Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕನ್ನಡ ಕವಿ ಸಂತರಲ್ಲಿ ಧರ್ಮ…
Share:
Articles May 10, 2022 ಡಾ. ಪಂಚಾಕ್ಷರಿ ಹಳೇಬೀಡು

ಕನ್ನಡ ಕವಿ ಸಂತರಲ್ಲಿ ಧರ್ಮ…

ಇಂದು ಇಡೀ ವಿಶ್ವ ಸ್ಥಾವರ ಧರ್ಮಗಳ ಅವಶೇಷಗಳಡಿ ಬದುಕುತ್ತಿದೆ. ಸ್ಥಾವರ ಧರ್ಮಗಳು ಮಾನವನ ಮೇಲೆ ಸವಾರಿ ಮಾಡುತ್ತಿವೆ. ಹಿಂದೆ ಸುಸ್ಥಿರವಾದ ಬದುಕು ಕಟ್ಟಿಕೊಳ್ಳಲು ಧರ್ಮಮಾರ್ಗವನ್ನನುಸರಿಸಿ ಆ ಮಾರ್ಗಕ್ಕೆ ಒಂದೊಂದು ಹೆಸರಿಟ್ಟು ಕರೆದು ಅದರಂತೆ ಆಯಾ ಸಮುದಾಯದ ಜನರು ಬದುಕಿ ಬಾಳಿದರು. ಆದರೆ ಇಂದು ಬದುಕಲು ಮಾರ್ಗತೋರಿಸಬೇಕಾದ ಧರ್ಮವೇ ಬದುಕಿಗೆ ಕೊಳ್ಳಿ ಇಡುತ್ತಿರುವುದು ವಿಪರ್ಯಾಸ. ನಿಜವಾಗಿಯೂ ಯಾವುದಾದರೂ ಧರ್ಮ ಬದುಕಿಗೆ ಕೊಳ್ಳಿ ಇಡುತ್ತಿದೆಯಾ ಎಂದು ನೋಡಿದರೆ ಇಲ್ಲ. ಯಾವ ಧರ್ಮವೂ ಆ ನೀಚ ಕೆಲಸ ಮಾಡಿಲ್ಲ. ಹಾಗಾದರೆ ಜಗತ್ತಿನಲ್ಲಿ ಧರ್ಮದ ಹೆಸರಲ್ಲಿ ಕ್ಷೋಭೆ ಉಂಟಾಗಿರುವುದ ಸುಳ್ಳೆ? ಇಂದು ಕ್ಷೋಭೆ ಸೃಷ್ಟಿಸುತ್ತಿರುವವರು ಎಲ್ಲಾ ಸ್ಥಾಪಿತ ಧರ್ಮಗಳ ಸ್ಥಾವರವಾದಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಮಾತ್ರ!
ಧರ್ಮೋ ರಕ್ಷತಿ ರಕ್ಷಿತಃ ಎಂಬ ಘೋಷವಾಕ್ಯ ಹೇಳಿ ಸಾಮಾನ್ಯ ಮುಗ್ಧ ಜನರನ್ನು ಮತಾಂಧರನ್ನಾಗಿ ಮಾಡಿ ತಮ್ಮ ಬೇಳೆ ಬೇಯಿಸಿಕೊಂಡು ಸಮಾಜವನ್ನು ಧರ್ಮದ ಕಿಚ್ಚಿನಲ್ಲಿ ನೂಕುತ್ತಿದ್ದಾರೆ ಭ್ರಷ್ಟರು. ಹಾಗಾದರೆ ನಿಜಕ್ಕೂ ಧರ್ಮವೆಂದರೇನು? ಸ್ಥಾಪಿತ ಸ್ಥಾವರ ಧರ್ಮದ ಅವಶ್ಯಕತೆ ಇದೆಯೇ? ಅದರ ವ್ಯಾಪ್ತಿ ಇತಿಮಿತಿಗಳೇನು? ಅನುಕೂಲಗಳೇನು, ಅನಾನುಕೂಲಗಳೇನು? ಇವುಗಳನ್ನು ವಿಷದವಾಗಿ ನಾವು ಅರಿಯಬೇಕಾಗುತ್ತದೆ.

