ಅನುಭಾವ ಮತ್ತು ಅನಿರ್ವಚನೀಯತೆ
ನಾವು ಇಂದ್ರಿಯಾನುಭವವನ್ನು ವರ್ಣಿಸಿದಂತೆ ಅನುಭಾವ ಅಥವಾ ತುರೀಯವನ್ನು ವರ್ಣಿಸಲಾಗದು. ಅನುಭಾವಿಗಳೇ ಅದನ್ನು ಅನಿರ್ವಚನೀಯ, ಮಾತುಮನಂಗಳಿಂದತ್ತತ್ತ, ಮೂಕ/ಶಿಶು ಕಂಡ ಕನಸಿನಂತಿರಬೇಕು, ಎಂದಿದ್ದಾರೆ. ಮುಕ್ತಾಯಕ್ಕನ ಪ್ರಕಾರ ಅನಿರ್ವಚನೀಯತೆಯು ಅನುಭಾವದ ನಿರ್ಧಾರಕ ಲಕ್ಷಣ; ಆದುದರಿಂದ, ‘ಅದ್ವೈತವ ನೆಲೆಗೊಳಿಸಿ ಎರಡಳಿದೆನೆಂಬವರು ಶಿಶು ಕಂಡ ಕನಸಿನಂತಿರಬೇಕಲ್ಲದೆ, ನುಡಿದು ಹೇಳಬಾರದು’. ಆಕೆಗೆ ತನ್ನ ಅಣ್ಣ ಅಜಗಣ್ಣ ಮಾದರಿ. ‘ಎನ್ನ ಅಣ್ಣ ಅಜಗಣ್ಣನಂತೆ ಶಬ್ದಮುಗ್ಧವಾಗಿರಬೇಕಲ್ಲದೆ ಶಬ್ದಸಂದಣಿಯ ಮಾತು ಸಯವಲ್ಲ’ ಎನ್ನುತ್ತಾಳೆ, ಅಲ್ಲಮರನ್ನು ಕುರಿತು(1). ಅಷ್ಟೇ ಅಲ್ಲ, ‘ನಿಮಗೆ ನುಡಿಯ ಹಂಗು ಇನ್ನೂ ಬಿಟ್ಟಿಲ್ಲ, ನಡೆಯೆನೆಂತು ಪರರಿಗೆ ಬೋಧಿಸುವಿರಿ?’ ಎಂದು ಅಲ್ಲಮನನ್ನೇ ಮೂದಲಿಸುತ್ತಾಳೆ(2). ಪ್ರಾಯಶಃ ಅಲ್ಲಮ ಒಬ್ಬ ಪರಿಪೂರ್ಣ ಯೋಗಿಯಾಗಿದ್ದುದರಿಂದ ಈ ಸುಳ್ಳು ಆಪಾದನೆಯನ್ನು ಸಹಿಸಿಕೊಂಡಿರಬೇಕು. ಒಟ್ಟಿನಲ್ಲಿ ಮುಕ್ತಾಯಕ್ಕ ಮತ್ತು ಅಂಥವರ ಪ್ರಕಾರ ಅನುಭವ ಮಂಟಪ ಅನಾವಶ್ಯಕ. ಅಲ್ಲಿಗೆ ಅನೇಕ ಶರಣರು ಅನುಭಾವವನ್ನು ಕುರಿತು ಚರ್ಚಿಸಲು ಮತ್ತು ಕಲಿಯಲು ಬರುತ್ತಿದ್ದರು. ಅನುಭಾವವನ್ನು ಕುರಿತು ವರ್ಣನೆ ಮಾಡಬಹುದು, ಇತರರಿಗೆ ಬೋಧಿಸಬಹುದು, ಎಂಬುದು ಇದರ ಅರ್ಥ. ಹಾಗಾದರೆ, ಶರಣರಲ್ಲಿ ಅನುಭಾವವನ್ನು ವರ್ಣಿಸಲಾಗುವುದಿಲ್ಲ ಎಂಬುವವರದೊಂದು ಗುಂಪು, ಅನುಭಾವವು ಅವರ್ಣನೀಯ ಎಂಬುವವರದು ಮತ್ತೊಂದು ಗುಂಪು ಇತ್ತೇನು? ಅಥವಾ ಅನಿರ್ವಚನೀಯ ಎಂದರೇನು? ಯಾವುದು ಅನಿರ್ವಚನೀಯ? ನಾವು ಪ್ರತ್ಯಕ್ಷದ ಮೂಲಕ ಕಲಿತ ಭಾಷೆಗೆ ಅನುಭಾವವೆಂಬ ಅತೀಂದ್ರಿಯ ಅತಿಬೌದ್ಧಿಕ ಅನುಭವವನ್ನು ಸಮರ್ಥವಾಗಿ ವರ್ಣಿಸಲಸಾಧ್ಯ ಎಂದರ್ಥವೇ? ಅಥವಾ ಅನುಭಾವದ ವಿಷಯವು ಅನುಭಾವಿಗಳಲ್ಲದವರಿಗೆ ಅರ್ಥವಾಗುವುದಿಲ್ಲ ಎಂಬುದು ಅದರ ಅರ್ಥವೇ? ಮುಂತಾದ ಪ್ರಶ್ನೆಗಳು ಉಳಿದುಕೊಳ್ಳುತ್ತವೆ.
ಅನಿರ್ವಚನೀಯತೆ ಅನುಭಾವದ ಒಂದು ಅವಿಭಾಜ್ಯ ಲಕ್ಷಣ ಎಂಬುದಂತೂ ನಿಜ. ಆದರೆ ಅನುಭಾವದ ಯಾವ ಅಂಶ ಅನಿರ್ವಚನೀಯ ಎಂಬುದನ್ನು ಹುಡುಕಿದರೆ ಈ ಗೊಂದಲ ಪರಹಾರವಾಗುತ್ತದೆ. ಇದಕ್ಕೆ ನಮಗೆ ಎರಡು ಉತ್ತರಗಳು ಸಿಕ್ಕುತ್ತವೆ.
