Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
Share:
Articles April 29, 2018 ಡಾ. ಶಶಿಕಾಂತ ಪಟ್ಟಣ

ಶರಣರ ಚರಿತ್ರೆಯ ಮೇಲೆ ಹೊಸಬೆಳಕು

ಕಲ್ಯಾಣದಲ್ಲಿ ಕಂಬದ ಮಾರಿ ತಂದೆ ಎಂದು ಪ್ರಸಿದ್ಧಗೊಂಡ ವಚನಕಾರ ಕದಂಬರ ರಾಜ್ಯದ ಇಂದಿನ ಪೊಂಡ ತಾಲೂಕಿನ ಕಾವಳೆ ಪುಟ್ಟ ಹಳ್ಳಿಯ ಮೀನುಗಾರ. ಬಸವಾದಿ ಶರಣರ ಅನುಭಾವ ಕ್ರಾಂತಿಗೆ ಆಕರ್ಷಿತನಾಗಿ ಕಲ್ಯಾಣಕ್ಕೆ ಹೆಜ್ಜೆ ಹಾಕಿದ ಶರಣ. ವೃತ್ತಿಯಲ್ಲಿ ಮೀನುಗಾರ. ಕದಂಬ ಎಂಬುದು ತಪ್ಪು ಉಚ್ಛಾರದಿಂದ ಕಂಬದ ಮಾರಿ ತಂದೆಯಾಗಿದೆ ಅಥವಾ ಆತನು ತನ್ನ ಮೀನು ಹಿಡಿಯಲು ಬಳಸುವ ಕಂಬದಿಂದ ಆತನಿಗೆ ಕಂಬದ ಮಾರಿ ತಂದೆ ಎಂಬ ಹೆಸರೂ ಬಂದಿರಬಹುದು ಎಂಬುದು ನನ್ನ ತರ್ಕ.

ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣರ ಮತ್ತು ಸೋವಿದೇವನ ಸೈನಿಕರಲ್ಲಿ ಘೋರ ಯುದ್ಧ ನಡೆಯಿತು. ಬಹುತೇಕ ಶರಣರು ಚೆನ್ನಬಸವಣ್ಣನವರ ನೇತೃತ್ವದಲ್ಲಿ ವಿರೋಧಿ ಸೈನಿಕರನ್ನು ಎದುರಿಸುತ್ತಾ, ಕಾದ್ರೊಳ್ಳಿ, ಮುರುಗೋಡ, ಮುನವಳ್ಳಿ, ಸವದತ್ತಿ ಮಾರ್ಗವಾಗಿ ಒಂದು ತಂಡ ಸಾಗಿದರೆ, ಇನ್ನೊಂದು ತಂಡವು ಜಗಳಬೆಟ್ಟ, ಕಕ್ಕೇರಿ, ಲಿಂಗನ ಮಠ… ಹೀಗೆ ಉಳವಿಗೆ ಹೋದರು. ಕಕ್ಕೇರಿಯಿಂದ ಖಾನಾಪುರ ಮಾರ್ಗವಾಗಿ ಕಂಬದ ಮಾರಿ ತಂದೆ ತನ್ನ ಹುಟ್ಟೂರು ಕಾವಳೆಗೆ (ಕೋಳಿ ಬೆಸ್ತರು, ಮೀನುಗಾರರು ಸಮಾಜದವರಿಂದ ಈ ಊರಿಗೆ ಕಾವಳೆ ಅಂತ ಬಂದಿರಬಹುದು) ಹೋಗಿರಬಹುದು.

ತರ್ಕಕ್ಕೆ ಕಾರಣಗಳು
1) ಕಾವಳೆಯಲ್ಲಿ ಇರುವ ಶಾಂತ ದುರ್ಗಾ ದೇವಸ್ಥಾನ ಗೌಡ ಸಾರಸ್ವತ ಬ್ರಾಹ್ಮಣರ ಕುಲ ದೇವತೆ. ಗೌಡ ಸಾರಸ್ವತ ಅಂದರೆ ಒಕ್ಕಲುತನ ಪ್ರಧಾನ ಶೈವ ವರ್ಗ, ಉದಾಹರಣೆಗೆ ಕಾಮತ, ಪ್ರಭು, ಶೆಣೈ, ಪೈ. ಕಾಮತ ಅಂದರೆ ಕಮತ ಮಾಡುವವನು, ನೇಗಿಲಯೋಗಿ. ಬಸವಣ್ಣನವರು ಕೂಡ ಕಮ್ಮೆ ಕುಲಕ್ಕೆ ಸೇರಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಂದರೆ ಮೂಲತಃ ಅವರೂ ಕೃಷಿಕರು ಎಂದರ್ಥ.
ಅಲ್ಲಿರುವ ಶಿವನಾಕಾರದ ಪ್ರತಿಮೆಯ ಕೊರಳಲ್ಲಿ ಕರಡಗಿ ಲಿಂಗವಿರುವುದು ಒಂದು ಸೋಜಿಗ ಮತ್ತು ಕುತೂಹಲಕರ ಸಂಗತಿ.