ಕನ್ನಡದ ಹೆಮ್ಮೆಯ ರಾಷ್ಟ್ರಕವಿ ಕುವೆಂಪುರವರು ಹೇಳುತ್ತಾರೆ, ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು ಜಾತಿ, ಮತ, ಪ್ರಾಂತ್ಯ, ಭಾಷೆ ಮುಂತಾದ ಹಲವಾರು ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು.

ಕುವೆಂಪುರವರ ವಿಶ್ವಮಾನವ ಗೀತೆ-
“ಓ ನನ್ನ ಚೇತನ, ಆಗು ನೀ ಅನಿಕೇತನ! ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ, ಆಗು ನೀ ಅನಿಕೇತನ! ನೂರು ಮತದ ಹೊಟ್ಟ ತೂರಿ, ಎಲ್ಲ ತತ್ತ್ವದೆಲ್ಲೆ ಮೀರಿ, ನಿರ್ದಿಗಂತವಾಗಿ ಏರಿ, ಓ ನನ್ನ ಚೇತನ, ಆಗು ನೀ ಅನಿಕೇತನ! ಎಲ್ಲಿಯೂ ನಿಲ್ಲದಿರು; ಮನೆಯನೆಂದು ಕಟ್ಟದಿರು; ಕೊನೆಯನೆಂದು ಮುಟ್ಟದಿರು; ಓ ಅನಂತವಾಗಿರು! ಓ ನನ್ನ ಚೇತನ, ಆಗು ನೀ ಅನಿಕೇತನ!
ಅನಂತ ತಾನ್ ಅನಂತವಾಗಿ ಆಗುತಿಹನೆ ನಿತ್ಯಯೋಗಿ; ಅನಂತ ನೀ ಅನಂತವಾಗು; ಆಗು, ಆಗು, ಆಗು, ಆಗು, ಓ ನನ್ನ ಚೇತನ, ಆಗು ನೀ ಅನಿಕೇತನ!”
ಕುವೆಂಪುರವರ ಈ ಗೀತೆಯಂತೂ ಎಲ್ಲಾ ಸ್ಥಾಪಿತ ಧರ್ಮಗಳ ಸ್ಥಾವರಧರ್ಮವಾದಿಗಳ ಬೆನ್ನುಮೂಳೆ ಮುರಿದು ಮೂಲೆಗೆ ಸೇರಿಸುವಷ್ಟು ಶಕ್ತವಾಗಿದೆ. ದುರದೃಶ್ಟವಶಾತ್ ಈ ನಾಡಿನಲ್ಲಿ ಎಷ್ಟೇ ಸಂಖ್ಯೆಯ ವಿಚಾರವಾದಿಗಳು ಆಗಿಹೋದರೂ ಮತ್ತೂ ಇನ್ನೂ ಅಸಂಖ್ಯ ವಿಚಾರವಂತರು ಮುಂದಿನ ದಿನಮಾನಗಳಲ್ಲಿ ಬಂದರೂ ನಮ್ಮ ನಾಡಿನ ಜನ ತಮ್ಮ ಅಂಧವಿಶ್ವಾಸವನ್ನು ಬಿಟ್ಟು ಹೊರಬರುವುದಿಲ್ಲ ಎಂಬ ಅಚಲವಿಶ್ವಾಸ ನನ್ನದು!

