Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸನಾತನ ಧರ್ಮ
Share:
Articles October 10, 2023 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಸನಾತನ ಧರ್ಮ

ಸನಾತನ ಧರ್ಮದ ಹೆಸರಿನಲ್ಲಿ ಇವತ್ತು ದೇಶದಲ್ಲೇ ಪರ ಮತ್ತು ವಿರೋಧವಾಗಿ ಮಾತಿನ ಹಾಗೂ ಬರಹದ ಸಮರ ನಡೆದಿದೆ. ತಮಿಳುನಾಡಿನ ಕ್ರೀಡಾಸಚಿವ ಉದಯನಿಧಿ ಸ್ಟಾಲಿನ್ ಅವರು “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು” ಎನ್ನುವ ಕರೆಕೊಟ್ಟಿದ್ದರು. ಸನಾತನ ಧರ್ಮ ಎಂದರೆ ಯಾವುದು? ಅದೇನು ಹಿಂದೂ ಧರ್ಮವೇ? ವೈದಿಕ ಧರ್ಮವೇ? ಪರಂಪರೆಯಿಂದ ಬಂದ ಇನ್ನಾವುದಾದರೂ ಧರ್ಮವೇ? ಸನಾತನ ಎನ್ನುವುದಕ್ಕೆ ಖಚಿತ ವ್ಯಾಖ್ಯಾನ ಕೊಡುವುದು ಕಷ್ಟ. ಧರ್ಮ ಯಾವುದೇ ಆಗಿದ್ದರೂ ಅದು ಚಲನಶೀಲವಾಗಿರಬೇಕೇ ಹೊರತು ನಿಂತ ನೀರಾಗಬಾರದು. ಧರ್ಮದಲ್ಲಿ ಜಾತೀಯತೆ, ಅಸಮಾನತೆ, ಮೌಢ್ಯ ಇತ್ಯಾದಿ ಅನಿಷ್ಟ ಅಂಶಗಳು ಇದ್ದರೆ ಅವುಗಳನ್ನು ನಿರ್ಮೂಲನೆ ಮಾಡಬೇಕೆನ್ನುವುದು ಮಾನವೀಯ ಗುಣವುಳ್ಳವರ ಅಭಿಪ್ರಾಯ. ಇಂಥ ಧರ್ಮದ ಬಗ್ಗೆ 12ನೆಯ ಶತಮಾನದಲ್ಲಿ ಬಸವಾದಿ ಶಿವಶರಣರೇ ಬಹುದೊಡ್ಡದಾಗಿ ಪ್ರತಿಭಟಿಸಿದ್ದು ಮತ್ತು ಹೋರಾಟ ನಡೆಸಿದ್ದು ಅವರ ವಚನಗಳಿಂದ ವೇದ್ಯವಾಗುವುದು. ಧರ್ಮ ದಯಾಮೂಲವಾಗಿರಬೇಕೇ ಹೊರತು ಭಯದ ಮೂಲವಾಗಿರಬಾರದು. ಹಾಗಾಗಿ ಬಸವಣ್ಣನವರು ಹೇಳಿದ್ದು-

ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.

ಸನಾತನ ಎನ್ನುವ ಧರ್ಮದಲ್ಲಿನ ಅನೇಕ ಆಚಾರ-ವಿಚಾರಗಳು ಭಯ ಮತ್ತು ಅಸಮಾನತೆಗೆ ಕಾರಣವಾಗುತ್ತವೆ. ಅಂಥವುಗಳನ್ನು ವಿರೋಧಿಸಬೇಕಾದ್ದು ಸ್ವಾಗತಾರ್ಹ. ಧರ್ಮ ಅವರವರ ಸ್ವಾತಂತ್ರ್ಯಕ್ಕೆ ಬಿಟ್ಟದ್ದು. ಯಾರು ಯಾವ ಧರ್ಮವನ್ನಾದರೂ ಸ್ವೀಕರಿಸಬಹುದು ಇಲ್ಲವೇ ಧರ್ಮದ ಹಂಗೇ ಬೇಡವೆಂದು ನಿರಾಕರಿಸಬಹುದು. ಏಕೆಂದರೆ ನಮ್ಮಲ್ಲಿ ಆಸ್ತಿಕರಿರುವಂತೆ ನಾಸ್ತಿಕರೂ ಇದ್ದಾರೆ. ಆಸ್ತಿಕರು ಎಂದರೆ ಧರ್ಮ, ದೇವರನ್ನು ನಂಬಿದವರು. ನಾಸ್ತಿಕರು ಎಂದರೆ ದೇವರು, ಧರ್ಮದ ಗೊಡವೆ ಇಲ್ಲದೆ ಶುದ್ಧ ಜೀವನ ನಡೆಸಲು ಅವಕಾಶವಿದೆ ಎನ್ನುವವರು. ಕೆಲವರು ಧರ್ಮದ ಬಗ್ಗೆ ಉಪೇಕ್ಷೆ ತೋರಲು ಕಾರಣ ಆ ಧರ್ಮಗಳಲ್ಲಿರುವ ಚಲನಶೀಲವಲ್ಲದ ಅಂಶಗಳು. ಧರ್ಮ ಯಾವಾಗಲೂ ಚಲನಶೀಲವಾಗಿರಬೇಕು. ಆಗ ಅದು ತನ್ನ ಅಸ್ತಿತ್ವನ್ನು ಉಳಿಸಿಕೊಳ್ಳಲು ಸಾಧ್ಯ. ಧರ್ಮ ನಿಂತ ನೀರಾದರೆ ಅದು ಕೊಳೆತು ದುರ್ವಾಸನೆಗೀಡಾಗುವುದು. ಈ ನೆಲೆಯಲ್ಲಿ ಉದಯನಿಧಿ ಸ್ಟಾಲಿನ್ ಅವರು ಧರ್ಮದಲ್ಲಿರುವ ಅನ್ಯಾಯ, ಅನಿಷ್ಟಗಳನ್ನು ನಿವಾರಣೆ ಮಾಡಬೇಕು ಎನ್ನುವ ಅರ್ಥದಲ್ಲಿ ಹೇಳಿರಬಹುದು. ನಾವು ಹಿಂದೂ ಧರ್ಮೀಯರು ಎಂದು ಬಹುಜನರು ಹೇಳುತ್ತಾರೆ. ನಮ್ಮ ಅಭಿಪ್ರಾಯ ಇದಕ್ಕೆ ಹೊರತಾದದ್ದು. `ಹಿಂದೂ’ ಒಂದು ಧರ್ಮವೇ ಎಂದು ನಾವು ಪ್ರಶ್ನಿಸುತ್ತಲೇ ಬಂದಿದ್ದೇವೆ. ನಮ್ಮ ದೃಷ್ಟಿಯಲ್ಲಿ `ಹಿಂದೂ’ ಒಂದು ಪ್ರದೇಶವಾಚಿಕ ಶಬ್ದ. ಸಿಂಧೂ ನದಿಯ ಕೆಳಗಿರುವವರೆಲ್ಲ ಹಿಂದೂಗಳು. ಈ ಅರ್ಥದಲ್ಲಿ ಭಾರತದಲ್ಲಿ ವಾಸಿಸುವವರು ಯಾವುದೇ ಜಾತಿ ಧರ್ಮದವರಾಗಿದ್ದರೂ ಅವರು ಹಿಂದೂಗಳೇ. `ಹಿಂದೂ’ ಒಂದು ಧರ್ಮ ಎನ್ನುವುದಾದರೆ ಬಸವಪ್ರಣೀತ ಲಿಂಗಾಯತರು ಆ ಧರ್ಮದ ವ್ಯಾಪ್ತಿಗೆ ಬರುವುದಿಲ್ಲ. ಏಕೆಂದರೆ ಆ ಧರ್ಮದಲ್ಲಿ ಅನೇಕ ಅನಿಷ್ಟಗಳು ಮತ್ತು ಅಸಮಾನತೆಗಳು ಇವೆ. ಜಾತೀಯತೆ, ಬಹುದೇವತಾರಾಧನೆ, ಸ್ತ್ರೀ ಪುರುಷರಲ್ಲಿ ಅಂತರ, ಅಸ್ಪೃಶ್ಯತೆ, ಹೋಮಾದಿ ಕ್ರಿಯೆಗಳು, ಪ್ರಾಣಿಹತ್ಯೆ ಇಂಥ ಅನೇಕ ಅನಿಷ್ಟಗಳು ಹಿಂದೂ ಧರ್ಮದಲ್ಲಿ ತುಂಬಿ ತುಳುಕುತ್ತಿವೆ. ಹೀಗಿದ್ದಾಗ ಅದು ಒಂದು ಧರ್ಮ ಹೇಗಾಗುತ್ತದೆ? ಇಂಥ ಧರ್ಮದ ವಿರುದ್ಧವಾಗಿಯೇ ಬಸವಾದಿ ಶಿವಶರಣರು ಬಂಡೆದ್ದು `ಲಿಂಗಾಯತ’ ಧರ್ಮದ ಉದಯಕ್ಕೆ ಕಾರಣರಾದರು.
ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು

ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರ, ಬೀದಿಯ ದೂಳ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯಾ.
ಕೂಡಲಸಂಗಮದೇವಾ,
ವಂದನೆಯ ಮರೆದು ನಿಂದಿಸುತ್ತಿದ್ದರು.