2) ಇನ್ನೊಂದು ಪ್ರಮುಖ ಕಾರಣವೆಂದರೆ ಕಾವಳೆ ಗ್ರಾಮದಲ್ಲಿ ಶ್ರೀಮದ್ ಸ್ವಾಮಿಗಳ ಮಠವಿದೆ. ಆ ಮಠಕ್ಕೆ ಗೌಡ ಸಾರಸ್ವತ ಮತ್ತು ಕೋಳಿ ಸಮಾಜ ಬೆಸ್ತರು ಮತ್ತು ಮೀನುಗಾರರು ವಿಶೇಷವಾಗಿ ಕುಲದೇವರು ಎಂದು ನಂಬಿ ನಡೆದುಕೊಳ್ಳುತ್ತಾರೆ. ಆ ಮಠವು ಶರಣ ಸಂಪ್ರದಾಯದ ಮಠದಂತೆ ಕಾಣುತ್ತದೆ. ಲಿಂಗಾಯತ ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾದ ಸ್ಥಳಗಳಲ್ಲಿ ಇದೂ ಒಂದಾಗಿರಬಹುದು.
3) ಪೋರ್ಚುಗೀಸರು ಹದಿನಾರನೆಯ ಶತಮಾನದಲ್ಲಿ ಕಾವಳೆ ಶಾಂತ ದುರ್ಗಾ ಮಂದಿರವನ್ನು ನಾಶ ಮಾಡಿದ್ದರ ಉಲ್ಲೇಖವಿದೆ. ಆಗ ಅಲ್ಲಿದ್ದ ಬಹುತೇಕ ಸ್ಮಾರಕಗಳು, ಶಾಸನಗಳು, ಸಮಾಧಿಗಳು ನಾಶವಾಗಿವೆ. ಇದರಿಂದ ಇತಿಹಾಸದ ನಿಖರವಾದ ಕೊಂಡಿ ನಮಗೆ ಸಿಕ್ಕಿಲ್ಲದಿರುವ ಸಾಧ್ಯತೆ ಇದೆ.

ಶರಣ ಸಾಹಿತ್ಯವು ಜಗವು ಕಂಡ ಸಾರ್ವಕಾಲಿಕ ದೇಸಿ ಜನಪರ ಸಾಹಿತ್ಯ. ದಯೆ, ಸಮತೆ, ಶಾಂತಿ, ಪ್ರೀತಿಯಂಥ ಮೌಲ್ಯಗಳನ್ನು ಬೀರಿದ ಸಾಹಿತ್ಯ. ಬಸವಣ್ಣ, ಅಲ್ಲಮ, ಚೆನ್ನಬಸವಣ್ಣ, ಸಿದ್ಧರಾಮ, ಅಕ್ಕಮಹಾದೇವಿ, ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ, ಕಾಳವ್ವೆ, ಗಂಗಮ್ಮ ಮುಂತಾದ ಕ್ರಾಂತಿಕಾರಕ ವಚನಕಾರರಿಂದ ಹುಟ್ಟು ಪಡೆದ ಸಾಹಿತ್ಯ. ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ರಚಿತಗೊಂಡ ವಚನ ಸಾಹಿತ್ಯವು ಬದುಕಿನ ಎಲ್ಲಾ ಮಗ್ಗಲನ್ನು ಕಂಡು ಹುಟ್ಟು ಪಡೆದದ್ದು. ಸಾಮಾಜಿಕ, ರಾಜಕೀಯ, ಆರ್ಥಿಕ, ನೈತಿಕ ಕ್ಷೇತ್ರಗಳ ಒಳ ಪದರುಗಳನ್ನು ಇಲ್ಲಿ ಶರಣರು ಬಿಚ್ಚಿ ಇಟ್ಟಿದ್ದಾರೆ. ವಚನಗಳು ಕನ್ನಡದ ಆಸ್ತಿ. ಶರಣರು ಅಪ್ಪಟ ಕನ್ನಡದ ಹೋರಾಟಗಾರರು. ಕನ್ನಡ ನಾಡು ನುಡಿಗೆ ದುಡಿದ ಸಾಂಸ್ಕೃತಿಕ ಹರಿಕಾರರು.
ವಚನ ಸಾಹಿತ್ಯವು ಕಲ್ಯಾಣ ಕ್ರಾಂತಿಯ ನಂತರ 300 ವರ್ಷಗಳವರೆಗೆ ಕಾಲ ಗರ್ಭದಲ್ಲಿ ಹುದುಗಿ ಹೋಗಿತ್ತು.15 ನೇ ಶತಮಾನದಲ್ಲಿ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳು ನೂರೊಂದು ವಿರಕ್ತರನ್ನು ಸಂಘಟಿಸಿ ಹಳ್ಳಿಗೆ ಏಕ ರಾತ್ರಿ ಪಟ್ಟಣಕ್ಕೆ ಪಂಚ ರಾತ್ರಿಯಾಗಿ ಸಂಚಾರಕ್ಕೆ ಅಣಿಗೊಳಿಸಿ ಮರೆತು ಹೋಗಿದ್ದ ವಚನ ಸಾಹಿತ್ಯವನ್ನು ಮತ್ತೆ ಬೆಳಕಿಗೆ ತಂದು ಸಂಸ್ಕರಿಸಿ ಸಂಕಲಿಸಿ ಎರಡನೆಯ ಅಲ್ಲಮನೆನಿಸಿಕೊಂಡರು.

