Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವಚನ–ಶ್ರಮಣಧಾರೆಗಳ ಸಂಧಿಭೂಮಿ
Share:
Articles April 5, 2026 ಡಾ. ನಟರಾಜ ಬೂದಾಳು

ವಚನ–ಶ್ರಮಣಧಾರೆಗಳ ಸಂಧಿಭೂಮಿ

ಗುರುವಿಂಗೆ ಗುರುವಿಲ್ಲ ಲಿಂಗಕ್ಕೆ ಲಿಂಗವಿಲ್ಲ
ಜಂಗಮಕ್ಕೆ ಜಂಗಮವಿಲ್ಲ ನನಗೆ ನಾನಿಲ್ಲ
ಕಣ್ತೆರೆದು ನೋಡುವಡೆ ಆರಿಗೆ ಆರೂ ಇಲ್ಲ ಕಪಿಲಸಿದ್ಧ ಮಲ್ಲಿಕಾರ್ಜುನಾ.

-ಇದು ಲೋಕ ಅದು ಇರುವ ಹಾಗೆ ನೋಡುವ ಕಷ್ಟವನ್ನು ಕುರಿತಾದ ವಚನ. ಯಾಕೆಂದರೆ ಯಾರೂ ಲೋಕವನ್ನು ಅದು ಇರುವ ಹಾಗೆ ಓದುವುದಿಲ್ಲ; ಅದು ಇರುವ ಹಾಗೆ ಕೇಳಿಸಿಕೊಳ್ಳುವುದಿಲ್ಲ; ಬದಲಿಗೆ ತಮಗೆ ಹೊಂದುವ ಸಾಂಸ್ಕೃತಿಕ ರಾಜಕಾರಣಕ್ಕೆ ತಕ್ಕ ಹಾಗೆ ಓದುತ್ತಾರೆ, ಕೇಳಿಸಿಕೊಳ್ಳುತ್ತಾರೆ. ಇದಕ್ಕೆ ಏನು ಕಾರಣ? ಅನೇಕ ಕಾರಣಗಳಿವೆ. ಅವುಗಳಲ್ಲಿ ಒಂದೆಂದರೆ ನಮ್ಮ ಮನೋಕೋಶದಲ್ಲಿ ಸಂಗ್ರಹಗೊಂಡಿರುವ ಪರಂಪರೆಯ ಕೊಳಕು. ಇದು ಲೋಕವನ್ನು ಅದು ಇರುವಂತೆ ನೋಡಲು ಬಿಡುತ್ತಿಲ್ಲ. ಅದನ್ನೆ ಸಿದ್ಧರಾಮೇಶ್ವರ ಇನ್ನೊಂದು ಆಯಾಮದ ಮೂಲಕ ಹೇಳುತ್ತಿದ್ದಾರೆ. ಸಿದ್ಧವಾಗಿ ಈಗಾಗಲೇ ಇರುವ ಗುರುವೂ ಇಲ್ಲ, ಲಿಂಗವೂ ಇಲ್ಲ, ಜಂಗಮವೂ ಇಲ್ಲ. ಎಲ್ಲವೂ ಆಯಾ ಕ್ಷಣದ ಅನುಸಂಧಾನದಲ್ಲಿಯೇ ಸಿದ್ಧವಾಗಬೇಕು. ಲೋಕದ ಸಮಸ್ತವೂ ಹಾಗೆಯೇ. ಯಾವುದೂ ಸಿದ್ಧವಾಗಿ ಇರುವುದಿಲ್ಲ; ಬದಲಿಗೆ ಎಲ್ಲವೂ ಪ್ರತಿ ಕ್ಷಣ ಆಗುತ್ತಲೇ ಇರುತ್ತವೆ. ಆದರೆ ಲೋಕವನ್ನು ಅದು ಇರುವ ಹಾಗೆ ನೋಡಲು ಸಾಧ್ಯವಾಗುತ್ತಿಲ್ಲ. ಈ ತೊಡಕನ್ನು ಬಗೆಹರಿಸಿಕೊಳ್ಳುವುದು ಹೇಗೆ?
ಬುದ್ಧನಿಗೂ ಇದೇ ತೊಡಕು, ಅಂಬೇಡ್ಕರ್ ಅವರಿಗೂ ಅದೇ ತೊಡಕು. ಪರಂಪರೆಯ ಕೊಳಕನ್ನು ವಚನಕಾರರು ಮುತ್ತಜ್ಜನ ಬೆಣ್ಣೆ ಎನ್ನುತ್ತಾರೆ! ಈ ಬೆಣ್ಣೆಯನ್ನು ನಮ್ಮ ತಲೆ ಓಡಿನಲ್ಲಿ ತುಂಬಿಕೊಂಡಿದ್ದೇವೆ.

ಓವಿದ ಬೆಣ್ಣೆಯ ಓಡಿನಲಿಕ್ಕಿ
ಸಾವುತ ಬೇವುತಲೈದಾರಲ್ಲಾ
ಇರ್ದ ತಳವಾರ ನಿದ್ರೆಯಲೊರಗಲು
ಹೊದ್ದಿದ್ದ ನಿದಾನ ಹೋಯಿತ್ತಲ್ಲಾ
ಬದ್ಧತನದಲ್ಲಿ ಬಳಲುವರೆಲ್ಲರ
ಹೊದ್ದದೆ ಹೋದನೋ ಮಾರೇಶ್ವರಾ. (ಮಾರಯ್ಯ)

ಈ ಮುತ್ತಜ್ಜನ ಬೆಣ್ಣೆಯನ್ನು ಕರೆಗಿಸುವುದು ಸುಲಭದ ಮಾತಲ್ಲ. ಅದಕ್ಕೆ ಜಾತಿಯನ್ನು, ಅಸ್ಪೃಶ್ಯತೆಯನ್ನು, ಮಡಿಮೈಲಿಗೆಯನ್ನು, ಲಿಂಗ ತಾರತಮ್ಯವನ್ನು, ವರ್ಗತಾರತಮ್ಯವನ್ನು, ದೈವವಾದ, ಜಾತಿವಾದ, ನಾನಾ ತರದ ಮೌಢ್ಯಗಳು ಮುಂತಾದ ಪರಂಪರೆಯ ಬೆಣ್ಣೆಯನ್ನು ತಲೆ ಓಡಿಗೆ ತುಂಬುವವರು ನಾವು.

ನಮಗೆ ಮೆತ್ತಿಕೊಳ್ಳುವ ನಮ್ಮ ಪರಂಪರೆಯ ಕೊಳಕಿನ ವಿವರಣೆ ಸ್ಪಷ್ಟವಾಗಿ ನಮಗೆ ವಚನಕಾರರಿಂದ ದೊರೆತಿದೆ. ದೊರೆತಿದೆ ಅಂದಮಾತ್ರಕ್ಕೆ ಅದನ್ನು ನಾವು ಅನುಸರಿಸುತ್ತಿದ್ದೇವೆ ಎಂದೇನಲ್ಲ. ಜಾತಿ, ಅಸ್ಪೃಶ್ಯತೆ, ಲಿಂಗ ಅಸಮಾನತೆ, ಕಾಯಕ ಅಸಮಾನತೆ, ಮಡಿ-ಮೈಲಿಗೆ, ಪುರೋಹಿತಶಾಹಿ, ದೇವಾಲಯಗಳ ಯಜಮಾನಿಕೆ, ಬ್ರಾಹ್ಮಣ ಯಜಮಾನಿಕೆ, ಕೆಲವೇ ಪುಸ್ತಕಗಳ ಪ್ರಮಾಣ ಯಜಮಾನಿಕೆ– ಇತ್ಯಾದಿಗಳೆಲ್ಲ ನಮಗೆ ಪರಂಪರೆಯಿಂದ ಬಂದಿರುವ ಕೊಳಕು. ನಾವು ಈ ಕೊಳಕುಗಳಿಂದ ಮುಕ್ತರಾಗಿದ್ದೇವೆಯೆ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ವಚನಕಾರರು ಮೊದಲು ಈ ಕೊಳಕನ್ನು ತಾವು ತೊಳೆದುಕೊಂಡು ನಂತರ ಸಮಾಜಕ್ಕೆ ಹೇಳಿದರು. ಆದರೆ ಅದು ಪಾಲನೆಯಾಯಿತೆ? ಬೇರೆಯವರಿರಲಿ ಶರಣರ ವಾರಸುದಾರರೆಂದು ಕರೆದುಕೊಂಡವರು ಈ ಕೊಳಕಿನಿಂದ ಮುಕ್ತರಾದರೆ? ಅಥವಾ ಇನ್ನೊಂದಷ್ಟು ಹೊಸ ಕೊಳಕಿನಲ್ಲಿ ಮಿಂದೇಳುತ್ತಿರುವರೆ? ಇವುಗಳಿಂದ ಮುಕ್ತವಾಗುವ ವಚನಕಾರರು ತೋರಿಸಿದ ಮಾರ್ಗಗಳು ಯಾವುವು?

