Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಳಗೆ ತೊಳೆಯಲರಿಯದೆ…
Share:
Articles May 10, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಒಳಗೆ ತೊಳೆಯಲರಿಯದೆ…

ಏನ ಕಂಡಡೇನಯ್ಯಾ, ತನ್ನ ಕಾಣದಾತ ಕುರುಡ.
ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ.
ಏನ ಮಾತಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ.
ದಿಟದಿಂದ ತನ್ನ ತಾ ಕಾಣಬೇಕು, ದಿಟದಿಂದ ತನ್ನ ತಾ ಕೇಳಬೇಕು,
ದಿಟದಿಂದ ತನ್ನ ತಾ ಮಾತಾಡಬೇಕು.
ಇದೆ ತನ್ನ ನೆಲೆ, ಸ್ವಭೂಮಿ, ಸ್ವಸ್ವರೂಪು ಕಾಣಾ-ಗುಹೇಶ್ವರಾ.

ವ್ಯಕ್ತಿ ಏನು ಕಾಣುತ್ತಾನೆ ಎನ್ನುವುದು ಮುಖ್ಯವಲ್ಲ. ಹೊರಗೆ ಏನನ್ನೋ ಕಾಣುವ ಮೊದಲು ತನ್ನೊಳಗೆ ತಾನು ನೋಡುವುದನ್ನು ಕಲಿಯಬೇಕು. ಹಾಗೆ ಕಲಿಯದಿದ್ದರೆ ಆತ ಕಣ್ಣಿದ್ದೂ ಕುರುಡ. ಬಾಹ್ಯ ಕಣ್ಣುಗಳಿಗಿಂತ ಮುಖ್ಯವಾದುದು ಆಂತರಿಕ ಕಣ್ಣುಗಳು. ಅವುಗಳನ್ನು ತೆರೆಯುವುದು ಮುಖ್ಯ. ಬಹುತೇಕ ಜನ ಹೊರಗಣ್ಣನ್ನು ನಂಬಿ ಒಳಗಣ್ಣನ್ನು ಮುಚ್ಚಿಕೊಂಡಿರುತ್ತಾರೆ. ಅಂಥವರೇ ನಿಜವಾದ ಕುರುಡರು. ಮುಂದುವರಿದು ಪ್ರಭುದೇವರು ಹೇಳುವುದು ಹೊರಗೆ ಏನೇನನ್ನೋ ಕೇಳುವುದಕ್ಕಿಂತ ತನ್ನ ಅಂತರಾತ್ಮನ ಧ್ವನಿಯನ್ನು ಕೇಳಬೇಕು. ಹಾಗೆ ಕೇಳದಿದ್ದವನೇ ಕಿವುಡ. ಹೊರಗಿನ ಜನರೊಂದಿಗೆ ಏನೇನು ಮಾತನಾಡುತ್ತೇವೆ ಎನ್ನುವುದಕ್ಕಿಂತ ತನ್ನ ಅಂತರಾತ್ಮದ ಜೊತೆಗೆ ಸಂಭಾಷಣೆ ಮಾಡಬೇಕು. ಹಾಗೆ ಸಂಭಾಷಣೆ ಮಾಡಿಕೊಳ್ಳದಿದ್ದರೆ ಅವನೇ ಮೂಕ. ಅಂತರಂಗದಲ್ಲಿ ಕಾಣುವುದು, ಕೇಳುವುದು, ಮಾತನಾಡುವುದು ಕಾಟಾಚಾರಕ್ಕಾಗಿರದೆ ಅದು ಸತ್ಯದಿಂದ ಕೂಡಿರಬೇಕು ಎನ್ನುವುದು ತುಂಬಾ ಮುಖ್ಯ. ಆಗಲೇ ತನ್ನ ತಾ ಕಂಡುಕೊಳ್ಳಲು ಸಾಧ್ಯ. ಅದೇ ತನ್ನ ನೆಲೆ, ಸ್ವಭೂಮಿ, ಸ್ವಸ್ವರೂಪು ಎನ್ನುವುದು ಪ್ರಭುದೇವರ ಅಭಿಪ್ರಾಯ. ಬಸವಣ್ಣನವರು ಪ್ರಭುದೇವರ ಅಭಿಪ್ರಾಯವನ್ನೇ ಇನ್ನೊಂದು ರೀತಿಯಲ್ಲಿ ಹೇಳಿರುವುದನ್ನು ಗಮನಿಸಬಹುದು.

ಅತ್ತಲಿತ್ತ ಹೋಗದಂತೆ, ಹೆಳವನ ಮಾಡಯ್ಯಾ ತಂದೆ,
ಸುತ್ತಿ ಸುಳಿದು ನೋಡದಂತೆ, ಅಂಧಕನ ಮಾಡಯ್ಯಾ ತಂದೆ,
ಮತ್ತೊಂದ ಕೇಳದಂತೆ, ಕಿವುಡನ ಮಾಡಯ್ಯಾ ತಂದೆ,
ನಿಮ್ಮ ಶರಣರ ಪಾದವಲ್ಲದೆ
ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ.

ಬಸವಣ್ಣನವರ ಮತ್ತು ಪ್ರಭುದೇವರ ಆಶಯದಂತೆ ಬದುಕನ್ನು ರೂಪಿಸಿಕೊಂಡರೆ ವ್ಯಕ್ತಿ ಅದ್ಭುತ ಶಕ್ತಿಯನ್ನು ಸಂಪಾದಿಸಿಕೊಳ್ಳಲು ಸಾಧ್ಯ. ಆ ಶಕ್ತಿಯೇ ಅವನ ಆದರ್ಶ ಬದುಕಿಗೆ, ಸಮಾಜದ ಒಳಿತಿಗೆ ಕಾರಣವಾಗುವುದು. ಮನುಷ್ಯ ತನ್ನ ಪಂಚೇಂದ್ರಿಯಗಳಿಂದ ಬಾಹ್ಯವಾಗಿ ಏನೆಲ್ಲ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ಬುದ್ಧಿವಂತ ಎನಿಸಿಕೊಳ್ಳುವನು. ಬುದ್ಧಿ ಬೇರೆ, ವಿವೇಕ ಬೇರೆ. ಬುದ್ಧಿ ಅನುಭವಕ್ಕೆ ಬಂದಾಗ ಆತ ವಿವೇಕಿಯಾಗಲು ಸಾಧ್ಯ. ವಿವೇಕಿಯಾಗಲು ಸತ್ಚಿಂತನೆ, ಸ್ವಾನುಭವ, ಸದಾಚಾರದ ಅಗತ್ಯವಿದೆ. ಇದಕ್ಕಾಗಿ ಹಲವರ ಜೊತೆ ಸಂವಾದ ಮಾಡಬಹುದು, ಅರಿವು-ಅನುಭವ ವಿಸ್ತರಿಸುವ ಗ್ರಂಥಗಳನ್ನು ಓದಬಹುದು. ಸಂವಾದ ಮತ್ತು ಓದಿನಿಂದ ಕೇವಲ ಮಾಹಿತಿ ಸಂಗ್ರಹವಾಯ್ತೇ ಅಥವಾ ಅನುಭವ, ಆಚರಣೆಯಲ್ಲಿ ತರಲು ಸಾಧ್ಯವಾಯ್ತೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತದೆ. ಮನುಷ್ಯ ನಿಂತ ನೀರಾಗದೆ ನಿರಂತರ ಹರಿಯುವ ನದಿಯಂತಾಗಬೇಕು. ಆಗಲೇ ಆತ ಉನ್ನತಿಗೇರಲು ಅವಕಾಶವಾಗುವುದು. ಸಂವಾದ, ಚಿಂತನ, ಅಧ್ಯಯನದ ಮೂಲಕ ಅಲ್ಪ ಸ್ವಲ್ಪ ಬದಲಾವಣೆ ಆಗಬಹುದು. ಅವುಗಳ ಜೊತೆಗೆ ಅಂತರ್ಯಾತ್ರೆ ನಿರಂತರವಾಗಿ ನಡೆಯುತ್ತಿರಬೇಕು. ಅದರಿಂದ ವ್ಯಕ್ತಿಯ ಆಲೋಚನೆ, ಭಾವನೆ, ಬದುಕು ಉದಾತ್ತೀಕರಣವಾಗುವುದು.

