Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಭಾವದಲ್ಲಿ ಭ್ರಮಿತರಾದವರ…
Share:
Articles July 4, 2022 ಕೆ.ಆರ್ ಮಂಗಳಾ

ಭಾವದಲ್ಲಿ ಭ್ರಮಿತರಾದವರ…

ಬಹಳ ಹಿಂದೆ ನಡೆದದ್ದು. ಬೇಡರ ಕಣ್ಣಪ್ಪ ಕಣ್ಣು ಕೊಟ್ಟು ಶಿವನನ್ನು ಪ್ರತ್ಯಕ್ಷ ಮಾಡಿಕೊಂಡ ಕತೆಯನ್ನು ನಂಬಿ, ಪ್ರೇರಣೆಗೊಂಡ ಓರ್ವ ವ್ಯಕ್ತಿ ತಾನೂ ಹಾಗೆ ಶಿವನನ್ನು ಒಲಿಸಿಕೊಳ್ಳಲು ಹೋಗಿ, ಎರಡೂ ಕಣ್ಣುಗಳನ್ನು ಕಳೆದುಕೊಂಡ ಪ್ರಸಂಗ ನಿಮಗೆ ನೆನಪಿರಬಹುದು.
*** *** ***
ಕಳೆದ ವರ್ಷ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದ ಘಟನೆ. ಸತ್ಯಯುಗದಲ್ಲಿ ಉತ್ತಮ ಸ್ಥಿತಿಗತಿಯಲ್ಲಿ ಹುಟ್ಟುವ ನಂಬಿಕೆಯಿಂದ ಸ್ವತಃ ತಾಯಿ- ತಂದೆ ಜೊತೆಯಾಗಿ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಕೈಯಾರೆ ಕೊಂದುಹಾಕಿದ್ದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದನ್ನು ನೀವು ಓದಿರಬಹುದು.
*** *** ***
ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸುದ್ದಿ- ಹಾಸ್ಟಲ್ ನಲ್ಲಿದ್ದುಕೊಂಡು ಹತ್ತನೆಯ ತರಗತಿಯಲ್ಲಿ ಓದುತ್ತಿದ್ದ ಬಾಲಕನೊಬ್ಬ ಆ ದಿನ ತನ್ನ ಅಮ್ಮನ ಹುಟ್ಟುಹಬ್ಬದಂದು ಶುಭಾಶಯ ಕೋರಲು ವಾರ್ಡನ್ ಮೊಬೈಲ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಷಯ ಎಲ್ಲರ ಕರುಳು ಹಿಂಡಿದ್ದು ಮನದಲ್ಲಿ ಮಾಸದಂತೆ ಇದೆ.
*** *** ***
ಒಂದಲ್ಲಾ ಒಂದು ರೂಪದಲ್ಲಿ ನಮ್ಮೊಳಗೆ ತುಂಬಿಹೋಗಿರುವ ಭಾವನೆ, ನಂಬಿಕೆಗಳ ಕೆಲವು ಸ್ಯಾಂಪಲ್ ಇವು. ದಿನಕ್ಕೆ ಇಂತಹ ಅನೇಕಾನೇಕ ಪ್ರಸಂಗಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತವೆ. ಜೀವನದ ಬಗ್ಗೆ ಸಣ್ಣಪುಟ್ಟ ವಿಷಯಗಳಿಗೆಲ್ಲಾ ಬೇಸತ್ತು ಹೋದವರಲ್ಲಿ ಎಲ್ಲಾ ವಯೋಮಾನದವರು ಇದ್ದಾರೆ. ಯಾವುದರಲ್ಲೂ ಸಮಾಧಾನವಿಲ್ಲವೆನ್ನುವ ಅತೃಪ್ತಿಗೆ, ಬಯಸಿದ್ದೇನೂ ಸಿಗುತ್ತಿಲ್ಲವೆಂಬ ನಿರಾಶೆಗೆ, ಸೋಲಿನ ಹತಾಶೆಗೆ, ಜಾತಿ ಸಂಕರದ ಆತಂಕಕ್ಕೆ, ದೈವದ ಮುನಿಸಿಗೆ, ಪ್ರೇಮದ ಬಿರುಕಿಗೆ, ನಂಬಿಕೆಯ ದ್ರೋಹಕ್ಕೆ, ಜೀವನದ ಬಗ್ಗೆಯೇ ಭ್ರಮನಿರಸನಗೊಂಡವರು ನಾವು! ಸಂತೋಷ ಹಾಗೂ ನೆಮ್ಮದಿಗಾಗಿ ಪ್ರತಿಯೊಬ್ಬರೂ ತವಕಿಸುತ್ತೇವೆ. ನಾವು ಬಯಸಿದಂತೆ ಬದುಕಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾಗ್ಯೂ, ಏನೇನೋ ಸಂದರ್ಭಗಳು ಎದುರಾಗಿ ಅಂದುಕೊಳ್ಳುವುದೆಲ್ಲಾ ತಲೆಕೆಳಗಾಗುತ್ತಿರುತ್ತದೆ. ನಮ್ಮ ಸುತ್ತಲಿನ ಸಮಾಜದಲ್ಲಾಗುವ ವಿಪ್ಲವಗಳನ್ನಾಗಲಿ, ನಮ್ಮ ಜೀವನದಲ್ಲಾಗುವ ಘಟನೆಗಳನ್ನಾಗಲಿ ಬದಲಾಯಿಸಲು ನಮಗೆ ಸಾಧ್ಯವಾಗದೆ ದುಃಖ-ನೋವುಗಳ ಅಸಹಾಯಕತೆಯಲ್ಲಿ ತಳಮಳಿಸುತ್ತೇವೆ… ಯಾಕೆ?

ನಿರ್ಣಯವನರಿಯದ ಮನವೆ, ದುಗುಡವನಾಹಾರಗೊಂಡೆಯಲ್ಲಾ
ಮಾಯಾ ಸೂತ್ರವಿದೇನೊ! ಕಂಗಳೊಳಗಣ ಕತ್ತಲೆ ತಿಳಿಯದಲ್ಲಾ!
ಬೆಳಗಿನೊಳಗಣ ಶೃಂಗಾರ ಬಳಲುತ್ತಿದ್ದುದು, ಗುಹೇಶ್ವರಾ.

ನಿರ್ಣಯವನ್ನು ಮಾಡಲಾಗದ ಮನಸ್ಸು ಯಾವುದು? ಜೀವನದಲ್ಲಿ ಯಾವುದು ಸತ್ಯ, ಯಾವುದು ಸುಳ್ಳು; ಯಾವುದು ಭ್ರಮೆ, ಯಾವುದು ವಾಸ್ತವ ಎಂದು ಅರಿಯಲಾಗದ ಮನಸ್ಸು. ಅಂತಹ ಮನಸ್ಸನ್ನು ಉಧ್ವಸ್ಥಗೊಂಡ ಮನಸ್ಸು ಎಂದೂ ಕರೆಯುತ್ತಾರೆ. ಮನಸ್ಸು ಪ್ರಶಾಂತವಾಗಿರದೆ ಸದಾ ಉಧ್ವಸ್ಥದಲ್ಲೇ ಇರುವುದಕ್ಕೆ ಕಾರಣ ನಮ್ಮೊಳಗೆ ಎಲ್ಲ ಎಲ್ಲದರ ವಿಷಯವಾಗಿ ತುಂಬಿಕೊಂಡ ಭಾವಗಳು. ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡುವ ಭಾವನೆಗಳು ಗೊತ್ತುಗುರಿಯಿಲ್ಲದಂತೆ ಮನುಷ್ಯರನ್ನು ಈಡಾಡಿ ಬಿಡುತ್ತವೆ. ಭಾವಗಳಿಗೆ ಸಿಕ್ಕ ಮನಸ್ಸು ಗಾಳಿಗೆ ಸಿಕ್ಕ ತರಗೆಲೆಯಂತೆ ದಿಕ್ಕುದೆಸೆಯಿಲ್ಲದೆ ಅಂಡಲೆಯುತ್ತದೆ. ನಮ್ಮ ಅಮೂಲ್ಯ ಸಮಯ ಅದಕ್ಕಾಗಿ ಪ್ರತಿ ಕ್ಷಣ ಬೆಲೆ ತೆರುತ್ತಿರುತ್ತದೆ. ಇಡೀ ಆಯುಷ್ಯವೇ ಭಾವಗಳಲ್ಲಿ ಕೊಚ್ಚಿ ಹೋಗುತ್ತಿರುತ್ತದೆ. ಸರಿಯಾದ ಗಂಡ ಇಲ್ಲ, ಅರ್ಥಮಾಡಿಕೊಳ‍್ಳುವ ಹೆಂಡತಿ ಸಿಗಲಿಲ್ಲ. ಮಕ್ಕಳು ಸರಿಯಾಗಿ ಹುಟ್ಟಲಿಲ್ಲಾ, ಒಳ್ಳೆಯ ಸಂಬಂಧ ಕೂಡಿಬರಲಿಲ್ಲ, ಸ್ನೇಹಮಯಿ ಬಾಸ್ ಸಿಗಲಿಲ್ಲ, ನನಗೆ ಸರಿಹೊಂದೋ ತಾಯಿ-ತಂದೆ ಇಲ್ಲ, ಅಕ್ಕ-ತಂಗಿ, ಅಣ್ಣ-ತಮ್ಮ ಯಾರೂ ಸರಿಯಾಗಿಲ್ಲ … ಹೀಗೆ ತಳಮಳಿಸುತ್ತಾ ನಿಟ್ಟುಸಿರುಬಿಡುತ್ತಿರುತ್ತೇವೆ. ಕೆಲವೊಮ್ಮೆ ನಮ್ಮ ಭಾವನೆಗಳು ಸನ್ನಿವೇಶಗಳಿಗೆ ಪ್ರತಿಕ್ರಿಯೆಯಾಗಿ ಉದ್ಭವಿಸುತ್ತವೆ; ಇನ್ನು ಕೆಲವೊಮ್ಮೆ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಹುಟ್ಟುತ್ತವೆ. ನಮಗಿಷ್ಟವಾದ ಸಂಗೀತ ಕೇಳುತ್ತಾ ಆರಾಮಾಗಿ ಕೋಣೆಯಲ್ಲಿ ಒರಗಿಕೊಂಡಿದ್ದಾಗಲೂ ನಮ್ಮಲ್ಲಿ ಇದ್ದಕ್ಕಿದ್ದಂತೆ ಬೇಸರ ಹಾಗೂ ಉದಾಸ ಭಾವ ಉಂಟಾಗಬಹುದು, ವಿನಾಕಾರಣ ಸಿಟ್ಟುಬರಬಹುದು, ಅಳುಬರಬಹುದು ಅಥವಾ ಗೊಂದಲಕ್ಕೊಳಗಾಗಬಹುದು. ಹೀಗೆ ಗೊಂದಲದ ಗೂಡಾದ ಮನಸ್ಸು ಸರಿಯಾದ ಸಮರ್ಥ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವೇ? ಭಾವಗಳಲ್ಲಿ ಮುಳುಗಿ ಹೋದವರನ್ನು ಶರಣರು “ಭಾವ ಭ್ರಮಿತರು” ಎಂದು ಕರೆಯುತ್ತಾರೆ.

ಏನಿವು ಭಾವನೆಗಳು?

ಈ ಜಗತ್ತಲ್ಲಿ ಎಷ್ಟು ಕೋಟಿ ಜನರಿರುವರೋ ಅಷ್ಟು ಕೋಟಿ ಭಾವಕೋಶಗಳಿವೆ. ಭಾವನೆಗಳೇ ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತವೆ, ಭಾವಗಳೇ ಜೀವನದ ಪ್ರಧಾನವೆನ್ನುವ ನಂಬಿಕೆ ನಮ್ಮಲ್ಲಿ ಅನೇಕರಲ್ಲಿದೆ. ಪ್ರೀತಿಯಾಗಿರಲಿ, ಸೌಂದರ್ಯವಾಗಿರಲಿ, ಆನಂದವಾಗಿರಲಿ, ಜೀವನದ ಬಹುತೇಕ ಭಾಗವು ನಿರ್ದಿಷ್ಟ ಭಾವನಾತ್ಮಕ ಅನುಭವಗಳ ಹುಡುಕಾಟವೇ ಆಗಿದೆ. ಭಾವನಾತ್ಮಕ ಜೀವನವನ್ನು ತ್ಯಜಿಸಿದರೆ ನಮ್ಮ ಅಸ್ತಿತ್ವಕ್ಕೆ ಏನಾದರೂ ಅರ್ಥವಿದೆಯೇ ಎಂದು ನಾನು ಕೂಡ ಪ್ರಶ್ನಿಸುತ್ತಿದ್ದೆ. ಅದೇ ವೇಳೆ ಭಾವನೆಗಳು ಕೊಡುವ ನೋವಿನಿಂದ ಹೊರಬರಲು ತೀವ್ರವಾಗಿ ಚಡಪಡಿಸುತ್ತಲೂ ಇದ್ದೆ… ಯಾಕೆ ಈ ದಂದುಗವೆಂದು ಗೊತ್ತಾಗುತ್ತಿರಲಿಲ್ಲ… ಭಾವೋದ್ರೇಕದಲ್ಲಿ ಹಠಾತ್ತಾಗಿ ವರ್ತಿಸುವುದು, ಎದುರಿಗಿದ್ದವರ ಮೇಲೆ ಮುಗಿಬೀಳುವುದು, ಹಿಂದೆಮುಂದೆ ಯೋಚಿಸದೆ ಹೀನಾಮಾನವಾಗಿ ಬೈಯುವುದು, ಕೈಗೆ ಏನಾದರೂ ಸಿಕ್ಕರೆ ಎತ್ತಿ ಬಿಸಾಡುವುದು, ಮಕ್ಕಳು ಸಿಕ್ಕರೆ ದಬದಬಾ ಹೊಡೆಯುವುದು, ತನ್ನ ದೇಹಕ್ಕೇ ಹಿಂಸೆ ಮಾಡಿಕೊಳ್ಳುವುದು… ಇಂಥ ಅನೇಕ ಹುಚ್ಚಾಟಗಳ ಮಾದರಿಗಳು ಒಂದು ಕಡೆಯಾದರೆ; ಅಭಿಮಾನ, ಸ್ವಾಭಿಮಾನ, ಕುಟುಂಬ ಮರ್ಯಾದೆ, ಗೌರವ, ಪ್ರೇಮ, ಪಕ್ಷ, ಜಾತಿ, ಧರ್ಮ, ಕುಲ, ಮತ, ದೈವ, ಶ್ರೇಷ್ಠತೆ, ಹಿರಿತನದಂತಹ ಹಲವಾರು ಭಾವಗಳಿಗಾಗಿ ತಮ್ಮ ಜೀವನವನ್ನು, ಪ್ರಾಣವನ್ನು ಒತ್ತೆ ಇಟ್ಟು ಬಾಳುವವರು ಮತ್ತೊಂದು ಕಡೆ. ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮನ್ನು ಆಳುತ್ತಿರುವ ಭಾವಗಳ ಬಗೆಗೆ ನಾವು ಯಾವತ್ತಾದರೂ ಪ್ರಶ್ನಿಸಿಕೊಂಡಿದ್ದೇವೆಯೇ?
ಭಾವನೆಗಳು ಕೇವಲ ಆಲೋಚನೆಗಳಲ್ಲ. ಅವಕ್ಕೆ ಬಣ್ಣ ಇದೆ, ನೇಯ್ಗೆ ಇದೆ, ಅನುಭವಗಳ ಹಿನ್ನೆಲೆಯಿದೆ… ವಾಸ್ತವವಾಗಿ ನಮ್ಮ ಸುತ್ತಲಿನ ಸಂಬಂಧಗಳು ಹಾಗೂ ಜಗತ್ತಿನ ಆಗುಹೋಗುಗಳ ಕುರಿತು ಒಂದನ್ನು ಕಂಡು ಮತ್ತೊಂದನ್ನಾಗಿ ಗ್ರಹಿಸುವ ಪರಿಪಾಠದಿಂದಾಗಿ ನಮ್ಮೊಳಗೆ ಸ್ವಾಸ್ಥ ಚಿಂತನೆಯು ಕಳೆದುಹೋಗಿ ತಪ್ಪಾದ ಗ್ರಹಿಕೆಗಳು ಉಂಟಾಗುತ್ತವೆ. ಎಲ್ಲಾ ಭಾವಗಳ ಮೂಲ ತಪ್ಪು ಗ್ರಹಿಕೆಗಳೇ ಆಗಿರುತ್ತವೆ. ಈ ತಪ್ಪಿಗ್ರಹಿಕೆಗಳು ಮಿತಿಮೀರಿದಾಗ ಮನುಷ್ಯ ಸರಿಯಾದ ನಿರ್ಧಾರ ಮಾಡಲಾರ. ಜೀವನದ ಸಮಸ್ಯೆಗಳೊಂದಿಗೆ ಮುಖಾಮುಖಿಯಾಗಿ ದಿಟ್ಟತನದಿಂದ ಅವುಗಳೊಡನೆ ಸೆಣಸಾಡಿ ಸಮಸ್ಯೆಯನ್ನು ಎದುರಿಸಲು ಅಸಮರ್ಥನಾದಾಗ ಭಾವಗಳ ಚಕ್ರದಡಿ ಹೂತುಹೋಗಲೇ ಬೇಕಾಗುತ್ತದೆ.

ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ ಭಾವಗಳು ಯಾವುವು ಅಂತ ಒಂದಷ್ಟು ಪಟ್ಟಿ ಮಾಡಬಹುದು: ಕುತ್ಸಿತ ಭಾವ, ಸುಖ ಭಾವ, ದ್ವೇಷ ಭಾವ, ಅಸೂಯೆ ಭಾವ, ಕಾಮ ಭಾವ, ವಿಷಯವಾಂಛಿತ ಭಾವ, ಅತೃಪ್ತ ಭಾವ, ತೃಪ್ತ ಭಾವ, ನಿರಾಶಾ ಭಾವ, ಜಯದ ಭಾವ, ಸೋಲಿನ ಭಾವ, ಧನ್ಯತಾ ಭಾವ, ವಿಧೇಯತಾ ಭಾವ, ಅಹಂ ಭಾವ, ಅಧಿಕಾರ ಭಾವ, ಅವಮಾನದ ಭಾವ, ಆಶಾ ಭಾವ= (ಕಾಮ ಭಾವ- ಹೆಣ್ಣು, ಗಂಡು, ಭೂಮಿ, ಅಧಿಕಾರ…), ಕುಚೋದ್ಯದ ಭಾವ, ವಿನಯದ ಭಾವ, ವಿಲಕ್ಷಣ ಭಾವ, ಲಾಕ್ಷಣೀಕೃತ ಭಾವ, ನವ್ಯ ಭಾವ, ಸನಾತನ ಭಾವ, ಅಸಮಾನತೆಯ ಭಾವ, ಅಸಮಧಾನ ಭಾವ, ಅಸಹನ ಭಾವ, ಅಸಹ್ಯ ಭಾವ, ಬೇಧ ಭಾವ, ಜಿಗುಪ್ಸೆ ಭಾವ, ಪಶ್ಚಾತ್ತಾಪ ಭಾವ, ಉದ್ವೇಗ ಭಾವ, ನಿರುದ್ವಿಗ್ನ ಭಾವ, ಭಯದ ಭಾವ… ಹೀಗೆ ಇದನ್ನು ಇನ್ನೂ ಬೆಳೆಸಬಹುದು. ಲೆಕ್ಕವಿಲ್ಲದಷ್ಟು ಭಾವಗಳಿವೆ. ಒಂದು ವಿಚಿತ್ರ ಸತ್ಯ ಏನು ಗೊತ್ತೆ? ಎಲ್ಲರಲ್ಲೂ ಇವುಗಳನ್ನು ಕಾಣಬಹುದು! ಇಡೀ ಮನುಷ್ಯ ಕುಲವೇ ಈ ಭಾವಗಳಿಗೆ ಊಳಿಗ ಮಾಡುತ್ತಿರುತ್ತದೆ. ಭಾವನೆಗಳನ್ನು ಶರಣರು ಭ್ರಮೆಗಳೆಂದು ಯಾಕೆ ಕರೆದರು… ಭಾವ ತುಂಬಿದ ಮನಸ್ಸುಗಳನ್ನು ಮನದ ಭವಿತನವೆಂದು ಯಾಕೆ ತೋರಿಸಿದರು…
ಹಾಗಾದರೆ ಭಾವನೆಗಳಿಂದ ಏನು ಸಮಸ್ಯೆ?

ಮೇಲೆ ಪಟ್ಟಿ ಮಾಡಿದ ಭಾವಗಳೆಲ್ಲವೂ ‘ಚಿದ್ಭಾವ’ಗಳು. ಅಂದರೆ ಚಿತ್ತ ಅಥವಾ ಮನಸ್ಸಿನಲ್ಲಿ ಹುಟ್ಟಿದವುಗಳು. ಮನುಷ್ಯ ತನ್ನ ಆಸಕ್ತಿಗಳಿಗನುಗುಣವಾಗಿ ಭಾವಗಳನ್ನು ತಾನೇ ಸೃಷ್ಟಿಸಿಕೊಳ್ಳುತ್ತಾ, ಸುತ್ತಲಿನವರ ಭಾವವನ್ನು ತನಗೂ ಅಂಟಿಸಿಕೊಳ್ಳುತ್ತಾ, ಅವರಿಗೂ ತನ್ನದನ್ನು ಅಂಟಿಸುತ್ತಾ ಬದುಕುತ್ತಿರುತ್ತಾನೆ. ಅವರವರ ಕಲ್ಪನೆಗಳಿಗನುಗುಣವಾಗಿ ಅವರವರ ಭಾವಸ್ವಭಾವಗಳು ರೂಪುಗೊಂಡಿರುತ್ತವೆ. ಹೀಗಾಗಿ ಅವುಗಳನ್ನು ಸ್ವ-ಭಾವವೆಂದೂ ಕರೆಯಬಹುದು. ಸ್ವಭಾವವೆಂದರೆ ತನ್ನದೇ ಭಾವಪ್ರಪಂಚ, ತಾನೇ ಸೃಷ್ಟಿಸಿಕೊಂಡದ್ದು. ಒಂದರ್ಥದಲ್ಲಿ ಇವು ನಮ್ಮದೇ ಕಲ್ಪನೆಯ ಕೂಸುಗಳು. ಈ ಭಾವಗಳೆಲ್ಲ ಕಲ್ಪನೆಗಳಾದ್ದರಿಂದ ಏನೇನೋ ಭ್ರಮೆಗಳನ್ನು ಹುಟ್ಟಿಸುತ್ತಿರುತ್ತವೆ, ನಿಜವೆಂದು ನಂಬಿಸುತ್ತಿರುತ್ತವೆ. ಆದರೆ ವಾಸ್ತವದಲ್ಲಿ ಇವುಗಳಿಗೆ ಯಾವುದೇ ಅಸ್ತಿತ್ವ ಇರುವುದಿಲ್ಲವಾದ್ದರಿಂದ ಇವುಗಳನ್ನು ಭ್ರಮೆಗಳೆಂದು ಸೂಚಿಸಿದ್ದಾರೆ. ಇಲ್ಲದ ಭ್ರಮೆಗಳಲ್ಲಿ ಇರುವವರಿಗೆ ನಿಚ್ಚಳವಾಗಿ, ಸ್ಪಷ್ಟವಾಗಿ ಏನನ್ನೂ ನೋಡಲಾಗದು. ಕಣ್ಣಿದ್ದೂ ನೋಡಲಾಗದ ಈ ಅಂಧಕಾರವೇ ಅಲ್ಲಮರು ಹೇಳುವ ‘ಕಂಗಳೊಳಗಣ ಕತ್ತಲೆ.’

ಭಾವಗಳು ಚಂಚಲರೂಪಿ. ನಮ್ಮ ಮನಸ್ಸು ಈಗ ಶಾಂತವಾಗಿದ್ದರೆ ಮತ್ತೊಂದು ಗಳಿಗೆಯಲ್ಲಿ ಯಾವುದೋ ಯೋಚನೆಯಲ್ಲಿ ಮುಳುಗಿ ಕ್ಷೋಭೆಗೆ ಒಳಗಾಗುತ್ತದೆ, ಮಳೆ ಶುರುವಾದಾಗ ಹಿತ ಭಾವ ಮೂಡಿದರೆ ಕೊಂಚ ಹೊತ್ತಿಗೆ ರೇಜಿಗೆ ಆದಂತೆ ಚಡಪಡಿಸುತ್ತೇವೆ. ಹೀಗೆ ಊಹಿಸಲಾಗದ, ಕ್ಷಣಿಕ ಹಾಗೂ ಚಂಚಲ ಸ್ವರೂಪದ ಭಾವನೆಗಳನ್ನು ನಿಜವೆಂದು ನಂಬುತ್ತಿದ್ದೇವೆ… ಆದರೆ ಯಾವ ಭಾವವೂ ಶಾಶ್ವತ ಅಲ್ಲ. ಉದಾಹರಣೆಗೆ ಯಾರೇ ಸತ್ತರೂ ನಾವೆಷ್ಟು ಗಂಟೆ ಕಾಲ ದುಃಖಿಸುತ್ತೇವೆ, ಒಂದು ದಿನದ 24 ತಾಸು ಕೂಡ ಬಿಟ್ಟೂಬಿಡದೆ ಅಳುವುದಕ್ಕೆ ಆಗುವುದಿಲ್ಲ. ಆ ಭಾವ ನಿಜವೇ ಆಗಿದ್ದರೆ ನಮ್ಮ ಅಳು ನಿರಂತರವಾಗಿರಬೇಕಿತ್ತು … ಆದರೆ ಅದು ಸಾಧ್ಯವಿಲ್ಲಾ, ಯಾಕೆಂದರೆ ಅದು ಪವನ ಅಂದರೆ ಗಾಳಿ, ಬಂದು ಹೋಗುವಂಥದ್ದು. ಭಾವಗಳೆಲ್ಲವೂ ಕ್ಷಣಿಕ ಹಾಗೂ ಕಲ್ಪನೆಗಳಾದ್ದರಿಂದ ಅವು ಯಾರ ಕೈಗೂ ಎಟುಕಲಾರವು! ಸುಖ ಭಾವವನ್ನೇ ತೆಗೆದುಕೊಳ್ಳಿ, ಇವತ್ತು ಊಟದ ವಿಷಯದಲ್ಲೋ, ನೋಟದಲ್ಲೋ, ಬೇಟದಲ್ಲೋ ಸುಖಪಟ್ಟಿರುತ್ತೇವೆ, ಆ ಸುಖ ಶಾಶ್ವತವಾಗಿದ್ದರೆ, ನಾಳೆ ಅದಕ್ಕಾಗಿ ನಾವು ಮತ್ತೆ ಹಾತೊರೆಯಬಾರದಿತ್ತು. ಆದರೆ ಹಾಗಾಗುವುದಿಲ್ಲ. ಭಾವಸುಖವೆನ್ನುವುದು ಆ ಕ್ಷಣಕ್ಕೆ ಏರಿದ ಅಮಲಾಗಿದ್ದು, ಅದು ಇಳಿದ ತಕ್ಷಣವೇ ಮತ್ತೆ ನಾವು ಆ ಸುಖವನ್ನು ಹುಡುಕಿಕೊಂಡು ಹೋಗುತ್ತೇವೆ, ಮತ್ತೇ ಮತ್ತೇ ಅನುಭವಿಸೋ ತೆವಲಿಗೆ ಬಿದ್ದುಬಿಡುತ್ತೇವೆ, ಪುನರಪಿ ಜನನಂ, ಪುನರಪಿ ಮರಣಂ… ಎನ್ನುವ ಹಾಗೆ, ಅದು ಎಂದಿಗೂ ಶಾಶ್ವತ ತೃಪ್ತಿ ನೀಡುವುದಿಲ್ಲ, ನಾವು ಅದರ ವ್ಯಾಮೋಹ ಬಿಡುವುದಿಲ್ಲಾ. ವಿಜಯದ ಭಾವವೂ ಅಷ್ಟೇ, ಸೋಲಿನ ಭಾವವೂ ಅಷ್ಟೇ… ಗೆದ್ದ ಸಡಗರ ಪದೇ ಪದೇ ನೆನೆದುಕೊಂಡು ಆನಂದಿಸುತ್ತಿದ್ದಾಗಲೂ, ಒಂದು ವಾರಕ್ಕೆಲ್ಲಾ ಮಾಸಿಹೋಗಿರುತ್ತದೆ. ಸೋತಾಗಲೂ ಅಷ್ಟೇ… ಮರುದಿನವೇ ಅದರ ನಿರಾಸೆ ಕಡಿಮೆಯಾಗುತ್ತದೆ. ಅದೇ ರೀತಿ ಸಂತೋಷದ ಸಂದರ್ಭಗಳು ದಕ್ಕಿದರೂ ಅವು ಎಷ್ಟು ಹೊತ್ತು ಇರುತ್ತವೆನ್ನುವುದು ಯಾರಿಗೂ ತಿಳಿದಿಲ್ಲ. ಅವೇ ಸಂದರ್ಭಗಳು ದುಃಖ, ಕೋಪ, ಅಸೂಯೆ, ಅಸಮಾಧಾನಗಳನ್ನು ತರಬಹುದು. ಭಾವನೆಗಳು ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿದ್ದು, ಅವುಗಳೊಂದಿಗೆ ನಮ್ಮ ಮನಸ್ಥಿತಿ ಹಾಗೂ ಆಲೋಚನೆಗಳೂ ನಾನಾ ರೂಪು ಪಡೆದುಕೊಳ್ಳುತ್ತಿರುತ್ತವೆ.
ಭಾವನೆಗಳನ್ನು ನಂಬಿದರೆ, ಅವು ತಮ್ಮೊಂದಿಗೆ ಲೆಕ್ಕವಿಲ್ಲದಷ್ಟು ಕಥೆಗಳನ್ನು, ಆಯಾ ನಿರ್ದಿಷ್ಟ ಭಾವನೆಗೆ ಸಂಬಂಧಿಸಿದ ಎಲ್ಲವನ್ನೂ ಎಳೆದು ತಂದು ಮನಸ್ಸಿನಲ್ಲಿ ಸುರಿಯುತ್ತವೆ. ಮನಸ್ಸು ಭಾವಗಳಿಂದ ತುಂಬಿಹೋದಾಗ ಮಿದುಳು ಸರಿಯಾದ ಚಿಂತನೆ ಮತ್ತು ಸರಿಯಾದ ಪ್ರಯತ್ನಗಳನ್ನು ಮಾಡುವ ಶಕ್ತಿಯನ್ನು ಕಳೆದುಕೊಂಡು ಬಿಡುತ್ತದೆ. ಸರಿಯಾದ ಚಿಂತನೆ ಮತ್ತು ಸರಿಯಾದ ಪ್ರಯತ್ನ ಹೋದ ಮೇಲೆ ನಾವೆಂದೂ ಜೀವನದ ಅತ್ಯಮೂಲ್ಯವಾದ ಪ್ರಶಾಂತತೆಯನ್ನು ದಕ್ಕಿಸಿಕೊಳ್ಳಲಾರೆವು. ಭಾವನೆಗಳ ಬಲವಾದ ಹಿಡಿತದಲ್ಲಿದ್ದಾಗ ನಾವು ಅತಿಯಾಗಿ ಪ್ರತಿಕ್ರಿಯಿಸುತ್ತೇವೆ ಮತ್ತು ಸ್ಪಷ್ಟತೆಯನ್ನು ಕಳೆದುಕೊಳ್ಳುತ್ತೇವೆ. ಆದರೆ ಹೀಗೆ ಬಂದು ಹಾಗೆ ಚದುರಿ ಹೋಗುವ ಭಾವನೆಗಳನ್ನು ನಾವು ultimate truth ಅಂತ ಅಂಟಿಕೊಂಡು ಬಿಟ್ಟಿರುತ್ತೇವೆ. ಆದ್ದರಿಂದ ಅವುಗಳನ್ನು ಗಟ್ಟಿಯಾಗಿ ತಬ್ಬಿಕೊಂಡಿರುತ್ತೇವೆ. ಅವುಗಳಿಗೆ ನಮ್ಮೊಳಗೆ ವೇದಿಕೆ ಒದಗಿಸಿಕೊಡುವುದರಿಂದ ಅವುಗಳ ನಾಟಕ ಅಲ್ಲಿ ತೆರೆದುಕೊಳ್ಳುತ್ತದೆ. ಇದೇ ಮಾಯಾಸೂತ್ರ–