ಇಲ್ಲಿ ಬಸವಣ್ಣನವರು ಕಿಚ್ಚು ದೈವವೆಂದು ಯಜ್ಞ-ಯಾಗಗಳನ್ನು ಮಾಡುವವರನ್ನು ನೇರವಾಗಿ ಲೇವಡಿ ಮಾಡಿದ್ದಾರೆ. ಇಲ್ಲೊಂದು ನಾಟಕೀಯ ಸನ್ನಿವೇಶವೇ ಇದೆ. ವೈದಿಕ ಪರಂಪರೆಯವರು ಅಗ್ನಿಯನ್ನು ದೇವರೆಂದು ಪೂಜಿಸುವರು. ಅಗ್ನಿದೇವ ತೃಪ್ತನಾದರೆ ಸಕಲ ಸನ್ಮಂಗಳವಾಗುವುದು ಎನ್ನುವ ನಂಬಿಕೆ. ಆ ನಂಬಿಕೆಯನ್ನು ತಮ್ಮಷ್ಟಕ್ಕೆ ತಾವು ಇಟ್ಟುಕೊಳ್ಳದೆ ಅದನ್ನೇ ಪ್ರಸಾರ ಮಾಡಿ ಜನರನ್ನು ಹೋಮಾದಿ ಕ್ರಿಯೆಗಳಿಗೆ ಪ್ರಚೋದಿಸುವರು. ಒಬ್ಬ ಪುರೋಹಿತ ಬೇರೆಯವರ ಮನೆಯಲ್ಲಿ ಅಗ್ನಿದೇವನ ತೃಪ್ತಿಗಾಗಿ ಹೋಮ, ಯಜ್ಞಾದಿ ಕ್ರಿಯೆಗಳನ್ನು ಮಾಡಿಸುತ್ತಿದ್ದಾನೆ. ಅಗ್ನಿಕುಂಡ ತಯಾರಿಸಿ ಬೆಂಕಿಯಲ್ಲಿ ಶ್ರೀಗಂಧ, ಬನ್ನಿ, ಬಿಲ್ವ ಹೀಗೆ ವಿವಿಧ ಕಟ್ಟಿಗೆಯ ಚೆಕ್ಕೆಗಳು, ತುಪ್ಪ, ದವಸ, ಪೀತಾಂಬರ ಹಾಕಿ ಮಂತ್ರ ಹೇಳುತ್ತ, ಹೇಳಿಸುತ್ತ ಪೂಜಿಸುವ ಕ್ರಿಯೆಗಳನ್ನು ಮಾಡಿಸುತ್ತ ಅಲ್ಲೊಂದು ಧಾರ್ಮಿಕ ವಾತಾವರಣವನ್ನೇ ಸೃಷ್ಟಿಸುವನು. ಆಗ ಒಬ್ಬ ಓಡಿಬಂದು ಪುರೋಹಿತರೇ ನಿಮ್ಮ ಮನೆ ಮೇಲೆ ಬೆಂಕಿ ಬಿದ್ದಿದೆ ಎನ್ನುವನು. ಆಗ ಯಜ್ಞ ಮಾಡಿಸುವ ಪುರೋಹಿತ ಅಗ್ನಿದೇವ ನನ್ನ ಭಕ್ತಿಗೆ ಮೆಚ್ಚಿ ನಮ್ಮ ಮನೆಯ ಮೇಲೇ ಪ್ರತ್ಯಕ್ಷವಾಗಿದ್ದಾನೆ ಎಂದು ಇನ್ನಷ್ಟು ಮಂತ್ರಗಳನ್ನು ಪಠಿಸಬೇಕಿತ್ತಲ್ಲವೇ? ಯಾರಾದರೂ ಹಾಗೆ ಮಾಡುವರೇನು? ಬದಲಾಗಿ ‘ಹಾಳಾದ ಬೆಂಕಿ ನಮ್ಮ ಮನೆಯ ಮೇಲೇ ಬೀಳಬೇಕಾಗಿತ್ತೇ?’ ಎಂದು ಅಲ್ಲಿಂದ ಎದ್ದು ಓಡುವನು. ತನ್ನ ಮನೆಗೆ ಬಿದ್ದ ಬೆಂಕಿಯನ್ನು ಆರಿಸಲು ಬೀದಿಯ ಧೂಳು, ಬಚ್ಚಲ ನೀರನ್ನು ಉಗ್ಗಿಸುವನು. ಅದೂ ತಾನು ಉಗ್ಗದೆ ಬೇರೆಯವರಿಂದ ಉಗ್ಗಿಸುವನು. ಅವನ ಈ ಎಡಬಿಡಂಗಿತನ ಕಂಡ ಬಸವಣ್ಣನವರು `ವಂದನೆಯ ಮರೆತು ನಿಂದಿಸುತ್ತಿದ್ದರು’ ಎನ್ನುತ್ತಾರೆ. ಇದೆಂಥ ವೈಪರಿತ್ಯ ನೋಡಿ. ಹೀಗೆ ಬಸವಣ್ಣನವರು ಸನಾತನ ವೈದಿಕ ಧರ್ಮದಲ್ಲಿದ್ದ ಅನಿಷ್ಟಗಳನ್ನು ವಿರೋಧಿಸುವರು. ಕೆಲವು ಸನಾತನಿಗಳು ದೇವರಿಗೆ ಕುರಿ, ಕೋಳಿ ಇತ್ಯಾದಿ ಬಲಿ ಕೊಡಿಸುವರು. ಇಂಥ ಒಂದು ಘಟನೆಯನ್ನು ಕಂಡ ಬಸವಣ್ಣನವರು ತುಂಬಾ ಕರುಣಾಮಯಿಗಳಾಗಿ ಬಲಿಯಾಗಲಿರುವ ಹೋತಕ್ಕೆ ಹೇಳುವುದು-

ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೆ ಅಳು, ಕಂಡಾ!
ವೇದವನೋದಿದವರ ಮುಂದೆ ಅಳು, ಕಂಡಾ!
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ!
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.

