Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
Share:
Articles February 7, 2021 ಡಾ. ಎನ್.ಜಿ ಮಹಾದೇವಪ್ಪ

ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ

ಹಿಂದೆ ಬಹಳಷ್ಟು ಕಾಯಕಗಳು (ಉದಾಹರಣೆಗೆ, ಒಕ್ಕಲುತನ, ಕುಂಬಾರಿಕೆ, ನೇಕಾರಿಕೆ, ಇತ್ಯಾದಿ) ಶ್ರಮದಾಯಕವಾಗೇ ಇದ್ದವು. ಅವುಗಳ ಸಂಖ್ಯೆ ಸಹಾ ಸಣ್ಣದಾಗಿತ್ತು ಮತ್ತು ವಂಶಪಾರಂಪರ್ಯವಾಗಿ ಬರುತ್ತಿದ್ದವು. ಅವುಗಳನ್ನು ಅತಿ ಆಸೆಯಿಲ್ಲದೆ, ಸತ್ಯಶುದ್ಧ ಮನಸ್ಸಿನಿಂದ ಮಾಡುವ ಅವಕಾಶವಿತ್ತು. ಬಹಳಷ್ಟು ಫಸಲನ್ನು ಬೆಳೆದ ರೈತರು ಇತರರಿಗೆ ದಾಸೋಹ ಮಾಡುವ ಅವಕಾಶವಿತ್ತು. ವರ್ತಕರೂ ಬಹಳ ಲಾಭಕ್ಕೆ ಆಸೆಪಡದೆ ವ್ಯಾಪಾರವೃತ್ತಿಯನ್ನು ಮಾಡುತ್ತಾ ದಾಸೋಹ ಮಾಡುತ್ತಿದ್ದರು.
ಆದರೆ ಈಗ ಜನಸಂಖ್ಯೆ ಹೆಚ್ಚಾಗಿರುವುದರಿಂದ ಮತ್ತು ಜನರ ಬೇಡಿಕೆಗಳಲ್ಲಿ ವೈವಿಧ್ಯವಿರುವುದರಿಂದ, ಎಲ್ಲರೂ ಹಳೆಯ ವೃತ್ತಿಗಳನ್ನು ಮಾಡಲು ಸಾಧ್ಯವಿಲ್ಲ ಮತ್ತು ಅವಕಾಶವೂ ಇಲ್ಲ. ಈಗ ಈ ಹಳೆಯ ವೃತ್ತಿಗಳ ಜೊತೆಗೆ ಅನೇಕ ಹೊಸ ವೃತ್ತಿಗಳು ಹುಟ್ಟಿಕೊಂಡಿವೆ. ಹಲವಾರು ರೀತಿಯ ಗೃಹೋಪಯೋಗಿ ವಸ್ತುಗಳ ಉತ್ಪಾದನೆ, ಯಂತ್ರಗಳ ಉತ್ಪಾದನೆ, ವಾಹನಗಳ ಉತ್ಪಾದನೆ, ಪುಸ್ತಕಗಳ ಉತ್ಪಾದನೆ, ಇತ್ಯಾದಿ. ಈ ಉತ್ಪಾದಕರದು ಒಂದು ಕಾಯಕವಾದರೆ, ಅವರು ಉತ್ಪಾದಿಸಿದ ವಸ್ತುಗಳನ್ನು ಮಾರುವ ಏಜೆಂಟರದು ಮತ್ತೊಂದು ಕಾಯಕ; ಅವುಗಳ ಲೆಕ್ಕ ಇಡುವ ಗುಮಾಸ್ತರದು ಇನ್ನೊಂದು ಕಾಯಕ, ಇತ್ಯಾದಿ. ಅನೇಕ ವೇಳೆ ಈ ವೃತ್ತಿಗಳಲ್ಲಿ ನಿರತರಾಗಿರುವವರಿಗೆ ಅಗತ್ಯಕ್ಕಿಂತ ಹೆಚ್ಚು ದುಡಿಯದೆ ಇರುವುದು ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ಕಾರನ್ನು ಮಾರುವ ಏಜೆಂಟನಿಗೆ ಕಾರು ಉತ್ಪಾದಕರು ಕಾರಿನ ಬೆಲೆಯ ಶೇ. 