ನಮ್ಮೊಳಗೆ ಏಳುವ ಭಾವನೆಗಳು ಸುಮ್ಮನೆ ಕೂರುತ್ತವೆಯೇ? ನಾವು ಕಾರ್ಯಪ್ರವೃತ್ತರಾಗುವಂತೆ ಮಾಡುತ್ತವೆ…
ಮನಸ್ಸು ಭಾವನೆಗಳ ವಿಷಯದಲ್ಲಿ ರೂಢಿಗತ ಪ್ರತಿಕ್ರಿಯೆಗಳನ್ನು ಸ್ಥಾಪಿಸಿಕೊಂಡಿರುತ್ತದೆ. ನಾವು ನೋಯಿಸುವಾಗ, ಭಯಪಟ್ಟಾಗ, ಕೋಪಗೊಂಡಾಗ, ಅಸೂಯೆಗೊಳಗಾದಾಗ, ಕಾಮನೆಗಳಲ್ಲಿ ಮುಳುಗಿದಾಗ, ಹೀಗೇ ವರ್ತಿಸಬೇಕೆಂದು ಯಾರೂ ತೀರ್ಮಾನಿಸಿರುವುದಿಲ್ಲ. ಆಯಾ ಭಾವ ಉದ್ರೇಕವಾದಾಗ ಪದೇ ಪದೇ ನಮ್ಮನ್ನು ಹಾಗೇ ನಡೆದುಕೊಳ್ಳುವಂತೆ ನಮ್ಮೊಳಗಿನ ರೂಢಿಗತ ಪ್ರತಿಕ್ರಿಯೆಗಳು ವರ್ತಿಸುತ್ತಿರುತ್ತವೆ. ಭಾವ ಪ್ರಚೋದಕಗಳು ನಮ್ಮಲ್ಲಿ ಕ್ಷಣಾರ್ಧದಲ್ಲಿ ಬಿಲ್ಲಿನಂತೆ ಹೊರಹೊಮ್ಮುತ್ತಿರುತ್ತವೆ. ನಮಗೆ ದೂಷಿಸುವ ಅಭ್ಯಾಸವಿದ್ದರೆ ಬೇರೆಯವರನ್ನು ತೆಗಳುತ್ತೇವೆ, ಶಪಿಸುತ್ತೇವೆ; ಹಿಮ್ಮೆಟ್ಟುವ ಸ್ವಭಾವದವರಾದರೆ ಹುದುಗಿಕೊಳ್ಳುತ್ತೇವೆ; ಕೋಪಿಷ್ಟರಾದರೆ ಕೈಗೆಟುಕಿದ ಸಾಮಾನುಗಳು ಪುಡಿಯಾಗುತ್ತವೆ; ನಿಯಂತ್ರಿಸುವವರಾದರೆ ಬೆದರಿಕೆ ಹಾಕುತ್ತೇವೆ; ಪ್ರೇಮದ ಉತ್ಕಟತೆಯಲ್ಲಿದ್ದಾಗ ಯಾರನ್ನೂ, ಯಾವುದನ್ನೂ ಲೆಕ್ಕಿಸುವುದಿಲ್ಲ… ಇಂತಿಂಥ ಪ್ರಸಂಗಗಳಲ್ಲಿ ನಾವು ಹೀಗೇ ಪ್ರತಿಕ್ರಿಯಿಸುತ್ತೇವೆಂದು ನಮ್ಮನ್ನು ಹತ್ತಿರದಿಂದ ಬಲ್ಲ ಯಾರಾದರೂ ಸರಿ, ಊಹಿಸಬಲ್ಲರು. ಆದರೆ ಭಾವನೆಗಳಿಗೆ ಗುರಿಯಾದವರು ಪ್ರಕ್ರಿಯೆಗೆ ಕುರುಡರಾಗಿರುತ್ತಾರೆ. ಮನೋವಿಶ್ಲೇಷಣೆಯ ಆಧುನಿಕ ಸಂಸ್ಥಾಪಕರು, ಅದರಲ್ಲೂ ಸಿಗ್ಮಂಡ್ ಫ್ರೈಡ್ ಮತ್ತು ಕಾರ್ಲ್ ಯೂಂಗ್, ಬಾಲ್ಯದಲ್ಲಿ ನಮ್ಮನ್ನು ಪ್ರಭಾವಿಸಿದ ಸುತ್ತಣ ಪರಿಸರ ಮತ್ತು ಹತ್ತಿರದ ಸಂಬಂಧಗಳ ಭಾವನಾತ್ಮಕ ಡೈನಾಮಿಕ್ಸ್ ಹೇಗೆ ನಮ್ಮ ಮನಸ್ಸು ಮತ್ತು ಹೃದಯಗಳಲ್ಲಿ ಅಭ್ಯಾಸ ಮಾದರಿಗಳನ್ನು (habit pattern) ಗಾಢವಾಗಿ ಉಳಿಸುವ ಶಕ್ತಿಯನ್ನು ಹೊಂದಿರುತ್ತದೆಂಬುದನ್ನು ನಿರೂಪಿಸಿದರು. ಫ್ರಾಯ್ಡ್ ಈ ಶಕ್ತಿಯನ್ನು ಪುನರಾವರ್ತನೆಯ ಒತ್ತಾಯ (repetition compulsion) ಎಂದರೆ, ಯೂಂಗ್ ಅದನ್ನು ಸ್ವಾಯತ್ತ ಸಂಕೀರ್ಣತೆ (autonomous complex) ಎನ್ನುತ್ತಾರೆ. ಹೇಗೆ ಕೆಲವು ಮೂಲಭೂತ ಭಾವನಾತ್ಮಕ ಮಾದರಿಗಳನ್ನು ಪ್ರಚೋದಿಸಿದಾಗ ಅವು ಹಿರಿಯರಲ್ಲಾಗಲಿ ಅಥವಾ ಮಕ್ಕಳಲ್ಲಾಗಲಿ ಕೆಲವು ನಿರ್ದಿಷ್ಟ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತವೆ ಎನ್ನುವುದನ್ನು ಇಬ್ಬರೂ ವಿವರಿಸುತ್ತಾರೆ.

ನಮ್ಮ ಭಾವನೆಗಳೇ ನಮ್ಮ ಸಮಸ್ಯೆ ಎನ್ನುವುದು ಗೊತ್ತಾಗದೆ, ನಮ್ಮವೇ ಭಾವನೆಗಳ ಜೊತೆಗೆ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಹೇಗೆ ಎದುರಿಸಬೇಕೆಂಬ ಪ್ರಜ್ಞೆಯೂ ನಮಗಿಲ್ಲದೆ ಬಳಲುತ್ತಿರುತ್ತೇವೆ. ಅದಕ್ಕಾಗಿ ಇತರರನ್ನು ದೂಷಿಸುವುದರಿಂದ ಯಾವುದೇ ಪ್ರಯೋಜನವಿಲ್ಲವೆಂಬುದು ಕೂಡಾ ನಮಗೆ ತಿಳಿದಿರುವುದಿಲ್ಲ. ಹೀಗಾಗಿ ನಾವು ಯಾವಾಗಲೂ ನಮ್ಮ ಸಮಸ್ಯೆಗಳನ್ನು ಎದುರಿಸುತ್ತಿರುವ ರೀತಿಯಲ್ಲೇ ಮುಂದುವರಿಯುತ್ತೇವೆ. “ಒಂದೇ ವಿಷಯವನ್ನು ಮತ್ತೆ ಮತ್ತೆ ಮಾಡುತ್ತಾ ವಿಭಿನ್ನ ಫಲಿತಾಂಶಗಳನ್ನು ನಿರೀಕ್ಷಿಸುವುದು ಕಡು ಮೂರ್ಖತನ/ ಹುಚ್ಚುತನ” ಎನ್ನುವ ಮಾತೊಂದಿದೆ. ನಾವೂ ಭಾವದ ವಿಷಯಗಳಲ್ಲಿ ಹೀಗೇ ಬಲಿಯಾಗುತ್ತಿರುತ್ತೇವೆ. ಇದು ಹುಚ್ಚೋ/ ಕಡುಮೂರ್ಖತನವೋ ನಾವೇ ತೀರ್ಮಾನಿಸಬೇಕು. ನಾವು ಬದುಕು ಸಾಗಿಸುತ್ತಿರುವ ದಾರಿ ಸರಿಯಾದದ್ದೋ, ಸುಳ್ಳೋ ಎಂದು ನಿರ್ಣಯ ಮಾಡಲಾಗದ ಮನಸ್ಸಿಗೆ ಸಿಗುವ ಫಲಿತಾಂಶ ದುಗುಡ, ತಳಮಳ, ಹೊಯ್ದಾಟ, ದಂದುಗ… ಅಲ್ಲದೇ ಬೇರೇನೂ ಇರುವುದಿಲ್ಲ.

ದಂದುಗ ಬಿಡದು ಮನದ ಸಂದೇಹ ಹಿಂಗದಾಗಿ:
ಮುಂದೆ ಲಿಂಗವ ಕಂಡೆಹೆನೆಂಬುದು ಹುಸಿ ನೋಡಾ.
ಬೆಂದ ಕರಣಾದಿಗಳು ಒಂದೆ ಪಥವನರಿಯವು,
ಎಂತು ಶಿವಪಥವೆನಗೆ ಸಾಧ್ಯವಪ್ಪುದಯ್ಯಾ
ಎನ್ನ ತಂದೆ ಕೂಡಲಸಂಗಮದೇವಾ,
ನಿಮ್ಮ ಶರಣರ ಬಳಿವಿಡಿದಡೆ ಎನ್ನ ದಂದುಗ ಹಿಂಗುವುದು.

