
ಅವಿರಳ ಅನುಭಾವಿ-2
ಇದುವರೆಗೆ:
ಮಹಾಮನೆಯ ಅಂಗಳದಲ್ಲಿ ಬೆಳೆಯುತ್ತಿದ್ದ ಚನ್ನಬಸವನ ತುಂಟಾಟ ಕೆಲವೊಮ್ಮೆ ತಡೆಯಲಸಾಧ್ಯವೆನಿಸುತ್ತಿತ್ತು. ಸದಾ ಏನಾದರೊಂದು ತರಲೆ ಮಾಡುತ್ತಾ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದ ಬಾಲಕನ ಕೈಗೆ ಒಂದು ದಿನ ವಚನವೊಂದನ್ನು ಕೊಟ್ಟು ಅನುಭವ ಮಂಟಪದ ಗೋಷ್ಠಿಯಲ್ಲಿ ಹಾಡಲು ಹೇಳಿದರು ಬಸವಣ್ಣ. ಅದೇನೆನಿಸಿತೋ ಏನೋ ತುಂಟ ಚನ್ನಬಸವ ಆ ವಚನ ಹಿಡಿದು ಹೊರಕೇರಿಯ ಬೀದಿಯನ್ನೆಲ್ಲ ಸುತ್ತಿ ಬಂದ, ಎದುರಿಗೆ ಸಿಕ್ಕ ಶರಣರನ್ನೆಲ್ಲಾ ಪ್ರಶ್ನಿಸತೊಡಗಿದ, ಅಂತರ್ಮುಖಿಯಾದ. ಮುಂದಕ್ಕೆ ಓದಿ-
ಅದ್ಯಾವ ಮಾಯೆ ಕವಿದಿತ್ತೋ.. ನಿದ್ದೆ ಎಂಬುದು ಹಾರಿಹೋಗಿ ವಚನದ ಸಾಲುಗಳೇ ತಲೆಯೊಳಗೆ ಚಿತ್ರಗಳಾಗಿ, ಹಿರಿಯರ ಮಾತುಗಳಲ್ಲಿನ ಅರಿವಿನ ಪಥ ಎಂಬ ವಿಚಾರದ ಹುಳು ಹತ್ತಿರಲಾಗಿ ಆ ನಿದ್ದೆಯೆಂಬುದು ಬಂದೀತಾದರೂ ಹೇಗೆ? ಜಾವ ಎರಡು ಕಳೆದು ಮೂರಕ್ಕೆ ಸರಿಯುವ ಹೊತ್ತಿಗೆ ಕೋಟೆಯ ಮುಂಭಾಗದಲ್ಲಿ ನಾಯಿಗಳು ಹಿಂಡುಹಿಂಡಾಗಿ ಬೊಗಳುವುದು ಕೇಳತೊಡಗಿತು. ದೊಡ್ಡಪ್ಪನ ಮನೆಗೆ ಹೋದಾಗಲೆಲ್ಲ ಬಸವರಸರ ಬಗ್ಗೆ ಅವರಿವರು ಮಾತಾಡುತ್ತಲೇ ಇರುತ್ತಿದ್ದರು. ಪಂಡಿತರ ಮನೆಯಲ್ಲಿ ಕುಳಿತು ವೇದಾಧ್ಯಯನ ಮಾಡುವಲ್ಲಿಯೂ, ಕರಣಿಕರ ಮನೆಯಲ್ಲೂ, ವಾರಿಗೆಯ ಗೆಳೆಯರ ಜೊತೆ ಆಡುವಲ್ಲಿಯೂ, ಅರಮನೆಯ ಮುಖಮಂಟಪದಲ್ಲಿಯೂ ಅವರ ಬಗ್ಗೆಯೇ ಮಾತಾಡುತ್ತಿದ್ದರಲ್ಲಾ… ಅದೆಲ್ಲಾ ನೆನಪಾಗತೊಡಗಿತು.
ಸಮಸ್ತ ಕತ್ತಲೆಯ ಮಸಕವ ಕಳೆದಿಪ್ಪ ಇರವಾ ನೋಡಾ… ಎಂಬ ಮಾತಿನಂತೆ ಎಲ್ಲೋ ದೂರದಲ್ಲಿ ಗುಡ್ಡ-ಮುಗಿಲಗಳು ಒಂದಾದ ಹಾಗೆ ಕಾಣುವ ಆ ಕ್ಷಿತಿಜದಲ್ಲಿ ಸಣ್ಣದೊಂದು ಬೆಳಕಿನ ಕಿಡಿ ಕಂಡಂತಾಯ್ತು. ಇದೇ ಹಳವಂಡದಲ್ಲೇ ನಿದ್ದೆ ಹತ್ತಿದೆಯೋ ಇಲ್ಲವೋ ಎಂಬ ಅನುಮಾನದಲ್ಲೇ ಮಲಗಿದ್ದನಾದ್ದರಿಂದ ಮಗ್ಗುಲ ಬದಲಿಸುವುದು, ಉಸಿರಗರೆಯುವುದು ಸದೋದಿತ ನಡದೇ ಇತ್ತು.
ಕೋಟೆಯ ಮುಂಭಾಗದಲ್ಲಿ ಬೊಗಳುತ್ತಿದ್ದ ನಾಯಿಗಳು ಅರಮನೆಯಿಂದ ಹೊರಟು ಎರಡು ದಿನ್ನೆಯನ್ನೇರಿ ಮೂರನೆಯ ಮಣ್ಣದಿಬ್ಬದ ಮೇಲೆ ಬಂದು ನಿಂತಾಗ ಕಣ್ಣೊಳಗೆ ಅವಿತಿದ್ದ ನಿದ್ದೆ ಚಕ್ಕನೇ ಹಾರಿಹೋಗಿತ್ತು. ಯಾರೋ ಮಹಾಮನೆಯ ಮುಂಬಾಗಿಲ ಮುಂದೆ ನಿಂತು, ‘ಅಯ್ಯಾವರೇ..’ ಎಂದು ಕೂಗಿದರು.
“ಯಾರು..? ಬಂದೆ ತಡಕೋರೀ…”
ಎಂದೆನ್ನುತಾ ಎದ್ದು ಹೊರಗಡೆ ಹೋದಾಗ ವಾರಪಡಸಾಲೆಯಲ್ಲಿ ಮಲಗಿದ್ದ ಮೂರು ಮಂದಿ ತಾಯಂದಿರರಿಗೂ ಎಚ್ಚರವಾಗಿ ಅಚ್ಚರಿಯಿಂದೆಂಬಂತೆ ಒಬ್ಬರ ಮುಖ ಒಬ್ಬರು ನೋಡಿಕೊಂಡರು.