ಅನುಭಾವ ಅಥವಾ ತುರಿಯಾವಸ್ಥೆಯಲ್ಲಿ ಇರುವವರೆಗೆ ಬಹಳಷ್ಟು ಅನುಭಾವಿಗಳಿಗೆ ಅತೀವ ಆನಂದ ಉಂಟಾಗುತ್ತದೆ. ಅದನ್ನು ಅನುಭಾವಿಗಳು ಕೈವಲ್ಯಾನಂದ, ಶಿವಾನಂದ, ಬ್ರಹ್ಮಾನಂದ, ನಿತ್ಯಾನಂದ, ಸದಾನಂದ ಮುಂತಾಗಿ ವರ್ಣಿಸುತ್ತಾರೆ. ಆಗ ಭೌತವಸ್ತುಗಳೊಡನೆಯೂ ಇಂದ್ರಿಯ ಮನಸಾದಿಗಳೊಡನೆಯೂ ಇರುವ ಸಂಬಂಧವನ್ನು ತಾತ್ಕಾಲಿಕವಾಗಿ ಕಡಿದುಕೊಂಡು ಕೇವಲ ತಾನೊಂದೇ ಇರುವುದರಿಂದ ಅದು ಕೈವಲ್ಯಾನಂದ ಎನಿಸಿಕೊಳ್ಳುತ್ತದೆ; ಆತ್ಮವು ಆನಂದವನ್ನು ಇಂದ್ರಿಯ ಮತ್ತು ವಿಷಯಗಳ ಸಂಬಂಧದ ಮೂಲಕ ಪಡೆಯುವುದಿಲ್ಲ, ಅದರ ಮೂಲ ಸ್ವರೂಪವೇ ಆನಂದ. ಸಾಂಸಾರಿಕ ಉಪಾಧಿಗಳಿಂದಾಗಿ ಆ ಆನಂದ ಪ್ರಕಟವಾಗುವುದಿಲ್ಲ; ಆಧ್ಯಾತ್ಮಿಕ ಸಾಧನೆಯಿಂದಾಗಿ ಆ ದೋಷಗಳನ್ನು ನಿವಾರಿಸಿ, ಅನುಭಾವವನ್ನು ಪಡೆದವರಲ್ಲಿ ಅದು ಪ್ರಕಟವಾಗುತ್ತದೆ. ಅದು ಆತ್ಮಾನಂದ. ಈ ಆತ್ಮವನ್ನೇ ಅನುಭಾವಿಗಳು ಶಿವ ಅಥವಾ ಬ್ರಹ್ಮ ಎಂದು ಪರಿಗಣಿಸಿದರೆ ಆಗ ಅವರ ಆನಂದ ಶಿವಾನಂದ ಅಥವಾ ಬ್ರಹ್ಮಾನಂದ.
ಈ ಆನಂದವು ಅತ್ಯಂತ ಉತ್ಕಟವಾದ ಆನಂದ. ವಿಷಯಸುಖವು ಇಂದ್ರಿಯ ಮತ್ತು ವಿಷಯಗಳ ಸಂಪರ್ಕ ಇರುವವರೆಗೆ ಮಾತ್ರ. ಆದರೆ ಆನುಭಾವಿಕ ಆನಂದವು ಕೆಲವರ ಪ್ರಕಾರ ನಿತ್ಯ. ಅಲ್ಲಮಪ್ರಭು ಹೇಳುವಂತೆ “ತಾಗು ತಡೆಯಿಲ್ಲದ ಸುಖ” (2/719). ಇದು ಇಂದ್ರಿಯ ಮತ್ತು ವಿಷಯಗಳ ಸಂಪರ್ಕದಿಂದ ಬರುವ ಯಾವುದೇ ರೀತಿಯ ಸುಖಕ್ಕಿಂತ ಭಿನ್ನ. ಆದುದರಿಂದ ಅದು ಅನಿರ್ವಚನೀಯ. ಇಂದ್ರಿಯ ಸುಖವನ್ನು ಕೆಲವು ಸಂದರ್ಭಗಳಲ್ಲಾದರೂ ವರ್ಣಿಸಬಹುದು. ಆದರೆ ಆತ್ಮಾನಂದ ಅವರ್ಣನೀಯ. ಅಲ್ಲಮ ಹೇಳುವಂತೆ, “ಮನದ ಸುಖವ ಕಂಗಳಿಗೆ ತಂದರೆ, ಕಂಗಳ ಸುಖವ ಮನಕೆ ತಂದರೆ ನಾಚಿತ್ತು ಮನ, ನಾಚಿತ್ತು ಮನ…” (2/206).
ಆದರೆ ಅವರ್ಣನೀಯತೆ ಎಂಬುದು ಆನುಭಾವಿಕ ಆನಂದಕ್ಕಷ್ಟೇ ಸೀಮಿತವಾಗಿಲ್ಲ. ನಮ್ಮ ಸಾಧಾರಣ ಅನುಭವದಲ್ಲಿ ಬರುವ ಕೆಲವು ಸನ್ನಿವೇಶಗಳನ್ನೂ ನಾವು ಅವರ್ಣನೀಯ ಎನ್ನುತ್ತೇವೆ. ಒಂದು ಮಗು ಬಂಧು-ಬಳಗವನ್ನು ಕಳೆದುಕೊಂಡು ಅಳುತ್ತಿರುವಾಗ ನಾವು ಅದರ ದಯನೀಯ ಸ್ಥಿತಿಯನ್ನು ಅವರ್ಣನೀಯ ಎನ್ನುತ್ತೇವೆ. ಕಾದಂಬರಿಕಾರನೊಬ್ಬ ಆ ಸ್ಥಿತಿಯನ್ನು ವರ್ಣಿಸಿ ಓದುಗರಲ್ಲಿ ದುಃಖವನ್ನು ಉಂಟು ಮಾಡಬಹುದು. ಆದರೆ ಆ ವರ್ಣನೆ ಪೂರ್ಣವಲ್ಲ; ಪ್ರಾಯಶಃ ಸಮರ್ಥವೂ ಅಲ್ಲ. ಇಲ್ಲಿ ಅವರ್ಣನೀಯ ಎಂದರೆ ಬಹಳ ದಯನೀಯ ಎಂದೇ ಅರ್ಥ. ಅದೇ ರೀತಿ, ನಾವು ಸಮುದ್ರದ ಭೀಕರ ಅಲೆಗಳನ್ನು ನೋಡಿದಾಗ, ಸೂರ್ಯಾಸ್ತದ ವಿವಿಧ ವರ್ಣಗಳ ಜೋಡಣೆ ನೋಡಿದಾಗ, ಯುದ್ಧದಲ್ಲಿ ಆಗುವ ಕೊಲೆಗಳನ್ನು ನೋಡಿದಾಗ, ಸರೋವರವೊಂದರ ಶಾಂತತೆ ಹಾಗೂ ಸೌಂದರ್ಯವನ್ನು ನೋಡಿದಾಗ ಮೂಕರಾಗುತ್ತೇವೆ. ಆ ಸನ್ನಿವೇಶಗಳನ್ನು ವರ್ಣಿಸಲು ಸೋಲುತ್ತೇವೆ ಎಂಬುದು ಇದರ ಅರ್ಥವಲ್ಲ. ತಾತ್ಕಾಲಿಕವಾಗಿ ಭಾಷೆಯನ್ನು ಮರೆಯುತ್ತೇವೆ ಎಂದರ್ಥ. ಇಂಥ ಸನ್ನಿವೇಶಗಳನ್ನು ನಾವು ಇತರರಿಗೆ ವರ್ಣಿಸಬಹುದು. ಆದರೆ ನಮ್ಮ ವರ್ಣನೆ ಸಮರ್ಥವಾಗಿಲ್ಲದಿರಬಹುದು. ಆದರೆ, ಇಲ್ಲೆಲ್ಲ ಆ ಅವರ್ಣನೀಯತೆಗೆ ಒಂದು ವಿಶಿಷ್ಟ ಅರ್ಥವಿದೆ. ‘ಸಮುದ್ರದ ಅಲೆಗಳ ಭೀಕರತೆ ಅವರ್ಣನೀಯ’ ಎಂದರೆ ಬಹಳ ಭೀಕರ ಎಂದೇ ಅರ್ಥ; ‘ಸೂರ್ಯಾಸ್ತದ ಸೌಂದರ್ಯ ಅವರ್ಣನೀಯ’ ಎಂದರೆ ಬಹಳ ಸುಂದರ ಎಂದೇ ಅರ್ಥ; ಆನಂದದ ವಿಷಯದಲ್ಲಿಯೂ ಹಾಗೆಯೆ. ನಾವು ಒಂದು ಕುರ್ಚಿಯನ್ನು ಸಮರ್ಥವಾಗಿ ವರ್ಣಿಸಿದಂತೆ ಸೂರ್ಯಾಸ್ತದ ಸೌಂದರ್ಯವನ್ನಾಗಲಿ, ಸಮುದ್ರದ ಅಲೆಗಳ ಭೀಕರತೆಯನ್ನಾಗಲಿ ವರ್ಣಿಸಲಾಗುವುದಿಲ್ಲ. ಕುರ್ಚಿಯ ಬಣ್ಣ ಆಕಾರ ಗಾತ್ರಗಳನ್ನು ವರ್ಣಿಸುವ ವಸ್ತುನಿಷ್ಠ ಭಾಷೆಯ ಮೂಲಕ ಇತರರ ಮನಸ್ಸಿನಲ್ಲಿ ಅದರ ಚಿತ್ರವನ್ನು ಹೆಚ್ಚು-ಕಡಿಮೆ ಸ್ಪಷ್ಟವಾಗಿ ಮೂಡಿಸಬಹುದು. ಆದರೆ, ಸಮುದ್ರದ ಭೀಕರ ಅಲೆಗಳ ಒಂದು ಸಮರ್ಥ ವರ್ಣನೆಯು, ಓದಿದವರ ಮನಸ್ಸಿನಲ್ಲಿ ಭೀಕರತೆಯ ಭಾವ ಸರಿಯಾಗಿ ಮೂಡಿಸದೆ ಇರಬಹುದು; ಸೂರ್ಯಾಸ್ತದ ವಿವಿಧ ವರ್ಣಗಳ ಜೋಡಣೆಯ ವರ್ಣನೆಯನ್ನು ಓದಿದವರ ಮನಸ್ಸಿನಲ್ಲಿ ಸೌಂದರ್ಯಾನುಭವ ಆಗದೆ ಇರಬಹುದು. ಹಾಗೆಯೇ ಆನಂದವನ್ನು ಯಾವುದೇ ಭಾಷೆಯಲ್ಲಿ ವರ್ಣಿಸಿದರೂ ಅದನ್ನು ಓದಿದವರ ಮನಸ್ಸಿನಲ್ಲಿ ಆನಂದ ಉಂಟಾಗದಿರಬಹುದು. ಈ ಅರ್ಥದಲ್ಲಿ ಆನಂದ ಅವರ್ಣನೀಯ. ಬಸವಣ್ಣನವರು ಶಿವಸಾಯುಜ್ಯಕ್ಕಿಂತ ಸಾಮರಸ್ಯದ ಆನಂದ ಹೆಚ್ಚಿನದು ಎನ್ನುತ್ತಾರೆ (1/922). ಹೇಗೆಂದು ಹೇಳುವುದಿಲ್ಲ. ಏಕೆಂದರೆ ಅದು ಅವರ್ಣನೀಯ. ಅಲ್ಲಮಪ್ರಭು ಅನುಭವ ಪರಮಸುಖಿ ಎಂದರೂ ಆ ಸುಖ (ಆನಂದ) ಯಾವ ರೀತಿಯದು, ಅದರ ಗುಣಗಳೇನು ಎಂಬುದು ಅವರ್ಣನೀಯ (2/170). ಹೀಗೆ, ಸುಖ, ದುಃಖ, ಭೀತಿ ಮುಂತಾದ ಸಂವೇಗಗಳು (emotions) ‘ಬಹಳ, ಉತ್ಕಟ’ ಎಂಬರ್ಥದಲಾದರೆ ಅವು ವರ್ಣನೀಯ; ಅವುಗಳನ್ನು ವಸ್ತುನಿಷ್ಠ ಭಾಷೆಯಲ್ಲಿ ವರ್ಣಿಸಲಾಗುವುದಿಲ್ಲ ಎಂಬರ್ಥದಲ್ಲಾದರೆ ಅವು ಅವರ್ಣನೀಯ.
ಪ್ರಾಯಶಃ ಅನಿರ್ವಚನೀಯ(3) ಎಂದರೆ ಇದು ಇರಬಹುದು: ನಾವು ಯಾವುದೇ ವಸ್ತುವನ್ನು ಇದು ಹಸು, ಇದು ಪುಸ್ತಕ ಎಂದು ಹೇಳಬೇಕಾದರೆ ಅನೇಕ ಹಸು, ಪುಸ್ತಕಗಳನ್ನು ನಾವು ನೋಡಿರಬೇಕಾಗುತ್ತದೆ. ದೊಡ್ಡ ಪುಸ್ತಕ, ಸಣ್ಣ ಪುಸ್ತಕ, ಕೆಂಪು ಪುಸ್ತಕ, ನೀಲಿ ಪುಸ್ತಕ, ಹಳದಿ ಪುಸ್ತಕ ಮುಂತಾದ ಅನೇಕ ರೀತಿಯ ಪುಸ್ತಕಗಳನ್ನು ನೋಡಿ ಅವುಗಳ ಸಾಮಾನ್ಯ ಗುಣವಾದ ‘ಪುಸ್ತಕತ್ವ’ವನ್ನು ಗ್ರಹಿಸಿ, ಪುಸ್ತಕ ಎಂಬ ಪರಿಕಲ್ಪನೆಯನ್ನು ರೂಪಿಸಿಕೊಳ್ಳುತ್ತೇವೆ. ಬಿಳಿ ಹಸು, ಕರಿ ಹಸು, ಜರ್ಸಿ ಆಕಳು, ಗಿಡ್ಡ ಆಕಳು, ಮುಂತಾದ ಹಸುಗಳನ್ನು ನೋಡಿ ಅವುಗಳ ಸಾಮಾನ್ಯ ಗುಣವಾದ ‘ಹಸುತನ’ವನ್ನು ಗ್ರಹಿಸಿ, ಹಸು ಎಂಬ ಪರಿಕಲ್ಪನೆಯನ್ನು ರೂಪಿಸಿಕೊಳ್ಳುತ್ತೇವೆ. ಈ ಪರಿಕಲ್ಪನೆಯನ್ನು ರೂಪಿಸಿಕೊಂಡ ಮೇಲೆ ಹಸುತನವಿರುವ ಪ್ರಾಣಿಯನ್ನು ನೋಡಿ ‘ಇದು ಹಸು’ ಅಥವಾ ‘ಇದು ಹಸುತನಕ್ಕೆ ಉದಾಹರಣೆ’ ಎನ್ನುತ್ತೇವೆ. ಆದರೆ ಅನುಭಾವದಲ್ಲಿನ ವಿಷಯವು ಒಂದೇ ಆಗಿದ್ದು ಅದು ಯಾವ ಪರಿಕಲ್ಪನೆಯ ಉದಾಹರಣೆಯೂ ಆಗಿರದಿದ್ದರೆ ಅದು ಅನುಭಾವಿಗೇ ಅರ್ಥವಾಗುವುದಿಲ್ಲ. ಅವನಿಗೇ ಅರ್ಥವಾಗದಿದ್ದರೆ ಬೇರೆಯವರಿಗೂ ಅವನು ಅದನ್ನು ತಿಳಿಸಲಾರ. ಆಗ ಅದು ಅನಿರ್ವಚನೀಯ. ಉದಾಹರಣೆಗೆ, ಭೌತವಸ್ತು, ಇಂದ್ರಿಯಮನಸಾದಿಗಳೊಡನೆ ತಾತ್ಕಾಲಿಕವಾಗಿ ಸಂಬಂಧವನ್ನು ಕಡಿದುಕೊಂಡ ಆತ್ಮ ಒಂದೇ ಇದ್ದಾಗ ಅನುಭಾವಿಯು ಅದನ್ನು ಪರಬ್ರಹ್ಮ, ಲಿಂಗ, ಶೂನ್ಯ, ಬಯಲು ಎಂದು ಕರೆಯುತ್ತಾನೆ. ಆದರೆ ಹಸುವೊಂದನ್ನು ನೋಡಿ ‘ಇದು ಹಸು ಪರಿಕಲ್ಪನೆಗೆ ಉದಾಹರಣೆ’ ಎಂದಂತೆ ಶೂನ್ಯಾನುಭವದ ನಂತರ ‘ಇದು ಶೂನ್ಯ, ಬಯಲು, ನಿರ್ಗುಣ, ನಿರಾಕಾರ’ ಎನ್ನಬಹುದೇ ಹೊರತು ಮತ್ತೇನೆಂದು ವರ್ಣಿಸಲೂ ಅವನಿಗೆ ಸಾಧ್ಯವಾಗುವುದಿಲ್ಲ. ಈ ಹಿಂದೆ ಅವನು ಇಂಥ ಅನುಭಾವ ಪಡೆದಿದ್ದರೂ ಅಥವಾ ಎಷ್ಟು ಸಾರಿ ಅನುಭಾವವನ್ನು ಪಡೆದರೂ ಇದು ಶೂನ್ಯ ಎನ್ನಬಹುದೇ ಹೊರತು ಮತ್ತೇನೆಂದೂ ವರ್ಣಿಸಲಾರ. ಆದುದರಿಂದ, ಗುಣಗಳೇ ಇಲ್ಲದ ಪರಬ್ರಹ್ಮ, ಶೂನ್ಯ, ಮುಂ. ಪರಿಕಲ್ಪನೆಗಳನ್ನು ರೂಪಿಸಿಕೊಳ್ಳಲು ಯಾವ ಅನುಭಾವಿಗೂ ಸಾಧ್ಯವಿಲ್ಲ. ಅಂದರೆ, ಪರಿಕಲ್ಪನೆಯಿಲ್ಲದೆ, ಶೂನ್ಯ ಮುಂತಾದ ಅನುಭವಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅರ್ಥಾತ್, ಅನುಭಾವದ ವಿಷಯ (ಶೂನ್ಯ) ಅವರ್ಣನೀಯ. ಹೆಚ್ಚೆಂದರೆ, ಅದನ್ನು ಕಾರಣವಲ್ಲ ಕಾರ್ಯವಲ್ಲ, ದೊಡ್ಡದೂ ಅಲ್ಲ, ಸಣ್ಣದೂ ಅಲ್ಲ, ಮುಂತಾದ ಸ್ವವಿರೋಧದ ಪದಗಳಲ್ಲಿ ವರ್ಣಿಸಬಹುದು. ಆದರೆ ಅಂಥ ನಕಾರಾತ್ಮಕ ವರ್ಣನೆ ಶೂನ್ಯದ ಬಗೆಗಿನ ನಮ್ಮ ಜ್ಞಾನವನ್ನು ಹೆಚ್ಚಿಸುವುದಿಲ್ಲ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಶೂನ್ಯ ಅವರ್ಣನೀಯ.
ಶೂನ್ಯ ಅವರ್ಣನೀಯವೆಂದು ಅನುಭಾವಿ ಸುಮ್ಮನಿರುವುದಿಲ್ಲ. ಅದನ್ನು ವರ್ಣಿಸಲು ಸೋತರೆ, ನಿರಾಶೆಯಾಗದೆ, ಮತ್ತೊಂದು ರೀತಿಯಲ್ಲಿ ವರ್ಣಿಸಲು ಯತ್ನಿಸುತ್ತಾನೆ. ಆಗೆಲ್ಲ ಅವನು ಸ್ವವಿರೋಧಕ್ಕೆ ಒಳಗಾಗುವುದು ಸಾಮಾನ್ಯ. ಉದಾಹಾರಣೆಗೆ ಈ ಕೆಳಗಿನ ಉಪನಿಷತ್ತಿನ ವಾಕ್ಯಗಳನ್ನು ನೋಡಿ:
1. ಬ್ರಹ್ಮನ್ ಅಚಲ, ಆದರೆ ಅದಕ್ಕೆ ಮನೋವೇಗವಿದೆ, . . . ಅತ್ಯಂತ ವೇಗವಾಗಿ ಓಡುವವನನ್ನು ಅದು ಹಿಂದಕ್ಕೆ ಹಾಕಬಲ್ಲದು . . . (ಈಶಾವಾಸ್ಯ ಉಪ. 4);
2. ಅದು ಹತ್ತಿರವಿದೆ, ದೂರವಿದೆ; ಅದು ಅಚಲ, ಚಲಿಸುತ್ತದೆ; ಅದು ಎಲ್ಲದರ ಒಳಗೂ ಇದೆ, ಹೊರಗೂ ಇದೆ (ಅದರಲ್ಲೆ, 5);
3. ಕಾಲಿಲ್ಲದೆ ನಡೆಯಬಲ್ಲ; . . . ಕೈಯಿಲ್ಲದೆ ಹಿಡಿಯಬಲ್ಲ; . . . ಮನವಿಲ್ಲದೆ ಯೋಚಿಸಬಲ್ಲ . . . ಆದರೆ ಅಚಿಂತ್ಯ (ಶ್ವೇತಾಶ್ವತರ ಉಪ, iii, 19).
4. ನೀನೆ ಪುರುಷ, ನೀನೆ ಸ್ತ್ರೀ; ಕುಮಾರ ನೀನೆ, ಕುಮಾರಿ ನೀನೆ, ವೃದ್ಧ ನೀನೆ (ಶ್ವೇತಾಶ್ವತರ ಉಪ., iv,3); ಇತ್ಯಾದಿ.
ಅಲ್ಲಮರ ವಚನಗಳಲ್ಲಿ ಶೂನ್ಯದ ಬಗೆಗೆ ಅನೇಕ ಸ್ವವಿರೋಧದ ಮಾತುಗಳು ಬರುತ್ತವೆ. ಉದಾಹರಣೆಗೆ:
1 ಅಪರಿಮಿತ ಕತ್ತಲೆಯೊಳಗೆ ವಿಪರೀತದ ಬೆಳಗನಿಕ್ಕಿದರಾರೊ?
ಬೆಳಕೂ ಅದೆ, ಕತ್ತಲೆಯೂ ಅದೆ!