ಭಾವಗಳಲ್ಲಿ ಮುಳುಗಿ ಸಂದೇಹಗಳಿಂದ ತುಂಬಿಹೋದ ಮನಸ್ಸಿಗೆ ನಮ್ಮೊಳಗೇ ಇರುವ ಪ್ರಾಣಲಿಂಗವನ್ನು ಕಾಣಲಾದೀತೇ? ಭಾವದ ಜೊತೆಯಲ್ಲೇ ಬರುವ ಬಯಕೆಯಂತೂ ಒಂದು ತಳವಿಲ್ಲದ ಹೊಂಡ. ಅವು ಯಾವತ್ತಿಗೂ ತೃಪ್ತಿಯಾಗುವುದಿಲ್ಲ. ನಾವು ಎಷ್ಟೇ ರುಚಿಕಟ್ಟಾದ ತಿನಿಸುಗಳನ್ನು ಸೇವಿಸುತ್ತಿದ್ದರೂ, ಎಷ್ಟೇ ಅದ್ಭುತವಾದ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದರೂ, ಎಷ್ಟೇ ಸುಂದರವಾದ ಸಂಬಂಧಗಳನ್ನು ಆನಂದಿಸಿದ್ದರೂ ಅತೃಪ್ತಿ ಎನ್ನುವುದೂ ಅಲ್ಲೇ ಮೂಲೆಯಲ್ಲಿ ನಿಂತು ದಿಟ್ಟಿಸುತ್ತಿರುತ್ತದೆ. “ಭಾವವಳಿಯದೆ ಬಯಕೆ ಸವೆಯದೆ, ಐಕ್ಯವು ಅವ ಘನವೆಂದಡಹುದೆ?” ಎಂದು ಕೇಳುತ್ತಾರೆ ಅಲ್ಲಮಪ್ರಭುದೇವರು. ಏಕೆಂದರೆ ಭಾವಗಳು ಸದಾ ಕೆರಳಿಕೊಂಡಿರುತ್ತವೆ. ಅವುಗಳನ್ನು ಹೆಗಲಿಗೆ ಕಟ್ಟಿಕೊಂಡು ಬದುಕುವುದೆಂದರೆ ದುಃಖದ ಬೆನ್ನೇರಿ ಸುಖವನರಸುವಂತೆ.
ಎಲ್ಲಾ ಭಾವಗಳೂ ಕಾರ್ಯರೂಪದಲ್ಲೇ ಇರುತ್ತವೆ. ಇವುಗಳಿಗೆ ಕಾರಣ ಹಿತಾಸಕ್ತಿಯಾದರೆ, ಪರಿಣಾಮ ದುಃಖ ಅಂದರೆ ದುಃಖಕ್ಕೆ ಬೇರೆ ಬೇರೆ ರೂಪಗಳಿವೆ- ಅನುಮಾನ, ದ್ವಂದ್ವ, ದಿಕ್ಕು ತಪ್ಪುವಿಕೆ, ಇಲ್ಲದ ಹವ್ಯಾಸಗಳಿಗೆ ಗುರಿಯಾಗುವಿಕೆ, ಅಸ್ಪಷ್ಟತೆ… ಹೀಗೆ. ಯಾವುದು ನಿಜಾ, ಯಾವುದು ಸುಳ್ಳು ಅಂತ ಅರ್ಥಮಾಡಿಕೊಳ್ಳುವ ವಿವೇಕವೇ ಕಾಣೆಯಾಗಿರುತ್ತದೆ. ಭಾವಗಳ ಕಾರ್ಯ-ಕಾರಣ-ಪರಿಣಾಮದ ತ್ರಿಪುಟಿಯಲ್ಲಿ ನಮ್ಮ ಬದುಕು ಚಲಿಸುತ್ತಿರುತ್ತದೆ. ಕಾರಣ-ಕಾರ್ಯ-ಪರಿಣಾಮ ರೂಪದಲ್ಲಿರೋ ಮನಸ್ಸಿನ ಹುಟ್ಟೂ ಇಲ್ಲೇ ಇದೆ. ಈ ಚಕ್ರದಲ್ಲಿ ಸಿಲುಕಿದವರಿಗೆ ಬಿಡುಗಡೆ ಅಥವಾ ಸ್ವಾತಂತ್ರ್ಯ ಎಲ್ಲಿದೆ? ಶರಣರು ತಮ್ಮ ವಚನಗಳಲ್ಲಿ ಪದೇ ಪದೇ ಬಳಸುವ ಮಾಯಾಪ್ರಪಂಚದ ಬಲೆ ಎಂದರೂ ಇದೆ, ಸಂಸಾರದ ಬಲೆ ಎಂದರೂ ಇದೆ:

ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ,
ಎನ್ನುವನು ಕಾಯಯ್ಯಾ, ಕಾಯಯ್ಯಾ.
ಹುರುಳಿಲ್ಲ! ಹುರುಳಿಲ್ಲ!
ಕೂಡಲಸಂಗಮದೇವಾ, ಶಿವಧೋ! ಶಿವಧೋ!

ನಮ್ಮ ಭಾವನೆಗಳಿಗೆ ಗಮನ ಕೊಡುವುದರಿಂದ ನಮಗೆ ಸಂತೋಷವಾಗುತ್ತದೆಂದು ನಾವು ಭಾವಿಸಿದ್ದೇವೆ. ಆದರೆ ವಾಸ್ತವವಾಗಿ ಅವು ನಮ್ಮ ಅತೃಪ್ತಿಯನ್ನು ಹೆಚ್ಚಿಸುತ್ತಿರುತ್ತವೆ. ಸಾಮಾನ್ಯವಾಗಿ ನಾವು ಮಾಡುವ ದೊಡ್ಡ ತಪ್ಪೆಂದರೆ ಭಾವನೆಗಳೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುವುದು. ನಾನು ಮೋಹಿ, ನೀನು ಪ್ರೇಮಿ, ಅವನು ಮುಂಗೋಪಿ, ಅವಳು ದುರಹಂಕಾರಿ… ಹೀಗೆ ಹೇಳುವಲ್ಲಿಯೇ ಸಮಸ್ಯೆ ಇದೆ. ಹೀಗೆ ಬಂದು ಹಾಗೆ ಚದುರಿ ಹೋಗುವ ಭಾವಗಳೊಂದಿಗೆ ಯಾಕೆ ನಮ್ಮನ್ನೂ, ಇತರರನ್ನೂ ಗುರುತಿಸಿಕೊಳ್ಳುವುದು? ನಾನು ಸಿಟ್ಟಾಗಿದ್ದೇನೆ (I am angry) ಎನ್ನುವುದಕ್ಕೂ ನನಗೆ ಕೋಪ ಬಂದಿದೆ ಎಂದು ಹೇಳುವುದಕ್ಕೂ ಬಹಳ ಅಂತರವಿದೆ. ನಾನು ಅಸೂಯೆಯಿಂದ ಕುದಿಯುತ್ತಿದ್ದೇನೆ ಎನ್ನುವುದಕ್ಕೂ ನನ್ನಲ್ಲಿ ಅಸೂಯೆಯ ಭಾವ ಬಂದಿದೆ ಎಂದುಕೊಳ್ಳುವುದಕ್ಕೂ ವ್ಯತ್ಯಾಸವಿದೆ… ಭಾವಗಳೊಂದಿಗೆ ನಾವು ನೇರವಾಗಿ ನಮ್ಮನ್ನು ಗುರುತಿಸಿಕೊಳ್ಳಲು ಶುರುಮಾಡಿದಂತೆ ಬೆಂಕಿಗೆ ತುಪ್ಪ ಸುರಿದಂತೆ ಸಮಸ್ಯೆಗಳು ಜಟಿಲಗೊಳ್ಳುತ್ತವೆ. ಕೋಪದೊಂದಿಗೆ ಗುರುತಿಸಿಕೊಂಡರೆ ಅದು ಮತ್ತಷ್ಟು ನಮ್ಮನ್ನು ಸುಡುತ್ತದೆ, ಮಾತ್ರವಲ್ಲಾ ಅದು ಆರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ನಾವೇನು ಭಾವಿಸುವೆವೋ ಅದೇ ನಾವಾಗುತ್ತೇವೆ, ಅಲ್ಲವೇ? ಹೀಗಿರುವಾಗ ನಾವ್ಯಾಕೆ ನಮ್ಮನ್ನು ಮತ್ತು ಇತರರನ್ನು ಭಾವನಾತ್ಮಕ ಮನಸ್ಸಿನ ಕ್ಷಣಿಕ ಸ್ಥಿತಿಗಳೊಂದಿಗೆ ಗುರುತಿಸಿಕೊಳ್ಳಬೇಕು? ನಾವು ಭಾವಗಳ ಮೇಲೆ ನಮ್ಮ ಗಮನ ಕೇಂದ್ರೀಕರಿಸಿದಷ್ಟು ಅವು ಮತ್ತೂ ಪ್ರಬಲವಾಗುತ್ತವೆ, ಗೀಳಾಗಿ ನಮ್ಮನ್ನು ಅಂಟಿಕೊಳ್ಳುತ್ತವೆ. ಇದರಿಂದ ನಾವು ಮತ್ತೂ ನೋವು, ಸಂಕಟಗಳಿಗೆ ಒಳಗಾಗುತ್ತಿರುತ್ತೇವೆ, ಇತರರೊಂದಿಗೆ ಬಾಂಧವ್ಯ ಬೆಸೆಯುವ ಸಾಮರ್ಥ್ಯ ಕೂಡ ಕುಸಿದು ಹೋಗುತ್ತದೆ. ಭಾವನೆಗಳಿಗೆ ಬೆಸೆದುಕೊಂಡಷ್ಟು… ನಾನು, ನೀನು, ಅವನು ಅವಳು ಎನ್ನುವ ವ್ಯತ್ಯಯಗಳು ಬೆಳೆದು ದೊಡ್ಡ ಕಥೆಯಾಗಿ ಬದಲಾಗುತ್ತಾ, ಸಮಸ್ಯೆಗಳ ಪರ್ವತಗಳನ್ನೇ ಸೃಷ್ಟಿಸುವ ಅಪಾಯಗಳಿರುತ್ತವೆ. ನಮ್ಮ ಭಾವಗಳಿಂದ ಬೇರೆಯವರಿಗೆ ಸಮಸ್ಯೆಯಾಗುತ್ತದೆಂದು ತಿಳಿಯದೆ ಪ್ರೀತಿಸುವವರಿಗೆ, ಸುತ್ತಲಿನವರಿಗೆ ನೋವನ್ನು ದಾಟಿಸುತ್ತಲೇ ಹೋಗುತ್ತೇವೆ. ಒಂದು ಮಾತಿದೆ: “ಎಲ್ಲಾ ಜನರು ಸಂತೋಷವನ್ನು ಬಯಸುತ್ತಾರೆ, ಆದರೆ ವಾಸ್ತವವಾಗಿ ಅವರು ದುಃಖವನ್ನು ಬೆನ್ನುಹತ್ತಿರುತ್ತಾರೆ.” ಭಾವಗಳೊಂದಿಗಿನ ನಮ್ಮ ಸಂಬಂಧವನ್ನು ನೋಡಿಕೊಂಡಾಗ ಈ ಮಾತು ಅಕ್ಷರಶಃ ನಿಜವೆನಿಸುತ್ತದೆ.
ಭಾವ ಜಾಲ ಎನ್ನುವುದು ಅಭಿವೃದ್ಧಿಗೊಂಡ ಜಾಲ; ತನ್ನನ್ನು ನೋಡಿ ಜಗತ್ತು, ಜಗತ್ತನ್ನು ನೋಡಿ ತಾನು ಅದು ಬೆಳವಣಿಗೆಯಾಗುತ್ತಾ ಬಂದದ್ದು. ಈ ಭಾವಜಾಲದಿಂದಲೇ ನಾವು ನಮ್ಮ ಸುತ್ತಲಿನ ವಸ್ತು ಜಗತ್ತನ್ನು ನೋಡುತ್ತಿರುತ್ತೇವೆ, ತೀರ್ಮಾನಕ್ಕೆ ಬರುತ್ತಿರುತ್ತೇವೆ. ಆದ್ದರಿಂದಲೇ ಈ ಬಂದ ದಾರಿಯನ್ನೇ ಶರಣರು ಪೂರ್ವಾಶ್ರಯವೆನ್ನುತ್ತಾರೆ. ಚನ್ನಬಸವಣ್ಣನವರು ಇದುವರೆಗೆ ನಾವು ರೂಢಿಸಿಕೊಂಡು ಬಂದ ಈ ಭಾವದಾಶ್ರಯದ ಪೂರ್ವಾಶ್ರಯದ ದಾರಿಯನ್ನು ಅಳಿಯಬೇಕೆಂದು ಸೂಚಿಸುತ್ತಾರೆ:

ಪೂರ್ವಾಶ್ರಯ ಪೂರ್ವಾಶ್ರಯವೆಂದೆಂಬರು,
ಪೂರ್ವಾಶ್ರಯವಾವುದೆಂದರಿಯರು.
ಪೂರ್ವವೆಂಬುದೆ ಬಂದ ಬಟ್ಟೆ, ಆಶ್ರಯವೆಂಬುದೆ ಕರಣಾದಿ ಗುಣಂಗಳು.
ಈ ಉಭಯವಳಿದು ಕೂಡಲಚೆನ್ನಸಂಗನಲ್ಲಿಪ್ಪ
ಶರಣಂಗೆ ಶರಣೆಂಬೆ.

ಭಾವನೆಗಳು ಕರಣಾದಿ ಗುಣಗಳನ್ನು ಆಶ್ರಯಿಸಿಕೊಂಡು ಬೆಳೆದ ಕಳೆಗಳು. ಅವು ನಿಜವಾಗಿ ಇದ್ದರೆ ಅವುಗಳನ್ನು ಜೋಡಿಸಿಟ್ಟುಕೊಂಡು ನಾಳೆಗೆ ನಡೆಯಬಹುದು. ಆದರೆ ಅವು ನಮ್ಮ ಸ್ವಭಾವ ಅಂದರೆ ನಮ್ಮ ಕಲ್ಪನೆಯ ಮಕ್ಕಳಾದ್ದರಿಂದ ಅವುಗಳನ್ನು ಮುಂದಕ್ಕೆ ಎತ್ತಿಕೊಂಡು ಹೋಗಲಿಕ್ಕಾಗದು…(ಹಿಂದೆಂದೋ ನಿಮ್ಮಲ್ಲಿ ಮೂಡಿದ್ದ ಗಾಢ ಭಾವವೊಂದನ್ನು ನೆನಪಿಸಿಕೊಳ್ಳಿ, ಅದೀಗ ಸಂಪೂರ್ಣ ತನ್ನ ಇರುವನ್ನೇ ಕಳೆದುಕೊಂಡಿರುತ್ತದೆ…) ಅವು ಸತ್ಯವೆಂದು ನಮ್ಮನ್ನ ನಂಬಿಸಿ, ಭ್ರಮಿತರನ್ನಾಗಿ ಮಾಡಿರುವುದರಿಂದ ಮನಸಲ್ಲಿ ಸಂಗ್ರಹವಾಗಿರುತ್ತವೆ. ಆದರೆ ಅವುಗಳಿಗೆ ವಸ್ತು ನಿದರ್ಶನ ಇರುವುದಿಲ್ಲ. ಅವುಗಳದ್ದು ಏನಿದ್ದರೂ ಕಾಲ್ಪನಿಕ ನಿದರ್ಶನ. ನಮ್ಮೊಳಗೇ- ಹೀಗಿದ್ದರೆ ಚೆನ್ನಾಗಿರುತ್ತೆ ಅಂತ ಕಲ್ಪಿಸಿಕೊಂಡು ತೀರ್ಮಾನಿಸಿರುತ್ತೇವೆ, ಆ ಕಲ್ಪನೆಯ ಹಿಂದೊಂದು ನಮ್ಮದೇ ಹಿತಾಸಕ್ತಿ ಇರುತ್ತದೆ, ಅದು ಕೂಡ ಸಂಪುರ್ಣ ನಮ್ಮ ಕಲ್ಪನೆಯದ್ದೇ ಆಗಿರುತ್ತದೆ… ಇವೆಲ್ಲವೂ ನಮ್ಮನಮ್ಮ ಆಸಕ್ತಿಗಳಿಗನುಗುಣವಾಗಿ ನಮ್ಮೊಳಗೆ ಬೆಳೆದುಕೊಂಡುಬಿಟ್ಟಿರುತ್ತವೆ. ಈ ಪೂರ್ವಾಶ್ರಯ ಬಿಟ್ಟಲ್ಲದೆ ನಿಜದ ನೆಲೆ ಅರಿಯಲಾಗದು.

