ಅರಸೊತ್ತಿಗೆಯಿಂದ ಅರಿವಿನೆಡೆಗೆ
ಬಹುತೇಕ ಧರ್ಮಗಳು ಸನ್ಯಾಸತ್ವಕ್ಕೆ ಆದ್ಯತೆ ನೀಡಿದರೆ, ಲಿಂಗಾಯತವು ದಾಂಪತ್ಯ ಸಂಸ್ಕೃತಿಗೆ ಪ್ರಧಾನ ಸ್ಥಾನ ನೀಡಿದ ಧರ್ಮ. ಆಧ್ಯಾತ್ಮಿಕ ಸಾಧನೆಗೂ ವೈರಾಗ್ಯಕ್ಕೂ ಗಂಟು ಹಾಕದೆ ಸಂಸಾರದ ಸಹಜತೆಯನ್ನು ಮಾನ್ಯ ಮಾಡಿದ್ದು ಈ ಧರ್ಮದ ವಿಶೇಷ. ಹೆಣ್ಣು ಇಲ್ಲಿ ಮಾಯೆಯಲ್ಲ, ಕಾಮದ ಬೊಂಬೆಯಲ್ಲ. ದಾರಿ ತಪ್ಪಿಸುವ ಮಾಯಜಾಲವಲ್ಲ. ಸಾಧನೆಗೆ ಅಡ್ಡಗಾಲಲ್ಲ. ಹೊನ್ನು, ಮಣ್ಣಿನ ಸಾಲಿನಲ್ಲಿ ಬರುವ ಆಮಿಷವಲ್ಲ. ಕೀಳರಿಮೆಯಿಂದ ಹಿಡಿಯಾಗಿ ಬದುಕುತ್ತಿದ್ದ ಶೂದ್ರಳಲ್ಲ. ಗಂಡನ ಆಜ್ಞೆಗೆ ತಲೆಯಲ್ಲಾಡಿಸುತ್ತಾ ಜೀವನ ಸವೆಸಬೇಕಾದ ಗುಲಾಮಳಂತೂ ಅಲ್ಲವೇ ಅಲ್ಲ. “ಹೆಣ್ಣು ಬಿಟ್ಟು ಲಿಂಗವನೊಲಿಸಬೇಕೆಂಬರು. ಹೆಣ್ಣಿಗೆಯೂ ಲಿಂಗಕ್ಕೆಯೂ ವಿರುದ್ಧವೇ?” ಎಂದು ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಪ್ರಶ್ನಿಸಿದ ವೈಚಾರಿಕ ಧರ್ಮ ಇದು. ಸಮಾಜದಲ್ಲಿ ಗಂಡು- ಹೆಣ್ಣಿನ ಸ್ಥಾನವನ್ನು ಸಮಸಮವಾಗಿ ಕಂಡ ಶರಣ ಧರ್ಮವು ದಾಂಪತ್ಯದ ಅನಿವಾರ್ಯತೆಯನ್ನೂ, ಅಗತ್ಯತೆಯನ್ನೂ ಎತ್ತಿ ಹಿಡಿದಿದೆ. ಹುಸಿ ಎನಿಸುವ ಕಾವಿಧಾರಿಗಳನ್ನು, ಮನದಲ್ಲಿ ಮಂಡಿಗೆ ತಿನ್ನುವ ಆಷಾಢಭೂತಿಗಳನ್ನು ದಿಟ್ಟವಾಗಿ ಧಿಕ್ಕರಿಸಿದೆ.
ಬಸವಣ್ಣನವರ ಕ್ರಾಂತಿಕಾರಕ ವಿಚಾರಗಳಿಗೆ, ವಿಶಿಷ್ಟ ಚಿಂತನೆಗಳಿಗೆ ಮನಸೋತು ಅಂದು ಕಲ್ಯಾಣವನ್ನು ಸೇರಿದ ಬಳಗ ದೊಡ್ಡದಿತ್ತು. ಹಾಗೆ ಬಂದವರಲ್ಲಿ ಕಾಶ್ಮೀರದ ಅರಸು ಮಹದೇವ ಭೂಪಾಲ ಮತ್ತು ಆತನ ಪತ್ನಿ ಗಂಗಾದೇವಿ ಪ್ರಮುಖರು. ಭೋಗ ಭಾಗ್ಯಗಳ ಅರಸೊತ್ತಿಗೆಯನ್ನು ಬಿಟ್ಟು ಸಾಮಾನ್ಯರಂತೆ ಸರಳವಾಗಿ ಬದುಕಲು ಹೊರಡುವುದೆಂದರೆ ಅದೊಂದು ಅಸಾಮಾನ್ಯ ನಡಿಗೆಯೇ ಸರಿ. ಅಧಿಕಾರದ ಸ್ಥಾನ ತೊರೆದು ಶ್ರಮದ ಬದುಕಿಗೆ ಮೈಯೊಡ್ಡಲು ದೊಡ್ಡ ಮನಸ್ಥೈರ್ಯ ಬೇಕು. ಸೇವಕ ಸಿಬ್ಬಂದಿಯ ಸಕಲ ಸವಲತ್ತುಗಳನ್ನೂ, ಐಷಾರಾಮಿ ಸುಖವನ್ನೂ ತೊರೆದು ಕಲ್ಯಾಣಕ್ಕೆ ಸಾಮಾನ್ಯ ಮನುಷ್ಯರಂತೆ ಪ್ರವೇಶಿಸುವ ರಾಜ ಮತ್ತು ರಾಣಿಯರ ದಿಟ್ಟತನ, ತ್ಯಾಗ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದು. ಇಂತಹ ಅಪೂರ್ವ ಜೋಡಿಯನ್ನು ನೋಡಿಯೇ ಅಲ್ಲಮಪ್ರಭುದೇವರು, “ದಂಪತಿ ಏಕಭಾವವಾಗಿ ನಿಂದಲ್ಲಿ ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು” ಎಂದು ಹೇಳಿರಬೇಕು. ಕಾಯಾ, ವಾಚಾ, ಮನಸಾ ಸಂದಿಲ್ಲದಂತೆ ಬೆರೆತ ದಾಂಪತ್ಯ ಅವರದಾಗಿತ್ತು. ಇಂದ್ರೀಯಭೋಗ ನೆಲೆಯಲ್ಲಿಯೇ ನಿಲ್ಲದೇ ಲಿಂಗಾಂಗ ಸಾಮರಸ್ಯದ ಉದಾತ್ತತೆಗೆ ತಮ್ಮ ಸಹಜೀವನವನ್ನು ಅವರು ಏರಿಸಿದ್ದರು. ಆಧ್ಯಾತ್ಮಿಕ ಸಾಧನೆಯಲ್ಲಿ ಇವರೀರ್ವರು ಮುಟ್ಟಿದ ಔನ್ನತ್ಯಕ್ಕೆ ಅವರ ವಚನಗಳೇ ಸಾಕ್ಷಿ. ಕಲ್ಯಾಣಕ್ಕೆ ಬಂದು, ಕನ್ನಡ ಕಲಿತು ದಂಪತಿಗಳಿಬ್ಬರೂ ಬರೆದ ಅನುಭಾವದ ವಚನಗಳು ಅವರ ಅಪಾರ ಪಾಂಡಿತ್ಯಕ್ಕೆ ಕನ್ನಡಿ ಹಿಡಿದಂತಿವೆ. ಮೋಳಿಗೆಯ ಮಾರಯ್ಯನವರ ವಚನಾಂಕಿತ ನಿಃಕಳಂಕ ಮಲ್ಲಿಕಾರ್ಜುನಾ. ಮಹಾದೇವಮ್ಮನವರ ವಚನಾಂಕಿತ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ. ಸದ್ಯಕ್ಕೆ ಮಾರಯ್ಯನವರ 818 ವಚನಗಳು, ಮಹಾದೇವಮ್ಮನವರ 70 ವಚನಗಳು ಸಿಕ್ಕಿವೆ.
