ಕನ್ನಗತ್ತಿಯ ಮಾರಯ್ಯ
ವ್ಯಾಪಾರಿಗಳ ಮನೆಗಳಿಗೆ ದುಃಸ್ವಪ್ನವಾಗಿದ್ದ ಕನ್ನದ ಮಾರ ಹೇಳಿಕೇಳಿ ಕದಿಯುವ ಚಾಣಾಕ್ಷ ಕಳ್ಳ. ಇಂಥ ದಿನ ಇಷ್ಟು ಹೊತ್ತಿಗೆ ಸರಿಯಾಗಿ ನಿಮ್ಮ ಮನೆಗೆ ಕನ್ನ ಹಾಕತೇನೆ ಅಂತ ಮುಂಚಿತವಾಗಿಯೇ ಹೇಳಿಕೇಳಿ ಕದಿಯುವಷ್ಟು ಜಾಣ್ಮೆಯನ್ನು ಕಳ್ಳತನದಲ್ಲಿ ಸಾಧಿಸಿದ್ದ. ದಿನದಿನವೂ ಕಳ್ಳತನ ಮಾಡುವ ಜಾಯಮಾನ ಅವನದಲ್ಲ. ಹೆಂಡತಿ ಮಕ್ಕಳೊಂದಿಗೆ ಹೊತ್ತು ಕಳೆಯುತ್ತಾ ಇದ್ದವನು ಇದ್ದಕ್ಕಿದ್ದಂತೆ ರಾತ್ರಿ ಮಾಯವಾಗಿ ಅದೆತ್ತಲೋ ಹೋದನೆಂದರೆ ದಿನ ಬಿಟ್ಟು ದಿನ ಮೂಡಿದಾಗ ಮನೆಗೆ ಬಂದು ಬಿಡುತ್ತಿದ್ದ. ಬರಿಗೈಯಲ್ಲಿ ಹೋದವನು ಬರುವಾಗ ಕೈತುಂಬಾ ನಗನಾಣ್ಯ ತಂದು ಬಿಡುತ್ತಿದ್ದ. ಆ ನಗನಾಣ್ಯವನ್ನು ಗುಪ್ತವಾಗಿ ಸೋನಾರಣ್ಣನ ಮನೆಯಲ್ಲಿ ಮಾರಿ ಮನೆಗೆ ದಿನಸಿ ತಂದು ಬೇಸಿ ಹಾಕುವುದು ಹೆಂಡತಿಯ ಕೆಲಸ.
ಕಳ್ಳರ ಕುಲವೆಂದೇ ಕರೆಸಿಕೊಳ್ಳುತ್ತಿದ್ದ ಈ ಅಲೆಮಾರಿಗಳು ಊರಿಂದ ಊರಿಗೆ ಬಂಡಿಕಟ್ಟಿಕೊಂಡು ತಿರುಗುತ್ತಲೇ ಬದುಕು ನಡೆಸುತ್ತಿದ್ದರು. ಊರ ಪ್ರಮುಖನ ಮನೆಗೆ ಹೋಗಿ ನಾವು ಕಳ್ಳರ ಕುಲದವರು ನಿಮ್ಮ ಸೀಮೆಗೆ ಬಂದಿದ್ದೇವೆ, ನಮಗೆ ಹೊಟ್ಟೆಹೊರೆಯಲು ಕೆಲಸ ಕೊಡಿ, ಇಲ್ಲವಾದರೆ ಭಿಕ್ಷೆ ನೀಡಿ ಮುಂದಕ್ಕೆ ಕಳಿಸಿ ಎಂದು ಕುಲದ ಹೆಂಗಸರು ಕೇಳಿಕೊಳ್ಳಲು- ಊರಿನ ಸಮಸ್ತರು ತಳವಾರನ ದೇಖರೇಕಿಯಲ್ಲಿ ಈ ಕುಟುಂಬದವರಿಗೆ ಭಿಕ್ಷಾನ್ನ ನೀಡಿ ಕಳಿಸುತ್ತಿದ್ದರು. ಜೊತೆಗೊಬ್ಬ ತಳವಾರನಿಲ್ಲದಿದ್ದರೆ ಹಗಲು ಹೊತ್ತಲ್ಲೂ ದರೋಡೆ ಮಾಡಿಬಿಡುತ್ತಾರೆ ಎಂಬ ಭಯ ಈ ಕುಲದವರ ಬಗೆಗಿತ್ತು. ಹೀಗಿರುವಲ್ಲಿ ಯಾವ ಮನೆಯವರೂ ಪಡಿಕಾಳು ಭಿಕ್ಷೆ ನೀಡದೆ ಹಿಂದಕ್ಕೆ ಕಳಿಸುತ್ತಿದ್ದಿಲ್ಲ. ಹಾಗೊಂದು ವೇಳೆ ಯಾರ ಮನೆಯಲ್ಲಾದರೂ ಭಿಕ್ಷೆ ನೀಡುವುದಕ್ಕೆ ಹಿಂದೆಮುಂದೆ ನೋಡಿದರೋ ಅವರ ಮನೆಯಲ್ಲಿ ಆ ದಿವಸ ಕಳ್ಳತನವಾಗುತ್ತಿತ್ತು. ಹೀಗೆ ಹೆಂಗಸರು ಹಗಲು ಹೊತ್ತಿನಲ್ಲಿ ಊರೊಳಗೆ ಸೂಲಾಡಿ ಬೇಡಿಕೊಂಡು ಬರುತ್ತಿದ್ದರೆ, ಗಂಡಸರು ಮುಂಜಾನೆಯ ಎಳೆಬಿಸಿಲಿಗೆ ಮೈ ಕಾಯಿಸುವುದು, ಹಳ್ಳದ ಈಚಲುಮರದಲ್ಲಿ ಭಟ್ಟಿ ಇಳಿಸುವುದು, ಮಧ್ಯಾಹ್ನದ ಇಳಿಹೊತ್ತಿಗೆ ಯಾವುದಾದರೂ ಗಿಡದ ಕೆಳಗೆ ಮಲಗಿ ನಿದ್ರಿಸುವುದು ಬಿಟ್ಟರೆ ಅವರು ಮಾಡುವ ಕೆಲಸವೇನಿದ್ದರೂ ರಾತ್ರಿಯೇ…
ಬೆಲ್ಲ-ಸುಣ್ಣ ಬೆರೆಸಿ ಗಚ್ಚುಹಾಕಿ ಕಟ್ಟಿದ ಗೋಡೆ ಇರಲಿ, ಕರೀಕಲ್ಲಿನ ಮನೆಯೇ ಇರಲಿ ಕನ್ನ ಕೊರೆಯುವುದಕ್ಕೆ ಪ್ರಸಿದ್ಧನೆಂದರೆ ಮಾರ. ಈ ಕಡೆಯಿಂದ ಆ ಕಡೆಗೆ ಒಬ್ಬ ವ್ಯಕ್ತಿ ಹೋಗಿ ಬರುವಂಥ ಕೊಳವೆಯಾಕಾರದ ಕನ್ನ ಕೊರೆಯವುದು ಅವನಿಗೆ ಬಾಳೆ ಹಣ್ಣು ಸುಲಿದಷ್ಟು ಸುಲಭದ ಕೆಲಸ. ಹೀಗೆ ಸಾಗುತ್ತಾ ಕೊಂಕಣದ ಸೀಮೆಯ ಸುತ್ತುತ್ತಾ ಯಾವ ರಾಜ್ಯದ ಹಂಗಿನಲ್ಲಿಯೂ ಬದುಕದೇ ಊರಿಂದೂರಿಗೆ ತಿರುಗುತ್ತಾ ಕೃಷ್ಣಾ ನದಿ ಎಡದಂಡೆಗುಂಟ ಮುಂದಮುಂದಕ್ಕೆ ಮೂಡಣ ದಿಕ್ಕಿಗೆ ಬರುತ್ತಿರಲು ಅಲ್ಲಿ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಮಾತನ್ನು ಎಲ್ಲರೂ ಹೇಳುವುದು, ಆ ಪ್ರಕಾರವೇ ನಡೆದುಕೊಳ್ಳುವ ಜನರಿರುವ ಊರುಗಳ ಕಡೆಗೆ ಬಂದರು. ಅಲ್ಲಿಗೆ ಬರುತ್ತಿದ್ದಂತೆಯೇ ಹಸಿದ ಈ ಕಳ್ಳರ ಕುಲವನ್ನು ಮನೆಮನೆಗೆ ಕರೆದು ಊಟಕ್ಕೆ ಹಾಕುವ ಜನರು ಸಿಗತೊಡಗಿದರು.
‘ಅಲೆಲೇ ಈ ವಚನದೊಳಗೆ ಏನೋ ಮರ್ಮ ಇದ್ದಂಗದೆ ಮಾರ, ಯಾವ ಊರುಗಳಲ್ಲಿಯೂ ನಮ್ಮನ್ನು ಮನುಷ್ಯರಾಗಿ ಕಾಣಲಿಲ್ಲ… ಈ ಕಡೆಯ ಊರುಗಳಲ್ಲಿ ಬನ್ನಿ ಅಯ್ಯಾ… ಅಂತ ಮನೆಗೆ ಕರೆದು ಊಟಕ್ಕೆ ಹಾಕತಾರಲ್ಲಾ..! ಏನು ಚೋಜಿಗಾ ಇದು.’
‘ಅದೇನೋ ಕಲ್ಯಾಣ ಅಂತೆ ಕಲಾ, ಅಲ್ಲೊಬ್ಬ ಬಸವ ಇದ್ದಾನಂತೆ.. ಆ ವಯ್ಯ ಮಹಾಮನೆ ನಡಸತಾನಂತೆ..’
‘ಮಾಮನೆ ಅಂದ್ರೆ ಏನುಲಾ..?’
‘ಅದೇ ಕಲಾ ಬಡಬಗ್ಗರಿಗೆ ಊಟಾ ಹಾಕುತಾನಂತೆ, ಅದೇನೋ ಲಿಂಗ ಪೂಜೆಯಂತೆ, ದಾಸೋಹ ಅಂತೆ, ಕಾಯಕಾ ಅಂತೆ… ಅನುಭವ ಮಂಟಪ ಅಂತೆ, ಶರಣರಂತೆ, ಗುಡಿಗೆ ಹೋಗೋದ್ಯಾಕೆ – ದೇಹವೇ ದೇಗುಲಾ ಅಂತೆ, ವಚನಾ ಅಂತೆ, ದಯೆ ಅಂತೆ, ಕೂಡಲಸಂಗಮನಂತೆ, ಯಾರುನ್ನಾ ಕೇಳುದರೂ ಬರೇ ಇದನ್ನೇ ಮಾತಾಡತಾವಲ್ಲಾ!’
‘ಹಂಗಾರೆ ಆ ಬಸವಣ್ಣ ಭಾಳ ಶ್ರೀಮಂತನೇ ಇರುಬೇಕಲಾ..’
‘ಇಲ್ಲವಯ್ಯೋ ಆ ಯಪ್ಪಾ ಭಂಡಾರದ ಮಂತ್ರಿ ಅಂತೆ, ಕಲ್ಯಾಣದ ಪ್ರಧಾನಿಯಂತೆ, ಶರಣರ ಕಾಯಕದಿಂದ ಮಹಾಮನೆ ನಡಿತದೆಯಂತೆ’
‘ಹೌದಾ.. ಹಂಗಾರೆ ನಾವು ಈಗಿಂದೀಗ್ಗೆ ಕಲ್ಯಾಣಕ್ಕ ಹೋಗಿ, ಆ ಶರಣರ ಮನೆಗೆ ಕನ್ನ ಹಾಕಿದರೆ ಹೆಂಗೆ..?’
ಎಲ್ಲರೂ ಹ್ಞೂಗುಟ್ಟಿದರು. ಅದೇ ರಾತ್ರಿ ತಮ್ಮತಮ್ಮ ಹೆಂಡ್ರು ಮಕ್ಕಳಿಗೆ ಹಂಗೆ ಮುಂದಕ್ಕ ಬನ್ನಿ ನಾವು ದೂರದ ಊರಿಗೆ ಹೋಗಿ ಕೆಲಸ ಪೂರೈಸಿಕೊಂಡು ಬರತೇವೆ ಅಂತ ಹೇಳಿ ಹೊರಟ ಆ ಕಳ್ಳರು ಕಲ್ಯಾಣ ಮುಟ್ಟಿದಾಗ ಬೆಳಕಾಗಿತ್ತು. ಅದೊಂದು ದಿನ ಊರಮುಂದಿನ ಹಾಳು ದೇಗುಲದಲ್ಲಿ ಕಳೆದು ರಾತ್ರಿಗೆ ಶರಣರ ಮನೆಗೆ ಕನ್ನ ಕೊರೆಯುವುದೆಂದು ತೀರ್ಮಾನಿಸಿ, ತಂದಿದ್ದ ಬುತ್ತಿಯ ಬಿಚ್ಚಿ ಉಂಡು ಮಲಗಿದರು. ಮಾರನೆಂಬ ಕಳ್ಳನಿಗೆ ನಿದ್ದೆ ಬರುವುದಾದರೂ ಹೇಗೆ ಸಾಧ್ಯ…? ಹೊಸ ಊರು, ಹೊಸ ಜಾಗವ ನೋಡಿ ಆ ಊರಿಗೆ ತಕ್ಕಹಾಗೆ ವೇಷ ಮಾಡಿಕೊಳ್ಳದಿದ್ದರೆ ಬಂದ ಕೆಲಸ ಪೂರೈಸಲಾಗದು ಎಂಬ ಬಗ್ಗೆ ಚಿಂತಿಸುತ್ತಾ ಹಾಳುಗುಡಿಯ ಮುಂಭಾಗದಲ್ಲಿ ಕುಳಿತ.
ಅಲ್ಲಿ ಕಲ್ಯಾಣದ ಮುಖ್ಯರಸ್ತೆಯಲ್ಲಿ ನಡೆದಾಡುವವರು ಮುಗುಳ್ನಗುತ್ತಾ ಶರಣು ಹೇಳುತ್ತಾ ಓಡಾಡುತ್ತಿದ್ದಾರೆ. ಯಾರ ಕೈಗಳೂ ಖಾಲಿ ಇಲ್ಲ. ಎಲ್ಲರ ಮುಖದಲ್ಲೂ ಮಂದಹಾಸ, ಎದುರು ಸಿಕ್ಕವರನ್ನು ಮಾತಾಡಿಸುವ ರೀತಿ, ಕೊರಳಲ್ಲಿನ ರುದ್ರಾಕ್ಷಿ, ನೊಸಲಲ್ಲಿನ ವಿಭೂತಿ, ಆ ಅಕ್ಕರೆಯ ನೋಟ ಎಲ್ಲದೂ ಹೊಸತೆನಿಸಿತು. ಮಧ್ಯಾಹ್ನದ ಹೊತ್ತಿಗೆ ಊರಮುಂದಲ ಕೆರೆಯ ಪಕ್ಕದಲ್ಲಿಗೆ ಬಂದ, ನೂರಾರು ಜನ ಹೆಣ್ಣಮಕ್ಕಳು ಬಟ್ಟೆ ಸೆಳೆದು ಒಣಹಾಕಿರಲಾಗಿ ಮಾರನು ನಾಲ್ಕು ಜೊತೆ ಶರಣರ ಬಟ್ಟೆ ಕದ್ದುಕೊಂಡ. ಮಹಾಮನೆಯ ಮುಂದಿನ ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ಮುದುಕನ ಹತ್ತಿರ ರುದ್ರಾಕ್ಷಿ, ವಿಭೂತಿಯ ಕದ್ದುಕೊಂಡು ತನ್ನ ಗೆಳೆಯರಿದ್ದ ಹಾಳುಗುಡಿಗೆ ಬಂದು ಮಲಗಿಬಿಟ್ಟ.
ಸಂಜೆಯಾಗುತ್ತಿದ್ದಂತೆ ಕೋಟೆಗೋಡೆಗೆ ತೂಗುಹಾಕಲಾಗಿದ್ದ ದೀಪಗಳು ಹೊತ್ತಿಕೊಂಡವು. ಹಿಲಾಲ್ ಕಟ್ಟಿಗೆಗೆ ಮತ್ತಷ್ಟು ಬಟ್ಟೆ ಸುತ್ತಿ ಎಣ್ಣೆ ಹೊಯ್ದು ದೀಪ ಹಚ್ಚಿದ ಸೈನಿಕರು ಅರಮನೆಯೊಳಗಿನ ಶಿವಲಿಂಗಕ್ಕೆ ಪೂಜೆ ಆಗುವಾಗ ಭಕ್ತಿಯಿಂದ ತಾವು ನಿಂತಲ್ಲಿಯೇ ಕೈಮುಗಿದರು. ಆ ಬೃಹದಾಕಾರದ ನಗಾರಿ ಮತ್ತು ದೊಡ್ಡಗಂಟೆಯನ್ನು ಬಾರಿಸಲು ಶುರು ಮಾಡಿದಾಗ ಹಾಳುಗುಡಿಯಲ್ಲಿ ಮಲಗಿದ್ದ ಕಳ್ಳರು ಎಚ್ಚರಾದರು. ಸರೂ ರಾತ್ರಿಗೆ ಶರಣರ ಬಟ್ಟೆಗಳನ್ನು ಧರಿಸಿಕೊಂಡು, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ ಧರಿಸಿಕೊಂಡು ಹೊರಡಲನುವಾದರು. ಆರೇಳು ಮೊಳದ ಹಗ್ಗ ಸೊಂಟಕ್ಕೆ ಸುತ್ತಿಕೊಂಡು, ಅದರ ತುದಿಯಲ್ಲೊಂದು ಕಿಗ್ಗತ್ತಿ, ಗೋಡೆ ಕೊರೆಯುವ ಮೊಳೆ, ಚಾಣ, ಸುತ್ತಿಗೆ ಇತ್ಯಾದಿ ಸಲಕರಣೆಗಳ ಹದ ಮಾಡಿಕೊಂಡ ಮಾರ ‘ನೋಡ್ರಾ ಈ ಪಟ್ಟಣದಾಗೆ ಎಲ್ಲಾರೂ ಬೇಗ ಮಲಿಕ್ಕೊಳತಾರೆ, ಯಾಕಂದ್ರೆ ಇವರು ಇಡೀ ದಿವಸ ಕಷ್ಟಪಟ್ಟು ದುಡಿತಾರೆ’ ಎಂದು ಗೆಳೆಯರಿಗೆ ಹೇಳಿದ.
ಹೌದೋ ಅಲ್ಲವೋ ಎನ್ನುವಷ್ಟು ಮೆಲುವಾಗಿ ಹೆಜ್ಜೆ ಹಾಕುತ್ತಾ ಶರಣರ ಮನೆಗಳಿದ್ದ ಮಣ್ಣಿನ ದಿಬ್ಬವ ಏರಿದರು. ಸಾಲುಸಾಲಾಗಿದ್ದ ಮನೆಗಳಲ್ಲಿ ಕೊಂಚ ದೊಡ್ಡದಾದ ಮನೆಯೊಂದನ್ನು ಗುರುತು ಮಾಡಿಕೊಂಡು ಕನ್ನ ಹಾಕುವುದಕೆಂದು ಕಿಗ್ಗತ್ತಿ ತೆಗೆದು ಗುರುತು ಮಾಡಿ, ಅದೇ ಆಕಾರದಲ್ಲಿ ಚಾಣ ಹಿಡಿದು ಸುತ್ತಿಗೆಯಿಂದ ಹೊಡೆಯಬೇಕೆನ್ನುವಷ್ಟರಲ್ಲಿ ಆ ಮನೆಯ ಬಾಗಿಲ ಕಡೆಗೊಮ್ಮೆ ಕಣ್ಣಾಡಿಸಿದ. ‘ಅರೆರೆ ಬಾಗಿಲು ತೆಗೆದಿದೆಯಲ್ಲಾ’ ಎಂದು ಎದ್ದು ಬಂದು ಆ ಮನೆಯ ಬಾಗಿಲ ಮುಂದೆ ನಿಂತ. ಅದೊಂದೆ ಮನೆ ಅಲ್ಲ- ಯಾರ ಮನೆಯ ಬಾಗಿಲಿಗೂ ಕದಗಳಿಲ್ಲದ್ದು ಕಂಡು ಕಳ್ಳರೆಲ್ಲ ಅಚ್ಚರಿಪಟ್ಟರು. ಕದಗಳಿಲ್ಲದ ಮನೆಗೆ ಕನ್ನ ಕೊರೆಯುವುದು ಪಾಪವೆನಿಸತೊಡಗಿತು.