ನಿನಗೆ ಈ ಪರಿಸ್ಥಿತಿ ತಂದಿರುವ ವ್ಯಕ್ತಿಯ ಮುಂದೆ ಅಳು. ಆಗ ದೇವರು ಆತನಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾನೆ ಎನ್ನುವ ಮೂಲಕ ಬಲಿ ಕೊಡುವುದನ್ನು ಮೂದಲಿಸುತ್ತಾರೆ. ಬಸವಣ್ಣನವರು ಮಾತ್ರವಲ್ಲ; ಅವರ ಸಮಕಾಲೀನ ಶರಣರೆಲ್ಲರೂ ಸನಾತನ ಧರ್ಮದಲ್ಲಿದ್ದ ಅನಿಷ್ಟಗಳನ್ನು, ಅವೈಚಾರಿಕ ಘಟನೆಗಳನ್ನು ನೇರವಾಗಿ ಖಂಡಿಸುತ್ತಾರೆ. ಬಸವಾದಿ ಶರಣರಂತೆ ಇವತ್ತು ಖಂಡಿಸಿದರೆ ಅದು ಹೇಗೆ ಧರ್ಮದ್ರೋಹವಾಗುತ್ತದೆ? ದ್ರೋಹ ಎನ್ನುವ ಧರ್ಮಾಂಧರು `ಅಪ್ಪ ಹಾಕಿದ ಆಲದ ಮರ ಎಂದು ಅದಕ್ಕೇ ಉರುಲು ಹಾಕಿಕೊಳ್ಳುವ’ ಪರಂಪರೆಯನ್ನು ಮುಂದುವರಿಸಿರುವುದೇ ಇದಕ್ಕೆ ಕಾರಣ. ಅಪ್ಪ ಹಾಕಿದ ಆಲದ ಮರಕ್ಕೆ ಅವನೇ ಉರುಲು ಹಾಕಿಕೊಂಡಿದ್ದನೇ ಅಥವಾ ಯಾರಾದರೂ ಅವನಿಗೆ ಉರುಲು ಹಾಕಿದ್ದರೇ ಎಂದು ಯೋಚನೆಯನ್ನೇ ಮಾಡುವುದಿಲ್ಲ. ಇಂಥದರ ಬಗ್ಗೆ ಶರಣರು ಯೋಚನೆ ಮಾಡುವಂತೆ ಪ್ರೇರೇಪಿಸಿದರು. `ಶಿರ ಹೊನ್ನ ಕಳಸ’ ಎನ್ನುವುದನ್ನು ಅರ್ಥಮಾಡಿಕೊಂಡು ಬಂಗಾರದಂತಹ ಬುದ್ಧಿಯ ಸದ್ಬಳಕೆ ಮಾಡಿಕೊಂಡು ಯಾವುದು ಒಳಿತು, ಯಾವುದು ಕೆಡುಕು, ಯಾವುದು ಧರ್ಮ, ಯಾವುದು ಅಧರ್ಮ ಎಂದು ನೀರ್ಣಯಿಸಬೇಕಲ್ಲವೇ? ಆರಂಭದಲ್ಲೇ ಹೇಳಿದಂತೆ ಧರ್ಮದ ಮೂಲ ದಯೆ. ಮಾನವರ ಬಗ್ಗೆ ಮಾತ್ರವಲ್ಲ; ಸಕಲ ಜೀವಾತ್ಮರ ಬಗ್ಗೆ ದಯೆ ಇರಬೇಕು. ಆಗ ಧರ್ಮಕ್ಕೆ ಘನತೆ, ಗೌರವ ಬರುತ್ತದೆ. ಧರ್ಮದಲ್ಲಿರುವ ಅನಿಷ್ಟಗಳ ಬಗ್ಗೆ ಏನಾದರೂ ಹೇಳಿದರೆ ಯಾವುದೋ ಒಂದು ಅಂಶವನ್ನು ತೆಗೆದುಕೊಂಡು ಕೆಸರೆರೆಚುವ ಕಾರ್ಯವನ್ನು ಮಾಡಬಾರದು. ಧರ್ಮ ಯಾವುದೇ ಇದ್ದರೂ ಅಲ್ಲಿರುವ ಅವೈಚಾರಿಕ, ಅವೈಜ್ಞಾನಿಕ ಅನಿಷ್ಠಗಳನ್ನು ಕಿತ್ತೆಸೆಯಬೇಕು. ಇಸ್ಲಾಂ, ಕ್ರೈಸ್ತ, ಜೈನ, ಬೌದ್ಧ, ಲಿಂಗಾಯತ, ಸಿಖ್, ಯಹೂದಿ ಹೀಗೆ ಯಾವುದೇ ಧರ್ಮದಲ್ಲಿ ಮನುಕುಲಕ್ಕೆ ಮಾರಕವಾಗುವ ಅಂಶಗಳಿದ್ದರೆ ಅವುಗಳನ್ನು ಕಿತ್ತೆಸೆಯಲೇಬೇಕು. ಆಗ ಧರ್ಮ ಶುದ್ಧಿಯನ್ನು ಕಾಯ್ದುಕೊಂಡು ಹರಿಯುವ ನೀರಾಗುವುದು.

ಬಸವಾದಿ ಶರಣರು ವೇದ, ಆಗಮ, ಶಾಸ್ತ್ರ, ಪುರಾಣಗಳಲ್ಲಿನ ಅಂಶಗಳನ್ನೇ ವಿರೋಧಿಸಿದ್ದನ್ನು ಗಮನಿಸಬೇಕು. ಬಸವಣ್ಣನವರು `ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ’ ಎಂದಿದ್ದಾರೆ. ಮಹಾದೇವಿಯಕ್ಕನವರು- ‘ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ. ಇದ ಕುಟ್ಟಲೇಕೆ ಕುಸುಕಲೇಕೆ? ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ’ ಎಂದಿದ್ದಾರೆ. ಪ್ರಭುದೇವರು `ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ’ ಎಂದು ಲೇವಡಿ ಮಾಡಿದ್ದಾರೆ. `ಕಷ್ಟನ ಮನೆಯಲ್ಲಿ ಸೃಷ್ಟಿಗೀಶ್ವರನುಂಬಾಗ ಎತ್ತ ಹೋದವು ನಿಮ್ಮ ಶಾಸ್ತ್ರಂಗಳು’ ಎಂದು ಪ್ರಶ್ನಿಸುತ್ತಾರೆ ಅಂಬಿಗರ ಚೌಡಯ್ಯನವರು. `ವೇದ ಶಾಸ್ತ್ರ ಆಗಮ ಪುರಾಣಂಗಳಲ್ಲಿ ಶೃತಿ ಸ್ಮೃತಿಗಳಲ್ಲಿ ನುಡಿವುದು ಪುಸಿ’ ಎನ್ನುತ್ತಾರೆ ಅಮುಗೆ ರಾಯಮ್ಮ. ಆದಯ್ಯನವರು `ನಾಲ್ಕು ವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟು ಆಗಮ, ಮೂವತ್ತೆರಡು ಉಪನಿಷತ್ತುಗಳೆಲ್ಲವೂ ಪಂಚಾಕ್ಷರದ ಸ್ವರೂಪವನರಿಯದೆ ನಿಂದವು’ ಎನ್ನುವರು. ಇದಕ್ಕಿಂತ ಬಂಡಾಯ ಬೇಕೇ? ಇದೇ ಮಾತುಗಳನ್ನು ಇಂದು ಹೇಳಿದರೆ ಧರ್ಮದ್ರೋಹ, ದೇಶದ್ರೋಹ ಎನ್ನುವ ಪಟ್ಟಭದ್ರರು ಸಾಕಷ್ಟು ಜನರಿದ್ದಾರೆ. ಇದನ್ನೇ ರಾಜಕೀಯ ದಾಳವನ್ನಾಗಿಸಿಕೊಳ್ಳುವ ಜನಪ್ರತಿನಿಧಿಗಳೂ ಇದ್ದಾರೆ. ಇವರಿಗೆ ಧರ್ಮವೆಂದರೆ ಏನೆಂದು ಅರ್ಥವಾಗದೆ ತಾವೂ ದಾರಿ ತಪ್ಪಿ ಜನರನ್ನೂ ದಾರಿ ತಪ್ಪಿಸುತ್ತಿದ್ದಾರೆ. ಈ ನೆಲೆಯಲ್ಲಿ ಧರ್ಮಾಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. ಧರ್ಮದ ಕಟ್ಟೆಯ ಮೇಲೆ ಕೂತಿರುವವರು ನಿಜಧರ್ಮದ ಪರಿಚಯ ಪಡೆಯಬೇಕು. ರಾಜಕಾರಣಿಗಳು ಧರ್ಮದ ಪರಿಪಾಲನೆ ಮಾಡಬೇಕೇ ಹೊರತು ತಾವೇ ಅದರ ವಾರಸುದಾರರಂತೆ ವರ್ತಿಸಬಾರದು. ಧರ್ಮ ಮತ್ತು ರಾಜಧರ್ಮ ಒಂದೇ ಅಲ್ಲ. ಧರ್ಮಬದ್ಧ, ಶುದ್ಧ ಆಡಳಿತವನ್ನು ಕೊಡುವುದು ರಾಜಕಾರಣಿಗಳ ರಾಜಧರ್ಮವಾಗಬೇಕು. ಆದರೆ ಅವರು ಧರ್ಮವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗುವುದು ಖಂಡನಾರ್ಹ.

