Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾಥರು ಹಾಗೂ ಶರಣರು
Share:
Articles February 16, 2026 ಡಾ. ಬಸವರಾಜ ಸಬರದ

ನಾಥರು ಹಾಗೂ ಶರಣರು

ಭಾರತದಲ್ಲಿ ಅನೇಕ ಧಾರ್ಮಿಕ ಪಂಥಗಳು ಆಗಿ ಹೋಗಿವೆ. ಧರ್ಮ ಮತ್ತು ಚಳುವಳಿಗಳು ಒಂದು ಕಡೆ ಕೂಡುವುದಿಲ್ಲವೆಂಬ ನಂಬಿಕೆಯಿದೆ. ಮತ-ಧರ್ಮಗಳ ಉದ್ದೇಶವೇ ಬೇರೆ, ಚಳುವಳಿಗಳ ಉದ್ದೇಶವೇ ಬೇರೆಯೆಂದು ಹೇಳಿಕೊಂಡು ಬರಲಾಗಿದೆ. ಆದರೆ ಧಾರ್ಮಿಕ ಪರಂಪರೆಯಲ್ಲಿ ಧರ್ಮವೊಂದು ಚಳುವಳಿಯ ರೂಪುಪಡೆದದ್ದು 12ನೆಯ ಶತಮಾನದಲ್ಲಿ. ಅದೂ ಕರ್ನಾಟಕದಲ್ಲಿ, ಕನ್ನಡದ ವಚನಗಳ ಮೂಲಕವೆಂಬ ಸಂಗತಿಯೇ ಅಚ್ಚರಿ ಹುಟ್ಟಿಸುವಂತಹದ್ದಾಗಿದೆ.

ಹತ್ತನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ಉದಯವಾದ ನಾಥಪಂಥ ಶರಣ ಧರ್ಮಕ್ಕಿಂತ ಎರಡು ಶತಮಾನಗಳಷ್ಟು ಪ್ರಾಚೀನವಾದುದು. ಹತ್ತನೇ ಶತಮಾನದಲ್ಲಿ ಹುಟ್ಟಿದ್ದ ನಾಥಪಂಥ ಭಾರತದ ಉದ್ದಗಲಕ್ಕೂ ವ್ಯಾಪಿಸಿತು. ಭಾರತದಲ್ಲಿ ಇಂದಿಗೂ ನಾಥಪಂಥದ ಅನೇಕ ಮಠಗಳಿವೆ. ನಾಥ ಪಂಥದ ಅನುಯಾಯಿಗಳಿದ್ದಾರೆ. ಆದರೆ ಈ ಮಾತನ್ನು ವಚನ ಚಳುವಳಿಗೆ ಅನ್ವಯಿಸಿ ಹೇಳುವಂತಿಲ್ಲ. ವಚನ ಚಳುವಳಿ ನಡೆದಿದ್ದು 12ನೇ ಶತಮಾನದಲ್ಲಿ. 15ನೇ ಶತಮಾನದ ಹೊತ್ತಿಗೆ ಅದರ ಚಳವಳಿಯ ಕಾವು ಕಡಿಮೆಯಾಗಿ ಅದು ವೀರಶೈವ ಮಠ ವ್ಯವಸ್ಥೆಯಾಗಿ ಬೆಳೆದುಕೊಂಡು ಬಂದಿತು. ಇಂದೂ ಅನೇಕ ವೀರಶೈವ ಮಠಗಳಿವೆ. ಆಧುನಿಕ ವಚನಕಾರರಿದ್ದಾರೆ. ಆದರೆ ಚಳುವಳಿ ಕಳೆದುಹೋಗಿದೆ. ಧರ್ಮವೊಂದು ಚಳುವಳಿಯಾಗಿ ರೂಪುಗೊಂಡರೆ ಎಂತಹ ಸವಾಲುಗಳನ್ನೆದುರಿಸಬೇಕಾಗುತ್ತದೆ ಎಂಬುದಕ್ಕೆ 12ನೇ ಶತಮಾನದ ವಚನ ಚಳುವಳಿಯೇ ಜೀವಂತ ಉದಾಹರಣೆ.

ಹದಿನೈದನೆಯ ಶತಮಾನ ವೀರಶೈವ ಧರ್ಮದ ಪುನರುತ್ಥಾನ ಕಾಲವೆಂದು ಹೇಳುತ್ತಾರೆ. ಈ ಮಾತು ಸತ್ಯವಿರಬಹುದು. ಆದರೆ ಅದು ವಚನ ಚಳುವಳಿಯ ಅವನತಿಯ ಕಾಲವೆಂಬ ಮಾತೂ ಅಷ್ಟೇ ಸತ್ಯ. 15ನೇ ಶತಮಾನದಲ್ಲಿ ಬಂದ ನೂರೊಂದು ವಿರಕ್ತರು ಚಳುವಳಿಯನ್ನು ಕಿತ್ತೊಗೆದು ಮಠ ವ್ಯವಸ್ಥೆಯನ್ನು ಗಟ್ಟಿಗೊಳಿಸಿದರು. ಹತ್ತನೇ ಶತಮಾನದಲ್ಲಿ ಜನಿಸಿದ ನಾಥ ಪಂಥಕ್ಕೆ ಈ ದುರವಸ್ಥೆ ಬರಲಿಲ್ಲ. ಹದಿನೈದನೇ ಶತಮಾನದ ಹೊತ್ತಿಗೆ ವೀರಶೈವ ಎಂಬುದು ಮಠ ವ್ಯವಸ್ಥೆಯಾಗಿ ಗಟ್ಟಿಗೊಂಡಿತು. 12ನೇ ಶತಮಾನದಲ್ಲಿ ಕಾಯಕವೇ ಪೂಜೆಯಾಗಿತ್ತು, 15ನೇ ಶತಮಾನದಲ್ಲಿ ಪೂಜೆಯೇ ಕಾಯಕವಾಯಿತು. ಶರಣರ ಕಾಲಕ್ಕೆ ವೃತ್ತಿ ಸೂಚಕ ಪದಗಳೇ ಅಡ್ಡಹೆಸರುಗಳಾಗಿದ್ದವು. ನೂರೊಂದು ವಿರಕ್ತರ ಕಾಲದಲ್ಲಿ ಅನುಷ್ಠಾನ-ಪೂಜೆ ಮಾಡುವ ಸ್ಥಳಗಳೇ ಅಡ್ಡಹೆಸರುಗಳಾದವು. 12ನೇ ಶತಮಾನದ ತೋಂಟದ ಗೊಗ್ಗಯ್ಯ, ತೋಟದಲ್ಲಿ ಕೃಷಿ ಕಾಯಕ ಮಾಡುತ್ತಿದ್ದ. ಹೀಗಾಗಿ ಆತನಿದ್ದ ‘ತೋಂಟದ’ ಅಡ್ಡ ಹೆಸರು ಕಾಯಕದ ಕುರುಹಾಗಿತ್ತು. 15ನೇ ಶತಮಾನದಲ್ಲಿ ಬರುವ ತೋಂಟದ ಸಿದ್ಧಲಿಂಗೇಶ್ವರನ ಅಡ್ಡಹೆಸರೂ ‘ತೋಂಟದ’ ಎಂದಿದೆ. ಆದರೆ ಸಿದ್ಧಲಿಂಗೇಶ್ವರ ತೋಟದಲ್ಲಿ ಅನುಷ್ಠಾನ ಮಾಡುತ್ತಿದ್ದ. ಆದ್ದರಿಂದ ಆತನಿಗೆ ಆ ಅಡ್ಡಹೆಸರು ಬಂತು. ಹೀಗೆ ಕಾಯಕವೆಂಬುದು ಅನುಷ್ಠಾನವಾಗಿ-ಪೂಜೆಯ ಸಂಕೇತವಾಗಿ ಬದಲಾವಣೆ ಹೊಂದಿತು. ಶರಣರ ಕಾಲದಲ್ಲಿ ಚಳುವಳಿಯೇ ಜಂಗಮವಾಗಿತ್ತು. ವಿರಕ್ತರ ಕಾಲದಲ್ಲಿ ಜಂಗಮನೇ ಚಳುವಳಿಯನ್ನು ನುಂಗಿದ. 12ನೇ ಶತಮಾನದಲ್ಲಿ ಸ್ಥಾವರ – ಜಂಗಮ ಇವೆರಡೂ ಪದಗಳು ತದ್ವಿರುದ್ಧದ ಅರ್ಥ ಕೊಡುತ್ತಿದ್ದವು. ಶರಣರು ಹೇಳಿದ ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ವೆಂಬ ಮಾತು ಇದನ್ನೇ ಹೇಳುತ್ತದೆ. ಆದರೆ 15ನೇ ಶತಮಾನದಲ್ಲಿ ಇವೆರಡೂ ಪದಗಳು ಒಂದಾಗಿ ಬಿಟ್ಟವು. ಮಠ ವ್ಯವಸ್ಥೆಯ ಬೆಳವಣಿಗೆಯಲ್ಲಿ ಪೀಠಾಧೀಶನಾದ ಜಂಗಮ ಸ್ಥಾವರವಾಗಿ ಬಿಟ್ಟ. ಹೀಗೆ 12ನೇ ಶತಮಾನದಲ್ಲಿ ಚಳುವಳಿಯಾಗಿದ್ದ ಧರ್ಮವು 15ನೇ ಶತಮಾನದ ಹೊತ್ತಿಗೆ ವೀರಶೈವ ಮತವಾಗಿ ಬಿಟ್ಟಿತು. ಈಗಂತೂ ಅದು ಜಾತಿಯಾಗಿ ಬಿಟ್ಟಿದೆ.

ನಾಥಪಂಥದ ಬೆಳವಣಿಗೆ ಹಾಗೆ ತದ್ವಿರುದ್ಧವಾಗಿ ಬೆಳೆದುಕೊಂಡು ಬರಲಿಲ್ಲವಾದರೂ, ಮುಂದೆ ಬಂದ ನಾಥರು 10ನೇ ಶತಮಾನದ ನಾಥರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡರು. ನಂತರದಲ್ಲಿ ಬೆಳೆದ ಅನೇಕ ನಾಥಪಂಥಗಳು ವಾಮಮಾರ್ಗಕ್ಕಿಳಿದವು. ಹೀಗಾಗಿ 10ನೇ ಶತಮಾನದ ನಾಥರ ಸಾಧನೆ-ಆಶಯಗಳು 12ನೇ ಶತಮಾನದ ಹೊತ್ತಿಗೆ ಮರೆಯಾಗಿ ವಾಮಮಾರ್ಗವನ್ನನುಸರಿಸಿದ್ದವು. ಈ ಕಾರಣಕ್ಕಾಗಿಯೇ 12ನೇ ಶತಮಾನದ ಶರಣರು ಅನೇಕ ಸಂದರ್ಭಗಳಲ್ಲಿ ನಾಥರ ವಾಮಮಾರ್ಗದ ಕ್ರಿಯೆಗಳನ್ನು ವಿಡಂಬಿಸಿದ್ದಾರೆ. ಹೀಗೆ 10ನೇ ಶತಮಾನದಲ್ಲಿ ಹುಟ್ಟಿದ ನಾಥಪಂಥ 12ನೇ ಶತಮಾನದ ಹೊತ್ತಿಗೆ ಅದರ ಮೂಲೋದ್ದೇಶವನ್ನು ಮರೆತರೆ, 12ನೇ ಶತಮಾನದಲ್ಲಿ ಹುಟ್ಟಿದ ವಚನ ಚಳುವಳಿ 15ನೇ ಶತಮಾನದ ಹೊತ್ತಿಗೆ ನಿರ್ನಾಮವಾಯಿತು. ಇವೆರಡೂ ಸಂದರ್ಭಗಳು ಈ ವ್ಯವಸ್ಥೆಯ ದುರಂತಕ್ಕೆ ಕಾರಣವಾಗಿರುವ ಜೀವಂತ ಉದಾಹರಣೆಗಳಾಗಿವೆ.

ಈ ಹಿನ್ನೆಲೆಯಲ್ಲಿ ನಾಥಪಂಥವನ್ನು ಹಾಗೂ ವಚನ ಚಳುವಳಿಯನ್ನು ತೌಲನಿಕವಾಗಿ ವಿವೇಚಿಸಬೇಕಾಗಿದೆ. ನಾಥಪಂಥವನ್ನು, ವಚನ ಚಳುವಳಿಯನ್ನು ಪರಿಚಯಿಸುವುದು, ವೈಭವೀಕರಿಸುವುದೇ ಹೆಚ್ಚು. ಆ ಪರಂಪರೆಗಳು ಕಾಲದೊತ್ತಡದಲ್ಲಿ ಹೇಗೆ ಕುರೂಪಿಗಳಾಗಿ ಕಾಣಿಸಿಕೊಂಡವೆಂಬುದನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ, ಮುಕ್ತವಾಗಿ ಚರ್ಚಿಸಬೇಕಾಗಿದೆ. ಆಗ ಮಾತ್ರ ಧರ್ಮ, ಚಳುವಳಿ ಮತ್ತೆ ಅರ್ಥಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಧರ್ಮ ಮತ್ತು ಚಳುವಳಿಗಳು ಕಾಲ- ಕಾಲಕ್ಕೆ ಈ ವ್ಯವಸ್ಥೆಯಲ್ಲಿ ಎದುರಿಸಿದ ಸವಾಲುಗಳು, ಅನುಭವಿಸಿದ ಸಂಕಟಗಳು ಮುಖ್ಯವೆಂದೆನಿಸಿದಾಗ ನಿಜವಾದ ಚರ್ಚೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಎಲ್ಲವೂ ಇಲ್ಲಿ ವೈಭವೀಕರಣದ ವಸ್ತುಗಳಾಗಿ ಮಾರ್ಪಡುತ್ತವೆ.