ಪ್ರತಿಯೊಬ್ಬರಲ್ಲೂ ಹೊರಪ್ರಪಂಚದಂತೆ ಒಳಪ್ರಪಂಚವೂ ಇದೆ. ಹೊರಪ್ರಪಂಚ ಆತನ ಒಳಪ್ರಪಂಚದ ಪ್ರತಿಬಿಂಬ ಎಂದರಿಯಬೇಕು. ಹೊರಪ್ರಪಂಚದಲ್ಲಿ ಕೆಟ್ಟದ್ದನ್ನು ನೋಡುತ್ತಿದ್ದರೆ ಒಳಪ್ರಪಂಚದಲ್ಲಿಯೂ ಕೆಟ್ಟದ್ದಿದೆ ಎಂದೇ ಅರ್ಥ. ಹೊರಪ್ರಪಂಚದಲ್ಲಿ ಸುಂದರವಾದುದನ್ನು, ಒಳ್ಳೆಯದನ್ನು ಕಾಣುವಂತಾದರೆ ಒಳಪ್ರಪಂಚದಲ್ಲೂ ಅದು ಅವ್ಯಕ್ತವಾಗಿದೆ ಎಂದೇ ಅರ್ಥ. ಹಾಗಾಗಿ `ಮನಸ್ಸಿನಂತೆ ಮಹಾದೇವ’ ಎನ್ನುವುದು. ಒಳ್ಳೆಯ ಮಾತು, ಕೃತಿಗಳಿಂದ ಸತ್ಪರಿಣಾಮ ಆಗುವುದೇ ಎಂದರೆ ಖಂಡಿತ ಆಗುವುದು. ಅನುಭವ ಮಂಟಪದ ಸದಸ್ಯರಾದವರು ಶರಣರ ಸತ್ಸಂಗ ಮತ್ತು ಅವರ ಸಂವಾದದಿಂದ ಎಷ್ಟೆಲ್ಲ ಬದಲಾವಣೆ ಆದರು ಎನ್ನುವುದು ಇತಿಹಾಸದಿಂದ ತಿಳಿದುಬರುವುದು. ಸೂಳೆಯಾಗಿದ್ದ ಸಂಕವ್ವೆ ಅನುಭವಮಂಟಪದ ಆದರ್ಶಗಳನ್ನು ಅರಿತು ತನ್ನ ವೃತ್ತಿಯನ್ನು ತ್ಯಜಿಸಿ ಶರಣೆಯಾದಳು. ಚೋರನಾಗಿದ್ದ ಚಿಕ್ಕಣ್ಣ ಅನುಭಾವಿಯಾದ. ಈ ನೆಲೆಯಲ್ಲಿ ಒಳ್ಳೆಯ ವಾತಾವರಣದಿಂದ ಮನುಷ್ಯ ಒಳ್ಳೆಯವನಾಗುತ್ತಾನೆ ಎನ್ನುವುದರಲ್ಲಿ ಅನುಮಾನವಿಲ್ಲ. ಯಾರೇ ಆಗಲಿ ಇನ್ನೊಬ್ಬರ ತೋರಿಕೆ, ಒತ್ತಡಕ್ಕಾಗಿ ಪ್ರಾಮಾಣಿಕನಂತೆ ನಡೆದುಕೊಳ್ಳಬೇಕಿಲ್ಲ. ತನಗೆ ತಾನೇ ಪ್ರಾಮಾಣಿಕನಾಗಬೇಕು. ಸಿದ್ದೇಶ್ವರ ಸ್ವಾಮಿಗಳವರ ಒಂದು ಕತೆ ಸೊಗಸಾಗಿದೆ. ಒಬ್ಬ ಸರೋವರಕ್ಕೆ ಹೋಗಿ ನೀರು ಕುಡಿದು ಥೂ ಈ ನೀರು ರುಚಿ ಇಲ್ಲ ಎಂದನಂತೆ. ಆಗ ಸರೋವರ ಹೇಳಿದ್ದು: ನಿನ್ನ ಬಾಯಲ್ಲಿ ತುಂಬಿಕೊಂಡಿರುವುದನ್ನು ಮೊದಲು ಉಗಿದು ಬಾಯಿಯನ್ನು ಸ್ವಚ್ಛ ಮಾಡಿಕೊಂಡು ನಂತರ ನೀರು ಕುಡಿ ಎಂದು. ಮನದಲ್ಲಿ ಕೊಳಕು ತುಂಬಿಕೊಂಡು ಜಗತ್ತು ಕೊಳಕಾಗಿದೆ ಎಂದರೆ ಅದು ಕಾಮಾಲೆ ರೋಗ ಪೀಡಿತನ ಸ್ವಭಾವವಾಗುವುದು. ಪ್ರಪಂಚ ಸುಂದರವಾಗಿಯೇ ಇದೆ. ತಮ್ಮ ಕುತ್ಸಿತ ಬದುಕಿನಿಂದಾಗಿ ಪ್ರಪಂಚ ಕ್ರೌರ್ಯದಿಂದ ಕೂಡಿದೆ ಎಂದರೆ ತಪ್ಪು ಪ್ರಪಂಚದ್ದಲ್ಲ. ಬದಲಾಗಬೇಕಾದ್ದು ಪ್ರಪಂಚವಲ್ಲ, ಅದನ್ನು ಸರಿಯಾಗಿ ನೋಡುವ ದೃಷ್ಟಿಯನ್ನು ಕಳೆದುಕೊಂಡಿರುವ ಮಾನವ. ಅದನ್ನೇ ಬಸವಣ್ಣನವರು ಲೋಕದ ದೋಷಗಳನ್ನು ತಿದ್ದುವ ಮೊದಲು ನಿಮ್ಮ ನಿಮ್ಮ ತನು, ಮನವನ್ನು ಸಂತೈಸಿಕೊಳ್ಳಿ ಎಂದದ್ದು. ವ್ಯಕ್ತಿ ತನ್ನನ್ನು ತಾನು ಬದಲಾಯಿಸಿಕೊಳ್ಳದಿದ್ದರೆ ಆತ ಜಗತ್ತನ್ನು ಹೇಗೆ ಬದಲಾಯಿಸಲು ಸಾಧ್ಯ? ಅದಕ್ಕಾಗಿಯೇ ಶರಣರು ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ ಎಂದದ್ದು.