ಹದಿನಾರನೆಯ ಶತಮಾನದಲ್ಲಿ ಹಂಪಿಯ ಪ್ರೌಢದೇವರಾಯನ ಕಾಲದಲ್ಲಿ ಮತ್ತೆ ಸಂಕಲನ ಕಾರ್ಯ ನಡೆಯಿತು. ಆಗ ಅನೇಕ ವಚನಕಾರರ ಚರಿತ್ರೆ ಮತ್ತು ವಚನಗಳು ವಿಕ್ಷಿಪ್ತಗೊಂಡವು. ಹದಿನೇಳನೇ ಶತಮಾನದಲ್ಲಿ ಲಿಂಗಾಯತ ಚಳುವಳಿಯಲ್ಲಿ ವೀರಶೈವ ಪದ ಸೇರಿಕೊಂಡಿತು. ಶೂನ್ಯ ಸಂಪಾದನೆಯ ಕೃತಿಯು ಪ್ಲೇಟೋನ ಸಂಭಾಷಣೆಗಿಂತ ಉತ್ಕೃಷ್ಟವಾಗಿದ್ದರೂ ಅದರಲ್ಲಿ ವೈಭವೀಕರಣ, ಪ್ರಕ್ಷಿಪ್ತತೆ, ಐತಿಹಾಸಿಕ ಚಾರಿತ್ರಿಕ ತಪ್ಪುಗಳು, ದೋಷಗಳು ಸ್ವಲ್ಪ ಮಟ್ಟಿಗೆ ನುಸುಳಿಕೊಂಡಿವೆ. ಇವನ್ನು ತಿದ್ದುಪಡಿ ಮಾಡಿದರೆ ಅದಕ್ಕೆ ಜಗತ್ತಿನ ಎಲ್ಲಾ ಗೌರವಗಳನ್ನೂ ಮೀರುವ ಮೌಲಿಕ ಗ್ರಂಥವೆನಿಸುತ್ತದೆ.

ಅದೇ ರೀತಿ ಅನೇಕ ಕೆಳಸ್ತರದ ವಚನಕಾರರ ಅನುಭವವನ್ನು ಮುಚ್ಚಿ ಹಾಕುವ ಕ್ರೂರ ಕಾರ್ಯಕ್ಕೆ ಕೆಲ ಶೈವ ಸಂಕಲನಕಾರರು ಉದ್ದೇಶಪೂರಿತವಾಗಿ ವಚನಕಾರರ ಕಾಯಕ ನಾಮ ವೃತ್ತಿ ಬದಲಿಸುವುದರ ಜೊತೆಗೆ ಮಡಿವಂತಿಕೆ ಮುಂದುವರೆಸಿಕೊಂಡು ಹೋದರು. ಇಂತಹ ತಪ್ಪುಗಳನ್ನು ತಿದ್ದುವ ಪರಿಷ್ಕರಣೆ ಕಾರ್ಯ ನಡೆಯಬೇಕಿದೆ.

ಕದಂಬ ಮಾರಿ ತಂದೆಯವರ ವಚನದಲ್ಲಿ ಅವರ ಕಾಯಕವನ್ನು ಸ್ಪಷ್ಟವಾಗಿ ಗುರುತಿಸಬಹುದು.