‘ಇವು ಶರಣರ ಮನೆಗಳು ಕಣಾ ಮಾರ, ಆ ಬಸವಣ್ಣ ಮನೆ ಬಾಗಿಲಿಗೆ ಕದಾ ಹಚ್ಚಬ್ಯಾಡಾ ಅಂತಾನೂ ಹೇಳವನೋ ಏನೋ, ವಿಚಿತ್ರಾ ಆಗತದೋ ಮಾರಾಯ ಈ ಜನರಿಗೆ ಕಳ್ಳಕಾಕರ ಭಯಾನೂ ಇಲ್ಲವಲ್ಲೋ’
ಮಾರನ ಮನಸ್ಸು ವಿಚಲಿತವಾದಂಗೆ ಆಗಿ, ಯಾಕೋ ಏನೋ ಆ ಬಸವಣ್ಣ ಹೇಳಿದ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಅನ್ನೋ ಮಾತಿನಲ್ಲಿ ಅಂಥದ್ದೇನೋ ಗಮ್ಮತ್ತು ಇದೆ ಎನಿಸತೊಡಗಿತು. ಆದರೂ ಹಿಡಿದ ಕೆಲಸ ಮಾಡದಿದ್ದರೆ ಕುಲದೇವರಾದ ಮಾರೇಶ್ವರನ ಅಣತಿಗೆ ವಿರುದ್ಧ ಆದಂಗೆ ಆಗತದೆ ಅಂದುಕೊಂಡ ಮಾರನು ಪ್ಯಾಟೆ ಬದಿಯ ಜೋಡುಗಿಳಿ ಸೆಜ್ಜಾದ ಮನೆಯೊಂದಕ್ಕೆ ಕನ್ನ ಹಾಕಿದ. ಅಲ್ಲಿ ಒಂದು ಬೆಳ್ಳಿ ಮತ್ತೆರಡು ಬಂಗಾರದ ಹಾಗವನ್ನು ಕದ್ದುಕೊಂಡು ಹಾಳುಗುಡಿಗೆ ಹಿಂದಿರುಗಿದಾಗಲೂ ಅವನ ಮನಸ್ಸು ಆ ಕದಗಳಿಲ್ಲದ ಮನೆಗಳನ್ನೇ ಧ್ಯಾನಿಸುತ್ತಿತ್ತು.
ಕಳ್ಳತನಕ್ಕೆ ಹೊರಟರೆಂದರೆ ದಿನ ಬಿಟ್ಟು ದಿನ ಬೆಳಗಾಗುವುದರೊಳಗೆ ಮರಳಿ ಬಂಡಿಗೆ ಹೋಗುತ್ತಿದ್ದ ಮಾರ ಮತ್ತವನ ಗೆಳೆಯರು ವಾರ ಕಳೆದರೂ ಕಲ್ಯಾಣದಲ್ಲಿಯೇ ಉಳಿದರು. ಕಳ್ಳತನ ಮಾಡಲಾಗದೇ, ಹಿಂದಿರುಗಿ ಹೋಗಲಾಗದೆ ಒದ್ದಾಡುತ್ತಿದ್ದ ಅವನ ಮನಸ್ಸು ‘ಕನ್ನ ಕೊರೆದರೆ ಅರಮನೆಯ ಖಜಾನೆಗೆ ಗುರಿ ಇಡುವಾ’ ಅಂತ ಹೇಳಿದ್ದೆ ತಡ ಆ ದಿನ ರಾತ್ರಿಯೇ ಅರಮನೆಯತ್ತ ಹೊರಟ. ಅದೇ ಶರಣರ ಬಟ್ಟೆಯ ತೊಟ್ಟು ಯಥಾ ಪ್ರಕಾರ ಹಗ್ಗ, ಕಿಗ್ಗತ್ತಿ, ಮೊಳೆ, ಚಾಣಾ, ಸುತ್ತಿಗೆ ಇತ್ಯಾದಿ ಸಲಕರಣೆಗಳ ಕಟ್ಟಿಕೊಂಡು ಕತ್ತಲ ಹಾದಿ ಹಿಡಿದು ಬಂದೇಬಿಟ್ಟ. ನಡುರಾತ್ರಿಗೆ ಪಹರೆಯವರು ಚಣಹೊತ್ತು ಕೂತು ಮಾತಾಡಿಕೊಳ್ಳುವುದನ್ನೇ ಕಾಯುತ್ತ ಕುಳಿತ. ಜೊತೆಗಾರರು ಕೈಗಲ್ಲಳತೆಗೊಬ್ಬೊಬ್ಬ ನಿಂತಿದ್ದರು. ಆರಿ ಹೋಗುವ ದೊಂದಿಗಳಿಗೆ ಎಣ್ಣೆ ಹಾಕುತ್ತಿದ್ದವನೊಬ್ಬ ಕೋಟೆಗೋಡೆಯ ಮೇಲೇರಿ ಬಂದದ್ದೆ ಪಹರೆಯವನು ಅತ್ತ ವೀಳ್ಯೆದೆಲೆಗೆ ಸುಣ್ಣ ಕೇಳಿ ಪಡೆದು ಹದಮಾಡಿ ಹಾಕಿಕೊಳ್ಳಲು ಕುಳಿತ.
ಮೂರು ಪದರಿನ ಗೋಡೆಗೆ ಕನ್ನಕೊರೆದು ಒಳನುಗ್ಗಿದವನೇ ನೆಟ್ಟನೆ ಅರಮನೆಯ ಮುಂಬಾಗಿಲ ಮುಂದಿನ ಪನ್ನಾಳಿಗೆಯಲ್ಲಿ ತೂರಿಕೊಂಡ. ಆ ನೀರವ ರಾತ್ರಿಯಲ್ಲಿ ಎರಡು ಹೆಗ್ಗಣಗಳು ಚಲ್ಲಾಟವಾಡುತ್ತಾ ಕಾಳುಕಡಿ ಕೂಡಿಟ್ಟಿದ್ದ ದಾಸ್ತಾನುವಿನ ಕಡೆಗೆ ಓಡಿದವು. ಭಂಡಾರದ ಕೋಣೆಯ ಬಾಗಿಲು- ಗರಡಿಮನೆಯ ಬಾಗಿಲಿನಷ್ಟೆ ಪುಟ್ಟದಾದ್ದರಿಂದ ಸುಲಭದಲ್ಲಿ ಕನ್ನಕೊರೆದು ಕೈಗೆ ಸಿಕ್ಕಷ್ಟು ಬಾಚಿ ಬಟ್ಟೆಯ ಜೋಳಿಗೆಯಲ್ಲಿ ತುಂಬಿಕೊಂಡ. ಅಲ್ಲಿಂದ ಹೊರಬಿದ್ದು, ಅದೇ ಪನ್ನಾಳಿಗೆಯಿಂದ ಪಾರಾಗಿ ಅರಮನೆಯ ಆವರಣ ದಾಟಿ ಕೋಟೆಗೋಡೆಯನ್ನು ದಾಟಬೇಕೆನ್ನುವಷ್ಟರಲ್ಲಿ…. ಆ ಎರಡು ಹೆಗ್ಗಣಗಳು ಒಂದರ ಮೇಲೊಂದು ಬಿದ್ದು ಕಚ್ಚಾಡುತ್ತಾ ಕಾವಲು ಸೈನಿಕರನ್ನು ಎಚ್ಚರಿಸಿಬಿಟ್ಟವು.
ತಾಬಡತೋಬಡ ಕಾವಲುಗಾರ ಅಪಾಯದ ಗಂಟೆಯನ್ನು ಹೊಡೆದೇಬಿಟ್ಟ. ಕೋಟೆಯಿಂದ ಹೊರಗೆ ಬಿದ್ದಿದ್ದ ಮಾರ ಜೋಳಿಗೆಯನ್ನು ಗಂಟುಹಾಕಿ ಕೈಗಲ್ಲಳತೆ ದೂರದಲ್ಲಿ ನಿಂತಿದ್ದ ಇನ್ನೊಬ್ಬನತ್ತ ಎಸೆದ.. ಅವನು ಮತ್ತೊಬ್ಬನತ್ತ ಎಸೆದ.. ಆತ ಮಗದೊಬ್ಬನಿಗೆ ಎಸೆದ. ಹೀಗೆ ಜೋಳಿಗೆ ಕೈಯಿಂದ ಕೈಗೆ ದಾಟುತ್ತಾ ಹಾಳುಗುಡಿಯನ್ನು ಸೇರಿದ್ದೆ ಕಳ್ಳರೆಲ್ಲ ದಿಕ್ಕಾಪಾಲಾಗಿ ಪರಾರಿಯಾದರು. ಕೆಲಕೆಲವರು ಕಾಡು ಬಿದ್ದರು, ಕೆಲವರು ಕದಗಳಿಲ್ಲದ ಶರಣರ ಮನೆ ಹೊಕ್ಕರು, ಕೆಲವಿಬ್ಬರು ಹಾಳುಗುಡಿಯನ್ನೇ ಆಶ್ರಯಿಸಿದರು. ಕನ್ನದ ಮಾರನಿಗೆ ಯಾವ ಕಡೆಗೆ ಹೋಗಬೇಕು ಎಂದು ಯೋಚಿಸುವ ಮೊದಲೇ ಸೈನಿಕರು ಬೆನ್ನತ್ತಿದರು. ಬೇಟೆಯ ಪ್ರಾಣಿಯನ್ನು ಬೆಂಬತ್ತಿದ ಹಾಗೆ ಕಲ್ಯಾಣದ ಮೂಲೆಮೂಲೆಯಿಂದಲೂ ಹಾ.. ಹಾ.. ಇಲ್ಲಿ ಕಂಡ, ಅಲ್ಲಿ ಓಡಿದ. ಹಿಡಿಯಿರಿ, ಹಿಡಿಯಿರಿ ಎಂಬ ಗೌಜುಗದ್ದಲ ಕೇಳಲಾರಂಭಿಸಿದ್ದೆ ತಡ ಮಾರನು ‘ಮಾರನಿಗೆ ವೈರಿಯಾದೆಯಾ ಮಾರೇಶ್ವರಾ’ ಎಂದುಕೊಳ್ಳುತ್ತಾ ಮಿಣುಕು ಬೆಳಕಿದ್ದ ಮಹಾಮನೆಯ ಗೋಡೆಯನ್ನು ಜಿಗಿದು ಒಳಸೇರಿಕೊಂಡ.
