Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅನುಪಮ ಯೋಗಿ ಅನಿಮಿಷ
Share:
Articles May 6, 2020 ಹೆಚ್.ವಿ. ಜಯಾ

ಅನುಪಮ ಯೋಗಿ ಅನಿಮಿಷ

ವಿಜಯಪುರ ಜಿಲ್ಲೆಯ ಪಟ್ಟದಕಲ್ಲಿನಲ್ಲಿ ತ್ರೈಲೋಕ್ಯ ಚೂಡಾಮಣಿ ಹಾಗೂ ಪತ್ನಿ ಮಹರ್ಲೋಕಿ ಎಂಬ ಶಿವಭಕ್ತ ರಾಜ ದಂಪತಿಗಳಿಗೆ ಹುಟ್ಟಿದ ಮಗನೇ ‘ವಸುಧೀಶ’.

ವಸುಧೀಶ ರಾಜಕುಮಾರನು ಬೆಳೆದು ದೊಡ್ಡವನಾದ ಮೇಲೆ ಅರಸು ಮನೆತನಕ್ಕೆ  ತಕ್ಕ ವಿದ್ಯಾಭ್ಯಾಸ ಮಾಡಿಸಿದರು.  ಸಕಲ ವೇದಾಗಮ, ಶಾಸ್ತ್ರವಿದ್ಯೆಯಲ್ಲಿಯೂ ಅನುಭವ ಪಡೆದರು. ಶಸ್ತ್ರವಿದ್ಯೆಯಲ್ಲಿಯೂ ಸಂಪೂರ್ಣ ಪರಿಣಿತಿ ಸಾಧಿಸಿದರು. ವಸುಧೀಶ ರಾಜಕುಮಾರ ಪ್ರತಿದಿನವೂ ಶಿವ ದೇವಾಲಯದಲ್ಲಿನ ಶಿವಲಿಂಗಕ್ಕೆ ಅರ್ಚನೆ ಮಾಡಿಯೇ ಆಹಾರ ಪಾನೀಯ ಸ್ವೀಕರಿಸುತ್ತಿದ್ದರು. ಸಂಪೂರ್ಣ ಶಿವಭಕ್ತಿ ಸಂಪನ್ನನಾಗಿದ್ದರು. ಸತ್ಯ ಸಾತ್ವಿಕ ಸದಾಚಾರಿಯಾಗಿದ್ದರು.

ಮುಂದೆ ರಾಜಕುಮಾರ ಅರಸನಾದ ನಂತರ ಬಸವಣ್ಣನವರಿಂದ ಅರಿವಿನ ಕುರುಹಾದ ಇಷ್ಡಲಿಂಗವನ್ನು ಧರಿಸಿಕೊಂಡು ಅರ್ಚಿಸತೊಡಗಿದರು. ಅಂಗೈಯ ಇಷ್ಟಲಿಂಗದಲ್ಲಿ ದೃಷ್ಟಿ ಮನ ಪ್ರಾಣವ ಬೆರೆಸಿ ಅಚಲವಾಗಿ ಅನುಸಂಧಾನ ಮಾಡಿ ಶಿವಯೋಗದ ರಹಸ್ಯವನ್ನು ಬಸವ ಗುರುವಿನಿಂದಲೇ ಅರಿತುಕೊಂಡರು. ಮುಂದೆ ಇವರು ಮಹಾಯೋಗಿ ಅನಿಮಿಷರೆಂದೇ ಪ್ರಸಿದ್ಧರಾದರು. ಅನುಭವ ಮಂಟಪದ ಅಧ್ಯಕ್ಷರಾದ ಅಲ್ಲಮಪ್ರಭುದೇವರಿಗೆ ಅನಿಮಿಷ ಯೋಗಿಯ ಅಂಗೈಲಿಂಗವೆ ಅಳವಟ್ಟಿದೆ. ಇದಕ್ಕೆ ಹಲವಾರು ವಚನಗಳ ಆಧಾರ ಸಿಗುತ್ತದೆ.

ಶೂನ್ಯ ಸಂಪಾದನೆ ಸಂಪುಟದಲ್ಲಿ ಹೀಗೊಂದು ನಾಟಕೀಯ ಪ್ರಸಂಗವನ್ನು ಪ್ರಸ್ತಾಪಿಸಲಾಗಿದೆ. ಅದರ ಪ್ರಕಾರ, ಒಂದು ಸಾರಿ ಅನುಭವ ಮಂಟಪದಲ್ಲಿ ಶರಣರ ಚಿಂತನ ನಡೆದಿತ್ತು. ಗುರು ಶಿಷ್ಯರಲ್ಲಿ ಭೇದವಿಲ್ಲ, ಗುರುವೇ ಶಿಷ್ಯ, ಶಿಷ್ಯನೇ ಗುರುವೆಂದು ಪ್ರಭುದೇವರು ಅದ್ವೈತ ಅನುಭವ ಪ್ರತಿಪಾದಿಸಿದರು. ತನ್ನರಿವೇ ತನಗೆ ಗುರುವಾಗಬೇಕೆಂದು ತಿಳಿಸಿದರು. ಅದಕ್ಕೆ ಚನ್ನಬಸವಣ್ಣನವರು ಈ ರೀತಿಯಾಗಿ ಪ್ರತಿಕ್ರಿಯಿಸುತ್ತಾರೆ.

“ಗುರುವಿಲ್ಲದ ಲಿಂಗ ನಿನಗೆಲ್ಲಿಯದಯ್ಯಾ, ಕೊಂದೆ ನಿಮ್ಮಯ್ಯನ ಕೊಂಡೆ ಲಿಂಗವನು ಅಂದು ನಿನಗೆ ಅನಿಮಿಷ ಗುರುವಾದುದನರಿಯಯ್ಯಾ…”

ಎಂದು ಚನ್ನಬಸವಣ್ಣ ನುಡಿದರು. ಅದಕ್ಕೆ ಉತ್ತರವಾಗಿ ಪ್ರಭುದೇವರು ಹೀಗೆ ಹೇಳುತ್ತಾರೆ-

“ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ. ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ. ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ. ಇದ್ದಾನೆ ನೋಡಾ ಎನ್ನ ಗುರುವಿನ ಗುರು ಪರಮಗುರು ಬಸವಣ್ಣ ಎನ್ನ ಕಂಗಳ ಮುಂದೆ! ಗುಹೇಶ್ವರ ಸಾಕ್ಷಿಯಾಗಿ, ಎನ್ನ ಮೇಲೆ ದ್ರೋಹವಿಲ್ಲ ಕಾಣಾ ಚನ್ನಬಸವಣ್ಣಾ !” ಎಂದು ಅಲ್ಲಮಪ್ರಭುದೇವರು ತಿಳಿಸುತ್ತಾರೆ.

