Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕಿನೆಡೆಗೆ…
Share:
Articles June 10, 2023 ಡಾ. ಶೀಲಾ ಕುಮಾರಿ

ಬೆಳಕಿನೆಡೆಗೆ…

ಪ್ರಪಂಚದ ಬಹುತೇಕ ಭಾಷಾಸಾಹಿತ್ಯಗಳಲ್ಲಿ ನೀತಿಕಥೆಗಳಿಗೆ ಪ್ರಾಶಸ್ತ್ಯವಿದೆ. ಆಂಗ್ಲಸಾಹಿತ್ಯವು ಅದಕ್ಕೆ ಹೊರತಾಗಿಲ್ಲ. ಫಾದರ್ ಆಂಥೋನಿ ಡಿ.ಮೆಲ್ಲೋ ಎಸ್.ಜೆ. ಜಗತ್ತಿನ ಎಲ್ಲ ಆಕರಗಳಿಂದ ಪ್ರಸಿದ್ಧವಾಗಿರುವ ಸಣ್ಣ-ಸಣ್ಣ ಕಥೆಗಳನ್ನು ಸ್ವೀಕರಿಸಿ, ತಮ್ಮ ಕಥೆಗಳೊಂದಿಗೆ ಮೇಳೈಸಿ, ತಮ್ಮದೇ ಅದ ವಿಶಿಷ್ಟ ಶೈಲಿಯಲ್ಲಿ ಸರಳವಾಗಿ, ಅಷ್ಟೇ ಅರ್ಥಗರ್ಭಿತವಾಗಿ ಅನೇಕ ಆಂಗ್ಲ ಕೃತಿಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವು ಹತ್ತಕ್ಕಿಂತ ಹೆಚ್ಚು ಮರುಮುದ್ರಣಗಳನ್ನು ಹೊಂದಿರುವುದು ಅವುಗಳ ಜನಪ್ರಿಯತೆಗೆ ಸಾಕ್ಷಿಯಾಗಿವೆ. ಸರ್ವಧರ್ಮಸಮನ್ವಯಕಾರರಾದ ಫಾದರ್ರವರು ಸಾಧನಾಮಾರ್ಗನಿರತರೂ, ಸನ್ಮಾರ್ಗಪ್ರವರ್ತಕರೂ, ಶ್ರೇಷ್ಠ ಮಾನವತಾವಾದಿಯೂ ಆಗಿದ್ದವರು. ತಮ್ಮ ಉತ್ಕೃಷ್ಟ ಉಪನ್ಯಾಸಗಳಿಂದ ಅಪಾರ ಶ್ರೋತೃವರ್ಗವನ್ನು ಹೊಂದಿದ್ದರು.
ಮೊದಲ ಓದಿಗೆ ಮನರಂಜನೆಯೆಂದು, ಮುಂದಿನ ಪುಟ ತಿರುಗಿಸಬಹುದೆಂದು ತೋರಿದರೂ, ಆಲೋಚಿಸಿದಷ್ಟೂ ಅರ್ಥಪೂರ್ಣವಾದ ಕಥೆಗಳಿವು. ಎಲ್ಲ ಕಥೆಗಳ ಕೊನೆಯಲ್ಲಿ ನೀತಿವಾಕ್ಯಗಳಿರದಿದ್ದರೂ ಕಥೆಗಳು ಧ್ವನಿಸುವ ಅರ್ಥಗಳು ಗ್ರಾಹ್ಯವಾದವು…
ಅವುಗಳಲ್ಲಿ ಕೆಲವು ಬಯಲು ಓದುಗರಿಗಾಗಿ-

ಬಿಷಪ್ ರೈಟ್ ನ ವಾದ

ಹಲವು ವರ್ಷಗಳ ಹಿಂದೆ ಅಮೆರಿಕಾದ ಪೂರ್ವ ಕರಾವಳಿಯಲ್ಲಿದ್ದ ಬಿಷಪ್ ಪಶ್ಚಿಮ ಕರಾವಳಿಯ ಸಣ್ಣ ಧಾರ್ಮಿಕ ವಿದ್ಯಾಲಯಕ್ಕೆ ಭೇಟಿಯಿತ್ತನು. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳಲ್ಲಿ ಪ್ರಾಧ್ಯಾಪಕ ಮತ್ತು ಪ್ರಗತಿಪರ ಯುವಕನಾಗಿದ್ದ ವಿದ್ಯಾಲಯದ ಅಧ್ಯಕ್ಷನ ಮನೆಯಲ್ಲಿ ಅವನು ಉಳಿದುಕೊಂಡಿದ್ದ. ತನ್ನ ವಿಭಾಗದ ಸದಸ್ಯರು ಬಿಷಪ್ನ ವಿವೇಕ ಹಾಗೂ ಅನುಭವದ ಪ್ರಯೋಜನ ಪಡೆಯಬೇಕೆಂದು ಅಧ್ಯಕ್ಷನು ಅವರನ್ನು ಬಿಷಪ್ನೊಂದಿಗೆ ಭೋಜನಕ್ಕಾಗಿ ಆಹ್ವಾನಿಸಿದನು. ಭೋಜನದ ಬಳಿಕ ಮಾತುಕತೆ ಸ್ವರ್ಣಯುಗದತ್ತ ತಿರುಗಿತು. ಬಿಷಪ್ ಅದು ದೂರವಿಲ್ಲ ಎಂದು ವಾದಿಸಿದನು. ಪ್ರಕೃತಿಯಲ್ಲಿರುವ ಎಲ್ಲವನ್ನು ಅನ್ವೇಷಿಸಲಾಗಿದೆ ಮತ್ತು ಸಾಧ್ಯವಿರುವ ಎಲ್ಲಾ ಅನ್ವೇಷಣೆಗಳೂ ಮುಗಿದಿವೆ ಎಂಬುದು ಇದಕ್ಕೆ ಅವನಿತ್ತ ಕಾರಣಗಳಲ್ಲಿ ಒಂದಾಗಿತ್ತು. ಅಧ್ಯಕ್ಷನು ಆ ಮಾತನ್ನು ವಿನಯವಾಗಿ ಆಕ್ಷೇಪಿಸಿದನು. ಅವನು ಮಾನವಕುಲವು ಹೊಸ ಉಜ್ವಲ ಅನ್ವೇಷಣೆಗಳ ಹೊಸ್ತಿಲಲ್ಲಿದೆ ಎಂದು ತನ್ನ ಅಭಿಪ್ರಾಯ ತಿಳಿಸಿದನು. ಬಿಷಪ್ ಅಧ್ಯಕ್ಷನಿಗೆ ಒಂದನ್ನು ಸೂಚಿಸಲು ಸವಾಲೆಸೆದನು. ಇನ್ನು ಮುಂದಿನ ಅಂದಾಜು ಐವತ್ತು ವರ್ಷಗಳಲ್ಲಿ ಮಾನವರು ಹಾರಲು ಕಲಿಯುವರೆಂದು ತಾನು ನಿರೀಕ್ಷಿಸುವುದಾಗಿ ಅಧ್ಯಕ್ಷನು ಹೇಳಿದನು. ಇದು ಬಿಷಪ್ ನನ್ನು ನಗೆಗಡಲಲ್ಲಿ ಮುಳುಗಿಸಿತು. ಅವನು, ‘ಪ್ರೀತಿಯ ಹುಡುಗನೇ, ಇದು ಅಸಂಬದ್ಧ. ದೇವರಿಗೆ ನಾವು ಹಾರಬೇಕೆಂಬ ಮನಸ್ಸಿದ್ದರೆ, ಅವನು ರೆಕ್ಕೆಗಳನ್ನು ಕೊಡುತ್ತಿದ್ದನು. ಆಕಾಶಯಾನವು ಹಕ್ಕಿಗಳಿಗೆ ಮತ್ತು ದೇವತೆಗಳಿಗೆ ಮೀಸಲಾಗಿದೆ’ ಎಂದು ಉದ್ಗರಿಸಿದನು. ಆ ಬಿಷಪ್ ಹೆಸರು ರೈಟ್. ಅವನಿಗೆ ಇಬ್ಬರು ಮಕ್ಕಳು-ಓರ್ವಿಲ್ ಮತ್ತು ವಿಲ್ಬರ್- ಮೊಟ್ಟ ಮೊದಲ ವಿಮಾನದ ಅನ್ವೇಷಕರು.