ನೋಟವುಳ್ಳನ್ನಕ್ಕರ ಕೂಟವುಂಟು, ಭಾವವುಳ್ಳನ್ನಕ್ಕರ ಭ್ರಮೆಯುಂಟು.
ನೋಟಗೆಟ್ಟು ಭಾವನಷ್ಟವಾಗಿ ಮನ ಲಯವಾದ ಬಳಿಕ
ಕೂಡಲಚೆನ್ನಸಂಗಮದೇವಾ,
ನಿಮ್ಮ ಶರಣ ಒಳಗೂ ನೋಡ, ಹೊರಗೂ ನೋಡ.

ಸಂಗ್ರಹ ಮಾಡಿಕೊಂಡ ಭಾವನೆಗಳೇ ದೃಷ್ಟಿಕೋನಗಳನ್ನೂ ನಿರ್ಮಿಸುತ್ತಿರುತ್ತವೆ. ಹೀಗಾಗಿ ಪ್ರತಿಯೊಬ್ಬರನ್ನೂ, ಪ್ರತಿಯೊಂದನ್ನೂ ನಾವು ನಮ್ಮದೇ ದೃಷ್ಟಿಕೋನಗಳಿಂದ ಅಳೆಯುತ್ತಿರುತ್ತೇವೆ. ಅದಕ್ಕೆ ನಾವು ಜಗತ್ತನ್ನು ಅದು ಇರುವ ಹಾಗೆ ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಮ್ಮ ಗ್ರಹಿಕೆಗಳೆಲ್ಲವೂ ತಪ್ಪಾಗಿರುತ್ತವೆ. ತಪ್ಪು ಗ್ರಹಿಕೆಗಳು ತಪ್ಪುದಾರಿಗೆ, ತಪ್ಪು ತೀರ್ಮಾನಗಳಿಗೆ ದೂಡುತ್ತವೆ. ಆದ್ದರಿಂದ ನಮ್ಮ ನೋಟಗಳೇ ಭವದ ಕೂಟಗಳಿಗೆ ನಾಂದಿ ಹಾಡುತ್ತಿದ್ದು ಭವಚಕ್ರದಲ್ಲಿ ಸುತ್ತುತ್ತಿರುತ್ತೇವೆ.

ಭಾವದಲ್ಲಿ ಭ್ರಮಿತರಾದವರ
ಸೀಮೆಯೇನು? ನಿಸ್ಸೀಮೆಯೇನು?
ವಚನದ ರಚನೆಯ ರಂಜನೆಯ ಲೀಲೆಯನಾಡುವರು.
ಗುಹೇಶ್ವರನಿಪ್ಪ ಗುಪ್ತವೆಂತೆಂದರಿಯರು.

ಭಾವಗಳ ಕುರಿತಾಗಿ ಅನೇಕ ವಚನಗಳನ್ನು ಕಾಣಬಹುದು. ಮೇಲಿನ ವಚನದಲ್ಲಿ ಅಲ್ಲಮಪ್ರಭುಗಳು ಭಾವ ಭ್ರಮಿತರ ಶಬ್ದಾಡಂಬರವನ್ನು ವಿಡಂಬಿಸಿದ್ದಾರೆ. ಎಂದೋ, ಯಾರೋ ತೇಲಿಬಿಟ್ಟ ದೇವರ ಕಲ್ಪನೆಯನ್ನು ತಲೆಯೊಳಗೆ ತುಂಬಿಸಿಕೊಂಡು, ಅದನ್ನೇ ಭಾವದಲ್ಲಿ ಭ್ರಮಿಸುತ್ತಾ, ಕಲ್ಪನೆಯಲ್ಲಿ ತೇಲುತ್ತಿರುವವರು, ಕೇವಲ ಮಾತಿನ ಚಮತ್ಕಾರದಲ್ಲಿ ಮುಳುಗಿಬಿಡುತ್ತಾರೆ. ಶಬ್ದವೇ ಭಾವಗಳನ್ನು ಹೌದು ಹೌದು ಎಂದು ಮುಂದಿಟ್ಟು ತೋರಿಸುತ್ತಿರುತ್ತವೆ. ಶಬ್ದಕ್ಕೂ, ಭಾವಕ್ಕೂ ಬಹಳ ಸಂಬಂಧವಿದೆ. ಭಾವಗಳು ಕೂತಿರುವುದೇ ಶಬ್ದಗಳಲ್ಲಿ. ಹೀಗೆ ಚಮತ್ಕಾರದ ಮಾತುಗಳ ರಚನೆಯಲ್ಲಿ ಮುಳುಗಿದವರಿಗೆ ಜೀವನದ ಪರಮಾರ್ಥ ಯಾವತ್ತಿಗೂ ದಕ್ಕಲಾರದು ಎಂದು ಅಲ್ಲಮಪ್ರಭುದೇವರು ವಿಶಾದಿಸುತ್ತಾರೆ.

ಭಾವ ನಿರಸನ

ಭಾವನೆಗಳೊಂದಿಗಿನ ನಮ್ಮ ಸಂಬಂಧವನ್ನು ಪರಿವರ್ತಿಸಿಕೊಳ್ಳುವುದು ಹೇಗೆ? ಅಥವಾ ಬರುವ ಭಾವಗಳಿಗೆ ಅಂಟಿಕೊಳ್ಳದೇ ಇರುವುದು ಹೇಗೆ?
ಶರಣರಲ್ಲಿ ಭಾವ ನಿರಸನದ ಕುರಿತಾಗಿ ವಿಸ್ತಾರವಾದ ಚರ್ಚೆಗಳು ನಡೆದಿವೆ. ಬೌದ್ಧರು ಭಾವನೆಗಳನ್ನು ಕ್ಲೇಷಗಳೆಂದು ಪ್ರಮುಖವಾಗಿ ಪರಿಗಣಿಸಿದ್ದಾರೆ. ಜೀವ ಚೈತನ್ಯವನ್ನು ದುರ್ಬಲಗೊಳಿಸುತ್ತಾ, ದೇಹ ಮತ್ತು ಮನಸ್ಸಿಗೆ ಹಿಂಸೆ ಅಥವಾ ಅಸ್ವಸ್ಥತೆಯನ್ನುಂಟು ಮಾಡುವ ಮಾನಸಿಕ ಸ್ಥಿತಿಗಳನ್ನು ಕ್ಲೇಷಗಳೆಂದು ಕರೆಯುತ್ತಾರೆ. ಅವುಗಳಿಂದ ಹೊರಬರಲು ಹಲವಾರು ಮಾರ್ಗಗಳನ್ನು ತೋರಿದ್ದಾರೆ. ಸೂಕ್ಷ್ಮವಾದ, ಬೆಳೆಯುತ್ತಾ ಹೋಗುವ ಸುಪ್ತ ಪ್ರವೃತ್ತಿಯ ಭಾವಗಳನ್ನು ಮನದ ಸಂಕಟವೆಂದು ತತ್ವಪದಕಾರರು ಗುರುತಿಸುತ್ತಾರೆ. ಶರಣರು ನಡೆದ ಗುರುಮಾರ್ಗದಲ್ಲಿ ಭಾವ ನಿರಸನಕ್ಕೆ ಅದ್ಭುತ ದಾರಿಗಳಿವೆ.

ಭಾವನೆಗಳು ಯಾವತ್ತಿಗೂ ವಾಸ್ತವದ ಉತ್ಪನ್ನಗಳಲ್ಲ, ಬದಲಿಗೆ ಅವು ವಾಸ್ತವದ ನಮ್ಮ ವ್ಯಾಖ್ಯಾನದಿಂದ ಹುಟ್ಟುವಂಥವು, ಹೀಗಾಗಿ ಅವುಗಳನ್ನು ಸತ್ಯವೆಂದು ತಿಳಿಯಲಾಗದು. ನಮ್ಮ ಜೀವನದ ವಸ್ತು ಸ್ಥಿತಿಯೊಂದಿಗೆ ಈ ಭಾವಗಳನ್ನು ಪಕ್ಕಕ್ಕಿಟ್ಟು ಹೋಲಿಸಿ ನೋಡಿದರೆ ಗೊತ್ತಾಗುತ್ತದೆ. ಕಳೆದು ಹೋದ ಬಾಲ್ಯವಾಗಲಿ, ಯೌವನವಾಗಲಿ ಈಗ ಮತ್ತೆ ಬರುವುದಕ್ಕೆ ಸಾದ್ಯವೇ? ಹಾಗಿರುವಾಗ ಈ ಮನಸ್ಸು ಮಾತ್ರ ಯಾಕೆ ಯಾವಾಗಲೋ ಮೂಡಿದ ಭಾವನೆಗಳನ್ನ ಗಟ್ಟಿಯಾಗಿ ಅಚ್ಚಿನಂತೆ ನೆನಪಲ್ಲಿ ಒತ್ತಿಕೊಂಡು ಮುಂದುವರಿಸಿಕೊಂಡು ಹೋಗಲು ಹೆಣಗುತ್ತಿದೆ ಎಂದು ಯೋಚಿಸಬೇಕು. ಮನಸ್ಸಿನ ಅಂಟುವಿಕೆಯ ಸ್ವಭಾವವನ್ನು ಅರಿಯಬೇಕು. ಬಂದ ಭಾವಗಳನ್ನು ಗಮನಿಸಿ, ಗುರುತಿಸಿ, ಇವೆಲ್ಲಾ ಕ್ಷಣಿಕವಾದವುಗಳು, ಹೀಗೆ ಬಂದು ಹಾಗೆ ಹೋಗುತ್ತವೆ, ಇಂತಹ ಗಾಳಿ ರೂಪದ ಭಾವಗಳಿಗೆ ನಾವ್ಯಾಕೆ ತೂರಿಹೋಗಬೇಕು… ನಮ್ಮ ನಿಜವಾದ ಭಾವ ನಿರುಮ್ಮಳವಾಗಿರುವಂಥದು. ಯಾಕೆಂದರೆ ನನ್ನ ಈ ಕ್ಷಣದ ಸತ್ಯವಾದ ಪ್ರಾಣಕ್ಕೆ ಯಾವ ಭಾವಗಳೂ ಇಲ್ಲ. ಪ್ರಾಣಕ್ಕೆ ಯಾವ ಭಾವಗಳನ್ನೂ ಆರೋಪಿಸಲಾಗದು!

“ಭಾವಗಳು ಸಂದರ್ಶಕರಂತೆ, ಬಂದು ಹೋಗುತ್ತವೆ… ಬಿಡಿ” ಎನ್ನುತ್ತಾನೆ ಬುದ್ಧ ಗುರು. ಆದರೆ ಯಾವುದೇ ಭಾವ ಬಂದಾಗ, ಆ ಭಾವವೇ ನಾವಾಗಿ ಅಂಟಿಕೊಂಡು ಬಿಡುವುದರಿಂದ ಅದನ್ನು ಬದಿಗೆ ಸರಿಸಿ ನೋಡಲು ಕಷ್ಟವಾಗುತ್ತದೆ. ನಮ್ಮ ಹಾಗೂ ಭಾವನೆಗಳ ನಡುವೆ ಅಂತರವೇ ಇಲ್ಲದಾಗ ಅವುಗಳನ್ನು ದೂರ ನಿಂತು ನೋಡುವುದು ಅಸಾಧ್ಯವಾಗುತ್ತದೆ. ಉದಾಹರಣೆಗೆ ನನ್ನಲ್ಲಿ ಕೆಲವರ ಕುರಿತಾಗಿ ಏಳುತ್ತಿದ್ದ ಅಸಹನೆಯ ಭಾವವನ್ನು ನಾನು ಇಂಥವರಿಗೆ ಕೊಡಲೇ ಬೇಕಾದ ಸಹಜವಾದ ಪ್ರತಿಕ್ರಿಯೆ ಎಂದು ಇದುವರೆಗೂ ಭಾವಿಸಿದ್ದೆ. ಅದನ್ನು ನನ್ನಿಂದ ಪ್ರತ್ಯೇಕವಾಗಿ ನೋಡಲು ಮೊದಮೊದಲು ಸಾಧ್ಯವೇ ಆಗುತ್ತಿರಲಿಲ್ಲ. ಯಾರ ಬಗೆಗೂ ನಮ್ಮಲ್ಲಿ ಅಸಹನೆಗಳು ಏಳಬಾರದೆಂದು ಗೊತ್ತಿದ್ದರೂ, ಹೌದೆಂದು ಒಪ್ಪಿಕೊಳ್ಳುತ್ತಿದ್ದರೂ ಅಸಹನೆಯ ತರಂಗಗಳು ನನ್ನಲ್ಲಿ ಏಳುವಾಗ ಅವುಗಳನ್ನು ಎದುರಿಟ್ಟು ನೋಡುವುದು ಹೇಗೆಂದು ತಿಳಿಯುತ್ತಿರಲಿಲ್ಲ. ಈ ಭಾವ ಕ್ಷಣಿಕವಾದದ್ದು, ಇದರ ಹಿಂದಿರುವ ನನ್ನ ಹಿತಾಸಕ್ತಿಗೂ ಯಾವುದೇ ಅಸ್ತಿತ್ವವಿಲ್ಲ ಎಂದು ಗಟ್ಟಿಯಾಗಿ ಆ ಭಾವಕ್ಕೆ ಅಲುಗಾಡದೆ ನಿಂತುಕೊಂಡಾಗ ಅಸಹನೆಯ ಆ ಹಾವಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು.
ವಾಸ್ತವವಾಗಿ ಭಾವನೆಗಳು ನಮಗೆ ಆಹ್ಲಾದಕರ ಅಥವಾ ಅಹಿತಕರವಾಗಿರುತ್ತವೆ, ನಾವು ಇಷ್ಟಪಡುವ ಅಥವಾ ಇಷ್ಟಪಡದಿರುವಿಕೆಗಳ ಪ್ರತಿಕ್ರಿಯೆಗಳಾಗಿರುತ್ತವೆ. ಸಮಾಧಾನದಿಂದ, ಸ್ಪಷ್ಟ ತಿಳುವಳಿಕೆಯ ನಿಜ ನೋಟ ಸಾಧ್ಯವಾದರೆ ಭಾವಗಳು ನಮ್ಮಲ್ಲಿ ಯಾವ ಪ್ರಚೋದನೆಯನ್ನೂ ಹುಟ್ಟಿಸಲಾರವು. ಪ್ರತಿಕ್ರಿಯೆಗಳು ಕಡಿಮೆಯಾಗುತ್ತಾ ಹೋದಂತೆ ಭಾವಗಳ ಹಿಡಿತಕ್ಕೆ ಒಳಗಾಗುವ ಸಂಭವಗಳೂ ತಪ್ಪುತ್ತಾ ಹೋಗುತ್ತವೆ.