ಇಲ್ಲಿ ಅಲ್ಲಮ ಪ್ರಭುದೇವರು, “ಇದ್ದಾನೆ ನೋಡಾ ಎನ್ನ ಗುರುವಿನ ಗುರು ಬಸವಣ್ಣನೆನ್ನ ಕಣ್ಣಮುಂದೆ” ಎಂಬ ವಚನದ ಮೂಲಕ ಬಸವಣ್ಣನವರೇ ಅನಿಮಿಷಯ್ಯಂಗೆ ಇಷ್ಟಲಿಂಗವನಿತ್ತ ಗುರುವೆಂಬುದು ಸ್ಪಷ್ಟವಾಗಿದೆ. ಅದಕ್ಕೆ ಪೂರಕವಾಗಿ ಚನ್ನಬಸವಣ್ಣನವರು ಮತ್ತೊಂದು ವಚನದಲ್ಲಿ, “… ಕೂಡಲ ಚನ್ನಸಂಗಯ್ಯನಲ್ಲಿ ಅನಿಮಿಷ ಪ್ರಭುವಿಂಗೆ ಬಸವಣ್ಣ ಗುರುವಾದ ಕಾರಣ ನಾನು ನಿಮಗೆ ಚಿಕ್ಕ ತಮ್ಮ ಕೇಳಾ ಪ್ರಭುವೇ” ಎಂದಿದ್ದಾರೆ.

ಮತ್ತೊಂದು ವಚನದಲ್ಲಿ –

“ಅನಿಮಿಷಂಗೆ ಲಿಂಗವ ಕೊಟ್ಟಾತ ಬಸವಣ್ಣ. ಆ ಲಿಂಗ ನಿನಗೆ ಸೇರಿತ್ತಾಗಿ, ಬಸವಣ್ಣನ ಸಂಪ್ರದಾಯದ ಕಂದನು ನೋಡಾ ನೀನು. ಭಕ್ತಿದಳದುಳದಿಂದ ಚೆನ್ನಸಂಗಮನಾಥನೆಂಬ ಲಿಂಗವನವಗ್ರಹಿಸಿಕೊಂಡೆನಾಗಿ ಬಸವಣ್ಣನ ಸಂಪ್ರದಾಯದ ಕಂದನು ನೋಡಾ ನಾನು. ಇಂತಿಬ್ಬರಿಗೆಯೂ ಒಂದೆ ಕುಲಸ್ಥಲವಾದ ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಮಹಾಮನೆಯ ಪ್ರಸಾದ (ಇ)ಬ್ಬರಿಗೆಯೂ ಒಂದೆ ಕಾಣಾ ಪ್ರಭುವೆ” ಎಂದು ಹೇಳಿದ್ದಾರೆ. ಇದಕ್ಕೆ ಬಸವಣ್ಣನವರ ಇನ್ನೊಂದು ವಚನದಲ್ಲಿ ಮತ್ತಷ್ಟು ಸ್ಪಷ್ಟತೆ ಸಿಗುತ್ತದೆ:

“ಎನ್ನ ಕರಸ್ಥಲದ ಲಿಂಗವ ಅನಿಮಿಷ ಕೊಂಡನು, ಅನಿಮಿಷರ ಕರಸ್ಥಲದ ಲಿಂಗವ ನೀವು ಕೊಂಡಿರಿ… ” ಎಂದು ಬಸವಣ್ಣನವರು ಅಲ್ಲಮಪ್ರಭುದೇವರಿಗೆ ಹೇಳಿದ್ದಾರೆ.

ಈ ರೀತಿಯಾಗಿ ಅಲ್ಲಮಪ್ರಭುದೇವರ ಮತ್ತು ಚನ್ನಬಸವಣ್ಣನವರ ವಚನಗಳಲ್ಲಿ ಅನಿಮಿಷರ ಕೈಗೆ ಬಂದುದು ಬಸವಣ್ಣನವರಿತ್ತ ಇಷ್ಟಲಿಂಗವೇ ಎಂಬುದು ಗೊತ್ತಾಗುತ್ತದೆ.

ಅನಿಮಿಷರಿಗೆ ಲಿಂಗವ ಕೊಟ್ಟವರಾರೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅವಶ್ಯಕ.

ಕೆಲವು ಪುರಾಣ, ಕಾವ್ಯಗಳಲ್ಲಿ ಅನಿಮಿಷರಿಗೆ ನಂದಿಕೇಶ್ವರನು ಬಂದು ಲಿಂಗವ ಕೊಟ್ಟನೆಂದು ಹೇಳಲಾಗಿದೆ. ಆದರೆ ನಂದಿಕೇಶ್ವರನು ಬಹಳ ಪುರಾತನ ಕಾಲದವನು. ಬಹಳ ಪರಾತನ ಕಾಲದಲ್ಲಿ ನಂದಿಕೇಶ್ವರನಿಂದ ಲಿಂಗವ ಪಡೆದುಕೊಂಡು ಶಿವಯೋಗದಲ್ಲಿ ನಿರತನಾದ ಅನಿಮಿಷ ಯೋಗಿಯ ಲಿಂಗವೇ ಮುಂದೆ ಸಾವಿರಾರು ವರ್ಷಗಳ ನಂತರ ಅಲ್ಲಮಪ್ರಭುವಿಗೆ ದೊರೆಯಿತೆಂದು ಪುರಾಣದಲ್ಲಿ ಬರೆಯಲಾಗಿದೆ. ಆದರೆ ಇದು ಬಸವಣ್ಣನವರಿಗಿಂತಲೂ ಪೂರ್ವದಲ್ಲಿಯೇ ಅರಿವಿನ ಕುರುಹಾದ ಇಷ್ಟಲಿಂಗ ಇತ್ತೆಂದು ಸಾಧಿಸಲು ರಚಿಸಿಕೊಂಡ ಕಾಲ್ಪನಿಕ ಕಥೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಅನಿಮಿಷ್ಯನವರಿಗೆ ಬಸವಣ್ಣನವರಿಂದಲೇ ಇಷ್ಟಲಿಂಗ ಅಳವಟ್ಟಿದೆ ಎಂಬುದಕ್ಕೆ ಬಸವಣ್ಣನವರ ವಚನ, ಚಿನ್ಮಯಜ್ಞಾನಿ ಚನ್ನಬಸವಣ್ಣನವರ ವಚನ ಮತ್ತು ವ್ಯೋಮಕಾಯಸಿದ್ಧ ಅಲ್ಲಮಪ್ರಭುದೇವರ ವಚನಗಳಿಂದಲೇ ಸ್ಪಷ್ಟವಾಗಿ ತಿಳಿಯುತ್ತದೆ. ಅಷ್ಟೇ ಅಲ್ಲದೆ ಸಾವಿರಾರು ವರ್ಷಗಳು ಅನಿಮಿಷಯೋಗಿಯು ಗುಹೆಯೊಳಗೆ ಇರಲು ಸಾಧ್ಯವೇ ಎಂಬುದರ ಬಗ್ಗೆ ಪ್ರಜ್ಞಾವಂತರು ಆಲೋಚಿಸುವ ವಿಚಾರವಾಗಿದೆ.