ನಾಥಪಂಥ

ನಾಥಪಂಥಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳು ಪ್ರಕಟವಾಗಿವೆ. ಅವುಗಳಲ್ಲಿ ಸಂಸ್ಕೃತ ಮತ್ತು ಹಿಂದಿ ಭಾಷೆಯಲ್ಲಿ ರಚನೆಯಾಗಿರುವ ಕೃತಿಗಳ ಸಂಖ್ಯೆ ಹೆಚ್ಚು. ರಾಹುಲ್ ಭಾರತಿಯವರ ಕೃತಿಗಳು ನಾಥಪಂಥದ ಉಗಮ – ವಿಕಾಸದ ಚರಿತ್ರೆಯನ್ನು ಕಟ್ಟಿಕೊಡುತ್ತವೆ. 1950 ರಲ್ಲಿ ಪ್ರಕಟವಾಗಿರುವ ಡಾ. ಹಜಾರಿ ಪ್ರಸಾದ್ ದ್ವಿವೇದಿಯವರ ‘ನಾಥ ಸಂಪ್ರದಾಯಮ್’ ಕೃತಿ ಗಮನಾರ್ಹವಾಗಿದೆ. 1958 ರಲ್ಲಿ ಡಾ. ಧರ್ಮವೀರ ಭಾರತಿ ಅವರಿಂದ ‘ಸಿದ್ಧ ಸಾಹಿತ್ಯ’ ಕೃತಿ ಪ್ರಕಟವಾಗಿದೆ.

ಕನ್ನಡದಲ್ಲಿ ಕೆಲವು ಕೃತಿಗಳು ಮಾತ್ರ ಅನುವಾದಗೊಂಡಿವೆ. ಗೋರಖನಾಥರ ‘ಸಿದ್ಧ ಸಿದ್ಧಾಂತ ಪದ್ಧತಿ’ ಕೃತಿಯನ್ನು ಸಂಸ್ಕೃತದಿಂದ ಕನ್ನಡಕ್ಕೆ ಶ್ರೀ ಕಡವ ಶಂಭು ಶರ್ಮಾ 1958ರಲ್ಲಿ ಅನುವಾದಿಸಿ ಪ್ರಕಟಿಸಿದ್ದಾರೆ. 2005ರಲ್ಲಿ ಪ್ರಕಟವಾಗಿರುವ ‘ನಾಥಪಂಥದ ಅನುವಾದಿತ ಕೃತಿಗಳು’ ನಾಥಪಂಥದ ಮಹತ್ವದ ದಾಖಲೆ. ಈ ಕೃತಿಯನ್ನು ಕಡವ ಶಂಭು ಶರ್ಮಾ ಅವರೇ ಅನುವಾದಿಸಿದ್ದಾರೆ. ಚಿ. ಕುಲಕರ್ಣಿ ಅವರ ‘ಶ್ರೀ ನವನಾಥ ಕಥಾಸಾರ’ 1977ರಲ್ಲಿ ಬೆಳಗಾವಿಯ ಸರಸ್ವತಿ ಪುಸ್ತಕ ಭಂಡಾರದಿಂದ, ಬಿ. ಸಿದ್ದಪ್ಪನವರ ‘ನಾಥಪಂಥ ಶೈವಧರ್ಮ’ ಕೃತಿ ಚಿತ್ರದುರ್ಗ ಜಿಲ್ಲೆಯ ನಾಥಪಂಥ ಸಮಾಜದಿಂದ, ಮ.ಸು. ಕೃಷ್ಣಮೂರ್ತಿಯವರ ‘ಸಿದ್ಧ ಸಾಹಿತ್ಯ’ ಕೃತಿ ಮೈಸೂರು ವಿಶ್ವವಿದ್ಯಾಲಯದಿಂದ 1982ರಲ್ಲಿ, ಶ್ರೀ ಜೋಗಿ ಆನಂದನಾಥರ ‘ನಾಥಪಂಥ ಕ್ಷೇತ್ರ ಜೋಗಿಮಠ’ ಕೃತಿ ಮಂಗಳೂರಿನ ನಾಥ ಸಂಪ್ರದಾಯ ಪ್ರಚಾರ ಸಮಿತಿಯಿಂದ 2003ರಲ್ಲಿ, ಡಾ. ರಮಹತ್ ತರೀಕರೆಯವರ ‘ಕರ್ನಾಟಕದ ನಾಥಪಂಥ’ ಕನ್ನಡ ವಿಶ್ವವಿದ್ಯಾಲಯದಿಂದ 2007ರಲ್ಲಿ ಪ್ರಕಟವಾಗಿವೆ. ಕನ್ನಡದಲ್ಲಿ ಇದುವರೆಗೆ ಪ್ರಕಟವಾಗಿರುವ ನಾಥ ಪಂಥದ ಸಂಶೋಧನಾ ಕೃತಿಗಳಲ್ಲಿ ತರೀಕೆರೆಯವರ ‘ಕರ್ನಾಟಕದ ನಾಥ ಪಂಥ’ ಕೃತಿಯೇ ಗಮನಾರ್ಹ. ಅವರು ಭಕ್ತಿ ಪಂಥಗಳನ್ನು ಮುಖಾಮುಖಿಯಾಗಿಸುವ ಉದ್ದೇಶವೇ ಕುತೂಹಲಕಾರಿಯಾಗಿದೆ. ‘ರಾಜ ಗುಹ್ಯ’ ಗ್ರಂಥದಲ್ಲಿ ‘ನಾಥ’ ಪದವನ್ನು ಹೀಗೆ ವ್ಯಾಖ್ಯಾನಿಸಲಾಗಿದೆ.
ನಕರೋs ನಾದಿರೂಪಃ ಧಕಾರಃ ಸ್ಥಾಪತೇ ಸದಾ
ಭುವನತ್ರನುಮೇ ವೈಕಃ ಶ್ರೀ ಗೋರಕ್ಷ ನಮೋ ಸ್ತುತೇ!

‘ನಾ’ ಎಂದರೆ ಅನಾದಿರೂಪ; ‘ಥ’ ಎಂದರೆ ಮೂರು ಲೋಕಗಳ ಸ್ಥಿತಿಗೆ ಕಾರಣವಾದುದು. ಅನಾದಿ ಪರಶಿವನಿಗೆ ‘ನಾಥ’ ಎಂಬುದು ಪರ್ಯಾಯ ನಾಮ. ಮಚೇಂದ್ರನಾಥನ ಶಿಷ್ಯನಾಗಿದ್ದ ಗೋರಖನಾಥ ಈ ಪಂಥದ ಪ್ರವರ್ತಕನಾಗಿದ್ದಾನೆ.
ನಾಥಪಂಥದಲ್ಲಿ ಹನ್ನೆರಡು ಶಾಖೆಗಳಿದ್ದುದು ತಿಳಿದು ಬರುತ್ತದೆ. ಅವು- 1) ಸತ್ಯನಾಥೀ 2) ಧರ್ಮನಾಥೀ 3) ರಾಮನಾಥೀ 4) ನಾಟೇಶ್ವರಿ, 5) ಕನ್ಹಣ 6) ಕಪಿಲಾನೀ 7) ವೈರಾಗೀ 8) ಮಾನನಾಥೀ 9) ಆಯೀಪಂಥ 10) ಪಾಗಲ್‍ಪಂಥ 11) ಧಜಪಂಥ 12) ಗಂಗಾನಾಥಿ. ಇವುಗಳ ಮಹತ್ವವನ್ನು ಕುರಿತಂತೆ ಕೆಲವು ಕೃತಿಗಳಲ್ಲಿ – ಲೇಖನಗಳಲ್ಲಿ ಚರ್ಚೆ ನಡೆದಿದೆ. ಚೌರಾಸಿ ಸಿದ್ಧರಲ್ಲಿ ಪ್ರಮುಖನಾದವನು ಕಣ್ಹಪಾ. ಈತ ಕರ್ನಾಟಕದವನಾಗಿದ್ದನೆಂಬುದು ಪ್ರಮುಖ ಸಂಗತಿ.
ನಾಥಪಂಥದಲ್ಲಿ ನವನಾಥರಿಗೆ ಮಹತ್ವದ ಸ್ಥಾನವಿದೆ. ಆದರೆ ನವನಾಥರ ಪಟ್ಟಿಯಲ್ಲಿ ಅನೇಕ ಬದಲಾವಣೆಗಳಿವೆ. ಕಡವ ಶಂಭು ಶರ್ಮ ಅವರು ಅನುವಾದಿಸಿರುವ ‘ನವನಾಥ ಕಥಾ’ದಲ್ಲಿ ಬರುವ ಒಂಭತ್ತು ನಾಥರ ಪರಿಚಯ ಹೀಗಿದೆ.
1) ಜ್ಯೋತಿ ಸ್ವರೂಪನೂ, ಓಂಕಾರ ಸ್ವರೂಪನೂ ಆದ ಮಹೇಶ್ವರನೇ ಆದಿನಾಥನು
2) ಧರಣೀ ಸ್ವರೂಪಿಣಿಯಾದ ಪಾರ್ವತಿಯೇ ಪ್ರಖ್ಯಾತನಾದ ಉದಯನಾಥನು
3) ಬ್ರಹ್ಮನೇ ಸತ್ಯನಾಥನು 4) ವಿಷ್ಣುವೇ ಸಂತೋಷನಾಥನು 5) ವಾಯು ಸ್ವರೂಪ ಶೇಷನಾಗನೇ ಅಚಲನಾಥನು
6) ಆಕಾಶ ಸ್ವರೂಪನಾದ ಗಣೇಶನೇ ಗಜ ಕಂಥಡಿನಾಥನು
7) ವನಸ್ಪತಿ ಸ್ವರೂಪನಾದ ಚಂದ್ರನೇ ಚೌರಂಗಿನಾಥನು
8) ಮಾಯಾ ಸ್ವರೂಪನಾದ ಕರುಣಾಳುವೇ ಮಚೇಂದ್ರನಾಥನು
9) ಅಲಕ್ಷ್ಯ ಸ್ವರೂಪನಾದ ಅಯೋನಿ ಶಂಕರತ್ರಿನೇತ್ತನೇ ಗೋರಖನಾಥನು
ಈ ನವನಾಥರ ಸ್ವರೂಪವನ್ನು ಕುರಿತಂತೆ ಅನೇಕ ಸಿದ್ಧಯೋಗಿಗಳು ವಿವರಿಸಿದ್ದಾರೆ.

ನಾಥಪಂಥದಲ್ಲಿ ಮಚೇಂದ್ರ – ಗೋರಖನಾಥ ಪ್ರಸಿದ್ಧರು. ಇವರು ಗುರು – ಶಿಷ್ಯರು. ಮಚೇಂದ್ರನಾಥರು ಬಂಗಾಳದ ಚಂದ್ರಗಿರಿಯಲ್ಲಿ ಜನಿಸಿದರೆ, ಗೋರಖನಾಥ ನೇಪಾಳದವರು. ಆದರೆ ಇವರ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಬ್ರಿಗ್ಸ್‍ನ ಪ್ರಕಾರ ಇವರಿಬ್ಬರು ಪಂಜಾಬ್ ಭಾಗದವರಾಗಿದ್ದು, ನಂತರ ಬಂಗಾಲದ ಕಡೆಗೆ ಚಲಿಸಿದರೆಂದು ತಿಳಿದು ಬರುತ್ತದೆ. ಇವರಿಬ್ಬರೂ ದತ್ತಾತ್ರೇಯನಿಂದ ಗುರುದೀಕ್ಷೆ ಪಡೆದರೆಂದು ಮರಾಠಿ ಭಕ್ತಿ ಪರಂಪರೆ ಹೇಳುತ್ತದೆ. ಮಚೇಂದ್ರನಾಥನು ಹೋಗಿ ನೆಲೆಸಿದ ಸ್ತ್ರೀರಾಜ್ಯವು ಕೇರಳ ಪ್ರದೇಶವೆಂದು ಕದ್ರಿಯ ಸ್ಥಳ ಪುರಾಣಗಳು ಹೇಳುತ್ತವೆ. ಆದರೆ ಈ ಗುರು-ಶಿಷ್ಯರು 10ನೇ ಶತಮಾನದವರೆಂಬುದರಲ್ಲಿ ಸಂಶಯಗಳಿಲ್ಲ. ಸಂಶೋಧಕ ಪಿ. ಬಿ. ದೇಸಾಯಿಯವರು ಗೋರಖನು ಪಟ್ಟದಕಲ್ಲಿನಲ್ಲಿ ಹುಟ್ಟಿದವನೆಂದು ಹೇಳುತ್ತಾರೆ. ಗೋದಾವರಿ ತೀರದ ತ್ರ್ಯಂಬಕೇಶ್ವರದಲ್ಲಿ ಗೋರಖನಾಥನು ತಪಸ್ಸು ಮಾಡಿದ ಗುಹೆ ಇದೆ.

ನಾಥರನ್ನು ಕುರಿತು ಅನೇಕ ಐತಿಹ್ಯಗಳಿವೆ, ಪುರಾಣಕತೆಗಳಿವೆ. ಕದ್ರಿಯ ಸ್ಥಳಪುರಾಣದಲ್ಲಿ ಹನುಮಂತ ದೇವರ ಆಗಮನವಿದೆ. ಹನುಮಂತನೂ ಬುಡಕಟ್ಟುಗಳ ಮೂಲದಿಂದ ಬೆಳೆದು ಬಂದವನು. ಬ್ರಹ್ಮಚಾರಿಯಷ್ಟೇ ಅಲ್ಲ ಮಹಾಯೋಗಿ, ಅಪ್ರತಿಮ ಶಕ್ತಿವಂತ. ಕೇರಳದ ಸ್ತ್ರೀ ರಾಜ್ಯದ ರಾಣಿ ಪಿಂಗಳೆ ತನಗೆ ಗಂಡು ಸಂತಾನಬೇಕೆಂದು ಹನುಮಂತನಲ್ಲಿ ಪ್ರಾರ್ಥಿಸುತ್ತಾಳೆ. ಆಗ ಹನುಮಂತನು ಒಬ್ಬ ತೇಜಸ್ವಿ ಪುರುಷ ರಾಣಿಯಲ್ಲಿಗೆ ಬರುವಂತೆ ಮಾಡುತ್ತಾನೆ. ಆತನೇ ಮಚೇಂದ್ರನಾಥ.. ಮಚೇಂದ್ರನು ರಾಣಿಯ ಪ್ರೇಮಪಾಶದಲ್ಲಿ ಮುಳುಗಿ ಹೋದಾಗ, ಶಿಷ್ಯನಾಗಿದ್ದ ಗೋರಖನಾಥನು ಮದ್ದಲೆ ಬಾರಿಸುವವನ ವೇಷದಲ್ಲಿ ಸ್ತ್ರೀರಾಜ್ಯ ಪ್ರವೇಶಿಸಿ, ಅಲ್ಲಿಂದ ಮಚೇಂದ್ರನನ್ನು ಕರೆದುಕೊಂಡು ಬರುತ್ತಾನೆ. ಅತಿಭೋಗದಲ್ಲಿ ನಿರತನಾಗಿದ್ದ ಗುರುವಿಗೆ ಯೋಗಮಾರ್ಗ ತೋರಿಸುತ್ತಾನೆ. ಇಂತಹ ನಾಥರ ಅನೇಕ ಕತೆಗಳು ಜನಮನದಲ್ಲಿ ಬೆಳೆದು. ಬಂದಿವೆ. ಅನೇಕ ಪವಾಡಗಳು ವೈಭವೀಕರಣಕೊಡಿವೆ. ಹೀಗೆ ನಾಥರ ಚರಿತ್ರೆಯನ್ನು ಕಟ್ಟಿಕೊಡಲು ಹೋದಾಗ, ಪುರಾಣಗಳಲ್ಲಿ ಮುಳುಗುವ ಅಪಾಯವೂ ಇದೆ.

ಮಚೇಂದ್ರನಾಥನು ಸ್ತ್ರೀ ರಾಜ್ಯದಿಂದ ಹೊರಟು, ನೇತ್ರಾವತಿ ನದಿದಾಟಿ ಮಂಗಳೂರಿನ ಸಮೀಪದ ಕದ್ರಿಯ ಕದಳಿ ವನಕ್ಕೆ ಬಂದು ಅಲ್ಲಿ ಮಂಜುನಾಥ ದೇವರನ್ನು ಸ್ಥಾಪಿಸಿದನೆಂದು, ‘ಕದಲೀ ಮಂಜುನಾಥ ಮಹಾತ್ಮೆ’ ಹೇಳುತ್ತದೆ. ಮಚೇಂದ್ರನೇ ಕದ್ರಿಯ ಮಂಜುನಾಥನೆಂಬ ನಂಬಿಕೆಯೂ ಜನಸಮುದಾಯದಲ್ಲಿದೆ. ಕರಾವಳಿ ಪ್ರದೇಶದಲ್ಲಿ ಮೀನಿನ ಮೇಲೆ ಕುಳಿತ ಮಚೇಂದ್ರನ ಹಲವಾರು ಮೂರ್ತಿಗಳಿವೆ. ಅಲ್ಲಮಪ್ರಭುವಿನ ಗುರು ಅನಿಮಿಷಯ್ಯನು ಮೂಲತಃ ಮಚೇಂದ್ರನಾಥನಾಗಿದ್ದನೇ? ಎಂಬಂತಹ ಪ್ರಶ್ನೆಗಳೂ ಇವೆ. ಮಚೇಂದ್ರನು ಮೂಲತಃ ಬೌದ್ಧ ತಾಂತ್ರಿಕ ಪಂಥದವನೋ? ಅಥವಾ ಕೌಳ ಪಂಥದಿಂದ ಬಂದವನೊ? ಎಂಬ ವಿಷಯ ಕುರಿತಂತೆ ಚರ್ಚೆಗಳಿವೆ.

ಆದರೆ ನಾಥಪಂಥದಲ್ಲಿ ಗೋರಖನಾಥ ಜನಪ್ರಿಯನಾಗಿದ್ದಾನೆ. ಈ ದೇಶದಲ್ಲಿರುವ ಬಹುಸಂಖ್ಯಾತ ನಾಥ ಮಠಗಳು ಗೋರಖನಾಥನ ಹೆಸರಿನಲ್ಲಿವೆ. ನಾಥಪಂಥಕ್ಕೆ ಗೋರಖಪಂಥವೆಂತಲೂ ಕರೆಯುತ್ತಾರೆ. ಬೌದ್ಧ ವಜ್ರಯಾನ ಪಂಥಕ್ಕೆ ಶೈವ ಸಂಸ್ಕಾರ ನೀಡಿದ ಕೀರ್ತಿ ಗೋರಖನಾಥನದು. ಬಸವ ಕಲ್ಯಾಣ ತಾಲೂಕಿನ ಗೋರಟಾ ಗ್ರಾಮದಲ್ಲಿ ಗೋರಖನಾಥನ ದೊಡ್ಡ ಮೂರ್ತಿಯಿದೆ. ಹತ್ತನೇ ಶತಮಾನದಲ್ಲಿ ಬೀದರ ಜಿಲ್ಲೆ ನಾಥರ ಸಾಧನಾ ಕೇಂದ್ರವಾಗಿತ್ತೆಂಬುದಕ್ಕೆ ಪುರಾವೆಗಳಿವೆ. ಇಂದಿಗೂ ಇಲ್ಲಿ ನಾಥರ ಹೆಸರುಳ್ಳ ವ್ಯಕ್ತಿಗಳಿದ್ದಾರೆ. ಮಾಜಿ ಸಚಿವ ಶ್ರೀ ವೈಜನಾಥ ಪಾಟೀಲರು ಬೀದರ ಜಿಲ್ಲೆ ಔರಾದ ತಾಲೂಕಿನ ಹಕ್ಯಾಳ ಗ್ರಾಮದವರು. ಜನತಾದಳದ ಅಧ್ಯಕ್ಷರಾಗಿದ್ದ ಕಾಶೀನಾಥ ಬೇಲೂರೆ ಭಾಲ್ಕಿ ತಾಲೂಕಿನವರು. ಈ ಜಿಲ್ಲೆಯಲ್ಲಿ ಮಚೇಂದ್ರನಾಥ, ಕಾಶೀನಾಥ, ವೈಜಿನಾಥ, ಮಲ್ಲಿನಾಥ ಹೆಸರಿನ ಅನೇಕರಿದ್ದಾರೆ. ಈಗಿನ ದೀಕ್ಷಾವಂತ ಲಿಂಗಾಯತರಿಗೆಲ್ಲ ಈ ಹೆಸರುಗಳಿವೆ. ಹತ್ತನೇ ಶತಮಾನದಲ್ಲಿ ನಾಥ ಪಂಥದ ಅನುಯಾಯಿಗಳಾಗಿದ್ದ ಈ ಸಮುದಾಯ 12ನೇ ಶತಮಾನದಲ್ಲಿ ಲಿಂಗಾಯತರಾದರೆ? ಆದಿಲಿಂಗಾಯತರಲ್ಲಿ ‘ನಾಥ’ ಹೆಸರಿನ ವ್ಯಕ್ತಿಗಳಿಲ್ಲ. ಈ ಬಗೆಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ.

ನಾಥಪಂಥದ ಅನೇಕ ದಾರ್ಶನಿಕ ಗ್ರಂಥಗಳಿವೆ. ಅವುಗಳಲ್ಲಿ ಕೆಲವು ಕೃತಿಗಳನ್ನು ಕಡವ ಶಂಭು ಶರ್ಮ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಅಥ ಸಿದ್ಧ ಸಿದ್ಧಾಂತ ಪದ್ಧತಿ’, ‘ಸ್ವಯಂಬೋಧ-ಅಮನಸ್ಕ ಯೋಗ’, ‘ಅಮರೌಘ ಶಾಸನ’, ‘ಗೋರಕ್ಷಾ ಪದ್ಧತಿ’ ಕನ್ನಡಕ್ಕೆ ಅನುವಾದನಗೊಂಡ ಕೃತಿಗಳು. ಇವುಗಳಲ್ಲದೇ ‘ಅವಧೂತ ಗೀತಾ’, ‘ಹಠ ಯೋಗ ಪ್ರದೀಪಿಕಾ’, ‘ಗೋರಕ್ ಸಂಹಿತಾ’ ದಂತಹ ಕೃತಿಗಳು ಕನ್ನಡಕ್ಕೆ ಅನುವಾದವಾಗಬೇಕಾಗಿವೆ. ನಾಥರ ದರ್ಶನದ ಮೂಲಸಿದ್ಧಾಂತಗಳು ಶೈವಧರ್ಮದಲ್ಲಿ ಅದರಲ್ಲೂ ಕಾಳಾಮುಖರಲ್ಲಿ ಕಾಣಿಸಿಕೊಳ್ಳುತ್ತವೆ. ‘ನಾಥಪಂಥ ಶೈವಧರ್ಮ ಮತ್ತು ಕರ್ನಾಟಕ ನಾಥ ಪಂಥ ಶೈವ ಸಮಾಜದ ಸಂಕ್ಷಿಪ್ತ ಪರಿಚಯ’ ಎಂಬ ಬಿ. ಸಿದ್ದಪ್ಪನವರ ಕೃತಿಯಲ್ಲಿ ಹಾಗೂ ಎಸ್. ಎಸ್. ಹಿರೇಮಠರ ‘ಕಾಳಾಮುಖ ದರ್ಶನ’ ಕೃತಿಗಳಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.

‘ನಾಥ’ ಎಂದರೆ ಒಡೆಯ. ‘ನಾಥ’ ಎಂದರೆ ‘ಇಂದ್ರಿಯ’ ಎಂಬರ್ಥವೂ ಇದೆ. ಇಂದ್ರಿಯಗಳ ಮೇಲೆ ಹಿಡಿತವುಳ್ಳ ಯೋಗಿಗೆ, ಸಾಧಕನಿಗೆ, ಸಿದ್ಧನಿಗೆ ನಾಥನೆಂದು ಕರೆಯಲಾಗಿದೆ. ಕಪಾಲಮತ, ಸಿದ್ಧಮತ, ಅವಧೂತಮತ, ಯೋಗ ಮಾರ್ಗ, ಗೋರಖ ಪಂಥ ಎಂಬ ಹೆಸರುಗಳಿಂದಲೂ ನಾಥ ಪಂಥವನ್ನು ಕರೆಯುತ್ತಾರೆ. ಅದ್ವೈತ, ದ್ವೈತಗಳಿಗಿಂತ ಭಿನ್ನ ದರ್ಶನ ನಾಥರದು. ಗೋರಖನಾಥನು ಇದನ್ನು ‘ದ್ವೈತಾದ್ವೈತ ವಿವರ್ಜಿತ’ ಎಂದು ಕರೆದಿದ್ದಾನೆ. ಇದು ಅದ್ವಯವಾಗಿದೆ. ಜೀವ ಮತ್ತು ದೇವ, ವ್ಯಕ್ತಿ ಅಥವಾ ಚೈತನ್ಯ ಇವೆರಡೂ ಬೇರೆ ಬೇರೆಯೆಂದು ಅದು ಭಾವಿಸುವುದಿಲ್ಲ. ಇಲ್ಲಿ ಕೇವಲ ಶಿವನಿಲ್ಲ. ಶಿವನೊಂದಿಗೆ ಶಕ್ತಿಯೂ ಇದ್ದಾಳೆ. ಈ ಶಿವ – ಶಿವೆಯರ ಮಿಲನವು, ಪ್ರಕೃತಿ – ಪುರುಷರ ಮಿಲನವಾಗಿದೆ. ಎಲ್ಲವೂ ಅಭಿನ್ನವೆಂದು ನಾಥಸಿದ್ಧಾಂತ ಹೇಳುತ್ತದೆ. ದೇಹದೊಳಗೇ ದೇವರಿದ್ದಾನೆಂದು ಹೇಳುವ ನಾಥಪಂಥವು ಒಂದರ್ಥದಲ್ಲಿ ಶರಣ ಸಿದ್ಧಾಂತಕ್ಕೆ ಸಮೀಪವಾಗಿದೆ.