ನಮಗೆ ವಚನಗಳು ಬೇರೆಯವರು ಓದಿಕೊಟ್ಟ ಹಾಗೆ ನಮಗೆ ದೊರಕಬೇಕಿಲ್ಲ; ಅವು ಇರುವ ಹಾಗೆ ಬೇಕು ಎನ್ನುವುದಾದರೆ ಈವರೆಗಿನ ಓದನ್ನು ಪಲ್ಲಟಿಸಬೇಕು. ಹಾಗೆ ಓದನ್ನು ಪಲ್ಲಟಿಸದೆ ಹೋದರೆ ನಮಗೆ ವಚನಗಳು ನಮ್ಮ ಓದಿನ ವಚನಗಳಾಗಿ ದೊರಕುವುದಿಲ್ಲ. ಅದಕ್ಕಾಗಿ “ವಚನಗಳನ್ನು ನಾನು ಹೀಗೆ ಕೇಳಿಸಿಕೊಂಡೆ” ಎಂಬ ಸ್ವತಂತ್ರ ಓದಿನ ಅಗತ್ಯ ಇದೆ. ಈ ಸ್ವತಂತ್ರ ಓದನ್ನು ನಿರ್ಣಯಿಸುವ ಏಕೈಕ ಮಾರ್ಗದರ್ಶಿ ಸೂತ್ರವೆಂದರೆ ಪ್ರಜಾಸತ್ತೆ. ವಚನವೂ ಸೇರಿದಂತೆ ಎಲ್ಲ ಶ್ರಮಣಧಾರೆಗಳೂ ಪ್ರಜಾಸತ್ತಾವಾದಿಗಳು. ವಚನಕಾರರನ್ನು ಹಾಗೆ ನೋಡಿದಾಗ ಎಷ್ಟರ ಮಟ್ಟಿಗೆ ಅವರು ಪ್ರಜಾಸತ್ತಾವಾದಿಗಳೋ ಅಷ್ಟರ ಮಟ್ಟಿಗೆ ಮಾತ್ರ ಇವತ್ತಿಗೆ ಅವರು ಪ್ರಸ್ತುತರಾಗುತ್ತಾರೆ.

ಅದಕ್ಕೂ ಮುನ್ನ ನಮ್ಮ ಓದನ್ನು ನಿರ್ದೇಶಿಸುತ್ತಿರುವ ಧಾರ್ಮಿಕ ಆವರಣದ ಒಂದು ಸ್ಥೂಲ ಪರಿಚಯ ನಮಗೆ ಅಗತ್ಯ ಇದೆ. ನಾವು ಬದುಕುತ್ತಿರುವ ಈ ನೆಲದ ಧಾರ್ಮಿಕ ಆವರಣವನ್ನು ನಾಲ್ಕು ತಾತ್ವಿಕ ಆಕರಗಳು ಹಂಚಿಕೊಂಡಿವೆ.
೧. ಅಬ್ರಹಾಮಿಕ್‌ ಧರ್ಮಗಳು ಅಥವಾ ಸೆಮೆಟಿಕ್‌ ಧರ್ಮಗಳು ಅಂತಾ ಕರೆದುಕೊಳ್ಳುವ ಕ್ರಿಶ್ಚಿಯಾನಿಟಿ, ಇಸ್ಲಾಂ, ಯಹೂದಿ ಧರ್ಮಗಳು.
೨. ವೈದಿಕ ಧರ್ಮ
೩. ಶ್ರಮಣ ಧಾರೆಗಳು
೪. ಶೂದ್ರ ಧರ್ಮ

ಸೆಮೆಟಿಕ್ ಅಥವಾ ಅಬ್ರಹಾಮಿಕ್ ಧರ್ಮಗಳು: ಇಸ್ಲಾಂ, ಕ್ರೈಸ್ತ ಮತ್ತು ಯಹೂದಿ ಧರ್ಮಗಳನ್ನು ‘ಸೆಮೆಟಿಕ್ ಅಥವಾ ಅಬ್ರಹಾಮಿಕ್’ ಧರ್ಮಗಳು ಎನ್ನುತ್ತಾರೆ. ಇವೆಲ್ಲ ಒಂದೇ ಮೂಲದಿಂದ ಕವಲೊಡೆದ ಧರ್ಮಗಳು. ಇವುಗಳ ಕೆಲವು ಸಮಾನ ಸಂಗತಿಗಳೆಂದರೆ:
೧. ಹೊರಗಿನ ಒಂದು ದೈವವನ್ನು ನಂಬುತ್ತವೆ. ಅದನ್ನು ಸರ್ವಶಕ್ತ ಮತ್ತು ಪ್ರಶ್ನಾತೀತ ಎಂದು ಒಪ್ಪುತ್ತವೆ.
೨. ಪ್ರವಾದಿ ಅಥವಾ ದೇವದೂತನನ್ನು ಗುರುತಿಸಿಕೊಂಡಿವೆ.
೩. ಪ್ರಶ್ನಾತೀತ ಪುಸ್ತಕ ಪ್ರಮಾಣವನ್ನು ನಂಬುತ್ತವೆ.
೪. ಅನ್ಯಮತ ಅಥವಾ ಧರ್ಮವನ್ನು ಸಮವೆಂದು ಮಾನ್ಯ ಮಾಡುವುದಿಲ್ಲ.
೫. ಜೀವ ಮತ್ತು ದೈವಗಳ ನಡುವಿನ ಸಂಬಂಧವನ್ನು ದ್ವೈತನೆಲೆಯಲ್ಲಿ ನೋಡುತ್ತವೆ.

ಈ ಸೆಮೆಟಿಕ್ ಧರ್ಮಗಳನ್ನು ಹೊರತುಪಡಿಸಿದರೆ ಭಾರತದಲ್ಲಿ ಇರುವ ಇತರ ಧಾರ್ಮಿಕ ಆವರಣಗಳೆಂದರೆ:
೧. ಶೂದ್ರ ಧರ್ಮ ೨. ವೈದಿಕ ಧರ್ಮ ಅಥವಾ ಬ್ರಾಹ್ಮಣ ಧರ್ಮ ಮತ್ತು ೩. ಶ್ರಮಣ ಧಾರೆಗಳು.

ಶೂದ್ರ ಧರ್ಮವು ಈ ನೆಲದ ಆದಿವಾಸಿಗಳು, ಬುಡಕಟ್ಟುಗಳು, ಕಾಡಿನ ವಾಸಿಗಳು, ದ್ರಾವಿಡ ಪರಂಪರೆಯವರು, ಸ್ಥಳೀಯ ಪಣಕಟ್ಟಿನ ಸಮಾಜಗಳು, ಕುಶಲ ಕೆಲಸಗಾರರು ಮತ್ತು ಇತರ ಶ್ರಮಿಕರ ಧರ್ಮ. ಇದರಲ್ಲಿ ಅನೇಕ ಸಮೂಹಗಳಿವೆ. ಪ್ರತಿ ಸಮೂಹಕ್ಕೂ ಅದರದ್ದೇ ಆದ ದೈವಗಳು, ಸಾಂಸ್ಕೃತಿಕ/ಧಾರ್ಮಿಕ ಆಚರಣೆಗಳು, ಆಹಾರ ಕ್ರಮಗಳು, ಕೊಳು-ಪಡೆಗಳು, ನಡೆ-ನುಡಿಗಳು ಇವೆ. ಒಂದೆರಡು ಸ್ಥಳೀಯ ಉದಾಹರಣೆಗಳನ್ನು ಕೊಡುವುದಾದರೆ ಪಶುಗಾಹಿ ಗೊಲ್ಲರು ತಮ್ಮದೇ ಆದ ದೈವಗಳನ್ನು (ಕಾಟುಮದೇವರು, ಚಿತ್ರ ದೇವರು, ಎತ್ತಪ್ಪದೇವರು ಇತ್ಯಾದಿ) ಮತ್ತು ಆರಾಧನಾ ವಿಧಾನಗಳನ್ನು ಹೊಂದಿದ್ದಾರೆ. ತಮ್ಮ ದೇವರುಗಳನ್ನು ಪೆಟ್ಟಿಗೆಯಲ್ಲಿಟ್ಟು ತಾವು ಹೋದ ಕಡೆಯೆಲ್ಲ ಹೊತ್ತು ಸಾಗಿಸಿಕೊಂಡು ಹೋಗುತ್ತಾರೆ. ದೈವಸ್ಥಾನಗಳ ಕಲ್ಪನೆ ಅವರಲ್ಲಿ ಇಲ್ಲ. ತಮ್ಮ ಕುರಿಗುಬ್ಬಳಲ್ಲಿ ಒಂದನ್ನು ಗುಡಿ ಎಂದುಕೊಳ್ಳುವ ಇವರು, ತಾವು ಅಲ್ಲಿಂದ ಮುಂದೆ ಹೋಗುವಾಗ ಆ ಗುಡಿಯನ್ನೂ ಹೊತ್ತು ಸಾಗಿಸುತ್ತಾರೆ. ಅವರ ಧಾರ್ಮಿಕ ಜೀವನ ಸಂವಿಧಾನವೇ ಬೇರೆ. ಇನ್ನು ಬಿಳಿಗಿರಿ ರಂಗನ ಬೆಟ್ಟದ ಸೋಲಿಗರ ದೈವಗಳೆಂದರೆ ಪಾತೇದೇವರು, ದೊಡ್ಡ ಸಂಪಿಗೆ ಮರ ಇತ್ಯಾದಿಗಳು. ಉಳಿದ ದೈವಗಳಿಗೂ ಅವರಿಗೂ ಅವರ ದೈವಗಳಿಗೂ ಯಾವ ಸಂಬಂಧವೂ ಇಲ್ಲ. ಇತರ ಧಾರೆಗಳ ದೈವಗಳನ್ನೂ ಅವರ ದೈವಗಳು ಎಂದು ಒತ್ತಾಯಿಸಿ ಅವರ ಮೇಲೆ ಹೇರುತ್ತಾರೆಯೇ ಹೊರತು ಅವರ ದೈವಗಳನ್ನು ಉಳಿದವರ ದೈವಗಳು ಎಂದು ಒಳಗೊಳ್ಳುವುದಿಲ್ಲ. ಕೇವಲ ಹೇರುವಿಕೆ ಮಾತ್ರ ನಡೆಯುತ್ತದೆ. ಜೊತೆಗೆ ಒಂದೇ ದೈವದ ಕಲ್ಪನೆ ಅವರಲ್ಲಿ ಇಲ್ಲ. ಒಂದೇ ದೈವ ಎನ್ನುವ ನೆಪದಲ್ಲಿ ತಮ್ಮ ದೈವವನ್ನು ಅವರ ದೈವವನ್ನಾಗಿಸುವ ಹುನ್ನಾರು ಇದೆ. ಇಲ್ಲೆಲ್ಲ ಅವರ ಸಾಂಸ್ಕೃತಿಕ ಸ್ವಾಯತ್ತತೆ ನಿರಾಕರಿಸಲ್ಪಡುತ್ತದೆ. ಎಲ್ಲರಿಗೂ ನಿಸರ್ಗಸಹಜವಾಗಿ ಇರುವ ಧಾರ್ಮಿಕ/ಸಾಂಸ್ಕೃತಿಕ ಸ್ವಾತಂತ್ರ್ಯವೇ ಅಪಹರಣಕ್ಕೆ ಈಡಾಗುತ್ತದೆ. ಇಂತಹ ಅನೇಕ ಜೀವನಧಾರೆಗಳಿಂದ ಆಗಿರುವ ಶೂದ್ರ ಧರ್ಮದ ಕೆಲವು ಸಾಮಾನ್ಯ ಸಂಗತಿಗಳನ್ನು ಹೀಗೆ ಪಟ್ಟಿ ಮಾಡಬಹುದು.

