Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅನುಭವ ಮಂಟಪ: ಮುಂದೇನು?
Share:
Articles April 5, 2026 ಡಾ. ಎಸ್.ಎಮ್ ಜಾಮದಾರ

ಅನುಭವ ಮಂಟಪ: ಮುಂದೇನು?

ಈವರೆಗೆ ನೀಡಿದ ವಿವರಗಳು ಅನುಭವ ಮಂಟಪದ ಸ್ಥಾವರಕ್ಕೆ ಮಾತ್ರ ಸೀಮಿತವಾಗಿವೆ. ಸ್ಥಾವರವನ್ನು ಕಟ್ಟುವುದು ಅಷ್ಟೊಂದು ಕಷ್ಟದ ಕೆಲಸವಲ್ಲ ಹಣಕಾಸು ಮತ್ತು ಕಟ್ಟಡದ ಸ್ಪಷ್ಟ ಪರಿಕಲ್ಪನೆ ಇದ್ದರೆ ತಂತ್ರಜ್ಞರು ಕಟ್ಟಡವನ್ನು ಕಟ್ಟಿ ಬೇಗ ಮುಗಿಸುತ್ತಾರೆ. ಆದರೆ ಭವ್ಯವಾದ ಆ ಕಟ್ಟಡದಲ್ಲಿ ಯಾವ ಯಾವ ಕಾರ್ಯಗಳು, ಎಂತೆಂಥ ಪ್ರಯೋಗಗಳು ನಡೆಯಬೇಕು ಎನ್ನುವುದನ್ನು ನಿರ್ಣಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಯಾವ ಯಾವ ಕಾರ್ಯಕ್ರಮಗಳನ್ನು ಯಾರು ಹೇಗೆ ಮತ್ತು ಯಾವಾಗ ನಡೆಸಬೇಕು ಎನ್ನುವುದನ್ನು ನಿರ್ಣಯಿಸುವುದು ಅನುಭವ ಮಂಟಪದಂತಹ ಸರ್ಕಾರಿ ನಿಯಂತ್ರಿತ ಕಾರ್ಯಕ್ರಮಗಳಲ್ಲಿ ಸರಳ ಕೆಲಸವಲ್ಲ. ಅಂತಹ ಕಾರ್ಯಕ್ರಮಗಳ ಯೋಜನೆಯಲ್ಲಿ ಏನೇನೋ ಲೆಕ್ಕಾಚಾರಗಳು ವ್ಯಕ್ತವಾಗುತ್ತವೆ. ಅನೇಕರು ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ ಸಾಮಾಜಿಕ ಉದ್ದೇಶದ ಸೋಗಿನಲ್ಲಿ ಅವಕಾಶ ಗಿಟ್ಟಿಸಿಕೊಂಡು ದಾರಿತಪ್ಪಿಸುತ್ತಾರೆ. ರಾಜಕೀಯ ಸೈದ್ಧಾಂತಿಕ ಹಿತಾಸಕ್ತಿಗಳು ಅಂತಹ ಕಾರ್ಯಕ್ರಮಗಳ ಯೋಜನೆಯೊಳಗೆ ಅಡಗಿರುತ್ತವೆ. ಅಂತಹ ಕೆಲವು ಸಮಸ್ಯೆಗಳು ಅನುಭವ ಮಂಟಪದ ವಿಷಯದಲ್ಲಂತೂ ವಿಪರೀತವಾಗಿವೆ.

ಈ ತರಹದ ಸಮಸ್ಯೆಗಳನ್ನು ಮತ್ತು ಅವುಗಳ ಕ್ಲಿಷ್ಟತೆಯನ್ನು ಕೂಡಲಸಂಗಮದಲ್ಲಿನ ಬಸವ ಅಂತರಾಷ್ಟ್ರೀಯ ಕೇಂದ್ರದಲ್ಲಿ ನೋಡಬಹುದು. ಅಲ್ಲಿ ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಬಸವ ಅಂತರಾಷ್ಟ್ರೀಯ ಕೇಂದ್ರದ ಆರು ಅಂತಸ್ತಿನ ಭವ್ಯ ಕಟ್ಟಡದಲ್ಲಿ ಒಂದು ಮ್ಯೂಜಿಯಮ್ಮನ್ನು ಕಟ್ಟಬೇಕೆಂಬುದು ಮುದ್ನಾಳ ಸಮಿತಿಯ ಶಿಫಾರಸ್ಸಿನಲ್ಲಿದೆ. ಆ ಕಟ್ಟಡ ಮುಗಿದು 22 ವರ್ಷಗಳಾಗಿವೆ. ಆದರೆ ಅದು ಖಾಲಿ ಬಿದ್ದಿದೆ. ಈವರೆಗೆ ಯಾವುದೇ ಮ್ಯೂಸಿಯಂ ಅಲ್ಲಿ ನಿರ್ಮಾಣವಾಗಿಲ್ಲ, ಅದು ಆಗುವ ಸ್ಥಿತಿಯಲ್ಲು ಇಲ್ಲ. ಆದರೆ ಸುಮಾರು 10 ವರ್ಷಗಳ ಹಿಂದೆ 100 ಕೋಟಿ ರೂ ಖರ್ಚಿನ ಮತ್ತೊಂದು ಅನವಶ್ಯ ಕಟ್ಟಡ ಕೈಗೆತ್ತಿಕೊಳ್ಳಲಾಗಿದೆ. ಯಾರು ಅದಕ್ಕೆ ಅಷ್ಟೊಂದು ಹಣ ಕೇಳಿದ್ದರು? ಅದು ಏತಕ್ಕಾಗಿ ಬೇಕು? ಯಾರಿಗೂ ಗೊತ್ತಿಲ್ಲ. 10 ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಆ ಅನವಶ್ಯಕ ಕೆಲಸ ಇನ್ನೂ ಮುಗಿದಿಲ್ಲ. ಅಲ್ಲಿಯೂ ಮ್ಯೂಸಿಯಂನ ರೂಪುರೇಷೆಯ ಬಗ್ಗೆ ಏನೂ ಕೆಲಸವಾಗಿಲ್ಲ. ಮ್ಯೂಜಿಯಂ ರಚನೆ ಹೇಗಿರಬೇಕು, ಅದರಲ್ಲಿ ಬಸವಣ್ಣನವರ ಚರಿತ್ರೆಯ ಯಾವ ಯಾವ ಅಂಶಗಳನ್ನು ಹೇಗೆ ಎಲ್ಲೆಲ್ಲಿ ರಚಿಸಬೇಕೆಂಬ ಬಗ್ಗೆ ನಾಲ್ಕು ಸಲ ಪ್ರಮುಖ ಮಠಾಧಿಶರ ಮತ್ತು ವಚನ ಸಾಹಿತ್ಯದ ದಿಗ್ಗಜರ ಸಭೆ ಕರೆಯಲಾಗಿತ್ತು.

ಅ) ಪ್ರಥಮ ಸಲ ದಿವಂಗತ ಪೂಜ್ಯ ಸಿದ್ದೇಶ್ವರ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಕೂಡಸಂಗಮದಲ್ಲಿ ನಡೆದ ಸಭೆಯಲ್ಲಿ ಅನೇಕ ಹಿರಿಯ ಸ್ವಾಮಿಗಳು, ದಿವಂಗತ ಎಂ.ಪಿ. ಪ್ರಕಾಶ್, ಲೀಲಾದೇವಿ ಪ್ರಸಾದ್, ಡಾ. ಎಂ.ಎಂ. ಕಲಬುರ್ಗಿಯವರಂಥವರು ಭಾಗವಹಿಸಿದ್ದರು. ಅವರೆಲ್ಲ ನೀಡಿದ ನೂರೆಂಟು ಸಲಹೆಗಳ ಮೇಲೆ ಒಮ್ಮತ ಮೂಡಿಸಲು ಸಾಧ್ಯವಾಗಲಿಲ್ಲ.
ಆ) ಎರಡನೇ ಸಭೆಯನ್ನು ಮತ್ತೆ ಕೂಡಲ ಸಂಗಮದಲ್ಲಿಯೇ ಕರೆಯಲಾಗಿತ್ತು. ಅದಕ್ಕೆ ಬೇರೆ ಬೇರೆ ತಜ್ಞರನ್ನು ಉಳಿದ ಪ್ರಸಿದ್ಧ ಸಾಹಿತಿಗಳನ್ನೂ ಕರೆಸಲಾಗಿತ್ತು. ಅದೂ ಸ್ಪಷ್ಟ ಅಭಿಪ್ರಾಯ ನೀಡಲು ಸಾಧ್ಯವಾಗಲಿಲ್ಲ.
ಇ) ಮೂರನೆಯ ಸಭೆಯನ್ನು ಇಳಕಲ್‍ಮಠದ ದಿವಂಗತ ಪೂಜ್ಯ ಮಹಾಂತ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದಿತ್ತು. ವಿಶೇಷವಾಗಿ ಅನುಭವ ಮಂಟಪದ ಬಗ್ಗೆ ಹೆಚ್ಚು ತಿಳಿದಿದ್ದ ಎಲ್ಲ ಪ್ರಸಿದ್ಧ ಹಿರಿಯ ಸ್ವಾಮಿಗಳ ಸಭೆ ಅದಾಗಿತ್ತು. ಆದರೆ ಅವರೆಲ್ಲ ಸಹಜವಾಗಿ ಧಾರ್ಮಿಕ ಅಂಶಗಳಿಗೆ ಹೆಚ್ಚು ಮಹತ್ವ ನೀಡಿದರು.
ಈ) ಕೊನೆಯ ಮತ್ತು ನಾಲ್ಕನೇ ಸಭೆಯು ಧಾರವಾಡದಲ್ಲಿ ಐವತ್ತು ದಿಗ್ಗಜ ಸಾಹಿತಿಗಳನ್ನು ಒಳಗೊಂಡಿತ್ತು. ಆ ಸಭೆಯಲ್ಲಿ ಕೆಲವು ವಿಶಾಲ ತಳಹದಿಯ ಹೆಚ್ಚು ಅರ್ಥವತ್ತಾದ ಸಲಹೆಗಳು ವ್ಯಕ್ತವಾದವು. ಅವುಗಳ ಆಧಾರದ ಮೇಲೆ ಮ್ಯೂಜಿಯಮ್‍ನ ರೂಪುರೇಷೆ ತಯಾರಿಸಲು ಕಲಾಕಾರರಿಂದ ಟೆಂಡರ್ ಕರೆಯಲಾಯಿತು. ಅದರಲ್ಲಿ ಬೆಂಗಳೂರಿನ ಒಬ್ಬ ಕಲಾಕಾರ ಟೆಂಡರ್ ಪಡೆದು ಕೆಲವು ಡಿಜೈನುಗಳನ್ನು ಕಳಿಸಿದ್ದನು. ಆ ಅಂಶಗಳನ್ನು ಯಾವ ಮಾಧ್ಯಮದಲ್ಲಿ (ಕಲ್ಲು, ಸಿಮೆಂಟ್, ಪ್ಲಾಸ್ಟಿಕ್, ಫೈಬರ್, ಗ್ಲಾಸ್ ಇತ್ಯಾದಿ) ಮಾಡಬೇಕೆಂಬ ಚರ್ಚೆ ನಡೆಯಿತು. ಅದಕ್ಕಾಗಿ ಜಗತ್ಪ್ರಸಿದ್ಧ ಅಕ್ಷರಧಾಮ ಮಾದರಿಯ ಮ್ಯೂಸಿಯಮ್ ನಿರ್ಮಿಸುವ ಕುರಿತು ಹೆಚ್ಚು ತಾಂತ್ರಿಕ ಮಾಹಿತಿ ಪಡೆಯಲು ಗುಜರಾತಿನ ಅಕ್ಷರಧಾಮ ನಿರ್ಮಿಸಿದ ಸ್ವಾಮಿ ನಾರಾಯಣ ಪಂಥದ ಪ್ರಮುಖ ಸ್ವಾಮಿ ಮಹಾರಾಜರೊಂದಿಗೆ ಚರ್ಚಿಸಲು ನಾಲ್ಕು ಎಂಜಿನಿಯರುಗಳ ಒಂದು ತಂಡವನ್ನು ಅಕ್ಷರ ಧಾಮಕ್ಕೆ ಕಳಿಸಲಾಗಿತ್ತು. ಅಲ್ಲಿನ ಪ್ರಮುಖ ಸ್ವಾಮಿಗಳೊಂದಿಗೆ ಚರ್ಚೆ ನಡೆದಿತ್ತು. ಅವರು ಉಚಿತ ತಾಂತ್ರಿಕ ಸಹಾಯ ನೀಡಲು ಒಪ್ಪಿದ್ದರು. ಸಹಾಯ ಪಡೆಯಲು ನಿರ್ಣಯವಾಗಿತ್ತು. ಆ ಸಮಯದಲ್ಲಿ ವಿಶೇಷಾಧಿಕಾರಿಗಳು ನಿವೃತ್ತರಾದರು. 2012 ರಿಂದ 2025ರ ವರೆಗೆ ಮ್ಯೂಜಿಯಂ ನಿರ್ಮಿಸುವ ಸಂಪೂರ್ಣ ಕಾರ್ಯ ನಿಂತು 22 ವರ್ಷಗಳು ಕಳೆದಿವೆ. ಅನುಭವ ಮಂಟಪದ ಕಟ್ಟಡ ಮುಗಿದ ನಂತರ ಕೂಡಲಸಂಗಮದ ಬಸವ ಅಂತರಾಷ್ಟ್ರೀಯ ಕೇಂದ್ರದ ಹಾಗೆ ಅದು ಖಾಲಿ ಬಿದ್ದರೆ ಸೋಜಿಗವಲ್ಲ.

