ಅಸ್ತಿತ್ವವಾದಿ ಬಸವಣ್ಣ
ಸಮುದಾಯದಲ್ಲಿ ಬದುಕುವ ಮನುಷ್ಯ ಜೀವಿ ತನ್ನ ಪಾಡಿಗೆ ತಾನು ಯಾರ ಹಂಗು ಇಲ್ಲದಂತೆ ಬದುಕಲು ಸಾಧ್ಯವಿಲ್ಲವೇ?
ನಮ್ಮ ಇರುವಿಕೆಯನ್ನು ಸಾರುವುದು ನಮ್ಮ ಜೀವಂತ ದೇಹ ಮಾತ್ರವೇ; ಅದಕ್ಕೆ ಬೇರೆ ಇರುವಿಕೆಯ ಗುರುತಿನ ಉಸಾಬರಿ ಬೇಕಿಲ್ಲ; ಪ್ರಕೃತಿಯಲ್ಲಿನ ಲಕ್ಷಾಂತರ ಜೀವ ಸಂಕುಲಗಳಂತೆ, ಬೇರೆ ಯಾವ ಇರುವಿಕೆಯ ಗುರುತಿನ ಸೋಂಕು ತಗುಲದಂತೆ, ಮನುಷ್ಯ ಸಂಕುಲವೂ ದೇಹದ ಹಸಿವುಗಳನ್ನು ಪೂರೈಸಿಕೊಂಡು ಬದುಕುವುದಕ್ಕೆ ಇಂದಿಗೂ ಸಾಧ್ಯವಿದೆ; ಆದರೆ ಅದಕ್ಕೆ ಒಂದು ಷರತ್ತೂ ಇದೆ: ಮನುಷ್ಯ ಸಮುದಾಯದಲ್ಲಿರುವ ಪ್ರತಿ ಜೀವಿಯೂ, ತನ್ನ ದೇಹದ ಚರ್ಮದ ಭಾಗವೆಂಬಂತೆ ಹತ್ತಿಕೊಂಡಿರುವ ಹತ್ತಾರು ಗೋಜಲು ಗುರುತಿನ ಪೊರೆಗಳನ್ನು ಕಳಚುತ್ತ, ಪ್ರಕೃತಿ ಸಹಜ ಜೀವಸಂಕುಲ ದೇಹಸ್ಥಿತಿ ಪಡೆಯಬೇಕು. ಈ ಇರುವಿಕೆಯ ಗುರುತಿನ ಪೊರೆಗಳು ಕಾಲಾನುಕ್ರಮದಲ್ಲಿ ಒಂದರ ಮೇಲೊಂದರಂತೆ, ಪ್ರತ್ಯೇಕ ಬೆಳೆದುಕೊಂಡಿದ್ದರೆ, ಒಂದೊಂದೇ ಪೊರೆಯನ್ನು ಹರಿದುಕೊಳ್ಳುತ್ತಾ ಹೋಗಬಹುದಿತ್ತು; ಆದರೆ, ಶಿವ ಶಿವಾ! 21ನೇ ಶತಮಾನದಲ್ಲಿ, ನಮ್ಮ ಇರುವಿಕೆಯ ಗುರುತಿನ ಪೊರೆಗಳು ಒಂದರೊಳಗೊಂದು ನೂಲುಗಳಾಗಿ ಹೆಣೆದುಕೊಂಡು ಬಿಟ್ಟಿವೆ. ಜೀವ ಸಂಕುಲ ಸಹಜ ದೇಹದ ಚರ್ಮ ಯಾವುದು? ಅದರ ಭಾಗವೆಂಬಂತೆ ಸಮುದಾಯವು ಹೆಣೆದಿರುವ ಇರುವಿಕೆಯ ಗುರುತಿನ ಪೊರೆಗಳು ಯಾವುವು? ಎಂದು ಗುರುತಿಸಿ ಹರಿದುಕೊಳ್ಳುವ ಸಂಕಟದ ಬಗೆಯೇ ಅಸ್ತಿತ್ವವಾದಿ ಆಧ್ಯಾತ್ಮವಾಗಿದೆ. ಜಗದ ಸಾವಿರಾರು ವರ್ಷಗಳ ಮನುಷ್ಯ ಸಾಮುದಾಯಿಕ ಬದುಕಿನಲ್ಲಿ, ಕಾಲ ದೇಶಗಳಿಗೆ ಅನುಗುಣವಾಗಿ ಈ ಅಸ್ತಿತ್ವವಾದಿ ಆಧ್ಯಾತ್ಮವು ಭಿನ್ನ ಬಗೆಗಳಲ್ಲಿ ಪ್ರಕಟವಾಗಿವೆ. 21ನೇ ಶತಮಾನದ ನಮ್ಮ ಕಾಲ ದೇಶದ ಅಸ್ತಿತ್ವ ಸಂಕಟಗಳಿಗೆ, ಗತ ಕಾಲ ದೇಶಗಳ ಆಧ್ಯಾತ್ಮ ಅಭಿವ್ಯಕ್ತಿಯ ಆಸರೆ ಪಡೆಯಬಹುದೇ? ಪಡೆದು ಹೊಂದಿಸಿಕೊಳ್ಳಲಾಗದೇ?