ಮಹದೇವ ಭೂಪಾಲರ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟ ಮಾಹಿತಿಗಳು ಬಸವ ಪುರಾಣ, ಶೂನ್ಯ ಸಂಪಾದನೆ, ಗೌರವಾಂಕನ ಮೋಳಿಗಯ್ಯನ ಪುರಾಣ… ಇತ್ಯಾದಿ ಕೃತಿಗಳಲ್ಲಿ ಸಿಗುತ್ತವೆ. ಪುರಾಣ ಕಥೆಯೊಂದರ ಪ್ರಕಾರ ಕಾಶ್ಮೀರದ ಅರಸು ಮಹಾದೇವ ಭೂಪಾಲ ಪ್ರತಿದಿನ ಮೂವತ್ತು ಸಾವಿರ ಜಂಗಮರಿಗೆ ದಾಸೋಹ ನೀಡುತ್ತಿದ್ದ. ಮಾರುವೇಷದಲ್ಲಿ ಬಸವಣ್ಣನವರು ಅಲ್ಲಿಗೆ ಹೋಗಿ ಭೋಜನ ಶಾಲೆಯಲ್ಲಿ ಮಸಾಲೆ ರುಬ್ಬಲು ಸೇರಿ, ತಮ್ಮ ಪ್ರಭಾವದಿಂದ ಎಲ್ಲಾ ಜಂಗಮರನ್ನು ಕಲ್ಯಾಣಕ್ಕೆ ಕರೆದುಕೊಂಡು ಹೋದರು. ಆ ಘಟನೆಯಿಂದ ಅವರಿಗೆ ‘ಚೋರ ಬಸವ’ ಎಂಬ ಹೆಸರು ಬಂತು. ಈ ಘಟನೆಯಿಂದ ಆವಕ್ಕಾದ ರಾಜ, ಬಸವಣ್ಣನವರನ್ನು ಹಿಂಬಾಲಿಸಿ ಕಲ್ಯಾಣಕ್ಕೆ ಬರುತ್ತಾರೆ. ಹಾಗೆ ಬಂದವರು ಅಲ್ಲಿಯೇ ಶರಣರಾಗಿ ನೆಲೆ ನಿಲ್ಲುತ್ತಾರೆ.
ಇಂಥ ಎಲ್ಲ ಬಗೆಯ ಪೌರಾಣಿಕ ಕಥೆಗಳಿಂದ ಸಿಗಬಹುದಾದ ಚಾರಿತ್ರಿಕ ಸಂಗತಿಗಳನ್ನು ಹೀಗೆ ಕ್ರೋಢೀಕರಿಸಬಹುದು. ಮೂಲತಃ ಶಿವಭಕ್ತರಾಗಿದ್ದ ಕಾಶ್ಮೀರದ ರಾಜ ಮಹಾದೇವ ಭೂಪಾಲ ನಿತ್ಯವೂ ಸಾವಿರಾರು ಜನರಿಗೆ ಜಂಗಮ ದಾಸೋಹ ನಡೆಸುತ್ತಿದ್ದ. ಪತ್ನಿ ಗಂಗಾದೇವಿಯು ಗಂಡನ ದಾಸೋಹ ಕಾರ್ಯದಲ್ಲಿ ಒಮ್ಮನದಿಂದ ಜೊತೆಗಿರುತ್ತಿದ್ದರು. ಹೀಗೊಮ್ಮೆ ಶಿವನ ಪರಮ ಭಕ್ತನಾಗಿದ್ದ ಅರಸನ ಕಿವಿಗೆ ಬಸವಣ್ಣನವರ ವಿಷಯ ಮುಟ್ಟುತ್ತದೆ. ಕಲ್ಯಾಣದಲ್ಲಿ ದಿನವೂ ಲಕ್ಷದ ತೊಂಬತ್ತಾರು ಸಾವಿರ ಜಂಗಮರಿಗೆ ದಾಸೋಹ ನಡೆಯುತ್ತಿರುವ ಸಂಗತಿ ದೊರೆಯಲ್ಲಿ ಅಚ್ಚರಿ ಮತ್ತು ಕುತೂಹಲ ಹುಟ್ಟಿಸುತ್ತದೆ. ಬಸವಣ್ಣನವರ ವಿಚಾರಗಳು ಮಹಾದೇವ ಭೂಪಾಲನ ಅರಮನೆಯನ್ನು ಮುಟ್ಟಿದಾಗ ಆಧ್ಯಾತ್ಮದತ್ತ ಒಲವುಳ್ಳ ರಾಜನಿಗೆ ಸಹಜವಾಗಿಯೇ ಆಸಕ್ತಿ ಹೆಚ್ಚುತ್ತದೆ. ಆ ಹೊಸ ಚಿಂತನೆಗಳಿಗೆ ಕಾಶ್ಮೀರದ ಅರಸ ಎಷ್ಟು ಮಾರು ಹೋದನೆಂದರೆ ಸಿಂಹಾಸನವನ್ನು ತ್ಯಜಿಸಿ ಕಲ್ಯಾಣಕ್ಕೆ ಬಂದು ನೆಲೆಸಲು ತೀರ್ಮಾನಿಸಿಬಿಡುತ್ತಾನೆ. ಈ ನಿರ್ಧಾರ ಮಹಾರಾಣಿಯಲ್ಲಿ ಮೊದಲು ಆಶ್ಚರ್ಯ ಮೂಡಿಸಿದರೂ ಅರಸುತನ ಬಿಟ್ಟು ನಡೆದ ಪತಿಯ ನಡೆಯಲ್ಲಿ ಯಾವುದೋ ಮಹದುದ್ದೇಶ ಇರಬೇಕೆಂದು ಗ್ರಹಿಸುತ್ತಾಳೆ. ಪತಿಯೊಂದಿಗೆ ತಾವೂ ಹೊರಟು ನಿಲ್ಲುತ್ತಾರೆ. ಲೌಕಿಕ ಜೀವನದಲ್ಲಿ ಮಾತ್ರವಲ್ಲ, ಪಾರಮಾರ್ಥಿಕ ಪಥದಲ್ಲೂ ತಾನು ಪತಿಯ ಸಹಚರಿಣಿ, ಜೊತೆಗಾತಿ ಎಂಬುದನ್ನು ತೋರಿಸಿದ ದಿಟ್ಟ ಮಹಿಳೆ ರಾಣಿ ಗಂಗಾದೇವಿ.
