
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಜ್ಞಾನದಿಂದ ನಿಮ್ಮನರಿದಿಹೆನೆಂದಡೆ:
ಅರಿವಿಂಗೆ ಬಂದಾಗಲೆ ಕುರುಹು. ಕುರುಹಿಂಗೆ ಕೇಡುಂಟು.
ಜ್ಞಾನವೆಂಬುದೇನು? ಮನೋಭೇದ!
ಇಂತಪ್ಪ ಜ್ಞಾನದ ಕೈಯಲ್ಲಿ ಅರುಹಿಸಿಕೊಂಡಡೆ ನೀ ದೇವನಲ್ಲ,
ಅರಿಯದಿದ್ದಡೆ ನಾ ಶರಣನಲ್ಲ.
ನೀ ದೇವ, ನಾ ಶರಣನೆಂತಾದೆ ಹೇಳಾ ಗುಹೇಶ್ವರಾ? (2/1195)
(ತಾತ್ಪರ್ಯ: ಪರಮಾತ್ಮನೆ, ನಿನ್ನನ್ನು ಜ್ಞಾನದಿಂದ ಅರಿಯಲಾಗುವುದಿಲ್ಲ. ನಾನು ಅರಿತೆ, ಎಂದರೆ ನಿನ್ನ ಕುರುಹಾದ ಇಷ್ಟಲಿಂಗವನ್ನು ಅರಿತೆ ಎಂದೇ ಹೊರತು, ನಿನ್ನನ್ನೇ ಅರಿತೆ ಎಂದಲ್ಲ. ಏಕೆಂದರೆ ಅರಿಯುವುದು ಎಂದರೆ ಜ್ಞಾತೃ-ಜ್ಞೇಯಗಳ ಭೇದ ಮಾಡುವುದು. ಅಂಥ ನನ್ನ ಪರಿಮಿತ ಜ್ಞಾನದಿಂದ ನಿನ್ನನ್ನು ಅರಿತರೆ ನೀನೂ ಪರಿಮಿತ ಎಂದೇ ಅರ್ಥ. ಪರಿಮಿತ ದೇವ ದೇವನಲ್ಲ. ಆದರೆ ನಿನ್ನನ್ನು ನಾನರಿಯದಿದ್ದರೆ ನಾನು ಶರಣನಲ್ಲ. ಆದರೂ ನಾನು ನಿನ್ನನ್ನು ಅರಿತು ಶರಣನಾದೆ ಮತ್ತು ನೀನು ಪರಮಾತ್ಮನಾಗೇ ಇದ್ದೀಯ. ಇದು ಹೇಗಾಯಿತು, ಹೇಳು.)
ಇದು ಅಲ್ಲಮಪ್ರಭುದೇವರ ಒಂದು ‘ಹೆಚ್ಚಿನ ವಚನ’. ಆದುದರಿಂದ ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ ಎಂಬ ಧೋರಣೆಯಿಂದ ಇದನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ಅದು ಅಲ್ಲಮರ ಮೂಲ ಧೋರಣೆಗೆ ಸರಿಯಾಗಿ ಹೊಂದಿಕೊಳ್ಳುತ್ತದೆ.