ಶ್ರೀ ಕುವೆಂಪುರವರು ಪಂಚಮಂತ್ರಗಳನ್ನು ಉದ್ಘೋಷಿಸಿದ್ದಾರೆ-
1) ಪ್ರತಿಯೊಂದು ಮಗುವೂ ಹುಟ್ಟುತ್ತಲೆ- ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.
2) ಹುಟ್ಟುವಾಗ ‘ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ ಪ್ರಪಂಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು.
3) ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ, ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪುಗುಂಪಾಗಿ ಒಡೆದಿವೆ; ಯುದ್ಧಗಳನ್ನು ಹೊತ್ತಿಸಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆಂಬಂತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ ‘ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’
4) ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ- ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; “ಮನುಜಮತ”. ಆ ಪಥ ಈ ಪಥ ಅಲ್ಲ; “ವಿಶ್ವಪಥ”. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ “ಸರ್ವೋದಯ”. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; “ಸಮನ್ವಯ”ಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ “ಪೂರ್ಣದೃಷ್ಟಿ”.
5) ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸಂಖ್ಯೆಯ ಮತಗಳಿರುವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ. ಈ ‘ದರ್ಶನ’ವನ್ನೆ ‘ವಿಶ್ವಮಾನವ ಗೀತೆ’ ಸಾರುತ್ತದೆ.

ವಿಶ್ವಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ವ ಪ್ರಣಾಳಿಕೆಯನ್ನು ಕುವೆಂಪುರವರು ಸಪ್ತಸೂತ್ರಗಳ ಮೂಲಕ ತಿಳಿಸಿದ್ದಾರೆ.
1) “ಮನುಷ್ಯಜಾತಿ ತಾನೊಂದೆ ವಲಂ” ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
2) ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ-ಕ್ಷತ್ರಿಯ, ವೈಶ್ಯ-ಶೂದ್ರ, ಅಂತ್ಯಜ, ಷಿಯಾ-ಸುನ್ನಿ, ಕ್ಯಾಥೊಲಿಕ್- ಪ್ರಾಟೆಸ್ಟಂಟ್, ಸಿಕ್-ನಿರಂಕಾರಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
3) ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
4) ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು.
5) ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವಮಾನವ’ನಾಗಬೇಕು.
6) ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೆ ಸೇರದೆ, ಪ್ರತಿಯೊಬ್ಬನೂ ತಾನು ಕಂಡುಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು.
7) ಯಾವ ಒಂದು ಗ್ರಂಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.

ಕುವೆಂಪುರವರು ದೇವರ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು, ಧಾರ್ಮಿಕ ಸೋಗಲಾಡಿಗಳನ್ನು ಅತ್ಯಂತ ಕಟುವಾಗಿ ಖಂಡಿಸಿದ್ದಾರೆ
“ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ ಬಾರಾ ||
ಶತಮಾನಗಳು ಬರಿಯ ಜಡ ಶಿಲೆಯ ಪೂಜಿಸಾಯ್ತು, ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು, ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು, ದಾಸರನು ಪೂಜಿಸಿಯೇ ದಾಸ್ಯವಾಯ್ತು ।। ಭಾರತಾಂಬೆಯೇ ।।
ಗುಡಿಯೊಳಗೆ ಕಣ್ ಮುಚ್ಚಿ ಬೆಚ್ಚಗಿರುವರನೆಲ್ಲ, ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ, ಘಂಟೆ ಜಾಗಟೆಗಳಿನ್ ಬಡಿದು ಕುತ್ತಿಗೆ ಹಿಡಿದು, ಕಡಲಡಿಗೆ ತಳ್ಳಿರೈ ಶಂಖದಿನ್ ನುಡಿದು ।। ಭಾರತಾಂಬೆಯೇ ।।
ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು, ಜೀವದಾತೆಯನಿಂದು ಕೂಗಬೇಕು, ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಒಯ್ದು, ಚಳಿಯು ಮಳೆಯಲಿ ನೆನೆವ ತಾಯ್ಗೆ ಹಾಕು ।। ಭಾರತಾಂಬೆಯೇ ।।”

