
ಒಂದಷ್ಟು ಸರಳ ಸಲಹೆಗಳು…
ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಒಂದು ವ್ಯಕ್ತಿತ್ವ ಇದ್ದೇ ಇರುತ್ತದೆ. ಆದರೆ ಕೆಲವರ ವ್ಯಕ್ತಿತ್ವ ಗೌರವ ಕೊಡುವಂತಿದ್ದರೆ ಮತ್ತೆ ಕೆಲವರ ವ್ಯಕ್ತಿತ್ವ ತಿರಸ್ಕರಿಸುವಂತಿರುತ್ತದೆ. ನಮ್ಮ ವ್ಯಕ್ತಿತ್ವದಂತೆ ನಮ್ಮ ಬದುಕು. ಹಾಗೆ ನಮ್ಮನ್ನು ಮತ್ತು ನಮ್ಮ ಬದುಕನ್ನು ಹಸನಾಗಿಸುವ ಮಾತುಗಳನ್ನು ಹೊಂದಿರುವ ವಚನಗಳು ನಮಗೆ ಮಾರ್ಗದರ್ಶಿಯಾದರೆ ನಮ್ಮಲ್ಲಿ ಅಸಾಧಾರಣ ಬದಲಾವಣೆಗಳನ್ನು ಕಾಣಬಹುದು. ಪರಿಚಿತವಾಗಿರುವ ವಚನಗಳನ್ನೇ ತೆಗೆದುಕೊಂಡು ನಮ್ಮ ಮಾತುಗಳನ್ನು, ವರ್ತನೆಗಳನ್ನು, ವಿಚಾರಗಳನ್ನು, ಆಹಾರ ಪದ್ಧತಿಯನ್ನು ಹೇಗೆ ಸರಿಪಡಿಸಿಕೊಳ್ಳಬಹುದೆಂದು ಶರಣರು ಸೂಚಿಸಿದ್ದಾರೆ ಎಂದು ನೋಡುವ ಒಂದು ಚಿಕ್ಕ ಪ್ರಯತ್ನ ಇಲ್ಲಿದೆ:
ಮೊದಲಿಗೆ ನಾವು ಜನಿಸುತ್ತಲೇ ವಿಶ್ವ ಮಾನವರಾಗಿಯೇ ಹುಟ್ಟುತ್ತೇವೆ ಬೆಳಿಯುತ್ತಾ ಜಾತಿಯ ಕೆಸರಿನಲ್ಲಿ ಬಿದ್ದು ಒದ್ದಾಡುತ್ತೇವೆ, ಅಷ್ಟೇ ಅಲ್ಲ ನಮ್ಮ ಭಾರತದಲ್ಲಿ ಶಾಸ್ತ್ರ ವೇದ ಪುರಾಣಗಳಲ್ಲಿ ಬಂದಿಯಾಗಿ ಮಗುವಿನಲ್ಲಿ ವೈಜ್ಞಾನಿಕ ಮನೋಭಾವವೇ ಸತ್ತು ಹೋಗುವಂತೆ ಮಾಡುವುದನ್ನು ಅಲ್ಲಮಪ್ರಭುಗಳ ಈ ಕೆಳಗಿನ ವಚನದಲ್ಲಿ ಕಾಣಬಹುದು- “ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ! ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು.” ಇಂಥ ಕಟ್ಟುಪಾಡುಗಳನ್ನು ಕಿತ್ತೆಸೆದು ಮಗುವು ಸ್ವತಂತ್ರ ವಿಚಾರಗಳಿಂದ ಬೆಳೆಯಲು ಅವಕಾಶ ನೀಡಬೇಕಿದೆ.