ಶೂದ್ರಧರ್ಮದ ಲಕ್ಷಣಗಳು ಇವು:

1. ಶೂದ್ರ ಜಾತಿಗಳವರೆಲ್ಲ ನೀರಿನ ಸಂಸ್ಕೃತಿಯವರು. ಗಂಗೆಯ ಆರಾಧಕರು. ನಮಗೆ ನೀರು ಆರಾಧ್ಯ ದೈವ. ನಾವು ಎಲ್ಲ ಆಚರಣೆಗಳನ್ನೂ ಗಂಗೆಯ ಸಾಕ್ಷಿಯಲ್ಲಿ ಮಾಡುತ್ತೇವೆ. ವೈದಿಕರು ಅಗ್ನಿಯ ಆರಾಧಕರು. ಅವರು ಎಲ್ಲದಕ್ಕೂ ಮೊದಲು ಅಗ್ನಿಯನ್ನು ಪ್ರತಿಷ್ಠಾಪಿಸಿಕೊಳ್ಳುತ್ತಾರೆ. ಮದುವೆ ಮುಂತಾದ ಎಲ್ಲ ಆಚರಣೆಗಳನ್ನು ಅವರು ಅಗ್ನಿಸಾಕ್ಷಿಯಾಗಿ ಮಾಡುತ್ತಾರೆ. ನಾವು ಹಾಲುನೀರಿನ ಧಾರೆ ಹರಿಸಿ ಮಾಡುತ್ತೇವೆ. ಯಜ್ಞ ಯಾಗಗಳು ಅವರ ಆಚರಣೆಗಳು. ಅದನ್ನು ಒಪ್ಪದ ಶೂದ್ರ ಸಮೂಹಗಳು ಹಳ್ಳಿಹಳ್ಳಿಗಳಲ್ಲಿ ಪ್ರತಿವರ್ಷವೂ ಶೂದ್ರ ಹೆಣ್ಣುಮಕ್ಕಳ ತಲೆಯ ಮೇಲೆ ನೀರನ್ನು ಹೊರಿಸಿ ಕೊಂಡಹಾಯ್ದು ಪ್ರತಿರೋಧವನ್ನು ವ್ಯಕ್ತಪಡಿಸುತ್ತವೆ. ವೈದಿಕರಿಗೆ ತಾವು ನೀರಿನ ಸಂಸ್ಕೃತಿಯವರಲ್ಲ; ಅಗ್ನಿಸಂಸ್ಕೃತಿಯವರು ಎಂಬುದು ಗೊತ್ತಿದೆ. ಶೂದ್ರರಾದ ನಮಗೆ ನಾವು ಅಗ್ನಿಸಂಸ್ಕೃತಿಯವರಲ್ಲ ನೀರಿನ ಸಂಸ್ಕೃತಿಯವರು ಎಂಬುದರ ಅರಿವಿಲ್ಲ.

2. ಶೂದ್ರರದ್ದು ಮಾತೃಸಂಸ್ಕೃತಿಯಾದರೆ ವೈದಿಕರದ್ದು ಪಿತೃಸಂಸ್ಕೃತಿ. ನಾವು ಅಮ್ಮನನ್ನು ಆರಾಧಿಸುವವರು. ತಾಯಿ ನಮ್ಮ ಆರಾಧ್ಯದೈವ. ಊರೂರಿಗೆ ಒಂದೊಂದು ಅಮ್ಮನ ಗುಡಿಗಳಿವೆ. ಆಯಾ ಊರಿನ ಹೆಸರಿಗೆ ಅಮ್ಮನನ್ನು ಸೇರಿಸಿದರೆ ಆಯಿತು. ಅದು ನಮ್ಮ ದೈವ. ಊರಿಗೊಂದೊಂದು ದೇವರುಗಳಿವೆ. ಅವು ನಮ್ಮ ಬದುಕಿಗೆ ಹತ್ತಿರವಾಗಿವೆ. ನಾವು ತಿನ್ನುವುದನ್ನು ಅವೂ ಸ್ವೀಕರಿಸುತ್ತವೆ. ನಮ್ಮ ಜೊತೆಗೆ ಕುಣಿದು ಕುಪ್ಪಳಿಸುತ್ತವೆ. ನಮ್ಮ ಕಷ್ಟ ಸುಖ ಕೇಳಿಸಿಕೊಳ್ಳುತ್ತವೆ. ಕೆಲವು ಬುಡಕಟ್ಟುಗಳಿಗೆ ಬೇರೆ ದೇವರುಗಳು ಇವೆ. ಹಾಗಾಗಿ ಒಂದೇ ದೇವರು ಎಂಬ ಕಲ್ಪನೆ ನಮ್ಮದಲ್ಲ. ನಮ್ಮನ್ನು ಕಾಪಾಡುವ ದೈವಗಳು ಎಷ್ಟಿದ್ದರೇನು? ಅದರಿಂದ ಯಾರಿಗೇನು ತೊಂದರೆ? ನಮ್ಮ ದೈವಗಳನ್ನು ನಮ್ಮ ನಮ್ಮ ಕುಲಾಚಾರಗಳ ಪ್ರಕಾರ ಪೂಜಿಸಬೇಕಲ್ಲವೆ? ಅದನ್ನು ಒಂದೇ ದೈವದ ಕಲ್ಪನೆಗೆ ತಂದಾಕ್ಷಣ, ಆ ಒಂದು ದೈವ ನಮ್ಮ ದೈವವಾಗದೆ ಮತ್ತೊಬ್ಬರು ಹೇರಿದ್ದಾಗುತ್ತದೆ. ನಮ್ಮ ದೇವರುಗಳನ್ನು ಅವರ ದೇವರ ಅಡಿಯಾಳಾಗಿಸಿಕೊಳ್ಳುತ್ತಾರೆ. ಶೂದ್ರರಿಗೆ ತಾಯಿ ಮುಖ್ಯ. ಎಲ್ಲಮ್ಮನನ್ನು ಎಲ್ಲರ ತಾಯಿಯೆಂದೇ ಆರಾಧಿಸುವವರು. ತಾಯಿಯನ್ನು ಸಂಕೇತಿಸುವ ಹುತ್ತ, ಕೆರೆಕೋಡಿ, ಜಲ ಒಸರುವ ಜಾಗಗಳು ಇವೆಲ್ಲ ನಮ್ಮ ಆರಾಧನಾ ಸ್ಥಳಗಳು. ಶೂದ್ರ ದೈವಗಳಿಗೆ ವೈದಿಕರು ನಡೆದುಕೊಳ್ಳುವುದಿಲ್ಲ. ಅವರ ದೈವಗಳಿಗೆ ಮಾತ್ರ ಶೂದ್ರರು ನಡೆದುಕೊಳ್ಳುವಂತೆ ನೋಡಿಕೊಳ್ಳುತ್ತಾರೆ.