ಯಾರು ಕರೆದರೂ ಓಗೊಡದ, ಹೇಳಿದ್ದು ಕೇಳಿಸಿದರೂ ಕೇಳಿಸಿಕೊಳ್ಳದವನಂತೆ ನಟಿಸುವ, ಎಚ್ಚರಿದ್ದರೂ ಮಲಗಿದವನಂತೆ ಸೊಂಪಾಗಿ ಮಲಗಿಬಿಡುವ ಹುಡುಗ ಹೀಗೆ ಅಸಹಾಯಕರ ಧ್ವನಿ ಕೇಳಿ ಎಚ್ಚರಾದನೇ..! ಮಗರಾಯ ಹೀಗೆ ನಸುಕಿನಲ್ಲಿ ಯಾರೋ ಕರೆದರೆಂದು ಎದ್ದು ಹೋದದ್ದು ಕಂಡು ತಾಯಿ ನಾಗಮ್ಮಳ ಮುಖದಲ್ಲಿ ನಗುಮೂಡಿಸಿತು. ಅಷ್ಟೇ ಅವಸರದಲ್ಲಿ ನೀಲಾಂಬೆ-ಗಂಗಾಂಬೆಯರ ಜೊತೆಗೂಡಿ ಹೊರಗೆ ಬಂದು ನೋಡಿದರೆ..!
ಆಹಾ.. ಆ ದಣಿದು ಬಂದಿರುವ ತೆಲಂಗ ಸೀಮೆಯ ಕುರುಮ ಗೌಡರ ಪಾದಗಳಿಗೆ ನೀರು ಕೊಡುತ್ತಿದ್ದಾನೆ. ಎಳೆಮಕ್ಕಳನ್ನು ಮಡಿಲಲ್ಲಿ ಕಟ್ಟಿಕೊಂಡು ನಿಂತಿರುವ ತಾಯಂದಿರಿಗೆ ಗಂಡಸರ ಹೆಗಲ ಮೇಲಿದ್ದ ಕಂಬಳಿ ಬಿಚ್ಚಿ ಹಾಸಿಕೊಡುತ್ತಿದ್ದಾನೆ.
“ಅಯ್ಯಾ ಕುರುಮಗೌಡಾ.. ಯಾವೂರಾಯ್ತು ನಿಮ್ಮದು..?”
“ತೆಲಂಗ ಸೀಮೆಯ ಕುರುಮದೊಡ್ಡಿಯಿಂದ ಬಂದಿದ್ದೆವು ಅಯ್ಯಾ.”
“ನೀವು ಹಸಿದಿದ್ದೀರಿ, ಮಹಾಮನೆಯವರೆಲ್ಲ ಮಲಗಿದ್ದಾರೋ ಏನೋ… ಸ್ವಲ್ಪ ಹೊತ್ತು ಕಾದರೆ ದಾಸೋಹಕ್ಕೆ ಎಸರಿಡುತ್ತಾರೆ.”
“ಬೇಡವಯ್ಯಾ… ನಾವು ಕುರಿಗಳನ್ನ ಹಂಗ ಹಂಗೆ ಬಿಟ್ಟು ಜೀವಭಯದಿಂದ ಬಂದಿದ್ದೇವೆ. ನಡೆಯಲಾರದ ಮುದುತದುಕರು ದೊಡ್ಡಿಯಲ್ಲಿದ್ದಾರೆ. ಅಣ್ಣಬಸವಣ್ಣನವರನ್ನು ಕಾಣಬೇಕಿದೆ.”
“ಅಣ್ಣನವರು ಬೇಕಿತ್ತೇ…!”
“ಹೌದು ಅಯ್ಯಾ…”
“ಆದರೆ ಅವರು ಇಂದೀಗ ಊರಲ್ಲಿಲ್ಲ. ಮಹಾರಾಜರ ಜೊತೆ ಮಂಗಳವೇಡೆಗೆ ಹೋದರು.”
“ಹೌದಾ ಅಯ್ಯಾ.. ಯಾವಾಗ ಬರುತ್ತಾರೆ?”
“ಬರುವುದು ಎರಡು ಮೂರು ದಿನ ತಡವಾದೀತು…”
ಬಂದಂಥ ಕುರುಮರ ಮುಖ ಬಾಡಿ, ‘ಬಂದ ದಾರಿಗೆ ಸುಂಕವಿಲ್ಲವಯ್ಯೋ ಹೊರಡೋಣವಾ’ ಅಂತ ತಮತಮಗೆ ತಾವು ಮಾತಾಡಿಕೊಳ್ಳುತ್ತಾ, ಇನ್ನೇನು ಹೊರಡಬೇಕು ಮರಳಿ ಎಂದುಕೊಳ್ಳುತ್ತಾ ಎದ್ದು ನಿಂತಾಗ ಚನ್ನಬಸವಣ್ಣನ ಹಿಂದೆ ಅಕ್ಕನಾಗಲಾಂಬಿಕೆ, ಗಂಗಾಂಬಿಕೆ, ನೀಲಾಂಬಿಕೆಯರೂ ಕಾಣಿಸಿದರು. ಹೊರಪಡಸಾಲೆಯಲ್ಲಿ ಮಲಗಿದ್ದ ಆರೇಳು ಶರಣರೂ ಎಚ್ಚರಾದರು. ಆ ಕುರುಮರ ಕತೆ ಅದೇನೆಂದು ಸವಿಸ್ತಾರವಾಗಿ ಕೇಳಲಾಗಿ ಅವರು ಕಲ್ಯಾಣ ಸೀಮೆಯ ಕಡೆಹಳ್ಳಿಯ ಸುತ್ತಲ ಸೀಮೆಯಲ್ಲಿ ಕುರಿ ಮೇಯಿಸುತ್ತಿರುವಾಗ್ಗೆ ಆ ಊರಿನ ಧನಗೊಂಡನೆಂಬ ದಳವಾಯಿ ಕುರುಮರಿಗೆ ಇಲ್ಲದ ಉಪಟಳ ಕೊಡುತ್ತಾ ಸದರಿ ಕಡೆಹಳ್ಳಿಯ ಸೀಮೆಯಲ್ಲಿ ಕುರಿ ಮೇಯಿಸಿದ್ದಕ್ಕಾಗಿ, ಇರುವ ಹಿಂಡಿನಲ್ಲಿ ಅರ್ಧದಷ್ಟು ಕುರಿಗಳನ್ನು ಬಿಟ್ಟು ಹೋಗಬೇಕು ಇಲ್ಲವಾದರೆ ಮನೆಗೊಂದಾಳು ಊಳಿಗಕ್ಕೆ ನಿಲ್ಲಬೇಕೆಂದು ಕಟ್ಟಪ್ಪಣೆ ಮಾಡಿದ್ದಾನಂತೆ. ನಾಳೆಗೆ ನೀರು ಮೇವು ಇರುವಂಥ ಮತ್ತೊಂದು ಸೀಮೆಗೆ ಹೊರಡಬೇಕಿದ್ದ ಕುರುಮರನ್ನು ಕೂಡಿಹಾಕಿದ್ದಾನೆಂದು ಹೇಳಿಕೊಳ್ಳುತ್ತಾ ಅವರೆಲ್ಲ ಬಿಕ್ಕಳಿಸತೊಡಗಿದರು.