ಇನ್ನು ಒಂದು ಕಾಲದಲ್ಲಿ ಎಷ್ಟೋ ಜನ ಮಾತನಾಡುವುದಕ್ಕೆ ಭಯಪಡುತ್ತಾ ಇದ್ದರು. ಈಗಲೂ ಅಲ್ಪ ಪ್ರಮಾಣದಲ್ಲಿ ಇರಬಹುದು, ಅಂತವರಿಗೆ ಮಾತನಾಡಲು ಧೈರ್ಯ ತುಂಬುತ್ತದೆ ಈ ವಚನ: “ಆಳಿಗೊಂಡಹರೆಂದು ಅಂಜಲದೇಕೆ ನಾಸ್ತಿಕವಾಡಿಹರೆಂದುನಾಚಲದೇಕೆ ಆರಾದಡಾಗಲಿ ಶ್ರೀಮಹಾದೇವರಿಗೆ ಶರಣೆನ್ನಿ. ಏನೂ ಅರಿಯೆನೆಂದು ಮೋನಗೊಂಡಿರಬೇಡ. ಕೂಡಲಸಂಗಮದೇವರ ಮುಂದೆ ದಂದಣ ದತ್ತಣಯೆನ್ನಿ.” ನಿಮಗೆ ಏನೂ ಗೊತ್ತಿಲ್ಲ ಅಂದರೆ ದಂದಣ ದತ್ತಣ ಎನ್ನಿ ದಂದಣ ದತ್ತಣ ಅಂದರೆ ಏನೂ ಅರ್ಥ ಇಲ್ಲ. ಹಾಗೆ ನಮಗೆ ಮಾತು ಬರುತ್ತದೆ ಎಂದು ಹೇಗೆ ಬೇಕೋ ಹಾಗೆ ಮಾತನಾಡುವಂತಿಲ್ಲ ನಮ್ಮ ಮಾತು ಹೇಗಿರಬೇಕೆಂದರೆ- “ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು. ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು. ನುಡಿಯೊಳಗಾಗಿ ನಡೆಯದಿದ್ದಡೆ, ಕೂಡಲಸಂಗಮದೇವನೆಂತೊಲಿವನಯ್ಯಾ.” ನಮ್ಮ ಮಾತು ಮೃದುವಾಗಿ ಸದುವಿನಯವಾಗಿ ಮತ್ತು ಮುತ್ತಿನ ಹಾರದಂತೆ ಸ್ಪಟಿಕದಂತೆ ಇರಬೇಕು ಎಂದು ತಿಳಿಸುತ್ತಾರೆ.
ನಮ್ಮ ಅಹಾರ ಹೇಗಿರಬೇಕು ಎಂದು ಅಕ್ಕಮಹಾದೇವಿ ಹೇಳುತ್ತಾರೆ- “ಆಹಾರವ ಕಿರಿದು ಮಾಡಿರಣ್ಣಾ, ಆಹಾರವ ಕಿರಿದು ಮಾಡಿ. ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ. ಆಹಾರದಿಂ ನಿದ್ರೆ, ನಿದ್ರೆಯಿಂ ತಾಮಸ, ಅಜ್ಞಾನ, ಮೈಮರಹು, ಅಜ್ಞಾನದಿಂ ಕಾಮವಿಕಾರ ಹೆಚ್ಚಿ, ಕಾಯವಿಕಾರ, ಮನೋವಿಕಾರ, ಇಂದ್ರಿಯವಿಕಾರ, ಭಾವವಿಕಾರ, ವಾಯುವಿಕಾರವನುಂಟುಮಾಡಿ, ಸೃಷ್ಟಿಗೆ ತಹುದಾದ ಕಾರಣ ಕಾಯದ ಅತಿಪೋಷಣ ಬೇಡ. ಅತಿ ಪೋಷಣೆ ಮೃತ್ಯುವೆಂದುದು. ಜಪ ತಪ ಧ್ಯಾನ ಧಾರಣ ಪೂಜೆಗೆ ಸೂಕ್ಷ್ಮದಿಂ ತನುಮಾತ್ರವಿದ್ದರೆ ಸಾಲದೆ ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಘ್ನವೆಂದುದು. ತನು ಪೋಷಣೆಯಿಂದ ತಾಮಸ ಹೆಚ್ಚಿ, ಅಜ್ಞಾನದಿಂ ವಿರಕ್ತಿ ಹಾನಿ, ಅರಿವು ನಷ್ಟ, ಪರವು ದೂರ, ನಿರಕೆ ನಿಲವಿಲ್ಲದ ಕಾರಣ. ಚೆನ್ನಮಲ್ಲಿಕಾರ್ಜುನನೊಲಿಸ ಬಂದ ಕಾಯವ ಕೆಡಿಸದೆ ಉಳಿಸಿಕೊಳ್ಳಿರಯ್ಯಾ.”
ಅತಿಯಾದ ಅಹಾರದಿಂದ ನಮ್ಮಲ್ಲಿ ಏನೇನು ಖಾಯಿಲೆ ಬರುವುದು ಎಂದು ಅಕ್ಕ ಎಚ್ಚರಿಸಿದ್ದಾರೆ. ಬಾಯಿಚಪಲಕ್ಕೆ ಏನೆಲ್ಲಾ ತಿನ್ನುವುದರಿಂದ ಎಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಂಬುದು ಎಲ್ಲರಿಗೂ ತಿಳಿದದ್ದೆ. ಆದರೂ ನಾಲಿಗೆ ರುಚಿಗಾಗಿ ಹೊಟ್ಟೆ ತುಂಬಿದರೂ ಸೇರಿಸುತ್ತಲೇ ಹೋಗುವ ಅತ್ಯಾಸೆಗೆ ಕಡಿವಾಣ ಹಾಕದಿದ್ದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ.