ಈ ಅನಂತ ವಿಶ್ವದಲ್ಲಿ ನಾವು ಏನೂ ಅಲ್ಲಾ… ಒಂದು ಸಣ್ಣ ಇರುವೆಯೂ ಅಲ್ಲ, ವಿಶ್ವ ಉಗಮದ ಕತೆ ಒಂದು ಕಡೆ ಇರಲಿ, ಭೂಮಿಯ ಹುಟ್ಟಿನ ಇತಿಹಾಸವನ್ನು ತೆಗೆದುಕೊಂಡರೂ ನಮ್ಮ ಅವಧಿ ರೆಪ್ಪೆ ಮುಚ್ಚಿ ತೆಗೆಯುವಷ್ಟು ಕಾಲ ಮಾತ್ರ. ಹೀಗಿರುವಾಗ ಕ್ಷಣ ಮಿಂಚಿ ಮಾಯ ಆಗುವ ರಾಶಿರಾಶಿ ಜೀವಗಳಲ್ಲಿ ನಾನೊಂದು ಜೀವ… ಈ ಸತ್ಯವನ್ನು ಮರೆತುಬಿಟ್ಟು, ನಮ್ಮ ಮೂಗಿನ ನೇರಕ್ಕೆ ಜಗತ್ತನ್ನು ನೋಡುತ್ತೇವಲ್ಲಾ, ಈ ಹಿತಾಸಕ್ತಿಯೇ ಅಹಂಕಾರ. ತನ್ನ ಹಿತದಿಂದ ಜಗತ್ತನ್ನ ನೋಡುವುದು. ನನ್ನ ಸುಖಕ್ಕೆ ಈ ಜಗತ್ತು ಇರೋದು, ಸಂಬಂಧಗಳಿರೋದು ಅಂತ ತಿಳಿದಿದ್ದೇವೆ. ಅದೇ ದುರಾಸೆ. ಅದನ್ನೇ ಅವಿದ್ಯೆ ಎನ್ನುತ್ತಾರೆ. ಜಗತ್ತು ಹೇಗೆ ಇದೆಯೋ ಹಾಗೆ ನೋಡುವ ಸ್ಪೃಹೆ ಅಲ್ಲಿ ಇರುವುದಿಲ್ಲ. ಸ್ವಭಾವದ ಕುರುಡು ಕಣ್ಣಿಗೆ ಜಗತ್ತು ಕಾಣಿಸುವುದಿಲ್ಲಾ. ನಾವು ನಮ್ಮ ಸ್ವಭಾವದ ಕಲ್ಪನೆಗಳ ಮೂಲಕವೇ ಎಲ್ಲವನ್ನೂ, ಎಲ್ಲರನ್ನೂ ಅಳೆಯುತ್ತಿರುತ್ತೇವೆ… ಆದ್ದರಿಂದ ಈ ಭಾವಗಳೆಲ್ಲಾ ಜೀವ ಪಡೆದು ಜಗತ್ತನ್ನು ಸಿನೆಮಾದ ಥರ ತೋರಿಸುತ್ತಿರುತ್ತವೆ.

ಚಿತ್ತದಲ್ಲಿ ನಡೆಯುವ ಈ ಭಾವದ ನಾಟಕವನ್ನೇ ನಿಜವಾದ ನಾಟಕ ಅಂತ ನಂಬಿಕೊಳ್ಳುವುದರಿಂದ, ಆ ನಾಟಕದಲ್ಲೇ ಪಾತ್ರಗಳಾಗಿ ಸಿಕ್ಕಿಹಾಕಿಕೊಂಡು, ಭಾವಗಳು ಕುಣಿಸಿದಂತೆ ಕುಣಿಯುತ್ತಾ, ಕೊಳೆಯುತ್ತಾ, ಆ ನಾಟಕದಲ್ಲೇ ಜೀತ ಮಾಡಿಕೊಂಡು ಬಿದ್ದುಬಿಟ್ಟಿದ್ದೇವೆ… ಹೇಗೆ ಅಂತಿರಾ? ಮನಸ್ಸಲ್ಲಿ ಹುಟ್ಟು ಪಡೆಯುವುದೆಲ್ಲವೂ ಹಿಂದಿನದೇ. ಕುತ್ಸಿತ ಭಾವ ಅಂದರೆ ಹಿಂದಿನದು, ದ್ವೇಷ ಭಾವ ಅಂದ್ರೆ ಹಿಂದಿನದು, ಅಸೂಯೆ ಭಾವ ಅಂದ್ರೆ ಹಿಂದಿನದು, ವಿಷಯವಾಂಛಿತ ಭಾವ ಅಂದ್ರೆ ಹಿಂದಿನದು, ಅತೃಪ್ತ ಭಾವ ಅಂದ್ರೆ ಹಿಂದಿನದು… ಎಲ್ಲವನ್ನೂ ಅನುಭವಿಸಿ ಜೋಪಾನವಾಗಿ ಶೇಖರಿಸಿ ಇಟ್ಟುಕೊಂಡಿರುವಂಥದು. ಮನಸ್ಸು ಈ ಹಿಂದಿನದ್ದನ್ನೇ ಎತ್ತಿಕೊಂಡು ಹೊತ್ತುಕೊಂಡು ಮುಂದೆ ಹಾಕಿಕೊಳ್ಳುತ್ತಾ ಹೋಗುತ್ತಿದೆ, ನಂಬಿದ ಭಾವಗಳನ್ನೇ ಸಾಧಿಸುವುದರಲ್ಲೇ ಬಿಜಿಯಾಗಿ ಮುಳುಗಿಬಿಟ್ಟಿದೆ.
ಆದರೆ ಅದಕ್ಕಿಂತ ಸ್ವಲ್ಪ ಒಳಗಿಳಿದರೆ, ನಮ್ಮ ನಿಜವಾದ ವಸ್ತುಸ್ಥಿತಿ ಪ್ರಾಣಕ್ಕೆ ಬಂದರೆ ಅಲ್ಲಿ ಹಿಂದಿನದೆಲ್ಲವೂ ಶೂನ್ಯವಾಗುತ್ತಾ ಇದೆ. ಅಲ್ಲಿ ಯಾರೂ ನಗುತ್ತಿಲ್ಲ, ಯಾರೂ ಅಳುತ್ತಿಲ್ಲ, ಯಾರೂ ಸೋಲುತ್ತಿಲ್ಲಾ, ಯಾರೂ ಗೆಲ್ಲುತ್ತಿಲ್ಲ, ಧನ್ಯತಾ ಭಾವಗಳೇನೂ ಅಲ್ಲಿಲ್ಲ, ವಿಧೇಯತೆ ಅದಕ್ಕೆ ಗೊತ್ತಿಲ್ಲ, ಅಹಂಕಾರವಿಲ್ಲ ಅಲ್ಲಿ, ಅದಕ್ಕೆ ಯಾವ ಅಧಿಕಾರವೂ ಇಲ್ಲ, ಯಾವ ಅವಮಾನಗಳೂ ಅದಕ್ಕಾಗುವುದಿಲ್ಲ, ತೃಪ್ತಿ- ಅತೃಪ್ತಿಗಳೆಂದರೇನೆಂದು ಅದು ತಿಳಿಯದು, ಯಾವ ಕುಚೋದ್ಯವನ್ನೂ ಅದು ಮಾಡುತ್ತಿಲ್ಲ … ಕೇವಲ ಅದು ಇದೆ ಅಷ್ಟೇ, ಇದೆ ಎನ್ನುವುದಕ್ಕಿಂತ ಆಗುವಿಕೆಯ ಅನಂತತೆಯಲ್ಲಿ ಅದೂ ಆಗುತ್ತಾ ಇದೆ… ಹಿಂದಿನ ಗತಿಯನ್ನ ಶೂನ್ಯಗೊಳಿಸಿಕೊಳ್ಳುತ್ತಾ … ಆ ಆಗುವಿಕೆಯಲ್ಲಿ ಪ್ರತಿಕ್ಷಣ ನಿತ್ಯನೂತನತೆ ಇದೆ… ಅಂದರೆ ಹಿಂದಿನ ಯಾವುದೂ ಅಲ್ಲಿ ಹುಟ್ಟುತ್ತಿಲ್ಲ, ಪುನರಪಿಯ ಪ್ರಶ್ನೆಯೇ ಇಲ್ಲ… ಆದ್ದರಿಂದ ಪ್ರತಿಕ್ಷಣವೂ ನಿತ್ಯ ನೂತನವಾಗಿದೆ. ಅದೇ ಅಲ್ಲಮರು ಕರೆಯುವ ‘ಬೆಳಗಿನೊಳಗಣ ಶೃಂಗಾರ’. ಕಣ್ಣ ಮುಂದಿರುವ, ಕೈಯಲ್ಲಿರುವ ನಮ್ಮದೇ ಪ್ರಾಣದ ಶೃಂಗಾರ, ನಿತ್ಯನೂತನವಾಗಿ ಬೆಳಗುತ್ತಿರುವ ಶೃಂಗಾರ… ಕಂಗಳಲ್ಲಿನ ಕತ್ತಲೆಯ ಕಾರಣದಿಂದಾಗಿ, ಭಾವಜಾಲದಿಂದ ಹೊರಬರಲಾಗದೇ ಒದ್ದಾಡುತ್ತಿರುವುದರಿಂದಾಗಿ ಅದನ್ನು ಕಾಣದಾಗದೇ ಹೋಯಿತಲ್ಲಾ… ತನ್ನನ್ನು ಗಮನಿಸುವ ಯೋಗ್ಯತೆ ಯಾರಿಗೂ ಇಲ್ಲದಾಯಿತಲ್ಲಾ ಎಂದು ಅದು ಬಳಲುತ್ತಿದೆ ಎನ್ನುತ್ತಾರೆ ಅಲ್ಲಮರು!

ಕಲ್ಪಿತವ ಕಳೆದ, ಅಕಲ್ಪಿತವ ತಿಳುಹಿದ,
ಮನವ ಮಾಣಿಸಿ ಘನವ ನೆಲೆಗೊಳಿಸಿದ.
ತನುವ ಕೆಡಿಸಿ, ಅನುವ ಸ್ಥಾಪ್ಯವ ಮಾಡಿ,
ಅಂತರಂಗದಲ್ಲಿ ಮಹಾಜ್ಞಾನವ ತುಂಬಿದ,
ಬಹಿರಂಗದಲ್ಲಿ ಸದಾಚಾರವ ನೆಲೆಗೊಳಿಸಿದ.
ನಿಮ್ಮ ನಿಲವನೆನಗೆ ಒರೆದೊರೆದು ಹೇಳಿ ತೋರಿಸಿ,
ಎನ್ನ ನಿಮ್ಮ ಶ್ರೀಪಾದಕ್ಕೆ ಯೋಗ್ಯನ ಮಾಡಿದ.
ಕೂಡಲಸಂಗಮದೇವಯ್ಯಾ, ನಿಮ್ಮ ಮಹಾಮನೆಯಲ್ಲಿ
ಮಡಿವಾಳನೂ ನಾನೂ ಕೂಡಿ ಸುಖದಲ್ಲಿ ಇದ್ದೆವಯ್ಯಾ.