3. ಶೂದ್ರರು ಶೈವ ಸಂಸ್ಕೃತಿಯವರು. ಶಿವ ನಮ್ಮ ದೈವ. ಅಲ್ಲದೆ ನಮ್ಮ ನಮ್ಮ ಬುಡಕಟ್ಟಿನ ದೈವಗಳೂ ನೂರಾರು ಇವೆ. ಶಿವ ಸ್ಮಶಾನವಾಸಿ. ಸ್ಮಶಾನ ಇರುವುದು ಊರಿನ ದಕ್ಷಿಣ ದಿಕ್ಕಿಗೆ. ನಮ್ಮ ದೈವದ ದಿಕ್ಕಾದ ದಕ್ಷಿಣವು ನಮಗೆ ಸ್ಮಶಾನ ಅಪವಿತ್ರವಲ್ಲ. ಅದು ನಮ್ಮ ಹಿರೀಕರನ್ನು ಹೂಳಿರುವ ಜಾಗ. ನಾವು ಮಣ್ಣುಮಾಡಿ ಸಂಸ್ಕಾರ ಮಾಡುತ್ತೇವೆ. ಮಣ್ಣುಮಾಡುವುದು ಎಂದರೆ ಬಿತ್ತುವುದು ಎಂದೇ ಅರ್ಥ. ಮಣ್ಣುಮಾಡಿ ಮೇಲೊಂದು ಗಿಡ ನೆಡುತ್ತೇವೆ. ಅವರು ಮತ್ತೆ ನಿಸರ್ಗದಲ್ಲಿ ಬೇರೊಂದು ರೂಪದಲ್ಲಿ ಹುಟ್ಟಿಬೆಳೆಯುತ್ತಾರೆ ಎಂದು ನಂಬುತ್ತೇವೆ. ನಮ್ಮ ಶಿವ ದಕ್ಷಿಣಾಮೂರ್ತಿ.

4. ನಾವು ನಾಗ ಸಂಸ್ಕೃತಿಯವರು. ನಾಗರನ್ನು ಪೂಜಿಸುತ್ತೇವೆ. ಎಲ್ಲ ಶೂದ್ರರೂ ನಾಗಾರಾಧನೆ ಮಾಡುತ್ತಾರೆ.

5. ನಾವು ಚಾಂದ್ರ ಸಂಸ್ಕೃತಿಯವರು. ಚಂದ್ರನ ಚಲನೆಯಂತೆ ನಮ್ಮ ಬದುಕಿನ ನಡೆಗಳನ್ನು ರೂಪಿಸಿಕೊಳ್ಳುತ್ತೇವೆ.

ಇನ್ನು ಅನೇಕ ಬುಡಕಟ್ಟುಗಳಿಗೆ, ದಲಿತಸಮೂಹಗಳಿಗೆ ಅವುಗಳದ್ದೇ ಆದ ವಿಶಿಷ್ಟ ಲಕ್ಷಣಗಳೂ ಇವೆ. ಅವೆಲ್ಲ ಅಣ್ಣತಮ್ಮಂದಿರ ನಡುವಿನ ಸಂಗತಿಗಳು. ಇವಿಷ್ಟು ಸ್ಥೂಲವಾಗಿ ಶೂದ್ರರ ಸಾಂಸ್ಕೃತಿಕ ಲಕ್ಷಣಗಳನ್ನು ಕುರಿತ ಸಂಗತಿಗಳು.

ಇವೆಲ್ಲ ಲಿಂಗಾಯತ ಸಮೂಹದ ಆಚರಣಾ ಲಕ್ಷಣಗಳೂ ಹೌದು. ಶಿವ ಮಾತ್ರ ದೈವ ಎಂದು ವಚನಕಾರರು ವಚನ ಕಟ್ಟಿದ ಮಾತ್ರಕ್ಕೆ ಲಿಂಗಾಯತ ಸಮೂಹ ತನ್ನ ಮೂಲದೈವಗಳನ್ನು ಬಿಟ್ಟಿಲ್ಲ. ಶೂದ್ರರ ಎಲ್ಲ ದೈವಗಳಿಗೆ ಅವರೂ ನಡೆದುಕೊಳ್ಳುತ್ತಾರೆ. ಆಹಾರದ ಕ್ರಮದ ಹೊರತಾಗಿ, ಲಿಂಗಧಾರಣೆಯ ಹೊರತಾಗಿ ಉಳಿದೆಲ್ಲ ಆಚರಣೆಗಳೂ ಹಾಗೆಯೇ ಉಳಿದುಕೊಂಡೇ ಇವೆ. ಆದರೆ ಬೌದ್ಧ ದರ್ಶನವೂ ಸ್ಥಳೀಯವಾಗಿ ಶೈವ ಸಂಸ್ಕೃತಿಯ ಜೊತೆಗೆ ಬೆರೆತು ನಾಥ, ಶಾಕ್ತ ಪಂಥಗಳಾಗಿ ಕವಲೊಡೆದಿದೆ. ದರ್ಶನಕ್ಕಿಂತ ಆಚರಣಾರೂಪ ಮುಖ್ಯ. ಹಾಗಾಗಿ ಬೌದ್ಧವಾಗಲೀ, ನಾಥಪಂಥವಾಗಲೀ ಲಿಂಗಾಯತವಾಗಲೀ ಸಹಜೀವಿಗಳೊಡನೆ ಸಾಮರಸ್ಯದಿಂದ ಬಾಳುವುದನ್ನು ಹೇಳಿಕೊಟ್ಟವೇ ಹೊರತು ದ್ವೇಷಿಸುವುದನ್ನು ಹೇಳಿಕೊಡಲಿಲ್ಲ. ದ್ವೇಷ ಶ್ರಮಣಧಾರೆಗಳ ನಡೆಯಲ್ಲ. ಹಾಗಾದರೆ ಇದು ಎಲ್ಲಿಂದ ಬರುತ್ತಿದೆ? ಅದು ಎಲ್ಲಿಂದ ಬರುತ್ತಿದೆ ಎನ್ನುವುದು ರಹಸ್ಯವೇನೂ ಅಲ್ಲ; ಕಣ್ಣು ಕಿವಿ ತೆರೆದು ನೋಡಿದರೆ ಢಾಳಾಗಿ ಕಾಣುತ್ತದೆ. ಕಣ್ಣು ಕಿವಿಗಳನ್ನು ಮೆತ್ತಿಹಾಕಿಕೊಂಡರೆ ಯಾವುದೂ ಕಾಣುವುದೂ ಇಲ್ಲ ಯಾವುದೂ ಕೇಳುವುದೂ ಇಲ್ಲ.

ವಚನ ಶ್ರಮಣಧಾರೆಗಳಲ್ಲಿ ಒಂದು. ಯಾಕೆಂದರೆ ಶ್ರಮಣ ಧಾರೆಗಳ ಪ್ರಧಾನ ತಾತ್ವಿಕ ನಿಲುವುಗಳನ್ನು ವಚನಧಾರೆಯೂ ಮುಂದಿಡುವುದರ ಜೊತೆಗೆ ಅವುಗಳ ಜೊತೆಗೆ ನಡೆಸಿದ ಕೊಳು ಪಡೆಗಳ ಮೂಲಕವೇ ತನ್ನ ತಾತ್ವಿಕತೆಯನ್ನು ರೂಪಿಸಿಕೊಂಡಿದೆ.

ಬಸವಾದಿ ಶರಣರನ್ನು ಕೇವಲ ಶರಣರೆಂದು, ವಚನಕಾರರೆಂದು, ಅನುಭಾವಿಗಳೆಂದು ಕರೆದರೆ ಸಾಲದು. ಅವರನ್ನು ಪ್ರಜಾಪ್ರಭುತ್ವವಾದಿಗಳೆಂದು ಓದಿ ಗುರುತಿಸಿ ಕರೆಯುವ ಅಗತ್ಯವಿದೆ. ಅದು ಈ ಹೊತ್ತಿನ ಅಗತ್ಯ. ಸಮಾಜಕ್ಕೆ ಅಗತ್ಯವಾದ ಸಮೂಹ ಹಿತಕ್ಕೆ ಬೇಕಾದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹೆಕ್ಕಿ ಹೆಕ್ಕಿ ನೀಡಿದ ರಾಜಕೀಯ ಸಾಮಾಜಿಕ ಚಿಂತಕರು. ಹಾಗೆಂದು ನಾವು ಅವರನ್ನು ಓದುವ ಪ್ರಯತ್ನಗಳನ್ನು ಮಾಡಲಿಲ್ಲ. ಇನ್ನು ಮೇಲಾದರೂ ಬಸವಾದಿ ಶರಣರನ್ನು ಪ್ರಜಾಸತ್ತೆಯ ಪ್ರತಿಪಾದಕರೆಂದು ಪ್ರಧಾನವಾಗಿ ಗುರುತಿಸಿ ನಡೆಸುವ ಓದಿನ ಅಗತ್ಯವಿದೆ. ಮೊದಲು ಅವರು ಪ್ರಜಾಪ್ರಭುತ್ವವಾದಿಗಳು; ಎಲ್ಲರನ್ನೂ ಬಾಳಿಸಿಕೊಂಡು ಬದುಕಿದ ಸಾಮಾಜಿಕರು. ನಮಗೆ ಈಗ ಬೇಕಿರುವುದು ಅವರು ಬದುಕಿ ತೋರಿಸಿದ ಸಂಬಂಧದ ಜಗತ್ತು, ಎಲ್ಲರನ್ನೂ ಬಾಳಿಸಿಕೊಂಡು ಬಾಳಿದ ಆದರ್ಶ. ಅದು ತಾನಾಗಿ ಬರುವುದಿಲ್ಲ; ನಾವಾಗಿ ವಿವೇಕದಿಂದ ಅನ್ವಯಿಸಿಕೊಳ್ಳಬೇಕು. ಆ ವಿವೇಕ ಎಂಥದ್ದು ಎಂಬುದೇ ಈ ಹೊತ್ತಿನ ಮಾತುಕತೆಯ ವಸ್ತು.

