
ಮೈಯೆಲ್ಲಾ ಕಣ್ಣಾಗಿ (10)
(ಇಲ್ಲಿಯವರೆಗೆ: ಕಪ್ಪಡಿಸಂಗಮದಲ್ಲಿ ಯುವಕ ಬಸವಣ್ಣನವರನ್ನು ವಸೂದೀಪ್ಯ ಭೇಟಿಯಾಗಿ, ಸತ್ಯ ಸಾಧನೆಯ ಕುರಿತಾಗಿ ದೀರ್ಘಕಾಲ ಚರ್ಚಿಸಿದ. ಆರು ದಿನ ಅವರಿಬ್ಬರೂ ಅರಿವಿನ ಮಾರ್ಗಗಳ ಕುರಿತು ಮಾತನಾಡಿದರು. ಬಸವಣ್ಣನವರು ರಾಜನ ಆಸ್ಥಾನಕ್ಕೆ ಹೊರಡುವುದು ಖಚಿತವಾದಾಗ ವಸೂದೀಪ್ಯ ಮಲಪ್ರಹರಿ ದಂಡೆಗುಂಟ ಹಿಂದಿರುಗಿ ನಡೆದುಬಿಟ್ಟ… ಮುಂದೆ ಓದಿ-)
ಗುರುವೆಂಬೋ ಗುರುವು ಕಾಲವಾದ ಆ ಗದ್ದುಗೆಯ ಮುಂದೆ ಬಂದಾಗ ದಿನಗಳೆರಡು ಕಳೆದಿದ್ದವು. ಗುರುವಿನ ಗದ್ದುಗೆಯ ಮುಂದೆ ಕುಳಿತು ತನ್ನಿಷ್ಟದ ಲಿಂಗವನ್ನು ಬಲಗೈಯಲ್ಲಿಟ್ಟುಕೊಂಡು ತದೇಕಚಿತ್ತದಿಂದ ನೋಡುತ್ತ ಅದೇಸೋ ಹೊತ್ತು ಕುಳಿತ. ಅಖಂಡ ಬಂಡೆಯಲ್ಲಿ ಬೆಳೆದ ಬೇರಿಗಂಟಿಕೊಂಡು ಇಳಿಯುತ್ತಿದ್ದ ತಿಳಿನೀರ ಜರೀ ಸುರ್ರೋ ಎಂಬಂಥ ಏಕತಾನದ ನಾದವೊಂದನ್ನು ಹೊರಡಿಸುತ್ತಿತ್ತು. ಆ ಹರಿಯುವ ಜರಿಯ ನಾದಕ್ಕೆ ಸರಿಹೊಂದುವಂತೆ ಉಸಿರಾಟವನ್ನು ಜೋಡಿಸಿಕೊಂಡು ನಮಃಶಿವಾಯ ಎಂಬ ಆದಿಗುರುವಿನ ಬೋಧಮಂತ್ರವನ್ನು ಉಚ್ಚರಿಸತೊಡಗಿದ. ಸ್ವರಸ್ಥಾನ ಕೂಡಿತು ಎನ್ನುವಾಗ ಹಸಿವೆಂಬ ಹಸಿವು ಒಡಲನ್ನು ಬಗೆದು ನಿತ್ರಾಣಗೊಂಡು ಬವಳಿ ಬಂದಂತಾಯ್ತು. ಚಕ್ರಾಂಕ ಸೊಪ್ಪನ್ನು ತರಿದು ತಂದು ಚಕಮಕಿ ಕಲ್ಲ ಚಳಾಯಿಸಿ ಬೆಂಕಿಮಾಡಿ, ಮುರಿದ ಮಡಕೆಯ ಚೂರಲ್ಲಿ ಎಸರಿಗಿಟ್ಟು, ಆ ಬೆಟ್ಟದ ಇಳಿಜಾರಿನಲ್ಲಿ ನೋಡಿದರೆ… ಅಲಾ..! ಕಲ್ಲಬಾಳೆಯು ಫಲಹೊತ್ತ ಭಾರಕ್ಕೆ ನುಗ್ಗಲಾಗಿ ನೆಲಕ್ಕೆ ಬಾಗಿದ್ದು ಕಂಡಿತು. ಫಲಕೊಟ್ಟ ಕದಳಿಗೆ ನಮಿಸಿ, ಬಾಳೆಯ ಫಲಕ್ಕೆ ಹಕ್ಕುದಾರರಾದ ಸಕಲ ಚರಾಚರ ಜೀವರಾಶಿಗಳ ನೆನೆದು ತನಗೆ ಬೇಕಿದ್ದ ಒಂದು ಹಣಿಗೆ ಬಾಳೆಯನ್ನಷ್ಟೆ ತಂದು ಅಂದಿನ ದೇಹದಾಸರೆಗೆ ಒದಗಿಸಿದ.
ದಿನ ಮುಳುಗಿ ದಿನ ಮೂಡಿದಾಗ ಬೆಳಕೆಂಬೋ ಬೆಳಕು ಮೋಡಗಳ ನಡುವೆ ಸುಳಿದು ಬೆಳಕಾಯ್ತೆ ಹೊರತು ಸೂರ್ಯನ ಸುಳುಹು ಕಾಣಲಿಲ್ಲ. ಮಳೆಕಾಡಿನ ಕಡೆಗೆ ಮಳೆಮೋಡ ಮುಗಿಲ ಮುತ್ತಿದಾಗ ಹೋಗುವುದು ತರವಲ್ಲ ಎಂದು ಸಿದ್ಧಸಾಧುಗಳೊಮ್ಮೆ ಹೇಳಿದ್ದು ನೆನಪಾಯ್ತು. ಒಂದಷ್ಟು ದಿನಗಳ ಕಾಲ ಗುರುವು ಕೈಕೊಂಡ ಮೌನ ಅನುಷ್ಠಾನ ಮಾಡುವುದಾಗಿ ಮನದೊಳಗೆ ನಿಶ್ಚಯಿಸಿ ಕಾಲವಾದ ಗುರುವಿನ ಮುಂದೆ ತಲೆಬಾಗಿ ಕೈಯೊಡ್ಡಿ ಅಪ್ಪಣೆ ಬೇಡಿಕೊಂಡು ಲಿಂಗದೊಳಗೆ ತಾನು, ತನ್ನೊಳಗೆ ಲಿಂಗವೂ ಕಾಣುವ ಅಪರೂಪದ ಅಭ್ಯಾಸ ಮಾಡತೊಡಗಿದ. ಅಬ್ಬೆಯ ಕಣ್ಣಿನ ಸುತ್ತ ಕಪ್ಪುಗಟ್ಟಿದ್ದ ಹಂಬಲವೂ, ದಂಡಿನ ಗುರುವು ಹೇಳಿಕೊಟ್ಟ ನೆದರಿನ ನಿಲುವೂ, ಅಬ್ಬಬ್ಬೆ ನರಸಬ್ಬೆಯ ಮಡಿಲು, ಸಿದ್ಧಸಾಧುವಿನ ಕಣ್ಣೊಳಗೆ ಅಡಗಿದ್ದ ಬೆಳಕೂ, ಚಂದ್ರಲಾಳ ಕಾಲ್ಗೆಜ್ಜೆಯ ಕಿಂಕಿಣಿಯು, ಒಟ್ಟರಾಶಿ ಹದ ತಪ್ಪಿದ್ದ ತನ್ನ ಎದೆಬಡಿತವೂ, ಎಳೆಕುದುರೆಯೂ, ಆ ನಂದಿವಿಗ್ರಹವೂ, ಒಕ್ಕಣ್ಣನೆಂಬ ಅಪ್ಪನ ಮಮಕಾರವೂ, ಎಲುಬಿನ ಗೂಡಾಗಿದ್ದ ಗುರುವಿನ ಓಂಕಾರವೂ, ಸೂಜಿಗಲ್ಲಿನ ಸೆಳೆತದ ಬಸವರಸನ ಮುಖಮುದ್ರೆಯೂ… ಗೊಂಬೆಯಾಟದವರ ತೊಗಲಿನ ಗೊಂಬೆಗಳ ಹಾಗೆ ಮನದ ಪರದೆಯ ಮೇಲೆ ಹಾಯ್ದು ಹೋಗುತ್ತಿದ್ದವು. ಒಮ್ಮೆ ಚಿತ್ತ ಮೇಳೈಸಿದರೆ ಸ್ವರ ತಪ್ಪುತ್ತಿತ್ತು. ಸ್ವರ ಸೇರಿದಾಗ ಚಿತ್ತ ಕದಲುತ್ತಿತ್ತು. ಎರಡೂ ನಿಶ್ಚಲವಾಗಿ ಕೂಡಿದವು ಎಂದಾಗ ಕಣ್ಣರೆಪ್ಪೆ ಸೋಲುತ್ತಿತ್ತು. ಹದ ಹಿಡಿದು ತಪವ ಧ್ಯಾನಿಸುತ್ತ ಗುರುವಿನ ದರುಶನ ನಿಧನಿಧಾನವಾಗುತ್ತ ಅಲ್ಲಿ ಚಂದ್ರಮೌಳೇಶನ ಹಣೆಗಣ್ಣ ಪ್ರಕಾಶವಾದಂಥ ಅನುಭವವಾಗಲು ಚುರುಚುರು ಬಿಸಿಲು ಮೈ ಸುಟ್ಟಾಗ ಎಚ್ಚರವಾಯ್ತು. ದಿನಗಳೆಷ್ಟೋ ಕಳೆದರೂ ಅಂಗ ಲಿಂಗವು ಒಂದಾದ ಅನುಭವವು ಕೊರತೆಯಾದಂತೆ ಇನ್ನೇನೋ ಅರಿವಿನ ಮಾರ್ಗವೊಂದು ಬೇಕಲಾ..! ಮಳೆಗಾಲದ ಅಬ್ಬರ ಕಡಿಮೆಯಾಗಿತ್ತು. ಮೈ ಮೂಳೆಗಳು ಬೆನ್ನಿಗಂಟಿಕೊಂಡಂತೆ ಹುರಿಗೊಂಡಿದ್ದರೂ ಅಪ್ಪ ಕಟ್ಟಿದ್ದ ನಾಗಿಣಿಯಕ್ಕನ ಆ ಗುರುತಿನ ದಾರವು ಸಡಿಲುಗೊಂಡು ನೇತಾಡತೊಡಗಿತ್ತು.