“ಈ ಗಾಳಿ ಬೆಳಕು, ಗಿಡ-ಮರ, ಪಶು-ಪಕ್ಷಿ ಪ್ರಾಣಿಗಳೆಲ್ಲರೂ ಸಮಾನರು, ಈ ಭೂಮಿಯ ಮೇಲೆ ನಮಗೆ ಬದುಕಲು ಹಕ್ಕೆಷ್ಟಿದೆಯೋ ಅಷ್ಟೆ ಪಶು-ಪಕ್ಷಿ ಪ್ರಾಣಿಗಳಿಗೂ ಇರುವಾಗ ಅವನ್ಯಾರು ಧನಗೊಂಡ..? ಅಣ್ಣಬಸವಣ್ಣನವರು ಊರಲ್ಲಿ ಇಲ್ಲವೆಂದರೇನಂತೆ ನಡೆಯಿರಿ ನನ್ನ ದೊಡ್ಡಪ್ಪ ಬಲದೇವರಸರ ಮನೆಗೆ ಹೋಗಿ ನ್ಯಾಯ ಕೇಳೋಣ.. ಹುಲಿ, ಹುಲ್ಲೆ, ಚಿಗರಿ, ಕುರಿ, ಕೋಳಿ, ಕಾಡೆಮ್ಮೆಗಳ ಮೇವಿಗೆ ಸುಂಕ ಕೇಳಲು ಅವನ್ಯಾರು..? ಅಧಿಕಾರದ ಮದಕ್ಕೆ ಒಂದು ನ್ಯಾಯಾ ಅಂತಿರೋದಿಲ್ಲೇನು..? ನಡೀರಿ ನನ್ನ ಜೊತೆ”
ಇದೀಗ ತಾನೆ ಅರಳಿದ್ದ ಹೂವಿನ ಪರಿಮಳಕ್ಕೆ ಗಾಳಿಯೊಳಗಿನ ಕ್ರೌರ್ಯದ ಬಿಸಿಗಾಳಿ ತಗುಲಿದ್ದೆ ತಡ ಚನ್ನಬಸವಣ್ಣನ ಮುಖ ಕೆಂಪೇರಿತು. ಮಾತು ಹತೋಟಿ ಮೀರುವಂತೆ ಸಿಟ್ಟಿನ ಭರದಲ್ಲಿ ಆ ಕುರುಮರನ್ನು ಒತ್ತಾಯಿಸಿ ಕರೆದುಕೊಂಡು ಬಲದೇವರಸರ ಮನೆಕಡೆಗೆ ಹೊರಟು ನಿಂತಾಗ, ನೆರೆದವರ ಕಣ್ಣಲ್ಲಿ ಥೇಟ್ ಅದೇ ದಣ್ಣಾಯಕರ ವರಸೆಯೇ ಮತ್ತೊಮ್ಮೆ ಕಂಡರು. ಅಕ್ಕನಾಗಲಾಂಬೆಯು ಮಗನೊಡನೆ ಹೊರಟೆದ್ದು ಚನ್ನಬಸವಣ್ನನೊಡನೆ ರಾಜಬೀದಿಗೆ ಬಂದಳು.
ಆಹಾ… ಬಲದೇವರಸರಿಗೂ ನಿದ್ದೆ ಹಾರಿಹೋಗಿತ್ತು.
ಓಲೆಕಾರನನ್ನು ಕರೆಸಿ, ಚನ್ನಬಸವಣ್ಣನ ಜೊತೆಮಾಡಿ ಕುರುಮರ ದೊಡ್ಡಿಗೆ ಕಳಿಸಿದ್ದಲ್ಲದೆ ಧನಗೊಂಡನೆಂಬ ದಳವಾಯಿಗೆ ಮಹಾರಾಜರ ಮೊಹರೊತ್ತಿದ ಓಲೆಯೊಂದನ್ನು ಬರೆದು ಕಳಿಸಿದರು. ಇಂತಿಲ್ಲಿಗೆ ತೆಲಂಗ ಸೀಮೆಯ ಕುರುಮರು ಅಣ್ಣಬಸವಣ್ಣನನ್ನೂ, ಕಿರಿಯನಾದರೂ ಕಾಳಜಿಯಿಂದ, ಕೇಳುವ ನ್ಯಾಯದಿಂದ ಹಿರಿಯನಂತೆ ಬೆಂಗಾವಲಾಗಿ ನಿಂತ ಚನ್ನಬಸವದಣ್ಣಾಯಕನನ್ನೂ ತಮ್ಮ ಒಗ್ಗುಕುಣಿತದ ಹಾಡೊಳಗೆ ಕಥೆಮಾಡಿ ಹಾಡಿದರು.