ಮಾಟ ಕೂಟವೆಂಬ ತೆಪ್ಪವ ಮಾಡಿ 
ಮೂರ್ತಿ ವಿಶ್ವಾಸವೆಂಬ ಕಣೆಯ ಹಿಡಿದು 
ಒತ್ತುತ್ತಿರಲಾಗಿ 
ಹಾಯಿ ಮಾರುತನೆಂಬ ಮತ್ಸ್ಯ 
ಆ ಸರಹು ನೋಡಿ ತೆಪ್ಪವನೊತ್ತುತ್ತಿರಲಾಗಿ 
ತ್ರಿವಿಧದ ಸತ್ತೆಯ, ಸರ್ವೇಂದ್ರಿಯ ಬೆಳೆದ ಪಾಸೆಯ 
ಮರೆಯಲ್ಲಿ ತಪ್ಪಿ ಹೋಯಿತ್ತು ಮತ್ಸ್ಯ
ಇಂತಿ ಬರಿ ಕುಕ್ಕೆಯ ಹೊತ್ತು 
ಮತ್ಸ್ಯವ ಕಾಣದೆ ಇದರಚ್ಚಿಗವಾ ಬಿಡಿಸಾ
ಕದಕತನ ಬೇಡ ಕದಂಬಲಿಂಗಾ.
ಮೂಲತಃ ಕದಂಬನಾಡಿನ ಮೀನುಗಾರರಾದ ಕಂಬದ (ಕದಂಬ) ಮಾರಿತಂದೆಯವರ ಬದುಕಿನ ಶೈಲಿಯಾಗಿದ್ದ ಅಲೆಮಾರಿತನವನ್ನು ಈ ವಚನವು ಸೂಚಿಸುತ್ತದೆ. ಮೀನು ಹಿಡಿಯುವ ತಮ್ಮ ಕಾಯಕದಲ್ಲಿನ ಒಂದೊಂದೂ ಆಂಗಿಕ ಕ್ರಿಯೆಗಳನ್ನು ಇಲ್ಲಿ ಸೊಗಸಾಗಿ ಪಾರಮಾರ್ಥಿಕ ಜೀವನಕ್ಕೆ ಹೋಲಿಕೆ ಮಾಡಿದ್ದಾರೆ. ಆ ಮೂಲಕ ಕಾಯಕವನ್ನೇ ಅನುಭಾವದ ಯೋಗವಾಗಿಸಿದ್ದಾರೆ.

ಮಾಟ ಕೂಟವೆಂಬ ತೆಪ್ಪವ ಮಾಡಿ:
ಇಲ್ಲಿ ವಿಚಾರ ಮತ್ತು ಅದಕ್ಕೆ ಪೂರಕವಾದ ಬದುಕು ಇವುಗಳನ್ನು ಮೇಳೈಸಿ ನದಿಯಲ್ಲಿ ಹೋಗುವ ತೆಪ್ಪವ ಮಾಡಿ ಮೀನು ಹಿಡಿಯಲು ಹೋಗಬೇಕೆನ್ನುತ್ತಾರೆ.
ಅಂದರೆ ಸತ್ಯ ಶುದ್ಧವಾದ ಶರೀರ ಮತ್ತು ಮನಸ್ಸು ಸದೃಢ ತೆಪ್ಪಕ್ಕೆ ಕಾರಣ ಎನ್ನುತ್ತಾರೆ.

ಮೂರ್ತಿ ವಿಶ್ವಾಸವೆಂಬ ಕಣೆಯ ಹಿಡಿದು ಒತ್ತುತ್ತಿರಲಾಗಿ:
ನಿಶ್ಚಲ ಭಾವ ಸಂಕಲ್ಪದ ಗುರಿಯೆಂಬ ಮೂರ್ತಿ ಹಾಗೂ ವಿಶ್ವಾಸವೆಂಬ ಕಣೆ ಹಗ್ಗವ ಮಾಡಿ, ಅದನ್ನು ಹಿಡಿದುಕೊಂಡು ದೋಣಿ ಸಾಗಿಸುತ್ತಾ ಹೋಗುತ್ತಾನೆ ಮೀನುಗಾರ ಮೀನು ಹಿಡಿಯಲು.
ಹಾಯಿ ಮಾರುತನೆಂಬ ಮತ್ಸ್ಯ ಆ ಸರಹು ನೋಡಿ ತೆಪ್ಪವನೊತ್ತುತ್ತಿರಲಾಗಿ
ಹಾಯಿ ಎಂಬ ಮಾಯೆಯ ಮತ್ಸ್ಯವನ್ನು ಕಾಣಲಾಗಿ ,ಆ ಮತ್ಸ್ಯದ ಹಿಂದೆ ಮಡುವಿನಲ್ಲಿ ಸರಹು ನೋಡಿ ತೆಪ್ಪವನ್ನೊತ್ತಿರಲಾಗಿ ತ್ರಿವಿಧದ ಸತ್ತೆಯ, ಸರ್ವೇಂದ್ರಿಯ ಬೆಳೆದ ಪಾಸೆಯ ಮರೆಯಲ್ಲಿ ಪಾರಾಗಿ ಹೋಯಿತು ಮೀನು. ಸರಹು ಅಂದರೆ ನೀರಿನ ಪ್ರವಾಹ. ಅದನ್ನು ನೋಡುತ್ತಾ ತೆಪ್ಪವನ್ನು ನಡೆಸುತ್ತಿರಬೇಕು.
ಕಾಯ ವಾಚಾ ಮನಸಾ ಎಂಬ ತ್ರಿವಿಧ ಸತ್ತೆಯ ಮಧ್ಯೆಯೂ ಇಂದ್ರಿಯ ಗುಣಗಳಿಂದ ಪಾಚಿಗಟ್ಟಿದ ಅಂದರೆ ಹದಗೆಟ್ಟ ಮನಸ್ಥಿತಿಯಿಂದಾಗಿ, ಮೀನು ಪಾರಾಗಿತ್ತು. ಬದುಕಿನ ಗುರಿ ನಿಲುಕಲಿಲ್ಲ. ಏಕೆಂದರೆ ದೇಹ, ಮಾತು ಮತ್ತು ಮನಸ್ಸಿನ ಕಸಕಡ್ಡಿಗಳ ನಡುವೆ ಪಂಚೇಂದ್ರಿಯಗಳ ಅವಗುಣಗಳು ಪಾಚಿಗಟ್ಟಿಸಿಬಿಟ್ಟಿವೆ. ಹೀಗಾಗಿ ಮೀನು ಹಿಡಿಯಲು ಸಾಧ್ಯವಾಗಲಿಲ್ಲ.

