ಉಭಯಕುಳರಹಿತ ಗುಹೇಶ್ವರಾ
ನಿಮ್ಮ ಶರಣನು ನಿಶ್ಚಿಂತನು.”
…ಹಾಗೆ ನೋಡಿದರೆ “ಪಾರಮಾರ್ಥಿಕ ಸತ್ಯದ” ಕುರಿತಾಗಿ ಭಾರತೀಯ ದರ್ಶನಗಳನ್ನು ಹುಟ್ಟುಹಾಕಿದ ಮಹಾನ್ ವ್ಯಕ್ತಿಗಳೆನಿಸಿಕೊಂಡವರಲ್ಲೂ ಒಕ್ಕೊರಲಿನ ಅಭಿಪ್ರಾಯವೇನೂ ಇಲ್ಲ. ಪಾರಮಾರ್ಥಿಕ ಸತ್ಯ ದರ್ಶನವನ್ನು ಎತ್ತಿ ಹಿಡಿಯುವ ವೇದಾಂತ ಸೂತ್ರಗಳ ಮೇಲೆ ಶಂಕರಾಚಾರ್ಯರು (ಕ್ರಿ.ಶ. 788- 820) ಮಾಯಾವಾದವನ್ನು ರೂಪಿಸಿದರು. ಇವರ ಪ್ರಕಾರ ಇಂದ್ರೀಯ ಗೋಚರವಾಗುತ್ತಿರುವ ಕಣ್ಣೆದುರಿನ ಈ ಜಗತ್ತು ಒಂದು ಭ್ರಮೆ ಅಥವಾ ಸುಳ್ಳು; ಇಂದ್ರೀಯಾತೀತವಾಗಿರುವ ಬ್ರಹ್ಮವೇ ಆತ್ಯಂತಿಕ ಸತ್ಯವಾಗಿದೆ, “ಜಗನ್ಮಿಥ್ಯಾ ಬ್ರಹ್ಮಸತ್ಯಂ”! ಇವರು ಆತ್ಮ ಮತ್ತು ಪರಮಾತ್ಮ ಬೇರೆ ಬೇರೆಯಲ್ಲಾ ಒಂದೇ ಆಗಿವೆ ಎಂದು ಹೇಳಿ ಪಾರಮಾರ್ಥಿಕ ಸತ್ಯವನ್ನು ಅದ್ವೈತವೆಂದು ಕರೆದರು. ಇವರ ವಾದವನ್ನು ವಿರೋಧಿಸಿದ ರಾಮಾನುಜಾಚಾರ್ಯರು (ಕ್ರಿ.ಶ 1017- 1137) ವಿಶಿಷ್ಟಾದ್ವೈತವೆಂದರು. ಇದೇ ಪಾರಮಾರ್ಥಿಕ ಸತ್ಯವನ್ನು ನಿಂಬರ್ಕರು (ಕ್ರಿ.ಶ 1162) ಏಕಾದ್ವೈತವೆಂದು ಕರೆದರು. ಮಧ್ವಾಚಾರ್ಯರು (ಕ್ರಿ.ಶ 1197- 1276) ಅಲ್ಲಲ್ಲ ಇದು ದ್ವೈತವೆಂದು ಸಾರಿದರು. ವಲ್ಲಭಾಚಾರ್ಯರು (ಕ್ರಿ.ಶ 1417) ಶುದ್ಧ ಅದ್ವೈತವೆಂದು ವಾದಿಸಿದರು. ಒಂದೇ ವಿಷಯದ ಮೇಲೆ ರೂಪುಗೊಂಡ ಈ ವಿಭಿನ್ನ ವ್ಯಾಖ್ಯಾನಗಳ ಪರಿಣಾಮ ಸಮಾಜದಲ್ಲಿ ತಾತ್ವಿಕ ಭಿನ್ನತೆಗಳಿಗೆ ನಾಂದಿಯಾಯಿತು. ವೈಷ್ಣವ, ಶೈವರ ಮಧ್ಯೆ ಬಿರುಕುಂಟಾಯಿತು. ಹೀಗೆಂದ ಮಾತ್ರಕ್ಕೆ ವೈಷ್ಣವರೆಲ್ಲರೂ ಒಮ್ಮತದಿಂದ ಇದ್ದಾರೆಂದೋ ಇಲ್ಲವೇ ಶೈವರೆಲ್ಲರೂ ಒಮ್ಮತದಿಂದ ಇದ್ದಾರೆಂದೇನೂ ಅಲ್ಲ. ವೈಷ್ಣವರಲ್ಲೂ ಅನೇಕ ತಾತ್ವಿಕ ಬೇಧಗಳು, ಆಚರಣಾ ಬೇಧಗಳು ಇರುವಂತೆ ಶೈವರಲ್ಲೂ ಇವೆ. ಭಾರತದ ಸಾಮಾಜಿಕ ಸನ್ನಿವೇಶಗಳಲ್ಲಿ ವಿರೋಧಾಭಾಸ, ಅಸಮಾನತೆಗಳನ್ನು ನಿರ್ಧರಿಸಲು ಕಾರಣೀಭೂತವಾದ ಈ ತಾತ್ವಿಕ ಬೇಧಗಳನ್ನು ತಮ್ಮತಮ್ಮ ಆತ್ಮಗೌರವದ ಪ್ರಶ್ನೆಯಾಗಿಸಿಕೊಂಡಿರುವ ವೈದಿಕರಂತೂ ತಮ್ಮ ವಿರೋಧದ ವೈದಿಕರೊಂದಿಗೆ ಸಹಪಂಕ್ತಿ ಭೋಜನ ಮಾಡುವುದಿಲ್ಲ, ವೈವಾಹಿಕ ಸಂಬಂಧಗಳನ್ನು ಬೆಳೆಸುವುದಿಲ್ಲ. ಅಷ್ಟೇ ಅಲ್ಲ ಈ ತಾತ್ವಿಕ ತಾರತಮ್ಯ ಧೋರಣೆಗಳಿಂದಾಗಿ ರಕ್ತಪಾತ, ಹಿಂಸೆ, ಕೊಲೆ, ಕೆಲವೊಮ್ಮೆ ಯುದ್ಧಗಳಿಗೂ ಕಾರಣವಾಗಿರುವುದು ಚರಿತ್ರೆಯಲ್ಲಿ ದಾಖಲಾಗಿದೆ. ಪ್ರತಿಯೊಬ್ಬ ವೈದಿಕರೂ ತಮ್ಮತಮ್ಮ ಕುಲ ಶ್ರೇಷ್ಠತೆಯನ್ನು ಮೆರೆಯುತ್ತಾ ಅನ್ಯರು ಕನಿಷ್ಟರೆಂದು ಭಾವಿಸುತ್ತಾರೆ. ಹಿಂದೂ ಸಮಾಜವೂ ಇದಕ್ಕೆ ಹೊರತಾಗಿಲ್ಲ. ಏಕೆಂದರೆ ಕ್ಷತ್ರೀಯ, ವೈಶ್ಯ, ಶೂದ್ರ ಸಮಾಜಗಳು ವೈದಿಕರ ಭೇದಪೂರ್ವಕ ನೀತಿಯ ಫರ್ಮಾನುಗಳಿಗೆ ಉಪಕರಣದಂತೆ ಬಳಕೆಯಾಗಿವೆ. ಆದ್ದರಿಂದ ಇಲ್ಲಿ ಜಾತಿಯೇ ನಿಜವಾದ ಆದರ್ಶ. ಬ್ರಾಹ್ಮಣರಾಗಿರಲಿ, ಶೂದ್ರರಾಗಿರಲಿ ತಮ್ಮತಮ್ಮ ದೈವಗಳು, ಲಾಂಛನಗಳು, ಕುಲಗೋತ್ರಗಳನ್ನು ಪವಿತ್ರವೆಂದು ನಂಬುತ್ತಾರೆ. ಹಾಗೂ ಪಾರಮಾರ್ಥಿಕ ನಂಬುಗೆಗಳು ಎಷ್ಟೇ ಕ್ರೂರವಾಗಿದ್ದರೂ ಸ್ವವಿಮರ್ಶೆ ಮಾಡಿಕೊಳ್ಳಲಾರರು. ಶೈವ, ವೈಷ್ಣವ, ಶಕ್ತಿ ದೈವಗಳು, ಮತ್ತವುಗಳಿಗಿರುವ ಪಾಂಥಿಕ ಶರತ್ತುಗಳಲ್ಲಿ ಬ್ರಾಹ್ಮಣನಿರಲಿ, ಶೂದ್ರನಿರಲಿ ರಾಜಿಯ ಪ್ರಶ್ನೆಯೇ ಇಲ್ಲವೆಂಬ ಹಠಮಾರಿತನವೇ ಹಿಂದೂ ಸಮಾಜದ ಜಾತಿ ಶ್ರೇಣೀಕರಣವನ್ನು ವಾಸ್ತವ ಸತ್ಯವನ್ನಾಗಿಸಿದೆ. ವೈದಿಕ ತತ್ವದ ದಾಸ್ಯಕ್ಕೆ ಇಡೀ ಸಮಾಜ ಗುರಿಯಾಗಿದೆ. ಆಧುನಿಕ ಸಮಾಜವೂ ಇದಕ್ಕೆ ಹೊರತಾಗಿಲ್ಲ. ಏಕೆಂದರೆ social, cultural backward understanding ನಲ್ಲೇ ಆಧುನಿಕ ಸಮಾಜವು ಕೊಳೆಯುತ್ತಿರುವುದು ಸದಾ ಅನುಭವಕ್ಕೆ ಬರುತ್ತಿರುತ್ತದೆ.