******** ******* *********
ಚನ್ನಬಸವಣ್ಣನ ಓದು, ಧ್ಯಾನ, ಅರಿವು ಆಚಾರದ ನಿಲುವು ಕಂಡ ಅಕ್ಕನಾಗಮ್ಮಳೇ ಮಗನಿಗೆ ಲಿಂಗದೀಕ್ಷೆಯನ್ನಿತ್ತಳು ನೋಡಾ.. ಉರಿತಾಗಿದ ಮೃಗ ಒಂದಡಿಯಿಡುವುದೇ..? ತನು ತಾಗಿದ ಸುಖವಗಲುವುದೇ..? ಕೂಡಲಚನ್ನಸಂಗನ ಶರಣನನುಭಾವವರಿದ ಬಳಿಕ ಮತ್ತೆ ಮರಳನು. ಹಾಗೆಯೇ ಶರಣರ ಜೊತೆಗೂಡಿ ಸದಾಚಾರ ರೂಪಿಸಿದನು. ಹೀಗೆ ತನ್ನೊಳಗೆ ತಾನು ಲೋಕ ಮತ್ತು ತತ್ವದ ನಡುವೆ ಇರುವ ಭಕ್ತನ ಆಚಾರ-ವಿಚಾರ ಸದಾಚಾರಗಳ ಇರುವು ಮರೆವನ್ನು ಶೋಧಿಸುತ್ತಾ ನಡೆದನು… ಒಂದು ದಿನ ಊರ ಹೊರಗಿನ ಕೆರೆಯ ಮುಂದಲ ನೇರಳೆ ಮರದಡಿಯ ಪ್ರಶಾಂತ ಸ್ಥಳದಲ್ಲಿ ಕುಳಿತಿರಲಾಗಿ ಈ ಹಿರಿಯರ ಅನುಭಾವ ಮೀರಿದ್ದೊಂದು ಪಡೆಯ ಕಟ್ಟಬೇಕೆಂಬ ಹುಕಿ ಮನದೊಳಗೆ ಹೊಕ್ಕಿತ್ತಲಾ…! ಆಗಲೇ ಮಾಚರಸನೆಂಬ ಮಾಂಡಲಿಕನೊಬ್ಬ ದೂರದಲ್ಲಿ ನಿಂತು ಇವರನ್ನೇ ನೋಡುತ್ತಿದ್ದ. ಒಬ್ಬರೇ ಮಾತಾಡುತ್ತಿದ್ದಾರೆ. ನಗುತ್ತಿದ್ದಾರೆ. ತಾವೇ ಕೇಳಿಕೊಳ್ಳುವ ಪ್ರಶ್ನೆಗೆ ತಾವೇ ಉತ್ತರ ಕಂಡುಕೊಳ್ಳುತ್ತಿದ್ದಾರಲ್ಲ ಯಾರೀತ..?
ಅವನ ಕಲ್ಪನಾಲೋಕದಿಂದ ಎಚ್ಚರಿಸಲು ಮಾಚರಸ.. ಸಣ್ಣದೊಂದು ಕಲ್ಲು ತೆಗೆದುಕೊಂಡು ಕೆರೆಯ ನೀರ ಮೇಲೆ ಎಸೆದು ಕಪ್ಪೆ ಜಿಗಿಸಿದ. ಒಂದೇ ಕಲ್ಲು ಐದು ಸಲ ನೀರನ್ನು ಮುಟ್ಟಿ ನೆಗೆಯುತ್ತಾ ಕೆರೆಯ ನಟ್ಟನಡುವೆ ನಿರಾತಂಕವಾಗಿ ಸೋತು ಮುಳುಗಿತು.
ಅರೇ ಆಚಾರಗಳಲ್ಲಿ ಪಂಚಾಚಾರಗಳು ಐದಲ್ಲವೇ..! ಎಂದುದ್ಘರಿಸಿದ ಚನ್ನಬಸವಣ್ಣ.
ಬಲಶಾಲಿ ಮಾಚರಸ ನೇರಳೆ ಮರದ ಬುಡವನ್ನಿಡಿದು ಅಲ್ಲಾಡಿಸಿದಾಗ ಕಪ್ಪೊಳಗೆ ಮೈದುಂಬಿದ್ದ ಹಣ್ಣುಗಳು ಪುಳಪುಳನೇ ಉದುರಿ ಚನ್ನಬಸವಣ್ಣನ ಮುಂದೆ ರಾಶಿಬಿದ್ದವು.
“ಮಜಭಾಪಟರೇ..! ಇದು ಬಸವಣ್ಣನೇ ಕರುಣಿಸಿದ ಲಿಂಗದಂತಿರುವುದಲ್ಲಾ..! ಓಹೋ ಕಾಣುವ ಕಣ್ಣೊಳಗೆ ಇರುವನಯ್ಯಾ ಕೂಡಲಚನ್ನಸಂಗಯ್ಯಾ.. ಇದು ಉಪಮಿಸಲಾರದ ಘನವೋ ಮಾರಾಯ…” ಎಂದೆನ್ನುತ್ತಾ ಒಳಗೊಳಗೇ ನಕ್ಕ.
ಏನಾದರೂ ಮಾಡಿ ಈತನ ಚಿತ್ತನ್ನು ತನ್ನತ್ತ ಸೆಳೆಯಲೇ ಬೇಕೆಂಬ ಹಠಕ್ಕೆ ಬಿದ್ದ ಮಾಚರಸ ಅಲ್ಲಿಯೇ ದಾರಿಬದಿಯಲ್ಲಿ ನಿಂತಿದ್ದ ಹಾಳು ಬಂಡಿಯನ್ನೆಳೆದು ತಂದು ಅದರ ಕೀಲನ್ನು ಬಿಚ್ಚಿ ಕೆರೆಯೊಳಗೆ ದೂಡಿದರು… ಅದು ಧುಡುಧುಡೂ ಉರುಳುತ್ತುರುಳುತ್ತಾ ಹೋಗಿ ಕಡೆಗೊಮ್ಮೆ ಗಾಲಿಗಳೆರಡಾಗಿ ಮಗುಚಿಕೊಂಡು ಬಿದ್ದಿತು.
“ನಿಜನಿಜ ಪುರಾತನರಾದ ರಾಮನಾಥರ ನುಡಿಯದು ನಿಜ. ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ. ಕಡೆಗೀಲು ಬಂಡಿಗಾಧಾರ. ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ ರಾಮನಾಥ…” ಏನೋ ಹೊಳೆದವರಂತೆದ್ದು ಕೆರೆಯಲ್ಲಿ ಅತ್ತಲಿತ್ತ ಬಿದ್ದಿದ್ದ ಬಂಡಿಗಾಲಿಗಳ ನಡುವೆ ಕೀಲಿಗಾಗಿ ಹುಡುಕತೊಡಗಿದರು.