ಸನಾತನ ಧರ್ಮವನ್ನು ವಿರೋಧಿಸುವ ಮೂಲಕ ಹಿಂದೂ ಧರ್ಮಕ್ಕೆ ಕಳಂಕ ತಂದಿದ್ದಾರೆ ಎಂದು ರಾಜಕಾರಣಿಗಳೇ ಬೊಬ್ಬೆ ಹಾಕುವರು. ಮೇಲೆ ಹೇಳಿದಂತೆ ಅವರು ಸತ್ಯ, ನ್ಯಾಯ, ನೀತಿಯ ತಳಹದಿಯ ಮೇಲೆ ಆಡಳಿತ ಮಾಡಬೇಕೇ ಹೊರತು ಧರ್ಮದಲ್ಲಿ ಮೂಗು ತೂರಿಸಬಾರದು. ಇವತ್ತು ನಿಜಕ್ಕೂ ಧರ್ಮದ ಶುದ್ಧೀಕರಣವಾಗಬೇಕಾಗಿದೆ. ಅದನ್ನು ಬಿಟ್ಟು ಮತ್ತೆ ಮೌಢ್ಯಕ್ಕೆ ತುಪ್ಪ ಸುರಿಯಬಾರದು. ರಾಮಚಂದ್ರ ಪರಮಹಂಸ ಆಚಾರ್ಯ ಎನ್ನುವವರು ಉದಯನಿಧಿಯ ತಲೆಗೆ ಹತ್ತು ಕೋಟಿ ಹಣ ಕೊಡುವೆ ಎಂದು ಆದೇಶ ಹೊರಡಿಸಿದ್ದಾರೆ. ಇಂಥ ಮತಾಂಧರನ್ನು ಮೊದಲು ಬಂಧಿಸಬೇಕು. ತಮ್ಮ ಹೇಳಿಕೆಯನ್ನು ಹಿಂಪಡೆಯಲು ಒತ್ತಾಯಿಸಬೇಕು. ಅವರ ಮೇಲೆ ದಾವೆ ಹೂಡಬೇಕು. ಆದರೆ ಇದುವರೆಗೂ ಇದನ್ನು ಮಾಡುವ ಸಾಹಸಕ್ಕೆ ಯಾರೂ ಹೋಗಿಲ್ಲ. ಹಾಗಿದ್ದರೆ ಧರ್ಮದ ವಿರುದ್ಧವಾಗಿ ಯಾರೂ ಮಾತನಾಡಬಾರದೇ? ಇವರು ಯಾರಿಗೆ ಬೆಂಕಿ ಹಾಕುತ್ತಿದ್ದಾರೆ? ಸಂವಿಧಾನ ನೀಡಿರುವ ವಾಕ್‍ಸ್ವಾತಂತ್ರ್ಯಕ್ಕೇ ಮಸಿ ಬಳಿಯುವ ಧರ್ಮಾಂಧರಿಗೆ ಏನು ಶಿಕ್ಷೆ? ಯಾರು ಯಾವ ಧರ್ಮವನ್ನಾದರೂ ಪರಿಪಾಲಿಸಲು ಸಂವಿಧಾನ ಅವಕಾಶ ನೀಡಿದೆ. ಉದಯನಿಧಿಯ ಹೇಳಿಕೆಯನ್ನು ಸಕಾರಾತ್ಮಕವಾಗಿಯೇ ನಿರಾಕರಿಸಿ ಕಾನೂನುಬದ್ಧವಾಗಿ ಅವರ ಮೇಲೆ ಕ್ರಮ ಜರುಗಿಸಬಹುದು. ಅದನ್ನು ಬಿಟ್ಟು ಹತ್ತು ಕೋಟಿ ಘೋಷಣೆ ಮಾಡುವುದು ಘೋಷಿಸಿದ ವ್ಯಕ್ತಿ ತನಗೆ ತಾನೇ ಅವಮಾನ ಮಾಡಿಕೊಂಡಂತೆ. ಆತ ತನ್ನ ಅರ್ಹತೆಯನ್ನು ತಾನೇ ಕಳೆದುಕೊಂಡಂತೆ. 12ನೆಯ ಶತಮಾನದಲ್ಲಿ ಧರ್ಮದಲ್ಲಿದ್ದ ಅನೇಕ ಅನಿಷ್ಟಗಳ ವಿರುದ್ಧ ಶರಣರು ಧ್ವನಿಯೆತ್ತಿರುವಾಗ ಇಂದು ಧ್ವನಿಯೆತ್ತಬಾರದು ಎನ್ನುವುದು ಯಾವ ಧರ್ಮ? ಅಂದು ಬಸವಣ್ಣನವರು ಮಾಡಿದ ಪ್ರಗತಿಪರ ಧಾರ್ಮಿಕ ಚಿಂತನೆಗಳು ಹಿಂದಾಗಿ ಇಂದು ಬಸವಣ್ಣನವರ ಹೆಸರು ಮಾತ್ರ ಮುಂದೆ ಬಂದಿದೆ. ಬಸವಣ್ಣನವರ `ಕಳಬೇಡ, ಕೊಲಬೇಡ’ ಎನ್ನುವ ಒಂದೇ ವಚನ ಇಡೀ ಜಗತ್ತಿನ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳ ಅಭ್ಯುದಯಕ್ಕೆ ನಾಂದಿಯಾಗುವಂತಹುದು. ದೇವರನ್ನು ಒಲಿಸಲು ಯಾರೂ ಮಠ-ಮಂದಿರ, ಗುಡಿ-ಗೋಪುರ, ಚರ್ಚು-ಮಸೀದಿ ಮುಂತಾದ ಕಡೆ ಹೋಗಬೇಕಾಗಿಲ್ಲ. ಅಂತರಂಗ, ಬಹಿರಂಗ ಶುದ್ಧವಾಗಿಟ್ಟುಕೊಂಡರೆ ಸಾಕು. ಆದರೆ ಇವತ್ತು ಅಂತರಂಗ, ಬಹಿರಂಗ ಕೊಳಕಾಗಿರುವುದರಿಂದಲೇ ದೇವಮಂದಿರಗಳು ವಿಜೃಂಭಿಸುವಂತಾಗಿರುವುದು. ಯಾವ ಸ್ಥಾವರ ಜಡ ದೇವರೂ ವರವನ್ನಾಗಲಿ, ಶಾಪವನ್ನಾಗಲಿ ಕೊಟ್ಟಿಲ್ಲ. ಹಾಗೆ ಕೊಡುವವ ಅಲ್ಲಿನ ಜಾಣ ಪೂಜಾರಿ. ಇದನ್ನು ಜನರು ಅರ್ಥಮಾಡಿಕೊಳ್ಳುತ್ತಿಲ್ಲ.