ಒಂದು ಸೈದ್ಧಾಂತಿಕ ಒಮ್ಮತವಿಲ್ಲದ ಈ ದರ್ಶನಗಳಲ್ಲಿ, ದ್ವಂದ್ವಗಳಲ್ಲಿ ಮಾನವ ವಿಮುಕ್ತಿಯನ್ನು ಕಂಡುಕೊಳ್ಳಲು ಸಾಧ್ಯವಾಗುವುದೆ? ಯಾವುದೋ ಕಾಲದಲ್ಲಿ ದೊಡ್ಡ ದೊಡ್ಡ ಋಷಿಗಳು ಹೇಳಿದ್ದಾರೆಂಬ ಕಾರಣಕ್ಕೆ ವೈಚಾರಿಕ ಗುಲಾಮಗಿರಿಗೆ ದೂಡುವ ಪಾರಮಾರ್ಥಿಕ ಸತ್ಯದ ಆಧಾರದಲ್ಲಿ ರೂಪುಗೊಂಡ ಈ ದರ್ಶನಗಳ ಜ್ಞಾನಕಾಂಡಗಳನ್ನಾಗಲಿ, ಕರ್ಮಕಾಂಡಗಳನ್ನಾಗಲಿ ನಮ್ಮ ವಚನಕಾರರು ನಂಬಿದರೆ? ನಮ್ಮದು ಇಡೀ ಜಗತ್ತಿನಲ್ಲಿ ಅತ್ಯುನ್ನತವಾದಂತಹ ‘ತತ್ವ ದರ್ಶನ’ ಎಂದು ನಂಬಿ ಅದು ವಿಮುಕ್ತಿಯನ್ನು ನೀಡುವುದೆಂದು, ಅದರಲ್ಲಿ ಮುಳುಗಿ ಕೊಚ್ಚಿ ಹೋಗುವವರನ್ನು ವಚನಗಳು ಏನನ್ನುತ್ತವೆ?
ಅಯ್ಯಾ, ಛಲ ಭ್ರಮೆ, ಜಾತಿ ಭ್ರಮೆ
ನಾಮ ವರ್ಣ ಆಶ್ರಮ ಮತ ಶಾಸ್ತ್ರ ಭ್ರಮೆ
ತರ್ಕ ಭ್ರಮೆ, ರಾಜ್ಯ ಭ್ರಮೆ, ಧನ ಧಾನ್ಯ ಪುತ್ರ ಮಿತ್ರ ಭ್ರಮೆ
ಐಶ್ವರ್ಯ ತ್ಯಾಗ ಭೋಗ ಯೋಗದ ಭ್ರಮೆ
ಕಾಯ ಕರಣ ವಿಷಯ ಭ್ರಮೆ
ವಾಯು, ಮನ, ಭಾವ, ಜೀವ ಮೋಹ ಭ್ರಮೆ
ನಾಕಂ, ಕೋಹಂ, ಸೋಹಂ ಮಾಯಾ ಭ್ರಮೆ ಮೊದಲಾದ
ಬತ್ತೀಸ ಪಾಕ ಭ್ರಮಿತರಾಗಿ ತೊಳಲುವ ವೇಶಧಾರಿಗಳ ಕಂಡು
ಶಿವಶಕ್ತಿ, ಶಿವಭಕ್ತಿ, ಶಿವಪ್ರಸಾದಿ, ಶಿವಶರಣ, ಶಿವೈಕ್ಯ
ಶಿವ ಜಂಗಮವೆಂದು ನುಡಿಯಲಾರದೆ ಎನ್ನ ಮನ ನಾಚಿ
ನಿಮ್ಮಡಿಗಭಿಮುಖವಾಯಿತ್ತಯ್ಯಾ ಚೆನ್ನಮಲ್ಲಿಕಾರ್ಜುನ.
ಶಿವಶಕ್ತಿ, ಶಿವಭಕ್ತಿ, ಶಿವಪ್ರಸಾದಿ, ಶಿವಶರಣ, ಶಿವೈಕ್ಯ, ಶಿವ ಜಂಗಮ ಇತ್ಯಾದಿ ಶರಣರ ಪ್ರಮುಖ ಪರಿಭಾಷೆಗಳು ವೈದಿಕರ ಜ್ಞಾನಕಾಂಡ ಮತ್ತು ಕರ್ಮಕಾಂಡಗಳಿಗೆ ಪೂರ್ತಿ ಭಿನ್ನವಾಗಿದ್ದು, ಇವು ಮನುಷ್ಯರ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ತನ್ಮೂಲಕ ಸಾಮಾಜಿಕವನ್ನು ಸ್ವಾಸ್ಥ್ಯ ಸಮಾಜವನ್ನಾಗಿ ಪುನರ್ರೂಪಿಸುವ ಮಹದುದ್ದೇಶವನ್ನು ಹೊಂದಿವೆ. ವಚನಗಳ ಈ ಪರಿಭಾಷೆಗಳಿಗೆ ಬೇರೆಯದೇ ಮರ್ಮವಿದೆ. ಆದಕಾರಣ ಈ ಪರಿಭಾಷೆಗಳನ್ನು ವೈದಿಕ ಸಾಹಿತ್ಯಕ್ಕೆ ಅನ್ವಯಿಸಿಕೊಂಡು ಗ್ರಹಿಸುವುದು ಸಮುಚಿತವಲ್ಲ. ಹೀಗೆ ಮಾಡುವುದಾದರೆ ಅಂತಹ ಜ್ಞಾನ ಕೇವಲ ಹತಾಶೆಯ ತತ್ವಜ್ಞಾನವಾಗುತ್ತದೆ. ಹತಾಶೆಯ ಭಾವುಕ ಜ್ಞಾನಗಳು ಮನುಷ್ಯನನ್ನಾಗಲಿ, ಸಮಾಜವನ್ನಾಗಲಿ ಒಂದು ಮಹದೋದ್ದೇಶಕ್ಕಾಗಿ ಪರಿವರ್ತಿಸಲಾರವು. ನಿಜವಾಗಿಯೂ ಪರಿವರ್ತನೆಗೆ ಅನರ್ಹವಾದ ನಮ್ಮ ತಿಳಿವುಗಳನ್ನ ನಾವು ವಿಸರ್ಜಿಸಿಕೊಳ್ಳಬೇಕು. ಏಕೆಂದರೆ ಇವುಗಳಿಂದ ಯಾವುದೇ ಪ್ರಯೋಜನವಿಲ್ಲ.
ಮೇಲ್ಕಂಡ ವಚನಗಳ ಪರಿಭಾಷೆಗಳಲ್ಲಿರುವ ಸಮ್ಯಕ್ ವಿವರಣೆಯನ್ನು ನಾನು ಬೇರೊಂದು ಕಡೆ ನಿಮ್ಮೊಂದಿಗೆ ಚರ್ಚಿಸುತ್ತೇನೆ. ಈಗ ನನ್ನ ಕಾಳಜಿ ಇರುವುದು ವೈದಿಕ ಮತ್ತು ಅವೈದಿಕ ಎಂಬೆರಡು ರಹದಾರಿಗಳಲ್ಲಿ ವಚನಕಾರರು ಹೆಜ್ಜೆ ಮೂಡಿಸಿದರೆ? ಆಸ್ತಿಕ/ ನಾಸ್ತಿಕ ಎಂಬೆರಡು ಸಿದ್ಧಾಂತಗಳು ಭಾರತದ ಸಾಮಾಜಿಕ ವ್ಯವಸ್ಥೆ ಮತ್ತು ಸರ್ವತೋಮುಖವಾದ ವ್ಯಕ್ತಿತ್ವ ವಿಕಾಸಕ್ಕೆ ಕೊಟ್ಟ ಕೊಡುಗೆಗಳೇನು? ಎಂಬುದನ್ನು ಕಂಡುಕೊಳ್ಳುವುದು ಈ ಲೇಖನದ ಉದ್ದೇಶವಾಗಿದೆ.
ಹಾಗೆ ನೋಡಿದರೆ ಆಸ್ತಿಕ/ವೈದಿಕದಷ್ಟೇ ಪ್ರಬಲವಾಗಿ ನಾಸ್ತಿಕ ವಾದವು ಈ ನೆಲದಲ್ಲಿ ತನ್ನ ಸಿದ್ಧಾಂತಗಳನ್ನು ಮಂಡಿಸಿದೆ. ಪರಮಾರ್ಥಿಕ ಸತ್ಯಕ್ಕೆ ಅತ್ಯಂತ ವಿರುದ್ಧವಾಗಿ ಲೌಕಿಕ ಸತ್ಯದ ಮೇಲೆ ನಾಸ್ತಿಕವಾದಿಗಳು ತಮ್ಮ ವಾದ ಮಂಡಿಸುತ್ತಾರೆ. ವಚನಕಾರರಲ್ಲಿ ಈ ಸಿದ್ಧಾಂತ ಉಂಟುಮಾಡಿದ ಪ್ರಭಾವವೇನು ನೋಡೋಣ….
ನಾಸ್ತಿಕವಾದಿಗಳು ವಿಶ್ವ ಸೃಷ್ಟಿಯ ಬಗ್ಗೆ, ವಿಶ್ವದ ವಿಕಾಸವು ಆಯಾ ವಸ್ತುಗಳ ಸ್ವಭಾವ ಧರ್ಮದ, ತನ್ನ ಸ್ವಂತ ನೈಸರ್ಗಿಕ ಗುಣಧರ್ಮದಿಂದಲೇ ಆಗುತ್ತದೆ. ಅದರಲ್ಲಿ ಯಾವುದೇ ಬಾಹ್ಯ ಶಕ್ತಿಯ ಅಥವಾ ಈಶ್ವರನ ಹಸ್ತಕ್ಷೇಪವಾಗಲಿ, ಪ್ರಶ್ನೆಯಾಗಲಿ ಇಲ್ಲವೆನ್ನುತ್ತಾರೆ.
ಲೋಕಾಯತರೆಂಬ ನಾಸ್ತಿಕರ ಪ್ರಕಾರ– ಪಂಚಭೌತಿಕಾಂಶಗಳಾದ ಪೃಥ್ವಿ, ಜಲ, ವಾಯು, ಅಗ್ನಿ ಎಂಬ ಘಟಕಗಳು ವಿಶ್ವದ ಪ್ರಾಥಮಿಕ ಅವಸ್ಥೆ! ಸಾಂಖ್ಯರು ಹೇಳುವಂತೆ… ಪ್ರಕೃತಿಯೆಂಬ ದ್ರವ್ಯರಾಶಿಯೇ ವಿಶ್ವದ ಮೂಲ! ವೈಶೇಷಿಕರು ಪ್ರಸ್ತಾಪಿಸಿರುವಂತೆ…. ಪರಮಾಣುಗಳೇ ವಿಶ್ವದ ಮೂಲವೆಂದು ಹೇಳಿದ್ದರಿಂದ ಅವರು ಅಣುವಾದಿಗಳೆನಿಸಿದರು. ಮೀಮಾಂಸಕರು ‘ಭೌತಿಕ ಜಗತ್ತು ಪ್ರಾಥಮಿಕ ಅನಾದಿ ಮತ್ತು ಅನಂತವಾಗಿದೆ, ಪ್ರಕೃತಿಯೇ ಸ್ವತಂತ್ರವಾಗಿದೆ ಎನ್ನುತ್ತಾರೆ.
