Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹೆಂಗೂಸೆಂಬ ಭಾವ ತೋರದ ಮುನ್ನ…
Share:
Articles June 10, 2023 ಮಹಾದೇವ ಹಡಪದ

ಹೆಂಗೂಸೆಂಬ ಭಾವ ತೋರದ ಮುನ್ನ…

ನಮ್ಮದು ರಾಮರಾಜ್ಯದ ಪರಿಕಲ್ಪನೆಯಲ್ಲ ಕಲ್ಯಾಣ ರಾಜ್ಯದ ಸ್ಪಷ್ಟ ನಿದರ್ಶನ, ಯಾವದೋ ಕಾವ್ಯ, ಕತೆ ಕಾದಂಬರಿ, ಪುರಾಣದ ನಿರೂಪಣೆಯ ಅಗತ್ಯ ಕಲ್ಯಾಣ ರಾಜ್ಯಕ್ಕಿಲ್ಲ. ಕಲ್ಯಾಣವೆಂಬುದು ಒಳಗೂ – ಹೊರಗೂ ಆಗಬೇಕಾದ ಅರಿವನ್ನು ಹೇಳಿಕೊಟ್ಟ ರೀತಿಯಂತೂ ಜಗದ ಯಾವ ನಾಗರೀಕತೆಯೊಳಗೂ ಇಲ್ಲ. ಅಂತರಂಗದ ಹುಡುಕಾಟದ ಜೊತೆಜೊತೆಗೆ ಬಹಿಂರಂಗವನ್ನೂ ಸತ್ಯಶುದ್ಧ ಪ್ರಸಿದ್ಧ ಮಾಡಿಕೊಳ್ಳುವ ಜಂಗಮದೀಕ್ಷೆಯನ್ನೂ ಶರಣರು ಚರ್ಚಿಸಿದ್ದಾರೆ. ಶರಣನೆಂದರೆ ಅರಿವನ್ನುಳ್ಳಾತ, ಶರಣನೆಂದರೆ ಸುಮ್ಮನುಳಿಯುವ ಧ್ಯಾನವನ್ನು ಮಾಡುವಾತ. ಕಾಯಕ ಮಾಡುವ ಕಾಯಕ್ಕೆ ಸುಮ್ಮನೇ ಒಂದಷ್ಟು ಹೊತ್ತು ಕುಳಿತು ತದೇಕಚಿತ್ತನಾಗಿ ದಿಟ್ಟಿಸುವ ಮೂಲಕ ತನ್ನೊಳಗನ ಗುಹೇಶ್ವರನಲ್ಲಿ ಪ್ರವೇಶ ಪಡೆದುಕೊಳ್ಳುವ ಕ್ರಿಯಾದೀಕ್ಷೆ ನೀಡಿದವರು ಶರಣರು. ಆದರೆ ಕಾಯಕ, ದಾಸೋಹ, ಜಂಗಮ, ಶರಣಸತಿ-ಲಿಂಗಪತಿ ಎಂಬ ಭಕ್ತಿಯ ಭಾವದೊಳಿದ್ದ ಕಲ್ಯಾಣಕ್ಕೆ ಕ್ರಿಯಾದೀಕ್ಷೆ ನೀಡಿದಾತ ಅಲ್ಲಮಪ್ರಭು.

ತಾಳ ಹಿಡಿದು ನುಡಿಸುವ ಮದ್ದಳೆಯ ಧ್ವನಿ ಹೊರಗೆ ಎಷ್ಟು ಪ್ರಮಾಣದಲ್ಲಿ ಕೇಳಬಲ್ಲುದೋ ಅದಕ್ಕಿಂತಲೂ ಮಿಗಿಲಾದ ಆಳದ ಧ್ವನಿಯು ನುಡಿಸುವಾತನ ಎದೆಯೊಳಗೂ ಇರುತ್ತದೆ. ಆ ಒಳಗಿನ ನಾದದಲ್ಲಿ ಇರುವಂಥ ಅರಿವಿಂಗೆ ಚಲನೆ ಸಿಕ್ಕರೆ ಹೊರ-ಒಳಗೆ ಏಕಾಗಿ ಪ್ರವಹಿಸುವ ಚೈತನ್ಯ ತನ್ನತಾನಾಗೇ ಒದಗಿಬಂದರೆ ಅಂಥ ವ್ಯಕ್ತಿ ದಾರ್ಶನಿಕನಾಗಿಯೇ ತೋರುತ್ತಾನೆ. ಶರಣ ಪರಂಪರೆಯ ಕವಿಗಳೆಲ್ಲರೂ ಪ್ರಭುವನ್ನು ಕಂಡದ್ದು ಹೀಗೆಯೇ ಎನಿಸುತ್ತದಲ್ಲವೆ..! ತಾಯಿ ಸುಜ್ಞಾನಿಯೂ, ತಂದೆ ನಿರಹಂಕಾರನೂ ಎನ್ನುವ ಮುಖೇನ ಕಾಮಲತೆಯೂ, ಆಕೆಯ ತಂದೆತಾಯಿಯರೂ ಮಮಕಾರ ಮೋಹವೆಂಬುದೆಲ್ಲವೂ ನಿಚ್ಚಳ ಪ್ರತಿಮೆಗಳ ಹಾಗೆ ಕಾವ್ಯಗಳು ಬಳಸಿಕೊಂಡಿದ್ದಾವೆ. ಸ್ವತಃ ಪ್ರಭುದೇವರೂ ತಮ್ಮ ಆದ್ಯರನ್ನು ಗುಹೇಶ್ವರ ಎಂದಿರುವುದು ಕೂಡ ಈ ಎಲ್ಲ ಬಗೆಯ ಕಲ್ಪನೆಗಳಿಗೂ ಬೀಜದಂತಿದೆ. ಇದೆಲ್ಲದರ ಆಚೆಗೆ ಶರಣರ ಬದುಕಿನ ಬೃಹತ್ ರಿಯಾಲಿಟಿ ಏನಿದ್ದಿರಬಹುದು ಎನ್ನುವ ಕುತೂಹಲ ಸದಾಕಾಲವೂ ಕಾಡುತ್ತದೆ. ಇಡೀ ಶರಣ ಸಂಕುಲದೊಳಗೆ ಒಳ-ಹೊರಗಿನ ನಾದವನ್ನು ಏಕತ್ರ ಮಾಡಿಕೊಂಡವರೆಂದರೆ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ. ಇಬ್ಬರೂ ಆ ಪ್ರತಿಭಾಪ್ರವಾಹದೊಳಗೆ ಲೀಲಾಮೂರ್ತಿಗಳಾಗಿ ಲೋಕ ಸಂಚಾರ ಗೈದು ಕಟ್ಟಕಡೆಯದಾಗಿ ಕದಳಿ ಹೊಕ್ಕರೆಂಬುದಾಗಿ ಕೆಲವು ಶರಣರ ವಚನಗಳಲ್ಲು ಕನ್ನಡದ ಕಾವ್ಯಗಳಲ್ಲೂ ಬರುತ್ತದೆ. ಕದಳಿ ಎನ್ನುವುದು ಕೂಡ ಪ್ರತಿಮಾತ್ಮಕ ಸಂಗತಿಯೇ ಆದ್ದರಿಂದ ಅಲ್ಲೂ ಕೂಡ ಮತ್ತೊಂದು ಬಗೆಯ ಮಹಂತದರ್ಶನವನ್ನೇ ಕಾಣಿಸಿದ್ದಾರೆ. ಕದಳಿ ಎನ್ನುವುದು ಕಂದಫಲ, ಅಂದರೆ ಬಾಳೆಯ ಪ್ರತಿಮೆ. ಒಂದು ಬಾಳೆಯ ದಿಡ ಒಂದು ಫಲವನ್ನು ಮಾತ್ರ ಕೊಡಬಲ್ಲದು. ಹಾಗೆ ಒಂದು ಬಾರಿ ಫಲಕೊಟ್ಟ ತದನಂತರ ಆ ಬಾಳೆಯು ಮತ್ತೊಂದು ಫಲ ನೀಡಲಾರದು. ಶರಣರಲ್ಲಿ ಅಲ್ಲಮ ಮತ್ತು ಅಕ್ಕ ಭೂಮಿಗೆ ಬಂದ ಕಾರಣ ತಮ್ಮ ಫಲವನ್ನು ಕೊಟ್ಟು ಉಣಬಡಿಸಿ ಬಂದ ಕಾರ್ಯವ ಪೂರೈಸಿದರು ಎನ್ನುವುದು ಒಂದು ಬಗೆಯ ತಾತ್ವಿಕ ವಿವರಣೆಯಾಗಿದೆ.

ಹೌದು. ಈ ಇಬ್ಬರೂ ಶರಣರಲ್ಲಿ ಮಹಾಕಾವ್ಯಗಳು ಆಗಬಲ್ಲ ಬದುಕನ್ನು ಬದುಕಿದವರು. ಅವರು ನಡೆದ ಮಾರ್ಗದಲ್ಲೆಲ್ಲ ಎದುರಿಗೆ ಸಿಕ್ಕಂಥ ವ್ಯಕ್ತಿತ್ವಗಳನ್ನು ಪ್ರಭಾವಿಸಿ ಅವರೊಳಗೆ ಅರಿವಿನ ದೀಪ ಹಚ್ಚುತ್ತಲೇ ಕಲ್ಯಾಣಕ್ಕೆ ಬಂದು, ಕಲ್ಯಾಣದಲ್ಲಿ ಅರಿವಿನ ಬೆಳಕನ್ನು ಬಿತ್ತಿದರು. ಆದರೆ ಇಲ್ಲೊಂದು ವಿಚಿತ್ರವಾದ ತರತಮವನ್ನು ಶರಣರ ಚರಿತ್ರಕಾರರು ಮಾಡಿದ್ದಾರೆನ್ನುವುದು ಎಷ್ಟು ನಿಜವೋ ಅಷ್ಟೇ ತರತಮವನ್ನು ಇವತ್ತಿನ ತಲೆಮಾರು ಕೂಡ ಅನುಸರಿಸಿಕೊಂಡು ಬರುತ್ತಿರುವುದು ಬೇಸರದ ಸಂಗತಿಯಾಗಿದೆ. ಶರಣಸತಿ – ಲಿಂಗಪತಿ ಎಂಬ ಭಾವಾವಕಾಶವನ್ನು ಶರಣರೇ ಹೇಳಿದರು ಕೂಡ ಇವತ್ತಿನ ರಿಯಾಲಿಟಿಯಲ್ಲಿ ಲಿಂಗಾಯತ ತತ್ವ ಅದನ್ನು ಅಳವಡಿಸಿಕೊಂಡಿದೆಯೇ ಎನ್ನುವುದನ್ನು ನಮ್ಮ ಅಂತರಂಗಗಳಿಗೆ ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

ಅಲ್ಲಮಪ್ರಭುವನ್ನು ಕೇಂದ್ರವಾಗಿರಿಸಿಕೊಂಡು ಬರೆದ ಕಾವ್ಯಗಳೆಲ್ಲವೂ ಅದ್ಭುತವಾದ ಸಾಹಿತ್ಯ ಕೃತಿಗಳೇ ಆಗಿವೆ, ಪ್ರಭುಲಿಂಗಲೀಲೆ, ಶೂನ್ಯಸಂಪಾದನೆಗಳನ್ನು ಅತೀ ಮಹತ್ವದ ದಾಖಲಿತ ಚರಿತ್ರೆಯ ಹಾಗೆ ಸಂಕಲಿಸಲಾಗಿದೆ. ಅಲ್ಲಿ ಅಲ್ಲಮರು ಘನಮಹಿಮರಾಗಿ ಪ್ರವಾಹದ ಸ್ವರೂಪದಲ್ಲಿ ಊರೂರು ಅಲೆಯುತ್ತ ಯಾರೆಲ್ಲ ಕಲ್ಲಾಗಿದ್ದರೋ ಅವರನ್ನು ಕಟೆದು ಮೂರ್ತಿಯಾಗಿಸುವ ರೀತಿಯನ್ನು ಬಹು ಸೊಗಸಾಗಿ ಚಿತ್ರಿಸಲಾಗಿದೆ. ಗೊಗ್ಗಯ್ಯ, ಮುಕ್ತಾಯಕ್ಕ, ಗೋರಕ್ಷ, ಸಿದ್ಧರಾಮ ಶಿವಯೋಗಿ ಹೀಗೆ ಕಲ್ಯಾಣಕ್ಕೆ ತಲುಪುವ ಮುನ್ನವೇ ಅವರೊಳಗೆ ಕಲ್ಯಾಣದ ದರ್ಶನವನ್ನು ಮಾಡಿಸುತ್ತಾ ಪುರಪ್ರವೇಶಿಸಿ ಅಲ್ಲಿಯೂ ಸ್ವತಃ ಬಸವರಾಜರಿಗೂ ಕಾಣ್ಕೆಯ ಕಣ್ಣು ತೆರೆಸುವ ಪ್ರಸಂಗಗಳನ್ನು ಚಿತ್ರವತ್ತಾಗಿ ರೂಪಿಸಿದ್ದಾರೆ. ಆದರೆ ಅಲ್ಲಮನಿಗೆ ತೋರುವ ಆದರವನ್ನು ಈ ಕವಿಕಾರರು ಅಕ್ಕಮಹಾದೇವಿಗೇಕೆ ತೋರಲಿಲ್ಲ ಎನ್ನುವುದೊಂದು ಗುಂಭಪ್ರಶ್ನೆ ಧುತ್ತನೆ ಎದುರಾಗುತ್ತದೆ. ಶರಣರೊಳಗೆ ಇಲ್ಲದ ಲಿಂಗತರತಮ ನಂತರದ ಸಾಹಿತ್ಯ ರಚನೆಕಾರರಲ್ಲಿ ಯಾಕಾಗಿ ಬಂತು..? ಬಹುಶಃ ಈ ಲೋಕದ ಗ್ರಹಿಕೆಯೊಳಗೇ ಈ ತರತಮ ಹಾಸುಹೊಕ್ಕಾಗಿರುವುದರಿಂದ ಹೀಗಾಗಿರಬಹುದು. ಶರಣೆಯರೆಲ್ಲ ಸೇರಿಕೊಂಡು ಅವರದ್ದೆ ಆದೊಂದು ಅನುಭವಮಂಟಪ ಪ್ರತ್ಯೇಕ ನಡೆಸುವುದಾಗಿದ್ದರೆ ಅಲ್ಲಿ ಅಕ್ಕ ನಿಜವಾಗಿಯೂ ಶೂನ್ಯಪೀಠ ಏರಿರುತ್ತಿದ್ದರಲ್ಲವೆ..!

ಇದು ಶರಣರ ಕಾಲದ ಸಮಸ್ಯೆಯಲ್ಲ ಆ ನಂತರದ ನರೇಟಿವ್ಸ್ ಹಾಗೆ ರೂಪಿಸಿಕೊಳ್ಳಲಾಗಿದೆ ಎಂದು ಹೇಳಬಹುದಾದರೂ ಆ ಕಾಲದ ಏನಿತ್ತೋ ಅದನ್ನು ಈಗ ಸುಖಾಸುಮ್ಮನೇ ಕೆದಕಬಾರದು ಮತ್ತು ಅದನ್ನು ಸುಮ್ಮಸುಮ್ಮನೇ ಪ್ರಶ್ನಿಸಬಾರದೆಂದು ಭಾವಿಸಿದರೂ ಕೂಡ ಇವತ್ತಿನ ಲಿಂಗಾಯತ ತತ್ವದಲ್ಲಿ ಶರಣೆಯರನ್ನು ಯಾವ ರೀತಿ ನೋಡುತ್ತಿದ್ದೇವೆ ಎನ್ನುವುದನ್ನು ನಾವು ಗಮನಿಸಿಕೊಳ್ಳಬೇಕಾಗಿದೆ. ಸ್ತ್ರೀವಾದ ಎನ್ನುವುದನ್ನು ಶರಣೆಯರ ಹಿನ್ನೆಲೆಯಲ್ಲಿ ಎಷ್ಟು ಜನ ನೋಡುತ್ತಿದ್ದಾರೆ..? ಅದು ಹೋಗಲಿ ಜಾತಿಗೊಂದು ಮಠ ಕಟ್ಟಿಕೊಂಡಿದ್ದೇವಲ್ಲ ಎಷ್ಟು ಜನ ಮಠಾದಿಪತಿಗಳು ಶರಣೆಯರ ಹೆಸರಿನಲ್ಲಿ ಮಠ ಕಟ್ಟಿದ್ದಾರೆ..? ಎಷ್ಟು ಜನ ಪೀಠಾಧೀಶರು ಶರಣೆಯರಿದ್ದಾರೆ..? ಇಂದು ರಾಜ್ಯ/ಹೊರರಾಜ್ಯಗಳಲ್ಲಿ ಶರಣರ ತತ್ವಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ಶರಣೆಯರು ಎಷ್ಟು ಜನ ಅತಿಥಿಗಳಾಗಿರುತ್ತಾರೆ ಎನ್ನುವುದನ್ನು ಒಂದು ಸಲ ಸೂಕ್ಷ್ಮವಾಗಿ ಗಮನಿಸಬೇಕಿದೆ. ನಿಜವಾಗಿಯೂ ಕಲ್ಯಾಣದ ಕ್ರಾಂತಿಯ ನಂತರದಲ್ಲಿ ಅತಿ ಹೆಚ್ಚುಜನ ಬದುಕಿದವರು ಮತ್ತು ಶರಣರ ವಿಚಾರಗಳನ್ನು ನಾಡಿನ ತುಂಬೆಲ್ಲ ಪಸರಿಸಿದವರು ಶರಣೆತಾಯಿಯರು ಎನ್ನುವದನ್ನು ನಾವು ಮರೆಯಬಾರದು. ಸತ್ಯಕ್ಕನ ಹೆಸರಲ್ಲೂ, ಅಕ್ಕ ನಾಗಲಾಂಬಿಕೆ, ಹೇಮರೆಡ್ಡಿ ಮಲ್ಲಮ್ಮನ ಹೆಸರಿನಲ್ಲಿಯೂ ಗಂಡಸೇ ಮುಂದಾಳತ್ವ ವಹಿಸುತ್ತಾನೆ. ಚನ್ನಯ್ಯ, ಅಪ್ಪಣ್ಣ, ಗುಂಡಯ್ಯ, ಮಾಚಿದೇವ, ಚಂದಯ್ಯ, ಕಕ್ಕಯ್ಯ, ಚೌಡಯ್ಯಗಳೆಲ್ಲರೂ ಆಯಾ ಜಾತಿಗಳ ಸಾಂಸ್ಕೃತಿಕ ಐಕಾನ್ ಆಗಿ ಕಾಣಿಸುತ್ತಾರೆ ಹೊರತುಪಡಿಸಿ ಆ ಕಾಯಕದ ಶರಣರ ಪುಣ್ಯಸ್ತ್ರೀಗಳು ಸಾಂಸ್ಕೃತಿಕ ಐಕಾನ್ ಆಗದಿರುವಷ್ಟು ನಮ್ಮಗಳ ಮನಸ್ಸುಗಳಿಗೆ ವೈದಿಕ ತರತಮವನ್ನು ತುಂಬಲಾಗಿದೆ. ಇದೆಲ್ಲವನ್ನೂ ಮೀರಿ ಸಮುದಾಯದ ಸಾಂಸ್ಕೃತಿಕ ವಕ್ತಾರಳಾಗಿ ಹೇಮರಡ್ಡಿ ಮಲ್ಲಮ್ಮ ಒಬ್ಬಳು ತಾಯಿ ಉಳಿದಿರುವುದೊಂದು ನಮ್ಮ ಪಾಲಿನ ಭಾಗ್ಯವಾಗಿದೆ. ಉಳಿದಂತೆಲ್ಲ ಪುಣ್ಯಸ್ತ್ರೀಯರೂ ಪೂಜಿಸುವ ದೈವಗಳಾಗಿ ಹೋಗಿರುವುದು ಶರಣರ ವೈಚಾರಿಕ ತಿಳುವಳಿಕೆಗೆ ವಿರುದ್ಧದ ನಡೆಯಾಗಿದೆ. ದಾನಮ್ಮಳು, ಬಿಸ್ತೆವ್ವಳು, ಸತ್ಯವ್ವ, ಲಿಂಗಮ್ಮ, ನಾಗಮ್ಮರ ದೃಷ್ಟಿಕೋನದಲ್ಲಿ ಶರಣತತ್ವವನ್ನು ಮರುಪರಿಶೀಲಿಸಿಕೊಳ್ಳುವ ಅಗತ್ಯ ಇಂದಿನದಾಗಿದೆ ಎಂದು ವಿನಮ್ರವಾಗಿ ಪಾಠಕ ಶರಣರ ಅರಿವಿಗೆ ತರುತ್ತ ಈ ಪುಟ್ಟ ಬರಹವನ್ನು ಮುಗಿಸುತ್ತಿದ್ದೇನೆ, ಶರಣು ಶರಣಾರ್ಥಿಗಳು.

Previous post ಬೆಳಕಿನೆಡೆಗೆ…
ಬೆಳಕಿನೆಡೆಗೆ…
Next post ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ

Related Posts

ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
Share:
Articles

ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ

December 8, 2021 ಡಾ. ಕೆ. ಎಸ್. ಮಲ್ಲೇಶ್
ಫ್ರಿಜೋ ಕಾಪ್ರ- ಆಸ್ಟ್ರಿಯಾ ಮೂಲದ ಅಮೆರಿಕದ ಭೌತಶಾಸ್ತ್ರಜ್ಞ. ಕಣ ಭೌತವಿಜ್ಞಾನದಲ್ಲಿ ಅವರದು ಗಮನಾರ್ಹ ಸಾಧನೆ. ‘ದಿ ತಾವೋ ಆಫ್ ಫಿಸಿಕ್ಸ್’ ಸೇರಿದಂತೆ ಮಹತ್ತರ...
ಬಸವನಾ ಯೋಗದಿಂ…
Share:
Articles

ಬಸವನಾ ಯೋಗದಿಂ…

July 1, 2018 ಡಾ. ಪಂಚಾಕ್ಷರಿ ಹಳೇಬೀಡು
ನಮ್ಮ ಕಿವಿಯ ಮೇಲೆ ಪ್ರತಿನಿತ್ಯ ಯೋಗ ಎಂಬ ಶಬ್ದ ಹಲವಾರು ಬಾರಿ  ಅಪ್ಪಳಿಸುತ್ತದೆ. ಲಕ್ಷಾಂತರ ಯೋಗ ತರಬೇತಿ ಶಾಲೆಗಳು ಜಗತ್ತಿನಾದ್ಯಂತ ಮೈಚಾಚಿಕೊಂಡಿವೆ, ಯೋಗ ಈಗ ಒಂದು ಹುಲುಸಾದ...

Comments 10

  1. Nikhil .s. patil
    Jun 11, 2023 Reply

    ಮಹಾದೇವ ಹಡಪದ ಸರ ಅವರು ಬರೆದ ಲೇಖನ ಹೆಂಗೂಸೆಂಬ ಭಾವ ತೋರದ ಮುನ್ನ..
    ಇದರಲ್ಲಿ ಲೇಖಕರಾದ ಮಹಾದೇವ‌ ಹಡಪದ ಸರ ಅವ್ರು ಒಂದ ಮಾತನ್ನ ಬರೀತಾರೆ -” ವೈಚಾರಿಕತನ ಬಿಟ್ಟು ದೇವರಗಳನ್ನಾಗಿ ಮಾಡಿದ್ದಾರೆಂತ ” ಇದೂ ಇವತ್ತಿನ ಸಮಾಜದ ಮೌಢ್ಯತನ‌ ಪ್ರತಿಬಿಂಬಿಸುವ ಲೇಖಕರ ಮಾತಾಗಿದೆ ಹಾಗಾಗಿ ಈ ಲೇಖನ ಎಲ್ಲೆಲ್ಲಿ ಬೆಕಲ್ಲಿ ಹರಡ್ಲಿ ಈ ಲೇಖನ ಇವತ್ತಿನ ಸಮಾಜಕ್ಕೆ ಬಹುಮುಖ್ಯವಾದದ್ದು ಮಹಾದೇವ ಹಡಪದ ಸರ ನೀವು ಲೇಖನಗಳನ್ನ ಹೀಗೆ ಬರೀತಾ ಇರಿ ನಮನ್ನಾ ಪ್ರಜ್ಞಾರಂತ್ರಾಗಿ ಮಾಡ್ತಾ ಇರಿ ಧನ್ಯವಾದಗಳೂ ನಿಮ್ಗೆ‌ ಸರ..

  2. Shubha
    Jun 14, 2023 Reply

    ನಿಜ, ಇಲ್ಲಿಯೂ ತರ ತಮ ಭೇದ.

  3. ಪೆರೂರು ಜಾರು, ಉಡುಪಿ
    Jun 14, 2023 Reply

    ಹೆಣ್ ಕೂಸೆಂದು ಕಣ್ಕಣ್ ಬಿಟ್ಟವರು
    ಪೆಣ್ ಸಾಧನೆಯ ಕಟ್ಟಿ ಅಟ್ಟದಿ ಇಟ್ಟರು

  4. Harsha Bengaluru
    Jun 15, 2023 Reply

    ಅಕ್ಕಮಹಾದೇವಿಯರು ಕರ್ನಾಟಕಕ್ಕಿಂತ ಆಂಧ್ರಪ್ರದೇಶದಲ್ಲೇ ಹೆಚ್ಚು ಹೆಸರುವಾಸಿ. ಅಕ್ಕುಲಮ್ಮನ ದೇವಾಲಯಗಳೆಂದೇ ಅಕ್ಕನ ಮಠಗಳಿವೆ ಎಂದು ಕೇಳಿದ್ದೇನೆ… ಶರಣರು ಭಾರತದಾದ್ಯಂತ ಚದುರಿ ಹೋಗಿದ್ದರಿಂದ ಅವರ ಲಿಂಗ ಸಮಾನತೆಯ ವಿಚಾರಗಳು ಮುಂದಿನ ತಲೆಮಾರುಗಳಲ್ಲಿ ಸಾಗಿ ಬರಲಿಲ್ಲ.

  5. PROF SOMASHEKHARAPPA
    Jun 20, 2023 Reply

    The Social Construct of Gender, Gender Bias, Gender Disoarity/ Discrimination have been thoroughly indoctrinated in every human being by the prevailing methods in each society both in historical times as well as contemporary time.
    Those who speak against such practices and put up a show of being non- hypocritical are the first order hippocrates. Social concealment and camouflaging have been the approach of the so called elites of all types all the time in human world. So the Sharanas were not different.As a result Akka gets pushed to background in Sharanara thoughts and actions.
    Pl react to my sociological observations of human behaviour.
    Regards

  6. Vidya Patil, Bengaluru
    Jun 21, 2023 Reply

    ನಿಜಕ್ಕೂ ಚಿಂತನೆಗೆ ಹಚ್ಚುವ ವಿಚಾರ

  7. Praveen S
    Jun 25, 2023 Reply

    ಜಾತಿಗೊಂದು ಮಠ ಎನ್ನುವುದೇ ಪ್ರಕ್ಷಿಪ್ತ ಯೋಚನೆ. ಶರಣರು ಜಾತಿಗೂ, ಲಿಂಗಕ್ಕೂ ಅತೀತರು ಎನ್ನುವುದು ನನ್ನ ಅಭಿಮತ. ಅಕ್ಕ ಅಲ್ಲಮರಷ್ಟೇ ಮುಖ್ಯಳು. ಅಥವಾ ಶರಣರಲ್ಲಿ ಯಾರೂ ಮುಖ್ಯರು, ಅಮುಖ್ಯರು ಎನ್ನುವುದು ಸರಿಯೇ ಅಲ್ಲಾ-

  8. ಸುದರ್ಶನ ಪತ್ತಾರ
    Jun 26, 2023 Reply

    ಲಿಂಗಾಯತರ ಮನೆಗಳನ್ನು ನೋಡಿದರೆ ಗೊತ್ತಾಗುತ್ತದೆ, ಮೇಲ್ಮಟ್ಟದ ಸಮಾನತೆ ಮಾತ್ರ ಕುಟುಂಬಗಳಲ್ಲಿದೆ, ಒಳಗಿಳಿದು ನೋಡಿದರೆ ಇಲ್ಲಿಯೂ ಪುರುಷ ಪ್ರಧಾನ ವ್ಯವಸ್ಥೆಯೇ ಮುಂದುವರೆದಿದೆ. ಆಯ್ದಕ್ಕಿ ಲಕ್ಕಮ್ಮ, ಹಡಪದ ಲಿಂಗಮ್ಮನಂತಹ ಅನೇಕ ಮಹಿಳೆಯರು ಏರಿ ತೋರಿದ ಆಧ್ಯಾತ್ಮ ಬದುಕನ್ನು ಊಹಿಸಿಕೊಳ್ಳುವುದೂ ಕಷ್ಟ. ವೈದಿಕ ಮನೋಭಾವದ ತರತಮ ಭಾವ ಎಲ್ಲರನ್ನೂ ಆಹುತಿ ತೆಗೆದುಕೊಂಡಿದೆ, ಯಾರನ್ನೂ ಬಿಟ್ಟಿಲ್ಲಾ… ಉತ್ತಮ ಚಿಂತನೆ.

  9. ಸತೀಶ್ ಹಿರೇಹೊನ್ನೂರು
    Jun 26, 2023 Reply

    ಶರಣರ ಕುರಿತಾಗಿ ಬಂದ ಪುರಾಣಗಳನ್ನು ವಿಸ್ತರಿಸುತ್ತಾ ಮಹಾಕಾವ್ಯಗಳನ್ನಾಗಿ ಮಾಡಬಹುದಿತ್ತು. ಆದರೆ ಬಸವಾದಿ ಅಲ್ಲಮರಂತಹ ಶರಣರು ಪುರಾಣದ ರೇಖೆಗಳಿಗೆ ಸಿಲುಕುವವರಲ್ಲಾ. ವೈಚಾರಿಕವಾಗಿ, ವೈಜ್ಞಾನಿಕವಾಗಿ, ತಾರ್ಕಿಕವಾಗಿ ನಡೆದ ಅವರ ಇತಿಹಾಸದಲ್ಲಿ ಪುರಾಣಗಳು ಸರಿಹೊಂದುವುದಿಲ್ಲ. ಶರಣೆಯರನ್ನು ಕುರಿತಾಗಿ ಸಮಾನತೆಯುಳ್ಳ ಶರಣರಲ್ಲಿ ನಮ್ಮ ಆಧುನಿಕ ಚಾಳೀಸನ್ನು ಹಾಕಿಕೊಂಡು ಇನ್ನೂ ಸಮಾನತೆ ಬರಬೇಕಿತ್ತು ಎಂದು ನಿರೀಕ್ಷಿಸುವುದು ಎಷ್ಟು ಸರಿ?

  10. Vinay Bellur
    Jun 27, 2023 Reply

    ಬಯಲು ನನ್ನ ನೆಚ್ಚಿನ ಓದಿನ ತಾಣ, ಥ್ಯಾಂಕ್ಸ್ ಫಾರ್ ಗುಡ್ ಆರ್ಟಿಕಲ್ಸ್… ಅಕ್ಕನ ಕತೆ ಯಾವ ಮಹಾಕಾವ್ಯಕ್ಕೂ ಕಡಿಮೆ ಏನಲ್ಲಾ. ಅಕ್ಕನ ಹೋರಾಟ, ದಿಟ್ಟತನ, ಸಾಧನೆ… ಒಂದೊಂದೂ ಮಹಾ ಅಧ್ಯಾಯಗಳು. ಪುರುಷ ಸಮಾಜಕ್ಕೆ ಸವಾಲು ಹಾಕಿ ನಡೆವ ಅಕ್ಕನ ಜೀವನ ಹೋರಾಟವನ್ನು ಅರಗಿಸಿಕೊಳ್ಳುವ ಶಕ್ತಿ ಯಾವಾಗ ಸಮಾಜಕ್ಕೆ ಬರುತ್ತದೆಯೋ ಆಗ ಅಕ್ಕನ ಮಹಾಕಾವ್ಯ ಹುಟ್ಟುತ್ತದೆ.

Leave a Reply to Shubha Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು
May 6, 2020
ಅನುಭವ ಮಂಟಪ
ಅನುಭವ ಮಂಟಪ
April 11, 2025
ನಾನರಿಯದ ಬಯಲು
ನಾನರಿಯದ ಬಯಲು
April 9, 2021
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ಲಿಂಗಾಯತ ಸ್ವತಂತ್ರ ಧರ್ಮ
ಲಿಂಗಾಯತ ಸ್ವತಂತ್ರ ಧರ್ಮ
July 10, 2023
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
Copyright © 2025 Bayalu