ಒಂದರ್ಥದಲ್ಲಿ ಪೂಜಾರಿ ಪುರೋಹಿತರಿಗೆ, ಸಂಪ್ರದಾಯಗಳಿಗೆ, ಮೂಢಾಚರಣೆಗಳಿಗೆ, ಪಟ್ಟಭದ್ರರಿಗೆ ಜನರು ಹಿಪ್ನಟೈಜ್ ಆಗಿದ್ದಾರೆ, ಆಗುತ್ತಿದ್ದಾರೆ. ಅದರಲ್ಲೂ ಅಕ್ಷರಸ್ಥರ ಪಾಲೇ ಹೆಚ್ಚು. ಅವರೇ ಧರ್ಮದ ಹೆಸರಿನಲ್ಲಿ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಅಕ್ಷರಸ್ಥರು ಅದರಿಂದ ಮೊದಲು ಹೊರಬರಬೇಕು. ಹೀಗೆ ಹೊರಬರುವ ಕಾರ್ಯ ಮನೆ, ಶಾಲೆ, ಸಮಾಜದಲ್ಲಿ ನಡೆಯಬೇಕು. ಇವತ್ತು ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣವೇ ಇಲ್ಲ. ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ನೈತಿಕ ಶಿಕ್ಷಣ ನೀಡಬೇಕೆಂಬ ಒಲವಿದ್ದರೆ ವಚನ ಸಾಹಿತ್ಯದ ಪ್ರಸಾರ, ಪ್ರಚಾರ ನಡೆಯಬೇಕು. ವಚನಗಳಲ್ಲಿ ಅರಿವನ್ನು ಹೆಚ್ಚಿಸುವ ಸತ್ವಯುತ ನುಡಿಗಳಿವೆಯೇ ಹೊರತು ಅಜ್ಞಾನಿಗಳನ್ನಾಗಿಸುವ ವಿಚಾರಗಳಿಲ್ಲ. ವಚನಗಳು ಮನದ ಕಲುಷಿತ ಭಾವನೆಗಳನ್ನು ಕಳೆಯುವ ದಿವ್ಯೌಷಧಿ. ಇಂಥ ಔಷಧಿಯನ್ನು ಮನೆಯಲ್ಲಿ ತಂದೆ ತಾಯಿಗಳು ಮತ್ತು ಪ್ರಾಥಮಿಕ ಶಾಲಾ ಹಂತದಲ್ಲಿ ಶಿಕ್ಷಕರು ನೀಡಬೇಕು. ಮಠದಲ್ಲಿ ಸ್ವಾಮಿಗಳು ಮಾಡಬೇಕು. ಇದನ್ನು ಬಿಟ್ಟು ಆ ದೇವರಿಗೆ ಹೋಗು, ಈ ದೇವರಿಗೆ ನಡೆದುಕೊ ಎಂದೆಲ್ಲ ಹೇಳುವರು. ಯಾಕೆ ಹೋಗಬೇಕು, ಹೋಗದಿದ್ದರೆ ಏನಾಗುತ್ತದೆ ಎಂದು ಹೇಳುವುದಿಲ್ಲ. ಮೈಸೂರಲ್ಲಿ ಬನ್ನಿಮಂಟಪ ರಸ್ತೆಯಲ್ಲಿ ಒಂದು ಗಣಪತಿ ದೇವಾಲಯವಿತ್ತು. ನಾವು ಮೈಸೂರಲ್ಲಿ ಎಂ ಎ ಓದುವಾಗ ಪರೀಕ್ಷೆ ಸಮೀಪಿಸಿದಾಗ ಹಲವು ವಿದ್ಯಾರ್ಥಿಗಳು ಅಲ್ಲಿಗೆ ಸಾಲಿಡುತ್ತಿದ್ದರು. ಈಗೇಕೆ ಇಲ್ಲಿಗೆ ಬಂದು ನಮಸ್ಕಾರ ಮಾಡುತ್ತೀರಿ ಎಂದರೆ ಪರೀಕ್ಷೆಯಲ್ಲಿ ಪಾಸು ಮಾಡುವಂತೆ ಪ್ರಾರ್ಥಿಸಿಕೊಳ್ಳಲು ಎನ್ನುತ್ತಿದ್ದರು. ಈ ಗಣಪತಿಯೇ ನಿಮ್ಮನ್ನು ಪಾಸು ಮಾಡಿಸುವುದಾದರೆ ಕಾಲೇಜಿಗೆ ಏಕೆ ಹೋಗಬೇಕು, ಕಷ್ಟಪಟ್ಟು ಓದುವ ಅಗತ್ಯವೇನಿದೆ ಎಂದು ಕೇಳಿದರೆ ಅವರಲ್ಲಿ ಸ್ಪಷ್ಟವಾದ ಉತ್ತರವಿರಲಿಲ್ಲ. ಈ ನೆಲೆಯಲ್ಲಿ ಜಾಗೃತಿಗೊಳಿಸುವ ಕಾರ್ಯ ಎಲ್ಲೆಡೆ ನಡೆಯಬೇಕಿದೆ.

ಇವತ್ತು ಸಾಮಾಜಿಕ ಪರಿಸ್ಥಿತಿ ತುಂಬಾ ಕಲುಷಿತಗೊಂಡಿದೆ. ಇಂಥ ಸಂದರ್ಭದಲ್ಲಿ ನೈತಿಕ ಪಾಠ ಹೇಳಬಹುದೇ ಹೊರತು ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ನೈತಿಕ ಪ್ರಜ್ಞೆಯನ್ನು ಬೆಳೆಸಿ ಅನುಷ್ಠಾನದಲ್ಲಿ ತರುವುದು ಹೇಗೆ ಎನ್ನುವ ಪ್ರಶ್ನೆ ಹಲವರದು. ಹೇಳುವುದು ಮಾತ್ರವಲ್ಲ; ಆಚರಣೆಯೂ ಬೇಕು. ಮನೆಯಲ್ಲಿ ತಂದೆ-ತಾಯಿ, ಶಾಲೆಯಲ್ಲಿ ಶಿಕ್ಷಕರು, ಸಮಾಜದಲ್ಲಿ ರಾಜಕೀಯ, ಧಾರ್ಮಿಕ ಪ್ರತಿನಿಧಿಗಳು ತಾವು ನೈತಿಕತೆಯ ಅರಿವುಳ್ಳವರಾಗಿ ಅದನ್ನು ಅನುಷ್ಠಾನದಲ್ಲಿ ತರಬೇಕು. ಇವತ್ತು ಮಗುವಿಗೆ ನೈತಿಕ ಪಾಠ ಹೇಳಲು ತಾಯಿಗೆ ಬಿಡುವಿಲ್ಲ. ಹಿಂದೆ ತಾಯಿ ಮಗುವಿಗೆ ಎದೆಹಾಲು ಕುಡಿಸುವಾಗ `ಆಚಾರಕ್ಕರಸಾಗು, ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾಮಣಿಯಾಗು, ಜಗಕೆ ಜ್ಯೋತಿಯಾಗು ನನಕಂದ’ ಎಂದು ಉಪದೇಶ ಮಾಡುತ್ತಿದ್ದಳಂತೆ. ಹೀಗೆ ಉಪದೇಶ ಮಾಡುವವರು ಇಂದು ತುಂಬಾ ವಿರಳ. ಮೂರ್ಕಾಲದ ಬುದ್ಧಿ ನೂರ್ಕಾಲದವರೆಗೆ ಎನ್ನುವಂತೆ ಬಾಲ್ಯದಲ್ಲಿ ತಂದೆ ತಾಯಿ ಕೊಡುವ ಸಂಸ್ಕಾರ ಮಗುವಿನ ಮನದ ಮೇಲೆ ಸತ್ಪರಿಣಾಮ ಬೀರುವುದು. ಮುಂದೆ ಶಾಲಾ-ಕಾಲೇಜುಗಳಲ್ಲಿ ಅದಕ್ಕೆ ಪೂರಕ ಅಂಶಗಳನ್ನೇ ಒದಗಿಸಿದರೆ ಮಗುವಾಗಲಿ, ಪ್ರಜೆಯಾಗಲಿ ದಾರಿ ತಪ್ಪುವುದು ಅಸಾಧ್ಯ. ಇದಕ್ಕೆ ಬಹಳ ವೇಳೆ ಬೇಕು ಎಂದೇನಿಲ್ಲ. ತತ್ವಶಾಸ್ತ್ರದಲ್ಲಿ `ಡಾರ್ಕ್‍ನೈಟ್ ಆಫ್ ದಿ ಸೋಲ್’ ಎನ್ನುವ ಮಾತಿದೆ. ಅದನ್ನು `ಸಾಧಕನ ಕಾಳರಾತ್ರಿ’ ಎನ್ನುವರು. ಯಾವುದೋ ಒಂದು ಕ್ಷಣ ಒಬ್ಬ ವ್ಯಕ್ತಿಗೆ ಮಿಂಚು ಹೊಡೆದಂತಾಗುವುದು. ಹಾಗೆ ಮಿಂಚು ಹೊಡೆಯುವ ಮುನ್ನ ಇದ್ದ ವ್ಯಕ್ತಿಯೇ ಬೇರೆ, ಮಿಂಚು ಹೊಡೆದ ನಂತರದ ವ್ಯಕ್ತಿಯೇ ಬೇರೆ. ಅವರನ್ನೇ ಬಹುತೇಕ ಜನರು ಅವಧೂತರು ಎನ್ನುವರು. ಪ್ರತಿಯೊಬ್ಬರೂ ಮನಸ್ಸು ಮಾಡಿದರೆ ಅವಧೂತರಾಗದಿದ್ದರೂ ತಮ್ಮ ಬದುಕಿನಲ್ಲಿ ಸಾಕಷ್ಟು ಬದಲಾವಣೆ ತಂದುಕೊಳ್ಳಬಹುದು. ಈ ಕಾರ್ಯದಲ್ಲಿ ನಮ್ಮ ಮಠಾಧೀಶರ ಜವಾಬ್ದಾರಿ ಸಹ ಗುರುತರವಾಗಿದೆ.