ಭೂತಾತ್ಮಕಂ ಜಗತ್/ ಸ್ವಭಾವಂ
ಜಗತಃ ಕಾರಣ ಅಹುಃ/ ನ ಪರಮೇಶ್ವರಃ ಆಸ್ತಿ ಕಶ್ಚಿತ್
ನ ಪುನರ್ಜನ್ಮಃ ನ ಮೋಕ್ಷಃ ? ಮರಣಂ ಏವ ಮೋಕ್ಷಃ
ಅಂದರೆ ಜೀವಸಂಕುಲದ ಈ ಬದಲಾವಣೆ, ನಿಯಂತ್ರಣ, ಪರಿವರ್ತನೆಗಳಿಗೆ ವಸ್ತು ಸ್ವಭಾವವೇ ಕಾರಣ. ಪರಮೇಶ್ವರನೊಬ್ಬನ ಅಸ್ತಿತ್ವವೂ ಇಲ್ಲ, ಪುನರ್ಜನ್ಮವೂ ಇಲ್ಲ, ಮೋಕ್ಷವೂ ಇಲ್ಲ. ಸಾವೊಂದೇ ಮನುಷ್ಯನ ಮೋಕ್ಷ.
ಮೀಮಾಂಸಕಾರರಾದ ಕುಮಾರಿಲ ಭಟ್ಟ, ಪಾರಮಾರ್ಥಿಕ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಬಹುದೆಂಬ ಆಸ್ತಿಕರ ಎಲ್ಲಾ ಆಚರಣೆಗಳನ್ನು ತಿರಸ್ಕರಿಸುತ್ತಾ– “ನ ಲೋಕ ವ್ಯತಿರಿಕ್ತಂ ಪ್ರತ್ಯಕ್ಷ ಯೋಗಿನಾ ಅಸ”- ಎಂದರೆ ಲೋಕದ ಜನರ ಅನುಭವಕ್ಕೆ ಬಾರದಂತಹ ಪ್ರತ್ಯಕ್ಷ ಜ್ಞಾನವು ಯೋಗಿಗಳ ಅನುಭವಕ್ಕೂ ಬರಲು ಸಾಧ್ಯವಿಲ್ಲ. ನಮ್ಮಲ್ಲಿ ಅನೇಕರು ಯೋಗದ ಎಲ್ಲಾ ಪ್ರಯೋಗಗಳನ್ನು ತಪ್ಪದೇ ಮಾಡಿದ್ದಾರೆ. ಆದರೆ ಅವರಿಗೆ ಈ ಬ್ರಹ್ಮ ಜ್ಞಾನವೆನ್ನುವುದರ ಪತ್ತೆ ಎಲ್ಲಿಯೂ ಸಿಗಲಿಲ್ಲ.
ಒಟ್ಟಾರೆಯಾಗಿ ಯಾವ ಜ್ಞಾನಕ್ಕೆ ಸಾರ್ವರ್ತಿಕ ಅನುಭವದ ಆಧಾರವಿರುತ್ತದೋ ಅದೇ ನಿಜವಾದ ಜ್ಞಾನ. ಇಂದ್ರೀಯಾನುಭವದಿಂದ ಉಂಟಾಗುವ ಜ್ಞಾನದಂತೆ ಅಂತರ್ ದೃಷ್ಟಿಯಿಂದ ದೊರೆಯುತ್ತದೆ ಎನ್ನುವ ಜ್ಞಾನಕ್ಕೆ ಯಾವುದೇ ಸಾರ್ವರ್ತಿಕ ಆಧಾರವಿರುವುದಿಲ್ಲ. ಆದ್ದರಿಂದ ಅದಕ್ಕೆ ಯಾವುದೇ ಮನ್ನಣೆ ನೀಡಲಾಗುವುದಿಲ್ಲ ಎನ್ನುತ್ತಾರೆ.
ನಾಸ್ತಿಕವಾದಿಗಳಲ್ಲಿ ಬಹಳ ಪ್ರಮುಖರಾದ ಉದ್ದಾಲಕ, ಆರುಣಿ, ಅಜಿತಕೇಶಕಂಬಲಿ, ಅಜೀವಿಕ, ಪಕುದ ಕಜ್ಜಾಯನ ಮತ್ತು ಪೂರಣ ಕಶ್ಯಪ ಇವರು ನಾಸ್ತಿಕವಾದಕ್ಕೆ ಬಹಳ ಪ್ರಸಿದ್ಧರಾದವರು. ಇವರ ನಿಯತಿವಾದಗಳನ್ನು ಒಮ್ಮೆ ಗಮನಿಸಬೇಕಿದೆ. ಅಜೀವಿಕನು ಜೀವಗಳ ಮಧ್ಯೆ ಒಂದು ಖಡ್ಗ ಹಾದು ಹೋಗಿ ಎಲ್ಲಾ ಜೀವಿಗಳು ಸತ್ತು ರಕ್ತಕೋಡಿ ಹರಿದರೂ ಯಾವುದೇ ಪಾಪವಾಗಲಿ, ಪುಣ್ಯವಾಗಲಿ ಇಲ್ಲವೆನ್ನುತ್ತಾನೆ.
ನಮ್ಮೆಲ್ಲರಿಗೂ ಇರುವ ವಸ್ತುಲೋಕದ ಅನುಭವದಿಂದ ನಾಸ್ತಿಕರ ಭೌತವಾದವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದರೂ ಇವುಗಳಲ್ಲಿ ಅನೇಕ ಸತ್ಯಾಂಶಗಳಿದ್ದು, ‘ಸಾಕ್ಷಿಪ್ರಜ್ಞೆ’ ಒಪ್ಪಿಕೊಳ್ಳುವಂತಿದೆ. ಆದರೆ ನಾಸ್ತಿಕವಾದಿಗಳು ಮನುಷ್ಯನಲ್ಲಿ ಇರಬೇಕಾದ ‘ನೈತಿಕತೆ’ಗೆ ಯಾವ ಮಹತ್ವವನ್ನೂ ಕೊಟ್ಟಿಲ್ಲ. ಆಜೀವಿಕರಂತೂ ತಿನ್ನು, ಕುಡಿ, ಸುಖಿಸು, ಈ ಲೋಕದಲ್ಲಿ ಏನೂ ಇಲ್ಲವೆನ್ನುತ್ತಾರೆ.
ಇಲ್ಲಿಯವರೆಗೂ ನಾವು ಭಾರತದ ಪ್ರಮುಖ ದರ್ಶನಗಳನ್ನು ಚರ್ಚಿಸಿದಂತೆ… ಆಸ್ತಿಕರು ಮನುಷ್ಯನೊಬ್ಬನು ಮನುಷ್ಯನಿಗೆ ಸಮಾನವಲ್ಲವೆಂದು ಹೇಳಿ, ಒಬ್ಬರನ್ನೊಬ್ಬರು ಒಳಗೊಳ್ಳುವುದನ್ನು ನಿರಾಕರಿಸುತ್ತಾರೆ. ಇವರುಗಳು ನಿಜಬದುಕಿನ ವಸ್ತುಸ್ಥಿತಿ ಮತ್ತದರ ಸಂಕೀರ್ಣ ಸಮಸ್ಯೆಗಳ ಪರಿಹಾರಕ್ಕೆ ಯಾವ ಆದ್ಯತೆಯನ್ನೂ ಕೊಟ್ಟಿಲ್ಲವೆಂದು ನೋಡಿದೆವು. ಪಾರಲೌಕಿಕದ ಕಲ್ಪನೆಯ ಮತ್ತಿನಲ್ಲಿರುವುದೇ ಮನುಷ್ಯನ ಗುರಿಯೆಂದು ಇವರು ಸ್ಪಷ್ಟವಾಗಿ ಹೇಳುತ್ತಾರೆ. ಅದೇ ನಾಸ್ತಿಕರು ಸಮಾಜ ಮತ್ತು ವ್ಯಕ್ತಿಯಲ್ಲುಂಟಾಗುವ ಅರಾಜಕತೆ, ಅಭದ್ರತೆ ಮತ್ತು ಅಶಾಂತತೆಗೆ ಯಾವ ಗಮನವನ್ನೂ ನೀಡಲಿಲ್ಲ.
ನಮ್ಮ ಸಾಮಾಜಿಕ ಚರಿತ್ರೆಗಳಲ್ಲಿ ಎಲ್ಲಾ ಕಾಲಕ್ಕೂ ಒಂದಲ್ಲಾ ಒಂದು ರೀತಿಯಲ್ಲಿ ಆಸ್ತಿಕ– ನಾಸ್ತಿಕ ಸಿದ್ಧಾಂತಗಳು ಒಂದಕ್ಕೊಂದು ಎದುರಾಗಿ ಪ್ರಬಲವಾದ ವಿರೋಧವನ್ನೊಡ್ಡಿ ಹಿತಾಸಕ್ತಿಗಳನ್ನು ರೂಪಿಸಿಕೊಂಡಿವೆ. ಅಷ್ಟೇ ಅಲ್ಲದೆ ಮನುಷ್ಯನನ್ನು ಸಿದ್ಧಾಂತಗಳಿಗೆ ಅಡಿಯಾಳಾಗಿಸುವ ರಾಜಕೀಯ ಪ್ರವೃತ್ತಿಯ ಅಪಾಯ ಈ ನೆಲದಲ್ಲಿ ಎಂದೆಂದಿಗೂ ಜೀವಂತವಿರುವುದನ್ನು ಕಾಣಬಹುದು. ಈ ಸೈದ್ಧಾಂತಿಕ ಹಿತಾಸಕ್ತಿಗಳು ಸಮಸಮಾಜದ ನಿರ್ಮಾಣಕ್ಕೆ ಕಠೋರವಾದ ಅಡ್ಡಿಗಳು ಕೂಡಾ ಆಗಿವೆ ಎಂಬುದನ್ನು ನಾವು ಮರೆಯುವ ಹಾಗಿಲ್ಲ. ಈ ಬಗೆಯ ಅತಿಗಳನ್ನು ಸಹಜ ಸ್ಥಿತಿಗೆ ತರಲು ಶರಣರು ತಮ್ಮ ಮಾರ್ಗವನ್ನು “ಸಾಮರಸ್ಯ”ದ ನಡೆಯನ್ನಾಗಿ ಪರಿವರ್ತಿಸಿ, ಹಾಗೆ ನಡೆಕೊಂಡು ತೋರಿದ್ದು ಅವರ ಎದೆಗಾರಿಕೆ ಎನ್ನಲೇಬೇಕು.
‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ಪ್ರಸಿದ್ಧ ವ್ಯಾಖ್ಯಾನವು ಪರಲೌಕಿಕವೆಂಬ ಕೈಲಾಸವನ್ನು ಕಾಯಕದ (ದುಡಿಮೆ) ಹಂತಕ್ಕೆ ಎಳೆದು ತಂದು ನಿಲ್ಲಿಸಿ ಬಿಡುವ ಬೆಡಗಿನಲ್ಲಿ ಆಳವಾದ ಸಾಮಾಜಿಕ ಪ್ರಜ್ಞೆಯಿದೆ. ಸಂಪನ್ಮೂಲಗಳ ಒಡೆತನವನ್ನು ತೊಡೆದು ಹಾಕಿದರೆ ಮಾತ್ರ ಉತ್ಪಾದನಾ ಸಾಧನವಾಗಿರುವ ಕಾಯಕಕ್ಕೆ ಎಲ್ಲರೂ ಬದ್ಧರಾಗುತ್ತಾರೆ. ಎಲ್ಲಿಯತನಕ ಸಮಾಜದಲ್ಲಿ ಸಂಗ್ರಹಣಾ ವ್ಯಸನವಿರುತ್ತದೋ ಅಲ್ಲಿಯ ತನಕ ಮನುಷ್ಯ ಮನುಷ್ಯರ ಮಧ್ಯೆ ಶೋಷಕ/ ಶೋಷಿತ ಎಂಬೆರಡು ಅಸಮಾನತೆಗಳು ಇದ್ದೇ ಇರುತ್ತವೆ. ಶೋಷಣೆಯನ್ನು ಹೋಗಲಾಡಿಸದಿದ್ದರೆ ಸಮಸಮಾಜದ ಉದ್ದೇಶ ನೆರವೇರಲಾಗದು ಎಂಬ ಸಮಾಜೋ ಸಾಂಸ್ಕೃತಿಕ ಪ್ರಜ್ಞೆ ಬಸವಣ್ಣನವರ ‘ಸಾಮರಸ್ಯ ದರ್ಶನ’ದಲ್ಲಿ ಅಡಗಿದೆ. ಈ ಕಾರಣದಿಂದಲೇ ಅನುಭವ ಮಂಟಪದಲ್ಲಿನ ವಚನಕಾರರೆಲ್ಲ ಸಂಗ್ರಹಣೆ ಮತ್ತು ಶೋಷಣೆ ಎಂಬ ತಾರತಮ್ಯದ ವಿರುದ್ಧ ಬಂಡಾಯವನ್ನು ಸಾರಿ ಅತ್ಯಂತ ಸರಳವಾಗಿ ಬದುಕು ಸಾಗಿಸುವುದು ಕಂಡು ಬರುತ್ತದೆ. ಅಂದರೆ ಶರಣ ದರ್ಶನವು ಜೀವನ ಸಂಗತಿಗಳಿಗೆ ಹೆಚ್ಚು ಸಂಬಂಧಿಸಿದ್ದು. ಆದ್ದರಿಂದ ನೈತಿಕತೆ ಶರಣರಲ್ಲಿ ಕೇವಲ ಆದರ್ಶ ಮಾತ್ರವಲ್ಲ, ಅದೇ ಶರಣರ ಬದುಕಿನ ನೈಜ ದರ್ಶನವೂ ಆಗಿದೆ.
ಆದಾಗ್ಯೂ ಮನೋಪರಿವರ್ತನೆಯ ನೆಲೆಗಟ್ಟಿನಿಂದ ಸಮಾಜದ ಪುನರ್ರಚನೆಗೆ ಮನುಷ್ಯರನ್ನು ಸಿದ್ಧಗೊಳಿಸುವ ಕೆಲಸ ಸುಲಭವಾದುದಲ್ಲ. ಏಕೆಂದರೆ ಸಾವಿರಾರು ವರ್ಷಗಳಿಂದಲೂ ಒಂದಕ್ಕೊಂದು ವಿರುದ್ಧವಾದ ಹಿತಾಸಕ್ತಿಗಳು ಮತ್ತು ಅಸಂಗತವಾದ ದೃಷ್ಟಿಕೋನಗಳು ಮಾನವ ಮನಸ್ಸಿನಲ್ಲಿ ತುಂಬಿ ವಿಕಾಸವಾಗುತ್ತಲೇ ಬಂದಿವೆ. ಮನಸ್ಸೆಂಬುದು ಅಗಾಧವಾದದ್ದು. ಪರಂಪರಾನುಗತವಾದ ಕಸವನ್ನು ಅದು ಮತ್ತೆ ಮತ್ತೆ ಮುಂದಕ್ಕೆಸೆದುಕೊಂಡು ಸಾಗಿದೆ. ಗತಕಾಲದಿಂದ ವರ್ತಮಾನದ ತನಕ ವಸ್ತುನಿಷ್ಠ ಜಗತ್ತನ್ನು ಮನಸ್ಸು ಭಾವನಿಷ್ಠವಾಗಿ ಕಲ್ಪಿಸಿಕೊಂಡು ನೋಡುವ ಪರಿಪಾಠಕ್ಕೆ ಜೋತು ಬಿದ್ದಿದೆ. ಇಂದ್ರಿಯಾನುಭವದ ರಾಶಿಯಲ್ಲಿ ಅಡಗಿರುವ ಭಾವನಿಷ್ಠತೆಗಳಲ್ಲಿ ಬಗೆಬಗೆಯ ಉನ್ಮಾದಗಳಿವೆ, ಊಹೆಗಳಿವೆ, ಪ್ರಲೋಭನೆಗಳಿವೆ, ಅಧಿಕಾರ ಲೋಲುಪತೆಗಳಿವೆ, ವಿಷಯ ಲಂಪಟತನಗಳಿವೆ. ಇವೆಲ್ಲವನ್ನೂ ತನ್ನ ಅನುಕೂಲಕ್ಕೆ ತಕ್ಕಂತೆ ಲಾಕ್ಷಣೀಕರಿಸಬಲ್ಲ ಭಾಷೆಯೂ ಇದೆ. ಈ ಎಲ್ಲಾ ಸ್ವಭಾವಗಳು ಕ್ರಿಯಾಸಕ್ತವಾಗುವುದು ಭ್ರಾಂತಿಯ ಸಹಾಯದಿಂದ. ಆದ್ದರಿಂದ ತನ್ನ ತಿಳುವಳಿಕೆ ಮತ್ತು ಅನುಭವವನ್ನು ಸರಿಯಾದ ಕ್ರಮದಲ್ಲಿ ಗಮನಿಸಿ, ಪರೀಕ್ಷಿಸುವುದು ಅದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಅದು ಪಾರಂಪರಿಕ ಜ್ಞಾನದಲ್ಲಿರುವ ತಾರತಮ್ಯಗಳ ಅನುಭವವನ್ನೇ ತನ್ನ ಆದರ್ಶವಾಗಿ ಇಟ್ಟುಕೊಂಡುಬಿಡುತ್ತದೆ. ಯಾವಾಗ ವ್ಯಕ್ತಿಯು ತನ್ನ ಪಾರಂಪರಿಕ ಹಳತನ್ನು ತಾನು ಅನುಸರಿಸುವಲ್ಲಿ ವಿಫಲನಾಗುತ್ತಾನೋ ಆಗ ಸುತ್ತಲಿನ ಸಮಾಜ ಅವನ ಮೇಲೆ ಹೊರಲಾರದ ಭಾರವನ್ನು ಹೊರಿಸಿಬಿಟ್ಟು ವ್ಯಕ್ತಿಯನ್ನು ತಪ್ಪಿಸಿಕೊಳ್ಳಲಾಗದಂತೆ ಮಾಡಿಬಿಡುತ್ತದೆ. ಇದೇ ಈ ದೇಶದ ವೈಚಾರಿಕ ಗುಲಾಮಗಿರಿ! ಜಗತ್ತಿನ ಎಲ್ಲಾ ದುಃಖಗಳು ಮಾನುಷ ಕುಲದ ಮನಸ್ಸಿನಲ್ಲೇ ಉತ್ಪಾದನೆಯಾಗುತ್ತಿರುತ್ತವೆ. ಎಲ್ಲಾ ಅಸಮಾನ ಸಾಮಾಜಿಕ ಧೋರಣೆಗಳನ್ನು ನಿಶ್ಚಯಿಸುವುದರಲ್ಲಿ ಮನಸ್ಸೇ ಮೂಲ ಪಾತ್ರ ವಹಿಸುತ್ತದೆ. ಈ ಮನಸ್ಸಿನ ಸಂಕೋಲೆಗಳಿಂದ ಅದನ್ನು ಮುಕ್ತಗೊಳಿಸಿ ಸ್ವಾತಂತ್ರ್ಯತೆ ಎಂಬ ನಿರಂತರತೆಯೆಡೆಗೆ ಕರೆದೊಯ್ಯಲು ಶರಣ ದರ್ಶನವು “ಲಿಂಗ ಜಂಗಮವೆಂಬ” ಸ್ವಾರಸ್ಯಕರವಾದ ಸಾಧನಾ ಪ್ರಕ್ರಿಯೆಗಳನ್ನು ಅಳವಡಿಸಿ ಶರಣರು ಪರಿಪೂರ್ಣ ಜ್ಞಾನವನ್ನು ಬಯಲೆಂದರು. ಇಲ್ಲಿ ಲಿಂಗ ಜಂಗಮ ಪ್ರಕ್ರಿಯೆಗಳು ಪೌರೋಹಿತ್ಯದ ಕರ್ಮಕಾಂಡವಾಗಲಿ, ಜ್ಞಾನಕಾಂಡಗಳಿಗಾಗಲಿ ಅನ್ವಯವಾಗಕೂಡದೆಂಬ ಎಚ್ಚರ ಶರಣರಲ್ಲಿ ಅತ್ಯಂತ ವಿಶಿಷ್ಟವಾದುದು.
