Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವೇ ತೆತ್ತಿಗನಾದ
Share:
Articles April 29, 2018 ಕೆ.ಆರ್ ಮಂಗಳಾ

ಗುರುವೇ ತೆತ್ತಿಗನಾದ

ಜಾಗತಿಕ ಇತಿಹಾಸದಲ್ಲಿಯೇ ಹನ್ನೆರಡನೆಯ ಶತಮಾನ ಪ್ರಬುದ್ಧ ಚಿಂತನೆಗಳು ನಡೆದ ಕಾಲಮಾನ. ಅದುವರೆಗೆ ಮನುಷ್ಯನ ಜೀವನವನ್ನೂ, ಮನಸ್ಸನ್ನೂ ಆಳುತ್ತಿದ್ದ ಕರ್ಮಠ ವ್ಯವಸ್ಥೆಗಳನ್ನು ಬುಡಸಮೇತ ಕಿತ್ತು ಹಾಕಿದ ಕಾಲಘಟ್ಟ. ಆಚಾರಗಳಲ್ಲಿ, ವಿಚಾರಗಳಲ್ಲಿ ವೈಜ್ಞಾನಿಕ ಮನೋಭಾವವನ್ನೂ, ವೈಚಾರಿಕ ದೃಷ್ಟಿಕೋನವನ್ನೂ ಹುಟ್ಟು ಹಾಕಿದ ಶರಣರ ಹಾದಿ ಇಂದಿಗೂ ಪ್ರಸ್ತುತ. ಶರಣರದು ಮುಕ್ತ ಚಿಂತನೆಯ ಮುಕ್ತ ಧರ್ಮ. ಅವರಿಗೆ ಬದುಕೇ ಒರೆಗಲ್ಲು. ವಾಸ್ತವವಾದಿಗಳಾದ ಶರಣರು ಯಾವುದೇ ವಿಷಯಗಳನ್ನು ಅಮೂರ್ತವಾಗಿ ತೇಲಿಸಿ ಬಿಟ್ಟವರಲ್ಲ. ಅವರ ವಚನಗಳಲ್ಲಿ ಕಾಣುವ ತತ್ವ ಸಿದ್ಧಾಂತಗಳನ್ನು ನಾವು ನಮ್ಮೊಳಗೆ ತಂದುಕೊಳ್ಳದ ಹೊರತು ಯಾವುದೂ ನಿಖರವಾಗಿ ವೇದ್ಯವಾಗುವುದಿಲ್ಲ. ಅವನ್ನೆಲ್ಲಾ ಅಂತರಂಗದೊಳಗೆ ಅಕ್ಷರಶಃ ಇಳಿಸಿಕೊಂಡಲ್ಲಿ ಮಾತ್ರ ನಮ್ಮ ವಿಚಾರಗಳಿಗೆ ಸ್ಪಷ್ಟತೆ ಸಿಗುತ್ತದೆ, ಮಾತುಗಳು ಅರ್ಥಪೂರ್ಣವಾಗುತ್ತವೆ.

ಮನಸ್ಸಿನ ಒಳಪ್ರವಾಹಗಳ ಚಿಂತನೆಯ ದಿಕ್ಕನ್ನೇ ಬದಲಿಸುವ ಶಕ್ತಿ ವಚನಗಳಿಗಿದೆ. ಮೇಲ್ಪದರಲ್ಲಿ ಮಾತ್ರ ನಿಲ್ಲದಂತೆ ಅವುಗಳ ಅಂತರಾಳ ಹೊಸ ನೋಟವನ್ನು ನೀಡುತ್ತವೆ. ಶರಣರ ಪ್ರಕಾರ ಅಷ್ಟಾವರಣಗಳಾದ- ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರಗಳು ಭೌತಿಕ ರೂಪ ಪಡೆದ ಬಾಹ್ಯ ಆಚರಣೆಗಳಷ್ಟೇ ಅಲ್ಲ. ಅವುಗಳ ನಿಜವಾದ ಇರುವಿಕೆ ವ್ಯಕ್ತವಾಗಬೇಕಾದದ್ದು ದೇಹದೊಳಗೆ, ಅಂತರಂಗದಲ್ಲಿ. ಅಂದರೆ ಭಕ್ತನ ದೇಹ ಈ ಎಂಟು ಆವರಣಗಳಿಂದ ಕೂಡಿದೆ. ಆ ಒಂದೊಂದು ಆವರಣಗಳೂ ಮನಸ್ಸಿನ ಪ್ರಜ್ಞಾ ವಲಯಗಳು. ಬಸವ ಪೂರ್ವದಲ್ಲೇ ಗುರು, ಲಿಂಗ, ಜಂಗಮ… ಪದಗಳು ರೂಢಿಯಲ್ಲಿದ್ದರೂ ಶರಣರ ಅನುಭಾವದಲ್ಲಿ ಇವುಗಳೆಲ್ಲ ವಿಭಿನ್ನ ಅರ್ಥಗಳನ್ನು ಪಡೆದುಕೊಂಡವು.
ಅಷ್ಟಾವರಣಗಳಲ್ಲಿನ ಮೊದಲ ತತ್ವವೇ ಗುರು. ಗುರು ಎಂದರೆ ಯಾರು? ಗುರು ನಮಗೆ ಏಕೆ ಬೇಕು… ಎಂಬುದು ಮೂಲಭೂತ ಪ್ರಶ್ನೆ.