ಇದೇನು ವಿಚಿತ್ರ ಈ ಮನುಷ್ಯ ಏನನ್ನ ಮಾಡಿದರೂ ತನ್ನ ಯೋಚನೆಗೆ ಜಗತ್ತನ್ನು ಒಗ್ಗಿಸಿಕೊಳ್ಳುತ್ತಾನಲ್ಲ. ಈ ಇಂಥ ಶರಣರಿರುವ ಕಾರಣಕ್ಕೆ ಇಲ್ಲಿನ ವ್ಯಾಪಾರಿಗಳು, ಪುರೋಹಿತ ಪಾಮರರು ತಮಗಿಷ್ಟ ಬಂದ ಹಾಗೆ ಮನಸೋ ಇಚ್ಛೆ ಬದುಕುತ್ತಿದ್ದಾರೆ. ಹೌದು ಈ ಸುಕೋಮಲ ಮೈಕಾಂತಿಯ ತರುಣ ಯಾರಿರಬಹುದು…? ಎಂದು ದಾರಿ ಮೇಲೆ ಹೋಗಿ ಬರುವವರನ್ನು ವಿಚಾರಿಸಲಾಗಿ ಅವರು “ಬಸವಾರಜರ ಸೋದರಳಿಯ ಚನ್ನಬಸವರಸರು” ಎಂದು ಹೇಳಿದಾಗ ಮಾಚಿದೇವರ ಮನಸ್ಸು ತುಂಬಿ ಬಂತು. ಆ ಅರಿವಿನ ಹಾದಿಯನ್ನೆ ಹುಡುಕಿ ಬಂದಿದ್ದ ಮಾಚಿದೇವರಿಗೆ ಒರತೆ ಸಿಕ್ಕಷ್ಟೇ ಖುಷಿಯಾಯ್ತು.
ಅವರಿಬ್ಬರೂ ಮಾತಿಗೆ ತೊಡಗಿದರು, ಮರುದಿನ ಅವರಿಬ್ಬರ ಜೊತೆ ಮೂರನೆಯವ ಜೊತೆಯಾದ ನಾಲ್ಕನೆಯವ, ಐದನೆಯವ ಹೀಗೆ ದಿನಕ್ಕೊಬ್ಬ ಬಿಸಿರಕ್ತದ ತರುಣರು ಜೊತೆಯಾಗುತ್ತಾ ಹೊಸ ಕಣ್ಣೊಳಗೆ ಶರಣರ ನುಡಿಗಳಿಗೆ ಹೊಸತೊಂದ ಚಹರೆ ಮೂಡತೊಡಗಿದ್ದೆ ತಡ ಮಾತಿನೊಳಗಿನ ಮತಿತಾರ್ಥಗಳು ಇಂಬುಗೊಂಡು ನಡೆ-ನುಡಿಗಳಲ್ಲಿ ಸ್ಫಟಿಕತೆ ಬರತೊಡಗಿತು.
ಅರಿವಿಗೆ ಬಾರದ ಎಷ್ಟೋ ಸಂಗತಿಗಳನ್ನು ಈ ಹುಡುಗರು ಚರ್ಚಿಸುತ್ತಿದ್ದಾರಲ್ಲ ಎನಿಸತೊಡಗಿತು ಹಿರಿಯರಿಗೆ. ಅರಿವು ಆಚಾರವಾಗುವ ಬಗೆಯ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಅನುಭವಮಂಟಪದಲ್ಲಿ ಕೇಳತೊಡಗಿದರು. ಸರಿ ಯಾವುದು ತಪ್ಪಾವುದು ಎಂಬ ಪರಾಮರ್ಶೆಯ ಜಟಾಪಟಿ ಶುರುವಾಯ್ತು. ಮಾವ ಬಸವರಸ ಬಿಜ್ಜಳರಾಜನ ಆಸ್ಥಾನದಲ್ಲಿ ದಂಡನಾಯಕರಾದರೆ ಶರಣರಿಗೆ ಚನ್ನಬಸವಣ್ಣನೇ ದಣ್ಣಾಯಕನಾದ. ಕಲ್ಯಾಣದ ತೊಟ್ಟಿಲೊಳಗೆ ಅಸಂಖ್ಯಾತ ಭಕ್ತಗಣಂಗಳು ಬಂದು ತೂಗುಯ್ಯಾಲೆ ಆಡಿ ನಿಜದ ಧರ್ಮದ ನೆಲೆಯೊಳಗಾಡಿ ಹಾಡಿ ಅನುಭಾವದ ದೀವಿಗೆಯಲ್ಲಿ ವಿಚಾರದ ಬೀಜ ಬಿತ್ತಿ ಹೋಗುತ್ತಿರಲು ಇದೀಗ ತಾನೇ ಬಂದಿದ್ದ ಈ ಹೊಸಹುಡುಗರು ಹತ್ತಾರು ಪ್ರಶ್ನೆಗಳನ್ನು ಕೇಳಿತಿಳಿದು ಧರ್ಮದ ನಡೆಗಳನ್ನು ರೂಪಿಸತೊಡಗಿದರು.
ಹರಿವ ನದಿಗೆ ಸಾವಿರಾರು ತೊರೆಗಳು, ಆ ಎಲ್ಲ ತೊರಗಳಲ್ಲೂ ನೀರೇ ನೀರು. ಗುಣವೊಂದೇ ಆದರೂ ಅಸ್ತಿತ್ವವು ಬೇರೆಬೇರೆಯಲ್ಲವೇ! ಆ ನೀರಿನ ಗುಣ ಮತ್ತು ಅಸ್ತಿತ್ವವನ್ನು ಪದರುಪದರಾಗಿ ಬಿಚ್ಚಿ ನೋಡುವ ಕ್ರಮವನ್ನು ಚನ್ನಬಸವಣ್ಣ ಅಣ್ಣನಿಂದಲೇ ಕಲಿತವರು. ಆ ಮಾರ್ಗದಲ್ಲೇ ಹೊರಟ ಮಗನ ಮುಖ ಕಂಡಾಗಲೆಲ್ಲ ತಾಯಿ ನಾಗಲಾಂಬಿಕೆಯ ಕಣ್ದುಂಬಿ ಬರುತ್ತಿದ್ದವು. ಅವನ ಓದು, ಮಾತಿನ ರೀತಿ, ನಡತೆಯ ರೂಪ, ನಿಖರ ನಿಲುವು ಎಲ್ಲವೂ ಚೆಂದ.
ದಿನದಿಂದ ದಿನಕ್ಕೆ ಅವನ ಕೀರುತಿ ದಶದಿಕ್ಕಿಗೂ ಹರಡಿ ಜನಪದರ ನಾಲಗೆಯೊಳಗಾಡುವ ನುಡಿಗಳಲ್ಲಿ ಅವಿರಳ ಜ್ಞಾನಿಯಾಗಿ ತೋರುತ್ತಿರಲು ಅದೊಂದು ದಿನ ಮಹಾರಾಜ ಬಿಜ್ಜಳನು ಮಹಾಮನೆಯ ದಾಸೋಹದ ಪರಿಯನ್ನು ಕಂಡು ಉಂಡು, ಅನುಭಾವದ ಸತ್ಸಂಗದಲ್ಲಿ ಮಿಂದು ಹೋಗುವ ಹಂಬಲದಿಂದ ಬಂದಿದ್ದನಲ್ಲ ಅಂದೇ ಚನ್ನಬಸವಣ್ಣನ ಚುರುಕುತನ ಅವನನ್ನು ಬರಸೆಳೆದಿತ್ತು.