10/- ಕಮಿಶನ್ ಕೊಡುತ್ತಾರೆಂದು ಊಹಿಸೋಣ. ಒಂದು ಕಾರಿನ ಬೆಲೆ ನಾಲ್ಕು ಲಕ್ಷ ರೂಪಾಯಿ ಇದ್ದು ಅವನು ಒಂದು ತಿಂಗಳಲ್ಲಿ ಎರಡು ಕಾರುಗಳನ್ನು ಮಾರಿದರೆ ಅವನ ತಿಂಗಳ ಆದಾಯ ರೂ.80,000/. ಇದರಲ್ಲಿ ಅವನ ಅಂಗಡಿಯ ಬಾಡಿಗೆ, ನೌಕರರ ಸಂಬಳ, ಇತ್ಯಾದಿ ಎಂದು ರೂ. 20,000/- ಕಳೆದರೂ ಅವನಿಗೆ ರೂ. 60,000/- ಉಳಿಯುತ್ತದೆ. ಇದರಲ್ಲಿ ರೂ. 5000/- ದಾಸೋಹ ಮಾಡಿಯೂ ಅವನು ಸಂತೃಪ್ತ ಜೀವನ ನಡೆಸಲು ಸಾಧ್ಯವಿದೆ. ಒಂದು ವೇಳೆ, ಆ ಕಾರಿನ ಏಜೆಂಟ್, ಆಯ್ದಕ್ಕಿ ಮಾರಯ್ಯನಂತೆ, ನಾನು ತಿಂಗಳಿಗೆ ಕೇವಲ ಎರಡು ಕಾರು ಮಾರುತ್ತೇನೆ, ಅದಕ್ಕಿಂತ ಹೆಚ್ಚು ಮಾರುವುದು ದುರಾಸೆ, ದುರಾಸೆಯನ್ನು ನನ್ನ ಹೆಂಡತಿಯಾಗಲಿ ಶಿವನಾಗಲಿ ಮೆಚ್ಚುವುದಿಲ್ಲ, ಎಂದು ವಾದಿಸಿದರೆ, ಕಾರು ಉತ್ಪಾದಕರು ಅವನಿಂದ ಏಜೆನ್ಸಿ ಕಿತ್ತುಕೊಂಡು ಹೆಚ್ಚು ಕಾರು ಮಾರುವ ಮತ್ತೊಬ್ಬನಿಗೆ ಕೊಡುತ್ತಾರೆ. ಆದುದರಿಂದ ಏಜೆನ್ಸಿ ಕಳೆದುಕೊಳ್ಳಬಾರದು ಎಂದರೆ ಅವನು ಕಾರು ಉತ್ಪಾದಕರ ಆಸೆಗೆ ಅನುಗುಣವಾಗಿ ತಿಂಗಳಿಗೆ ಹತ್ತು ಕಾರನ್ನೂ ಮಾರಲೇ ಬೇಕಾಗುತ್ತದೆ.
ಅಲ್ಲದೆ, ಆಧುನಿಕರ ಆಸೆಗಳು, ಜೀವನದ ಉದ್ದೇಶಗಳು, ನಿರೀಕ್ಷೆಗಳು ಬದಲಾಗಿವೆ. ಹಿಂದೆ ರೈತರು ತಮ್ಮ ಮಕ್ಕಳು ರೈತರಾಗೇ ಮುಂದುವರಿಯಲು, ಕುಂಬಾರರು ತಮ್ಮ ಮಕ್ಕಳು ಕುಂಬಾರರಾಗೇ ಮುಂದುವರಿಯಲು ಬಯಸುತ್ತಿದ್ದರು. ಈ ಸಲುವಾಗಿ ಅವರು ಅಗತ್ಯಕ್ಕಿಂತ ಹೆಚ್ಚು ದುಡಿಯುವ, ಕೂಡಿಡುವ ಅಗತ್ಯವಿರಲಿಲ್ಲ. ಆದರೆ ಈಗ ರೈತರು, ಕುಂಬಾರರು, ನೇಕಾರರು ತಮ್ಮ ಮಕ್ಕಳು ಪ್ರೊಫೆಸರ್, ಇಂಜಿನಿಯರ್, ಡಾಕ್ಟರ್, ಕಂಪೆನಿ ಮ್ಯಾನೇಜರ್ ಇತ್ಯಾದಿ ಆಗಬೇಕೆಂದು ಬಯಸುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ. ಅಂಥವರು ಅವರ ಶಿಕ್ಷಣಕ್ಕೋಸ್ಕರ ಅಗತ್ಯಕ್ಕಿಂತ ಹೆಚ್ಚು ದುಡಿಯಬೇಕಾಗುತ್ತದೆ; ಒಂದಕ್ಕಿಂತ ಹೆಚ್ಚು ಉದ್ಯೋಗ ಮಾಡಲೂ ಬೇಕಾಗಬಹುದು. ನಾಳಿನ ಸ್ಥಿತಿಗತಿ ಅನಿಶ್ಚಿತವಾಗಿರುವುದರಿಂದ ಕೂಡಿಡುವುದೂ ಅಗತ್ಯವಾಗುತ್ತದೆ. ಅದನ್ನು ದುರಾಸೆ ಅಥವಾ ಸ್ವಾರ್ಥ ಎನ್ನುವಂತಿಲ್ಲ. ಆದರೆ ಅವರು ಅಗತ್ಯಕ್ಕಿಂತ ಹೆಚ್ಚು ದುಡಿದರೂ ತಮ್ಮ ಕಾಯಕದಲ್ಲಿ ಇತರರಿಗೆ ಮೋಸ ಮಾಡದಿರಲು, ಸುಳ್ಳು ಹೇಳದಿರಲು, ಕೊಲೆ, ಕಳ್ಳತನ ಇತ್ಯಾದಿ ಅನೈತಿಕ ದಾರಿಗಳನ್ನು ತುಳಿಯದಿರಲು ಸಾಧ್ಯವಿದೆ. ಅಲ್ಲದೆ, ಇಷ್ಟೆಲ್ಲ ದುಡಿದೂ ಅವರು ದಾಸೋಹ ಮಾಡಲು ಸಾಧ್ಯವಿದೆ.
ಸತ್ಯ ಶುದ್ಧ ಕಾಯಕದಿಂದ, ದುರಾಸೆಯಿಲ್ಲದೆ ಗಳಿಸಿದುದಷ್ಟೇ ದಾಸೋಹಕ್ಕೆ ಯೋಗ್ಯವಾಗುತ್ತದೆ, ಎಂಬುದು ಹನ್ನೆರಡನೆಯ ಶತಮಾನದ ವಚನಕಾರರ ಸ್ಪಷ್ಟ ನಿಲವು. ಈ ತತ್ವಕ್ಕನುಗುಣವಾಗಿ ಕಾಯಕ-ದಾಸೋಹ ಮಾಡುವುದು ಆಗಿನ ಕಾಲದ ಕೆಲವರಿಗಾದರೂ ಸಾಧ್ಯವಿತ್ತು. ರೈತ, ಕಟ್ಟಿಗೆ ಮಾರುವವನು, ಕುಂಬಾರ, ಕ್ಷೌರಿಕ ಮುಂತಾದವರು ಯಾರಿಗೂ ಮೋಸ ಮಾಡದೆ, ಅತಿ ಆಸೆ ಮಾಡದೆ ತಮ್ಮ ಕಸುಬನ್ನು ಮಾಡಬಹುದಿತ್ತು. ಆದರೆ ಇಪ್ಪತ್ತೊಂದನೆಯ ಶತಮಾನದಲ್ಲಿ ಈ ತತ್ವವನ್ನು ಪಾಲಿಸುವುದು ಸಾಧ್ಯವೆ ಎಂಬುದು ಒಂದು ಪ್ರಶ್ನೆಯಾದರೆ, ಅದು ಆವಶ್ಯಕವೆ ಎಂಬುದು ಇನ್ನೊಂದು ಪ್ರಶ್ನೆ. ಅದರಲ್ಲೂ ಈಗಿನ ಉದ್ಯೋಗಗಳು, ಉತ್ಪಾದಕರ ಸ್ಪರ್ಧಾತ್ಮಕ ಮನೋಭಾವ ಇವನ್ನೆಲ್ಲಾ ಗಣನೆಗೆ ತೆಗೆದುಕೊಂಡರೆ ಈ ಪ್ರಶ್ನೆಯ ತೀವ್ರತೆ ಅರ್ಥವಾದೀತು. ಇಂಥ ಪ್ರಸಂಗದಲ್ಲಿ ಸತ್ಯಶುದ್ಧ ಕಾಯಕ ಮಾಡುವುದು, ಅದರಿಂದ ಬಂದುದಷ್ಟನ್ನೇ ದಾಸೋಹಕ್ಕೆ ಬಳಸುವುದು ಹೇಗೆ ಒಂದು ಸಮಸ್ಯೆಯಾಗುತ್ತದೆ ಎಂಬುದಕ್ಕೆ ಒಂದು ಕಾಲ್ಪನಿಕ ಉದಾಹರಣೆಯನ್ನು ತೆಗೆದುಕೊಳ್ಳೋಣ.
ಒಬ್ಬ ಸರಕಾರಿ ಎಂಜಿನಿಯರ್ ತಾನು ಲಂಚ ರೂಪದಲ್ಲಿ ಗಳಿಸಿದ ಹಣದಲ್ಲಿ ಒಂದು ಭಾಗವನ್ನು ಬಡಹುಡುಗರಿಗೆ ಸಹಾಯವಾಗಲೆಂದು ಹಾಸ್ಟೆಲಿಗೆ ದಾನ ಮಾಡುತ್ತಾನೆ. ಅವನು ದಾನ ಮಾಡುವಾಗ ಹೀಗೆ ಹೇಳುತ್ತಾನೆ:
1. ಈ ಹಣ ನನ್ನಲ್ಲಿದ್ದರೆ ಅದನ್ನು ನಾನು ಕುದುರೆ ಜೂಜಿಗೊ ಅಥವಾ ಮತ್ತಾವುದೋ ಕೆಟ್ಟ ಉದ್ದೇಶಕ್ಕೋ ಬಳಸಬಹುದು. ಅದರ ಬದಲು ಬಡಹುಡುಗರಿಗಾದರೂ ಸದುಪಯೋಗವಾಗಲಿ.