ರಾಷ್ಟ್ರಕವಿ ಡಾ. ಜಿ ಎಸ್ ಶಿವರುದ್ರಪ್ಪ ಅವರ ದೇವಗೀತೆ-
“ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ ಎಲ್ಲಿದೆ ನಂದನ, ಎಲ್ಲಿದೆ ಬಂಧನ ಎಲ್ಲಾ ಇದೆ ಈ ನಮ್ಮೊಳಗೆ ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಿಗೆಗೆ ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕುದಿನದ ಈ ಬದುಕಿನಲಿ”
ಗುರು ಬಸವಣ್ಣನವರು ಚೈತನ್ಯರೂಪಿ ದೇವನನ್ನು ಸಾಕಾರದಲ್ಲಿ ಕಂಡವರು ಅವರ ಒಂದು ಸುಪ್ರಸಿದ್ದ ವಚನ: “ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು. ನೀನಲ್ಲದೆ ಮತ್ತಾರೂ ಇಲ್ಲಯ್ಯಾ, ಕೂಡಲಸಂಗಮದೇವಾ, ಹಾಲಲದ್ದು, ನೀರಲದ್ದು”. ದೇವರನ್ನು ಅರಸಿ ಕಾಡು ಮೇಡು ಹೊಕ್ಕು ತಪಸ್ಸು ಆಚರಿಸಬೇಕಾಗಿಲ್ಲ, ನದಿ ತಟಾಕಗಳಲ್ಲಿ ಮುಳುಗಿ ಹುಡುಕಬೇಕಾಗಿಲ್ಲ, ಇಡೀ ಜಗತ್ತಿನಲ್ಲಿ ಚೈತನ್ಯವಿರದ ಅಣುಮಾತ್ರ ಜಾಗವೂ ಇಲ್ಲ, ಆ ಪರಮ ಚೈತನ್ಯವನ್ನು ನಾವು ಇಲ್ಲಿಯೇ ಕಾಣಬೇಕು ಎಂದು ಈ ವಚನದಲ್ಲಿ ಬಸವಣ್ಣನವರು ಸ್ಪಷ್ಟವಾಗಿ ತೀಳಿಸುತ್ತಾರೆ. ನಿರಾಕರ ಚೈತನ್ಯದ ಸಾಕಾರ ಮುಖವಾದ ತಂದೆ ತಾಯಿ ಬಂಧು ಬಳಗ ಅಷ್ಟೇ ಏಕೆ ಪ್ರಕೃತಿ ಪ್ರಾಣಿಪಕ್ಷಿ ಜೀವಜಂತು ಅಖಂಡ ಸೃಷ್ಟಿಯಲ್ಲಿ ಅವಿರಳವಾಗಿ ಬೆರೆಸಿ ಬೇರಿಲ್ಲದಂತೆ ಇದೆ, ಅದನ್ನು ನಮ್ಮ ಒಳಗಣ್ಣು ತೆರೆದು ಅರಿಯಬೇಕು.
ಬಸವಣ್ಣನವರ ಈ ವಚನಕ್ಕೂ ಜಿ.ಎಸ್ ಶಿವರುದ್ರಪ್ಪನವರ ಹಾಗೂ ಕುವೆಂಪುರವರ ಕವಿತೆಗಳಿಗೂ ಎಷ್ಟು ಸಾಮ್ಯವಿದೆಯಲ್ಲವೇ! ಅನುಭಾವಿಗಳ ನುಡಿ ಒಂದೇಯಾಗಿರುವುದು. ಧರ್ಮವೆಂಬುದು ಸತ್ಯ ಶುದ್ಧ ನಿರಹಂಕಾರ ನಿಸ್ವಾರ್ಥ ಮಾನವೀಯ ನೆಲೆ. ಅದು ಬಿಟ್ಟು ಕಾಣದ ದೇವರ ಹುಡುಕಾಟ, ಅಲೆದಾಟ, ಯಾಂತ್ರಿಕ ಪೂಜೆ ಪ್ರಾರ್ಥನೆಗಳು, ಧರ್ಮದ ಉಳಿವಿಗಾಗಿ ಬಡಿದಾಟ, ಹಿಂಸೆ, ವಿಕೃತವಾದ ಧರ್ಮಾಚರಣೆಗಳು ಕೇವಲ ವ್ಯರ್ಥಾಲಾಪ! ನಾವು ವಾಸಿಸುವ ಸಮಾಜದಲ್ಲೇ ದೇವರನ್ನು ಕಾಣುವ ಒಳಗಣ್ಣು ತೆರೆಯಬೇಕು ಅದೇ ನಿಜವಾದ ಧರ್ಮ ಉಳಿದುದೆಲ್ಲಾ ಅಧರ್ಮ!