ಇಂದು ಜಾತಿಗೊಂದು ಮಠ, ಜಾತಿಗೊಬ್ಬ ಸ್ವಾಮಿಯಲ್ಲದೆ; ಆಯಾ ಜಾತಿಯಲ್ಲೇ ಬೇರೆ ಬೇರೆ ಮಠ ಮತ್ತು ಸ್ವಾಮಿಗಳು ಇರುವುದರಿಂದ ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬಲ್ಲರೇ ಎನ್ನುವ ಪ್ರಶ್ನೆ ಹಲವರದು. ನಮ್ಮೊಂದಿಗೆ ವಿಶ್ವಾಸವುಳ್ಳ ಕೆಲವು ಸ್ವಾಮಿಗಳಿಗೆ, “ತಾವು ಒಂದೆಡೆ ಬಸವತತ್ವ ಹೇಳುತ್ತೀರಿ. ಇನ್ನೊಂದಡೆ ಗುಡಿ ಗುಂಡಾರಗಳನ್ನು ಪೋಷಿಸುತ್ತೀರಿ. ಒಂದೆಡೆ ಜಾತ್ಯತೀತರು ಎನ್ನುತ್ತೀರಿ. ಮತ್ತೊಂದಡೆ ಜಾತಿಯ ಸಂಘಟನೆಗೆ ಒತ್ತು ಕೊಡುತ್ತಿದ್ದೀರಿ. ಸಂದರ್ಭಾನುಸಾರ ಹೋಮಾದಿ ಕ್ರಿಯೆಗಳಿಗೆ ಪ್ರೋತ್ಸಾಹಿಸುತ್ತೀರಿ. ರಾಜಕಾರಣಿಗಳ ಹಿಂದೆ ಮುಂದೆ ಸುತ್ತುವ ಕಾರ್ಯ ಬೇರೆ ನಡೆಯುತ್ತಿದೆ. ಹೀಗಾದರೆ ಬಸವತತ್ವಕ್ಕೂ ವ್ಯಕ್ತಿಗತ ಬದುಕಿಗೂ ಅಂತರ ಇದೆ ಎಂದು ಅನಿಸುವುದಿಲ್ಲವೇ?” ಎಂದು ಪ್ರಶ್ನೆ ಮಾಡುತ್ತಿರುತ್ತೇವೆ. ಬಸವತತ್ವ ಹೇಳುವವರು ಜಾತ್ಯತೀತರಾಗಿರಬೇಕು. ಬಹುದೇವತಾರಾಧನೆ ಬಿಟ್ಟು ಇಷ್ಟಲಿಂಗ ಧರಿಸಿ ಅದನ್ನೇ ಪೂಜಿಸಬೇಕು. ಸರ್ವಸಮಾನತೆ ಎತ್ತಿಹಿಡಿಯಬೇಕು. ಸಕಲ ಜೀವಾತ್ಮರಿಗೆ ಒಳಿತು ಬಯಸಬೇಕು. ಅದನ್ನು ಕೊಡಿ, ಇದನ್ನು ಕೊಡಿ ಎಂದು ರಾಜಕಾರಣಿಗಳ ಮನೆಬಾಗಿಲಿಗೆ ಹೋಗದೆ ಇಂಥ ಜನಪರ ಯೋಜನೆಗೆ ಅನುದಾನ ಕೊಡಿ ಎಂದು ಮನವಿ ಸಲ್ಲಿಸಬೇಕು. ಬದಲಾಗಿ ಮಂತ್ರಿಗಳ ಮನೆಬಾಗಿಲಿಗೆ ಇಲ್ಲವೇ ವಿಧಾನಸೌಧಕ್ಕೆ ಹೋಗುವುದು ಬಸವತತ್ವಕ್ಕೆ ಮತ್ತು ಕಾವಿಗೆ ಅವಮಾನ ಮಾಡಿದಂತೆ. ಇವರು ರಾಜಕಾರಣಿಗಳ ಬಳಿ ಹೋದಾಗ ಈ ಸ್ವಾಮಿಗಳ ಮತ್ತು ಅವರ ಭಕ್ತರ ಬೆಂಬಲ ನಮಗೆ ಬೇಕು ಎಂದು ಅವರು ಸಹ ಲಕ್ಷ, ಕೋಟಿ ಹಣ ಮಂಜೂರು ಮಾಡಿ ಕೈ ತೊಳೆದುಕೊಳ್ಳುವರು. ಆದರೆ ಇವತ್ತಿನ ಮತದಾರರು ಮಠಾಧೀಶರ ಮಾತಿಗೆ ಮನ್ನಣೆ ನೀಡುತ್ತಾರೆಂದು ಹೇಳಲಾಗದು. ಅವರು ಸಹ ರಾಜಕೀಯ ಚಾಣಾಕ್ಷತನ ಬೆಳೆಸಿಕೊಂಡು ಸಮಯಕ್ಕೆ ತಕ್ಕಂತೆ ವರ್ತಿಸುವರು. ಇದನ್ನು ರಾಜಕಾರಣಿಗಳು ಮತ್ತು ಸ್ವಾಮಿಗಳು ಅರ್ಥಮಾಡಿಕೊಳ್ಳಬೇಕಿದೆ.

ರಾಮರಾಜ್ಯ ಆಗಬೇಕೆನ್ನುವ ಭಾವನೆಯಿಂದಲೇ ಗಾಂಧೀಜಿ ಶ್ರೀರಾಮನ ನೆನಪು ಮಾಡಿಕೊಳ್ಳುತ್ತಿದ್ದರು. ಆದರೆ ಇವತ್ತು ನಮ್ಮ ರಾಜಕಾರಣಿಗಳು ಮುಂದೆ ತಂದಿರುವ ಶ್ರೀರಾಮ ಮತ್ತು ಗಾಂಧೀಜಿಯವರ ಶ್ರೀರಾಮ ಒಬ್ಬರೇ ಅಲ್ಲ. ರಾಮರಾಜ್ಯ ಎಂದರೆ ಸುಖಿ ರಾಜ್ಯ, ಸರ್ವೋದಯ ರಾಜ್ಯ, ಕಲ್ಯಾಣ ರಾಜ್ಯ. ಶ್ರೀರಾಮ ಆದರ್ಶದ ಪ್ರತೀಕ. ಆತ ವೈದಿಕ ಪರಂಪರೆಯ ರಾಮ ಖಂಡಿತ ಅಲ್ಲ. ಇಂದು ರಾಮನನ್ನು ಒಂದು ಪಕ್ಷದ ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಧರ್ಮ ಮತ್ತು ವೈಚಾರಿಕತೆಯ ಭ್ರಷ್ಟತೆಗೆ ಕಾರಣ ಶ್ರೀರಾಮ ರಾಜಕೀಯ ದಾಳವಾಗಿ ದುರ್ಬಳಕೆಯಾಗುತ್ತಿರುವುದು. `ಕೊಲುವನೇ ಮಾದಿಗ, ಹೊಲಸು ತಿನ್ನುವನೇ ಹೊಲೆಯ’ ಎಂದ ಬಸವಣ್ಣನವರ ವಚನದ ಅರ್ಥವನ್ನೇ ಜಾತಿಯ ರೂಪಕವಾಗಿ ಬಳಸಿಕೊಳ್ಳುವ ಜಾಣರೂ ಇದ್ದಾರೆ. ಇಲ್ಲಿ ಮಾದಿಗ, ಹೊಲೆಯ ಎನ್ನುವುದು ಜಾತಿಯ ಸಂಕೇತವಲ್ಲ. ಹೊಲಸು ಎಂದರೆ ಮಾಂಸ ಎಂದು ಭಾವಿಸಬೇಕಿಲ್ಲ. ದೈಹಿಕವಾಗಿ ಅಥವಾ ಮಾನಸಿಕವಾಗಿ ಜೀವಹಿಂಸೆ ಮಾಡುವವ ಮಾದಿಗ. ಭ್ರಷ್ಟನಾಗಿ ಲಂಚ ಸ್ವೀಕರಿಸುವವ ಹೊಲೆಯ. ಹಾಗಾಗಿ ವಚನಗಳನ್ನು ಎಚ್ಚರದಿಂದ ಅರ್ಥೈಸಿಕೊಳ್ಳಬೇಕು. ಬಸವಣ್ಣನವರು ತಮ್ಮ ಸಾಮಾಜಿಕ, ಧಾರ್ಮಿಕ ಸುಧಾರಣೆಗೆ ಆಯ್ಕೆ ಮಾಡಿಕೊಂಡದ್ದು ಅತ್ಯಂತ ತಳವರ್ಗದವರನ್ನು. ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಕಸ ಗುಡಿಸುವ ಸತ್ಯಕ್ಕ, ಸೂಳೆ ಸಂಕವ್ವೆ, ಹಡಪದ ಅಪ್ಪಣ್ಣ ಇಂಥವರನ್ನೇ ಆಯ್ಕೆ ಮಾಡಿಕೊಂಡರು. ಇವರೆಲ್ಲ ಅತ್ಯಂತ ತಳಸಮುದಾಯದವರು, ಅಕ್ಷರ ಜ್ಞಾನದಿಂದ ವಂಚಿತರಾದವರು. ಸಾಮಾಜಿಕವಾಗಿ ಯಾವ ಸ್ಥಾನ-ಮಾನಗಳೂ ಇರಲಿಲ್ಲ. ಅವರು ಬಹುತೇಕ ಮಾಂಸಾಹಾರ ಮತ್ತು ಮದ್ಯ ಸೇವನೆ ಮಾಡುವವರು. ಬಸವಣ್ಣನವರು ಮದ್ಯ, ಮಾಂಸ ವಿರೋಧ ಮಾಡಿದ್ದರೆ ಅವರಾರೂ ಅನುಭವ ಮಂಟಪದ ಮೆಟ್ಟಿಲನ್ನು ಸಹ ತುಳಿಯುತ್ತಿರಲಿಲ್ಲ. ಅವರು ಕುಡುಕರು, ಮಾಂಸಾಹಾರಿಗಳು ಎಂದು ಬಸವಣ್ಣನವರು ದೂರಿ ದೂರ ತಳ್ಳಲಿಲ್ಲ. ಬದಲಾಗಿ ತಮ್ಮ ಸಮೀಪ ಕರೆದುಕೊಂಡರು. ಪ್ರೀತಿಯಿಂದ ಮಾತನಾಡಿಸಿದರು. ಕೊಲ್ಲುವ, ಹೊಲಸು ತಿನ್ನುವ ಕಾರ್ಯ ಮಾಡುವವ ಹೊಲೆಯ, ಮಾದಿಗ ಎಂದು ಮನವರಿಕೆ ಮಾಡಿಕೊಟ್ಟು ಅವರನ್ನು ಪರಿವರ್ತನೆ ಮಾಡಿದರು. ಸಕಲ ಜೀವಾತ್ಮರಿಗೆ ಒಳಿತು ಬಯಸ ಬೇಕೆಂದರೆ ಜೀವಂತ ಪ್ರಾಣಿಗಳನ್ನು ಕೊಂದು ತಿನ್ನುವ ಅಗತ್ಯವಿದೆಯೇ ಎನ್ನುವ ಪ್ರಶ್ನೆಯ ಮೂಲಕವೇ ಅವರನ್ನು ಪರಿವರ್ತನೆ ಮಾಡಿದರು.

‘ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ’ ಎನ್ನುವಂತೆ ಎಲ್ಲ ಕೇಡುಗಳು ದೂರವಾಗಬೇಕಾದರೆ ವ್ಯಕ್ತಿ ಜ್ಞಾನಿಯಾಗಿ ಧರ್ಮದ ಅಂತರಾಳವನ್ನು ಭೇದಿಸಬೇಕು. ಅವರು ಹೇಳಿದ್ದಾರೆ, ಇವರು ಹೇಳಿದ್ದಾರೆ ಎಂದು ಹೇಳಿದ್ದನ್ನೆಲ್ಲ ಸ್ವೀಕಾರ ಮಾಡಬೇಕಿಲ್ಲ. ಬದಲಾಗಿ ತಾಳ್ಮೆ, ವಿವೇಕದಿಂದ ನಡೆದುಕೊಳ್ಳುವ ಸ್ವಭಾವ ಬೆಳೆಸಿಕೊಂಡರೆ ಧಾರ್ಮಿಕವಾಗಿ ಯಾರು ಏನೇ ಹೇಳಿಕೆ ಕೊಟ್ಟರೂ ಅದನ್ನು ವಿಮರ್ಶೆ ಮಾಡಲು ಸಾಧ್ಯವಾಗುವುದು. ಎಚ್ಚರದಿಂದ ವರ್ತಿಸಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ಧರ್ಮಕ್ಕೆ ಹೊಳಪು ನೀಡಬಹುದು.

ವೇದ ಘನವೆಂಬೆನೆ? ವೇದ ವೇಧಿಸಲರಿಯದೆ ಕೆಟ್ಟವು.
ಶಾಸ್ತ್ರ ಘನವೆಂಬೆನೆ? ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು.
ಪುರಾಣ ಘನವೆಂಬೆನೆ? ಪುರಾಣ ಪೂರೈಸಲರಿಯದೆ ಕೆಟ್ಟವು.
ಆಗಮ ಘನವೆಂಬೆನೆ? ಆಗಮ ಅರಸಲರಿಯದೆ ಕೆಟ್ಟವು.
ಅದೇನು ಕಾರಣವೆಂದಡೆ:
ವೇದ, ಶಾಸ್ತ್ರ, ಪುರಾಣಾಗಮಂಗಳೆಲ್ಲ, ತಮ್ಮ ತನುವಿಡಿದು ಅರಸಲರಿಯವು.
ಇದಿರಿಟ್ಟುಕೊಂಡು ಹೋದ ನರಲೋಕದ ನರರುಗಳರಿಯರು,
ಸುರಲೋಕದ ಸುರರುಗಳರಿಯರು,
ಕೂಡಲಚೆನ್ನಸಂಗಮದೇವಾ ನಿಮ್ಮ ಶರಣನೇ ಬಲ್ಲ.

Previous post ಸಂಸ್ಕೃತ ಕೃತಿಗಳು
ಸಂಸ್ಕೃತ ಕೃತಿಗಳು
Next post ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ

Related Posts

ಶರಣ ಕುಂಬಾರಣ್ಣನ ಸರಸ ದಾಂಪತ್ಯ
Share:
Articles

ಶರಣ ಕುಂಬಾರಣ್ಣನ ಸರಸ ದಾಂಪತ್ಯ

May 1, 2019 ಡಾ. ಕೆ. ಎಸ್. ಮಲ್ಲೇಶ್
ಮೂಡಣ ದಿಕ್ಕಲ್ಲಿ ಹೊಂಬಣ್ಣದೋಕುಳಿ. ರವಿ ಮೆಲ್ಲಗೆ ಮೇಲೇರಿದ್ದ. ಹಕ್ಕಿಗಳಿಂಚರ, ಕಾಗೆಯ ಕಾ ಕಾ, ಕೋಳಿಯ ಕೊಕ್ಕೋಕೋ. ಜಗವನೆಬ್ಬಿಸಲು, ಏರುದನಿಯ ಕಾಗುಣಿತ. ಕುಂಬಾರಣ್ಣನೂ ನಿದ್ದೆ...
ಶರಣೆಯರ ಸ್ಮಾರಕಗಳು
Share:
Articles

ಶರಣೆಯರ ಸ್ಮಾರಕಗಳು

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಕ್ರಾಂತಿಯ ನಂತರ ಅದು ವಿಸ್ತೃತವಾಗಿ ವ್ಯಾಪಿಸಿಕೊಂಡಿದ್ದು ಇಂದಿನ ಸೊಲ್ಲಾಪೂರ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಜಮಖಂಡಿ ತೇರದಾಳ ಚಿಮ್ಮಡ ಅಂಕಲಗಿ ಹಿರೇ...

Comments 11

  1. Dr. Panchakshari h v
    Oct 11, 2023 Reply

    ತುಂಬಾ ಅರ್ಥಗರ್ಭಿತವಾಗಿ ಗುರುಗಳು ಸನಾತನವನ್ನು ತಿಳಿಸಿದ್ದಾರೆ ಶರಣು.

    ಸನಾತನವಾದ
    ಸನಾತನವು ಧರ್ಮವಲ್ಲ, ದೇವರಲ್ಲ, ಕ್ರಿಯೆಯಲ್ಲ
    ನಮ್ಮೊಳಗಣ ತುಕ್ಕುಹಿಡಿದ ಮನಸ್ಥಿತಿ!