ಅನಿಮಿಷಯ್ಯನವರಿಗೆ ಬಸವಣ್ಣನವರು ಯಾವಾಗ ಲಿಂಗ ಕೊಟ್ಟರು? ಎಲ್ಲಿ ಕೊಟ್ಟರು? ಎಂಬ ವಿಷಯ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಕೆಲವು ಸಾಹಿತ್ಯದಲ್ಲಿ, ಬಿಜ್ಜಳನ ಪ್ರಧಾನಿಯಾದ ಬಸವಣ್ಣನವರು ಪಟ್ಟದಕಲ್ಲಿನ ಅರಸ ವಸುಧೀಶನಲ್ಲಿಗೆ ಬರುವ ಸಂದರ್ಭ ಒದಗಿ ಬಂದಿದ್ದು, ಆಗ ಬಸವಣ್ಣನವರ ಇಷ್ಟಲಿಂಗಾರ್ಚನೆಯ ಅನುಸಂಧಾನವನ್ನು ವಸುಧೀಶ ರಾಜನು ಕಂಡು ಪ್ರಭಾವಿತನಾಗಿ ಅವರಿಂದಲೇ ಲಿಂಗವ ಪಡೆದಿರಬಹುದೆಂದೂ ಹೇಳುತ್ತವೆ. ಮತ್ತೆ ಕೆಲವು ಸಾಹಿತ್ಯದಲ್ಲಿ,

ವಸುಧೀಶ ರಾಜ ಪ್ರತಿದಿನ ಶಿವಪೂಜೆ ಮಾಡದೆ ಉಪಹಾರ ಕೂಡ ಸೇವಿಸುತ್ತಿರಲಿಲ್ಲ. ಹೀಗಿರುವಾಗ ಒಮ್ಮೆ ವಸುಧೀಶರು, ಸಂಚಾರಕ್ಕೆಂದು ಹೋದಾಗ ಅಲ್ಲಿ ಯಾವ ದೇವಾಲಯಗಳೂ ಸಿಗದಿದ್ದಾಗ ಪರಿತಪಿಸುತ್ತಿದ್ದರು. ಆಗ ಅಲ್ಲಿಗೆ ಆಕಸ್ಮಿಕವಾಗಿ ಸಂಚಾರಕ್ಕೆ ಬಂದಿದ್ದ ಬಸವಣ್ಣನವರು ಭೇಟಿಯಾಗುತ್ತಾರೆ. ವಸುಧೀಶನ ಕಳವಳ ಗಮನಿಸಿ ವಿಚಾರಿಸಿದ ಬಸವಣ್ಣನವರು, ತಮ್ಮ ಬಳಿ ಇದ್ದ ಇಷ್ಟಲಿಂಗವನ್ನೇ ನೀಡಿ ಪೂಜಿಸಿ ಪ್ರಸಾದ ಸ್ವೀಕರಿಸಲು ಹೇಳುತ್ತಾರೆ. ಆಗ ವಸುಧೀಶರು ಹಾಗೇ ಮಾಡಿದರೆಂದು ತಿಳಿಯುತ್ತದೆ.

ಒಟ್ಟಿನಲ್ಲಿ ಬಸವಣ್ಣನವರೇ ಅನಿಮಿಷಯ್ಯಂಗೆ ಲಿಂಗವಿತ್ತವರೆಂಬುದು ನಿಸ್ಸಂಶಯವಾಗಿ ಗೋಚರಿಸುತ್ತದೆ.

ಒಂದು ದಿನ ವಸುಧೀಶರು ‘ಕೃತುಜನ್ನ’ ಎಂಬ ತನ್ನ ಪಟ್ಟದಕುದುರೆಯನ್ನೇರಿ ಅತಿ ಅಲ್ಪ ಪರಿವಾರದೊಂದಿಗೆ ವಾಯು ವಿಹಾರಕ್ಕೆ ಕಾಡಿಗೆ ಹೋದರು. ಓಡುವ ಭರದಲ್ಲಿ ಕುದುರೆಗೆ ಬಲು ದಣಿವಾಗಿ ‘ಮೂಕದ್ರೋಣ’ ವೆಂಬ ಪರ್ವತ ಪ್ರದೇಶಕ್ಕೆ ಬಂದು ಓಡಲಾಗದೆ ದಣಿದು ನಿಂತುಬಿಟ್ಟಿತು. ಕುದುರೆಯು ದಣಿವಾರಿಸಿಕೊಳ್ಳಲೆಂದು ರಾಜನು ಆ ಕುದುರೆಗೆ ನೀರು ಕುಡಿಸಿ ಮೇವು ಹಾಕಿ ಪಕ್ಕದ ಒಂದು ಮರಕ್ಕೆ ಕಟ್ಟಿ, ವಿಶ್ರಾಂತಿಗಾಗಿ ಒಂದು ಮರದ ಕೆಳಗೆ ಮಲಗಿದರು.

ಇತ್ತ ಅರಸು ಪರಿವಾರದವರು ವಸುಧೀಶ ಅರಸರನ್ನು ಅರಸುತ್ತಾ ಅರಸುತ್ತಾ, ಅಲ್ಲಿಗೆ ಬಂದರು. ತಮ್ಮ ಅರಸರನ್ನು ಕಂಡು ಆನಂದಭರಿತರಾದರು. ಅಷ್ಟರಲ್ಲಿ ಅರಸನ ಪಟ್ಟದ ಕುದುರೆಯು ಕಟ್ಟಿದ ಹಗ್ಗವ ಕಳಚಿಕೊಂಡು ಅದೆಲ್ಲಿಗೋ ಓಡಿ ಹೋಯಿತು. ಅತೀ ಅಕ್ಕರೆಯ ಕುದುರೆಯನ್ನು ಕಳೆದುಕೊಂಡ ಅರಸು ವಸುಧೀಶರಿಗೆ, ಅಂತರಂಗದಲ್ಲಿ ಅರಸೊತ್ತಿಗೆಯೂ ಒಂದು ದಿನವ ಇದೇ ರೀತಿಯಾಗಿ ಅಗಲಿ ಹೋಗುವುದೆಂಬ ಅರಿವು ಆವರಿಸಿತ್ತು… ಅರಸೊತ್ತಿಗೆಯೂ ಅಶಾಶ್ವತವೇ ಎಂದರಿತ ಅರಸನಲ್ಲಿ ವೈರಾಗ್ಯಭಾವ ಮೂಡಿ, ಬೆಳೆದು ಸಂಪೂರ್ಣ ಆಧ್ಯಾತ್ಮದೆಡೆಗೆ ತಿರುಗಲು ನೆರವಾಯಿತು. ಅರಸನು ತನ್ನ ಪರಿವಾರದವರಿಗೆಲ್ಲ ತಿರುಗಿ ಅರಮನೆಗೆ ಹೋಗುವಂತೆ ಭಿನ್ನವಿಸಿದರು. ಅವರೆಲ್ಲ ಅರಸರ ಅಪ್ಪಣೆಯಂತೆ ಪಟ್ಟದಕಲ್ಲಿಗೆ ಬಂದರು.