ಹೇಗೆ ಊಟ ಮಾಡಬೇಕು ಎಂಬುದನ್ನು ಬಸವಣ್ಣನವರ ಈ ವಚನ ತಿಳಿಸುತ್ತದೆ: “ಮೌನದಲುಂಬುದು ಆಚಾರವಲ್ಲ. ಲಿಂಗಾರ್ಪಿತವ ಮಾಡಿದ ಬಳಿಕ ತುತ್ತಿಗೊಮ್ಮೆ ಶಿವಶರಣೆನುತ್ತಿರಬೇಕು. ಕರಣವೃತ್ತಿಗಳಡಗುವವು, ಕೂಡಲಸಂಗನ ನೆನೆವುತ್ತ ಉಂಡಡೆ.”
ನಮ್ಮ ಪ್ರಸಾದ ನಮಗೆ ಔಷಧವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ. ಪ್ರತಿ ವ್ಯಕ್ತಿಗೂ ಒಂದು ಛಲ ಬೇಕು, ಆ ಛಲ ಹೇಗಿರಬೇಕು ಎಂದು ಬಸವಣ್ಣನವರು ಇಲ್ಲಿ ತಿಳಿಸಿದ್ದಾರೆ- “ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ, ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ, ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ, ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ, ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ, ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.” ಇಂತಹ ಛಲಗಳು ಮೈಗೂಡಿದರೆ ಬದುಕು ಹಗುರಾಗುವುದರಲ್ಲಿ ಸಂದೇಹವೇ ಇಲ್ಲ. ಸರಿದಾರಿಯಲ್ಲಿ ನಡೆಸುವ ಇಂತಹ ಛಲಗಳು ನಮಗೆ ನಾವೇ ಹಾಕಿಕೊಳ್ಳುವ ಅಂಕುಶಗಳಂತೆ, ಇಂತಹ ದಾರಿಯಲ್ಲಿ ಭಯವೆಂಬುದೇ ಇರುವುದಿಲ್ಲ.
ಇಂದಿನ ಸಮಯದಲ್ಲಿ ಬದುಕುವ ನಾವು ಬಹುತೇಕ ಸರ್ಕಾರಿ ಉದ್ಯೋಗವನ್ನೇ ಹೆಚ್ಚು ಬಯಸುತ್ತೇವೆ. ಆದರೆ ಬಾಪು ಲದ್ದೆಯ ಸೋಮ ಶರಣರು ಈ ವಚನದಲ್ಲಿ ಏನು ಹೇಳಿದ್ದಾರೆ ನೋಡಿ-
“ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ?” ಸ್ವ ಕಾಯಕಕ್ಕೆ ಮಹತ್ವ ನೀಡಿದ್ದಾರೆ ಹಾಗೆಯೇ ನಮಗೆ ಬರುವ ಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಮಾತುಗಳನ್ನು ತಿಳಿಸಿದ್ದಾರೆ.
ಈ ಸಮಾಜದಲ್ಲಿ ಬದುಕುವ ನಾವು ಎಲ್ಲರನ್ನೂ ನಮ್ಮವರೇ ಎಂಬ ಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಬಸವಣ್ಣನವರ ಈ ವಚನ ಕಲಿಸುತ್ತದೆ- “ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.” ಎಲ್ಲರೂ ನಮ್ಮವರೇ ಎಂದು ಬಾಳುವ ಗುಣ ನಮ್ಮದಾಗಲಿ ಎಂದಿದ್ದಾರೆ.
ಇಂದಿನ ದಿನಮಾನಗಳಲ್ಲಿ ಪದವಿ ಅಧಿಕಾರದ ಆಸೆಗಳಿಗೆ ಹೇಗೆಲ್ಲಾ ಹೊಡೆದಾಟ ಬಡಿದಾಟ ನಡೆಯುವುದನ್ನು ನಾವು ನೋಡಿದ್ದೇವೆ. ಅವುಗಳಿಗೆಲ್ಲ ಶರಣರ ವಚನಗಳಲ್ಲಿ ಏನಿದೆ ತಿಳಿಯೋಣ- “ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ. ಪರಮ ಪದವಿಯ ನಿಮ್ಮ ತಲೆಯಲ್ಲಿ ಸುತ್ತಿಕೊಳ್ಳಿ. ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು, ಮಹಾಲಿಂಗ ಗಜೇಶ್ವರದೇವಾ, ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.” ಗಜೇಶ ಮಸಣಯ್ಯ ಈ ಪದವಿಗಳನ್ನು ತಿರಸ್ಕರಿಸುವಲ್ಲಿ ಆಸೆ-ಆಮಿಷಗಳಿಂದ ಮುಕ್ತರಾಗುವ ಮಾರ್ಗ ಕಾಣುತ್ತದೆ.
ಬಸವಣ್ಣನವರು ಪದವಿಗಳ ಕುರಿತು ಹೇಳಿದ್ದು- “ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ, ರುದ್ರಪದವಿಯನೊಲ್ಲೆ. ನಾನು ಮತ್ತಾವ ಪದವಿಯನೊಲ್ಲೆನಯ್ಯಾ. ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ.”