ಶರಣರ ಪ್ರಕಾರ ವ್ಯಕ್ತಿಯೊಬ್ಬನ ಜೀವನದಲ್ಲಿ ಶಿಷ್ಯ ಮತ್ತು ಗುರು ಎನ್ನುವಂಥವು ಅರಿವಿನ ಎರಡು ವಿಭಿನ್ನ ಸ್ಥಿತಿಗಳು. ಪ್ರಾಪಂಚಿಕ ಬದುಕಿನಾಚೆ ತನ್ನನ್ನು ಕಂಡುಕೊಳ್ಳಬೇಕೆಂದು ನಿರ್ಧರಿಸಿದ ವ್ಯಕ್ತಿ ಮೊದಲು ಸತ್ಯಾನ್ವೇಷಣೆಗೆ ಸಿದ್ಧನಾಗುವುದೇ ಅರಿವಿ��� ಆರಂಭದ ಹಂತ. ಯಾವುದೋ ಪುಸ್ತಕ, ಯಾರದೋ ಭಾಷಣ, ಇನ್ನಾವುದೋ ಸನ್ನಿವೇಶ, ಎಂಥದೋ ಹಾಡು, ಇನ್ಯಾರದೋ ಜೀವನ… ಬದುಕಿನ ಮೇಲೆ ಗಾಢ ಪ್ರಭಾವ ಬೀರಿ ಸ್ಫೂರ್ತಿಯಾಗಬಲ್ಲವು, ಬದುಕಿನ ಮುಖ್ಯ ತಿರುವುಗಳಾಗಬಲ್ಲವು. ಆ ಹಂತದಲ್ಲಿ ಅವೇ ನಮ್ಮ ಮಾರ್ಗದರ್ಶಿಗಳು. ಸಂಗೀತ, ವಿಜ್ಞಾನ, ಸಾಹಿತ್ಯ, ಆಟೋಟಗಳಂಥ ಯಾವುದೇ ಕಲಿಕೆಗೆ ನೆರವಾಗುವವ ಉಪಾಧ್ಯಾಯ. ಹಾಗಾದರೆ ಗುರು ಯಾರು? ಬ್ರೆಜಿಲ್ ನ ಖ್ಯಾತ ಕಾದಂಬರಿಕಾರ ಪಾಲೋ ಕೊಯಿಲೊ ಒಂದೆಡೆ ಹೇಳುತ್ತಾರೆ: “ಯಾವುದನ್ನೇ ಆಗಲಿ ಕಲಿಸುವ ವ್ಯಕ್ತಿ ಗುರುವಾಗಲಾರ. ಶಿಷ್ಯನು ತನ್ನಲ್ಲೇ ಅಡಗಿರುವ ಸಾಮರ್ಥ್ಯವನ್ನು ಸಮರ್ಥವಾಗಿ ಕಂಡುಕೊಳ್ಳಲಿಕ್ಕೆ ನೆರವಾಗಬಲ್ಲವನೇ ಗುರು”. ಏಕೆಂದರೆ ಮನಸ್ಸು ತುಂಬಿಸಿಕೊಳ್ಳುವ ಪಾತ್ರೆಯಲ್ಲ, ಬೆಳಕು ಹಚ್ಚಿಸಿಕೊಳ್ಳುವ ಹಣತೆ.

ಸತ್ಯದರ್ಶನ ಅಥವಾ ಸತ್ಯ ಸಾಕ್ಷಾತ್ಕಾರ ಮಾಡಿಸುವವ ಗುರು ಎನ್ನುವುದು ನಮ್ಮಲ್ಲಿನ ಸಾಮಾನ್ಯ ನಂಬಿಕೆ. “ಆದರೆ ಸತ್ಯದ ದಾರಿ ಕೈ ಮಾಡಿ ತೋರಿಸುವಂಥ ಒಂದು ನಿರ್ದಿಷ್ಟ ಪಥವಲ್ಲ. ಅದು ಆಗಸದಂತೆ. ಹಾರುವ ಹಕ್ಕಿಗಳಿಗೆ ಆಕಾಶದಲ್ಲಿ ಏನಾದರೂ ನಿರ್ದಿಷ್ಟ ರಸ್ತೆಗಳಿವೆಯೇ? ಅವೇನಾದರೂ ರೆಕ್ಕೆಯಲ್ಲಿ ದಾರಿ ಕೊರೆದಿಟ್ಟು ಹಾರುತ್ತವೆಯೇ?” ಎಂದು ಕೇಳುತ್ತಾರೆ ಜಿಡ್ಡು ಕೃಷ್ಣಮೂರ್ತಿ. ಹಕ್ಕಿಗಳು ಏರಿದ್ದೇ ಎತ್ತರ. ಹಾರಿದ್ದೇ ಹಾದಿ. ಅದೇ ರೀತಿ ಸತ್ಯಾನ್ವೇಷಣೆಯಲ್ಲಿ ಪ್ರತಿಯೊಬ್ಬರೂ ಅವರವರ ಹಾದಿ ಕಂಡುಕೊಳ್ಳಬೇಕು. ಆದರೆ ವ್ಯಕ್ತಿಯ ಆಂತರಿಕ ಅಗತ್ಯತೆಗೆ, ವಿಕಾಸಕ್ಕೆ ಸೂಕ್ತ ಮಾರ್ಗದರ್ಶನ ಬೇಕು. ಶರೀರದಲ್ಲಿನ ಅಮೂರ್ತ ನೆಲೆಗಳನ್ನು ಒಂದೊಂದಾಗಿ ತಲುಪುವಲ್ಲಿ ಮಾರ್ಗದರ್ಶನ ಖಂಡಿತ ಅವಶ್ಯಕ.
“ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ
ನಾನು ಬೇಸರುಗೊಂಡೆನಯ್ಯಾ.
ವಿತ್ತಾಪಹಾರಿ ಗುರುಗಳು ನೂರಾರು;
ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು…”ಎಂದು ಪಟ್ಟಿ ಮಾಡುತ್ತಾ, ನಿಜವಾದ ಗುರುವೆಂದರೆ,
“ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ ಅರುಹಿನ ಬಂಧದಲ್ಲಿರಿಸುವವ” ಎನ್ನುತ್ತಾರೆ ಸಿದ್ಧರಾಮೇಶ್ವರರು. ಯೋಗ್ಯ ಗುರುವಿನಿಂದ ಸಿಗುವ ಮಾರ್ಗದರ್ಶನ ಅಮೂಲ್ಯವಾಗಿರುತ್ತದೆ. ಇಲ್ಲವಾದರೆ, “ಉಪಚಾರದ ಗುರುವಿಗೆ ಉಪಚಾರದ ಶಿಷ್ಯನು, ಉಪಚಾರದ ಲಿಂಗವು, ಉಪಚಾರದ ಜಂಗಮವು, ಉಪಚಾರದ ಪ್ರಸಾದವು. ಇಂತಹ ಗುರುವಿಂಗೆ ಭಾವದ ಲೆಂಕನಾಗಿ ಅಂಧಕನ ಕೈಯ ಅಂಧಕ ಹಿಡಿದಂತೆ ಇವರೆಲ್ಲರೂ ಹೊಲಬುಗೆಟ್ಟರು” ಎನ್ನುತ್ತಾರೆ ಅಲ್ಲಮಪ್ರಭುಗಳು.