ಕಲ್ಯಾಣಕ್ಕೆ ಸಾಮಾನ್ಯರಂತೆ ಬಂದ ರಾಜ- ರಾಣಿಯರನ್ನು ಶರಣರು ಪ್ರೀತಿ, ಆದರಗಳಿಂದ ಸ್ವಾಗತಿಸುತ್ತಾರೆ. ಆದರೆ ಮಹಾಮನೆಯಲ್ಲಿ ಕಾಯಕ ಕಡ್ಡಾಯ (compulsory). ದಾಸೋಹ ಅನಿವಾರ್ಯ (inevitable). ಸತ್ಯ, ಶುದ್ಧ ಕಾಯಕದಿಂದ ಸಂಪಾದಿಸಿ, ತಾನು ಬದುಕಿ, ಸಮಾಜಕ್ಕೂ ದಾಸೋಹ ರೂಪದಲ್ಲಿ ವಿನಿಯೋಗಿಸಬೇಕು. ರಾಜರೆಂಬ ಗೌರವದಿಂದ ವಿಶೇಷ ರಿಯಾಯಿತಿ ತೋರಿ, ಕೇವಲ ಅನುಭವ ಮಂಟಪದ ಆಧ್ಯಾತ್ಮಿಕ ಚರ್ಚೆಗಳಲ್ಲಿ ಭಾಗವಹಿಸಿ, ಲಿಂಗಪೂಜೆಯಲ್ಲಿ ತೊಡಗುವಂತಿರಲಿಲ್ಲ. ಹೀಗಾಗಿ ಕಟ್ಟಿಗೆ ಒಡೆದು, ಹೊತ್ತು ತಂದು ಮಾರಿ, ಬಂದ ಹಣದಲ್ಲಿ ದಾಸೋಹ ಮಾಡುತ್ತಾ ಜೀವನ ನಡೆಸಲು ತೀರ್ಮಾನಿಸುತ್ತಾರೆ ರಾಜ ದಂಪತಿಗಳು. ಕತ್ತಿ- ಗುರಾಣಿ ಹಿಡಿದಿದ್ದ ರಾಜನ ಕೈಯಲ್ಲೀಗ ಇಷ್ಟಲಿಂಗದ ಜೊತೆಗೆ ಕೊಡಲಿ; ಕಿರೀಟ ಧರಿಸುತ್ತಿದ್ದ ತಲೆಯ ಮೇಲೀಗ ಸೌದೆಯ ಕಟ್ಟು. ಎಲ್ಲಿಯ ದೊರೆತನ? ಎಲ್ಲಿಯ ಕಟ್ಟಿಗೆ ಹೊರೆ (ಮೋಳಿಗೆ)? ಅದೇ ರೀತಿ ಸರಳ ಬದುಕನ್ನು ಅಪ್ಪಿಕೊಂಡ ಮಹಾರಾಣಿ ಸಾಮಾನ್ಯ ಮಹಿಳೆಯಂತೆ ವೇಷ ಭೂಷಣ ಬದಲಿಸಿಕೊಳ್ಳುತ್ತಾರೆ. ಗಂಡನ ಕಟ್ಟಿಗೆ ಒಡೆದು ಮಾರುವ ಕಾಯಕದಲ್ಲಿ ಸಮಸಮವಾಗಿ ನೆರವಾಗುತ್ತಾರೆ. ಮಿಕ್ಕ ಹಣದಲ್ಲಿ ದಾಸೋಹ ಮಾಡಿ ಸಮಾಜಕ್ಕೆ ಸಲ್ಲಿಸಲು ಮುಂದಾಗುತ್ತಾರೆ. ಪೂರ್ವಾಶ್ರಮದ ಸಕಲ ಭೋಗ ವೈಭವಗಳಿಂದ ಬಿಡಿಸಿಕೊಂಡ ರಾಜ- ರಾಣಿಯರು, ಮೋಳಿಗೆಯ ಮಾರಯ್ಯ ಮತ್ತು ಮಹಾದೇವಮ್ಮ ಎಂಬ ಹೊಸ ಹೆಸರಿನಿಂದ ಎಲ್ಲ ಶರಣರ ಗೌರವ, ಅಭಿಮಾನ, ಅಚ್ಚರಿ, ಮೆಚ್ಚುಗೆಗಳಿಗೆ ಪಾತ್ರರಾಗಿದ್ದು ಇತಿಹಾಸದಲ್ಲಿಯೇ ಒಂದು ಅಪೂರ್ವ ಕಥೆ.
ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುವುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ,
ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
ಎನ್ನುವ ಮಾರಯ್ಯನವರ ವಚನ ಅವರ ನಿರ್ಮೋಹಕ್ಕೆ, ಸರಳತೆಗೆ ಸಾಕ್ಷಿ. ಬದುಕಿನ ಬಗ್ಗೆ ಅವರಿಗಿದ್ದ ಇಂಥ ಸ್ಪಷ್ಟತೆ ಅವರನ್ನು ಕಲ್ಯಾಣಕ್ಕೆ ಕರೆ ತಂದಿತ್ತು. ಅಲ್ಲಿಯ ಶರಣರೊಂದಿಗೆ ಬೆರಸಿ ಬಿಟ್ಟಿತ್ತು.