ಆದ್ದರಿಂದ 1) ಈಗ ಅಲ್ಲಿ ಪ್ರಗತಿಯಲ್ಲಿರುವ ಸ್ಥಾವರ ಕೆಲಸಗಳು ಮುಗಿವ ಮೊದಲೇ ಆ ಕಟ್ಟಡವು ಉದ್ಘಾಟನೆಯಾದ ಮೇಲೆ ಅದರಲ್ಲಿ ನಡೆಸಬೇಕಾದ ಕಾರ್ಯಕ್ರಮಗಳ ಯೋಜನೆ ತಯಾರಾಗದಿದ್ದರೆ ಆ ಭವ್ಯ ಕಟ್ಟಡ ಖಾಲಿ ಉಳಿವ ಸಾಧ್ಯತೆಯೇ ಹೆಚ್ಚು ಅಥವಾ ಅಸಂಬದ್ಧ, ಅನುಚಿತ, ಅರ್ಥರಹಿತ, ಆಧಾರರಹಿತ, ನಿರುಪಯುಕ್ತ ಕೆಲವು ಕಾರ್ಯಕ್ರಮಗಳು ಹಣ ಖರ್ಚು ಮಾಡುವ ಉದ್ದೇಶದಿಂದಲೆ ನಡೆಯಬಹುದು. ಅನುಭವ ಮಂಟಪದ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳು ಮೂಲ ಉದ್ದೇಶಕ್ಕೆ ಸರಿಹೊಂದುವಂತಹವು ಆಗಿದ್ದರೆ ಅದಕ್ಕೊಂದು ಅರ್ಥ ಬರುತ್ತದೆ. ಇಲ್ಲದಿದ್ದರೆ ಆ ಭವ್ಯಕಟ್ಟಡಕ್ಕೆ ಯಾವುದೇ ಬೆಲೆ ಇರುವುದಿಲ್ಲ.
2) ಅನುಭವ ಮಂಟಪ ಸಂಸ್ಕೃತಿಯ ಮೂಲ ಉದ್ದೇಶಗಳು ಯಾವವು? ಬಸವಣ್ಣನವರು ಅದರ ಮೂಲಕ ಸಾಧಿಸಲು ಹೊರಟಿದ್ದ ಉದ್ದೇಶಗಳು ಯಾವವು? ದೂರ ದೂರದಿಂದ ಅನುಭವ ಮಂಟಪಕ್ಕೆ ಬಂದು ಅದರಲ್ಲಿ ಭಾಗವಹಿಸಿದ ಶರಣ ದಿಗ್ಗಜರ ಉದ್ದೇಶಗಳು ಏನಾಗಿದ್ದವು? ಈಗ ಅವುಗಳಿಗೆ ಏನಾಗಿದೆ? ಈಗಿನ ಸನ್ನಿವೇಶದಲ್ಲಿ ಅನುಭವ ಮಂಟಪದಲ್ಲಿ ಎಂಥೆಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು? ಎನ್ನುವುದನ್ನು ಸೈದ್ಧಾಂತಿಕವಾಗಿ ಚರ್ಚಿಸಿ ನಿರ್ಣಯಿಸಬೇಕಾಗಿದೆ.
3) ಎರಡು ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಒಂದು, ನಿರಂತರವಾಗಿ ಬೆಳಗಿನಿಂದ ಸಂಜೆಯವರೆಗೆ ದಿನಂಪ್ರತಿ ನಡೆಸುವ ಕಾರ್ಯಕ್ರಮಗಳು (ಸಿಖ್ಖರ ಸುವರ್ಣ ಮಂದಿರದಂತೆ ಅಥವಾ ರಾನಕಪುರ, ಪಾವಾಪುರಿ, ಪಾಲಿತಾನಾಗಳಲ್ಲಿ ಜೈನರು ನಡೆಸುತ್ತಿರುವ ಕಾರ್ಯಕ್ರಮಗಳಂತೆ, ಅಥವಾ ಬಹಾಯಿಗಳು ದಿಲ್ಲಿಯ ಕಮಲ ಭವನದಲ್ಲಿ ನಡೆಸುವ ಕಾರ್ಯಕ್ರಮಗಳ ಹಾಗೆ). ಎರಡನೆಯದು, ಪ್ರತಿ ವರ್ಷ ಕಾಲಕಾಲಕ್ಕೆ ನಡೆಸುವ ಕಾರ್ಯಕ್ರಮಗಳು (ಬಸವ ಜಯಂತಿ, ವಿವಿಧ ಶರಣರ ಜಯಂತಿಗಳು, ಶರಣ ಮೇಳ, ಕಲ್ಯಾಣ ಪರ್ವ, ತರಳುಬಾಳು ಹುಣ್ಣಿಮೆ, ಅಂತರಜಾತಿಯ ವಿವಾಹಗಳು, ಪ್ರಜಾರಾಜ್ಯದ ಬಗ್ಗೆ ನಡೆಸುವ ತರಬೇತಿ ಶಿಬಿರಗಳು ಉದಾಹರಣೆಗೆ ಮತದಾರರಿಗೆ ಜಾಗೃತಿ, ನಾಗರಿಕ ಶಿಕ್ಷಣ, ಸಂವಿಧಾನ ಓದು ಇವುಗಳಿಗೆ ಪೂರಕವಾದ ವಿಚಾರ ಸಂಕಿರಣಗಳು, ಇತ್ಯಾದಿ). ಈ ರೀತಿಯ ‘ಅನುಭವ ಮಂಟಪ’ದ ಆಶಯಕ್ಕೆ ತಕ್ಕಂತ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.
4) ಆ ಕಾರ್ಯಕ್ರಮಗಳನ್ನು ನಡೆಸುವ ಜವಾಬ್ದಾರಿ ಯಾರದ್ದು? ಬಸವಕಲ್ಯಾಣ ಅಭಿವೃದ್ದಿ ಮಂಡಳಿಯೋ, ವಿವಿಧ ಮಠಗಳೋ, ಎಲ್ಲ ಮಠಗಳ ಒಕ್ಕೂಟವೋ, ಸರ್ಕಾರ ಮತ್ತು ಶರಣ ಸಮುದಾಯದ ಜಂಟಿ ಜವಾಬ್ದಾರಿಯೋ ಅಥವಾ ಕೆಲವನ್ನು ಸರ್ಕಾರ, ಕೆಲವನ್ನು ಮಠಾಧೀಶರ ಒಕ್ಕೂಟ ಇನ್ನೂ ಕೆಲವನ್ನು ವಿವಿಧ ಮಠಗಳೋ, ಇತ್ಯಾದಿ ವಿವರಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು ಹಾಗೂ ಆ ಬಗ್ಗೆ ಸರ್ಕಾರದ ಅನುಮೋದನೆ ಪಡೆಯುವುದು ಅಗತ್ಯ.
5) ಈ ಕಾರ್ಯಕ್ರಮಗಳಿಗೆಲ್ಲಾ ಖರ್ಚಾಗುವ ದುಡ್ಡು ಎಲ್ಲಿಂದ ಬರುತ್ತದೆ ಎಂಬೆಲ್ಲ ಅಂಶಗಳ ಬಗ್ಗೆ ಸ್ಪಷ್ಟವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಆದರೆ ಅದು ತುಂಬಾ ಕಷ್ಟ. ಆ ಕಷ್ಟದ ನಿವಾರಣೆ ಈಗಿಂದಲೆ ಪ್ರಾರಂಭವಾಗಬೇಕು. ಇಲ್ಲದಿದ್ದರೆ ಅದು ಎಂದೂ ಆಗಲು ಸಾಧ್ಯವಿಲ್ಲ.

ಅನುಭವ ಮಂಟಪವೆಂದರೆ ಉತ್ತಂಗಿ ಚೆನ್ನಪ್ಪನವರು ಹೇಳುವಂತೆ: “ಯಾವ ಸ್ಥಳದಲ್ಲಿ ಅನುಭಾವಿಗಳು ಅನುಭವ ವಿನಿಮಯಕ್ಕಾಗಿ ಸಭೆಯಾಗಿ ಸೇರುತ್ತಾರೊ ಅದೆ ಅನುಭವ ಮಂಟಪ” (ಪುಟ 26). ಅದು ಕೇವಲ ಕಲ್ಲುಮಣ್ಣಿನಿಂದ, ಸಿಮೆಂಟ್, ಕಬ್ಬಿಣ ಬಳಿಸಿ ಕಟ್ಟಿದ ಸ್ಥಾವರವಲ್ಲ. ಅದಕ್ಕೆ ತನ್ನದೇ ಆದ ವಿಶೇಷ ಲಕ್ಷಣಗಳಿವೆ, ಪರಿಕಲ್ಪನೆ ಇದೆ, ಸಿದ್ಧಾಂತವಿದೆ, ಇತಿಹಾಸವಿದೆ. ಅದು ನಿರ್ಜೀವ ಕಟ್ಟಡವಲ್ಲ. ಆ ಕಟ್ಟಡವು ಉದ್ಘಾಟನೆಯಾದ ನಂತರ ಅಲ್ಲಿ ಮೂಲ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಮತ್ತು ಕಾಲಕ್ಕೆ ತಕ್ಕಂತೆ ಮಾರ್ಪಾಟು ಮಾಡಿದ ಕೆಲವಾದರೂ ಕಾರ್ಯಕ್ರಮಗಳು ನಡೆಯದಿದ್ದರೆ ಆ ಕಟ್ಟಡಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಅದು ಸ್ಥಾವರ ಮತ್ತು ಜಂಗಮಗಳ ಸಮತೋಲಿತ ಕೇಂದ್ರವಾಗದಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಖರ್ಚು ಮಾಡುವ ಅಗತ್ಯವಿರಲಿಲ್ಲ. ಹಾಗಾದರೆ, ಅವು ಎಂಥ ಕಾರ್ಯಕ್ರಮಗಳಾಗಿರಬೇಕು? ಅವುಗಳನ್ನು ರೂಪಿಸುವ, ನಿರ್ವಹಿಸುವ ಹೊಣೆಯನ್ನು ಯಾರು ಹೊರಬೇಕು? ಇವು ಮಹತ್ವದ ವಿಚಾರಗಳು.

ಗೊ.ರು.ಚ ಸಮಿತಿಯ ಶಿಫಾರಸ್ಸುಗಳಂತೆ ಈ ಕಟ್ಟಡ ನಿರ್ಮಾಣವಾದಾಗ ಅದೊಂದು ಅತ್ಯಂತ ಆಕರ್ಷಕವಾದ ಭವ್ಯ ಕಟ್ಟಡವಾಗುತ್ತದೆ. ಆದರೆ ಅದಕ್ಕೆ ತಕ್ಕಂತೆ ಸೂಕ್ತ ಕಾರ್ಯಕ್ರಮಗಳು ಅದರಲ್ಲಿ ನಡೆಯದಿದ್ದರೆ, ಬಸವ ತತ್ವಗಳ ಪ್ರಸಾರ, ಪ್ರಚಾರ ಆಗದಿದ್ದರೆ, ಬಸವ ತತ್ವಗಳನ್ನು ಸಾಕಾರಗೊಳಿಸುವ ಸಂಘಟಕರು, ವ್ಯಕ್ತಿಗಳು, ಸಂಘ ಸಂಸ್ಥೆಗಳು ಈಗಿನಿಂದಲೇ ನಿರ್ಮಾಣವಾಗದಿದ್ದರೆ ಮುಂದೊಂದು ದಿನ ಪ್ರಚಾರಪ್ರಿಯರಾದ ರಾಜಕಾರಣಿಗಳಿಂದ ಅದು ಉದ್ಘಾಟನೆಗೊಳ್ಳುತ್ತದೆ. ಯಾರೋ ಬರೆದುಕೊಟ್ಟ ಉದ್ದುದ್ದ ಭಾಷಣಗಳನ್ನು ಆ ಸಮಾರಂಭದಲ್ಲಿ ಮಾಡುತ್ತಾರೆ. ತದನಂತರ ಯಾರೂ ಅದರ ಸೂಕ್ತ ನಿರ್ವಹಣೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕಾಲಕ್ರಮೇಣ ಅಲ್ಲಿಗೆ ಹೋಗುವವರ ಸಂಖ್ಯೆ ಕ್ಷೀಣಿಸುತ್ತ ಹೋಗುತ್ತದೆ. ಅದು ಜೀವವಿಲ್ಲದ ದೇಹದಂತೆ, ಮೂರ್ತಿ ಇಲ್ಲದ ಗುಡಿಯಂತೆ, ಬಾಹ್ಯಾಡಂಬರವುಳ್ಳ ಸತ್ವರಹಿತ ಸ್ಥಾವರವಾಗಿ ಉಳಿಯಬಲ್ಲದು. ಹೇಗೆ ಸಿಖ್ಖರಲ್ಲದವರು ಅಮೃತಸರದಲ್ಲಿರುವ ಸ್ವರ್ಣಮಂದಿರ ನೋಡಲು ಹೋಗುವರೊ, ಬಹಾಯಿಗಳಲ್ಲದವರು ದೆಹಲಿಯ ಇರಾಣಿನ ಬಹಾಯಿ ಧರ್ಮದ ಕಮಲ ಮಂದಿರವನ್ನು ನೋಡಲು ಹೋಗುವರೊ, ಹೇಗೆ ಜೈನರಲ್ಲದವರು ಗುಜರಾತದ ಪಾಲಿತಾನಾ ಹಾಗೂ ರಾಜಸ್ತಾನದ ಸಂಗನೇರ ಮತ್ತು ರಾನಕಪುರಲ್ಲಿನ ಜೈನ ಮಂದಿರಗಳನ್ನು ನೋಡಲು ಹೋಗುವರೊ ಹಾಗೆ ಅನುಭವ ಮಂಟಪ ಒಂದು ಸಾಮಾನ್ಯ ಪ್ರವಾಸಿ ಸ್ಥಳವಾಗಬಹುದಷ್ಟೆ. ಆ ಮೂಲಕ ಬಸವತತ್ವಗಳನ್ನೇ ಆಚರಿಸದ ಮತ್ತು ಸತ್ಯ ಸಾಯಿಬಾಬ, ಬ್ರಹ್ಮಕುಮಾರಿ, ವೇದಾಂತಿಗಳಿಗೆ ಶರಣು ಹೋಗುತ್ತಿರುವ ಲಿಂಗಾಯತರು ಭಂಡ ಅಭಿಮಾನ ಪಡಬಹುದು! ಅದಷ್ಟೇ ಆದರೆ ಸಾಕೇ? ಅಷ್ಟಕ್ಕಾಗಿ ಇಷ್ಟೊಂದು ಬೃಹತ ಕಟ್ಟಡವನ್ನು ಇಷ್ಟೊಂದು ಖರ್ಚಿನಲ್ಲಿ ಕಟ್ಟಬೇಕಾಗಿತ್ತೆ?

ಅ) ಅನುಭವ ಮಂಟಪವು ಕೇವಲ ಲಿಂಗಾಯತರ ಸ್ವತ್ತೇ? ಅದು ಕೇವಲ ಸರ್ಕಾರದ ಸ್ವತ್ತೇ?
ಆ) ಅದರಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳಷ್ಟೇ ನಡೆಯಬೇಕೆ?
ಇ) ಪ್ರಜಾಸತ್ತಾತ್ಮಕ ಶಿಕ್ಷಣ ನೀಡಲು, ಈ) ವಿವಿಧ ರೀತಿಯ ಪ್ರಜಾಸತ್ತಾತ್ಮಕ ನಾಯಕತ್ವ ತರಬೇತಿ ನೀಡಲು,
ಉ) ಜಾತ್ಯಾತೀತ ಸಮ ಸಮಾಜ ನಿರ್ಮಾಣ ಮಾಡಲು, ಊ) ಸ್ತ್ರೀ ಸಮಾನತೆಯನ್ನು ಸಾಧಿಸಲು,
ಎ) ಮೌಢ್ಯಗಳ ಆಚರಣೆಗಳನ್ನು ನಿವಾರಿಸಲು, ಏ) ಸರ್ವಸಮಾನತೆಯ ತತ್ವಗಳನ್ನು ಸಾರಲು,
ಐ) ವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಬೆಳೆಸಲು ಏನೇನು ಮಾಡಬಹುದು? ಎಂತಹ ಕಾರ್ಯಕ್ರಮಗಳನ್ನು ರೂಪಿಸಬಹುದು ಎಂಬುದನ್ನು ನಿರ್ಣಯಿಸಬೇಕಾಗಿದೆ.

ಅನುಭವ ಮಂಟಪವೆಂದರೇನು?

ಅ) ಉತ್ತಂಗಿ ಚೆನ್ನಪ್ಪನವರ ಮೇಲೆ ಉದ್ಧರಿಸಿದ ಅನುಭವ ಮಂಟಪದ ಉದ್ದೇಶ ಈಡೇರಬೇಕಾದರೆ, ಅಲ್ಲಿ ಅನುಭಾವಿಗಳು ಇರಬೇಕು ಮತ್ತು ಎಲ್ಲ ಕಡೆಗಳಿಂದಲೂ, ಬಸವಣ್ಣನವರ ಕಾಲದಲ್ಲಿ ಆದಂತೆ, ಅಂಥವರು ಅಲ್ಲಿಗೆ ಬರುವಂತಾಗಬೇಕು. ಈಗ ಅಂತಹ ಅನುಭಾವಿಗಳು ಯಾರಿದ್ದಾರೆ, ಎಲ್ಲಿದ್ದಾರೆ, ಎಷ್ಟು ಜನರಿದ್ದಾರೆ? ಅಂಥವರು ನೂತನ ಅನುಭವ ಮಂಟಪಕ್ಕೆ ಬರಬಹುದೇ? ಅಂಥವರು ಇಲ್ಲದ ಅನುಭವ ಮಂಟಪಕ್ಕೆ ಅರ್ಥವೇ ಇರುವುದಿಲ್ಲ. ಈ ಒಣ ಕಟ್ಟಡ ಲಿಂಗಾಯತರ ಖಾಲಿ ಭಂಡತನದ ಗುರುತಾಗಿ ಉಳಿಯಬಹುದಷ್ಟೆ!!
ಆ) “ಇದಕ್ಕೆ (ಅನುಭವ ಮಂಟಪಕ್ಕೆ) ಕಲ್ಲಿನಿಂದ ಕಟ್ಟಿದ ನಾಲ್ಕು ಗೋಡೆಗಳಾಗಲಿ, ಭವ್ಯ ಮಂದಿರವಾಗಲಿ, ಅದರ ಮುಂದೆ ‘ಅನುಭವ ಮಂಟಪ’ ವೆಂದು ದೊಡ್ಡ ಅಕ್ಷರಗಳಿಂದ ಕೆತ್ತಿದ ಬೋರ್ಡಾಗಲಿ ಇರುವ ಅಗತ್ಯತೆ ಇಲ್ಲ.” (ಉತ್ತಂಗಿ ಪುಟ 26).
ಇ) “ಉದ್ಭವ ಲಿಂಗದಂತೆ ಇದು (ಅನುಭವ ಮಂಟಪವು) ಏಕಕಾಲಕ್ಕೆ ಹುಟ್ಟಿ ಬಂದುದೂ ಅಲ್ಲ. ಇದು ಬಸವಣ್ಣನವರೊಡನೆ ಹುಟ್ಟಿ, ಬಸವಣ್ಣನವರೊಡನೆ ಬೆಳೆದು, ಬಸವಣ್ಣನವರೊಡನೆ ಸಮಾಧಿ ಹೊಂದಿದೆ” (ಉತ್ತಂಗಿ ಪುಟ 26). ಈಗ ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವುದು ಅನುಭವ ಮಂಟಪವಲ್ಲ ಅದರ ಸ್ಥಾವರ ಕಟ್ಟಡ ಮಾತ್ರ!
ಈ) ಅನುಭವ ಮಂಟಪಕ್ಕೆ ತನ್ನದೇ ಆದ ಪ್ರತ್ಯೇಕ ಕಟ್ಟಡವೇ ಇರಲಿಲ್ಲ ಮತ್ತು ಅದು ಬಸವಣ್ಣನವರು ಇದ್ದ ಮನೆಯಲ್ಲೇ ನಡೆಯುತ್ತಿತ್ತು ಎನ್ನುವುದನ್ನು ಸಂಶಯಾತೀತವಾಗಿ ಸಿದ್ದಮಾಡಿದವರು ಉತ್ತಂಗಿ ಚೆನ್ನಪ್ಪನವರು.
ಉ) ಅವರೇ ಹೇಳುವಂತೆ: “ಪಾತರಗಿತ್ತಿಗೆ ನಂಬಲವಶ್ಯಕವಾದ ಮೂರು ಬೇರೆ ಬೇರೆ ರೂಪಗಳು, ಅಂದರೆ ಅಂಡಾವಸ್ಥೆ, ಕೀಟಾವಸ್ಥೆ, ವಿಹಗಾವಸ್ಥೆ ಎಂಬ ಅವಸ್ಥಾತ್ರಯಗಳು ಹೇಗೆ ಇರುವವೋ ಹಾಗೆಯೇ ಶಿವಾನುಭವ ಮಂಟಪದ (ಅನುಭವ ಮಂಟಪದ) ಸ್ಥಿತಿಯಾದರೂ ಇದೆ. ಹೀಗಾಗಿ ಅಂಡಾವಸ್ಥೆಯನ್ನು ಕೂಡಲಸಂಗಮದಲ್ಲೂ, ಕೀಟಾವಸ್ಥೆಯನ್ನು ಮಂಗಳವೇಢೆಯಲ್ಲೂ, ವಿಹಗಾವಸ್ಥೆಯನ್ನು ಭೀಮಕವಿಯ ಬಸವಕಲ್ಯಾಣದಲ್ಲಿ ಕಾಣಬಹುದು” (ಪುಟ 27).
ಊ) ತಮ್ಮ ಇತಿಹಾಸವನ್ನು ಅರಿಯದ, ತಮ್ಮ ಧರ್ಮವನ್ನೆ ತಿಳಿಯದ, ಅಂಧಕಾರದಲ್ಲಿ ಮುಳುಗಿರುವ, ಬಸವ ತತ್ವಗಳನ್ನು ಮರೆತು ವೈದಿಕಕ್ಕೆ ಶರಣಾದ ಬಹಳಷ್ಟು ಲಿಂಗಾಯತರಿಗೆ ಇದು ಅರ್ಥವಾಗುವುದಿಲ್ಲ.