ನಾಗಿಣಿಯಕ್ಕ..! ಹುಡುಕಬೇಕು ಆ ತಾಯಿಯ. ಇನ್ನು ಇಲ್ಲಿದ್ದರೆ ಅರಿವಿಗೆ ಕೊರೆಯಾದೀತೆಂಬ ದುಗುಡ ಮನಸ್ಸಿಗೆ ಬಂದದ್ದೆ ಕೈಯೊಳಗಿದ್ದ ಆ ಲಿಂಗವನ್ನು ತುಂಡು ಬಟ್ಟೆಯಲ್ಲಿ ತೋಳಿಗೆ ಕಟ್ಟಿಕೊಂಡು, ಗುರುವಿನ ಗದ್ದುಗೆಗೆ ಸಣಮಾಡಿ ‘ಕಾಲವಾದ ನನ್ನರಿವಿನ ಕಾಲವನ್ನು ಹುಡುಕಬೇಕಿದೆ ಹರಸು ತಂದೆ’ ಎಂದು ಭಿನ್ನೈಸಿದ. ಗುರುವು ಅನುಷ್ಠಾನಗೈದ ಆ ಹೆಬ್ಬಂಡೆಯ ಮೇಲೆ ನಿಂತು ಎಲ್ಲಿ ಹುಡುಕುವುದು ಆ ಮಾತಾಯಿಯ ಎಂದು ದಿಗಂತದ ಅಂಚಿನವರೆಗೆ ದಿಟ್ಟಿಸಿದ. ಇಲ್ಲಿಂದ ಸೂರ್ಯ ಮುಳುಗುವ ದಿಕ್ಕಿಗೆ ಎಡಕಾಗಿ ವಾರೆ ಹೋದರೆ ಬನವಸೆ ಸಿಕ್ಕೀತು, ಆ ತಾಯಿಯೂ ಅತ್ತಲೇ ಹೋದಳೆಂದು ಒಕ್ಕಣ್ಣ ಹೇಳಿದನಲ್ಲವೇ..! ಗುಡ್ಡವನ್ನಿಳಿದು ಎದುರು ಕಾಣುತ್ತಿದ್ದ ಒಂಟಿ ಗುಡ್ಡವನ್ನೇ ದಿಕ್ಕು ಮಾಡಿಕೊಂಡು ಹೊರಟ…
ಹಳ್ಳಿಕಾರರ ಹಟ್ಟಿಗಳ ದಾಟಿ ಸುಡಿಗೆ ಬಂದು ಜೋಡು ಗುಡಿಯ ಅಂಗಳದ ಮಂಟಪದಲ್ಲಿ ಕುಳಿತಾಗ ಹೊತ್ತೆಂಬುದು ಜಾರಿ ಕತ್ತಲಾವರಿಸಿತು. ಕಲ್ಲಮಂಟಪದಲ್ಲಿ ಬೆಳಕಿನ ದೊಂದಿಗಳ ಹೊತ್ತಿಸಿ ದೇವರ ಸೇವೆಗೆಂದು ನಟ್ಟುವರ ಮಕ್ಕಳು ಕುಣಿತದ ವೇಷ ತೊಟ್ಟು ನಾಗಕುಂಡದಲ್ಲಿ ಮುಳುಗೆದ್ದು ಬರತೊಡಗಿದರು. ಆ ನೀರುಂಡ ಗೆಜ್ಜೆಗಳ ಬಳಕ್ ಬಳಕ್ ನಾದವು, ಮದ್ದಲೆಯವರ ಟಪ್ ಟಪಕ್ ಚರ್ಮದ ಹದಗೊಳ್ಳುವ ಸ್ವರವೂ, ಕೊಳವಿಯೊಳಗೆ ನೀರು ಗಳಾಡಿಸಿ ಉಫ್ ಎಂದು ಊದಿ ಆ ಕ್ಷಣವೆಂಬ ಕತ್ತಲು ಬೆಳಕಿನ ಮಾಯಕವನ್ನು ಮತ್ತಷ್ಟು ಇಂಬುಗೊಳಿಸಲು ಬಾಯೊಳಗೆ ಗಾಳಿ ತುಂಬಿಕೊಂಡು ಕೊಳವಿಯೊಳಕ್ಕೆ ನಿಧನಿಧಾನ ಉಸುರಿದಾಗ ಓಂಕಾರಕ್ಕೆ ಕಿಂಚಿದೂನಾದ ನಾದವೊಂದು ಹೊಂಟಿತು. ಅದೇ ಗಿರಿಜಾ ಕಲ್ಯಾಣದ ಸೊಲ್ಲೊಂದನ್ನು ಶಿವನ ಮುಂದೆ ತುಟಿದೆರೆದು ಅದೇ ರಾಗ, ಅದೇ ಭಾವದಲ್ಲಿ, ಅದೇ ಉತ್ಕಟತೆಯನ್ನು ಮೇಳೈಸಿ ಹಾಡತೊಡಗಿದಾಗ, ನಡೆದು ದಣಿವಾಗಿ ಬಂದು ಕುಳಿತವನ ಎದೆಯೊಳಗೆ ಅವಿತಿದ್ದ ದುಗುಡವು ರೊಮ್ಮನೇ ಜಾಗೃತಗೊಂಡಿತು. ಈಗಷ್ಟೆ ನಿಶ್ಚಲಗೊಂಡಿದ್ದ ಚಂಚಲ ಮನಸ್ಸು ಕೆಟ್ಟ ಕುತೂಹಲ ಹೊತ್ತು ನವಮಂಟಪದತ್ತ ಇಣುಕಿತು. ಗೊಂಚಲು ಗೊಂಚಲಾಗಿ ಕುಣಿಯುತ್ತಿದ್ದ ಮಕ್ಕಳ ಮುದ್ದುಮುಖಗಳು ಶಿವನ ಸೂರೆಗೊಳ್ಳುವಂತೆ ಕಣ್ಣು-ಹಾವಭಾವ, ಭಂಗಿ, ಚಲನೆ ಮಾಡುತ್ತಿದ್ದರು. ಅಲ್ಲಿ ದೂರದಲ್ಲಿ ಕಣ್ಣುಗಳಿಲ್ಲದ ತಾಯೊಬ್ಬಳು ತನ್ನ ತೊಡೆ ತಟ್ಟಿಕೊಳ್ಳುತ್ತಾ ಹಾಡುತ್ತಿದ್ದಳು.
ತನ್ನ ಕೆನ್ನೆಗೆ ತಾನೇ ಪೆಟ್ಟಾಗುವಂತೆ ನಾಕಾರು ಬಾರಿ ಹೊಡೆದುಕೊಂಡು, ತಲೆ ಕೊಡವಿಕೊಂಡು ಅಲ್ಲಿಂದೆದ್ದು ಹಾಳು ಮಂಟಪದತ್ತ ಹೋದ. ಯಾಕೋ ಮನಸ್ಸಿನ ತುಂಬ ತಳಮಳ ತುಂಬಿರಲು ಬಲಗೈ ರಟ್ಟೆಗೆ ಕಟ್ಟಿದ್ದ ಲಿಂಗವನ್ನು ಬಿಚ್ಚಿಕೊಂಡು ಅಂಗೈ ಮೇಲಿಟ್ಟುಕೊಂಡು ದಿಟ್ಟಿಸತೊಡಗಿದಾಗ ದೂರದಲ್ಲೆಲ್ಲೋ ಹೊತ್ತಿದ್ದ ದೊಂದಿ ಬೆಳಕಿನ ಕಿಡಿ ಆ ಹೊಳೆಯುವ ಲಿಂಗದ ಮೇಲೆ ಅಂಕುರಿಸಿ ಬಿಲ್ಲಾಕಾರದಲ್ಲಿ ಕಣ್ಣಗೊಂಬೆಯವರೆಗೂ ಬೆಳಕಿನ ಕಿರಣ ಹಬ್ಬಿದಾಗ ಕಣ್ಣೀರಧಾರೆ ಹರಿಯತೊಡಗಿತು. ಏನೆಲ್ಲ ಸಂಗತಿಗಳು ನೆನಪಿನಲ್ಲಿದ್ದವೋ ಅವುಗಳೆಲ್ಲ ಕಣ್ಣೀರಲ್ಲಿ ತೊಳೆದುಕೊಂಡು ಹೋಗುವಷ್ಟು ಮನಸಾರೆ ಅತ್ತದ್ದಾಯ್ತು. ಬೆಳಗಿನ ಜಾವವಾದರೂ ನಿದ್ದೆ ಬರಲಿಲ್ಲ. ಮಕ್ಕಳ ಕುಣಿತದ ಸೇವೆ ಮುಗಿದು ಜೋಡುಗುಡಿಯ ವಾದ್ಯವಾದನದ ನಾದಗಳು ಕತ್ತಲಲ್ಲಿ ಕರಗಿ ಹಾಲ್ಬೆಳಕಿನ ಬೆಳ್ಳಿಚುಕ್ಕಿ ಮೂಡಿದಾಗ ಕಲಕಿದ್ದ ಮನಸ್ಸಿನ ಮಡುವು ತಿಳಿಯಾಯ್ತು.