ನಮಗೆ ಯಾವ ಪದವಿ, ಅಧಿಕಾರ ಬೇಡ. ಸಾಮಾನ್ಯ ಭಕ್ತನಾಗಿ ಸಾಮಾನ್ಯ ವ್ಯಕ್ತಿಯಾಗಿ ಇರುವೆವು ಎಂದು ಶರಣರು ಮಾರ್ಗದರ್ಶನ ಮಾಡಿದ್ದಾರೆ.
ಸಮಾಜದಲ್ಲಿ ನಾವು ಬದುಕುವಾಗ ಕೆಲವು ಜನ ನಮಗೆ ಬೈಯುವುದು ಟೀಕಿಸುವುದು ಮಾಡುತ್ತಿರುತ್ತಾರೆ. ಆಗ ನಮ್ಮ ನಡವಳಿಕೆ ಹೇಗಿರಬೇಕು ಎಂಬದನ್ನು ಈ ಕೆಳಗಿನ ವಚನಗಳಲ್ಲಿ ತಿಳಿಸಿದ್ದಾರೆ- “ಹೊಯಿದವರೆನ್ನ ಹೊರೆದವರೆಂಬೆ, ಬಯಿದವರೆನ್ನ ಬಂಧುಗಳೆಂಬೆ, ನಿಂದಿಸಿದವರೆನ್ನ ತಂದೆತಾಯಿಗಳೆಂಬೆ, ಆಳಿಗೊಂಡವರೆನ್ನ ಆಳ್ದವರೆಂಬೆ, ಜರಿದವರೆನ್ನ ಜನ್ಮಬಂಧುಗಳೆಂಬೆ, ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ ಕೂಡಲಸಂಗಮದೇವಾ.”
ನಮಗೆ ಬೈಯ್ದವರು ಜರಿದವರು ಹೊಡೆದವರು ನಮ್ಮ ಬಂಧುಗಳು. ಆದರೆ ಹೊಗಳಿದವರು ದಾರಿ ತಪ್ಪಿಸುವವರು ಮಾತ್ರವೇ ಅಲ್ಲ, ಚಿನ್ನದ ಶೂಲಕ್ಕೆ ಏರಿಸುವವರೆಂದು ಎಚ್ಚರಿಸಿದ್ದಾರೆ.
ಪ್ರತಿಯೊಬ್ಬರಿಗೂ ದುಃಖದ ನೋವಿನ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವ ಅಕ್ಕನ ಈ ವಚನ ಅತ್ಯಮೂಲ್ಯ- “ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದಡೆಂತಯ್ಯಾ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯಾ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.” ಎಂತಹದ್ದೇ ಸನ್ನಿವೇಶಗಳು ಬಂದರೂ ಮನದಲ್ಲಿ ಕೋಪ ಮಾಡಿಕೊಳ್ಳದೆ ಸಮಾಧಾನದಿಂದ ಇರಬೇಕು.
ಸಮಾಜದಲ್ಲಿ ಬದುಕವಾಗ ಜನರ ಜೊತೆಗೆ ಬದುಕಲೇ ಬೇಕು ಆದರೆ ಎಂಥವರ ಜೊತೆಗೆ ಬದುಕ ಬೇಕು ಎಂದು ಈ ವಚನ ಮಾರ್ಗದರ್ಶನ ಮಾಡುತ್ತದೆ- “ಸಾರ ಸಜ್ಜನರ ಸಂಗವ ಮಾಡೂದು, ದೂರ ದುರ್ಜನರ ಸಂಗ ಬೇಡವಯ್ಯಾ. ಆವ ಹಾವಾದಡೇನು:ವಿಷವೊಂದೆ, ಅಂತವರ ಸಂಗ ಬೇಡವಯ್ಯಾ. ಅಂತರಂಗ ಶುದ್ಧವಿಲ್ಲದವರ ಸಂಗವು ಸಿಂಗಿ, ಕಾಳಕೂಟ ವಿಷವೊ, ಕೂಡಲಸಂಗಯ್ಯಾ.” ಅಂತರಂಗ ಬಹಿರಂಗ ಶುದ್ಧ ಇಲ್ಲದವರ ಸಂಗ ಬೇಡವೇ ಬೇಡ ಎನ್ನುತ್ತಾರೆ. ಹಾಗೂ ಒಂದುವೇಳೆ ಅಂತವರ ಸಂಗ ಮಾಡಿದರೆ ಏನಾಗುತ್ತದೆ ಎಂಬುದನ್ನು ಅಕ್ಕ ಹೇಳುತ್ತಾರೆ- “ಅರಿಯದವರೊಡನೆ ಸಂಗವ ಮಾಡಿದಡೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ. ಬಲ್ಲವರೊಡನೆ ಸಂಗವ ಮಾಡಿದಡೆ ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸಂಗವ ಮಾಡಿದಡೆ ಕರ್ಪುರದ ಗಿರಿಯನುರಿಕೊಂಬಂತೆ.” ಅಜ್ಞಾನಿಗಳೊಡನೆ ಸಂಗ ಮಾಡಿದರೆ ಕಲ್ಲು ಹೊಸೆದು ಕೆಸರನ್ನು ತೆಗೆದುಕೊಂಡಂತೆ, ಒಳ್ಳೆಯ ವ್ಯಕ್ತಿಗಳ ಸಂಘ ಮಾಡಿದರೆ ಮೊಸರು ಬಿಟ್ಟು ಬೆಣ್ಣೆ ತೆಗೆದುಕೊಂಡಂತೆ ಎಂದಿದ್ದಾರೆ.