ನಾಥಪಂಥವು ಬ್ರಹ್ಮಚರ್ಯಕ್ಕೆ ಮಹತ್ವ ನೀಡುವುದರಿಂದ ಅದು ಸನ್ಯಾಸದ ಪರವಾಗಿದೆ. ಹೀಗಾಗಿ ಅಲ್ಲಿ ಸಂಸಾರಕ್ಕೆ ಪ್ರಾಮುಖ್ಯತೆಯಿಲ್ಲ. ವೀರ್ಯನಾಶವನ್ನು ತಡೆಯುವುದು ಇಲ್ಲಿಯ ದೊಡ್ಡ ಸಾಧನೆ. ಗೋರಖನಾಥನು ಕೂಡ ಸ್ತ್ರೀ ಹಾನಿಕಾರಕ ಎಂದು ಹೇಳಿರುವುದು ಇದೇ ಕಾರಣಕ್ಕಾಗಿ. ನಾಥಪಂಥದಲ್ಲಿ ಸ್ತ್ರೀಯ ಬಗೆಗೆ ಅನುಮಾನ ಮತ್ತು ಭಯಗಳಿವೆ. ಸ್ತ್ರೀ ಸಂಗ ಮಾಡಿದರೆ ಹೆಣ್ಣು ಹುಲಿ ಸಾಕಿದಂತೆಂದವರು ಭಾವಿಸುತ್ತಾರೆ. ನದಿ ತೀರದ ಮರ, ನಾರಿ ಸಂಗದಲ್ಲಿರುವ ಪುರುಷ ಎರಡೂ ನಾಶವಾಗುವ ಸಾಧ್ಯತೆ ಹೆಚ್ಚೆಂದವರು ನಂಬಿದ್ದಾರೆ. ಇದನ್ನು ರಹಮತ್ ತರೀಕೆರೆ ಹೀಗೆ ವಿಶ್ಲೇಷಿಸುತ್ತಾರೆ: “ನಾಥ ದರ್ಶನವು ಏಕರೂಪಿಯಲ್ಲ. ಅನೇಕ ದರ್ಶನಗಳಿಂದ ಕಾಲಕಾಲಕ್ಕೆ ಸ್ವೀಕಾರ ಮಾಡಿ ಪಡೆದ ಸಂಕರ ರೂಪಿ. ಷಡ್‍ದರ್ಶನಗಳಲ್ಲಿ ಒಂದಾದ ಯೋಗವು ಅದರ ತಾತ್ವಿಕ ಬುನಾದಿಯಾದರೆ, ವಜ್ರಯಾನ, ಶಾಕ್ತ, ಕೌಳ, ಕಾಪಾಲಿಕ ದರ್ಶನ ಹಾಗೂ ಆಚರಣೆಗಳು ಅದರ ಕಟ್ಟಡವಾದವು. ಭೈರವನು ನಾಥಪಂಥದ ಆರಾಧ್ಯ ದೈವವಾಗಿ ಉಳಿದಿರುವುದು ಕಾಪಾಲಿಕರ ಕುರುಹು; ತ್ರಿಕಾಲ ಹಾಗೂ ಶಕ್ತಿ ದೇವತೆಯ ಆರಾಧನೆಯು ಶಾಕ್ತ ಕುರುಹು. ದೇಹ, ವಜ್ರದ ಪ್ರಸ್ತಾಪ ಬರುವುದು ವಜ್ರಯಾನದ ಸಂಕೇತ.” (ನೋಡಿ: ಕರ್ನಾಟಕದ ನಾಥಪಂಥ ಕ.ವಿ.ವಿ. ಹಂಪಿ-2009, ಪುಟ ಸಂ. 28)

ಗೋರಖನಾಥನು ಎಲ್ಲ ದರ್ಶನಗಳ ಒಳಗಿದ್ದ ಅತಿರೇಕಗಳನ್ನು ಬಿಟ್ಟು ಕೊಟ್ಟು ಅವುಗಳಲ್ಲಿ ಸೂಕ್ತವೆನಿಸಿದ ಸಿದ್ಧಾಂತಗಳನ್ನು ಆಯ್ದು ನಾಥಪಂಥ ರೂಪಿಸಿದ. ಹೀಗೆ ಹೊಸ ಪಂಥ ಕಟ್ಟುವಾಗ ಅನೇಕ ಸಂಘರ್ಷಗಳನ್ನು ಆತ ಎದುರಿಸಿದ್ದಾನೆ. ಗೋರಖ ಸ್ಥಾಪಿಸಿದ ನಾಥಪಂಥದಲ್ಲಿ ವಜ್ರಯಾನ, ಕಾಪಾಲಿಕ, ಕೌಳ, ಸಿದ್ಧ, ಶೈವ ಹೀಗೆ ಹತ್ತು ಹಲವಾರು ಚಿಂತನೆಗಳಿವೆ. ಇಲ್ಲಿ ಬಹುಮುಖಿ ಅನುಸಂಧಾನ ನಡೆದಿದೆ. ನಾಥಪಂಥ ಬಹುಪಂಥೀಯ ದರ್ಶನವಾಗಿ ಬೆಳೆದಿದ್ದರಿಂದಲೇ ಇಂದಿಗೂ ಬೇರೆಬೇರೆ ರೂಪಗಳಲ್ಲಿ ಜೀವಂತವಾಗಿದೆ.

ನಾಥಪಂಥವನ್ನು ಹುಟ್ಟುಹಾಕಿದ ಗೋರಖನಾಥ ಅದ್ಭುತ ಸಾಧಕ, ಪ್ರಖರ ಚಿಂತಕ, ದಾರ್ಶನಿಕ. ಆತನದು ಬಹುಮುಖ ವ್ಯಕ್ತಿತ್ವ. ಸಂಘಟನಾ ಚತುರನಾಗಿದ್ದ ಗೋರಖನಾಥ ಈ ದೇಶದ ವಿವಿಧ ಭಾಗಗಳಲ್ಲಿ ಸುತ್ತಾಡಿ ನಾಥ ಪಂಥದ ಪ್ರಸಾರ ಮಾಡಿದ್ದಾನೆ. ಯಾವ ನಾಥರಲ್ಲೂ ಕಾಣದ ಆತ್ಮವಿಮರ್ಶೆ ಗೋರಖನಲ್ಲಿದೆ. ಆತ ರಚಿಸಿರುವ ‘ಸಿದ್ಧ ಸಿದ್ಧಾಂತ ಪದ್ಧತಿ’ಯ ಕೊನೆಯ ಭಾಗ ಆತ್ಮವಿಮರ್ಶೆಯ ಜೊತೆಗೆ ಯೋಗಿಗಳ ಅತಿರೇಕದ ವಿಮರ್ಶೆಯೂ ಆಗಿದೆ. ನಾಥದರ್ಶನ ಜನಪ್ರಿಯವಾದದ್ದು – ಜನಪರವಾದದ್ದು ಗೋರಖನಿಂದ. ಗೋರಖ ಬೋಧಿಸಿದ ಸಿದ್ಧಾಂತಗಳಲ್ಲಿ ಎಲ್ಲಿಯೂ ಅತಿರೇಕಗಳಿಲ್ಲ. ಅದೊಂದು ಮಧ್ಯಮ ಮಾರ್ಗಿ ದರ್ಶನ. ಗೋರಖನಾಥನು ಹೇಳಿದ ಮಾತುಗಳು ಸರಳ – ನೇರ ಹಾಗೂ ವಸ್ತುನಿಷ್ಠವಾಗಿವೆ. ಆತನ ನುಡಿಗಳಲ್ಲಿ ವಾಸ್ತವತೆಯಿದೆ, ವೈಜ್ಞಾನಿಕತೆಯಿದೆ.

ಮದ್ಯ – ಮಾಂಸ – ಭಂಗಿ ಸೇವನೆಗಳನ್ನು ಗೋರಖನು ನಿಷೇಧಿಸಿದ. ಆದರೆ ಮುಂದೆ ಬಂದ ನಾಥರು ಅವೇ ಮುಖ್ಯವೆಂದು ಅವನ್ನೆಲ್ಲ ಸೇವಿಸಿದರು. ದೇಹ ದಂಡನೆ ಮಾಡುವುದು, ಬಂದ ಸುಖವನ್ನು ನಿರಾಕರಿಸುವುದು, ತನ್ನ ಸಾಧನೆಗಳ ಬಗೆಗೆ ತಾನೇ ಅಹಂಕಾರಪಡುವುದು ತಪ್ಪೆಂದು ಗೋರಖನು ‘ಸಿದ್ಧ ಸಿದ್ಧಾಂತ ಪದ್ಧತಿ’ಯಲ್ಲಿ ತಿಳಿಸಿದ್ದಾನೆ. ಶಿವನಿಂದ ಅವನ ಶಕ್ತಿ ಯಾವಾಗಲೂ ಪ್ರತ್ಯೇಕವಾಗಿರಲು ಸಾಧ್ಯವೇ ಇಲ್ಲವೆಂದು ಹೇಳಿದ ಗೋರಖನು, ಅದನ್ನು ‘ಶಕ್ತಿಯುಕ್ತಂ’ ಎಂದು ಕರೆಯುತ್ತಾನೆ. ಗಂಡು – ಹೆಣ್ಣು ಕೂಡಿದಾಗಲೇ ಶಿವಶಕ್ತಿಯಾಗುತ್ತದೆಂದು ಹೇಳುವ ಮೂಲಕ ಮಹಿಳಾ ಸಾಧ್ಯತೆಗಳನ್ನು ಗೌರವಿಸಿದ್ದಾನೆ. ಆದರೆ ಗೋರಖನು ಬದುಕಿದ್ದ ಕೊನೆ ದಿನಗಳಲ್ಲಿಯೇ ನಾಥಪಂಥ ವಿಭಜನೆಯಾಯಿತು. ಮುಂದೆ ಬಂದ ನಾಥರು ಗೋರಖನಾಥನ ಸಿದ್ಧಾಂತವನ್ನೇ ಬುಡಮೇಲು ಮಾಡಿದರು. ಯಾವುದನ್ನು ಗೋರಖನು ನಿಷೇಧವೆಂದು ಹೇಳಿದ್ದನೋ ಅದನ್ನೆಲ್ಲವನ್ನೂ ಅವರು ಅನುಭವಿಸಿದರು. ಹೀಗಾಗಿ ಗೋರಖನ ನಂತರ ನಾಥಪಂಥ ಅನಾಥವಾಯಿತು.

ನಾಥಪಂಥ ಮಹಿಳೆಯರನ್ನು ನಿರಾಕರಿಸಲಿಲ್ಲ. ಸಾಧನೆಯ ವಿಷಯ ಬಂದಾಗ ಆಕೆಯನ್ನು ಶಕ್ತಿಯೆಂದೇ ಆರಾಧಿಸಿದರು. ಮಚೇಂದ್ರನಾಥನ ನಾರೀಸಾಧನೆ ಪ್ರಕರಣವು ಈ ಕಾರಣದಿಂದ ಗಮನಾರ್ಹವಾಗಿದೆ. ಯೋಗಿಗಳು ಯೋಗಿನಿಯರನ್ನು ಹುಡುಕಿಕೊಂಡು ಹೋಗುತ್ತಿದ್ದಂತೆ, ಯೋಗಿಗಳನ್ನು ಯೋಗಿನಿಯರು ಹಿಂಬಾಲಿಸುತ್ತಿದ್ದ ಪ್ರಸಂಗಗಳೂ ಇವೆ. ತಾಂತ್ರಿಕ ಪಂಥಗಳ ಯೋಗಿನಿಯರಿಗೂ, ಕಪಾಲಿಕ ಜೋಗಿಗಳಿಗೂ ಸಂಬಂಧವಿರುವುದನ್ನು ಗಮನಿಸಬೇಕು. ಗೋರಖ ಹೇಳಿದ ನಾಥದರ್ಶನದಲ್ಲಿ ಮಹಿಳೆಗೆ ಪೂಜ್ಯಸ್ಥಾನವಿದೆ. ನಂತರದ ನಾಥರು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.

ನಾಥಪಂಥದಲ್ಲಿ ಅನೇಕ ಸಾಧಕಿಯರಿದ್ದಾರೆ. ಚೌರಾಸಿ ಸಿದ್ಧರಲ್ಲಿ ಮಣಿಭದ್ರಾ, ಮೇಖಲಿಪಾ, ಕನಖಲಿಪಾ ಎಂಬಂಥ ಮೂರು ಯೋಗಿನಿಯರ ಪ್ರಸ್ತಾಪವಿದೆ. ಹಿಮಾಚಲ ಪ್ರದೇಶದ ಜ್ವಾಲಾಮಾಯಿ ನಾಥರ ಶಕ್ತಿದೇವತೆಯಾಗಿದ್ದಾಳೆಂದು ಡಾ. ತರೀಕೆರೆ ಉಲ್ಲೇಖಿಸಿದ್ದಾರೆ. ಪಿಂಗಳಾದೇವಿಯೆಂಬ ಯೋಗಿನಿ ಕುರಿತು ಅನೇಕ ಐತಿಹ್ಯಗಳಿವೆ. ಈಕೆ ಕದ್ರಿಮಠದ ಸ್ಥಳ ಪುರಾಣದಲ್ಲಿ ಪಿಂಗಳೆಯಾಗಿ ಕಾಣಿಸಿಕೊಂಡಿದ್ದಾಳೆ.

