
ಅನಿಮಿಷ: ಚಿಗುರಿದ ಒಲುಮೆ (4)
(ಇಲ್ಲಿಯವರೆಗೆ: ಥೇಟು ಅಪ್ಪ ತ್ರೈಲೋಕ್ಯನ ಬಲ ಹಾಗೂ ರೂಪಗಳನ್ನು ಪಡೆದು ಯೌವನಕ್ಕೆ ಕಾಲಿಟ್ಟ ವಸೂದೀಪ್ಯ ದಂಡಿನ ಕತ್ತಿವರಸೆಯ ಕೈಚಳಕಗಳನ್ನೆಲ್ಲಾ ಸಮರ್ಥವಾಗಿ ಪಳಗಿಸಿಕೊಂಡ. ಹರಿತ ಕತ್ತಿ ಕೈಸೇರುವ ಕಂಕಣ ಕಾರ್ಯ ನಡೆಯಿತು. ಆ ಸಂದರ್ಭದಲ್ಲಿ ಗುಡಿಯ ನಾಟ್ಯ ಮಂಟಪದಲ್ಲಿ ಸುಳಿದ ಮೇಳದ ಹುಡುಗಿಯೊಬ್ಬಳ ಮೋಹಕತೆಗೆ ಸಿಲುಕಿದ ವಸೂದೀಪ್ಯನ ಮನಸ್ಸು ಗುರು ಸಿದ್ಧಸಾಧೂಗೆ ತಿಳಿಯಿತು… ಮುಂದೆ ಓದಿ)
ಚಾತುರ್ಮಾಸದ ಜಡಿಮಳೆಗೆ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತ ಕೃಷ್ಣೆಯ ಅಬ್ಬರವೂ ಹಿರಿದಾಗಿ ಹಿರಿಹೊಳೆ ಉಕ್ಕೇರಿತ್ತು. ಈಸುವುದಿರಲಿ ತೆಪ್ಪದಣ್ಣನೂ ಆ ಹರಿವ ಹೊಳೆಗೆ ತೆಪ್ಪವನ್ನು ಇಳಿಸಲು ಹಿಂದೇಟು ಹಾಕಿದಾಗ ತ್ರೈಲೋಕ್ಯ ಹರಿವ ಸರಕಲಿಗೆ ಎದುರಾಗಿ ನಡೆದುಬಂದು ಕಪ್ಪಡಿಸಂಗಮ ತಲುಪಿದ. ಕವೆಗೋಲ ಇಟ್ಟಂತೆ ಒಂದೇ ಇದ್ದ ಹೊಳೆ ಮುಂದೆ ಎರಡಾಗಿರಲು ಅಲ್ಲಿ ಪ್ರವಾಹದ ಅಬ್ಬರವಿಲ್ಲವಾಗಿ ನಡುಮದ್ಯಾಹ್ನ ಜೀವದ ಹಂಗು ತೊರೆದು ನದಿಯೊಳಗೆ ಈಸುಬಿದ್ದು ಆ ಸಂಗಮನಾಥನ ಮಡಿಲಿಗೆ ಬಂದ. ಈಶಾನ್ಯ ಗುರುವಿಗೆ ಶರಣು ಬಂದು ತನ್ನ ಕತೆಯನ್ನು ಸವಿಸ್ತಾರವಾಗಿ ಹೇಳಿಕೊಂಡರೂ ಅವರ ಮುಖದಲ್ಲಿ ಯಾವ ವೇದನೆಯೂ ಆತಂಕವೂ ಕಾಣಲಿಲ್ಲ. ಒಬ್ಬ ಗುರುವಾಗಿ ಲೋಕದ ಕಾರುಣ್ಯಕ್ಕೆ ಸಾಂತ್ವನ ನೀಡಬೇಕಾದ ಈ ಮನುಷ್ಯನೊಳಗೆ ಕಿಂಚಿತ್ ಭಾವಾವೇಶವೂ ಮೂಡಲಿಲ್ಲ. ತಾನು ಇವರ ಮುಂದೆ ಕತೆಮಾಡಿ ಹೇಳಿದ್ದೆಲ್ಲವೂ ವ್ಯರ್ಥವಾಯ್ತು ಎಂದು ನೆನೆಗುದಿಗೆ ಬಿದ್ದ.
“ದಣಿದಿದ್ದಿಯಾ… ಹಸಿದಿರುವೆ. ಈ ದಿವಸ ಗುರುಕುಲದಲ್ಲಿ ಜೋಳದಮುದ್ದೆಯ ಜೊತೆಗೆ ಹುಳ್ಳಿ ಸಂಗ್ಟಿ ಮಾಡಿದ್ದಾರೆ. ಹೊಟ್ಟೆತುಂಬ ಉಂಡು, ಕಣ್ತುಂಬ ನಿದ್ದೆಮಾಡು. ದಣಿವಾರಿದ ಮೇಲೆ ಅಗೋ ಅಲ್ಲಿ ಕಾಣುವ ದನಕರುಗಳ ಆರೈಕೆ ಮಾಡು. ಅನುಭವಿಸಿದ ಯಾತನೆಗೆ ಯಾರ ಸಾಂತ್ವನವನ್ನು ಬಯಸಬಾರದು. ನಿನ್ನ ಯಾತನೆಯ ಬದುಕು ಮತ್ತೊಬ್ಬರ ಬಾಳಿಗೆ ಬೆಳಕಾಗುವ ಅನುಭಾವವಾದರೆ ಅದು ಸಾರ್ಥಕ. ಅಯ್ಯಾ ತ್ರೈಲೋಕ್ಯ… ನೀನು ಎಷ್ಟು ದಿನವಾದರೂ ಇಲ್ಲಿ ಇರಬಹುದು. ಇರುವಷ್ಟು ದಿನ ದುಡಿದು ಪಡೆದುಕೊ…”