Previous post ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
Next post ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…

Related Posts

ಲಿಂಗಾಯತ ಧರ್ಮದ ನಿಜದ ನಿಲುವು
Share:
Articles

ಲಿಂಗಾಯತ ಧರ್ಮದ ನಿಜದ ನಿಲುವು

April 29, 2018 ಡಾ. ಎಸ್.ಎಮ್ ಜಾಮದಾರ
ಪ್ರಜಾವಾಣಿ ದಿನಪತ್ರಿಕೆಯ ಸಂಪಾದಕೀಯ ಪುಟದಲ್ಲಿ ‘ಲಿಂಗಾಯತವು ಪ್ರತ್ಯೇಕ ಸ್ವತಂತ್ರ ಧರ್ಮವೇ?’ ಎಂಬ ನನ್ನ ಲೇಖನಕ್ಕೆ ಪ್ರತಿಕ್ರಿಯೆ ಎನ್ನುವಂತೆ ಡಾ ಚಿದಾನಂದ ಮೂರ್ತಿಯವರು 13...
ಕಾದಿ ಗೆಲಿಸಯ್ಯ ಎನ್ನನು
Share:
Articles

ಕಾದಿ ಗೆಲಿಸಯ್ಯ ಎನ್ನನು

April 29, 2018 ಕೆ.ಆರ್ ಮಂಗಳಾ
“ಬಾಳಲೇ? ಬಾಳಿಗಂತ್ಯವ ತರಲೇ?” ಹ್ಯಾಮ್ಲೆಟ್ ನಾಟಕದ ಒಂದು ಬಹು ಮುಖ್ಯ ಸ್ವಗತ. ರಾಜಕುಮಾರ ಹ್ಯಾಮ್ಲೆಟ್ ನ ಎದೆಯೊಳಗೆ ಇಂಥ ಪ್ರಶ್ನೆಯೊಂದು ಎದ್ದು ಕೊನೆಗೆ ಆತನ ಬಲಿ...

Comments 12

  1. Rajashekhar N
    May 13, 2022 Reply

    ಕುವೆಂಪು ಅವರ ವಿಶ್ವಮಾನವ ತತ್ವವು ಶರಣರ ವಿಚಾರಗಳಂತೆ ಪ್ರಜ್ವಲಮಾನವಾಗಿದೆ. ಅವರ ಕತೆ-ಕಾದಂಬರಿಗಳಲ್ಲಿ ಮಾನವತೆಯ ದಟ್ಟ ಛಾಯೆಯನ್ನು ಕಾಣಬಹುದು. ಲೇಖನ ಬಹಳ ಚೆನ್ನಾಗಿದೆ.

  2. Prasad Patil
    May 13, 2022 Reply

    ಸಪ್ತಸೂತ್ರಗಳ ವಿಚಾರವಾಗಿ ನನಗೆ ತಿಳಿದಿರಲಿಲ್ಲ. ಎಷ್ಟೊಂದು ಅಮೂಲ್ಯವಾದ ಮಾತುಗಳು ಅಲ್ಲಿವೆ! ನಮ್ಮ ಶತಮಾನದ ಬಹುದೊಡ್ಡ ದಾರ್ಶನಿಕ ಸಂತ ಕುವೆಂಪು ಅವರು. ನಿಸರ್ಗ ಸಂತ ವಿಲಿಯಂ ವರ್ಡ್ಸವರ್ತ್ ಅವರಿಗೆ ಕುವೆಂಪು ಅವರನ್ನು ಹೋಲಿಸುವುದನ್ನು ಕೇಳಿದ್ದೇನೆ. “ಮುಚ್ಚುಮರೆಯಿಲ್ಲದೆಯೇ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೆ ಅಂತರಾತ್ಮ…” ಎನ್ನುವ ಕವನವಂತೂ ಅತ್ಯದ್ಭುತ ಆಧ್ಯಾತ್ಮ ಕವನವೆಂದು ನನಗನ್ನಿಸುತ್ತದೆ.