ಗುರುವಿನಲ್ಲಿ ಗುಣವನ್ನು ಅರಸಬಾರದು ಎನ್ನುವ ಚೆನ್ನಬಸವಣ್ಣನವರ ಮಾತು ಶಿಷ್ಯನಲ್ಲಿ ನಿಷ್ಠೆ ಮತ್ತು ವಿನಮ್ರತೆಗಳನ್ನು ಬೆಳೆಸುವುದಕ್ಕೆ ಮಾತ್ರ. ಇದು ಗುರುವಿನ ಅನಾಚಾರಗಳಿಗೆ ರಕ್ಷಣೆ ನೀಡುವುದಿಲ್ಲ. ಏಕೆಂದರೆ ನಡೆ- ನುಡಿ ಸಮನ್ವಯವಿಲ್ಲದ ಯಾವ ವ್ಯಕ್ತಿಯನ್ನೂ ಶರಣರು ಒಪ್ಪುವುದಿಲ್ಲ. ನಿಜವಾದ ಗುರು ಅಂತರಂಗ- ಬಹಿರಂಗ ಶುದ್ಧಿಯುಳ್ಳ ಘನ ಮಹಿಮ. ಸತ್ಯವನ್ನರಸಿ ಬರುವ ಶಿಷ್ಯನನ್ನು ದೇವನೊಂದಿಗೆ ಜೋಡಿಸುವುದು ಗುರುವಿನ ಪಾತ್ರ. ಶಿಷ್ಯನ ಅರಿವಿನ ಕದವನ್ನು ತೆಗೆಯದವನಿಗೆ ಗುರುವಾಗುವ ಯೋಗ್ಯತೆ ಇಲ್ಲ. ಅಂಥ ಗುರು ತನಗೆ ಬೇಕಾಗಿಲ್ಲ ಎನ್ನುತ್ತಾಳೆ ಗಜೇಶ ಮಸಣಯ್ಯನವರ ಪತ್ನಿ ಶರಣೆ ಮಸಣಮ್ಮ:
ಎನ್ನನರಿಯಿಸದಿರುವೆ, ನಿನ್ನನರಿಯಿಸಬೇಡ
ಎನ್ನನರಿಯಿಸಿದವ ನಿನ್ನನರಿಯ
ಎನ್ನನರಿಯಿಸದೆ ನಿನ್ನನರಿಯಿಸಿದರೆ
ನೀನನಗೆ ಗುರುವಲ್ಲ, ನಾನಿನಗೆ ಶಿಷ್ಯಳಲ್ಲ
ಎನ್ನನರಿಯಿಸಿದಡೆ ನೀನನಗೆ ಗುರು ನಾನಿನಗೆ ಶಿಷ್ಯ
ಮಸಣಪ್ರಿಯ ಗಜೇಶ್ವರ.
ಗುರುವಾಗುವವನಿಗೆ ದಿಕ್ಸೂಚಿಯನ್ನೂ, ಎಚ್ಚರಿಕೆಯನ್ನೂ ಏಕಕಾಲಕ್ಕೇ ನೀಡುತ್ತಾಳೆ ಮಸಣಮ್ಮ. ತನ್ನ ಮನವನ್ನು ಎಚ್ಚರಿಸದವ ಗುರುವಲ್ಲ ಎಂಬುದು ಆಕೆಯ ಸ್ಪಷ್ಟ ನಿರ್ಧಾರ. ಗುರುಪಥದ ಮೊದಲ ಹೆಜ್ಜೆ ಇದು. ಇದನ್ನು ಧನ್ನೂರು ಶರಣರು ಸೊಗಸಾಗಿ ವ್ಯಾಖ್ಯಾನಿಸುತ್ತಾರೆ: “ಆಸಕ್ತಿಯಿಂದ ಬಂದವನನ್ನು ಭಗವಂತನೊಂದಿಗೆ ಸಂಬಂಧ ಜೋಡಿಸುವುದು ಮಾತ್ರ ಗುರುವಿನ ಕೆಲಸ, ತನ್ನೊಂದಿಗೆ ಸಂಬಂಧ ಬೆಳೆಸಿಕೊಳ್ಳುವುದಲ್ಲ.”

ಅಕ್ಕಮಹಾದೇವಿಯೂ ತನ್ನ ವಚನದಲ್ಲಿ ಗುರುವನ್ನು ಹಾಗೆಯೇ ಕಂಡುಕೊಂಡಿದ್ದಾಳೆ. ತನ್ನ ಮತ್ತು ಲಿಂಗದ ಸಂಬಂಧ ಬೆಸೆಯುವ ರಕ್ಷಕನಾಗಿ, ಜವಾಬ್ದಾರಿಯುತ ವ್ಯಕ್ತಿಯಾಗಿ ಗುರುವನ್ನಿಲ್ಲಿ ಪರಿಭಾವಿಸಿದ್ದಾಳೆ:
ಗುರುವೆ ತೆತ್ತಿಗನಾದ, 
ಲಿಂಗವೆ ಮದುವಣಿಗನಾದ, ನಾನೆ ಮದುವಳಿಗೆಯಾದೆನು. 
ಈ ಭುವನವೆಲ್ಲರಿಯಲು ಅಸಂಖ್ಯಾತರೆನಗೆ ತಾಯಿತಂದೆಗಳು. 
ಕೊಟ್ಟರು ಸಾದೃಶ್ಯವಪ್ಪ ವರನ ನೋಡಿ. 
ಇದು ಕಾರಣ ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ. 
ಮಿಕ್ಕಿನ ಲೋಕದವರೆನಗೆ ಸಂಬಂಧವಿಲ್ಲವಯ್ಯಾ ಪ್ರಭುವೆ.