ಲವಲೇಶ ಕಲ್ಮಶವೂ ಇಲ್ಲದ ಅವರ ಮುಖಭಾವದಲ್ಲಿ ಸಾಕ್ಷಾತ್ ಸಂಗಮನಾಥನ ಶಾಂತಚಿತ್ತತೆ ಕಾಣಿಸಿತು. ತಾನು ದಂಡಿನ ಹುಡುಗರಿಗೆ ಝಳಪಿಸುವ ಖಡ್ಗದ ಕೌಶಲ ಕಲಿಸುವಾಗ ಹೇಳುತ್ತಿದ್ದ ಮಾತನ್ನೆ ಅವರಿಂದು ಆಡಿದ್ದರು. ಆಶ್ರಮಕ್ಕೆ ತಕ್ಕನಾದ ಗುರು. ಆ ಗುರುಕುಲದ ದನಕರುಗಳ ಆರೈಕೆ ಮಾಡುತ್ತಾ… ಕೊಟ್ಟಿಗೆಯಲ್ಲಿ ತಿಂಗಳೊಪ್ಪತ್ತು ಕಾಲಹಾಕಿದ. ಆಶ್ರಮದ ಗುರುಗಳೂ ಮತ್ತು ಆ ಚತುರ ಮಕ್ಕಳ ನಾಲಗೆಯಲ್ಲಿ ಉಲಿವ ತತ್ವದ ಮಾತುಗಳು, ಮಾತಿನ ಪಲುಕುಗಳು, ಉದಹರಿಸುವ ಪೂರ್ವಿಕರ ಸೊಲ್ಲುಗಳೆಲ್ಲವೂ ತ್ರೈಲೋಕ್ಯನ ಮನಸ್ಸನ್ನು ಸಂಗಮನಾಥನಿಗೆ ಸಮೀಪ ಕರೆದೊಯ್ಯುತ್ತಿದ್ದವು. ಏನೋ ಕಿಂಚಿದೂನಾಗಿದ್ದ ಜ್ಞಾನದ ಬೆಳಕು ಅವನನ್ನು ಆವರಿಸತೊಡಗಿತ್ತು. ಅಲ್ಲಿ ರಾಜ ದರಬಾರಿನ ಮಕ್ಕಳ ಜೊತೆಜೊತೆಗೆ ಮಾಂಡಲಿಕ, ಗೊಂಡ, ಗೌಡ, ದೇಸಗತಿ, ದಳಪತಿಗಳ ಮಕ್ಕಳೂ ಆ ಈಶಾನ್ಯ ಗುರುವಿನ ಬಳಿಯಲ್ಲಿದ್ದರು. ಅವರಲ್ಲೊಬ್ಬ ಹುಡುಗ ಲುಟುಪುಟು ಮಾತಾಡುತ್ತ ತನ್ನ ಅರಿವಿಗೆ ಬಾರದ ಸಂಗತಿಗಳನ್ನು ಪ್ರಮಾಣಿಕರಿಸುತ್ತ ಸತ್ಯದ ಇರವನ್ನು ಅರಿಯುವ ಬಗ್ಗೆ ಆ ಅರಿತ ಅರಿವನ್ನು ಅರಿತೆನೆಂದು ತಿಳಿಯುವ ಬಗ್ಗೆ ಕುತೂಹಲಿಯಾಗಿದ್ದ. ಆ ಎಳೆಯ ವಯಸ್ಸಿನಲ್ಲೇ ಗುರುಕುಲದ ಮಕ್ಕಳೆಲ್ಲ ಅವನಿಗೆ ಅರಸ ಎನ್ನುತ್ತಿದ್ದರು. ಅವನ ತೇಜಸ್ವಿ ಮುಖದಲ್ಲಿ ಅದೇನೋ ಒಂದು ಬಗೆಯ ಸೂಜಿಗಲ್ಲಿನ ಸೆಳೆತವಿತ್ತು.
ಆವರಣಕ್ಕೆ ಹೊಸದಾಗಿ ಬಂದು ಸೇರಿದ್ದ ತ್ರೈಲೋಕ್ಯನೆಂಬ ಒಕ್ಕಣ್ಣನ ಬಗ್ಗೆ ಆಶ್ರಮದ ಮಕ್ಕಳಲ್ಲಿ ಗೂಢ ಗುಂಭ ನೆಲೆಗೊಂಡಿರಲಾಗಿ ಒಬ್ಬೊಬ್ಬರು ಒಂದೊಂದು ಕತೆಗಳ ಸೃಷ್ಟಿಸಿ ಪುರಾಣ ಕಟ್ಟತೊಡಗಿದ್ದರು. ವಿಂದ್ಯದ ಮೇಲಿನ ದೇಶದಲ್ಲಿ ಹಗಲು ದರೋಡೆಕಾರನಾಗಿದ್ದನೆಂದು ಒಬ್ಬ ಹೇಳಿದರೆ ಮತ್ತೊಬ್ಬನ ಕತೆಯೊಳಗೆ ಮೋಡಿಕಾರನ ಎಲ್ಲಾ ವಿದ್ಯೆಗಳನ್ನು ಅರಿತಿರುವ ಇವನು ಮಲಯಾಳ ದೇಶದವನೆಂದೂ ಹೇಳುತ್ತಿದ್ದ. ದಿನವೂ ಬೆಳಗಾಗೆದ್ದು ಗೂಳಿಯ ಬೆನ್ನ ಮೇಲಿನ ಇನಿಯನ್ನು ಶಿವನೆಂದು ಕೈ ಮುಗಿವ ಈ ತ್ರೈಲೋಕ್ಯನು ಲಂಕೆಯಿಂದ ಸಮುದ್ರ ದಾಟಿ ಬಂದವನೆಂದೂ, ಆತ ಬೇವಿನೆಲೆಗಳನ್ನು ಬಂಗಾರದ ನಾಣ್ಯಗಳನ್ನಾಗಿಸುವ ತಾಂತ್ರಿಕನೆಂದೂ ಬಗೆಬಗೆಯಾಗಿ ಮಾತಾಡಿಕೊಳ್ಳುತ್ತಿದ್ದರು. ಅವತ್ತು ಎಳೆಬಿಸಿಲಿಗೆ ಮೈ ಕಾಯಿಸುತ್ತಾ ಹೊಳೆಯ ಸೆರಗಿನ ಪಡಿಹಾಸು ಕಲ್ಲ ಮೇಲೆ ಕುಳಿತಿದ್ದಾಗ ಇನ್ನೂ ಮೀಸೆ ಮೂಡದ ‘ಅರಸು’ ಇವನಿದ್ದೆಡೆಗೆ ಬಂದು ಕುಳಿತ. ತ್ರೈಲೋಕ್ಯನಿಗೆ ‘ಅರಸು’ ಕಂಡರೆ ಅಕ್ಕರೆ… ಎರಡು ಹೊಳೆ ಸೇರುವ ಜಾಗದಲ್ಲಿ ಸುಳಿಯ ನಡುವೆ ಜಿಗಿದು ಈಜಾಡಬಲ್ಲ ಅವನ ಚಾಕಚಕ್ಯತೆ, ಮಾತಾಡುವ ಪರಿ, ತಲ್ಲಣಿಸುವ ಕಾರುಣ್ಯ, ಅಕ್ಕರೆಯ ಕಣ್ಣೋಟದೊಳಗೆ ಮೂಡುವ ಮಂದನಗೆಯ ಕಾರಣ ಅವನನ್ನು ಕಂಡಾಗಲೆಲ್ಲ ಮನಸ್ಸು ಹಗುರಗೊಳ್ಳುತ್ತಿತ್ತು.