ಮನವೆಂಬುದು ಬೇರಿಲ್ಲ
ಮಹಾದೇವನ ಅರುಹು ನೋಡಾ
ಸಂಕಲ್ಪ ವಿಕಲ್ಪಗಳ ಧರಿಸಿದಲ್ಲಿ ಮನವೆನಿಸಿತ್ತು
ಅದು ಅಳಿದಲ್ಲಿ ಮಹಾಜ್ಞಾನವೆನಿಸಿತ್ತು
ಅಳಿದ ಭಾವ ತೋರಿದಲ್ಲಿ
ಕಪಿಲಸಿದ್ಧಮಲ್ಲಿಕಾರ್ಜುನನೆನಿಸಿತ್ತು.
ವರ್ಣವಿಲ್ಲದ ಲಿಂಗಕ್ಕೆ ರೂಪ ಪ್ರತಿಷ್ಠೆಯ ಮಾಡುವರು
ಪ್ರಳಯವಿಲ್ಲದ ಲಿಂಗಕ್ಕೆ ಪ್ರಾಣ ಪ್ರತಿಷ್ಠೆಯ ಮಾಡುವರು
ನುಡಿಯಲಾರದ ಲಿಂಗಕ್ಕೆ ಜಪಸ್ತೋತ್ರ ಪೂಜೆಯ ಮಾಡುವರು
ಮುಟ್ಟಬಾರದ ಲಿಂಗಕ್ಕೆ ಕೊಟ್ಟ–ಕೊಂಡಾಡಿಹೆವೆಂಬರು
ಬೊಟ್ಟಿಡಲು ಎಡೆಯಿಲ್ಲದ ಲಿಂಗವ ಮುಟ್ಟಿ
ಪೂಜಿಸಿಹೆವೆಂಬ ಭ್ರಷ್ಟರ ನೋಡಾ ಗುಹೇಶ್ವರಾ.
ಶ್ರುತಿಯ ನಂಬದಿರೊ, ಶ್ರುತಿಯ ನಂಬದಿರೊ
ಶ್ರುತಿತತಿಗಳು ಮುನ್ನವೆ ಶಿವನಡಿಯ ಕಾಣದೆ
ಶ್ರುತಿ `ಚಕಿತಮಭಿದತ್ತೇ‘ ಎನುತ
ಮುನ್ನವೆ ಅರಸಿ ತೊಳಲಿ ಬಳಲುತ್ತೈದಾವೆ.
ಶ್ರುತಿ ಹೇಳಿದತ್ತ ಹರಿಹರಿದು ಬಳಲದಿರೊ,
ಶೂನ್ಯಕ್ಕೆ ತಲೆವಾರನಿಕ್ಕದಿರೊ,
ವಸ್ತು ಭ್ರೂಮಧ್ಯದಲುಂಟೆಂದು ನೆನೆಯದಿರೊ.
ವಸ್ತು ಭ್ರೂಮಧ್ಯದಲುಂಟೆಂದು ಭ್ರಮಿಸದಿರೊ.
ವಸ್ತು ಬ್ರಹ್ಮರಂಧ್ರದಲುಂಟೆಂದು ಹೊಲಬುಗೆಡದಿರೊ.
ವಸ್ತುವ ಕಾಬಡೆ,
ಎನ್ನ ಸದ್ಗುರು
ಅನಿಮಿಷದೇವನಂತೆ
ನಿನ್ನ ಕರಸ್ಥಲದಲ್ಲಿ ನಿಶ್ಚಯಿಸಿ, ವಸ್ತುನಿಶ್ಚಯವ ಕಂಡು
ನಮ್ಮ ಗುಹೇಶ್ವರಲಿಂಗದಲ್ಲಿ ನಿಬ್ಬೆರಗಾಗೊ ಮರುಳೆ.
ಶರಣರ ಲಿಂಗ–ಜಂಗಮವು ಕರಸ್ಥಲದಲ್ಲಿ (ಅಂದರೆ ಹಿಡಿತಕ್ಕೆ ಸಿಗುವಲ್ಲಿ) ವಸ್ತು ನಿಶ್ಚಯವಾಗಬೇಕಾದ ಪ್ರಕ್ರಿಯೆ. ಮನಸ್ಸಿನಲ್ಲಿ ಶೇಖರಗೊಂಡಿರುವ ಕಗ್ಗತ್ತಲಾಗಿರುವ ಬಗೆಬಗೆಯ ಉನ್ಮಾದಗಳಿಗೆ, ತಾರತಮ್ಯಗಳಿಗೆ, ಅಹಂಕಾರಗಳಿಗೆ, ಪೂರ್ವಾಗ್ರಹಗಳಿಗೆ, ಊಹೆಗಳಿಗೆ, ಪ್ರಲೋಭನೆಗಳಿಗೆ, ಅಧಿಕಾರ ಲೋಲುಪತೆಗಳಿಗೆ, ವಿಷಯ ಲಂಪಟತನಗಳಿಗೆ, ಇವೆಲ್ಲವುಗಳ ಜೊತೆ ಅಂಟಿಕೊಂಡೇ ಸದಾ ಮಾತನಾಡಿಕೊಳ್ಳುತ್ತಿರುವ ಅಂತರಂಗಿಕ ಸ್ವಗತಬೇಧಕ್ಕೆ ಯಾವುದೇ ಪ್ರತಿಕ್ರಿಯೆಗಳನ್ನ ವ್ಯಕ್ತಪಡಿಸದೆ ತನ್ನ ದಿಟ್ಟ ಅಭ್ಯಾಸ ಬಲದಿಂದ ಅವುಗಳನ್ನು ಶಮನಗೊಳಿಸಿಕೊಳ್ಳುವ ಹೃದಯಕೃಷಿ ಶರಣರ ಜಂಗಮಕ್ಕಿದೆ. ಅಂದರೆ ಜಂಗಮವು ಈ ಪ್ರವೃತ್ತಿಗಳಿಂದ ನಿವೃತ್ತಿಯೆಡೆಗೆ ಪ್ರಯಾಣಿಸುತ್ತದೆ. ಇದನ್ನು ಅಲ್ಲಮ ಗುರುಗಳು ಅದ್ಭುತವಾಗಿ ಅಭಿವ್ಯಕ್ತಿಸುತ್ತಾರೆ.
ಕಾರಿಯ (ಕಾರ್ಯ?)ವನರಿಯರು ಕೊರತೆಯನರಿಯರು.
ವಾಯಕ್ಕೆ ಬಳಲುವರು ತಾವು ಜ್ಞಾನಿಗಳೆಂದು.
ತಾಯಿಯಿಲ್ಲದ ಮೂಲನ ತಲೆವಿಡಿಯಲರಿಯದೆ
ದೇವರಾದೆವೆಂದಡೆ ನಾಚಿದೆನು ಗುಹೇಶ್ವರಾ.