ನೆಲದ ಪದರುಗಳು ಗತಿಸಿದ ಕಾಲದ ಪಳಿಯುಳಿಕೆಗಳನ್ನು ಹುದುಗಿಸಿ ಇಟ್ಟುಕೊಂಡಿರುವ ಮಾಧ್ಯಮವಾಗಿರುವಂತೆಯೇ ನೆನಪುಗಳು ಗತ ಕಾಲದ ಅರಿವನ್ನು ತಮ್ಮಲ್ಲಿ ಹುದುಗಿಸಿಕೊಂಡಿರುವ ಮಾಧ್ಯಮವಾಗಿರುತ್ತವೆ; “ಭಾಷೆ ಎಂಬುದು ನೆನಪುಗಳ ಸಂವಹನಕ್ಕೆ ಉಪಯುಕ್ತವಾದ ಸಾಧನವಲ್ಲ ಅಂತಹ ನೆನಪುಗಳನ್ನು ಹುದುಗಿಸಿ ಇಟ್ಟುಕೊಂಡಿರುವ ಮಾಧ್ಯಮವೇ ಆಗಿರುತ್ತದೆ” ಎನ್ನುತ್ತಾನೆ ಜರ್ಮನಿಯ ತಾತ್ವಿಕ ವಾಲ್ಟರ್ ಬೆಂಜಮಿನ್. ಈ ಅರ್ಥದಲ್ಲಿ, ಕನ್ನಡ ಭಾಷಿಕ ರಚನೆಗಳು ಕಾಲ ಕಾಲದ ನೆನಪುಗಳನ್ನು ಹುದುಗಿಸಿಕೊಂಡಿರುವ ಮಾಧ್ಯಮವಾಗಿರುತ್ತವೆ ಎಂದು ನಾನಾದರೂ ನಂಬುವೆ. ಇಂತು, ಬಸವಣ್ಣನವರ ವಚನಗಳ ಮೂಲಕ ಸಾಮುದಾಯಿಕ ಬದುಕಿನಲ್ಲಿ ಮನುಷ್ಯ ಜೀವಿ ಅನುಭವಿಸುವ ಅಸ್ತಿತ್ವವಾದಿ ಅಧ್ಯಾತ್ಮವನ್ನು ಅರಿಯುವ ಹಂಬಲ ನನ್ನದು.
12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ವಿದ್ಯಮಾನಗಳ ವೈಚಾರಿಕ ಒಳತೋಟಿಗಳು ಕನ್ನಡ ಭಾಷಿಕರಿಗೆ ಸಿಗುತ್ತಿರುವುದು ಹರಿಹರನ ‘ಬಸವರಾಜ ದೇವರ ರಗಳೆ’, ಪಲ್ಕುರ್ಕಿ ಸೋಮನಾಥನ ‘ಬಸವ ಪುರಾಣ’ ಎಂಬ ಕಾವ್ಯಗಳು, ‘ಶೂನ್ಯ ಸಂಪಾದನೆ’ ಎಂಬ ಹಲವು ಆವೃತ್ತಿಗಳ ಕಥನ-ವಚನಗಳ ಸಂಗ್ರಹ ಹಾಗೂ ಹಲವು ವಿದ್ವಾಂಸರು ಸಂಪಾದಿಸಿರುವ ವಚನ ಸಂಗ್ರಹಗಳಿಂದ. ಭಾಷಿಕ ರಚನೆಗಳಾಗಿ ಅವು ಆ ಕಾಲದ ನೆನಪುಗಳನ್ನು ಹುದುಗಿಸಿ ಇಟ್ಟುಕೊಂಡಿರುವ ಮಾಧ್ಯಮಗಳು. ಇವುಗಳಿಂದ ನಮಗೆ ದೊರಕುವ ಮಾಹಿತಿ ಎಂದರೆ: ಬಸವಣ್ಣ ಹುಟ್ಟಿನಿಂದ ಬ್ರಾಹ್ಮಣ ಜಾತಿಯವರಾಗಿದ್ದರು; ಕಲಚೂರ್ಯ ವಂಶದ ಅರಸು ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಿ ಆಗಿದ್ದರು; ತಮ್ಮ ಕಾಲಕ್ಕೆ ಒದಗಿ ಬಂದ ಶೈವ ಭಕ್ತ ಪರಂಪರೆಗೆ ಒಲಿದು, ಜಾತಿ-ಲಿಂಗ ಭೇದಗಳನ್ನು ಎಣಿಸದ, ಕಾಯಕದಲ್ಲಿ ದೈವವನ್ನು ಕಾಣುವ ಆಧ್ಯಾತ್ಮ ಪಂಥವನ್ನು ಕಟ್ಟುವುದಕ್ಕೆ ಮುಂದಾದರು; ವೈದಿಕಶಾಹಿ ಲೋಕನೀತಿಗೆ ವಿರೋಧಿಯಾಗಿದ್ದ ಈ ಪಂಥದ ಜನಪ್ರಿಯತೆ ಹಾಗೂ ಆಚರಣೆಗಳ ಕಾರಣವಾಗಿ ರಾಜ್ಯಾಧಿಕಾರದ ವಿರೋಧ ಕಟ್ಟಿಕೊಂಡು, ಲೋಕ ಸುಖ ತ್ಯಜಿಸಬೇಕಾಯ್ತು. ಮೇಲ್ಜಾತಿ ಹಾಗು ಉನ್ನತ ಅಧಿಕಾರ ಉಳ್ಳ ಸಾಮಾಜಿಕ ಇರುವಿಕೆಯ ಗುರುತನ್ನು ಹರಿದುಕೊಂಡು, ವಿಸ್ತಾರವಾದ ಮನುಷ್ಯ ಸಮುದಾಯದ ಇರುವಿಕೆಯನ್ನು ತಾನೂ ಪಡೆದು, ಸಮಾಜಕ್ಕೂ ರೂಢಿಸುವ ಆಧ್ಯಾತ್ಮಿಕ ಕೈಂಕರ್ಯದ ಕಾಠಿಣ್ಯವನ್ನು ಬಸವಣ್ಣನವರು ರಮ್ಯಗೊಳಿಸುವುದಿಲ್ಲ, ಧೀರ ರೋಚಕತೆಯ ಭ್ರಮೆಯಾಗಿಸುವುದಿಲ್ಲ; ಮನುಷ್ಯನು ಆರೋಪಿತ ಅಧಿಕಾರಸ್ಥ ಇರುವಿಕೆಯ ವಿಸರ್ಜನೆಗೆ ಮುಂದಡಿಯಿಟ್ಟರೆ ಸಮಾಜವು ಮನುಷ್ಯ ಮಾತ್ರನಿಗೆ ತಂದೊಡ್ಡುವ ಸಂಕಟಗಳ ಅನುಭವವನ್ನು ಬಸವಣ್ಣನವರು ವಚನಗಳನ್ನಾಗಿಸಿದ್ದಾರೆ; ಭಾಷೆಯನ್ನು ಅಂಥಾ ಅಸ್ತಿತ್ವದ ಅರಿವನ್ನು ಅಡಗಿಸಿಟ್ಟುಕೊಂಡ ಮಾಧ್ಯಮವಾಗಿಸಿ ಬಿಟ್ಟಿದ್ದಾರೆ. ಅಂತಹ ವಚನಗಳ ಓದು, ಇಂದಿನ ನಮ್ಮ ಜಾತಿ-ಸಾಮಾಜಿಕ ಅಧಿಕಾರ ಗುರುತಿನ ಇರುವಿಕೆ ಮತ್ತೂ ವಿಸರ್ಜನೆಯ ಗೋಜಲುಗಳನ್ನು ದರ್ಶನ ಮಾಡಿಸುತ್ತವೆ. ಇಂತಹ ಒಂದೆರಡು ವಚನಗಳನ್ನು ಬಸವಣ್ಣನವರ ಭಾಷಿಕ ಕಸುವಿಗೆ ಉದಾಹರಣೆಯಾಗಿ ನೀಡುವೆನು.
ವಚನ-1:
ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು,
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು
ಇಂತಪ್ಪ ಸಂಸಾರ ಶರಧಿಯ ದಾಂಟಿಸಿ
ಕಾಲಾಂತಕನೇ ಕಾಯೋ, ಕೂಡಲಸಂಗಯ್ಯಾ. ||188||
ವಚನ-2:
ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ,
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ,
ದಾಸಯ್ಯ ಶಿವದಾನವನೆರೆಯ ನೋಡಯ್ಯಾ,
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತ ಮಹಿಮ, ಕೂಡಲಸಂಗಮದೇವಾ, ಶಿವಧೋ ಶಿವಧೋ. ||344||
ವಚನ-3:
ಅಪ್ಪನು ಡೋಹರ ಕಕ್ಕಯ್ಯನಾಗಿ,
ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ?