ಕಲ್ಯಾಣಕ್ಕೆ ಬಂದು, ದೇವರ ನಿಜಸ್ವರೂಪವನ್ನು ಅರಿದ ಬಳಿಕ ಅಕ್ಕ ಬರೆದ ವಚನ ಇದು. ಸೃಷ್ಟಿಕರ್ತನನ್ನೇ ಕೈ ಹಿಡಿಯಲಿರುವ ಅಕ್ಕನ ಅಸಾಮಾನ್ಯ ಮದುವೆಯ ಅದ್ಭುತ ಚಿತ್ರಣ ಇಲ್ಲಿದೆ. ಗುರುವಿನ ಹೊಣೆಗಾರಿಕೆಯಲ್ಲಿ ಅಕ್ಕ ತನ್ನನ್ನು ಲೋಕಾತ್ಮನಿಗೆ ಸಮರ್ಪಿಸಿಕೊಳ್ಳುತ್ತಿದ್ದಾಳೆ. ಈ ಲೋಕವನ್ನು ಅರ್ಥಮಾಡಿಕೊಳ್ಳಲು ನನಗೆ ಅಸಂಖ್ಯಾತ ತಾಯಿ ತಂದೆಯರಿದ್ದಾರೆ ಎಂಬ ಹೆಮ್ಮೆ ಒಂದು ಕಡೆ. ತನ್ನದೇ ಹೋಲಿಕೆಯುಳ್ಳ ಗಂಡನನ್ನು ಹುಡುಕಿಕೊಟ್ಟ ಕೃತಜ್ಞತೆ ಇನ್ನೊಂದು ಕಡೆ. ದೇವರನ್ನೇ ಪ್ರೀತಿಸಿ ಮದುವೆಯಾಗಲು ಹೊರಟ ಅಕ್ಕನ ಆಸೆ, ಬಯಕೆ ಕೂಡಿ ಬಂದ ಮಹೂರ್ತ ಇದು.

ಇಲ್ಲಿ ಗುರುವನ್ನು ಸ್ಥೂಲ ರೂಪದಿಂದಾಚೆಗೆ ಅರಿವಿನ ರೂಪದಲ್ಲಿ ಅರ್ಥೈಸಿಕೊಂಡಾಗ ವಚನಕ್ಕೆ ಮತ್ತಷ್ಟು ಹೊಳಪು ಕಾಣಿಸುತ್ತದೆ. ಅಂತರಂಗದ ಗುರು ಸ್ವರೂಪಿಯಾದ ಅರಿವಿನ ಬೆಳಕಲ್ಲಿ (ಗುರು) ಸಮಷ್ಟಿಯ ಸ್ವರೂಪಕ್ಕೆ (ಲಿಂಗ) ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ಅಕ್ಕ ಸಿದ್ಧಳಾಗಿದ್ದಾಳೆ. ಲೋಕಾತ್ಮನನ್ನು ವರಿಸಲಿರುವ ಅಕ್ಕನಿಗೆ ಇಡೀ ವಿಶ್ವವೇ ಕುಟುಂಬ. ಜಗದ ಜನರೆಲ್ಲ ಆಕೆಗೆ ಹೆತ್ತ ತಾಯಿ- ತಂದೆಯರಂತೆ ತೋರುತ್ತಾರೆ. ಅಕ್ಕನ ಪ್ರಜ್ಞಾ ಪರಿಧಿ ಅನಂತನನ್ನು ಸೇರಲು ಆಕಾಶದಷ್ಟು ವಿಸ್ತರಿಸಿ ನಿಂತಂತೆ ಭಾಸವಾಗುತ್ತದೆ. ಇದನ್ನೇ “ಗುರು ಸಾಕ್ಷೀಪ್ರಜ್ಞೆ. ದರ್ಪಣಕ್ಕೆ ದರ್ಪಣ ತೋರಿದಂತಿರಬೇಕು”- ಎನ್ನುತ್ತಾರೆ ಚೆನ್ನಬಸವಣ್ಣನವರು. ಹೀಗೆ ನಮಗೆ ಅರ್ಥವಾಗಿಯೂ ಇನ್ನೂ ಹಲವಾರು ಬಗೆಯ ಅರ್ಥಗಳನ್ನು ತಮ್ಮ ಸಾಲುಗಳಲ್ಲಿ ಸುತ್ತಿಕೊಂಡಂತೆ ವಚನಗಳು ಕಾಣುತ್ತವೆ.

ಗುರುವಿನ ಬಗೆಗೆ ವಚನಗಳಲ್ಲಿ ವ್ಯಕ್ತವಾಗುವ ಅನೇಕ ಆಶಯಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲಿ ಗುರು ಎಂಬ ಪದವು ವಿಸ್ತೃತ ಅರ್ಥವ್ಯಾಪ್ತಿಯನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಸಾಕಾರ ರೂಪದಲ್ಲಿದ್ದ ಗುರು ತತ್ವವು ಜ್ಞಾನದ ರೂಪವನ್ನೂ, ಅಲ್ಲಿಂದ ಮುಂದೆ ಮಹಾಜ್ಞಾನದ ಸ್ವರೂಪವನ್ನೂ ಪಡೆಯುತ್ತದೆ. ಆಗಲೇ ಗುರುವಿನ ಅರ್ಥ ಪೂರ್ಣಗೊಳ್ಳುವುದು.