“ಅಯ್ಯಾ.. ನೀವು ಗೂಳಿಯ ಇನಿಯನ್ನು ಆ ಸಂಗಮನಾಥನೆಂದು ಭಾವಿಸುವಿರಾ..?”
“ಹೌದು ನನ್ನಪ್ಪಾ.. ಆ ಶಿವನು ಸದಾಕಾಲವೂ ಲೋಕಸಂಚಾರಿ…”
“ಎತ್ತಿನ ಹೆಗಲೇರಿ ಕುಳಿತಿರುವ ಆ ಶಿವನು ಭಕ್ತನ ಭುಜವೇರಿ ಕುಳ್ಳಿರಲಾರನೆ…?”
“ಅಪ್ಪಾ ಅರಸು…”
“ಅಲ್ಲ ನನ್ನ ಹೆಸರು ಬಸವರಸ”
“ಬಸವರಸ..! ನೀವು ಸುಳಿಯೊಳಗೆ ನೆಗೆದು ಈಸುಬೀಳುವುದ ಕಂಡು ನಾನು ದಂಗಾಗಿದ್ದೇನೆ. ಎರಡು ಸೇರಿ ಒಂದಾಗುವ, ಆ ಒಂದನ್ನೂ ಇಲ್ಲವಾಗಿಸುವ ಆ ಗುಳಿಯಾಕಾರದ ನೀರಿನ ಸುಳಿಯಲ್ಲಿ ಬಿದ್ದು ಬದುಕುಳಿದವರು ಯಾರೂ ಇಲ್ಲ. ಅಂಥದರಲ್ಲಿ ನೀವು ಸುಳಿಯ ಸೀಳಿಕೊಂಡು ನೀರಿನಿಂದ ಹೊರಬಂದುದು ಹೇಗೆ..? ಅದೊಂದು ಪವಾಡ.”
“ಅಯ್ಯಾ… ಅದು ಪವಾಡವೇನಲ್ಲ. ಸುಳಿ ಸುತ್ತುವ ನೀರೊಳಗೆ ಒಂದು ನಿರ್ಜೀವ ಕೋಲೊಂದನ್ನು ಎಸೆದು ನೋಡು. ಅದು ನೀರಿನಾಳದ ಸುರಂಗದೊಳಗೆ ಸುರುಳಿ ಸುತ್ತಿ, ತಳಮುಟ್ಟಿ ಹೊರಗೆ ಬಂದು ಬೀಳುವುದು. ಆದರೆ ನಾವು ಮನುಷ್ಯರು. ಜೀವ ಭಯವನ್ನು ಹುಟ್ಟುವಾಗಲೇ ಒಡಲಲ್ಲಿ ಕಟ್ಟಿಕೊಂಡು ಹುಟ್ಟಿರುತ್ತೇವೆ. ಸುಳಿಗೆ ಬಿದ್ದಾಗ ಹಾ ಹೋ ಎಂದು ಕೈಕಾಲು ಬಡಿದು ಒದ್ದಾಡುತ್ತೇವೆ. ನೀರಿನ ಸುಳಿ ಇಂಥವರನ್ನು ಬಲುಬೇಗ ಒಳಗೆಳೆದುಕೊಂಡು ಹೈರಾಣು ಮಾಡಿ ಪ್ರಾಣ ಕಿತ್ತುಕೊಳ್ಳುವುದು. ನಾನೇ ಸುಳಿಯಾಗಿ, ಸಮಚಿತ್ತದಿಂದ ಇದ್ದರೆ ಯಾವ ಸುಳಿಯೂ ತನ್ನ ಒಡಲೊಳಗೆ ನಮ್ಮನ್ನು ಇಟ್ಟುಕೊಳ್ಳಲಾರದು ಅಯ್ಯಾ..”
“ಇಂಥದೊಂದು ಸುಳಿಯಲ್ಲಿ ಸಿಕ್ಕು ಹೈರಾಣ ಆಗಿದ್ದೇನೆ ಬಸವರಸರೆ… ಹೆಂಡತಿಯ ಬಸುರೊಳಗಿನ ಕೂಸು ಯಾವುದೆಂದು ತಿಳಿಯುವ ಮುನ್ನವೇ ಊರು ಬಿಟ್ಟು ಹೊರಟಿದ್ದೇನೆ, ಗೊತ್ತುಗುರಿಯಿಲ್ಲದೆ ಅಲೆದಾಡಿ ದಣಿದಿದ್ದೇನೆ. ಈಗ ನನ್ನ ಗುರುತು ನನಗೆ ಸಿಗಲಾರದಷ್ಟು ಬದಲಾಗಿದ್ದೇನೆ”
“ನೀವು ಕಾಣುವ ದೇವರಲ್ಲಿ ಯಾವ ಬದಲಾವಣೆ ಕಂಡಿದ್ದೀರಿ. ದಿನವೂ ಬೆಳಗಾಗುತ್ತಲೇ ಮೂಡುವ ಸೂರ್ಯ ದಣಿದದ್ದು ಕಂಡಿರಾ. ಸೂಸುವ ಗಾಳಿ, ಹರಿಯುವ ನೀರು ನಿರಂತರ ನಿರ್ಗಮಿಸುತ್ತಲೇ ಇದೆ. ಉರಿವ ದೀಪಕ್ಕೆ ಎಣ್ಣೆಯಂದದಿ ಪ್ರಾಣ, ಆ ಪ್ರಾಣದ ಪ್ರಣತಿ ಇರುವವರೆಗೂ ದಣಿವು-ಆಯಾಸಗಳು. ಅಣ್ಣಾ ನಮ್ಮ ಗುರುವಿನ ಬಳಿ ಯಾರೇ ಬಂದು ತಮ್ಮ ಕಷ್ಟ ಕೋಟಲೆ ಹೇಳಿಕೊಂಡರೂ ಅವರು ನಿಶ್ಚಲರಾಗಿ ಕೇಳಿಸಿಕೊಳ್ಳುತ್ತಾರೆ. ಅವರ ಮುಖಭಾವದ ಚಹರೆ ಚೂರು ಬದಲಾಗುವುದಿಲ್ಲ.”