  3. Girish Mysuru
    May 19, 2022 Reply

    ಹುಟ್ಟುತ್ತಾ ಪ್ರತಿಯೊಬ್ಬರೂ ವಿಶ್ವಮಾನವರೇ, ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ- ಎನ್ನುವುದು ದಿಟದ ಮಾತು. ಕುವೆಂಪು ಅವರೂ ಶರಣರೇ. ಅವರ ವಿಚಾರ ಸಾಹಿತ್ಯ ಸದಾ ಕಾಲಕ್ಕೆ ಪ್ರಸ್ತುತವಾದ ಪ್ರಖರ ಸಾಹಿತ್ಯವೆಂದೇ ಹೆಸರಾಗಿದೆ. ಉತ್ತಮ ಲೇಖನ.

  4. ಕೈಲಾಸಪ್ಪ ಕೂಡ್ಲಿಗಿ
    May 19, 2022 Reply

    ಯಾವ ಒಂದು ಗ್ರಂಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.- ಎಂಬ ಮಾತನ್ನು ಎಲ್ಲ ಧರ್ಮದವರು ಅನುಸರಿಸಿದ್ದೇ ಆದರೆ ಮೌಢ್ಯ ಆಚರಣೆಗಳು ಬಿದ್ದುಹೋಗುತ್ತವೆ.

  5. Mahadeva S
    May 19, 2022 Reply

    ಕಾರ್ತಿಕದ ಕತ್ತಲೆ ಕಳೆಯಲು ಆಕಾಶದೀಪವಾಗಿ ಬಂದೆ- ಎಂದು ಬಸವಣ್ಣನವರ ಕುರಿತಾಗಿ ಬರೆದ ಕುವೆಂಪು ಅವರ ಕವನ ಶಾಲಾ ಪಠ್ಯ ಪುಸ್ತಕದಲ್ಲಿ ಸೇರಬೇಕು. ಋಷಿ ಕುವೆಂಪು ಅನ್ನುವುದಕ್ಕಿಂತ ಶರಣ ಕುವೆಂಪು ಅನ್ನುವುದು ಸರಿಯಾದ ಮಾತು. ಅವರ ಬರವಣಿಗೆ ಮತ್ತು ಬದುಕು ಎರಡೂ ಪೂರಕವಾಗಿದ್ದು, ಶರಣನಂತೆ ಬದುಕಿ ಬೆಳಕಾಗಿ ಹೋದರು. ಕಾರಂತರೂ ಓರ್ವ ಸಂತನೇ- ಅವರ ಬಾಳ್ವೆಯೇ ಬದುಕು ಉತ್ಕೃಷ್ಟವಾದ ಪುಸ್ತಕ.

  6. ಲಿಂಗರಾಜು, ಮಾನ್ವಿ
    May 23, 2022 Reply

    ಧರ್ಮ, ದೇವರುಗಳೇ ಇವತ್ತಿನ ಎಲ್ಲಾ ಸಮಸ್ಯೆಗಳಿಗೆ ಮೂಲ. ಕುವೆಂಪು ಅವರಂಥ ಸಾಹಿತಿಗಳ ಓದು ಬಹಳ ಅಗತ್ಯವಾಗಿದೆ. ಶಾಲಾ ಪಠ್ಯಗಳಲ್ಲಿ ಕುವೆಂಪು ಅವರ ವಿಚಾರಗಳು ಇನ್ನೂ ಹೆಚ್ಚು ಹೆಚ್ಚು ಸೇರಬೇಕು, ಆದರೆ???

