
ಎರಡು ಎಲ್ಲಿ?
ನಾನು ದ್ವೈತವೋ ಅದ್ವೈತವೋ
ಹೀಗೊಂದು ಪ್ರಶ್ನೆ ಎದ್ದದ್ದೇ ತಡ
ನಡೆದಿತ್ತು ಒಳಗೊಂದು ತಾಕಲಾಟ-
ಒಂದೆಡೆ-
ನೆನಪುಗಳಿಗೆ, ಕನಸುಗಳಿಗೆ
ಪ್ರೀತಿಯ ಕನವರಿಕೆಗಳಿಗೆ
ಎದೆಯ ಹಂಬಲಗಳಿಗೆಲ್ಲ
ನಾನೇ ಕರುಳಿನ ಸೆಲೆ
ಪೋಣಿಸುತಾ ಮಾತುಗಳ
ನಾನಿಲ್ಲದೆ ನೀನಿಲ್ಲ ಎಂದಿತು ಮನ.
ಇನ್ನೊಂದೆಡೆ-
ಪರವಸ್ತುವಿನ ಪ್ರತಿನಿಧಿ ನಾ
ಜಗತ್ಕರ್ತನ ಪ್ರತಿಬಿಂಬ
ಎಲ್ಲದರ ಸೂತ್ರಧಾರಿ
ನಾನೇ ಅಂತಿಮಸತ್ಯ
ಆತ್ಮದ ಪರ ನಡೆದಿತ್ತು
ಚಿತ್ತದ ವಕಾಲತ್ತು.
ಮನವು ಕಲ್ಪನೆಯಾಟ
ಆತ್ಮ ಜ್ಞಾನದ ನೋಟ
ಮನವು- ಆತ್ಮಗಳೆರಡೂ
ನಾನಲ್ಲ ಗುರುವೇ.
ಇಲ್ಲದ ಮನವೂ ಅಲ್ಲ
ಕಲ್ಪಿತ ಆತ್ಮನೂ ಅಲ್ಲ
ಎರಡರ ಹಂಗಳಿದಲ್ಲದೆ
ಆಳ-ನಿರಾಳವಿಲ್ಲ.