ಇದೇನು ಚೋದ್ಯವೊ? . . . (2/499)
ಅಪರಿಮಿತ ಕತ್ತಲೆಯೊಳಗೆ ವಿಪರೀತದ ಬೆಳಕನ್ನಿಕ್ಕುವುದು ಖಂಡಿತ ವಿರೋಧಾಭಾಸ – ವೃತ್ತಾಕಾರದ ಚೌಕ, ಎಂದಂತೆ – ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಕತ್ತಲೆ ಎಂದರೆ ಅಜ್ಞಾನ, ಆತ್ಮಜ್ಞಾನದ ಅಭಾವ; ಬೆಳಕು ಎಂದರೆ ಜ್ಞಾನ, ಅನುಭವದ ಮೂಲಕ ಪಡೆಯಬಹುದಾದ ಲಿಂಗಾನುಭವ, ಲಿಂಗಜ್ಞಾನ. ಮಾನವನಿಗೆ ಸಹಜವಾದ ಮರೆವು ಅಥವಾ ಕತ್ತಲು ಇದೆ. ಅದರಿಂದಾಗಿ ಲಿಂಗಾನುಭವ ಸಾಧ್ಯವಾಗುತ್ತಿಲ್ಲ. ಗುರೂಪದೇಶ ಮತ್ತು ಷಟ್ಸ್ಥಲ-ಯೋಗಾಚರಣೆಯಿಂದ, ಅನುಭಾವ ಉಂಟಾದಾಗ ಬೆಳಕು ಅಥವಾ ಲಿಂಗಜ್ಞಾನ ಉಂಟಾಗುತ್ತದೆ. ಹೀಗೆಂದು ಹೇಳುವ ಮೂಲಕ ಸ್ವವಿರೋಧವನ್ನು ಇಲ್ಲವಾಗಿಸಬಹುದು. ಆದರೆ ಇಂಥ ಪರಿಹಾರ ಈ ವಚನವನ್ನು ಅಪಾರ್ಥ ಮಾಡುವುದರ ಮೇಲೆ ನಿಂತಿದೆ. ಅಲ್ಲಮರ ಮಾತಿನಲ್ಲಿರುವ ಬೆಳಕೂ ಅದೇ, ಕತ್ತಲೆಯೂ ಅದೇ ಎಂಬ ಸ್ವವಿರೋಧ ನಮ್ಮ ಮುಖಕ್ಕೆ ರಾಚುತ್ತದೆ. ಅದು ಇರುವುದರಿಂದಲೇ ಅಲ್ಲಮ ಇದೇನು ಚೋದ್ಯ! ಎಂದು ಆಶ್ಚರ್ಯ ಪಡುತ್ತಾರೆ. ಹೀಗಿರುವಾಗ, ನಾವು ಅದನ್ನು ನಮಗೆ ತಿಳಿದಂತೆ ಅರ್ಥೈಸಿ, ಸ್ವವಿರೋಧ ಇಲ್ಲವೆಂಬಂತೆ ತೋರಿಸುವುದು ನಮ್ಮ ಕೆಲಸವಲ್ಲ. ಏನಿದ್ದರೂ ಅದು ಏಕಿದೆ ಎಂದು ಹೇಳುವುದಷ್ಟೇ ನಮ್ಮ ಕೆಲಸ. ಇಲ್ಲಿಯೂ ನಾವು ಗಮನಿಸಬೇಕಾದುದು ಇದು: ಅಲ್ಲಮರಿಗೆ ಸ್ವವಿರೋಧವೆನಿಸುವುದು, ಅದು ಚೋದ್ಯವಾಗುವುದು ಸಕಾರಣವಾಗಿಯೇ ಇದೆ.
2. ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ;
ಶಿವನೆ ಚೈತನ್ಯಾತ್ಮಕನು, ಶಕ್ತಿಯೆ ಚಿತ್ತು.
ಇಂತು, ಚೈತನ್ಯಾತ್ಮಕನೆ ಚಿತ್ಸ್ವರೂಪನೆಂದರಿಯಬಲ್ಲಡೆ
ಆತನೆ ಶರಣ ಗುಹೇಶ್ವರಾ. (589)
ಇಲ್ಲಿ ಶಿವ ಎಂದರೆ ಚಿತ್ತು, ಶಕ್ತಿ ಎಂದರೆ ಜಡಶಕ್ತಿ ಎಂದು ಹೇಳುವ ಮೂಲಕ ಸ್ವವಿರೋಧವನ್ನು ಇಲ್ಲವಾಗಿಸಬಹುದು. ಇದು ಶಂಕರಾಚಾರ್ಯರ ಪದ್ಧತಿ. ಆದರೆ ‘ಶಿವ’ ಮತ್ತು ‘ಶಕ್ತಿ’ ಎಂಬ ಪದಗಳು ಎರಡು ವಿಭಿನ್ನ, ಪರಸ್ಪರ ಸಂಬಂಧವಿಲ್ಲದ ವಸ್ತುಗಳಿಗೆ ಅನ್ವಯಿಸುವ ಪದಗಳಲ್ಲ. ಗಮನಿಸಿ: ಅಲ್ಲಮರು ‘ಶಿವಶಕ್ತಿ ಸಂಪುಟ’ ಎಂದು ಹೇಳುವ ಮೂಲಕ ಶಿವನೂ ಅದೇ, ಶಕ್ತಿಯೂ ಅದೇ ಎಂಬ ಸ್ವವಿರೋಧಕ್ಕೆ ಒತ್ತು ನೀಡುತ್ತಿದ್ದಾರೆ. ಶಿವನಿಗೆ ಸ್ವಪ್ರಜ್ಞೆ ಉಂಟಾದ ಕೂಡಲೇ ಅವನಲ್ಲಿಯೇ ಅಂತರ್ಗತವಾಗಿದ್ದ ಶಕ್ತಿಯು ಕಾರ್ಯಪ್ರವೃತ್ತವಾಗುತ್ತದೆ. ಆಗ ಶಿವನ ಚಿತ್ತು ಶಕ್ತಿಗೂ, ಶಕ್ತಿಯ ಕ್ರಿಯಾಶೀಲತೆ ಶಿವನಿಗೂ ಬರುವುದರಿಂದಾಗಿ ಶಿವಶಕ್ತಿ ಒಂದೇ ಸಂಪುಟ ಆಗುತ್ತದೆ (ಇದನ್ನು ಒಂದು ಉಪಮೆ ಮೂಲಕ ವಿವರಿಸಬಹುದು: ಬೆಲ್ಲವನ್ನು ನೀರಿನಲ್ಲಿ ಕರಗಿಸಿದಾಗ, ಬೆಲ್ಲದ ಘನತ್ವ ನೀರಾಗುತ್ತದೆ; ಸಪ್ಪೆಯಾಗಿದ್ದ ನೀರು ಸಿಹಿಯಾಗುತ್ತದೆ). ಅಲ್ಲಮರ ಮಾತಿನಲ್ಲಿ ಹೇಳಬೇಕೆಂದರೆ: “ಶಿವನೇ ಚೈತನ್ಯಾತ್ಮಕ, ಶಕ್ತಿಯೇ ಚಿತ್ತು; ಚೈತನ್ಯಾತ್ಮಕನೇ ಚಿತ್ಸ್ವರೂಪ”. ಇಲ್ಲಿ ಸ್ವವಿರೋಧ ನಿವಾರಣೆಯಾಗಿಲ್ಲ, ಆಗಲೂ ಬಾರದು – ನಿಜವಾದ ಅರ್ಥಕ್ಕೆ ಚ್ಯುತಿ ಬರಬಾರದು, ಎಂದಿದ್ದರೆ.