ದೀಕ್ಷಾ ಸಂಸ್ಕಾರದಿಂದ ಆರಂಭಗೊಳ್ಳುವ ಗುರುವಿನ ಪಾತ್ರ ವ್ಯಕ್ತಿಯ ಬದುಕಿನ ಆರಂಭ ಮಾತ್ರ. ಅಲ್ಲಿಂದ ಗುರು ತತ್ವವು ಆಂತರಿಕ ಪ್ರಜ್ಞೆಯಾಗಿ ಜಾಗೃತಗೊಳ್ಳುತ್ತದೆ. ಅದು ಮುಂದೆ ಅರಿವಾಗಿ, ಅರಿವಿನ ಅರಿವಾಗಿ ದಾರಿ ತೋರಿಸುತ್ತದೆ. ಅದೇ ಗುರು ಪಥ. ಶರಣರು ಅರಿತ ಗುರು ಪಥ. ಗುರು ಆರಂಭದಲ್ಲಿ ಮಾರ್ಗದರ್ಶಕನಾಗಿ, ನಂತರ ಆಶಯವಾಗಿ, ಮುಂದೆ ಅರಿವಿನ ಕಣ್ಣಾಗಿ, ಸಾಧನೆಯ ಹಿಂದಿನ ದೈವ ಶಕ್ತಿಯೇ ತಾನಾಗಿ, ರೂಪಾಂತರವಾಗುತ್ತಾ ಹೋಗುತ್ತಾನೆ.

ಹಿಂದೆಲ್ಲೋ ಓದಿದ್ದ ಝೆನ್ ಕಥೆ ನೆನಪಾಗುತ್ತಿದೆ. ಶರಣರ ವಚನಗಳ ಹಿನ್ನೆಲೆಯಲ್ಲಿ ಆ ಕಥೆಯ ತಿರುಳು ಈಗ ಮತ್ತಷ್ಟು ಸ್ಪಷ್ಟವೆನಿಸಿತು. ಜುಯಿಗನ್ ಎಂಬ ಬೌದ್ಧ ಭಿಕ್ಕು ಇದ್ದ. ಪ್ರತಿನಿತ್ಯ ಬೆಳಿಗ್ಗೆ ಆತ ತನ್ನೊಂದಿಗೆ ತಾನೇ ಪ್ರಶ್ನೋತ್ತರ ನಡೆಸುತ್ತಿದ್ದ. ದೊಡ್ಡ ದನಿಯಲ್ಲಿ ಶಿಷ್ಯನಂತೆ ಪ್ರಶ್ನೆ ಕೇಳುತ್ತಾ, ಅಷ್ಟೇ ದೊಡ್ಡ ದನಿಯಲ್ಲಿ ಗುರುವಿನಂತೆ ಉತ್ತರಿಸಿಕೊಳ್ಳುತ್ತಿದ್ದ.
“ಗುರುವೇ ಇದ್ದೀರಿ ಅಲ್ಲವೇ?”
“ಹೌದು ಸ್ವಾಮಿ ಇದ್ದೀನಿ”
“ಸರಿ ಜಾಗೃತನಾಗಿರಬೇಕು”
“ಆಗಲಿ ಸ್ವಾಮಿ ಜಾಗೃತನಾಗಿರುತ್ತೇನೆ”
“ಸದಾ ಹುಷಾರಾಗಿರಬೇಕು, ಯಾರೂ ವಂಚಿಸದ ಹಾಗೆ”
“ಇಲ್ಲ, ಇಲ್ಲ, ಅಂಥದಕ್ಕೆಲ್ಲ ಅವಕಾಶವೇ ಕೊಡುವುದಿಲ್ಲ, ಎಚ್ಚರದಿಂದಿರುತ್ತೇನೆ ಸ್ವಾಮಿ…”

ಹಾಗೆ ಎಚ್ಚರಗೊಂಡ ಗುರು ಸರಿಯಾದ ಹಾದಿಯಲ್ಲಿ ಮುಂದೆ ನಡೆಸುತ್ತಾನೆಂಬ ಭರವಸೆ ಹಾಗೂ ಸಮಾಧಾನ ಶಿಷ್ಯನದು.

ಗುರುಪಥ

ಅರಿವಿನ ಬೆಳಕಲ್ಲಿ ಅಂತಃಕರಣ ಪರಿಶುದ್ಧವಾಗಿರುತ್ತದೆ. ಗುರುತ್ವವೆಂದರೆ ಸ್ವಯಂ ಜ್ಯೋತಿ ಎನ್ನುತ್ತಾರೆ ಚೆನ್ನಬಸವಣ್ಣ. ಶಿಷ್ಯ ಗುರುವಿನ ಮಾರ್ಗದರ್ಶನವನ್ನು ತನ್ನಲ್ಲೇ ತನ್ನ ಸಾಧನೆಯಿಂದ ಕಂಡುಕೊಳ್ಳುತ್ತಾ ಹೋಗುತ್ತಾನೆ. ಅಂದರೆ ತನ್ನೊಳಗಿನ ಗುರುವನ್ನು ರೂಪಿಸಿಕೊಳ್ಳುತ್ತಾನೆ. ಅರಿವಿನಲ್ಲಿ ಸಂಪೂರ್ಣವಾಗಿ ಸೇರಿ ಹೋಗಿ ತಾನೇ ಅರಿವಿನ ರೂಪಾಗುತ್ತಾನೆ ಶಿಷ್ಯ. ಜ್ಯೋತಿಯಿಂದೊಗೆದ ಜ್ಯೋತಿಯಂತೆ, ದರ್ಪಣದೊಳಡಗಿದ ಪ್ರತಿಬಿಂಬದಂತೆ. ಗುರುವಾಗುವುದೆಂದರೆ ಬೆಳಕಾಗುವುದು. ಉರಿಲಿಂಗಪೆದ್ದಿಗಳು ಹೇಳುತ್ತಾರೆ:
ಜ್ಯೋತಿ ಸಂಗವ ಮಾಡಿ ಕರ್ಪುರ ಜ್ಯೋತಿಯಪ್ಪಂತೆ,
ಅಪ್ಪುವಿನ ಸಂಗದಿಂದ ಉಪ್ಪುವಪ್ಪುವಪ್ಪಂತೆ,
ಶ್ರೀಗುರುವಿನ ಸಂಗವ ಶಿಷ್ಯಮಾಡಿ ಶ್ರೀಗುರುವಪ್ಪುದು ತಪ್ಪದು.