2. ನಾನು ದಾನಮಾಡುವ ಉದ್ದೇಶದಿಂದ ಈ ಹಣ ಗಳಿಸಲಿಲ್ಲ. ನಾನು ಗಳಿಸಿದುದು ಕೇವಲ ದುರಾಸೆಯಿಂದ, ಅನೈತಿಕ ವಿಧಾನದಿಂದ ಎಂಬುದು ನನಗೆ ಚೆನ್ನಾಗಿ ಗೊತ್ತು.
3. ಈ ಹಣವನ್ನು ದಾನ ಮಾಡುವುದರಿಂದ ನನಗೆ ಪುಣ್ಯ ಬರುತ್ತದೆ ಎಂದಾಗಲಿ, ದೇವರು ನನ್ನನ್ನು ಕ್ಷಮಿಸುತ್ತಾನೆ ಎಂದಾಗಲಿ ನಾನು ನಂಬುವುದಿಲ್ಲ. ನನ್ನಲ್ಲಿ ಇಷ್ಟೊಂದು ಹಣ ಇದ್ದರೆ ಮುಂದೆ ನನ್ನ ಮಕ್ಕಳು ಕಚ್ಚಾಡುತ್ತಾರೆ; ಮತ್ತು ಅವರು ಅದರಿಂದ ಕೆಡುವ ಸಾಧ್ಯತೆ ಇದೆ. ಆದುದರಿಂದ ಅವರು ಕೆಡುವುದೂ ಬೇಡ, ಆ ಹಣ ನನ್ನಲ್ಲಿರುವುದೂ ಬೇಡ ಎಂಬ ಸ್ವಾರ್ಥಬುದ್ಧಿಯಿಂದ ನಾನು ಈ ಹಣ ದಾನ ಮಾಡುತ್ತಿದ್ದೇನೆ.
ಇಷ್ಟು ಹೇಳಿ ಅವನು ಮಾಡಿದ ದಾನವನ್ನು ಹಾಸ್ಟೆಲಿನ ಲಿಂಗಾಯತ ಅಧಿಕಾರಿಯು ದಾಸೋಹ ಮಾಡುವ ಉದ್ದೇಶದಿಂದ ಸ್ವೀಕರಿಸಬೇಕೋ, ಬೇಡವೊ? ಇದು ಇಂದಿನ ದಿನಮಾನದಲ್ಲಿ ಉದ್ಭವಿಸುವ ಪ್ರಶ್ನೆ.
ದಾನಿ ತಾನು ಅನೈತಿಕವಾಗಿ, ದುರಾಸೆಯಿಂದ ದುಡಿದಿರುವುದಾಗಿ ಒಪ್ಪಿಕೊಂಡಿರುವುದರಿಂದ ಹಾಸ್ಟೆಲಿನವರು ಯಾವ ಸಂದರ್ಭದಲ್ಲಿಯೂ ಅದನ್ನು ಸ್ವೀಕರಿಸಬಾರದು; ಹಾಗೆ ಸ್ವೀಕರಿಸುವುದು ಲಿಂಗಾಯತಧರ್ಮದ ಕಾಯಕ-ದಾಸೋಹ ತತ್ವಕ್ಕೆ ವಿರುದ್ಧ, ಎಂದು ಕೆಲವರು ತಕ್ಷಣ ಉತ್ತರಿಸಬಹುದು. ಆದರೆ ಹೀಗೆ ಆ ದಾನವನ್ನು ನಿರಾಕರಿಸುವುದು ಎಷ್ಟು ಸರಿ? ಆ ಹಣದಲ್ಲಿ ದೋಷವಿದೆಯೆ? ದೋಷವಿರುವುದು ದಾನಿಯಲ್ಲೆ ಹೊರತು, ದಾನದ ಹಣದಲ್ಲಿ ಅಲ್ಲ. ಒಂದು ವೇಳೆ ದಾನಿ ತಾನು ದುರ್ಮಾರ್ಗದಿಂದ ದುಡಿದುದು ಎಂದು ಹೇಳದಿದ್ದರೆ, ಹಾಸ್ಟೆಲಿನವರು ಅದನ್ನು ಸ್ವೀಕರಿಸುತ್ತಿದ್ದರೋ ಇಲ್ಲವೊ?
ಒಂದು ವೇಳೆ ಹಾಸ್ಟೆಲಿನವರು ಅವನ ದಾನವನ್ನು ಸ್ವೀಕರಿಸಿದರೆ ಅವನು ಮತ್ತೆ ಮತ್ತೆ ದಾನ ಮಾಡುತ್ತಾ ಹೋಗುತ್ತಾನೆ; ಅಂಥ ದಾನ ಮಾಡಲು ಅವನು ಮತ್ತೆ ಮತ್ತೆ ದುರ್ಮಾರ್ಗ ಹಿಡಿಯುತ್ತಾನೆ; ಅರ್ಥಾತ್, ಅಂಥವನಿಂದ ದಾನ ಸ್ವೀಕರಿಸುವುದು ಅವನನ್ನು ಹೆಚ್ಚು ಅನೈತಿಕನನ್ನಾಗುವಂತೆ ಪರೋಕ್ಷವಾಗಿ ಪ್ರೇರೇಪಿಸಿದಂತಾಗುತ್ತದೆ – ಎಂದು ಕೆಲವರು ಆಕ್ಷೇಪಿಸಬಹುದು.