ಅನುಭವ ಮಂಟಪದಲ್ಲಿ ಅಡಕವಾಗಿರುವ ಅಂಶಗಳು:

ಅ) ಅನುಭವ ಮಂಟಪವು ನಿಜವಾಗಿ ‘ಅನುಭಾವ ಮತ್ತು ಅನುಭಾವಿಗಳ’ ಮಂಟಪ. ಸುರೇಂದ್ರ ಅಡಿಗರು ಹೇಳುವಂತೆ, “ಅನುಭವದಿಂದ ಬರುವ ಮಾತು ಹೃದಯಾಳದಿಂದ ಬರುತ್ತದೆ. ಈ ಜ್ಞಾನವು ಲೌಕಿಕವಾದದ್ದು. ‘ಅನುಭಾವ’ವು ವಿಚಾರ ಮತ್ತು ಅನುಭಾವಿಕ ವಾದಗಳಿಗಿಂತ ಶ್ರೇಷ್ಠವಾದದ್ದು, ಅದು ಲೋಕಾತೀತವಾದುದು”.

ಆ) ಪ್ರಭುದೇವರ ವಚನದಲ್ಲಿರುವಂತೆ: “ಅನುಭಾವದಿಂದ ಹುಟ್ಟಿತ್ತು ಲಿಂಗ, ಅನುಭಾವದಿಂದ ಹುಟ್ಟಿತ್ತು ಜಂಗಮ, ಅನುಭಾವದಿಂದ ಹುಟ್ಟಿತ್ತು ಪ್ರಸಾದ, ಅನುಭಾವದನುವಿನಲ್ಲಿ ಗುಹೇಶ್ವರ ಲಿಂಗವನುಪಮ ಸುಖಿ”.

ಇ) ಅದನ್ನೇ ಬಸವಣ್ಣನವರ ವಚನವು ಹೀಗೆ ಹೇಳುತ್ತದೆ: “ಅನುಭಾವವಿಲ್ಲದವನ ಭಕ್ತಿ ಅನುವಿಂಗೆ ಬಾರದು, ಅನುಭಾವವಿಲ್ಲದವನ ಲಿಂಗಸಂಗಮ ಸುಖವನ್ನೀಯದು, ಅನುಭಾವವಿಲ್ಲದವನ ಪ್ರಸಾದ ಪರಿಣಾಮ ಕೊಡದು, ಅನುಭಾವವಿಲ್ಲದೆ ಅರಿಯಲು ಬಾರದು”.

ಈ) ಚೆನ್ನಬಸವಣ್ಣನವರು ಅದನ್ನೇ ಸರಳವಾಗಿ ಹೇಳುತ್ತಾರೆ: “ಮಂಡೆ ಮಾಸಿದೊಡೆ ಮಹಾಮಜ್ಜನವ ಮಾಡುವುದು, ವಸ್ತ್ರವ ಮಾಸಿದೊಡೆ ಮಡಿವಾಳಗಿಕ್ಕುವುದು, ಮನದ ಮೈಲಿಗೆ ತೊಳೆಯಬೇಕಾದಡೆ ಕೂಡಲಚೆನ್ನಸಂಗಯ್ಯನ ಶರಣರೊಡಗೂಡಿ ಅನುಭಾವ ಮಾಡುವುದು”.

ಉ) ಅನುಭಾವವು ವೇದ, ಪುರಾಣ, ಶಾಸ್ತ್ರ, ಧರ್ಮಗ್ರಂಥಗಳನ್ನು ಅಭ್ಯಾಸ ಮಾಡುವುದರಿಂದ ಬರುವುದಿಲ್ಲ. ಪುಣ್ಯಕ್ಷೇತ್ರಗಳ ಸಂದರ್ಶನ ಮಾಡುವುದರಿಂದ ಲಭ್ಯವಾಗುವುದಿಲ್ಲ. ಹರಕೆ ಹೊತ್ತುಕೊಳ್ಳುವುದರಿಂದ ಈಡೇರದು. ಪುಸ್ತಕಗಳನ್ನು, ಲೇಖನಗಳನ್ನು ಬರೆಯುವುದರಿಂದ ಬರುವುದಿಲ್ಲ.

ಊ) ಅನುಭಾವವು ಅಂತರಂಗದ ಅರಿವಿನಿಂದ ಸಾಧ್ಯವಾಗುತ್ತದೆ. ಅನುಭಾವ ಗೋಷ್ಟಿಯ ಮುಖ್ಯ ಉದ್ದೇಶವೆ ಈ ಅರಿವನ್ನು ಮೂಡಿಸುವುದಕ್ಕಾಗಿ ಇರುವುದು.

ಎ) “ನಡೆ, ನುಡಿ, ಕೊಡು, ಕೊಳ್ಳು, ಕಾಣು, ಕೇಳು ಎಲ್ಲದರಲ್ಲೂ ಅನುಭಾವದ ಸುಳಿಯಿದೆ”- ಎಂದವರು ಉತ್ತಂಗಿ ಚೆನ್ನಪ್ಪ. ಇಂತಹ ಅನುಭಾವಿಕ ಅಂಶಗಳನ್ನು ಸ್ಥಾವರ ಕಟ್ಟಡದಿಂದ ಹೇಗೆ ಬಿಂಬಿಸುವುದು ಎಂಬುದೇ ಒಂದು ಸಂಕೀರ್ಣ ಸಮಸ್ಯೆ. ವಿಶೇಷವಾಗಿ ಷಟಸ್ಥಲ ಮತ್ತು ಅಷ್ಟಾವರಣ ಸಿದ್ಧಾಂತಗಳು ವೈದಿಕ ಹಿನ್ನೆಲೆಯಿಂದ ಬಂದವರಿಗೆ, ಕರ್ಮಸಿದ್ಧಾಂತ ಮತ್ತು ಪುನರ್ಜನ್ಮ ಸಿದ್ಧಾಂತಗಳಲ್ಲಿ ಆಳ ನಂಬಿಕೆ ಇದ್ದವರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಏಕೆಂದರೆ ಶರಣ ಧರ್ಮದಲ್ಲಿ ಜೀವಿಯು ಇದೇ ಜೀವನದಲ್ಲಿ, ಇದೇ ಜಗತ್ತಿನಲ್ಲಿ, ಸಾಯುವ ಮೊದಲೇ ತನ್ನ ತಾನರಿಯುವ ಸಾಧನಾ ಮಾರ್ಗವಿದೆ. ಅವನಿಗೆ ಪುನರ್ಜನ್ಮವಿಲ್ಲ. ಅವನು ಜೀವನ್ಮುಕ್ತ. ಅಷ್ಟಾವರಣಗಳು ಈ ದೀರ್ಘ ಕ್ರಿಯೆಯಲ್ಲಿ ಸಹಾಯಕ ಪರಿಕರಗಳು ಮಾತ್ರ. ಈ ದೀರ್ಘ ಕ್ರಿಯೆಯಲ್ಲಿ ಅನುಭವ ಮಂಟಪವು ಒಂದು ಮಹತ್ವದ ಅನುಭಾವ ವಿನಿಮಯ ಕೇಂದ್ರ ಮಾತ್ರ. ಇವುಗಳನ್ನು ಸುಲಭ ಭಾಷೆಯಲ್ಲಿ ಅನುಭವ ಮಂಟಪವನ್ನು ನೋಡಲು ಬಂದವರಿಗೆ ತಿಳಿಸುವ ಲಘು ಸಾಹಿತ್ಯವನ್ನು ಸಣ್ಣ ಸಣ್ಣ ಫೋಲ್ಡರ್ಸ್, ಪ್ಯಾಂಪ್ಲೆಟ್ಸ್, ಕಿರುಪುಸ್ತಕಗಳ ಮೂಲಕ ಮಾಡುವ ವ್ಯವಸ್ಥೆ ಅಗತ್ಯ. ಅದಕ್ಕಾಗಿ ಅನುಭವ ಮಂಟಪದಲ್ಲಿ ನಿತ್ಯ ಗಂಭೀರ ತರಹದ ವಿಚಾರ ಮಂಥನ, ಗೋಷ್ಠಿಗಳು, ದೇಶದ ಕ್ಲಿಷ್ಟ ಸಮಸ್ಯೆಗಳನ್ನು ವಚನಶಾಸ್ತ್ರದ ಹಿನ್ನೆಲೆಯಲ್ಲಿ ಚರ್ಚಿಸುವುದು ಅಗತ್ಯ.

ಅನುಭವ ಮಂಟಪವು ಕಲಿಸುವ ಇನ್ನೆರಡು ಅಂಶಗಳೆಂದರೆ ಕಾಯಕ ಮತ್ತು ದಾಸೋಹ. ಕಾಯಕವೆಂದರೆ ದುಡಿಮೆ, ವಿಶೇಷವಾಗಿ ದೈಹಿಕ ಶ್ರಮ. ಪ್ರತಿಯೊಬ್ಬರೂ ಬದುಕಿರುವಾಗ ಒಂದಿಲ್ಲೊಂದು ದುಡಿಮೆಯನ್ನು ಆಯ್ದುಕೊಂಡು ತಮ್ಮ ಜೀವನಕ್ಕಾಗಿ ದುಡಿದು ಗಳಿಸಿ, ಹಾಗೆ ಪ್ರಾಮಾಣಿಕ ದುಡಿಮೆಯಿಂದ ಬಂದ ಆದಾಯದಿಂದ ಬದುಕಬೇಕು. ಆ ಕಾಯಕ ಸತ್ಯ ಶುದ್ದವಾಗಿರಬೇಕು. ಮೋಸ, ವಂಚನೆ, ಅಪ್ರಾಮಾಣಿಕ ಕಾರ್ಯದಿಂದ ಬರಬಾರದು. ಹಾಗೆ ಬಂದ ಅಶುದ್ದ ಗಳಿಕೆ, ಶರಣರ ಪ್ರಕಾರ, ಸತ್ಪಾತ್ರಕ್ಕೆ ಸಲ್ಲದು. “ಪಾಪಿಯ ಧನ ಪ್ರಾಯಶ್ಚಿತಕ್ಕೆ” ಮಾತ್ರ ಯೋಗ್ಯ. ಎರಡನೆಯ ಸಿದ್ಧಾಂತವೆಂದರೆ ದಾಸೋಹ. ಪ್ರಾಮಾಣಿಕವಾಗಿ ದುಡಿದು ಗಳಿಸಿದ್ದರಲ್ಲಿ ತನಗೆ ಬೇಕಾದಷ್ಟನ್ನು ಬಳಸಿ, ಉಳಿಸಿ, ಬೆಳಸಿ ತಾನು ಬದುಕಿರುವ ಸಮಾಜಕ್ಕೆ ಸಲ್ಲಿಸಬೇಕು. ಅದು ದಾಸೋಹ. ಅದೇ ರೀತಿಯ ಪದ್ಧತಿ ಸಿಖ್ಖರಲ್ಲಿಯೂ ಇದೆ, ಮುಸ್ಲಿಮರಲ್ಲಿಯೂ (ಝಕಾತ) ಇದೆ. ಜೈನರೂ ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ದಾನ ಮಾಡುತ್ತಾರೆ. ದಾನ ಮತ್ತು ದಾಸೋಹಗಳಲ್ಲಿ ಬಹಳ ವ್ಯತ್ಯಾಸವಿದೆ. ದಾಸೋಹವು ಅನ್ನ ದಾಸೋಹ (ಹಸಿದ ಹೊಟ್ಟೆಗೆ ಅನ್ನ)ವಾದರೆ, ಜ್ಞಾನದಾಸೋಹ ಹಸಿದ ಬುದ್ದಿಗೆ ಮುಖ್ಯ. ದಾಸೋಹವು ಲಿಂಗಾಯತ ಸಮುದಾಯದ ದೊಡ್ಡ ಪ್ರಮಾಣದಲ್ಲಿ ಉಚಿತ ಬೋರ್ಡಿಂಗ್, ವಸತಿ, ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಈ ಎರಡನ್ನೂ ಜಗತ್ತಿಗೆ ತಿಳಿಸುವ ವ್ಯವಸ್ಥೆಯಾಗಬೇಕು. ಅದನ್ನು ಹೇಗೆ ಮಾಡಬಹುದೆನ್ನುವುದನ್ನು ತಜ್ಞರೊಂದಿಗೆ ಚರ್ಚಿಸಿ ನಿರ್ಣಯಿಸಬೇಕು.

ಸಿಖ್ಖರಿಂದ ಲಿಂಗಾಯತರು ಕಲಿಯಬೇಕಾದ ಪಾಠಗಳು:

ಸಿಖ್ಖ ಧರ್ಮವು ಕೇವಲ ಐನೂರು ವರ್ಷಗಳ ಹಿಂದೆ ಗುರುನಾನಕರಿಂದ ಕ್ರಿ.ಶ. 1500 ಸುಮಾರಿಗೆ ಕಟ್ಟಲ್ಪಟ್ಟಿತ್ತು. ಅದಕ್ಕೂ ಲಿಂಗಾಯತಕ್ಕೂ ಬಹಳ ಹೋಲಿಕೆಗಳಿವೆ. ಸಿಖ್ಖರಿಂದ, ಅವರ ಧರ್ಮಗ್ರಂಥದಿಂದ ಲಿಂಗಾಯತರು ಕಲಿಯಬೇಕಾದ ಕೆಲವು ಪಾಠಗಳಿವೆ:

ಅ) ‘ಗುರುಗ್ರಂಥ’ವು ಸಿಖ್ಖರ ಪವಿತ್ರ ಗ್ರಂಥ. ಅದನ್ನು ನಾವು ವಚನಗಳಿಗೆ ಹೋಲಿಸಬಹುದಾಗಿದೆ. ಅದನ್ನು ಒಬ್ಬರೇ ಬರೆಯಲಿಲ್ಲ. ಎಂಟು ಜನ ಸಿಖ್ಖ ಗುರುಗಳು (ಗುರು ನಾನಕ, ಗುರು ಅಂಗದ, ಗುರು ಅಮರ, ಗುರು ರಾಮದಾಸ, ಗುರು ಅರ್ಜುನದೇವ, ಗುರು ಹರಗೋವಿಂದ, ಗುರು ತೇಘ ಬಹಾದ್ದೂರ ಮತ್ತು ಕೊನೆಯ ಗುರು ಗೋವಿಂದಸಿಂಗ್) ಅವರ ಗೀತ ರೂಪದ ಉಪದೇಶಗಳು (ಶ್ಲೋಕಗಳು) ಅದರಲ್ಲಿವೆ. ಎರಡನೆಯದಾಗಿ, ನಾನಕರ ಕೆಲ ಸಮಯ ಹಿಂದಿನ ಮತ್ತು ಅವರ ಸಮಕಾಲೀನ ಹದಿನೈದು ಜನ ಸಿಖ್ಖರಲ್ಲದ ಆದರೆ ಗುರುನಾನಕರ ವಿಚಾರಗಳಿಗೆ ಸರಿಹೊಂದುವ ಭಕ್ತಿಪಂಥದ ಕಬೀರದಾಸ, ಸೂರದಾಸ, ರವಿದಾಸ, (ಗೀತ ಗೋವಿಂದ ಬರೆದ) ಜಯದೇವ, ವಾರಕರಿ ಸಂಪ್ರದಾಯದ ನಾಮದೇವ, ಶೆರಿಫ ಫರೀದ, ಸೇನಾ, ಪಿಪಾ, ಧನ್ನಾ, ಬೇನಿ, ತ್ರಿಲೋಚನ, ರಾಮಾನಂದ (ಸ್ವಾಮಿನಾರಾಯಣ ಪಂಥದ ಗುರು, ಸಾಧನಾ, ಭಿಕಾನ, ಪರ್ಮಾನಂದ) ಹೀಗೆ ಹದಿನೈದು ಮಹಾವ್ಯಕ್ತಿಗಳ ಭಕ್ತಿ ಗೀತೆಗಳು ಅದರಲ್ಲಿವೆ. ಮೂರನೆಯದು, ಹನ್ನೊಂದು ಬ್ರಾಹ್ಮಣ ಭಟ್ಟರು (ಕಲ್ಶರ, ಬಾಲ್ಹ, ಭಲ್ಲಾ, ಭಿಕಾ, ಗಾಯಂದ, ಹರಬನ್ಸ, ಜಲಪ, ಕಿತರ, ಭಟ ಮಥುರ, ನಾಹ್ಲ ಸಾಲ್ಹ) ಬರೆದಿದ್ದ ಲಾವಣಿಗಳು, ಕೀರ್ತನೆಗಳು ಮತ್ತು ಗೀತೆಗಳನ್ನು ಆದಿಗ್ರಂಥದಲ್ಲಿ ಸೇರಿಸಲಾಗಿದೆ. ಇವರದಲ್ಲದೆ, ನಾಲ್ಕನೆ ಗುಂಪಿಗೆ ಸೇರಿದ ನಾಲ್ಕು ಜನ ಗುರುಸಿಖ್ಖರ ಗೀತೆಗಳೂ ಅಲ್ಲಿವೆ. ಕ್ರಿ.ಶ.1604ರಲ್ಲಿ ಗುರು ಅರ್ಜುನದೇವರಿಂದ ಬರೆಯಲು ಪ್ರಾರಂಭವಾಗಿ ಗುರು ಗೋವಿಂದಸಿಂಗರ (1705) ವರೆಗೆ ಸುಮಾರು ನೂರು ವರ್ಷಗಳ ದೀರ್ಘಾವಧಿಯಲ್ಲಿ ಗುರುಗ್ರಂಥ ಸಾಹಿಬ ರಚನೆಯಾಯಿತು.