ಚುಮುಚುಮು ಬೆಳಕಾಡುವ ಮೊದಲೇ ಎದ್ದರಲ್ಲಾ ಶರಣರು..! ನಡುಮನೆಯ ಕಂಬದ ಮೇಲಿನ ದೀಪದ ಮಂದಬೆಳಕಿನಲ್ಲಿ ಯಾರು ಕಟ್ಟಿಗೆ ಸೀಳುವರೋ, ಯಾರು ಕಸಗುಡಿಸುವರೋ, ನೆಲ ಒರೆಸುವರೋ, ಸಗಣಿಯ ತಂದು ನೆಲವ ಸಾರಿಸಿ ಹದಗೊಳಿಸಿದರ್ಯಾರೋ, ನೀರು ಹೊತ್ತು ತಂದು ತಪೇಲಿ ತುಂಬಿಸುವರ್ಯಾರೋ.. ಒಲಿಪುಟು ಮಾಡಿ ಕುದಿ ಎಸರಿಟ್ಟವರಾರೋ..? ಮಸುಕು ಹರಿದು ಬೆಳಕಾಗುವ ಹೊತ್ತಿಗೆ ಮಾಮನೆಯ ಅಂಗಳ ಲಕಲಕ ಅಂತಿತ್ತು. ಆಹಾ ಶರಣರ ಮುಖಗಳೂ ಫಳಫಳ ಹೊಳೀತಿದ್ದವು. ಒಬ್ಬರಂತಲ್ಲ ಇಬ್ಬರಂತಲ್ಲ ನೂರಾರು ಜನ ಜಳಕಾವ ಮಾಡಿ ಪೂಜೆಪುನಸ್ಕಾರಾದಿ ಪೂರೈಸಿ, ಶರಣು ಹೇಳುತ್ತಾ ಕಾಯಕದತ್ತ ಮುಖ ಮಾಡಿ ಹೊಂಟೇ ಹೋದರು. ಮಾಮನೆ ಗೋಡೆಯ ಹಾರಿ ಜಿಗಿವ ಅವಸರದಲ್ಲಿ ಕಾಲುಳಿಕಿ ಬಿದ್ದಲ್ಲಿಯೇ ಬಿದ್ದಿದ್ದ ಮಾರನ ಪಾದ ಆನೆಕಾಲು ಗಾತ್ರದಲ್ಲಿ ಊದಿಕೊಂಡಿತ್ತು. ನರಳುವ ಮಾರನ ಧ್ವನಿ ಕೇಳಿ ಯಾರೋ ಒಬ್ಬ ಶರಣ ಬಗಲಿಗೆ ಕೈಹಾಕಿ ಮಾಮನೆಯ ಚಾವಡಿಗೆ ಕರೆದೊಯ್ದು ಕಂಬಳಿ ಹಾಸಿಕೊಟ್ಟ. ಮತ್ಯಾರೋ ಅಂಬಲಿ, ನೀರು ಕೊಟ್ಟು ಆರೈಕೆ ಮಾಡಿದರು. ಗುರುತಿಲ್ಲ ಪರಿಚಯವಿಲ್ಲ, ಕೊರಳಲ್ಲಿನ ಲಿಂಗ, ರುದ್ರಾಕ್ಷಿ, ಹಣೆಯ ಮೇಲಿನ ಈಬತ್ತಿಯ ದೆಸೆಯಿಂದಾಗಿ ಆ ಶರಣರೊಳಗೆ ಒಬ್ಬ ಬಂಧುವಿನಂತೆ ಅವರೆಲ್ಲ ಭಾವಿಸಿರುವುದ ಕಂಡು ಮಾರನ ಮನಸ್ಸು ಉಕ್ಕಿ ಬಂತು. ಬಿಸಿಲೇರಿದಂತೆ ಕಾಲು ನೋವು ಹೆಚ್ಚಾಯ್ತು. ಕಾಲು ಕಿತ್ತಿಡಲೂ ಸಾಧ್ಯವಾಗದಂಥ ನೋವು ಇಮ್ಮಡಿಯಾಗಲು ವೈದ್ಯ ಸಂಗಣ್ಣ ಬಂದು ನೋವಿನೆಣ್ಣೆ ಹಚ್ಚಿ ತೀಡಿದ.
ಅರಮನೆಗೆ ಕನ್ನ ಹಾಕಿದ ಮಾರ ಕಲ್ಯಾಣದಲ್ಲಿಯೇ ಇದ್ದಾನೆ.. ಅವನನ್ನು ಹಿಡಿದು ತಂದು ಗಲ್ಲಿಗೇರಿಸಬೇಕೆಂದು ರಾಜಾಜ್ಞೆ ಆದಾಗಿನಿಂದ ಯಾವ ಸೈನಿಕನ ಮುಖದಲ್ಲೂ ಗೆಲುವಿರಲಿಲ್ಲ. ಬೀದಿಗಳಲ್ಲಿ ಗಸ್ತು ತಿರುಗುವುದಷ್ಟೇ ಅಲ್ಲ ಪ್ರತಿಯೊಬ್ಬರ ಮನೆ ಹೊಕ್ಕು ಹುಡುಕಿ ನೋಡುತ್ತಾ ಸೈನಿಕರು ಶರಣರ ಮನೆಗಳ ಕಡೆಗೆ ಬರತೊಡಗಿದರು. ಕಲ್ಯಾಣದ ಸುತ್ತಲೂ ಸೈನಿಕರ ಸರ್ಪಗಾವಲು ಹಾಕಿದ್ದಲ್ಲದೆ, ಸುಂಕದ ಕಟ್ಟೆಗಳಲ್ಲಿ ಊರಿಗೆ ಬರುವ ಹೊಸಬನಿಂದ ಹಿಡಿದು ಊರಿಂದ ಹೊರಹೋಗುವ ಪ್ರತಿಯೊಬ್ಬನನ್ನು ಗಮನಿಸಲಾಗುತ್ತಿದೆ. ಇಂಥ ಹೊತ್ತಲ್ಲಿ ಪಾಳುಗುಡಿಯಲ್ಲಿ ಕುಳಿತಿದ್ದ ಮಾರನ ಗೆಳೆಯರು ಹೊರಗೆ ಕಾಲಿಡುವುದು ದುಸ್ತರವಾಯ್ತು. ಮಾರನಾದರೊ ಮಾಮನೆಯ ಕಂಬಕ್ಕೊರಗಿ ಇಲ್ಲಿಂದ ಪಾರಾಗುವ ದಾರಿ ತೋರಾ ಮಾರೇಶ್ವರಾ ಎಂದು ಬೇಡಿಕೊಳ್ಳುತ್ತಿದ್ದ.
‘ಹೊತ್ತುಮುಳುಗಿದರೂ ಕಳ್ಳ ಸಿಗದೇ ಹೋದನಲ್ಲಾ… ಆ ಕಳ್ಳ ಹೊರಗಿನವನೋ ಇಲ್ಲಾ ಒಳಗಿನವನೋ’ ಅಂತ ಬಿಜ್ಜಳ ರಾಜರು ದಳಪತಿ, ದಂಡಿನವರ ಮೇಲೆ ಕೆಂಡಾಮಂಡಲರಾದರು. ಅರಮನೆಯ ಆಳುಕಾಳುಗಳೆಲ್ಲ ಯಾವ ಹೊತ್ತಿನಲ್ಲಿ ಯಾರ ಮೇಲೆ ಈ ಕಳ್ಳತನದ ಆರೋಪ ಬರುವುದೋ ಎಂಬ ಆತಂಕದಲ್ಲಿದ್ದರು. ‘ಅರಮನೆಗೆ ಕನ್ನ ಹಾಕುವುದು ಅಂದರೇನು. ಎಂಟೆದೆಯ ಗುಂಡಿಗೆ ಇರೋನು ಮಾತ್ರ ಇಂತಹ ಕೆಲಸ ಮಾಡಲಿಕ್ಕೆ ಸಾಧ್ಯ, ಒಬ್ಬ ಕಳ್ಳನನ್ನ ಹಿಡಿಯೋದಕ್ಕೆ ಆಗಲಿಲ್ಲ ಅಂದರೆ ನಮ್ಮ ರಾಜ್ಯದ ಪ್ರತಿಷ್ಠೆಗೆ ಧಕ್ಕೆ, ಹೋಗಿ, ಅವನೆಲ್ಲೇ ಅಡಗಿದ್ದರೂ ಸರಿ ಎಳೆದು ತಂದು ಗಲ್ಲಿಗೇರಿಸಿ’ ಅಂತ ರಾಜರು ಅಬ್ಬರಿಸಿದರು. ಪಕ್ಕದಲ್ಲಿಯೇ ನಿಂತಿದ್ದ ಕಸಪಯ್ಯ ಮುಗುಳು ನಗೆ ನಕ್ಕು ವೈಯ್ಯಾರದಿಂದ ರಾಜರ ಕಿವಿಯೊಳಗೆ ‘ಪ್ರಭು… ಇಡೀ ಕಲ್ಯಾಣದ ಶೋಧವೇ ನಡೆದರೂ ಅವನು ಸಿಗುತ್ತಿಲ್ಲ, ಅಂದರೆ ಅವನು ಅಡಗಿಕೊಂಡಿರುವ ಸ್ಥಳದಲ್ಲಿ ನಮ್ಮ ಸೈನಿಕರು ಹುಡುಕಿಲ್ಲ ಅನಿಸುತ್ತದೆ’ ಎಂದು ಅನುಮಾನ ವ್ಯಕ್ತಪಡಿಸಿದ. ಹುಬ್ಬುಗಂಟಿಕ್ಕಿದ ಬಿಜ್ಜಳ ಮಹಾರಾಜರು ಕಸಪಯ್ಯನನ್ನು ಪ್ರಶ್ನಾರ್ಥಕವಾಗಿ ದಿಟ್ಟಿಸಿದರು. ತುಸು ಹೆಚ್ಚೆ ವೈಯ್ಯಾರ ಮಾಡುತ್ತಾ ಕಸಪಯ್ಯ, ‘ಮಹಾಮನೆ’ ಅಂದದ್ದೆ ರಾಜರು ಕೆಂಡಾಮಂಡಲರಾಗಿ ಸಿಂಹಾಸನದಿಂದ ಎದ್ದು ನಿಂತರು. ಬಸವಣ್ಣ ಅನ್ನೋ ತಿಳಿನೀರನ್ನ ಅನುಮಾನಿಸೋದು ಶಕ್ಯ ಇದ್ದಿರಲಿಲ್ಲ. ಹಂಗಾಗಿ ಮಹಾಮಂಗಳಾರತಿಗೆ ಹೊತ್ತಾದೀತು ಅಂತ ಅವರು ಹೊರಟೇಬಿಟ್ಟರು.
‘ಪ್ರಭು ನೀವು ಸಿಡುಕಬ್ಯಾಡ್ರೀ… ಇದು ನಮ್ಮ ರಾಜ್ಯದ ಇಜ್ಜತ್ ಐತಿ, ನಾವು ಮಹಾಮನೆ ಶರಣರಿಗೆ ಯಾವ ರೀತಿಯಿಂದಲೂ ತೊಂದರೆ ಕೊಡೋದಿಲ್ಲ. ನಮ್ಮ ಸೈನಿಕರು ಒಂದು ಸಲ ಮಹಾಮನೆ ಹೊಕ್ಕು ಕಣ್ಣಾಡಸತಾರ’ ಅಂತ ಕಸಪಯ್ಯ ಕೊಂಡಿ ಮಂಚಣ್ಣ ಇಬ್ಬರೂ ಕೂಡಿ ರಾಜರಿಗೆ ಪರಪರಿಯಾಗಿ ಬಿಡಿಸಿ ಹೇಳಿದರು.
‘ಮಹಾಮನೆ ಅಂದರ ಏನಂತ ತಿಳಿದಿದ್ದೀರಿ ನೀವು..? ನಿಮಗ ಆ ಬಸವರಾಜರ, ಆ ಶರಣರ ಮ್ಯಾಲ ಯಾಕಿಷ್ಟು ಅನುಮಾನ.. ಆಗಲಿ ನಿಮಗ ಅಷ್ಟೊಂದು ಅನುಮಾನ ಇದ್ದುದೇ ಆದರೆ ಬಸವಣ್ಣನ ಒಪ್ಪಿಗೆ ತಗೊಂಡು ಮಹಾಮನೆಯೊಳಗೂ ಹುಡುಕಿ ನೋಡ್ರೀ..’ ಅಂತ ಪೂಜಾಕ್ಕ ಹೋಗೋ ಅವಸರದೊಳಗ ಬಿಜ್ಜಳರಾಜರು ಒಪ್ಪಿಗಿ ಕೊಟ್ಟದ್ದ ತಡ ದಂಡಿನ ದಿಕ್ಕು ಮಹಾಮನೆಯ ಕಡೆಗೆ ತಿರುಗಿತು.