ಮಾನವ ಜೀವನ ಒಂದು ಪರೀಕ್ಷೆ ಇದ್ದಂತೆ. ಶಾಲಾ ಕಾಲೇಜುಗಳಲ್ಲಿ ನಡೆಯುವುದು ಸಹ ಪರೀಕ್ಷೆಯೇ. ಆದರೆ ಜೀವನ ಪರೀಕ್ಷೆಗೂ, ಶಾಲಾ ಕಾಲೇಜಿನ ಪರೀಕ್ಷೆಗೂ ತುಂಬಾ ಅಂತರ ಇದೆ. ಶಾಲಾ ಕಾಲೇಜಿನ ಪರೀಕ್ಷೆಯಲ್ಲಿ ಬೇಗ ಫಲಿತಾಂಶ ಪಡೆಯಬಹುದು. ಆದರೆ ಜೀವನ ಪರೀಕ್ಷೆಯಲ್ಲಿ ಅಷ್ಟು ಬೇಗ ಫಲಿತಾಂಶ ಪಡೆಯಲಾಗುವುದಿಲ್ಲ. ಇಲ್ಲಿನ ಫಲಿತಾಂಶಕ್ಕಾಗಿ ಮತ್ತೊಬ್ಬರತ್ತ ನೋಡಬೇಕಾಗಿಲ್ಲ, ಫಲಿತಾಂಶ ಪ್ರಕಟಿಸಲಿ ಎಂದು ಕಾಯಬೇಕಾಗಿಲ್ಲ. ಏಕೆಂದರೆ ಜೀವನ ಪರೀಕ್ಷೆಯಲ್ಲಿ ಪರೀಕ್ಷೆ ಬರೆಯುವವ, ಮೌಲ್ಯಮಾಪನ ಮಾಡುವವ ಒಬ್ಬನೇ. ಒಳ್ಳೆಯ ಮಾತುಗಳನ್ನು ಆಡುತ್ತ, ಆಡಿದಂತೆ ನಡೆಯುತ್ತ ಜೀವನ ಪರೀಕ್ಷೆಯಲ್ಲಿ ಪಾಸಾಗಬೇಕಾಗುತ್ತದೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ತನ್ನ ಬಣ್ಣಿಸಬೇಡ ಎಂದು ಹೇಳಿದರೆ, ಕೇಳಿದರೆ ಸಾಲದು. ಅವುಗಳ ಸಾರವನ್ನು ಅರಿತು ಅಂತರಂಗದಲ್ಲಿ ಚಿಂತನ ಮಂಥನ ಮಾಡಿ ಆಂತರಿಕ ಮತ್ತು ಬಾಹ್ಯ ಬದುಕನ್ನು ಶುದ್ಧಿ ಮಾಡಿಕೊಳ್ಳುವುದು ಬಹುಮುಖ್ಯ. ಸಪ್ತಶೀಲಗಳ ಆಶಯ ಅರಿತು ಅವುಗಳನ್ನು ಮನದಾಳಕ್ಕೆ ಇಳಿಸಿಕೊಂಡು ಅವುಗಳ ಆಶಯದಂತೆ ವ್ಯಕ್ತಿ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕಾಗುತ್ತದೆ. ಇದಕ್ಕೆ ಸತ್ಸಂಗದ ಅವಶ್ಯಕತೆಯೂ ಇದೆ. ವ್ಯಕ್ತಿ ತನಗೆ ತಾನೇ ಬದಲಾಗಬೇಕು ಎನ್ನುವ ಅರಿವನ್ನು ಸತ್ಸಂಗ ಮೂಡಿಸುವುದು. ಆಗ ಆಂತರಿಕ ಜ್ಯೋತಿ ಪ್ರಜ್ವಲಿಸುವುದು. ಬಹುತೇಕ ಜನರು ಹೊರಗಿನ ಬದಲಾವಣೆಗೆ ಒತ್ತು ಕೊಟ್ಟರೆ ಅಲ್ಲಮ ಒಳಗಿನ ಬದಲಾವಣೆಗೆ ಒತ್ತುಕೊಟ್ಟಿದ್ದಾರೆ. ಒಳಗಿನ ಬದಲಾವಣೆ ಹೊರಗಿನ ಬದಲಾವಣೆಗೂ ಕಾರಣವಾಗುವುದು. ಕಳಬೇಡ, ಕೊಲಬೇಡ ಎಂದು ಕೇವಲ ವಚನ ಹೇಳುವುದಲ್ಲ; ವಚನದ ಆಶಯವನ್ನು ಅಂತರಾಳಕ್ಕೆ ಇಳಿಸಿಕೊಂಡು ಆಚರಣೆಯಲ್ಲಿ ತರುವುದು ಮುಖ್ಯವಾಗಬೇಕು. ಆಂತರಿಕ ಶುದ್ಧಿಯನ್ನು ಕಾಯ್ದುಕೊಂಡರೆ ಬಾಹ್ಯ ಶುದ್ಧಿ ಸುಲಭವಾಗುವುದು. ಆದುದರಿಂದ ಸತ್ಸಂಗ, ಸಾತ್ವಿಕರ ಜೊತೆ ಸಂವಾದ ನಿಜಕ್ಕೂ ಪರಿಣಾಮಕಾರಿ. ಅದರ ಪರಿಣಾಮ ತಕ್ಷಣ ಕಾಣದಿರಬಹುದು. ಅದು ಪ್ರಜ್ಞೆಯಾಗಿ ಅಂತರಂಗವನ್ನು ಬೆಳಗುವುದು. ಪ್ರಜ್ಞೆಯುಳ್ಳವ ಆಂತರಿಕವಾಗಿ ಮತ್ತು ಬಾಹ್ಯವಾಗಿ ಒಳಿತಿನ ಕಾರ್ಯಗಳನ್ನೇ ಮಾಡುವ ಸಾಧ್ಯತೆಗಳಿವೆ. ಅದು ಬೇರೆಯವರಿಗೆ ಕಾಣದಿದ್ದರೂ ಅಂತರಂಗಕ್ಕೆ ಕಂಡೇ ಕಾಣುವುದು.

ಬುದ್ಧ ಜನರನ್ನು ನಾಲ್ಕು ರೀತಿ ವಿಂಗಡಿಸುವನು. 1. ಕತ್ತಲೆಯಿಂದ ಕತ್ತಲೆಗೆ ಸಾಗುವವರು. 2. ಕತ್ತಲೆಯಿಂದ ಬೆಳಕಿನತ್ತ ಹೆಜ್ಜೆ ಹಾಕುವವರು. 3. ಬೆಳಕಿನಿಂದ ಕತ್ತಲೆಯ ಕಡೆ ಮುಖ ಮಾಡುವವರು. 4. ಬೆಳಕಿನಿಂದ ಬೆಳಕಿನೆಡೆಗೆ ನಡೆಯುವವರು. ಕತ್ತಲೆಯಿಂದ ಕತ್ತಲೆಯತ್ತ ನಡೆಯುವುದು ಎಂದರೆ ಅಜ್ಞಾನ, ಮೌಢ್ಯ, ದಾಸ್ಯ, ದಾರಿದ್ರ್ಯ ಇಂಥವುಗಳನ್ನು ಹೆಚ್ಚಿಸಿಕೊಳ್ಳುವುದು. ಆಗ ಬದುಕು ನರಕವಾಗುವುದು. ಜೀವನದಲ್ಲಿ ಏನೆಲ್ಲ ಸಂಕಷ್ಟ ಸವಾಲುಗಳು ಎದುರಾದರೂ ಅದಕ್ಕೆ ಅಂಜದೆ, ಅಳುಕದೆ ಸಾಧನೆಯತ್ತ ಮುಖ ಮಾಡುವುದೇ ಕತ್ತಲೆಯಿಂದ ಬೆಳಕಿನೆಡೆಗೆ ಪ್ರಯಾಣ. ಕೆಲವರಿಗೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ತಕ್ಕಮಟ್ಟಿನ ಶಿಕ್ಷಣವೂ ಇರುತ್ತದೆ. ಆದರೂ ಅದರ ಸದುಪಯೋಗ ಮಾಡಿಕೊಳ್ಳದೆ ದಾರಿತಪ್ಪುವರು. ದುಶ್ಚಟಗಳ ದಾಸರಾಗುವರು, ದುಂದುವೆಚ್ಚ ಮಾಡುವರು, ದುಶ್ಚಿಂತನೆಯಲ್ಲಿ ಕಾಲ ತಳ್ಳುವರು. ಇದು ಬೆಳಕಿನಿಂದ ಕತ್ತಲೆಯತ್ತ ಹೆಜ್ಜೆ ಹಾಕಿದಂತೆ. ತಂದೆ ತಾಯಿಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವರು. ಶಾಲೆಯಲ್ಲಿ ಗುರುಗಳು ಬೋಧನೆಯ ಮೂಲಕ ಬದುಕಿಗೆ ಬೇಕಾದ ಶಕ್ತಿಯನ್ನು ತುಂಬುವರು. ಮುಂದೆ ಶರಣರ ವಿಚಾರಗಳನ್ನು ಅರಿತು ಆಚರಣೆಯಲ್ಲಿ ತರುವ ಸಂಕಲ್ಪ ಮಾಡಿ ಅದರಲ್ಲಿ ಯಶಸ್ಸು ಸಾಧಿಸುವರು. ಇದು ಬೆಳಕಿನಿಂದ ಬೆಳಕಿನ ಕಡೆ ಮುಖ ಮಾಡಿದಂತೆ. ಮನುಷ್ಯ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಬೇಕೇ ಹೊರತು ಬೆಳಕಿನಿಂದ ಕತ್ತಲೆಯ ಕಡೆಗೆ ಪ್ರಯಾಣ ಮಾಡಬಾರದು. ಆದರೆ ಎಷ್ಟೋ ಜನರು ಬೆಳಕಿನಿಂದ ಕತ್ತಲೆಯ ಕಡೆಗೆ ಸಾಗುವುದನ್ನು ನೋಡುತ್ತೇವೆ. ಅಂಥವರನ್ನು ಕಂಡಾಗ ತುಂಬಾ ವ್ಯಥೆಯಾಗುವುದು. ಈ ಕ್ಷಣ ನಮ್ಮ ಕೈಯಲ್ಲೇ ಇದೆ. ಅದನ್ನು ಸದುಪಯೋಗಮಾಡಿಕೊಂಡು ವ್ಯಕ್ತಿಗತ ಮತ್ತು ಸಾರ್ವಜನಿಕವಾಗಿ ಸತ್ಕಾರ್ಯ ಮಾಡುವತ್ತ ಹೆಜ್ಜೆ ಹಾಕಬೇಕು. ಆತ್ಮಕಲ್ಯಾಣದೊಂದಿಗೆ ಲೋಕಲ್ಯಾಣ ಮಾಡುವುದೇ ಬೆಳಕಿನಿಂದ ಬೆಳಕಿನೆಡೆಗೆ ಸಾಗುವ ಕ್ರಿಯೆ. ಪ್ರತಿಯೊಬ್ಬರೂ ಸಂದರ್ಭಾನುಸಾರ ಕತ್ತಲೆಯಿಂದ ಕತ್ತಲೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಬೆಳಕಿನಿಂದ ಕತ್ತಲೆಯೆಡೆಗೆ, ಬೆಳಕಿನಿಂದ ಬೆಳಕಿನೆಡೆಗೆ ನಡೆಯುತ್ತಲೇ ಇರುತ್ತಾರೆ. ವ್ಯಕ್ತಿ ತಾನು ಯಾವ ದಿಕ್ಕಿನತ್ತ ಸಾಗುತ್ತಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಬಹುಮುಖ್ಯ. ಆತ ಪ್ರತಿಕ್ಷಣವೂ ಒಳ್ಳೆಯದನ್ನು ಸ್ವಾಗತಿಸುವ, ಒಳ್ಳೆಯದನ್ನು ಮಾಡುವ ಸಂಕಲ್ಪ ತಳೆಯಬೇಕು. ಆಗ ಆನಂದವಾಗಿರಲು ಸಾಧ್ಯ. ಖಂಡಿತ ಮುಂದೆ ಒಳ್ಳೆಯದಾಗುತ್ತದೆ ಎನ್ನುವ ನಿರೀಕ್ಷೆ, ಆಶಾಭಾವನೆ ಮನುಷ್ಯನಿಗಿರಬೇಕು. ಎಂದೂ ನಿರಾಶಾವಾದಕ್ಕೆ ಅವಕಾಶವೀಯಬಾರದು. ಒಬ್ಬ ಆದರ್ಶದ ದಾರಿಯಲ್ಲಿ ನಡೆಯಬೇಕೆಂದಾಗಲೇ ಅನೇಕ ರೀತಿಯ ವಿಪತ್ತುಗಳು ಎದುರಾಗಬಹುದು. ಅವುಗಳನ್ನು ಹೇಗೆ ಎದುರಿಸಬೇಕು ಎನ್ನುವ ವಿವೇಕವನ್ನು ಕಳೆದುಕೊಳ್ಳಬಾರದು. ಬದಲಾಗಿ ಅವಿವೇಕಿಯಂತೆ ವರ್ತಿಸಿದರೆ ಆತ ಕತ್ತಲೆಯಿಂದ ಕತ್ತಲೆಗೆ ಸಾಗುವನು. ಇಲ್ಲವೇ ಬೆಳಕಿನಿಂದ ಕತ್ತಲೆಯೆಡೆಗೆ ಸಾಗುವನು. ವಿವೇಕ ಜಾಗೃತವಾದರೆ ಕತ್ತಲೆಯಿಂದ ಬೆಳಕಿನೆಡೆಗೆ, ಬೆಳಕಿನಿಂದ ಬೆಳಕಿನೆಡೆಗೆ ಹೋಗುವನು. ಈ ನೆಲೆಯಲ್ಲಿ ಪ್ರಭುದೇವರ ಒಂದು ವಚನ ನೆನಪಾಗುವುದು:

ಒಳಗೆ ತೊಳೆಯಲರಿಯದೆ ಹೊರಗ ತೊಳೆದು ಕುಡಿವುತ್ತಿರ್ದರಯ್ಯಾ,
ಪಾದೋದಕ ಪ್ರಸಾದವನರಿಯದೆ.
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರಾ.

ಮನುಷ್ಯ ತೊಳೆಯಬೇಕಾಗಿರುವುದು ಹೊರಗೆ ಮಾತ್ರವಲ್ಲ; ತನ್ನೊಳಗೆ ತಾನು ಸ್ವಚ್ಛಮಾಡಿಕೊಳ್ಳಬೇಕು. ಆಗ ಕತ್ತಲೆಯಿಂದ ಕತ್ತಲೆಗೆ ಹೋಗುವುದು ಕಡಿಮೆಯಾಗಿ ಬೆಳಕಿನೆಡೆಗೆ ಅಡಿಯಿಡುವನು. ಅದರ ಫಲವಾಗಿ ಬೆಳಕಿನಿಂದ ಬೆಳಕಿನೆಡೆಗೆ ಪ್ರಯಾಣಿಸಲು ಸಾಧ್ಯ. ಇದು ತಕ್ಷಣ ಆಗುವ ಪ್ರಕ್ರಿಯೆ ಅಲ್ಲ; ಒಳಗೇ ಮಾಗುವ ಕ್ರಿಯೆ. ಒಳಗೆ ಮಾಗುವ ಮೂಲಕ ನಿಜಬೆಳಕನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗುವನು. ಬುದ್ಧ, ಬಸವಣ್ಣ ಮತ್ತಿತರ ಮಹನೀಯರು ಇದೇ ದಾರಿಯಲ್ಲಿ ನಡೆದವರು. ಅರಿವಿಲ್ಲದಾಗ ಪ್ರತಿಯೊಬ್ಬರೂ ಕತ್ತಲೆಯಿಂದ ಕತ್ತಲೆಯ ಕಡೆಗೆ, ಬೆಳಕಿನಿಂದ ಕತ್ತಲೆಯೆಡೆಗೆ ಹೋದವರೇ. ಅರಿವು ಜಾಗೃತವಾದಾಗ ತಮ್ಮನ್ನು ತಾವು ತಿದ್ದಿಕೊಂಡು ಬೆಳಕಿನ ಕಡೆಗೆ ನಡೆಯುವರು. ಕೆಲವರಿಗೆ ಅರಿವಿದ್ದರೂ ತಾವು ಮಾಡುವುದೇ ಸರಿ ಎನ್ನುವ ಅಹಂಕಾರ ಬೆಳೆಸಿಕೊಳ್ಳುವರು. ಅಂಥವರನ್ನು ಕತ್ತಲೆಯಿಂದ ಬೆಳಕಿನ ಕಡೆ ಕರೆದೊಯ್ಯುವುದು ಸಾಧ್ಯವಾಗದ ಮಾತು. ಬೆಳಕಿನಲ್ಲಿದ್ದರೂ ಕತ್ತಲೆಯತ್ತಲೇ ವೇಗವಾಗಿ ಸಾಗುವ ಸ್ವಭಾವದವರನ್ನು ಯಾರು ತಾನೆ ಬೆಳಕಿನೆಡೆಗೆ ತಳ್ಳಲು ಸಾಧ್ಯ? ಬೆಳಕಿನಿಂದ ಬೆಳಕಿನೆಡೆಗೆ ಹೋಗಬೇಕೆನ್ನುವುದು ಬಹುದೊಡ್ಡ ಆದರ್ಶ ಮತ್ತು ಆಶಯ. ಇದು ಗೊತ್ತಿದ್ದರೂ ಕೆಲವರು ಬೆಳಕಿನಿಂದ ಕತ್ತಲೆಯತ್ತಲೇ ಹೆಜ್ಜೆ ಹಾಕುತ್ತಿರುತ್ತಾರೆ. ಅಂಥವರು ತಮ್ಮ ಸಮಾಧಿಯನ್ನು ತಾವೇ ತೋಡಿಕೊಳ್ಳುವರು. ಒಂದು ವಾಹನವನ್ನು ಬಳಸದೆ ನಿಂತಲ್ಲೇ ನಿಲ್ಲಿಸಿದರೆ ಅದು ಕೆಟ್ಟು ಹಾಳಾಗುವುದು. ಅದರಂತೆ ಮನುಷ್ಯ ಪ್ರಜ್ಞಾವಂತ, ನೀತಿವಂತ, ಸತ್ಯವಂತ ಮತ್ತು ಕ್ರಿಯಾಶೀಲನಾಗದಿದ್ದರೆ ಕತ್ತಲೆಗೆ ಜಾರುವನು. ಅಲ್ಲಮ ಹೇಳಿದಂತೆ ಅಂಗೈಯಲ್ಲಿ ಲಿಂಗಯ್ಯನನ್ನು ಹಿಡಿದುಕೊಂಡು ಅಭಿಷೇಕ ಮಾಡುವ ಮೂಲಕ ಹೊರಗೆ ತೊಳೆಯುವ ಕ್ರಿಯೆಯಲ್ಲಿ ಕೆಲವರು ಪ್ರವೀಣರು. ಅವರು ಎಂಥವರೂ ಮೆಚ್ಚಿ ತಲೆದೂಗುವಂತೆ ಭಕ್ತಿಯ ಪ್ರದರ್ಶನ ಮಾಡುವರು. ಭಕ್ತಿ ಪ್ರದರ್ಶನದ ಸರಕಲ್ಲ. ಅದು ಅಂತರಂಗದ ನಿಧಿ. ಭಕ್ತಿಯ ಪ್ರದರ್ಶನ ಮಾಡುವವರಿಗೆ ತಮ್ಮೊಳಗೆ ತಾವು ಏನಾಗಿದ್ದೇವೆ ಎನ್ನುವುದು ತಿಳಿದೇ ಇರುತ್ತದೆ. ಅಂಥವರನ್ನು ಕುರಿತೇ ಪ್ರಭುದೇವರು ಹೇಳಿದಂತಿದೆ:

ಕಂಗಳ ಮುಂದೆ ಕತ್ತಲೆ ಇದೇನೊ?
ಮನದ ಮುಂದಣ ಮರಣ (ಮರವೆ?) ಇದೇನೊ?
ಒಳಗಣ ರಣರಂಗ ಹೊರಗಣ ಶೃಂಗಾರ!
ಬಳಕೆಗೆ ಬಂದ ಬಟ್ಟೆ ಇದೇನೊ ಗುಹೇಶ್ವರಾ?

`ಹೊರಗಣ ಶೃಂಗಾರ, ಒಳಗಣ ರಣರಂಗ’ ಎನ್ನುವಂತಾಗಿದೆ ಹಲವರ ಸ್ಥಿತಿ. ಹಾಗಾಗಿ ಮನುಷ್ಯ ಹೊರಗೆ ಮಾತ್ರ ತೊಳೆಯದೆ ಒಳಗೂ ತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಒಳಗೆ ತೊಳೆಯುವಲ್ಲಿ ಮೈಮರೆತರೆ ಬೆಳಕಿನಿಂದ ಮತ್ತೆ ಕತ್ತಲೆಯ ಕಡೆಗೇ ಹೋಗುವುದು ಅನಿವಾರ್ಯ. ಎಲ್ಲೇ ಅಪಘಾತಗಳಾಗುವುದು ಮೈಮರೆವು ಆವರಿಸಿದಾಗಲೇ. ಮೈಮರೆವು ಆಗಬಾರದೆಂದರೆ ಬಸವಣ್ಣನವರು ಹೇಳಿದಂತೆ ಶಿರವನ್ನು ಹೊನ್ನ ಕಳಸವಾಗಿಸಿಕೊಳ್ಳಬೇಕು. ಜ್ಞಾನದ ಬಲದಿಂದ ಅಜ್ಞಾನವನ್ನು ನಿವಾರಿಸಿಕೊಳ್ಳಬೇಕು. ದೇವರು ಮನುಕುಲಕ್ಕೆ ಬೇಕಾದ ಸೌಲಭ್ಯ ಕಲ್ಪಿಸಿದ್ದರೂ ಅದನ್ನು ಅರ್ಥಮಾಡಿಕೊಳ್ಳದೆ ಸ್ವೇಚ್ಛಾಚಾರಿಯಾಗಿ ವರ್ತಿಸಿದರೆ ತನ್ನ ಬದುಕನ್ನು ತಾನೇ ನರಕವಾಗಿಸಿಕೊಳ್ಳುವನು. ಅದಕ್ಕಾಗಿಯೇ ಅಕ್ಕನಾಗಮ್ಮನವರು `ಮನದೊಡೆಯ ಮಹಾದೇವ ಮನವ ನೋಡಿಹೆನೆಂದು ಮನುಜರ ಕೈಯಿಂದ ಒಂದೊಂದ ನುಡಿಸುವನು’ ಎಂದಿರುವುದು. ನಮ್ಮ ಮನಸ್ಸನ್ನು ನಾವೇ ಕೆಲವೊಮ್ಮೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ದೇವರು ಬೇರೆಯವರ ಕಡೆಯಿಂದ ಏನೇನೋ ನುಡಿಸುವನಂತೆ. ಆತ ಒಳ್ಳೆಯದರಂತೆ ಕೆಟ್ಟ ಮಾತುಗಳನ್ನೂ ನುಡಿಸಬಹುದು. ಆಗ ಆತ ಕಳವಳಪಡದೆ ತನ್ನ ದೋಷಗಳನ್ನು ತಾನೇ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಯಾರಾದರೂ ಹೊಗಳಿದರೆ ಯಾಕೆ ಹೊಗಳಿದರು, ಯಾಕೆ ತೆಗಳಿದರು ಎಂದು ಯೋಚನೆ ಮಾಡಬೇಕು. ಇದನ್ನು ಬಿಟ್ಟು ಹೊಗಳಿದಾಗ ಖುಷಿಯಿಂದ ಬೀಗಿ, ತೆಗಳಿದಾಗ ಆಕ್ರೋಶ ತೋರುತ್ತ ಅಂಥವರ ವಿರುದ್ಧ ಕತ್ತಿಮಸೆಯುವ ಸ್ವಭಾವ ಹಲವರದು. ಹೊಗಳಿಕೆ, ತೆಗಳಿಕೆ ಎರಡೂ ಅತಿರೇಕಗಳೇ. ಈ ಅತಿರೇಕಗಳನ್ನು ಬಿಟ್ಟು ಸಮಾಧಾನದಿಂದ ವ್ಯಕ್ತಿ ತನಗೆ ತಾನೇ ಆ ನುಡಿಗಳ ವಿಶ್ಲೇಷಣೆ ಮಾಡಿಕೊಳ್ಳಬೇಕು. ಆಗ ಬೇಕಾದ್ದನ್ನು ಸ್ವೀಕರಿಸಿ, ಬೇಡವಾದದ್ದನ್ನು ಹೊರಹಾಕಲು ಸಾಧ್ಯವಾಗುವುದು.