ಲಿಂಗಾಯತರು ಬಸವ ಯುಗದ ಶರಣರನ್ನಷ್ಟೇ ಗಂಭೀರವಾಗಿ ಪರಿಗಣಿಸಬೇಕು. ಬಸವೋತ್ತರ ಯುಗದ ವಚನಕಾರರಲ್ಲಿ ಬಹುತೇಕರು ಮೂಲ ತತ್ವಗಳಿಂದ ಭಿನ್ನವಾಗಿ ತಮಗೆ ತಿಳಿದಂತೆ ವಚನಗಳನ್ನು ಬರೆದಿದ್ದಾರೆ. ಅವರೆಲ್ಲರೂ ಕೈವಲ್ಯ, ವೈರಾಗ್ಯ, ಕರ್ಮಠತನಕ್ಕೆ ಹೆಚ್ಚು ಒತ್ತು ನೀಡಿದಂತೆ ಭಾಸವಾಗುತ್ತದೆ. ಒಂದು ಧರ್ಮ ಒಂದೇ ಸಲ ಸ್ಥಾಪನೆಯಾಗುವುದರಿಂದ ಬಸವ ಯುಗದ ವಚನಗಳು ಮಾತ್ರ ನಮಗೆ ಪ್ರಸ್ತುತವಾಗುತ್ತವೆ. ಕಾಲ ಕಳೆದಂತೆ ಬಹುತೇಕ ಧರ್ಮಗಳಲ್ಲಿ ಮಾರ್ಪಾಡುಗಳಾಗುತ್ತವೆ (ಬೌದ್ಧ ಧರ್ಮ ಒಡೆದು ಹೀನಯಾನ, ಮಹಾಯಾನ, ವಜ್ರಾಯಾನ, ಝೆನ್, ಇತ್ಯಾದಿ ಉಪಪಂಥಗಳಾಗಿ ಬೆಳೆದಿವೆ; ಜೈನರಲ್ಲಿ ದಿಗಂಬರ, ಶ್ವೇತಾಂಬರ ಎಂಬ ಎರಡು ಉಪಪಂಥಗಳಿದ್ದರೆ, ಮುಸಲ್ಮಾನದಲ್ಲಿ ಸಿಯಾ, ಸುನ್ನಿ, ಸೂಫಿ, ಅಹ್ಮದಿಯಾ, ಇಸ್ಮೈಲಿ, ಇತ್ಯಾದಿ ಐದಾರು ಟಿಸಿಲುಗಳಾಗಿವೆ, ಕ್ರಿಸ್ತಿಯನ್ನರಲ್ಲಿ ಕ್ಯಾಥೋಲಿಕ್, ಆರ್ಥೋಡಾಕ್ಸ್, ಪ್ರೋಟೆಸ್ಟಂಟ್ ಮತ್ತು ಪ್ರೊಟೆಸ್ಟಂಟರಲ್ಲಿ ನೂರಾರು ಉಪ ಪಂಗಡಗಳಾಗಿವೆ).

ಆ) 36 ಜನ ಅನುಭವಿಗಳು ಸಿಖ್ಖರ ಗುರುಗ್ರಂಥವನ್ನು ಬರೆದರೆ ಹನ್ನೆರಡನೆಯ ಶತಮಾನದ 217 ಜನ ಶರಣರು ಲಿಂಗಾಯತರ ಮೂಲ ತತ್ವಗಳನ್ನು ಸಾರುವ ವಚನಗಳು ನಮಗೆ ಈವರೆಗೆ ದೊರೆತಿವೆ.

ಇ) ಗುರು ಗ್ರಂಥದ 1400 ಪುಟಗಳಲ್ಲಿ (ಅಂಗಗಳು) 5894 ಗೀತೆಗಳಿವೆ. ನಮ್ಮ 12ನೇಯ ಶತಮಾನದ ವಚನಗಳು ಸುಮಾರು 12000 ಇವೆ. ಅವುಗಳನ್ನು ಒಂಬತ್ತು ಬೃಹತ್ ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.

ಈ) ಗುರು ಗ್ರಂಥದ ಗೀತೆಗಳು (ಸ್ವಯಾರ), ಶ್ಲೋಕಗಳು (ಸಲೋಕಗಳು), ಕೀರ್ತನೆಗಳು (ಶಬದ) ಮಧುರವಾಗಿ ಹಾಡಲ್ಪಡುತ್ತವೆ. ಅದೇ ರೀತಿ ಸಿದ್ಧರಾಮ ಜಂಬಲದಿನ್ನಿಯವರು ವಚನ ಸಂಗೀತವನ್ನು ಮೊದಲು ರಾಗ ತಾಳ ಮೇಳಗಳಿಗೆ ಅಳವಡಿಸಿ ಹಾಡಿದ ನಂತರ ವಚನ ಸಂಗೀತ ಬೃಹತ್ ಪ್ರಮಾಣದಲ್ಲಿ ಬೆಳೆದಿದೆ ಮತ್ತು ಇನ್ನೂ ಚೆನ್ನಾಗಿ ಬೆಳೆಯುತ್ತಿದೆ. ಶರಣ ಸಾಹಿತ್ಯದಲ್ಲಿ ಹಳೆಯ ಶೈಲಿಯ ಶರಣರಿಗೆ ಸಂಬಂಧಿಸಿದ ಪುರಾಣಗಳ ಕೀರ್ತನೆಗಳು ನೂರಾರು ಕಡೆ ನಡೆಯುತ್ತಿವೆ.

ಉ) ಸಿಖ್ಖರು ಗುರುಗ್ರಂಥವನ್ನು ಅತ್ಯಂತ ಪೂಜ್ಯ ಭಾವನೆಯಿಂದ ತಮ್ಮ ಗುರುದ್ವಾರಗಳ ಗದ್ದುಗೆಯ ಮೇಲೆ ಶುಚಿಯಾಗಿ ಸುಂದರವಾಗಿ ಇಟ್ಟುಕೊಂಡು ಭಕ್ತಿ ಭಾವನೆಯಿಂದ ನಿತ್ಯ ಪ್ರಾರ್ಥನೆ ಮಾಡುತ್ತಾರೆ, ಭಜನೆ ಮಾಡುತ್ತಾರೆ, ಆಗಾಗ ಕೀರ್ತನೆಗಳನ್ನು ನೆರವೇರಿಸುತ್ತಾರೆ. ಲಿಂಗಾಯತರು ವಚನಗಳ ಬಗ್ಗೆ ಸಿಖ್ಖರ ರೀತಿಯ ಭಕ್ತಿ ಭಾವನೆ, ಪೂಜ್ಯತೆ, ಮೂರ್ತಿಗಳ ಸ್ಥಳದಲ್ಲಿ ವಚನ ಗ್ರಂಥಗಳನ್ನು ಇಡುವುದನ್ನು ಮಾಡುತ್ತಿಲ್ಲ. ವಚನಗಳೆ ನಮ್ಮ ಧರ್ಮಗ್ರಂಥ ಎನ್ನುವುದಕ್ಕೆ ಗುಲಬರ್ಗದ ಶರಣಬಸಪ್ಪನವರಂಥ ವಿತಂಡವಾದದ ಮಠಾಧೀಶರು ಒಪ್ಪುವುದೇ ವಿರಳ. ಕಾಲ್ಪನಿಕ ಪಂಚಾಚಾರ್ಯರ 15 ಇತ್ತೀಚಿನ ಪುರಾಣಗಳು ಅವರ ಧರ್ಮಗ್ರಂಥವೆಂದು ಸಿದ್ಧಾಂತ ಶಿಖಾಮಣಿಯನ್ನು ನಂಬುವ ಇತರ ಮಠಾಧೀಶರೂ ಇದ್ದಾರೆ. ಇದು ಯಾವಾಗ ಪರಿಹಾರವಾಗುತ್ತದೆ? ಲಿಂಗಾಯತ ವಿರಕ್ತ ಮಠಗಳ ಬಹುತೇಕ ಸ್ವಾಮಿಗಳು ತಮ್ಮ ಮಠ ಸ್ಥಾಪಕರ ಮೂರ್ತಿಗಳನ್ನು ಇಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅವರಲ್ಲಿ ಬಹುತೇಕರು ತಮ್ಮ ಮಠಗಳನ್ನು ಬೆಳೆಸಿದರೆ ವಿನಾ ಬಸವ ಧರ್ಮವನ್ನು ಬೆಳೆಸಲಿಲ್ಲ. ಅವರಲ್ಲಿ ಇಂದಿಗೂ ವೀರಶೈವದ ಬಗ್ಗೆ ಅಪಾರ ನಂಬಿಕೆ ಆಚರಣೆಗಳು ಇರುವುದೇ ಹೆಚ್ಚು. ಹೀಗಾಗಿ ಸಮರ್ಥ ಮಾರ್ಗದರ್ಶನವಿಲ್ಲದೆ ಈ ರೀತಿ ನಮ್ಮ ಧರ್ಮ, ನಮ್ಮ ಸಂಸ್ಕೃತಿ ಬಗ್ಗೆ ನಮ್ಮ ಜನರು ಅಜ್ಞಾನಿಗಳೂ ಅಭಿಮಾನ ಶೂನ್ಯರೂ ಆಗಿದ್ದಾರೆ. ಈಗೀಗ ಜನರೇ ಎಚ್ಚೆತ್ತಿರುವುದು ಕೆಲವರಾದರೂ ನಿಧಾನವಾಗಿ ಬದಲಾಗುತ್ತಿದ್ದಾರೆ. ಅವರೆಲ್ಲ ಬದಲಾಗಲೇ ಬೇಕು. ಇಲ್ಲದಿದ್ದರೆ ಭಕ್ತರೇ ಅವರನ್ನು ಬದಲಾಯಿಸುತ್ತಾರೆ!

ಊ) ಲಿಂಗಾಯತ ಶರಣರು ರಾಜಕೀಯ ದಬ್ಬಾಳಿಕೆಯಿಂದ ಚದುರಿಹೋದರೆ ಸಿಖ್ಖ ಗುರುಗಳು (ಗುರು ಹರಗೋವಿಂದ ಸಿಂಗರು, ಗುರು ತೇಘ ಬಹಾದ್ದೂರರು, ಗುರು ಗೋವಿಂದ ಸಿಂಗರು) ತಮ್ಮ ಧರ್ಮರಕ್ಷಣೆಗೆ ಪ್ರತ್ಯೇಕ ಸಿಖ್ಖ್ ಸೇನಾ ಪಡೆ ಕಟ್ಟಿದರು. ಮೊಹಮ್ಮದ ಪೈಗಂಬರರೂ ಅದನ್ನೆ ಮಾಡಿದರು. ಬಸವಣ್ಣನವರು ಕಲ್ಯಾಣದಿಂದ ನಿರ್ಗಮಿಸಿದ ನಂತರ ಚೆನ್ನಬಸವಣ್ಣನವರು, ಸಿದ್ಧರಾಮರು, ಮಡಿವಾಳ ಮಾಚಿದೇವರು ಅಲ್ಪಸ್ವಲ್ಪ ನಾಯಕತ್ವ ನೀಡಿದರು. ಆದರೆ ಸಮಾಜವನ್ನು ಶರಣರ ವಿರುದ್ಧ ಎತ್ತಿಕಟ್ಟಿದ ಸನಾತನ ಶಕ್ತಿಗಳು ರಾಜನ ಸೈನಿಕರನ್ನು ಪ್ರಚೋದಿಸಿ ಬಿಜ್ಜಳನ ಮಗ ಸೋವಿದೇವನ ನಾಯಕತ್ವದಲ್ಲಿ ಉಗ್ರ ಹಿಂಸೆಗೆ ಮುಂದಾದಾಗ ಅಸಹಾಯಕ ಕಾಯಕಜೀವಿಗಳಾದ ಶರಣರು ಅಲ್ಲಿಂದ ವಚನಕಟ್ಟುಗಳನ್ನು ಹಿಡಿದುಕೊಂಡು ಪಲಾಯನಗೈದರು. ಸನಾತನಿಗಳ ಕೈ ಮೇಲಾಯಿತು. ಶರಣ ಧರ್ಮ ಮುಂದಿನ ಇನ್ನೂರು ವರ್ಷ ಭೂಗತವಾಯಿತು.

ಎ) ಸಿಖ್ಖರ ಮೇಲೆ ಮುಸ್ಲಿಮರ ದಾಳಿ ದಬ್ಬಾಳಿಕೆಗಳು ಹೆಚ್ಚಾದಂತೆ ಸಿಖ್ ಧರ್ಮದ ಸಂಘಟನೆ ಇನ್ನಷ್ಟು ಭದ್ರವಾಗಿ ಬಲಶಾಲಿಯಾಗಿ ಬೆಳೆಯಿತು. ಆದರೆ ಲಿಂಗಾಯತರ ಮೇಲೆ ಬ್ರಾಹ್ಮಣರ ಗದಾ ಪ್ರಹಾರ ಹೆಚ್ಚಾದಂತೆ ಲಿಂಗಾಯತರು ಅವರೊಂದಿಗೆ ಅನೇಕ ಸಲ ಕೈಜೋಡಿಸಿ ವೀರಶೈವವನ್ನು ಬೆಳೆಸಿದರು ಎಂದರೆ ನಾಚಿಕೆಗೇಡಿನ ವಿಷಯ. ಅದು ಇಂದಿಗೂ ನಡೆಯುತ್ತಿದೆ ಎಂದರೆ ಲಿಂಗಾಯತರು ಎಂಥ ನಾಚಿಕೆಗೇಡಿಗಳು ಎನ್ನುವುದು ಸ್ಪಷ್ಟವಾಗುತ್ತದೆ.
ಎ1) ಸಿಖ್ಖರೂ ಲಿಂಗಾಯತರಂತೆ ಜಾತಿಪದ್ದತಿಯನ್ನು ತಿರಸ್ಕರಿಸುತ್ತಾರೆ.
ಎ2) ಸಿಖ್ಖರಲ್ಲಿನ ಕರಸೇವಾ ಅಂದರೆ ಲಿಂಗಾಯತರ ಕಾಯಕ ಸಿದ್ಧಾಂತಕ್ಕೆ ಹೋಲಿಸಿಕೊಳ್ಳಬಹುದು.
ಎ3) ಸಿಖ್ಖರಲ್ಲಿನ ‘ಲಂಗರ ಸೇವಾ’ ಅಂದರೆ ಲಿಂಗಾಯತರ ‘ಅನ್ನದಾಸೋಹಕ್ಕೆ’ ಸರಿಸಮವಾಗಿದೆ.
ಎ4) ಸಿಖ್ಖರು ಲಿಂಗಾಯತರ ತರಹ, ತಮ್ಮ ಗುರುವಾಣಿಯನ್ನು ಬಿಟ್ಟು ಬೇರೆ ಎಲ್ಲಿಯೂ ಗಮನ ಹರಿಸುವುದಿಲ್ಲ. ಆದರೆ ಎಲ್ಲ ಧರ್ಮದವರನ್ನು ಲಿಂಗಾಯತರಂತೆ ಗೌರವಿಸುತ್ತಾರೆ. ಅಮೃತಸರದ ಸುವರ್ಣ ಮಂದಿರ ಎಲ್ಲ ಜಾತಿ ಧರ್ಮಗಳವರಿಗೂ ಪ್ರವೇಶ ನೀಡುತ್ತದೆ ಮತ್ತು ಅನ್ನ ಸಂತರ್ಪಣೆ ಮಾಡುತ್ತದೆ.