ಈ ಆಕ್ಷೇಪಣೆಗೆ ಈ ಉತ್ತರ ಕೊಡಬಹುದು: ದಾನ ಮಾಡುವುದರಿಂದ ಅವನು ಪದೇ ಪದೇ ಅನೈತಿಕನಾಗುತ್ತಾನೆ ಎಂದೇಕೆ ನಾವು ತಿಳಿಯಬೇಕು? ಅವನು ಲಂಚ ಸ್ವೀಕರಿಸುವುದು ತನ್ನ ಸಲುವಾಗಿಯೇ ಹೊರತು ದಾನ ಮಾಡಲಲ್ಲ ಎಂಬುದನ್ನು ನಾವು ಗಮನಿಸಬೇಕು. ಅಂದರೆ, ಅವನು ದಾನ ಮಾಡಿದರೂ ಅನೈತಿಕ ವ್ಯಕ್ತಿ, ಮಾಡದಿದ್ದರೂ ಅನೈತಿಕ ವ್ಯಕ್ತಿ. ದಾಸೋಹಕ್ಕೆಂದು ಲಂಚ ಸ್ವೀಕರಿಸಿ, ಅದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ದಾಸೋಹಕ್ಕೆಂದು ದಾನ ಮಾಡಿದರೆ, ಅವನು ಕಡಿಮೆ ಅನೈತಿಕ, ಅದನ್ನು ದಾಸೋಹಕ್ಕೆ ದಾನ ಮಾಡದೇ ಇದ್ದರೆ ಅವನು ಹೆಚ್ಚು ಅನೈತಿಕ. ಹೀಗಿರುವಾಗ, ದಾನವನ್ನು ಸ್ವೀಕರಿಸುವವರು ಅವನನ್ನು ಅನೈತಿಕನನ್ನಾಗಿ ಮಾಡುವ ಪ್ರಶ್ನೆಯೇ ಬರುವುದಿಲ್ಲ.
ವಾಸ್ತವವಾಗಿ, ನಾವು ಅವನ ದಾನವನ್ನು ಸ್ವೀಕರಿಸದಿದ್ದರೆ ಅವನು ತನ್ನ ಹಣವನ್ನು ದುರ್ವ್ಯಸನಕ್ಕೆ ಖರ್ಚು ಮಾಡುತ್ತಾನೆ. ಆಗ ಅವನನ್ನು ಮತ್ತಷ್ಟು ಅನೈತಿಕನಾಗಲು ನಾವು ಪ್ರತ್ಯಕ್ಷವಾಗಿಯೇ ಪ್ರಚೋದಿಸಿದಂತಾಗುತದೆ. ಆದುದರಿಂದ, ಅವನನ್ನು ದುರ್ವ್ಯಸನಿ ಮತ್ತು ಹೆಚ್ಚು ಅನೈತಿಕನನ್ನಾಗಿ ಮಾಡುವುದರ ಬದಲು ಅವನ ದಾನ ಸ್ವೀಕರಿಸುವುದು ಲೇಸು.
ಒಂದು ವೇಳೆ ನಾವು ಆ ದಾನಿ ಕೊಟ್ಟ ಹಣವನ್ನು ಸ್ವೀಕರಿಸದಿದ್ದರೆ ಅದು ಅವನ ಆಸ್ತಿಯ ಭಾಗವಾಗೇ ಉಳಿಯುತ್ತದೆ. ಆಗ ಅವನ ಹೆಂಡತಿ-ಮಕ್ಕಳು ಅದನ್ನು ಅನುಭವಿಸಬೇಕೋ, ಬೇಡವೋ? ಒಂದು ವೇಳೆ ಅವರು ಲಂಚದ ಹಣ ಮತ್ತು ಆಸ್ತಿಯನ್ನು ತಿರಸ್ಕರಿಸುತ್ತಾರೆ, ಎಂದು ಊಹಿಸೋಣ. ಆಗಲೂ ಅವನಿಗೆ ಮೂರು ವಿಕಲ್ಪಗಳು ಇರುತ್ತವೆ. ಅದನ್ನು ದುರ್ವ್ಯಸನಕ್ಕೆ ಖರ್ಚು ಮಾಡಬಹುದು, ಅಥವಾ ದಾನ ಮಾಡಬಹುದು; ಅಥವಾ ಅದನ್ನು ಸುಡಬೇಕು/ಬಿಸಾಡಬೇಕು. ಹಾಸ್ಟೆಲಿನವರು ಅವನ ದಾನವನ್ನು ಸ್ವೀಕರಿಸುವುದು ತಪ್ಪಾದರೆ, ಬಿಸಾಡಿದುದನ್ನು ಯಾರಾದರೂ ಎತ್ತಿಕೊಂಡರೆ ಅದೂ ತಪ್ಪಾಗುತ್ತದೆ. ಆದುದರಿಂದ, ಲಂಚದ ಹಣವನ್ನು ಯಾವುದಾದರೊಂದು ರೀತಿಯಲ್ಲಿ ನಾಶ ಮಾಡಬೇಕು.
ನಾಶ ಮಾಡುವುದರ ಬದಲು ಬಡವಿದ್ಯಾರ್ಥಿಗಳ ಸಲುವಾಗಿ ದಾನ ಸ್ವೀಕರಿಸುವುದರಲ್ಲಿ ತಪ್ಪೇನಿದೆ?
ಮತ್ತೊಂದು ಸಾಧ್ಯತೆಯನ್ನು ಕಲ್ಪಿಸಿಕೊಳ್ಳೋಣ. ಬಡವಿದ್ಯಾರ್ಥಿಗಳ ಹಾಸ್ಟೆಲಿಗೆ ಸರಕಾರದಿಂದ ಬರಬೇಕಾದ ಅನುದಾನ ಇನ್ನೂ ಬಂದಿಲ್ಲ; ಹುಡುಗರು ನಾಳೆಯಿಂದ ಅನುದಾನ ಬರುವವರೆಗೂ, ಅಂದರೆ ಅನಿರ್ದಿಷ್ಟ ಕಾಲ, ಉಪವಾಸವಿರಬೇಕು. ಹಾಸ್ಟೆಲ್ ಅಧಿಕಾರಿಗೆ ಸಾಲ ಸಿಕ್ಕುವುದಿಲ್ಲ. ಅಂಥ ಸಂದರ್ಭದಲ್ಲಿ ನಮ್ಮ ದಾನಿಯ ಹಣದಿಂದ ಅವರಿಗೆ ಅನ್ನ ನೀಡುವುದು ಏಕೆ ಸರಿಯಲ್ಲ? ಆ ಹಣದಿಂದ ಅವರಿಗೆ ಅನ್ನ ನೀಡದಿದ್ದರೆ ತಪ್ಪಾಗುತ್ತದೆಯೇ ಹೊರತು, ಅನ್ನ ನೀಡಿದರಲ್ಲ.
ಇಂಥ ಸಮಸ್ಯೆಗಳು ಹನ್ನೆರಡನೆಯ ಶತಮಾನದ ಶರಣರಿಗೆ ಬಂದಿರಲಿಲ್ಲವೇನೊ. ಆದರೆ ಇಂದಿನ ದಿನಗಳಲ್ಲಿ ಈ ಸಮಸ್ಯೆ ಮುಖ್ಯವಾದುದು.
ಈ ಸಮಸ್ಯೆಗೆ ಚೆನ್ನಬಸವಣ್ಣನ ಪರಿಹಾರವೇನಿತ್ತು ಎಂಬುದನ್ನು ನೋಡೋಣ: ಒಬ್ಬ ಭಕ್ತ ಕೊಟ್ಟ ಅಪವಿತ್ರ ಹಣವನ್ನು ಮಾಹೇಶ್ವರನು ಕೈಂಕರ್ಯದಿಂದ ದಾಸೋಹಕ್ಕೆ ಬಳಸಿದರೆ ತಪ್ಪಿಲ್ಲ, ಭಕ್ತನ ಅವಗುಣಗಳು ಅದನ್ನು ತಟ್ಟುವುದಿಲ್ಲ (3/84). ಅದೇ ರೀತಿ, ದಾಸೋಹದಲ್ಲಿ ನೀಡುವ ಆಹಾರವನ್ನು ಲಿಂಗಪ್ರಸಾದವೆಂದು ಸ್ವೀಕರಿಸಿದಾಗ ಆ ಹಣದ ಅಪವಿತ್ರತೆ ಇಲ್ಲವಾಗುತ್ತದೆ. ಲಿಂಗದಲ್ಲಿ ಕಲ್ಲಿನ ಕಾಠಿಣ್ಯ, ಜಂಗಮನ ಪೂರ್ವಾಶ್ರಮದ ಜಾತಿ, ಪ್ರಸಾದದಲ್ಲಿ ಅಪವಿತ್ರತೆಗಳನ್ನು ಹುಡುಕುವವರಿಗೆ ನರಕಪ್ರಾಪ್ತಿ.
[ಇಂಥ ಸಮಸ್ಯೆ ಉದ್ಭವಿಸಿದಾಗ ಇಂದಿನ ನಾವು ಏನು ಮಾಡಬೇಕು ಎಂಬುದರ ಕುರಿತು ವಾಚಕ ಮಾಹಶಯರು ಪ್ರತಿಕ್ರಿಯಿಸಬೇಕಾಗಿ ವಿನಂತಿ.]