ದಡ್ಡನಿಗೆ ಒಂದೇ ದಾರಿಯಾದರೆ ಜಾಣನಿಗೆ ಹಲವು ದಾರಿ. ಮಾತನಾಡುವವರು ಯಾರು? ಅವರು ಏನು ಹೇಳ್ತಾರೆ ಅನ್ನುವುದನ್ನು ಗಮನಿಸಬೇಕು. ಹೇಳುವ ವ್ಯಕ್ತಿ ಗುರು, ಜಗದ್ಗುರು, ಮಂತ್ರಿ, ಅಧಿಕಾರಿ ಎಂದು ಅವರು ಹೇಳುವುದೆಲ್ಲ ಸತ್ಯ ಎಂದು ಭಾವಿಸಬೇಕಾಗಿಲ್ಲ. ಒಬ್ಬ ಅಧಿಕಾರಿ ಭ್ರಷ್ಟನಾಗಿದ್ದು ಆದರ್ಶ ಹೇಳುತ್ತಿದ್ದರೆ ಆತನ ಆದರ್ಶಗಳಿಗೆ ಅರ್ಥವಿಲ್ಲವಾಗುವುದು. ಇವತ್ತು ನಾಡಿನಲ್ಲಿ ಆಗುತ್ತಿರುವುದು ಇದೇ ದುರಂತ. ದೊಡ್ಡ ದೊಡ್ಡ ಸ್ಥಾನದಲ್ಲಿರುವವರು ಆದರ್ಶ ಹೇಳುತ್ತಾರೆಯೇ ಹೊರತು ಪಾಲಿಸುತ್ತಿಲ್ಲ. ಆದರೂ ನಾನು ಹೇಳುತ್ತೇನೆ, ಕೇಳು ಎನ್ನುವ ಗರ್ವ ಅವರಲ್ಲಿರುತ್ತದೆ. ಅಂಥವರಿಂದ ಏನನ್ನೂ ಕಲಿಯಲಾಗುವುದಿಲ್ಲ. ಅವರು ಹೇಳಿದ್ದಕ್ಕೆಲ್ಲ ತಲೆದೂಗುವುದಾದರೆ ಅದು ನಮ್ಮ ಅಸೆಂಬ್ಲಿ ಇಲ್ಲವೇ ಪಾರ್ಲಿಮೆಂಟಿನಂತಾಗುವುದು. ಅಂಥ ಸಂದರ್ಭದಲ್ಲಿ ನಮಗೆ ಅನುಭವಮಂಟಪ ನೆನಪಾಗಬೇಕು. ಬಸವಣ್ಣನವರು ಹೇಳುವಂತೆ ಸಜ್ಜನರ ಸಂಗ ಮಾಡಬೇಕು. ದುರ್ಜನರಿಂದ ದೂರ ಇರಬೇಕು. ಇದನ್ನು ನಮ್ಮ ಶಾಲಾ ಕಾಲೇಜುಗಳಲ್ಲಿ ಖಂಡಿತ ಕಲಿಸುವುದಿಲ್ಲ. ಅಲ್ಲಿ ಕಲಿಸುವುದು ಕೇವಲ ವಿಷಯ ಸಂಗ್ರಹಿಸಿ ಪರೀಕ್ಷೆಯಲ್ಲಿ ಅದನ್ನೇ ಬರೆದು ಉನ್ನತ ಶ್ರೇಣಿಯಲ್ಲಿ ಪಾಸಾಗುವುದನ್ನು ಮಾತ್ರ. ಹಾಗಾಗಿ ಅಂಥವರು ಮುಂದೆ ಜೀವನಪರೀಕ್ಷೆಯಲ್ಲಿ ಸೋಲುವರು. ಜೀವನ ಪರೀಕ್ಷೆಯಲ್ಲಿ ಗೆಲ್ಲಬೇಕು ಎಂದರೆ ಅನುಭವಮಂಟಪದ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು.

Previous post ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
Next post ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…

Related Posts

ಅಬದ್ಧ ಆರ್ಥಿಕತೆ
Share:
Articles

ಅಬದ್ಧ ಆರ್ಥಿಕತೆ

March 5, 2019 ಡಾ. ಪಂಚಾಕ್ಷರಿ ಹಳೇಬೀಡು
ಅರ್ಥವ್ಯವಸ್ಥೆ ಎಂದರೆ ಸಾಮನ್ಯ ಅರ್ಥದಲ್ಲಿ ಹಣಕಾಸು ನಿರ್ವಹಣೆ. ಒಬ್ಬ ವ್ಯಕ್ತಿಯಿಂದ ಹಿಡಿದು ಗೃಹ, ಗ್ರಾಮ, ರಾಜ್ಯ, ರಾಷ್ಟ್ರಗಳ ನಿರ್ವಹಣೆಯ ತನಕ ಅರ್ಥವ್ಯವಸ್ಥೆಯ ಜಾಡು ಹಬ್ಬಿ...
ಹಳದಿ ಹೂವಿನ ಸುತ್ತಾ…
Share:
Articles

ಹಳದಿ ಹೂವಿನ ಸುತ್ತಾ…

November 9, 2021 ಲಕ್ಷ್ಮೀಪತಿ ಕೋಲಾರ
ನಾನು ಕಾಲದ ಸೆಳವಿಗೆ ಉತ್ಕಟವಾಗಿ ಪಕ್ಕಾದವನು. ಹಾಗೆಯೇ ಕಾಲದ ಸೆಳವಿಗೆ ಕಿವುಡಾದವನು ಕೂಡ! ಇದು ದ್ವಂದ್ವವಲ್ಲ. ತಮ್ಮತಮ್ಮ ಪಾಡಿಗವು ಎರಡೂ ನಿಜಗಳೇ. ಯಾವ ಸೆಳವಿಗೆ ಪಕ್ಕಾದೆ,...

Comments 12

  1. Vijayakumar Kammar
    May 11, 2022 Reply

    ಪೂಜ್ಯರ ಲೇಖನ ಚಂದವಾಗಿದೆ. As expected his writings about values of inner consiousness is excellant.
    🙏🙏🙏🙏🙏

  2. ಪಾಂಚಾಕ್ಷರಿ ಹಳೇಬೀಡು
    May 14, 2022 Reply

    ಅಂತರಂಗ‌ ಅರಳಿಸುವ ಲೇಖನ.
    ದೊಡ್ಡ ದೊಡ್ಡ ಸ್ಥಾನದಲ್ಲಿರುವವರು ಆದರ್ಶ ಹೇಳುತ್ತಾರೆಯೇ ಹೊರತು ಪಾಲಿಸುತ್ತಿಲ್ಲ ಎನ್ನುವುದು ನೂರರಷ್ಟು ಸತ್ಯ. ಅವರು ಎಲ್ಲರಿಗೂ ಬಸವ ತತ್ವ ಪಾಲಿಸಲು ತಿಳಿಸುತ್ತಾರೆ ತನ್ನನ್ನು ಬಿಟ್ಟು.

    ಶರಣುಶರಣಾರ್ಥಿ

  3. ಕಾಶೀಪತಿ ದುರ್ಗಾ
    May 19, 2022 Reply

    ಒಳಗ ತೊಳೆಯುವ ಹಾದಿ ತೋರಿಸಿದ ಗುರುಗಳಿಗೆ ಶರಣಾರ್ಥಿಗಳು. ಅಂತರಂಗ ಶುದ್ಧಿಯೇ ಬಹಿರಂಗ ಶುದ್ಧಿ ಎಂದರು ಅಪ್ಪ ಬಸವಣ್ಣನವರು.