“ಹೌದು ನನ್ನಪ್ಪಾ… ನಾನು ಮಾಡದ ತಪ್ಪಿಗೆ ಶಿಕ್ಷೆಯಾಗಿ ಹನ್ನೆರಡು ವರ್ಷಗಳ ಕಾಲ ಅನುಭವಿಸಿದ ಶಿಕ್ಷೆಯ ವಿವರಗಳನ್ನು ಹೇಳುವಾಗಲೂ, ಹುಟ್ಟಿದ ಮಗುವಿನ ಮುಖ ನೋಡಲಾಗಿಲ್ಲ ಎಂದು ಗೋಳಾಡುವಾಗಲೂ ನಿಶ್ಚಲರಾಗಿದ್ದರು.”
“ಅವರು ಸತ್ವ, ರಜ, ತಮ, ಕ್ರೋಧಗಳನ್ನು ಕಳೆದುಕೊಂಡು ಹೇಳುವ ಅನುಭಾವಕ್ಕೆ ಕಿವಿಯಾಗುತ್ತಾರೆ ಅಣ್ಣಾ…”
“ಅಯ್ಯಯ್ಯೋ ನಾನು ಹುಟ್ಟಿದ ಮಗುವನ್ನು ನೋಡಬೇಕೆಂದು ಹಂಬಲಿಸಿ ಬಂದವ. ಸಂಸಾರದ ಸಖ್ಯವನ್ನು ನೆನಪಿನಲ್ಲಿ ಇಟ್ಟುಕೊಂಡೆ ಎಲ್ಲವನ್ನು ಅನುಭವಿಸಿದವನು… ನನ್ನಿಂದ ಅನುಭಾವ ಸಾಧ್ಯವೇನಪ್ಪಾ ಬಸವರಸಾ…?”
“ಅನುಭಾವ ಎನ್ನುವುದೊಂದು ಸಜ್ಜನಿಕೆಯಣ್ಣಾ.. ನೀನು ಗೂಳಿಯ ಇನಿಯನ್ನೇ ಆ ಮಹಾಕೂಟೇಶನೆಂದು ಭಾವಿಸಿದವ. ಆ ಗೂಳಿ ಸದಾಕಾಲವೂ ತನ್ನ ಬೆನ್ನ ಮೇಲೆ ಶಿವನನ್ನು ಹೊತ್ತು ಸವಾರಿ ಮಾಡುವಂತೆ.. ಸಜ್ಜನರಾಗುವ ದಾರಿಯಲ್ಲಿರುವ ಎಲ್ಲ ನೊಂದವರೂ ತಮ್ಮ ಎದೆಗಳ ಮೇಲೆ ಸಂಗಮನಾಥನ ಹೊತ್ತು ತಿರುಗುತ್ತಾ, ಈ ದೇಹಕ್ಕಾಗುವ ಅನುಭವವನ್ನೆಲ್ಲ ಆ ದೇವನೊಡನೆ ಅನುಭಾವಿಸುವಂತಾಗಬೇಕಿದೆ ಅಣ್ಣಾ…”
ಅವನ ಒಂದೊಂದು ಮಾತುಗಳೂ ಮುತ್ತಿನಂಥವು. ಕಾಣುವ ಕಲ್ಪನೆಗೆ ಆಕಾರ ಕೊಡುವ ಜೀವವಿದು. ದೃಷ್ಟಿ ತಾಕುವ ಹಾಗೆ ಎವೆಗಣ್ಣಿಟ್ಟು ನೋಡುತ್ತಿದ್ದ ತ್ರೈಲೋಕ್ಯನ ಮೈದಡವಿ ಬಸವರಸ ಎಚ್ಚರಿಸಿದಾಗ ತಾನೂ ಆ ಕಪಡಿಸಂಗಮದ ನೀರಿನ ಸುಳಿಯಲ್ಲಿ ಜಿಗಿದು ಹೊರಬಂದ ಅನುಭವವಾಗಿತ್ತು. ಆಶ್ರಮದ ನಾಲ್ಕೈದು ಹುಡುಗರು ದೂರದ ಬಂಡೆಗಲ್ಲಿನ ಮೇಲೆ ನಿಂತು ‘ಒಕ್ಕಣ್ಣಾ … ಓಹೋ ಒಕ್ಕಣ್ಣಾ.. ನಿನ್ನ ಗುರುಗಳು ಕರೀತಿದಾರೆ ಬಾರಯ್ಯ ಒಕ್ಕಣ್ಣಾ’ ಎಂದು ರಾಗವಾಗಿ ಕೂಗುತ್ತಿದ್ದರು. ಅರಸಿಬೀದಿಯ ಜನರು ಇಂದು ಕಪಡಿಗೆ ಬಂದಿದ್ದು. ಅಂಬು ಮೊಗೆವಾತ ಮರಳಿ ಹೊರಟಿದ್ದನಾಗಿ ಹೊರಡುವುದಾದರೆ ಈ ಕೂಡಲೇ ಹೊಳೆಯ ಆ ದಡವ ಸೇರಿಕೋ ಎಂದು ಗುರುಗಳು ಹೇಳಿದರು. ಇಡೀ ಸಂಗಮವನ್ನು ಒಂದು ಕ್ಷಣ ಕಣ್ಣಲ್ಲಿ ತುಂಬಿಕೊಂಡ ತ್ರೈಲೋಕ್ಯ ತೆಪ್ಪವನ್ನೇರಿ ಶಾಂತಳಾಗಿದ್ದ ಮಲಪ್ರಹರಿಯ ಮೇಲೆ ತೇಲಿಕೊಂಡು ಅರಸಿಬೀದಿಯ ದಡಮುಟ್ಟಿದ.