ಈ ವಚನದಲ್ಲಿ ಅಲ್ಲಮರ ಎರಡು ಮುಖ್ಯ ಸಿದ್ಧಾಂತಗಳಿವೆ. 1. ಅಪರಿಮಿತ ಪರಮಾತ್ಮನನ್ನು ಪರಿಮಿತ ಬುದ್ಧಿಯುಳ್ಳ ಮಾನವನು ಅರಿಯಲಾರ. ಒಂದು ವೇಳೆ ಅವನನ್ನು ಮಾನವನು ಅರಿತರೆ ಅವನು ಮಿತಿಯುಳ್ಳ ಪರಮಾತ್ಮನಾಗುತ್ತಾನೆ. ಆದರೆ ಮಿತಿಯುಳ್ಳ ಪರಮಾತ್ಮ ಪರಮಾತ್ಮನೇ ಅಲ್ಲ್ಲ. 2. ಪರಮಾತ್ಮನನ್ನು ಅರಿಯುವುದು ಪ್ರತಿಯೊಬ್ಬ ಶರಣನ ಅಂತಿಮ ಧ್ಯೇಯ. ಇವು ನಮಗೆ ಅರ್ಥವಾಗುವ ವಿಷಯಗಳು. ಆದರೆ ಕೊನೆಯ ಎರಡು ಸಾಲುಗಳು ಒಂದು ಛಾಲೆಂಜಿನಂತಿವೆ. “ನಾನು ನಿನ್ನನ್ನು ಅರಿಯದಿದ್ದರೆ ನಾನು ಶರಣನಲ್ಲ”, ಎಂಬ ಮಾತು ನಾವು ಜಗಳವಾಡುವಾಗ ‘ನಾನು ಇದನ್ನು ಮಾಡದಿದ್ದರೆ ನನ್ನ ಹೆಸರು ಕ್ಷ ಅಲ್ಲ’, ಎಂಬ ಮಾತಿನಂತಿದೆ. ಅಷ್ಟೇ ಅಲ್ಲ, “ನಾನು ನಿನ್ನನ್ನು ಅರಿತು ಶರಣನೂ ಆಗುತ್ತೇನೆ, ನೀನು ನನ್ನ ಬುದ್ಧಿಗೆ ಜ್ಞೇಯವಾದರೂ ನೀನು ಪರಮಾತ್ಮನಾಗಿಯೇ ಇರುತ್ತೀಯ” ಎಂಬ ಮಾತು ಸ್ವವಿರೋಧದಂತೆ ಕಾಣುತ್ತದೆ. ಇದನ್ನು ಒಂದು ಉಪಮೆಯೊಂದಿಗೆ ಹೀಗೆ ವಿವರಿಸಬಹುದು. ಒಂದು ಆಕೃತಿ ವೃತ್ತವಾಗಿದ್ದರೆ, ಅದು ತ್ರಿಭುಜವಾಗಿರಲು ಸಾಧ್ಯವಿಲ್ಲ; ಅದು ತ್ರಿಭುಜವಾಗಿದ್ದರೆ ವೃತ್ತವಾಗಿರಲು ಸಾಧ್ಯವಿಲ್ಲ. ಅದೇ ರೀತಿ, ನಾನು ನಿನ್ನನ್ನು ಅರಿತರೆ ನೀನು ಪರಮಾತ್ಮನಲ್ಲ, ನಾನು ನಿನ್ನನ್ನು ಅರಿಯದಿದ್ದರೆ ನಾನು ಶರಣನಲ್ಲ. ಅಗಮ್ಯನೂ ಅಚಿಂತ್ಯನೂ ಆದ ಪರಮಾತ್ಮನನ್ನು ಶರಣನು ಅರಿಯುತ್ತಾನೆ ಎನ್ನುವುದು ತ್ರಿಭುಜಾಕಾರದ ವೃತ್ತವಿದೆ ಎಂದಂತೆ.
ಸ್ವವಿರೋಧ (self-contradiction)ದಂತೆ ಕಾಣುವ ಇಂಥ ಮಾತುಗಳು ಅಲ್ಲಮರ ವಚನಗಳಲ್ಲಿ ಅನೇಕ ಸಂದರ್ಭಗಳಲ್ಲಿ ಬರುತ್ತವೆ. ಇದೂ ಅಂಥ ಸಂದರ್ಭವೆ? ಎಂಬುದು ಇಲ್ಲಿನ ಪ್ರಶ್ನೆ. ಮೇಲ್ನೋಟಕ್ಕೆ ಹೌದು ಎನಿಸುತ್ತದೆ. ಆದರೆ ಬೇರೆ ಯಾರದೋ ವಚನವಾದರೆ ಇದು ಸ್ವವಿರೋಧ, ಇದು ಪ್ರಕ್ಷಿಪ್ತ, ಎಂದು ಪಕ್ಕಕ್ಕೆ ಸರಿಸಬಹುದಿತ್ತು. ಆದರೆ ಅಲ್ಲಮರಂಥ ಮಹಾ ಮೇಧಾವಿ ಎಲ್ಲರಿಗೂ ಸ್ಪಷ್ಟವಾಗಿ ಕಾಣುವಂಥ ಸ್ವವಿರೋಧಕ್ಕೊಳಗಾಗಿದ್ದಾರೆ ಎಂದರೆ ನಂಬುವುದು ಕಷ್ಟ. ಹಾಗೆ ನಂಬುವುದು ಕಷ್ಟವಾದರೆ ಇದರಲ್ಲಿ ಸ್ವವಿರೋಧ ಇಲ್ಲ ಎನ್ನಬೇಕು ಹಾಗೂ ಅವರ ಮಾತಿಗೆ ವಿಶೇಷ ಅರ್ಥ ಕೊಡಬೇಕು. ಆ ವಿಶೇಷ ಅರ್ಥ ಯಾವ ಪದ ಅಥವಾ ವಾಕ್ಯದಲ್ಲಿದೆ, ನೋಡೋಣ.