ಇಂತಿ ಬರಿ ಕುಕ್ಕೆಯ ಹೊತ್ತು … ಕದಕತನ ಬೇಡ ಕದಂಬಲಿಂಗಾ
ಆಶೆ ಆಮಿಷಗಳೆಂಬ ಪಾಸೆ ಮನದಲ್ಲಿ ಹುಟ್ಟಿದ ಮೇಲೆ ಆ ಪಾಸೆಯ ಮರೆಯಲ್ಲಿ ಮೀನು ಮರೆಯಾಗುತ್ತದೆ. ಮೀನುಗಾರನ ಪ್ರಯತ್ನ ನೀರುಪಾಲಾಗುತ್ತದೆ. ಮೀನು ಸಿಗದೆ ಬುಟ್ಟಿ ಖಾಲಿಯಾಗಿಯೇ ಉಳಿಯುತ್ತದೆ. ಜೀವನದ ಸಫಲತೆಯಿಲ್ಲದೆ ಕೇವಲ ಮೀನು ಹಿಡಿಯಲು ಬಳಸಿದ ಕೊಕ್ಕೆ ಮಾತ್ರವೆ ಉಳಿದುಕೊಳ್ಳುತ್ತದೆ. ಬೆಲೆ ಸಿಗದ ಕಾಯಕ ಮತ್ತು ಸಫಲತೆ ಕಾಣದ ಬದುಕು ಎರಡೂ ನಿರರ್ಥಕ. ಇಂತಹ ಪ್ರಸಂಗವನ್ನು ನೀನೇ ಬಿಡಿಸು, ಮೋಸ ಮಾಡಬೇಡ (ಕದಕತನ) ಎಂದು ತಮ್ಮ ಅಂತರಾಳಕ್ಕೆ ಕೇಳಿಕೊಳ್ಳುತ್ತಾರೆ.