*****
ಗುರುವೆಂಬೋ ಗುರು ಅನುಷ್ಠಾನಕೆ ಹೋದ ದಿನದಿಂದ ವಸೂದೀಪ್ಯನ ಚಿತ್ತವು ಚಿತ್ರಚಿತ್ತಾರದ ಬಣ್ಣಗಳನ್ನು ಬದುಕಿನಲ್ಲಿ ತುಂಬುತ್ತಿರುವ ಹಾಗೆ ಭಾಸವಾಗತೊಡಗಿತ್ತು. ಏನಕೇನ ನೆಪಗಳ ಹೇಳಿಕೊಂಡು ಚಂದ್ರಮೌಳೇಶನ ಗುಡಿಯ ಆವರಣದಲ್ಲೆ ಭೈಗಿನ ಸೂರ್ಯನ ಕೆಂಪನ್ನು ಗೋಧೂಳಿಯ ಮೂಡಿಮಸಳುವ ಹೊತ್ತನ್ನು ಕಳೆಯುತ್ತಿದ್ದ. ಆ ಕೆಂಪಂಚಿನ ದಟ್ಟಿಯ ತೊಟ್ಟಿದ್ದ ಗುಳಿಕೆನ್ನೆಯ ಹುಡುಗಿಯ ಕಾಲ್ಗೆಜ್ಜೆ ಉಲಿವು ಅವನನ್ನು ಹಿತವಾಗಿ ಸೆಳೆದ ಕಾರಣದಿಂದ ಮನಸ್ಸು ಅವಳ ಸನಿಹಕ್ಕಾಗಿ ಮಿಡಿಯುತ್ತಿತ್ತು. ಇವನ ಈ ವರ್ತನೆಯು ಆ ಕಡೆಯ ಪಾತ್ರದ ಹೆಂಗಸರಿಗೆ ಮೋಜಿನ ವಿಷಯವಾಗಿಯೂ ಮುಸುಮುಸು ನಗೆ ನಗುವುದು ಇವನಿಗೆ ಕೇಳಿಸಿದರೂ.. ಆ ಹೆಂಗಸರೆಲ್ಲ ಆ ಹುಡುಗಿಯನ್ನು ಸನ್ನೆಗಳ ಮೂಲಕ ಕಣ್ಣಹುಬ್ಬುಗಳ ಹಾರಿಸುತ್ತ, ಮುಖ ಮುಂದೆ ಮಾಡಿ ಅಣಕಿಸಿದಾಗ ಆ ಅವಳು ನಾಚಿ ನಾಟ್ಯಮಂಟಪದ ಕಂಬಗಳ ಹಿಂದೆ ಅವಿತುಕೊಳ್ಳುತ್ತಿದ್ದಳು. ಹೀಗೆ ಕಣ್ಣುಮಚ್ಚಾಲೆಯ ಸೊಗಸು ದಿನದಿನವೂ ನಡೆಯುತ್ತಾ ಎಂಟು ದಿನ ಕಳೆಯುವುದರೊಳಗೆ ಒಮ್ಮೆ ಇಬ್ಬರ ಕೈ-ಕೈ ತಾಕಿ, ತಾಗಿದಂಥ ಕೈಗಳಲ್ಲಿನ ರೋಮಗಳೆಲ್ಲ ರೋಮಾಂಚಿತವಾದ ಅನುಭವವಾಯ್ತು. ಉಸಿರಾಟದ ಲಯ ತಪ್ಪಿದಂತಾಗಿ ಎದೆಯೊಳಗೆ ಒಂದು ಬಗೆಯ ಚುಳುಮುಳು ಎನಿಸಿತು. ಆ ಒಂದು ಕ್ಷಣವು ಎತ್ತಿನ ಮೈ ಅದುರಿದಂತೆ ಥರಗುಟ್ಟುವ ಭಯವನ್ನು ಬಿಗಿಗೊಳಿಸಿಕೊಂಡು ಮತ್ತೊಮ್ಮೆ ಆಕೆಯನ್ನು ಮುಟ್ಟಲು ಕೈ ಮುಂದೆಮಾಡಿದಾಗ ಅವಳ ಸೆರಗು ಸಿಕ್ಕಿತು. ಬೆದರಿದ್ದ ಚಿಗರಿಯ ಹಾಗೆ ಅವಳ ಕಣ್ಣಗುಡ್ಡೆಗಳು ಕುಣಿಯುತ್ತಿದ್ದವು.
ನಿನ್ನ ಹೆಸರೇನು..?
ಹೆಸರು.. ಸೆರಗ ಬಿಡಿ ಯಾರಾದರೂ ನೋಡುತ್ತಾರೆ.
ನೋಡಲೇಳು… ನಿನ್ನ ಕುಣಿತದಲ್ಲಿ ಮೋಹಕವಾದ ಮಾಯೆ ಇದೆ.
………………………………!
ಹೆಸರೇನಂದೆ… ಕೆಂಪಂಚಿನ ದಡಿಯ ದಟ್ಟಿಯವಳೆ..
ಚಂದ್ರಲಾ.