ಪರಮಾತ್ಮನನ್ನು ಅರಿತೆ ಎಂದು ಯಾರಾದರೂ ಹೇಳಿದರೆ ಅದಕ್ಕೆ ಪರಮಾತ್ಮನ ಕುರುಹನ್ನು ಅರಿತೆ ಎಂಬ ಅರ್ಥವಿದೆಯೇ ಹೊರತು, ಇಂದ್ರಿಯ ಮತ್ತು ಬುದ್ಧಿಗಳಿಗೆ ಅತೀತನಾದ ಪರಮಾತ್ಮನನ್ನು ಅರಿತೆ ಎಂಬ ಅರ್ಥವಿಲ್ಲ. ಅಲ್ಲದೆ, ನಾವು ಯಾವುದೇ ವಸ್ತುವನ್ನು ಅರಿತರೂ ಆ ಅರಿವಿನಲ್ಲಿ ಅರಿಯುವ ನಾನು ಅಥವಾ ಜ್ಞಾತೃ (subject) ಮತ್ತು ಅರಿಯಲ್ಪಡುವ ವಸ್ತು, ಜ್ಞೇಯ (object) – ಇವುಗಳ ಭೇದ (ದ್ವೈತ) ಇದ್ದೇ ಇರುತ್ತದೆ. ಇಂಥ ಭೇದವುಳ್ಳ ಜ್ಞಾನದಿಂದ ಪರಮಾತ್ಮನನ್ನು ಅರಿಯುವುದು ಎಂದರೆ, ನಾನು ಜ್ಞಾತೃವಾಗಬೇಕು, ಪರಮಾತ್ಮ ಜ್ಞೇಯವಾಗಬೇಕು. ಆಗ ನಾನು ಪರಮಾತ್ಮನನ್ನು ಅರಿಯುತ್ತೇನೆ ಎಂದರೆ ಅರಿಯಲ್ಪಟ್ಟ ಪರಮಾತ್ಮ ಪರಮಾತ್ಮನೇ ಅಲ್ಲ. ಹೀಗನ್ನಲು ಎರಡು ಕಾರಣಗಳಿವೆ. 1. ನಾನು ಏನನ್ನಾದರೂ ಅರಿಯಬೇಕಾದರೆ ಅದು ಇಂದ್ರಿಯಗೋಚರವಾಗಿರಬೇಕು ಮತ್ತು ಬುದ್ಧಿಗೋಚರವಾಗಿರಬೇಕು. ಆದರೆ ಪರಮಾತ್ಮ ಎರಡೂ ಅಲ್ಲ. ಆದುದರಿಂದ, ಪರಮಾತ್ಮ ಜ್ಞೇಯವಲ್ಲ; ಒಂದು ವಸ್ತು ಇದೆ ಎಂದರೆ ಅದಕ್ಕೆ ಕೆಲವು ಗುಣಗಳಿವೆ ಎಂದರ್ಥ. ಪರಮಾತ್ಮ ಇದ್ದಾನೆ ಎಂದರೆ ಅವನ ಯಾವ ಗುಣಗಳು ನಮ್ಮ ಅರಿವಿಗೆ ಬಂದಿವೆ ಎಂದರ್ಥ? ನಮ್ಮ ಅರಿವಿಗೆ ಬರುವಂಥ ಗುಣಗಳು ಅವನಲ್ಲಿ ಇಲ್ಲವಾದುದರಿಂದ ಅವನು ನಮ್ಮ ಅರಿವಿಗೆ ಬರಲು ಸಾಧ್ಯವಿಲ್ಲ. ಪರಮಾತ್ಮ ಇದ್ದಾನೆ ಎಂಬ ಯಾರೋ ಹೇಳಿದ ಮಾತನ್ನು ನಾವು ಪ್ರಶ್ನಿಸದೆ ನಂಬುತ್ತಿದ್ದೇವೆ ಎಂದರ್ಥ. ಆದರೆ ಶರಣ ಕೇವಲ ಅಂಥ ಮಾತನ್ನು ನಂಬುತ್ತ್ತಾನೆಯಷ್ಟೇ ಅಲ್ಲ, ಪರಮಾತ್ಮನÀನ್ನು ಅರಿಯುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. 2. ಪರಮಾತ್ಮನನ್ನು ಅರಿಯುತ್ತೇನೆ ಎಂದರೆ ನಾನು ಜ್ಞಾತೃ, ಪರಮಾತ್ಮ ಜ್ಞೇಯ ಎಂದರ್ಥ. ಆದರೆ ನಾನು ಪರಿಮಿತ ವಸ್ತುಗಳನ್ನು ಅರಿಯಬಲ್ಲೆನೇ ಹೊರತು ಅಪರಿಮಿತನಾದ ಪರಮಾತ್ಮನನ್ನಲ್ಲ. ನಮ್ಮ ಅರಿವಿಗೆ ಬರುವ ವಸ್ತು ಎಷ್ಟೇ ದೊಡ್ದದಿದ್ದರೂ – ಅದು ಸಮುದ್ರವಿರಲಿ, ಬೆಟ್ಟವಿರಲಿ, ನಕ್ಷತ್ರವಿರಲಿ – ಅದನ್ನು ಸಂಪೂರ್ಣವಾಗಿ ನೋಡುವ ಅವಕಾಶ ನನಗಿರಬೇಕು. ವಸ್ತು ಅಪರಿಮಿತವಾಗಿದ್ದರೆ ಅದನ್ನು ಸಂಪೂರ್ಣವಾಗಿ ನೋಡುವ ಅವಕಾಶ ನನಗೆ ಸಿಕ್ಕುವುದೇ ಇಲ್ಲ. ಜ್ಞಾತೃವಾಗಿ ನಾನೊಂದು ಸ್ಥಳದಲ್ಲಿದ್ದು ಜ್ಞೇಯವು ಮತ್ತೊಂದು ಸ್ಥಳದಲ್ಲಿದ್ದರೆ ನಾನು ಅದನ್ನು ನೋಡಲು ಸಾಧ್ಯ. ಆಗ ಜ್ಞಾತೃ ಜ್ಞೇಯ ಎರಡೂ ಪರಿಮಿತ ವಸ್ತುಗಳೇ. ಆಗ ಪರಿಮಿತವಾದ ಜ್ಞಾತೃ ಅರಿಯುವ ಜ್ಞೇಯವು ಪರಿಮಿತವಾಗಿಯೇ ಇರುತ್ತದೆ. ಹೀಗಿದ್ದರೆ ನಾನು ಪರಮಾತ್ಮನನ್ನು ಅರಿತೆ ಎನ್ನುವುದು ಪರಮಾತ್ಮ ಪರಿಮಿತವಾದ ಜ್ಞೇಯ ಎಂದಂತೆ. ಅದಕ್ಕೇ ಅಲ್ಲಮ “ನನ್ನಿಂದ ಅರುಹಿಸಿಕೊಂಡರೆ ನೀನು ದೇವನಲ್ಲ” ಎನ್ನುವುದು.