ಇತ್ತ ವಸುಧೀಶರು ತನ್ನ ಗುರು ಬಸವಣ್ಣನಿತ್ತ ಅಂಗೈಯ ಇಷ್ಟಲಿಂಗವ ಅಚಲವಾಗಿ ದೃಷ್ಟಿ ,ಮನ, ಪ್ರಾಣವ ಬೆರೆಸಿ ಅನಿಮಿಷ ದೃಷ್ಟಿಯಿಂದ ನೋಡಿ ಲಿಂಗಾಂಗ ಸಾಮರಸ್ಯದ ಅನುಭಾವದಲ್ಲಿ ಮುಳುಗಿ ಹೋದರು. ವಸುಧೀಶರ ಶಿವಯೋಗವು ಹಗಲಿರುಳೆಂಬ ಕಾಲಗತಿಯ ಕಲ್ಪನೆಯ ಮೀರಿ ನೆಲೆಗೊಂಡಿತು. ಮುಂದೆ ಪ್ರಶಾಂತ ಸ್ಥಳವನ್ನು ಅರಸುತ್ತ  ನಡೆದು ಶಿರಾಳಕೊಪ್ಪದ ಬಳಿ ಬಂದು ಇಲ್ಲಿಂದ ಎರಡೂವರೆ ಕಿ.ಮೀ. ಅಂತರದಲ್ಲಿಯೇ ಗಿಡಮರಗಳ ಮಧ್ಯದ ಪ್ರಶಾಂತ ಸ್ಥಳಕ್ಕೆ ಆಗಮಿಸಿ, ಗೊಗ್ಗಯ್ಯನ ತೋಟದಲ್ಲಿದ್ದ ನಿಸರ್ಗ ನಿರ್ಮಿತವಾದ ಚಿಕ್ಕ ಗುಹೆಯೊಂದರಲ್ಲಿ ಸೇರಿ, ಶಿವಯೋಗದಲ್ಲಿ ತಲ್ಲೀನರಾದರು. ಗೊಗ್ಗಯ್ಯನವರು ಅವರ ಸೇವಕನಾಗಿ ಸೇವೆ ಮಾಡಿದರೆಂದು ತಿಳಿಯುತ್ತದೆ.

ಅನಿಮಿಷನೆಂದರೆ ಬೇರಾರೂ ಅಲ್ಲ. ಅಂಗೈಯ ಲಿಂಗದಲ್ಲಿ ಅನಿಮಿಷ ದೃಷ್ಟಿಯನ್ನಿಟ್ಟು ಮನ ಪ್ರಾಣ ಸಮರಸವಾಗಿ ನಿರೀಕ್ಷಿಸಿ ಶಿವಯೋಗದಲ್ಲಿ ತಲ್ಲೀನವಾದ ಕಾರಣ ವಸುಧೀಶರಿಗೆ ಅನಿಮಿಷಯ್ಯನೆಂದು ಕರೆಯುತ್ತಾರೆ.

ಅನೇಕ ವರ್ಷಗಳವರೆಗೆ ಗುಹೆಯಲ್ಲಿ ಹೀಗೇ ಕುಳಿತಿದ್ದರು. ಕೆಲ ಕಾಲದ ನಂತರ ಅಲ್ಲಮರು ಗೊಗ್ಗಯ್ಯನ ತೋಟಕ್ಕೆ ಬಂದು ಅವನನ್ನು ಪರಿವರ್ತನೆ ಮಾಡಿ- “ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ. ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ ಸುಷುಮ್ನನಾಳದಿಂದ ಉದಕವ ತಿದ್ದಿ ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ , ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.” ಎಂದು ಆಧ್ಯಾತ್ಮ ತೋಟ ಮಾಡುವ ಬಗ್ಗೆ ತಿಳಿಸಿ ಹೊರಡುವ ಸಮಯದಲ್ಲಿ ಒಂದು ಅನಿರೀಕ್ಷಿತ ಘಟನೆ ನಡೆಯುತ್ತದೆ.

ಅನಿಮಿಷ ಯೋಗಿಯು ಇದ್ದ ಗುಹೆಯ ಬಳಿ ಬರುತ್ತಾರೆ. ಗೊಗ್ಗಯ್ಯನಿಂದ ಅವರ ಬಗ್ಗೆ ತಿಳಿದ ಅಲ್ಲಮರು ಬಂಡೆಗಲ್ಲ ಬಾಗಿಲ ಸರಿಸಿ, ಒಳಹೊಕ್ಕರು. ಅನುಪಮ ಅನಿಮಿಷ ಯೋಗಿಯನ್ನು ಕಂಡು ಅತ್ಯಂತ ಆನಂದದಿಂದ ಹೀಗೆ ಹಾಡುತ್ತಾರೆ:

“ಅರಸುವ ಬಳ್ಳಿ ಕಾಲ ಸುತ್ತಿತ್ತೆಂಬಂತೆ, ಬಯಸುವ ಬಯಕೆ ಕೈಸಾರಿದಂತೆ, ಬಡವ ನಿಧಾನವನೆಡಹಿ ಕಂಡಂತೆ, ನಾನರಸುತ್ತಲರಸುತ್ತ ಬಂದು ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ. ಎನ್ನ ಅರಿವಿನ ಹರುಹ ಕಂಡೆ ನೋಡಾ. ಎನ್ನ ಒಳಹೊರಗೆ ಎಡೆದೆರಹಿಲ್ಲದೆ ಥಳಥಳಿಸಿ ಬೆಳಗಿ ಹೊಳೆವುತಿಪ್ಪ ಅಖಂಡಜ್ಯೋತಿಯ ಕಂಡೆ ನೋಡಾ! ಕುರುಹಳಿದ ಕರಸ್ಥಲದ ನಿಬ್ಬೆರಗಿನ ನೋಟದ ಎನ್ನ ಪರಮಗುರುವ ಕಂಡು ಬದುಕಿದೆನು ಕಾಣಾ ಗುಹೇಶ್ವರಾ”

ಮಣ್ಣಮರೆಯ ಗುಹೆಯೊಳಗೆ ಶಿವಯೋಗಿ ಅನಿಮಿಷದೇವರು ಶುದ್ಧ ಪದ್ಮಾಸನಾ ರೂಢನಾಗಿ ಕುಳಿತಿದ್ದಾರೆ. ಆ ತೇಜೋಮೂರ್ತಿಯನ್ನು ಕಂಡು ಹರ್ಷಭರಿತರಾಗಿ ಆನಂದದಿಂದ ಅನಿಮಿಷ ಯೋಗಿಯ ಅಂಗೈಯ ಲಿಂಗವ ಅಲ್ಲಮರು ಅವಗ್ರಹಿಸಿಕೊಂಡರು.