ಗುಡಿಯ ಪೌಳಿಯಲ್ಲಿ ಹೆಂಗಸರು ನಿಂತು ನೋಡುತ್ತಿರುವುದು ಕಂಡೊಡನೆ ಮನಸ್ಸಿಲ್ಲದ ಮನಸ್ಸಿನಿಂದ ಸೆರಗು ಬಿಡಿಸಿಕೊಂಡು ಓಡಿದಳು. ಅವನ ಎದೆಯ ಮೇಲಿದ್ದ ಆ ನಸುಬೆಳ್ಳಗಿನ ಮುತ್ತಿನ ಸರ ಚಂದ್ರಲಾಳ ಕೊರಳೊಳಗೆ ಆಕೆಯ ಅಂದವನ್ನು ಮತ್ತಷ್ಟು ಮಗದಷ್ಟು ಹೆಚ್ಚಿಸಿದಂತೆ ಕಂಡಿತು. ಹೀಗೆ ಶುರುವಾದ ಪ್ರೇಮವೆಂಬ ಕಥಾನಕವೂ ದಿನಗಳೆದಂತೆ ಅವರಿಬ್ಬರನ್ನು ಒಂದೆಳೆಯ ಹಗ್ಗದಲ್ಲಿ ಬಂಧಿಸಿತ್ತು. ದಿನಬೆಳಗಾದರೆ ಅವಳ ನೃತ್ಯ ಸೇವೆಯ ನೋಡಲು ಅರ್ತಿಯಲೆದ್ದು ಚಂದ್ರಮೌಳಿಯ ಗುಡಿಗೆ ಬರತೊಡಗಿದವ ಕತ್ತಲು ಕವಿದು ಸರಿಹೊತ್ತಾದರೂ ಮನೆಯ ಕಡೆಗೆ ಹೋಗದೆ ಅವಳ ಸಂಗಡವೇ ಇರತೊಡಗಿದ. ಅವಳ ಕಣ್ಣಬೆಳಕೇ ಇವನ ಬೆಳಕಾಗಿ, ಇವನ ಆಸೆ-ಅಭಿಲಾಶೆಗಳೇ ಅವಳ ಅಭಿರುಚಿಯೂ ಆಗುತ್ತಾ, ಮಾತುಗಳ ಪೋಣಿಸುವ ಒಂದು ಚಿತ್ರವತ್ತಾದ ಬದುಕನ್ನು ಅರಸುವ ಹಕ್ಕಿಗಳಾದರು. ಆಸರಿಕೆ ಬ್ಯಾಸರಿಕೆಗೆ ಜೀವವೊಂದು ಜೊತೆಯಾದ ಭಾವದೊಳಗೆ ಒಬ್ಬರನ್ನೊಬ್ಬರು ಅಗಲಲಾರದ ಆತುರ ಅವರನ್ನು ಕಟ್ಟಿ ಹಾಕಿತ್ತು.
ಅಬ್ಬೆ ಮಹಾಲೇಖೆಗೆ ಮಗನ ನಡೆನುಡಿಗಳು ಮೆದುವಾದ ಬಗ್ಗೆ ಅನುಮಾನ ಮೂಡಿ ಅವರಿವರನ್ನು ವಿಚಾರಿಸಲಾಗಿ ನಾಟ್ಯದವಳ ಸಾಮೀಪ್ಯ ಅವನನ್ನ ಅಷ್ಟು ಮೃದು ಮಾಡಿದ್ದು ತಿಳಿದಳು. ಒಡಹುಟ್ಟದಿದ್ದರೂ ತಮ್ಮನಂತೆ ಬೆಂಗಾವಲಾಗಿ ತನ್ನ ಮಗನಿಗೆ ಮಾವನಾಗಿದ್ದ ಮಾಲಿಂಗನನ್ನು ಕರೆದುಕೊಂಡು ಒಂದು ಧೂಳಸಂಜೆಯಲ್ಲಿ ಗುಡಿಯ ಆವರಣಕ್ಕೆ ಬಂದಳು. ಲೋಕದ ಪರಿವೆ ಇಲ್ಲದಂತೆ ಕೈಮೇಲೆ ಕೈಹಾಕಿಕೊಂಡು ಬೆರಗು-ಬಿನ್ನಾಣದ ಕಲ್ಪನೆಯ ಮಾತುಗಳಲ್ಲಿ ಮೈಮರೆತಿದ್ದ ವಸೂದೀಪ್ಯ-ಚಂದ್ರಲಾಳನ್ನು ನೋಡಿ ಹೌಹಾರಿದಳು. ತಂದೆಯಿಲ್ಲದ ಮಗನಿಗೆ ನೈತಿಕತೆ ತಿಳಿಯಬೇಕು ಹೇಗೆ ಎಂಬ ಲೋಕ ನಿಂದನೆ ಬರುವುದಲ್ಲ ಎಂದು ಸಂಕಟಪಟ್ಟಳು. ಮಹಾಲೇಖೆಯನ್ನು ಕಂಡ ಮುದಿಸೂಳೆ ಮುಂದೆ ಬಂದು ಅತಿವಿನಯ ಗೌರವದಿಂದ ಮಾತಾಡಿಸಿದಳು.