ಆ ದಿವಸ ರಾತ್ರಿ ಅನುಭಾವ ಮುಗಿಸಿ ಬಿಜ್ಜಳರಾಜನು ಹೊರಟುನಿಂತಾಗ ಒಡನೆಯೇ ಬೀಳ್ಕೊಡಲು ಬಂದ ಶರಣರ ನಡುವೆ ನಿಂತಿದ್ದ ಬಸವಣ್ಣನ ಕೈಹಿಡಿದು..
“ಬಸವರಸ.. ನೀನು ಬರೀ ಪವಾಡಪುರುಷ ಅಂತ ಕೇಳಿದ್ದೆನೋ ಮಾರಾಯ. ನೀನು ಕ್ರಾಂತಿ ಪುರುಷ. ಅರಮನೆಗಿಂತ ಮಿಗಿಲಾದ ಶರಣರ ದಂಡೊಂದನ್ನು ಕಟ್ಟಿದ್ದಿಯಾ..! ನನಗಾಗಿ ಈ ಮಹಾಮನೆಯ ಮುತ್ತೊಂದನ್ನು ಅರಮನೆಯ ಕಾವಲು ಪಡೆಗೆ ಕೊಡುವೆಯಾ..?”
“ದೊರೆ.. ನೀವು ಕೇಳುವ ಮುತ್ತು ಅದ್ಯಾವುದು ಅಂತ ನನಗೆ ಗೊತ್ತಾಯ್ತು. ಆ ಮುತ್ತು ಒಪ್ಪಿದರೆ ಖಂಡಿತ ಕಾಯಕಕ್ಕೆ ನೇಮಿಸಿರಿ. ಇಲ್ಲಿ ಎಲ್ಲರೂ ಸ್ವತಂತ್ರರು, ಅವರವರ ಕಾಯಕದ ಆಯ್ಕೆ ಅವರವರದೇ ದೊರೆ..!”
“ಅಂದರ ನಾನು ಬಯಸಿದ ಆ ಮುತ್ತು ಅದ್ಯಾವುದು ಅಂತ ನಿನಗ ಗೊತ್ತಾಯ್ತು..?”
“ಹೌದು ದೊರೆ ಗೊತ್ತಾಯ್ತು…”
“ಹಂಗಾದರ ಆ ಮುತ್ತು ಯಾವುದು ಅಂತ ಬಾಯ್ಬಿಟ್ಟು ಹೇಳೋ ಬಸವಣ್ಣ..?”
“ನೀವು ಬಯಸಿದ ಮುತ್ತು ಚನ್ನಬಸವಣ್ಣನಲ್ಲದೆ ಮತ್ತಾರು ದೊರೆ..!”
“ಎಲಾ ನಿನ.. ನೀ ಖರೇ ಪವಾಡ ಪುರುಷನ ಹೌದೋ ಮಾರಾಯ. ಅದು ಹೆಂಗ ಗೊತ್ತಾಯ್ತು?”
“ದೊರೆ, ನೀವು ಮಹಾಮನೆಗೆ ಬಂದಾಗಿನಿಂದ ನಿಮ್ಮ ಕಣ್ಣು ಚನ್ನಬಸವಣ್ಣನ ಮ್ಯಾಲ ಇತ್ತು. ಈ ಜಗತ್ತಿನೊಳಗ ಯಾರು ಎಲ್ಲಿಯೇ ಹೋದರು ತಮತಮಗ ಬೇಕಾದ್ದನ್ನ ಅವರ ಕಣ್ಣು ಹುಡುಕತಿರತಾವು ಅನ್ನೋ ಮಾತು ಸುಳ್ಳಲ್ಲ. ನೀವು ನಿಮಗ ಬೇಕಾದ ಮುತ್ತು ಆರಿಸಿಕೊಂಡಿರಿ.”
“ಇದಕ್ಕ ಚನ್ನಬಸವಣ್ಣನ ಅಭಿಪ್ರಾಯ ಏನೈತಿ.. ನೀನು ಒಪ್ಪಿದರ ಚನ್ನಬಸವಣ್ಣ, ಈಗಿಂದೀಗ ನೀನು ಅರಮನೆಯ ಕಾವಲುಪಡೆಯ ದಂಡನಾಯಕ ಅಂತ ರಾಜಮುದ್ರೆ ಒತ್ತತೀನಿ.”
ಚನ್ನಬಸವಣ್ಣ, ಸಣ್ಣದೊಂದು ಮುಗುಳ್ನಗೆಯಲ್ಲಿ ಒಪ್ಪಿಗೆ ಸೂಚಿಸಿದಾಗ ಬಿಜ್ಜಳ ಮಹಾರಾಜ… “ಹಂಗಾರ ಮುಂಜಾನಿ ಶಿವಪೂಜೆ ಹೊತ್ತಿಗೆ ಅರಮನೆ ಕಡೆ ಬಾ ಚನ್ನಬಸವಣ್ಣ…” ಅಂತ ವಿನಮ್ರವಾಗಿ ನುಡಿದು ಉಳಿದೆಲ್ಲ ಶರಣರಿಗೆ ನಮಸ್ಕರಿಸಿ ಬಿಜ್ಜಳರಾಜ ಹೊರಟುಹೋದ.
ಆ ದಿವಸ ನಾಗಲಾಂಬಿಕೆಯ ಕಣ್ಣಗಳಲ್ಲಿ ತುಂಬಿದ್ದ ನೀರು ಧಾರೆಯಾಗಿ ಹರಿದವು. ಅದು ಅಳುವೋ ಅಥವಾ ನಗುವೋ.. ಇಲ್ಲಾ ಗಂಡನೆಂಬ ಶಿವಸ್ವಾಮಿ ತನ್ನ ಅನನ್ಯ ದೈವಭಕ್ತಿಯ ಪರಿಣಾಮದಿಂದ ಇದ್ದಕ್ಕಿದ್ದಂತೆ ವೈರಾಗ್ಯ ತಾಳಿ ಕಾಶಿಯಾತ್ರೆಗೆ ಹೊರಟ ದಿನದಿಂದ ಅನುಭವಿಸಿದ ಏಕಾಂತದ ನೋವು, ಅವಮಾನ, ಹೀಯಾಳಿಕೆಯ ಮಾತುಗಳು ಎಲ್ಲವೂ ಆ ಕಣ್ಣೀರಿನಲ್ಲಿ ತೊಳೆದು ಹೋಗುವಷ್ಟು ಅತ್ತಳು.