‘ಅದ್ಯಾವ ಬಗೆಯ ಮೋಹ ತಲ್ಲಣಿಸಿತು. ಯಾಕಾಗಿ ಒಲವು ಎದೆಬಿರಿಯೆ ಸೆಳೆಯಿತು… ಇಷ್ಟು ದಿನ ಮಾಡಿದ್ದ ಏಕಾಗ್ರತೆಯ ತಪವೆಲ್ಲ ವ್ಯರ್ಥವಾಯ್ತಲಾ… ನನ್ನ ಬಗೆ ಇಂತಾದರೆ ಅಲ್ಲಿ ರಾಜಭಾರದ ದರಬಾರಿಗೆ ಹೊರಟ ಬಸವರಸರ ಸ್ಥಿತಿ ಏನಾದುದೋ.. ಜೊತೆಗೆ ಅಕ್ಕನಾಗಮ್ಮಳನ್ನೂ ಕರೆದುಕೊಂಡು ಹೋದರೇ… ನಾಲ್ಕಾರು ಜನರೊಡನೆ ಒಡನಾಡುತ್ತ ಈ ದೃಷ್ಟಿಯೋಗ ಮಾಡುವುದು ಅವರಿಂದ ಆದೀತೆ..? ಮಾಡಿದರೂ ಮಾಡಿಯಾರು. ಎಲ್ಲರಂತಿದ್ದೂ ಅಂತರಂಗವನ್ನು ಅರಿಯಬಲ್ಲಾತ ಬಸವರಸ. ನಾನು.. ಹುಟ್ಟಿದಂದಿನಿಂದಲೇ ಕೊರತೆಗಳ ನಡುವೆ, ನುಡಿದಾಡುವ ನಿಂದೆಗಳ ನಡುವೆ ಬದುಕಿದೆ. ಅದಕ್ಕಾಗಿ ಏನೋ ಎಲ್ಲವನ್ನು ತೊರೆದು ಕಾಡು ಸೇರಿ ಸಾಧಿಸುವ ಹಂಬಲ ಬಂದಿತು. ಬಸವರಸ..! ಎಲ್ಲವನ್ನು ಪಡೆದೆ ಹುಟ್ಟಿ ನಿಜದ ನಿಲುವನ್ನು ಪ್ರಶ್ನೆಗಳಿಂದ ಕಂಡುಕೊಳ್ಳುತ್ತಾ ಬೆಳೆದವರು. ಅಬ್ಬೆಯ ಕಣ್ಣೀರು, ಅಬ್ಬೆಯ ಅನುಮಾನ, ಅಬ್ಬೆಯ ಹದ್ದಬಸ್ತು, ತಂದೆಯಿಲ್ಲದ ಮಗನೆಂಬ ಅಳುಕು ನನ್ನನ್ನು ಇಷ್ಟು ಭಾವುಕನನ್ನಾಗಿಸಿತೆ… ಈ ಭೂಮಿ, ಗಾಳಿ, ಬೆಳಕು, ನೀರು, ಆ ಆಗಸ ಇವಿಷ್ಟೆ ಸಾಕ್ಷಿಯಾಗಿ ನನ್ನೊಳಗಿನ ನನ್ನನ್ನ ಅರಿಯಬೇಕು. ಆಳಾಳ ಅಂತರಾಳದ ನಿಶ್ಚಲತೆಯನ್ನು ಸಾಧಿಸಬೇಕು. ಓಂಕಾರದ ನಾದ, ದೇಹದ ತ್ರಾಣ ಮತ್ತು ಮನಸ್ಸಿನ ಹದಗಳನ್ನು ಬೆರೆಸುವ ಬಗೆಯನ್ನು ತಿಳಿಯಬೇಕು. ಈ ಮೂರನ್ನು ಒಂದಾಗಿಸಿದ ಅಂಗವೂ ಲಿಂಗವೂ ಏಕಾಗ್ರಗೊಳ್ಳಬೇಕು.’
******
ಜೋಡುಗುಡಿಯ ಅಂಗಳದಲ್ಲಿ ಮಣಮಣ ಮಾತಾಡುತ್ತ, ಹೂಂಕರಿಸುವ ಕತ್ತೆಗಳ ಮೇಲೆ ಗಂಟು, ಲ್ಯಾವಿಗಂಟು, ಮೂಟೆಗಳ ಹೇರುತ್ತಾ ಕಲಬಲ ಮಾಡುತ್ತಿರುವುದು ಕೇಳಿ ಎಚ್ಚರಗೊಂಡು ಅತ್ತ ನೋಡಿದ. ನೆನ್ನೆ ಬಣ್ಣ ಹಾಕಿಕೊಂಡು ವೇಷಕಟ್ಟಿ ಕುಣಿದ ನಾಕೈದು ಹೆಣ್ಮಕ್ಕಳು, ಒಂದಿಬ್ಬರು ಗಂಡೈಕಳು, ವೈಯ್ಯಾರದ ತರುಣಿಯರು, ಮೇಳದವರು, ಮತ್ತೊಂದಿಬ್ಬರು ವ್ಯಾಪಾರಿಗಳು, ಕತ್ತೆಗಳ ಹಿಂಡಿನ ಯಜಮಾನನೂ ಅವಸರ ಮಾಡುತ್ತಿದ್ದರು. ಕಣ್ಣುಕಳೆದುಕೊಂಡಿದ್ದ ಹಣ್ಣು ಮುದುಕಿ ಹಾಡುಗಾತಿಯನ್ನು ಮುಂದಿನ ಕತ್ತೆಯೊಂದರ ಮೇಲೆ ಕೂರಿಸಲಾಗಿತ್ತು. ಎಳೆಮಕ್ಕಳು ತಮ್ಮ ಸಾಮಾನುಸರಂಜಾಮು ಸಮೇತ ಒಂದೆರಡು ಕತ್ತೆಗಳ ಮೇಲೆ ಕುಳಿತಿರಲಾಗಿ ಉಳಿದವರು ಕೆಲವರು ನಡೆದು ಹೋಗಲು ತಯ್ಯಾರಾಗಿ ಕೈಯಾಸರೆಗೆ ಕೋಲು ಹಿಡಿದಿದ್ದರು. ವ್ಯಾಪಾರಿಯೊಬ್ಬ ಆ ಕತ್ತೆಗಳ ಜೊತೆಜೊತೆಯಾಗಿಯೇ ತನ್ನ ಎತ್ತುಗಳಿಗೆ ನೊಗಕಟ್ಟಿ ಬಂಡಿ ಹೂಡಿದನು. ‘ಯಾವ ಕಡೆಗೆ ಪಯಣ?’ ಹಾಳುಮಂಟಪದಿಂದಲೇ ಕೂಗಿ ಕೇಳಿದ. ‘ಪುಲಿಗೆರೆಗೆ’ ಬಂಡಿಯೊಳಗಿದ್ದ ಆ ವ್ಯಾಪಾರಿಯ ಮಗ ಚುರುಕಾಗಿ ಉತ್ತರಿಸಿದ. ಅಂಗೈಯಲ್ಲಿ ಹಿಡಿದಿದ್ದ ಸಾಧನಾ ಲಿಂಗವನ್ನು ಮತ್ತೆ ಬಲಗೈಗೆ ಕಟ್ಟಿಕೊಂಡು, ಜೋಳಿಗೆಯನ್ನು ಹೆಗಲಿಗೆ ಹಾಕಿಕೊಂಡು, ಬಾಗಿ ಕೈಕೋಲನ್ನೆತ್ತಿಕೊಂಡು ಆ ವ್ಯಾಪಾರಿಯ ಹತ್ತಿರ ಬಂದ.
“ನಾನು ಬನವಾಸಿ ಸೀಮೆಗೆ ಹೋಗಬೇಕು. ಅಲ್ಲಿಂದ ಹತ್ತಿರವಾದೀತೆ…?”
“ನೋಡಿ ಅಯ್ಯನೋರೆ, ನೀವು ಬನವಸೆಗೆ ಹೋಗಬೇಕೆಂದರೆ ಪುಲಿಗೆರೆಗೆ ಹೋಗಿಯೇ ಹೋಗಬೇಕು.”
“ಓ ಹೊಸಬರೇನು..? ಬನ್ನಿ ಬನ್ನಿರಯ್ಯ ನಾವೂನೂವೆ ಬನವಸೆಯ ಮಧುಕೇಶ್ವರನ ಸೇವೆಗೆ ಹೊಂಟವರು” ಹಿಂದಿರುಗಿ ಕೂಗಿ ಕರೆದಳು ಕಣ್ಣಿಲ್ಲದ ಆ ಹಾಡುಗಾರತಿ ಮುದುಕಿ. ಒಳ್ಳೆಯ ರೀತಿಯಲ್ಲಿ ಕುಣಿತ ಕಲಿತು ಬನ್ನಿ, ಮಾದೇವಮ್ಮನ ಮಾತು ಮೀರಿ ನಡೆಯದಿರಿ ಎಂದು ಹೆಣ್ಣುಮಕ್ಕಳಿಗೂ, ಶಾಸ್ತ್ರಕ್ಕೆ ಬದ್ದರಾಗಿ ಕಲಿಕೆ ಇರಲಿ, ಆಕಾರಾದಿಗಳನ್ನು ಸರಿಯಾಗಿ ಮನನ ಮಾಡಿಕೊಂಡು ನುಡಿಸುವುದು, ನುಡಿಯುವುದನ್ನು ಕಲಿಯಬೇಕು ಎಂದು ಗಂಡುಮಕ್ಕಳಿಗೂ ತಿಳಿದಂತೆ ಬುದ್ದಿವಾದ ಹೇಳಿ ತಾಯಿಯರು ಬೀಳ್ಕೊಟ್ಟಾಗ ಒಂದೊಂದಾಗಿ ಕತ್ತೆಗಳು ಮೈಮೇಲಿದ್ದ ಭಾರಕ್ಕೆ ಅನುಸಾರವಾಗಿ ಮೈಕೊಡವಿಕೊಂಡು ಕಾಲುಗಳ ನಿಗಚಿ ಮಂದಡಿಯಿಡುತ್ತಾ ಹೊರಟವು. ಎರಡು ಹರದಾರಿಯ ಊರ ಸೀಮೆಯ ಕಲ್ಲಿನವರೆಗೂ ಬೀಳ್ಕೊಡಲು ಬಂದವರು ಬಂದು, ಅಲ್ಲಿ ಸೀಮೆಗಲ್ಲಿಗೆ ಉಪ್ಪು ಹಾಕಿ, ಎಣ್ಣೆ ಸುರಿದು ಸೂಡಿಯ ಮಲ್ಲಯ್ಯ ದಿನಗಳೆರಡರ ದಾರಿಯುದ್ದಕೂ ನೀನೆ ಕಾಯೋ ತಂದೆ, ಸುಗಮ ದಾರಿಸಾಗಲಿ ಎಂದು ಕಣ್ಮುಚ್ಚಿ ಬೇಡಿಕೊಂಡಾದ ಮೇಲೆ ಕಳಿಸಲು ಬಂದವರು ತಿರುಗಿ ಊರ ದಾರಿ ಹಿಡಿದಾಗ ಕತ್ತೆಗಳು ಕರಿನೆಲದ ಎರಿಮಣ್ಣಿನ ದಾರಿಹಿಡಿದು ಪುಲಿಗೆರೆಯತ್ತ ನಡೆದವು. ಸೂರ್ಯ ನೆತ್ತಿಗೆ ಬಂದಾಗ ದಣಿವಾರಿಸಲು ಬನ್ನಿಗಿಡಗಂಪೆಗಳ ಕೆಳಗೆ ಕೂತು ಉಂಡೆದ್ದರು. ನೆರಳಿಲ್ಲದ ಆ ಕುರುಚಲು ಗಿಡಗಳು ಬಿಟ್ಟರೆ ಅಲ್ಲೊಂದಿಲ್ಲೊಂದು ಬೇಂಯಿನ ಮರ ಕಾಣುತ್ತಿದ್ದವು. ಭೂಮಿಯ ಮಣ್ಣೆಂಬುದು ಬೆಣ್ಣೆಯಂತೆ ನುಣುಪಾಗಿ ತೆರೆಗೆ ಬಂದು ಬಿದ್ದಂತಿತ್ತು. ‘ಕೆಮ್ಮಣ್ಣಿನ ಸೀಮೆ ದಾಟಿದ್ದರೆ ನಾನು ನಡೆಯುತ್ತೇನೆ, ಕರೀ ಮಣ್ಣೊಳಗೆ ನಡೆದರೆ ಕೈಕಾಲಿಗೆ ನೋವು ಬರುವುದಿಲ್ಲ’ ಎಂದು ಮುದುಕಿ ತಾನು ಕುಳಿತಿದ್ದ ಕತ್ತೆಯ ಮೇಲೆ ಮತ್ತೊಬ್ಬಳನ್ನು ಕೂರಿಸಿ ತಾನು ನಡೆಯಲು ಮುಂದಾದಳು. ಚಿನ್ನಾಟವಾಡುತ್ತಿದ್ದ ಹುಲ್ಲೆ ಚಿಗರಿಗಳ ಹಿಂಡು, ಮೊಲ, ಮೋರೆ, ನರಿ-ಕಪಲಿಗಳ ಕಂಡು ಎಳೆಮಕ್ಕಳು ಖುಷಿಗೊಂಬುತ್ತಿದ್ದರೆ ಆ ಮುದುಕಿ ಅವುಗಳ ಕತೆ ಹೇಳುತ್ತ ನಡೆದಳು.