ಹೀಗೆ ವಚನಗಳು ಬದುಕಿನ ಉದ್ದಕ್ಕೂ ಮಾರ್ಗದರ್ಶನ ಮಾಡುವ, ನಡೆವ ಹಾದಿಯಲ್ಲಿ ಬೆಳಕನ್ನು ತೋರುವ ಕೈ ದೀವಟಿಗೆಗಳಾಗಿವೆ.
ಇಡೀ ನಮ್ಮ ವ್ಯಕ್ತಿತ್ವ ರೂಪಿಸುವ ಬಸವಣ್ಣನವರ ಈ ಕೆಳಗಿನ ಒಂದು ವಚನ ಸಾಕು- ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.” ಈ ವಚನದಂತೆ ಬದುಕಿದ ವ್ಯಕ್ತಿ ಪರಿಪೂರ್ಣ ಆಗದೆ ಇರುತ್ತಾನೆಯೇ?
ವಚನ ಸಾಹಿತ್ಯದ ಅಧ್ಯಯನದಿಂದ ಪರಿಪೂರ್ಣತೆಗೆ ಸಾಗುವ ಪ್ರಯತ್ನದಲ್ಲಿ ಈ ಒಂದೊಂದೇ ಸರಳ ಹೆಜ್ಜೆಗಳನ್ನಿಟ್ಟರೆ ಸಾಕು… ಶರಣರ ಹಾದಿ ನಮ್ಮದೂ ಆಗುತ್ತದೆ.
***
ಮುಹೂರ್ತ
ಸಾಮಾನ್ಯವಾಗಿ ನಾವೆಲ್ಲಾ ಶುಭ ಕಾರ್ಯ ಮಾಡುವಾಗ ಒಳ್ಳೆಯ ಮುಹೂರ್ತ ಕೇಳಿಯೇ ಆರಂಭ ಮಾಡುತ್ತೇವೆ. ಹಾಗಾದರೆ ಶುಭ ಮುಹೂರ್ತದಲ್ಲಿ ಮಾಡಿದ ಕೆಲಸ ಕಾರ್ಯಗಳು ಶುಭವನ್ನು ಕಂಡಿವಿಯೇ ಎಂಬುದನ್ನು ಪುರಾಣಗಳ ಆಧಾರದಲ್ಲಿ ಅವಲೋಕಿಸೋಣ-
ದೇವಾನುದೇವತೆಗಳು ಇಟ್ಟ ಮುಹೂರ್ತದಲ್ಲಿ ದಕ್ಷ ಯಜ್ಞ ಮಾಡಿದ. ಆದರೆ ಆ ಯಜ್ಞ ಸಾಂಗೊಪಾಂಗವಾಗಿ ನಡೆಯಿತೇ ಅಂತ ನೋಡಿದರೆ ಯಜ್ಞ ನಡೆಯುವುದು ಹೋಗಲಿ ಸ್ವತಃ ದಕ್ಷನ ಪ್ರಾಣವೇ ಹೋಯಿತು.
ಒಳ್ಳೆಯ ಮುಹೂರ್ತದಲ್ಲಿ ಏಕೆ ಹೀಗಾಯಿತು?
ರಾಮ ಸೀತೆಯರ ವಿವಾಹವು ವಶಿಷ್ಠ ವಿಶ್ವಾಮಿತ್ರರಂತಹ ದೇವ ಋಷಿಗಳು ನಿಗದಿಪಡಿಸಿದ ಮುಹೂರ್ತದಲ್ಲಿಯೇ ಆಯಿತು. ಆದರೆ ಅವರ ಸಂಸಾರ ಚನ್ನಾಗಿತ್ತೆ?
ಇಲ್ಲವೇ ಇಲ್ಲ!