(ಮುಂದುವರೆಯುವುದು)
Comments 16
Channabasava Angadi
Apr 7, 2020ಚೆನ್ನಬಸವಣ್ಣ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತಿದ್ದಾನೆ. ನನ್ನ ಹೆಸರೂ ಅದೇ. ಈಗ ಬಿಡುವಿನಲ್ಲಿ ವಚನಗಳನ್ನು ಓದುತ್ತಿದ್ದೆ. ಚನ್ನಬಸವಣ್ಣನವರ ವಚನಗಳು ಎಷ್ಟೊಂದು ಪ್ರಬುದ್ಧವಾಗಿವೆ. ಅಷ್ಟು ಚಿಕ್ಕ ವಯದಲ್ಲಿ ಎಂತಹ ಜ್ಞಾನವಿದೆ!!!
SIDDHALINGAIAH TUMKUR
Apr 8, 2020ಕುರುಬರ ಹಾಡುಗಳಲ್ಲಿ ಚನ್ನಬಸವಣ್ಣನವರ ಉಲ್ಲೇಖವಿರುವುದು ಕೇಳಿ ಬಹಳ ಸಂತೋಷವಾಯಿತು. ದಯವಿಟ್ಟು ಬಯಲು ಬ್ಲಾಗಿನಲಲಿ ಅವುಗಳನ್ನು ಓದುಗರ ಜೊತೆ ಹಂಚಿಕೊಳ್ಳಿ ಸರ್.
Shivananda G
Apr 9, 2020ಮಾಚಯ್ಯನವರು ಚನ್ನಬಸವಣ್ಣನವರ ಸಮವಯಸ್ಸಿನವರೇ? ಚನ್ನಬಸವಣ್ಣನವರ ವಾರಿಗೆಯ ಶರಣರ ಬಗೆಗೆ ಬೆಳಕು ಚಲ್ಲಬೇಕೆಂದು ಮಹಾದೇವ ಅವರಲ್ಲಿ ನನ್ನ ಕೋರಿಕೆ. ಕತೆ ತುಂಬಾ ಚನ್ನಾಗಿ ಬರುತ್ತಿದೆ.
Manikanta Dogila
Apr 11, 2020ಚನ್ನಬಸವಣ್ಣ ಮತ್ತು ನಾಗಲಾಂಬಿಕೆಯರ ನಡುವಣ ತಾಯಿ-ಮಗನ ಬಾಂಧವ್ಯವನ್ನು ಹೆಣೆಯುತ್ತಿರುವ ಕತೆ ಕುತೂಹಲ ಮೂಡಿಸಿದೆ. ಎರಡು ಮಹಾ ಚೇತನಗಳು ಹೇಗೆ ಬದುಕಿದ್ದರು ಎನ್ನುವುದೇ ಒಂದು ಸೋಜಿಗವೆನಿಸುತ್ತದೆ ನನಗೆ.
ಭಾವನಾ, ಧಾರವಾಡ
Apr 13, 2020ಸರ್, ಕತೆ ಮತ್ತು ಅದರ ಭಾಷೆ ಎರಡೂ ಬಹಳ ಆಕರ್ಷಕವಾಗಿವೆ. ಶರಣರ ಕತೆಗಳನ್ನೆಲ್ಲಾ ನಾಟಕಗಳನ್ನಾಗಿಸಿ ಎನ್ನುವುದು ತಮ್ಮಲ್ಲಿ ನನ್ನ ವಿನಯಪೂರ್ವಕ ಬೇಡಿಕೆ.
Basavannegowda Hiriyur
Apr 14, 2020ಚನ್ನಬಸವಣ್ಣನ ವ್ಯಕ್ತಿತ್ವವನ್ನು ಕಣ್ಣ ಮುಂದೆ ಕಟೆದು ನಿಲ್ಲಿಸುವಂತ ಕತೆ ಬರೆದಿರುವಿರಿ. ಅಬ್ಬಾ! ಶರಣರ ಕತೆ ಹೇಳಲು ಶರಣನಾಗಿರಲೇ ಬೇಕು!!!
ಕಮಲಾ ಹಿರಿಯೂರು
Apr 17, 2020ಚನ್ನಬಸವಣ್ಣನ ತಂದೆ ಶಿವಸ್ವಾಮಿ ಯಾರು? ಅವರೂ ವಚನ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ? ಅಕ್ಕನಾಗಮ್ಮನವರ ದಾಂಪತ್ಯ ಜೀವನ ಹೇಗಿತ್ತು?… ಸ್ವಲ್ಪ ಗೊಂದಲಕಾರಿಯಾದ ವಿಷಯವನ್ನು ಕತೆಯಲ್ಲಿ ಹೇಗೆ ಹೇಳಲಾಗಿದೆ…. ಕುತೂಹಲದಿಂದ ಕಾಯುತ್ತಿದ್ದೇನೆ.
Girija K.P
Apr 18, 2020ಸಾಕ್ಷಾತ್ ಚನ್ನಬಸವಣ್ಣನೊಡನೆ ಒಡನಾಡಿದಂತೆ ಭಾಸವಾಗುತ್ತಿದೆ. ಸುಂದರ, ಸೊಗಸು ಕತೆ.
L.S.Patil
Apr 21, 2020ಕುರುಮರು ಎಂದರೆ ಕುರುಬರೇ? ಕುರುಬರ ಸಾಹಿತ್ಯವಿದ್ದರೆ ಇಲ್ಲಿ ಹಂಚಿಕೊಳ್ಳುವಿರಾ ಸರ್?