“ಬನವಸೆಗೆ ಹೋಗುವ ಆಸಾಮಿ ಬಂದನೇ…”
“ಆಸಾಮಿ ಅಲ್ಲ ಅಬ್ಬಬ್ಬೆ ಅವರು ಸ್ವಾಮಿ.”
“ಸ್ವಾಮಿ..? ಏನು ವಯ ಅವನದು.”
“ಈಗಿನ್ನೂ ಮೀಸೆ ಮೂಡಿದ ಹರಯ…”
“ಹರಯ..!”
ಆಯಾಸವೆನಿಸಿ ಕತ್ತೆಗಳು ನಡೆಯಲಾರದ ನಡಿಗೆಯಲ್ಲಿ ನಡೆಯತೊಡಗಿದಾಗ ರವಸ್ಟು ನಿಂತು ಹೋದರಾಯ್ತೆಂದು ಕತ್ತೆಗಳ ಧಣಿ ಹೋಪ್ ಹಾಕಿ ನಿಲ್ಲಿಸಿದ. ನಡದು ದಣಿವಾದ ಕೆಲವರು ಅಲ್ಲೆ ಕುಂಡಿಯೂರಿ, ತಂದಿದ್ದ ತುಂಡು ಬೆಲ್ಲವ ತಿಂದು ತತ್ತರಾಣಿ ಎತ್ತಿ ನೀರು ಕುಡಿದರು. ಹಿಂದೆ ಉಳಿದಿದ್ದ ವ್ಯಾಪಾರಿಯ ಬಂಡಿ ಹತ್ತಿರ ಬಂದಾಗ ಯಾಕಿಷ್ಟು ತಡವಾಯ್ತೆಂದು ವಿಚಾರಿಸಲಾಗಿ, ಬಂಡಿಗಾಲಿಗಳು ಹುದುಲೊಳಗೆ ಸಿಕ್ಕಿಕೊಂಡಿದ್ದವೆಂದು ಹೇಳಿದ. ವ್ಯಾಪಾರಿಯ ಮಗ ಮತ್ತು ವಸೂದೀಪ್ಯನ ಮೈಕೈಯೆಲ್ಲ ಹುದಲು ಮೆತ್ತಿಕೊಂಡು ಆಕಾರವೇ ಬದಲಾದದು ಕಂಡು ಹುಡುಗಿಯರು ಕಿಸಕ್ಕನೆ ನಕ್ಕರು. ಮುದುಕಿ ವ್ಯಾಪಾರಿಯನ್ನು ಮಾತಿಗೆಳೆದಳು.
“ಅಯ್ಯಾ ನಿಮ್ಮದು ಏನು ವ್ಯಾಪಾರ..?”
“ಕುಸುಂಬಿ ಕೊಂಡು ಗಾಣಕ್ಕೆ ಹಾಕಿ ಎಣ್ಣೆ ತೆಗೆದು ಮಾರುವ ವ್ಯಾಪಾರ.”
“ಯಾವೂರಾಯ್ತು..?”
“ಸೌರಾಷ್ಟ್ರ ತಾಯಿ.”
“ಜೊತೆಗೆ ಆಳು ಕರೆದುಕೊಂಡು ಬರಬಾರದೇ… ಎಳೆಮಗನನ್ನು ಕರೆದುಕೊಂಡು ಬಂದಿರುವಿ.”
“ತಾಯಿ, ಅವನ ತಾಯಿಯೂ ಜೊತೆಗಿದ್ದಳು. ಮೊನ್ನೆಯ ಚಾತುರ್ಮಾಸದ ಜಡೆಮಳೆಗೆ ಕಸಾರಿಕೆ ಬಂದು ಕಾಲವಾದಳು.”
“ಛೆ ಹಾಗಾಗಬಾರದಿತ್ತು…”
“ಇನ್ನೆಷ್ಟು ದೂರ ಅನ್ನದಗಿರಿ..?”
“ಅಗಾ ಕುಸುಂಬಿಯ ಜಿಡ್ಡು ವಾಸನೆ ತೆಂಕಣ ಗಾಳಿಗೆ ಬೀಸಿ ಬರುತ್ತಿದೆಯಲ್ಲ.. ಇನ್ನೇನು ಅನ್ನದಗಿರಿ ಬಂದೇ ಬಿಟ್ಟಿತು.”
“ಅನ್ನದಗಿರಿ..!” ವಸೂದೀಪ್ಯನ ಹುಬ್ಬೇರಿತು.
ಅಮೃತ ಕಲ್ಲುಗಳಲ್ಲೇ ಗುಡಿ ಗುಂಡಾರ ಕಟ್ಟವರೇ ನನ್ನಪ್ಪ. ಅದೇ ಊರ ಮಂಟಪದ ಮುಂದಿನ ದಾರಿಯ ಕಟ್ಟಕಡೆಯ ಗುಡಿಸಲಲ್ಲಿ ಹುಟ್ಟಿ ಬೆಳೆದವಳು ನಾನು. ನಾನು ಚಿಕ್ಕೋಳಿದ್ದಾಗ ವಣಿಕರು, ಧಣಿಕರು, ಆಚಾರ್ಯರು, ಅವರೊಡನೇ ಕೂಲಿಕಾರರು, ದಂಡಿನವರೂ, ದಳವಾಯಿಗಳೂ ನಮ್ಮ ಊರಿಗೆ ಬರುತ್ತಿದ್ದರು. ಅದು ಸೀಮೆಯ ಊರಾದ್ದರಿಂದ ಅನ್ಯಾತಟಾಕ ಅಂತನೂ ಕರೀತಿದ್ದರು. ದಿನವೂ ಬರುವ ದಾರಿಹೋಕರಿಗಾಗಿ ಅನ್ನದಾನ ನಡೆಸುವ ಊರಾದ್ದರಿಂದ ಅನ್ನದಗಿರಿ ಎಂದರು.
ಆಗ ಮುದುಕಿಯ ಬಚ್ಚಗಣ್ಣುಗಳಿಂದ ನೀರ ಹನಿಗಳು ಉದುರಿದವು.
‘ತಡವಾಯ್ತು ಇರುಳು ಕವಿಯುವದರೊಳಗೆ ಊರು ಸೇರೋಣ’ ಎನ್ನುತ್ತಾ ಮುದುಕಿ ಎದ್ದು ನಿಂತಾಗ ಕುಳಿತವರೆಲ್ಲ ಎದ್ದರು. ಆಗಷ್ಟೇ ರಟ್ಟೆಗೆ ಕಟ್ಟಿದ್ದ ಲಿಂಗವನ್ನು ಬಿಚ್ಚಿ ಬಲಗೈ ಹಸ್ತದ ಮೇಲಿಟ್ಟುಕೊಂಡು ದೃಷ್ಟಿಸುತ್ತ ಕುಳಿತಿದ್ದ ವಸೂದೀಪ್ಯನಿಗೆ ಈ ಕ್ಷಣ ಹೊರಡುವ ಮನಸ್ಸಾಗಲಿಲ್ಲ. ಉಳಿದೆಲ್ಲರೂ ಹೊರಟು ಹೋದರೂ ಆ ವ್ಯಾಪಾರಿ ಮಾತ್ರ ಎತ್ತುಗಳ ಹೆಗಲಿಗೆ ನೊಗ ಕಟ್ಟದೆ ಚಕ್ರಕ್ಕೆ ಹಿಡಿದಿದ್ದ ಮಣ್ಣಹೆಂಟೆ ಬಿಡಿಸುತ್ತ ಅಲ್ಲೇ ಉಳಿದಿದ್ದ. ತಾನು ಆ ಲಿಂಗವ ದೃಷ್ಟಿಸುವುದನ್ನು ಆ ವ್ಯಾಪಾರಿಯ ಮಗ ತದೇಕ ಚಿತ್ತದಿಂದ ನೋಡುತ್ತಿರುವುದು ಗಮನಕ್ಕೆ ಬಂದುದೆ… ಕಣ್ಣರೆಪ್ಪೆಯ ಪಿಳುಕಿಸಿದಾಗ ಕಣ್ತುಂಬಿದ್ದ ನೀರು ಟಳಪ್ಪನೇ ಉದುರಿತು.
“ಅಯ್ಯಾ ಏನದು ಕೈಯೊಳಗಿನ ಹೊಳೆಯುವ ಸಾಧನ.”
“ಇದು ನನ್ನಿಷ್ಟದ ದೈವ ಚಂದ್ರಮೌಳೇಶ.”
“ಶಿವನ ಆಕಾರವಿಲ್ಲದ, ಯಾವ ದೇವರ ಕಲ್ಪನೆಯೂ ಇಲ್ಲದ ಈ ಸಾಧನ ದೇವನೇ.”