ಅನುಭವ ಮಂಟಪದ ಕಡೀಮಾತು ಕಕ್ಕಯ್ಯನವರು ಹೇಳಿಮುಗಿಸಿ ದಾಸೋಹದ ಮನಿಗೆ ಹೊಂಡ್ರೀ ಅಂತ ಹೇಳತಿದ್ದಂಗ ತಾಯಿ ನೀಲಮ್ಮನವರು, ಅಕ್ಕನಾಗಲಾಂಬಿಕೆಯೂ ಸೇರಿದಂತೆ ಇಬ್ಬರು ಶರಣರು ಒಬ್ಬ ಕಳ್ಳನ್ನ ಹಿಡಕೊಂಡು ಹೊರಗೆ ಬಂದರು. ಹಾ.. ಹೋ.. ಅಂತ ಗದ್ದಲ ಕೇಳಿದ್ದೆ ತಡ ಶರಣ-ಶರಣೆಯರು ಏನಾಯ್ತು ಅಂತ ಆ ಕಡೆಗೆ ನೋಡಿದರ ಅಲ್ಲೊಬ್ಬ ಹುಡುಗ ಮುಖ ಕೆಳಗ ಹಾಕಿ ನಿಂತಿದ್ದ. ಅವನ ಕೊರಳಪಟ್ಟಿ ಚಂದಯ್ಯನವರ ಕೈಯೊಳಗಿತ್ತು. ಏನಾಯ್ತು ಅನ್ನೋ ಆತಂಕದೊಳಗ ಯಾರೋ ಕಳ್ಳ ಅಂದರು. ಮತ್ಯಾರೋ ಓ ಅರಮನೆಗೆ ಕನ್ನ ಹಾಕಿದವರು ಗುರುಮನೆಗೂ ಕನ್ನ ಹಾಕಿದರಾ..? ಅಂತ ಹುಬ್ಬೇರಿಸಿದರು. ಅದೇ ಹೊತ್ತಿಗೆ ಸರಿಯಾಗಿ ರಾಜಕಾರ್ಯದ ಮೇಲೆ ಮಂಗಳವೇಡೆಗೆ ಹೋಗಿದ್ದ ಬಸವಣ್ಣ ದಣ್ಣಾಯಕರು ಮೇಣೆಯ ಸಮೇತ ಮಹಾಮನೆಗೆ ಹಿಂದಿರುಗಿ, ಇದೇನು ಗದ್ದಲ ಎಂದುಕೊಳ್ಳುತ್ತಾ ನಡುಮನೆಗೆ ಬಂದಾಗ ಕಳ್ಳ ಎಂಬ ಶಬ್ದ ಕಿವಿಗೆ ಬಿತ್ತು. ನಿಂತ ನಿಲುವಿನಲ್ಲೇ ಕಣ್ಣುಮುಚ್ಚಿ ಅಂತರಂಗದೊಳಗಿನ ಅರಿವಿನ ಸಂಗಮನಾಥನನ್ನು ಧ್ಯಾನಿಸಿದರು. ಕಳ್ಳನಿಗೆ ಎದುರಾಗಿ ನಿಂತು..
ಏನು ಬೇಕಪ್ಪಾ ನಿನಗೆ..? ಯಾರ ಮಗನಪ್ಪಾ ನೀನು..? ಎಂದು ಕೇಳಿದರು. ಕೈಕಾಲಗಳ ಶಕ್ತಿಯೇ ಉಡುಗಿ ಹೋದಂತೆ ನಡುಗುತ್ತಾ ನಿಂತ ಆ ಹುಡುಗನಲ್ಲೂ ಸಂಗಮನಾಥನಿದ್ದಾನೆ ಎನ್ನಿಸಿರಬೇಕು. ‘ನೀಲಾ, ಸಾಕ್ಷಾತ್ ಆ ದೇವನೇ ಮನೆಗೆ ಬಂದು ತನಗೆ ಸೇರಬೇಕಾದ ಒಡವೆಯನ್ನು ಕೊಂಡೊಯ್ಯುವಾಗ ಆ ಸಂಗಮನಾಥನನ್ನ ತಡೆದಿರೇಕೆ?’ ಎಂದರು.
ಕಾಲುನೋವು ನುಂಗಿಕೊಂಡು ಕಂಬಕ್ಕೊರಗಿ ಕುಂತಿದ್ದ ಕನ್ನದ ಮಾರಯ್ಯ ಏನಾಯ್ತಿದು ಚೋಜಿಗ, ಕಳ್ಳನ ಮುಂದೆ ಮತ್ತೊಬ್ಬ ಕಳ್ಳ ಬಂದಾನಲ್ಲ ಅಂತ ಗಾಬರಿಯಾದ. ಕಾಲೆಳೆಯುತ್ತಾ ಗುಂಪು ಕೂಡಿದ್ದ ಆ ಶರಣರ ನಡುವೆ ತೂರಿಕೊಂಡು ಆ ಹುಡುಗನ ಮುಖ ಎತ್ತಿ ನೋಡಿದ… ‘ತಲಿಮಾಸ ಆರದ ಈ ಕೂಸು ಕಳ್ಳತನ ಮಾಡುವಂಥದ್ದೇನೂ ಅಲ್ಲ, ಕಸುಬು ಗೊತ್ತಿರುವ ಹುಡುಗ ಇವನಲ್ಲ’ ಎಂದ.
‘ಇವನು ಕದ್ದ ನೀಲಮ್ಮ ತಾಯಿ ಕಿವಿಯೋಲೆ ಅವನ ಕೈಯಲ್ಲೇ ಇರುವಾಗ ಇವನು ಕಳ್ಳ ಅಲ್ಲಾ ಅಂದರ ಏನರ್ಥ?’ ಅಂತ ಚಂದಯ್ಯನವರು ಕೇಳಿದರು.
‘ಅಯ್ಯ… ನನ್ನಪ್ಪಾ ನೀನು ಹಿಂಗಿಂಗೆ, ಹಿಂಗೆ ಅಂತ ಬಂದು ಒಂದು ಮಾತು ಹೇಳಿದ್ದರೆ ಸಾಕಿತ್ತು ನಾನು ಕಿವಿಯೋಲೆ ಕೊಟ್ಟಬಿಡತಿದ್ದೆನಲ್ಲಾ ಮಾರಾಯಾ’ ಅಂತ ನೀಲಾಂಬಿಕೆ ನಗೆಯಾಡಿದರು. ಹೀಗೆ ಇತ್ತ ಈ ಪ್ರೇಮಿಯೊಬ್ಬನ ಕಳ್ಳತನದ ಪ್ರಸಂಗವೊಂದು ಸುಖಾಂತ್ಯದಲ್ಲಿ ಸಮಾಪ್ತಿಯಾಗುವ ಹೊತ್ತಿಗಾಗಲೇ ಮಹಾಮನೆಯ ಗೋಡೆಯಾಚೆಗೆ ದೊಂದಿಬೆಳಕಿನ ಹಿಲಾಲುಗಳು ಕತ್ತಲೆಬೆಳಕಿನಾಟ ಆರಂಭಿಸಿದ್ದೆ ಶರಣರೆಲ್ಲ ಮಹಾಮನೆಯ ಮುಖ್ಯದ್ವಾರದ ಕಡೆಗೆ ನೋಡಿದರು. ಮಾಚಿದೇವರು ಆವೇಶಭರಿತರಾಗಿ ಓಡೋಡಿ ಬಂದವರೇ… ‘ಸೈನಿಕರು ಮಹಾಮನೆಯ ಸುತ್ತ ನೆರೆದಿದ್ದಾರೆ’ ಎಂದರು. ಶರಣರ ಮುಖದೊಳಗೆ ರವಸ್ಟು ಸಿಟ್ಟು, ಅಸಹನೆ ಹೊಗೆಯಾಡುವುದನ್ನು ಗಮನಿಸಿದ ಅಣ್ಣನವರು ಇದರ ಮೂಲಬಿಂದು ಏನಿದೆ ಎಂಬುದನ್ನು ತಿಳಿದು ಬಗೆಹರಿಸಿದರೆ ತೀರಿತಲ್ಲ ಎಂದು ಯೋಚಿಸಿ ಹೊರಗೆ ಬಂದವರೆ ದಳಪತಿ ಯಾರೆಂಬುದನ್ನು ವಿಚಾರಿಸಿದರು.
ಕಸಪಯ್ಯ ಮೊದಲಾಗಿ ದಂಡೊಂದು ಬಂದು ಮಹಾಮನೆಯ ಬಾಗಿಲ ಮುಂದೆ ನಿಂತಿರುವಾಗ ಅಸಹನೆಯ ಕಟ್ಟೆಯೊಡೆದು ಏನು ಘಟಿಸುವುದೋ ಎಂಬ ಆತಂಕ ಅಕ್ಕನಾಗಲಾಂಬಿಕೆಯವರ ಮುಖದಲ್ಲಿತ್ತು. ಬಸವಣ್ಣನವರು ಮುಂಬಾಗಿಲಿನ ಕಡೆ ನಡೆದು ದಂಡಿನವರ ಕರೆದು ಮಾತಾಡಿಸುವಾಗ್ಗೆ, ಯಾವ ಕಾರಣಕ್ಕೆ ಸೈನ್ಯ ಬಂದುದೆಂಬ ಬಗ್ಗೆ ಗುಸುಗುಸು ಶುರುವಾಯ್ತು. ‘ಕನ್ನದ ಮಾರನೆಂಬ ಕಳ್ಳ ಮಹಾಮನೆ ಸೇರಕೊಂಡಿದಾನೆ, ಅವನಿಗೆ ಶರಣರು ಆಶ್ರಯ ನೀಡಿದ್ದಾರೆಂಬ ಗುಮಾನಿ ಇಟ್ಟುಕೊಂಡು, ಅದೇ ನೆಪದಲ್ಲಿ ಶರಣರಿಗೆ ಬಿಸಿಮುಟ್ಟಿಸುವ ಆಟ ಈ ಕೊಂಡೆ ಮಂಚಣ್ಣ-ಕಸಪಯ್ಯಂದು’ ಎಂಬ ಮಾತುಗಳು ಶರಣರ ಕಿವಿಯೊಳಾಡಿದವು. ಅಣ್ಣ ಬಂದು ಏನು ಹೇಳುತ್ತಾರೋ ಹಾಗೆ ನಡೆದುಕೊಂಡರಾಯ್ತೆಂಬ ಮಾತು ಕೇಳಲಾರಂಭಿಸಿದ್ದೆ ಮಾರನ ಎದೆಯಲ್ಲಿ ಸಣ್ಣದೊಂದು ನಡುಕ ಶುರುವಾಯ್ತು.