“ಗಂಡುಡುಗನವ್ವಾ… ದೇವರ ಮೀಸಲಿಗೆ ಬಂದಿದ್ದಾನೆ”
“ಅಬ್ಬೆ…”
“ಹೇಳವ್ವಾ ನನ ಮಗಳೇ…”
“ನಾವು ಹೆಂಗಸರು, ಈ ಯುದ್ಧಗಳಲ್ಲಿ ಮೊದಲು ಬಲಿಪಶುವಾಗುವ ಕ್ಷುದ್ರರು ತಾಯಿ. ನಾನು ಯಾರು ಎಂದು ನಿನಗೆ ತಿಳಿದಿದೆಯಾ ತಾಯಿ. ಯಾವದೋ ರಾಜನ ಸೈನಿಕರು ತಮ್ಮ ಆಟದ ವಸ್ತುವಾಗಿ ನನ್ನ ಜಡೆಹಿಡಿದು ತೂರಾಡುತ್ತಿದ್ದರಂತೆ. ಬಲಿಯದ ಹೆಣ್ಣುಗಳೆಂದರೆ ಆಟದ ವಸ್ತುಗಳು. ಬಲಿತ ಹೆಣ್ಣುಗಳು ಭೋಗದ ವಸ್ತುಗಳು. ಹಾಗೆ ಆಕಾಶದೆತ್ತರಕ್ಕೆ ಹಾರಿ ಬಿದ್ದರೂ ಜೀವವುಳಿಸಿಕೊಂಡು ಬದುಕಿದ್ದ ನನ್ನನ್ನ ನಿನ್ನಂತೆಯೇ ದೇವರಿಗೆ ಮೀಸಲಾಗಿದ್ದ, ದೇವರಿಗೆ ನಾಟ್ಯ ಸೇವೆ ನೀಡುತ್ತಿದ್ದ ಹೆಂಗಸೊಬ್ಬಳು ನೋಡಿ ಸಾಕಿದಳು ನನ್ನಬ್ಬೆ. ಯಾರ ರಕ್ತವೋ, ಯಾರು ತಂದೆ-ತಾಯಿಯರೋ ಎಂಬುದರ ಅರಿವಿಲ್ಲದ ನಾನು ಆ ವೆಂಗಿಮಂಡಲದ ಗುಡಿಯ ಪೌಳಿಯಲ್ಲಿ ಬೆಳೆದೆ. ನನ್ನ ಸಾಕು ತಾಯಿ ದೇವರ ಸೇವೆಯ ಮೀಸಲು ಮಾಡುವುದನ್ನು ಹತ್ತಿರದಿಂದ ನೋಡುತ್ತಾ ಬೆಳೆದೆನವ್ವಾ… ಮತ್ತೊಂದು ಭೀಕರ ಯುದ್ಧದಲ್ಲಿ ತ್ರೈಲೋಕ್ಯನ ತಂದೆ ನನ್ನನ್ನು ಹೊತ್ತು ತಂದು ಆ ಸೇವೆಯ ಕಾಲ್ಗೆಜ್ಜೆ ಸದ್ದಿನಿಂದ ದೂರಮಾಡಿ ತನ್ನ ಮಗನಿಗೆ ಮದುವೆ ಮಾಡಿದರು. ಮನೆಯೊಳಗೆ ಮಗು ಹುಟ್ಟಿದರೆ ಸಂಸಾರದ ಸುಖ ಎಂದು ಸುತ್ತಲ ದೇವರಿಗೆ ಕಾಡಿಬೇಡಿ ಮಗನನ್ನ ಪಡೆದೆ, ಮಗ ಹುಟ್ಟಿದಾಗ ಗಂಡನ ಸಖ್ಯದ ಭಾಗ್ಯ ಕಳಕೊಂಡು ಹುಚ್ಚಿಯಾದೆ. ಈಗ ಮಗ ಬೆಳೆದು ಎದೆಯುದ್ದ ನಿಂತಿದ್ದಾನೆ. ಅಪ್ಪನೆಂಬ ಆಲದ ಆಸರಿಲ್ಲದೆ ದಾರಿ ತಪ್ಪಿದನೆಂದು ಲೋಕದ ನಿಂದೆ ಬರಬಾರದು ನನಗೆ.. ಅಬ್ಬೆ ದೇವರ ಹೆಸರಿನಲ್ಲಿ ಮೀಸಲು ಉಣ್ಣುವ ಮತ್ತೊಂದು ಗಂಡಸು ನನ್ನ ಮಗ ಆಗಬಾರದು ನೋಡೇ ನನ್ನಬ್ಬೆ”
ಮಹಾಲೇಖೆಯ ಕಣ್ಣಾಲಿಗಳು ತುಂಬಿದ್ದವು.
“ಅವ್ವಾ ನೀನುಂಡ ಕಷ್ಟಕೋಟಲೆಯ ಸಾಗರದ ಅಲೆಗಳನ್ನು ನಾನು ಹತ್ತಿರದಿಂದ ಬಲ್ಲೆನವ್ವಾ. ತಿಳಿಯಿತು ಮಗಳೇ.. ನನ್ನ ತಂಗಿ ಬನವಸೆಯ ಮಧುಕೇಶನಲ್ಲಿ ಸೇವೆಗೆ ಸೇರಿದ್ದಾಳೆ. ಉಪಾಯದಿಂದ ಚಂದ್ರಿಯನ್ನು ಅಲ್ಲಿಗೆ ಅಟ್ಟುವೆನವ್ವಾ”
ಮಹಾಲೇಖೆಯ ಮನದೊಳಗೆ ಗುಟ್ಟಾಗಿದ್ದ ಭಾವವೊಂದು ಹೀಗೆ ಉಸಿರಿನ ಪಲಕುಗಳಲ್ಲಿ ಹೊಸೆದು ಕತೆಯಾಗಿ ದುಃಖ ತೋಡಿಕೊಂಡ ಕಾರಣವೋ ಏನೋ ಮನಸ್ಸು ಹಗೂರಾಯ್ತು. ಮಾವಾ ಮಾಲಿಂಗ ವಸೂದೀಪ್ಯನ ಹೆಗಲು ಮುಟ್ಟಿದಾಗ ಮನಮೋಹಕವಾದ ಪ್ರೇಮದ ಆವರಣದಿಂದ ಎಚ್ಚರಾಗಿ ಹಿಂದಿರುಗಿ ನೋಡಿದರೆ… ಅಲ್ಲಿ ತಾಯಿ ಬಂದು ನಿಂತಿದ್ದಳು. ಮುಜುಗರದ ಮುದ್ದೆಯಂತಾಗಿ ಎದ್ದು ಮಾವನ ಹಿಂದೆಹಿಂದೆ ನಡೆದು ಬಂದನು.