ಮನುಷ್ಯನಿಂದಾಗಿ ಮನುಷ್ಯನಿಗೆ ಮನುಷ್ಯನೇ ನಿರ್ಮಿಸಿಕೊಂಡಿರುವ ಎಂತಹುದೇ ಎಂತಹದ್ದೇ ಮನೋ ಸಂರಚನೆಗಳಿಗೆ ತಾಯಿ ತಂದೆ ಇಲ್ಲ. ಅಥವಾ ಮೂಲವಿಲ್ಲ. ಇವೆಲ್ಲವೂ ತನ್ನದೇ ಭ್ರಮೆಗಳಲ್ಲಿ ತಾನು ಬಳಲುವುದಲ್ಲದೆ ಮತ್ತೇನೂ ಇಲ್ಲ. ಭೌತಿಕ ಜಗತ್ತಿನಲ್ಲಿ ಈ ಸಂರಚನೆಗಳಿಗೆ ವಸ್ತು ರೂಪದ ಅಸ್ತಿತ್ವವಂತೂ ಇಲ್ಲವೇ ಇಲ್ಲ. ಮನೋಸಂರಚನೆಗಳು ಜನ್ಯ ಪಧಾರ್ಥಗಳಲ್ಲ. ಅವು ಕಲ್ಪಿತ ಪದಾರ್ಥಗಳು. ಇವುಗಳ ಕುರುಹಿಡಿದು ಇವುಗಳನ್ನು ಇಲ್ಲವಾಗಿಸದಿದ್ದರೆ ಬಯಲೆಂಬ ಸದ್ಗತಿ ಇಲ್ಲವೆಂಬುದು ಇಲ್ಲಿನ ತಿರುಳು. ಕೆಲವರು ಬಯಲಿಗೆ ಶೂನ್ಯವೆಂದು ಅಪಾರ್ಥ ಕಲ್ಪಿಸುತ್ತಾರೆ. ಇದು ಶುದ್ಧ ತಪ್ಪು. ಮನೋಸಂರಚನೆಗಳು ಶೂನ್ಯವಾದರೆ ಇನ್ನುಳಿಯುವ ಶೇಷ ಪದಾರ್ಥ ಬಯಲು. ಇದು ಪ್ರಜ್ಞಾಹೀನ ಸ್ಥಿತಿಯಲ್ಲ. ಬಯಲು ಏನೂ ಅಲ್ಲದ್ದಲ್ಲ. ಅದರಲ್ಲಿ ಎಲ್ಲವೂ ಅಡಗಿದೆ. ಇಂಗ್ಲಿಷಿನಲ್ಲಿ mindfulness ಪದ ಅದಕ್ಕೆ ಒಪ್ಪುತ್ತದೆ. ಬಯಲು ನಿಸ್ತರಂಗ ತೇಜವಾದ ಸಾಗರದಂತೆ. ತತ್ವಪದಕಾರರು ಬಯಲನ್ನು 010 ಎಂಬ ಸಂಖ್ಯಾವಾಚಕದಿಂದ ಸೂಚಿಸುತ್ತಾರೆ. ಬಯಲೆಂಬುದು ಆ ಕ್ಷಣವನ್ನು ಅದು ಹೇಗಿದೆಯೋ ಹಾಗೆಯೇ ಗ್ರಹಿಸುವ ಅಂತಃಸ್ಪೃಹೆ! ಅಂದರೆ ಆ ಕ್ಷಣದ ಪ್ರಜ್ಞೆಗೆ ಹಿಂದಿನ ಅರಿವುಗಳ ಹಂಗಾಗಲಿ, ಮುಂದಕ್ಕೆ ಏನನ್ನಾದರೂ ಉಳಿಸಿ ಹೋಗುವ ಹಠವಾಗಲಿ ಇಲ್ಲದ ಸದಮಲ ಜ್ಞಾನ. ಅದು ನಿತ್ಯನೂತನ. ಆ ಪ್ರಜ್ಞೆಯು ಸದಾ ಆಗುತ್ತಲೇ ಇರುವ ಪ್ರಕ್ರಿಯೆಯಾದ್ದರಿಂದ ಅದು ಜಡವಲ್ಲ. ಶಿವ, ಅಮನಸ್ಕ, ಪರಿಪೂರ್ಣ, ಇತ್ಯಾದಿ ಶಬ್ದಗಳು ಬಯಲಿಗೆ ಸಮಾನ ಶಬ್ದಗಳಾಗಿವೆ. ಶರಣರು ಇನ್ನೂ ಸ್ವಲ್ಪ ಮುಂದೆ ಹೋಗಿ ಬಯಲನ್ನು ಮಹಾಘನ, ಜ್ಯೋತಿರ್ಲಿಂಗವೆಂದೇ ಕರೆದರು. ಜ್ಯೋತಿರ್ಲಿಂಗ ಕಾಣಬಹುದಾದ ಲಿಂಗವಲ್ಲ. ಆದರೆ ಅದರ ನಡೆಗಳು ಹಿಡಿತಕ್ಕೆ ಸಿಗುವಂತಹ ಜ್ಞಾನವೆಂದೇ ಶರಣರು ಹೇಳುತ್ತಾರೆ.
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ,
ಎನಗಿದು ಸೋಜಿಗ, ಎನಗಿದು ಸೋಜಿಗ !
ಅಹುದೆನಲಮ್ಮೆನು, ಅಲ್ಲವೆನ್ನಲಮ್ಮೆನು,
ಗುಹೇಶ್ವರಲಿಂಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ !
ಈ ವಚನದಲ್ಲಿ ಅಲ್ಲಮ ಬಯಲಿಗೆ ಆಕಾರಕೊಟ್ಟು– ಮನಸ್ಸು (ಲಿಂಗ) ಇಲ್ಲವಾದುದೆಂದು ಹೇಳುತ್ತಾನೆ. ವಸ್ತು ನಿಶ್ಚಯರೂಪದ ಪ್ರಾಣಲಿಂಗಕ್ಕೆ ಇದೆಯೆಂಬ ಆಸ್ತಿಕ ಸಿದ್ಧಾಂತವನ್ನಾಗಲಿ; ಇಲ್ಲವೆಂಬ ನಾಸ್ತಿಕ ಸಿದ್ಧಾಂತವನ್ನಾಗಲಿ ಆರೋಪಿಸಲಾಗದು. ಶರಣರ ಬಯಲು ಇವೆರಡಕ್ಕೂ ಅತೀತವಾಗಿರುವ ಸರ್ವತಂತ್ರ ಸ್ವತಂತ್ರವಾದ ಘನವೇದ್ಯ. ಮಹಾಘನವದು. ಆಗುತ್ತಲೇ ಇರುವ ಅನಂತಪ್ರವಾಹವದು. ಸತ್ಯವನ್ನು ಒಪ್ಪಿಕೊಂಡು ಪ್ರೀತಿಸುವ ವಿಶ್ವಪ್ರಜ್ಞೆಯದು!!!
Comments 23
Ramrao
Jun 7, 2019Very nice
Gangadhar navale
Jun 9, 2019ಮನುಷ್ಯನ ಮೂಲ ಹುಡುಕಾಟವನ್ನು ನೀವು ಬಗೆದು ಬಗೆದು ನೋಡಿದ ರೀತಿ ಅದ್ಭುತವಾಗಿದೆ. ಪದ್ಮಾಲಯ ಅವರು ತಲಸ್ಪರ್ಶಿಯಾಗಿ ವಿಷಯವನ್ನು ಪರೀಕ್ಷಿಸಿದ್ದಾರೆ. ಗಂಬೀರ ವಿಷಯ, ಗಂಬೀರ ನಿರೂಪಣೆ.
ಪ್ರಭಾಕರ ಚಿಂಚೋಳಿ
Jun 9, 2019ಮನಸ್ಸಿನ ಸಂಕೋಲೆಗಳಿಂದ ಅದನ್ನುಮುಕ್ತಗೊಳಿಸಿ ಸ್ವಾತಂತ್ರ್ಯತೆ ಎಂಬ ನಿರಂತರತೆಯೆಡೆಗೆ ಕರೆದೊಯ್ಯಲು ಶರಣ ದರ್ಶನವು “ಲಿಂಗ ಜಂಗಮವೆಂಬ” ಸ್ವಾರಸ್ಯಕರವಾದಸಾಧನಾ ಪ್ರಕ್ರಿಯೆಗಳನ್ನು ಅಳವಡಿಸಿ ಶರಣರು ಪರಿಪೂರ್ಣ ಜ್ಞಾನವನ್ನು ಬಯಲೆಂದರು. ಇಲ್ಲಿ ಲಿಂಗ ಜಂಗಮ ಪ್ರಕ್ರಿಯೆಗಳುಪೌರೋಹಿತ್ಯದ ಕರ್ಮಕಾಂಡವಾಗಲಿ, ಜ್ಞಾನಕಾಂಡಗಳಿಗಾಗಲಿ ಅನ್ವಯವಾಗಕೂಡದೆಂಬ ಎಚ್ಚರ ಶರಣರಲ್ಲಿ ಅತ್ಯಂತವಿಶಿಷ್ಟವಾದುದು.—ಬರಹದ ಉತ್ಕೃಷ್ಟತೆಯನ್ನ ತೋರಿಸುವ ಚಿಂತನೆಯ ಒಂದು ಎಳೆ ಇದು. ಈ ದಿಕ್ಕಿನಲ್ಲಿ ಯೋಚಿಸುವ ಅಗತ್ಯವಿದೆ.
ಚನ್ನಬಸವಣ್ಣ, ರಾಮದುರ್ಗ
Jun 10, 2019ಪದ್ಮಾಲಯ ನಾಗರಾಜ್ ಅವರ ಬರಹ ತುಂಬಾ ಚೆನ್ನಾಗಿದೆ.
-ಚನ್ನಬಸವಣ್ಣ, ರಾಮದುರ್ಗ
ವಿನಯ್ ಆದಿಹಳ್ಳಿ
Jun 10, 2019ಲೇಖನಗಳು ಚೆನ್ನಾಗಿ ಮೂಡಿಬಂದಿವೆ. ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ ಸುಂದರವಾದ ಬರಹ.
Jayashree P.L
Jun 10, 2019ಉತ್ಕೃಷ್ಟ ಬರಹ. ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಲು ಇಂತಹ ಬರಹಗಳು ಬೇಕು. ಬಯಲು ಯಾವತ್ತೂ ನನ್ನ ಅಚ್ಚುಮೆಚ್ಚಿನ ಬ್ಲಾಗ್.
Jyothilingappa
Jun 11, 2019ನಮಸ್ಕಾರ..
ನಾವೀಗ ಅಮೆರಿಕಾ ವಾಸಿಗಳು. ಬಂದು ಒಂದು ಇಪ್ಪತ್ತು ದಿನಗಳಾಯಿತು.ಓದಲು ಬೇಕಾದಷ್ಟು ಸಮಯವಿದೆ.ಆದರೆ ಓದಲು ಇರುವುದು ಷಟ್ಸ್ಥಲ ವಚನಗಳು ಮಾತ್ರ. ಈಗ ಬಯಲು ಮತ್ತೆ ಓದಲು ಆರಂಭಿಸಿದೆ.ಅರೆ..ಪದ್ಮಾಲಯ ನಾಗರಾಜ ರ ಲೇಖನ.. ತುಂಬಾ ಖುಷಿಯಾಯಿತು.ಅವರ ಅಚಲ ಮಾರ್ಗ ಓದಲು ದೊರಕಿಸಿಕೊಳ್ಳಲಾಗಿರಲಿಲ್ಲ.ಇಲ್ಲಿಗೆ ತರುವ ಆಸೆ ಇತ್ತು. ಈ ಲೇಖನ ಪ್ರಕಟಿಸಿದ ತಮಗೆ ತುಂಬಾ ಧನ್ಯವಾದಗಳು. ಹಲವಾರು ಬಾರಿ ಓದುವ ಲೇಖನ. ಹಲವರಿಗೆ ಓದಲು ಹೇಳಿರುವೆ.
ಬಯಲು ತುಂಬಾ ಚೆನ್ನಾಗಿ ಬರುತ್ತಿದೆ.
ಧನ್ಯವಾದಗಳು.