ಈ ಅನಿಮಿಷ ಯೋಗಿಯನ್ನು ನೋಡಿ ಪ್ರಭುದೇವರು-

“ಕಾಯದಲಾದ ಮೂರ್ತಿಯಲ್ಲ, ಜೀವದಲಾದ ಮೂರ್ತಿಯಲ್ಲ, ಪ್ರಾಣದಲಾದ ಮೂರ್ತಿಯಲ್ಲ, ಮುಕ್ತಿಯಲಾದ ಮೂರ್ತಿಯಲ್ಲ, ಯುಗದಲಾದ ಮೂರ್ತಿಯಲ್ಲ, ಜುಗದಲಾದ ಮೂರ್ತಿಯಲ್ಲ, ಇದೆಂತಹ ಮೂರ್ತಿಯೆಂದುಪಮಿಸುವೆ ? ಕಾಣಬಾರದ ಕಾಯ, ನೋಡಬಾರದ ತೇಜ, ಉಪಮಿಸಬಾರದ ನಿಲವು. ಕಾರಣವಿಡಿದು ಕಣ್ಗೆ ಗೋಚರವಾದ ಸುಖವನು ಏನೆಂದು ಹೇಳುವೆ ಗುಹೇಶ್ವರಾ?”

ಎಂದು ವರ್ಣಿಸುತ್ತಾರೆ. ಅನಿಮಿಷರ ಅಂಗವೆಲ್ಲ ಲಿಂಗಮಯವಾಗಿದೆ.ಅದು ಜೀವದ ಜಂಜಡದ ಮೂರ್ತಿಯಲ್ಲ. ಜೀವಭಾವದ ಭ್ರಮೆಯನ್ನಳಿದ ಶಿವಭಾವಿಯಾದ ಶಿವಮೂರ್ತಿ. ಲಿಂಗಾಂಗ ಸಾಮರಸ್ಯವ ಸಾಧಿಸಿದ ಮಹಾಲಿಂಗ ಮೂರ್ತಿ ಎಂದು ತನ್ನ ಗುರುವನ್ನು ಪ್ರಭುದೇವರು ಬಣ್ಣಿಸುತ್ತಾರೆ.

ಮತ್ತೆ ಹೇಳುತ್ತಾರೆ- “ಪುಣ್ಯವುಳ್ಳ ಕಾಲಕ್ಕೆ ಮಣ್ಣು ಹೊನ್ನಪ್ಪುದು, ಪುಣ್ಯವುಳ್ಳ ಕಾಲಕ್ಕೆ ಪಾಷಾಣ ಪರುಷವಪ್ಪುದು ನೋಡಾ. ಮುನ್ನ ಮುನ್ನವೆ, ಅಚ್ಚೊತ್ತಿದ ಭಾಗ್ಯ ಎನ್ನ ಕಣ್ಣ ಮುಂದೆ ಕಾಣಬಂದಿತ್ತು ನೋಡಾ! ಮಣ್ಣ ಮರೆಯ ದೇಗುಲದೊಳಗೊಂದು ಮಾಣಿಕ್ಯವ ಕಂಡಬಳಿಕ, ಇನ್ನು ಮುನ್ನಿನಂತಪ್ಪುದೆ ಗುಹೇಶ್ವರಾ?”

ಹೀಗೆ ಅಲ್ಲಮಪ್ರಭುಗಳು ಅನುಪಮಯೋಗಿ ಅನಿಮಿಷ ಗುರುವನ್ನು ಕಂಡು ಆನಂಭರಿತವಾಗಿ ಪರಿಪರಿಯಾಗಿ ಹಾಡುತ್ತಾರೆ. ಪುಣ್ಯ ಒದಗಿ ಬಂದಾಗ ಕಲ್ಲೂ ಚಿನ್ನವಾಗುತ್ತದೆ ಮಣ್ಣೂ ಹೊನ್ನಾಗುತ್ತದೆ. ಅಂತಹ ಪುಣ್ಯ ನನಗೆ ಒದಗಿ ಬಂದಿದೆ. ಅಂತರಂಗದ ಅವ್ಯಕ್ತ ಅರಿವಿನ ಗುರು ಸಾಕಾರಗೊಂಡು ಕಣ್ಣ ಮುಂದೆ ಕಂಡಿದೆ. ಇದು ಎನ್ನ ಭಾಗ್ಯ. ಮಣ್ಣ ಮರೆಯ ಗುಹೆಯೊಳಗೆ ಮನಮಗ್ನವಾಗಿ ಮಹಾಘನದಲ್ಲಿ ಮೈಮರೆದಿರುವ ಶಿವಯೋಗಿಯೂ ಒಂದು ಬೆಲೆ ಕಟ್ಟಲಾರದ ಅಮೂಲ್ಯ ಮಾಣಿಕ್ಯ. ಅದು ಭೌತಿಕ ಮಾಣಿಕ್ಯವಲ್ಲ, ಆಧ್ಯಾತ್ಮಿಕ ಮಾಣಿಕ್ಯ. ಇದು ಮಾತಿಗೆ ಮೀರಿದ ಮಹಾಘನ.

“ಕಾಣಬಾರದ ಗುರು ಕಣ್ಗೆ ಗೋಚರವಾದಡೆ, ಹೇಳಲಿಲ್ಲದ ಬಿನ್ನಪ, ಮುಟ್ಟಲಿಲ್ಲದ ಹಸ್ತಮಸ್ತಕ ಸಂಯೋಗ. ಹೂಸಲಿಲ್ಲದ ವಿಭೂತಿಯ ಪಟ್ಟ, ಕೇಳಲಿಲ್ಲದ ಕರ್ಣಮಂತ್ರ. ತುಂಬಿ ತುಳುಕದ ಕಲಶಾಭಿಷೇಕ, ಆಗಮವಿಲ್ಲದ ದೀಕ್ಷೆ, ಪೂಜೆಗೆ ಬಾರದ ಲಿಂಗ, ಸಂಗವಿಲ್ಲದ ಸಂಬಂಧ. ಸ್ವಯವಪ್ಪ ಅನುಗ್ರಹ, ಅನುಗೊಂಬಂತೆ ಮಾಡಾ ಗುಹೇಶ್ವರಾ.”