ಬಾರಾ ಪಂಥಗಳಲ್ಲಿ ಒಂಭತ್ತನೆಯದಾದ ಆಯೀ ಪಂಥವು ಬಹುಮುಖ್ಯವಾದುದು. ಇದರ ಸ್ಥಾಪಕಿಯಾದ ವಿಮಲಾದೇವಿಯು, ಮಹತ್ವದ ಯೋಗಿನಿಯಾಗಿದ್ದಳೆಂದು ತಿಳಿದು ಬರುತ್ತದೆ. ಈಕೆ ಬಂಗಾಳದವಳು, ಗೋರಖನಾಥನ ಶಿಷ್ಯೆ. ಬಂಗಾಳವು ಶಕ್ತಿ ದೇವತೆಗಳ ಸೀಮೆ. ನೇಪಾಳವು ಕುಮಾರಿ ಪೂಜೆಗೆ ಪ್ರಸಿದ್ಧಿ. ನೇಪಾಳದ ಮೃಗಸ್ಥಲಿ ಬೆಟ್ಟದ ಬಳಿ ಪಶುಪತಿನಾಥನ ಮಡದಿ ಗುಹೇಶ್ವರಿಯ ಆರಾಧನೆಯಿದೆಯೆಂದು ಡಾ. ತರೀಕೆರೆ ವಿವರಿಸಿದ್ದಾರೆ. ದಕ್ಷಿಣದ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯೋಗಿನಿಯರ ಪ್ರಸ್ತಾಪವಿರದಿದ್ದರೂ ಮಹಾರಾಷ್ಟ್ರದ ನವನಾಥರಲ್ಲಿ ಗೌರಾಯಿ, ಗಂಗಾದೇವಿ, ಮುಕ್ತಾಯಿಯರು ಕಾಣಿಸಿಕೊಳ್ಳುತ್ತಾರೆ.

ಕೊಲ್ಲಾಪುರದಲ್ಲಿಯೂ ಗೋರಖನಾಥ ಮಠವಿದೆ. ಇದು ಶಕ್ತಿ ದೇವತೆಗಳ ಕೇಂದ್ರ. ಕೌಳರಿಗೂ, ಭೈರವಾರಾಧನೆಗೂ ನಾಥಪಂಥಗಳಿಗೂ ಸಂಬಂಧಗಳು ತಳಕು ಹಾಕಿಕೊಂಡಿವೆ. ನಾಥರ ಹಾಗೂ ಕೌಳರ ಮಠಗಳಲ್ಲಿ ಶಕ್ತಿ ದೇವತೆಗಳಿವೆ. ಚುಂಚನಗಿರಿಯ ಕಂಬದಮ್ಮ, ಲುಂಕೆಮಲೆಯ ತುಪ್ಪದಮ್ಮ, ಚಂದ್ರಗುತ್ತಿಯ ಗುತ್ತೆಮ್ಮ, ಸವದತ್ತಿ ಎಲ್ಲಮ್ಮ, ಮುನಿರಾಬಾದ್ ಹುಲಿಗೆಮ್ಮ ಈ ಮೊದಲಾದ ಶಕ್ತಿ ದೇವತೆಗಳನ್ನು ಹೆಸರಿಸಬಹುದು. ಈ ಕಾರಣದಿಂದಲೂ ಕಾಪಾಲಿಕನಾಥರಲ್ಲಿ ಸ್ತ್ರೀಗೆ ಪೂಜ್ಯನೀಯ ಸ್ಥಾನವಿದೆ. ನಾಥಪಂಥದಲ್ಲಿ ಕೆಲವು ಪ್ರಮುಖ ಸಾಧಕಿಯರು ಆಗಿ ಹೋಗಿದ್ದಾರೆ. ಮಹಿಳೆಯ ವಿಚಾರವಾಗಲಿ, ಸಂಸಾರದ ವಿಚಾರವಾಗಲಿ ನಾಥಪಂಥಗಳಲ್ಲಿ ಒಂದೇ ಅಭಿಪ್ರಾಯವಿಲ್ಲ. ಗೋರಖನಂಥವರು ಮಹಿಳೆಗೆ ಪ್ರಾಧಾನ್ಯತೆ ನೀಡಿದರೆ, ನಂತರದ ನಾಥರು ಅವಳನ್ನು ಭೋಗದ ವಸ್ತುವೆಂದು ತಿಳಿದುಕೊಂಡಿದ್ದಾರೆ. ಇಂತಹ ವೈರುಧ್ಯಗಳನ್ನು ಕುರಿತಂತೆ ಡಾ. ತರೀಕೆರೆ ಮಹತ್ವದ ಮಾತುಗಳನ್ನಾಡಿದ್ದಾರೆ.

ಸಿದ್ಧ ಮತ್ತು ನಾಥ ದರ್ಶನಗಳು, ಬ್ರಹ್ಮಚರ್ಯ ಸನ್ಯಾಸಗಳ ಮಹತ್ವವನ್ನು ಹೇಳುತ್ತವೆ. ಆದರೆ ಸಿದ್ಧರ ಜೀವನದ ತುಂಬ ಸ್ತ್ರೀಯರ ಜತೆಗಿನ ಪ್ರೀತಿ – ಸಂಘರ್ಷಗಳೇ ತುಂಬಿವೆ. ಇದೊಂದು ವೈರುಧ್ಯ. ನಾಥರು ತಮ್ಮ ಶೈಲಿಯಲ್ಲಿ ಧರಿಸುವ ಉಂಗುರ ಹಾಗೂ ಸಿಂಗನಾದಿಗಳು ಮೂಲತಃ ಯೋನಿ ಲಿಂಗಗಳ ಸಂಕೇತಗಳು. ಅವರು ಶಾಕ್ತ ಪೀಠಗಳಿಗೆ ನಡೆದುಕೊಳ್ಳುತ್ತಾರೆ. ಮಚೇಂದ್ರ ಕೊಟ್ಟ ಸಂತಾನಶಕ್ತಿಯುಳ್ಳ ವಿಭೂತಿ ಧರಿಸಲು ನಿರಾಕರಿಸುವ ಮಹಿಳೆ; ಯೋಗಿಯನ್ನು ಹೊರಬಿಡದಂತೆ ತನ್ನ ವಶದಲ್ಲಿ ಇರಿಸಿಕೊಳ್ಳುವ ಸ್ತ್ರೀ ರಾಜ್ಯದ ಪಿಂಗಳೆ; ಯೋಗಿಗೆ ಸವಾಲು ಹಾಕುವ ಕೊಲ್ಲಾಪುರದ ಮಾಯಿ; ಮಚೇಂದ್ರನನ್ನು ಹಿಂಬಾಲಿಸಿ ಬರುವ ಮಂಗಳಾದೇವಿ, ರೇವಣಸಿದ್ದೇಶ್ವರ ಪುರಾಣದಲ್ಲಿ ಗೋರಖನಿಗೆ ಇಬ್ಬರು ಹೆಂಡಿರು! ನಾಥರು ವೀರ್ಯಪಾತ ಮಾಡದೆ ವಿರಕ್ತಿಯ ಸಂಕೇತವಾಗಿ ಭಗವಾ (ಕಾವಿ) ಧರಿಸುತ್ತಾರೆ. ಆದರೆ ಈ ಕಾವಿಯ ಮೂಲವೆಂಬುದು ಸ್ತ್ರೀಯ ರಕ್ತದಲ್ಲಿದೆ. ಇಂತಹ ಅನೇಕ ನಂಬಿಕೆಗಳು, ವೈರುಧ್ಯಗಳು ನಾಥರಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಬಹುಪಂಥಗಳ ಸಂಗಮವಾಗಿರುವುದರಿಂದ ವೈರುಧ್ಯಗಳು ಸಹಜವಾಗಿವೆ. ಇಂತಹ ವೈರುಧ್ಯಗಳ ನಡುವೆಯೂ ಅನೇಕ ಸತ್ಯಗಳು ಮೈಚಾಚಿಕೊಂಡಿವೆ.

ನಾಥರ – ಶರಣರ ಸಂಬಂಧ

ಕನ್ನಡನಾಡಿನಲ್ಲಿ 12ನೇ ಶತಮಾನದಲ್ಲಿ ಶಿವಶರಣರಿಂದ ನಡೆದ ವಚನ ಚಳುವಳಿ ಈ ನಾಡು ಕಂಡ ಪ್ರಥಮ ಚಳವಳಿ. ಈಗಾಗಲೇ ವಚನ ಸಾಹಿತ್ಯವನ್ನು, ವಚನ ಚಳುವಳಿಯನ್ನು ಕುರಿತು ಅನೇಕ ಕೃತಿಗಳು ಪ್ರಕಟವಾಗಿವೆ. ಹೀಗಾಗಿ ಇಲ್ಲಿ ವಚನ ಚಳವಳಿಯನ್ನು ಕುರಿತು ಹೇಳದೇ, ವಚನಕಾರರಿಗೂ- ನಾಥರಿಗೂ ಇರುವ ಸಂಬಂಧದ ಬಗೆಗೆ ಚರ್ಚಿಸಲಾಗಿದೆ.

ಭಾರತದಲ್ಲಿ ಹತ್ತನೇ ಶತಮಾನದಲ್ಲಿ ಹುಟ್ಟಿಕೊಂಡ ನಾಥ ಪಂಥದಲ್ಲಿ ಮುಖ್ಯವಾಗಿ ಎರಡು ಬೆಳವಣಿಗೆಗಳು ಕಾಣಿಸುತ್ತವೆ. ಬುದ್ಧನ ನಂತರ ಹೀನಯಾನ – ಮಹಾಯಾನಗಳೆಂಬ ಎರಡು ಮುಖ್ಯ ಕವಲುಗಳು ಬೆಳೆದದ್ದು ಎಲ್ಲರಿಗೂ ಗೊತ್ತಿದೆ. ತಾಂತ್ರಿಕ ಶೈವಪಂಥಕ್ಕೆ ಹತ್ತಿರವಾದದ್ದೆಂದರೆ ವಜ್ರಯಾನ. ವಜ್ರಯಾನದಿಂದ ನಾಥಪಂಥ ಹುಟ್ಟಿತೆಂದು ಕೆಲವು ವಿದ್ವಾಂಸರು ಹೇಳಿದ್ದಾರೆ. ಶೈವಧರ್ಮದ ಕಾಳಾಮುಖ – ಪಾಶುಪತ ಶಾಖೆಗಳ ಬೆಳವಣಿಯಿಂದ ನಾಥಪಂಥ ಹುಟ್ಟಿತೆಂದು ಕೆಲವು ಸಂಶೋಧಕರು ಹೇಳಿದ್ದಾರೆ. ಭೈರವಾರಾಧನೆಯ ನಾಗಾರ್ಜುನಾದಿ ಪರಂಪರೆಯ ಜೋಗಿಗಳದು ಒಂದು ಶಾಖೆಯಾದರೆ, ಶಿವನ ಆರಾಧನೆಯ ರೇವಣಸಿದ್ಧ ಮೊದಲಾದ ಸಿದ್ಧರದು ಮತ್ತೊಂದು ಶಾಖೆ. ಶ್ರೀಶೈಲದ ಜೋಗಿಗಳು ಮೊದಲ ಶಾಖೆಯವರಾದರೆ, ರೇವಣಸಿದ್ಧ, ರುದ್ರಮುನಿ, ಮುಕ್ತಿಮುನಿನಾಥ ಮೊದಲಾದ ಸಿದ್ಧರು ಎರಡನೆಯ ಶಾಖೆಯವರಾಗಿದ್ದಾರೆ. ‘ಸಿದ್ಧರಾಮ ಚಾರಿತ್ರ್ಯ’ ಗ್ರಂಥದಲ್ಲಿ ವಿಕಾರಿಸಿದ್ಧ ಸಂಪ್ರದಾಯ ಶಿವಸಿದ್ಧ ಸಂಪ್ರದಾಯಗಳೆಂಬ ಎರಡು ಶಾಖೆಗಳ ಪ್ರಸ್ತಾಪವಿದೆ.