ಮಹಾದೇವ
Apr 23, 2020ಕುರುಮರದ್ದೆ ಒಗ್ಗುಕತಾ ಪರಂಪರೆಯು ತೆಲಂಗಾಣ ರಾಜ್ಯದಲ್ಲಿದೆ. ಅವರು ಬಸವಣ್ಣನವರನ್ನ ಕಾಣಲು ಬಂದ ಉಲ್ಲೇಖವನ್ನು ಬೇಂದ್ರೆಯವರು ತಲೆದಂಡ ಅನ್ವುವ ನಾಟಕ ರಚಿಸಲು ಮಾಡಿಕೊಂಡ ಟಿಪ್ಪಣಿಯೊಳಗೆ ಓದಿದ್ದೆ. ಜೊತೆಗೆ ಒಗ್ಗುಕತೆ ಹೇಳುವ ಕಲೆಯನ್ನು ನಾನು ಡಾ. ಬಸವರಾಜ ಮಲ್ಲಶೆಟ್ಟರ ಜತೆಗೆ ಹೋಗಿ ಅಧ್ಯಯನ ಮಾಡಿಕೊಂಡು (ಕಲಾದಾಖಲೆಗಾಗಿ, ಉಡುಪಿ ರೀಜಿನಲ್ ಸೆಂಟರನಲ್ಲಿ ಆ ವಿಡೀಯೋ ಇದೆ ಎಂದು ಮಲ್ಲಶೆಟ್ಟರ ಸರ್ ಹೇಳ್ತಿದ್ದರು.) ಬಂದಿದ್ದೆವು. ಅದು ತೆಲುಗಿನಲ್ಲಿರುವುದರಿಂದ ಹಾಗೂ ಅ ದಿವಸ ವೀರಗೊಲ್ಲಾಳೇಶನ ಬಗ್ಗೆ ತುಂಬ ಹೊತ್ತು ಮಲ್ಲಶೆಟ್ಟರು ಮಾತಾಡಿದ್ದರು ಕೂಡ. ಜೊತೆಗೆ ಈ ಕುರುಮರ ಆರಾಧ್ಯ ದೈವವೂ ಕೂಡ ಶ್ರೀಶೈಲ ಮಲ್ಲಿಕಾರ್ಜುನೇ ಆದ್ದರಿಂದ ಆ ಮಾತು ಬಂದಿರಬೇಕೆಂದು ಈಗ ಆ ದಿನ ನಡೆದ ಮಾತುಕತೆ ನೆನಪಿಸಿಕೊಂಡಾಗ ನನಗೆ ಹೊಳೆಯಿತು. ಅದು ಮೌಖಿಕ ಪರಂಪರೆಯ ಕಾವ್ಯವಾದ್ದರಿಂದ ತೆಲುಗಿನಲ್ಲಿ ಬಂದಿರಬಹುದಾದ ಆ ಸಂಶೋಧನೆಯನ್ನ ತೆಲುಗು ಬಲ್ಲವರು ದಾಖಲಿಸಿದ್ದರೆ ಅನುವಾದಿಸಬೇಕಷ್ಟೆ.
L.S.Patil
Apr 24, 2020ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಕತೆಯ ಹಿಂದಿನ ನಿಮ್ಮ ಸಂಶೋಧನೆಯ ಬಗ್ಗೆ ಕೇಳಿದ್ದೆ, ಈಗ ಬಹಳ ಖುಷಿಯಾಯಿತು. ಸರ್, ಬೇಂದ್ರೆಯವರೂ ತಲೆದಂಡ ನಾಟಕ ಬರೆದಿದ್ದಾರೆಯೇ? ತಲೆದಂಡ ಬರೆದದ್ದು ಗಿರೀಶ್ ಕಾರ್ನಾಡರಲ್ಲವೇ? ಕ್ಷಮಿಸಿ, ನನಗೆ ಬೇಂದ್ರೆಯವರ ಸಾಹಿತ್ಯದ ಪರಿಚಯ ಅಷ್ಟಾಗಿ ಇಲ್ಲ.
ಮಹಾದೇವ
Apr 27, 2020ಬೇಂದ್ರೆಯವರು ತಲೆದಂಡ ಅನ್ನುವ ನಾಟಕ ರಚಿಸಲು ಟಿಪ್ಪಣಿ ಮಾಡಿಕೊಂಡಿದ್ದರು. ಮತ್ತು ಆ ನಾಟಕಕ್ಕಾಗಿ ಒಂದೆರಡು ಹಾಡುಗಳನ್ನು ಬರೆದಿದ್ದರು. ಆದರೆ ಅದನ್ನು ಅವರಿಗೆ ಬರೆಯಲಾಗಲಿಲ್ಲ.
Naveen JK
Apr 24, 2020ಚನ್ನಬಸವಣ್ಣ ನಮ್ಮ ಯೂತ್ ಐಕಾನ್ ಯಾಕಾಗಬಾರದು ಎಂದು ಮಂಗಳಕ್ಕಾ ಹೇಳುತ್ತಿದ್ದ ಮಾತು ತಮ್ಮ ಕತೆಯನ್ನು ಓದುತ್ತಿರುವಾಗ ನಿಜ ಅನ್ನಿಸತೊಡಗಿತು. ದಯಮಾಡಿ, ಚನ್ನಣ್ಣನವರ ವ್ಯಕ್ತಿತ್ವವನ್ನು ನಮಗೆ ಕನೆಕ್ಟ್ ಆಗುವಂತೆ ಬರೆಯಿರಿ.
Vinay Bengaluru
Apr 27, 2020ಚನ್ನಬಸವಣ್ಣನಿಗೆ ವಯೋ ಸಹಜ ಕಾಮನೆಯ ಭಾವನೆಗಳೇ ಇರಲಿಲ್ಲವೇ? ಅವರ ವಚನಗಳಲ್ಲಿ ಎಲ್ಲಿಯೂ ಅದರ ಸುಳಿವು ಕಾಣಿಸುವುದಿಲ್ಲ, ಹೇಗೆ ಎನ್ನುವ ವಿಚಾರ ಆಗಾಗ ನನ್ನನ್ನು ಕಾಡುತ್ತದೆ. ಕತೆಗಾರರು ನನ್ನ ಸಮಸ್ಯೆಯನ್ನು ಬಗೆಹರಿಸುವರೆಂದು ನಂಬಿದ್ದೇನೆ.
L.S.Patil
Apr 27, 2020ಮಹಾದೇವ ಸರ್, ಬೇಂದ್ರೆಯವರ ಕುರಿತು ಮಾಹಿತಿ ನೀಡಿದ್ದಕ್ಕೆ ಮತ್ತು ಬಯಲು ಮೂಲಕ ನಿಮ್ಮೊಂದಿಗೆ ಸಾಧ್ಯವಾಗಿದ್ದಕ್ಕೆ ಥ್ಯಾಂಕ್ಸ.
jeevan koppad
May 5, 2020ಚನ್ನಬಸವಣ್ಣ ಚಿಕ್ಕದಣ್ಣಾಯಕರಾಗಿ ಕಾಯಕ ಮಾಡುತ್ತಿದ್ದರು ಎನ್ನುವ ವಿಷಯ ತಿಳಿದು ಸಂತೋಷವಾಯಿತು. ನಮ್ಮ ಶರಣರೆಲ್ಲರೂ ಕಾಯಕಯೋಗಿಗಳು. ಚಿಕ್ಕದಣ್ಣಾಯಕರ ಕಾಯಕ ಯೋಧ ಕಾವಲುಗಾರನಂತೆ ಎಂಬುದು ನನಗೆ ಗೊತ್ತಿರಲಿಲ್ಲ.