“ಹೌದು.”
“ಕಲ್ಲಿನಂತಿದೆಯಲ್ಲ. ಇದು ದೇವನೇ?”
“ನಿನಗಿದು ಕಲ್ಲು. ನನಗಿದು ದೃಷ್ಟಿಯೋಗದಲ್ಲಿ ಕಾಣುವ ದೈವ. ನಿನ್ನ ಹೆಸರೇನು..?”
“ಆದಯ್ಯ… ಈ ದೃಷ್ಟಿಯೋಗದಿಂದ ಲಾಭವೇನು?”
“ಮನಸ್ಸು ನಿಶ್ಚಲಗೊಳ್ಳುವುದು. ಆ ಚಂದ್ರಮೌಳೇಶನೆಂಬ ಗುಹಾವಾಸಿಯ ನೆಲೆ ಅರಿವುದು.”
“ಆ ದೇವರ ನೆಲೆ ಅರಿತು ಆಗುವುದೇನು..? ನಮ್ಮೂರಿನ ಸೋಮನಾಥನು ನಮ್ಮ ಸೌರಾಷ್ಟ್ರದ ದೇವಳದಲ್ಲೇ ಇದ್ದಾನಲ್ಲ…”
“ಹೌದು ಸೋಮೇಶ್ವರ ಅಲ್ಲಿದ್ದಾನೆ. ಆದರೆ ನೀನೀಗ ಎಲ್ಲಿದ್ದೀ…”
“ಇಲ್ಲಿದ್ದೇನೆ ಕಂನಾಡಿನಲ್ಲಿ.”
“ನಿನಗಿಲ್ಲಿ ತಾಪತ್ರಯ ಒದಗಿದಾಗ ಯಾವ ದೇವರನ್ನು ನೆನೆಯುವೆ.”
“ಸೋಮನಾಥನನ್ನ.”
“ಅವನೇಕೆ ಇಲ್ಲಿ ಬಂದು ನಿನ್ನ ತಾಪತ್ರಯ ನೀಗಿಸಬೇಕು.”
“ಸೋಮನಾಥ ಎಲ್ಲೆಲ್ಲಿಯೂ ಇದ್ದಾನೆ.”
“ಎಲ್ಲೆಲ್ಲಿಯೂ ಅಂದರೆ..?”
“ನಾನು ಹೋಗುವ ಎಲ್ಲ ಕಡೆಯಲ್ಲೂ.”
“ಹಾಂ.. ನಾನು ಎನ್ನುವ ಅರಿವಿನೊಳಗೆ ಸೌರಾಷ್ಟ್ರದ ಸೋಮೇಶನು ಇದ್ದಾನಲ್ಲವೇ.. ಆ ಅರಿವಿನ ಕುರುಹು ಈ ನನ್ನಿಷ್ಟದ ಲಿಂಗಯ್ಯ. ಇವನೊಳಗೆ ನಾನು, ನನ್ನೊಳಗೆ ಇವನು ಒಂದಾಗುವ ಪರಿಯ ಧ್ಯಾನವನ್ನು ನಾನು ಈ ದೃಷ್ಟಿಯೋಗದಲ್ಲಿ ಕಾಣುತ್ತಿರುವೆ. ಈ ಲಿಂಗಯ್ಯ ಕನ್ನಡಿಯ ಹಾಗೆ ಫಳಫಳ ಹೊಳೆಯಬೇಕು. ನಿಮ್ಮೂರ ಸೋಮೇಶನಿಗೆ ಯಾವುದರಲ್ಲಿ ಸ್ನಾನಾದಿಗಳನ್ನು ಮಾಡಿಸುವರು,?”
“ಮೇಣ, ಜೇನು, ಹಾಲು, ತುಪ್ಪದೊಳಗೆ…”
“ಹಾಂ ಆ ಪದಾರ್ಥಗಳ ತಿಕ್ಕಿತೊಳೆದಾಗ ಒಂದು ಬಗೆಯ ಕಂತಿ ಬರುವುದಲ್ಲವೇ?”
“ಅಣ್ಣಯ್ಯಾ ನಿಮ್ಮ ಲಿಂಗಕ್ಕೆ ಆ ಬಗೆ ಕಾಂತಿ ಬಂದಿಲ್ಲವೇಕೆ?”
“ಅದು ಹೊಳೆಯುವ ಕಂತಿ, ಕಂತಿ ಈ ಲಿಂಗಕ್ಕೆ ಬರುವ ಮೊದಲು ನಮ್ಮ ಕಣ್ಣುಗಳಿಗೆ ಬರಬೇಕು. ಅಂಥದ್ದೊಂದು ಕಂತಿ ನನ್ನ ಗುರುವಿನ ಕಣ್ಣೊಳಗೆ ಅಡಗಿರುವದನ್ನ ನಾನು ಕಂಡೆ. ಈ ದೇಹವೆಂಬೋ ಗುಹೆಯೊಳಗೆ ಅಡಗಿರಬಹುದಾದ ಅರಿವಿನ ಬೆಳಕನ್ನು ಅರಿಯುವುದಕ್ಕಾಗಿ ನಾನು ಹೊರಟಿದ್ದೇನೆ.”
“ನನಗೂ ಇಂಥದ್ದೊಂದು ಲಿಂಗವ ಮಾಡಿಕೊಡುವಿರೇ…”
“ಆದಯ್ಯ ನೀನಿನ್ನೂ ಸಣ್ಣಹುಡುಗ. ಕಂಡದ್ದೆಲ್ಲದಕ್ಕೂ ಆಸೆ ಮಾಡುವ ವಯಸ್ಸು ಮಾಗಿದಾಗ ತನ್ನಿಂದ ತಾನೇ ನಿನಗೆ ಇದರ ಅರಿವು ಆಗುವುದು. ಅಗೋ ನಿನ್ನಪ್ಪ ಹೊರಡಲು ಮುಂದಾದರು ನಡೆ ಹೋಗೋಣ…”
ಬಾಯೊಳಗೆ ಸುರಿಸುತ್ತಿದ್ದ ಜೊಲ್ಲು ತಹಬದಿಗೆ ಬಂದಾಗ ಆ ಎತ್ತುಗಳ ಹೆಗಲಿಗೆ ವ್ಯಾಪಾರಿ ನೊಗ ಕಟ್ಟಿದ. ದೂರ ಕುಳಿತು ಮಾತಾಡುತ್ತಿದ್ದ ಮಗನನ್ನು, ಸಾಧಕನನ್ನು ಕೂಗಿ ಕರೆದು ಬಂಡಿಗೆ ಹತ್ತಿಸಿಕೊಂಡು ಅನ್ನದಗಿರಿಯತ್ತ ಹೊರಟರು. ಪಾಜಗಟ್ಟೆಯಲ್ಲಿ ಸುಂಕ ಕಟ್ಟಿ ಊರೊಳಗೆ ಹೋದಾಗ ಗಂಟೆ, ಜಾಗಟೆ ನಗಾರಿಗಳ ಸದ್ದಿನೊಂದಿಗೆ ಅಮೃತೇಶನ ಪೂಜೆ ನಡೆದಿತ್ತು. ಅಲ್ಲಿ ಆ ಗುಡಿಯ ಅಂಗಳದಲ್ಲಿ ನೂರಾರು ಜನ ಸತ್ಪುರುಷ ಸಾಧಕರು, ಕೈಲಾಗದವರು, ದಾರಿಹೋಕರು, ದಣಿಕ ವಣಿಕರು, ನಟುವರ ನಾಟ್ಯಾರರು ನೆರೆದಿದ್ದರಾಗಿ ಹೊಸ ನಮೂನೆಯ ವಾತಾವರಣವಿತ್ತು. ಅಂಬಲಿ ಕುಡಿದು ಅಮೃತೇಶನ ಅಂಗಳದಲ್ಲೇ ಬಂದಂತ ದಾರಿಹೋಕರು ದಣಿವಾಗಿ ಮಲಗಿದ್ದರೆ ಕೆಲವು ಸಾಧಕರು ಬೆಂಕಿ ಹೊತ್ತಿಸಿಕೊಂಡು ಸುತ್ತಲೂ ಕುಳಿತು ಶಾಸ್ತ್ರದ ಸರಿದಾರಿಯ ಬಗ್ಗೆ ತತ್ವದ ಮಾತಾಡುತ್ತಿದ್ದರು.
ಮುದುಕಿಯು ತನ್ನ ಸುತ್ತ ಮಕ್ಕಳನ್ನು ಮಲಗಿಸಿಕೊಂಡು “ಮಾದೇವಿ ಅಂತ ನನ್ನ ಹೆಸರು. ಇದೇ ಈ ಗುಡಿಯ ಮುಂದಿನ ದಾರಿಯ ಕಟ್ಟಕಡೆಯ ಗುಡಿಸಿಲಿನಲ್ಲಿ ನಾನು ಹುಟ್ಟಿದವಳು. ನನ್ನ ಅಕ್ಕಂದಿರು, ತಂಗಿಯರು ಇದೇ ಅಂಗಳದಲ್ಲೇ ಆಡಿ ಬೆಳೆದವರು. ಮಾರಿಬೇನೆಗೆ ಅವ್ವ ಮಸಣ ಸೇರಿದಾಗ ಅಪ್ಪ ನನ್ನನ್ನು ಬೆನ್ನ ಮೇಲೆ ಕಾಲು ಮೂಡಿದ್ದ ಒಂದು ಎತ್ತಿಗಾಗಿ ಮೆಣಸಿನ ಕಾಡಿಗೆ ಹೊರಟಿದ್ದ ದಾರಿಹೋಕರಿಗೆ ಮಾರಿದ.. ಅವರು ಯಾವದೋ ರಾಜನ ಮಗನ ಉಳಿಸುವುದಕ್ಕಾಗಿ ನನ್ನ ಕಣ್ಣು ಕಿತ್ತು ರಾಜರಿಗೆ ನೀಡಿದರು. ಒಂದು ಅಂಗ ಊನಾದರೇನು ಇನ್ನುಳಿದ ನಾಲ್ಕು ಅಂಗಗಳು ಇದ್ದಾವಲ್ಲ ಅಂತ ಮುಪ್ಪಾನ ಮುದುಕಿಯೊಬ್ಬಳು ನನ್ನ ಸಾಕಿಕೊಂಡು ಹಾಡುವುದ ಕಲಿಸಿದಳು” ತನ್ನ ನಿಟ್ಟುಸಿರಿನೊಂದಿಗೆ ಬಾಳಬಂಡಿಯ ಕತೆ ಹೇಳುತ್ತಿದ್ದಳು. ಮಕ್ಕಳು ಒಬ್ಬೊಬ್ಬರಾಗಿ ಆಕಳಿಸುತ್ತ ನಿದ್ದೆ ಹೋದರು.