ಮತ್ತಾ ಶ್ವಪಚಯ್ಯನ ಸನ್ನಿಧಿಯಿಂದ
ಭಕ್ತಿಯ ಸದ್ಗುಣವ ನಾನು ಅರಿವೆನಯ್ಯಾ.
ಕಷ್ಟಜಾತಿ ಜನ್ಮದಲ್ಲಿ ಜನಿಯಿಸಿದೆ ಎನ್ನ,
ಎನಗಿದು ವಿಧಿಯೆ ಕೂಡಲಸಂಗಮದೇವಾ. ||343 ||
ವಚನ-4:
ಭಕ್ತಿಯೆಂಬುದ ಮಾಡಬಾರದು,
ಕರಗಸದಂತೆ ಹೋಗುತ್ತ ಕೊರೆಯುವುದು, ಬರುತ್ತ ಕೊಯ್ವುದು
ಘಟಸರ್ಪನಲ್ಲಿ ಕೈದುಡುಕಿದೆಡೆ ಹಿಡಿವುದ ಮಾಬುದೆ
ಕೂಡಲಸಂಗಮದೇವ? ||212||
ವಚನ-1 ರಲ್ಲಿ ಬಸವಣ್ಣನವರು ಸಮಾಜದಲ್ಲಿ ತಮ್ಮ ಇರುವಿಕೆಯ ಗುರುತಿನ ಸ್ಥಿತಿಯನ್ನು ಎರಡು ಸರಳ ಲೌಕಿಕ ವಸ್ತುಗಳ ರೂಪಕಗಳಲ್ಲಿ ಪ್ರಕಟಿಸುತ್ತಾರೆ. ಗುಂಡು ಹಾಗು ಬೆಂಡು ಎರಡೂ ಪರಸ್ಪರ ವಿರುದ್ಧವಾದ ಭೌತಿಕ ಗುಣವುಳ್ಳವು; ಒಂದು ಶರಧಿಯ ತಳಕ್ಕೆ ಮುಳುಗಿಸಿ, ಪಾರಾಗದಂತೆ ಕಟ್ಟಿ ಹಾಕುವುದಾದರೆ, ಮತ್ತೊಂದು ಶರಧಿಯಲ್ಲಿ ತೇಲಿಸಿ, ಗಮ್ಯ ದಡವನ್ನು ಸೇರಿಸಲು ಅನುವಾಗಿರುವಂಥದ್ದು. ಈ ಶರಧಿಯು ಸಂಸಾರವಾಗಿರುವಲ್ಲಿ, ಸಂಸಾರಕ್ಕೆ ತಗ್ಗಿ ಒಗ್ಗುವ ಮನುಷ್ಯರು ಅದರಲ್ಲಿ ಸಹಜವಾಗಿ ಈಜಿ ಇರುವ ಜೀವಿಯಾಗಿರುತ್ತಾರೆ- ಅದರಾಚೆ ಅವರು ಜೀವಿಸಲಾರರು! ಸಮಾಜದಲ್ಲಿ ಜನಿಸುವ ಪ್ರತಿ ಮನುಷ್ಯರೂ ಹುಟ್ಟಾ ಸಂಸಾರಿಗಳು; ಅಂಥವರ ಕಾಲಿಗೆ ಮುಳುಗಿಸುವ ಗುಂಡೂ, ಕೊರಳಿಗೆ ತೇಲಿಸುವ ಬೆಂಡೂ ಎರಡೂ ಯಾಕಾದರೂ ಬೇಕು? ಇನ್ನು ನೈಜ ಸನ್ಯಾಸಿ ಆಗುವವನು ಸಂಸಾರದ ಹಂಗನ್ನು ಪೂರ ತೊರೆದು ಹೊಸದೇ ವಿರಾಗ ಬದುಕಿನ ಇರುವಿಕೆಯ ಹೊಸ ಅಸ್ತಿತ್ವ ಪಡೆಯುವುದಾದರೆ, ತೇಲಲು ಬೆಂಡಾದರೂ ಯಾಕೆ ಬೇಕು! ಈ ವಚನದ ರೂಪಕ ಕಸುವು ಇರುವುದು ಇಲ್ಲಿಯೇ. ಬಸವಣ್ಣನವರು ಸಂಸಾರದ ಇರುವಿಕೆಯ ಜಾತಿ ಅಧಿಕಾರದ ಗುರುತಿನಲ್ಲಿ ಬ್ರಾಹ್ಮಣರಾಗಿದ್ದರು; ಅಂತಸ್ತಿನ ಅಧಿಕಾರ ಇರುವಿಕೆಯ ಗುರುತಿನಲ್ಲಿ ಪ್ರಧಾನಮಂತ್ರಿಯಾಗಿದ್ದರು; ಇವೆರಡೂ ಅಧಿಕಾರಗಳನ್ನೂ ತೊಡೆದು, ಹೊಸ ಸಂಸಾರ ವ್ಯವಸ್ಥೆ ಕಟ್ಟಬೇಕೆಂದು, ಬಸವಣ್ಣನವರು ಸಂಸಾರದೊಳಗಿದ್ದೂ ಸಂಸಾರ ಸಂಹಿತೆಗಳಿಗೆ ಒಗ್ಗದೇ ಸಂಸಾರದ ಆಚರಣೆಗಳನ್ನು ಬದಲಾಯಿಸುವ ಸುಧಾರಣಾವಾದಿ/ ಕ್ರಾಂತಿಕಾರಿ ಕಾಯಕ ಭಕ್ತಿ ಮಾರ್ಗಿಯಾಗಲು ಬಯಸಿದರು. ಇಂಥ ಮನೋಭಾವಸ್ಥರು ತಮ್ಮ ಕೊರಳಿಗೆ ತಮ್ಮ ಆಧ್ಯಾತ್ಮದ ಬೆಂಡು ಕಟ್ಟಿ ಸಂಸಾರಶರಧಿಯಲ್ಲಿ ಈಜಲು ಉತ್ಸಾಹಿತರಾಗಿದ್ದರೆ, ಜಾತಿ-ಅಂತಸ್ತಿನ ಅಧಿಕಾಸ್ತರು ಸುಮ್ಮನೇ ನೋಡುತ್ತಾ ಕೂಡುವರೇ! ಕಾಲಿಗೆ ಸಂಸಾರ ಸಾಗರದಲ್ಲಿ ಮುಳುಗಿಸುವ ಗುಂಡು ಕಟ್ಟದಿಹರೇ! ಕಾಲವು ಬಸವಣ್ಣನಂತಹವರನ್ನು ಬದಲಾವಣೆಯ ನಾಯಕತ್ವಕ್ಕೂ ತಳ್ಳುತ್ತದೆ, ದೇಶಾಧಿಕಾರವು ಅಂಥಾ ನಾಯಕನಿಗೆ ಸಂಸಾರಿಕ ಕಡಿವಾಣವನ್ನೂ ಹಾಕುತ್ತದೆ; ಕಾಲ-ದೇಶಗಳ ಸಂಘರ್ಷದಲ್ಲಿ ಸಿಕ್ಕಿದವರ ಸಂಕಟದ ಸ್ಥಿತಿಯನ್ನು ಬಸವಣ್ಣನವರು ಮುಚ್ಚಿಡದೇ ಬಿಚ್ಚಿ ಭಾಷೆಯಲ್ಲಿಟ್ಟು ಪ್ರಕಟಿಸುವ ಈ ವಚನವು ಇಂದಿನ ಅಂಥಾ ಜೀವಿಗಳ ಸಂಕಟವೂ ಆಗಿಲ್ಲವೇ?
ವಚನ-4, ಸಂಸಾರದ ಅಧಿಕಾರ ಬದಲಾಯಿಸುವ ವಿಚಾರಧಾರಣೆ ಮಾಡುವವರು, ಕಾಲ-ದೇಶಾಧಿಕಾರಗಳ ‘ಘಟಸರ್ಪನಲ್ಲಿ ಕೈದುಡುಕಿಸಿ’ ಅನುಭವಿಸುವ ಪಾಡನ್ನು ಹೇಳುತ್ತದೆ; ಬದಲಾಣೆಯ ವಿದ್ಯಮಾನಗಳಿಗೆ ಚೋದಕವಾದ ವಿಚಾರಗಳಿಗೆ ವಾಹಕಗಳಾದ ಸಮಾಜ ಜೀವಿ ಮನುಷ್ಯರ ಇರುವಿಕೆಯ ಸ್ಥಿತಿಯನ್ನು, ರಮ್ಯತೆ-ಧೀರತ್ವ ರೋಚಕತೆ ತೊರೆದು ಹೇಳುವ ಬಸವಣ್ಣನವರ ಈ ವಚನದ ಓದು, ಇತ್ತೀಚಿನ ವರ್ಷಗಳ ಹಲವು ವಿದ್ಯಮಾನಗಳ ಚಿತ್ರವನ್ನು ನಮ್ಮ ಕಣ್ಣೆವೆಗಳಲ್ಲಿ ತಂದು ನಿಲ್ಲಿಸದೇ!