ವನವಾಸ, ರಾವಣನಿಂದ ಸೀತೆಯ ಅಪಹರಣ, ಮತ್ತೆ ರಾಮ ಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸಿದ್ದು, ಲವಕುಶರ ಜೊತೆಗೆ ರಾಮನ ಕಾದಾಟ, ನಂತರ ಅದರೂ ಸೀತೆ ರಾಮನ ಜೊತೆಗೆ ಹೋಗದೆ ಭೂಗರ್ಭ ಸೇರಿದ್ದು… ಒಳ್ಳೆಯ ಮುಹೂರ್ತದಲ್ಲಿ ಮದುವೆ ಆದ ಇವರ ಜೀವನ ಹೀಗಾಗಬಾರದಿತ್ತು ಅಲ್ಲವೇ?
ಶ್ರೀ ರಾಮನ ಪಟ್ಟಾಭಿಷೇಕ ಮಹೋತ್ಸವವನ್ನು ವಸಿಷ್ಠರೇ ಮುಹೂರ್ತ ಗೊತ್ತುಪಡಿಸಿ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಅಲ್ಲಿ ರಾಮನ ಪಟ್ಟಾಭಿಷೇಕ ನಡೆಯದೆ ರಾಮ ವನವಾಸಕ್ಕೆ ಹೋಗಬೇಕಾಯಿತು. ವಸಿಷ್ಠರು ಇಟ್ಟ ಮುಹೂರ್ತ, ಆದರೂ ಏಕೆ ರಾಮ ಕಾಡಿಗೆ ಹೋಗುವಂತಾಯಿತು ಚಿಂತಿಸಿ.
ಶ್ರೀ ಕೃಷ್ಣ ಇಟ್ಟ ಮುಹೂರ್ತದಲ್ಲಿ ಪಾಂಡವರಿಗೆ ಪಟ್ಟಾಭಿಷೇಕ ಆಯಿತು. ಆದರೆ ಪಾಂಡವರೆಲ್ಲರೂ ವನವಾಸಕ್ಕೆ ಹೋಗಬೇಕಾಯಿತು. ಶ್ರೀಕೃಷ್ಣನಂತಹ ದೇವರೇ ಇಟ್ಟ ಮುಹೂರ್ತದಲ್ಲಿ ಪಾಂಡವರಿಗೆ ಒಳ್ಳೆಯದು ಆಗದೆ ಕೆಟ್ಟದ್ದು ಆಯಿತು.
ಹಾಗಾದರೆ ಒಳ್ಳೆಯ ಮುಹೂರ್ತ ಇಲ್ಲವೇ ಅಂದರೆ, ಇದೆ ಒಳ್ಳೆಯ ಮುಹೂರ್ತ ನಾವೇ ಸೃಷ್ಟಿ ಮಾಡಿಕೊಳ್ಳಬಹುದು ಇದಕ್ಕಾಗಿ ಯಾವುದೇ ಜೋತಿಷಿ ಬಳಿ ಹೋಗಬೇಕಿಲ್ಲ. ಎಲೆ, ಅಡಿಕೆ, ದಕ್ಷಿಣೆ ಕೊಡಬೇಕಿಲ್ಲ. ಒಳ್ಳೆಯ ಮುಹೂರ್ತವನ್ನು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಕೆಲವಾರು ಉದಾಹರಣೆ ಮೂಲಕ ನೋಡೋಣ-
ಓದುವ ಸಮಯದಲ್ಲಿ ಯುವಕ/ ಯುವತಿಯರು ಕೆಟ್ಟ ಹವ್ಯಾಸದ ಕಡೆಗೆ ಗಮನ ಕೊಡದೆ ತಮ್ಮ ವಿದ್ಯಾಭ್ಯಾಸದ ಕಡೆಗೆ ಲಕ್ಷ್ಯ ಕೊಟ್ಟರೆ ಅದೇ ಶುಭ ಮುಹೂರ್ತ.
ದುಡಿಯುವ ಸಮಯದಲ್ಲಿ ಸಾಕಷ್ಟು ಹಣ ಸಂಪಾದನೆ ಆದರೂ ಅದನ್ನು ದುಂದು ವೆಚ್ಚ ಮಾಡದೆ ಸಮಾಜಮುಖಿ ಕಾರ್ಯಗಳಿಗೆ ಬಳಸಲು ನಿರ್ಧಾರ ತೆಗೆದುಕೊಂಡ ಗಳಿಗೆ ಇದೆಯಲ್ಲ, ಇದೇ ಅತ್ಯಂತ ಶುಭ ಮುಹೂರ್ತ.
ಜೇವನವೆಂಬ ಹೋರಾಟದಲ್ಲಿ ಹಲವು ಬಾರಿ ಸೋತರೂ ಧೃತಿಗೆಡದೆ ಅದೇ ಛಲದಿಂದ ತಮ್ಮ ಹೋರಾಟ ಮುಂದುವರಿಸುವ ನಿರ್ಧಾರ ತೆಗೆದುಕೊಂಡ ಮುಹೂರ್ತವೇ ಶುಭ ಮುಹೂರ್ತ.