ಏ) ಸಿಖ್ಖರು ಸುವರ್ಣ ಮಂದಿರ, ಅದರ ಸುತ್ತಲಿನ ಕೊಳ, ಉದ್ಯಾನ ಮತ್ತು ಎಲ್ಲ ಸ್ಥಳಗಳನ್ನು ಎಷ್ಟೊಂದು ಶುಚಿಯಾಗಿ ಅಂದವಾಗಿ ನಿರ್ವಹಿಸುತ್ತಾರೆ ಎಂಬುದನ್ನು ನೋಡಿ ಅವರಿಂದ ಕಲಿಯಬೇಕು.

ಐ) ದೇಶ ವಿದೇಶಗಳಲ್ಲಿ ನೂರಾರು ಗುರುದ್ವಾರಗಳು ಇವೆ. ಅಲ್ಲಿಗೆ ದಿನ ನಿತ್ಯ ಬರುವ ಪ್ರವಾಸಿಗರಿಗೆ ಯಾವುದೇ ಭೇದವಿಲ್ಲದೆ ಉಚಿತ ಪ್ರಸಾದದ ವ್ಯವಸ್ಥೆ ಇರುತ್ತದೆ.

ಒ) ಆ ಪ್ರಸಾದವು ಸ್ವಚ್ಛವಾದ, ರುಚಿಯಾದ, ಭಕ್ತಿಯಿಂದ ತುಂಬಿದ ಜನರಿಂದ ‘ಲಂಗರಿನಲ್ಲಿ’ ಪೂರೈಸಲ್ಪಡುತ್ತದೆ.

ಓ) ಲಂಗರಿನಲ್ಲಿ, ಗುರುದ್ವಾರಗಳಲ್ಲಿ, ಉದ್ಯಾನಗಳಲ್ಲಿ, ರಸ್ತೆಗಳಲ್ಲಿ, ವಾಹನ ನಿಲ್ದಾಣಗಳಲ್ಲಿ, ರಕ್ಷಣೆ ಕಾರ್ಯದಲ್ಲಿ, ಕಸಗುಡಿಸುವುದು, ಸ್ವಚ್ಛತೆ, ಪೂಜೆ, ಅಡಿಗೆ ಮಾಡುವುದು, ಊಟ ನೀಡುವುದು, ಪಾತ್ರೆಗಳನ್ನು ಸ್ವಚ್ಛಗೊಳಿಸುವುದು, ಮುಸುರೆ ತೆಗೆಯುವುದು ಎಲ್ಲ ಕೆಲಸಗಳನ್ನು ಸಿಖ್ಖ ಸ್ವಯಂಸೇವಕರೆ ಅತ್ಯಂತ ವಿನಮ್ರತೆಯಿಂದ ಭಯ ಭಕ್ತಿಯಿಂದ ಉಚಿತವಾಗಿ ಸೇವೆ ಮಾಡುತ್ತಾರೆ. ಲಿಂಗಾಯತರು ಅವರಿಂದ ಈ ಎಲ್ಲ ಪಾಠಗಳನ್ನು ಕಲಿಯಬಲ್ಲರೆ?

ಸ್ವರ್ಣಮಂದಿರದಲ್ಲಿ ನಿತ್ಯ ‘ಅಖಂಡ’ ಪ್ರಾರ್ಥನೆ, ಭಜನೆ, ‘ಗುರುಗ್ರಂಥ ಸಾಹಿಬ’ದಿಂದ ಆಯ್ದ ತತ್ವಗಳ ಪಠಣವಿರುತ್ತದೆ. ಬಸವ ತತ್ವಗಳುಳ್ಳ ಲಿಂಗಾಯತ ಧರ್ಮಕ್ಕೂ ಗುರುನಾನಕರು ಬೋಧಿಸಿದ ಸಿಖ್ಖ ಧರ್ಮಕ್ಕೂ ಸರಿಸಮನಾದ ತತ್ವಗಳುಂಟು:

ಅ) ಸಿಖ್ಖರು ಗುರುಗ್ರಂಥದಿಂದ ‘ಗುರುವಾಣಿ’ಯನ್ನು ಪಠಿಸಿದರೆ, ಲಿಂಗಾಯತರು ಶರಣರ ‘ವಚನ’ಗಳನ್ನು ಪಠಿಸಬಹುದು.
ಆ) ಸಿಖ್ ಧರ್ಮವು ಏಕದೇವೋಪಾಸನೆ ಮತ್ತು ಮಾನವೀಯ ಸಮಾನತೆ ಹಾಗೂ ವಿಶ್ವಬಾಂಧವ್ಯಗಳನ್ನು ಬೋಧಿಸುವ ಹಾಗೆಯೇ ಬಸವ ತತ್ವಗಳೂ ಅದೇ ಅಂಶಗಳನ್ನು ಬೋಧಿಸುತ್ತವೆ.
ಇ) ಸಿಖ್ಖರು ‘ಕರ ಸೇವಾ’ ಎಂದು ಕರೆದರೆ ಅದನ್ನೆ ಬಸವ ತತ್ವದಲ್ಲಿ ‘ಕಾಯಕ’ ಎಂದು ತಿಳಿಯಲಾಗುತ್ತದೆ. ಅವರ ಗುರುವಾಣಿ, ಲಂಗರ ಮತ್ತು ಕರ ಸೇವಾಗಳನ್ನು ಅನುಕ್ರಮವಾಗಿ ವಚನ, ದಾಸೋಹ ಮತ್ತು ಕಾಯಕವೆಂದು ಕರೆಯಬಹುದು.
ಈ) ಆದರೆ ಸ್ವರ್ಣ ಮಂದಿರದಂತೆ ಈ ನವ ನಿರ್ಮಾಣವಾಗುವ ಅನುಭವ ಮಂಟಪವನ್ನು ಬಸವಾಭಿಮಾನಿಗಳು ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಬಲ್ಲರೆ? ಅಥವಾ ಅದೂ ಸರ್ಕಾರದ ಕರ್ತವ್ಯವೆಂದು ಕೈಚೆಲ್ಲಿ ಕೂಡುವರೆ? ಕಾಯ್ದು ನೋಡಬೇಕಾಗಿದೆ. ಈ ರೀತಿಯ ಸಕ್ರೀಯ ಕಾರ್ಯಗಳನ್ನು ಸರ್ಕಾರ ಮಾಡಲಾರದು, ಒಂದು ವೇಳೆ ಮಾಡಿದರೂ ಅದು ಸರ್ಕಾರಿ ಕರ್ಮಚಾರಿಗಳಿಂದ ನಡೆಯುವ ಭಕ್ತಿಯಿಲ್ಲದ, ಶಕ್ತಿಯಿಲ್ಲದ, ಮನಸ್ಸಿಲ್ಲದ, ಸಂಬಳ ಮತ್ತು ಗಿಂಬಳಕ್ಕಾಗಿ ಮಾಡುವ ತೋರಿಕೆಯ ಕಳಪೆ ಕಾರ್ಯವಾಗುವುದಂತೂ ನಿಶ್ಚಿತ. ಹಾಗಾದರೆ ಅದೊಂದು ದುರಂತ ಮಾತ್ರ.

ಈಗ ಅಲ್ಲಿ ಕಟ್ಟಲ್ಪಡುತ್ತಿರುವುದು ಸ್ಥಾವರ ಮಾತ್ರ. ಬಸವಣ್ಣನವರೇ ಹೇಳಿದಂತೆ: “ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ” ಕೇವಲ ಸರ್ಕಾರದ ಮೇಲೆ ಭಾರ ಚೆಲ್ಲಿ “ಅಧಿಕಾರಿಗಳು ಮಾಡುತ್ತಾರೆ ಬಿಡಿ” ಎಂದರೆ ಸರ್ಕಾರಿ ಕೆಲಸಗಳ ಹಾಗೆ, ಸರ್ಕಾರಿ ಸಂಸ್ಥೆಗಳ ಹಾಗೆ ಈ ಕಟ್ಟಡವು ಪೂರ್ಣಗೊಂಡು ಉದ್ಘಾಟನೆಯ ನಂತರ ಕೆಲವೇ ತಿಂಗಳು ಅಥವಾ ವರ್ಷಗಳಲ್ಲಿ ಹೊಲಸಿನ ಆಗರವಾಗಿ, ಅವ್ಯವಸ್ಥೆಯ ಕೇಂದ್ರವಾಗಿ, ಬರುವವರಿಗೆ ವಾಕರಿಕೆ ತರುವ ಸ್ಥಳವಾಗುತ್ತದೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಅದನ್ನು ಈ ಲೇಖಕನು ಕೂಡಲಸಂಗಮ, ಬಾಗೇವಾಡಿ, ಇಂಗಳೇಶ್ವರ, ತಂಗಡಗಿ, ಎಮ್ಕೆ ಹುಬ್ಬಳ್ಳಿ ಮತ್ತು ಬಸವ ಕಲ್ಯಾಣದಲ್ಲಿ ಪುನರ್ವಸತಿಗೊಂಡ ಶರಣ ಸ್ಮಾರಕಗಳ ಇತ್ತೀಚಿನ ದು:ಸ್ಥಿತಿಯಿಂದ ಕಂಡುಕೊಂಡ ವಾಸ್ತವಿಕ ಸತ್ಯ.

ಹಾಗಾಗದಂತೆ ಪೂರ್ವ ಎಚ್ಚರಿಕೆ ವಹಿಸಿ ಸೂಕ್ತ ಕಾರ್ಯಕ್ರಮ ಹಾಗೂ ಅವುಗಳ ಸೂಕ್ತ ನಿರ್ವಹಣೆಗೆ ಒಂದು ವ್ಯವಸ್ಥೆಯನ್ನು ಈಗಿಂದಲೇ ಚಿಂತಿಸಿ, ಯೋಚಿಸಿ ಪ್ರಾರಂಭಿಸುವುದು ಸಕಾಲಿಕವಾಗಿದೆ. ಅನುಭವ ಮಂಟಪಕ್ಕೆ ಬರುವವರಿಗೆ ಒಂದಿಲ್ಲೊಂದು ಕಾಯಕವನ್ನು ಒದಗಿಸುವ ವ್ಯವಸ್ಥೆ ಅಲ್ಲಿದ್ದರೆ ಸೂಕ್ತ. ಸಿಖ್ಖರ ಲಂಗರಗಳಲ್ಲಿ ಅಡುಗೆ ಮಾಡುವುದು, ಪಾತ್ರೆಪಗಡಗಳನ್ನು, ಮುಸುರೆಯನ್ನು ತೊಳೆದು ಸ್ವಚ್ಛಗೊಳಿಸುವದು, ಬರುವ ಯಾತ್ರಿಕರಿಗೆ ಅನ್ನ ಸಂತರ್ಪಣೆ ಮಾಡುವುದು, ಮಾರುಕಟ್ಟೆಯಿಂದ ದಿನಸಿ ತರುವುದು, ಆಗುಂತಕರನ್ನು ಸ್ವಾಗತಿಸುವುದು, ಗುರುದ್ವಾರದ ಸುತ್ತಲಿನ ಉದ್ಯಾನ ಹಾಗೂ ಇತರ ಸ್ಥಳಗಳನ್ನು ಸ್ವಚ್ಛಗೊಳಿಸುವುದು, ಸಸ್ಯಗಳಿಗೆ ನೀರು ಬಿಡುವುದು, ಸಸಿ ನೆಡುವುದು, ಕಳೆ ತೆಗೆಯುವುದು, ನರ್ಸರಿ ನೋಡಿಕೊಳ್ಳುವುದು, ಗುರುದ್ವಾರಗಳಲ್ಲಿನ ಪೂಜಾ, ಪ್ರಾರ್ಥನೆ ಹಾಗೂ ಕೀರ್ತನೆ ಪ್ರವಚನಗಳ ವ್ಯವಸ್ಥೆಯಲ್ಲಿ ಸಹಾಯ ಮಾಡುವುದು ಇತ್ಯಾದಿ ಎಲ್ಲ ಕೆಲಸಗಳನ್ನು ಸ್ವಯಂಸೇವಕರೆ ಮನಸಾಕ್ಷಿಯಾಗಿ ಮಾಡುತ್ತಾರೆ. ಹೀಗಾಗಿ ಆ ಸ್ಥಳಗಳು ಸ್ವಚ್ಛವಾಗಿ, ಅಚ್ಚುಕಟ್ಟಾಗಿ, ಸುಂದರವಾಗಿ ಇಡಲ್ಪಟ್ಟಿರುತ್ತವೆ. ಅಂತಹವೇ ಕಾರ್ಯಗಳನ್ನು ಅನುಭವ ಮಂಟಪದ ಉಸ್ತುವಾರಿಯಲ್ಲಿ ಅಳವಡಿಸಿಕೊಳ್ಳ ಬಹುದು. ಇದೇ ರೀತಿಯ ವ್ಯವಸ್ಥೆಗಳನ್ನು ಸಾಯಿ ಮಂದಿರಗಳಲ್ಲಿ, ಅಕ್ಷರಧಾಮಗಳಲ್ಲಿ, ಬ್ರಹ್ಮಕುಮಾರಿಯವರ ಕೇಂದ್ರಗಳಲ್ಲಿ ಕಾಣುತ್ತೇವೆ. (ವಿಚಿತ್ರವೆಂದರೆ ಅವರಲ್ಲಿ ಅನೇಕ ಲಿಂಗಾಯತರೂ ಇದ್ದದ್ದನ್ನು ಸಾಯಿ ಮಂದಿರಗಳಲ್ಲಿ, ಬ್ರಹ್ಮಕುಮಾರಿಯವರ ಆಶ್ರಮಗಳಲ್ಲಿ, ಯೋಗ ಕೇಂದ್ರಗಳಲ್ಲಿ, ಆರೆಸ್ಸಸ್ ಶಿಬಿರಗಳಲ್ಲಿ ಕಣ್ಣಾರೆ ಕಾಣಬಹುದು.) ಆ ರೀತಿಯಲ್ಲಿ ಅನುಭವ ಮಂಟಪದ ಉಸ್ತುವಾರಿ ಇರಬೇಕಾದದ್ದು ಅಗತ್ಯ. ಈ ಬಗ್ಗೆ ಈಗಿನಿಂದಲೇ ವಿಚಾರ ಮಂಥನ, ಯೋಜನೆ ತಯಾರಾದರೆ ಸೂಕ್ತ.

ಇವು ಸರ್ಕಾರವು ಮಾಡುವ ಕಾರ್ಯಗಳಲ್ಲ. ಅವುಗಳಿಗೆ ಈಗಿರುವ ನೂರಾರು ಲಿಂಗಾಯತ ಶಿಕ್ಷಣ ಸಂಸ್ಥೆಗಳು ಹಾಗೂ ಮಠ ಮಾನ್ಯಗಳು ಒಂದುಗೂಡಿ ಒಂದು ಪ್ರತ್ಯೇಕ ಸುಸಂಘಟಿತ ಉಸ್ತುವಾರಿ ಸಂಘಟನೆಯನ್ನು ರಚಿಸುವ ಬಗ್ಗೆ ಈಗಿಂದಲೇ ಯೋಜನೆಗಳು, ರೂಪರೇಷೆಗಳು, ಜವಾಬ್ದಾರಿಗಳನ್ನು ನಿರ್ಧರಿಸುವುದು ಸೂಕ್ತ. ಲಿಂಗಾಯತರಿಗೆ ಸಂಬಂಧಿಸಿದ ಬಹುತೇಕ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರಗಳು ಈವರೆಗೆ ತೆಗೆದುಕೊಂಡಿದ್ದರಲ್ಲಿ ರಾಜಕೀಯ ವಾಸನೆ ತುಂಬಿಕೊಂಡಿರುತ್ತದೆ ಎನ್ನುವುದಕ್ಕೆ ಅನೇಕ ಆಧಾರಗಳುಂಟು. ಕೂಡಲಸಂಗಮ, ಬಸವನ ಬಾಗೇವಾಡಿ, ತಂಗಡಗಿ, ಎಮ್ಕೆ ಹುಬ್ಬಳ್ಳಿ, ಇಂಗಳೇಶ್ವರ, ಚಿಕ್ಕಸಂಗಮ ಇತ್ಯಾದಿ ಶರಣ ಸ್ಥಳಗಳ ಅಭಿವೃದ್ಧಿಯಲ್ಲೂ ಸಾಕಷ್ಟು ರಾಜಕೀಯ ಇತ್ತು. ಅದು ಬಸವ ಕಲ್ಯಾಣದಲ್ಲಿನ ಶರಣ ಸ್ಥಳಗಳ ಅಭಿವೃದ್ಧಿಯ ಕಾಮಗಾರಿಗಳ ವಿಷಯದಲ್ಲಂತೂ ವಿಪರೀತವಾಗಿದೆ. ಅದು ವಿಶೇಷವಾಗಿ, ಶರಣರ ವಿಚಾರ ಮಂಥನಕ್ಕಾಗಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮರು ನಿರ್ಮಾಣ ಯೋಜನೆಯಲ್ಲಿ ಸ್ಪಷ್ಟವಾಗಿ ದಟ್ಟವಾಗಿ ಗೋಚರಿಸುತ್ತದೆ.