ಈ ಬಗೆಯಾಗಿ ವಚನಗಳನ್ನು ಓದುವುದಕ್ಕೆ, ಭಾಷೆಯ ರಚನೆಗಳು ಗತದ ನೆನಪುಗಳನ್ನು ಕಾಪಿಟ್ಟುಕೊಂಡಿರುವ ಮಾಧ್ಯಮ ಎಂಬ ನಂಬುಕೆಯಿಂದ ಬಂದದ್ದು ಎಂದು ಮೊದಲಾಗಿ ಆಡಿರುವೆ. ಇದು ಚರ್ಚಾರ್ಹವೆಂದು ಇಟ್ಟುಕೊಂಡು, ನನ್ನ ವಚನ-1, ವಚನ-4 ರ ನಿರೂಪಣೆಯನ್ನು ವಚನ-2 ಮತ್ತು ವಚನ-3ಕ್ಕೆ ಅನ್ವಯಿಸಿಕೊಂಡು ಓದಿದರೆ, ಬಸವಣ್ಣನವರು ಮೇಲ್ಜಾತಿ ಅಧಿಕಾರಸ್ತರಾಗಿ ಅನುಭವಿಸಿದ ಸಂಕಟಗಳ ಅರಿವು ಒಂಚೂರಾದರೂ ದಕ್ಕಿ, ಇಂದಿನ ನಮ್ಮ ಕಾಲದ ಜಾತಿ ಹಿಂಸೆಗಳನ್ನು ಶಮನ ಮಾಡಲಿಕ್ಕೆ ಮಾರ್ಗಗಳು ಸಿಕ್ಕಿಯಾವು ಎಂದು ಹಂಬಲಿಸುವೆ. ಕೊನೆಗೆ ಒಂದು ತುಕಾರಾಮನ ವಚನ ಓದುವೆ:
ಪದಗಳೇ ನಾನುಡುವ ವಸ್ತ್ರಾಭರಣ
ಪದಗಳೇ ನಾನುಂಡು ಬದುಕುವ ಆಹಾರ
ಪದಗಳೇ ನಾನು ಜನಪದಕ್ಕೆ ಹಂಚುವ ಸಂಪತ್ತು
ಪದಗಳೇ ದೇವರು ಪದಗಳಿಂದ ದೇವಾರಾಧನೆ
ಎನ್ನುವ ನಾನು ತುಕಾ.
(ವಚನಗಳನ್ನು ಆಯ್ದುಕೊಂಡಿದ್ದು- ಬಸವಯುಗದ ವಚನ ಮಹಾಸಂಪುಟ
ಪ್ರಧಾನ ಸಂಪಾದಕರು: ಡಾ. ಎಂ.ಎಂ. ಕಲಬುರ್ಗಿ, ಕರ್ನಾಟಕ ಸರಕಾರ, ಕನ್ನಡ ಪುಸ್ತಕ ಪ್ರಾಧಿಕಾರ)
Comments 13
Lingaraj Patil
Sep 9, 2021ವಿಭಿನ್ನ ಲೇಖನ. ಹೊಸ ದೃಷ್ಟಿಕೋನ. ಬಹಳ ಆಪ್ಯಾಯ ಎನಿಸಿತು.
ಉಮಾಪತಿ ಕಲ್ಲೂರು
Sep 9, 2021ಲೇಖನದ ವಿಚಾರಗಳು ಬಹಳ ಗಹನವಾಗಿವೆ. ವಿಚಾರಕ್ಕೆ ಒಡ್ಡುತ್ತವೆ. ಥ್ಯಾಂಕ್ಯೂ ಸರ್.
Ramesh Saligrama
Sep 11, 2021ಅಸ್ತಿತ್ವವಾದಿ ಆಧ್ಯಾತ್ಮಿಕತೆಗೆ ಹೊಸದೇ ಆದ ದೃಷ್ಟಿಕೋನ ನೀಡಿದ ಬರಹ. ಸಮುದಾಯವು ಹೆಣೆದಿರುವ ಇರುವಿಕೆಯ ಗುರುತಿನ ಪೊರೆಗಳನ್ನು ಗುರುತಿಸಿ ಕಳಚಿಕೊಳ್ಳುವ ಸಂಕಟದ ಬಗೆ ಇದು!! ಅದಕ್ಕಾಗಿ ಹನ್ನೆರಡನೆ ಶತಮಾನದ ಬಸವಣ್ಣನವರ ಕಾಣ್ಕೆಯ ಮೊರೆ ಹೋಗಿರುವುದು ತುಂಬಾ ಆಸಕ್ತಿಕರ ಎನ್ನಿಸಿತು. ಕುತೂಹಲದಿಂದ ಓದಿದೆ.