ಡಾ. ಸುರೇಂದ್ರ ನಾಯಕ್
Jun 12, 2019ಮನುಷ್ಯನ ವಿಮುಕ್ತಿಗಾಗಿ ಶರಣರು ಕಂಡುಕೊಂಡ ಹಾದಿ ಎಷ್ಟು ಭಿನ್ನವಾಗಿತ್ತು ಎಂಬುದನ್ನು ವಿವರವಾಗಿ ದಾಖಲಿಸಿದ ಲೇಖನ “ಕಾಣಬಾರದ ಲಿಂಗ…”. ಈ ದಾರಿ ಎಲ್ಲಿ ಮುಚ್ಚಿ ಹೋಗಿದೆ? ನಾವು ಶರಣರನ್ನು ಗ್ರಹಿಸುತ್ತಾ ಬಂದ ಬಗೆಯನ್ನು ಪ್ರಶ್ನಿಸುವ ಪದ್ಮಾಲಯ ಅವರು ಅದರ ಮಹತ್ತನ್ನು ತೋರಿಸುವ ರೀತಿ ಬಹಳ ಪ್ರಬುದ್ಧವಾಗಿದೆ. ಮತ್ತೊಮ್ಮೆ ಓದಬೇಕು. ಆಗ ಮತ್ತೆ ಬರೆಯುತ್ತೇನೆ.
Sanjeev Banakar
Jun 13, 2019ಪದ್ಮಾಲಯ ನಾಗರಾಜ್ ಅವರ ಲೇಖನ wonderful, ನನಗೆ ಅಭಿಪ್ರಾಯಗಳನ್ನು ಬರೆದು ಗೊತ್ತಿಲ್ಲ. ಆದರೆ ಹೀಗೆ ಹೇಳಲೇ ಬೇಕೆನಿಸಿ ಬರೆದೆ.
Sushma karaga
Jun 14, 2019ಒಂದೊಂದು ಸಾಲೂ ಮನನ ಯೋಗ್ಯವಾಗಿವೆ. ಬಗೆದಷ್ಟು ಆಳದಂತೆ, ಲೇಖನವು ಶರಣರ ವಿಸ್ತಾರ ನೋಟಕ್ಕೆ ತಯಾರು ಮಾಡುವಂತಿದೆ. ಪದ್ಮಾಲಯ ನಾಗರಾಜ್ ಶರಣರಿಗೆ ಅನಂತಾನಂತ ಶರಣು ಶರಣಾರ್ಥಿಗಳು.
chiranjeevi gayakwad
Jun 14, 2019ಆಸ್ತಿಕ ಮತ್ತು ನಾಸ್ತಿಕಗಳ ಭ್ರಮೆಯನ್ನು ಬಿಡಿಸುವಂತೆ ಶರಣರು ಚಿಂತಿಸಿದರು ಎನ್ನುವ ಪದ್ಮಾಲಯ ಅವರ ವಿಚಾರ ನನಗೆ ಸರಿ ಎನಿಸಿತು. ಈ ದಾರಿಯಲ್ಲಿ ನಾವು ಯೋಚಿಸಿಯೇ ಇರಲಿಲ್ಲ. ಸರ್, ದಯವಿಟ್ಟು ನಮಗೆ ನಿಮ್ಮ ಮಾರ್ಗದರ್ಶನ ಅವಶ್ಯವಾಗಿ ಬೇಕು, ಬಯಲು ನಮಗೆ ಅವರನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಯಾವತ್ತೂ ಬಯಲಿನ ಲೇಖನಗಳನ್ನು ಓದದೇ ಬಿಟ್ಟಿಲ್ಲ. ಬಯಲು ಬಳಗಕ್ಕೆ ನನ್ನ ನಮನಗಳು.
ವಿಶ್ವನಾಥ ಎನ್ ಅಮಾಸ
Jun 15, 2019ಬಯಲೊಳು ಬಯಲಾಗುವ ಪರಿಗೆ ಪೂರಕವಾದ ವಿಷಯಗಳು ಅರ್ಥಪೂರ್ಣವಾಗಿ ಮೂಡಿಬಂದಿವೆ. ಆಳವಾದ ಅಧ್ಯಯನ, ಸಂಶೋಧನೆ ಮತ್ತು ಅಳವಡಿಸಿಕೊಂಡಾಗ ಮಾತ್ರ ಇಂತಹ ಲೇಖನ ಮೂಡಿಬರಲು ಸಾಧ್ಯ. ಪದ್ಮಾಲಯ ನಾಗರಾಜ್ ರವರು ತಮ್ಮನ್ನು ತಾವೂ ಸಂಪೂರ್ಣವಾಗಿ ಈ ಕುರಿತು ಅರ್ಪಿಸಿಕೊಂಡಿದ್ದಾರೆಂಬುದನ್ನು ಸ್ವತಃ ನೋಡಿ ಬಲ್ಲೆನಾದ್ದರಿಂದ ಈ ಮಾತನ್ನು ಹೇಳುತ್ತಿರುವೆ.
ಈ ಲೇಖನದಲ್ಲಿರುವ…
ಭೂತಾತ್ಮಕಂ ಜಗತ್/ ಸ್ವಭಾವಂ
ಜಗತಃ ಕಾರಣ ಅಹುಃ/ ನ ಪರಮೇಶ್ವರಃ ಆಸ್ತಿ ಕಶ್ಚಿತ್
ನ ಪುನರ್ಜನ್ಮಃ ನ ಮೋಕ್ಷಃ ? ಮರಣಂ ಏವ ಮೋಕ್ಷಃ
ಅಂದರೆ ಜೀವಸಂಕುಲದ ಈ ಬದಲಾವಣೆ, ನಿಯಂತ್ರಣ, ಪರಿವರ್ತನೆಗಳಿಗೆ ವಸ್ತು ಸ್ವಭಾವವೇ ಕಾರಣ. ಪರಮೇಶ್ವರನೊಬ್ಬನ ಅಸ್ತಿತ್ವವೂ ಇಲ್ಲ, ಪುನರ್ಜನ್ಮವೂ ಇಲ್ಲ, ಮೋಕ್ಷವೂ ಇಲ್ಲ. ಸಾವೊಂದೇ ಮನುಷ್ಯನ ಮೋಕ್ಷ.
ಈ ವಾಸ್ತವವನ್ನು ಒಪ್ಪಿಕೊಂಡಾಗಲೇ ಬಯಲೊಳು ಬಯಲಾಗುವ ಪರಿಯನರಿಯಬಹುದೆಂಬುದು ನನ್ನ ಅಭಿಪ್ರಾಯ.
ಲೇಖಕರಾದ ಪದ್ಮಾಲಯರವರಿಗೆ ಶರಣು ಶರಾರ್ಥಿಗಳು.
ಡಾ. ಶಶಿಕುಮಾರ್ ವಸ್ತ್ರದ
Jun 16, 2019ಲಿಂಗ-ಜಂಗಮವು ಕರಸ್ಥಲದಲ್ಲಿ ನಿಶ್ಚಯವಾಗಬೇಕಾದ ಪ್ರಕ್ರಿಯೆ- ಈ ಮಾತನ್ನು ಶ್ರೀಯುತ ಪದ್ಮಾಲಯ ಅವರು ವಿವರಿಸಬೇಕಾಗಿ ವಿನಂತಿ. ಯಾವ ಅರ್ಥದಲ್ಲಿ ಶರಣರು ಲಿಂಗ-ಜಂಗಮ ಬಳಸಿದ್ದಾರೆ ಎನ್ನುವುದು ಗೊಂದಲದ ವಿಷಯವೇ. ಈ ಗೊಂದಲವೇ ಅನೇಕ ಶೋಷಣೆಗಳಿಗೆ, ಅಪಾರ್ಥಗಳಿಗೆ ಕಾರಣವಾಗಿದೆ.
ಸುರೇಶ್ ಕೊಡಕೊಪ್ಪ, ಚಿಕ್ಕಮಗಳೂರು
Jun 17, 2019“ಶಿವಶಕ್ತಿ, ಶಿವಭಕ್ತಿ, ಶಿವಪ್ರಸಾದಿ, ಶಿವಶರಣ, ಶಿವೈಕ್ಯ, ಶಿವ ಜಂಗಮ ಇತ್ಯಾದಿ ಶರಣರ ಪ್ರಮುಖ ಪರಿಭಾಷೆಗಳು ವೈದಿಕರಜ್ಞಾನಕಾಂಡ ಮತ್ತು ಕರ್ಮಕಾಂಡಗಳಿಗೆ ಪೂರ್ತಿ ಭಿನ್ನವಾಗಿದ್ದು, ಇವು ಮನುಷ್ಯರ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ತನ್ಮೂಲಕಸಾಮಾಜಿಕವನ್ನು ಸ್ವಾಸ್ಥ್ಯ ಸಮಾಜವನ್ನಾಗಿ ಪುನರ್ರೂಪಿಸುವ ಮಹದುದ್ದೇಶವನ್ನು ಹೊಂದಿವೆ. ವಚನಗಳ ಈ ಪರಿಭಾಷೆಗಳಿಗೆಬೇರೆಯದೇ ಮರ್ಮವಿದೆ.”
ಮೇಲಿನ ವಚನದ ಹಿನ್ನೆಲೆಯಲ್ಲಿ ಈ ಶಬ್ದಗಳಿಗೆ ಅರ್ಥವನ್ನು ಹೇಳಬೇಕೆಂದು ಶರಣ ಪದ್ಮಾಲಯ ಅವರಲ್ಲಿ ನನ್ನ ಬೇಡಿಕೆ. ಕುತೂಹಲ ಮೂಡಿಸಿದ ನಿಮ್ಮ ಲೇಖನ ಹಲವಾರು ಪ್ರಶ್ನೆಗಳನ್ನೂ ನನ್ನಲ್ಲಿ ಮೂಡಿಸಿದೆ.
dinesh h p
Jun 18, 2019‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ಪ್ರಸಿದ್ಧ ವ್ಯಾಖ್ಯಾನವು ಪರಲೌಕಿಕವೆಂಬ ಕೈಲಾಸವನ್ನು ಕಾಯಕದ (ದುಡಿಮೆ) ಹಂತಕ್ಕೆಎಳೆದು ತಂದು ನಿಲ್ಲಿಸಿ ಬಿಡುವ ಬೆಡಗಿನಲ್ಲಿ ಆಳವಾದ ಸಾಮಾಜಿಕ ಪ್ರಜ್ಞೆಯಿದೆ.