ನಾಥಪಂಥ ವಿಶ್ವವಿಶಾಲವಾದುದಾಗಿದೆ. 12ನೇ ಶತಮಾನದ ಶರಣರು ಉದಯವಾಗುವುದಕ್ಕಿಂತ ಮೊದಲೇ ಅದು ಈ ದೇಶದಲ್ಲಿ ಬೆಳೆದು ನಿಂತಿದೆ. ನಾಥಪಂಥವು ನೇಪಾಳದಲ್ಲಿ ವಿಶಾಲವಾಗಿ ಹಬ್ಬಿದೆ. ಈ ರೀತಿಯ ವಿಶ್ವವ್ಯಾಪಿ ಬೆಳವಣಿಗೆ ವಚನ ಚಳವಳಿಗಿಲ್ಲ. ಈ ಚಳವಳಿ ಕೇವಲ ಕನ್ನಡ ನಾಡಿಗೆ ಮಾತ್ರ ಸೀಮಿತವಾಗಿತ್ತು. ವಚನ ಚಳವಳಿಯೊಂದಿಗೆ ನಾಥ ಪಂಥವನ್ನು ತೌಲನಿಕವಾಗಿ ಅಧ್ಯಯನ ಮಾಡುವಲ್ಲಿಯೂ ಅನೇಕ ಸಮಸ್ಯೆಗಳಿವೆ. ವಚನ ಚಳವಳಿಯ ಸಿದ್ಧಾಂತ, ಧೋರಣೆ ತುಂಬ ಸ್ಪಷ್ಟವಾಗಿದ್ದರೆ, ನಾಥಪಂಥದ ಸಿದ್ಧಾಂತ, ಧೋರಣೆ ತುಂಬ ಸಂಕೀರ್ಣವಾಗಿವೆ.
ಈ ಎಲ್ಲ ಸಂಗತಿಗಳನ್ನು ಗಮನಿಸಿ, ಕೆಲವು ಆಧುನಿಕ ವಿದ್ವಾಂಸರು ಶರಣರಿಗೆ ನಾಥರೇ ಪ್ರೇರಣೆಯಾಗಿದ್ದಾರೆಂದು ಹೇಳಿದ್ದಾರೆ. ಅವರ ಹೇಳಿಕೆಗಳನ್ನಿಲ್ಲಿ ನೋಡಬಹುದು.
1) ನಾಥ ಸಂಪ್ರದಾಯದಿಂದ ಸ್ಫೂರ್ತಿ ಪಡೆದ ಶ್ರೀ ಪ್ರಭುದೇವರು ಲಿಂಗವಂತ ಮತದುದ್ಧಾರಕರಾಗಿರುವ ಸಂಭವವಿದೆ.
-ಶಂಭಾ ಜೋಷಿ ( ಶಂಭಾ ಕೃತಿ ಸಂಪು-2 ಪು-227)
2) ಲಿಂಗಾಯತ ವಚನಕಾರರ ಕ್ರಾಂತಿಕಾರಕ ಪ್ರಖರತೆಯು ವಾರಸಾ ಪಂಥದ ಸಂಪ್ರದಾಯದ್ದೇ ಆಗಿದೆಯೆಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಕೇವಲ ಬಸವೇಶ್ವರರ ವಚನಗಳನ್ನು ಗಮನಿಸಿದರೂ ಅಲ್ಲಿ ಗೋರಕ್ಷವಾಣಿಯ ಧ್ವನಿಯೇ ಹೊಸ ರೂಪದಲ್ಲಿ ಮೂಡಿ ಬಂದಿದೆ ಎಂದೆನಿಸುತ್ತದೆ.
-ಢೇರೆ (ನಾಥ ಸಂಪ್ರದಾಯದ ಇತಿಹಾಸ, ಪು-200)
ಶಂಕರ ಮೊಕಾಶಿ ಪುಣೇಕರ್ ಹಾಗೂ ಕೆ. ಜಿ. ನಾಗರಾಜಪ್ಪ ಅವರು ಇದೇ ಅಭಿಪ್ರಾಯ ಹೊಂದಿದ್ದಾರೆ. ಶರಣರು ಪ್ರತಿಪಾದಿಸಿರುವ ಕ್ರಾಂತಿಕಾರಕ ಪರಿಕಲ್ಪನೆಗಳು ನಾಥ ಪಂಥಗಳಿಂದ ಬಂದವುಗಳಾಗಿವೆಯೆಂದು ಹೇಳಿದ್ದಾರೆ.

ಈ ವಿದ್ವಾಂಸರ ಅಭಿಪ್ರಾಯಗಳಿಗೆ ಆಧಾರಗಳಿಲ್ಲ. ವಚನಕಾರರ ಅಂಕಿತಗಳಲ್ಲಿ ‘ನಾಥ’ ಎಂದು ಬಂದಾಕ್ಷಣ ಅವರು ನಾಥಪಂಥದ ಅನುಯಾಯಿಗಳಾಗುವುದಿಲ್ಲ. ಸಿದ್ಧರಾಮನು ಸಿದ್ಧನಾಥ ಪರಂಪರೆಯ ಮೂಲದವನೆಂದಾಕ್ಷಣ ಆತ ನಾಥ ಸಂಪ್ರದಾಯಕ್ಕೆ ಸೇರಿದ ಶರಣನಾಗುವುದಿಲ್ಲ. ಬಹುಮುಖ್ಯ ಸಂಗತಿಯೆಂದರೆ ಶರಣರಿಗೂ- ನಾಥರಿಗೂ ಮುಖಾಮುಖಿಯೇ ಆಗಿಲ್ಲ. ಶೂನ್ಯ ಸಂಪಾದನೆಯಲ್ಲಿ ಬರುವ ಗೋರಕ್ಷನು ಗೋರಖನಾಥನಲ್ಲ. ನಾಥಪಂಥದ ಗೋರಖನಾಥನಿಗೂ, ಅಲ್ಲಮನೊಂದಿಗೆ ಸಂವಾದಕ್ಕಿಳಿಯುವ ಗೋರಕ್ಷನಿಗೂ ಸಂಬಂಧವಿಲ್ಲ. ಈ ಸತ್ಯಗಳನ್ನರಿಯದೇ ನಾಥರಿಂದಲೇ ವಚನ ಚಳವಳಿ ಹುಟ್ಟಿತೆಂದು ಹೇಳಿರುವುದು ಅಸಂಬಂದ್ಧ. ಯಾವ ವಚನಕಾರನೂ ತನ್ನ ವಚನದಲ್ಲಿ ಗೋರಖನಾಥನನ್ನಾಗಲಿ, ಮಚೇಂದ್ರನಾಥನನ್ನಾಗಲಿ ಸ್ಮರಿಸುವುದಿಲ್ಲ. ಬದಲಾಗಿ ನಾಥರ ಆಚರಣೆಗಳನ್ನು ಶರಣರು ತೀವ್ರವಾಗಿ ಖಂಡಿಸಿದ್ದಾರೆ.

12ನೇ ಶತಮಾನದ ವಚನ ಚಳವಳಿ ಪ್ರಾರಂಭವಾಗುವುದಕ್ಕಿಂತ ಮೊದಲೇ, ಕನ್ನಡ ನಾಡಿನಲ್ಲಿ ನಾಥಪಂಥವು ತನ್ನ ಪ್ರಭಾವ ಬೀರಿತ್ತು. ಕಪ್ಪಡಿಸಂಗಮದ ಮೂಲದೇವತೆಯೇ ಸಂಗಮನಾಥ. ಹಿಂದಿನ ಕಪ್ಪಡಿಸಂಗಮವೇ ಇಂದಿನ ಕೂಡಲಸಂಗಮ. ಶರಣರ ಮೇಲೆ ಅರವತ್ತುಮೂರು ಪುರಾತನರ ಪ್ರಭಾವವಾಗಿರುವಂತೆ, ನವನಾಥ ಸಿದ್ಧರ ಪ್ರಭಾವ ಅಷ್ಟಾಗಿ ಆಗಿಲ್ಲವೆಂದೇ ಹೇಳಬೇಕಾಗುತ್ತದೆ. ಆದರೆ ಅವರು ಬರುವುದಕ್ಕಿಂತ ಮೊದಲೇ ಕಪ್ಪಡಿಸಂಗಮ, ಶ್ರೀಶೈಲ ಇವು ಪ್ರಮುಖ ನಾಥ ಕೇಂದ್ರಗಳಾಗಿದ್ದವೆಂಬುದನ್ನು ಗಮನಿಸಬೇಕಾಗುತ್ತದೆ. ಅನೇಕ ವಚನಕಾರರ ಅಂಕಿತಗಳಲ್ಲಿ ‘ನಾಥ’ ಪದ ಇರುವುದನ್ನು ಕಾಣಬಹುದು. ಸೊನ್ನಲಿಗೆಯ ಸಿದ್ಧರಾಮೇಶ್ವರರು ಸಿದ್ಧನಾಥ ಮೂಲದವರೆಂದು ತಿಳಿದುಬರುತ್ತದೆ. ಅಲ್ಲಮಪ್ರಭು ಕಾಶ್ಮೀರಿ ಶೈವದಿಂದ ಪ್ರಭಾವ ಹೊಂದಿದ್ದು, ನಾಥರನ್ನು ಅವರು ಜೋಗಿಗಳೆಂದು ಕರೆದಿದ್ದಾರೆ.

ಜೇಡರ ದಾಸಿಮಯ್ಯನ ಅಂಕಿತ -ರಾಮನಾಥ, ಅಮುಗೆ ದೇವಯ್ಯನ ಅಂಕಿತ – ಸಿದ್ಧ ಸೋಮನಾಥ, ತುರುಗಾಹಿ ರಾಮಣ್ಣನ ಅಂಕಿತ – ಗೋಪತಿನಾಥ, ಜೋದರ ಮಾಯಣ್ಣನ ಅಂಕಿತ – ಶಂಭು ಸೋಮನಾಥ, ತಳವಾರ ಕಾಮಿದೇವನ ಅಂಕಿತ – ಕಾಮಹರಪ್ರಿಯ ರಾಮನಾಥ, ದಶಗಣ ಸಿಂಗಿದೇವನ ಅಂಕಿತ – ನಾಚಯ್ಯಪ್ರಿಯ ಮಲ್ಲಿನಾಥ, ಬಹುರೂಪಿ ಚೌಡಯ್ಯನ ಅಂಕಿತ – ರೇಕಣ್ಣಪ್ರಿಯ ರಾಮನಾಥ, ಗೊಗ್ಗವ್ವೆಯ ಅಂಕಿತ – ನಾಸ್ತಿನಾಥ, ದುಗ್ಗಳೆಯ ಅಂಕಿತ – ದಾಸಯ್ಯಪ್ರಿಯ ರಾಮನಾಥ. ಹೀಗೆ ಶರಣರ ಅಂಕಿತಗಳಲ್ಲಿ ‘ನಾಥ’ ಪದ ಬರುತ್ತದೆ. ಹಾಗೆಂದಾಕ್ಷಣ ಇವರ್ಯಾರೂ ನಾಥರ ಸಿದ್ಧಾಂತಗಳನ್ನು ಅನುಸರಿಸಿದವರಲ್ಲ. ಇವರ ಪೂರ್ವಜರು ನಾಥ ಪರಂಪರೆಗೆ ಸೇರಿರಬೇಕೆಂದು ಇದರಿಂದ ಸ್ಪಷ್ಟವಾಗುತ್ತದೆ. ಸಿದ್ಧರಾಮನಿಗೆ ಸಂಬಂಧಿಸಿದಂತೆ ಅನೇಕ ಶಾಸನಗಳಿವೆ. ಸೊರಬ ತಾಲೂಕಿನ ಕೋಳಿಶಾಲೆ ಶಾಸನದ ಆರಂಭದಲ್ಲಿ ‘ಸಿದ್ಧರಾಮನಾಥ ಶರಣರು’ ಎಂಬ ಸಾಲುಗಳಿವೆ. ಧಾರವಾಡ ಜಿಲ್ಲೆಯ ಸಂಗೂರ ಶಾಸನದ ಆರಂಭದಲ್ಲಿ ‘ಶ್ರೀ ಸಿದ್ಧರಾಮನಾಥ ಶರಣು’ ಎಂದಿದೆ. ಮುದ್ದೇಬಿಹಾಳ ತಾಲೂಕಿನ ಪಡೇಕನೂರ ಶಾಸನದಲ್ಲಿ ‘ಸಿದ್ಧೇಂದ್ರ ಚಕ್ರವರ್ತಿ ಶ್ರೀರಾಮನಾಥ’ ಎಂದು ಕರೆಯಲಾಗಿದೆ. ಇದನ್ನೆಲ್ಲ ಗಮನಿಸಿದರೆ ಇವರ ಪೂರ್ವಜರು ನಾಥ ಪರಂಪರೆಯವರಾಗಿದ್ದು, ಈ ಶರಣರು ಮಾತ್ರ ನಾಥ ಪಂಥವನ್ನು ತೊರೆದು ಶರಣ ಧರ್ಮವನ್ನು ಕಟ್ಟಿದವರಾಗಿದ್ದಾರೆ.

12ನೇ ಶತಮಾನದ ಶರಣರ ಮೇಲೆ ನಾಥ ಪಂಥದ ಪ್ರಭಾವವಾಗಿಲ್ಲ. 10ನೇ ಶತಮಾನದಲ್ಲಿಯೇ ಗೋರಖನಾಥ- ಮಚೇಂದ್ರನಾಥ ಈ ಮೊದಲಾದ ನವನಾಥಸಿದ್ಧರು ಆಗಿ ಹೋಗಿದ್ದರಿಂದ ಅವರ ಪ್ರಭಾವ ಅಂದಿನ ಪರಿಸರದ ಮೇಲಾಗಿತ್ತೆಂಬುದು ಸುಳ್ಳಲ್ಲ. ಕೆಲವು ಶರಣರ ಪೂರ್ವಿಕರು ನಾಥ ಸಿದ್ಧಾಂತಗಳ ಪ್ರಭಾವಕ್ಕೆ ಒಳಗಾಗಿದ್ದರು. ಬಸವಣ್ಣನವರು ಶೈವ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದರು. ಹಾಗೆಂದಾಕ್ಷಣ ಅವರನ್ನು ಬ್ರಾಹ್ಮಣರೆಂದು ತಿಳಿಯಬೇಕಾಗಿಲ್ಲ. ವೇದ – ಉಪನಿಷತ್ತುಗಳನ್ನು, ವೈದಿಕ ಧರ್ಮದ ಮೌಢ್ಯತೆಗಳನ್ನು ಬಸವಣ್ಣ ವಿರೋಧಿಸಿದರು. ತಾನು ಹಾರುವನೆಂದೆಡೆ ಕೂಡಲಸಂಗ ಮೆಚ್ಚುವುದಿಲ್ಲವೆಂದು ಹೇಳಿದರು. ನಾಥ ಪಂಥದ ಮನೆತನಗಳಿಂದ ಬಂದಿದ್ದರೂ ಶರಣರು ಚಳವಳಿಯನ್ನು ಕಟ್ಟಿದ ಮೇಲೆ ನಾಥಪಂಥದ ಮೌಢ್ಯಾಚರಣೆಗಳನ್ನು ನೇರವಾಗಿ ವಿರೋಧಿಸಿದರು. ನಾಥರದು ಸಿದ್ಧಪಥವಾದರೆ, ಶರಣರದು ಕ್ರಾಂತಿಪಥ. ಹೀಗಿರುವಾಗ ಶರಣರ ಕ್ರಾಂತಿಯ ಬೀಜಗಳನ್ನು ನಾಥರಲ್ಲಿ ಹುಡುಕುವುದು ತಪ್ಪಾಗುತ್ತದೆ. ಧಾರ್ಮಿಕ ಕ್ಷೇತ್ರದಲ್ಲಿ ಮೊದಲು ಕ್ರಾಂತಿ ಮಾಡಿದವರೇ ಶರಣರು. ನಾಥರೆಂದೂ ಕ್ರಾಂತಿಕಾರಿಗಳಾಗಿರಲಿಲ್ಲ. ಇದನ್ನು ಸರಿಯಾಗಿ ಗ್ರಹಿಸದ ಢೇರೆಯವರು ಶರಣರ ಕ್ರಾಂತಿಗೆ, ವಾರಸಾನಾಥ ಸಂಪ್ರದಾಯದ ಪ್ರಭಾವವಾಗಿದೆಯೆಂದು ಹೇಳಿರುವುದು ಸತ್ಯಕ್ಕೆ ದೂರವಾದುದಾಗಿದೆ.

12ನೇ ಶತಮಾನದಲ್ಲಿ ಗೋರಖನಾಥ – ಮಚೇಂದ್ರನಾಥ ಈ ಮೊದಲಾದ ನಾಥರ ಸಿದ್ಧಾಂತಗಳು, ಶರಣರಿಗೆ ಲಭಿಸಿರಲೇ ಇಲ್ಲ. ಕನ್ನಡ ನಾಡಿನಲ್ಲಿ ಈ ಸಂದರ್ಭದಲ್ಲಿ ಕಾಪಾಲಿಕರು ನಾಥರಾಗಿ ಇನ್ನೂ ರೂಪಾಂತರಗೊಂಡಿರಲಿಲ್ಲ. ಜನಸಾಮಾನ್ಯರ ನಡುವೆ ಕೆಲವು ನಾಥರ ಆಚರಣೆಗಳು ಜೀವಂತವಾಗಿದ್ದವು. ಶರಣರು ಅವುಗಳನ್ನೆಲ್ಲಾ ನೇರವಾಗಿಯೇ ವಿರೋಧಿಸಿದ್ದಾರೆ. ನಾಥರಿಗೂ – ಶರಣರಿಗೂ ಸೈದ್ಧಾಂತಿಕವಾಗಿ ಯಾವುದೇ ಸಾಮ್ಯತೆಯಿಲ್ಲ. ಆದರೆ ಕೆಲವು ವಿಷಯಗಳಲ್ಲಿ ಅಲ್ಲಲ್ಲಿ ಸಾಮ್ಯತೆ ಕಾಣಿಸುತ್ತದೆ. ನಾಥ ಸಂಪ್ರದಾಯವು ಅವೈದಿಕ ಪಂಥವಾಗಿರುವುದರಿಂದ, ಶರಣರೂ ವೈದಿಕವನ್ನು ವಿರೋಧಿಸುತ್ತಲೇ ಬಂದಿದ್ದರಿಂದ ಕೆಲವು ವಿಷಯಗಳಲ್ಲಿ ಸಾಮ್ಯತೆ ಕಾಣಿಸುತ್ತದೆಯೇ ಹೊರತು ಶರಣರ ಕ್ರಾಂತಿಗೆ, ನಾಥರ ಸಿದ್ಧಾಂತವು ಪ್ರೇರಣೆಯಾಗಲು ಸಾದ್ಯವೇ ಇಲ್ಲ. ನಾಥರ ಚಿಂತನೆಯೇ ಬೇರೆ, ಶರಣರ ಮಾರ್ಗವೇ ಬೇರೆ. ಶರಣರನ್ನು ಸೂಫಿಗಳ ಜತೆಗೆ, ಕೀರ್ತನಕಾರರ ಜತೆಗೆ, ತತ್ವಪದಕಾರರ ಜತೆಗೆ ಹೋಲಿಸಿ ತೌಲನಿಕ ಅಧ್ಯಯನ ಮಾಡಿದಾಗ ಕೆಲವು ಸಾಮ್ಯ ವಿಚಾರಗಳು ಕಾಣಿಸುತ್ತವೆಯೆಂದ ಮಾತ್ರಕ್ಕೆ, ಒಂದರಿಂದ ಮತ್ತೊಂದು ಭಕ್ತಿಪಂಥ ಬೆಳೆದು ಬಂದಿತೆಂದು ಅರ್ಥವಲ್ಲ. ಹಾಗೊಂದು ವೇಳೆ ನಾಥರು ಕ್ರಾಂತಿಕಾರರಾಗಿದ್ದರೆ, ಅದೇ ಪ್ರಥಮ ಚಳವಳಿಯಾಗಿರುತ್ತಿತ್ತು. ಚಳವಳಿಯ ಕನಸನ್ನೂ ಕಾಣದ ನಾಥರು ಅದ್ಹೇಗೆ ಶರಣರ ಮೇಲೆ ಪ್ರಭಾವ ಬೀರಲು ಸಾಧ್ಯ? ಈ ವಿಷಯದ ಬಗೆಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ.

ಹಠಯೋಗ ಲಂಬಿಕೆಯೆಂದು ಆಕುಂಚನವೆಂದು
ವಜ್ರ ಅಮರಿಯ ಕಲ್ಪವೆಂದು ಮಲಮೂತ್ರಂಗಳ ಸೇವಿಸುತ್ತ
ಇದು ಪೂರ್ವ ನವನಾಥ ಸಿದ್ಧರ ಮತ್ತೋಕ್ತವೆಂದು
ಕಾಪಾಲಿಕಾಚರಣೆಯ ಆಚರಿಸುವವರಲ್ಲ ಶರಣರು.
-ಅಲ್ಲಮಪ್ರಭು (ಸ.ವ.ಸಂ.2, ವ:1613)

ಅಲ್ಲಮಪ್ರಭುವಿನ ಈ ವಚನದಲ್ಲಿ ನವನಾಥ ಸಿದ್ಧರನ್ನು ನೇರವಾಗಿ ವಿರೋಧಿಸಲಾಗಿದೆ. ಮಲಮೂತ್ರಗಳನ್ನು ಸೇವಿಸಿದ ಇವರೆಂತಹ ಸಾಧಕರು? ಎಂದು ಪ್ರಭು ನೇರವಾಗಿ ಪ್ರಶ್ನಿಸಿದ್ದಾರೆ. ವಾತ, ಪಿತ್ತ, ಕಫಗಳನ್ನು ಅಮೃತವೆಂದು ತಿಳಿಯುವ ನಾಥರನ್ನು, ಪ್ರಭುದೇವರು ಭೂತಚೇಷ್ಟಕರೆಂದು ವಿಡಂಬಿಸಿದ್ದಾರೆ. ಫಲ – ರಸ – ಕ್ಷೀರ – ತುಪ್ಪ ಪದಾರ್ಥಗಳನ್ನು ಸೇವಿಸಿ ಅನ್ನವನ್ನು ಬಿಟ್ಟಿದ್ದೇವೆಂದು ಹೇಳುತ್ತ ತಿರುಗಿದ ನಾಥರನ್ನು ಶರಣರು ಸುಳ್ಳುಗಾರರೆಂದು ಕರೆದಿದ್ದಾರೆ. “ಗುಹೇಶ್ವರಾ ನಿಮ್ಮ ಶರಣರು ಅಗ್ರಗಣ್ಯರು” ಎಂದು ಈ ವಚನದ ಕೊನೆಯಲ್ಲಿ ಪ್ರಭುದೇವರು ಹೇಳಿರುವ ಮಾತು ತುಂಬ ಮುಖ್ಯವಾದುದಾಗಿದೆ.

ಶೈವ ಸೈವೆರಗಾದ, ಪಾಶುಪತಿ ಪಥವನರಿಯ
ಕಾಳಾಮುಖಿ ಕಂಗೆಟ್ಟ, ಮಹಾವ್ರತಿ ಮದವೇರಿದ
ಸನ್ಯಾಸಿ ಪಾಷಂಡಿಯಾದ, ಕಾಪಾಲಿ ಮರುಳಾಗಿ ತಿರುಗಿದ
ಈ ಆರು ಭಕ್ತಿ ಸ್ಥಲಕ್ಕೆ ಸಲ್ಲವು ಕೇಳಿರಣ್ಣ.
-ಚೆನ್ನಬಸವಣ್ಣ (ಸ.ವ.ಸಂ.3, ವ:1688)

ಈ ವಚನದಲ್ಲಿ ಚೆನ್ನಬಸವಣ್ಣನವರು ನಾಥಪಂಥದ ಮೂಲಪುರುಷರಾದ ಪಾಶುಪತಿಗಳನ್ನು, ಕಾಪಾಲಿಕರನ್ನು ನೇರವಾಗಿ ವಿಡಂಬಿಸಿದ್ದಾರೆ. ಇವರದು ಭಕ್ತಿಯೇ ಅಲ್ಲವೆಂದು ಹೇಳಿದ್ದಾರೆ. ಇವರು ಮರುಳರಂತೆ ತಿರುಗುತ್ತಿದ್ದರೆಂದು ವಿಡಂಬಿಸಿದ್ದಾರೆ.

ಯೋಗಿ, ಜೋಗಿ, ತಪಸಿ, ಸನ್ಯಾಸಿ
ನರಮಾಂಸಕ, ನೀಲಪಟರು ಸುಳಿವರು ಕ್ಷುಧೆ ಕಾರಣ.
ತೋರಿ, ಮಾರಿಯೆಂಬ ಬೆವಹಾರಿಗಳು!
ನಿರ್ಣಯ ನಿರ್ಲೇಪ ಭಕ್ತಿಯುಳ್ಳವರನಲ್ಲದೊಲ್ಲ
ಸಕಳೇಶ್ವರ ದೇವ.
-ಸಕಲೇಶ ಮಾದರಸ (ಸ.ವ.ಸಂ.9, ವ:471)

ಸಕಲೇಶ ಮಾದರಸರ ಈ ವಚನವನ್ನು ಗಮನಿಸಿದಾಗ ನಾಥರ ಬಗೆಗೆ ಶರಣರು ಹೊಂದಿದ್ದ ಅಭಿಪ್ರಾಯಗಳೆಂತಹವೆಂಬುದು ಸ್ಪಷ್ಟವಾಗುತ್ತದೆ. ಜೋಗಿಗಳು ನಾಥಪಂಥದ ಪ್ರಮುಖರು. ಭಾರತದಲ್ಲಿ ಅನೇಕ ಜೋಗಿಮಠಗಳಿವೆ. ಇಂತಹ ಜೋಗಿಗಳನ್ನು ಬೆವಹಾರಿಗಳೆಂದು ಸಕಳೇಶ ಮಾದರಸರು ಹೇಳಿದ್ದಾರೆ. ಇವರು ನಿಜವಾದ ಭಕ್ತರಲ್ಲವೆಂದು ಸ್ಪಷ್ಟಪಡಿಸಿರುವ ಈ ವಚನಕಾರ, ನಾಥರನ್ನು ನೇರವಾಗಿಯೇ ಟೀಕಿಸಿದ್ದಾರೆ.

‘ಬಸವ ಶಿಖಾಮಣಿ’ ಕೃತಿಯಲ್ಲಿ ಬಸವಣ್ಣನವರು ಶಿವಪೂಜೆಯಲ್ಲಿರುವಾಗ, ಕಾಲಮೇಘ ಜೋಗಿ ಹಾಗೂ ಚಂದ್ರ ಜೋಗಿ ಎಂಬುವರು, ಕಲ್ಯಾಣ ಪಟ್ಟಣಕ್ಕೆ ಬೆಂಕಿ ಹಚ್ಚುತ್ತಾರೆ. ಆಗ ಬಸವಣ್ಣನವರು ಬೆಂಕಿಗೆ ಸನ್ನೆ ಮಾಡಲು ಅದು ಜೋಗಿಗಳ ಬೆನ್ನು ಹತ್ತುತ್ತದೆ. ಕಡೆಗೆ ಜೋಗಿಗಳು ಬಸವಣ್ಣನವರಿಗೆ ಮೊರೆ ಹೋಗಿ ಪ್ರಾಣ ಉಳಿಸಿಕೊಳ್ಳುತ್ತಾರೆಂದು ‘ರಾವುಳ ಮತ ಪ್ರಕಾಶಿಕೆ’ (ಪು.16)ಯಲ್ಲಿ ಹೇಳಲಾಗಿದೆ. ಇದನ್ನು ರಹಮತ್ ತರೀಕೆರೆಯವರು ‘ಕರ್ನಾಟಕದ ನಾಥಪಂಥ” ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಹೀಗೆ ನಾಥರನ್ನು ವಚನಕಾರರು ವಿಡಂಬಿಸುತ್ತಲೇ ಬಂದಿದ್ದಾರೆ. ತಮ್ಮ ಕಾಲಘಟ್ಟದಲ್ಲಿ ಕಂಡ ನಾಥರ ಆಚರಣೆಗಳನ್ನು ನೋಡಿ ಶರಣರು ಟೀಕಿಸುತ್ತಲೇ ಬಂದಿದ್ದಾರೆ. ಒಂದೇ ಒಂದು ವಚನದಲ್ಲಿ ನಾಥರ ಬಗೆಗೆ ಒಳ್ಳೆಯ ಅಭಿಪ್ರಾಯವನ್ನು ಶರಣರು ವ್ಯಕ್ತಪಡಿಸಿಲ್ಲ. ಸತ್ಯಸಂಗತಿ ಹೀಗಿರುವಾಗ ಶರಣರ ಕ್ರಾಂತಿಗೆ ನಾಥರು ಹೇಗೆ ಪ್ರೇರಣೆಯಾಗುತ್ತಾರೆ? ಶರಣರನ್ನು ಸರಿಯಾಗಿ ಅಧ್ಯಯನ ಮಾಡಲಾರದವರು ಹೇಳಿದಾಕ್ಷಣ ಅದು ಸತ್ಯವಾಗುವುದಿಲ್ಲ. ವಚನ ಚಳವಳಿಯನ್ನು ತಪ್ಪಾಗಿ ಅರ್ಥೈಸಿದವರೇ ಹೆಚ್ಚು. ಆದರೆ ಕೊನೆಗೆ ಉಳಿಯುವುದು ಸತ್ಯವೇ. ಈ ಸಂಗತಿಯನ್ನು ಯುವ ಪೀಳಿಗೆ ಸರಿಯಾಗಿ ತಿಳಿದುಕೊಳ್ಳಬೇಕಿದೆ.