3. ಎಲ್ಲಕ್ಕಿಂತ ದೊಡ್ಡ ಸ್ವವಿರೋಧ ಎಂದರೆ ಅಲ್ಲಮರು ಆಗಾಗ್ಗೆ ಹೇಳುವ ನಾನೂ ಇಲ್ಲ ನೀನೂ ಇಲ್ಲ ಎಂಬ ಮಾತು. ವಾಸ್ತವವಾಗಿ ಒಂದರ್ಥದಲ್ಲಿ ಇದು ಅಪರಿಹಾರ್ಯ. ಸಮಾಧಿಸ್ಥಿತಿಯಲ್ಲಿ (ಅನುಭಾವದಲ್ಲಿ) ಆತ್ಮವು ಬುದ್ಧಿ, ಮನಸ್ಸು, ಇಂದ್ರಿಯಗಳು ಇತ್ಯಾದಿಗಳೊಡನೆ ಇರುವ ಸಂಬಂಧವನ್ನು ತಾತ್ಕಾಲಿಕವಾಗಿ ಕಡಿದುಕೊಂಡಾಗ ಅದು ತಾನೊಂದೇ ಉಳಿದುಕೊಳ್ಳುತ್ತದೆ. ಆಗ ಅಹಂ (ನಾನು ಎಂಬ ಭಾವ) ನಿಷ್ಕ್ರಿಯವಾಗಿರುವುದರಿಂದ ನಾನು ಧ್ಯಾನ ಮಾಡುತ್ತಿದ್ದೇನೆ ಎನ್ನಲು ಸಾಧ್ಯವಿಲ್ಲ. ನಾನು ಎಂಬ ಭಾವ ಇರುವವರೆಗೂ ಸಮಾಧಿ ಸಾಧ್ಯವಾಗುವುದೂ ಇಲ್ಲ. ಜಾಗೃತಾವಸ್ಥೆಗೆ ಹಿಂದಿರುಗಿದಾಗ ಸಮಾಧಿಸ್ಥಿತಿಯಲ್ಲಿ ನಾನು ಏನನ್ನೂ ಅರಿಯಲಾಗಲಿಲ್ಲ ಎನ್ನಬಹುದು. ಇದನ್ನೆ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಅನುಭಾವದಲ್ಲಿ ನಾನು ಎಂಬ ಜ್ಞಾತೃವೂ (subject) ಇಲ್ಲ, ನೀನು ಎಂಬ ಜ್ಞೇಯವೂ (object) ಇಲ್ಲ. ಆದರೆ ಅನುಭಾವಿಗಳು ಜಾಗೃತಾವಸ್ಥೆಯಲ್ಲಿಯೂ ಮನನಷ್ಟ/ ಅಹಂನಷ್ಟವಾಯಿತೆಂದು ಹೇಳುತ್ತಾರೆ. ಉದಾಹರಣೆಗೆ, ಮನವೇ ಲಿಂಗವಾದ ಬಳಿಕ ನೆನೆವುದಾರನ್ನು? ಎಂದು ಅಲ್ಲಮರು ಕೇಳುವಾಗ, ನೆನೆಯಬೇಕೆಂಬ ಮನಸ್ಸು ಅನುಭಾವದ ದೆಸೆಯಿಂದಾಗಿ ಇಲ್ಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲಮರೇ ಮತ್ತೆರಡು ಸಾರಿ ಮನನಷ್ಟದ ಬಗೆಗೆ ಹೇಳುತ್ತಾರೆ. ಗ್ರಹ ಹಿಡಿದುಕೊಂಡವನಿಗೆ ತನ್ನತನ ಇಲ್ಲವಾಗಿ ಗ್ರಹದ ಗುಣ ಬರುವಂತೆ, ಲಿಂಗ ಗ್ರಹಣವಾದ ಅನುಭಾವಿಗೆ ಮನ ಇಲ್ಲವಾಗುತ್ತದೆ ಹಾಗೂ ಲಿಂಗದ ಗುಣ ಬರುತ್ತದೆ. ಆಗವನ ನಡೆ ನುಡಿ ಎಲ್ಲವೂ ಲಿಂಗದ ಕ್ರಿಯೆಗಳು. ಅಂತಹ ಅನುಭಾವಿಯ
ಸ್ಪಷ್ಟ ಚಿತ್ರಣ ಚೆನ್ನಬಸವಣ್ಣನ ಎರಡು ವಚನಗಳಲ್ಲಿ ಸಿಕ್ಕುತ್ತದೆ.
ಎನ್ನ ಕಾಯದೊಳಗೆ ನಿನ್ನ ಕಾಯವಿಪ್ಪುದು,
ನಿನ್ನ ಕಾಯದೊಳಗೆ ಎನ್ನ ಕಾಯವಿಪ್ಪುದು.
ಎನ್ನ ಜೀವದೊಳಗೆ ನಿನ್ನ ಜೀವವಿಪ್ಪುದು,
ನಿನ್ನ ಜೀವದೊಳಗೆ ಎನ್ನ ಜೀವವಿಪ್ಪುದು,
ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವಿಪ್ಪುದು,
ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವಿಪ್ಪುದು.
ಎನ್ನ ಇಂದ್ರಿಯಂಗಳೊಳಗೆ ನಿನ್ನ ಇಂದ್ರಿಯಂಗಳಿಪ್ಪುವು,
ನಿನ್ನ ಇಂದ್ರಿಯಂಗಳೊಳಗೆ ಎನ್ನ ಇಂದ್ರಿಯಂಗಳಿಪ್ಪುವು . . . (3/1046)
ಎನ್ನ ಘ್ರಾಣದ ಬಾಗಿಲಲ್ಲಿರ್ದು, ಸುವಾಸನೆಯ ಸುಖಂಗಳ
ಭೋಗಿಸುವಾತ ನೀನಯ್ಯಾ.
ಎನ್ನ ಜಿಹ್ವೆಯ ಬಾಗಿಲಲ್ಲಿರ್ದು, ಸುರುಚಿಯ ಸುಖಂಗಳ
ಭೋಗಿಸುವಾತ ನೀನಯ್ಯಾ.
ಎನ್ನ ನೇತ್ರದ ಬಾಗಿಲಲ್ಲಿರ್ದು, ಸುರೂಪ ಸುಖಂಗಳ
ಭೋಗಿಸುವಾತ ನೀನಯ್ಯಾ.
ಎನ್ನ ತ್ವಕ್ಕಿನ ಬಾಗಿಲಲ್ಲಿರ್ದು, ಸುಸ್ಪರ್ಶವ ಮಾಡಿ
ಆ ಸ್ಪರ್ಶನಸುಖವ ಸುಖಿಸುವಾತ ನೀನಯ್ಯಾ.
ಎನ್ನ ಶ್ರೋತ್ರದ ಬಾಗಿಲಲ್ಲಿರ್ದು
ಸುಶಬ್ದ ಸುಖಂಗಳ ಭೋಗಿಸುವಾತ ನೀನಯ್ಯಾ.