ಲಿಂಕನ್ನನ ಹಿರಿತನ

ಒಬ್ಬ ಅಧಿಕಾರಿಯನ್ನು ತೃಪ್ತಿಪಡಿಸಲು ಅಬ್ರಹಾಂ ಲಿಂಕನ್ ಒಮ್ಮೆ ಕೆಲವು ತುಕಡಿಗಳ ವರ್ಗಾವಣೆಯ ಆದೇಶಕ್ಕೆ ಸಹಿ ಹಾಕಿದನು. ಯುದ್ಧದ ಕಾರ್ಯದರ್ಶಿ ಸ್ಟಾನ್ಟನ್ ಅಧ್ಯಕ್ಷನು ಗುರುತರವಾದ ಪ್ರಮಾದವನ್ನು ಮಾಡಿದ್ದಾನೆಂದು ದೃಢಪಡಿಸಿಕೊಂಡು ಆದೇಶವನ್ನು ಪಾಲಿಸಲು ನಿರಾಕರಿಸಿದನು. ಅವನು ‘ಲಿಂಕನ್ ಒಬ್ಬ ದೊಡ್ಡ ಮೂರ್ಖ!’ ಎಂದು ಸೇರಿಸಿದನು. ಇದನ್ನು ಲಿಂಕನ್ಗೆ ವರದಿ ಮಾಡಿದಾಗ ಅವನು, ‘ಸ್ಟಾನ್ಟನ್ ನನ್ನನ್ನು ಮೂರ್ಖನೆಂದು ಹೇಳಿದ್ದರೆ, ನಾನು ಮೂರ್ಖ ಆಗಿರಲೇಬೇಕು. ಏಕೆಂದರೆ ಅವನು ಯಾವಾಗಲೂ ಸರಿಯಾಗಿರುತ್ತಾನೆ. ನಾನು ಮಾಡಿದ ತಪ್ಪನ್ನು ಪರಿಶೀಲಿಸಿ, ಸರಿಪಡಿಸಲು ಆಲೋಚಿಸುತ್ತೇನೆ’ ಎಂದನು. ಹಾಗೆ ಹೇಳಿದಂತೆ ಅವನು ಅದನ್ನೇ ಮಾಡಿದ್ದು. ಸ್ಟಾನ್ಟನ್ ಅವನ ಆದೇಶವು ತಪ್ಪೆಂದು ಮನವರಿಕೆ ಮಾಡಿಕೊಟ್ಟನು. ಲಿಂಕನ್ ಪ್ರಾಮಾಣಿಕವಾಗಿ ಅದನ್ನು ಹಿಂದೆಗೆದುಕೊಂಡನು. ಅವನು ವಿಮರ್ಶೆಯನ್ನು ಸ್ವಾಗತಿಸುತ್ತಿದ್ದ ರೀತಿಯಲ್ಲಿಯೇ ದೊಡ್ಡತನ ಇತ್ತೆಂದು ಪ್ರತಿಯೊಬ್ಬರೂ ತಿಳಿದಿದ್ದರು.

ಶೂ ಹಾಕಬಾರದೇಕೆ?

ಒಂದೇ ಜೊತೆ ಶೂ ಇದ್ದ ಒಬ್ಬ ತತ್ತ್ವಜ್ಞಾನಿಯು ಅವುಗಳನ್ನು ರಿಪೇರಿ ಮಾಡಲು ಚಮ್ಮಾರನಿಗೆ ಹೇಳಿ, ಕಾದು ನಿಂತನು.
‘ಈಗ ಅಂಗಡಿ ಮುಚ್ಚುವ ಸಮಯ. ಆದ್ದರಿಂದ ಈಗಲೇ ರಿಪೇರಿ ಮಾಡಲು ಆಗುವುದಿಲ್ಲ. ನಿನಗೆ ನಾಳೆ ಬರಲು ಆಗುವುದಿಲ್ಲವೇ?’ ಚಮ್ಮಾರ ಕೇಳಿದನು.
‘ನನ್ನ ಹತ್ತಿರ ಒಂದೇ ಜೊತೆ ಶೂ ಇದೆ. ಶೂ ಇಲ್ಲದೆ ನಡೆಯಲು ನನಗೆ ಸಾಧ್ಯವಾಗದು.’
‘ಸರಿ, ಸರಿ, ಹಾಗಾದರೆ ಉಪಯೋಗಿಸಿರುವ ಬೇರೆ ಜೊತೆಯನ್ನು ಈವತ್ತಿಗೆ ನಿನಗೆ ಕೊಡುತ್ತೇನೆ.’
‘ಏನು! ಇನ್ನೊಬ್ಬರ ಶೂ ನಾನು ಹಾಕಿಕೊಳ್ಳುವುದೇ? ನನ್ನನ್ನು ಏನೆಂದು ತಿಳಿದಿದ್ದೀಯೆ?’
‘ಇನ್ನೊಬ್ಬರ ಅಭಿಪ್ರಾಯಗಳನ್ನು ತಲೆಯಲ್ಲಿ ಇಟ್ಟುಕೊಳ್ಳಲು ನಿನಗೆ ಏನೂ ಅನ್ನಿಸದಿರುವಾಗ ಇನ್ನೊಬ್ಬರ ಶೂ ಕಾಲಿಗೆ ಹಾಕಿಕೊಳ್ಳಲು ಏಕೆ ಆಕ್ಷೇಪಿಸುವೆ?’

