Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶರಣರು ಕಂಡ ಸಮಸಮಾಜ
Share:
Articles July 4, 2022 ಡಾ. ಚಂದ್ರಶೇಖರ ನಂಗಲಿ

ಶರಣರು ಕಂಡ ಸಮಸಮಾಜ

(ಲಿಂಗ ಸಮಾನತೆ ಮತ್ತು ಆರ್ಥಿಕ ಸಮಾನತೆ)
ಹನ್ನೆರಡನೆ ಶತಮಾನದ ಶರಣ ಚಳುವಳಿಯನ್ನು ಅಧ್ಯಯನ ಮಾಡುವಾಗ 800 ವರ್ಷಗಳ ಅಂಧಕಾರಯುಗವನ್ನು ಮರೆಯಬಾರದು. ವಚನಗಳನ್ನು ಸಾಹಿತ್ಯ ದೃಷ್ಟಿಯಿಂದ ನೋಡುತ್ತಿರುವುದು ಇಪ್ಪತ್ತನೇ ಶತಮಾನದಲ್ಲಿ ಮಾತ್ರ! ಹಳಗನ್ನಡ ಕಾವ್ಯಗಳ ಸಂಪಾದನೆ ಮತ್ತು ಮುದ್ರಣ ಮಾಡುತ್ತಿದ್ದ ಕ್ರೈಸ್ತ ಮಿಷನರಿಗಳು ವಚನಸಾಹಿತ್ಯದ ಪ್ರಕಟನೆಗೆ ಮನಸ್ಸು ಕೊಡಲಿಲ್ಲ. ಈ ಬಗ್ಗೆ ಕ್ರೈಸ್ತ ಪಾದರಿಯೊಬ್ಬರ ಮನೋಗತವನ್ನು ಎಂ.ಎಂ.ಕಲಬುರ್ಗಿಯವರು ತಮ್ಮ ಸಂಪುಟ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ: “ವಚನ ಸಾಹಿತ್ಯದ ಪ್ರಕಟನೆಯಿಂದ ಕ್ರೈಸ್ತ ಧರ್ಮ ಪ್ರಚಾರಕ್ಕೆ ಅಡ್ಡಿಯಾಗುವುದು” ಎಂಬ ಅವರ ಅಭಿಪ್ರಾಯ ಗಮನಾರ್ಹ!

ಹೀಗೆ ನಿರ್ಲಕ್ಷ್ಯತೆಗೆ ಈಡಾಗಿದ್ದ ವಚನಗಳನ್ನು ಫ.ಗು.ಹಳಕಟ್ಟಿ ಮತ್ತು ಶಿ.ಶಿ.ಬಸವನಾಳರು ಪ್ರಕಾಶಕ್ಕೆ ತಂದದ್ದು ಪ್ರಾತಃಸ್ಮರಣೀಯ. ತಮ್ಮ ಬದುಕಿನ ಕಷ್ಟನಷ್ಟಗಳ ಮಧ್ಯೆ ಇವರು ವಚನಪ್ರಕಟಣೆಯ ಸಾಹಸಕ್ಕೆ ಕೈ ಹಾಕಿದ್ದು ಕನ್ನಡ ಸಂಸ್ಕೃತಿಯ ಹೆಮ್ಮೆಯೇ ಸರಿ. ಆದರೆ ಈ ಸಂದರ್ಭದಲ್ಲಿ ನಾವು ಮರೆಯಬಾರದ ಸಂಗತಿಯೆಂದರೆ, 800 ವರ್ಷಗಳ ಸುದೀರ್ಘ ಅಂತರ. ಮೆಟ್ರೋರೈಲು ನಿರ್ವಹಣೆಯಲ್ಲಿ Please mind the gap [ದಯಮಾಡಿ ಅಂತರವನ್ನು ಗಮನಿಸಿ] ಎಂಬ ಸೂಚನೆಯಿದೆ. ಇದೇ ಸೂಚನೆಯನ್ನು ಈಗಿನ ವಚನಸಾಹಿತ್ಯದ ಅಭ್ಯಾಸಿಗಳೆಲ್ಲರೂ ಗಮನಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ವಚನಸಾಹಿತ್ಯದ ದೃಷ್ಟಿ ಧೋರಣೆಗಳನ್ನು ಮೂಲೆಗುಂಪು ಮಾಡಿದ ಶೈವ ಪುರೋಹಿತಶಾಹಿ ಮತ್ತು ವೀರಶೈವ ಪುರೋಹಿತಶಾಹಿ ವ್ಯವಸ್ಥೆಗಳು ರಾಹು ಕೇತುಗಳಂತೆ ವರ್ತಿಸಿ, ವಚನಸೂರ್ಯ/ ವಚನಚಂದ್ರರಿಗೆ ಗ್ರಹಣ ತಂದದ್ದು ಮರೆಯಬಾರದು. ಸೂರ್ಯ ಚಂದ್ರ ಗ್ರಹಣಗಳು ಆಗುತ್ತವೆ ಮತ್ತು ಬಿಟ್ಟು ಹೋಗುತ್ತವೆ. ಆದರೆ ಈ ಪುರೋಹಿತಶಾಹಿ ವ್ಯವಸ್ಥೆಯ ಬಿಗಿಹಿಡಿತ ಅಥವಾ ಮೀಡಿಯಾ ಕಂಟ್ರೋಲ್ 800 ವರ್ಷಗಳ ಅಂಧಕಾರ ಯುಗವನ್ನು ಸೃಷ್ಟಿ ಮಾಡಿದೆ. ಇಡೀ ವಚನ ಚಳುವಳಿ ಮತ್ತು ಸಾಹಿತ್ಯವು ವೈದಿಕವರ್ಗದ ಆರಾಧ್ಯ ಬ್ರಾಹ್ಮಣರ ಬಿಗಿಹಿಡಿತಕ್ಕೆ ಸಿಕ್ಕು ವೈದಿಕೀಕರಣಕ್ಕೆ ಒಳಗಾದದ್ದು ದುರಂತ! ಹನ್ನೆರಡನೇ ಶತಮಾನವನ್ನು ಬೆಳಗಿದ ಅಲ್ಲಮಪ್ರಭು ಎಂಬ ಕಲ್ಯಾಣದ ಬೆಳಕು ಇಂಥ ಮೀಡಿಯಾ ಕಂಟ್ರೋಲ್ ಅನ್ನು ಮೆಟ್ಟಿ ನಿಂತು, ಗುಪ್ತದ್ವಾರದ ಸುರಂಗಮಾರ್ಗದಲ್ಲಿ ಚಲಿಸುತ್ತ ಮಂಟೇಸ್ವಾಮಿಯಾಗಿ ಅವತರಿಸಿದ್ದನ್ನು ಮೌಖಿಕ ಪರಂಪರೆಯಲ್ಲಿ ಮನಗಾಣಬಹುದು. ಆದರೆ ಗ್ರಾಂಥಿಕ ಪರಂಪರೆಯಲ್ಲಿ ಅಕ್ಷರದ ಅಹಂಕಾರವೇ ಕಾರಣವಾಗಿ, ಕಲ್ಯಾಣದ ಬೆಳಕು ಕ್ಷೀಣವಾಗಿದೆ ಅಥವಾ ನಂದಿಹೋಗಿದೆ.

ಇಪ್ಪತ್ತನೇ ಶತಮಾನದಲ್ಲಿ ಕಲ್ಯಾಣದ ಬೆಳಕು ನಮ್ಮ ಕೋಲಾರದ ಸಂತರಾದ ಡಾ.ಎಲ್. ಬಸವರಾಜು ಅವರ ಸಂಪಾದನಾ ಗ್ರಂಥಗಳ ‘ಬಸವರಾಜಮಾರ್ಗ’ದಲ್ಲಿ ಕಾಣಬಹುದು. ಶೈವ ಮತ್ತು ವೀರಶೈವ ಪುರೋಹಿತಶಾಹಿ ವ್ಯವಸ್ಥೆಯ ಸುಳ್ಳುಸೃಷ್ಟಿಗಳ ಹುಲ್ಲಿನ ಬಣವೆಯಲ್ಲಿ ಮುಚ್ಚಿಹೋಗಿದ್ದ ನಿಜೋದಯ ಸೂಜಿಯನ್ನು ಎತ್ತಿ ತೋರಿಸಿದ ಕೀರ್ತಿ ಡಾ.ಎಲ್.ಬಸವರಾಜು ಅವರಿಗೆ ಸಲ್ಲುತ್ತದೆ. (1) ಅಲ್ಲಮನ ವಚನಗಳು, (2) ಅಲ್ಲಮನ ವಚನಚಂದ್ರಿಕೆ, (3) ಶಿವಗಣಪ್ರಸಾದಿ ಮಹಾದೇವಯ್ಯನ ಮೊದಲನೇ ಶೂನ್ಯಸಂಪಾದನೆ – ಇವು ಬೆಂಕಿಯ ಕಿಡಿಗಳಾಗಿ ಮೂಡಿಬಂದು, ಸುಳ್ಳುಸೃಷ್ಟಿಗಳ ಹುಲ್ಲಿನ ಬಣವೆಯನ್ನು ದಹನ ಮಾಡಿದವು.
ವಚನಸಾಹಿತ್ಯದ ಉಗಮವನ್ನು ಎಲ್ಲಾ ವಿದ್ವಾಂಸರು ತಮಿಳುನಾಡು ಮುಂತಾದ ಅನ್ಯಮೂಲಗಳಿಂದ ಸಾಧಿಸಿದರೆ, ಡಾ.ಎಲ್. ಬಸವರಾಜು ಅವರು ಬಸವಣ್ಣನಿಗಿಂತಲೂ ಪೂರ್ವಿಕರಾದ ದಲಿತವಚನಕಾರರ ಮೂಲಕ ಪ್ರತಿಪಾದಿಸಿದ್ದಾರೆ. ಮಾದರ ಚನ್ನಯ್ಯ, ಡೋಹರ ಕಕ್ಕಯ್ಯ, ಜೇಡರ ದಾಸಿಮಯ್ಯ ಮುಂತಾದವರ ಭಕ್ತಿಭಿಕ್ಷೆಯನ್ನು ಬೇಡಿ ಪಡೆದು ನನ್ನ ಹೃದಯಪಾತ್ರೆ ತುಂಬಿತ್ತು ಎಂಬ ಬಸವಣ್ಣನವರ ವಚನಗಳನ್ನು ಉಲ್ಲೇಖಿಸುತ್ತಾ “ಹನ್ನೆರಡನೇ ಶತಮಾನದ ವಚನಚಳುವಳಿಗೆ ದಲಿತಶರಣರೇ ಆದ್ಯರೆಂದೂ, ಇದೇ ಕರ್ನಾಟಕದ ಮೊದಲನೇ ದಲಿತಚಳುವಳಿ” ಎಂದೂ ಅಭಿಪ್ರಾಯಪಟ್ಟಿದ್ದಾರೆ. ಇವರ ಅಧ್ಯಯನ ಮತ್ತು ಸಂಶೋಧನೆ ಮುಂದಿನ ತಲೆಮಾರುಗಳಿಗೆ ಸ್ಫೂರ್ತಿಶಕ್ತಿಯಾಗಬೇಕು. ಡಾ.ಎಲ್.ಬಸವರಾಜು ಅವರನ್ನು ಹೊರತು ಪಡಿಸಿದರೆ, ‘ಬಸವಚಳುವಳಿಯ ಭೌತವಾದಿ ಅಧ್ಯಯನ’ ಎಂಬ ಕಿರುಕೃತಿಯನ್ನು ರಚನೆ ಮಾಡಿರುವ ಪಿ.ಎಸ್.ಪಾಟೀಲ ಎಂಬ ವಕೀಲರ ಅಧ್ಯಯನ ಅತ್ಯಂತ ಗಮನಾರ್ಹ!

ಇದಿಷ್ಟು ಹಿನ್ನೆಲೆಯಲ್ಲಿ ನಾವೀಗ ‘ಶರಣರು ಕಂಡ ಸಮ ಸಮಾಜ’ ಕುರಿತ ಚಿಂತನೆಯನ್ನು ನಡೆಸಬೇಕಾಗಿದೆ.

(1) ನೈಸರ್ಗಿಕ ಸಮಾನತೆ

ನಿಸರ್ಗನಿರ್ಮಿತ ಸಕಲಜೀವರಾಶಿಯ ಮಧ್ಯೆ ತಾರತಮ್ಯ ಮತ್ತು ಭೇದಭಾವ ಇಲ್ಲ. ಸಸ್ಯಗಳು, ಪ್ರಾಣಿಗಳು, ಮನುಷ್ಯರು ಪರಸ್ಪರ ಅವಲಂಬನೆಯ ಜೀವಜಾಲಕ್ಕೆ ಬದ್ಧರು. ಈ ಜೀವಿಗಳ ಮಧ್ಯೆ ಇರುವ ಸಮಾನತೆಯೇ ನೈಸರ್ಗಿಕ ಸಮಾನತೆ. ಹುಲ್ಲು ಮತ್ತು ಮಹಾವೃಕ್ಷ , ಇರುವೆ ಮತ್ತು ಆನೆ, ಮಣ್ಣು ಹುಳ ಮತ್ತು ಮನುಷ್ಯ ಮುಂತಾದ ಸಕಲ ಜೀವರಾಶಿಯ ಮಧ್ಯೆ ತಾರತಮ್ಯವಾಗಲಿ, ಭೇದಭಾವವಾಗಲಿ ಇಲ್ಲ! ಇಂಥ ಉದಾತ್ತ ನಿಸರ್ಗವಿವೇಕವು ನಾಶವಾಗುವುದು ವರ್ಣ ಮತ್ತು ವರ್ಗ ಹಿತಾಸಕ್ತಿಗಳ ನಾಗರಿಕತೆಯಿಂದ ಎಂಬುದು ಆತಂಕಕಾರಿಯಾದ ಸತ್ಯ! ಮಾನವನಿರ್ಮಿತ ಸಮಾಜದಲ್ಲಿ ಜಾತಿ, ಬಣ್ಣ, ಲಿಂಗ, ಜನಾಂಗ, ಮತಧರ್ಮ, ದೇಶ, ಭಾಷೆ ಮುಂತಾದ ಉಪಾಧಿಗಳಿಗೆ ವಶರಾಗಿ ತಾರತಮ್ಯ ಮತ್ತು ಭೇದಭಾವಗಳ ಮೂಲಕ ಜನ್ಮಾಧಾರಿತ ಅಸಮಾನತೆಯನ್ನು ಇಡೀ ಮಾನವ ಸಮಾಜದ ಮೇಲೆ ಹೇರುವುದರಿಂದ ಸಾಮಾಜಿಕ ಅಸಮಾನತೆ ಹುಟ್ಟುತ್ತದೆ.

ಬಸವಚಳುವಳಿಯ ಭೌತಿಕವಾದಿ ಅಧ್ಯಯನ ನಡೆಸಿರುವ ಪಿ.ಎಸ್.ಪಾಟೀಲರು ಕಾರ್ಲ್ ಮಾರ್ಕ್ಸ್ ಪ್ರತಿಪಾದಿಸಿದ ಆದಿಮ ಸಮತಾವಾದ (ಪ್ರಿಮಿಟಿವ್ ಕಮ್ಯೂನಿಸಮ್) ಪ್ರಪಂಚದಾದ್ಯಂತ ಅಸ್ತಿತ್ವದಲ್ಲಿರುವ ಬುಡಕಟ್ಟು ಸಮಾಜ (ಟ್ರೈಬಲ್ ಸೊಸೈಟಿ)ಗಳ ಉಲ್ಲೇಖ ಮತ್ತು ವ್ಯಾಖ್ಯಾನಗಳಿಂದ ಶರಣರು ಕಂಡ ಸಮ ಸಮಾಜದ ಚಿಂತನೆಗಳನ್ನು ನಿರೂಪಿಸಿದ್ದಾರೆ.

(2) ಆದಿಮ ಸಮತಾವಾದ ಮತ್ತು ಬುಡಕಟ್ಟು ಜನರ ಗಣಸಮಾಜದ ಸಾಮುದಾಯಿಕ ಒಡೆತನ:

ಖಾಸಗಿ ಆಸ್ತಿ + ಕುಟುಂಬ + ರಾಜ್ಯಗಳ ಉದಯಕ್ಕೂ ಮುಂಚೆ, ಅಂದರೆ ವರ್ಗ ಸ್ವಭಾವ ಪ್ರಕಟಗೊಳ್ಳುವುದಕ್ಕೂ ಮುಂಚೆ, ಆದಿಮಾನವರ ‘ಆದಿಮ ಸಮಾಜ’ದಲ್ಲಿ ಆದಿಮ ಸಮತಾವಾದ ( ಪ್ರಿಮಿಟಿವ್ ಕಮ್ಯೂನಿಸಮ್) ಅಸ್ತಿತ್ವದಲ್ಲಿತ್ತು ಎಂದೂ ಮಾರ್ಕ್ಸ್ ವಾದ ಪ್ರತಿಪಾದಿಸುತ್ತದೆ. ಇದರ ಅವಶೇಷಗಳನ್ನು ನಾವು ಇಂದಿಗೂ ಅರಣ್ಯಾಧಾರಿತ ಜೀವನವನ್ನು ನಡೆಸುತ್ತಿರುವ ಬುಡಕಟ್ಟು ಜನರ ಗಣಸಮಾಜ ಮತ್ತು ಸಾಮುದಾಯಿಕ ಮನೋಧರ್ಮದಲ್ಲಿ ಗುರುತಿಸಬಹುದು ಎಂದು ಕಾರ್ಲ್ ಮಾರ್ಕ್ಸ್ ಹೇಳಿದ್ದಾರೆ. ಇದನ್ನು ಉಲ್ಲೇಖಿಸುತ್ತಾ ದೇವಿ ಪ್ರಸಾದ್ ಚಟ್ಟೋಪಾಧ್ಯಾಯ ಅವರು, “ಆದಿಮ ಸಮತಾವಾದದ ತಳಹದಿಯ ಮೇಲೆಯೇ ಬುಡಕಟ್ಟುಜನರ ಗಣಸಮಾಜದ ಸರ್ವಭೂತ ಹಿತಾರ್ಥಪರವಾದ ನೈತಿಕತೆ ಬೆಳೆದಿದೆ. ಅರಣ್ಯಾಧಾರಿತ ಜೀವನಕ್ರಮದಲ್ಲಿ
ಮನುಷ್ಯರ ಸ್ವಾರ್ಥಪರತೆಯನ್ನು ಅಂಕೆಯಲ್ಲಿ ಇಡುವ, ಸ್ವೇಚ್ಛೆಯ ವಿಷವಿಕಾರಗಳನ್ನು ನಿಯಂತ್ರಿಸುವ, ಒಳಪ್ರೇರಣೆಯೊಂದು ಸ್ವಾಭಾವಿಕವಾಗಿಯೇ ನೀರ ಚಿಲುಮೆಯಂತೆ ಎದ್ದೇಳುತ್ತದೆ(=ಲೋಕಾಯತ: ಪುಟ 558 ).”
ಇದನ್ನು ಉಲ್ಲೇಖಿಸುತ್ತಾ ಪಿ.ಎಸ್.ಪಾಟೀಲ ಹೇಳುವ ಮಾತುಗಳಿವು: “ಇದು ಮೇಲಿನಿಂದ ಹೇರಲ್ಪಟ್ಟ ಬಲವಂತದ ಒಗ್ಗಟ್ಟಲ್ಲ! ಅದು ತಂತಾನೆ ಸ್ವಾಭಾವಿಕವಾಗಿ ಬುಡಕಟ್ಟಿನ ಒಳಗಿಂದಲೇ ಬೆಳೆದು ಬಂದ ಭಾವನೆ, ಒಬ್ಬ ಬುಡಕಟ್ಟಿನವನಿಗೆ ನೋವಾದರೆ ಇಡೀ ಬುಡಕಟ್ಟೇ ನೊಂದುಕೊಳ್ಳುತ್ತದೆ.”

(3) ಬಸವ ಚಳುವಳಿ: ಗಣಸಮಾಜದ ಪುನರುಜ್ಜೀವನ- ಪಿ.ಎಸ್.ಪಾಟೀಲ

ಗಣ = ಬುಡಕಟ್ಟು ( tribe ); ಶರಣರು = ಗಣಗಳು, ಮರ್ತ್ಯಲೋಕದ ಗಣಂಗಳು, ಬಸವಣ್ಣನಿಗೆ ಜೊತೆಯಾಗಿ 770 ಅಮರಗಣಂಗಳು ಇದ್ದರು; ವಚನಗಳು = ಗಣಭಾಷಿತಗಳು; ಅನುಭಾವ ಸಂಗ = ಗಣಮೇಳಾಪ

ವರ್ಗಸಮಾಜದ ಲಕ್ಷಣಗಳಾದ ಹಿಡುವಳಿ, ಶೋಷಣೆ, ಅಸಮಾನತೆ, ವೈಷಮ್ಯಭಾವನೆಗಳೇ ಇಲ್ಲದ ‘ಗಣ ಸಮಾಜ’
(tribal society) ರಚನೆ ಪ್ರಪಂಚದ ಎಲ್ಲಾ ಭಾಗಗಳಲ್ಲಿ ಇರುವಂತೆ, ಭಾರತದಲ್ಲೂ ಸ್ಥಾಪಿತವಾಗಿತ್ತು. ಇದರಿಂದ ಸ್ಫೂರ್ತಿ ಪಡೆದ ಕಪ್ಪಡಿಗಳು (=ಚಿಂದಿಯುಟ್ಟ ತಿರುಕ ಸಂತರು) ಗಣಾದರ್ಶವನ್ನು ಪ್ರಸ್ತುತಪಡಿಸುತ್ತಿದ್ದರು. ಬಸವಾದಿ ಪ್ರಮಥ ಗಣಂಗಳು ಪ್ರಾಚೀನ ಗಣಜೀವನದ ಅವಶೇಷಗಳೊಡನೆ ಸಂಬಂಧ ಹೊಂದಿರುವುದು ಮುಖ್ಯವಾಗಿದೆ. ಬಸವ ಧರ್ಮವು ಗಣಜೀವನದ ಆದರ್ಶವನ್ನು ಪ್ರತಿಪಾದಿಸಿದ್ದರಿಂದ ಬೇಗನೆ ಜನಪ್ರಿಯತೆ ಪಡೆಯಿತು. ‘ಗಣಜೀವನ’ ಎಂಬುದು ಉತ್ಪಾದನಾಪೂರ್ವ ಸಮಾಜದಲ್ಲಿ ಕಾಣುವ ಪ್ರಾಥಮಿಕ ಘಟ್ಟದ ಸಾಮಾಜಿಕ ವ್ಯವಸ್ಥೆ. ಬೇಟೆ ಮತ್ತು ಆಹಾರ ಸಂಗ್ರಹಣೆಯೇ ಪ್ರಧಾನವಾದ ‘ಆದಿಮ ಸಮತಾವಾದ’ದಲ್ಲಿ ಉತ್ಪಾದನೆ ಮತ್ತು ವಿತರಣೆಗಳ ಮಧ್ಯೆ ಯಾವುದೇ ಅಂತರವಿರುವುದಿಲ್ಲ. ಈ ಅಂತರ ಹೆಚ್ಚಿದಷ್ಟೂ ಖಾಸಗಿ ಆಸ್ತಿ + ಹಿಡುವಳಿ + ಶೋಷಣೆ + ಹಿಂಸೆ ಕ್ರೌರ್ಯಗಳು ಹೆಚ್ಚುತ್ತವೆ. “ಗಣಭಕ್ತಿಯೇ ಜೀವನ, ಗಣ ವಿಭಕ್ತಿಯೇ ಮರಣ”- ಎಂಬ ತಾತ್ವಿಕತೆ ಶರಣರಲ್ಲಿದೆ. ಬಸವಾದಿ ಪ್ರಮಥರು ಬೋಧಿಸಿದ ‘ನವ್ಯ ಲಿಂಗಾಯತ’ವು ಗಣಜೀವನಾದರ್ಶದ ಪುನರುಜ್ಜೀವನ ಪ್ರಯತ್ನವೆಂದು ಗ್ರಹಿಸಬೇಕು. ಖಾಸಗಿ ಆಸ್ತಿ ಮತ್ತು ಹಿಡುವಳಿ ಹೊಂದಿರುವ ಅರಮನೆ + ಗುರುಮನೆ + ಧಣಿಮನೆಗಳಿಗೆ ವಿರುದ್ಧವಾಗಿ ಬಸವಣ್ಣನವರು ಸಾಮುದಾಯಿಕ ಒಡೆತನದ ಮಹಾಮನೆಯ ಬಾಗಿಲನ್ನು ತೆರೆದರು.

ಸ್ಥಾನಪತಿ / ಮಠಪತಿಗಳ ಸ್ಥಾವರಲಿಂಗ ತತ್ವಕ್ಕೆ ವಿರುದ್ಧವಾಗಿ ಆದಿಗಣಸಂಪ್ರದಾಯಕ್ಕೆ ಹತ್ತಿರವಾಗಿದ್ದ ಕಪ್ಪಡಿ ಕ್ಷೇತ್ರವು ಬಸವಾದಿ ಪ್ರಮಥರನ್ನು ಆಕರ್ಷಿಸಿತು. ಇದು ಸ್ಥಾವರ ಲಿಂಗವನ್ನು ಮೀರಿದ ಜಂಗಮಲಿಂಗ! ಇದೇ ಸಂದರ್ಭದಲ್ಲಿ ಕೂಡಲಸಂಗಮ ಕ್ಷೇತ್ರವನ್ನು ‘ಕಪ್ಪಡಿ ಸಂಗಮ’ ಎಂದು ಕರೆಯುವ ವಾಡಿಕೆ ಇರುವುದು ನೆನೆಯಬಹುದು. ‘ಕಪ್ಪಡಿಗಳು’ ಎಂದರೆ ಹರಕುಬಟ್ಟೆಯ ಬಡ ತಿರುಕರು. ಬಸವಣ್ಣನವರು ಶಿಕ್ಷಣ ಪಡೆದುದು ಈ ಕ್ಷೇತ್ರದಲ್ಲೇ. ಕಪ್ಪಡಿಗಳ ಗಣಾದರ್ಶದ ಲಿಂಗಾಯತ ಬೋಧೆಗೆ ಸ್ಫೂರ್ತಿ ಸಹಜವಾಗಿಯೇ ಇಂಥ ತಿರುಕವರ್ಗಗಳಿಂದ ಸಿಕ್ಕಿದ್ದಿರಲು ಸಾಕು. ಈ ತಿರುಕ ಜನರು ಪ್ರತಿನಿಧಿಸುವ ಗಣವಿಶೇಷವನ್ನು ಗಮನಿಸದೆ ಹೋದರೆ ಲಿಂಗಾಯತ ಬೋಧೆ ವಿಶಿಷ್ಟತೆಯ ಪೂರ್ಣ ತಿಳುವಳಿಕೆ ಬರದೆ ಹೋಗಬಹುದು:

ತಿರುಕರೆನ್ನದಿರಿಂ ಭೋ ಎನ್ನ ತಂದೆಗಳನು
ತಿರುಕರೆನ್ನದಿರಿಂ ಭೋ ಎನ್ನ ಬಂಧುಗಳನು
ತಿರುಕರೆನ್ನದಿರಿಂ ಭೋ ಎನ್ನ ದೇವರನು
ತಿರುಕರೆನ್ನದಿರಿಂ ಭೋ ಎನ್ನ ಒಡೆಯರನು
ದೇಹಿ ಎಂದಡೆ ನಾಸ್ತಿಯೆಂಬವರ ಬೇಹು
ನೋಡಬಂದ ಕಾಣಾ ಕೂಡಲಸಂಗಮದೇವ!

ಶರಣಧರ್ಮದಲ್ಲಿ ಕಂಡುಬರುವ ಬಡತನದ ಪಾವಿತ್ರ್ಯ ‘ಕಡ ಬಡ್ಡಿಯ ಕೊಡಬೇಡ’ ಎಂಬ ನೀತಿ, ‘ಶಿವನ ಸೊಮ್ಮು ಶಿವನಿಗೊಪ್ಪಿಸಿ’ ನಿಶ್ಚಿಂತರಾಗಿರುವ ಧೋರಣೆ, ‘ಒಕ್ಕುದ ಮಿಕ್ಕುದು ಕೊಂಡು’ ಜೀವಿಸುವ ಅರ್ಪಣ ಯೋಗದ ನಿಲುಮೆ, ಕಾಯಕನಿಷ್ಠೆ – ಈ ಎಲ್ಲ ವಿಚಾರಗಳನ್ನು ಈ ಸಾಮಾಜಿಕ ಹಿನ್ನೆಲೆಯಲ್ಲಿ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವೆಂದು ತೋರುತ್ತದೆ. ಇದು ಇರವಿನಿಂದ ಅರಿವನ್ನು ಅರ್ಥಮಾಡಿಕೊಳ್ಳುವ ರೀತಿ. ‘ಬಡತನದ ಪಾವಿತ್ರ್ಯ’ವು ಸ್ವಯಂಜನ್ಯ ಬಡತನ ( Voluntury Poverty) ಎಂದು ಪ್ರತಿಪಾದಿಸಿರುವ ಹೆನ್ರಿ ಡೇವಿಡ್ ಥೋರೋ ಮತ್ತು ಜಾರ್ಜ್ ವಾಷಿಂಗ್ಟನ್ ಕಾರ್ವರ್ ವಿಚಾರಗಳನ್ನು ನೆನಪಿಗೆ ತರುತ್ತದೆ. “ಕಾಡುಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟುಕೊಂಡು ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗಮ ದೇವರ” ಎಂಬ ಬಸವಣ್ಣನವರ ವಚನವು ಸ್ವಯಂಜನ್ಯ ಬಡತನದ ಸ್ವಾಭಿಮಾನ ಶಿಖರವಾಗಿದೆ.

(4) ಭಕ್ತಿಭಿಕ್ಷೆಯಿಂದ ತುಂಬಿದ ಹೃದಯಪಾತ್ರೆ

ಶರಣರ ಅನುಭಾವವೆಂದರೇನೇ ಈ ಕಾಯಕಾಧಾರಿತ ಗಣತ್ವದ ಸಂಪಾದನೆ. ಬಸವಣ್ಣನವರಾದರೂ ಭಕ್ತಿಯಲ್ಲಿ ಬಡವರೇ! ಆದಕಾರಣ ಅವರೂ ಭಕ್ತಿಯನ್ನು ಭಿಕ್ಷೆ ಬೇಡಿಯೇ ಪಡೆಯಬೇಕು:

ಭಕ್ತಿಯಿಲ್ಲದ ಬಡವ ನಾನಯ್ಯ!
ಕಕ್ಕಯ್ಯನ ಮನೆಯಲು ಬೇಡಿದೆ
ಚನ್ನಯ್ಯನ ಮನೆಯಲು ಬೇಡಿದೆ
ದಾಸಯ್ಯನ ಮನೆಯಲು ಬೇಡಿದೆ
ಎಲ್ಲ ಪುರಾತರು ನೆರೆದು
ಭಕ್ತಿ ಭಿಕ್ಷವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವ ( LB: 219)

ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ
ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು
ಕರ ಲೇಸಯ್ಯ! ಆವಾವ ಭಾವದಲ್ಲಿ ಮಾಡಿ ಕೂಡಿಹೆಂಬವರ ಬಾಗಿಲ ತೋರಯ್ಯ!
ತನುವನೊಪ್ಪಿಸಿದವರ
ಮನವನೊಪ್ಪಿಸಿದವರ
ಧನವನೊಪ್ಪಿಸಿದವರ ಬಾಗಿಲ ತೋರಯ್ಯ!
ಕೂಡಲಸಂಗಮದೇವ!

(5) ಕೀಳಿಂಗಲ್ಲದೆ ಹಯನು ಕರೆಯದು

– ಭವಿಗೆ ವಿರುದ್ಧವಾಗಿ ಗಣಪದವಿಯ ಭಕ್ತಿ = ತನು ದಾಸೋಹ; – ಕುಲಸಂತಾನಕ್ಕೆ ವಿರುದ್ಧವಾಗಿ ಗಣಸಂತಾನದ ಪ್ರಾಪ್ತಿ = ಮನದಾಸೋಹ; – ಏಕಸ್ವಾಮ್ಯಕ್ಕೆ ವಿರುದ್ಧವಾಗಿ ಗಣಸ್ವಾಮ್ಯದ ಸಿದ್ಧಿ = ಧನ ದಾಸೋಹ
[ ತ್ರಿವಿಧ ದಾಸೋಹವೆಂದರೆ ಇದೇ! ]

ಮೇಲಾಗಲೊಲ್ಲೆ ಕೀಳಾಗಲಲ್ಲದೆ
ಕೀಳಿಂಗಲ್ಲದೆ ಹಯನು ಕರೆವುದೆ?
ಮೇಲಾಗಿ ನರಕದಲೋಲಾಡಲಾರೆನು!
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು
ಮಹಾದಾನಿ ಕೂಡಲಸಂಗಮದೇವ.(LB:221)

ಅಪ್ಪನು ಡೋಹರ ಕಕ್ಕಯ್ಯನಾಗಿ
ಮುತ್ತಯ್ಯ ಚನ್ನಯ್ಯನಾದರೆ ಆನು ಬದುಕೆನೆ?
ಮತ್ತಾ ಶ್ವಪಚಯ್ಯನ ಸನ್ನಿಧಿಯಿಂದ
ಭಕ್ತಿಯ ಸದ್ಗುಣವ ನಾನರಿಯೆನೆ?
ಕಷ್ಟಜಾತಿ ಜನ್ಮದಲ್ಲಿ ಜನಿಯಿಸಿದೆ ಎನ್ನ
ಎನಗಿದು ವಿಧಿಯೇ ಕೂಡಲಸಂಗಮದೇವ.( LB: 215)

(6) ಖಾಸಗಿ ಆಸ್ತಿಯ ನಿರಾಕರಣೆ ಮತ್ತು ಅಸಂಗ್ರಹ ನೀತಿಯ ಪ್ರತಿಪಾದನೆ:

ಹೊನ್ನಿನೊಳಗೊಂದೊರೆಯ
ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ನಿಮ್ಮ ಶರಣರಿಗಲ್ಲದೆ ಮತ್ತೊಂದಕಿಕ್ಕೆನಯ್ಯ
ಕೂಡಲಸಂಗಮದೇವ (LB:258)

ಭುವನತ್ರಯವೆಂಬ ಪಂಜರದೊಳಗೆ
ಸಂಸಾರಚಕ್ರಕ್ಕೆ ಈಡಾಗಿ ಅನಂತಜೀವಿಗಳು
ಹೊನ್ನುಪ್ರಾಣವೇ ಪ್ರಾಣವಾಗಿ
ಮಣ್ಣುಪ್ರಾಣವೇ ಪ್ರಾಣವಾಗಿ
ಹೆಣ್ಣುಪ್ರಾಣವೇ ಪ್ರಾಣವಾಗಿ
ಆ ಸುಖದ ಸೊಕ್ಕು ತಲೆಗೇರಿ
ಈಸಾಡುತ್ತಿದ್ದರಲ್ಲಾ ಭವಸಾಗರವ!
ಬಹುವಿಧ ವ್ಯವಹಾರಿಗಳು
ನಮ್ಮ ಗುಹೇಶ್ವರ ಲಿಂಗವನರಿಯದ ಕಾರಣ! ( LB: 335)

ಭೂಮಿ ನಿನ್ನದಲ್ಲ! ಹೇಮ ನಿನ್ನದಲ್ಲ!
ಕಾಮಿನಿ ನಿನ್ನವಳಲ್ಲ! ಅವು ಜಗಕಿಕ್ಕಿದ ವಿಧಿ!
ನಿನ್ನೊಡವೆಯೆಂಬುದು –
ಗುರು ಲಿಂಗ ಜಂಗಮಕ್ಕೆ
ದಾಸೋಹವ ಮಾಡುವ ಜ್ಞಾನರತ್ನ!
ಅಂತಪ್ಪ ದಿವ್ಯರತ್ನವ ಕೆಡಗುಡದೆ
ನೀನಲಂಕರಿಸಿದೆಯಾದೊಡೆ
ನಮ್ಮ ಗುಹೇಶ್ವರ ಲಿಂಗದಲ್ಲಿ
ನಿನ್ನಿಂದ ಬಿಟ್ಟು ಸಿರಿವಂತರಾರು ಇಲ್ಲ ಕಾಣಾ ಎಲೆ ಮನವೇ! ( LB:336)

(7) ಗಣಪದವಿ + ಸಂಘ ಶರಣು

ಶಿವಶರಣತ್ವ / ಭಕ್ತತ್ವ = ಗಣಪದವಿ; ಲಿಂಗ ಶರಣು = ಸಂಘ ಶರಣು; ಲಿಂಗಾಯತ = ಗಣಾಯತ; ಲಿಂಗೈಕ್ಯ = ಗಣೈಕ್ಯ
ವರ್ಣ / ವರ್ಗ ವಿಭಕ್ತವಾದ ಸಮಾಜದಲ್ಲಿ ಭಕ್ತನು ತನ್ನ ‘ಅಹಂ’ ತನ ಅಥವಾ ಖಾಸಗಿತನವನ್ನು ಭಕ್ತಿ ಸಾಧನೆಯ ಮೂಲಕ ಕಳೆದುಕೊಂಡು ಶೂನ್ಯಸಂಪಾದನೆಯನ್ನು ಸಾಧ್ಯವಾಗಿಸಿ, “ಗಣಾಂಗ ಸಾಮರಸ್ಯ” ಪಡೆಯಬೇಕು!
ಗಣಾಂಗವಾಗುವುದೇ ಋತ! ವರ್ಣ/ ವರ್ಗ ಸ್ವಭಾವ ಪ್ರಕಟನೆಯೇ ಅನೃತ!

ಕುಲಮದ ಛಲಮದ ವಿದ್ಯಾಮದದವರ ತೋರದಿರಾ!
ಅವರ ಆರೂಢಪದವಿಯನೆನಗೆ ತೋರದಿರಾ!
ಅವರ ಗರುವ ಗಭೀರತನವೆನಗೆ ತೋರದಿರಾ!
ಶಮೆ ದಮೆಯುಳಿದು, ದಶಮುಖ ನಿಂದು,
ಲಿಂಗದಲ್ಲಿ ಲೀಯವಾದವರನಲ್ಲದೆ
ಎನಗೆ ತೋರದಿರಾ ಗುಹೇಶ್ವರ! (LB: 229)
(ದಶಮುಖ=ಬೌದ್ಧ ಸಾಧಕರ ದಶಾವಸ್ಥೆಗಳು)

ಮಾಯಾಮಲಿನ ಮನದಿಂದಗಲದೆ
ಕಾಯದ ದಂದುಗ ಕಳೆಯಿಂದಗಲದೆ
ಅರಿವು ಬರಿದೆ ಬಪ್ಪುದೆ ?
ನಿಜವು ಬರಿದೆ ಸಾಧ್ಯವಪ್ಪುದೆ ?
ಮರುಳೇ! ಗುಹೇಶ್ವರ ಲಿಂಗವನರಿಯಬಲ್ಲಡೆ
ನಿನ್ನ ನೀ ತಿಳಿದು ನೋಡಾ! (LB:191)

(8) ರಾಜಪ್ರಭುತ್ವ > ಸಾಮಂತಶಾಹಿ > ಪಾಳೇಗಾರಿಕೆ > ಊಳಿಗಮಾನ್ಯ ವ್ಯವಸ್ಥೆ

– ಖಾಸಗಿ ಆಸ್ತಿ + ಕುಟುಂಬ + ರಾಜ್ಯಗಳ ಜೊತೆಯಲ್ಲೇ ಹುಟ್ಟುವ ಅಹಂಕಾರ + ಮಮಕಾರಗಳೆಂಬ ಮಾಯಾಮಲಿನ

ಮಾನದ ತೋರಿಹ ಆವಿಂಗೆ
ಕೊಳಗದ ತೋರಿಹ ಕೆಚ್ಚಲು!
ತಾಳಮರದುದ್ದವೆರಡು ಕೋಡು ನೋಡಾ!
ಅದನರಸ ಹೋಗಿ ಆರುದಿನ!
ಅದು ಕೆಟ್ಟು ಮೂರು ದಿನ!
ಅಘಟಿತಘಟಿತ ಗುಹೇಶ್ವರ!
ಅರಸುವ ಬಾರೈ ತಲೆಹೊಲದಲ್ಲಿ! (LB:30)

(9) ಆಸೆಯ ನಿರಾಕರಣೆ: ದಾಸನ ಕುಲ

ದಾಸನ ಕುಲವಾದಾತ ಈಶಂಗಲ್ಲದೆ ಶರಣೆನ್ನ
ಆಸೆ ಮಾಡ ನೋಡ ಅನ್ಯದೈವಂಗಳಿಗೆ
ಆಸೆ ಮಾಡ ನೋಡ ದೇಶದ ಪಿಶಾಚಿಗಳಿಗೆ
ಆಸೆ ಮಾಡಿದನಾದಡೆ ಅವ ದಾಸನಕುಲವಲ್ಲ
ಅವನನ್ಯ ಕುಲ ಕಾಣಾ ರಾಮನಾಥ (LB:132)

ಭೋಗದ ವಸ್ತುಗಳ ಸಾಲಿನಲ್ಲಿ ಹೆಣ್ಣು ಎಂಬುದು ವರ್ಣ / ವರ್ಗ ಸಮಾಜದ ಸ್ವಭಾವ

” ಹೆಣ್ಣು ಹೆಣ್ಣಲ್ಲ! ಹೆಣ್ಣು ಮಾಯೆಯಲ್ಲ!
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ!
(ಸೊನ್ನಲಿಗೆಯ ಸಂತ ಸಿದ್ಧರಾಮಯ್ಯ)

(10) ಗುರು ಲಿಂಗ ಜಂಗಮ: ಕಾಯಕದೊಳಗು

ಆಯ್ದಕ್ಕಿ ಮಾರಯ್ಯ + ಆಯ್ದಕ್ಕಿ ಲಕ್ಕಮ್ಮ; ನುಲಿಯ ಚಂದಯ್ಯ , ಹುಲ್ಲುಹೊರೆ ಸೋಮಯ್ಯ

“ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯುಳ್ಳನ್ನಕ್ಕರ”
ಎಂದು ಆಯ್ದಕ್ಕಿ ಲಕ್ಕಮ್ಮ ಕಾಯಕದ ಮಹತ್ವ ವ್ಯಕ್ತಪಡಿಸುತ್ತಾಳೆ.

“ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಷ ಪಾಶ ಹರಿವುದು
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು”
ಎಂದು ನುಲಿಯ ಚಂದಯ್ಯನವರು ಕಾಯಕದ ಮಹತ್ವವನ್ನು ಸಾರಿದ್ದಾರೆ. ಗುರು-ಲಿಂಗ-ಜಂಗಮಕ್ಕೆ ಕಾಯಕವೇ ಆಧಾರವಾಗಿದೆ ಎಂದು ಮನಂಬುಗುವಂತೆ ಹೇಳಿದ್ದಾರೆ.
“ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದರೂ ಮರೆಯಬೇಕು
ಲಿಂಗಪೂಜೆಯಾದರೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದರೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು”
ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ.

“ಆವ ಕಾಯಕವಾದರೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ.”
ಹುಲ್ಲಿನ ಹೊರೆ ಹೊರುವ ಕಾಯಕದ ಸೋಮಯ್ಯ ಬದುಕೆಂಬುದು ಜೈವಿಕ ಪ್ರಕ್ರಿಯೆ ಎಂದು ಹೀಗೆ ಸೂಚಿಸುತ್ತಾನೆ. ಆ ಮೂಲಕ ಸಾವನ್ನು ಗೆಲ್ಲುತ್ತಾನೆ. ದೇವರ ಹಂಗಿಗೆ ಒಳಗಾಗದೆ ದೇವರನ್ನು ಆರಾಧಿಸುವ ಕ್ರಮವನ್ನು ನಮಗೆ ಕಲಿಸಿಕೊಟ್ಟಿದ್ದಾನೆ. ಜನಸಾಮಾನ್ಯರು ಶರಣಸಂಕುಲ ಸೇರಿ ಹೀಗೆ ಆತ್ಮಸ್ಥೈರ್ಯ ಪಡೆದು ಅಸಾಮಾನ್ಯರಾಗುವಲ್ಲಿ ಬಸವಣ್ಣನವರ ಅಪಾರ ಶ್ರಮ ಅಡಗಿದೆ.
‘ಶರಣರು ಕಂಡ ಸಮ ಸಮಾಜ’ ಎಂದು ಆರಂಭವಾದ ಈ ಲೇಖನವನ್ನು ಈಗ ‘ಶರಣರು ಕಂಡ ಗಣ ಸಮಾಜ’ ಎಂದು ಗ್ರಹಿಸಲು ಕೋರುತ್ತೇನೆ.

Previous post ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
Next post ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…

Related Posts

ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
Share:
Articles

ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ

April 29, 2018 ಕೆ.ಆರ್ ಮಂಗಳಾ
ವಚನಗಳ ಅಂತರಾಳದಲ್ಲಿ ಕಾಣುವುದು ಸಾರ್ವತ್ರಿಕ ಸತ್ಯದ ಮುಖಗಳು. ಓದುಗರ ಪ್ರಜ್ಞೆಯ ಆಳಕ್ಕಿಳಿದು ಕೆಣಕುವ ಶಕ್ತಿ ಶರಣರ ಮಾತುಗಳಿಗಿದೆ. ಅಲ್ಲಿ ಕಾಣುವ ಮನೋವ್ಯಾಪಾರಗಳು ಎಲ್ಲರ...
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
Share:
Articles

ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ

February 11, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಜ ಎಂದಲ್ಲಿ ಜನನ ನಾಸ್ತಿಯಾಗಿ, ಗ ಎಂದಲ್ಲಿ ಗಮನ ನಾಸ್ತಿಯಾಗಿ, ಮ ಎಂದಲ್ಲಿ ಮರಣ ನಾಸ್ತಿಯಾಗಿ, ಅರಿತು ತಿರುಗುವುದು ಸ್ವಯ ಚರ ಪರವಲ್ಲದೆ, ಕೂಟಕ್ಕೆ ನೆರೆದ ಅಗುಳಾಸೆಯ...

Comments 16

  1. ಶಿವಣ್ಣಾ ಕಾಗೋಡು
    Jul 5, 2022 Reply

    ಎಂಟು ನೂರು ವರುಷಗಳ ಅಂಧಕಾರ ಯುಗ ಬಸವಾದಿ ಶರಣರ ಆಶಯಗಳನ್ನೇ ಮುಚ್ಚಿ ಸಮಾಧಿ ಮಾಡಲು ಯತ್ನಿಸಿದ ಸುದೀರ್ಘ ಕಾಲಾವಧಿ. ಶರಣರನ್ನು, ವಚನಗಳನ್ನು ಹೇಗೋ ನಮಗೆ ದಕ್ಕಿಸಿಕೊಟ್ಟ ಫ.ಗು.ಹಳಕಟ್ಟಿ ಹಾಗೂ ಕಲಬುರ್ಗಿ ಅಂತಹ ಮಹಾನುಭಾವರ ಕೊಡುಗೆಯನ್ನು ಇತಿಹಾಸ ಯಾವತ್ತಿಗೂ ಮರೆಯಲಾರದು. ಬಹಳ ಮಹತ್ವಪೂರ್ಣ ಲೇಖನ.

  2. H V Jaya
    Jul 6, 2022 Reply

    ಬಹುಶಃ ಫ ಗು ಹಳಕಟ್ಟಿಯವರು ವಚನ ಸಾಹಿತ್ಯವನ್ನು ನಮಗೆ ಪುಸ್ತಕ ರೂಪದಲ್ಲಿ ಕೊಡದಿದ್ದರೆ, ವಚನ ಸಾಹಿತ್ಯ ನಮ್ಮ ಪಾಲಿಗೆ ಕನಸಿನ ಮಾತಾಗುತ್ತಿತ್ತೇನೋ. ಇಷ್ಟೆಲ್ಲಾ ಬಸವಾದಿ ಸಮಕಾಲಿನ ಶರಣರ ವಚನಗಳು ಆಧಾರವಾಗಿದ್ದರೂ. ಬಸವ ತತ್ವವನ್ನೇ ಮರೆಸುವ ಹುನ್ನಾರಗಳು ನಡೆಯುತ್ತಿವೆ. ವಚನ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಕೊಟ್ಟು ಜನಸಾಮಾನ್ಯರಿಗೂ ಸಿಗುವಂತೆ ಮಾಡಿ. ಎಲ್ಲರ ಮಸ್ತಕದಲ್ಲಿ ಉಳಿಯವಂತೆ ಮಾಡಿರುವ ಪೂಜ್ಯ ಫ ಗು ಹಳಕಟ್ಟಿಯವರ ಕೊಡುಗೆ ಅವಿಸ್ಮರಣೀಯವಾದದ್ದು. ಲೇಖನ ತುಂಬಾ ಚನ್ನಾಗಿ ಮೂಡಿಬಂದಿದೆ. ಶರಣು ಶರಣಾರ್ಥಿಗಳು.

  3. Dr. Mallesh, Mysuru
    Jul 6, 2022 Reply

    ಶರಣರು ಕಂಡ ಸಮಸಮಾಜ ಲೇಖನ ಓದಿ  ಪ್ರಾಚೀನ ಜನರ ಬದುಕಿನ ಸಾಮೂಹಿಕ ಆಚರಣೆಗಳ ಬಗ್ಗೆ ಹೊಸ ವಿಷಯಗಳು ತಿಳಿದವು. ಇಲ್ಲಿನ ಹಲವು ವಿಚಾರಗಳು ಲೇಖಕರ ಸಂಶೋಧನೆಯಿಂದ ಒಡಮೂಡಿರಬಹುದು ಎನ್ನಿಸಿತು. ಹಾಗೆಯೆ ಕೆಲವು ವಿಚಾರಗಳ ಬಗ್ಗೆ ಲೇಖಕರು ಹೆಚ್ಚು ವಿವರಣೆ ಕೊಡಬಹುದೆನ್ನಿಸಿತು. ಅವುಗಳನ್ನು   ಇಲ್ಲಿ ಬರೆದಿದ್ದೇನೆ.
    1. ಬಸವಾದಿ ಪ್ರಮಥ ಗಣಂಗಳು ಪ್ರಾಚೀನ ಗಣಜೀವನದ ಅವಶೇಷಗಳೊಡನೆ ಸಂಬಂಧ ಹೊಂದಿರುವುದು ಮುಖ್ಯವಾಗಿದೆ. ಬಸವ ಧರ್ಮವು ಗಣಜೀವನದ ಆದರ್ಶವನ್ನು ಪ್ರತಿಪಾದಿಸಿದ್ದರಿಂದ ಬೇಗನೆ ಜನಪ್ರಿಯತೆ ಪಡೆಯಿತು.
    2. ‘ನವ್ಯ ಲಿಂಗಾಯತ’ವು ಗಣಜೀವನಾದರ್ಶದ ಪುನರುಜ್ಜೀವನ ಪ್ರಯತ್ನವೆಂದು ಗ್ರಹಿಸಬೇಕು.
    3. ಅರಮನೆ + ಗುರುಮನೆ + ಧಣಿಮನೆಗಳಿಗೆ ವಿರುದ್ಧವಾಗಿ ಬಸವಣ್ಣನವರು ಸಾಮುದಾಯಿಕ ಒಡೆತನದ ಮಹಾಮನೆಯ ಬಾಗಿಲನ್ನು ತೆರೆದರು.
    4.   ಶರಣಧರ್ಮದಲ್ಲಿ ಕಂಡುಬರುವ … ಸ್ವಯಂಜನ್ಯ ಬಡತನದ ಸ್ವಾಭಿಮಾನ ಶಿಖರವಾಗಿದೆ.
    ಈ ಪ್ಯಾರಾದಲ್ಲಿನ ನಿಮ್ಮ ಒಕ್ಕಣಿಕೆ ಮನೋಜ್ನವಾಗಿದೆ.
    5. ಭವಿಗೆ ವಿರುದ್ಧವಾಗಿ ಗಣಪದವಿಯ ಭಕ್ತಿ = ತನು ದಾಸೋಹ; – ಕುಲಸಂತಾನಕ್ಕೆ ವಿರುದ್ಧವಾಗಿ ಗಣಸಂತಾನದ ಪ್ರಾಪ್ತಿ = ಮನದಾಸೋಹ; – ಏಕಸ್ವಾಮ್ಯಕ್ಕೆ ವಿರುದ್ಧವಾಗಿ ಗಣಸ್ವಾಮ್ಯದ ಸಿದ್ಧಿ = ಧನ ದಾಸೋಹ [ ತ್ರಿವಿಧ ದಾಸೋಹವೆಂದರೆ ಇದೇ! ]
    ತ್ರಿವಿಧ ದಾಸೋಹವೆಂದರೆ ಇದೇ ಎಂದು ಖಡಾಖಂಡಿತವಾಗಿ ಹೇಳಬಹುದೇ? 
    6. ಶರಣರ ಆಹಾರ ಪದ್ದತಿ  ಹೇಗಿತ್ತು?  
    7.ಎಲ್ಲರೂ ಒಟ್ಟಾಗಿ ಊಟ ಮಾಡುತ್ತಿದ್ದರೆ?  ಗಣ ಪದ್ಧತಿ ಇದ್ದರೆ ಹಾಗೆ ಇರಬೇಕಿದ್ದದ್ದು ಅಪೇಕ್ಷಣೀಯ ಎನಿಸುವುದಿಲ್ಲವೆ?
    ಲಿಂಗಾಯತ ಧರ್ಮದ ಅನುಯಾಯಿಗಳಿಗೆ ಶರಣರೆಲ್ಲರ ಆಚಾರ ವಿಚಾರಗಳು ಸದಾ ಸರಿದಾರಿ ತೊರುವ ದೀಪಗಳು ತೋರುಗಂಬಗಳು.  ಅವರ ನಿಜಬದುಕನ್ನು ಅನಾವರಣಗೊಳಿಸುವ ಅವರ ವಿಚಾರಗಳನ್ನು ಸಂದಿಗ್ಧತೆಗೆ ಎಡೆಮಾಡಿಕೊಡದೆ ನಿಜಾರ್ಥ ನೀಡುವ ಮೂಲಕ ಜನಮಾನಸಕ್ಕೆ ತಲುಪಿಸಿ ಪ್ರಸ್ತುತ ಸಂದರ್ಭದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವಂತೆ ಪ್ರೆರೇಪಿಸಬೆಕು. ನಿಮ್ಮ ಬರಹದಲ್ಲಿ ಶರಣರ ಬದುಕನ್ನು ವಿಶಾಲ ದೃಷ್ಟಿಯಿಂದ ನೋಡುವ ಹಂಬಲಕಾಣುತ್ತದೆ. ಈ ಹಂಬಲ ಹೆಚ್ಚು ಬೆಳಕನ್ನು ಬೀರುವಂತಾಗಲಿ ಎಂದು ಆಶಿಸುತ್ತೇನೆ.

    • K. S. Mallesh
      Jul 8, 2022 Reply

      Some parts of my message are missing in the above comments. They are written here.
      1. ಬಸವಾದಿ ಪ್ರಮಥ ಗಣಂಗಳು ಪ್ರಾಚೀನ ಗಣಜೀವನದ ಅವಶೇಷಗಳೊಡನೆ ಸಂಬಂಧ ಹೊಂದಿರುವುದು ಮುಖ್ಯವಾಗಿದೆ. ಬಸವ ಧರ್ಮವು ಗಣಜೀವನದ ಆದರ್ಶವನ್ನು ಪ್ರತಿಪಾದಿಸಿದ್ದರಿಂದ ಬೇಗನೆ ಜನಪ್ರಿಯತೆ ಪಡೆಯಿತು
      ಈ ನಿಮ್ಮ ಅಭಿಪ್ರಾಯಕ್ಕೆ ಆಧಾರವಿದ್ದರೆ ತಿಳಿಸಿ.
      2. ‘ನವ್ಯ ಲಿಂಗಾಯತ’ವು ಗಣಜೀವನಾದರ್ಶದ ಪುನರುಜ್ಜೀವನ ಪ್ರಯತ್ನವೆಂದು ಗ್ರಹಿಸಬೇಕು.
      ನವ್ಯ ಲಿಂಗಾಯತ ಎಂದು ನೀವು ಹೆಸರಿಟ್ಟಂತೆ ಕಾಣುತ್ತದೆ.
      ನಿಮ್ಮ ಸಂಶೋಧನಾತ್ಮಕ ವಿಚಾರಗಳು ಆಧಾರ ಸಹಿತವಾಗಿರಬೇಕು. “ಲಿಂಗಾಯತವೇ” ಬೇರೆ ” ನವ್ಯ ಲಿಂಗಾಯತವೇ” ಬೇರೆ ಎನ್ನುವ ಅರ್ಥ ಕೊಡುವ ಇಂತಹ ವಾಕ್ಯಗಳ ಬಗ್ಗೆ ಎಚ್ಚರ ವಹಿಸಿ ಬರೆಯಬೇಕು. ಗ್ರಹಿಸಬೇಕು ಎನ್ನುವುದು ನಿಮ್ಮ ಆಶಯವೇ ಅಥವಾ ಆಧಾರ ಸಹಿತ ತೀರ್ಮಾನವೇ?
      3. ಅರಮನೆ + ಗುರುಮನೆ + ಧಣಿಮನೆಗಳಿಗೆ ವಿರುದ್ಧವಾಗಿ ಬಸವಣ್ಣನವರು ಸಾಮುದಾಯಿಕ ಒಡೆತನದ ಮಹಾಮನೆಯ ಬಾಗಿಲನ್ನು ತೆರೆದರು.
      ಯಾವುದನ್ನು ವಿರೋಧಿಸಿದರೋ ಆ ಆಡಳಿತ ವ್ಯವಸ್ಥೆಯ ಒಳಗಡೆಯೇ ಸಾಕಷ್ಟು ಕಾಲ ಬಸವಣ್ಣನವರು ತಮ್ಮ ವೃತ್ತಿಯನ್ನು ಬದುಕನ್ನು ನಿರ್ವಹಿಸುತ್ತಿದ್ದರು ಎನ್ನುವುದು ಸ್ವಲ್ಪ ವಿರೋದಾಭಾಸಕ್ಕೆ ಕಾರಣವಾಗುತ್ತದೆ ಅಲ್ಲವೇ?
      ನಾನು ಓದಿ ಕೇಳಿ ತಿಳಿದು ಗ್ರಹಿಸಿರುವಂತೆ ಬಸವಣ್ಣ ಪ್ರಚಲಿತ ಸಮಾಜದಲ್ಲಿದ್ದ ಕೆಟ್ಟ ಹಾಗು ಅಮಾನವೀಯ ನಡವಳಿಕೆಗಳನ್ನು ಸಂಪ್ರದಾಯಗಳನ್ನು ಸಮಾಜಕ್ಕೆ ತೋರಿಸಿ ಕೊಡುತ್ತಾ ಅವುಗಳಿಗೆ ಪರ್ಯಾಯವಾಗಿ ಮಾನವೀಯತೆಯನ್ನು ಸಕಲ ಜೀವಾತ್ಮರಿಗೆ ಲೇಸ ಬಯಸುವುದನ್ನು ತಮ್ಮ ಆಚರಣೆಗಳ ಮೂಲಕ ಮನವರಿಕೆ ಮಾಡುತ್ತ ಶರಣ ಸಮಾಜವನ್ನು ಕಟ್ಟಲು ಬಯಸಿದರು. ಅವರು ಕುವಿಚಾರಗಳನ್ನು ವಿರೋಧಿಸಿದರೆ ಹೊರತು ವ್ಯಕ್ತಿಗಳನ್ನು ವಿರೋಧಿಸಲಿಲ್ಲ. ಸರಿಯಾದ ದಾರಿಯ ಬಗ್ಗೆ ಮನವರಿಕೆ ಮಾಡುತ್ತಿದ್ದರು.