ಎನ್ನ ಮನದ ಬಾಗಿಲಲ್ಲಿರ್ದು ಪಂಚೇಂದ್ರಿಯಂಗಳನರಿದು
ಸುಖಿಸುವ ಅರಿವಿನಮೂರ್ತಿ ನೀನಯ್ಯಾ.
ಅದೇನು ಕಾರಣವೆಂದಡೆ;
ನೀನಾಡಿಸುವ ಜಂತ್ರದ ಬೊಂಬೆ ನಾನೆಂದರಿದ ಕಾರಣ . . . (3/1047).
ಅಂದರೆ, ಚೆನ್ನಬಸವಣ್ಣನವರ ಪ್ರಕಾರ, ಅನುಭಾವದಿಂದಾಗಿ ಶರಣನ ದೇಹೇಂದ್ರಿಯಾದಿಗಳನ್ನು ಲಿಂಗ ಆಕ್ರಮಿಸಿಕೊಂಡಾಗ, ಅವನು ತನ್ನತನ ಕಳೆದುಕೊಂಡು ಲಿಂಗದ ಶರೀರವಾಗುತ್ತಾನೆ. ಇಲ್ಲಿಯೂ ನಮಗೆ ಮೊದಲಿನ ಪ್ರಶ್ನೆ ಕಾಡುತ್ತದೆ. ನಾನು (ಅಹಂ, ಮನ) ಇಲ್ಲದೆ ಹೋದರೆ ನಾನು ಇಲ್ಲ ಎಂದು ಹೇಳಲು ಹೇಗೆ ಸಾಧ್ಯ? ಹಾಗೆ ಹೇಳಲಾದರೂ ನಾನು ಇರಲೇಬೇಕಲ್ಲವೇ? ಮೇಲಿನ ವಿರೋಧಾಭಾಸಗಳಂತೆ ಇದನ್ನೂ ಸ್ವೀಕರಿಸಬೇಕು. ಏಕೆಂದರೆ ಅದು ವಾಸ್ತವ. ಅನುಭಾವಿ ತನ್ನತನವನ್ನು ಕಳೆದುಕೊಂಡು ಲಿಂಗದ ಶರೀರವಾಗಿದ್ದಾನೆ ಎಂಬುದೂ ಸತ್ಯ, ಅಹಂನಷ್ಟ/ ಮನನಷ್ಟವಾಗಿರುವುದೂ ಸತ್ಯ.
ಇಂಥ ಉದಾಹರಣೆಗಳ ಪರಿಶೀಲನೆಯಿಂದ –
1. ಅನುಭಾವವನ್ನು ವ್ಯಕ್ತಪಡಿಸುವ ಪ್ರಯತ್ನವು ಅನಿವಾರ್ಯವಾಗಿ ಸ್ವವಿರೋಧಗಳಿಗೆ ಒಳಗಾಗುತ್ತದೆ;
2. ಅಂಥ ಸ್ವವಿರೋಧಗಳು ಇನ್ನೂ ಅನೇಕವಾದರೂ ಅವಾವೂ ಆ ವಸ್ತುವಿನ ಬಗೆಗಿನ ನಮ್ಮ ಅರಿವನ್ನು ಹೆಚ್ಚಿಸುವುದಿಲ್ಲವಾದುದರಿಂದ, ಆ ವಸ್ತು ಅವರ್ಣನೀಯ;
3. ಅದು ಅವರ್ಣನೀಯ ಎಂದೇ ಅನುಭಾವಿಗಳು ಇತರರಿಗೆ ಬೋಧಿಸುತ್ತಾರೆ, ಆದರೆ ಅವರ ಬೋಧನೆ (ವರ್ಣನೆ) ಕೇಳುಗರಲ್ಲಿ ಶೂನ್ಯದ ಬಗೆಗಿನ ಅರಿವನ್ನು ಹೆಚ್ಚಿಸುವುದಿಲ್ಲ; ಉದಾಹರಣೆಗೆ, ಶೂನ್ಯ ಆದಿಯಿಲ್ಲದ-ಅನಾದಿಯಿಲ್ಲದ, ಕಾರ್ಯವಲ್ಲದ-ಕಾರಣವಲ್ಲದ ಯಾವುದೊ ಒಂದು ರೀತಿಯ ಸತ್ಯ ಎಂಬುದು ಗೊತ್ತಾಗುತ್ತದೆ; ಆದರೆ ಅದರ ಸ್ವರೂಪ ಎಂಥದು ಎಂಬುದು ಗೊತ್ತಾಗುವುದಿಲ್ಲ;
ಎಂದು ತೀರ್ಮಾನಿಸಬಹುದು.
_________
1. ಡಾ.ಕಲಬುರ್ಗಿ, ಎಮ್.ಎಮ್ ಮತ್ತು ವೀರಣ್ಣ ರಾಜೂರ್ (ಸಂ):ಗೂಳೂರು ಸಿದ್ಧವೀರಣೊಡೆಯರ ಶೂನ್ಯ ಸಂಪಾದನೆ (ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ-ದಂಬಳ, 2016), ವಚನ 105.
2. ಅದರಲ್ಲೆ. ವ.109.
3. Stace, W.T.: Mysticism and Philosophy (MacMillan and Co., London 1961), pp 285-288
Comments 11
Virupaksha Patil
Mar 15, 2022ಅನುಭಾವವನ್ನಾಗಲಿ, ಅನಿರ್ವಚನೀಯತೆಯನ್ನಾಗಲಿ ಯಾಕೆ ಶಬ್ದಗಳಲ್ಲಿ ಹೇಳಲಾಗದು ಎನ್ನುವ ತಾತ್ವಿಕ ವಿಶ್ಲೇಷಣೆ ವೈಜ್ಞಾನಿಕವಾಗಿದೆ. ಪ್ರೊಫೆಸರ್ ಮಹಾದೇವಪ್ಪನವರಿಗೆ ಥ್ಯಾಂಕ್ಸ್.
ಜ್ಯೋತಿಪ್ರಕಾಶ
Mar 16, 2022ಅಲ್ಲಮಪ್ರಭು “ತಾಗು ತಡೆಯಿಲ್ಲದ ಸುಖ” ಎಂದು ಅನುಭಾವವನ್ನು ವರ್ಣಿಸುತ್ತಾರೆಂದು ಲೇಖನದಲ್ಲಿ ಬಂದಿದೆ. ಅನುಭಾವಿಗಳು ನಿತ್ಯ ಸುಖಿಗಳೆಂದು, ಅವರನ್ನು ಜೀವನದ ಕಷ್ಟಕಾರ್ಪಣ್ಯಗಳು ಅಲುಗಾಡಿಸಲಾರವೆಂದು ಹೇಳುತ್ತಾರೆ. ಅನುಭವ ಮತ್ತು ಅನುಭಾವಕ್ಕೆ ಯಾವ ವ್ಯತ್ಯಾಸವಿದೆ?