ಗಾಢನಿದ್ರೆಯಲ್ಲಿ ಸೋಯೆನ್ ಷಕು

ಸೋಯೆನ್ ಷಕು ಅರವತ್ತೊಂದನೆಯ ವಯಸ್ಸಿನಲ್ಲಿ ತನ್ನ ಪಾಲಿನ ಕೆಲಸಗಳನ್ನು ಮುಗಿಸಿ-ಬಹಳಷ್ಟು ಝೆನ್ ಗುರುಗಳಿಗಿಂತ ಹೆಚ್ಚು ಭಿನ್ನವೂ, ಆಳವೂ ಆದ ಬೋಧನೆಯನ್ನು ಮುಂದಿನವರಿಗೆ ನೀಡಿದ ಬಳಿಕವೇ-ಇಹಲೋಕವನ್ನು ತ್ಯಜಿಸಿದನು. ಬೇಸಿಗೆಯ ಬಳಲಿಕೆಯಿಂದ ಅವನ ಶಿಷ್ಯರು ಕೆಲವೊಮ್ಮೆ ಮಧ್ಯಾಹ್ನದ ಊಟದ ನಂತರ ಮಲಗುತ್ತಿದ್ದರಂತೆ. ಸ್ವತಃ ತಾನೇ ಒಂದು ನಿಮಿಷವನ್ನೂ ವ್ಯರ್ಥವಾಗಿ ಕಳೆಯದಿದ್ದರೂ, ಸೋಯೆನ್ ಎಂದೂ ತನ್ನ ಶಿಷ್ಯರ ಈ ಕೊರತೆಯ ಬಗ್ಗೆ ಒಂದು ಮಾತನ್ನೂ ಆಡುತ್ತಿರಲಿಲ್ಲ.
ಹನ್ನೆರಡನೆಯ ವಯಸ್ಸಿನಲ್ಲಿಯೇ ಬಾಲಕ ಸೋಯೆನ್ ಟೆಂಡ್ಯೆ ಸಿದ್ಧಾಂತದ ತಾತ್ವಿಕ ಸೂತ್ರಗಳನ್ನು ಅಧ್ಯಯನ ಮಾಡುತ್ತಿದ್ದನು. ಬೇಸಿಗೆಯ ಒಂದು ದಿನ ಸುಡುಬಿಸಿಲು ತೀವ್ರವಾಗಿತ್ತು. ತನ್ನ ಗುರು ಹೊರಹೋಗಿದ್ದನ್ನು ಗಮನಿಸಿದ ಅವನು ಆರಾಮವಾಗಿ ಮೂರು ಘಂಟೆ ಕಾಲ ಗಾಢನಿದ್ರೆಯಲ್ಲಿ ಮುಳುಗಿದನು. ಅವನ ಗುರು ಬರುವ ಶಬ್ದವನ್ನು ಕೇಳಿದ ನಂತರವೇ ಅವನಿಗೆ ಎಚ್ಚರವಾಯಿತು. ಆದರೆ ತಡವಾಗಿತ್ತು, ಅವನಲ್ಲಿ ಬಾಗಿಲಿಗೆ ಮೈ ಚೆಲ್ಲಿ ಮಲಗಿದ್ದನು.
‘ದಯವಿಟ್ಟು ಕ್ಷಮಿಸು, ದಯವಿಟ್ಟು ಕ್ಷಮಿಸು’ ಎಂದು ಅವನ ಗುರು ಯಾರೋ ಗಣ್ಯ ಅತಿಥಿಗಳನ್ನು ಎಚ್ಚರಿಕೆಯಿಂದ ದಾಟುವಂತೆ ಸೋಯೆನ್ನ ಅಡ್ಡಲಾಗಿ ಮಲಗಿದ್ದ ದೇಹವನ್ನು ದಾಟುತ್ತಾ ಉಸುರಿದನು. ಸೋಯೆನ್ ಮುಂದೆಂದೂ ಹಗಲು ವೇಳೆ ನಿದ್ರಿಸಲಿಲ್ಲ.

ಯುದ್ಧದ ಮುಕ್ತಾಯ

ಮಾರ್ಷಲ್ ಫರ್ಡಿನೆಂಡ್ ಫೋಕ್ ಪ್ರಥಮ ವಿಶ್ವಯುದ್ಧದಲ್ಲಿ ಮಿತ್ರಪಕ್ಷಗಳ ಸೈನ್ಯಾಧಿಕಾರಿಯಾಗಿದ್ದನು. ಮಾರ್ಷಲ್ನ ಮನದಲ್ಲೇನು ನಡೆಯುತ್ತಿದೆ ಎಂದು ಮಾಹಿತಿ ಪಡೆಯಲು ಆಶಿಸಿದ್ದ ಪತ್ರಿಕೆಯ ವರದಿಗಾರರು ಅವನ ವಾಹನಚಾಲಕನಾದ ಪಿಯರೆಯನ್ನು ಬಹಳ ಪ್ರಯತ್ನಪಟ್ಟು ಸಂಪರ್ಕಿಸುತ್ತಿದ್ದರು. ಯುದ್ಧವು ಯಾವಾಗ ಕೊನೆಗಾಣುವುದೆಂದು ಅವರು ಅವನನ್ನು ಯಾವಾಗಲೂ ಕೇಳುತ್ತಿದ್ದರು. ಆದರೆ ಪಿಯರೆ ಎಂದೂ ಮಾತಾಡುತ್ತಿರಲಿಲ್ಲ.
ಒಂದು ದಿನ ಪಿಯರೆ ಮಾರ್ಷಲ್ ನಿವಾಸದಿಂದ ಹೊರಬರುವಾಗ ವರದಿಗಾರರಿಗೆ ಸಿಕ್ಕಿಬಿದ್ದನು. ಅವರು ಅವನನ್ನು ಸುತ್ತುವರೆದಾಗ, ‘ಇಂದು ಮಾರ್ಷಲ್ ಮಾತಾಡಿದರು’ ಎಂದನು.
‘ಅವರೇನು ಹೇಳಿದರು?’ ಆತುರದಿಂದ ಅವರು ಕೇಳಿದರು.
‘ಪಿಯರೆ, ನಿನಗೇನು ಅನ್ನಿಸುತ್ತದೆ? ಯುದ್ಧ ಯಾವಾಗ ಮುಗಿಯುವುದು?- ಎಂದರು’

ಊರುಗೋಲಿನ ಕಥೆ

ಒಂದು ಗ್ರಾಮದ ಮುಖಂಡನು ಅಪಘಾತದಲ್ಲಿ ತನ್ನ ಕಾಲುಗಳನ್ನು ಕಳೆದುಕೊಂಡಾಗ, ಊರುಗೋಲಿನಿಂದ ನಡೆಯಲು ಪ್ರಾರಂಭಿಸಿದನು. ಕ್ರಮೇಣ ಅವನು ವೇಗವಾಗಿ ಚಲಿಸಲು ಕಲಿತು, ತನ್ನ ನೆರೆಹೊರೆಯವರನ್ನು ರಂಜಿಸಲು ನೃತ್ಯ, ಸಣ್ಣ-ಪುಟ್ಟ ಬ್ಯಾಲೆ ಮಾಡುವ ಮತ್ತು ಗಿರಕಿ ಹೊಡೆಯುವ ಸಾಮರ್ಥ್ಯವನ್ನು ಬೆಳೆಸಿಕೊಂಡನು.
ಆಗ ತನ್ನ ಮಕ್ಕಳಿಗೆ ಊರುಗೋಲಿನ ಉಪಯೋಗದಲ್ಲಿ ತರಬೇತಿ ನೀಡಬೇಕೆಂದು ಆತನು ನಿಶ್ಚಯಿಸಿದನು. ಕ್ರಮೇಣ ಹಳ್ಳಿಯಲ್ಲಿ ಊರುಗೋಲಿನಿಂದ ನಡೆಯುವುದು ಘನತೆಯ ಸಂಕೇತವಾಯಿತು. ತಡಮಾಡದೆ ಎಲ್ಲರೂ ಹಾಗೆಯೇ ನಡೆಯಲಾರಂಭಿಸಿದರು.
ನಾಲ್ಕನೆಯ ತಲೆಮಾರಿಗೆ ಗ್ರಾಮದ ಯಾರೊಬ್ಬರಿಗೂ ಊರುಗೋಲಿಲ್ಲದೆ ನಡೆಯಲು ಆಗುತ್ತಿರಲಿಲ್ಲ. ಗ್ರಾಮದ ಶಾಲೆಯು ತನ್ನ ಪಠ್ಯಕ್ರಮದಲ್ಲಿ ‘ಊರುಗೋಲು-ಸೈದ್ಧಾಂತಿಕ-ಪ್ರಾಯೋಗಿಕ’ ಎಂಬ ವಿಷಯವನ್ನು ಸೇರಿಸಿತು. ಗ್ರಾಮದ ಕುಶಲಕರ್ಮಿಗಳು ತಾವು ತಯಾರಿಸಿದ ಊರುಗೋಲಿನ ಗುಣಮಟ್ಟಕ್ಕೆ ಪ್ರಸಿದ್ಧರಾದರು. ವಿದ್ಯುಚ್ಚಾಲಿತ, ಬ್ಯಾಟರಿಚಾಲಿತ ಊರುಗೋಲುಗಳನ್ನು ಅಭಿವೃದ್ಧಿಪಡಿಸುವ ಮಾತೂ ನಡೆಯಿತು.
ಒಂದು ದಿನ ತಂಟೆಕೋರ ಯುವಕನೊಬ್ಬ ಗ್ರಾಮದ ಹಿರಿಯರನ್ನು, ‘ದೇವರು ಮನುಷ್ಯರಿಗೆ ಕಾಲುಗಳನ್ನು ಕೊಟ್ಟಿರುವಾಗ ಪ್ರತಿಯೊಬ್ಬರೂ ಯಾಕೆ ಊರುಗೋಲಿನಿಂದ ನಡೆಯುತ್ತಾರೆ?’ ಎಂದು ತಿಳಿಸಲು ಒತ್ತಾಯಿಸಿದನು. ಆ ದುರಹಂಕಾರಿಯು ಹಿರಿಯರಿಗಿಂತ ತಾನು ಬುದ್ಧಿವಂತನೆಂದು ಭಾವಿಸಿಕೊಂಡಿರುವ ವಿಚಾರ ಅವರಿಗೆ ತಮಾಷೆಯಾಗಿ ಕಂಡಿತು. ಅವರು ಅವನಿಗೆ ಪಾಠ ಕಲಿಸಲು ನಿರ್ಧರಿಸಿದರು. ‘ಮತ್ತೆ ಹೇಗೆ ನಡೆಯಬೇಕು ಎಂದು ನೀನೇಕೆ ಪ್ರದರ್ಶಿಸಬಾರದು?’ ಅವರು ಕೇಳಿದರು. ‘ಒಪ್ಪಿಗೆ’ ಎಂದು ಯುವಕ ಕೂಗಿದ.
ಗ್ರಾಮದ ಚೌಕದಲ್ಲಿ ಮುಂದಿನ ಭಾನುವಾರ ಹತ್ತು ಘಂಟೆಗೆ ಪ್ರದರ್ಶನವೆಂದು ತೀರ್ಮಾನವಾಯಿತು. ಪ್ರತಿಯೊಬ್ಬರೂ ಅಲ್ಲಿ ಸೇರಿದರು. ಯುವಕನು ಚೌಕದ ಮಧ್ಯಕ್ಕೆ ಊರುಗೋಲಿನಿಂದ ಕುಂಟುತ್ತಾ ಬಂದನು. ಗಡಿಯಾರವು ಹತ್ತು ಹೊಡೆಯುವಾಗ, ನೆಟ್ಟಗೆ ನಿಂತು ತನ್ನ ಊರುಗೋಲುಗಳನ್ನು ಬಿಟ್ಟನು. ಅವನು ಧೈರ್ಯದಿಂದ ಒಂದು ಹೆಜ್ಜೆ ಮುಂದಿಟ್ಟಾಗ, ಗುಂಪಿನಲ್ಲಿ ಸೊಲ್ಲಡಗಿತು. ಆಗ ಅವನು ನಗೆಪಾಟಲಾಗುವಂತೆ ಕೆಳಗೆ ಬಿದ್ದನು.
ಊರುಗೋಲಿನ ಸಹಾಯವಿಲ್ಲದೆ ನಡೆಯಲು ಅಸಾಧ್ಯವೆಂದು ಎಲ್ಲರಲ್ಲಿದ್ದ ನಂಬಿಕೆ ಇದರಿಂದ ಮತ್ತಷ್ಟು ದೃಢವಾಯಿತು.

ಚಕ್ರಕಾರನ ವಿವೇಕ

ಅರಮನೆಯ ಕೆಳತುದಿಯಲ್ಲಿ ಚಕ್ರಕಾರನು ಚಕ್ರ ತಯಾರಿಸುತ್ತಿದ್ದಾಗ, ಚೀನಾದ ರಾಜಕುಮಾರ ಹ್ಯೂಯೆನ್ ಮೇಲ್ತುದಿಯಲ್ಲಿ ಪುಸ್ತಕ ಓದುತ್ತಿದ್ದನು.
ತನ್ನ ಉಳಿ ಮತ್ತು ಸುತ್ತಿಗೆಯನ್ನು ಪಕ್ಕಕ್ಕಿಟ್ಟು, ಚಕ್ರಕಾರನು ರಾಜಕುಮಾರನನ್ನು ಕರೆದು ಅವನು ಓದುತ್ತಿರುವ ಪುಸ್ತಕ ಯಾವುದೆಂದು ಕೇಳಿದನು.
‘ಸಂತರ ನುಡಿಗಳನ್ನು ರಕ್ಷಿಸಿಟ್ಟಿರುವ ಗ್ರಂಥ’ ರಾಜಕುಮಾರ ಹೇಳಿದನು.
‘ಆ ಮುನಿಗಳು ಬದುಕಿದ್ದಾರೆಯೇ?’ ಚಕ್ರಕಾರ ಕೇಳಿದನು.
‘ಓಹ್ ಇಲ್ಲ. ಅವರೆಲ್ಲ ಮೃತರಾಗಿದ್ದಾರೆ’ ರಾಜಕುಮಾರ ಹೇಳಿದನು.
‘ಹಾಗಾದರೆ ನೀನು ಓದುತ್ತಿರುವುದು ಮೃತರು ಬಿಟ್ಟುಹೋಗಿರುವ ನಿಷ್ಪ್ರಯೋಜಕ ಹಾಗೂ ಕೆಲಸಕ್ಕೆ ಬಾರದಂಥವೇ ಹೊರತು ಮತ್ತೇನಲ್ಲ.’
‘ಒಬ್ಬ ಯಃಕಶ್ಚಿತ್ ಚಕ್ರಕಾರನಾದ ನಿನಗೆ ನಾನು ಓದುತ್ತಿರುವ ಪುಸ್ತಕದಲ್ಲಿ ತಪ್ಪನ್ನು ಕಾಣಲು ಎಷ್ಟು ಧೈರ್ಯ? ನಿನ್ನ ಹೇಳಿಕೆಯನ್ನು ಸ್ಪಷ್ಟೀಕರಿಸು. ಇಲ್ಲದಿದ್ದರೆ ಸಾಯಬೇಕಾಗುತ್ತದೆ.’
‘ಸರಿ, ಚಕ್ರಕಾರನಾಗಿ ನಾನು ವಿಷಯವನ್ನು ನೋಡುವುದು ಹೀಗೆ; ನಾನು ಚಕ್ರವನ್ನು ಸಿದ್ಧಪಡಿಸುವಾಗ, ನನ್ನ ಏಟು ತುಂಬಾ ನಿಧಾನವಾಗಿದ್ದರೆ, ಅದು ಆಳವಾಗಿ ಕತ್ತರಿಸುತ್ತದೆ. ಆದರೆ ದೃಢವಾಗಿರುವುದಿಲ್ಲ. ನನ್ನ ಏಟು ತುಂಬಾ ವೇಗವಾಗಿದ್ದರೆ, ಅದು ದೃಢವಾಗಿರುತ್ತದೆ. ಆದರೆ ಆಳವಾಗಿ ಕತ್ತರಿಸುವುದಿಲ್ಲ. ತುಂಬಾ ವೇಗ ಅಥವಾ ತುಂಬಾ ನಿಧಾನ, ಎರಡೂ ಆಗಿರದೆ, ಸರಿಯಾದ ವೇಗದಲ್ಲಿ ಮನಸ್ಸಿಟ್ಟು ಮಾಡದಿದ್ದರೆ ಅದು ಕರಗತವಾಗುವುದಿಲ್ಲ. ಅದನ್ನು ಪದಗಳಲ್ಲಿ ಹೀಗೆ ಎಂದು ಹೇಳಲಾಗದು. ಅದರಲ್ಲಿ ಒಂದು ಕಲೆಯಿದೆ. ಅದನ್ನು ನನ್ನ ಮಗನಿಗೆ ಕೊಡುವುದಕ್ಕೆ ಆಗುವುದಿಲ್ಲ. ಹಾಗಾಗಿ ನನ್ನ ಕೆಲಸವನ್ನು ಮಾಡು ಎಂದು ಅವನಿಗೆ ಹೇಳುವುದಕ್ಕೆ ಆಗುವುದಿಲ್ಲ. ಆದ್ದರಿಂದಲೇ ನಾನಿಲ್ಲಿ, ಎಪ್ಪತ್ತೈದರ ವಯಸ್ಸಿನಲ್ಲಿ, ಇನ್ನೂ ಚಕ್ರಗಳನ್ನು ಮಾಡುತ್ತಿರುವೆ. ನನ್ನ ಅಭಿಪ್ರಾಯದಲ್ಲಿ ನಮ್ಮ ಹಿಂದಿನವರಿಗೂ ಹೀಗೇ ಆಗಿರಬೇಕು. ಶ್ರೇಷ್ಠ ಕರಕೌಶಲವು ಅವರೊಂದಿಗೆ ಮೃತವಾಗಿದೆ. ಉಳಿದದ್ದನ್ನು ಅವರು ಪುಸ್ತಕದಲ್ಲಿ ಇಟ್ಟಿದ್ದಾರೆ. ಆದ್ದರಿಂದಲೇ ನೀನು ಓದುತ್ತಿರುವುದು ಮೃತರು ಬಿಟ್ಟುಹೋಗಿರುವ ನಿಷ್ಪ್ರಯೋಜಕ ಹಾಗೂ ಕೆಲಸಕ್ಕೆ ಬಾರದಂಥವು ಎಂದು ನಾನು ಹೇಳಿದ್ದು’ ಎಂದನು.

ಕುರುಡನ ಲಾಟೀನು

ಹಿಂದೆ ಜಪಾನಿನಲ್ಲಿ ಜನರು ಪೇಪರ್ ಲಾಟೀನುಗಳನ್ನು ಬಳಸುವುದು ಸಾಮಾನ್ಯವಾಗಿತ್ತು. ಹೊತ್ತಿಸಿದ ಕ್ಯಾಂಡಲನ್ನು ಪೇಪರಿನಿಂದ ಸುತ್ತಿ, ಬಿದಿರಿನ ಕಡ್ಡಿಗಳಿಂದ ಒಟ್ಟಾಗಿ ಸೇರಿಸುತ್ತಿದ್ದರು.
ಅಲ್ಲಿ ಒಬ್ಬ ಕುರುಡನು ತನ್ನ ಗೆಳೆಯನನ್ನು ಭೇಟಿ ಮಾಡಿದನು. ಹೊರಡುವಾಗ ಕತ್ತಲಾದ್ದರಿಂದ ಮನೆಗೆ ಹೋಗಲು ಲಾಟೀನನ್ನು ಕೊಡುತ್ತೇನೆಂದನು ಗೆಳೆಯ.
ಕುರುಡನು ಈ ಸಲಹೆಗೆ ನಕ್ಕು, ‘ಹಗಲು ಮತ್ತು ರಾತ್ರಿ ಎರಡೂ ನನಗೆ ಒಂದೇ. ಲಾಟೀನನ್ನು ಇಟ್ಟುಕೊಂಡು ನಾನೇನು ಮಾಡಲಿ?’ ಎಂದನು.
‘ನಿನಗೆ ನಿನ್ನ ಮನೆಯ ಹಾದಿಯನ್ನು ಹುಡುಕಲು ಇದರ ಅಗತ್ಯವಿಲ್ಲ, ನಿಜ. ಆದರೆ ಕತ್ತಲೆಯಲ್ಲಿ ನಿನಗೆ ಯಾರಾದರೂ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಇದು ಸಹಾಯ ಮಾಡಬಹುದು’ ಗೆಳೆಯ ನುಡಿದನು.
ಆದ್ದರಿಂದ ಕುರುಡನು ಲಾಟೀನು ಹಿಡಿದು ಹೊರಟನು. ಸ್ವಲ್ಪ ಹೊತ್ತಿನಲ್ಲಿ ಯಾರೋ ಒಬ್ಬನು ಅವನಿಗೆ ಢಿಕ್ಕಿ ಹೊಡೆದು ಹತೋಟಿ ತಪ್ಪುವಂತೆ ತಳ್ಳಿದನು.
‘ಹೇಯ್ ಮುಠ್ಠಾಳ, ಈ ಲಾಟೀನನ್ನು ನೋಡಲಿಲ್ಲವೇ?’ ಕುರುಡ ಕಿರುಚಿದನು.
‘ಅಣ್ಣ, ನಿನ್ನ ಲಾಟೀನು ಆರಿಹೋಗಿದೆ’ ಎಂದನು ಅಪರಿಚಿತ.
ಬೇರೊಬ್ಬರ ಬೆಳಕಿಗಿಂತ, ನಿನ್ನದೇ ಕತ್ತಲೆಯಲ್ಲಿ ನೀ ನಡೆವೆ ಸುರಕ್ಷಿತವಾಗಿ.

ಲಿನ್ ಶಿಷ್ಯರು

ರಾಜನು ಶ್ರೇಷ್ಠ ಝೆನ್ ಗುರು ಲಿನ್ಚಿಯ ಆಶ್ರಮಗಳಿಗೆ ಭೇಟಿಯಿತ್ತನು. ಗುರುವಿನೊಂದಿಗೆ ಹತ್ತು ಸಾವಿರಕ್ಕೂ ಹೆಚ್ಚು ಸನ್ಯಾಸಿಗಳು ವಾಸಿಸುತ್ತಿದ್ದಾರೆಂದು ಅರಿತ ರಾಜನಿಗೆ ಆಶ್ಚರ್ಯವಾಯಿತು.
ಸನ್ಯಾಸಿಗಳ ಸರಿಯಾದ ಸಂಖ್ಯೆಯನ್ನು ತಿಳಿಯಬಯಸಿ ರಾಜನು, ‘ನಿಮಗೆಷ್ಟು ಮಂದಿ ಶಿಷ್ಯರು?’ ಎಂದನು.
ಲಿನ್ಚಿ ಉತ್ತರಿಸಿದನು, ‘ಅಬ್ಬಬ್ಬಾ ಎಂದರೆ ನಾಲ್ಕು ಅಥವಾ ಐದು.’

ಬೌದ್ಧ ಸನ್ಯಾಸಿನಿ ರ್ಯೊನೆನ್

ಬೌದ್ಧ ಸನ್ಯಾಸಿನಿಯಾದ ರ್ಯೊನೆನ್ 1779ರಲ್ಲಿ ಜನಿಸಿದಳು. ಪ್ರಸಿದ್ಧ ಜಪಾನಿ ಯೋಧನಾದ ಷಿನ್ಜೆನ್ ಅವಳ ತಾತ. ಅವಳು ಇಡೀ ಜಪಾನಿನ ಅತ್ಯಂತ ಸುಂದರಿಯರಲ್ಲಿ ಒಬ್ಬಳೆಂದು, ಪ್ರತಿಭಾನ್ವಿತ ಕವಯಿತ್ರಿಯೆಂದು ಹೆಸರಾಗಿದ್ದಳು. ಆದ್ದರಿಂದ ಹದಿನೇಳನೇ ವಯಸ್ಸಿನಲ್ಲೇ ಅವಳು ರಾಜನ ಆಸ್ಥಾನದಲ್ಲಿ ಸೇವೆ ಸಲ್ಲಿಸಲು ನೇಮಕವಾದಳು. ಅಲ್ಲಿ ಅವಳು ಸಾಮ್ರಾಜ್ಯದ ಮಹಾರಾಣಿಯವರ ಬಗ್ಗೆ ಬಹಳ ಪ್ರೀತಿಯನ್ನು ಬೆಳೆಸಿಕೊಂಡಳು. ಮಹಾರಾಣಿ ಇದ್ದಕ್ಕಿದ್ದಂತೆ ಮೃತರಾದರು. ಆಗ ರ್ಯೊನೆನ್ ಅಧ್ಯಾತ್ಮಿಕ ಅನುಭೂತಿಗೆ ಒಳಗಾದಳು. ಎಲ್ಲ ವಸ್ತುಗಳ ಕ್ಷಣಿಕ ಸ್ವಭಾವವನ್ನು ಸ್ಪಷ್ಟವಾಗಿ ಅರಿತಳು. ಆಗಲೇ ಅವಳು ಝೆನ್ ಅಧ್ಯಯನ ಮಾಡಲು ದೃಢಸಂಕಲ್ಪ ಮಾಡಿದಳು.
ಆದರೆ ಅವಳ ಮನೆಯವರು ಅದನ್ನು ಒಪ್ಪದೆ ಮದುವೆಮಾಡಿಕೊಳ್ಳಲು ಒತ್ತಾಯಿಸಿದರು. ಆಗ ಅವಳು ‘ನನಗೆ ಮೂರು ಮಕ್ಕಳಾದ ಮೇಲೆ ನಾನು ಸನ್ಯಾಸಿನಿಯಾಗಲು ಸ್ವತಂತ್ರಳು’ ಎಂದು ತನ್ನ ಮನೆಯವರು ಹಾಗೂ ಭಾವಿ ಪತಿಯಿಂದ ಮದುವೆಗೆ ಮೊದಲು ವಚನ ತೆಗೆದುಕೊಂಡಳು. ಅವಳಿಗೆ ಇಪ್ಪತ್ತೈದು ವರ್ಷಗಳಾದಾಗ ಈ ನಿಬಂಧನೆಯು ಪೂರ್ಣಗೊಂಡಿತು. ಆಗ ಅವಳ ಗಂಡನ ಪ್ರಾರ್ಥನೆಯಾಗಲೀ, ಪ್ರಪಂಚದ ಇನ್ಯಾವುದೇ ವಿಷಯವಾಗಲೀ ಅವಳ ಸಂಕಲ್ಪವನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ. ಅವಳು ಅನ್ವೇಷಣೆಯತ್ತ ಹೊರಟಳು.
ಅವಳು ಇಡೋ ಪಟ್ಟಣಕ್ಕೆ ಬಂದು ಗುರು ತೆತ್ಸುಗ್ಯುವಿನ ಬಳಿ ಶಿಷ್ಯೆಯಾಗಲು ಕೋರಿದಳು. ಅವನು ಅವಳತ್ತ ಒಂದು ನೋಟ ಬೀರಿ ತಿರಸ್ಕರಿಸಿದನು. ಏಕೆಂದರೆ ಅವಳು ಅತ್ಯಂತ ರೂಪಸಿಯಾಗಿದ್ದಳು. ಆದ್ದರಿಂದ ಅವಳು ಮತ್ತೊಬ್ಬ ಗುರು ಹಕುವೋ ಬಳಿ ಸಾರಿದಳು. ಅವನು ಅವಳನ್ನು ಅದೇ ಕಾರಣಕ್ಕೆ ತಿರಸ್ಕರಿಸಿದನು. ಅವಳ ಸೌಂದರ್ಯವು ತೊಂದರೆಗೆ ಮಾತ್ರ ಮೂಲವಾಗುತ್ತದೆಂದು ಅವನು ಹೇಳಿದನು. ಆದ್ದರಿಂದ ರ್ಯೊನೆನ್ ಕಬ್ಬಿಣವನ್ನು ಕೆಂಪಗೆ ಕಾಯಿಸಿ ತನ್ನ ಮುಖವನ್ನು ಸುಟ್ಟುಕೊಂಡಳು. ಅದರಿಂದ ಅವಳ ದೈಹಿಕ ಸೌಂದರ್ಯವು ಶಾಶ್ವತವಾಗಿ ಹಾಳಾಯಿತು. ಅವಳು ಹಿಂದಿರುಗಿ ಹಕುವೋ ಹತ್ತಿರ ಬಂದಾಗ, ಅವನು ಅವಳನ್ನು ಶಿಷ್ಯಳನ್ನಾಗಿ ಸ್ವೀಕರಿಸಿದನು.
ರ್ಯೊನೆನ್ ಚಿಕ್ಕ ಕನ್ನಡಿಯ ಹಿಂಭಾಗದಲ್ಲಿ ಆ ಸಂದರ್ಭದ ಆಚರಣೆಗಾಗಿ ಈ ಪದ್ಯವನ್ನು ಬರೆದಳು:
ಮಹಾರಾಣಿಯವರ ದಾಸಿಯಾಗಿ
ಸುಂದರ ವಸ್ತ್ರಗಳ ಸುಗಂಧಕ್ಕಾಗಿ
ಸುಗಂಧದ್ರವ್ಯವ ಉರಿಸುತ್ತಿದ್ದೆ.

ಈಗ ಮನೆಯಿರದ ಭಿಕ್ಷುಕಿಯಾಗಿ
ಝೆನ್ ಪ್ರಪಂಚವನು ಪ್ರವೇಶಿಸಲು
ನನ್ನ ಮುಖವನು ಸುಟ್ಟುಕೊಂಡೆ.

ಈ ಜಗತ್ತನ್ನು ಅಗಲುವ ವೇಳೆ ಬಂದಿತೆಂದು ಅವಳಿಗೆ ತಿಳಿದಾಗ, ಮತ್ತೊಂದು ಪದ್ಯ ಬರೆದಳು:
ಈ ಕಣ್ಣುಗಳು ಅರವತ್ತಾರು ಬಾರಿ
ಶರತ್ಕಾಲದ ಸೊಗಸ ಸವಿದಿವೆ….
ನೀನು ಹೆಚ್ಚೇನನ್ನು ಕೇಳದಿರು.
ಗಾಳಿಯು ಅಲುಗಾಡದಿದ್ದಾಗ
ಪೈನ್ ಮರದ ಸದ್ದನ್ನೇ ಆಲಿಸು.

ರೋಮಾಂಚಕ ನರ್ತನ

ಒಂದಾನೊಂದು ಕಾಲದಲ್ಲಿ ಯುದ್ಧಕೈದಿಗಳ ಶಿಬಿರದಲ್ಲಿ ಒಬ್ಬ ಕೈದಿಯಿದ್ದನು. ಮರಣದಂಡನೆಯ ಶಿಕ್ಷೆಗೆ ಗುರಿಯಾದರೂ ಅವನು ನಿರ್ಭೀತನೂ, ಮುಕ್ತನೂ ಆಗಿದ್ದನು. ಒಂದು ದಿನ ಜೈಲಿನ ಅಂಗಳದ ಮಧ್ಯದಲ್ಲಿ ಅವನು ತನ್ನ ಗಿಟಾರನ್ನು ನುಡಿಸುತ್ತಿದ್ದ. ಅದನ್ನು ಕೇಳಲು ದೊಡ್ಡ ಗುಂಪು ಸೇರಿತು. ಸಂಗೀತದ ಆಕರ್ಷಣೆಯಲ್ಲಿ ಅವರೆಲ್ಲರೂ ಅವನಂತೆ ನಿರ್ಭೀತರಾದರು. ಇದನ್ನು ಜೈಲಿನ ಅಧಿಕಾರಿಗಳು ಕಂಡು ಅವನನ್ನು ನುಡಿಸದಿರುವಂತೆ ನಿರ್ಬಂಧಿಸಿದರು.ಆದರೆ ಮಾರನೆ ದಿನ ಅವನು ಅಲ್ಲೇ, ಹಾಡುತ್ತಾ, ಗಿಟಾರ್ ನುಡಿಸಿದನು. ಅವನ ಸುತ್ತಲೂ ಹಿಂದಿನ ದಿನಕ್ಕಿಂತಲೂ ದೊಡ್ಡ ಗುಂಪು ಕೇಳುತ್ತಿತ್ತು. ಕೋಪಗೊಂಡ ಕಾವಲುಗಾರರು ಅವನನ್ನು ಎಳೆದುಕೊಂಡು ಹೋಗಿ, ಅವನ ಬೆರಳುಗಳನ್ನು ಕತ್ತರಿಸಿದರು.
ಮರುದಿನ ಹಾಡುತ್ತಾ, ತನ್ನ ರಕ್ತ ಜಿನುಗುವ ಬೆರಳುಗಳಿಂದ ಸಾಧ್ಯವಾದಷ್ಟು ಸಂಗೀತ ನುಡಿಸುತ್ತಾ ಅವನು ಹಿಂದಿರುಗಿದನು. ಈ ಬಾರಿ ಗುಂಪು ಹರ್ಷೋದ್ಗಾರ ಮಾಡಿತು. ಕಾವಲುಗಾರರು ಮತ್ತೆ ಅವನನ್ನು ಎಳೆದೊಯ್ದು ಗಿಟಾರನ್ನು ಚೂರು ಚೂರು ಮಾಡಿದರು.
ಅದರ ಮರುದಿನ ಅವನು ಹೃದಯ ತುಂಬಿ ಹಾಡುತ್ತಿದ್ದನು. ಅದೆಂತಹ ಹಾಡು! ಎಷ್ಟೊಂದು ಶುದ್ಧ ಮತ್ತು ಉದಾತ್ತ! ಗುಂಪು ಸೇರಿತು. ಹಾಡುವುದು ಮುಗಿದಾಗ, ಅವನ ಹೃದಯದಂತೆ ಅವರ ಹೃದಯಗಳು ಶುದ್ಧವಾದವು, ಅವರ ಚೈತನ್ಯಗಳು ಅಜೇಯವಾದವು. ಈ ಬಾರಿ ಕಾವಲುಗಾರರು ಅದೆಷ್ಟು ಕ್ರುದ್ಧರಾಗಿದ್ದರೆಂದರೆ ಅವರು ಅವನ ನಾಲಿಗೆಯನ್ನು ಕತ್ತರಿಸಿ ಎಸೆದರು.
ಶಿಬಿರದಲ್ಲಿ ಸೊಲ್ಲಡಗಿ ಹೋಯಿತು. ಮೌನ ಮನೆ ಮಾಡಿತು, ಅಮರತೆಯಂತೆ.
ಎಲ್ಲರಿಗೂ ಆಶ್ಚರ್ಯವಾಗುವಂತೆ ಮಾರನೇ ದಿನ ಅವನು ತನ್ನ ಸ್ಥಳದಲ್ಲಿ ತನ್ನೊಬ್ಬನಿಗೆ ಮಾತ್ರ ಕೇಳುವ ಮೌನಸಂಗೀತಕ್ಕೆ ತೇಲಾಡುತ್ತಾ, ನರ್ತಿಸುತ್ತಾ ಹಿಂದಿರುಗಿದನು. ಬೇಗನೆ ಎಲ್ಲರೂ ರಕ್ತಸಿಕ್ತವಾದ, ದುರ್ಬಲಗೊಂಡಿದ್ದ ಅವನ ಸುತ್ತಾ ಸೇರಿ ಚಪ್ಪಾಳೆ ತಟ್ಟುತ್ತಾ ನೃತ್ಯ ಮಾಡುತ್ತಿದ್ದರು. ಕಾವಲುಗಾರರು ಆಶ್ಚರ್ಯದಿಂದ ನೆಲಕ್ಕಂಟಿದಂತೆ ನಿಂತುಬಿಟ್ಟರು.

ಸಮಕಾಲೀನ ಭರತನಾಟ್ಯ ಕಲಾವಿದೆಯಾದ ಸುಧಾಚಂದ್ರನ್ ನೃತ್ಯಜೀವನದ ಉತ್ತುಂಗದಲ್ಲಿದ್ದಾಗ ಅಕ್ಷರಶಃ ರೆಕ್ಕೆ ಮುರಿದಂತಾಗಿದ್ದಳು. ಏಕೆಂದರೆ ಅವಳ ಬಲಗಾಲನ್ನು ಕತ್ತರಿಸಬೇಕಾಯಿತು. ಅವಳಿಗೆ ಕೃತಕಕಾಲನ್ನು ಜೋಡಿಸಿದ ಬಳಿಕ ನೃತ್ಯಕ್ಕೆ ಹಿಂದಿರುಗಿದಳು. ಸೋಜಿಗವೆನಿಸುವಂತೆ ಅವಳು ಮೊದಲಿನಂತೇ ಶ್ರೇಷ್ಠ ನರ್ತಕಿಯಾದಳು. ಅದು ಹೇಗೆ ಸಾಧ್ಯವಾಯಿತೆಂದು ಕೇಳಿದಾಗ ಅವಳು ಅತ್ಯಂತ ಸರಳವಾಗಿ ಹೇಳಿದ್ದು, ‘ನೃತ್ಯ ಮಾಡಲು ನಿಮಗೆ ಕಾಲುಗಳ ಅಗತ್ಯವಿಲ್ಲ.’