ಬಸವಣ್ಣನವರು ದಯೆಯೇ ಧರ್ಮದ ಮೂಲ ಎಂದರು. ಯಾವುದು ಆ ದಯೆ? ಈ ಜಗತ್ತಲ್ಲಿರುವುದು ನಾನೊಬ್ಬಳೇ ಅಲ್ಲಾ, ನಾವೆಲ್ಲಾ ಒಟ್ಟಿಗೆ ಇದ್ದೇವಿ, ನಾವೆಲ್ಲಾ ಸಹಜೀವಿಗಳು ಎನ್ನುವ ಮಹಾಸತ್ಯದಿಂದ ಬರುವ ಮಹಾಭಾವವೇ ದಯೆ. ಅದೇ ಸದ್ಭಾವ. ಚಿತ್ತದ ಉತ್ಪನ್ನಗಳಾದ ಚಿದ್ಭಾವಗಳು ನಿಜವೋ ಸುಳ್ಳೋ ಎಂದು ವಿವೇಚನೆ, ವಿಮರ್ಶೆ ಮಾಡಿ ತೋರಿಸುವ ಭಾವವಿದು. ಸದ್ಭಾವವೆಂದರೆ ನಿರ್ಭಾವುಕತೆಯಲ್ಲ, ಪ್ರಜ್ಞಾಪೂರ್ವಕವಾಗಿ ಬದುಕುವುದು. ಅದೇ ಪ್ರಕೃತಿ ಧರ್ಮ- ಅದೇ ವಿಶ್ವಧರ್ಮ. ಇದು ಸ್ವಹಿತಾಸಕ್ತಿ ಇರುವ ಭಾವಗಳ ಕುರುಡು ಕಣ್ಣಿಗೆ ಕಾಣುವುದಿಲ್ಲ. ನನ್ನಂತೆ ಎಲ್ಲ ಜೀವಿಗಳೂ ಅಸಹಾಯಕವಾಗಿವೆ. ಅವೂ ನನ್ನೊಂದಿಗೆ ನನ್ನಂತೆಯೇ ಬದುಕುತ್ತಿವೆ, ನಾವೆಲ್ಲಾ ಒಂದೇ ಕುಟುಂಬ ಎನ್ನುವುದನ್ನು ಅರಿತುಕೊಳ್ಳಬೇಕಾದರೆ ಭಾವಗಳಿಂದ ಸಾಧ್ಯವಿಲ್ಲ… ಭಾವಗಳನ್ನ ದಾಟಿಕೊಳ್ಳಲೇಬೇಕು. ಹಾಗೆ ದಾಟಿಕೊಳ್ಳಲು ನನ್ನ ಹಿತಾಸಕ್ತಿಗನುಗುಣವಾಗಿ ಈ ಜಗತ್ತು ಇಲ್ಲವೆಂಬ ಸತ್ಯ ದೃಢವಾಗಬೇಕು… ನಮ್ಮ ಹಿತಾಸಕ್ತಿಗಳೆಲ್ಲವೂ ಪ್ರಕೃತಿಗೆ ವಿರೋಧವಾಗಿ ಇರುವುದರಿಂದ ನಮಗೆ ಜೀವನದ ಮಹದಾನಂದ ಗೊತ್ತಾಗುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ನಮ್ಮ ಮುಂದೆ ನಾವೇ ದೆವ್ವದಂತೆ ನಿಂತುಬಿಟ್ಟಿರುತ್ತೇವೆ!
“ತನುಗುಣನಾಸ್ತಿ ಮನಗುಣನಾಸ್ತಿ ಧನಗುಣನಾಸ್ತಿಯಾದಡೇನು? ಭಾವನಾಸ್ತಿಯಾಗಿರಬೇಕು. ಭಾವನಾಸ್ತಿಯಾದಲ್ಲದೆ ಅರಿವು ನೆಲೆಗೊಳ್ಳದು…” ಎಲ್ಲಿಯವರೆಗೆ ಭಾವಗಳು ಹೋಗುವುದಿಲ್ಲವೋ ಅಲ್ಲಿಯವರೆಗೂ ನಮ್ಮ ನೋಟಗಳು ನಷ್ಟವಾಗುವುದಿಲ್ಲ. ಭ್ರಮೆಗಳು ದೂರವಾಗುವುದಿಲ್ಲ. ಈ ಜಗತ್ತು ಯಾವ ನಿಯಮದ ಮೂಲಕ ನಡೆಯುತ್ತಿದೆ, ಇದರ ವಿಸ್ಮಯ ಎಂಥದು, ಇದರ ಅಗಾಧತೆ ಏನು ಎಂದು ಗೊತ್ತಾಗುವುದಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದ ಅರಿವು ನಮ್ಮಲ್ಲಿ ನೆಲೆಗೊಳ್ಳಲು ಭಾವನಾಸ್ತಿಯಾಗಲೇ ಬೇಕು.

Previous post ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
Next post ಮರೆತೆ…
ಮರೆತೆ…

Related Posts

‘ಅಲ್ಲಮ’ ಎಂಬ ಹೆಸರು
Share:
Articles

‘ಅಲ್ಲಮ’ ಎಂಬ ಹೆಸರು

August 6, 2022 ಡಾ. ಎನ್.ಜಿ ಮಹಾದೇವಪ್ಪ
ಅಲ್ಲಮರ ವಚನಗಳಂತೆ ಅವರ ಹೆಸರೂ ವಿಚಿತ್ರ. ಅದರ ಅರ್ಥದ ಕುರಿತು ಅನೇಕ ಹೆಸರಾಂತ ಸಂಶೋಧಕರು ಚರ್ಚಿಸಿದ್ದಾರೆ. ಅಲ್ಲಮರ ತಂದೆತಾಯಿಗಳು ಮಗುವಿಗೆ ಅಲ್ಲಯ್ಯ ಎಂಬ ಹೆಸರಿಟ್ಟರು ಎಂದು...
ಕಾಯವೇ ಕೈಲಾಸ
Share:
Articles

ಕಾಯವೇ ಕೈಲಾಸ

April 29, 2018 ಕೆ.ಆರ್ ಮಂಗಳಾ
ದೇಹಕ್ಕೂ ಮತ್ತು ನನಗೂ ಸಂಬಂಧವೇನು? ಇಂಥದೊಂದು ಪ್ರಶ್ನೆ ಯಾರಾದರೂ ಕೇಳಿದರೆ ತಲೆ ಸರಿ ಇದೆಯೇ? ಎಂಬ ಮರುಪ್ರಶ್ನೆ ಬಾಣದಂತೆ ತೂರಿ ಬರುವುದು ನಿಶ್ಚಿತ. ಆದರೆ ಆಧ್ಯಾತ್ಮ ಲೋಕದಲ್ಲಿ...

Comments 21

  1. Dr Shashikant Pattan
    Jul 5, 2022 Reply

    ಮಂಗಳ ತಮ್ಮ ಲೇಖನ ಓದಿದೆ ತಮ್ಮ ಭಾಷಾ ಪ್ರೌಢಿಮೆ ಸಾಂದರ್ಭಿಕ ವಚನಗಳ ಮೂಲಕ ಅತ್ಯಂತ ವಿದ್ವತ್ವ ಪೂರ್ಣ ಚಿಂತನೆ ಮೂಡಿ ಬಂದಿದೆ. ತಮ್ಮ ಲೇಖನ ಓದಿಸಿಕೊಂಡು ಹೋಗುವ ಭಾವ ತೀವ್ರತೆ ಹೊಂದಿದ ಅಷ್ಟೆ ತುಡಿತ ಮಿಡಿತ ಸಮಾಗಮ ನೀವೊಬ್ಬ ಪ್ರಬುದ್ಧ ಲೇಖಕಿ ಭಾವ ನಿರಸನ ಮತ್ತು ಭ್ರಮೆ ಭ್ರಾಂತಿ ಮುಖವಾಡಗಳ ಕಳಚುವ ತಮ್ಮ ಕಾಳಜಿಗೆ ಧನ್ಯವಾದ.

  2. ರಾಧಾ ನಿರಂಜನ್, ಚಾಮರಾಜನಗರ
    Jul 7, 2022 Reply

    ಲೇಖನ ಬಹಳ ಉತ್ತಮವಾಗಿದೆ, ಭಾವನೆಗಳ ಗೂಡಾಗಿದೆ ಈ ಜೀವನ. ಭಾವಗಳು ಎಷ್ಟು ಇವೇಂತ ಅವುಗಳನ್ನು ನೀವು ಲಿಸ್ಟ್ ಮಾಡಿರುವುದನ್ನ ಕಂಡು ನಿಜ ಬೆರಗಾದೆ. ಓದುಗರಲ್ಲಿ ಕುತೂಹಲಮೂಡಿಸುವ ನಿಮ್ಮ ಬರವಣಿಗೆಯ ಶೈಲಿ ಬಹಳ ಚೆನ್ನಾಗಿದೆ, ನಮ್ಮೊಳಗಿರುವ ಭಾವನೆಗಳು ಸ್ವಷ್ಟವಾಗಿ ಗೋಚರ ಆಗ್ತಾ ಇವೆ. ಯಾವುದು ಭಾವನೆ, ಯಾವುದು ಭ್ರಮೆ ಅನ್ನುವ ವಾಸ್ತವತೆಗೆ ಹಿಡಿದ ಕನ್ನಡಿಯಂತೆ ಬರಹ ಸುಂದರವಾಗಿದೆ. ಶರಣಾರ್ಥಿಗಳು.

  3. Dr. K. S Mallesh, Mysuru
    Jul 7, 2022 Reply

    I am reading your article. Very detailed and you have quoted appropriately the vachanas. Also the narration appears continuous and more natural. I haven’t completed it yet but I feel there are different types of “feelings” like the “good bad and ugly” and most of them are as you infer have negative effects. Rarely we enjoy and regularly we suffer. You seem to have dissected the origin, nature, effects of mainly those feelings that cause negative effects. Of course you make passing remarks to the good ones but may be, as you like all of us, because of the severe and terrible experience the so called “heavyweight” bad feelings bring to us, quickly turn towards the bad feelings only.
    Should we have feelings or not. I would be a dead rock without them. I welcome them and perhaps as you possibly suggest later, if we trod along the paths sharanas have walked, we also will find a solution for harmonious existence of our body, mind and feelings.
    Your article also taught me new words. Really I rediscovered Mangala madam after a long time….
    Just now I completed reading. You have ended it meaningfully. Thanks again for a nice article.

  4. ಪೆರೂರು ಜಾರು, ಉಡುಪಿ
    Jul 7, 2022 Reply

    ಭಾವದಲ್ಲಿ ಭ್ರಮಿತರಾದವರದೇ ಇಂದು ಬಹುಮತ. ಅದಕ್ಕಾಗಿ ಭ್ರಮೆಗಳನ್ನು ತುಂಬಿ ಅಧಿಕಾರ ಹಿಡಿಯುವವರು ಎಲ್ಲ ಕಡೆ ತುಂಬಿ ಹೋಗಿದ್ದಾರೆ.

  5. ಸುನಂದಾ ರಾಚಣ್ಣ
    Jul 10, 2022 Reply

    ಒಮ್ಮೆ ಓದಿದೆ, ಮತ್ತೊಮ್ಮೆ ಓದಿದೆ… ತಲೆಯಲ್ಲಿ ಗುಂಗು… ಏನಿದು ಎನ್ನುವ ಪ್ರಶ್ನೆ… ಓದುತ್ತಾ ಹೋದಂತೆ ನನ್ನೊಳಗಿನ ಭಾವಗಳ ದೊಡ್ಡ ಕಗ್ಗಂಟಿನ ಮೂಟೆ ಬಿಚ್ಚುತ್ತಾ ಹೋಗಿ, ಭಾವನೆಗಳಲ್ಲಿ ಬದುಕುವ ನನ್ನ ಮನಸ್ಸಿಗೆ ಹೊಸ ದಾರಿ ಸಿಕ್ಕಿತ್ತು. ಭಾವನೆ ನಿಜವೆಂದು ನಂಬಿದ ನನಗೆ ನಿನ್ನ ಲೇಖನ ಚಿತ್ತಕ್ಕೆ ಒರೆಗಲ್ಲಾಗಿ ಭಾವಗಳಿಂದ ಹೊರಬರಲು ಪ್ರಯತ್ನಿಸುವೆ. ಎರಡು ದಿನಗಳಿಂದ ಇದರ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದೆ… ಈಗ ಸ್ವಲ್ಪ ಹಗುರೆನಿಸಿ ನನಗೆ ಅನಿಸಿದ್ದನ್ನು ಹೇಳಿರುವೆ, ಧನ್ಯವಾದಗಳು ಮಗಳೇ…

  6. Dr. Panchakshari h v
    Jul 12, 2022 Reply

    ಭಾವದ ಮರಡಯಲ್ಲಡಗಿದ ಭ್ರಮೆಯನ್ನು ಅಳಿದರೆ ಉಳಿವುದು ಬಯಲು ಎಂದು ಬಹಳ ಅರ್ಥಪೂರ್ಣವಾಗಿ ಲೇಖಿಸಿದ್ದೀರಿ.

  7. Chinmayi
    Jul 14, 2022 Reply

    It is really mind opener kind of article. feeling like all these days we are struggling for false illusions. still lot many confusions on about our thoughts so called bhavane.
    need bit more discussions on this mam, so that i will get clarified
    thank you for this kind of thought provoking article

  8. ಬಸವರಾಜ ಹಂಡಿ
    Jul 16, 2022 Reply

    ಇದು ಅಂತಿಂತ ಲೇಖನ ಅಲ್ಲ. ಬರೆ ಓದಿ ಬಿಡುವ ಲೇಖನ ಅಲ್ಲವೇ ಅಲ್ಲ. ಇದು ನಮ್ಮ ಮನಸ್ಸಿನ ಮೇಲೆ ಸರ್ಜರಿ ಮಾಡುವ ಒಂದು ಕ್ರಿಯೆ. ಮನಸ್ಸಿನ ಆಳಕ್ಕೆ ಇಳಿದು ಎಳೆ ಎಳೆ ಆಗಿ ಮನಸನ್ನು ಕಟ್ ಮಾಡಿ ಅದರಲ್ಲಿ ಅಡಗಿಕೊಂಡಿರುವ ಭಾವನೆಗಳನ್ನು ಹಾಗು ತಪ್ಪು ಗ್ರಹಿಕೆಗಳಿಂದ ಉಂಟಾದ ನಂಬಿಕೆಗಳನ್ನು ತಗೆದು ಹಾಕುವ ಕೆಲಸ. ಮಂಗಳಾ ಅವರು ಮೊದಲು ಮನಸ್ಸು, ಮನಸ್ಸಿನಲ್ಲಿ ಉಂಟಾಗುವ ಭಾವನೆಗಳು ಬಗ್ಗೆ ಬಹಳ ಸವಿಸ್ತಾರವಾಗಿ ಹೇಳುತ್ತಾರೆ. ರೋಗ ಮತ್ತು ರೋಗದ ಲಕ್ಷಣಗಳ ಬಗ್ಗೆ ಬರೆಯುತ್ತಾರೆ. ನಂತರ ಈ ರೋಗವನ್ನು ಹೇಗೆ ಹೋಗಾಲಾಡಿಸಿ ಕೊಳ್ಳಬೇಕು( ಚಿಕಿತ್ಸೆ) ಬಗ್ಗೆ ಹೇಳುತ್ತಾರೆ. ಇದು ನಡೆಯುವ ದಾರಿ. ಮಂಗಳಾ ಅವರು ನಡೆಯುವ ದಾರಿ ಬಗ್ಗೆ ಹೇಳುತ್ತಾರೆ. ಈ ದಾರಿಯಲ್ಲಿ ನಾವು ನಡೆಯಲೇ ಬೇಕು. ಬಹಳ ಪ್ರಸ್ತುತವಾದ ವಚನಗಳನ್ನು ಲೇಖನದಲ್ಲಿ ಉಲ್ಲೇಕ ಮಾಡಿದ್ದಾರೆ.
    ಲೇಖನದಲ್ಲಿ ವಚನಗಳ ಉಲ್ಲೇಖವನ್ನು ನೋಡಿದರೆ, 12ನೆಯ ಶತಮಾನದಲ್ಲಿ ನಡೆದ ಶರಣ ಕ್ರಾಂತಿಯ ಹಾಗು ವಚನಗಳ ಮೂಲ ಆಶಯ ಏನಾಗಿತ್ತು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಸ್ವಾಸ್ತವಾದ ಮನಸ್ಸು ಹಾಗು ಭಾವನೆಗಳ ರಹಿತ (ಪ್ರಜ್ಞೆ) ಜೀವನವನ್ನು ಜೀವಿಸುವುದು ಶರಣರ ಆಶಯವಾಗಿತ್ತು. ಇನ್ನು ಬಹಳ ಬರೆಯಬೇಕು ಅಂತ ಅನಿಸುತ್ತಿದೆ. ನನಗೆ ಸರಿಯಾಗಿ ಬರೆಯಲು ಬರಲ್ಲ ಅದಕ್ಕಾಗಿ ಇಲ್ಲಿಗೆ ನಿಲ್ಲಿಸುತ್ತಿದ್ದೇನೆ.. ಮಂಗಳಾ ಶರಣೆಗೆ ಹಾಗು ಬಯಲು ತಂಡಕ್ಕೆ ಶರಣು ಶರಣಾರ್ಥಿಗಳು ಮತ್ತು ದನ್ಯವಾದಗಳು.