Lalithamma Beluru
Mar 16, 2022ಅನುಭಾವಿಗಳಲ್ಲದವರು ಅನುಭಾವಿಕ ನೆಲೆಯನ್ನು ತಿಳಿಯಲು ಸಾಧ್ಯವೇ ಇಲ್ಲ. ಕೇವಲ ಓದಿನಿಂದಾಗಲಿ, ಬೋಧನೆಯಿಂದಾಗಲಿ ಇದು ಬರುವುದಿಲ್ಲ. ಪೂಜೆ, ಪುನಸ್ಕಾರಗಳಿಂದ, ಜಪ-ತಪಗಳಿಂದ, ನಿಷ್ಠಾ ಭಕ್ತಿಯಿಂದ ಮಾತ್ರವೇ ಇದು ಸಾಧ್ಯ. ಹಾಗಾಗಿಯೇ ಇವತ್ತು ಅನುಭಾವಿಗಳ ಸಂಖ್ಯೆ ವಿರಳಾತಿ ವಿರಳವೆಂಬುದು ನನ್ನ ಅನಿಸಿಕೆ.
Karibasappa Gowdar
Mar 18, 2022ಅನುಭಾವಿಗಳು ಅನುಭಾವವನ್ನು ಎಲ್ಲಿಯೂ ಬೋಧಿಸಿಲ್ಲ. ಅದು ಬೋಧಿಸಲಿಕ್ಕೂ ಬರುವುದಿಲ್ಲ. ಮುಖ್ಯವಾಗಿ ಅವರು ಬೋಧಕರಾಗಿರಲಿಲ್ಲ… ಎನ್ನುವುದು ನನ್ನ ಖಚಿತ ಅಭಿಪ್ರಾಯ.
Deveerappa Katagi
Mar 20, 2022ಅನುಭಾವದ ಭಾವವು ಸುಖವನ್ನೂ ಕೊಡುವಂತಹುದಲ್ಲ, ದುಃಖವನ್ನೂ ಉಂಟುಮಾಡುವುದಿಲ್ಲ. ಅದೊಂದು ನಿರಾಳ ಸ್ಥಿತಿ. ಆದ್ದರಿಂದಲೇ ಬಹುಶಃ ಅದನ್ನು ಶಬ್ದಗಳಲ್ಲಿ ಹೇಳಲಿಕ್ಕಾಗುವುದಿಲ್ಲ. ಸುಖ-ದುಃಖಗಳ ಪರಿಧಿಯಲ್ಲಿ ಇದು ಬರುತ್ತಿದ್ದರೆ ಮಾತುಗಳಲ್ಲಿ ವರ್ಣಿಸಬಹುದಿತ್ತೆನಿಸುತ್ತದೆ.
ಶ್ರೀಶೈಲ ಹೊನ್ನಾಳಿ
Mar 20, 2022ಅಂಗ ಭಾವ ಹೋಗಿ ಲಿಂಗ ಭಾವ ಬರಬೇಕು ಎಂದರೆ ಏನೆಂಬುದನ್ನು ಚನ್ನಬಸವಣ್ಣನವರ ವಚನದ ನಿರ್ವಚನದಲ್ಲಿ ವಿವರಿಸಿದ್ದರೆ ಅಂಗ ಭಾವಕ್ಕೂ, ಲಿಂಗಭಾವಕ್ಕೂ ವ್ಯತ್ಯಾಸ ಗೊತ್ತಾಗುತ್ತಿತ್ತು. ಅಂಗ-ಲಿಂಗ ಸಂಬಂಧದಲ್ಲಿ ಕಾಣಿಸಿಕೊಳ್ಳುವ ವಚನಗಳೆಲ್ಲವೂ ಅನುಭಾವದ ಮುನ್ನಿನ ಸ್ಥಿತಿಯನ್ನು ತೋರಿಸುತ್ತವೆ.
ಉಮಾಪತಿ, ದಾವಣಗೆರೆ
Mar 23, 2022ವಿದ್ವಾಂಸರು ಅನುಭಾವ ಮತ್ತು ಅವರ್ಣನೀಯತೆಗಳನ್ನು ವಿಜ್ಞಾನಿಯಂತೆ ಬಗೆಬಗೆದು ನೋಡುವಂತಹ ಈ ಲೇಖನ ವಿಶಿಷ್ಟವಾಗಿದೆ ಎನ್ನಿಸಿತು. ನಾವೆಲ್ಲಾ ನಮ್ಮ ಬುದ್ಧಿಗೆ ಎಂತಹ ವಿಷಯಗಳಾದರೂ ಸರಿ ನಿಲುಕಲೇ ಬೇಕು ಎನ್ನುವ ಹಠ ಉಳ್ಳವರು. ಸಾಕ್ಷಾತ್ಕಾರ, ಜ್ಞಾನೋದಯ, ಅನುಭಾವದ ಉತ್ತುಂಗತೆ ಇವೆಲ್ಲಾ ಹೇಗೆ ಎಂದು ಹೀಗೆ ಒರೆದೊರೆದು ನೋಡುವುದು ಎಷ್ಟು ಸರಿ ಗೊತ್ತಿಲ್ಲ, ಆದರೆ ತರ್ಕಕ್ಕೆ ಹೀಗೆ ಹಚ್ಚುವುದರಲ್ಲಿ ಯಾವ ತಪ್ಪೂ ಇಲ್ಲ.
ಲಕ್ಷೀದೇವಿ ಕೊಟ್ಟಿಗೆ
Mar 28, 2022ಅದು ಯಾವುದೇ ಭಾಷೆ ಇರಲಿ, ಅದಕ್ಕೆ ಮಿತಿ ಇದ್ದೇ ಇದೆ. ಅನುಭವಗಳನ್ನು ಹೇಳಲಿಕ್ಕೇ ನಾವು ಎಷ್ಟೋ ಪದಪುಂಜಗಳ ಮೊರೆಹೋಗುತ್ತೇವೆ, ಹೀಗಿರೋವಾಗ ಅನುಭಾವವನ್ನು ಭಾಷೆ ಹೇಳಬೇಕೆಂದು ನಿರೀಕ್ಷಿಸುವುದು ಸರಿಯಲ್ಲ.
Ganesh A.P
Mar 30, 2022ಅನುಭಾವ ಕಲ್ಪನಾತೀತವಾದದ್ದು. ಅನಿರ್ವಚನೀಯತೆ ಅನುಭಾವದ ಒಂದು ಅವಿಭಾಜ್ಯ ಲಕ್ಷಣ…. ಲೇಖನ ಚೆನ್ನಾಗಿದೆ ಸರ್
Gavisiddappa
Apr 3, 2022ಬಸವಣ್ಣನವರು ಶಿವಸಾಯುಜ್ಯಕ್ಕಿಂತ ಸಾಮರಸ್ಯದ ಆನಂದ ಹೆಚ್ಚಿನದು ಎನ್ನುತ್ತಾರೆ… ಇಲ್ಲಿ ಶಿವಸಾಯುಜ್ಯ ಹಾಗೂ ಸಾಮರಸ್ಯದ ಆನಂದ ಇವುಗಳಿಗಿರುವ ಅರ್ಥವ್ಯಾಖ್ಯಾನಗಳೇನು?
Mahesh R
Apr 3, 2022Sir, simply desire to say your article is astounding. The clearness in your post is spectacular… I can assume you are an expert in analyzing the difficult terminologies.