  4. Deveerappa Katagi
    May 19, 2022 Reply

    `ಹೊರಗಣ ಶೃಂಗಾರ, ಒಳಗಣ ರಣರಂಗ’ – ನಮ್ಮ ಆಧುನಿಕ ಬದುಕಿಗೆ ಕನ್ನಡಿ ಹಿಡಿಯುವಂತಹ ಮಾತುಗಳು, ತೋರಿಕೆಯ ಹಿಂದಿನ ಕರಾಳ ಮುಖವನ್ನು ಪರಿಚಯಿಸುವ ವಿನೂತನ ಶೈಲಿಯ ಲೇಖನ ಬಹಳ ಹಿಡಿಸಿತು. ಪೂಜ್ಯರ ಮಾತುಗಳು ನೇರವಾಗಿರುತ್ತವೆ, ಸರಳ ಹಾಗೂ ಸ್ಪಷ್ಟವಾಗಿರುತ್ತವೆ, ಅವರ ವ್ಯಕ್ತಿತ್ವದಂತೆಯೇ ಸ್ಫುಟವಾಗಿರುತ್ತವೆ. ಅವರ ಲೇಖನಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡಿದ್ದೇವೆ.

  5. Jahnavi Naik
    May 19, 2022 Reply

    ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ತನ್ನ ಬಣ್ಣಿಸಬೇಡ- ವಚನ ಪಾಲನೆ ಲಿಂಗಾಯತರಲ್ಲಿ ಕಡ್ಡಾಯವಾಗಿ ಪಾಲಿಸಲೇ ಬೇಕು ಎನ್ನುವ ಪರಿಪಾಠ ಬಂದರೆ ಕರ್ನಾಟಕ ಸ್ವರ್ಗವಾಗಿ ಬಿಡುತ್ತದೆ.

  6. Vishwanath Hiramath
    May 23, 2022 Reply

    ಜೀವನ ನಿಜಕ್ಕೂ ಒಂದು ಪರೀಕ್ಷೆಯಿದ್ದಂತೆ, ಪ್ರತಿದಿನವೂ ಹೊಸ ಹೊಸ ಸವಾಲುಗಳು ಎದುರಾಗುತ್ತಿರುತ್ತವೆ. ಸತ್ಯ ಶುದ್ಧ ಶರಣ ಇವುಗಳನ್ನು ಸರಿಯಾಗಿ ನಿಭಾಯಿಸಬಲ್ಲ, ಬುದ್ಧಿಯವರ ಬುದ್ಧಿಮಾತುಗಳು ಮನನ ಯೋಗ್ಯವಾಗಿವೆ.

  7. Manjunatha D
    May 29, 2022 Reply

    ಬಹಳ ಮಹತ್ವದ ವಿಷಯದ ಮೇಲೆ ಗುರುಗಳು ಇಲ್ಲಿ ಮಾತನಾಡಿದ್ದಾರೆ. ಅವರ ಬುದ್ಧಿಮಾತುಗಳನ್ನು ಕೇಳುವ ಕಿವಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಇಚ್ಛೆ ನಮ್ಮಲ್ಲಿರಬೇಕಷ್ಟೇ. ವಚನಗಳು ಬಾಯಿ ಚಪ್ಪರಿಸುವ ಮಾತುಗಳಲ್ಲ ಎಂದು ಹಿಂದೊಮ್ಮೆ ಭಾಷಣದಲ್ಲಿ ಶ್ರೀಗಳು ಹೇಳಿದ್ದರು.

  8. Tipperudrappa Ramanagar
    May 29, 2022 Reply

    ನನ್ನಲ್ಲಿರುವ ಅನೇಕ ಗೊಂದಲಗಳನ್ನು ಬಯಲು ಲೇಖನಗಳು ಪರಿಹರಿಸಿವೆ. ಪ್ರತಿತಿಂಗಳು ತಪ್ಪದೆ, ಬಹಳ ಆಸಕ್ತಿಯಿಂದ ಇಲ್ಲಿನ ವಿಚಾರಗಳನ್ನು ಓದಿಕೊಳ್ಳುತ್ತೇನೆ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇನೆ. ವಂದನೆಗಳು.

  9. ಶಾಂತಮೂರ್ತಿ, ಬೀರೂರು
    May 31, 2022 Reply

    ಮನದೊಡೆಯ ಮಹಾದೇವ ಮನವ ನೋಡಿಹೆನೆಂದು ಮನುಜರ ಕೈಯಿಂದ ಒಂದೊಂದ ನುಡಿಸುವನು’ ಎಂದಿರುವುದು. ನಮ್ಮ ಮನಸ್ಸನ್ನು ನಾವೇ ಕೆಲವೊಮ್ಮೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ದೇವರು ಬೇರೆಯವರ ಕಡೆಯಿಂದ ಏನೇನೋ ನುಡಿಸುವನಂತೆ. ಆತ ಒಳ್ಳೆಯದರಂತೆ ಕೆಟ್ಟ ಮಾತುಗಳನ್ನೂ ನುಡಿಸಬಹುದು… ಸುಂದರ, ಅರ್ಥಗರ್ಭಿತ ವಿಚಾರಗಳು.

  10. Shivarudra B
    Jun 14, 2022 Reply

    ಹೊಲಸೆದ್ದು ಹೋಗಿರುವ ಒಳಗನ್ನು ತೊಳೆಯಬೇಕೆಂದು ಸ್ವಾಮೀಜಿಯವರು ಕೊಟ್ಟ ಕರೆ ನಮ್ಮ ಕಣ್ಣು ತೆರೆಸಬೇಕಾಗಿದೆ. ಅವರಾದರೂ ಮಠದಲ್ಲಿ ಸವಾಲುಗಳ ಮಧ್ಯೆ ಬದುಕುತ್ತಿರುವವರು. ಅವರ ದಿಟ್ಟ ನಡೆ-ನುಡಿಗಳು ಸಮಾಜಕ್ಕೆ ಅಗತ್ಯವಾಗಿ ಬೇಕಾಗಿವೆ.

  11. Yashavanth
    Jun 14, 2022 Reply

    ಗುರುಗಳಲ್ಲಿ ನನ್ನದೊಂದು ಪ್ರಶ್ನೆ- ಒಳ್ಳೆಯವರಿಗೇ ಯಾಕೆ ಕಷ್ಟಗಳು ಬರುತ್ತವೆ? ಪ್ರಾಮಾಣಿಕರಿಗೇ ಯಾಕೆ ತೊಂದರೆಗಳು ಸಾಲಾಗಿ ನಿಂತಿರುತ್ತವೆ? ಇದು ಕೇವಲ ಸಾಮಾನ್ಯರಿಗಲ್ಲಾ, ಸಂತರಿಗೂ, ಸ್ವಾಮಿಗಳಿಗೂ…. ಎಲ್ಲರಿಗೂ ಅನ್ವಯಿಸುವ ಮಾತು ಮತ್ತು ಪ್ರಶ್ನೆ.

  12. Ganesh P.L
    Jun 30, 2022 Reply

    I do accept as true with all the ideas you have presentd to your post. They are very convincing…

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ನೆಮ್ಮದಿ
ನೆಮ್ಮದಿ
April 6, 2020
ಹಾಯ್ಕುಗಳು
ಹಾಯ್ಕುಗಳು
November 10, 2022
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
September 7, 2021
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
Copyright © 2023 Bayalu