ಇತ್ತಲೀ ಇಲ್ಲಿ ಮಾವ ಮತ್ತು ಅಬ್ಬೆಯ ಬೆನ್ನಹಿಂದಿನಿಂದ ನಡೆದು ಬಂದು ಮನೆ ಸೇರಿಕೊಂಡ ವಸೂದೀಪ್ಯ ಯಾವಾಗ ತಾಯಿ ಏನನ್ನು ಕೇಳುತ್ತಾಳೋ ತಾನೇನು ಉತ್ತರಿಸಬೇಕೋ ಎಂಬ ಯೋಚನೆಯಲ್ಲಿ ಇರಲಾಗಿ. ತಾಯಿ ಒಂದೂ ಮಾತಾಡದೆ ಮಗನಿಗೆ ಉಣಬಡಿಸಿ ಹಾಸಿಗೆ ಮಾಡಿಕೊಟ್ಟು ಮಲಗಿಸಿದಳು. ಮರುದಿನ ಸೂರ್ಯ ಮೂಡಿ ಮುಳುಗಿದರೂ ಮನೆಯೊಳಗೆ ದೆವ್ವಿನಂಥ ಮೌನ ಹೊಕ್ಕಿತ್ತು. ತಾಯಿಯೂ ಮಾಲಿಂಗನೂ ಏನನ್ನೋ ಯೋಚಿಸುತ್ತಿರುವ ಬಗ್ಗೆ ಅನುಮಾನ ಮೂಡಿದರೂ ಅದ್ಯಾವ ಮಾತನ್ನೂ ಅವರಿಬ್ಬರೂ ಹೇಳುತ್ತಿರಲಿಲ್ಲ. ಅದೇ ಸರಿಹೊತ್ತಿಗೆ ದಂಡಿನ ದಳವಾಯಿಯ ಸೇವಕನೊಬ್ಬ ಮನೆಯವರೆಗೂ ಬಂದು ರಾಜರು ಕಳಿಸಿರುವ ಹೊಸಕುದುರೆಗಳನ್ನು ಪಳಗಿಸಲು ನಾಳೆಯಿಂದ ಅಖಾಡಕ್ಕೆ ಬರಬೇಕೆಂದು ಮಾನ್ಯಖೇಟದ ರಾಜರ ಆದೇಶವಾಗಿರುವುದನ್ನು ಹೇಳಿ ಹೋದನು. ಆ ದಿನವೆಂಬೋ ದಿನವು ಮಂಜುಗಡ್ಡೆಯ ಹಾಗೆ ಬಿಗುಪಾಗಿರುವ ಕಾರಣದಿಂದ ಚಂದ್ರಮೌಳೇಶನ ಗುಡಿಗೆ ಹೋಗಿ ತನ್ನ ಪ್ರಿಯ ದಾಸಿಯನ್ನು ಕಂಡು ಬರಲಾಗಲಿಲ್ಲವಲ್ಲ ಎಂಬ ಚಡಪಡಿಕೆ ಆತನೊಳಗೆ ಕೊಂಚ ಸಡಿಲಾಗಿ ನಾಳೆಯಿಂದ ವಿರುಪಾಕ್ಷ ದೇವಾಲಯದ ಅಂಗಳದಲ್ಲಿ ಕುದುರೆಗಳನ್ನು ಪಳಗಿಸುವ ನೆಪದಲ್ಲಾದರೂ ಆಕೆಯನ್ನು ನೋಡುವ ಆಸೆಯಾಯ್ತು.
(ಮುಂದುವರಿಯುವುದು)
Comments 6
ಕಲ್ಯಾಣ್ ಎಂ.
Dec 18, 2024ಕತೆ ರಸವತ್ತಾಗಿದೆ… ಮಹಾದೇವಣ್ಣ.
Ashwin P
Dec 18, 2024This is really fascinating, You are an excessively professional blogger.
I have shared this story in my social networks.
ಗುಣಶೀಲಾ ಪ್ರತಾಪ್
Jan 2, 2025ಕತೆಯಲ್ಲಿ ಬಂದ ಪಾತ್ರಗಳ ಹೆಸರುಗಳು ಬಹಳ ಆಕರ್ಷಕವಾಗಿದೆ… ತ್ರೈಲೋಕ್ಯ, ವಸೂದೀಪ್ಯ, ಮಹಾಲೇಖೆ🤗👌👌
ಅರುಣ್ ಗಲಗಲಿ
Jan 6, 2025ವಸೂದೀಪ್ಯನ ಅಬ್ಬೆಯ ಕತೆ ಎಷ್ಟೋಂದು ಕರುಣಾಜನಕವಾಗಿದೆ! ಇಂತಹ ಹಿನ್ನೆಲೆಯ ಮತ್ತೊಂದು ಹುಡುಗಿಯನ್ನು ತನ್ನ ಮಗನಿಗೆ ತಂದುಕೊಳ್ಳಲು ಆಕೆ ಹಿಂಜರೆದದ್ದು ಯಾಕೆಂದು ಗೊತ್ತಾಗಲಿಲ್ಲ. ಆ ಹುಡುಗಿಗೊಂದು ಯೋಗ್ಯ ಬದುಕು ಕೊಟ್ಟ ಪುಣ್ಯವಾದರೂ ಅವಳಿಗೆ ಸಿಗುತ್ತಿತ್ತು.
ಷಡಕ್ಷರಿ ಬಸವನಬಾಗೇವಾಡಿ
Jan 12, 2025ಕತೆ ತುಂಬಾನೇ ಸ್ವಾರಸ್ಯಕರವಾಗಿದೆ ಅಣ್ಣಾ… ನಿಮ್ಮ ಕಥಾನಕ ಶೈಲಿಯ ವೈಶಿಷ್ಟ್ಯ ಏನು ಗೊತ್ತಾ?… ಆಯಾ ಪಾತ್ರಗಳ ಅಂತರಂಗದೊಳಗಿಳಿದು ಅವರ ಸನ್ನಿವೇಶ, ಪರಿಸ್ಥಿತಿಯನ್ನು ಪರಿಚಯಿಸುವುದರೊಂದಿಗೆ ಜೀವನ ಪಾಠವನ್ನು ಅವರ ಮಾತುಗಳಿಂದ ಓದುಗರಿಗೆ ಉಣಬಡಿಸುವುದು. ಶರಣರ ಕತೆಗಳ ಕತೆಗಾರನಿಗೆ ಶರಣು🙏
ವಸಂತ ಮಾವಳ್ಳಿ
Jan 12, 2025ಓದುಗರನ್ನು ತನ್ನಲ್ಲಿ ಲೀನಮಾಡುವ ಸುಂದರ ಕತೆಯಲ್ಲಿ ವಸೂದೀಪ್ಯ ಅನಿಮಿಷನಾಗುವ ಗಳಿಗೆಗಾಗಿ ಕಾಯುತ್ತಿದ್ದೇನೆ.