ಎನಗೆ ಗುರುವಾಗಿ ಬಂದನಯ್ಯಾ ಬಸವಣ್ಣನು.
ಎನಗೆ ಲಿಂಗವಾಗಿ ಬಂದು ಎನ್ನಂಗದಲ್ಲಿ ನಿಂದನಯ್ಯಾ ಬಸವಣ್ಣನು.
ಎನಗೆ ಜಂಗಮವಾಗಿ ಬಂದು, ಎನ್ನ ಸಂಸಾರ ಪ್ರಕೃತಿಯ ಹರಿದು,
ಭಕ್ತಿ ಜ್ಞಾನ, ವೈರಾಗ್ಯವ ತುಂಬಿ,
ಪಾದೋದಕ, ಪ್ರಸಾದವನಿತ್ತು ಸಲಹಿದನಯ್ಯಾ ಬಸವಣ್ಣನು…
ಎಂದು ತಮ್ಮ ಬದುಕಿನ ಗತಿಯನ್ನೇ ಬದಲಿಸಿದ ಬಸವಣ್ಣನವರನ್ನು ಅನೇಕ ವಚನಗಳಲ್ಲಿ ಮಾರಯ್ಯನವರು ನೆನೆಯುತ್ತಾರೆ. ಸಂಸಾರ ಪ್ರಕೃತಿಯನ್ನು ಹರಿದು ಭಕ್ತಿ, ಜ್ಞಾನ, ವೈರಾಗ್ಯಗಳಲ್ಲಿ ಇಡೀ ಬದುಕನ್ನೇ ಲಿಂಗಮಯವಾಗಿ ಮಾಡಿಕೊಂಡ ಧನ್ಯತೆಯನ್ನು ಅವರ ವಚನಗಳಲ್ಲಿ ಗುರುತಿಸಬಹುದು.
ಕಲ್ಯಾಣ ಶರಣರಲ್ಲಿ ಉನ್ನತ ವ್ಯಕ್ತಿತ್ವ ಸಾಧಿಸಿದ ಹೆಗ್ಗಳಿಕೆ ಮೋಳಿಗೆ ಮಾರಯ್ಯಾ ದಂಪತಿಗಳದು. ಅವರೀರ್ವರು ಕಾಯಕ ನಿಷ್ಠೆ ಮತ್ತು ಆತ್ಮಾಭಿಮಾನಗಳ ಪ್ರತೀಕದಂತಿದ್ದರು. ದಾಂಪತ್ಯ ಜೀವನಕ್ಕೆ ಆದರ್ಶಪ್ರಾಯವಾಗಿತ್ತು ಇವರ ಸಾಮರಸ್ಯ. ಅನೇಕ ಶರಣರು ಅವರನ್ನು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ.
ಕಾಶ್ಮೀರದ ಅರಸನಾಗಿದ್ದಾಗ ಪರಮೇಶ್ವರನ ಪರಮ ಭಕ್ತರಾಗಿದ್ದ ಮಾರಯ್ಯನವರು ಆರಂಭದಲ್ಲಿ ಲಿಂಗತತ್ವವನ್ನು ಅಳವಡಿಸಿಕೊಳ್ಳುವಲ್ಲಿ ಕಷ್ಟಪಟ್ಟಿರಬೇಕು. ಬಸವಣ್ಣನವರಿಗಿಂತ ಪೂರ್ವದಲ್ಲಿದ್ದ ಭಕ್ತ ಸಿರಿಯಾಳ, ಸಿಂಧು ಬಲ್ಲಾಳರಂತಹ ಪುರಾತನರು ಭಕ್ತಿಯಲ್ಲಿ ತುಂಬಾ ಗಟ್ಟಿಗರಾಗಿದ್ದ ಅನೇಕ ದೃಷ್ಟಾಂತಗಳು ಕಾಶ್ಮೀರದ ದೊರೆಗೆ ಆದರ್ಶವಾಗಿದ್ದು, ಭಕ್ತಿಯ ಶಕ್ತಿಯಿಂದ ಪುರಾತನರಂತೆ ತಾನೂ ಕೈಲಾಸಕ್ಕೆ ಶರೀರ ಸಹಿತ ಹೋಗಬೇಕೆಂದು ಬಯಸಿದ್ದರು. ಕೈಲಾಸ ಹಾಗೂ ಪೌರಾಣಿಕ ಶಿವನಲ್ಲಿದ್ದ ಅವರ ನಂಬಿಕೆ, ನಿಷ್ಠೆಗಳು ಬದಲಾಗಲು ಸಮಯ ತೆಗೆದುಕೊಂಡಿರಬಹುದು. ಇಂಥ ಆರಂಭದ ಹೊಯ್ದಾಟಗಳಲ್ಲಿದ್ದ ಪತಿಯನ್ನು ಬಸವಣ್ಣನವರ ಹೊಸ ಸಿದ್ಧಾಂತಗಳಿಗೆ ಹೊಂದಿಸುವಲ್ಲಿ ಮಹಾದೇವಮ್ಮನವರು ಪ್ರಯತ್ನಿಸಿದ್ದು ಅವರ ವಚನಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಪತಿಯ ಭಕ್ತಿಯಲ್ಲಿ ಬೆಂಬಲವಾಗಿ ನಿಂತ ಮಹಾದೇವಮ್ಮ, ನಿಜಕ್ಕೂ ಅಸಾಧಾರಣ ವ್ಯಕ್ತಿಯಂತೆ ಗೋಚರಿಸುತ್ತಾರೆ. ಕೈಲಾಸದ ಭ್ರಮೆಯಿಂದ ಮೋಳಿಗೆಯ ಮಾರಯ್ಯನವರು ಹೊರಬರಲು, ಅನುಭವ ಮಂಟಪದ ಚರ್ಚೆಗಳ ಜೊತೆಯಲ್ಲಿ ಪತ್ನಿಯ ಸಮಯೋಚಿತ ಮಾರ್ಗದರ್ಶನವೂ ನೆರವಾಗಿರಬೇಕು.