  7. Varun J.P
    May 29, 2022 Reply

    ಕುವೆಂಪು ಅವರ ವಿಚಾರಗಳನ್ನು ಓದಿದಷ್ಟೂ ಅವರು ಎಂತಹ ಚಿಂತಕರಾಗಿದ್ದರೆಂದು ಆಶ್ಚರ್ಯವಾಗುತ್ತದೆ. ಅವರ ಒಂದೊಂದು ಮಾತುಗಳು ಇಂದಿಗೂ, ಮುಂದಿನ ದಿನಗಳಿಗೂ ಪ್ರಸ್ತುತ ಎನ್ನುವುದರಲ್ಲಿ ಎರಡು ಮಾತಿಲ್ಲ! ಪ್ರಸ್ತುತ ಲೇಖನ.

  8. Boralingaiah Gulaki
    May 29, 2022 Reply

    ಪಠ್ಯಪುಸ್ತಕದಲ್ಲಿ ಕುವೆಂಪು ಅವರ ಬರಹಗಳನ್ನು ಕೈಬಿಟ್ಟರೆ ಅದು ನಮ್ಮ ಮಕ್ಕಳಿಗೆ ಮಾಡುವ ಅನ್ಯಾಯ. ಎಲ್ಲಾ ಬಗೆಯ ಮೌಢ್ಯಗಳನ್ನು ದಿಕ್ಕರಿಸುವ ಕುವೆಂಪು ಅವರ ಚಿಂತನೆಗಳು ತುಂಬಾ ಪ್ರಖರವಾಗಿವೆ. ಅವರು ರಾಷ್ಟ್ರಕವಿ, ರಸರುಷಿ, ತತ್ವಜ್ಞಾನಿ ಮತ್ತು ಅನುಭಾವಿ.

  9. ಚಂದ್ರಪ್ಪ ಜಾವಳಿ
    May 29, 2022 Reply

    ಪಂಚಮಂತ್ರಗಳಂತೆ, ಮಂತ್ರ ಮಾಂಗಲ್ಯ ಕೂಡ ಕುವೆಂಪು ಅವರ ಕ್ರಾಂತಿಕಾರಿ ನಡೆಗಳಿಗೆ ಕುರುಹು. ಪೂರ್ಣಚಂದ್ರ ತೇಜಸ್ವಿಯಂತಹ ಅಪರೂಪದ ವ್ಯಕ್ತಿಯನ್ನು ಕನ್ನಡನಾಡಿಗೆ ಕೊಟ್ಟ ಕವಿಗಳಿಗೆ ನಮೋನಮಃ. ಸಮಯಕ್ಕೆ ಸರಿಯಾದ ಬರಹ. ಲೇಖಕರಿಗೆ ಧನ್ಯವಾದಗಳು.

  10. Dinesh B
    May 29, 2022 Reply

    The blog has really wonderful articles. Thanks to all authors.

  11. lokeshappa
    Jun 14, 2022 Reply

    ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಕುವೆಂಪು ಅವರ ದಾರ್ಶನಿಕತೆಯ ಕುರಿತಾದ ಸಮಯೋಚಿತ ಲೇಖನ ಓದಿ ಬಹಳ ಖುಷಿಯಾಯಿತು. ನಮ್ಮ ಜನರಿಗೆ ಕುವೆಂಪು ಅವರ ಮಹತ್ವ ತಿಳಿದಿಲ್ಲವಲ್ಲಾ ಎಂದು ಅಷ್ಟೇ ನೋವಾಯಿತು.

  12. Ravikumar Bengaluru
    Jun 30, 2022 Reply

    Your way of telling everything in this piece of writing is infact good, thanks a lot.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
September 14, 2024
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಶಿವಯೋಗ
ಶಿವಯೋಗ
July 4, 2021
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
April 11, 2025
ಗುರುಪಥ
ಗುರುಪಥ
January 4, 2020
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
July 10, 2023
Copyright © 2025 Bayalu