Previous post ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
Next post ಮನವೆಂಬ ಸರ್ಪ
ಮನವೆಂಬ ಸರ್ಪ

Related Posts

ಒಳಗೆ ತೊಳೆಯಲರಿಯದೆ…
Share:
Articles

ಒಳಗೆ ತೊಳೆಯಲರಿಯದೆ…

May 10, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಏನ ಕಂಡಡೇನಯ್ಯಾ, ತನ್ನ ಕಾಣದಾತ ಕುರುಡ. ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ. ಏನ ಮಾತಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ. ದಿಟದಿಂದ ತನ್ನ ತಾ ಕಾಣಬೇಕು, ದಿಟದಿಂದ ತನ್ನ...
ಕರ್ತಾರನ ಕಮ್ಮಟ  ಭಾಗ-6
Share:
Articles

ಕರ್ತಾರನ ಕಮ್ಮಟ ಭಾಗ-6

December 22, 2019 ಮಹಾದೇವ ಹಡಪದ
ಯಾರ ಮುಖದಲ್ಲೂ ನಗುವಿಲ್ಲ, ಚಲುವಿಲ್ಲ, ಒಲವಿಲ್ಲವಾಗಿ ಯಾವ ಶರಣರ ವಿಧೇಯತೆಯೂ ಅಲ್ಲಿಲ್ಲವಾಗಿ ಬರೀ ಈಟಿ, ಗುರಾಣಿ, ಝಳಪಿಸುವ ಸುಳ್ಳಿಗತ್ತಿ, ಕಠಾರಿ, ಕಿರುಗತ್ತಿ, ಮೊನಚಾದ ಅಲಗು...

Comments 8

  1. Vijaykumar Kammar
    Feb 8, 2021 Reply

    ಇಂದಿನ ದಿನಗಳಲ್ಲಿ ಕಾಯಕ- ದಾಸೋಹ ಉತ್ತಮ ಲೇಖನ.