ಮೇದಾರ ಕೇತಯ್ಯನ ಸಮಾಧಿಯ ಜಾಡು ಹಿಡಿದು…

ಮೇದಾರ ಕೇತಯ್ಯನ ಸಾವಿನ ಬಗ್ಗೆ ಹಲವು ಉಹಾಪೋಹಗಳಿವೆ. ಅವುಗಳಲ್ಲಿ ಆತನು ಕಲ್ಯಾಣ ಕ್ರಾಂತಿಯ ಪೂರ್ವದಲ್ಲಿಯೇ ಐಕ್ಯನಾದನು ಎಂತಲೂ ಮತ್ತು ಇನ್ನೊಂದು ಆತ ಕಲ್ಯಾಣ ಕ್ರಾಂತಿಯಲ್ಲಿ ಪಾಲ್ಗೊಂಡು ಉಳವಿಯ ಹಾದಿಯಲ್ಲಿ ಐಕ್ಯವಾಗಿರಬಹುದು ಎಂದೂ ಹೇಳಲಾಗುತ್ತಿದೆ. ಈ ಎರಡೂ ಸಾಧ್ಯತೆಗಳ ಮಧ್ಯೆ ಶರಣರ ಸಮಾಧಿ ಶೋಧಿಸುವ ಕಾರ್ಯ ನನ್ನ ಮುಂದಿತ್ತು. ಜನಪದಿಗರು ಮೇದಾರ ಕೇತಯ್ಯನ ಐಕ್ಯ ಕಲ್ಯಾಣ ಕ್ರಾಂತಿಯ ಪೂರ್ವದಲ್ಲಿಯೇ ನಡೆಯಿತು ಎಂದು ತಮ್ಮ ಕಾವ್ಯಗಳಲ್ಲಿ ವಿವರಿಸಿದ್ದಾರೆ.
ನನ್ನ ಕುತೂಹಲಕ್ಕೆ ಚಾಲನೆ ಸ್ಫೂರ್ತಿ ಸಿಕ್ಕಿದ್ದು ಸೋಲಾಪುರದ ಶರಣ ದಶರಥ ವಡತಿಲೇ ಅವರಿಂದ. ಬುರುಡು ಸಮಾಜದ ಹಿರಿಯ ಶರಣರು ನನ್ನ ಶೋಧಕ್ಕೆ ಹೆಗಲು ಕೊಟ್ಟರು.
ಬೀದರ -ಇದು ಬಿದಿರು ಎಂಬ ಸಸ್ಯದಿಂದ ಬಂದ ಹೆಸರು. ಕೇತಯ್ಯ ಮತ್ತು ಸಾತವ್ವಾ ಮಲೆನಾಡಿನ ಬೇಲೂರದಿಂದ ಬಂದಿದ್ದರು ಎನ್ನುವುದಕ್ಕೆ ಜಾನಪದದಲ್ಲಿ ಪುರಾವೆಯಿದೆ. ಅವರ ವೃತ್ತಿ ಕಸುಬು ಬುಟ್ಟಿ ಹೆಣೆಯುವುದು, ರಥ ನಿರ್ಮಿಸುವುದು, ಮೊರ, ನಿಚ್ಚಣಿಕೆ ತಯಾರಿಸುವುದು. ಇದಕ್ಕೆಲ್ಲಾ ಬೇಕಾದ ಕಚ್ಚಾ ಸಾಮಗ್ರಿ ಎಂದರೆ ಬಿದಿರು. ಅದು ಬಸವ ಕಲ್ಯಾಣ ರಾಜ್ಯದ ಬೀದರನಲ್ಲಿ ಹೇರಳವಾಗಿ ಬೆಳೆಯುತ್ತಿತ್ತು. ಈಗಲೂ ಸಾಗರ ಕಾಗೋಡು ಮಾಗೋಡು ಸಿದ್ಧಾಪುರ ಹೊಸನಗರದಲ್ಲಿ ದೊರೆಯುವ ಶೇಷ್ಠ ಮಟ್ಟದ ಬಿದಿರು ಬೀದರನಲ್ಲಿ ದೊರೆಯುತ್ತದೆ.
ಕಲ್ಯಾಣಕ್ಕೆ ಹೋಗಬಯಸಿದ ಕೇತಯ್ಯ ಮತ್ತು ಸಾತವ್ವಾ ದಂಪತಿಗಳು ಮಲೆನಾಡಿನಿಂದ ಉತ್ತಮ ತಳಿಯ ಬಿದಿರು ತಂದು ಅದನ್ನು ಇಂದಿನ ಬೀದರನಲ್ಲಿ ನೆಟ್ಟರು ಎಂಬ ಪ್ರತೀತಿ ಇದೆ.
ಈ ಹಿನ್ನೆಲೆಯ ಮಾಹಿತಿಯೊಂದಿಗೆ ಮೇದಾರ ಕೇತಯ್ಯನವರ ಸಮಾಧಿಯ ಹುಡುಕಾಟ ಶುರುವಾಗಿತ್ತು. ಬೀದರಿನ ಹೊರ ವಲಯದಲ್ಲಿರುವ ಚಿದ್ರಿ ಎಂಬಲ್ಲಿ ಅತ್ಯಂತ ದುಃಸ್ಥಿತಿಯಲ್ಲಿರುವ ಒಂದು ಪುಟ್ಟ ಸಮಾಧಿ ಕಂಡಿತು. ಅದರ ಪಕ್ಕದಲ್ಲಿಯೇ ‘ಬುಟ್ಟಿ ಬಸವಣ್ಣ’ (ಬುತ್ತಿ ಬಸವಣ್ಣ) ಎಂಬ ಅತ್ಯಂತ ಹಳೆಯ ಸಣ್ಣ ಮಂದಿರವಿದೆ. ಈಗಲೂ ಬುರುಡ, ಮೇದಾರ ಸಮಾಜವು ವರ್ಷಕ್ಕೊಮ್ಮೆ ಚಿದ್ರಿಯಲ್ಲಿನ ಸಮಾಧಿಗೆ ಹಾಗೂ ಬುಟ್ಟಿ ಬಸವಣ್ಣನಿಗೆ ದರ್ಶನ ಕೊಟ್ಟು ಪುನೀತರಾಗುತ್ತಾರೆ.
ಬುಟ್ಟಿಯಲ್ಲಿ ಮೇದಾರ ಕೇತಯ್ಯನು ತನ್ನ ಶರಣರಿಗೆ ಬುತ್ತಿಯನ್ನು (ಪ್ರಸಾದವನ್ನು) ಒಯ್ಯುತ್ತಿದ್ದನು. ಹೀಗೆ ಪ್ರಸಾದವನ್ನು ಬುಟ್ಟಿಯಲ್ಲಿ ಒಯ್ಯುತ್ತಿದ್ದವನಿಗೆ ಜನಪದಿಗರು ಬುಟ್ಟಿ ಬಸವಣ್ಣ (ಬುತ್ತಿ ಬಸವಣ್ಣ ) ಎಂದು ಸಂಬೋಧಿಸಿದರು.
ಈಗಿನ ಸಮಾಧಿಯ ಪಕ್ಕದಲ್ಲಿಯೇ ಮೇದಾರ ಕೇತಯ್ಯನು ತಾನು ಸಿದ್ಧಪಡಿಸಿದ ಬುಟ್ಟಿಯನ್ನು ಮಾರುತ್ತಿದ್ದನು. ಎಲ್ಲ ಶರಣರಲ್ಲಿ ಬಸವಣ್ಣನನ್ನು ಕಂಡ ಕಾರಣ ಜನಪದಿಗರು, ಹಳ್ಳಿಯ ಮುಗ್ಧರು ಬುಟ್ಟಿ ಮಾರುವ ಕೇತಯ್ಯನನ್ನು ‘ಬುಟ್ಟಿಯ ಬಸವಣ್ಣ’ ಎಂತಲೇ ಕರೆದರು.
ಕಲ್ಯಾಣ ಕ್ರಾಂತಿಯ ನಂತರ ಬಸವ ಕಲ್ಯಾಣ ಮಾರ್ಗದಿಂದ ಸಾಗಿದ ಶರಣರ ಸೈನ್ಯವು ಸೋಲಾಪುರಕ್ಕೆ ಹೋಗಿ ಅಲ್ಲಿಂದ ಬೇರೆ ಬೇರೆ ಮಾರ್ಗಗಳ ಮೂಲಕ
ವಚನಗಳನ್ನು ಸಾಗಿಸಿದರು. ಕಲ್ಯಾಣ ಕ್ರಾಂತಿಯಲ್ಲಿ ಪಾಲ್ಗೊಂಡ ಕೇತಯ್ಯನ ಪುಣ್ಯಸ್ತ್ರೀ ಸಾತವ್ವ ಮಾತ್ರ ವಚನ ಹೊತ್ತು ಶರಣರೊಂದಿಗೆ ಹೆಜ್ಜೆ ಹಾಕಿ
ಕೊನೆಗೆ ಮಲೆನಾಡಿನ ಬೇಲೂರಿನಲ್ಲಿ ಐಕ್ಯಳಾದಳು ಎಂದು ಐತಿಹ್ಯಗಳಿವೆ.