ಗುರುವೆಂದರೆ ಅರಿವು, ಪರಂಜ್ಯೋತಿಯ ಇರವು. ಅದು ನಿರಾಕಾರ. ಕಣ್ಗೆ ಕಾಣಬಾರದು. ಅರಿವಿನ ಪ್ರಭೆ. ಕಾಣುವ ಅಂಗದಲ್ಲಿ ಅರಳಿದರೆ ಅದು ಗುರು ಮೂರ್ತಿ. ಅನಿಮಿಷಯೋಗಿ ಅಂತಹ ಅನುಪಮ ಅರಿವಿನ ಗುರು. ಆದರೆ ಅಂಗವೆಲ್ಲ ಅಂಗೈ ಲಿಂಗದಲ್ಲಿ ಅರ್ಪಿತವಾಗಿದೆ. ಶಬ್ದ ಮುಗ್ದವಾಗಿದೆ. ಮನ ಮುಗ್ದವಾಗಿದೆ. ಕ್ರಿಯೆ ನಿಷ್ಪತ್ತಿಯಾಗಿದೆ. ಅಂತಹ ಗುರುವಿನಿಂದ ಮುಟ್ಟಲಿಲ್ಲದ ಹಸ್ತಮಸ್ತಕ ಸಂಯೋಗ. ಅಲ್ಲಿ ಧರಿಸದಿರುವ ನಿರುಪಾಧಿತ ನಿಜದರಿವಿನ ವಿಭೂತಿ ಪಟ್ಟ. ಶಬ್ದವಾಗಿ ಕೇಳಿಸದ ಕರ್ಣದ ಮಹಾಮಂತ್ರ, ಭೌತಿಕ ಜಲ ತುಂಬಿ ತುಳುಕದ ಪರಮಾನಂದ ಜಲದ ಕಳಶಾಭಿಷೇಕ , ಅಗಮ ನಿಯಮವಿಲ್ಲದ ದೀಕ್ಷಾ ಸಂಸ್ಕಾರ, ಬಾಹ್ಯ ಪೂಜೆಗೆ ನಿಲುಕದ ಪ್ರಾಣಲಿಂಗ. ಇಂತಹ ಯೋಗ್ಯ ಗುರುವಿನ ಕಾರುಣ್ಯ ಪಡೆದು ಆನಂದಿಸುತ್ತಾರೆ ಪ್ರಭುದೇವರು.

ಅಲ್ಲಮಪ್ರಭುದೇವರು ಅನಿಮಿಷಯೋಗಿ ಗುರುವಿನಿಂದ ಗುರು ಮುಟ್ಟಿ ಗುರು ಸ್ವರೂಪವೆ ಆದ ಅನುಭವವನ್ನು ಅತ್ಯಾನಂದದಿಂದ ಹೀಗೆ ಕೊಂಡಾಡುತ್ತಾರೆ- “ಗುರುವಿನ ಪರಿ ವಿಪರೀತವಾಯಿತ್ತಯ್ಯಾ, ಭ್ರಮರ ಕೀಟ ನ್ಯಾಯದಂತಾಯಿತ್ತು. ಗುರು ತನ್ನ ನೆನೆವನ್ನಬರ ಎನ್ನನಾ ಗುರುವ ಮಾಡಿದನು. ಇನ್ನು ಶಿಷ್ಯನಾಗಿ ಶ್ರೀಗುರುವ ಪೂಜಿಸುವರಾರು ಹೇಳಾ ಗುಹೇಶ್ವರಾ?”

ಭ್ರಮರ ತನ್ನ ನಂಬಿದ ಕೀಟಕ್ಕೆ ತನ್ನಂತೆ ಭ್ರಮರವಾಗಿ ಮಾಡಿಕೊಳ್ಳುವಂತೆ ಗುರು ತನ್ನ ನೆನೆಯುವ ನನ್ನನ್ನು ತನ್ನಂತೆ ಗುರು ಸ್ವರೂಪವೇ ಆಗಿ ಪರಿವರ್ತನೆ ಮಾಡಿದ್ದಾರೆ. ಗುರು ಶಿಷ್ಯವೆಂಬುಭಯವಳಿದು ಏಕವಾಯಿತ್ತು ಎಂದು ಹೇಳುತ್ತಿದ್ದಾರೆ.

ಮತ್ತೆ ಹೇಳುತ್ತಾರೆ- “ಗುರು, ಶಿಷ್ಯ ಸಂಬಂಧವನರಸಲೆಂದು ಹೋದಡೆ, ತಾನೆ ಗುರುವಾದ ತಾನೆ ಶಿಷ್ಯನಾದ, ತಾನೆ ಲಿಂಗವಾದ. ಗುಹೇಶ್ವರಾ_ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟಡೆ, ಭಾವ ಬತ್ತಲೆಯಾಯಿತ್ತು!”

ಗುರು ಶಿಷ್ಯರ ಸಂಬಂಧ ಭಿನ್ನವಾದುದಲ್ಲ ಮೂಲ ಮಹಾಘನ ವಸ್ತು ಒಂದೇ ಆಗಿದೆ. ಆ ವಸ್ತುವೇ ತಾನೇ ಗುರು ಶಿಷ್ಯವೆಂಬುಭಯವಾಯಿತು. ಗುರು ಶಿಷ್ಯ ಸಂಬಂಧವನರಸಬೇಕೆಂದು ಅಂತರಂಗದ ಅರಿವಿನೆಡೆಗೆ ಹೋದರೆ ಶಿಷ್ಯ ತಾನೇ ಗುರುವಾಗುತ್ತಾನೆ. ತಾನೇ ಲಿಂಗವಾಗುತ್ತಾನೆ. ಗುರು ಶಿಷ್ಯ ಸಂಬಂಧವೆಂಬ ಭಿನ್ನ ಭಾವವಳಿದು ಭಾವ ಬಯಲಾಯಿತ್ತೆಂದು ಅಲ್ಲಮಪ್ರಭುದೇವರು ಹೇಳುವರು.