ಬೌದ್ಧ, ಜೈನ, ಆಜೀವಿಕ, ನಾಥ, ಸಿದ್ಧ, ವಿವಿಧ ಶೈವ ಪಂಥಗಳು, ವಚನ, ತತ್ವಪದಕಾರರ ವಿವಿಧ ಧಾರೆಗಳು, ಅಚಲ, ಆರೂಢ, ಅವಧೂತ, ಸೂಫಿ ಮುಂತಾದುವುಗಳನ್ನು ಶ್ರಮಣಧಾರೆಗಳೆನ್ನುತ್ತಾರೆ. ಈ ಪಟ್ಟಿ ಅಂತಿಮವೇನಲ್ಲ. ಇಲ್ಲಿಯ ಶ್ರಮಣ ಪದಕ್ಕೆ ಅನೇಕ ವ್ಯುತ್ಪತ್ತಿಗಳಿವೆ. ಸಮಣ, ಸವಣ, ಶ್ರಮಣ ಪದಗಳ ಜೊತೆಗೆ ಶ್ರಮವನ್ನು ಅಂತರ್ಗತವಾಗಿ ಉಳ್ಳ ಪದವನ್ನಾಗಿಯೂ ಶ್ರಮಣವನ್ನು ವ್ಯಾಖ್ಯಾನಿಸಲಾಗುತ್ತದೆ. ಇವುಗಳಲ್ಲಿ ಬೌದ್ಧ, ಜೈನ ಮುಂತಾದ ಪೂರ್ಣ ಪ್ರಮಾಣದ ಧರ್ಮಗಳೂ ಇವೆ, ವಚನದಂತಹ ಚಳವಳಿ ರೂಪದ ಸ್ವಾಯತ್ತ ಸಾಧನಾ ಪರಂಪರೆಗಳೂ ಇವೆ. ಗುಪ್ತ ಸಮಾಜಗಳಲ್ಲಿ ಚಾಲ್ತಿಯಲ್ಲಿರುವ ಅನೇಕ ತಂತ್ರಪರಂಪರೆಗಳೂ ಇವೆ. ಕೆಲವು ಪರಂಪರೆಗಳು ಸಮೂಹದಿಂದ ಕಣ್ಮರೆಯಾಗಿವೆ. ಉದಾಹರಣೆಗೆ: ಆಜೀವಿಕ. ಈ ಧಾರೆಗಳಿಗೆ ಅವುಗಳದ್ದೇ ಆದ ತತ್ವ ಸಂಹಿತೆ ಮತ್ತು ಆಚರಣಾ ಸಂಹಿತೆಗಳಿವೆ. ಆದರೂ ಇವುಗಳನ್ನು ಹೀಗೆ ಒಂದು ಧಾರೆಯಾಗಿ ನೋಡಲು ಸಾಧ್ಯವಾಗುವ ಸಮಾನ ನಿಲುವುಗಳಿವೆ. ಶ್ರಮಣ ಧಾರೆಗಳ ಸಾಮಾನ್ಯ ನಿಲುವುಗಳೆಂದರೆ: ಶ್ರಮಣ ಧಾರೆಗಳು ಗುರುಮಾರ್ಗಗಳು. ಇಲ್ಲಿ ಗುರುವೇ ಸರ್ವಸ್ವ. ಗುರು ಶಿವ (ಮಂಗಲ) ಸ್ವರೂಪಿಯಾದವನು. ಶ್ರಮಣಧಾರೆಗಳಿಗೆ ಧರ್ಮದ, ಜಾತಿಯ, ಲಿಂಗದ, ಮತ್ಯಾವುದೇ ರೀತಿಯ ತಾರತಮ್ಯವಿಲ್ಲ. ಎಲ್ಲ ರೀತಿಯ ತಾರತಮ್ಯದ ಎಲ್ಲೆಗಳನ್ನು ದಾಟಿದ ವಿಶ್ವಮಾನವ ಪ್ರಜ್ಞೆ ಅವರದ್ದು. ಇವೆಲ್ಲ ನಡೆ-ನುಡಿ ಸಿದ್ಧಾಂತದ ಪರಂಪರೆಗಳು. ಮೊದಲು ನಡೆ ನಂತರ ನುಡಿ. ನಡೆಯಿಲ್ಲದ ನುಡಿಗೆ ತಾವಿಲ್ಲ. ನುಡಿಯು ನಡೆಯ ಹಾದಿಯ ಉಪ-ಉತ್ಪನ್ನ ಮಾತ್ರ. ಶ್ರಮ, ಕೌಶಲ, ಕಸುಬನ್ನು ಎಲ್ಲ ಶ್ರಮಣ ಧಾರೆಗಳೂ ಗೌರವದಿಂದ ಕಾಣುತ್ತವೆ. ಕಸುಬಿನ ತಾರತಮ್ಯವನ್ನು ಮಾನ್ಯ ಮಾಡುವುದಿಲ್ಲ. ದೇಹದ ಮತ್ತು ಸಮಾಜದ ಸ್ವಾಸ್ಥ್ಯವನ್ನು ಶ್ರಮ ಮತ್ತು ಕಸುಬು ಕೌಶಲಗಳು ಕಾಪಾಡುತ್ತವೆ ಎಂಬ ನಿಲುವನ್ನು ಪಾಲಿಸುತ್ತವೆ. ಬಹುಪಾಲು ಶ್ರಮಣಧಾರೆಗಳು ಚಿತ್ತವನ್ನು ಆವರಿಸಿಕೊಳ್ಳುವ ಮರೆವಿನಿಂದ ಮುಕ್ತವಾಗುವ ಮನೋಲಯ, ಅಮನಸ್ಕ, ಮನೋನಿರಸನದ ಸಾಧನೆಗಳನ್ನು ಮುಖ್ಯವೆಂದು ಭಾವಿಸುತ್ತವೆ. ಎಲ್ಲ ಶ್ರಮಣ ಧಾರೆಗಳೂ ಶಬ್ದ ಪ್ರಮಾಣವನ್ನು (ಪ್ರಶ್ನಾತೀತ ಅಧಿಕಾರ ಬಯಸುವ ಪುಸ್ತಕಗಳು, ದಾಖಲೆಗಳು ಇತ್ಯಾದಿ) ತಿರಸ್ಕರಿಸುತ್ತವೆ, ಇತ್ಯಾದಿ.

ಹಾಗಾದರೆ ವಚನಗಳನ್ನು ಓದುವ ಕ್ರಮ ಯಾವುದು? ವಚನ ಚಳವಳಿಯನ್ನು ಗ್ರಹಿಸುವ ಮಾದರಿ ಯಾವುದು? ಈ ದೃಷ್ಟಿಯಿಂದ ವಚನಗಳ ಓದಿಗೆ ಒದಗಿಸಿಕೊಳ್ಳಬಹುದಾದ ಪರಿಕಲ್ಪನೆಗಳೆಂದು ಕೆಲವನ್ನು ಗುರುತಿಸಿಕೊಳ್ಳಬಹುದು.

• ದೈವಮಾರ್ಗವನ್ನು ನಿರಾಕರಿಸಿದ ಗುರುಮಾರ್ಗ,
• ದ್ವೈತಾದ್ವೈತಗಳನ್ನು ನಿರಾಕರಿಸಿದ ಬಯಲು ಅಥವಾ ಶೂನ್ಯತೆ,
• ವೇದ ಶಾಸ್ತ್ರ ಪುರಾಣಗಳನ್ನು ನಿರಾಕರಿಸಿದ ಪ್ರಮಾಣ ನಿರಾಕರಣೆ,
• ವರ್ಣಾಶ್ರಮ, ಜಾತಿ ವ್ಯವಸ್ಥೆಗಳನ್ನು ವಿಧಿಸುವ ಮನುಸ್ಮೃತಿ ಮುಂತಾದ ವೈದಿಕ ಹಿಂದೂ ಧರ್ಮವನ್ನು ನಿರಾಕರಿಸಿದ ಶರಣ ಧರ್ಮ,
• ಮುಟ್ಟು ಮೈಲಿಗೆ ಶುದ್ಧಾಶುದ್ಧಗಳನ್ನು ನಿರಾಕರಿಸಿದ ನಿಸರ್ಗ ಸಾಮರಸ್ಯ,
• ದೈವ-ಭಕ್ತನೆಂಬ ತರತಮವನ್ನು ನಿರಾಕರಿಸಿದ ಲಿಂಗಾಂಗ ಸಾಮರಸ್ಯ,
• ನಿತ್ಯನಾರಕೀ ತತ್ವವನ್ನು ನಿರಾಕರಿಸಿದ ಸರ್ವಮುಕ್ತಿ ಸಾಧ್ಯತೆ,
• ಹರಿಸರ್ವೋತ್ತಮ ತತ್ವವನ್ನು ನಿರಾಕರಿಸಿದ ಸರ್ವ ಮಂಗಲ (ಶಿವ) ತತ್ವ,
• ಪಂಚಾಂಗವನ್ನು ನಿರಾಕರಿಸಿದ ಕಾಲದೇಶ ನಿರಾಕರಣೆ,
• ವ್ಯಕ್ತಿರೂಪದ ಗುರುವನ್ನು ನಿರಾಕರಿಸಿದ ಅರಿವೇ ಗುರು,
• ಅಕ್ಷರ ಮಾತ್ರ ಜ್ಞಾನವೆಂಬುದನ್ನು ನಿರಾಕರಿಸಿದ ಶ್ರಮ ಕಸುಬು ಕೌಶಲಗಳು ಜ್ಞಾನದ ಮಾಧ್ಯಮಗಳೆಂಬ ನಿಲುವು,
• ತಾನು-ಇದಿರು ಎರಡನ್ನೂ ಇಲ್ಲವಾಗಿಸಿಕೊಂಡ ಭಾವದಗ್ಧ ಸ್ಥಿತಿ,
• ಕುರುಹನ್ನು ಹಿಡಿದು ಕುರುಹ ದಾಟುವ ಸಂಕೇತ ನಿರಾಕರಣೆ,
• ಸಮಸ್ತ ವ್ಯಕ್ತ ಲೋಕವೆಲ್ಲ ಲಿಂಗ, ಅದರಲ್ಲಿ ಅಂತರ್ಗತವಾಗಿರುವ ಚಲನಶೀಲತೆ ಜಂಗಮ, ಅದರ ಅರಿವೇ ಗುರು.

ಇದೀಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದ್ದೇವೆ. ದಾರಿ ಬದಲಿಸಿಕೊಂಡು ಸರಿದಾರಿಗೆ ಹೊರಳಿದರೆ ಮಾತ್ರ ನಮ್ಮ ಮುಂದಿನ ಬದುಕು ಸಹನೀಯವಾಗಿರುತ್ತದೆ, ಇಲ್ಲದೆ ಹೋದರೆ ಮತ್ತೆ ಸಾವಿರಾರು ವರುಷಗಳ ಸಾಂಸ್ಕೃತಿಕ ಜೀತಕ್ಕೆ ಸೇರಿಕೊಳ್ಳುತ್ತೇವೆ. ಆಯ್ಕೆ ನಮ್ಮ ಮುಂದಿದೆ. ಸರಿದಾರಿಗೆ ಹೊರಳಲು ಮಾದರಿಗಳೆಂದು ಬಸವಾದಿ ಶರಣರ, ಬುದ್ಧನ ದಾರಿಗಳು ನಮಗೆ ಉಪಯೋಗಕ್ಕೆ ಬಂದಾವು ಎಂಬುದೊಂದು ಆಶಯ. ಅವು ಬಾರದೆ ಹೋದರೆ ಧರ್ಮಮುಕ್ತವಾಗಿಯಾದರೂ ಇರುವ ಆಯ್ಕೆ ಕೂಡ ನಮ್ಮ ಮುಂದಿದೆ. ಯೂರೋಪಿನ ಹೊಸ ಪೀಳಿಗೆಯ ಬಹುಪಾಲು ತಮ್ಮನ್ನು ‘ನಾನ್ ರಿಲಿಜಿಯಸ್’ ಎಂದು ಘೋಷಿಸಿಕೊಂಡಿದೆ. ಅದರಲ್ಲೂ ಕರೋನಾ ನಂತರದ ದಿನಗಳಲ್ಲಿ ಅವರೀಗ ಪಾಠ ಕಲಿತಿದ್ದಾರೆ. ನಮ್ಮ ಚರಿತ್ರೆಯೇನೂ ಭಿನ್ನವಲ್ಲ.

ನಮ್ಮ ಈ ಹೊತ್ತಿನ ಸಂಕಟಗಳಿಗೆ ಅನೇಕ ಕಾರಣಗಳಿವೆ. ಮುಖ್ಯವಾಗಿ ನಮ್ಮ ಜೀವನಕ್ರಮವನ್ನು ನಿರ್ಧರಿಸುತ್ತಿರುವ ಪೊಳ್ಳು ತತ್ವಜ್ಞಾನಗಳು ಇವತ್ತಿನ ಬಹುಪಾಲು ಸಂಕಟಗಳಿಗೆ ಕಾರಣವಾಗಿವೆ. ಪೊಳ್ಳು ನಂಬಿಕೆಗಳಿಂದಾಗುತ್ತಿರುವ ಸಂಕಟಕ್ಕೆ ದೇಶ ಜರ್ಜರಿತವಾಗಿದೆ. ಬದುಕಿನ ನಿಜ ಸಮಸ್ಯೆಗಳನ್ನು ಎದುರಿಸಲಾಗದ ತಾತ್ವಿಕತೆಯಿಂದ ಏನೂ ಪ್ರಯೋಜನವಿಲ್ಲ. ದುರಂತವೆಂದರೆ ಪ್ರಪಂಚದ ಬಹುಪಾಲು ಧರ್ಮಗಳು ಇಂತಹ ಪೊಳ್ಳನ್ನು ನಮ್ಮ ತಲೆಗೆ ತುಂಬಿ ನಮ್ಮನ್ನು ಅಡಿಯಾಳಾಗಿಸಿಕೊಂಡಿವೆ. ಮನುಷ್ಯನಿರ್ಮಿತ ಸಂಕಟಗಳಿಗೆ ಸಾವಿರಾರು ವರುಷಗಳ ಇತಿಹಾಸವಿದೆ. ಅವುಗಳಿಂದ ಲೋಕಕ್ಕೆ ಬಿಡುಗಡೆ ಸಿಕ್ಕಿಲ್ಲ. ಬದಲಿಗೆ ಸಂಕಟಗಳು ಇನ್ನೂ ಹೆಚ್ಚು ಸಂಕೀರ್ಣವಾಗುತ್ತಿವೆ.

ಶೂದ್ರ ಆಧ್ಯಾತ್ಮ ಹಿಂದೂ ಧರ್ಮದ ನಿಜವಾದ ಸಾರ ಸತ್ವ. ಅನ್ಯಮತ ಸಹಿಷ್ಣುತೆ ಅದರ ಶ್ರೇಷ್ಠ ಮೌಲ್ಯ. ಆದರೆ ಈ ಹೊತ್ತು ಶೂದ್ರ ಆಧ್ಯಾತ್ಮವನ್ನು ಹೊಸಕಿಹಾಕಿ ಹಿಂದೂ ಧರ್ಮ ಎಂದರೆ ವೈದಿಕ ಹಿಂದೂ ಧರ್ಮ, ಭಾರತವೆಂದರೆ ವೈದಿಕ ಹಿಂದೂ ದೇಶವೆಂಬ ಸಮೀಕರಣಗಳನ್ನು ಮುಂದಿಡುತ್ತಿದ್ದಾರೆ. ಎಲ್ಲರನ್ನೂ ಒಳಗೊಳ್ಳುವ ನಡೆಗಳಿಗೆ ಬದಲಾಗಿ ಕೇವಲ ಒಂದು ಜಾತಿಯ ಆಚರಣೆಗಳೇ ಮಾದರಿ ಆಚರಣೆಗಳೆಂಬ ಭ್ರಮೆ ಮೂಡಿಸುತ್ತಿದ್ದಾರೆ. ಸಾಂವಿಧಾನಿಕ ಆಶಯಗಳು ತಿರಸ್ಕೃತಗೊಳ್ಳುತ್ತಿವೆ. ಶೂದ್ರ ಸಮೂಹಗಳ ಅಸ್ಮಿತೆಗಳು ಅಂಚಿಗೆ ತಳ್ಳಲ್ಪಡುತ್ತಿವೆ. ಹಿಂದೂ ಧರ್ಮದಲ್ಲಿ ಶೂದ್ರರು ದಲಿತರು ಬುಡಕಟ್ಟು ಜನರ ಆಚರಣೆಗಳಿಗೆ ಮಾನ್ಯತೆ ಇಲ್ಲದಂತಾಗುತ್ತಿದೆ.