  9. N sivanna
    Jul 25, 2022 Reply

    What is More important is the mind set and the way one looks at the life. Feeling and doing if they go together we hardly have any problems. Pragmatic approach and taking life as it comes is the best way to lead a content life. One should not feel guilty for that one should be always straightforward. Helping who are in need of the help, being trustworthy and kind are the need of the present day life. Any deviation would certainly brings disturbed mind which your article try to make a statement. Your article should have provided more positive vibes and also how to come out of a disturbed and ascilating mind .
    I congratulate you for a wonderful write up and your control on the language and the way you analytically dissect is highly commendable. Earnestly look for many more such socially relevant themes.

  10. ವಿಜಯಕುಮಾರ್ ಕಮ್ಮಾರ್
    Jul 25, 2022 Reply

    ಮನದಾಳಕ್ಕೆ ಇಳಿಯುವಂಥ ಲೇಖನ. ಇನ್ನೂ ಎರಡು ಸಲ ಓದಬೇಕನಿಸುತ್ತೆ ಪೂರ್ತಿ ಅರ್ಥ ಮಾಡಕೊಳ್ಳಾಕ. ನಾನು ಓದಿದ ನಿಮ್ಮ ಲೇಖನಗಳಲ್ಲೆ ಉತ್ತಮದಲ್ಲಿ ಅತ್ಯುತ್ತಮ ಲೇಖನ.
    ಪ್ರಥಮಾರ್ಧ ಋಣಾತ್ಮಕ ಚಿಂತನೆಯಿಂದ ಪ್ರಾರಂಭವಾದರೂ ವಚನಗಳೊಂದಿಗೆ ವಿಶ್ಲೇಷಣೆ ಮಾಡುವಾಗ ಧನಾತ್ಮಕ ಚಿಂತನೆ ಮೇಲುಗೈ ಸಾಧಿಸಿದೆ. ಒಟ್ಟಾರೆ ಭಾವನೆಗಳ ಲೋಕಕ್ಕೆ ಸೀಮಾತೀತವಾಗಿ ಕರೆದುಕೊಂಡು ಹೋಗಿ ಪ್ರಯಾಣ ಮಾಡಿಸಿದ್ದೀರಿ.
    ಅಭಿನಂದನೆಗಳು. 🙏🙏

  11. ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ
    Jul 25, 2022 Reply

    ಈ. ಲೇಖನ ತುಂಬಾ ಚೆನ್ನಾಗಿದೆ. ಪ್ರತಿ-ಪ್ರತಿ ಕ್ಷಣಗಳು ಮನುಷ್ಯನ ಮನಸ್ಸು ಹೇಗೆ ಯೋಚಿಸುತ್ತದೆ ಎನ್ನುವುದನ್ನು ಎಳೆಎಳೆಯಾಗಿ ಬರೆದಂತಿದೆ.

  12. ಸಂಘತೇಜ ಬಂತೇಜಿ
    Jul 26, 2022 Reply

    ಭಾವದಲ್ಲಿ ಭ್ರಮಿತವಾದವರು ಅದ್ಭುತವಾದ ಬರಹ. ನೆನ್ನೆ ಸುಮಾರು 12 ಗಂಟೆ ಮಧ್ಯರಾತ್ರಿಯಲ್ಲಿ ನಾನು ಮತ್ತು ನನ್ನ ಸ್ನೇಹಿತ ಇಬ್ಬರೂ ಜೊತೆಯಾಗಿ ಈ ಬರಹ ಓದಿದ್ದೇವೆ. ಆತ ಈ ಬರಹದ ಪ್ರತಿಯೊಂದು ಅಂಶಗಳನ್ನು ಇದು ನನ್ನೊಳಗೆ ಸಂಭವಿಸಿದ್ದ, ಸಂಭವಿಸಿರುವಂತಹ ಘಟನೆಗಳು ಎಂದು ನೆನೆದಿರುತ್ತಾನೆ. ನಿಜಕ್ಕೂ ಇದು ಒಂದು *ಮನೋವೈಜ್ಞಾನಿಕ* ಬರಹವಾಗಿದ್ದು ಮನೋ ನಿರಸನ ಎಂಬುದು ಅತ್ಯದ್ಭುತವಾಗಿ ತಿಳಿಸಲ್ಪಟ್ಟಿದೆ.

  13. ಅಂಬಾರಾಯ ಬಿರಾದಾರ
    Jul 26, 2022 Reply

    ವಿಷಯ ವಿವರಣೆ ಚನ್ನಾಗಿದೆ, ಇದುವರೆಗಿನ
    ಉತ್ಕೃಷ್ಟವಾದ ಲೇಖನ. ಅಭಿನಂದನೆಗಳು.

  14. Gopala Narayanappa
    Jul 26, 2022 Reply

    ಉತ್ತಮ ಬರಹ, ಹಲವಾರು ಬಾರಿ ಓದಿ ಮನನ ಮಾಡಿಕೊಂಡು ನಡೆ ನುಡಿಯಲ್ಲಿ ಅಳವಡಡಿಸಿಕೊಳ್ಳಬಹುದಾದ ಲೇಖನ, ಧನ್ಯವಾದಗಳು.💐🙏🏻

  15. ಮಾತೆ ಬಸವಾಂಜಲಿ, ಮೈಸೂರು
    Jul 31, 2022 Reply

    ಎಂಥ ಅದ್ಭುತ ಲೇಖನ ಅಕ್ಕಾ, ಶರಣು ಶರಣಾರ್ಥಿಗಳು.

  16. Pro. Chandrashekhar nangali
    Aug 3, 2022 Reply

    ಭಾವನಾಸ್ತಿ ಎನ್ನುವುದಕ್ಕಿಂತ ಬುದ್ಧಿ ಮತ್ತು ಭಾವಗಳ ನಡುವಣ ಮಧ್ಯಮಮಾರ್ಗವನ್ನು ಅನುರಿಸುವುದು ಮಿಗಿಲು. ಇದು ಆರೋಗ್ಯಕರ ಮಾನಸಿಕದೂರ. ನಿಮ್ಮ ಲೇಖನ ಪ್ರಬುದ್ಧವಾಗಿದೆ😍🖐

  17. ಪ್ರಕಾಶ್ ದೇಶಮುಖ್, ಬೀದರ್
    Aug 3, 2022 Reply

    ಅಕ್ಕಾ, ಭಾವವನ್ನು ಭ್ರಮೆಗೆ ನೇರವಾಗಿ ಹೋಲಿಸಿದ್ದೀರಿ. ಇದು ಕ್ಷಣಿಕ, ಕಲ್ಪನೆ, ನಶೆ ಅಂತ ಹೇಳಿದ್ದೀರಿ. ಭಾವಾಶ್ರಯವೇ ಪೂರ್ವಾಶ್ರಯ ಎಂತಲೂ ಬರೆದಿದ್ದೀರಿ. ಸಂಗ್ರಹ ಮಾಡಿಕೊಂಡ ಭಾವಗಳೆಲ್ಲಾ ದೃಷ್ಟಿಕೋನಗಳಾಗುತ್ತವೆ ಎಂದಿದ್ದೀರಿ. ಸಂಗ್ರಹವಾದ ಎಲ್ಲಾ ಭಾವಗಳೂ ದೃಷ್ಟಿಕೋನಗಳಾಗುತ್ತವೆಯೇ? ಭಕ್ತಿ ಅನ್ನುವುದು ಭಾವವಲ್ಲವೇ? ಭಾವ ಇಲ್ಲದೆ ಜೀವವಿಲ್ಲ, ಭಾವಗಳಿಲ್ಲದೆ ಬದುಕೋಕೆ ಆಗೋದಿಲ್ಲಾ. ಸದ್ಭಾವ ಬೇಕು ಅನ್ನೋದನ್ನು ಕೊನೆಗೆ ಹೇಳಿದ್ದೀರಿ. ಆದರೆ ಇನ್ನೂ ಸ್ವಲ್ಪ ವಿವರವಾಗಿ ಬರೆದಿದ್ದರೆ ಚನ್ನಾಗಿತ್ತೇನೋ… ಲೇಖನ ಓದಿದ ಮೇಲೆ ನನ್ನ ಮನಸ್ಸು, ಬುದ್ಧಿ ಚುರುಕಾದವು. ರಾತ್ರಿಯೆಲ್ಲಾ ಓದಿ ಒಂದಷ್ಟು ನೋಟ್ಸ್ ಮಾಡಿಕೊಂಡೆ. ವಾಕ್ಯಗಳ ಜೋಡಣೆ, ವಚನಗಳ ಆಯ್ಕೆ, ವ್ಯಾಖ್ಯಾನ ತುಂಬಾ ಚನ್ನಾಗಿವೆ. ಇಂತಹ ಅಮೂಲ್ಯ ವಿಚಾರಗಳನ್ನು ನಾನೂ ನಾಲ್ಕಾರು ಜನರೊಂದಿಗೆ ಖಂಡಿತವಾಗಿಯೂ ಹಂಚಿಕೊಳ್ಳುತ್ತೇನೆ ಅಕ್ಕಾ, ಧನ್ಯವಾದಗಳು.

  18. ಮಹಾದೇವ
    Aug 4, 2022 Reply

    ಭಾವಗಳ ಕಗ್ಗಂಟನ್ನು ಎಷ್ಟು ಸೊಗಸಾಗಿ ಹಲಸಿನತೊಳೆ ಬಿಡಿಸಿದಂತೆ ಬಿಡಿಸಿದ್ದೀರಿ. ನೀವು ಯುವಕರ ಮುಂದೆ ಕೂತು ನಿರರ್ಗಳ ಮಾತಾಡುವಂತಾಗಬೇಕು. ಅವರು ಕೇಳುವ ಪ್ರಶ್ನೆಗಳಿಗೆ ಭಾವಲೋಕವನ್ನು ವಿಸ್ತರಿಸಬಲ್ಲ ಮತ್ತು ವಚನಗಳ ಹಿನ್ನೆಲೆಯಲ್ಲಿ ಇಂದಿನ ಯುವ ಸಮುದಾಯಕ್ಕೆ ಪ್ರೇರಣೆ ಕೊಡಬಲ್ಲ ಶಕ್ತಿ ನಿಮಗಿದೆ ಮೇಡಮ್…. ಓದಿ ಮನಸ್ಸು ನಿರುಮ್ಮಳಾಯ್ತು.

  19. ಬಸವರಾಜ. ಗೂ. ಸೂಳಿಭಾವಿ.
    Aug 9, 2022 Reply

    ಲೇಖನ ಬಹಳ ಸುಂದರವಾಗಿ ಮೂಡಿಬಂದಿದೆ. “ಬಸವಾದಿಶರಣರ ವಚನಗಳು” ಜೀವನದ ಎಲ್ಲ ಸಮಸ್ಯೆಗಳಿಗೂ, ಸಂಪೂರ್ಣ ಪರಿಹಾರ ಎಂದು ತಮ್ಮ ಲೇಖನಗಳ ಮೂಲಕ ಸಿದ್ಧ ಮಾಡಿರುವಿರಿ.
    “ಎನ್ನಂತೆ ಪರರು” ಎಂದು ತಿಳಿದು, ಶರಣಭಾವದಿಂದ ನಡೆದರೆ, ಜಗತ್ತೇ ಸುಂದರಮಯ. ಸಂತೋಷ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ, ಸಮಚಿತ್ತದಿಂದ ಪ್ರತಿ ಕ್ಷಣವನ್ನು ಪ್ರಸಾದವೆಂದು ತಿಳಿದು, ನಡೆಯಬೇಕು.

  20. Sharan
    Sep 9, 2022 Reply

    ಉತ್ಕಷ್ಟವಾದ ಲೇಖನ
    ಭಾವದ ಭಾವ ಮನದ ದುಂದುಗ ದುಗಡವನ್ನ ವಚನಗಳ ಮುಖೇನ ವಿವರಿಸಿದ್ದಿರಿ.
    ಶರಣು

  21. Shiddalingesh. Nashi. Haveri
    Sep 18, 2022 Reply

    ಭಾವದಲ್ಲಿ ಭ್ರಮಿತರು ವಿಷಯದ ಆಳಕ್ಕೆ ಇಳಿದಂತೆ ನಮ್ಮೊಳಗಿನ ಭಾವ ಭ್ರಮೆಗಳು ನಮ್ಮ ವಿವಿಧ ಮುಖವಾಡಗಳನ್ನ ಕಳಚುತ್ತಾ,ಸಂದರ್ಭಕ್ಕೆ ತಕ್ಕಂತೆ ನಾವು ವರ್ತಿಸುವ ನಾಟಕೀಯ ಗುಣಗಳು ನಮ್ಮನ್ನೇ ನಾಚಿಸಿ, ಆ ಭಾವಗುಣಗಳು ನಮ್ಮ ಕಣ್ಮುಂದೆ ನಮ್ಮ ಸದ್ಯದ ಸ್ಥಿತಿಯನ್ನ ತೋರಿಸಿ ಗೇಲಿ ಮಾಡ್ತಿದಾವೆ ಅಂಥಾ ಅನ್ನಿಸ್ತಿದೆ. ಇದು ಒಂದು ರೀತಿಯ ನಮ್ಮ ಬಾಹ್ಯ ಡಂಬಾಚಾರ, ಮನವರಿಯದ ಕಳ್ಳತನವಿಲ್ಲಾ ಎನ್ನುವುದನ್ನ ಶರಣರ ವಚನಗಳ ಮುಖೇನ ವಿಶ್ಲೇಷಸಿದ್ದೀರಿ ತಮಗೆ ಅನಂತ 🙏🙏🙏ಗಳು

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
February 7, 2021
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ಮಾತು ಮಾಯೆ
ಮಾತು ಮಾಯೆ
July 4, 2021
ಹಿರಿಯರ ಹಾದಿ…
ಹಿರಿಯರ ಹಾದಿ…
July 4, 2022
ಅಂದು-ಇಂದು
ಅಂದು-ಇಂದು
December 8, 2021
Copyright © 2023 Bayalu