ಕೇತಯ್ಯ ಮಹಾಶರಣ. ಆತನ ವಚನಗಳು ಅರ್ಥಗರ್ಭಿತ. ತನ್ನ ಕಾಯಕಕ್ಕೆ ಸಂಬಂಧಿಸಿದ ವಿಷಯಗಳನ್ನು ಕೇತಯ್ಯನವರು ಸರಳವಾಗಿ, ಸೊಗಸಾಗಿ ಹೇಳಿಕೊಂಡ ರೀತಿ ಇಲ್ಲಿದೆ.
ಮೊದಲಿಲ್ಲದೆ ಲಾಭವುಂಟೆ?
ನಿರೀಕ್ಷಣೆಯಿಲ್ಲದೆ ಪರೀಕ್ಷೆಯುಂಟೆ?
ಗುರುವಿಲ್ಲದೆ ಲಿಂಗವುಂಟೆ?
ಇಂತೀ ವೇಷದ ಭಾಷೆಗೆ ಹೇಸಿದೆನು ಕಾಣಾ, ಗವರೇಶ್ವರಾ

ಯಾವುದೇ ವ್ಯಾಪಾರದಲ್ಲಿ ಬಂಡವಾಳವಿಲ್ಲದೆ ಲಾಭ ನಿರೀಕ್ಷಿಸಬಹುದೇ ? ಲಾಭಕ್ಕಾಗಿ ದುಡಿಮೆ ಶ್ರಮ ಅಗತ್ಯ. ಅದುವೇ ಮೊದಲಿರಬೇಕು.
ನಿರೀಕ್ಷಣೆ ಎಂದರೆ ನೋಡುವಿಕೆ. ಏನನ್ನೇ ಆಗಲಿ ಪರೀಕ್ಷಿಸುವ ಮುನ್ನ ಮೊದಲು ಅದನ್ನು ನೋಡಬೇಕಲ್ಲವೇ? ನಿರೀಕ್ಷಣೆಯಿಲ್ಲದೆ ಅದರ ಪರೀಕ್ಷಾ ಪರಿಕ್ರಮ ಸಾಧ್ಯವಿಲ್ಲ. ಹಾಗೆಯೇ ಅರಿವೆಂಬ ಗುರುವಿಲ್ಲದೆ ಲಿಂಗವೆಂಬ ಜ್ಞಾನವನ್ನು ಪಡೆಯಲಾಗದು. ಇಂತಹ ಮೂಲ ಆಶಯ ಮರೆತು ವೇಷಧಾರಿಗಳ ಭಾಷೆಗೆ ಹೇಸಿದೆನು ಎಂದು ನುಡಿದಿದ್ದಾರೆ. ಮೂಲ ದ್ರವ್ಯವೇ ಇಲ್ಲದೇ ಬಾಹ್ಯ ಜಗತ್ತಿನ ಲಾಂಛನಗಳನ್ನು ಧರಿಸಿದ ಹಾಗೂ ವ್ಯಕ್ತಿತ್ವದೊಳಗೆ ಗಟ್ಟಿತನವಿಲ್ಲದೆ ಮಾತಿನ ಭಾಷೆಯಲ್ಲಿ ಮರಳು ಮಾಡುವ ವೇಷಧಾರಿಗಳನ್ನು ಕಂಡು ನನಗೆ ಹೇಸಿಗೆಯಾಗುತ್ತಿದೆ ಎನ್ನುತ್ತಾರೆ. ತಾತ್ವಿಕ ನೆಲೆಗಟ್ಟಿಲ್ಲದೆ ಬದುಕುವ ಬಹುರೂಪಿಗಳ ಭಂಡತನವನ್ನು ಖಂಡಿಸಿದ್ದಾರೆ ಮೇದರ ಕೇತಯ್ಯ.
ಮೊದಲು ಹುಸಿ, ಲಾಭ ದಿಟವೆ?
ನಿರೀಕ್ಷಣೆಯಿಲ್ಲದೆ ಪರೀಕ್ಷೆ ಉಂಟೆ?
ಈ ಯಾವ ಸರದಂಗವ, ಗವರೇಶ್ವರಲಿಂಗ ನೀನೇ ಬಲ್ಲೆ?