ಆದರೆ, ನಾನು ಪರಿಮಿತ ಜ್ಞಾತೃವಾದರೂ ನೀನು ಅಪರಿಮಿತವಾದರೂ ನಾನು ನಿನ್ನನ್ನು ಅರಿಯದೆ ಬಿಡುವುದಿಲ್ಲ ಎಂಬ ಅಲ್ಲಮರ ಮಾತಿಗೆ ಯಾವ ಅರ್ಥ ಕೊಡುವುದು? ನಾನು ನಿನ್ನನ್ನು ಅರಿತರೂ ಅಪರಿಮಿತವಾಗೇ ಇರುತ್ತೀಯ ಎಂಬ ಮಾತು ನಿಜವಾಗಿಯೂ ಸ್ವವಿರೋಧವಲ್ಲವೆ?
ಅಲ್ಲಮರ ಮಾತಿನಲ್ಲಿ ಸ್ವವಿರೋಧವಿಲ್ಲ ಎಂದು ತೋರಿಸಬೇಕಾದರೆ ಅಲ್ಲಮ ಮತ್ತು ಇತರ ಅನುಭಾವಿ-ಶರಣರಂತೆ ಅರಿವು ಎಂಬ ಪದಕ್ಕೆ ಎರಡು ಅರ್ಥಗಳಿರುವುದನ್ನು ನಾವು ಗುರುತಿಸಬೇಕಾಗುತ್ತದೆ. ಅರಿವು ಎಂಬ ಪದಕ್ಕೆ ಲೌಕಿಕ ಅಥವಾ ಇಂದ್ರಿಯ ಪ್ರತ್ಯಕ್ಷ ಎಂಬ ಅರ್ಥ ಕೊಟ್ಟರೆ ಯಾವ ಮಾನವನೂ – ಅತ್ಯಂತ ಶ್ರೇಷ್ಠ ಅನುಭಾವಿಯೂ – ಪರಮಾತ್ಮನನ್ನು ಅರಿಯಲು ಸಾಧ್ಯವಿಲ್ಲ. ಆದರೆ ಅನುಭಾವಿಗಳ ಪ್ರಕಾರ ಪರಮಾತ್ಮನನ್ನು ಅರಿಯಲು ಸಾಧ್ಯ, ಅಂದರೆ, ತಾನೇ ಪರಮಾತ್ಮನಾಗಲು ಸಾಧ್ಯ ಎಂದರ್ಥ. ಬ್ರಹ್ಮವಿದ್ ಬ್ರಹ್ಮೈವ ಭವತಿ (ಬ್ರಹ್ಮವನ್ನು ತಿಳಿದವನು ಬ್ರಹ್ಮವೇ ಆಗುತ್ತಾನೆ) ಎಂದು ಉಪನಿಷತ್ಕಾರರು ಹೇಳಿದಂತೆ, ವಚನಕಾರರು ಲಿಂಗವನ್ನು (ಪರಮಾತ್ಮನನ್ನು) ಅರಿತವನು ಲಿಂಗವೇ ಆಗುತ್ತಾನೆ, ಎನ್ನುತ್ತಾರೆ. ಈ ಲಿಂಗವಾಗುವ ಅನುಭವಕ್ಕೆ ಶರಣರು ಲಿಂಗಾನುಭವ, ಸ್ವಾನುಭಾವ, ತನ್ನನ್ನು ತಾನರಿಯುವುದು ಎನ್ನುತ್ತಾರೆ. ಈ ಲಿಂಗದ ಅನುಭವ ಆಗಬೇಕಾದರೆ ಅವರು ತಮ್ಮ ಅನುಭಾವದಲ್ಲಿ ಜ್ಞಾತೃ-ಜ್ಞೇಯಗಳ ದ್ವೈತವನ್ನು ಮೀರಬೇಕಾಗುತ್ತದೆ. ಲಿಂಗಾನುಭವ ಪಡೆಯದೆ ಲಿಂಗವನ್ನು ಅರಿಯಲು ಸಾಧ್ಯವಿಲ್ಲ. ಅದರ ಬಗ್ಗೆ ಬೇರೆಯವರು ಅಥವಾ ಪುಸ್ತಕಗಳು ಹೇಳಿದುದನ್ನು ನಾವು