‘ಈ ಮನೆಗೆ ಬಂದಾಗ ಯಾರ ಮುಖದಲ್ಲೂ ದುಗುಡವಿದ್ದಿದ್ದಿಲ್ಲ, ಯಾರ ಮನಸೂ ಅಶಾಂತವಾಗಿದ್ದಿಲ್ಲ. ಇಂತಪ್ಪ ಮಾಮನೆಗೆ ತಾನು ಬಂದು ಸೇರ್ಕಂಡಿದ್ದೆ ಇಷ್ಟೆಲ್ಲಾ ಫಜೀತಿಗೆ ಕಾರಣವಾಯ್ತಲ್ಲಾ, ತಾನೇ ಆ ಕಳ್ಳ ಅಂತ ಅಣ್ಣನವರ ಕಾಲುಹಿಡಕೊಂಡು ತಪ್ಪ ಒಪ್ಗಂಡರೆ ಮುಗೀತದಲ್ಲಾ, ಅರಮನೆಗೂ ಗುರುಮನೆಗೂ ನಡುವೆ ನಾ ಯಾತರವನು ಕದನಕ್ಕೆ ಮೂಲವಾಗಲೂ’ ಅಂತ ಯೋಚನೆ ಮಾಡಿದ ಮಾರ… ಅಣ್ಣನವರು ಕಸಪಯ್ಯನೊಂದಿಗೆ ಮಾತಾಡಿ ಒಳಗೆ ಬಂದದ್ದೆ ತಡ ಅವರ ಪಾದಕ್ಕೆರಗಿ ನಡೆದ ವೃತ್ತಾಂತವನ್ನೆಲ್ಲ ಅರುಹಿದ. ಇಡೀ ನಾಡೇ ಕನ್ನದ ಮಾರನ ಕನ್ನಗತ್ತಿಯ ಕೈಚಳಕದ ಬಗ್ಗೆ ಕತೆಮಾಡಿ ಹೇಳಿ-ಕೇಳಿ ಮಾತಾಡಿದಂತವರು ಇಂದು ಪ್ರತ್ಯಕ್ಷದಲ್ಲಿ ಅವನನ್ನು ಕಂಡು ಕಕ್ಕಾಬಿಕ್ಕಿಯಾದರು, ಅದೂ ಮಹಾಮನೆಯ ಅಂಗಳದಲ್ಲಿ..! ಶಿವ ಶಿವಾ..!
ಬಿಕ್ಕಿ ಅಳ್ಳುತ್ತಿದ್ದ ಅವನ ಭುಜ ಹಿಡಿದೆತ್ತಿದ ಅಣ್ಣನವರು ಸಮಾಧಾನ ಚಿತ್ತರಾಗಿ ‘ಈಗ ನೀವು ಶರಣರೇ ಆಗಿದ್ದೀರಿ, ನಾವೆಲ್ಲ ಬರೀ ವೇಷಧಾರಿಗಳು ಎಂಬ ಅಳಕು ನಮ್ಮಲ್ಲಿದೆ. ಆದರೆ ಆ ಸಂಗಮನಾಥನೇ ನಿಮ್ಮ ಈ ಶರಣನ ವೇಷದ ಮೂಲಕ ಮಹಾಮನೆಗೂ ಬಂದಂತಾಯ್ತು. ಅಂಜದಿರಿ ಮಾರಯ್ಯ, ಶರಣರು ಕಾಯುವ ಧರ್ಮದವರು, ನಿಮ್ಮನ್ನು ಕಾಯುವುದು ಈಗ ನಮ್ಮ ಜವಾಬ್ದಾರಿಯಾಗಿದೆ…’ ಅಂತ ಹೇಳಿದ್ದೆ ಶರಣರ ಮುಖದಲ್ಲಿ ಮತ್ತಷ್ಟು ಕಳವಳ ಹೆಪ್ಪುಗಟ್ಟಿತು. ಈಗ ಸೈನಿಕರು ಬಂದು ಹುಡುಕಿದಾಗ ಕನ್ನಗತ್ತಿ ಮಾರ ಸಿಕ್ಕಿಬೀಳುತ್ತಾನೆ. ಆಗ ಇಡೀ ಕಲ್ಯಾಣ ಪಟ್ಟಣವೇ ನಮ್ಮನ್ನು ಸಂಶಯದಿಂದ ನೋಡುತ್ತದೆ ಎಂಬ ಆತಂಕ ಶರಣರದ್ದು.
‘ಬಸವಣ್ಣ ಇದೇನ ಮಾಡಿದಿ, ಹೊರಗೆ ಸೈನ್ಯ ಕಾವಲು ನಿಂತಿದೆ, ನೀನು ಒಳಗಿರುವ ಕಳ್ಳನನ್ನು ಬಚ್ಚಿಟ್ಟುಕೊಂಡು ಪ್ರಭುಗಳ ಆಜ್ಞೆಯ ಮೀರುವೆಯಾ’ ಎಂದು ಅಕ್ಕನಾಗಲಾಂಬಿಕೆ ಕೇಳಿದರು. ‘ಇದು ಬರೀ ಕಳ್ಳನ ವಿಚಾರವಲ್ಲ ತಾಯೇ, ಸಿರಿತನದ ವಿಚಾರವೂ ಇಲ್ಲಿದೆ. ದಯೆಯಿಟ್ಟು ಕಾಯುವುದು ಧರ್ಮವೆಂದಾಗ ಇಲ್ಲಿ ರಾಜಕಾರ್ಯವನ್ನು ಹೇಗೆ ಬೆರೆಸಲಿ, ಸಂಗಮನಾಥ ದಾರಿ ತೋರಿದಂತೆ ನಡೆಯೋಣ… ಮಾರಯ್ಯ ನೀವು ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಪ್ರಭುಗಳು ನನಗಾಗಿ ಕೊಟ್ಟಿರುವ ಈ ಮೇಣೆ ಒಂದೇ.. ಇದರಲ್ಲಿ ಕುಳಿತು ನೀವು ಹೊರಗೆ ಹೋಗಿರಿ, ಸೈನ್ಯಕ್ಕೆ ಮಹಾಮನೆಯ ಮೇಲೂ ಸಂಶಯಬಾರದು, ನೀವು ಬದುಕಿಕೊಳ್ಳುವಿರಿ’ ಎಂದರು. ವಿಶ್ವಾಸದಿಂದಲೇ ಭಕ್ತ, ವಿಶ್ವಾಸದಿಂದಲೇ ವಿಶ್ವವೂ ಎಂದು ನಂಬಿದ್ದ ಅಣ್ಣನವರ ವಿಶ್ವಾಸ ಅಚಲವಾಗಿದ್ದಿತ್ತು.
ಅದು ಹೂದಂಡೆಯಿಂದ ಅಲಂಕೃತವಾದ ಮೇಣೆ, ಎಡಬಲಕೂ ತಳಿರುಗಳ ನಡುವೆ ಹರಳುಗಳ ಶೃಂಗಾರ, ಮೃದುಹಾಸಿನ ಮೆತ್ತೆ, ಅದರೊಳಗಿನ ಅಲಂಕಾರವೇನ ಬಣ್ಣಿಸುವುದು..! ಹನಿಗಣ್ಣಾದ ಮಾರನ ಕಣ್ಣೀರು ಅಣ್ಣನವರ ಪಾದದ ಮೇಲೆ ಬಿದ್ದದ್ದೆ, ಶಲ್ಯ ಎತ್ತಿ ಅವನ ಕಣ್ಣೀರ ಒರೆಸಿದರು, ಮಾತುಮಾತಿಗೂ ಅಂಜದಿರು ಎಂಬ ಹಿತನುಡಿ ಅವರ ಮುಖದ ಮೇಲಿನ ತೇಜಸ್ಸು, ಆ ಮಂದಹಾಸ, ಆ ಮಮತೆಯ ಮೃದುತ್ವ ಮಾರನೊಳಗಿನ ಕಳ್ಳನನ್ನು ಹಿಡಿದು ಕಟ್ಟಿಹಾಕಿದಂತಾಗಿತ್ತು. ಮೇಣೆ ಹೊತ್ತಿದ್ದ ಗುಡ್ಡರು ಅಡ್ಡದಾರಿ ಹಿಡಿದು ಗುಡ್ಡದ ಕಡೆ ತಿರುಗುತ್ತಾರೆಂಬ ಹೊತ್ತಿಗೆ ಮಾರನು ದಣ್ಣಾಯಕರಂತೆ ಅವರಿಗೆ ಅರಮನೆಗೆ ಕೊಂಡೊಯ್ಯಲು ಆದೇಶಿಸಿದ.
ಪ್ರಧಾನಿಗಳು ಬಂದರೆಂದೇ ಭಾವಿಸಿದ ಅರಮನೆಯ ಕಾವಲುಗಾರರು ಬಾಗಿಲು ತೆರೆದು ಒಳಗೆ ಬಿಟ್ಟರು, ಎಲ್ಲ ಕಾವಲುಗಾರರಿಗೂ ಸೋಜಿಗದ ಸಂಗತಿ ಎಂದರೆ ಯಾವತ್ತೂ ಅಣ್ಣನವರು ಮೇಣೆಯ ಮೇಲೆ ಕುಳಿತು ರಾಜಾಂಗಣಕ್ಕೆ ಬಂದವರೇ ಅಲ್ಲ, ಕೋಟೆಯ ಮುಖ್ಯಬಾಗಿಲ ಮುಂದೆ ಇಳಿದು ನಡೆದುಕೊಂಡು ಬರುತ್ತಿದ್ದ ಅಣ್ಣನವರು ಇಂದು ರಾಜಾಂಗಣದವರೆಗೂ ಮೇಣೆಯಲ್ಲಿಯೇ ಬರುತ್ತಿದ್ದಾರಲ್ಲ ಎಂದು ಹುಬ್ಬೇರಿಸಿದರು. ರಾಜಾಂಗಣದ ಹಜಾರದಲ್ಲಿ ಕುಳಿತು ಸಿಹಿಗವಳ ಮೆಲ್ಲುತ್ತಿದ್ದ ಬಿಜ್ಜಳರಾಜನಿಗೂ ಬಸವಣ್ಣನವರ ಈ ನಡೆ ವಿಚಿತ್ರವೆಂಬಂತೆ ಕಂಡರೂ ಇದರೊಳಗೆ ಏನೋ ವಿಚಾರ ಇದ್ದೀತೆಂದು ಎದ್ದು ಮೆಣೆಗೆ ಎದುರಾಗಿ ಬಂದರು. ಗುಡ್ಡರು ಮೇಣೆಯನ್ನಿಳುಹಿ ತಲೆಬಾಗಿ ವಂದಿಸಿ ಮಂಡಿಯೂರಿ ಕುಳಿತರು. ಮೇಣೆಯಿಂದಿಳಿಯದ ಬಸವರಾಜನಿಗಾಗಿ ಬಿಜ್ಜಳರಾಜರು ದಿಟ್ಟಿಸಿ ಮೇಣೆಯೊಳಗೆ ನೋಡಿದವರೇ ‘ಎಲಾ ಬಸವರಾಜರ ಮೇಣೆಯಲ್ಲಿ ರಾಜಾಂಗಣಕ್ಕೆ ಬರುವಷ್ಟು ಸೊಕ್ಕಾಯಿತಾ ನಿನಗೆ?’ ಎಂದು ಸೊಂಟದಲ್ಲಿನ ಬೀಸುಗತ್ತಿಯ ಹಿಡಿಕೆಯ ಮೇಲೆ ಕೈಯಿಟ್ಟು ಎತ್ತುವುದರಲ್ಲಿದ್ದರು. ಚಣಮಾತ್ರದಲ್ಲಿ ಮಾರ ಚಂಗನೇ ಜಿಗಿದು ಪ್ರಭುಗಳ ಪಾದ ಹಿಡಿದ. ರಾಜರ ಕಾವಲುಭಟರು ಓಡಿಬಂದು ಮಾರನನ್ನು ಹಿಡಿದೆತ್ತಿ ಸರಪಳಿಯಲ್ಲಿ ಕಟ್ಟಿ ಹಾಕಿದರು.