ಆಗಲೂ ತೊಂಭತ್ತೈದು ವರ್ಷಗಳೇ

ಸರ್ಕಾರವು ನಡೆಸುವ ವೃದ್ಧಾಶ್ರಮದಲ್ಲಿದ್ದ ಹಣ್ಣು-ಹಣ್ಣು ಮುದುಕನ ಮನುಷ್ಯಸಹಜ ಆಸಕ್ತಿಯನ್ನು ತಿಳಿಯಲು ವರದಿಗಾರನೊಬ್ಬನು ಪ್ರಯತ್ನಿಸುತ್ತಿದ್ದನು.
‘ತಾತ, ದೂರದ ನೆಂಟರೊಬ್ಬರು ನಿಮಗೆ ನಲವತ್ತೆಂಟು ಕೋಟಿ ರೂಪಾಯಿಗಳನ್ನು ನೀಡಿದ್ದಾರೆ ಎಂಬ ಕಾಗದವು ನಿಮಗೆ ಇದ್ದಕ್ಕಿದ್ದಂತೆ ಸಿಕ್ಕ್ಕರೆ ಹೇಗನ್ನಿಸುತ್ತದೆ?’ ಯುವ ವರದಿಗಾರನು ಕೇಳಿದನು.
‘ಮಗೂ, ಆಗಲೂ ನನಗೆ ತೊಂಭತ್ತೈದು ವರ್ಷಗಳೇ. ಹೌದಲ್ಲವೇ?’ ಮುದುಕ ಮೆಲ್ಲಗೆ ನುಡಿದನು.

Previous post ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
Next post ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…

Related Posts

ಅರಿವಿಗೆ ಬಂದ ಆರು ಸ್ಥಲಗಳು
Share:
Articles

ಅರಿವಿಗೆ ಬಂದ ಆರು ಸ್ಥಲಗಳು

August 11, 2025 ಮಹಾದೇವ ಹಡಪದ
(ಇಲ್ಲಿಯವರೆಗೆ: ಇತ್ತ ಗುಡ್ಡಕ್ಕೆ ಹೋದ ಮಗನನ್ನು ತ್ರೈಲೋಕ್ಯ ಮತ್ತು ಮಹಾಲೇಖೆಯರು ಹುಡುಕಿ ಅಲೆಯುತ್ತಿದ್ದರೆ, ಅತ್ತ ಸಿದ್ಧಸಾಧುವಿನ ಕೊನೆಯ ದಿನಕ್ಕೆ ಸಾಕ್ಷಿಯಾಗುವ ಭಾಗ್ಯ...
ಬಸವನಾ ಯೋಗದಿಂ…
Share:
Articles

ಬಸವನಾ ಯೋಗದಿಂ…

July 1, 2018 ಡಾ. ಪಂಚಾಕ್ಷರಿ ಹಳೇಬೀಡು
ನಮ್ಮ ಕಿವಿಯ ಮೇಲೆ ಪ್ರತಿನಿತ್ಯ ಯೋಗ ಎಂಬ ಶಬ್ದ ಹಲವಾರು ಬಾರಿ  ಅಪ್ಪಳಿಸುತ್ತದೆ. ಲಕ್ಷಾಂತರ ಯೋಗ ತರಬೇತಿ ಶಾಲೆಗಳು ಜಗತ್ತಿನಾದ್ಯಂತ ಮೈಚಾಚಿಕೊಂಡಿವೆ, ಯೋಗ ಈಗ ಒಂದು ಹುಲುಸಾದ...

Comments 7

  1. Umesh S
    Jun 14, 2023 Reply

    ಪುಟ್ಟ ಕತೆಗಳು ತುಂಬಾ ಚೆನ್ನಾಗಿವೆ ಮೇಡಂ.

  2. ಕರಿಬಸವಯ್ಯ
    Jun 16, 2023 Reply

    ನೀತಿ ಕತೆಗಳು ಮತ್ತೆ ಓದಿಸಿಕೊಳ್ಳುವ ಗುಣ ಹೊಂದಿವೆ. ಸಾರ್ವಕಾಲಿಕ ಸತ್ಯವನ್ನು ಬೋಧಿಸುತ್ತವೆ.

  3. ರವೀಂದ್ರ ಮಧುಗಿರಿ
    Jun 18, 2023 Reply

    ನಮ್ಮ ಸಮಾಜದ ಕತೆಯನ್ನು ‘ಊರುಗೋಲಿನ ಕತೆ’ಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಪ್ರತಿ ಕತೆಯೂ ಜೀವನದೊಂದಿಗೆ ಹೊಂದಿಸಿಕೊಳ್ಳುವಂತಿವೆ.

  4. Praveen Masur
    Jun 20, 2023 Reply

    ಇನ್ನೊಬ್ಬರ ಶೂ ನಾ ಹಾಕಲಾರೆ ಎನ್ನುವ ತತ್ತ್ವಜ್ಞಾನಿಯ ತಲೆ ತುಂಬಾ ಇರುವುದು ಬೇರೆಯವರ ಮಾತುಗಳು! ಎಂಥ ಸೂಕ್ಷ್ಮ ವಿಚಾರ, thanks for meaningful stories.

  5. Lokanath R
    Jun 23, 2023 Reply

    Quality post is the cucial to attract the people to pay a quick visit the website, that’s what this website is providing.

  6. ರವಿಶಂಕರ ಜೇವರ್ಗಿ
    Jun 25, 2023 Reply

    ಪುಟ್ಟ ಕತೆಗಳು ಬಹಳ ಚೆನ್ನಾಗಿವೆ. ಬುದ್ಧ ಸನ್ಯಾನಿಸಿಯ ಕತೆ ಓದಿ ತುಂಬಾ ನೋವಾಯಿತು. ಹೆಣ್ಣೊಬ್ಬಳಿಗೆ ಆಕೆಯ ಸೌಂದರ್ಯ ಆಧ್ಯಾತ್ಮಿಕ ಪ್ರಯಾಣಕ್ಕೆ ಇಷ್ಟೊಂದು ಮುಳುವಾಗಬೇಕೆ? ಝೆನ್ ಗುರುಗಳೆನಿಸಿಕೊಂಡವರು ಇಷ್ಟೊಂದು ಕಠಿಣವಾಗಿ ಅವಳನ್ನು ನಡೆಸಿಕೊಳ್ಳಬೇಕಿತ್ತೆ? ಯಾಕೋ ಆಕೆ ಪಟ್ಟ ಕಷ್ಟ, ತನ್ನನ್ನು ಹಿಂಸಿಸಿಕೊಳ್ಳಬೇಕಾದ ಅನಿವಾರ್ಯತೆ ತೀವ್ರ ನೋವನ್ನುಂಟುಮಾಡಿತು.

  7. Mahalingesh Betturu
    Jun 27, 2023 Reply

    ಚಕ್ರಕಾರನ ಮಾತುಗಳು, ಕುರುಡನ ಲಾಟೀನು… ಓದಲೇ ಬೇಕಾದ ಕತೆಗಳು. ಇಂತಹ ಬೆಳಕುಗಳನ್ನು ನೀಡುವ ಬಯಲುಗೆ ಧನ್ಯವಾದಗಳು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ದೇಹ ದೇವಾಲಯ
ದೇಹ ದೇವಾಲಯ
June 12, 2025
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ಶಿವಾಚಾರ
ಶಿವಾಚಾರ
April 9, 2021
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
Copyright © 2025 Bayalu