ಕಾಯವೆರಸಿ ಕೈಲಾಸಕ್ಕೆ ಹೋಹೆನೆಂಬರು,
ಇದು ಕ್ರಮವಲ್ಲ,
ಘನಲಿಂಗ ಕರಸ್ಥಲದೊಳಗಿಪ್ಪ ಅನುವನರಿಯದೆ
ಇಲ್ಲಿ ಕರ್ಮ, ಅಲ್ಲಿ ನಿಃಕರ್ಮವೇ?
ಹೇಮದ ಮಾಟದ ಒಳಹೊರಗಿನಂತೆ
ಮರ್ತ್ಯ ಕೈಲಾಸವೆಂಬ ಕಟ್ಟಳೆಯಿಲ್ಲ.
ಆತ್ಮನಿಶ್ಚಯವಾದಲ್ಲಿಯೇ ಕೈವಲ್ಯ.
ಮತ್ತತ್ವವಾದಲ್ಲಿಯೇ ಮರ್ತ್ಯದೊಳಗು.
ಈ ಗುಣ ಸದಮಲ ಭಕ್ತನ ಯುಕ್ತಿ;
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಿಕ್ಕಿದ ಗೊತ್ತು.
ಆತ್ಮವು ಯಾವ ಭಾವದಲ್ಲಿ, ಎಲ್ಲಿ ನಿಶ್ಚಯವಾಗಿರುತ್ತದೆಯೋ ಅದೇ ಕೈಲಾಸ, ಅದೇ ಕೈವಲ್ಯ, ಅಂದರೆ ಮೋಕ್ಷ. ಈ ಅರಿವು ಪಡೆಯದೆ ಮತ್ತೆಲ್ಲಿಯೋ ಕೈಲಾಸವಿದೆಯೆಂದು ಕಲ್ಪಿಸಿಕೊಳ್ಳುವುದಾದರೆ ಅದೇ ಸಂಸಾರದ ಜಂಜಡದ ಮರ್ತ್ಯ ಎಂದು ತಿಳಿಹೇಳುತ್ತಾರೆ ಮಹಾದೇವಮ್ಮ. “… ಶಕ್ತಿಯ ಮಾತೆಂದು ಧಿಕ್ಕರಿಸಬೇಡಿ. ಹೊರಗೆ ಕೂಡಿಹೆನೆಂಬುದು ನಿಮ್ಮ ಅರಿವಿಂಗೆ ಹಾನಿ, ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ, ನಿಮ್ಮ ಶರಣರ ನೆಲೆಯ ನೀವೇ ನೋಡಿಕೊಳ್ಳಿ” ಎಂದು ಪತಿಗೆ ತಿಳಿ ಹೇಳುವ ಪರಿ ಅನನ್ಯ.
ಕೂಟಕ್ಕೆ ಕುರುಹಾದುದನರಿಯದೆ, ಆತ್ಮಕ್ಕೆ ಅರಿವಾದುದನರಿಯದೆ,
ಕೈಲಾಸವೆಂಬ ಸೂತ್ರದ ಒಳಗಿಗೆ ಮನಸೋತಿರಲ್ಲ!
ಅಂಧಕನ ಕೈಯ ರತ್ನದಂತೆ ಆದಿರಲ್ಲಾ!
ಪಂಗುಳನ ಕರದ ಶಸ್ತ್ರದಂತೆ ಆದಿರಲ್ಲಾ!
ಈ ನಿರಂಗವ ತಿಳಿದು ನಿಂದಲ್ಲಿ ಬೇರೆ ಲಿಂಗವಡಗುವುದಕ್ಕೆ
ಉಭಯವುಂಟೆಂಬ ದಂದುಗ ಬೇಡ.
ತಾ ನಿಂದಲ್ಲಿಯೆ ನಿಜಕೂಟ,
ತಿಳಿದಲ್ಲಿಯೆ ನಿರಂಗವೆಂಬುದು.
ಉಭಯವಿಲ್ಲ ಎನ್ನಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ.
ಕುರುಡನ ಕೈಯಲ್ಲಿರುವ ಮಾಣಿಕ್ಯದಂತೆ, ಹೆಳವನ ಕೈಯಲ್ಲಿರುವ ಶಸ್ತ್ರದಂತೆ ಆದರೆ ಏನು ಪ್ರಯೋಜನ? ಕೈಯಲ್ಲಿರುವ ಇಷ್ಟಲಿಂಗವೇ ಸಮರಸಕ್ಕೆ ಕಾರಣವಾದ ಆತ್ಮದ ಅರಿವಿನ ಕುರುಹು. ಇದರ ಮರ್ಮ ತಿಳಿಯದೇ ಕಾಣದ ಕೈಲಾಸದ ಸೂತ್ರಕ್ಕೆ ಇನ್ನೂ ಜೋತುಬಿದ್ದಿರುವಿರಲ್ಲಾ. ನಿಮ್ಮ ಕರಸ್ಥಲದ ಲಿಂಗದ ಮಹತ್ವ ನಿಮಗೆ ಮನದಟ್ಟಾದಲ್ಲಿ ಬೇರೊಂದು ಲಿಂಗದಲ್ಲಡಗಿ ಕೈಲಾಸಕ್ಕೆ ಹೋಗಬೇಕೆನ್ನುವ ನಿಮ್ಮ ಹೊಯ್ದಾಟ ನಿಲ್ಲುತ್ತದೆ, ಎಂದು ಮಹದೇವಮ್ಮ. ಪತಿಗೆ ಪರಿಪರಿಯಾಗಿ ಲಿಂಗ ತತ್ವವನ್ನು ಅರ್ಥೈಸುವ ರೀತಿ ಮನೋಜ್ಞವಾಗಿದೆ.
ಮನೆಯಲ್ಲಿ ನಡೆಸುತ್ತಿದ್ದ ಈ ಬಗೆಯ ಚಿಂತನ ಮಂಥನಗಳಿಂದಾಗಿ ಮಾರಯ್ಯನವರಲ್ಲಿದ್ದ ಗೊಂದಲ, ಕಳವಳಗಳು ನಿಧಾನವಾಗಿ ತಹಬದಿಗೆ ಬಂದಿರಬೇಕು. ವಿಚಾರಗಳ ಸ್ಪಷ್ಟತೆ ಮೂಡಿದರೆ ಸಂದೇಹಗಳು ದೂರವಾಗುತ್ತವೆ, ಮನಸ್ಸು ತಿಳಿಯಾಗುತ್ತದೆ. ಉಭಯ ಸಂಕಟವನ್ನು ಮೆಟ್ಟಿನಿಂತ ಮಾರಯ್ಯನವರು ಹೇಳುತ್ತಾರೆ:
ಕಾಯ ಸಮಾಧಿಯನೊಲ್ಲೆ
ನೆನಹು ಸಮಾಧಿಗೆ ನಿಲ್ಲೆ
ಕೈಲಾಸವೆಂಬ ಭವಸಾಗರವನೊಲ್ಲೆ
ನೀ ಎನ್ನ ಅಲ್ಲಿಗೆ ಇಲ್ಲಿಗೆ ಎಂದೆಳೆಯದೆ
ನಿನ್ನಲ್ಲಿಗೆ ಕೂಟಸ್ಥವ ಮಾಡು, ನಿಃಕಳಂಕ ಮಲ್ಲಿಕಾರ್ಜುನಾ.