ಕೇತಯ್ಯನವರು ಬಿದಿರಿನಿಂದ ಬುಟ್ಟಿ ನಿಚ್ಚಣಿಕೆ ಮರ ಮುಂತಾದ ಸಿದ್ಧ ವಸ್ತುಗಳನ್ನು ಮಾಡಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಾರೆ. ಇಂತಹ ವ್ಯಾಪಾರದಲ್ಲಿ ಆರಂಭದಲ್ಲಿಯೇ ಸುಳ್ಳು ಹೇಳಿದರೆ ಅದರಿಂದ ಆಗುವ ಲಾಭವು ಸತ್ಯಶುದ್ಧವಾಗಿರುತ್ತದೆಯೇ? ಗಮನವಿಟ್ಟು ನೋಡಿ ಆರಿಸದೆ ಬಿದಿರಿನ ಗುಣಮಟ್ಟವನ್ನು ಪರೀಕ್ಷಿಸುವುದು ಹೇಗೆ? ಇಂತಹ ಎಲ್ಲ ವ್ಯವಹಾರಗಳನ್ನು ದೇವರೇ ನೀನೇ ಬಲ್ಲೆ ಎನ್ನುತ್ತಾರೆ ಕೇತಯ್ಯನವರು.

Previous post ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
Next post ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…

Related Posts

ಸನಾತನ ಧರ್ಮ
Share:
Articles

ಸನಾತನ ಧರ್ಮ

October 10, 2023 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಸನಾತನ ಧರ್ಮದ ಹೆಸರಿನಲ್ಲಿ ಇವತ್ತು ದೇಶದಲ್ಲೇ ಪರ ಮತ್ತು ವಿರೋಧವಾಗಿ ಮಾತಿನ ಹಾಗೂ ಬರಹದ ಸಮರ ನಡೆದಿದೆ. ತಮಿಳುನಾಡಿನ ಕ್ರೀಡಾಸಚಿವ ಉದಯನಿಧಿ ಸ್ಟಾಲಿನ್ ಅವರು “ಸನಾತನ...
ನಾನು ಕಂಡ ಡಾ.ಕಲಬುರ್ಗಿ
Share:
Articles

ನಾನು ಕಂಡ ಡಾ.ಕಲಬುರ್ಗಿ

September 7, 2021 ಸನತ್ ಕುಮಾರ ಬೆಳಗಲಿ
ಕರ್ನಾಟಕ ಕಂಡ ಹೆಸರಾಂತ ಸತ್ಯಶೋಧಕ ಶರಣ ಡಾ.ಎಂ.ಎಂ. ಕಲಬುರ್ಗಿ ಅವರು ಹಂತಕರ ಗುಂಡಿಗೆ ಬಲಿಯಾಗಿ ಕಳೆದ ಆಗಸ್ಟ್ ೩೦ ಕ್ಕೆ ಆರು ವರ್ಷಗಳಾದವು. ೨೦೧೫ ನೇ ಇಸವಿ ಇದೇ ದಿನ ಬೆಳಗಿನ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತೋರಲಿಲ್ಲದ ಸಿಂಹಾಸನದ ಮೇಲೆ…
ತೋರಲಿಲ್ಲದ ಸಿಂಹಾಸನದ ಮೇಲೆ…
December 22, 2019
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
July 10, 2023
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
September 10, 2022
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
Copyright © 2025 Bayalu