ಇನ್ನು ಹನ್ನೆರಡನೆಯ ಶತಮಾನದ ವಚನ ಚಳವಳಿಯನ್ನು ನಾನಾ ರೀತಿಯಲ್ಲಿ ಓದುತ್ತಾರೆ. ಅದನ್ನು ಕರ್ನಾಟಕದ ಮೊದಲ ಶೂದ್ರ ಚಳವಳಿ ಎಂದು ಕೂಡ ನೋಡಬಹುದು. ಆ ಚಳವಳಿಯಲ್ಲಿ ಪಾಲ್ಗೊಂಡವರು ಯಾರ್ಯಾರು? ನಿಶ್ಚಿತವಾಗಿ ಬಸವಣ್ಣನವರ ಜೊತೆಗಿದ್ದವರು ಯಾರು ಯಾರು? ಒಕ್ಕಲಿಗರು, ಬೇಡರು, ಬೆಸ್ತರು, ಎಲ್ಲ ದಲಿತ ಜಾತಿಗಳು, ತಿಗಳರು, ಹಡಪದವರು, ಉಪ್ಪಾರರು, ಗಾಣಿಗರು, ಕುರುಬರು, ಬಲಿಜಿಗರು, ನೇಕಾರರು, ಈಡಿಗರು, ಕಮ್ಮಾರರು, ಕುಂಬಾರರು, ಮರಾಠಿಗರು, ಕೊರಮರು, ಕೊರಚರು, ಅಕ್ಕಸಾಲಿಗರು, ಗೊಲ್ಲರು, ದಕ್ಕಲರು, ಅಲೆಮಾರಿಗಳು, ಬುಡಕಟ್ಟಿನವರು, ವಡ್ಡರು, ನಾಯಕರು, ಪರಿವಾರದವರು, ಅಗಸರು, ಬಣಜಿಗರು, ಬಂಟರು, ಮೊಗವೀರರು – ಇವರೆಲ್ಲ ಶೂದ್ರರು. ಅಂದರೆ ತಾವು ಮಾತ್ರ ಶ್ರೇಷ್ಠ ಅಂದುಕೊಂಡಿರುವ ಒಂದೆರಡು ಮೇಲುಜಾತಿಗಳನ್ನು ಬಿಟ್ಟರೆ ಉಳಿದ ಎಲ್ಲ ಜಾತಿಗಳವರೂ ಬಸವಣ್ಣನ ನೆಂಟರು. ಶೂದ್ರ ಸಮೂಹದ ಇವರೆಲ್ಲ ದುಡಿದು ಬದುಕುವ ಶ್ರಮಜೀವಿಗಳು. ಕರ್ನಾಟಕದ ಮಟ್ಟಿಗೆ ಇವರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಸುಮಾರು ಎಪ್ಪತ್ತಾರರಷ್ಟು ಇದೆ. ಈ ಶೂದ್ರ ಜನಸಮೂಹಗಳು ಒಂದೇ ತಾಯಿಯ ಮಕ್ಕಳ ಹಾಗೆ ಅಣ್ಣತಮ್ಮಂದಿರು. ಎಲ್ಲ ದುಡಿದು ಉಣ್ಣುವ ಜನ. ಎಲ್ಲ ಜಾತಿಧರ್ಮದವರಿಗೆ ಅನ್ನ ಬೆಳೆದುಕೊಟ್ಟವರು, ಬಟ್ಟೆ ನೇಯ್ದುಕೊಟ್ಟವರು, ಮೀನು ಹಿಡಿದು ಕೊಟ್ಟವರು, ಚಪ್ಪಲಿ ಹೊಲಿದು ಕೊಟ್ಟವರು, ಎಣ್ಣೆ ತೆಗೆದುಕೊಟ್ಟವರು, ಉಪ್ಪು ಮಾಡಿಕೊಟ್ಟವರು, ಒಡವೆ ಮಾಡಿಕೊಟ್ಟವರು, ಕುರಿ ದನ ಸಾಕುವವರು, ಹಾಲು ಕರೆದು ಕೊಟ್ಟವರು, ಮರದ ಕೆಲಸ ಮಾಡಿಕೊಡುವವರು, ಕಬ್ಬಿಣದ ಸಲಕರಣೆ ಮಾಡಿಕೊಡುವವರು, ಮನೆ ಕಟ್ಟಿಕೊಟ್ಟವರು- ಬದುಕಲು ಬೇಕಾಗುವ ಎಲ್ಲವನ್ನೂ ದುಡಿದು ಒದಗಿಸುವ ಈ ಜನರ ಕಸುಬಿನ ಆಧಾರದ ಮೇಲೆ ಗುರುತಿಸಿ ಮೊದಲಿಗೆ ಎರಡು ಪಣಕಟ್ಟಿನ ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಪಣಕಟ್ಟಿನ ಆಧಾರದ ಮೇಲೆ ವಿಂಗಡಿಸಿದ ಈ ಜಾತಿಗಳನ್ನು ಒಟ್ಟಾಗಿ ಹಮಾಮ್‍ಕೋಮುಗಳೆಂದು ಕರೆಯುತ್ತಿದ್ದರು. ಈ ಜಾತಿಗಳಿಗೆ ಸಮಾನವಾದ ದೈವಗಳು, ನಂಬಿಕೆಗಳು, ಆಚಾರವಿಚಾರಗಳು, ಆಹಾರ ಪದ್ದತಿಗಳು, ಹಬ್ಬಹರಿದಿನಗಳು ಇದ್ದವು ಮತ್ತು ಈಗಲೂ ಇವೆ. ಇವುಗಳನ್ನು ಪಣಕಟ್ಟುಗಳೆಂದು ಕರೆಯುತ್ತಿದ್ದರೇ ವಿನಾ ಒಂದು ಧರ್ಮದ ಹೆಸರಿನಲ್ಲಿ ಕರೆಯುತ್ತಿರಲಿಲ್ಲ. ಏಕೆಂದರೆ ಮುಸಲ್ಮಾನರಂತೆ, ಕ್ರಿಶ್ಚಿಯನ್ನರಂತೆ ಒಂದು ಧರ್ಮದ ಕಲ್ಪನೆ ಅಂದರೆ ಒಬ್ಬ ಧರ್ಮಸಂಸ್ಥಾಪಕ, ಒಂದು ದೈವ, ಒಂದು ಪವಿತ್ರ ಪುಸ್ತಕದ ಕಲ್ಪನೆ ನಮ್ಮಲ್ಲಿಲ್ಲ. ಶೂದ್ರಧರ್ಮವು ನೂರಾರು ಜಾತಿಗಳ, ನೂರಾರು ದೇವರುಗಳ, ನೂರಾರು ಆಚರಣೆಗಳ, ನೂರಾರು ಆಹಾರ ಕ್ರಮಗಳು ಸೇರಿಕೊಂಡಿರುವ ಧರ್ಮ. ಇವುಗಳನ್ನು ಒಂದು ಧರ್ಮ ಎನ್ನುವುದಕ್ಕಿಂತ ಹಲವು ಕೋಮುಗಳ ಒಂದು ಗುಂಪು ಎನ್ನುವುದೇ ಸರಿ. ಒಂದೇ ಧರ್ಮ ಎಂದಾಕ್ಷಣ ಮೇಲು-ಕೀಳು ಎಂಬುದು ಜಾರಿಗೆ ಬಂದು ಈ ಶೂದ್ರ ಜಾತಿಗಳವರೆಲ್ಲ ಮತ್ಯಾರೋ ಮೇಲುಜಾತಿಯವರಿಗೆ ಅಡಿಯಾಳಾಗುವಂತಾಗುತ್ತದೆ. ಈಗ ಹಿಂದೂಧರ್ಮ ಎಂದು ಗುರುತಿಸಿಕೊಂಡಿರುವ ಧರ್ಮದಲ್ಲಿ ಸಮಾನತೆ ಇಲ್ಲ. ಎಲ್ಲರ ಮೇಲೆ ಮೇಲು ಜಾತಿಗಳ ಯಜಮಾನಿಕೆ ಇದ್ದೇ ಇರುತ್ತದೆ. ಈ ತಾರತಮ್ಯ, ಅಪಮಾನಗಳು ಮೇಲ್ಜಾತಿಗಳಿಂದ ಆರಂಭವಾಗಿ ಕೆಳಮುಖವಾಗಿ ಅದು ಹರಿಯುವಂತೆ ನೋಡಿಕೊಳ್ಳಲಾಗಿದೆ.

ವರ್ಣಾಶ್ರಮದ ಹೇರಿಕೆ:

ಈ ಹೊತ್ತಿಗೂ ಭಾರತದ ಬದುಕನ್ನು ನಿಯಂತ್ರಿಸುತ್ತಿರುವ ಸಾಂಸ್ಕೃತಿಕ ಸಂವಿಧಾನವೆಂದರೆ ಋಗ್ವೇದದ ಹತ್ತನೆಯ ಮಂಡಲದ ತೊಂಭತ್ತನೆಯ ಸೂತ್ರವಾದ ಪುರುಷ ಸೂಕ್ತವೆ. ಇದನ್ನು ನಾವು ನೀವು ಓದಿರಲಿ ಓದಿಲ್ಲದಿರಲಿ, ಪಾಲನೆಯನ್ನಂತೂ ನಮ್ಮಿಂದ ಮಾಡಿಸಲಾಗುತ್ತಿದೆ. ಜಾತಿ ಶ್ರೇಣೀಕರಣಕ್ಕೆ ಇದರ ಮೂಲಕ ಪಡೆದ ಒಪ್ಪಿಗೆಯನ್ನು ನಾವು ಇನ್ನೂ ಹಿಂಪಡೆಯಲು ಆಗಿಲ್ಲ. ವಚನ ಚಳವಳಿಯಂತಹ ನಡೆಗಳು ಇಂತಹ ಒಪ್ಪಿಗೆಯನ್ನು ಹಿಂಪಡೆಯುವ ಪ್ರಯತ್ನಗಳನ್ನು ಮಾಡಿವೆ. ಬಸವಣ್ಣನವರ ಕೆಳಗಿನ ವಚನವು ಶೂದ್ರ ಸಮೂಹಗಳ ಆತ್ಮವಿಶ್ವಾಸವನ್ನು ಎಚ್ಚರಿಸುವಂತಿದೆ:

ಗೋತ್ರ ನಾಮವ ಬೆಸಗೊಂಡಡೆ
ಮಾತು ನೂಕದೆ ಸುಮ್ಮನಿದ್ದಿರೇನಯ್ಯಾ?
ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ?
ಗೋತ್ರನಾಮ, ಮಾದಾರ ಚೆನ್ನಯ್ಯ
ಡೋಹರ ಕಕ್ಕಯ್ಯನೆಂಬುದೇನು ಕೂಡಲ ಸಂಗಯ್ಯಾ.
ವೇದದವರನೊಲ್ಲದೆ ನಮ್ಮ ಮಾದಾರ ಚೆನ್ನಯ್ಯಂಗೊಲಿದ
ಶಾಸ್ತ್ರದವರನೊಲ್ಲದೆ ನಮ್ಮ ಶಿವರಾತ್ರಿಯ ಸಂಕಣ್ಣಂಗೊಲಿದ
ಆಗಮದವರನೊಲ್ಲದೆ ನಮ್ಮ ತೆಲುಗು ಜೊಮ್ಮಯ್ಯಂಗೊಲಿದ
ಪುರಾಣಕರ್ಮಿಗಳೆಂಬ ವಿಶಿಷ್ಟ ಬ್ರಹ್ಮರನೊಲ್ಲದೆ ಉದ್ಭಟಯ್ಯಂಗೊಲಿದ
ಅಣ್ಣ ಕೇಳಾ ಸೋಜಿಗವ
ದಾಸ ದುಗ್ಗಳೆಯರಿಗೊಲಿದ ಮುಕ್ಕಣ್ಣ ಸೊಡ್ಡಳ
ಹಾರುವಣ್ಣಗಳಿಗೆ ಹೇಸಿ ಕದವನಿಕ್ಕಿಕೊಂಡನು.