ಗುರುತ್ವ ಎನ್ನುವುದು ಮನಸ್ಸಿನಲ್ಲಿ ಜಾಗೃತಗೊಂಡ ಸ್ಥಿತಿ, ಅರಿವಿನ ಜ್ಯೋತಿ. ಜ್ಞಾನವಿಕಾಸದ, ಭಾವ ವಿಕಾಸದ, ಮನೋವಿಕಾಸದ ಮಹತ್ತರ ಘಟ್ಟ. ಸಾಧನೆಯ ಹಾದಿಯಲ್ಲಿದ್ದ ವ್ಯಕ್ತಿ ತಲುಪಲೇ ಬೇಕಾದ ಒಂದು ಮಹತ್ವದ ಹಂತ. ಸ್ವತಂತ್ರ ಸಿದ್ಧಲಿಂಗೇಶ್ವರರು ಹೇಳುತ್ತಾರೆ: ನಿರವಯ ಶೂನ್ಯ ದೇವರನ್ನೊಳಗೊಂಡ ಶುದ್ಧ ಪ್ರಸಾದವೇ ಗುರು. ಅಂದರೆ ಇಲ್ಲಿ ಸಮಷ್ಟಿ ತತ್ವವಾದ ಪರಮಾತ್ಮನೇ ಗುರು. “ನೀನೇ ಸ್ವಯಂಜ್ಯೋತಿ ಪ್ರಕಾಶವೆಂದರಿಯಲು, ನಿನಗೆ ನೀನೇ ಗುರುವಲ್ಲದೆ ನಿನ್ನಿಂದಧಿಕವಪ್ಪ ಗುರುವುಂಟೇ?” ಎಂದು ಪ್ರಶ್ನಿಸುತ್ತಾರೆ ಅಲ್ಲಮಪ್ರಭುದೇವರು. ಜೀವನಿಗೆ ಸೃಷ್ಟಿಯ ರೂಪವೇ ತಾನೆಂಬ ಸತ್ಯ ಅರಿವಿಗೆ, ಅನುಭವಕ್ಕೆ ನಿಲುಕುವುದೇ ಮಹಾಅರಿವು. “ನಿಮ್ಮಿಂದಲೇ ನಿಮ್ಮನರಿದೆ” ಎನ್ನುತ್ತಾ ಮಹಾ ಅರಿವೇ ತಾವಾದವರು ಬಸವಣ್ಣ.
ವ್ಯಕ್ತಿಯ ಮನೋಭೂಮಿಕೆಯಲ್ಲೇ ಇಂಥ ಗುರುಪಥ ಸಾಧ್ಯವಾಗಬೇಕು. ಸಿದ್ಧಿಗೊಳ್ಳಬೇಕು. ಬಸವಣ್ಣನವರು “ಶಿವಪಥ ಅರಿವೊಡೆ ಗುರುಪಥ ಮೊದಲು” ಎನ್ನುತ್ತಾರಲ್ಲ ಆ ಗುರು ಪಥ ಇದೇ.
ಇಂಥ ಅಂತರಂಗದಲ್ಲಿ ಪಲ್ಲವಿಸಿದ ಗುರುಪಥವನ್ನು ಬಹಿರಂಗದಲ್ಲೂ ಬದುಕಿ ತೋರಿದವರು ಬಸವಣ್ಣ.

ಹೇಗೆನ್ನುವಿರಾ?