*****
ಅನ್ನದಗಿರಿಯಲ್ಲೊಂದು ದಿನ ಉಳಿದು ಮಾರನೇ ದಿನದ ಬೆಳಗಿನ ಬೆಳ್ಳಿ ಚುಕ್ಕಿ ಮೂಡಿದಾಗ ವಸೂದೀಪ್ಯ ಕಣ್ಣರೆಪ್ಪೆಯನ್ನು ಅಲುಗಿಸದೆ ಲಿಂಗದೊಳಗೆ ಲೀನಗೊಳ್ಳುವ ದೃಷ್ಟಿಯೋಗದಲ್ಲಿ ಮನಸ್ಸು ನಿಲ್ಲಿಸುತ್ತಿದ್ದ. ಕತ್ತೆಗಳ ಯಜಮಾನ ಲಗುಬಗೆಯಿಂದ ಎದ್ದು ಸಂಗಡಿಗರನ್ನು ಏಳಿಸತೊಡಗಿದ. ಇವನ ಈ ಬಗೆಯ ಪೂಜೆಯನ್ನು ಕುತೂಹಲದಿಂದ ನೋಡುತ್ತಿದ್ದ ವ್ಯಾಪಾರಿ ಆದಯ್ಯನ ತಂದೆ ವಸೂದೀಪ್ಯ ಪೂಜೆಯಿಂದೆದ್ದಾಗ- ಇದೇ ಊರಲ್ಲಿ ಒಂದಷ್ಟು ದಿನವಿದ್ದು ಕುಸುಂಬಿ ಸಗಟು ಖರೀದಿಸಿ ಪುಲಿಗೆರೆಗೆ ಬರುವುದಾಗಿ ತಿಳಿಸಿ ವಸೂದೀಪ್ಯನ ಕೈಗೆ ಒಂದೆರಡು ನಾಣ್ಯ ಕೊಡಲು ಬಂದ- ‘ನನಗೆ ನಾಣ್ಯದ ಅಗತ್ಯವೇನಿದೆ, ಬೇಡ’ ಎಂದು ನಿರಾಕರಿಸಿದ.
“ನಿನಗೆ ಅಗತ್ಯವಿರಲಿಕ್ಕಿಲ್ಲ ಆ ಬನವಸೆಗೆ ಹೋಗುವ ದಾರಿ ದುರ್ಗಮ ಕಾನು ನನ್ನಪ್ಪಾ. ಅಲ್ಲಿ ಕಾಡುಪ್ರಾಣಿಗಳ ಹಾವಳಿ, ಇಂದು ಇದ್ದಂತೆ ನಾಳೆಯೂ ಧರೆ ಇದ್ದೀತೆಂದು ಭಾವಿಸಬೇಡ, ಧರೆ ಕೊರೆದು ಹಳ್ಳಗಳು ದಿಕ್ಕನ್ನೇ ಬದಲಿಸಿಕೊಂಡು ಮೈದುಂಬುತ್ತವೆ. ಗುಡ್ಡಗಳು ಕುಸಿದು ಕಾಡಿಗೆ ಕಾಡು, ನಾಡು ಮಣ್ಣ ಅಡಿ ಸೇರುವಂಥ ದಾರಿಗಳ ಹಾಯ್ದು ಬನವಸೆಗೆ ಹೋಗಬೇಕು. ಬಾಡ ಬಂಕೆಯಲ್ಲಿ ದಂಡಿನ ಆಳುಗಳು ಸಿಗುತ್ತಾರೆ ಅವರೇ ನಿನ್ನ ಕರೆದುಕೊಂಡು ಹೋಗಬೇಕು. ಆಗ ಈ ದುಗ್ಗಾಣಿಗಳು ಉಪಯೋಗಕ್ಕೆ ಬಂದಾವು.”
“ನಾಣ್ಯಗಳು ಬೇಡ, ಆ ಮುದುಕಿ ಮತ್ತು ಮಕ್ಕಳ ಜೊತೆಗೂಡಿ ಹೋಗುತ್ತೇನೆ.”
“ಬನವಸೆ ಅನ್ನುವುದು ವಿಸ್ತಾರವಾದ ಕಾಡು ನನ್ನಪ್ಪಾ.. ಅಲ್ಲಿ ದಿಕ್ಕುದಿಕ್ಕುಗಳಿಗೂ ಒಂದೊಂದು ಗುಡಿಗಳುಂಟು, ಒಂದೊಂದು ಬಗೆಯ ಕೌಶಲ ಕಲಿಸುವ ಕುಟೀರಗಳು ಆ ಒಂದೊಂದು ಗುಡಿಗಳಲ್ಲುಂಟು, ಹೊನ್ನಂಗಲದಲ್ಲೊಂದು ಬಗೆಯ ವಿದ್ಯೆ ದೊರೆತರೆ ಉಡುತಡಿಯಲೊಂದು ಬಗೆಯ ಶಾಸ್ತ್ರ ಹೇಳುವರು, ಕೋಟಿಲಿಂಗನ ಮುಖಮಂಟಪದಲ್ಲಿ ಕುದುರೆ ಪಳಗಿಸಿದರೆ ಸ್ವರ್ಣವಲ್ಲಿಯಲ್ಲಿ ಸಂಗೀತಾದಿ ಸಭೆಗಳ ಪಾಠಸಾಲೆ, ಮಧುಕೇಶ್ವರನ ಸಾನಿಧ್ಯದಲ್ಲಿ ತತ್ವಪಂಡಿತರ ತರ್ಕಗಳು ನಡೆದರೆ, ಚಂದ್ರಬಂಡೆಯಲ್ಲಿ ಶಾಕ್ತ, ವಜ್ರದೇಹಿಗಳು ಕಠಿಣ ತಪೋನಿರತರು.. ಆ ಕಾಡಿನ ಏಕಾಂತಕ್ಕೆ ತಕ್ಕನಾದ ಕಲಾಕಾರ ತಪಸ್ವಿಗಳ, ಸಿದ್ಧಿಪುರುಷರ ನಾಡು ಬನವಸೆ.”
“ಅದೊಂದು ಪುರವಲ್ಲವೇ..!”
“ಪುರವೆಂದರೆ ಪುರ, ಸೀಮೆ ಎಂದರೆ ಸೀಮೆ, ನನಗಂತೂ ಬನವಸೆಯೇ ನಿಜದ ಸ್ವರ್ಗ ನೀನು ಅಲ್ಲಿ ಯಾರನ್ನು ಕಾಣಲು ಹೋಗುತ್ತಿದ್ದೀ ಎನ್ನುವುದನ್ನು ಮಾತ್ರ ಮರೆಯದೇ ಹುಡುಕಿಕೋ.. ಆ ನಾಡಿಗೆ ಒಂದು ಕಲಿಯಲು ಹೋದವರು ಮತ್ತೊಂದು ಕಲಿತು ಪ್ರವೀಣರಾಗಿದ್ದಾರೆ. ತೆಗೆದುಕೋ ಈ ನಾಣ್ಯಗಳ ಹೋಗು ಆ ಮುದುಕಿ ಮತ್ತು ಮಕ್ಕಳ ಸಂಗಡ.”
ಅವನ ಪುಟ್ಟ ಮಗ ಆದಯ್ಯ ಬಂಡಿಯೊಳಗೆ ಮಂದನಗೆಯ ಮುಖದಲ್ಲಿ ಕನಸು ಕಾಣುತ್ತಾ ಮಲಗಿದ್ದ. ಮುದುಕಿ ಬಿಸಿಲೇರುವುದರೊಳಗೆ ಪುಲಿಗೆರೆಯ ಬಸದಿ ಸೇರಿ ರವಷ್ಟು ದಣಿವಾರಿಸಿಕೊಂಡು ಸಂಜೆಯೊಳಗೆ ಬಾಡ ಬಂಕೆಯ ಸೇರಿಕೊಳ್ಳಬೇಕು ನಡೆಯಿರಿ ಎನ್ನುತ್ತಾ ಜೊತೆಗಾರರ ಎಚ್ಚರಿಸಿಕೊಂಡಳು.
“ಹೌದು ಬನವಸೆಗೆ ಯಾವ ವಿದ್ಯಯನ್ನ ಹುಡುಕಿಕೊಂಡು ಹೊರಟಿರುವಿರಿ ನನ್ನಪ್ಪಾ.”
“ಯಾವ ವಿದ್ಯೆ..? ನನ್ನೊಳಗಿನ ಅರಿವನ್ನು ತೆರೆದು ತೋರುವ ಗುರುವ ಹಂಬಲಿಸಿ ಹೊರಟಿದ್ದೇನೆ.”
“ಯಾವ ಗುರುವೆಂಬುದಾದರೂ ತಿಳಿದಿದೆಯೇ..?”
“ನಾಗಿಣಿಯಕ್ಕಾ.”