ಲಿಂಗವೇ ಪ್ರಾಣವಾದ ಕಾರಣ ಲಿಂಗವನ್ನು ಅಲ್ಲಮರು ತಮ್ಮ ಕರಸ್ಥಲಕ್ಕೆ ಆಯತವ ಮಾಡಿಕೊಂಡಾಕ್ಷಣ ಅನಿಮಿಷರ ಅಂಗವು ಅದಾಗಲೇ ಕೆಳಕ್ಕೆ ಉರುಳಿತು.

ಗುರುವಳಿದ ಪಾಪವ ಹೊತ್ತೆನೇನೋ ಎಂದು ಅಲ್ಲಮರು ತಳಮಳಗೊಂಡರು. ಮತ್ತೆ ಸುಜ್ಞಾನ ಮುಖದಿಂದರಿದು, ಇಲ್ಲ ಗುರುವಳಿದಿಲ್ಲ, ಗುರುವು ಲಿಂಗದಲ್ಲಿ ಲಯವಾಗಿರುವರು. ಆ ಲಿಂಗವೆನ್ನ ಕರಸ್ಥಲದಲ್ಲಿದೆ. ಗುರುವಿಗೆ ಸಾವಿಲ್ಲ. ಸಾಯುವುದು ಗುರುವಲ್ಲವೆಂದು ಚೇತರಿಸಿಕೊಂಡು ಯೋಗ ಸಾಧನೆಯಲ್ಲಿ ತಲ್ಲೀನರಾದರು.

ಪ್ರಭುದೇವರು ತನ್ನ ಗುರುವಾದ ಅನಿಮಿಷಯೋಗಿಯಿಂದ ಗುಹೆಯೊಳಗೆ ಲಿಂಗವ ಪಡೆದಿದ್ದರಿಂದ ಆ ಲಿಂಗಕ್ಕೆ ‘ಗುಹೆಯ ಈಶ್ವರ’,  ‘ಗುಹೇಶ್ವರ’ವೆಂದು ಹೆಸರಿಟ್ಟು ತಮ್ಮ ವಚನಗಳ ಅಂಕಿತವನ್ನು ಗುಹೇಶ್ವರ ಎಂಬ ಅಂಕಿತದಲ್ಲೇ  ಬರೆದಿದ್ದು ಸುಮಾರು 1670 ವಚನಗಳು ಲಭ್ಯವಿವೆ.

ಅನೇಕ ವರ್ಷಗಳ ಕಾಲ ಹಲವಾರು ಶರಣ ಶರಣೆಯರಿಗೆ ಮಾರ್ಗದರ್ಶನ ಮಾಡುತ್ತಾ, ಗುರುವಿನ ಗುರು ಬಸವಗುರುವನ್ನು ಸಂದರ್ಶಿಸಲು ಶಿವಯೋಗಿ ಸಿದ್ದರಾಮರೊಂದಿಗೆ ಕಲ್ಯಾಣಕ್ಕೆ ಬರುತ್ತಾರೆ.

ಸಂಗ್ರಹ ಕೃಪೆ:

(ಗುಳೂರು ಸಿದ್ಧವೀರಣ್ಣೊಡೆಯ ಸಂಪಾದಿತ, ಶೂನ್ಯ ಸಂಪಾದನೆಯ ರಹಸ್ಯ, ಸಂಪುಟ೧)

Previous post ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
Next post   ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3

Related Posts

ಶಬ್ದದೊಳಗಣ ನಿಶ್ಶಬ್ದ…
Share:
Articles

ಶಬ್ದದೊಳಗಣ ನಿಶ್ಶಬ್ದ…

July 21, 2024 ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ
ಭಾಷೆ, ಭಾಷೆಯ ಬಳಕೆ ಕುರಿತು ವಚನಕಾರರು ಬಹಳ ಮುಖ್ಯವಾದ ಮಾತುಗಳನ್ನು ಹೇಳಿದ್ದಾರೆ. ಉಲಿ, ಶಬ್ದ, ಮಾತು, ನುಡಿ, ವಚನ, ಭಾಷೆ ಎಂಬ ಪದಗಳನ್ನು ಖಚಿತವಾದ ಅರ್ಥದಲ್ಲಿ ಬಹಳ...
ಹೊತ್ತು ಹೋಗದ ಮುನ್ನ…
Share:
Articles

ಹೊತ್ತು ಹೋಗದ ಮುನ್ನ…

April 29, 2018 ಕೆ.ಆರ್ ಮಂಗಳಾ
ಕಾಲವನ್ನು ಹೇಗೆ ಗ್ರಹಿಸುತ್ತೀರಿ? ಕಳೆದು ಹೋದ ನಿನ್ನೆಗಳಲ್ಲೋ? ಕಾಣದ ನಾಳೆಗಳಲ್ಲೋ? ಈಗ ನಮ್ಮೆದುರೇ ಸರಿಯುತ್ತಿರುವ ಈ ಕ್ಷಣಗಳಲ್ಲೋ… ಇಲ್ಲವೇ ಗೋಡೆಯ ಗಡಿಯಾರದಲ್ಲೋ… ವಿಶ್ವಕ್ಕೆ...

Comments 11

  1. Panchakshari H V
    May 8, 2020 Reply

    ಅನಿಮಿಷ ಯೋಗಿ ಮತ್ತು ಅಲ್ಲಮರ ದೀಕ್ಷೆ ಕುರಿತು ಮಹತ್ತರಬೆಳಕು ಚೆಲ್ಲುವ ಲೇಖನ.
    ಶರಣುಶರಣಾರ್ಥಿ

  2. ಫಕೀರಪ್ಪ ರಾಣೆಬೆನ್ನೂರು
    May 8, 2020 Reply

    ಅನಿಮಿಷ ಯೋಗಿಯ ಕುರಿತು ನನಗೆ ಏನೂ ತಿಳಿದಿರಲಿಲ್ಲ. ಉತ್ತಮ ಮಾಹಿತಿ ನೀಡಿದ ಜಯಾ ತಾಯಿಯವರಿಗೆ ಶರಣು.
    ಫಕೀರಪ್ಪ ರಾಣೆಬೆನ್ನೂರು

  3. Nagaraj G.N
    May 11, 2020 Reply

    ಬಸವಣ್ಣನವರೇ ಅನಿಮಿಷಯೋಗಿಗಳ ಗುರುವೆಂದು ತಿಳಿದು ಆಶ್ಚರ್ಯವಾಯಿತು. ಪ್ರಭುದೇವರ ವಚನಗಳು ಮನಮುಟ್ಟುವಂತಿವೆ.