ನಾಥಪಂಥದ ಬಗೆಗೆ ಹೇಳುವಾಗ ಒಂದು ಮಾತನ್ನು ಮರೆಯಬಾರದು. ನಾಥರ ಯೋಗದರ್ಶನವು ದೇಹ ಮತ್ತು ಮನಸ್ಸುಗಳ ಸಮನ್ವಯ ಸಿದ್ಧಾಂತವಾಗಿ ಬೆಳೆಯಲು ಬೌದ್ಧರ ಅನಾತ್ಮವಾದವೇ ಮುಖ್ಯ ಪ್ರೇರಣೆ. ವಜ್ರಯಾನ ಪಂಥದಿಂದ ನಾಥಪಂಥ ಬೆಳೆದು ಬಂದುದರಿಂದ ಅಲ್ಲಿ ಕೆಲವು ವೈಚಾರಿಕ ಸಂಗತಿಗಳಿವೆ. ಈ ವೈಚಾರಿಕತೆ ಕಾಪಾಲಿಕರಲ್ಲಾಗಲಿ, ಕೌಳರಲ್ಲಾಗಲಿ ಕಾಣಿಸುವುದಿಲ್ಲ.

ವಚನ ಚಳವಳಿಯನ್ನು ಹೋಲುವಂತಹ ಭಕ್ತಿಪಂಥ ಜಗತ್ತಿನಲ್ಲಿಯೇ ಇಲ್ಲ. ಶರಣರ ಹೋರಾಟ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗಿರದೇ ಸಾಮಾಜಿಕವೂ ಆಗಿತ್ತು. ಅಸಮಾನತೆಯನ್ನು ಹೊಡೆದೋಡಿಸಲು ಶರಣರು ಚಳವಳಿ ಮಾಡಿದರು. ಅದು ಮುಂದೆ ದೊಡ್ಡ ಕ್ರಾಂತಿಯಾಗಿ ಕಾಣಿಸಿಕೊಂಡಿತು. ಧಾರ್ಮಿಕ ಕ್ಷೇತ್ರಕ್ಕೂ – ಕ್ರಾಂತಿಗೂ ಸಂಬಂಧವೇ ಇಲ್ಲ. ಇವೆರಡೂ ಪರಸ್ಪರ ವಿರುದ್ಧವಾದ ಕ್ಷೇತ್ರಗಳು. ಆದರೆ ಶರಣರು ಇವೆರಡನ್ನೂ ಕೂಡಿಸಿಕೊಂಡೇ ಹೋರಾಡಿದರು. ಆದುದರಿಂದ ಅವರದು ಸಮಾಜೋಧಾರ್ಮಿಕ ಚಳವಳಿ. ಇಂತಹ ಸಾಧ್ಯತೆಗಳನ್ನು ಭಾರತದ ಯಾವುದೇ ಭಕ್ತಿಪಂಥದಲ್ಲಿ ಕಾಣಲು ಸಾಧ್ಯವಿಲ್ಲ.

ಸಾಹಿತ್ಯ ಕ್ಷೇತ್ರದಲ್ಲಿಯೂ ಶರಣರು ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟರು. ಅದುವರೆಗೆ ಸಾಹಿತ್ಯ ಮಾತ್ರವಿತ್ತು. ಆದರೆ ಶರಣರು ಬಂದ ಮೇಲೆ ಅದು ಚಳವಳಿ ಸಾಹಿತ್ಯವಾಯಿತು. ಚಳವಳಿ ಮಾಡುತ್ತ, ಸಾಹಿತ್ಯ ಬರೆಯುತ್ತ, ಧಾರ್ಮಿಕ ಕ್ಷೇತ್ರದ ಮೂಲಕ ಸಾಮಾಜಿಕ ಬದಲಾವಣೆಗೆ ಕೈಹಾಕಿದ ಶರಣರದು ವಿಶಿಷ್ಟ ಚಳವಳಿ, ವಿಶಿಷ್ಟ ಧರ್ಮ, ವಿಶಿಷ್ಟ ಸಾಹಿತ್ಯ. ಈ ಸತ್ಯವನ್ನು ತಿಳಿದುಕೊಳ್ಳದೇ ಇತರ ಭಕ್ತಿಪಂಥಗಳ ಜೊತೆಗೆ, ಇತರ ಸಾಹಿತ್ಯದ ಜೊತೆಗೆ ಶರಣರನ್ನು ಹೋಲಿಸಿ ತುಲನೆ ಮಾಡುವುದು ಸರಿಯಾದ ಕ್ರಮವೆನಿಸಲಾರದು. ಎಲ್ಲ ಭಕ್ತಿ ಪಂಥಗಳಲ್ಲೂ ಕೆಲವು ಒಳ್ಳೆಯ ಮೌಲ್ಯಗಳಿರುತ್ತವೆ. ಹಾಗೆಂದಾಕ್ಷಣ ಅದು ವಚನ ಚಳವಳಿಯಾಗಲಾರದು. ಎಲ್ಲ ಸಾಹಿತಿಗಳಲ್ಲಿಯೂ ಕೆಲವು ಒಳ್ಳೆಯ ವಿಚಾರಗಳಿರುತ್ತವೆ. ಹಾಗೆಂದಾಕ್ಷಣ ಅದು ಶರಣ ಸಾಹಿತ್ಯವಾಗಲಾರದು. ಶರಣರ ಧರ್ಮದ ಗುರಿಯೇ ಬೇರೆಯಾಗಿದೆ. ಅವರ ಸಾಹಿತ್ಯ ರಚನೆಯ ಉದ್ದೇಶವೇ ಬೇರೆಯಾಗಿದೆ. ಈ ವಿಷಯಗಳಲ್ಲಿ ಶರಣರು ಯಾರೊಂದಿಗೂ ಹೋಲಿಕೆಯಾಗುವುದಿಲ್ಲ. ಅವರಿಗೆ ಅವರದೇ ಆದ ಸಾಮಾಜಿಕ ಸಿದ್ಧಾಂತಗಳಿವೆ, ಧಾರ್ಮಿಕ ವ್ಯಾಖ್ಯೆಗಳಿವೆ. ಅವುಗಳನ್ನು ಸರಿಯಾಗಿ ಆರ್ಥ ಮಾಡಿಕೊಂಡಾಗ ಅವರ ಭಕ್ತಿಪಂಥವು ಉಳಿದ ಭಕ್ತಿಪಂಥಗಳಿಗಿಂತ ಭಿನ್ನವಾಗಿಯೇ ಕಾಣುತ್ತದೆ.

ವಚನ ಚಳವಳಿಯೂ ಭಕ್ತಿ ಪಂಥವೇ ಆಗಿದೆ. ಆದರೆ ಅದು ಉಳಿದ ಭಕ್ತಿಪಂಥಗಳಂತಿಲ್ಲ. ಅವರ ಧಾರ್ಮಿಕ ಪರಿಕಲ್ಪನೆಗಳೇ ಬೇರೆಯಾಗಿವೆ. ದಯೆಯೇ ಅವರ ಧರ್ಮ. ಅಂತಃಕರಣವೇ ಆ ಧರ್ಮದ ತಾಯಿ ಬೇರಾಗಿದೆ. ಶರಣರ ಆರಾಧ್ಯ ದೇವರು ಶಿವನಲ್ಲ, ಹರನಲ್ಲ, ಪರಮೇಶ್ವರನಲ್ಲ. ಅವರಲ್ಲಿ ಶಿವನಿಗಿಂತ ಶಿವಶರಣನೇ ಅಧಿಕನಾಗಿ ಕಾಣಿಸಿಕೊಳ್ಳುತ್ತಾನೆ. ಶರಣರದು ಸಾಧನಾ ಮಾರ್ಗ, ಬಯಲು ತತ್ವವಾಗಿದೆ. ಶರಣರಲ್ಲಿ ದೇಹವೇ ದೇವಾಲ. ಶಿರವೇ ಹೊನ್ನ ಕಳಶ. ಸ್ಥಾವರಗಳಿಗೆ ಅಳಿವಿದೆ. ಅವರು ಸ್ಥಾವರ ನಿರಾಕರಿಸಿ ಚಲನಶೀಲತೆಯನ್ನು (ಜಂಗಮವನ್ನು) ಒಪ್ಪಿಕೊಂಡರು. ಹೀಗಾಗಿ ಶರಣರದು ಚಲನಶೀಲ ಧರ್ಮ. ಅಷ್ಟಾವರಣ – ಷಟ್‍ಸ್ಥಲ – ಪಂಚಾಚಾರಗಳ ಮೂಲಕ ಶರಣರು ಧಾರ್ಮಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದಾರೆ. ಭಕ್ತ ಶರಣನಾಗಲಿಕ್ಕೆ ಸಾಧನಾ ಮಾರ್ಗಗಳಾಗಿವೆ. ಈ ಸಾಧನಾ ಮಾರ್ಗಗಳು ಶೈವರಿಗಿಂತ, ನಾಥರಿಗಿಂತ ಭಿನ್ನವಾಗಿವೆ ಮತ್ತು ವೈಜ್ಞಾನಿಕವಾಗಿವೆ. ಶರಣರ ಸಾಮಾಜಿಕ ಸಿದ್ಧಾಂತಗಳು ಯಾವ ಧರ್ಮದಲ್ಲಿಯೂ ಕಾಣಿಸುವುದಿಲ್ಲ. ಕಾಯಕ – ದಾಸೋಹ – ಸಮಾನತೆಯ ಮೌಲ್ಯಗಳನ್ನು ಬೆಳೆಸಿದ ವಚನ ಚಳವಳಿ ಆ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದೆ. ಜಾತಿ – ವರ್ಗ- ವರ್ಣ – ಲಿಂಗ ಅಸಮಾನತೆಯನ್ನು ಹೊಡೆದೋಡಿಸಿದ ವಚನ ಚಳವಳಿ, ಈ ನಾಡು ಕಂಡ ಪ್ರಥಮ ಕ್ರಾಂತಿ.

Previous post ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ
Next post ಅಲ್ಲೀ ಸಾಹೇಬರು
ಅಲ್ಲೀ ಸಾಹೇಬರು

Related Posts

ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
Share:
Articles

ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು

January 8, 2023 ಮಲ್ಲಿಕಾರ್ಜುನ ಕಡಕೋಳ
ಅಣಜಿಗಿ ಗೌಡಪ್ಪ ಸಾಧು. ಈ ಹೆಸರು ಕಡಕೋಳ ಮಡಿವಾಳಪ್ಪನವರ ಚಾರಿತ್ರಿಕ ಬದುಕು ಮತ್ತು ಸಾಧನೆಗಳನ್ನು ಪರಿಚಯಿಸುವ ಸಂದರ್ಭದಲ್ಲಿ ಅತ್ಯಂತ ಮಹತ್ವದ ಹೆಸರು. ಹೇಗೆಂದರೆ ಬಸವಣ್ಣನವರು...
ತೊತ್ತುಗೆಲಸವ ಮಾಡು
Share:
Articles

ತೊತ್ತುಗೆಲಸವ ಮಾಡು

June 5, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಹೊತ್ತಾರೆ ಎದ್ದು, ಅಗ್ಘವಣಿ ಪತ್ರೆಯ ತಂದು, ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ. ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು? ಹೊತ್ತು ಹೋಗದ ಮುನ್ನ, ಮೃತ್ಯುವೊಯ್ಯದ ಮುನ್ನ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಕಾರವೋ… ನಕಾರವೋ…
ಸಕಾರವೋ… ನಕಾರವೋ…
July 5, 2019
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
June 14, 2024
ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…
April 29, 2018
ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್
September 14, 2024
ಹಾಯ್ಕು
ಹಾಯ್ಕು
September 6, 2023
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ಭವ ರಾಟಾಳ
ಭವ ರಾಟಾಳ
September 10, 2022
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
Copyright © 2026 Bayalu