ಸೂಕ್ತ ನಿರ್ವಹಣಾ ವ್ಯವಸ್ಥೆಯ ರಚನೆ:

1) ಭೌತಿಕ ಸ್ಥಾವರಗಳ ಸರಿಯಾದ ನಿರ್ಮಲವಾದ ಪರಿಸರದ ನಿರ್ವಹಣೆ ಮೊದಲು ಆದ್ಯತೆಯಾಗಬೇಕು. ಲಕ್ಷಾನುಗಟ್ಟಲೆ ಪ್ರವಾಸಿಗರು ಬರುವುದರಿಂದ ಸ್ವಚ್ಚ ಸುಂದರ ಮತ್ತು ಅಚ್ಚುಕಟ್ಟಾದ ನಿರ್ವಹಣೆ ಅಗತ್ಯ.
ಅ) ನೂತನ ಅನುಭವ ಮಂಟಪವು 114 ಎಕರೆ ಪ್ರದೇಶವನ್ನು ವ್ಯಾಪಿಸಿದೆ. ಅದರಲ್ಲಿ ಮುಖ್ಯ ಕಟ್ಟಡಕ್ಕೆ 15 ಎಕರೆ ಜಮೀನು ಸಾಕು.
ಆ) ಉಳಿದ ಜಾಗದಲ್ಲಿ ಪ್ರವಾಸಿಗಳ ಸೌಕರ್ಯಕ್ಕಾಗಿ ಕಟ್ಟಲಾಗುವ ವಸತಿ ಕಟ್ಟಡಗಳು, ವಿವಿಧ ಅತಿಥಿ ಗೃಹಗಳು, ಆಡಳಿತ ಕಛೇರಿ, ಇತ್ಯಾದಿಗಳನ್ನು ಇನ್ನೂ ನಿರ್ಮಿಸಿಲ್ಲ.
ಇ) ಬಹುತೇಕ ಪ್ರದೇಶದಲ್ಲಿ ವಿವಿಧ ರೀತಿಯ ಸುಂದರವಾದ ಉದ್ಯಾನಗಳಿರುತ್ತವೆ. ಅವುಗಳ ನಿರ್ವಹಣೆ ಬಹುಮುಖ್ಯ.
ಈ) ವಿದ್ಯುದೀಪ ವ್ಯವಸ್ಥೆ, ನೀರು ಸರಬರಾಜು, ಕೆಲವು ಅಗತ್ಯವಾದ ಅಂಗಡಿ- ಮುಗ್ಗಟ್ಟುಗಳೂ ಇರುತ್ತವೆ.
ಉ) ಈ ಎಲ್ಲ ಭೌತಿಕ ಕಟ್ಟಡಗಳ ಮತ್ತು ಬಹು ದೊಡ್ಡ ಗಾತ್ರದ ಮುಖ್ಯ ಕಟ್ಟಡದ ನಿರ್ವಹಣೆಯೆ ಪ್ರಮುಖ ಅಂಶವಾಗಿದೆ. ಅದರಲ್ಲಿನ ಪೀಠಗಳು, ವಿದ್ಯುದೀಪಗಳು, ಸುಣ್ಣ ಬಣ್ಣ ಬಳಿಯುವುದು, ಪಕ್ಷಿಗಳು ಒಳಸೇರಿ ಗಲೀಜು ಮಾಡದಂತೆ ನೋಡಿಕೊಳ್ಳುವುದು, ಅದರ ಸುತ್ತಲಿನ ವಿಶಾಲ ಉದ್ಯಾನಗಳು, ಆಂತರಿಕ ಬೀದಿಗಳು, ಬೀದಿಯ ಬದಿಯ ಸುಂದರವಾದ ಗಿಡಮರಗಳು, ದಿನ ನಿತ್ಯ ನೀರು ಬಿಡುವ, ಬೀದಿ ಕಸ ಗೂಡಿಸುವ, ಕಟ್ಟಡದಲ್ಲಿ ಸ್ವಚ್ಛತೆ ಕಾಪಾಡಲು ಸಾಕಷ್ಟು ಸಿಬ್ಬಂದಿಯ ಅಗತ್ಯವಿದೆ.
ಊ) ಈ ಎಲ್ಲ ರೀತಿಯ ಕಾರ್ಯಗಳಿಗೆ ಈಗ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯಲ್ಲಿರುವ ಸಿಬ್ಬಂದಿ ಏತಕ್ಕೂ ಸಾಕಾಗುವುದಿಲ್ಲ. ಮಾಲಿಗಳೂ, ಅವರ ಮೇಲ್ವಿಚಾರಕರು, ನೈರ್ಮಲ್ಯ ನಿರೀಕ್ಷಕರು, ಪೌರ ಕಾರ್ಮಿಕರು, ಎಲೆಕ್ಟ್ರಿಸಿಯನ್, ಪ್ಲಂಬರ್, ಸೆಕ್ಯೂರಿಟಿ ಗಾರ್ಡಗಳು ಇವೆಲ್ಲ ಸಿಬ್ಬಂದಿ ಅಗತ್ಯ.
ಎ) ಈಗಿನಿಂದಲೇ ಗಿಡ ನೆಡುವ, ಗಿಡಬಳ್ಳಿಗಳನ್ನು ಹಚ್ಚುವ ಕಾರ್ಯಗಳು ಪ್ರಾರಂಭವಾಗಬೇಕು.
ಏ) ಇದಕ್ಕಾಗಿ ಪ್ರತಿವರ್ಷ ನಾಲ್ಕೈದು ಕೋಟಿ ರೂಪಾಯಿಗಳ ಹಣಕಾಸು ಅಗತ್ಯ. ಅದನ್ನು ಕಾರ್ಪಸ್ ಫಂಡ್ ಕೊಡುವ ಮೂಲಕ ಅದರ ಬಡ್ಡಿಯಿಂದ ಈ ಕೆಲಸಗಳ ಖರ್ಚನ್ನು ನಿರ್ವಹಿಸಬಹುದು.

2) ಎರಡನೆಯ ಆದರೆ ಅತ್ಯಂತ ಮಹತ್ವದ ಆದ್ಯತೆಯೆಂದರೆ ಮೂಲ ಅನುಭವ ಮಂಟಪದಲ್ಲಿನ ಕ್ರಿಯೆಗಳನ್ನು ಈ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿ ರೂಪಿಸುವುದು ಮತ್ತು ನಿರಂತರವಾಗಿ ಶಿಸ್ತಿನಿಂದ ಅವುಗಳನ್ನು ಕಾರ್ಯಾಚರಣೆಗೆ ತರುವುದು. ಇದು ಸರ್ಕಾರದ ಕೆಲಸವಲ್ಲ. ಸರ್ಕಾರದಿಂದ ಸರಳವಾಗಿ ನಿರಂತರವಾಗಿ ನಡೆಯುವ ಸಾಧ್ಯತೆಯೂ ಇಲ್ಲ.

ಅನುಭವ ಮಂಟಪದ ಕಟ್ಟಡ ನಿರ್ಮಾಣದಲ್ಲಿ ಉಂಟಾಗುತ್ತಿರುವ ತೊಡಕುಗಳು:

ಬಸವಕಲ್ಯಾಣದಲ್ಲಿ 600 ಕೋಟಿ ರೂಪಾಯಿ ವೆಚ್ಚದ ಅನುಭವ ಮಂಟಪಕ್ಕೆ ಯಾವುದೇ ತಯಾರಿಯಿಲ್ಲದೆ ತರಾತುರಿಯಲ್ಲಿ 2021 ಜನವರಿಯಲ್ಲಿ ಯಡ್ಯೂರಪ್ಪನವರು ತಳಪಾಯ ಹಾಕಿದರು. ಒಂದೂವರೆ ವರ್ಷದ ದೀರ್ಘ ವಿಳಂಬದ ನಂತರ ಜೂನ್ 2022ರಲ್ಲಿ ಸ್ಥಳದಲ್ಲಿ ಕಾರ್ಯಗಳು ಪ್ರಾರಂಭವಾದವು. ಆಗ 200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ವರೆಗೆ ಸರ್ಕಾರದಿಂದ ಒಟ್ಟು 290 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 50 ಪ್ರತಿಶತ ಟೆಂಡರ್ ಕೆಲಸಗಳು ನಡೆದು ಪ್ರಗತಿಯಲ್ಲಿವೆ. ಇನ್ನೂ 452 ಕೋಟಿ ರೂಪಾಯಿಗಳು ಸಕಾಲದಲ್ಲಿ ಬಿಡುಗಡೆಯಾದರೆ, ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಟೆಂಡರಿಗೆ ಹಾಕಿದ ಕೆಲಸಗಳು ಪೂರ್ಣವಾಗಬಹುದು. ಆದರೆ, ಟೆಂಡರಿಗೆ ಹಾಕಿದ ಕೆಲಸವು ಮುಖ್ಯ ಕಟ್ಟಡಕ್ಕೆ ಮಾತ್ರ ಸಂಬಂಧಿಸಿದೆ. ಅದರ ವೆಚ್ಚ 425 ಕೋಟಿ ರೂಪಾಯಿಗಳು. ಅದರ ಮೇಲೆ ಟೆಂಡರ್ ಪ್ರಿಮಿಯಮ್ ಮತ್ತು 18 ಪ್ರತಿಶತ ಜಿಎಸ್ಟಿ ಸೇರಿ ಒಟ್ಟು 740 ಕೋಟಿ ಅನುಮೋದನೆಗೊಂಡ ಹಣ.

ಇದಲ್ಲದೆ, 100 ಅಡಿ ಅಗಲದ 2.9 ಕಿಲೋಮಿಟರ್ ಸಂಪರ್ಕ ರಸ್ತೆ, ಒಳರಸ್ತೆಗಳು, ಮೂರು ತರಹದ ಅತಿಥಿ ಗೃಹಗಳು, ದಾಸೋಹ ಭವನ ಇತ್ಯಾದಿಗಳಿಗಾಗಿ ತಯಾರಿಸಲ್ಪಟ್ಟಿರುವ 140 ಕೋಟಿ ರೂಪಾಯಿಗಳ ಎರಡನೆಯ ಅಂದಾಜಿಗೆ ಮಂಜೂರಿ ದೊರೆತಿಲ್ಲ. ಹಣವೂ ಇಲ್ಲ. ಇವುಗಳ ಜೊತೆಗೆ ಕಾರ್ಯವ್ಯತ್ಯಾಸಗಳಿಗಾಗಿ ಹೆಚ್ಚುವರಿ ಹಣ ಬೇಕಾಗಬಹುದು. ಹೀಗೆ ಒಟ್ಟಾರೆ ಹಣದ ಅಗತ್ಯತೆ ಎಂದರೆ ಸುಮಾರು 900 ಕೋಟಿ ರೂಪಾಯಿಗಳು ಈ ಎಲ್ಲ ಕೆಲಸಗಳನ್ನು ಪೂರೈಸಲು ಬೇಕಾಗುವುದು ನಿಶ್ಚಿತ. ಅಂದರೆ ಈವರೆಗೆ ಸರ್ಕಾರವು ನೀಡಿರುವ 290 ಕೋಟಿ ರೂಪಾಯಿಗಳನ್ನು ಹೊರತುಪಡಿಸಿ ಹೊಸದಾಗಿ 610 ಕೋಟಿ ರೂಪಾಯಿಗಳು ಅತ್ಯಗತ್ಯ. ಇಷ್ಟೆಲ್ಲ ಹಣ ಮತ್ತು ಸೂಕ್ತ ಮಂಜೂರಿ ದೊರೆತು ಈ ಎಲ್ಲ ಕಾರ್ಯಗಳು ಪೂರ್ಣಗೊಳ್ಳಲು 2-3 ವರ್ಷಗಳೇ ಬೇಕು. ಅಂತೂ ಇಂತೂ, ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಹೇಗೇಗೋ ಈ ಎಲ್ಲ ಅಭಿವೃದ್ಧಿ ಕಾರ್ಯಗಳು ಮುಗಿಯುತ್ತವೆ ಎಂದು ಭಾವಿಸಬಹುದು.

ಈಗ ಏನಾಗಬೇಕಾಗಿದೆ:

ಈ ದೀರ್ಘ ಲೇಖನದ ಉದ್ದೇಶವೆಂದರೆ, ಸಮಸ್ತ ವಿರಕ್ತ ಮಠಗಳು ಒಂದುಗೂಡಬೇಕು. ಅವರೆಲ್ಲರೂ ಈ ಲೇಖನದಲ್ಲಿ ನೀಡಿರುವ ಎಲ್ಲ ಸಮಸ್ಯೆಗಳನ್ನು ಕೂಲಂಕುಶವಾಗಿ ಚರ್ಚಿಸುವ ಸಲುವಾಗಿ ಒಂದೆರಡು ದಿನಗಳ ವರ್ಕಶಾಪ್ ಮಾದರಿಯ ಸಭೆ ಸೇರಬೇಕು. ಆ ಸಭೆಯಲ್ಲಿ ಕೆಲವು ಸೂಕ್ತ ಉಪಸಮಿತಿಗಳನ್ನು ರಚಿಸಬೇಕು. ಆಯಾ ಉಪಸಮಿತಿಗಳಿಗೆ ಬೇರೆ ಬೇರೆ ರೀತಿಯ ಕಾರ್ಯಗಳ ಬಗ್ಗೆ ಚರ್ಚಿಸಿ, ಅವುಗಳನ್ನು ಸರ್ಕಾರದ ಸಹಭಾಗಿತ್ವದಲ್ಲಿ ಯಾವ ರೀತಿಯಲ್ಲಿ ನಿರ್ವಹಿಸಬೇಕು ಎನ್ನುವುದನ್ನು ನಿರ್ಧರಿಸಬೇಕು. ಇಂತಹ ಕೆಲವು ಉಪಸಮಿತಿಗಳ ಜವಾಬ್ದಾರಿಗಳನ್ನು ಈ ಕೆಳಗೆ ಸೂಚಿಸಲಾಗಿದೆ:

1) ಸಾಹಿತ್ಯ ಸಮಿತಿ:
ವಚನಶಾಸ್ತ್ರದ ಸಂಕ್ಷಿಪ್ತ ಪರಿಚಯ, ಅವುಗಳ ಇತಿಹಾಸ, ಬಸವಣ್ಣ ಮತ್ತು ಶರಣರ ಚಳುವಳಿಯ ಗುರಿಗಳೇನಾಗಿದ್ದವು? ಅವು ಏನಾದವು? ಹಾಗೇಕಾದವು? ಈಗ ಅವುಗಳ ಪ್ರಸ್ತುತತೆ ಏನು ಎನ್ನುವುದರ ಬಗ್ಗೆ ಸಣ್ಣ ಸಣ್ಣ ಫೋಲ್ಡರ್ಸ್, ಪಾಂಪ್ಲೆಟ್ಸ್, ಕಿರುಪುಸ್ತಕದಂತಹ ಸಾಹಿತ್ಯ ರಚನೆ ಮಾಡಿ ದಿನನಿತ್ಯ ಅಲ್ಲಿಗೆ ಬರುವ ಪ್ರವಾಸಿಗರಿಗೆ ಉಚಿತವಾಗಿ ಇಲ್ಲವೆ ಅತಿಕಡಿಮೆ ಬೆಲೆಗೆ ಮಾರುವ ಸೂಕ್ತ ವ್ಯವಸ್ಥೆ ಮಾಡುವುದು.

2) ದಾಸೋಹ ಸಮಿತಿ:
ದಿನ ನಿತ್ಯ ನಾಲ್ಕಾರು ಸಾವಿರ ಜನರು ಅಲ್ಲಿಗೆ ಬರುತ್ತಾರೆ. ಅವರಿಗೆ ನಮ್ಮ ಬಹುತೇಕ ಮಠಗಳಲ್ಲಿ ಇರುವಂತೆ ಮತ್ತು ಸಿಖ್ಖರ ಗುರುದ್ವಾರಗಳಲ್ಲಿರುವಂತೆ ಪ್ರಸಾದ ವ್ಯವಸ್ಥೆ ಮಾಡುವುದು. ಅದಕ್ಕೆ ಸೂಕ್ತ ಸಿಬ್ಬಂದಿ, ಹಣಕಾಸು ಇತ್ಯಾದಿ ಚರ್ಚಿಸಿ ಯೋಜನೆ ಹಾಕಿಕೊಳ್ಳುವುದು. ಈ ಕಾರ್ಯಗಳನ್ನು ಯಾವ ಯಾವ ಮಠಗಳಿಗೆ ವಹಿಸಬೇಕು ಅಥವಾ ಪ್ರತಿವರ್ಷ ಒಂದೊಂದು ತಿಂಗಳಿಗೆ ಒಂದೊಂದು ಮಠ ಅಥವಾ ಎರಡು ಮೂರು ಮಠಗಳಿಗೆ ವಹಿಸುವುದು ಇತ್ಯಾದಿ.

3) ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿ ಉಪಸಮಿತಿ:
ಅ) ಪ್ರಾರ್ಥನೆ, ಭಜನೆ, ವಚನ ಗಾಯನ ನಿತ್ಯದ ಕಾರ್ಯಕ್ರಮಗಳನ್ನಾಗಿ ನಡೆಸುವುದು. ನಿತ್ಯ ಭಜನೆ, ಪ್ರಾರ್ಥನೆ, ಮುಖ್ಯ ಸ್ಥಳದ ನಿರ್ವಹಣೆ, ರಾಜ್ಯದ ಮೂಲೆ ಮೂಲೆಗಳಿಂದ ಲಿಂಗಾಯತ ಮತ್ತು ಇತರ ಭಜನಾ ಮಂಡಳಿಗಳನ್ನು ಗುರುತಿಸುವುದು, ಅವುಗಳನ್ನು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡುವುದು, ಅವುಗಳ ಮಧ್ಯ ಸ್ಪರ್ಧೆ ಏರ್ಪಡಿಸುವುದು ಇತ್ಯಾದಿ.
ಬ) ರಾಜ್ಯದ ಮೂಲೆ ಮೂಲೆಗಳಲ್ಲಿರುವ ಪ್ರಸಿದ್ಧ ಭಜನಾ ಮಂಡಳಿಗಳನ್ನು, ವಚನ ಸಂಗೀತ ತಂಡಗಳನ್ನು ನಾಟಕ ತಂಡಗಳನ್ನು, ವಚನ ನೃತ್ಯ ತಂಡ ಅಥವಾ ಸೋಲೋ ವ್ಯಕ್ತಿಗಳನ್ನು ಗುರುತಿಸಿ, ಅನುಭವ ಮಂಟಪದ ಕಾರ್ಯಕ್ರಮಗಳಲ್ಲಿ ಅವರಿಗೆ ಆಗಾಗ ಭಾಗವಹಿಸುವಂತೆ ಮಾಡುವುದು, ಇತ್ಯಾದಿ.
ಕ) ಹಾಗೆಯೇ, ಕರಡಿ ಮಜಲುಗಳು, ಡೊಳ್ಳಿನ ಕುಣಿತ, ನಂದಿಕೋಲು ಇತ್ಯಾದಿ ತಂಡಗಳನ್ನು ಗುರುತಿಸಿಟ್ಟುಕೊಂಡು ಅವರನ್ನು ಆಗಾಗ ನಡೆಯುವ ಅನುಭವ ಮಂಟಪದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡುವುದು ಇತ್ಯಾದಿ;
ಡ) ಪುರಾಣ, ಪ್ರವಚನ, ಗೋಷ್ಠಿಗಳನ್ನು ಏರ್ಪಡಿಸುವುದು. ಸೆಮಿನಾರ್, ಸಿಂಪೋಜಿಯಮ್, ಇತ್ಯಾದಿಗಳನ್ನು ಆಯ್ದ ವಿಷಯಗಳ ತಜ್ಞರನ್ನು ಕರೆಯಿಸಿ ಆಗಾಗ ನಡೆಸುವುದು ಇತ್ಯಾದಿ.

4) ಸಮಸ್ತ ಕಾರ್ಯಗಳ ಸಂಯೋಜನಾ ಸಮಿತಿ:
ಈ ಸಮಿತಿಯಲ್ಲಿ ರಾಜ್ಯದ ಮತ್ತು ಇತರ ರಾಜ್ಯಗಳ ಪ್ರಮುಖ ಮಠಾಧೀಶರನ್ನು ಸೇರಿಸಿ, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ವಹಿಸಿಕೊಟ್ಟಿರುವ ಕೆಲವು ಕಾರ್ಯಗಳನ್ನು (ಉದ್ಯಾನ, ಉಸ್ತುವಾರಿ, ನೀರು ಮತ್ತು ವಿದ್ಯುತ್ ಪೂರೈಕೆ, ನೈರ್ಮಲ್ಯ ರಕ್ಷಣೆ, ರಸ್ತೆ, ಮೈದಾನ, ವಿವಿಧ ಕಟ್ಟಡಗಳಲ್ಲಿ ಕಸಗುಡಿಸುವುದು, ದಿನನಿತ್ಯ ನೀರಿನಿಂದ ತಿಕ್ಕಿ ಒರೆಸುವುದು, ಆಗಾಗ ರಿಪೇರಿ ಮಾಡಿಸುವುದು, ಸೆಕ್ಯುರಿಟಿ ನೇಮಿಸುವುದು, ಇತ್ಯಾದಿ)
ಕಾರ್ಯಕ್ರಮಗಳ ಜೊತೆಗೆ ಶರಣ ಸಮುದಾಯ ಹಾಗೂ ಮಠಗಳಿಂದ ನಡೆಸುವ ಮೇಲೆ ವಿವರಿಸಿದ ಎಲ್ಲ ಕಾರ್ಯಗಳನ್ನು ಸಂಯೋಜನೆ ಮಾಡುವ ಹೊಣೆಯನ್ನು ಈ ಸಮಿತಿ ನಿರ್ವಹಿಸಬಹುದು. ಈ ಸಮಿತಿಯಲ್ಲಿ ಪ್ರಭಾವಿ ಮತ್ತು ಹಿರಿಯ ಹಾಗೂ ಸಶಕ್ತ ಮಠಗಳ ಸ್ವಾಮಿಗಳಿದ್ದರೆ ಸೂಕ್ತವೆನಿಸುತ್ತದೆ. ಈ ಸಮಿತಿಯು ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯಗಳಲ್ಲಿನ 1) ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು, 2) ಲಿಂಗಾಯತ ವ್ಯಾಪಾರಸ್ಥರನ್ನು, 3) ಉದ್ಯೋಗಪತಿಗಳನ್ನು, 4) ಇತರ ದಾಸೋಹಿಗಳನ್ನು ಈ ಕಾರ್ಯಗಳ ನಿರ್ವಹಣೆಯಲ್ಲಿ ತೊಡಗಿಸುವಲ್ಲಿ ಸಹಾಯ ಮಾಡಬೇಕು.

ಅನುಭವ ಮಂಟಪವನ್ನು ದುರುಪಯೋಗಪಡಿಸುವ ಪ್ರಯತ್ನಗಳು ಮತ್ತು ಅವುಗಳ ಬಗ್ಗೆ ಶರಣ ಸಮುದಾಯವು ಮುಂಜಾಗ್ರತರಾಗಬೇಕಾದ ಅಂಶಗಳು:

ಅ) ಲಿಂಗಾಯತರನ್ನು ದಾರಿತಪ್ಪಿಸಲು ಹಗಲಿರುಳೂ ಎಲ್ಲ ದೃಷ್ಟಿಯಿಂದ ಎಲ್ಲ ಕಡೆಗಳಲ್ಲೂ ಮಹಾ ಪ್ರಯತ್ನಗಳನ್ನು ಈಗಾಗಲೇ ಮಾಡುತ್ತಿರುವವರಲ್ಲಿ ಪಂಚಾಚಾರ್ಯರು ಮತ್ತು ಅವರ ಅನುಯಾಯಿಗಳು ಸಕ್ರಿಯರಾಗಿದ್ದಾರೆ. ಅವರು ಯಶಸ್ವಿಯಾದರೆ ಅನುಭವ ಮಂಟಪ ನಿಜವಾಗಿಯೂ ನಿಷ್ಫಲಗೊಳ್ಳುತ್ತದೆ.

ಬ) ಇನ್ನೊಂದು ಇತ್ತೀಚಿನ ಬೆಳವಣಿಗೆ ಎಂದರೆ 1) ರಾಷ್ಟ್ರೀಯ ಸ್ವಯಂ ಸೇವಕ ಸಂಘ, 2) ವಿಶ್ವ ಹಿಂದೂ ಪರಿಷತ್ತು ಮತ್ತು 3) ಭಾರತೀಯ ಜನತಾ ಪಕ್ಷ ಈ ಮೂವರು ಸೇರಿ ಲಿಂಗಾಯತರ ಒಗ್ಗಟ್ಟನ್ನು ಮುರಿಯಲು ಎಲ್ಲ ತರಹದ ಪ್ರಯತ್ನಗಳಿಗೆ ನೇರವಾಗಿ ಯಾವ ಮುಚ್ಚುಮರೆಯಿಲ್ಲದೆ ಕೈಹಾಕುತ್ತಿದ್ದಾರೆ. ಈ ದಿಶೆಯಲ್ಲಿ :
1) ಬಸವಣ್ಣ ಮತ್ತು ಶರಣರು ವೈದಿಕ ಧರ್ಮವನ್ನೇ ಬೋಧಿಸಿದರು ಎಂದೂ,
2) ವಚನಗಳು ಉಪನಿಷತ್ತುಗಳ ಕನ್ನಡ ಭಾಷಾಂತರಗಳೆಂದೂ,
3) ಅನುಭವ ಮಂಟಪ ಎಂಬ ಸಂಸ್ಥೆ ಇರಲಿಲ್ಲವೆಂದೂ, ಅದು 16ನೆಯ ಶತಮಾನದ ಶೂನ್ಯ ಸಂಪಾದನಕಾರರ ಕಾಲ್ಪನಿಕ ಸೃಷ್ಟಿ ಎಂದೂ ತೋರಿಸುವ ಉಗ್ರ ಮತ್ತು ಸುಸಂಘಟಿತ ಹಾಗೂ ಸಾಕಷ್ಟು ಹಣವನ್ನೂ ಸುರಿದ ಇಂತಹ ಕಾರ್ಯಕ್ರಮಗಳು ಈಗಾಗಲೇ ಪ್ರಾರಂಭವಾಗಿವೆ.
4) ಆ ಬಗ್ಗೆ ಕೆಲವು ಪುಸ್ತಕಗಳನ್ನು (ವಚನ ದರ್ಶನ), ಪ್ರಬಂಧ ಸ್ಪರ್ಧೆಗಳನ್ನು, (ವಚನ ದರ್ಶನದ ಮೇಲೆ ಪ್ರಬಂಧ ಸ್ಪರ್ಧೆ) ಕೆಲವು ಸೆಮಿನಾರಗಳನ್ನು, (ಗದಗ ಮತ್ತು ಬೆಂಗಳೂರಿನಲ್ಲಿ) ಕೆಲವು ಸಿನಿಮಾಗಳನ್ನು (ಶರಣ ಶಕ್ತಿ) ತಯಾರಿಸಿದ್ದಾರೆ ಮತ್ತು ಇನ್ನೂ ಹೆಚ್ಚಿನ ತಯಾರಿಕೆಗಳಲ್ಲಿ ತೊಡಗಿದ್ದಾರೆ. ದುರ್ದೈವದಿಂದ ನಮ್ಮಲ್ಲಿನ ಕೆಲವು ವಿರಕ್ತ ಮಠದ (ವಿಶೇಷವಾಗಿ ದೊಡ್ಡ ದೊಡ್ಡ ಮಠಗಳ) ಸ್ವಾಮಿಗಳು ಅವರೊಂದಿಗೆ ಕೈಜೋಡಿಸುತ್ತಿದ್ದಾರೆ. ಈ ಪ್ರಯತ್ನಗಳನ್ನು ಈ ಸಮುದಾಯ, ಮತ್ತು ಎಲ್ಲ ವಿರಕ್ತ ಮಠಗಳು ಸಮರ್ಥವಾಗಿ ಎದುರಿಸಲು ಸಿದ್ಧವಾಗಬೇಕಾಗಿದೆ.
5) ಲಿಂಗಾಯತರ ಮತಗಳನ್ನು ಪಡೆದು ಆರಿಸಿ ಬರುವ ಅನೇಕ ಶಾಸಕರು (ವಿಜಯಪುರ ನಗರ, ಧಾರವಾಡ, ನರಗುಂದ) ಮತ್ತು ಈವರೆಗೆ ಬಿಜೆಪಿಯಿಂದ ಮುಖ್ಯಮಂತ್ರಿಯ ಹುದ್ದೆಗೆ ಏರಿದ ಇಬ್ಬರು, ಕಲಬುರ್ಗಿಯ ಓರ್ವ ಹಿಂದಿನ ರಾಜ್ಯಸಭೆಯ ಸಂಸದರು ಲಿಂಗಾಯತರ ಬಸವಪರ ಹೋರಾಟವನ್ನು ನೇರವಾಗಿಯೇ ವಿರೋಧಿಸಿದರು. ಇಂಥವರಿಂದ ಅನುಭವ ಮಂಟಪವು (ಅ) ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತರಬೇತಿ ಕೇಂದ್ರವಾಗಿ, ‘ರಾಷ್ಟ್ರೀಯತೆ’ಯ ಹೆಸರಿನಲ್ಲಿ (ಆ) ಹಿಂದುತ್ವವನ್ನು ಬೆಳೆಸುವ ಕೇಂದ್ರವಾಗಿ ಮಾರ್ಪಾಡಾಗುವ ಅಪಾಯವೇ ಹೆಚ್ಚಾಗಿದೆ. ಇದು ಭವಿಷ್ಯ ವಾಣಿಯಲ್ಲ. ಆದರೆ ಆ ಬಗ್ಗೆ ಈಗಾಗಲೆ ತಯಾರಾಗಿರುವ ನೀಲನಕ್ಷೆ ಒಂದು ಭಾಗ. ಆ ನೀಲನಕ್ಷೆಯನ್ನು ಯಾರು ತಯಾರಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.
6) ಬೇರೆ ಯಾವುದೇ ಧರ್ಮಗಳಿಗೆ ನೀಡದ ಮಹತ್ವವನ್ನು ಲಿಂಗಾಯತ ಶರಣರಿಗೆ ಅನುಭವ ಮಂಟಪಕ್ಕೆ ಏಕೆ ಕೊಡಲಾಗುತ್ತಿದೆ ಎನ್ನುವುದಕ್ಕೆ ಪ್ರಮುಖ ಕಾರಣವೆಂದರೆ ಶರಣ ತತ್ವಗಳು ಪ್ರಜಾರಾಜ್ಯ ಕಲ್ಪನೆಯ ಮೂಲ ತತ್ವಗಳನ್ನೂ ಮತ್ತು ಅವುಗಳ ಆಚರಣೆಗಳನ್ನೂ ಹೊಂದಿವೆ. ಆದ್ದರಿಂದ ಶರಣ ತತ್ವ, ಅದರ ಇತಿಹಾಸ, ಅದರ ಮಹತ್ವದ ಬಿಂದುಗಳ ಪ್ರಚಾರದೊಂದಿಗೆ (ಅ) ಪ್ರಜಾರಾಜ್ಯ ಪದ್ಧತಿಯ ಶಿಕ್ಷಣ ಮತ್ತು ತರಬೇತಿ, (ಆ) ಜಾತ್ಯಾತೀತ ರಾಷ್ಟ್ರ ಪ್ರೇಮ, (ಇ) ಪ್ರಜಾರಾಜ್ಯ ಪದ್ಧತಿಯಲ್ಲಿ ಪ್ರಜೆಗಳ ಪಾತ್ರ, (ಈ) ಚುನಾವಣೆಗಳ ಮಹತ್ವ, (ಉ) ಮತದಾರರ ನಡತೆ, (ಊ) ಭ್ರಷ್ಠ ರಾಜಕಾರಣಿಗಳನ್ನು ಅವರ ದುಷ್ಟ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪ್ರಜೆಗಳು/ಮತದಾರರು ಹೇಗೆ ಕಾರ್ಯತತ್ಪರರಾಗಬಹುದು (ಎ) ನಾಗರಿಕರ ಕರ್ತವ್ಯ, (ಏ) ಸಂವಿಧಾನದ ಬಗ್ಗೆ ಮಹತ್ವದ ಬಿಂದುಗಳ ಮಾಹಿತಿ ಇತ್ಯಾದಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಒಂದು ಪ್ರತ್ಯೇಕ ಪ್ರಜಾರಾಜ್ಯ ತತ್ವಗಳ ಪ್ರಚಾರ, ಪ್ರಸಾರ ಮತ್ತು ತರಬೇತಿ ಸಂಸ್ಥೆಯನ್ನು ಅನುಭವ ಮಂಟಪದಲ್ಲಿ ಸರ್ಕಾರಗಳ ಸಹಾಯದಿಂದ ರಚಿಸಿಕೊಳ್ಳಲು ಯೋಚಿಸಬಹುದು. ಅವುಗಳಲ್ಲಿ ಕೆಲವು ಅಂಶಗಳನ್ನು ಇಲ್ಲಿ ಸೂಚಿಸಬಹುದು, ಅದರ ವಿವರ ಹೀಗಿದೆ:

ನೇರವಾಗಿ ಹೇಳಬೇಕೆಂದರೆ, ಅನುಭವ ಮಂಟಪವು ಗಂಭೀರವಾದ ಚರ್ಚೆ, ವಿಚಾರ ಮಂಥನ ಮತ್ತು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಕೇಂದ್ರವಾಗಬೇಕು. ಹನ್ನೆರಡನೆಯ ಶತಮಾನದಲ್ಲಿ ಶರಣರು ಅನುಭವ ಮಂಟಪದಲ್ಲಿ ಅಂದಿನ ಸಮಾಜದಲ್ಲಿನ ಒಳಿತು ಕೆಡುಕಗಳನ್ನು ಚರ್ಚಿಸುತ್ತಿದ್ದರು. ಆಗಿನ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ ಹಾಗೂ ರಾಜಕೀಯ ತರಹದ ಸಮಸ್ಯೆಗಳ ಬಗ್ಗೆ ತೀವ್ರತರವಾದ ಸಂವಾದಗಳು ನಡೆಯುತ್ತಿದ್ದವು. ಅವು ಲೌಕಿಕ ಮತ್ತು ಅಲೌಕಿಕ ಎರಡೂ ರಂಗದ ಚಿಂತನ ಮಂಥನಗಳಾಗಿದ್ದವು. ಅವು ಶೂನ್ಯ ಸಂಪಾದನೆಯಲ್ಲಿ ಮತ್ತು ಸಂವಾದಿಕ ಶೈಲಿಯ ವಚನಗಳಲ್ಲಿ ವಿಪುಲವಾಗಿ ಬಿಂಬಿಸಲ್ಪಟ್ಟಿವೆ. ಆದರೆ ಕಳೆದ ಸುಮಾರು ಒಂದು ಸಹಸ್ರಮಾನದಲ್ಲಿ ಆದ ಘಟಸ್ಫೋಟಗಳು ಸಮಾಜ, ರಾಷ್ಟ್ರ ಮತ್ತು ಸಾಮೂಹಿಕ ಬದುಕಿನಲ್ಲಿ ಊಹಿಸಲಾರದಷ್ಟು ಬದಲಾವಣೆಗಳನ್ನು ತಂದಿವೆ. ಅಷ್ಟಾದರೂ ಅಂದು ಶರಣರನ್ನು ಕಾಡಿದ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆಯೆಂದರೆ ಭಾರತೀಯ ಸಮಾಜ ಎಷ್ಟು ಜಡವಾಗಿದೆ ಎನ್ನುವುದು ಸ್ಪಷ್ಟ. ಉದಾಹರಣೆಗೆ ಜಾತಿ ಪದ್ಧತಿ ಮತ್ತು ಅದರ ವಿನಾಶಕ ಮುಖಗಳು ಇಂದಿಗೂ ಉಳಿದಿವೆ. ಈಗ ಅವು ಬಹುಮುಖಿ ಸಮಸ್ಯೆಗಳ ಕ್ಲಿಷ್ಟ ರೂಪ ತಳೆದಿವೆ:

1) 900 ವರ್ಷಗಳ ಹಿಂದೆ ಶರಣರು ಪ್ರಾರಂಭಿಸಿದ ಅಂತರಜಾತಿಯ ವಿವಾಹಗಳಿಗೆ ಅಂದು ಬಿಜ್ಜಳ ನೀಡಿದಂತಹ ಶಿಕ್ಷೆ ಈಗಿಲ್ಲ. ವಿರುದ್ಧವಾಗಿ ಸರ್ಕಾರಗಳು, ಕಾನೂನುಗಳು ಮತ್ತು ನ್ಯಾಯಾಲಯಗಳು ಸೂಕ್ತ ಮನ್ನಣೆ ಮತ್ತು ರಕ್ಷಣೆ ನೀಡುತ್ತವೆ. ಆದರೆ ಅಂತಹ ವಿವಾಹಗಳು ಈಗಲೂ ದೊಡ್ಡ ಆವಾಂತರಗಳನ್ನು ಸೃಷ್ಟಿಸುತ್ತವೆ. ಅದೇ ಆವಾಂತರಗಳು ಇಂದು ಲವ್ ಜೀಹಾದ್, ರಿವರ್ಸಲ್ ಜೀಹಾದ್, ಧರ್ಮಾಂತರ ನಿಯಂತ್ರಣ ಕಾನೂನುಗಳ ರಚನೆ, ಕೋಮುವಾದ, ಕೋಮು ಗಲಭೆಗಳು, ಧಾರ್ಮಿಕ ಕಲಹಗಳ ರೂಪದಲ್ಲಿ ಇಂದು ಅತ್ಯಂತ ಉಗ್ರ ರೂಪ ತಾಳಿವೆ. ಅಂದು ಈ ರೀತಿಯ ಸಮಸ್ಯೆಗಳಿರಲಿಲ್ಲ. ಇದ್ದರೂ ಸಾರ್ವಜನಿಕ ವಲಯದಲ್ಲಿ ಎದ್ದು ಕಾಣುತ್ತಿರಲಿಲ್ಲ. ಇಂದು ಈ ಸಮಸ್ಯೆಗಳ ಬಗ್ಗೆ ಚರ್ಚಿಸುವುದೇ ಒಂದು ಅಪರಾಧದಂತೆ ತಿಳಿಯಲಾಗುತ್ತದೆ. ಅಂತರಜಾತಿಯ ವಿವಾಹಗಳನ್ನು ಕಾಯಿದೆಯಲ್ಲಿ ಮಾನ್ಯ ಮಾಡಿದರೂ ವಾಸ್ತವಿಕವಾಗಿ ಅಂತಹ ವಿವಾಹಗಳು ವೈಯಕ್ತಿಕ ಹಾಗೂ ಕೌಟುಂಬಿಕ ಮತ್ತು ಸಾಮಾಜಿಕವಾಗಿ ಗಂಭೀರ ತಲ್ಲಣಗಳನ್ನೆ ಸೃಷ್ಟಿಸುತ್ತವೆ. ನೂತನ ಅನುಭವ ಮಂಟಪದಲ್ಲಿ ಈ ಸಮಸ್ಯೆಗಳನ್ನು ಚರ್ಚಿಸಬಹುದೇ? ಅಂತರಜಾತಿಯ ವಿವಾಹಗಳನ್ನು ಬೆಂಬಲಿಸುವ ರಕ್ಷಿಸುವ ಅಂಥ ವಿವಾಹವಾಗಿರುವವರಿಗೆ ಸಹಾಯ ಮಾಡುವ ಕಾರ್ಯಕ್ರಮಗಳನ್ನು ರೂಪಿಸಬಹುದೇ?

2) ಜಾತಿಯ ನಿರ್ಮೂಲನೆಗೆ ಈಗ ವಿವಿಧ ರೀತಿಯ ಕಾನೂನುಗಳು ಬಂದಿವೆ. ಅಲ್ಪಸಂಖ್ಯಾತ ಧರ್ಮಗಳ ರಕ್ಷಣೆ, ಹಿಂದುಳಿದ ಜಾತಿಗಳ ಅಥವಾ ವರ್ಗಗಳ ಅಭ್ಯುದಯಕ್ಕಾಗಿ ವಿಶೇಷ ಆಯೋಗಗಳು, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಯೋಗಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಆ ಸಮಸ್ಯೆಗಳಿಗೆ ಇನ್ನೂ ಸೂಕ್ತ ಪರಿಹಾರ ದೊರೆತಿಲ್ಲ. ಇವುಗಳನ್ನು ನೂತನ ಅನುಭವ ಮಂಟಪದಲ್ಲಿ ಚರ್ಚಿಸಬಹುದೇ?

3) ಸ್ತ್ರೀ ಸ್ವಾತಂತ್ರ್ಯ ಇಂದು ಬಹುದೂರ ಬಂದಿದೆ. ಮಹಿಳೆಯರ ಶಿಕ್ಷಣ, ಆರೋಗ್ಯ, ವಿವಾಹ ಸಂಬಂಧಿ ಕಾನೂನುಗಳ ಸುಧಾರಣೆ, ಆಸ್ತಿ ಹಕ್ಕು, ದತ್ತಕ ಹಕ್ಕು, ಇತ್ಯಾದಿಗಳ ಬಗ್ಗೆ ಊಹಿಸಲಾರದಷ್ಟು ಬೆಳವಣಿಗೆಗಳಾಗಿವೆ. ಆದಾಗ್ಯೂ ಮಹಿಳೆಯರ ಲೈಂಗಿಕ ಶೋಷಣೆ, ಬಲತ್ಕಾರ, ಬಹುಪತ್ನಿತ್ವ, ಸೂಳೆಗಾರಿಕೆ, ಮಾರಾಟ ಇಂದಿಗೂ ನಡೆಯುತ್ತಿವೆ. ಇವುಗಳ ಬಗ್ಗೆ ನೂತನ ಅನುಭವ ಮಂಟಪವು ಚರ್ಚೆಯ ಕೇಂದ್ರವಾಗಬಹುದೇ?

4) ದಲಿತ ಸಮಸ್ಯೆಗಳು ಎಲ್ಲ ಕಾನೂನು ಮತ್ತು ಸರ್ಕಾರಿ ಯೋಜನೆಗಳಿದ್ದರೂ ಸಾಮಾಜಿಕ ಸಮ್ಮಿಲನ, ಸಮಾನತೆ, ಗ್ರಾಮೀಣ ಭಾಗಗಳಲ್ಲಿ ಅಸ್ಪೃಶ್ಯತೆ, ಭೂಗತಗೊಂಡ ದೇವದಾಸಿ ಪದ್ದತಿಯ ಮುಂದುವರಿಕೆ ಇವುಗಳ ಬಗ್ಗೆ ಅಂದು ಶರಣರು ಚಿಂತಿಸಿದರು ಮತ್ತು ಅವುಗಳ ಪರಿಹಾರಕ್ಕಾಗಿ ಹೋರಾಡಿದರು. ಇವುಗಳ ಈಗಿನ ರೂಪಗಳ ಬಗ್ಗೆ ನೂತನ ಅನುಭವ ಮಂಟಪ ವೇದಿಕೆಯನ್ನು ಒದಗಿಸಬಲ್ಲುದೇ?

5) ಆರ್ಥಿಕ ಕ್ಷೇತ್ರದಲ್ಲಿ ಅಪಾರ ಅಸಮಾನತೆ, ದುಡಿಯದೇ ದಿಢೀರ್ ಶ್ರೀಮಂತನಾಗಬೇಕೆಂಬ ದುರಾಚಾರ, ಭ್ರಷ್ಟಾಚಾರ, ದೈಹಿಕ ಕಾಯಕಕ್ಕೆ ದೊರೆಯದ ಮಾನ್ಯತೆ, ಇಂದಿಗೂ ಶೂದ್ರರು ಅಂದಿನ ಶೂದ್ರ ಕಾಯಕಗಳಲ್ಲಿ ಅನೇಕ ಗ್ರಾಮಗಳಲ್ಲಿ ಮುಂದುವರೆದಿದ್ದಾರೆ. ಇಂತಹ ಸಮಸ್ಯೆಗಳ ಸಾಮಾಜಿಕ ಪರಿಹಾರಕ್ಕೆ ನೂತನ ಅನುಭವ ಮಂಟಪ ವೇದಿಕೆಯಾಗಬಹುದೇ?

6) ಶರಣರು ನೇರವಾಗಿ ಮತ್ತು ಪರೋಕ್ಷವಾಗಿಯೂ ರಾಜ್ಯಸತ್ತೆಯನ್ನು ವಿರೋಧಿಸಿ ನಿಂತರು. ಪ್ರಜಾರಾಜ್ಯದ ಕನಸು ಕಂಡರು. ಇಂದು ಪ್ರಜಾರಾಜ್ಯ ನಿರ್ಮಾಣವಾಗಿದೆ. ಆದರೆ, ಅದು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ. ಅದರಲ್ಲಿನ ನ್ಯೂನತೆಗಳನ್ನು ಚರ್ಚಿಸುವ ಕೇಂದ್ರವಾದಂತೆ ನೂತನ ಅನುಭವ ಮಂಟಪ ಕೆಲಸ ಮಾಡಬಹುದೇ?
ಇವು ಚರ್ಚಿಸಬೇಕಾದ ಅಂಶಗಳು.

ಈಗೇನು ಮಾಡಬಹುದು?

ಈ ದೀರ್ಘ ಮನವಿಯ ಉದ್ದೇಶವೆಂದರೆ ನಮ್ಮ ಎಲ್ಲ ಬಸವಪರ ಲಿಂಗಾಯತ ಮಠಾಧೀಶರನ್ನು ಈ ದಿಶೆಯಲ್ಲಿ ಕಾರ್ಯಪ್ರವೃತ್ತರನ್ನಾಗಿ ಮಾಡುವುದು. ಅವರ ಮುಖಾಂತರ ಈ ಕೆಳಗಿನ ಕಾರ್ಯಗಳನ್ನು ನೆರವೇರಿಸುವುದು ಮಹತ್ವದ್ದಾಗಿದೆ.
1) ಪ್ರಾರಂಭದಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟವು ತಮಗೆ ಅನುಕೂಲವಾದಲ್ಲಿ ಒಂದು ವಿಶೇಷ ಸಭೆಯನ್ನು ಏರ್ಪಡಿಸಿ ಬಸವಪರ ಮಠಾಧೀಶರನ್ನು ಆಮಂತ್ರಿಸಬಹುದು. ಅದರಲ್ಲಿ ಈ ವಿಷಯದ ಬಗ್ಗೆ ಮುಕ್ತ ಮತ್ತು ಸೂಕ್ತ ಚಿಂತನೆ ಮಾಡಲು ಪ್ರಾರಂಭಿಸಬೇಕು.
2) ತದನಂತರ ನೂರಾರು ಸಣ್ಣ ದೊಡ್ಡ ಲಿಂಗಾಯತ ಶಿಕ್ಷಣ ಸಂಸ್ಥೆಗಳ ಪ್ರಮುಖರನ್ನೂ ಸೇರಿಸಿ ಮತ್ತೊಂದು ಸಮಾಲೋಚನಾ ಸಭೆಯನ್ನು ನಡೆಸಿ ಅವರ ಸಹಾಯ, ಸಲಹೆಗಳನ್ನು ಪಡೆಯಬಹುದು.
3) ಆನಂತರ ದೊಡ್ಡ ದೊಡ್ಡ ಉದ್ಯಮಿಗಳನ್ನು, ವ್ಯಾಪಾರಸ್ಥರನ್ನು, ಉದಾರ ದಾಸೋಹಿಗಳನ್ನು ಸಂಪರ್ಕಿಸಿ ಅವರನ್ನೂ ಈ ಬೃಹತ್ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು.
4) ಕೊನೆಗೆ ಸರ್ಕಾರದೊಂದಿಗೆ ಸಮಾಲೋಚನೆ ಮಾಡಬಹುದು. ಆಗ ಇದಕ್ಕೆ ಒಂದು ಸೂಕ್ತವಾದ ಸ್ಪಷ್ಟ ರೂಪ ಬರುತ್ತದೆ. ಇಲ್ಲಿ ನೀಡಿರುವ ಎಲ್ಲ ಅಂಶಗಳು ಈಡೇರದಿದ್ದರೂ ಕೆಲವಾದರೂ ಮಹತ್ವದ ಕಾರ್ಯಗಳಾದರೂ ನೆರವೇರಬಹುದು.

Previous post ನಾಥರು ಮತ್ತು ಶರಣರು-2
ನಾಥರು ಮತ್ತು ಶರಣರು-2
Next post ವಚನ–ಶ್ರಮಣಧಾರೆಗಳ ಸಂಧಿಭೂಮಿ
ವಚನ–ಶ್ರಮಣಧಾರೆಗಳ ಸಂಧಿಭೂಮಿ

Related Posts

ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
Share:
Articles

ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ

March 6, 2024 ಮಲ್ಲಿಕಾರ್ಜುನ ಕಡಕೋಳ
ನಮ್ಮೂರು ಕಡಕೋಳದ ಪ್ರತಿಯೊಂದು ಓಣಿಯಲ್ಲೂ ಮಡಿವಾಳಪ್ಪ ಮತ್ತು ಅವರ ಶಿಷ್ಯರ ತತ್ವಪದಗಳನ್ನು ಲೋಕ ಸಂವೇದನೆಯ ಜವಾರಿ ದನಿಯಲ್ಲಿ ಹಾಡುವವರಿದ್ದಾರೆ. ಅದೊಂದು ನೈಸರ್ಗಿಕ...
ಅಷ್ಟವಿಧಾರ್ಚನೆ – ಷೋಡಶೋಪಚಾರ
Share:
Articles

ಅಷ್ಟವಿಧಾರ್ಚನೆ – ಷೋಡಶೋಪಚಾರ

November 1, 2018 ಡಾ. ಪಂಚಾಕ್ಷರಿ ಹಳೇಬೀಡು
ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗಕ್ಕೆ ಪ್ರಥಮ ಪ್ರಾಶಸ್ತ್ಯ. ಯಾವುದೇ ವ್ಯಕ್ತಿ ಲಿಂಗಾಯತನೆನಿಸಿಕೊಳ್ಳಬೇಕಾದರೆ ಆತನು ಇಷ್ಟಲಿಂಗವನ್ನು ಸದಾ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮತ್ರ್ಯಲೋಕದ ಮಹಾಮನೆ
ಮತ್ರ್ಯಲೋಕದ ಮಹಾಮನೆ
January 15, 2026
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ದಾಸೋಹ ತತ್ವ
ದಾಸೋಹ ತತ್ವ
January 10, 2021
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
May 8, 2024
ಒಳಗಣ ಮರ
ಒಳಗಣ ಮರ
March 12, 2022
Copyright © 2026 Bayalu