  4. Jahnavi Naik
    May 11, 2020 Reply

    ಅನಿಮಿಷಯೋಗಿಯು ಕಲ್ಯಾಣಕ್ಕೆ ಬರಲೇ ಇಲ್ಲವೇ? ಇತರೆ ಶರಣರೊಡನೆ ಅವರು ಮಾತುಕತೆ ನಡೆಸಲೇ ಇಲ್ಲವೇ… ಹೀಗೆ ಒಂದಷ್ಟು ಪ್ರಶ್ನೆಗಳು ಉಳಿದವು….. ಮಾಹಿತಿಗಾಗಿ ಧನ್ಯವಾದಗಳು.

  5. Kiran Varad
    May 13, 2020 Reply

    ವಸುಧೀಶ ರಾಜ ಅನಿಮಿಷರಾದ ಕತೆ ಪುರಾಣದ ಕಟ್ಟುಕತೆಯಂತಿದೆ. ಇದರಲ್ಲಿ ಇತಿಹಾಸದ ಎಳೆಗಳನ್ನು ಗುರುತಿಸಿದ್ದರೆ ಚೆನ್ನಾಗಿತ್ತು

  6. Sumitra
    May 16, 2020 Reply

    ಅಲ್ಲಮರ ಗುರು ಬಸವಣ್ಣನವರೋ ಬಸವಣ್ಣನವರ ಗುರು ಅಲ್ಲಮರೋ… ಅದು ಮುಖ್ಯವೆಂದು ನನಗೆ ಅನ್ನಿಸೋದಿಲ್ಲ. ಶರಣರಲ್ಲಿ ಹೀಗೆ ಅವರ ಗುರು ಇವರು, ಇವರ ಗುರು ಅವರು ಎಂದು ನೋಡುವ ತಾರತಮ್ಯದಲ್ಲೇ ನಮ್ಮ ದೋಷವಿದೆ. ಅಲ್ಲಮರ ಗುರುವಿನ ಗುರು ಬಸವಣ್ಣನವರು ಎಂದಾಕ್ಷಣ ಬಸವಣ್ಣನವರಿಗೆ ಯಾವ ಹೆಚ್ಚಿನ ದೊಡ್ಡಸ್ತಿಕೆಯಾಗಲಿ, ಅಲ್ಲಮರ ವ್ಯಕ್ತಿತ್ವದಲ್ಲಿ ಕುಂದಾಗಲಿ ಕಾಣಿಸುವುದಕ್ಕೆ ಸಾಧ್ಯವೇ? ಲಿಂಗದಿಂದಾಗಿ ಅಲ್ಲಮರು ದೊಡ್ಡವರಾಗಲಿಲ್ಲ. ಆದರೂ ಅಲ್ಲಮರು ಬಸವಣ್ಣನವರನ್ನು ಮನಸಾರೆ ಅನೇಕ ವಚನಗಳಲ್ಲಿ ಬಸವಣ್ಣನವರನ್ನು ಕೊಂಡಾಸಿದ್ದಾರೆ. ಅದೇ ರೀತಿ ಬಸವಣ್ಣನವರು ಅಲ್ಲಮರನ್ನು ಇನ್ನಿಲ್ಲದಂತೆ ಸ್ತುತಿಸಿದ್ದಾರೆ. ಅದು ಶರಣರ ದಾರಿ, ಅದು ನಮ್ಮ ಕಲ್ಪನೆಯ ಗುರು-ಶಿಷ್ಯ ಸಂಬಂಧವನ್ನು ಮೀರಿದ ಬಾಂಧವ್ಯ.

  7. Bharathi Chitradurga
    May 20, 2020 Reply

    ಅನಿಮಿಷಯ್ಯಗಳ ಗುರು ಬಸವಣ್ಣನವರೆಂಬ ಸತ್ಯ ತಿಳಿದು ಆಶ್ಚರ್ಯ, ಆನಂದಗಳಾದವು.

  8. Chandru Rona
    May 24, 2020 Reply

    ಅನಿಮಿಷ ಯೋಗಿಗಳು ಅನುಸರಿಸಿದ ಶಿವಯೋಗ ಮಾರ್ಗವನ್ನು ಶರಣರ ಯಾವ ವಚನಗಳಲ್ಲಿ ಕಾಣಬಹುದು ಅಕ್ಕಾವ್ರೆ? ಅವರೇನಾದರೂ ಶಿವಯೋಗದ ರಹಸ್ಯ ಕುರಿತು ಬರೆದಿ್ದ್ದಾರೆಯೇ, ದಯವಿಟ್ಟು ತಿಳಿಸಿ.

  9. Shivakumar Patil
    May 24, 2020 Reply

    ಶೂನ್ಯ ಸಂಪಾದನೆಯಲ್ಲಿ ಉಲ್ಲೇಖಗೊಂಡ ಕತೆಯ ಮೂಲಕ ಚರಿತ್ರೆಯ, ಅದರಲ್ಲೂ ಶಿವಶರಣರ ಕುರಿತಾದ ಮಾಹಿತಿಯನ್ನು, ಆ ಕಾಲದ ಆಗುಹೋಗುಗಳನ್ನು ತೋರಿಸಿದ ನಿಮ್ಮ ಬರಹ ಬಹಳ ಚನ್ನಾಗಿದೆ.

  10. Sharada A.M
    May 27, 2020 Reply

    ಅನಿಮಿಷಯೋಗಿಗಳು ಅಲ್ಲಮರನ್ನು ಕಣ್ಬಿಟ್ಟು ನೋಡಲಿಲ್ಲ, ಹರಸಲಿಲ್ಲ. ಆದರೂ ಅವರು ಅಲ್ಲಮರಂಥವರಿಗೆ ಗುರುವಾದ ಕತೆ ಅಚ್ಚರಿ ಮೂಡಿಸುತ್ತದೆ.

  11. ಡಾ.ರಾಜೇಶ್ವರಿ ವೀ ಶೀಲವಂತ
    Aug 15, 2021 Reply

    ಪಟ್ಟದಕಲ್ಲಿನ ವಸುಧೀಶನ ಬಗ್ಗೆ ಎನಾದರೂ ಚಾರಿತ್ರಿಕ ದಾಖಲೆಗಳು ದೊರೆತಿವೆಯಾ ಮೆಡಮ್.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನಿಮಿಷನ ಕಥೆ- 6
ಅನಿಮಿಷನ ಕಥೆ- 6
April 11, 2025
ಬೆಳಗಿನ ಬೆಳಗು ಮಹಾಬೆಳಗು
ಬೆಳಗಿನ ಬೆಳಗು ಮಹಾಬೆಳಗು
November 1, 2018
ಗುರುಪಥ
ಗುರುಪಥ
January 4, 2020
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ಲಿಂಗಾಚಾರ
ಲಿಂಗಾಚಾರ
May 6, 2021
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಈ ಕನ್ನಡಿ
ಈ ಕನ್ನಡಿ
March 6, 2024
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
Copyright © 2025 Bayalu