ವ್ಯಾಪಾರಿಯ ಬಳಿ ಹೋಗುತ್ತೇವೆಂದು ಹೇಳಲು ಬಂದಿದ್ದ ಮುದುಕಿ ವಸೂದೀಪ್ಯನ ಮಾತು ಕೇಳಿ ಫಕ್ಕನೆ ನಕ್ಕಳು. ಹಾಗೆ ನಕ್ಕಾಗ ಆಕೆಯ ಹಲ್ಲುಗಳು ಹೊಳೆಯುವ ನಕ್ಷತ್ರಗಳ ಹಾಗೆ ತೋರಿದವು. ಆ ನಗುವಿನೊಂದಿಗೆ ಹೊರಟ ಧ್ವನಿಯೂ ಕೇಳಲು ಆಹ್ಲಾದವೆನಿಸುತ್ತಿತ್ತು. ವ್ಯಾಪಾರಿಗೆ ವಂದಿಸಿ, ‘ಮಗನನ್ನು ನಿನ್ನ ಹಾಗೆಯೇ ಚತುರ ವ್ಯಾಪಾರಿಯನ್ನಾಗಿಸು, ನಿನ್ನ ಹಾಗೆಯೇ ಸೌರಾಷ್ಟ್ರದ ಸೋಮೇಶ್ವರನ ನಿಷ್ಠ ಭಕ್ತನನ್ನಾಗಿಸು, ನಿನಗೂ ನಿನ್ನ ತಾಯಿಯಿಲ್ಲದ ನಿನ್ನ ತಬ್ಬಲಿ ಮಗುವಿಗೂ ಒಳಿತಾಗಲಿ. ನಾವು ಹೊರಡುತ್ತೇವೆ’ ಮುದುಕಿಗೂ ಪ್ರತಿ ವಂದಿಸಿ ವ್ಯಾಪಾರಿ ನಾಣ್ಯ ಕೊಡಲು ಮುಂದಾದಾಗ ‘ಬೇಡವಪ್ಪಾ, ಈ ಹರಯ ಮೀರದ ಸಾಧಕನಿಗೆ ಕೊಟ್ಟಿದ್ದಿಯಲ್ಲ ಅಷ್ಟೆ ಸಾಕು, ನಡಿಯಿರಿ ಸಣ್ಣ ಸ್ವಾಮಿಗಳೇ, ದಾರಿಯ ಸವೆಸುವುದು ಬಹಳ ಇದೆ’ ಎನ್ನುತ್ತ ಆ ಮುದುಕಿ ವಸೂದೀಪ್ಯನ ಕೈಗೆ ತನ್ನ ಗೆಜ್ಜೆಕೋಲಿನ ತುದಿಕೊಟ್ಟು ಮತ್ತೊಂದು ತುದಿಯನ್ನು ತಾನು ಹಿಡಿದು ನಡೆದಳು. ಮುಂದೆ ವಸೂದೀಪ್ಯ ಹಿಂದೆ ಮುದುಕಿಯೂ, ಮುದುಕಿಯ ಹಿಂದೆ ಮಕ್ಕಳೂ ಸಾಲುಗಟ್ಟಿ ನಡೆಯುತ್ತಾ ಹೊತ್ತೆಂಬುದು ಏರಿ ಮಾರುದ್ದ ಬಂದರೂ ಮುದುಕಿ ನಡೆಯುತ್ತಲೇ ಇದ್ದಳು. ಕತ್ತೆಯ ಮೇಲೆ ಕೂರಲು ಜೊತೆಗಾರರು ಎಷ್ಟು ಬಿನ್ನೈಸಿದರೂ ಒಪ್ಪಲೇ ಇಲ್ಲ. ‘ಇದು ನಾನು ಹುಟ್ಟಿದ ನೆಲ, ಇದೇ ಮಣ್ಣಲ್ಲಿ ನಾನು ಆಡಿ ಬೆಳೆದವಳು. ಇಲ್ಲಿ ನಡೆಯುವುದು ನನಗೆ ಹುಮ್ಮಸ್ಸು’ ಎನ್ನುತ್ತ ಸೂರ್ಯ ನೆತ್ತಿಗೇರಿದರು ನಡೆದುಕೊಂಡೇ ಪುಲಿಗೆರೆಯ ಬಸದಿ ಮುಟ್ಟಿದಳು. ಬಸದಿಯ ಮುಂದಲ ಬೇಂಯಿನಗಿಡದ ಕೆಳಗೆ ಮೂರುಕಲ್ಲುಗಳ ಒಲೆ ಹೂಡಿ, ಅಂಬಲಿ ಮಾಡಿಕೊಂಡು ಕುಡಿದು ಸೂರ್ಯನ ತಾಪ ತಗ್ಗುವವರೆಗೂ ಅಲ್ಲೇ ಚಣಕಾಲದ ನಿದ್ದೆಗೈದು ಮತ್ತೆ ನಡೆಯತೊಡಗಿದಾಗ ಮುದುಕಿ ತನ್ನ ಕೈಯೊಳಗಿನ ಗೆಜ್ಜೆಕೋಲನ್ನು ವಸೂದೀಪ್ಯನಿಗೆ ಕೊಟ್ಟು ತಾನು ಕತ್ತೆಯ ಮೇಲೇರಿ ಕುಳಿತಳು.
ಎದುರಾಗುವ ಪ್ರಾಣಿ-ಪಶು-ಪಕ್ಷಿಗಳಿಗೂ ಒಂದೊಂದು ಹಾಡುಗಳಿದ್ದವು. ತೊಡರುವ ಬಳ್ಳಿ, ನಾರುವ ಸಸ್ಯ, ಗಿಡ-ಮರಗಳ ಬಗ್ಗೆಯಲ್ಲಾ ಕತೆಗಳ ಹೇಳುತ್ತಿದ್ದಳು. ಹಳ್ಳ, ತೊರೆ, ಕೆರೆ, ಬಾವಿಗಳಿಗೂ, ಹಾಳುಮಂಟಪಗಳಿಗೂ ಏನಕೇನೋ ಸಂಬಂಧಗಳು ಆಕೆಯ ಕತೆಗಳಲ್ಲಿದ್ದವು. ಅವಳ ಗಂಟಲ ಸ್ವರವನ್ನು ಕೇಳುತ್ತಾ ಅದೇ ಬಗೆಯ ದ್ವನಿಯನ್ನು ಇನ್ನೆಲ್ಲೋ ಯಾವಾಗಲೋ ಕೇಳಿದ್ದೆನಲ್ಲ ಎಂದು ಅವನ ಮನಸ್ಸು ನೆನಪಿನ ಗುಹೆ ಹೊಕ್ಕು ಕೆದಕುತ್ತಲಿತ್ತು. ಅವಳು ಕೊಟ್ಟಿದ್ದ ಗೆಜ್ಜೆಕೋಲಿನ ತುದಿಯಲ್ಲಿ ತನ್ನ ರಟ್ಟೆಗೆ ಕಟ್ಟಲ್ಪಟ್ಟ ದಾರದೆಳೆ ಅಲ್ಲಿಯೂ ಕಟ್ಟಲಾಗಿತ್ತು. ಚಕ್ಕನೇ ಮುದುಕಿಯ ಮುಖ ನೋಡಿದ.
“ಯಾವ ಅನುಮಾನದ ಹುಳ ಹೊಕ್ಕಿತು ಮರಿಸ್ವಾಮಿಗಳೇ?”
“ನಿಮಗೆ ಕಾಣುತ್ತದೆಯೇ!”
“ಯಾವದನ್ನು ಕಾಣಬೇಕೋ ಅದು ಕಾಣಿಸುವುದು. ಕತ್ತಲೊಳಗೂ ಬೆಳಕಿರತದೆ ಸಣ್ಣಸ್ವಾಮಿಗಳೇ. ಹೇಳಿ ಯಾವ ಅನುಮಾನ?”
“ನನ್ನ ಅನುಮಾನ ಕಂಡರೆ, ಮನಸ್ಸಿನಲ್ಲಿ ಮೂಡಿರುವ ಕಲ್ಪನೆಯೂ ತಿಳಿದಿರಬೇಕಲ್ಲ.”
“ಅದೊಂದು ಕೊರೆಯಾಯ್ತು.”
ಮುದುಕಿಯ ನಿಟ್ಟುಸಿರೊಳಗೂ ಒಂದು ಕತೆ ಇದ್ದಂತೆ, ಆ ಒಳಗಿದ್ದ ಕತೆ ಹೊರಗೆಳೆದು ಅಪಾರ ಗಾಳಿಗೆ ತೂರಿಬಿಟ್ಟಳು. ಹೊರಗೆ ಕಾಣಲಾರದವರು ಒಳಗೆ ಕಾಣುವುದನ್ನು ತಿಳಿದಿರುತ್ತಾರೆ. ಲೋಕದ ಬಣ್ಣಗಳ ತಿಳಿದು ಕುರುಡಾದಾಕೆ ಆಕೆ ಹುಟ್ಟುಗುರುಡಿಯಲ್ಲ. ಒಂದರೊಳಗೊಂದು ನುಂಗಿ ಹುಟ್ಟುವ ಬೆಡಗಿನ ಹಾಡನ್ನು ಗುನುಗುನು ಗಂಯಿಗುತ್ತ ತಾನೊಂದು ಲೋಕದ ರಾಣಿ ಎಂಬಂತೆ ಮುಗುಳ್ನಗುತ್ತಿದ್ದಳು. ಆ ತುಟಿದುಂಬಿದ ನಗುವಿನ ಹಿಂದೆ ಹಲ್ಲುಗಳ ನಡುವೆ ಅದ್ಯಾವದೋ ಬಗೆಯ ಮಾಂತ್ರಿಕ ಬೆಳಕು ಅಡಗಿಕೊಂಡಿದ್ದು, ತುಟಿದೆರೆದು ನಕ್ಕರೆ ಆ ಬೆಳಕು ಲೋಕಕ್ಕೆಲ್ಲ ಹರಡಿ ತನ್ನ ಅಸ್ತಿತ್ವವೇ ಅಳಿದು ಹೋಗುವುದಲಾ ಎಂಬ ಗುಟ್ಟುಗುಟ್ಟಾದ ಮುಗುಳ್ನಗೆಯದು. ಕೆಲವೊಮ್ಮೆ ತಿಳಿದ ಜ್ಞಾನಿಗಳೂ ಲೋಕದ ದಡ್ಡತನ ಕಂಡು ನಗುವರೆಂದು ತನ್ನ ಗುರು ಹೇಳಿದ್ದು ನೆನಪಾಯ್ತು.
“ತಿಳಿಯಲು ಬಯಸುವವರ ತಿಳುವಳಿಕೆಗೆ ತಕ್ಕಂತೆ ತಿಳಿದವರ ತತ್ವಜ್ಞಾನ ಅರ್ಥವಾಗುವುದು.”
“ಅಂದರೆ..?”