ಕ್ರಿಸ್ತಪೂರ್ವದಲ್ಲೇ, ಹೆಚ್ಚು ಕಮ್ಮಿ ಗೌತಮ ಬುದ್ಧನ ಕಾಲಮಾನದವನೇ ಆಗಿದ್ದ, ಗ್ರೀಕ್ ದೇಶದ ಹೆಸರಾಂತ ತತ್ವಜ್ಞಾನಿ ಸಾಕ್ರಟೀಸ್. ಆತ ಪ್ಲೇಟೋ, ಅರಿಸ್ಟಾಟಲ್ ರಂತಹ ಪ್ರಖಂಡ ಜ್ಞಾನಿಗಳಿಗೆ ಪ್ರೇರಣೆಯಾಗಿದ್ದವ. ಆತ ಒಂದು ಮಾತು ಹೇಳುತ್ತಾನೆ: “ನಾನು ಯಾರಿಗೆ ಏನನ್ನೂ ಬೋಧನೆ ಮಾಡಲಾರೆ. ಬದಲಿಗೆ ಅವರನ್ನು ಯೋಚಿಸಲು ಹಚ್ಚಬಲ್ಲೆ ಅಷ್ಟೇ” ಎಂದು. ಹಾಗೆಯೇ ಯೋಚಿಸುವ ಮನಸ್ಸುಗಳನ್ನು ಅಕ್ಷರಶಃ ಬೆಳೆಸಿದವರು ಬಸವಣ್ಣನವರು. ಆದ್ದರಿಂದ ಕಲ್ಯಾಣ ಕ್ರಾಂತಿಯ ಆ ಕೆಲವೇ ದಶಕಗಳಲ್ಲಿ ಸಂಸ್ಕಾರದ ಗಂಧ ಗಾಳಿಯೂ ಇಲ್ಲದ ತೀರಾ ಸಾಮಾನ್ಯರೂ ಅಸಾಮಾನ್ಯ ಶಕ್ತಿಯಾಗಿ ಬೆಳೆದು ನಿಂತರು. ವೇದ ಪಾರಮ್ಯದ ಸಂಪ್ರದಾಯಕ್ಕೆ ಸೆಡ್ಡು ಹೊಡೆದಂತೆ ಪ್ರಗತಿಪರ ವಿಚಾರವಾದಿಗಳ, ಅನುಭಾವಿಗಳ ದೊಡ್ಡ ಸಮೂಹವೇ ಕಲ್ಯಾಣದಲ್ಲಿ ಸೃಷ್ಟಿಯಾಯಿತು. ಹೊಸ ವಿಚಾರಗಳ, ಹೊಸ ದಾರಿಯ ನೇತಾರರಾಗಿದ್ದ ಬಸವಣ್ಣನವರು ಯಾರನ್ನೂ ತಮ್ಮ ಭಕ್ತರಂತೆ, ಶಿಷ್ಯರಂತೆ ನಡೆಸಿಕೊಳ್ಳಲಿಲ್ಲ. ಇದಕ್ಕೆ ಅವರ ವಚನಗಳೇ ಸಾಕ್ಷಿ. ಅಭಯಹಸ್ತ ತೋರುತ್ತಾ ಎಲ್ಲಿಯೂ ತಮ್ಮನ್ನು ವೈಭವೀಕರಿಸಿಕೊಳ್ಳಲಿಲ್ಲ. ಆತ್ಮರತಿ ಎಂಬುದು ಅವರ ಹತ್ತಿರವೂ ಸುಳಿಯಲಿಲ್ಲ. ಬದಲಿಗೆ ಕಕ್ಕುಲಾತಿಯಿಂದ ಎಲ್ಲರಲ್ಲೂ ಲಿಂಗ- ಜಂಗಮವನ್ನು ಕಂಡರು. ತಮ್ಮನ್ನು ಗುರುವೆಂದು ಘೋಷಿಸಿಕೊಳ್ಳದೆ, ಭಕ್ತನೆಂದು ಕೈ ಮುಗಿದು ನಿಂತರು. ಚುಂಬಕದಂತಿದ್ದ ಅವರ ವ್ಯಕ್ತಿತ್ವಕ್ಕೆ ಮನಸೋತು ಸಮಾಜದ ಎಲ್ಲ ವರ್ಗದ ಜನ ಹತ್ತಿರಾದರು. ಆದ್ದರಿಂದಲೇ ‘ನ ಭೂತೋ’ ಎನ್ನುವಂಥ ಬೃಹತ್ ಕ್ರಾಂತಿಯೇ ಸಂಭವಿಸಿತು. ಕೃತಜ್ಞತೆಯಿಂದ ಜನ ಅಂದಿನಿಂದಲೂ ಅವರನ್ನು ಮುಕ್ತ ಕಂಠದಿಂದ ಸ್ಮರಿಸುತ್ತಲೇ ಇದ್ದಾರೆ.

ಬಸವಣ್ಣನವರ ಇಂಥ ನಡೆ- ನುಡಿ ಅನೇಕ ವಿಷಯಗಳತ್ತ ಬೆಳಕು ಚೆಲ್ಲುತ್ತದೆ. ಸಾಂಪ್ರದಾಯಿಕ ಗುರು- ಶಿಷ್ಯ ಗುಲಾಮಿ ಪರಂಪರೆಯ ಬೇರನ್ನೇ ಕತ್ತರಿಸಿ ಹಾಕಿದರು. ಭಕ್ತ- ಗುರು ಎನ್ನುವ ಖಾಯಂ ವಿಭಜನೆಯನ್ನೂ ಸ್ಪಷ್ಟವಾಗಿ ತಿರಸ್ಕರಿಸಿದರು. ಭಕ್ತ, ಭಕ್ತನಾಗಿ ಜೀವನಪರ್ಯಂತ ತನಗೆ ಬಾಗಿಯೇ ನಡೆಯಬೇಕೆಂಬುದು ಹಿಂದಿನ ಗುರು ಪರಂಪರೆಯ ಧ್ಯೇಯವಾಗಿತ್ತು. ಗುಲಾಮಗಿರಿ ಮನಸ್ಥಿತಿಯು ಸಾಧಕನ ದಿಕ್ಕು ತಪ್ಪಿಸುತ್ತದೆ. ಅದು ಹಿಂಬಾಲಕರನ್ನು ಸೃಷ್ಟಿಸುವಂಥದೇ ವಿನಃ ಪ್ರಗತಿಪರ ವೈಚಾರಿಕ ಮನಸ್ಸುಗಳನ್ನಲ್ಲ. ಶಿಷ್ಯನ ಮೇಲೆ ತನ್ನ ಅಭಿಪ್ರಾಯಗಳನ್ನು ಹೇರುವವ, ಸರ್ವಾಧಿಕಾರಿ ಧೋರಣೆ ತೋರುವವ ನಿಜವಾದ ಗುರುವಾಗಲಾರ. ಅದೇ ರೀತಿ ಗುರು ಎಂದರೆ ಸನ್ಯಾಸಿಯೇ ಆಗಬೇಕಿಲ್ಲ ಎಂಬುದನ್ನೂ ಗೃಹಸ್ಥರಾದ ಬಸವಣ್ಣನವರು ತಮ್ಮ ನಿದರ್ಶನದ ಮೂಲಕವೇ ತೋರಿಸಿಕೊಟ್ಟರು. ಇದು ಬಸವಣ್ಣನವರು ನಡೆದು ತೋರಿದ ಗುರು ಪಥ. ನಮ್ಮ ಬದುಕಿನ ಹೆಜ್ಜೆಯಾಗಬೇಕಾದ ಗುರುಪಥ.