ಈ ಕನ್ನದ ಮಾರ ಎಲ್ಲಿ ನಮ್ಮ ಬಸವರಾಜರಿಗೆ ಏನು ಮಾಡಿದನೋ ಎಂಬ ಆತಂಕ ಅವರಲ್ಲಿರುವುದನ್ನು ಕಂಡ ಮಾರ ನಡೆದ ಘಟನೆಯನ್ನು ರಾಜರ ಮುಂದೆ ಸವಿಸ್ತಾರವಾಗಿ ಹೇಳಿದ. ಅದನ್ನು ಕೇಳಿ ಮತ್ತಷ್ಟು ಕೆಂಡಾಮಂಡಲರಾಗಿ ಕೆರಳಿ ಬಿಡುವರೋ ಎಂದುಕೊಂಡಿದ್ದ ಮಾರನನ್ನು ನೋಡಿ ಬಿಜ್ಜಳ ಮಹಾರಾಜರು ನಗಲಿಕ್ಕೆ ಶುರುಮಾಡಿದರು. ‘ಇದು ಬಸವರಾಜನ ಮತ್ತೊಂದು ಪವಾಡನ ಆಯ್ತು ನೋಡು, ಅಂವಾ ನಿಮಗೆಲ್ಲಾ ಅಣ್ಣಾ ಬಸವಣ್ಣಾ ಖರೇ, ಆದರ ನನಗ ಮಾತ್ರ ರಾಜ ಬಸವರಾಜ ಇದ್ದಾನು. ಹೋಗಿ ಹೋಗಿ ಅವನ ಮಹಾಮನೆ ಹೊಕ್ಕಿಯಲ್ಲೋ ಮಾರಾಯ. ಅವನ ಗಾಳಿ ನಿನಗೂ ಬಡಧಂಗ ಆಗೇತಿ. ಆತು ಬಿಡು, ನೀನು ಕಳ್ಳರ ಕುಲದಾಂವ… ಖರೇ ಕಳ್ಳ ಆಗಿರಬೇಕಾದಾಂವ ಆ ಶರಣರೊಳಗ ಮತ್ತೊಬ್ಬ ಶರಣ ಆಗಿ ಈ ಅರಮನೆ ಮುಂದಲ ಮಹಾಮನೆಗೆ ಆಧಾರಸ್ಥಂಭನ ಆಗತೀ… ಈ ಕಲ್ಯಾಣದೊಳಗ ಅರಮನೆ ಮುಖ್ಯ ಆಗಬೇಕದಲ್ಲಿ ಮಹಾಮನೆ ಮುಖ್ಯ ಆಗಲಿಕ್ಕ ಶುರುವಾಗೇತಿ..’ ಬಿಜ್ಜಳರಾಜರು ಇಂಥಾ ಸ್ಥಿತಿಯೊಳಗ ಇಷ್ಟೊಂದು ನಕ್ಕು ಹಗೂರಾಗತಾರ ಅಂತ ಸ್ವತಃ ಮಾರಯ್ಯನಿಗೂ ಅನ್ನಿಸಿರಲಿಲ್ಲ.
ಅರಮನೆಯ ಆಳುಮಗನನ್ನ ಕಳಿಸಿ ಮಹಾಮನೆ ಸುತ್ತಲೂ ಕಾವಲು ಹಾಕಿದ್ದ ಸೈನ್ಯವನ್ನ ಹಿಂದಕ್ಕ ಕರೆಸಿಕೊಂಡ ಮಹಾರಾಜರು ಅವರ ಬೆನ್ನಿಗೆ ಬಸವಣ್ಣನವರನ್ನೂ ಅರಮನೆಗೆ ಕರೆಸಿಕೊಂಡರು.
‘ಬಸವರಾಜ, ನಿನ್ನ ತೇಜಸ್ಸೊಳಗ ಅದೇನು ಶಕ್ತಿ ಇದೆಯೋ ಮಾರಾಯ.. ಕಲ್ಲುಹೃದಯಾನ ಕರಗಿ ನೀರಾಗಿ ಬಿಡತದ. ಇಲ್ಲಿ ನೋಡು ಬಸವಣ್ಣ ನೀನು ಮೇಣೆಯೊಳಗ ಕುಳಿತು ಪಾರಾಗು ಅಂತ ಹೇಳಿಕಳಿಸಿದ ಕನ್ನದ ಮಾರ ಹಿಂಗ ಹ್ಯಾಪ ಮುಖ ಮಾಡಕೊಂಡು ಬಂದು ನನ್ನ ಗಲ್ಲಿಗೇರಸರೀ ಅಂತ ನಿಂತಾನು. ನಿನ್ನ ಮಾತಿನೊಳಗ ಅದೆಂಥ ಸೂಜಿಗಲ್ಲಿನ ಶಕ್ತಿ ಐತಿ ಅನ್ನೋದ ತಿಳಿತಿಲ್ಲ ನೋಡು.’
‘ಪ್ರಭು, ನೀವು ಕ್ಷಮಾ ಮಾಡ್ರೀ.. ನಿಮ್ಮ ಆಜ್ಞೆಯನ್ನ ಮೀರಿ ನಾನು ತಪ್ಪೆಸಗಿದ್ದೇನೆ. ಆದರ ತಪ್ಪಾಗಿದೆ ಅಂತ ಒಪ್ಪಿಕೊಂಡು ಬಂದವನ್ನ ಕೊಲ್ಲೋದು ಶೂರತನ ಅಲ್ಲ ಪ್ರಭೂ…’
‘ಅದಕ್ಕ ಬಸವಣ್ಣ ನಿಮ್ಮನ್ನ ಕರದದ್ದು. ಕೆಲವೊಂದು ಸಲ ಸರಿ ಅನ್ನಿಸುವ ತಪ್ಪುಗಳೂ ಆಡಳಿತದೊಳಗ ತೊಡಕಾಗಿ ಕಾಡತಾವು. ಅಂಥಾ ಹೊತ್ತನ್ಯಾಗ ದಯೆಯೊಂದೇ ಸಕಲಕ್ಕೂ ಅಂತ ನೀ ಹೇಳೋ ಮಾತು ನನ್ನ ಮ್ಯಾಲೂ ಪರಿಣಾಮ ಬೀರೈತಿ. ಇಕಾ ನೋಡು ಇವನ್ನ ನಾವು ರಾಜಮರ್ಯಾದೆಗಾಗಿ ನಾಳೆ ಹೊತ್ತು ಹೊಂಟರ ನೇಣಿಗೇರಿಸಿಯೋ, ಇಲ್ಲಾ ಆನೆಕಾಲೊಳಗ ತುಳಸಿಯೋ ಸಾಯಿಸಿಬಿಡಬಹುದು. ಆದರ ತಿದ್ದಿಕೊಳ್ಳೋದಕ್ಕ ಅವಕಾಶವಿಲ್ಲದ ಕಾನೂನು ಎಷ್ಟು ಬಿಗಿ ಇದ್ದರ ಏನು ಬಂತು..? ಇಕಾ ಇವನ್ನ ನಿನ್ನ ಉಡಿಗೆ ಹಾಕತೀನಿ ಬಸವಣ್ಣ.. ನಮ್ಮದು ಬರೀ ರಾಜಧರ್ಮ, ನಮ್ಮ ಕಾನೂನ ಬ್ಯಾರೆ ಇರತಾವು. ನಿನ್ನದು ಅಪ್ಪಟ ಮನುಷ್ಯತ್ವದ ಧರ್ಮ ನಿನ್ನ ದಯಾ ದೊಡ್ಡದು.’
ಸಿಕ್ಕಿಬಿದ್ದಂಥ ಕಳ್ಳನನ್ನ ನಗುನಗುತ್ತಾ ಬಿಟ್ಟುಕಳುಹಿದ ಮೇಲೆ ಬಿಜ್ಜಳರಾಜರು ನಿಶ್ಚಿಂತರಾಗಿ ಮಲಗಿ ನಿದ್ರಿಸಿರಬಹುದು. ಅಣ್ಣನವರ ಜೊತೆಗೂಡಿ ಮಹಾಮನೆಯತ್ತ ತನ್ನ ನೋಯುತ್ತಿರುವ ಕಾಲನ್ನು ಎಳೆಯುತ್ತಾ ಹೆಜ್ಜೆಹಾಕುವಾಗ ಅವನ ಅಂತರಂಗದೊಳಗೆ ಯಾವದೋ ಅವ್ಯಾಹತವಾದ ಬೆಳಕೊಂದು ಹರಿದಂತಾಗಿ ಸೊಂಟದಲ್ಲಿದ್ದ ಕನ್ನಗತ್ತಿಯನ್ನ ಕಿತ್ತೆಸೆದ. ಅದು ದೊಡ್ಡದೊಂದು ಬಂಡೆಗಲ್ಲಿಗೆ ತಾಕಿ ಬೆಂಕಿಯ ಕಿಡಿ ಹೊತ್ತಿಸಿದ್ದೆ ಅಣ್ಣನವರು ತಡೆದು ನಿಂತು ಆ ಬೆಳಕಿನ ಕಿಡಿ ಕಂಡರು. ಬಾಗಿ ಅವನ ಕಿರುಗತ್ತಿಯನ್ನ ಎತ್ತಿಕೊಂಡು ತಂದು ಅವನ ಕೈಗಿಟ್ಟು, ‘ಮಾರಯ್ಯ ನೀವು ಇಷ್ಟು ದಿನ ಬರೀ ಕನ್ನದ ಮಾರನಾಗಿದ್ದಿರಿ. ಈಗ ಕನ್ನದ ಮಾರಯ್ಯನಾಗಿರಿ. ಅರಿವಿನ ಜ್ಯೋತಿಯ ಕಿಡಿಯಾಗಿ ಈ ಕನ್ನಗತ್ತಿಯು ಬೆಳಕು ಬಿತ್ತಬೇಕಲ್ಲದೆ ಬರೀಯ ಕಳ್ಳತನದ ಸಾಧನವಾಗಬಾರದು. ಲೋಕದೊಳಗಿನ ಅಜ್ಞಾನವನ್ನು ಕದ್ದು ಮರೆತಿರುವ ಜ್ಞಾನದ ಬೆಳಕಿನ ಕಡೆಗೆ ಹಚ್ಚುವ ಕಾಯಕ ಮಾಡಿರಿ’ ಎಂದು ಹೇಳಿದಾಗ ಮಾರಯ್ಯನ ಕಣ್ಣಾಲಿಗಳು ತುಂಬಿ ಬಂದವು.