ಅರಮನೆಯಿಂದ ನೆರಕೆಯ ಮನೆಗೆ ಜೊತೆಯಾಗಿ ಬಂದ ಪತ್ನಿ, ಅರಿವಿನ ಹಾದಿಯಲ್ಲೂ ಊರುಗೋಲಾಗಿ ನಿಂತದ್ದು ತಮ್ಮ ಭಾಗ್ಯವೆಂದು ಭಾವಿಸುತ್ತಾರೆ. “ನಾನೇಕೆ ಬಂದೆ ಸುಖವ ಬಿಟ್ಟು?” ಎಂದು ಕಳವಳಿಸುವಾಗ, ಅವರ ಹೊಯ್ದಾಟಗಳನ್ನು ಹತೋಟೆಗೆ ತರುವಲ್ಲಿ ಮಹಾದೇವಿ ತಾಯಿಯ ಪಾತ್ರ ದೊಡ್ಡದಾಗಿತ್ತು. ಇಂಥ ಜೊತೆಗಾತಿಯ ಭಾಗ್ಯ ಎಷ್ಟು ಜನರಿಗೆ ಸಿಕ್ಕೀತು? ಹಲವಾರು ವಚನಗಳಲ್ಲಿ ಅವರು ಪತ್ನಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಸತ್ವಗೆಟ್ಟಲ್ಲಿ ಕಾಷ್ಠವನೂರಿ ನಡೆಯಬೇಕು.
ಮತ್ತತ್ವವಿದ್ದಲ್ಲಿ ನಿಶ್ಚಯವ ಹೇಳಲಾಗಿ, ಮಹಾಪ್ರಸಾದವೆಂದು ಕೈಕೊಳಬೇಕು.
ಎನ್ನ ಭಕ್ತಿಗೆ ನೀ ಶಕ್ತಿಯಾದ ಕಾರಣ, ಎನ್ನ ಸತ್ಯಕ್ಕೆ ನೀ ಸತಿಯಾದ ಕಾರಣ,
ಎನ್ನ ಸುಖದುಃಖ ನಿನ್ನ ಸುಖದುಃಖ ಅನ್ಯವಿಲ್ಲ.
ಇದಕ್ಕೆ ಭಿನ್ನಭೇದವೇನು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
ದೇಹದ ಶಕ್ತಿ ಕುಂದಿದಾಗ ಕೋಲಿನ ನೆರವಿನಿಂದ ನಡೆಯುವುದು ಅನಿವಾರ್ಯ. ದ್ವಂದ್ವಗಳು, ಶಂಕೆಗಳು ಇದ್ದಾಗ, ಸರಿಯಾದ ಮಾಹಿತಿಯನ್ನು, ವಿಷಯ ಸ್ಪಷ್ಟತೆಯನ್ನು ಯಾರಾದರೂ ಹೇಳಿದಾಗ ಅದನ್ನು ಮಹಾಪ್ರಸಾದವೆಂದು ಸ್ವೀಕರಿಸಬೇಕು. ನನ್ನ ಭಕ್ತಿಗೆ ನೀನು ಶಕ್ತಿಯಾಗಿ, ನನ್ನ ಸತ್ಯಕ್ಕೆ ನೀನು ಸತಿಯಾಗಿ ಅಂತಹ ಮಾರ್ಗದರ್ಶನ ನೀಡಿರುವೆ. ನಮ್ಮಿಬ್ಬರ ಸುಖದುಃಖಗಳು ಒಂದೇ ಎಂದು ಮಾರಯ್ಯನವರು ಪತ್ನಿಯನ್ನು ಕೊಂಡಾಡುತ್ತಾರೆ. “ನಿನ್ನ ಭಕ್ತಿಯ ಬೆಳೆಯೇ ಎನಗೆ ಸತ್ಯದ ಹಾದಿ” ಎಂದು ಆಧ್ಯಾತ್ಮದ ಹಾದಿಯಲ್ಲಿ ತಮಗಿಂತಲೂ ಒಂದು ಹೆಜ್ಜೆ ಮುಂದಿರುವ ಮಹಾದೇವಮ್ಮನವರ ಸಾಧನೆಯನ್ನು ಎತ್ತಿ ಹಿಡಿಯುತ್ತಾರೆ.
ಸಿರಿ-ಸಂಪತ್ತು, ಆಳುಕಾಳು, ಅರಮನೆಯ ವೈಭೋಗ… ಎಲ್ಲವನ್ನೂ ಬಿಟ್ಟು ಸರಳ ಬದುಕನ್ನು ಅಪ್ಪಿಕೊಳ್ಳಲು ಅಖಂಡ ಮನಸ್ಥೈರ್ಯ ಬೇಕು. ಬಸವಣ್ಣನವರ ಆದರ್ಶ ತತ್ವಗಳನ್ನು ಬದುಕಲಿಕ್ಕೆಂದೇ ಕಲ್ಯಾಣಕ್ಕೆ ಬಂದ ಮಾರಯ್ಯ ಮತ್ತು ಮಹಾದೇವಮ್ಮನವರ ಭಾವ ಬುದ್ಧಿಗಳಲ್ಲಿ ಅನುಭಾವ ಬೆರೆತು ಹೋಗಿತ್ತು. ಕಟ್ಟಿಗೆ ಮಾರಿ ಬದುಕುವ ಕಾಯಕದ ಶ್ರಮದಲ್ಲಿ ಶುದ್ಧವಾಗಿ, ದಾಸೋಹದಲ್ಲಿ ಧನ್ಯತೆಯನ್ನು ಅನುಭವಿಸಿದರು. ಶಿವಯೋಗಿ ಸಿದ್ಧರಾಮೇಶ್ವರರ ಈ ವಚನ ಮೋಳಿಗೆಯ ಮಾರಯ್ಯನವರ ವ್ಯಕ್ತಿತ್ವವನ್ನು ಕೆತ್ತಿ ನಿಲ್ಲಿಸಿದಂತಿದೆ:
ಮೂರು ಕಟ್ಟಿಗೆಯ ಮೂರರಲ್ಲಿರಿಸಿದನು
ನಿರಾಳ ನಿಷ್ಪತ್ತಿಯಾದ ಲಿಂಗದಲ್ಲಿ
ಆರೂಢ ಅಂಗುಲದೊಳರುವೆರಳನಿರಿಸಿದನು
ಧೀರ ಮೋಳಿಗೆ ಮಾರ ಶರಣು ಶರಣು
ಆರೂಢ ದಶಗಳ ಭೇದವನರಿದಂತೆ
ತೋರಿದ ಶರಣೆಂದೆನೈ, ಕಪಿಲಸಿದ್ಧಮಲ್ಲಿನಾಥಾ.