Rajashekhar N
Sep 12, 2021ಕಾಲಲ್ಲಿ ಕಟ್ಟಿದ ಗುಂಡು… ವಚನವನ್ನು ನೀವು ಕಂಡ ಬಗೆ ನನಗೆ ತುಂಬಾ ಹಿಡಿಸಿತು ಶರಣರೇ. ನಾವೆಲ್ಲಾ ಕಾಲಿಗೂ ಕೊರಳಿಗೂ ಹೀಗೆ ಅಗೋಚರ ಪಾಶಗಳನ್ನು ಕಟ್ಟಿಕೊಂಡು ಈಜುತ್ತಿದ್ದೇವೆ.
ಡಾ. ಮಹಾದೇವ ಜವಳಿ
Sep 13, 2021ವಚನಗಳನ್ನು ವಿಚಾರ ಸಾಹಿತ್ಯವಾಗಿ, ಭಕ್ತಿಯ ಗೀತವಾಗಿ, ಸಾಮಾಜಿಕ ಸಮಾನತೆಯನ್ನು ಎತ್ತಿಹಿಡಿಯುವ ಸಾಹಿತ್ಯವಾಗಿ, ಮನುಷ್ಯನ ಮುಕ್ತಿ ಮಾರ್ಗಕ್ಕೆ ದಾರಿ ತೋರುವ ಆಧ್ಯಾತ್ಮವಾಗಿ ನೋಡುವ, ಮಾತನಾಡುವ ಪರಿಕರವಾಗಿ ಕಂಡಿದ್ದೇವೆ. ಆದರೆ ಅಸ್ತಿತ್ವದ ಅರಿವನ್ನು ಅಡಗಿಸಿಟ್ಟುಕೊಂಡ ಮಾಧ್ಯಮವಾಗಿ ಲೇಖಕರು ವಚನಗಳನ್ನು ನೋಡಲು ಪ್ರಯತ್ನಿಸಿದ್ದು ನಿಜಕ್ಕೂ ಆಸಕ್ತಿಕರವಾಗಿದೆ.
Pro Mallikarjuna
Sep 15, 2021ನಿಜ ನಿಜ. ಬಸವಣ್ಣನವರು ಎದುರಿಸಿದ ಮಾನಸಿಕ ಸಂಘರ್ಷಗಳು ಹೇಗಿರಬಹುದೆಂಬ ಊಹೆಯನ್ನು ಓದುಗರಿಗೆ ಬಿಟ್ಟ ಲೇಖಕರು ಸೂಕ್ಷ್ಮ ಸಂವೇದನೆಯುಳ್ಳ ಸಮತಾವಾದದ ರೂಪವೇ ಆಗಿದ್ದ ಬಸವಣ್ಣನವರ ಒಳತೋಟಿಯನ್ನು ವಚನಗಳ ಮೂಲಕ ಗುರುತಿಸಲು ಕೈಹಾಕಿದ್ದಾರೆ. ಈ ನೆಲೆಯಲ್ಲಿ ಇಂತಹ ವಚನಗಳು ಹೇರಳವಾಗಿ ಸಿಗುತ್ತವೆ. ಬದುಕಿನ ಒಂದೊಂದು ಸಂದರ್ಭದಲ್ಲೂ ನಮಗೆ ಅವು ಆಪ್ಯಾಯವೆನಿಸಿಬಿಡುತ್ತವೆ.
Shubha
Sep 18, 2021gOOD ARTICLE
Girish Mysuru
Sep 18, 2021ಅಸ್ತಿತ್ವವಾದಿ ವಿಚಾರಗಳನ್ನು ಹರವಿಕೊಂಡು ಪಾಶ್ಚಾತ್ಯ ಚಿಂತಕರ ವಿಚಾರಗಳನ್ನು ಎಳೆಎಳೆಯಾಗಿ ಚರ್ಚಿಸುತ್ತಾ ವಚನಗಳ ಪ್ರಸ್ತುತತೆಯನ್ನು ಬಹಳ ವೈಚಾರಿಕವಾಗಿ ನೋಡಬಹುದು. ಈ ಲೇಖನ ಅಂತಹದೊಂದು ಒಳನೋಟಕ್ಕೆ ಸಹಾಯವಾಗಬಲ್ಲುದು.