“ಅಂದರೆ, ಅಷ್ಟೆ. ಒಮ್ಮೆ ಆ ನಮ್ಮಪ್ಪ ಶಿವಪ್ಪನ ಸತಿ ಪಾರೋತಿಯು ಮಕ್ಕಳಾದ ಗಣಪನನ್ನೂ, ಷಣ್ಮುಗಸ್ವಾಮಿಯನ್ನೂ ಕರೆದು ಏನು ಹೇಳಿದಳಪಾ ಅಂದರೆ… ಈ ಮೂಲೋಕವನ್ನು ಇಬ್ಬರೊಳಗೆ ಯಾರು ಮೂರು ಸುತ್ತುಸುತ್ತಿ ಮೊದಲು ಬರುತ್ತೀರೋ ಅವರು ಜಯಶಾಲಿಗಳು ಅಂದಳಂತೆ. ಷಣ್ಮುಗಪ್ಪ ಸುಂಯ್ಯನೇ ತನ್ನ ಸಾವಿರ ಕಣ್ಣುಗಳ ಮಯೂರನನ್ನ ಹತ್ತಿಕೊಂಡು ಭರ್ರಂತ ವಿಶ್ವ ಸುತ್ತೋದಕ್ಕೆ ಹೊರಟೇಬಿಟ್ಟ. ಆದರೆ ಗಣಪ ಹೋದಾನೇ..? ಆ ಡೊಳ್ಳು ಹೊಟ್ಟೆ, ಪುಟಾಣಿ ಮೂಷಿಕನ ಕಟ್ಟಿಕೊಂಡು ಜಗವ ಸುತ್ತಲಾದೀತೆ..! ಅಲ್ಲೇ ತನ್ನ ತಾಯಿತಂದೆಯರನ್ನೇ ಮೂರು ಸುತ್ತುಸುತ್ತಿ, ತಂದೆ ಶಿವಪ್ಪನಿಗೂ ತಾಯಿ ಪಾರೋತಿಗೂ ಸಣಮಾಡಿ ಸುಸ್ತಾಗಿ ಕುಳಿತ. ಮೂಲೋಕಗಳನ್ನು ಸುತ್ತಿಬಂದ ಷಣ್ಮುಗನೂ ತಾಯಿತಂದೆಗೆ ನಮಿಸಿದ. ಇವರಲ್ಲಿ ಯಾರು ಗೆದ್ದರು..?”
“ಲೆಖ್ಖದಲ್ಲಿ ಗಣಪ ಗೆದ್ದ.”
“ಅನುಭವದ ಪ್ರಮಾಣವೊಂದು ಬೇಕಲ್ಲಪಾ ಸಣ್ಣಸ್ವಾಮೇರ.”
“ಆದರೆ ಶಿವ-ಪಾರ್ವತಿಯರೇ ಲೋಕಗಳ ಸೃಷ್ಟಿಸಿದವರು.”
“ಸೃಷ್ಟಿ ಅವರದೇ ಆದರೆ ಅನುಭವ ಪ್ರಮಾಣ ಬೇಕಲ್ಲಪಾ ಸಣ್ಣಸ್ವಾಮೇರಾ ಕತೆಗಳಲ್ಲ. ಶಾಸ್ತ್ರವು ತನ್ನ ತಾನು ಸಮರ್ಥಿಸಲು ಕತೆಗಳ ಕಟ್ಟತ್ತದೆ, ಗೊಡ್ಡುಪುರಾಣದ ತರ್ಕ ಹೇಳುತ್ತದೆ. ಸೃಷ್ಟಿ ಆಧಾರದಲ್ಲಿ ಶಿವ-ಪಾರೋತಿಯರನ್ನೇ ಲೋಕವೆಂದು ಗಣಪ ಭಾವಿಸಿದ. ಆದರೆ ಷಣ್ಮುಗಪ್ಪ ಶಿವನ ಸೃಷ್ಟಿಯ ಲೋಕವನ್ನು ಕಣ್ಣಾರೆ ಕಂಡು ಅನುಭವಿಸಿ ಬಂದ. ತಿಳಿಯಲು ಹಂಬಲಿಸುವವನ ತಿಳುವಳಿಕೆಗೆ ಅನುಗುಣವಾಗಿ ಇಬ್ಬರೂ ತಮ್ಮ ಲೋಕಗಳನ್ನು ಕಂಡರು. ಲೋಕ ಇರುವಂತೆಯೇ ಅರಿಯುವ ಹಂಬಲ ಬೇಕೆನ್ನುವುದು ಪ್ರಮಾಣ. ಆ ಲೋಕವೇ ಇದು ಎಂದು ಹೇಳಲು ಕತೆಕಟ್ಟಿದರೆ ಮುಗಿಯಿತಲ್ಲ. ಇದು ನಿನಗೆ ಅರ್ಥವಾಗದು. ಇದನ್ನ ನನ್ನ ಸಾಕು ತಾಯಿ ಅರಿವಿನ ಬಯಲು ಅಂತಿದ್ದಳು.”
“ಅರಿವಿನ ಬಯಲು!”
“ಆ ಬಯಲು ತಿಳಿಯುವ ಮೊದಲೇ ನನ್ನ ಸಾಕುತಾಯಿ ನನ್ನನ್ನು ತನ್ನ ಅರಿವಿನ ಗುಹೆಯಿಂದ ಬೀಸಿ ಹೊರಗೊಗೆದಳು. ಆದರೆ ಅಕ್ಕನಿಗೆ ಆ ಬಯಲಿನ ನಿಜದ ಅರಿವಾಗಿತ್ತು.”
“ಅಕ್ಕ..?”
“ನಾಗಿಣಿಯಕ್ಕಾ.”
ಮುದುಕಿಯ ಹಾಡು-ಕತೆ ತರ್ಕಗಳ ನಡುವೆ ದಣಿವೆಂಬುದು ಮಾಯವಾಗಿ ಮನಸ್ಸೆಂಬುದು ಇನ್ನಿಲ್ಲದ ವಿಸ್ತಾರದ ಕಲ್ಪನೆಯೊಳಗೆ ಮುಳುಗಿರಲಾಗಿ ಹರದಾರಿ ಕಳೆದು ಯೋಜನಗಳೆರಡು ದಾಟಿ ಬಾಡದ ದಳವಾಯಿಗಳ ವಾಡೆಗೆ ಬಂದು ತಲುಪಿದಾಗ ಕತ್ತಲೆಂಬುದು ಸುತ್ತಲಾವರಿಸಿತ್ತು. ಅನ್ನಛತ್ರದಲ್ಲಿ ಉಂಡು ಮಲಗಿದಾಗಲೂ.. ನಾಗಿಣಿಯಕ್ಕ ಬೇರಿರಲಿಕ್ಕಿಲ್ಲ ಮುದುಕಿ ಬೇರಲ್ಲ ಎಂಬ ಹಳವಂಡದಲ್ಲೇ ವಸೂದೀಪ್ಯ ಕಣ್ಮುಚ್ಚಿದ.
(ಮುಂದುವರಿಯುವುದು)
Comments 7
ಚಂದ್ರಯ್ಯಾ ಬೇಗೂರು
Sep 17, 2025ನಾಗಿಣಿಯಕ್ಕಾ ಇಡೀ ಕತೆಯನ್ನು ತನ್ನ ಗೈರುಹಾಜರಿಯಲ್ಲೇ ಆವರಿಸಿದ್ದಾಳೆ. ಶೈವ ತಂತ್ರದ ಯೋಗಿಣಿಯಾ ಅಥವಾ ಕಾಪಾಲಿಕಳೇ ಅಥವಾ ಬುದ್ಧಿಣಿಯೇ? ಕತೆಯ ಮಿಡಿತ ಮನವನ್ನು ಆವರಿಸಿ ಬಿಡುತ್ತದೆ.
ಜಗನ್ನಾಥ ಸಾಲೋಟಗಿ
Sep 19, 2025ಅನಿಮಿಷರಾದ ವಸೂದೀಪ್ಯನ ಬದುಕಿನ ದಾರಿಗುಂಟ ನಾವೂ ನಡೆಯುತ್ತಿದ್ದೇವೆ ಅಣ್ಣಾ👣
ರವಿ ವಾಲಿ
Sep 21, 2025ಅಲೆಯುತ್ತಿರುವ ವಸೂದೀಪ್ಯನ ಸ್ಥಿತಿ ನೋಡಿದರೆ “ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು…” ಹಾಡು ನೆನಪಾಗುತ್ತಿದೆ.🤔
ಎಮ್. ಚಲಪತಿ
Sep 23, 2025ಅಣ್ಣಾ, ಕತೆಯಲ್ಲಿ ಬರುವ ಒಂದೊಂದು ಪಾತ್ರಗಳೂ ಜೀವಂತಿಕೆಯಿಂದ ತುಂಬಿಕೊಂಡು, ಮನಸ್ಸಿನಲ್ಲಿ ಜಾಗ ಪಡೆಯುತ್ತವೆ. ಈ ಸಲ ಕುರುಡು ಮುದುಕಿಯ ಪಾತ್ರ ಅದ್ಭುತವಾಗಿದೆ… ಆಕೆಯ ಒಳಗಣ್ಣಿನ ಮಾತುಗಳು ಮನ ತೆರೆಯುವಂತಿವೆ.
ಕೆಂಚಪ್ಪ ನಾಯಕ್
Oct 2, 202512ನೇ ಶತಮಾನದ ಅನೂಹ್ಯ ಲೋಕಕ್ಕೆ ಕರೆದೊಯ್ಯುವ ಕತೆಯ ಭಾವ ತಾವಕ್ಕೆ ಮನಸೋಲುತ್ತದೆ.
ಭರತ್ ಕುಮಾರ
Oct 2, 2025ನನಗೆ ಅನಿಮಿಷ ಯೋಗಿಯ ಬಗೆಗೆ ಮೊದಲಿನಿಂದ ತುಂಬಾ ಕುತೂಹಲ. ಅಲ್ಲಮಪ್ರಭುವಿಗೆ ಗುರುವೆಂದರೆ ಸಾಮಾನ್ಯದ ಮಾತಲ್ಲಾ. ಶೈವ ಪರಂಪರೆಯ ಹಠಯೋಗಿ ಇದ್ದಿರಬೇಕೆಂದು ಊಹಿಸಿದ್ದೆ. ನಿಮ್ಮ ಕತೆ ಗಾಢವಾದ ಪರಿಣಾಮ ಬೀರುವ ಹಾಗಿದೆ.
ರಾಜಶೇಖರ ಬಿರಾದಾರ
Oct 2, 2025ಪ್ರಯಾಣದ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ಪುಟ್ಟ ಆದಯ್ಯನಿಗೆ ಅನಿಮಿಷರನ್ನು ಭೇಟಿಯಾಗುವ ಭಾಗ್ಯ! ಮುದುಕಿಯ ಮಾತು, ಸಖ್ಯ, ಒಡನಾಟ ಹುಡುಕಾಟಕ್ಕೆ ಪ್ರೇರಣೆ ಕೊಡುತ್ತವೆ. ಇದನ್ನು tele series ಆಗಿ ತೆಗೆಯುವ ಯೋಚನೆ ಮಾಡಿ.