ಈ ನೆಲವನ್ನು ಆಳಿ, ಅಳಿದ ಸಾವಿರಾರು ಅರಸರಲ್ಲಿ ಒಬ್ಬರಾಗಿ ಸರಿದು ಹೋಗದೆ ಮಾರಯ್ಯನವರು ನಿಜವಾದ ನೆಲೆಯಲ್ಲಿ ತಮ್ಮನ್ನು ಕಂಡುಕೊಳ್ಳಲು ಶರಣ ಧರ್ಮ ಸ್ವೀಕರಿಸಿದರು. ನಡೆ-ನುಡಿಗಳಲ್ಲಿ ಒಂದಾಗ ಬೇಕಾದ ಅರಿವಿನ ಈ ಹಾದಿಯಲ್ಲಿ ಪತ್ನಿಯ ಸಾಂಗತ್ಯ ಅವರಿಗೆ ದೊಡ್ಡ ಆಸರೆಯಾಯಿತು.
ಹೀಗಿರು ಎಂದಡೆ, ಹಾಗಿರದಿದ್ದಡೆ ಅವಳು ಸತಿಯಲ್ಲ, ನಾ ಪತಿಯಲ್ಲ.
ಆವ ಠಾವಿನಲ್ಲಿ ಎನಗೆ ಸತಿ ಸಂಗ? ಆವ ಠಾವಿನಲ್ಲಿ ಲಜ್ಜೆ ನಾಚಿಕೆ?
ಕೇಣಸರ ಅಪಮಾನವಿಲ್ಲದಿರಬೇಕು, ಅದ ಎನ್ನ ಭಕ್ತಿ ಮುಕ್ತಿಯ ಬೆಳೆ.
ಸತಿಪತಿಯಿಬ್ಬರೂ ಏಕವಾದಲ್ಲಿ ನಿಃಕಳಂಕ ಮಲ್ಲಿಕಾರ್ಜುನ ಹೆಡೆಗುಡಿಗೊಳಗಾದನು.
ಮಾರಯ್ಯನವರ ಈ ವಚನವು ದಾಂಪತ್ಯ ಧರ್ಮಕ್ಕೆ ಹೊಸ ಭಾಷ್ಯವನ್ನೇ ಕೊಡುತ್ತದೆ. ಒಬ್ಬರ ಆಶಯಗಳಿಗೆ ಮತ್ತೊಬ್ಬರು ಪೂರಕವಾಗಿ, ಒಬ್ಬರ ಕನಸುಗಳಿಗೆ ಮತ್ತೊಬ್ಬರು ಕಾವಲುಗಾರರಾಗಿ, ಒಬ್ಬರ ಆಸಕ್ತಿಗಳಿಗೆ ಮತ್ತೊಬ್ಬರು ಜೊತೆಯಾಗಿ ನಿಂತಾಗ ಮಾತ್ರ ಸತಿ- ಪತಿ ಎನ್ನುವ ಸಂಬಂಧ ಅರ್ಥಪೂರ್ಣ. “ಹೀಗಿರು” ಎಂದು ಆಜ್ಞಾಪಿಸುವ ಪ್ರೀತಿ ಇಬ್ಬರಲ್ಲೂ ಇರಬೇಕು. ಆ ಪ್ರೀತಿಗೆ ಸೋತು ಹೃದಯ ಗೆಲ್ಲುವ “ಬಾಗುವಿಕೆ” ಇಬ್ಬರಲ್ಲೂ ಮೂಡಬೇಕು. ಎರಡು ದೇಹ ಮತ್ತು ಆತ್ಮಗಳ ನಡುವೆ ಯಾವ ಲಜ್ಜೆ, ನಾಚಿಕೆಗಳೂ ಇಲ್ಲದ ಸಂಬಂಧವದು. ಬಾಂಧವ್ಯ ಹೀಗಿದ್ದಾಗ ಮಾತ್ರವೇ ದಾಂಪತ್ಯದ ಕೇಣಸರ ಅಂದರೆ ರತ್ನಮಾಲೆ ಉಜ್ವಲವಾಗಿ ಹೊಳೆಯುವುದು. ಯಾವುದೇ ದೋಷಗಳಿಲ್ಲದ ಮೌಲ್ಯ ಅದಕ್ಕೆ ದಕ್ಕುವುದು. ನನ್ನ ಭಕ್ತಿ ಮುಕ್ತಿಯ ಬೆಳೆ ಎಂದರೆ ಇದೇ. ಗಂಡ-ಹೆಂಡತಿ ಹೀಗೆ ಏಕೋಭಾವದಿಂದ ಒಂದಾದಲ್ಲಿ ಆ ದೇವರು ಶಿಕ್ಷಾರ್ಥಿಯಂತೆ ವಿನಮ್ರನಾಗಿ ಕೈಗಳನ್ನು ಹಿಂಬದಿಗೆ ಕಟ್ಟಿಕೊಂಡು ಬಂದು ನಿಲ್ಲುತ್ತಾನೆ ಎನ್ನುವ ಮಾತು ಅವಿನಾಭಾವ ಸಂಬಂಧದಲ್ಲಿ ಬೆಸೆದುಕೊಳ್ಳುವ ದಾಂಪತ್ಯದ ಹಿರಿಮೆಯನ್ನು ಎತ್ತಿತೋರಿಸುತ್ತದೆ. ಸಮಷ್ಠಿಯೇ ನಮಿಸುವಂಥ, ವಿಧೇಯವಾಗಿ ಗೌರವ ಸಲ್ಲಿಸುವಂತಹ ದಾಂಪತ್ಯ ಮೋಳಿಗೆ ಮಾರಯ್ಯ ಮತ್ತು ಮಹಾದೇವಮ್ಮನವರದಾಗಿತ್ತು.