ಈ ಮಾತಿನ ಆಳಕ್ಕೆ ಹೋಗುವುದು ನಮಗೆ ಗೊತ್ತಿಲ್ಲದೆ ತಪ್ಪುಗಳಾಗಿವೆ. ಸಾಮಾಜಿಕ ಪ್ರಜ್ಞೆಯೂ ಸಿಕ್ಕಿಲ್ಲ, ಒಳ ಅರಿವೂ ಕಾಣಿಸಿಲ್ಲದ ಸಮಾಜ ಲಿಂಗಾಯತ ಸಮಾಜ!!
Dr.Shashikiran G.K
Jun 21, 2019One of the thought provoking articles, the seed of a great idea!! The writer has balanced approach towards the subject, Especially the ending part is throwing light on sharana’s conception of Linga in a different angle. Hither too our perception was moving around one only God, now Mr.Padmalaya is showing an entirely different view to look at Sharana Philosophy. I sincerely appreciate your views sir.
Thanks to Bayalu.
Nandeesh Harihara
Jun 25, 2019ಇನ್ನಷ್ಟು ಮತ್ತಷ್ಟು ಓದಬೇಕು ಅನ್ನಿಸಿತು. ಲೇಖನ ಬೇಗ ಕೊನೆಯಾಯಿತು, ಪದ್ಮಾಲಯ ಅವರು ಇನ್ನೂ ಬರೆಯಬೇಕು, ನಮ್ಮನ್ನು educate ಮಾಡಬೇಕು. ಇದು ನನ್ನ ವಿನಮ್ರ ಕೋರಿಕೆ.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಸಾಣೇಹಳ್ಳಿ
Jun 26, 2019ಕಾಣಬಾರದ ಲಿಂಗವು ತುಂಬಾ ಪರಿಣಾಮಕಾರಿಯಾದ, ಚಿಂತನೆಗೆ ತೊಡಗಿಸುವ ಲೇಖನ. ಲೇಖನದಲ್ಲಿ ಎತ್ತಿರುವ ಪ್ರಶ್ನೆಗಳು ಮತ್ತೆ ಮತ್ತೆ ಕಾಡುತ್ತವೆ.
Ravandur ShIvakumar
Jun 29, 2019ತುಂಬಾ ಅರ್ಥಪೂರ್ಣವಾದ ಲೇಖನ . ತಮ್ಮ ಮಾಹಿತಿಗಾಗಿ ಧನ್ಯವಾದಗಳು.
Gangadhara Jevargi
Jun 30, 2019ಹಾಗಾದರೆ ಶರಣರು ಆಸ್ತಿಕರೂ ಅಲ್ಲ, ನಾಸ್ತಿಕರೂ ಅಲ್ಲ!!!!! ಕರ್ಮಕಾಂಡಗಳಿಂದ ಹೊರಬಂದಿದ್ದೇವೆ, ಜ್ಞಾನಕಾಂಡಗಳಿಂದ ಹೊರಬರುವುದು ಸಾಧ್ಯವೇ? ಎಲ್ಲೆಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ… ಪದ್ಮಾಲಯ ಶರಣರು ಎತ್ತಿದ ವಿಚಾರಗಳು ನನ್ನ ನಿದ್ದೆಯನ್ನು ಕೆಡಿಸಿವೆ.
Radha Niranjan
Jul 10, 2019ಪ್ರಬುದ್ಧ ಲೇಖನ. ಮೂರ್ನಾಲ್ಕು ಸಲ ಓದಿದೆ. ಬಹಳ ಚನ್ನಾಗಿದೆ.
ಮಹಾದೇವ ಹಡಪದ
Jul 10, 2019ಕಾಣಬಾರದ ಲಿಂಗವು ಕರಸ್ಥಲಕ್ಕೆ ಓದಿದೆ. ಬೇರೆಬೇರೆ ಸಿದ್ಧಾಂತಕಾರರ ನಡುವೆ ವಚನಕಾರರ ಬಯಲ ದರ್ಶನವನ್ನು ಹೇಳಲು ಲೇಖಕರು ಪ್ರಯತ್ನಿಸಿದಂತಿದೆ. ಶರಣರು ಹೇಳಿದ್ದು ಅಂತರಂಗ ಬಹಿರಂಗಗಳೆರಡನ್ನೂ ದರ್ಶಿಸುವ ದರ್ಶನ… ಈ ದರ್ಶನದ ನಿಜವಾದ ಅಸ್ತಿತ್ವ ಬರೀ ಲಿಂಗವಲ್ಲ, ಬಯಲಲ್ಲ, ವಚನವಲ್ಲ ೦೧೦ ಎಂಬ ಸಂಕೇತಾಕ್ಷರದ ನಡುವಿನ ೧ ಬಹಳ ಮುಖ್ಯ. ಅದು ಅಸ್ತಿತ್ವದ ನೆಲೆ. ೧+೨+೩ ದ್ವೈತವಾದಂತೆ ೧-೨-೩ ವಿಶಿಷ್ಟಾದ್ವೈತ ಆದ ಹಾಗೆ ೧,೨,೩ ಸಂಖ್ಯಾವಾಚಕಗಳನ್ನು ಮೀರಿದ ನಾಗಾರ್ಜುನನ ೦೧೦ ಮಧ್ಯಮಕಠರಿಕೆಯಾಗಿದೆ. ವಚನಕಾರರ ಮುಖ್ಯ ಮಧ್ಯಮಕಾರಿಕೆ ಇಹವೂ ಅಲ್ಲ ಪರವೂ ಅಲ್ಲ ಅದು ಅಸ್ತಿತ್ವದಲ್ಲಿ ಇರುವ ಶರಣನಷ್ಟೇ ದರ್ಶಕ.
೦೧೦ ಸೂತ್ರದ ಪ್ರಕಾರ ಮೂಲವೂ ಬಯಲು ನಡುವಿನ ೧ ಎನ್ನುವ ಸಂಖ್ಯೆ ಶರಣನನ್ನು ಸೂಚಿಸುತ್ತದೆ ನಂತರದ ೦ ಯೂ ಬಯಲನ್ನೇ ಸೂಚಿಸುತ್ತದೆ. ಇದು ನಾಗಾರ್ಜುನ ಮಧ್ಯಮಕಾರಿಕೆಗೆ ಸಂಬಂಧಿಸಿದ ಸಂಖ್ಯಾಸೂಚಕ.
ರಾಧಾ ನಿರಂಜನ, ಚಾಮರಾಜನಗರ
Jul 10, 2019ಪದ್ಮಾಲಯ ನಾಗರಾಜುರವರಿಗೆ ಭಕ್ತಿಪೂರ್ವಕ ಶರಣು ??
ತಮ್ಮ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ.
ಲೇಖನ ಓದುತ್ತಾ ಓದುತ್ತಾ ಷಣ್ಮುಖ ಶಿವ ಯೋಗಿಯವರ ಒಂದು ವಚನ ನೆನಪಿಗೆ ಬಂತು.
ಅಣುವಿಂಗೆ ಅಣು ಮಹತ್ತಿoಗೆ ಮಹತ್ತು
ಎನಿಸುವ ಲಿಂಗ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ
“ವಿಶ್ವತೊ ಮುಖ, ವಿಶ್ವತೊಪಾದ
ವಿಶ್ವತೋಬಾಹು, ವಿಶ್ವತೋ ಚಕ್ಷು,
ವಿಶ್ವತೋ ವ್ಯಾಪಕನೆನಿಸಿ ಬಂದಿರಯ್ಯ ಎನ್ನ ಕರಸ್ಥಲಕ್ಕೆ
ಅಖಂಡೇಶ್ವರಾ.
ಹೀಗೆ ಕಾಣಬಾರದ ಲಿಂಗವು ಇಂತಹ ವ್ಯಾಪ್ತಿಯೊಡನೆ
ಕರಸ್ಥಲಕ್ಕೆ ಸಾಕಾರವಾಗಿ ಬಂದರೆ ಭಕ್ತನು ನಿಬ್ಬೆರಗಿನಲ್ಲಿ
ಇರುವುದು ಅಲ್ಲದೆ ಸೋಜಿಗವು ಕೂಡ. ಅದನ್ನ ಅಲ್ಲಮರೂ ನುಡಿಯಲ್ಲಿ
ಕಾಣಬಾರದ ಲಿಂಗವೆನ್ನ ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ, ಎನಗಿದು ಸೋಜಿಗ.
ಬಯಲಿಗೆ ಆಕಾರ ಕೊಟ್ಟ ಮಹಾಜ್ಞಾನಿ ಅಲ್ಲಮರೂ
ಇಷ್ಟ ಲಿಂಗ ವೆಂಬುದು ಸರ್ವ ಕಾರಣ ನಿರ್ಮಲ ಲಿಂಗ.
ನಿತ್ಯ ಪರಿಪೂರ್ಣ, ಜಗವನ್ನೇ ಒಳಗೊಂಡ ಮಹಾ ಲಿಂಗದ ಕುರುಹು. ಕುರುಹು ಇಲ್ಲದೆ ಅರಿವಾಗದು ಅರಿವನ್ನ
ಪಡೆಯಲಿಕ್ಕೆ ಕುರುಹು ಬೇಕು.
ಇಂತಹ ಅರಿವು ಹಾಗೂ ಕುರುಹುವಿನಬಗ್ಗೆ ,
ಮಹಾ ಘನದ ಬಗ್ಗೆ, ಹಾಗೂ ಸೃಷ್ಟಿಯ ರಹಸ್ಯ ವನ್ನು
ಎಲ್ಲ ಧರ್ಮ ಗಳ ಸಾರವನ್ನು ಲೇಖನದ ಮೂಲಕ ಅಚ್ಚು ಕಟ್ಟಾಗಿ ಸ್ಪಷ್ಟ ವಾಗಿ ಸುಂದರವಾಗಿ ಅಲ್ಲಮರ ವಚನದ ಒಳ ಹೊರಅರ್ಥವನ್ನು ಸವಿವರವಾಗಿ ತಿಳಿಸಿರುವ ತಮಗೆ ಮತ್ತೊಮ್ಮೆ ಶರಣು ??
ಲೇಖನ ಬಹಳ ಅತ್ಯದ್ಭುತವಾಗಿದೆ ಶರಣರೇ