    ಧರ್ಮವಾವುದೇ ಇರಲಿ,
    ಅದೇ ಧರ್ಮವೆನುವುದೆ ಸನಾತನ!
    ದೇವರಾವುದೆ ಇರಲಿ,
    ಅದೇ ದೇವರೆನುವುದೆ ಸನಾತನ!

    ನಂಬಿಕೆಗಳೇನೇ ಇರಲಿ,
    ಮತಿವಿರೋಧವೆ ಸನಾತನ!
    ಆಚಾರಗಳೇನೇ ಇರಲಿ,
    ಪಲ್ಲಟವಿರೋಧವೆ ಸನಾತನ!

    ನಾನಾರೇ ಇರಲಿ,
    ನಾನೇ ಸರಿಯೆಂಬುದೆ ಸನಾತನ!
    ಆಹಾರವಾವುದೇ ಇರಲಿ,
    ವಿಚಾರವಾವುದೇ ಇರಲಿ,
    ವಿಜ್ಞಾನ ವಿರೋಧವೇ ಸನಾತನ!

    ಬದಲಾವಣೆಯೊಪ್ಪದ ಧರ್ಮಾಚಾರವೆ ಸನಾತನ!
    ಮನ ತಿಳಿಗೊಳವಾಗದಿರೆ
    ಸನಾತನವೆಂಬುದು ಎಲ್ಲರೊಳಗುಂಟು!

    ಮನದ ಕಿಟಕಿಬಾಗಿಲು ಮುಚ್ಚಿರಲದುವೆ ಸನಾತನ!
    ಸಕಲವನಿಂಬುಗೊಳ್ವ ಬಯಲಮನವೆ ನಿತ್ಯಸತ್ಯದ ಒಡಲು!

    ಹವೀಪ

  2. sudeep Honnavar
    Oct 15, 2023 Reply

    ಸನಾತನ ಅಂದರೆ ನಿಜಾರ್ಥದಲ್ಲಿ ಪುರಾತನ, ಹಳೆಯ ಅಷ್ಟೇ! ಅದಕ್ಕಾಗಿ ಎಂಥ ಗಲಾಟೆ ಮಾರಾಯ್ರೆ!!

  3. Gowrishankara
    Oct 15, 2023 Reply

    ಗುರುಗಳ ಲೇಖನ ಬಹಳ ಅರ್ಥಗರ್ಭಿತವಾಗಿ ಮೂಡಿಬಂದಿದೆ. ಹಾಗೇನೇ ಪಂಚಾಕ್ಷರಿ ಅಣ್ಣಾ ಅವರ ಸನಾತನ ಕವನವೂ wonderful!

  4. ಅಂಬಾರಾಯ ಬಿರಾದಾರ
    Oct 20, 2023 Reply

    ಅದ್ಬುತವಾದ ಲೇಖನ. ಈ ಸಮಯದಲ್ಲಿ ಪ್ರಸ್ತುತ.

  5. Ambale Naga
    Oct 20, 2023 Reply

    ಉತ್ತಮವಾದ ಲೇಖನ. 🙏🙏🙏

  6. Vijaya Kapparad, Dharawad
    Oct 20, 2023 Reply

    ಗುರುಗಳ ಲೇಖನ ಚೆನ್ನಾಗಿ ಮೂಡಿ ಬಂದಿದೆ ಆದರೆ ಆಚರಣೆಯಲ್ಲಿ ತರುವುದು ಕಠಿಣ ಗುರು ಬಸವಣ್ಣನವರ ವಚನಗಳು ಜನಸಾಮಾನ್ಯರಿಗೆ ತಲುಪಿದರೆ ಮಾತ್ರ ಸಾಧ್ಯ.

  7. ಪೆರೂರು ಜಾರು, ಉಡುಪಿ
    Oct 20, 2023 Reply

    ಸನಾತನವು ಧರ್ಮಗಳಲ್ಲಿನ ಸಣ್ಣತನಕ್ಕೆ ದೊಡ್ಡ ಉದಾಹರಣೆಯಾಗಿದೆ.

  8. Gurusidda Belgam
    Oct 29, 2023 Reply

    ರಾಜಕಾರಣದ ಬಾಲ ಹಿಡಿಯುವ ಕಾವಿ ಇರುವತನಕ ಪ್ರತಿಯೊಂದು ಧರ್ಮವೂ ತನ್ನ ಮೂಲೋದ್ದೆಶದಿಂದ ದೂರವಾಗಿರುತ್ತದೆ. ನೈತಿಕವಾಗಿರಲು ಎಲ್ಲರಿಗೂ ಧರ್ಮಬೇಕು. ರಾಜಕಾರಣಿಗಳು ಧರ್ಮದಲ್ಲಿ, ಸ್ವಾಮಿಗಳು ರಾಜಕೀಯದಲ್ಲಿ ಸ್ವಾರ್ಥಕ್ಕಾಗಿ ಮೂಗು ತೂರಿಸುವುದು ಸಮಾಜಕ್ಕೆ ಅಪಾಯಕಾರಿ.

  9. ಕವಿತಾ ಗರಡಿ
    Oct 29, 2023 Reply

    ಧರ್ಮ ಹರಿವ ನೀರಿನಂತಿರಬೇಕೆನ್ನುವ ಗುರುಗಳ ಮಾತು ಎಲ್ಲ ಧರ್ಮಗಳಿಗೂ ಅನ್ವಯಿಸಿದರೆ ಧರ್ಮಕಲಹಗಳೇ ಇರುವುದಿಲ್ಲ. ಮನುಷ್ಯನಿಗೆ ಜೀವ, ಜೀವನಕ್ಕಿಂತ ಯಾವ ಧರ್ಮವೂ ಮುಖ್ಯವಲ್ಲಾ. ಸನಾತನದ ಹೆಸರಲ್ಲಿ ಕಚ್ಚಾಡುತ್ತಿರುವುದು, ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿರುವುದು, ಗಲಾಟೆ-ಗೊಂದಲ ಎಬ್ಬಿಸುತ್ತಿರುವುದು ಸರಿಯೇ? ಶಬ್ದಕ್ಕೆ ಬಡೆದಾಡುವ ಮಡ್ಡರು ನಾವು.

  10. Bharathi Bellad
    Nov 26, 2023 Reply

    ಸನಾತನಕ್ಕೆ ಪರ್ಯಾಯವಾಗಿ ಬಂದ ಸಮಾನತ ಧರ್ಮಗಳು ಇದ್ದಾಗಲೂ ಮತ್ತೆ ಹಳೆಯ ಗೊಂದಲದ ಗೂಡಿಗೆ ಆತುಕೊಳ್ಳುವುದು ನಮ್ಮ ನಡಿಗೆಯನ್ನು ಹಿಮ್ಮುಖವಾಗಿ ತಿರುಗಿಸಿದಂತೆ. ಸ್ವಾಮೀಜಿಯವರ ದಿಟ್ಟ ವಿಚಾರಗಳ ಲೇಖನವನ್ನು ಪ್ರತಿಯೊಬ್ಬರೂ ಓದಲೇಬೇಕು.

  11. ಬಸವರಾಜ್ ಚಿಮ್ಮೂರು
    Nov 26, 2023 Reply

    ಧರ್ಮ ಮತ್ತು ರಾಜಕೀಯ ಹಿತಾಸಕ್ತಿಗಳ ಬೆರಕೆಯಿಂದಾಗಿ ಇವತ್ತು ಸಮಾಜ ವಿಧ್ವಂಸಗೊಳ್ಳುತ್ತಿದೆ. ಮನಸ್ಸುಗಳು ಒಡೆದುಹೋಗಿವೆ, ಗೋಡೆಗಳು ಎತ್ತರವಾಗಿವೆ, ಸಾಮರಸ್ಯ ಮರೀಚಿಕೆಯಾಗಿದೆ, ಶಾಂತಿ ಮಾಯವಾಗಿದೆ. ಆಧುನಿಕವೆನ್ನುವ ಮನಸ್ಸುಗಳು ಕೊಂಪೆಗಳಾಗಿ ಹೊಲಸು ನಾರುತ್ತಿವೆ…

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ತನ್ನ ಪರಿ ಬೇರೆ…
ತನ್ನ ಪರಿ ಬೇರೆ…
February 5, 2020
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
ಎರವಲು ಮನೆ…
ಎರವಲು ಮನೆ…
August 10, 2023
ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು
May 6, 2020
ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
May 6, 2020
Copyright © 2025 Bayalu