ravikumar Pavate
Sep 20, 2021ಬಸವಣ್ಣನವರು ಸುಧಾರಣಾವಾದಿಗಳಲ್ಲ. ಸುಧಾರಣೆಯು ವ್ಯವಸ್ಥೆಗೆ ತೇಪೆ ಹಚ್ಚುವ ಕೆಲಸ ಮಾಡುತ್ತದೆ. ನಿಸ್ಸಂದೇಹವಾಗಿ ಅವರೊಬ್ಬ ಕ್ರಾಂತಿಕಾರರು. ನೇರ ನಡೆ-ನುಡಿಯ ಮೂಲಕ ಅವರು ಎತ್ತಿಕೊಂಡ ಒಂದೊಂದು ಜನಪರ ನಿಲುವುಗಳೂ ಅವರನ್ನು ಮಹಾ ಮಾನವತಾವಾದಿಯನ್ನಾಗಿ ಇಂದಿಗೂ ನಮಗೆ ತೋರುತ್ತವೆ.
Jayakumar Vijaypur
Sep 23, 2021ನೀವು ಗಮನಿಸಿದಂತೆ ಬಸವಣ್ಣನವರು ತುಳಿದಿದ್ದು ವಿರಳಾತಿ ವಿರಳವಾದ ಹಾದಿಯನ್ನು. ತಮಗೆ ಸಿಕ್ಕ ಅನುಕೂಲಗಳನ್ನು ಎಲ್ಲರಿಗೂ ದಕ್ಕಿಸಬೇಕೆನ್ನುವ ಅವರ ಕಳಕಳಿ, ಅದಕ್ಕಾಗಿ ಅವರು ತುಳಿದ ದುರ್ಗಮ ಹಾದಿ, ಕೊನೆಗೆ ಅದಕ್ಕಾಗಿಯೇ ಎಲ್ಲವನ್ನೂ ಕಳೆದುಕೊಂಡು ಬರಿಗೈಲಿ ಸಂಗಮಕ್ಕೆ ಹೋಗಬೇಕಾದ ಸ್ಥಿತಿಯನ್ನು ನೆನೆದರೆ ಆಶ್ಚರ್ಯವೆನಿಸುತ್ತದೆ. ನಮ್ಮ ದೇಶ ಕಂಡ ಮಹಾ ಮಾನವತಾವಾದಿ ಬಸವಣ್ಣ.
Uday J.K
Sep 26, 2021ಬಸವಣ್ಣನವರನ್ನ, ಅಲ್ಲಮಪ್ರಭುಗಳನ್ನ, ಇತರೆ ಶರಣರನ್ನ ಆಧುನಿಕತೆಯ ಬೆಳಕಲ್ಲಿ ನೋಡುವ ಬರಹಗಳು ಹೀಗೆ ಮೂಡಿಬರಲಿ.
Jahnavi Naik
Sep 28, 2021ವಿಶಿಷ್ಟ ಹೊಳಹುಗಳ ಲೇಖನ, ಚೆನ್ನಾಗಿದೆ. ನಮನಮಗೆ ಬಸವಣ್ಣನವರು ಮುಟ್ಟುವ ಪರಿಯೇ ಹೀಗಿರಬಹುದು. ಅವರವರ ಬೊಗಸೆಯಲ್ಲಿ ಬಸವಣ್ಣನವರ ವಿಚಾರಗಳು ದಾಹ ತಣಿಸುವ ಜಲವಾಗಿ ಖಂಡಿತ ದಕ್ಕುತ್ತಾರೆ ಎನ್ನುವುದಕ್ಕೆ ಈ ಲೇಖನವೂ ಒಂದು ಉದಾಹರಣೆ.
ಮಲ್ಲಿಕಾರ್ಜುನ ಕೆರೂರು
Sep 30, 2021ಜಾತಿ ಹಿಂಸೆಗಳನ್ನು ಶಮನ ಮಾಡುವ ನೂರೆಂಟು ದಾರಿಗಳು ವಚನಗಳಲ್ಲಿವೆ, ಹುಡುಕುವ, ಅವುಗಳನ್ನು ಅನ್ವಯಿಸಿಕೊಳ್ಳುವ ಮನಸ್ಸುಗಳಿದ್ದರೆ. ಮಾನವ ಧರ್ಮದ ಮರುಹುಟ್ಟಿಗೆ ಇಲ್ಲಿ ಧಾರಾಳ ಅವಕಾಶಗಳುಂಟು. ಲೇಖನ ಚೆನ್ನಾಗಿದೆ.