  2. Sharada A.M
    Feb 9, 2021 Reply

    ನಮ್ಮ ಕಲುಷಿತ ಕಾಯಕ ಮತ್ತು ದಾಸೋಹದ ವ್ಯಾಖ್ಯಾನಗಳು ಶರಣರ ಕಾಯಕ ಮತ್ತು ದಾಸೋಹ ತತ್ವಗಳು ಮುಟ್ಟಲಾರವು.

  3. Dinesh P
    Feb 12, 2021 Reply

    ಇವತ್ತಿನ ಕಾಯಕಗಳು ಹಿಂದಿನಂತಿಲ್ಲ, ಅವು ಒಡ್ಡುವ ಸವಾಲುಗಳು ವಿಭಿನ್ನವಾಗಿವೆ. ಮಾಡಲೇ ಬೇಕಾದ ಅನಿವಾರ್ಯತೆಗಳಿರುತ್ತವೆ. ನೀವು ಗಮನಿಸಿದ ಅಂಶ ಸರಿಯಾಗಿದೆ- ಇಂದಿಗೆ ಸಾಕಿಷ್ಟು ಎಂದು ನಿಲ್ಲಿಸುವಂತೆಯೇ ಇಲ್ಲ ಸರ್.

  4. Jahnavi Naik
    Feb 12, 2021 Reply

    ನನ್ನ ಮಕ್ಕಳ ಹುಟ್ಟುಹಬ್ಬದ ಸಮಯದಲ್ಲಿ ಬಡಮಕ್ಕಳಿಗೆ ಬಟ್ಟೆ- ಪುಸ್ತಕ ಕೊಡಿಸುತ್ತಿದ್ದೇನೆ, ಇದನ್ನೇ ದಾಸೋಹ ಎಂದು ಭಾವಿಸಿದ್ದೇನೆ, ಸರಿಯೇ?

  5. Kiran Varad
    Feb 14, 2021 Reply

    Merely want to remark that you have a very decent internet site , I enjoy the design it actually stands out. I found genuinely superb articles on this internet site.
    I truly appreciate this article post. Much thanks again.

  6. Veena Hendi
    Feb 15, 2021 Reply

    ಕಾಯಕದಿಂದ ಬರುವ ಹಣ ನಮ್ಮ ಇವತ್ತಿನ ಅಗತ್ಯಗಳಿಗೇ ಸಾಲುವುದಿಲ್ಲ, ನಿತ್ಯ ದಾಸೋಹ ಮಾಡು ಎನ್ನುತ್ತಾರೆ ಶರಣರು. ಹೇಗೆ? ಆಪತ್ಕಾಲಕ್ಕೆಂದು ಹಣ ಉಳಿತಾಯ ಮಾಡುವುದು ತಪ್ಪಾಗುತ್ತದೆಯೇ?

  7. Vinutha
    Feb 18, 2021 Reply

    Useful info. Fortunate me I discovered your website by accident, and I am stunned why this accident did not came about earlier! Thank you.

  8. Indira Bidar
    Feb 22, 2021 Reply

    ಬಯಲು ಬ್ಲಾಗಿನ ಲೇಖನಗಳೆಲ್ಲವೂ ತುಂಬಾ educative ಆಗಿರುತ್ತವೆ… ಅನೇಕ ಹೊಸ ಹೊಸ ವಿಷಯಗಳನ್ನು ಮನವರಿಕೆ ಮಾಡಿಕೊಡುತ್ತವೆ. ಈ ತಿಂಗಳ ಲೇಖನಗಳೆಲ್ಲವೂ ಸೂಪರ್.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
ಅನುಭಾವ ಮತ್ತು ಅನಿರ್ವಚನೀಯತೆ
ಅನುಭಾವ ಮತ್ತು ಅನಿರ್ವಚನೀಯತೆ
March 12, 2022
ಭವ ರಾಟಾಳ
ಭವ ರಾಟಾಳ
September 10, 2022
ನಿನ್ನೆ-ಇಂದು
ನಿನ್ನೆ-ಇಂದು
May 10, 2022
ಗುರು ಲಿಂಗ ಜಂಗಮ…
ಗುರು ಲಿಂಗ ಜಂಗಮ…
February 10, 2023
ಅನುಭವ ಮಂಟಪ
ಅನುಭವ ಮಂಟಪ
April 11, 2025
ನನ್ನೆದುರು ನಾ…
ನನ್ನೆದುರು ನಾ…
March 6, 2024
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
Copyright © 2025 Bayalu