ತಿಳಿದುಕೊಳ್ಳಬಹುದೇ ಹೊರತು, ಲಿಂಗವನ್ನು ಒಂದು ಜ್ಞೇಯವನ್ನಾಗಿ, ನೇರವಾಗಿ, ಅಪರೋಕ್ಷವಾಗಿ ತಿಳಿದುಕೊಳ್ಳಲು ಬರುವುದಿಲ್ಲ. ಹೀಗೆ, ಲಿಂಗವಾಗುವ ಮೂಲಕ ಲಿಂಗದ ಅರಿವನ್ನು ಪಡೆಯುವುದಕ್ಕೂ ಲಿಂಗವಾಗದೆ ಲಿಂಗವನ್ನು ಒಂದು ಜ್ಞೇಯದಂತೆ ತಿಳಿದುಕೊಳ್ಳುವುದಕ್ಕೂ ಸ್ಪಷ್ಟ ವ್ಯತ್ಯಾಸವಿದೆ. ಅನುಭಾವದ ಮೂಲಕ ಲಿಂಗವನ್ನು ಅರಿತವನು ಶರಣ. ಅಂಥ ಶರಣ ತನ್ನನ್ನು ಲಿಂಗದಿಂದ ಪ್ರತ್ಯೇಕಿಸಿಕೊಳ್ಳುವುದಿಲ್ಲವಾದುದರಿಂದ ಅವನ ಅರಿಯುವಿಕೆ ಲಿಂಗದ ಅಪರಿಮಿತತೆ, ಅಗಮ್ಯತೆಗಳಿಗೆ ಯಾವ ಧಕ್ಕೆಯನ್ನೂ ಉಂಟು ಮಾಡುವುದಿಲ್ಲ.
ಹೀಗೆ ಅರಿವಿಗೆ ಇರುವ ಎರಡು ಅರ್ಥಗಳನ್ನು ನಾವು ಭಿನ್ನ ಮಾಡದಿದ್ದರೆ ಅಲ್ಲಮರ ಮೇಲಿನ ವಚನದಲ್ಲಿ ಸ್ವವಿರೋಧವನ್ನು ಹುಡುಕುತ್ತಲೇ ಇರುತ್ತೇವೆ; ಭಿನ್ನ ಮಾಡಿದರೆ ಸ್ವವಿರೋಧ ಮಾಯವಾಗುತ್ತದೆ.
ಕೆಲವರು ನನ್ನ ಸಮಾಧಿ ಸ್ಥಿತಿಯಲ್ಲಿ ರಾಮನನ್ನು ನೋಡಿದೆ, ನಂದಿವಾಹನ ಶಿವನನ್ನು ನೋಡಿದೆ ಎಂದು ಮುಂತಾಗಿ ಹೇಳುತ್ತಾರೆ. ಇದು ಸತ್ಯವೇ. ಆದರೆ ಅವರು ನೋಡಿದುದು ಅವರಾಗಲೇ ಕಲ್ಪಿಸಿಕೊಂಡಿದ್ದ ರಾಮ ಅಥವಾ ಶಿವನನ್ನು, ಪರಮಾತ್ಮನನ್ನಲ್ಲ. ಯಾರು ತಮ್ಮ ಅನುಭಾವದಲ್ಲಿ ಕಾಣುವ ವಸ್ತುವನ್ನು ಅವರ್ಣನೀಯ ಎನ್ನುತ್ತಾರೋ ಆ ವಸ್ತು ಪರಮಾತ್ಮ ಎಂಬ ಹೆಸರಿಗೆ ಅರ್ಹ. ಯಾರು ತಮ್ಮ ಅನುಭಾವದಲ್ಲಿ ರಾಮ, ಕೃಷ್ಣ, ಶಕ್ತಿಮಾತೆ ಮುಂತಾದ ವಿಶಿಷ್ಟ ಗುಣಗಳನ್ನುಳ್ಳ ದೈವಗಳನ್ನು ಕಾಣುತ್ತಾರೊ ಅವರದು ಪೂರ್ಣ ಅನುಭಾವವೂ ಅಲ್ಲ, ಅವರು ಕಂಡಿದುದು ಅವರ್ಣನೀಯ ಪರಮಾತ್ಮನೂ ಅಲ್ಲ. ಅನುಭಾವದ ಒಂದು ಹಂತದಲ್ಲಿ (ಜ್ಞಾತೃ-ಜ್ಞೇಯಗಳ ದ್ವೈತವನ್ನು ಮೀರುವ ಮೊದಲು) ದೃಷ್ಟಿಯೋಗ ಮಾಡುವಾಗ ಶರಣನಿಗೆ ಇಷ್ಟಲಿಂಗ ತನ್ನ ಮೈತುಂಬ ವ್ಯಾಪಿಸಿಕೊಂಡ ಅನುಭವವಾಗುತ್ತದೆ. ಇದು ಪ್ರಾಣಲಿಂಗಾನುಭವ, ಭಾವಲಿಂಗದ ಅನುಭವವಲ್ಲ. ನಾನು ರಾಮನನ್ನು ನೋಡಿದೆ ಎಂದಾಗ ನಾನು ಬೇರೆ, ರಾಮ ಬೇರೆ ಎಂಬ ದ್ವೈತವಿರುವಂತೆ, ಪ್ರಾಣಲಿಂಗದ ಅನುಭವದಲ್ಲಿ ನಾನು ಬೇರೆ, ಪ್ರಾಣಲಿಂಗ ಬೇರೆ ಎಂಬ ದ್ವೈತವಿರುತ್ತದೆ. ಭಾವಲಿಂಗಾನುಭಾವದಲ್ಲಿ ಭಾವಲಿಂಗವೆಂಬ ನಾನೇ ಲಿಂಗ ಎಂಬ ಅದ್ವೈತಭಾವ ಇರುತ್ತದೆ. ಆದುದರಿಂದ, ಇಷ್ಟಲಿಂಗವನ್ನು ಅರಿಯುವುದು ಹೇಗೋ ಹಾಗೆ ಪ್ರಾಣಲಿಂಗವನ್ನು ಅರಿಯುವುದೂ ಪರಮಾತ್ಮನನ್ನು ಅರಿತಂತಲ್ಲ.
Comments 3
ಗವಿಸಿದ್ದಪ್ಪ ತೋರಗಾಂವ್
Aug 6, 2020ಅಲ್ಲಮಪ್ರಭುಗಳ ಈ ವಚನವೂ ನನಗೆ ಬಹಳ ಪ್ರಿಯವಾದದ್ದು. ಆದರೆ ಇದರಲ್ಲಿ ನನಗೆ ಯಾವತ್ತೂ ಸ್ವವಿರೋಧ ಕಂಡುಬಂದಿರಲಿಲ್ಲ. ಪ್ರೊಫೆಸರ್ ಅವರು ಬಹಳ ಮೇಲು ಮೇಲಿನ ಮಟ್ಟದಲ್ಲಿ ಈ ವಚನಕ್ಕೆ ಅರ್ಥ ಬರೆದಿದ್ದಾರೆ. ಅಷ್ಟು ಗೊಂದಲವೇನೂ ಇಲ್ಲಿಲ್ಲ. ಜ್ಞಾನದ ಮಿತಿಯನ್ನೂ, ಅನುಭಾವದ ಅಗತ್ಯವನ್ನೂ ಹೀಗೆ ಹೇಳಿದ್ದಾರೆ.
Tippeswamy
Aug 11, 2020ಅಲ್ಲಮ ಪ್ರಭುದೇವರ ವಚನಗಳನ್ನು ಬುದ್ಧಿಯ ತರ್ಕದ ಮೂಲಕವೂ ನೋಡಬಹುದೇ?
Lingaraj Patil
Aug 20, 2020ಜ್ಞಾನ- ಜ್ಞಾತೃ ಮತ್ತು ಜ್ಞೇಯಗಳನ್ನು ಅಲ್ಲಮಪ್ರಭುದೇವರು ಪರಿಭಾವಿಸಿದ ರೀತಿ ಇಲ್ಲಿ ನಕಾರಾತ್ಮಕವಾಗಿದೆ. ವಚನದ ವಿವರಣೆಯಲ್ಲಿ ಮತ್ತಷ್ಟು ಸ್ಪಷ್ಟತೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು