Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶಬ್ದದೊಳಗಣ ನಿಃಶಬ್ದ…
Share:
Articles April 11, 2025 ಡಾ. ಚಂದ್ರಶೇಖರ ನಂಗಲಿ

ಶಬ್ದದೊಳಗಣ ನಿಃಶಬ್ದ…

“ಸಾಹಿತ್ಯ ಜೀವನ ಮತ್ತು ಜೀವನಸಾಹಿತ್ಯಗಳ ಸಂಬಂಧ” ಒಂದಷ್ಟು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.‌ ಸಾಹಿತ್ಯ ಜೀವನ ಎಂಬುದು ಸಾಹಿತಿಗಳ ಲೋಕ ಮಾತ್ರ! ಆದರೆ ಜೀವನಸಾಹಿತ್ಯ ಎಂಬುದು ಸಾಹಿತ್ಯಲೋಕದ ಗಡಿಗಳನ್ನು ದಾಟಿದ ಜಗತ್ತು. ಈ ದೃಷ್ಟಿಯಿಂದ ಸಾಹಿತ್ಯ ಜೀವನವು ನ್ಯಾರೋಗೇಜ್. ಜೀವನಸಾಹಿತ್ಯವು ಬ್ರಾಡ್ ಗೇಜ್.
ಹಾಗಾದರೆ ಸಾಹಿತ್ಯ ಎಂದರೇನು ? ಎಂಬ ಪ್ರಶ್ನೆಗೆ ಪೌರ್ವಾತ್ಯ ಮತ್ತು ಪಾಶ್ಚಾತ್ಯ ಸಾಹಿತ್ಯ ಮೀಮಾಂಸೆಯಲ್ಲಿ ವಿಪುಲವಾದ ಚರ್ಚೆ ಸಂವಾದಗಳಿವೆ. ಸಾಹಿತ್ಯ ಎಂದರೇನು? ಎಂಬ ಪ್ರಶ್ನೆಗೆ ಕಿಟ್ಟೆಲ್ ನಿಘಂಟು ಕೊಟ್ಟಿರುವ ಅರ್ಥಗಳಿವು:
(1) Association (2) Union (3) Combination (ಸಂಘ, ಒಕ್ಕೂಟ ಮತ್ತು ಸಂಯೋಜನೆ)

ಸಾಹಿತ್ಯ ಎಂಬುದಕ್ಕೆ ಸಮಾನಾರ್ಥಕ ಇಂಗ್ಲಿಷ್ ಶಬ್ದ Literature. ಗ್ರೀಕ್ ಮತ್ತು ಲ್ಯಾಟಿನ್ ಮೂಲದ Littera > Letter ಶಬ್ದ ನಿಷ್ಪತ್ತಿಯಾಗಿದೆ. Literacy, Literature, Literary ಇವೆಲ್ಲಾ ಇತರೆ ಜ್ಞಾತಿ ಶಬ್ದಗಳು. ಇದರ ಅರ್ಥ ‘ಅಕ್ಷರ ಜ್ಞಾನ’ ಎಂದು. ಔಷಧಿಗಳು ಮತ್ತು ಗೃಹ ಬಳಕೆ ವಸ್ತುಗಳ ಜಾಹಿರಾತು ವಿವರಗಳನ್ನು ಕೂಡಾ Literature ಎಂದೇ ಇಂಗ್ಲಿಷಿನಲ್ಲಿ ವ್ಯವಹರಿಸುತ್ತಾರೆ. ಆದರೆ, ಸಾಹಿತ್ಯ ಎಂಬ ಶಬ್ದಕ್ಕೆ ಸುವಿಶಾಲವಾದ ಅರ್ಥಗಳಿವೆ. ಇದನ್ನು ಲಕ್ಷಿಸಿಯೇ ಕಿಟ್ಟೆಲ್ ಮೇಲ್ಕಾಣಿಸಿದ ಮೂರು ಅರ್ಥಗಳನ್ನು ಕೊಟ್ಟಿದ್ದಾರೆ. ಕ್ರಿಯೆ + ಕಾಲ + ದೇಶಗಳೊಂದಿಗೆ ಕವಿಯು ಸಾಧಿಸುವ ಭಾವಮೈತ್ರಿಯನ್ನೇ Association, Union, Combination ಎನ್ನಬಹುದು.

ಸಾಹಿತ್ಯ ಲೋಕದಲ್ಲಿ ಉಪಮೆ ಮತ್ತು ರೂಪಕ ಇವೆರಡೇ ನೈಜವಾದ ಅಲಂಕಾರಗಳು. ಉಳಿದ ನೂರಾರು ಬಗೆಗಳು ಇವೆರಡರ ಬೇರೆ ಬೇರೆ ಅವತಾರಗಳು ಅಷ್ಟೇ. ಮಾನವ ಲೋಕದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಜಾತಿಗಳು ಇರುವಂತೆಯೇ ಉಪಮೆ ಮತ್ತು ರೂಪಕಗಳಿವೆ. ಇನ್ನುಳಿದ ನೂರಾರು ಬಗೆಯ ಅಲಂಕಾರಗಳು ನಮ್ಮ ದೇಶದ ಜಾತಿ ಪದ್ಧತಿಯ ತದ್ರೂಪು. ಅಲಂಕಾರ ಶಾಸ್ತ್ರ ಮತ್ತು ಕಾವ್ಯಮೀಮಾಂಸೆಯಲ್ಲಿ ನಿರೂಪಣೆಗೊಂಡಿರುವ ನೂರಕ್ಕೂ ಹೆಚ್ಚಿನ ಉಪಮಾ ರೂಪಕಾದಿಗಳು ಪಂಡಿತರ ಕೂದಲು ಸೀಳುವ ಬುದ್ಧಿಯ ಪಾಂಡಿತ್ಯದ ಖೆಡ್ಡಾ ರಚನೆ ಎನ್ನಬಹುದು. ಉಪಮೆಯಲ್ಲಿ ಉಪಮಾನ + ಉಪಮೇಯ + ಉಪಮಾ ವಾಚಕ + ಸಾಧಾರಣ ಧರ್ಮ ಎಂಬ ನಾಲ್ಕು ಅಂಗಗಳು ಇರುತ್ತವೆ. ರೂಪಕದಲ್ಲಿ ಉಪಮಾನ ಮತ್ತು ಉಪಮೇಯದ ನಡುವೆ ಅಭೇದ ಕಲ್ಪನೆಯಿರುತ್ತದೆ.

ಉಪಮೆಗೆ ಕನ್ನಡದಲ್ಲಿ ಲಕ್ಷೀಶ, ಸಂಸ್ಕೃತದಲ್ಲಿ ಕಾಳಿದಾಸ ಪ್ರಸಿದ್ಧರಾಗಿದ್ದು ಉಪಮಾಲೋಲರೆಂದು ಹೆಸರಾಗಿದ್ದಾರೆ. ಕುಮಾರವ್ಯಾಸನು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಖ್ಯಾತಿ ಪಡೆದಿದ್ದಾನೆ. ಇಂಥ ಕವಿಗಳು ಜಗತ್ತಿನ ಎಷ್ಟೋ ಭಾಷೆಗಳಲ್ಲಿದ್ದಾರೆ. ಆದರೆ ಉಪಮೆ ಮತ್ತು ರೂಪಕವಲ್ಲದ ಮತ್ತೊಂದು ಬೆಡಗು ಕನ್ನಡದಲ್ಲಿ ಮಾತ್ರ ಇದೆ. ಇದನ್ನು ‘ಶಬ್ದದೊಳಗಣ ನಿಃಶಬ್ದ’ ಎಂದು ಸೂಚಿಸಬಹುದು. ಇದು ಅಲಂಕಾರ ಶಾಸ್ತ್ರ ಮತ್ತು ಕಾವ್ಯಮೀಮಾಂಸೆಯ ಗಡಿಗಳನ್ನು ದಾಟಿದ ಅಭಿವ್ಯಕ್ತಿ. ಶಬ್ದದೊಳಗಣ ನಿಃಶಬ್ದವೇ ಶೂನ್ಯ ತತ್ವ. ಇದನ್ನು ಮನಗಾಣಲು ಅಲ್ಲಮಪ್ರಭುಗಳ ವಚನಗಳಿಗೇ ಬರಬೇಕು.

ಹಗಲೆಲ್ಲಾ ಬೆಳಕು ಮತ್ತು ಇರುಳೆಲ್ಲಾ ಕತ್ತಲೆ ಎಂಬುದು ಸರ್ವ ಸಾಮಾನ್ಯ ಗ್ರಹಿಕೆ. ಅಲ್ಲಮಪ್ರಭು ಪ್ರಕಾರ ಕತ್ತಲೆಯ ವಿರಾಟ್ ಸ್ವರೂಪ ಹೀಗಿದೆ:

ಹಿಡಿವ ಕೆಯ್ಯ ಮೇಲೆ ಕತ್ತಲೆ ಅಯ್ಯ
ನೋಡುವ ಕಂಗಳ ಮೇಲೆ ಕತ್ತಲೆ ಅಯ್ಯ
ನೆನೆವ ಮನದೊಳಗೆ ಕತ್ತಲೆ ಅಯ್ಯ
ಕತ್ತಲೆ ಎಂಬುದು ಅತ್ತಲೆ ಅಯ್ಯ
ಗುಹೇಶ್ವರನೆಂಬುದು ಇತ್ತಲೆ ಅಯ್ಯ (LB: 130)

ಉಪಮೆಯ ನಾಲ್ಕು ಅಂಗಗಳು ಮತ್ತು ರೂಪಕದ ಅಭೇದ ಕಲ್ಪನೆಯ ಗೊಡವೆಗೆ ಹೋಗದೆ ಅಲ್ಲಮಪ್ರಭು ಸಾಧಿಸಿರುವ ಶಬ್ದದೊಳಗಣ ನಿಃಶಬ್ದದ ನಿಧಿ ಇಲ್ಲಿದೆ. ಕೈಯಲ್ಲಿ ಹಿಡಿದಿರುವ, ಕಣ್ಣುಗಳಲ್ಲಿ ನೋಡುತ್ತಿರುವ, ಮನಸ್ಸಿನಲ್ಲಿ ನೆನೆಯುತ್ತಿರುವ ವಸ್ತು ಯಾವುದು? ಎಂಬುದನ್ನು ತಿಳಿಸದೇ ಸಾಧಿಸಿರುವ ಮಹಾಮೌನ ಅಥವಾ Silence ಈ ಬೆಡಗಿನ ವಚನದ ವೈಶಿಷ್ಟ್ಯ. ಇಲ್ಲಿ ಖಾಲಿ ಇರುವ ಸ್ಥಳವನ್ನು ಅವರವರು ಅವರವರ ಭಾವಕ್ಕೆ ತಕ್ಕಂತೆ ಭರ್ತಿ ಮಾಡಿಕೊಳ್ಳಬಹುದು. ಕೈಯಲ್ಲಿ ಹಿಡಿದಿರುವ ಸಿಗರೇಟ್, ಪಠ್ಯಪುಸ್ತಕ, ಮೊಬೈಲ್, ಈಸಿ ಮೌಸ್, ಪ್ಯಾಕೇಜ್ ಫುಡ್ಸ್, ಇಷ್ಟಲಿಂಗ ಏನು ಬೇಕಾದರೂ ಆಗಬಹುದು.
ಅಲ್ಲಮಪ್ರಭುವಿನ ವಚನಗಳನ್ನು ಕೇಳುತ್ತಿದ್ದರೆ ಮೈಯೆಲ್ಲಾ ಜುಂ ಎನ್ನುತ್ತದೆ. ಈ ವಚನವನ್ನು ಪರಿಭಾವಿಸಿ:

ಹರಿವ ನದಿಗೆ ಮೈಯೆಲ್ಲಾ ಕಾಲು
ಬೀಸುವ ಗಾಳಿಗೆ ಮೈಯೆಲ್ಲಾ ಕೈಯಿ
ಉರಿವ ಕಿಚ್ಚಿಗೆ ಮೈಯೆಲ್ಲಾ ಬಾಯಿ
ಇದು ಕಾರಣ ಗುಹೇಶ್ವರ ನಿಮ್ಮ ಶರಣಂಗೆ
ಸರ್ವಾಂಗವೂ ಲಿಂಗಮಯವಯ್ಯ (LB. 365)

ಮತಧರ್ಮ ಮೂಲವಾದ ಎಲ್ಲಾ ಅನಿಷ್ಟಗಳಿಂದ ದೂರವಾದ ಅಲ್ಲಮಪ್ರಭು ಕುಂಭಮೇಳಗಳು, ಗಲಾಟೆ, ಗಲೀಜು, ನೂಕುನುಗ್ಗಲು ಕಾಲ್ತುಳಿತಗಳು ಇವೆಲ್ಲವುಗಳನ್ನು ಲಕ್ಷಿಸುವುದೇ ಇಲ್ಲ. ಇಷ್ಟಲಿಂಗ ಧಾರಣೆ ದೇಹದ ಯಾವ ಯಾವ ಭಾಗದಲ್ಲಿ ಕಟ್ಟಿಕೊಳ್ಳಬೇಕು? ಎಂದು ಹೇಳುವ ಮಠಾಧೀಶರು, ಜಗದ್ಗುರುಗಳಿಗೆ ಅಲ್ಲಮಪ್ರಭು “ಸರ್ವಾಂಗವೂ ಲಿಂಗಮಯವಯ್ಯ” ಎಂದಿಲ್ಲಿ ಹೇಳುತ್ತಿದ್ದಾರೆ. ದೇವರು ಧರ್ಮದ ಹೆಸರಿನಲ್ಲಿ ವ್ಯರ್ಥವಾಗಿ ಕಾಲಕ್ಷೇಪ ಮಾಡುವುದನ್ನು ಅಲ್ಲಮಪ್ರಭು ಒಪ್ಪುವುದಿಲ್ಲ:

ಮಣಿಯನೆಣಿಸಿ ಕಾಲವ ಕಳೆಯಬೇಡ
ಕಣಿಯ ಪೂಜಿಸಿ ಕಾಲವ ಕಳೆಯಬೇಡ
ಕ್ಷಣವಾದಡೆಯೂ ಆಗಲಿ
ಕ್ಷಣಾರ್ಧವಾದಡೆಯೂ ಆಗಲಿ
ನಿಜದ ನೆನಹೇ ಸಾಕು:
ಬೆಂಕಿಯೊಳಗುಳ್ಳ ಗುಣ ಬಿಸಿನೀರಲುಂಟೇ? ಗುಹೇಶ್ವರ (LB: 402)

ಬೆಂಕಿ ಒರಿಜಿನಲ್! ಬಿಸಿನೀರು ಡೂಪ್ಲಿಕೇಟ್! ಶರಣರು ಬೆಂಕಿಯಾಗಬೇಕೇ ಹೊರತು ಬಿಸಿನೀರಾಗಬಾರದು ಎಂಬ ಧಾತು ಮತ್ತು ಧೋರಣೆಗಳು ಅಲ್ಲಮರಲ್ಲಿದೆ. ಅಲ್ಲಮರ ವಚನಗಳು ಏಕಕಾಲಕ್ಕೆ ಬೆಡಗಿನ / ಬೆರಗಿನ / ಬೆಳಗಿನ / ವಚನಗಳಾಗಿವೆ. ಉಪಮಾ ಲೋಲರು ಮತ್ತು ರೂಪಕ ಸಾಮ್ರಾಜ್ಯ ಚಕ್ರವರ್ತಿಗಳು ಜಗತ್ತಿನ ಎಲ್ಲಾ ಸಾಹಿತ್ಯಿಕ ಭಾಷೆಗಳಲ್ಲಿದ್ದಾರೆ. ಆದರೆ ಶಬ್ದದೊಳಗಣ ನಿಃಶಬ್ದದ ಕವಿಗಳನ್ನು ನಾನೆಲ್ಲೂ ಕಾಣೆ. ಅಲ್ಲಮಪ್ರಭು ಕನ್ನಡ ಸಾಹಿತ್ಯ ಪರಂಪರೆಯ ಮೌಂಟ್ ಎವರೆಸ್ಟ್ ಎನ್ನಬಹುದು. ಶಿವಗಣ ಪ್ರಸಾದಿ ಮಹಾದೇವಯ್ಯ ಪೋಣಿಸಿದ ‘ಶೂನ್ಯ ಸಂಪಾದನೆ’ ತರಹದ ಸಂಯೋಜಿತ ಮಹಾಕಾವ್ಯ ಬೇರೆ ಭಾಷೆಯಲ್ಲಿಲ್ಲ! ಶೂನ್ಯ ಸಂಪಾದನೆ ಹೊಂದಿರುವ ಜಗತ್ತಿನ ಏಕೈಕ ಭಾಷೆ ಕನ್ನಡ ಎಂದು ಗ್ರಹಿಸಿದರೆ ‘ಶಬ್ದದೊಳಗಣ ನಿಃಶಬ್ದದ ಶಕ್ತಿ’ ಅರಿವಾಗುತ್ತದೆ.

ಅಲ್ಲಮಪ್ರಭು ಸಾಹಿತ್ಯಲೋಕದ ಗಡಿಗಳನ್ನು ದಾಟಿದ ಮಹಾಸಂತ, ನಿಃಶಬ್ದದ ಕವಿ, ಸುಜ್ಞಾನದ ವಿಜ್ಞಾನಿ, ಮಹಾ ದಾರ್ಶನಿಕ. ಈ ಚತುರ್ಮುಖ ಸೌಂದರ್ಯ ಅಲ್ಲಮರ ವಚನಗಳಲ್ಲಿದೆ. ಸಾಹಿತಿಗಳು ಸಾಹಿತ್ಯ ಲೋಕದ ಗಡಿಗಳನ್ನು ದಾಟಬೇಕು. ಸಾಹಿತ್ಯ ರಚನೆಗಿಂತಲೂ, ಜೀವನಸಾಹಿತ್ಯ ತತ್ವವು ಉತ್ಕೃಷ್ಟ. ಜೀವನಸಾಹಿತ್ಯ ಸಮ್ಮೇಳನಗಳು ನಮಗೆ ಆದರ್ಶವಾಗಬೇಕು. ಮಾಲೂರಿನ ಸೀತನಾಯಕನ ಹಳ್ಳಿ ಗೇಟ್ ಬಳಿಯಿರುವ ತಲೆಮಾರು ಬುದ್ಧವನ ಕುಟೀರದ ಪದ್ಮಾಲಯ ನಾಗರಾಜ್ ನೋಡಿರಿ. ಈತ ಪ್ರಾಥಮಿಕ ಶಾಲೆಯ ಮಾಸ್ತರು, ಕವಿ, ತತ್ವಪದಕಾರ, ಅಚಲ ಕತೆಗಾರ, ಆದಿಮ ಶಿಲ್ಪಿ, ವಾಸ್ತುಶಿಲ್ಪಿ, ರಂಗಕರ್ಮಿ, ನಾಟಿವೈದ್ಯ, ಹರಿಕಥಾ ವಿದ್ವಾನ್, ಕೃಷಿಕ ಇತ್ಯಾದಿ. ಹೀಗೇ ಬಹುಮುಖಿ ಪ್ರತಿಭೆ ಮತ್ತು ಬಹುರೂಪಾತ್ಮಕ ವ್ಯಕ್ತಿತ್ವದ ಪದ್ಮಾಲಯ ನಾಗರಾಜ್ ಮಾಲೂರಿನ ಹೆಮ್ಮೆ. ಈತನ ಬಗ್ಗೆ ಗೆಳೆಯ ಲಕ್ಷ್ಮೀಪತಿ ಕೋಲಾರ ಒಂದು ಡಾಕ್ಯುಮೆಂಟರಿ ಚಿತ್ರವನ್ನೇ ನಿರ್ಮಾಣ ಮಾಡಿದ್ದಾರೆ. ಆಸಕ್ತರು ಇದನ್ನು ಯೂಟ್ಯೂಬ್ ನಲ್ಲಿ ನೋಡಬಹುದು. ಕನ್ನಡ ಎಂ.ಎ ಮಾಡಿ ಒಂದೆರಡು ಕವನ ಸಂಕಲನ ಪ್ರಕಟಿಸಿ, ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದವರೆಲ್ಲರೂ ಕವಿಗಳಲ್ಲ. ಕವಿಗಳು ಮೊದಲಿಗೆ ಸಾಹಿತ್ಯ ಲೋಕದ ಗಡಿಗಳನ್ನು ದಾಟಬೇಕು. ಈ ದೃಷ್ಟಿಯಿಂದ ಕುವೆಂಪು, ಶಿವರಾಮ ಕಾರಂತ, ತೇಜಸ್ವಿ ಇತರ ಕವಿಗಳಿಗಿಂತ ಬೇರೆಯಾಗಿ ನಿಲ್ಲುತ್ತಾರೆ.

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಸಾಹಿತಿಗಳು ಜೀವನದ ಎಲ್ಲಾ ಆಯಾಮಗಳನ್ನು ಒಳಗೊಳ್ಳಬೇಕು. All Inclusive ತತ್ವವು ಸಾಹಿತಿಗಳ ಆದರ್ಶವಾಗಬೇಕು. ಈ ದಿಸೆಯಲ್ಲಿ ಸಾಕ್ರಟೀಸ್ ಪರೀಕ್ಷೆ ಎಂಬ ಐತಿಹ್ಯ ಗಮನಿಸಿರಿ:
ಸಾಕ್ರಟೀಸ್ ಮಹಾ ತತ್ವಜ್ಞಾನಿ. ಪ್ರಾಚೀನ ಗ್ರೀಕ್ ದೇಶದಲ್ಲಿ ಪ್ಲೇಟೋ ಇವನ ಶಿಷ್ಯ. ಪ್ಲೇಟೋ ಶಿಷ್ಯ ಅರಿಸ್ಟಾಟಲ್. ಇದು ಗುರು ಶಿಷ್ಯ ಪರಂಪರೆ. ಸಾಕ್ರಟೀಸ್ ಹತ್ತಿರ ಶಿಷ್ಯರಾಗಿ ಸೇರಿಕೊಳ್ಳಲು ಜನರು ಮುಗಿಬೀಳುತ್ತಿದ್ದರು. ಇವರನ್ನು ನಿಭಾಯಿಸಲು ಸಾಕ್ರಟೀಸ್ ಒಂದು ಪರೀಕ್ಷೆ ಮಾಡುತ್ತಿದ್ದ. ತನ್ನ ಮನೆಯ ಮುಂದಿನ ಪುಟ್ಟ ಕೊಳದಲ್ಲಿ ಬಗ್ಗಿ ನೋಡಿ ಏನು ಕಂಡಿರಿ ತಿಳಿಸಿ ಎನ್ನುತ್ತಿದ್ದನು. ಯಾರಾರು ತಮ್ಮ ಪ್ರತಿಬಿಂಬವನ್ನು ಕಂಡೆವೆಂದು ಹೇಳುತ್ತಿದ್ದರೋ, ಯಾರಾರು ತಮ್ಮ ಪ್ರತಿಬಿಂಬದ ವರ್ಣನೆ ಮಾಡುತ್ತಿದ್ದರೋ ಅವರನ್ನೆಲ್ಲಾ ವಾಪಸ್ ಕಳುಹಿಸಿಬಿಡುತ್ತಿದ್ದ. ಯಾರಾರು ಕೊಳದ ಸೂಕ್ಷ್ಮ ವಿವರಗಳನ್ನು ಸಸ್ಯ ಜಲಚರಾದಿಗಳನ್ನು ಕುರಿತು ತಿಳಿಸುತ್ತಿದ್ದರೋ ಅವರನ್ನು ಮಾತ್ರ ಶಿಷ್ಯರಾಗಲು ಉಳಿಸಿಕೊಳ್ಳುತ್ತಿದ್ದನು. ಇಲ್ಲಿ ಗ್ರಹಿಸಬೇಕಾದ ವಿಚಾರವಿಷ್ಟು:
೧) ಸ್ವಕೇಂದ್ರಿತ ದೃಷ್ಟಿಕೋನ
೨) ಮನುಷ್ಯ ಕೇಂದ್ರಿತ ದೃಷ್ಟಿಕೋನ
೩) ಜೀವಕೇಂದ್ರಿತ ದೃಷ್ಟಿಕೋನ

ಸ್ವಕೇಂದ್ರಿತ ದೃಷ್ಟಿಕೋನವು 90°! ಮನುಷ್ಯ ಕೇಂದ್ರಿತ ದೃಷ್ಟಿಕೋನವು 180°! ಜೀವ ಕೆಂದ್ರಿತ ದೃಷ್ಟಿಕೋನವು ಪೂರ್ಣದೃಷ್ಟಿಯ 360° ಕಣ್ನೋಟವಾಗಿದೆ. ನಮ್ಮ ಅನುಭವಕ್ಕೆ ಬರುವ ವಸ್ತುವಿಷಯಗಳನ್ನು ನಾವು ಒಳಹೊಕ್ಕು ಪೂರ್ಣದೃಷ್ಟಿಯಿಂದ 360° ವ್ಯಾಪ್ತಿಯಲ್ಲಿ ಗ್ರಹಿಸಬೇಕು. ಜೊತೆಗೆ ನಮ್ಮ ಓದಿನ ಬಗೆಗಳು ಕೂಡಾ ಬದಲಾಗಬೇಕು. ಓದುಗಳಲ್ಲಿ ಮೂರು ವಿಧ:
೧) ಮೊಲದ ಓದು = Rabit Reading
೨) ಆಮೆಯ ಓದು = Tortoise Reading
೩) ಶಂಖದ ಹುಳುವಿನ ಓದು = Snail Reading

ಮೊಲದ ಓದು ಮತ್ತು ಆಮೆಯ ಓದುಗಳೆರಡೂ ಸ್ಪರ್ಧಾತ್ಮಕ ಓದುಗಳು. ಮೊಲದ ಓದು ಜಂಬದ ಓದು. ಆಮೆಯ ಓದು ಕಷ್ಟಸಹಿಷ್ಣುತೆಯ ಓದು. ಆದರೆ ಇವೆರಡೂ ಸ್ಪರ್ಧಾತ್ಮಕ ಓದುಗಳು. ದ್ರವವನ್ನು ಸ್ರವಿಸುತ್ತಾ ತೆವಳಿಕೊಂಡು ಚಲಿಸುವ ಶಂಖದ ಹುಳುವಿನ ಓದಿಗೆ ಸ್ಪರ್ಧೆಯ ಉದ್ದೇಶವೇ ಇಲ್ಲ. ಸ್ಪರ್ಧಾ ರಹಿತವಾದ ಓದಿನ ಶೈಲಿ ನಮ್ಮದಾಗಬೇಕು. ಕುವೆಂಪು ಹೇಳುವಂತೆ-“ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ” ಎಂದಾಗಬೇಕು. ಹನ್ನೆರಡನೇ ಶತಮಾನದ ಶರಣರ ಪೈಕಿ ಅರಿವಿನ ಮಾರಿತಂದೆ, ‘ಅತುರವೈರಿ ಮಾರೇಶ್ವರಾ’ ಎಂಬ ಅಂಕಿತವನ್ನು ಹೊಂದಿದ್ದರೆ, ಕಾಡ ಸಿದ್ದೇಶ್ವರರು- ‘ಕಾಡಿನೊಳಗಾದ ಶಂಕರಪ್ರಿಯ’ ಎಂಬ ಅಂಕಿತವನ್ನು ಹೊಂದಿದ್ದಾರೆ. ಆತುರವೈರಿ ಮತ್ತು ಕಾಡಿನೊಳಗಾದ ಎಂಬೀ ಅಂಕಿತಗಳು ಆಧುನಿಕ ನಾಗರಿಕರ ಕಣ್ಣು ತೆರೆಸುವ ದಿವ್ಯಾಂಜನವಾಗಿ ಕಾಣುತ್ತವೆ. ಅವಸರಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವ ಮತ್ತು ಮಹಾನಗರವಾಸಿಗಳಾಗಿ ನಿಸರ್ಗದಿಂದ ದೂರವಾಗಿರುವ ನಾಗರಿಕರ ಪಾಲಿಗೆ ಇವೆರಡೂ ಅಂಕಿತಗಳು ಕನಕನ ಕಿಂಡಿಗಳೇ ಆಗಿವೆ.

ಮನುಷ್ಯ ಹೇಗಿರಬೇಕು? ಸಮಾಜದ ರಚನೆಯ ಸ್ವರೂಪ ಯಾವುದು? ಎಂಬುದರ ಬಗ್ಗೆ ಆದಿಕವಿ ಪಂಪನ ನುಡಿ ಮಾರ್ಗದರ್ಶಕ ಸೂತ್ರವಾಗಿದೆ:
ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರಮಾದ ಮಾನಸರೇ ಮಾನಿಸರ್!

ಚಾಗದ (ತ್ಯಾಗದ) ತಳಹದಿಯ ಮೇಲೆ ರೂಪುಗೊಳ್ಳಬೇಕಾದ ಮನುಷ್ಯನ ವ್ಯಕ್ತಿತ್ವ ಮತ್ತು ಸಮಾಜದ ರಚನೆಯನ್ನು ಇಲ್ಲಿ ಪಂಪ ಸೂಚಿಸಿದ್ದಾನೆ. ಇದೇ ತರಹ ವಿಜಯನಗರ ಪ್ರೌಢದೇವರಾಯನ ಮಂತ್ರಿ ಲಕ್ಷೀಧರ ಅಮಾತ್ಯನ ತಾಯಿ ತನ್ನ ಮಗುವಿಗೆ ಹಾಲು ಕುಡಿಸುತ್ತಾ ಕಿವಿಯಲ್ಲಿ ಹೇಳಿದ ಶಾಸನ ಪದ್ಯವೂ ಇದೆ:”ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯಗಳನ್ನು ನಿರ್ಮಿಸು, ಬಂಧನಕ್ಕೆ ಸಿಕ್ಕ ಅನಾಥರನ್ನು ಬಿಡಿಸು, ಸ್ನೇಹಿತರಿಗೆ ನೆರವಾಗು, ನಂಬಿದವರನ್ನು ಕೈ ಬಿಡದಿರು, ಸಜ್ಜನರನ್ನು ರಕ್ಷಿಸು” ಗಮನಿಸಿ, ಈ ಪಟ್ಟಿಯಲ್ಲಿ “ಸಾಹಿತ್ಯವನ್ನು ರಚಿಸು” ಎಂದು ಹೇಳಿಲ್ಲ.
ಇಲ್ಲಿ ತಾಯೊಬ್ಬಳು ಹೇಳಿರುವ ಸತ್ಕಾರ್ಯಗಳೇ Union + Combination + Association ಆಗಿದೆ. ಇದೇ ಸಾಹಿತ್ಯ! [ಅಳಿದುಳಿದ ಕೆರೆಗಳ ಜೀರ್ಣೋದ್ಧಾರ ಆಗಬೇಕು. ನೆಲ ಮಟ್ಟದಲ್ಲಿ ನೀರಿಲ್ಲದೆ ಸಾವಿರಾರು ಅಡಿ ಆಳದ ಕೊಳವೆ ಬಾವಿಗಳು ಇರುವ ಕಡೆ ಮಳೆನೀರು ಕೊಯ್ಲು ಮಾಡಬೇಕು. ದೇವಾಲಯಗಳಿಗೆ ಬದಲು ಗ್ರಂಥಾಲಯಗಳನ್ನು ನಿರ್ಮಿಸಬೇಕು… ಹೀಗೇ ಈ ಪದ್ಯವನ್ನು ಈಗಿನ ಸಂದರ್ಭಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕು.]

ಇಂದಿನ ಆಧುನಿಕ ಸಮಾಜವು ತ್ಯಾಗಕ್ಕೆ ಎಳ್ಳುನೀರು ಬಿಟ್ಟು ಭೋಗದ ತಳಹದಿಯ ಮೇಲೆ ಮನುಷ್ಯನ ವ್ಯಕ್ತಿತ್ವ ನಿರ್ಮಾಣ ಮತ್ತು ಸಮಾಜದ ರಚನೆಯನ್ನು ಮಾಡುತ್ತಾ ಸಹಜೀವಿ ಸಂಕುಲಕ್ಕೆ ಮೃತ್ಯು ಪ್ರಾಯವಾಗಿದೆ. ಭೋಗದ ಬಂಡವಾಳವು ವಿನಾಶಕಾರಕ ಮತ್ತು ಆತ್ಮ ಘಾತುಕ. ಬಂಡವಾಳ ಎಂದರೇನು ಎಂಬ ಸಮರ್ಪಕ ವಿವರಣೆಯನ್ನು ಕಾರ್ಲ್ ಮಾರ್ಕ್ಸ್ ಕೊಟ್ಟಿದ್ದಾರೆ. ತನ್ಮೂಲಕ ಬಂಡವಾಳದ ನೀಚ ಸ್ವರೂಪವನ್ನು ಬಯಲಿಗೆಳೆದಿದ್ದಾರೆ: “ಬಂಡವಾಳವು ಹೂಡಿಕೆದಾರರ ನಿರ್ಜೀವ ಶ್ರಮ. ಇದು ರಕ್ತಪಿಪಾಸು ವಾಂಪೈರ್ ತರಹ ಜೀವಂತ ಶ್ರಮಜೀವಿಗಳ ನೆತ್ತರನ್ನು ಹೀರುತ್ತಾ ಬದುಕುವುದು. ಬಹು ದೀರ್ಘಕಾಲ ಜೀವಿಸುತ್ತಾ ಮುಂಬರುವ ತಲೆಮಾರುಗಳ ಜೀವಂತ ಶ್ರಮಜೀವಿಗಳ ನೆತ್ತರನ್ನು ಹೀರುತ್ತಾ ಇರುವುದು”.

ಹೀಗೆ ಹೇಳಿದ ಕಾರ್ಲ್ ಮಾರ್ಕ್ಸ್ ಪ್ರಕಾರ ಈ ಭೋಗ ಬಂಡವಾಳ ಎಂಬ ಕುದುರೆಯ ಸವಾರಿ ಮಾಡುವುದು ಮತಧರ್ಮ! ಆದ್ದರಿಂದಲೇ ಕಾರ್ಲ್ ಮಾರ್ಕ್ಸ್ ಮುಂದುವರೆದು- “ಮತಧರ್ಮವು ಅಫೀಮು ಮತ್ತು ಪೀಡಿತ ಜನರ ನಿಟ್ಟುಸಿರು” ಎಂದು ನುಡಿದಿದ್ದಾರೆ. ಮತಧರ್ಮದಿಂದ ಹುಟ್ಟುವ ಅನಿಷ್ಟಗಳೇ ಎಲ್ಲಾ ಬಗೆಯ ದುರಂತಗಳಿಗೆ ಮೂಲಭೂತವಾದ ಕಾರಣ. ಇದನ್ನು ಅರಿತು ನಾವೆಲ್ಲರೂ ತ್ಯಾಗಮೂಲವಾದ ತಳಹದಿಯ ಮೇಲೆ ಮಾನವ ದಯಾಮೃತದ ಮತ್ತು ಕರುಣಾ ಮೈತ್ರಿಯ ಮನುಷ್ಯರು ಮತ್ತು ಸಮಾಜದ ರಚನೆಯನ್ನು ಮಾಡಲು ಸಂಕಲ್ಪಿಸಲು ಕೈಲಾದ ಮಟ್ಟಿಗೆ ದುಡಿಯೋಣ.

ಸೃಷ್ಟಿಸತ್ಯ

ಮಾನವಜಗತ್ತಿನಲ್ಲಿ, ನಾಗರಿಕತೆಯ ಮಹಾಯಾನದಲ್ಲಿ ಮನುಷ್ಯರು ಸೃಷ್ಟಿಸತ್ಯಗಳಿಂದ ದೂರ ದೂರ ಸಿಡಿದಿರುತ್ತಾರೆ. ನಾನಾಬಗೆಯ ಸಂಸ್ಕಾರ ಸಂಸ್ಕರಣಗಳಿಂದ ಗೊತ್ತಿಲ್ಲದೆ ಬೇರೆಯಾಗುತ್ತಾರೆ! ಸಂಸ್ಕೃತಿದತ್ತ ಉಪಾಧಿಗಳಿಗೆ ಒಳಗಾಗಿ ಮಾನವನಿರ್ಮಿತ ಖೆಡ್ಡಾ ರಚನೆಯಲ್ಲಿ ಬಿದ್ದು ಎದ್ದೇಳದ ಗುಲಾಮರಾಗುತ್ತಾರೆ! ಮನುಷ್ಯರ ಮಧ್ಯಪ್ರವೇಶ ಮತ್ತು ವಿಶೇಷ ಆರೈಕೆಯಿಂದ ನಿಸರ್ಗದ ಮೂಲಸತ್ವ ಮತ್ತು ಕಾಂತಿಯನ್ನು ಕಳೆದುಕೊಳ್ಳುತ್ತಾರೆ!

ನಾವು ಹುಟ್ಟಿನಲ್ಲಿ, ಬೆಳವಣಿಗೆಯಲ್ಲಿ, ಸಾವಿನಲ್ಲಿ, ಮಾತ್ರವಲ್ಲ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲಿ ಗತಿಶೀಲ ಚಿಂತನೆಯಲ್ಲಿ ಸೃಷ್ಟಿ ಸತ್ಯಕ್ಕೆ ಹತ್ತಿರವಾಗಿರಬೇಕು. ಸಾಧ್ಯವಾದರೆ, ಸೃಷ್ಟಿಸತ್ಯದ ನಾಡಿಮಿಡಿತವಾಗಿ ಬಾಳು ಸಹಜವಾಗಬೇಕು!

ಝೆನ್ ವನ

1
ಜಪಾನ್ ದೇಶದಲ್ಲಿ ರಾಜನೊಬ್ಬನಿಗೆ ಝೆನ್ ವನವೊಂದನ್ನು ನಿರ್ಮಿಸಬೇಕೆನಿಸಿತು. ಇದಕ್ಕಾಗಿ ಸುಪ್ರಸಿದ್ಧ ಝೆನ್ ಗುರುವನ್ನು ಭೇಟಿ ಮಾಡಿ ತನ್ನ ಮನದಿಚ್ಛೆ ನಿವೇದಿಸಿದನು. ಝೆನ್ ಗುರು ಅರಮನೆಗೆ ಬಂದನು. ಅರಮನೆಗೆ ಹೊಂದಿಕೊಂಡಿರುವ ಹೂತೋಟವನ್ನು ನೋಡಿದನು. ಇದು ಸಂಪೂರ್ಣವಾಗಿ ಮಾನವನಿರ್ಮಿತ. ಮಾನವರ ದಿನಬಳಕೆಗಾಗಿ ಪರಿಮಿತ. ವಿಶ್ವದ ಅನಂತತೆ ಮತ್ತು ಶೂನ್ಯತಾ ಸಿದ್ಧಿಗಿದು ಬಹುದೊಡ್ಡ ಅಡೆ ತಡೆ! ನಿಸರ್ಗದ ಲಯಗಳಿಗೆ ಇಲ್ಲಿಲ್ಲ ಎಡೆ! ಝೆನ್ ಗುರುವಿಗೆ ಬಾಗಿ ನಮಿಸಿದ ರಾಜ- “ಹೇಳಿ ಗುರುವೇ!ಯಾವ ಸ್ಥಳ ಪ್ರಶಸ್ತ?”
ಝೆನ್ ಗುರು ಅರಮನೆಯ ಆವರಣ ತೊರೆದ. ರಾಜಧಾನಿಯ ಹೊರವಲಯದಲ್ಲಿ ನಿರ್ಜನ ದೇಶದ, ನೀರವ ಕಾಲದ, ಖಗರವಗಳ ಪುಲಕವ ಹಡೆವ ಸ್ಥಳವನು ಆಯ್ಕೆ ಮಾಡಿದನು. ಅಲ್ಲೊಂದು ತೊರೆಯಿತ್ತು. ಸಣ್ಣಗೆ ಧುಮುಕುವ ಬಂಡೆ ಜಲಪಾತವಿತ್ತು. ಗುರುವಿನಾಜ್ಞೆಯಂತೆ ರಾಜ ಆ ಪ್ರದೇಶದಲ್ಲಿ ಹಣ್ಣಿನ ಮರಗಳನ್ನು ನೆಡಿಸಿದನು.
ಬೇಲಿಗೆ ಬದಲು ಅಲ್ಲಿನ ಬಂಡೆಗಲ್ಲುಗಳ ಬಳಸಿ ಪಾಪಾಸುಕಳ್ಳಿ ಗಿಡಗಳನ್ನು ಬೆಳೆಸಿದನು. ವಿಶೇಷ ಆರೈಕೆಯಿಂದಾಗಿ ಒಂದೆರಡು ಮೂರು ವರ್ಷಗಳಲ್ಲಿ ಝೆನ್ ವನ ನಳನಳಿಸಿ ರಾಜನ ಖಾಸಗಿ ತೋಟವಾಗಿ ಕಂಗೊಳಿಸಿತು!

2
ರಾಜ ಮನದಲ್ಲಿ ಹಿಗ್ಗಿ ಹೀರೇಕಾಯಾದನು. ಝೆನ್ ಗುರುವ ಕರೆಸಿ ತೋರಿಸಿದನು. ಗುರು ಆ ತೋಟದಲ್ಲಿ ಸುತ್ತಾಡಿದನು. ಅವನ ಕಣ್ಣಿಗೊಂದೂ ಹಕ್ಕಿಗೂಡು ಕಾಣಲಿಲ್ಲ. ಇರುವೆಗಳ ಎಲೆಗೂಡು, ದುಂಬಿಗಳ ಜೇನುಗೂಡು, ಕ್ರಿಮಿಕೀಟಗಳ ಅಸ್ತಿತ್ವ ಯಾವುದೂ ಇರಲಿಲ್ಲ. ಬಳ್ಳಿಗಳು ಮರಗಳನ್ನು ತಬ್ಬಿರಲಿಲ್ಲ! ಝೆನ್ ಗುರು ಕೊರತೆಗಳನ್ನು ಹೇಳಿದನು. ತೋಟವನು ಮೆಚ್ಚದೆ ಹಿಂದಿರುಗಿದನು!

ರಾಜನಿಗೆ ತೀವ್ರ ನಿರಾಶೆಯಾಯಿತು. ತನ್ನ ಪರಿವಾರಕ್ಕೆ ಹೇಳಿ ಕರೆಸಿಕೊಂಡು ಗುರುವಿನ ಅಭೀಷ್ಟವನು ತಿಳಿಸಿದನು. ಅಂದಿನಿಂದ ಹೂಹಣ್ಣಿನ ಕೊಯ್ಲು ನಿಲ್ಲಿಸಿದರು. ಅರಮನೆಗೆಷ್ಟು ಬೇಕೋ ಅಷ್ಟನ್ನೇ ಬಿಡಿಸಿದರು.

ಹಕ್ಕಿಗಳು ಬಂದು ಗೂಡು ಕಟ್ಟಿದವು! ಕೊಂಬೆಗಳಲ್ಲಿ ಜೇನುಹುಟ್ಟುಗಳ ಸರಮಾಲೆ! ಸುತ್ತ ಮುತ್ತ ಕ್ರಿಮಿಕೀಟಗಳ ನಾದಲೀಲೆ! ಅದೊಂದು ವನ್ಯಶಾಂತಿಯ ಬೀಡಾಯಿತು! ಹೀಗೇ ಆರು ವರ್ಷಗಳು ಉರುಳಿತು. “ಧನ್ಯ ನಾನು! ಜನ್ಮ ಸಾರ್ಥಕವಾಯಿತು” ಎಂದು ರಾಜ ಪುಳಕಿತಗೊಂಡು ತನುಮನ ತಾನಾದನು! ಝೆನ್ ಗುರುವನು ಕರೆಸಿ ಮತ್ತೆ ತೋರಿದನು.

3
ಝೆನ್ ಗುರು ಅಲ್ಲೆಲ್ಲ ಸುತ್ತಾಡಿದನು. ಹಕ್ಕಿಗಳ ಇಂಚರ, ದುಂಬಿಗಳ ಝೇಂಕಾರ, ಕ್ರಿಮಿಕೀಟಗಳ ಸ್ವರಸರಣಿ, ತೊರೆಯ ಜುಳು ಜುಳು, ಜಲಪಾತದ ನಿಃಶಬ್ದ ಸುಂದರಘೋಷ ಆಲಿಸುತ್ತ ಮರಗಳ ಕೆಳಗೆ ನೋಡಿದನು.
ಅವನ ಕಣ್ಣಿಗೊಂದೂ ತರಗೆಲೆ ಕಾಣಲಿಲ್ಲ. ಯಾವ ಪಾತಿಯೊಳಗೂ ಪಾಚಿಯೇ ಇಲ್ಲ. ರಾಜನ ಬಳಿ ವಿಚಾರಿಸಿದನು.
“ನಿನ್ನೆ ದಿನ ಪರಿಚಾರಕರು ಸ್ವಚ್ಛ ಗುಡಿಸಿ ನಿಮ್ಮ ಆಗಮನಕ್ಕೆ ಅಣಿಗೊಳಿಸಿದರು” ಎಂದ.
“ಅಷ್ಟರಮಟ್ಟಿಗೆ ನಿಸರ್ಗದ ಲಯಕ್ಕೆ ಭಂಗವಾಯಿತು! ಮಾನವರ ಮಧ್ಯಪ್ರವೇಶ ಎಷ್ಟು ಕಡಿಮೆ ಇದ್ದರೆ ಅಷ್ಟು ಒಳಿತು” ಎಂದ ಗುರು!

ಯಾವುದನ್ನು ಹೇಳಿದರೆ ಎಲ್ಲವನ್ನೂ ಹೇಳಿದಂತಾಗುವುದೋ ಅದನೊರೆದು ಹೋದನು!
ರಾಜನಿಗೆ ಝೆನ್ ಗುರುವಿನ ಅಭಿಮತ ತದ್ಗತವಾಗಿ ವನದ ತಥಾಗತಿ ಕಾಯ್ದನು!
ಹತ್ತು ವರ್ಷಗಳಲ್ಲಿ ರಾಜನ ಉಪವನ ಝೆನ್ ವನವಾಗಿ ಲೋಕವಿಖ್ಯಾತವಾಯಿತು!

Previous post ಅನಿಮಿಷನ ಕಥೆ- 6
ಅನಿಮಿಷನ ಕಥೆ- 6
Next post ಅನುಭವ ಮಂಟಪ
ಅನುಭವ ಮಂಟಪ

Related Posts

ಮಾಡುವಂತಿರಬೇಕು, ಮಾಡದಂತಿರಬೇಕು…
Share:
Articles

ಮಾಡುವಂತಿರಬೇಕು, ಮಾಡದಂತಿರಬೇಕು…

April 29, 2018 ಕೆ.ಆರ್ ಮಂಗಳಾ
ಮೊದಲ ಬಾರಿಗೆ ಶಾಲೆಯಲ್ಲಿ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೆಮ್ಮೆ, ಅಭಿಮಾನ, ಕುತೂಹಲಗಳಿಂದ ಓದುತ್ತಿದ್ದಾಗ ಒಂದು ವಿಷಯ ನನ್ನ ಮನಸ್ಸಿನಲ್ಲಿ ಅರ್ಥವಾಗದೇ...
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
Share:
Articles

ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)

February 11, 2022 ಡಾ. ಎನ್.ಜಿ ಮಹಾದೇವಪ್ಪ
ನಮ್ಮ ಮೂಲ ಪ್ರಶ್ನೆಗೆ ಬರೋಣ: ಅಲ್ಲಮರ ಪ್ರಕಾರ ಜಗತ್ತು ಮಾಯೆಯಲ್ಲದಿದ್ದರೆ ಅವರು ಪದೇ ಪದೇ ಬಳಸುವ ಮಾಯೆ ಎಂಬ ಪದಕ್ಕೆ ಯಾವ ಅರ್ಥವಿದೆ? ಚಾಮರಸನು ಅಲ್ಲಮ ಮಾಯೆಯನ್ನು ಗೆದ್ದವ...

Comments 13

  1. Satish Devaiah
    Apr 20, 2025 Reply

    My partner and I absolutely love your article sir… wow just wonderful.

  2. girijA Shekhar
    Apr 20, 2025 Reply

    ವಚನಗಳನ್ನು ಹೇಗೆಹೇಗೋ ನೋಡೋದಲ್ಲಾ, ಹೀಗೆ ನಿಮ್ಮಂತೆ ನೋಡಬೇಕು… ತುಂಬಾ ತುಂಬಾ ಖುಷಿಯಾಯ್ತು ಸರ್.

  3. ಗಿರಿಜಾ ಉಮೇಶ್
    Apr 28, 2025 Reply

    ಹಿಡಿವ ಕೆಯ್ಯ ಮೇಲೆ ಕತ್ತಲೆ ಅಯ್ಯ
    ನೋಡುವ ಕಂಗಳ ಮೇಲೆ ಕತ್ತಲೆ ಅಯ್ಯ- ವಚನಕ್ಕೆ ಲೇಖಕರು ತೋರಿಸಿದ ಅರ್ಥ ಓದಿ ಬೆರಗಾಗಿ ಹೋದೆ… ಬರೆದಿಟ್ಟುಕೊಂಡೆ🙏🙏

  4. Somashekhara H.B
    Apr 28, 2025 Reply

    “ಸರ್ವಾಂಗವೂ ಲಿಂಗಮಯವಯ್ಯ” ಎನ್ನುವ ಅಲ್ಲಮಪ್ರಭು ಎತ್ತ, ದೀಕ್ಷೆಯ ಹೆಸರಲ್ಲಿ ಕರ್ಮಠ ಆಚರಣೆಗಳನ್ನು ಮಾಡುವ ಮಠದ ಅಯ್ಯಗಳು ಎತ್ತ… ಶರಣರು ಕೊಟ್ಟ ಧರ್ಮ ಈಗ ಎಲ್ಲಿದೆ ಎಂದು ದುರ್ಬಿನ್ನು ಹಾಕಿ ಹುಡುಕುವ ಸ್ಥಿತಿ ಬಂದಿದೆ. ಅತ್ಯುತ್ತಮ ವಿಚಾರಗಳನ್ನು ಪೋಣಿಸಿ ಹೇಳಿದ ಡಾ.ನಂಗಲಿ ಗುರುಗಳಿಗೆ ಶರಣಾರ್ಥಿಗಳು.

  5. P. L. Ramesh
    Apr 28, 2025 Reply

    ಕಾರ್ಲ್ ಮಾರ್ಕ್ಸ್ ಬಂಡವಾಳಶಾಹಿಯ ಕ್ರೌರ್ಯವನ್ನು ಬಯಲು ಮಾಡಿದಂತೆ, ಧರ್ಮಗಳ ಮುಖವಾಡವನ್ನೂ ಬಯಲು ಮಾಡಿದರು. ದುರಂತವೆಂದರೆ ಮಾರ್ಕ್ಸ್ ವಾದ ಕೂಡ ಅಷ್ಟೇ ಸರ್ವಾಧಿಕಾರಿಯಾಗಿ ಜನರನ್ನು ಗುಲಾಮರನ್ನಾಗಿಸಿಕೊಂಡು ಆಳಿದ್ದು!

  6. Devaraju
    Apr 29, 2025 Reply

    ವಚನಗಳನ್ನು ಜೀವನದ ಜೊತೆಗಿಟ್ಟು ನೋಡುವ ಲೇಖನದ ಸೊಬಗು ಬಹಳವೇ ವಿಶೇಷವಾಗಿದೆ👌👌

  7. ಜಯಂತ್ ನಾಯಕ್
    May 1, 2025 Reply

    “ಶೂನ್ಯ ಸಂಪಾದನೆ ಹೊಂದಿರುವ ಜಗತ್ತಿನ ಏಕೈಕ ಭಾಷೆ ಕನ್ನಡ ಎಂದು ಗ್ರಹಿಸಿದರೆ ‘ಶಬ್ದದೊಳಗಣ ನಿಃಶಬ್ದದ ಶಕ್ತಿ’ ಅರಿವಾಗುತ್ತದೆ”- ಈ ವಾಕ್ಯವನ್ನು ವಿವರಿಸಿಕೊಡುವಿರಾ? ಶೂನ್ಯ ಸಂಪಾದನೆಗಳ ಮೇಲೆ ಸಂಶೋಧನೆ ಮಾಡಬೇಕೆಂದಿರುವೆ.

  8. ಗವಿಸಿದ್ದ ಬಿ
    May 1, 2025 Reply

    ಮೌನದ ಆಗಸಕೆ ಕರೆದೊಯ್ಯುವ ಹಂಬಲ

  9. Tippeshi G
    May 9, 2025 Reply

    ಹಿಡಿದ ಕೈಯ ಮೇಲೆ ಕತ್ತಲೆಯಯ್ಯಾ… ವಚನ ವ್ಯಾಖ್ಯಾನ ವಿನೂತನ🙏🙏🙏🙏💥

  10. ಅವಿನಾಶ್ ಬಿರಾದಾರ
    May 9, 2025 Reply

    ಝೆನ್‌ ಕತೆ ಮತ್ತು ವಚನ ಸಾಹಿತ್ಯವಲ್ಲ ಬದುಕೆಂಬ ಲೇಖನ ತುಂಬಾ ಚೆನ್ನಾಗಿದೆ.

  11. Asha kiran
    May 18, 2025 Reply

    Let Veena learn new techniq to make the purathana saahitya Easy instead of searc for unkn facts in the prooved saahitya

  12. ಅರವಿಂದ ತೇಕಳಿ
    May 28, 2025 Reply

    ಸರ್, ನಿಮ್ಮ ಭಾಷಣ ಕೇಳಿದ್ದೇನೆ. ನಿಮ್ಮ ಬರಹವೂ ನನಗೆ ಮೆಚ್ಚುಗೆಯಾಯಿತು. ಅಲ್ಲಮಪ್ರಭುವಿನ ವಚನಗಳ ವ್ಯಾಖ್ಯಾನ ಹಲವಾರು ಒಳಾರ್ಥಗಳನ್ನು ಸೂಚಿಸುವ ಪರಿ ಅದ್ಭುತವಾಗಿದೆ.

  13. ಹನುಮಂತ ಧಾರವಾಡ
    May 28, 2025 Reply

    ಶರಣರನ್ನು ‘ದಾರ್ಶನಿಕ ಸಾಹಿತಿ’ಗಳೆಂದು ಗುರುತಿಸಬಹುದು?

Leave a Reply to ಗಿರಿಜಾ ಉಮೇಶ್ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುರುಪಥ
ಗುರುಪಥ
January 4, 2020
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ಗಂಟಿನ ನಂಟು
ಗಂಟಿನ ನಂಟು
November 7, 2020
ನೆಮ್ಮದಿ
ನೆಮ್ಮದಿ
April 6, 2020
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
July 21, 2024
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
Copyright © 2025 Bayalu