ಶರಣರು ದಾಂಪತ್ಯ ಮತ್ತು ನಿರ್ವಾಣಗಳನ್ನು ಪರಸ್ಪರ ವಿರೋಧವೆಂದು ಭಾವಿಸಲೇ ಇಲ್ಲ. ಸಂಸಾರ ಮತ್ತು ಮುಕ್ತಿಗಳನ್ನು ಬೇರೆ ಬೇರೆ ಎಂದು ತಿಳಿದಲ್ಲಿ ನೆಲದ ಬದುಕಿಗೆ ಅರ್ಥವೇ ಇರುವುದಿಲ್ಲ ಎಂಬ ನಿಲುವು ಅವರದಾಗಿತ್ತು. ಆದ್ದರಿಂದಲೇ ಜೀವನ್ಮುಖಿಯಾಗಿ ಅವರ ಬದುಕು ಅರಳಿಕೊಂಡಿತು. “ಮಹಾಲಿಂಗಿಗಳ ಸಂಭಾಷಣದಲ್ಲಿ ನಿಂದು ನಿರ್ವಾಣವಾಗು” ಎಂದು ಮುಕ್ತಿಯ ಹಾದಿ ತೋರಿಸುತ್ತಾರೆ ಮಾರಯ್ಯ. “ನಿಶ್ಚಯವ ತಾನರಿತು, ನಿಶ್ಚಯವಾಗಿ ನಿಂದಲ್ಲಿ ಆ ಬಚ್ಚ ಬಯಲ ಬೆಳಗ ನಿನ್ನ ನೀನೇ ನೋಡಿಕೋ” ಎಂದು ಬಯಲಲ್ಲಿ ಬೆಳಕಾಗುವ ಹಾದಿ ತೋರುತ್ತಾರೆ ಮಹಾದೇವಮ್ಮ.
ಶರಣರ ಆದರ್ಶ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಮೋಳಿಗೆಯ ಮಾರಯ್ಯ ದಂಪತಿಗಳು ಕ್ರಾಂತಿಯ ಸನ್ನಿವೇಶವನ್ನೂ, ನಂತರದ ಸಂದರ್ಭವನ್ನೂ ಕಣ್ಣಾರೆ ಕಂಡವರು. “ಅಂಗವೆಂಬ ಭಾವ, ಲಿಂಗವೆಂಬ ನೆನಹು ನಿರಂಗವಾದಲ್ಲಿ, ಕಾಯಕ್ಕೆ ಕುರುಹಿಲ್ಲ, ಜೀವಕ್ಕೆ ಭಯವಿಲ್ಲ…” ಎನ್ನುವ ನಿಷ್ಪತ್ತಿಯ ಸ್ಥಿತಿ ತಲುಪಿದವರು. ಕಲ್ಯಾಣದ ಪ್ರಣತಿಯಲ್ಲಿ ಭಕ್ತಿಯ ದೀವಿಗೆ ಬೆಳಗುತ್ತಿರುವಾಗ ಅದರ ಬೆಳಗಿನಲ್ಲಿ ಮಿಂದ ಮಾರಯ್ಯನವರು, ಆ ಪ್ರಣತಿ ಒಡೆದು, ಜ್ಯೋತಿ ನಂದಿದಾಗಿನ ದಾರುಣ ದಿನಗಳನ್ನು ದಿಟ್ಟ ಶರಣರಾಗಿ ಎದರಿಸಿದರು. ಬಸವಣ್ಣನವರ ನಿರ್ಗಮನದಿಂದ ಕಲ್ಯಾಣದಲ್ಲಾದ ಬೆಳವಣಿಗೆಯನ್ನು ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ಆ ಸಂದರ್ಭದ ಅವರ ವಚನಗಳು ಹೃದಯವನ್ನೇ ಅಲ್ಲಾಡಿಸುವಂತಿವೆ. ಕಲ್ಯಾಣದ ಉಚ್ಛ್ರಾಯ ದಿನಗಳಿಗೂ, ಕ್ರಾಂತಿಯ ವಿಪ್ಲವದ ಸಂದರ್ಭಕ್ಕೂ ಸಾಕ್ಷಿಯಾದ ಅವರ ವಚನಗಳು ಅನೇಕ ಐತಿಹಾಸಿಕ ದಾಖಲೆಗಳನ್ನು ಒದಗಿಸುತ್ತವೆ.
ಈಗಿನ ಬಸವ ಕಲ್ಯಾಣದಿಂದ 30 ಕಿ.ಮೀ ದೂರದಲ್ಲಿರುವ ಹುಮನಾಬಾದ್ ತಾಲ್ಲೂಕಿನಲ್ಲಿರುವ ಮೊಳಕೇರಾ ಗ್ರಾಮದಲ್ಲಿರುವ ವಿಶಾಲವಾದ ಗವಿಯಲ್ಲಿ ಇವರು ವಾಸಿಸಿದ್ದರೆಂದು ಗುರುತಿಸಲಾಗಿದೆ. ತುಂಬಾ ಸುಂದರವಾದ, ನೋಡಿದರೆ ಮತ್ತೆ ನೋಡಬೇಕೆನ್ನಿಸುವ ಈ ತಂಪಾದ ಗವಿಯಲ್ಲಿ ಬಾವಿಯೊಂದಿದೆ. ಗವಿಯ ಒಳಗಿನ ಮತ್ತು ಹೊರಗಿನ ಪ್ರಶಾಂತತೆಯಲ್ಲಿ, ಕಾಯಕ ಮತ್ತು ದಾಸೋಹದಲ್ಲಿ ಸಾರ್ಥಕ್ಯವನ್ನು ಕಂಡುಕೊಂಡ ಅವರ ಬದುಕನ್ನು ಕಲ್ಪಿಸಿಕೊಳ್ಳುವುದು ನಿಜಕ್ಕೂ ಒಂದು ಅನೂಹ್ಯ ಅನುಭವ.
Comments 1
G.B.Patil
Dec 5, 2018Arasottinind ARIVINEDEGE. I felt like I was READING Romilla Thaper history book.Presentation is beautiful and reader friendly. I think 12 century days Were better then the present days.Since lady can have equal saying of MAN. PATI & PATNI and their understanding is praise Worthy.