  4. ಗವಿಶಂಕರ ಫಕೀರಪ್ಪ
    Jul 10, 2022 Reply

    ಬಸವ ಚಳುವಳಿ: ಗಣಸಮಾಜದ ಪುನರುಜ್ಜೀವನ- ಶರಣರು ಕೂಡು ಬಾಳಿದ ಕಲ್ಯಾಣದಲ್ಲಿ ಗಣತಂತ್ರದ ಆಶಯವಿತ್ತು ಎಂಬ ನಿಮ್ಮ ವಿಚಾರ ಸೂಕ್ತವಾಗಿದೆ ಸರ್.

  5. Dr. Panchakshari h v
    Jul 12, 2022 Reply

    ಕೂಡಲಸಂಗಮ ಕ್ಷೇತ್ರವನ್ನು ‘ಕಪ್ಪಡಿ ಸಂಗಮ’ ಎಂದು ಕರೆಯುವ ವಾಡಿಕೆ ಇರುವುದು ನೆನೆಯಬಹುದು. ‘ಕಪ್ಪಡಿಗಳು’ ಎಂದರೆ ಹರಕುಬಟ್ಟೆಯ ಬಡ ತಿರುಕರು ಎಂಬುದು ಹೊಸ ವಿಚಾರ. ಉತ್ತಮ ಲೇಖನ.

  6. Padmalaya
    Jul 19, 2022 Reply

    ಲಿಂಗಾಯತ ಧರ್ಮಕ್ಕೆ ಹೊಸದೊಂದು ಓದನ್ನ ನಂಗಲಿಯವರುನೀಡಿದ್ದಾರೆ.೨೧ನೇ ಶತಮಾನದಲ್ಲೂ ವೀರಶೈವ ರಾಜಕಾರಣಕ್ಕೆ ಬಲಿಯಾಗಿ ಕೊಳೆಯುತ್ತಿರುವ ಲಿಂಗಾಯತ ಮತ್ತೆ ಮಲೆದ್ದು ನಿಲ್ಲುವುದೇ???? ಇಂತಹ ಲೇಖನಗಳು ಇನ್ನೂ ಹೆಚ್ಚು ಹೆಚ್ಚು ಬಂದು ಶರಣ ಮಾರ್ಗವನ್ನ ಎಚ್ಚರಿಸಲೆಂದು ಆಶಿಸುತ್ತೇನೆ

  7. ಮಹಾದೇವ ಭರಣಿ
    Jul 19, 2022 Reply

    ವಚನಗಳನ್ನ ಕಾಲದ ಪ್ರವಾಹದಿಂದ, ದುರುಳರ ಕೈಗಳಿಂದ ರಕ್ಷಿಸಿಕೊಟ್ಟ ಮಹನೀಯರಿಗೆ, ಅವುಗಳ ಅಂತರಾಳದ ಸತ್ಯವನ್ನು ತೋರಿಸುವ ನಿಮ್ಮಂಥವರ ಜ್ಞಾನಕ್ಕೆ ಅನಂತ ಶರಣು🙏🏽🙏🏽

  8. PROF SOMASHEKHARAPPA
    Jul 19, 2022 Reply

    Shree Nangalee’s write up is quite impressive.Has published full length book on the issues, if so could you pl indicate me source. Also if others have written on Equalitarian Society among the Lingayats, either in kannada or English, I shall be glad and also feel obliged.
    Regards
    Prof Somashekharappa

  9. Halappa Gavimath
    Jul 21, 2022 Reply

    ತಿರುಕರೆನ್ನದಿರಿಂ ಭೋ ಎನ್ನ ತಂದೆಗಳನು/ ತಿರುಕರೆನ್ನದಿರಿಂ ಭೋ ಎನ್ನ ಬಂಧುಗಳನು… ಎನ್ನುವ ವಚನಕ್ಕೂ, ನೀವು ನೀಡಿದ- “ಕಪ್ಪಡಿಗಳ ಗಣಾದರ್ಶದ ಲಿಂಗಾಯತ ಬೋಧೆಗೆ ಸ್ಫೂರ್ತಿ ಸಹಜವಾಗಿಯೇ ಇಂಥ ತಿರುಕವರ್ಗಗಳಿಂದ ಸಿಕ್ಕಿದ್ದಿರಲು ಸಾಕು…” ವಿವರಣೆಯೂ ಬಹಳ ಕುತೂಹಲಕಾರಿಯಾಗಿದೆ. ಲೇಖನ ಬಹಳ ಚೆನ್ನಾಗಿದೆ ಸರ್.

  10. ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ
    Jul 21, 2022 Reply

    ಶರಣರು ಕಂಡ ಸಮ ಸಮಾಜ- ಲೇಖನ ತುಂಬಾ ಚೆನ್ನಾಗಿದೆ.

  11. Jathin Patil
    Jul 21, 2022 Reply

    I am obliged for the article, thanks again, want to read more like this.

  12. Mallikarjuna Malavi
    Jul 25, 2022 Reply

    ಡಾ.ಎಲ್. ಬಸವರಾಜು ಅವರು ಕೋಲಾರದವರೇ? “ಹನ್ನೆರಡನೇ ಶತಮಾನದ ವಚನ ಚಳುವಳಿಗೆ ದಲಿತ ಶರಣರೇ ಆದ್ಯರು, ಇದೇ ಕರ್ನಾಟಕದ ಮೊದಲನೇ ದಲಿತ ಚಳುವಳಿ” ಎನ್ನುವ ಅವರ ಮಾತುಗಳನ್ನು ಓದಿ ನಿಜಕ್ಕೂ ತುಂಬಾ ಸಂತೋಷವಾಯಿತು. ಡಾ.ಎಲ್ ಬಿ ಅವರ ಸಂಶೋಧನೆ ಮತ್ತು ಆಳವಾದ ಅಧ್ಯಯನ ಎಂದೆಂದಿಗೂ ನಿಜದಾರಿ ತೋರುವ ಕಂಬಗಳು. ಉತ್ತಮ ಲೇಖನ ಓದಿಸಿದ್ದಕ್ಕೆ ಧನ್ಯವಾದಗಳು.

  13. Vinodkumar H.S
    Jul 31, 2022 Reply

    ಬಸವ ಚಳುವಳಿಯ ಹಿರಿಮೆಯನ್ನು ಮುಖ್ಯಾಂಶಗಳಂತೆ ಸಂಗ್ರಹ ಮಾಡಿಕೊಟ್ಟ ಬರಹ ಬಹಳ ಸೊಗಸಾಗಿದೆ. ಇಂತಹ ಚಿಂತನೆಗಳು ಪಠ್ಯಪುಸ್ತಕದಲ್ಲಿ ಜಾಗಪಡೆದುಕೊಳ್ಳಬೇಕು. ಶರಣರ ಬದುಕು ಯಾವತ್ತಿಗೂ ದಾರಿದೀಪ ಎನ್ನುವುದು ಎಷ್ಟು ಜನರಿಗೆ ಗೊತ್ತಿದೆ? ಉತ್ತಮ ಚಿಂತನೆಯಿಂದ ಕೂಡಿದ ಲೇಖನಕ್ಕೆ ಧನ್ಯವಾದವುಗಳು ಸರ್.

  14. ವಿಜಯಕುಮಾರ್, ಕಲಾದಗಿ
    Aug 3, 2022 Reply

    ಅನುಭವ ಮಂಟಪದ ಶರಣ ಸಮಾಜದ ಪರಿಕಲ್ಪನೆಯ ಬೀಜಗಳನ್ನು ಆದಿಮ ಸಮತಾವಾದ ಮತ್ತು ಬುಡಕಟ್ಟು ಜನರ ಗಣಸಮಾಜದ ಸಾಮುದಾಯಿಕ ಒಡೆತನದಲ್ಲಿ ಗುರುತಿಸಿದ ವಿಚಾರಗಳು ನನಗೆ ಬಹಳ ಸರಿ ಎನಿಸಿದವು. ತುಂಬಾ ಸುಂದರವಾದ, ವೈಚಾರಿಕ ಬರಹ.

  15. M.S. Bhuvan
    Aug 6, 2022 Reply

    I found your blog on Bing Weblings, it delivers fantastic material. Thank you regarding this superb post, I will certainly promote this on twitter, have a pleasant day.

Leave a Reply to ಗವಿಶಂಕರ ಫಕೀರಪ್ಪ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
May 10, 2022
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ
September 6, 2023
ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
March 9, 2023
ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
February 7, 2021
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
Copyright © 2025 Bayalu