ಒಬ್ಬ ರಾಜಕಾರಣಿ ತನಗೆ ಭ್ರಷ್ಟಾಚಾರ ಮಾಡುವ ಅವಕಾಶ ಸಿಕ್ಕರೂ ಆ ಹಾದಿ ಹಿಡಿಯದೇ ಜನೋಪಯೋಗಿ ಕಾರ್ಯ ಮಾಡುವ ನಿರ್ಧಾರ ತೆಗೆದುಕೊಂಡ ಗಳಿಗೆಯೇ ಶುಭ ಮುಹೂರ್ತ.
ಒಬ್ಬ ಅಧಿಕಾರಿ ತನ್ನ ಇತಿಮಿತಿಯಲ್ಲಿ ಕಾನೂನು ರೀತಿ ಎಷ್ಟು ಸಾಧ್ಯವೋ ಅಷ್ಟು ಪ್ರಾಮಾಣಿಕವಾಗಿ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿರ್ಧಾರ ತೆಗೆದುಕೊಂಡ ಸಮಯವೇ ಶುಭ ಮುಹೂರ್ತ.
ಪರೀಕ್ಷೆಯಲ್ಲಿ ಪೇಲಾದ ವಿದ್ಯಾರ್ಥಿಗಳು ಆತ್ಮಹತ್ಯೆ ಎಂತಹ ನಿರ್ಧಾರ ತೆಗೆದುಕೊಳ್ಳದೆ ಮತ್ತೆ ಚನ್ನಾಗಿ ಓದುವ ನಿಶ್ಚಯ ಮಾಡಿದ ಗಳಿಗೆಯೇ ಶುಭ ಗಳಿಗೆ.
ಒಬ್ಬ ರೈತ ಸತತವಾಗಿ ಬೆಳೆ ನಾಶವಾದರೂ ಪುನಃ ಕೃಷಿಕ್ಷೇತ್ರದಲ್ಲಿ ತನ್ನ ಸಾಧನೆ ಮುಂದುವರೆಸಲು ತೆಗೆದುಕೊಂಡ ಗಳಿಗೆ, ಒಬ್ಬ ಉದ್ಯಮಿ ತನ್ನ ಯಶಸ್ಸಿನ ಉತ್ತುಂಗದಿಂದ ಒಮ್ಮೆಲೇ ಪಾತಳಕ್ಕಿಳಿದರೂ ನಾನು ಗೆಲ್ಲುವೆನೆಂದು ತನ್ನ ಹೋರಾಟ ಮುಂದುವರೆಸಲು ನಿರ್ಧಾರ ಕೈಗೊಂಡ ಗಳಿಗೆ, ಒಬ್ಬ ಸೈನಿಕ ಎಂಥದೇ ಪರಿಸ್ಥಿತಿಯಲ್ಲೂ ಶತೃ ಸೈನಿಕನ ಮುಂದೆ ಸೋಲೊಪ್ಪಿಕೊಳ್ಳದೇ ತನ್ನ ಹೋರಾಟ ಮುಂದುವರೆಸಲು ತೆಗೆದುಕೊಂಡ ದಿಟ್ಟ ನಿರ್ಧಾರದ ಗಳಿಗೆ, ತನಗೆ ಎಷ್ಟೇ ಅವಮಾನ ಆದರೂ ಅದೇ ಜನಗಳ ಮುಂದೆ ಸನ್ಮಾನ ಮಾಡುವ ಸಾಧನೆ ಮಾಡುವ ಛಲ ತೊಡುವ ಗಳಿಗೆ ಇದೆಯಲ್ಲ ಆ ಗಳಿಗೆಯೇ ಶುಭ ಗಳಿಗೆ.
ಹೀಗೆ ಪ್ರತಿಯೊಬ್ಬರ ಜೀವನದಲ್ಲಿ ನಮಗೆ ನಾವೇ ಒಳ್ಳೆಯ ಮುಹೂರ್ತ ಮತ್ತು ಕೆಟ್ಟ ಮುಹೂರ್ತ ನಿಗದಿಪಡಿಸಿಕೊಳ್ಳುವ ಅವಕಾಶ ನಮಗಿದೆ. ಇಂತಹ ಸಂದರ್ಭದಲ್ಲಿ ನಾವು ಹೇಗೆ ನಡೆದುಕೊಂಡಿದ್ದೇವೆ ಎಂಬುದನ್ನು ಯೋಚಿಸಬೇಕು. ನಮ್ಮೆಲ್ಲರ ಜೀವನದಲ್ಲಿ ಕಷ್ಟನಷ್ಟಗಳು, ದುಃಖ, ದಮ್ಮಾನಗಳು, ಅಪಮಾನ, ಅಗೌರವಗಳು, ವಂಚನೆ, ಮೋಸಗಳು, ಸೋಲು, ಸವಾಲುಗಳು ಬಂದಿವೆ ಮತ್ತು ಬರುತ್ತವೆ. ಆಗ ನಾವು ಜೋಯಿಸರ ಬಳಿ ಹೋಗಿ ಅವರು ಕೊಡುವ ತಾಯತ, ನೂಲಿನ ದಾರ, ನಿಂಬೆಹಣ್ಣು ಇಂತವುಗಳನ್ನು ತೆಗೆದುಕೊಂಡು ಒಳ್ಳೆಯ ಮುಹೂರ್ತಕ್ಕೆ ಕಾಯದೇ ನಾವೇ ದೃಢನಿರ್ಧಾರ ತೆಗೆದುಕೊಂಡು ಒಳ್ಳೆಯ ಮುಹೂರ್ತ ಯಾವುದೆಂದು ಗೊತ್ತುಪಡಿಸಿಕೊಳ್ಳಬೇಕು.