ವಚನಕಾರರ ಈ ಪ್ರಮಾಣ ನಿರಾಕರಣೆಗೆ ಮಹತ್ವವಿದೆ. ಯಾಕೆಂದರೆ ವಾಸ್ತವದಲ್ಲಿ ಸಾಮಾನ್ಯರ ಬದುಕನ್ನು ಅಂಕೆಗೆ ತೆಗೆದುಕೊಳ್ಳಲು ಮತ್ತು ತಮ್ಮ ತಾರತಮ್ಯದ ನಿಲುವುಗಳನ್ನು ಮುಚ್ಚಿಡಲೆಂದೇ ಮೇಲು ಜಾತಿಗಳ ಅಧಿಕಾರ ಶಕ್ತಿಗಳು ಪ್ರಮಾಣಗಳನ್ನು ಹುಟ್ಟುಹಾಕುತ್ತವೆ. ಅಧಿಕಾರದ ಅಗತ್ಯವಿಲ್ಲದ ಸಮೂಹಕ್ಕೆ ಪ್ರಮಾಣದ ಹಂಗಿಲ್ಲ. ಪ್ರಮಾಣ ನಿರ್ಮಾಣದ ಆತುರವಿಲ್ಲ. ಆದರೆ ತನ್ನೆದುರಿಗಿನ ಬದುಕನ್ನು ಅಪವ್ಯಾಖ್ಯಾನಕ್ಕೆ ತಳ್ಳುವ ಅಪಾಯದ ಎಚ್ಚರವಿದೆ. ಈ ಕಾರಣಕ್ಕಾಗಿ ಕನ್ನಡ ಮನಸ್ಸು ಈ ಪ್ರಮಾಣಗಳ ಜೊತೆಗೆ ನಡೆಸಿದ ಅನುಸಂಧಾನಕ್ಕೆ ಈ ಹೊತ್ತಿಗೂ ಪ್ರಸ್ತುತತೆ ಇದೆ. ಪ್ರಮಾಣ ನಿರಾಕರಣೆ ವಚನಕಾರರಿಗೆ ಮಾತ್ರ ಸೀಮಿತಗೊಂಡಿಲ್ಲ. ಅದು ಎಲ್ಲ ಅವೈದಿಕ ಅಥವಾ ಶ್ರಮಣ ಧಾರೆಗಳ ನಿಲುವಾಗಿದೆ. ಕೆಲವನ್ನು ಉದಾಹರಣೆ ಸಮೇತ ವಿವರಿಸಬಹುದು.

ಅಜ್ಞಾನವೆಂಬ ತೊಟ್ಟಿಲೊಳಗೆ
ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದಶಾಸ್ತ್ರವೆಂಬ ನೇಣಕಟ್ಟಿ
ಹಿಡಿದು ತೂಗಿ ಜೋಗುಳವಾಡುತಿದ್ದಾಳೆ ಭ್ರಾಂತಿಯೆಂಬ ತಾಯಿ
ತೊಟ್ಟಿಲು ಮುರಿದು, ನೇಣು ಹರಿದು
ಜೋಗುಳ ನಿಂದಲ್ಲದೆ ಗುಹೇಶ್ವರನೆಂಬ ಲಿಂಗವ ಕಾಣಬಾರದು.

ಅರಿದರಿದು ನಾಲ್ಕು ವೇದ ಹದಿನಾರು ಶಾಸ್ತ್ರ
ಹದಿನೆಂಟು ಪುರಾಣ ಇಪ್ಪತ್ತೆಂಟಾಗಮ
ಇಂತಿವೆಲ್ಲವನೋದಿ ಕೇಳಿ, ಹೋಮವನಿಕ್ಕಿ ಹೋತನ ಕೊಂದು
ತಿಂಬುವುದಾವಾಚಾರದೊಳಗೊ?
ನಮ್ಮ ಕೂಡಲ ಸಂಗಮದೇವಂಗೆ
ಅಧಿದೇವತೆಗಳ ಸರಿಯೆಂಬುವರ ಬಾಯಲ್ಲಿ ಸುರಿಯವೆ ಬಾಲಹುಳಗಳು.

ವೇದ ವೇಧಿಸಲರಿಯದೆ ಕೆಟ್ಟವು
ಪುರಾಣ ಪೂರೈಸಲರಿಯದೆ ಕೆಟ್ಟವು
ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು
ಹಿರಿಯರು ತಮ್ಮ ತಾವರಿಯದೆ ಕೆಟ್ಟರು
ತಮ್ಮ ಬುದ್ದಿ ತಮ್ಮನೆ ತಿಂದಿತ್ತು; ನಿಮ್ಮನೆತ್ತ ಬಲ್ಲರು ಗುಹೇಶ್ವರ

ವಚನಗಳನ್ನು ಔಷಧವೆಂದು ಭಾವಿಸಬೇಕು. ವಚನಕಾರರು ವೈದ್ಯರಿದ್ದಂತೆ. ಒಳ್ಳೆಯ ವೈದ್ಯರಿದ್ದಂತೆ. ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿ ಚೀಟಿ ಬರೆಸಿಕೊಂಡು ರೋಗದ ಹೆಸರನ್ನು ತಿಳಿದುಕೊಂಡು ಔಷಧ ತೆಗೆದುಕೊಳ್ಳದಿದ್ದರೆ ಹೇಗೆ ಏನೂ ಪ್ರಯೋಜನವಿಲ್ಲವೋ ಹಾಗೆಯೇ ವಚನಗಳನ್ನು ಕೇವಲ ಓದಿದ ಮಾತ್ರಕ್ಕೆ, ಕೇವಲ ರಾಗವಾಗಿ ಹಾಡಿದ ಮಾತ್ರಕ್ಕೆ ಏನೂ ಉಪಯೋಗವಿಲ್ಲ. ಅವುಗಳ ಅನುಸಂಧಾನದಿಂದ ಮಾತ್ರ ಉಪಯೋಗ. ಅವು ಮಂತ್ರಗಳಲ್ಲ; ಬದುಕಬೇಕಾದ ಸೂಳ್ನುಡಿಗಳು.

Previous post ಅನುಭವ ಮಂಟಪ: ಮುಂದೇನು?
ಅನುಭವ ಮಂಟಪ: ಮುಂದೇನು?
Next post ಯುದ್ದವೋ, ಶಾಂತಿಯೋ…
ಯುದ್ದವೋ, ಶಾಂತಿಯೋ…

Related Posts

ಅಚಲ ಕಥಾಲೋಕ
Share:
Articles

ಅಚಲ ಕಥಾಲೋಕ

February 10, 2023 Bayalu
ಅನುಭಾವಿ ಲೇಖಕರಾದ ಶರಣ ಪದ್ಮಾಲಯ ನಾಗರಾಜ ಅವರು ಅಚಲ ಕಥಾಲೋಕ (ಅಚಲ-ಝೆನ್ ಅನುಸಂಧಾನ) ಪುಸ್ತಕದಲ್ಲಿ ಬರೆದ ದೀರ್ಘ ಪ್ರಸ್ತಾವನೆಯ ಮಧ್ಯದಲ್ಲಿ ಬರುವ ಕೆಲವು ಮಾತುಗಳನ್ನು ಮಾತ್ರ...
ಅರಿವಿಗೆ ಬಂದ ಆರು ಸ್ಥಲಗಳು
Share:
Articles

ಅರಿವಿಗೆ ಬಂದ ಆರು ಸ್ಥಲಗಳು

August 11, 2025 ಮಹಾದೇವ ಹಡಪದ
(ಇಲ್ಲಿಯವರೆಗೆ: ಇತ್ತ ಗುಡ್ಡಕ್ಕೆ ಹೋದ ಮಗನನ್ನು ತ್ರೈಲೋಕ್ಯ ಮತ್ತು ಮಹಾಲೇಖೆಯರು ಹುಡುಕಿ ಅಲೆಯುತ್ತಿದ್ದರೆ, ಅತ್ತ ಸಿದ್ಧಸಾಧುವಿನ ಕೊನೆಯ ದಿನಕ್ಕೆ ಸಾಕ್ಷಿಯಾಗುವ ಭಾಗ್ಯ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
December 8, 2021
ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
August 8, 2021
ಪ್ರಭುವಿನ ಗುರು ಅನಿಮಿಷ -2
ಪ್ರಭುವಿನ ಗುರು ಅನಿಮಿಷ -2
September 14, 2024
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
ಮನಸ್ಸು
ಮನಸ್ಸು
September 7, 2020
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
Copyright © 2026 Bayalu