ಶರಣರಲ್ಲಿ ಹೀಗೆ ಕ್ರಾಂತಿಕಾರಕ ಪರಿವರ್ತನೆಗೆ ಒಳಗಾದ ತತ್ವ ‘ಗುರು’. ಆದರೆ ಮುಂದಿನ ದಿನಗಳಲ್ಲಿ ಇದು ಬೇರೆಯದೇ ರೂಪು ಪಡೆಯಿತು. ವಚನ ಧರ್ಮವು ಸಾಂಸ್ಥಿಕ ರೂಪ ಧರಿಸಿದಂತೆ ಸಾಂಪ್ರದಾಯಿಕ ಧೋರಣೆಗಳು ನಿಧಾನವಾಗಿ ಒಳಗೆ ತೂರಿಕೊಂಡವು. ಗುರು ಪದವು ಪಟ್ಟವೇರಿತು. ಗುರು ಮಠಗಳನ್ನು ಕಟ್ಟಿಕೊಂಡ. ಕಾವಿ ಹೊದ್ದುಕೊಂಡ. ಪೀಠ-ಪಲ್ಲಕ್ಕಿ ಏರಿದ. ಕಿರೀಟ ಧರಿಸಿಕೊಂಡ. ಸಿಂಹಾಸನಗಳು, ಜಗದ್ಗುರು ಪಟ್ಟಗಳು ಸೃಷ್ಟಿಯಾದವು. ಅಧಿಕಾರ ಸೇರಿಕೊಂಡಿತು. ಸೇವೆಗೆ, ಪೂಜೆಗೆ ಶಿಷ್ಯ ಪಡೆ ಸಿದ್ಧವಾಯಿತು. ಶುದ್ಧ ಆಧ್ಯಾತ್ಮಿಕ ಪರಂಪರೆಯೊಂದು ಕಾಲದ ಈ ಬಲಾತ್ಕಾರದ ತುಳಿತಕ್ಕೆ ಸಿಕ್ಕಿಕೊಂಡು, ತನ್ನ ಮೂಲ ರೂಪದಿಂದ ಸಂಪೂರ್ಣ ಭಿನ್ನವಾಯಿತು. ಗುರುವಿನ ಗಹನ ತತ್ವ ವಿರೂಪಗೊಂಡಿತು. “ಗುರು ವೈಭವಕ್ಕೆ ಸಿಕ್ಕಿದಾಗಲೇ ಶಿಷ್ಯಂಗೆ ನರಕ ಪ್ರಾಪ್ತಿ” ಎಂಬ ಶರಣರ ಎಚ್ಚರಿಕೆ ಮರೆತುಹೋಯಿತು. ಮಠದ ಗುರುವಿನ ಕೈಗೆ, ಕಾವಿಧಾರಿಗಳ ವಶಕ್ಕೆ ಧಾರ್ಮಿಕ ಆಚರಣೆಗಳ ಹಕ್ಕು ಸೇರಿಕೊಂಡಾಗ ಲಿಂಗಾಯತ ಚಳುವಳಿಯ ಆತ್ಮ ಹೊರಗುಳಿದುಕೊಂಡಿತು. ಯಾವ ಮನೋಧರ್ಮವನ್ನು ಲಿಂಗಾಯತ ಚಳುವಳಿ ವಿರೋಧಿಸಿತ್ತೋ ಅದರ ಜೊತೆಗೆ ಅಪವಿತ್ರ ಮೈತ್ರಿ ಆರಂಭವಾಯಿತು. ಮೂಲದಲ್ಲಿದ್ದ ಶರಣರ ಆಶಯಗಳು ಆಡಂಬರದ ಆಚರಣೆಗಳ ಹೊಡೆತಕ್ಕೆ ಸಿಕ್ಕು ನೇಪಥ್ಯಕ್ಕೆ ಸರಿದವು.

Previous post ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
Next post ಪರಿಪೂರ್ಣತೆಯೆಡೆಗೆ ಪಯಣ
ಪರಿಪೂರ್ಣತೆಯೆಡೆಗೆ ಪಯಣ

Related Posts

ಆತ್ಮಹತ್ಯೆ-ಆತ್ಮವಿಶ್ವಾಸ
Share:
Articles

ಆತ್ಮಹತ್ಯೆ-ಆತ್ಮವಿಶ್ವಾಸ

January 10, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಕಟ್ಟಬೇಕು ಮನವ, ಮೆಟ್ಟಬೇಕು ಮದವ, ಸುಟ್ಟರುಹಬೇಕು ಸಪ್ತವ್ಯಸನಂಗಳ. ಆ ತೊಟ್ಟಿಲ ಮುರಿದು, ಕಣ್ಣಿಯ ಹರಿದು, ಆ ಬಟ್ಟಬಯಲಲ್ಲಿ ನಿಂದಿರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ. ಮನುಷ್ಯನ...
ಸದ್ಗುರು ಸಾಧಕ ಬಸವಣ್ಣ
Share:
Articles

ಸದ್ಗುರು ಸಾಧಕ ಬಸವಣ್ಣ

May 6, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
`ಬಸವಣ್ಣ’ ಎನ್ನುವ ಹೆಸರು ಕನ್ನಡಿಗರಿಗೆ ಚಿರಪರಿಚಿತ. ಸುಮಾರು 60 ವರ್ಷಗಳ ಹಿಂದೆ `ಬಸವ ಜಯಂತಿ’ ಎಂದರೆ ವ್ಯವಸಾಯಕ್ಕೆ ಬಳಸುವ `ಎತ್ತುಗಳು’ ಎನ್ನುವ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮರೆತೆ…
ಮರೆತೆ…
July 4, 2022
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
March 9, 2023
ಕಾಲ ಎಲ್ಲಿದೆ?
ಕಾಲ ಎಲ್ಲಿದೆ?
January 7, 2022
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
February 11, 2022
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
Copyright © 2023 Bayalu