ಮಗನ ಮದುವೆಯ ತೊಡಗಿದಾಗ ಎಡಬಲದ ಗುರುಹಿರಿಯರನು ಉದಾಸೀನವ ಮಾಡಿ, ಪೊಡವಿಗೆ ಕಿರಿದಾಗಿ ಇರುವ ಎಡಗ ವಿಪ್ರನ ಜೋಯಿಸನ ಕರೆಸಿ ಕರವಂ ಮುಗಿದು, ಎಲೆ ಅಡಿಕೆ ಕಾಂಚಾಣವ ಕೊಟ್ಟು ಎಡರು ಬಾರದ ಕಂಟಕವ ಕಳದು ಶಡಗರ ಸಾಮ್ರಾಜ್ಯ ಉಚ್ಚಹ ಮದುವೆ ಮಾಂಗಲ್ಯದ ಶುಭಮುಹೂರ್ತ ಶುಭದಿನ, ಶುಭತಾರೆ, ಶುಭಲಗ್ನ, ಶುಭವೇಳೆ ಬೆಸಗೊಂಡು ಮದುವೆಯ ಮಾಡುವ ಶಿವಭಕ್ತರಿಗೆ ಭವಭವಾಂತರದಲ್ಲಿ ಮೀನ ಮೊಸಳಿ ಏಡಿ ಕಪಿಯ ಬಸುರಲ್ಲಿ ಹುಟ್ಟಿ ಸತ್ತು ಕಣ್ಣ ಕಾಣದೆ ಕತ್ತಿ ಸೂಕರ ಶ್ವಾನನ ಜನ್ಮವೆ ಪ್ರಾಪ್ತಿ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ -ನಿರಾಲಂಬ ಪ್ರಭುದೇವ.
Comments 4
ಗಂಗಾಧರ ಜೋಗಿನ್
Jun 15, 2023ಶರಣರ ಹೆಜ್ಜೆಯಲ್ಲಿ ನಡೆಯಲು ಸಹಾಯವಾಗುವ ಸಲಹೆಗಳು👉
Shashikumar Patil
Jun 23, 2023ನಿಜಕ್ಕೂ ಜೀವನದ ಎಂಥದೇ ಪರಿಸ್ಥಿತಿಗಳಲ್ಲೂ ನೆರವಾಗುವ, ಕೈ ಹಿಡಿದು ನಡೆಸುವ ಶಕ್ತಿ ವಚನಗಳಲ್ಲಿದೆ.
ಬೀರೇಶ್ವರ ಹುಬ್ಬಳ್ಳಿ
Jun 23, 2023ಒಳ್ಳೆಯ ಮಹೂರ್ತ, ಕೆಟ್ಟ ಮಹೂರ್ತ ಎನ್ನುವುದು ಇಲ್ಲವೇ ಇಲ್ಲ, ಪಂಚಾಂಗದ ಓದು ಶರಣರಿಗೆ ಇಲ್ಲವೇ ಇಲ್ಲ. ಸ್ವಲ್ಪ ಆಳವಾಗಿ ಯೋಚಿಸಿದರೂ ಇದೆಲ್ಲಾ ಮೂಢ ನಂಬಿಕೆಯಲ್ಲದೆ ಬೇರೇನೂ ಅಲ್ಲ ಎಂಬುದು ಗೊತ್ತಾಗುತ್ತದೆ.
Jagadeesh Haliyal
Jun 25, 2023ಶರಣರಿಗೆ ಯಾವುದು ಶುಭ ಗಳಿಗೆ ಎನ್ನುವುದನ್ನು ಬಹಳ ಸರಿಯಾಗಿ ಹೇಳಿದ್ದಾರೆ. ಕಾಲವನ್ನು ಶುಭವಾಗಿಸುವ ದಾರಿಯನ್ನು ತೋರಿಸಿದ್ದಾರೆ.