ಪಾಳುಗುಡಿಯಲ್ಲಿ ಕುಳಿತಿದ್ದ ತನ್ನ ವಾರಗೆಯವರನ್ನು ಮಹಾಮನೆಗೆ ಕರೆತಂದು ಅವರೊಳಗೂ ಅರಿವಿನ ಬೀಜ ಬಿತ್ತಿ ಅಜ್ಞಾನದ ಕಳ್ಳತನವ ಮಾಡುವಲ್ಲಿ ಕನ್ನಗತ್ತಿಯನ್ನು ಬಳಸತೊಡಗಿದರು.
Comments 15
Rajeshwari Dambal
Apr 4, 2019ಕನ್ನಗತ್ತಿಯ ಮಾರನ ಕತೆ ರೋಮಾಂಚನಕಾರಿಯಾಗಿದೆ. ಬಸವಣ್ಣನವರ ವ್ಯಕ್ತಿತ್ವದ ಹೊಸ ರೂಪವನ್ನು ಕಥೆಗಾರರು ಮಾರ್ಮಿಕವಾಗಿ ಹೇಳಿದ್ದಾರೆ. ಬಲು ಇಷ್ಟವಾಯಿತು.
Mariswamy Gowdar
Apr 4, 2019ವಲಸೆಗಾರರಾಗಿ ಕಳ್ಳರ ಜೀವನ ಹೇಗಿರುತ್ತದೆಂದು 12ನೇ ಶತಮಾನಕ್ಕೇ ಹೋಗಿ ನೋಡಿದಹಾಗಾಯ್ತು. ಭಲೇ ಭಲೇ… ರಾಜಾ ಬಿಜ್ಜಳ ಭಲೆ! ಬಸವರಾಜ ಭಲೇ! ಮಾರ ಭಲೇ!!….. ನಾಟಕಕಾರರೇ ಭಲೇ ಭಲೇ!!!!!
ಶಾರದಾ ಗುಡಗೇರಿ
Apr 5, 2019ಕಳಬೇಡ ಕೊಲಬೇಡ…… ವಚನ ಮಾರನ ಮನ ಹೊಕ್ಕ ರೀತಿ ತುಂಬಾ ಚೆನ್ನಾಗಿ ಮಾರ್ಮಿಕವಾಗಿ ಮೂಡಿಬಂದಿದೆ.
Chaitra Chandan
Apr 5, 2019ಕಳ್ಳರ ಜೀವನ ಶೈಲಿಯನ್ನು ನೈಜವಾಗಿ ಚಿತ್ರಿಸಲಾಗಿದೆ. ಕನ್ನದ ಮಾರ ಬಿಜ್ಜಳ ಮಹರಾಜರ ಮನಸ್ಸು ಗೆದ್ದಿದ್ದು ಕತೆಯಲ್ಲಿ ಅನಿರೀಕ್ಷಿತ ತಿರುವು, ವಾವ್!
ವೀರನಾಯ್ಕ, ಚಿತ್ರದುರ್ಗ
Apr 8, 2019ಕಲ್ಯಾಣದಲ್ಲಿ ಕನ್ನದ ಮಾರಯ್ಯನ ಪ್ರಸಂಗ ಮನಮುಟ್ಟುವಂತಿದೆ. ಬಿಜ್ಜಳ ರಾಜ, ಬಸವಣ್ಣ ಮತ್ತು ಮಾರ ಇವರ ನಡುವೆ ಸುತ್ತುವ ಕತೆಗೆ ದೊಡ್ಡ ವೇದಿಕೆ ಇದೆ. ಕಲ್ಯಾಣದ ಬಗೆಗೆ ಕುತೂಹಲ ಹುಟ್ಟಿಸುತ್ತದೆ. ನಾಟಕಕಾರರ ಕಲ್ಪನೆ ಅದ್ಭುತ!!!
ವೀರನಾಯ್ಕ, ಚಿತ್ರದುರ್ಗ
Giraja H.S
Apr 8, 2019ಹೆಗ್ಗಣಗಳು, ಮಂಚಣ್ಣ-ಕಸಪಯ್ಯನವರ ಮಸಲತ್ತು, ಕತೆಗೆ ಹೊಸ ಗತ್ತು ನೀಡುತ್ತವೆ. ಸಣ್ಣಪುಟ್ಟ ವರ್ಣನೆಗಳು ಯಾವುದೋ ಸಂದೇಶ ದಾಟಿಸುವಂತೆ ಕಾಣುತ್ತವೆ.
ಜಾನಕಿ ಎಸ್.ಸಿ
Apr 9, 2019ಕಳಬೇಡ, ಕೊಲಬೇಡ……. ವಚನವು ಮೌನವಾಗಿಯೇ ಕನ್ನದ ಮಾರನನ್ನು ಪರಿವರ್ತನೆ ಮಾಡಿದ ರೂಪಕ ಮನಕ್ಕೆ ಮುಟ್ಟುವಂತಿತ್ತು. ಕಥೆಯ ಕೊನೆಯ ತಿರುವು ಅಚ್ಚರಿಯೊಂದಿಗೆ ಖುಷಿ ಕೊಟ್ಟಿತು. ಹಡಪದ ಶರಣರಿಗೆ ಶರಣಾರ್ಥಿಗಳು
kiran khanapur
Apr 9, 2019ಶರಣರ ಬದುಕಿನ ಒಳನೋಟ ನೀಡುವ ಕಲ್ಯಾಣದ ಚಿತ್ರಣ ಹಿಡಿಸಿತು. ಕನ್ನದ ಮಾರ ನನ್ನ ಮನಸ್ಸನ್ನೂ ಕದ್ದುಬಿಟ್ಟ.
manju sp
Apr 10, 2019ಎಲ್ಲಾ ಶರಣ್ರ ಕತೆಗಳನ್ನು ಹೀಗೆ ಹೇಳಿ..
ದೇವರಾಜ ಸಿ ಅಂಗಡಿ
Apr 10, 2019ಬಸವಣ್ಣ ಮತ್ತು ಬಿಜ್ಜಳ ಮಹಾರಾಜನ ಸಂಬಂಧದ ಆತ್ಮೀಯತೆಯನ್ನು ಕನ್ನದ ಮಾರಯ್ಯನ ಪ್ರಸಂಗ ಚೆನ್ನಾಗಿ ತೋರಿಸಿದೆ. ಆ ಸಂಬಂಧಕ್ಕೆ ಹುಳಿ ಹಿಂಡಿದವರಾರು ಎನ್ನುವ ಪ್ರಶ್ನೆ ನನ್ನನ್ನು ಕೊರೆಯತೊಡಗಿತು.
sharanappa b.kerur
Apr 10, 2019‘ಮಾರನಿಗೆ ವೈರಿಯಾದೆಯಾ ಮಾರೇಶ್ವರಾ’ ಕಸುಬುದಾರ ಕಳ್ಳ ಮಾರನ ಕತೆ ರೋಮಾಂಚಕವಾಗಿದೆ.
ನಾಗನಗೌಡ ಬರವಳ್ಳಿ
Apr 15, 2019ಕನ್ನಗತ್ತಿಯ ಮಾರ, ಚೋರ ಚಿಕ್ಕ ಇಬ್ಬರ ನಿರೂಪಣೆಯಲ್ಲಿ ನಾಟಕಕಾರರಾದ ಮಹಾದೇವ ಹಡಪದ ಅವರು ತೋರಿಸಿದ ವ್ಯತ್ಯಾಸ ಹಾಗೂ ಕತೆಯ ಹಂದರ ವೈವಿಧ್ಯತೆಯಿಂದ ಕೂಡಿದೆ. 12ನೆಯ ಶತಮಾನವನ್ನು ಕಣ್ನೆದುರು ತಂದು ನಿಲ್ಲಿಸಿದಂತೆ ಭಾಸವಾಗುತ್ತದೆ. ಮಾರನ ಚಾಕಚಕ್ಯತೆ ಹಾಗೂ ಕಳ್ಳನಲ್ಲಿನ ಪ್ರಾಮಣಿಕತೆ ನನ್ನ ಮನಸ್ಸನ್ನು ತುಂಬಿಬಿಟ್ಟವು.
ಡಾ. ಪಂಚಾಕ್ಷರಿ ಹಳೇಬೀಡು
Apr 15, 2019ಸಮಾಜದ ಕಟ್ಟಕಡೆಯ ದುರ್ನಡತೆಯ ವ್ಯಕ್ತಿಯೊಬ್ಬ ಒಳ್ಳೆಯ ವಾತಾವರಣದಿಂದ ಸದ್ಗುಣಭರಿತನಾಗಿ ಸಮಾಜದ ಆಸ್ತಿಯಾಗಬಲ್ಲ ಎಂಬುದಕ್ಕೆ ಕನ್ನಗತ್ತಿಯ ಮಾರನ ಕಥೆ ಒಂದು ಒಳ್ಳೆಯ ಉದಾಹರಣೆ. ತಮ್ಮ ನಿರೂಪಣೆ ಸೊಗಸಾಗಿ ಮೂಡಿ ಬಂದಿದೆ.
Ashok Biradar
Apr 20, 2019Beautiful story, fantastic narration.
devuru mysuru
Apr 20, 2019ತಪ್ಪದೆ ಬಯಲು ಓದುತ್ತೇನೆ. ನನಗೂ ಇಲ್ಲಿ ಬರೆಯಬೇಕೆಂದು ಇಚ್ಛೆ ಇದೆ. ಎಲ್ಲಾ ಲೇಖನಗಳು ಚನ್ನಾಗಿವೆ. ಆದರೆ ನನಗೆ ಇಷ್ಟು ತೂಕವಾಗಿ ಬರೆಯಲು ಬರುವುದಿಲ್ಲ. ಬಯಲು ಅಭಿಮಾನಿ ನಾನು.