Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಭ್ರಾಂತಿಯೆಂಬ ತಾಯಿ…
Share:
Articles April 29, 2018 ಕೆ.ಆರ್ ಮಂಗಳಾ

ಭ್ರಾಂತಿಯೆಂಬ ತಾಯಿ…

ನಿಮಗೆ ನೆನಪಿರಬಹುದು. ಅದು ನವೆಂಬರ್ 8, 2000ನೇ ಇಸ್ವಿ. ವಿಶ್ವಖ್ಯಾತಿಯ ಜಾದೂಗಾರ ಪಿ.ಸಿ.ಸರ್ಕಾರ್ (ಜೂ) ನೆರೆದ ಭಾರೀ ಜನಸ್ತೋಮದ ಎದುರು ಹಾಗೂ ಟಿವಿ ಪರದೆಯ ಮುಂದೆ ಎವೆಯಿಕ್ಕದೆ ಕುಳಿತಿದ್ದ ಅಸಂಖ್ಯಾತ ಜನರ ಮುಂದೆ ತಾಜಮಹಲ್ ಅನ್ನು ಎರಡು ನಿಮಿಷಗಳ ಕಾಲ ಮಾಯ ಮಾಡಿದಾಗ ಇಡೀ ಜಗತ್ತೇ ಬೆಕ್ಕಸ ಬೆರಗಾಗಿತ್ತು. ಅಂಥ ಬೃಹತ್ ಸ್ಮಾರಕ ಎಲ್ಲರ ಕಣ್ಮುಂದೆಯೇ ನೋಡ ನೋಡುತ್ತಿದ್ದಂತೆ ಮರೆಯಾಗಿಬಿಡುವುದೆಂದರೆ! ಇದು ನಿಮಗೆ ಸಾಧ್ಯವಾದದ್ದು ಹೇಗೆ ಎಂದು ದಿಗ್ಮೂಢರಾದ ಪತ್ರಕರ್ತರು ಪ್ರಶ್ನಿಸಿದಾಗ, “ಇದು ದೃಷ್ಟಿ ಭ್ರಮೆ ಅಷ್ಟೇ” (ಇಟ್ ಈಸ್ ಜಸ್ಟ್ ಆನ್ ಆಪ್ಟಿಕಲ್ ಇಲ್ಯೂಶನ್) ಎಂದು ಉತ್ತರಿಸಿದ್ದರು ಸರ್ಕಾರ್. ಕಣ್ಕಟ್ಟು ವಿದ್ಯೆಯ ಚಮತ್ಕಾರಕ್ಕೆ ಜಗತ್ತೇ ಬೆಚ್ಚಿ ಬಿದ್ದಿತ್ತು. ಕಾಣುವುದನ್ನು ಕಾಣುತ್ತಿಲ್ಲವೆಂದು ಕೋಟ್ಯಾಂತರ ಕಣ್ಣುಗಳು ಒಟ್ಟಿಗೇ ಸಾಕ್ಷಿ ಹೇಳಿದ್ದವು!

ಭ್ರಮೆ ಅಥವಾ ಭ್ರಾಂತಿ ಎಂದರೆ ಇದ್ದುದನ್ನು ಇಲ್ಲವೆಂದೂ, ಅವಾಸ್ತವವನ್ನು ವಾಸ್ತವವೆಂದೂ ಭಾವಿಸುವುದು. ಜಾದೂಗಾರರು ಇಲ್ಲಿ ಬಳಸಿದ್ದು ತಾತ್ಕಾಲಿಕ ಕಣ್ಕಟ್ಟಿನ ತಂತ್ರ. ಆದರೆ ನಮ್ಮಲ್ಲಿರುವ ಅನೇಕ ವಿಚಾರಗಳು, ಭಾವನೆಗಳು ನಮ್ಮನ್ನು ಸದಾ ಭ್ರಮಾ ಲೋಕದಲ್ಲಿಟ್ಟು ಬದುಕಿನ ಸತ್ಯವನ್ನೇ ಮರೆ ಮಾಡಿಬಿಡುತ್ತವೆ. ನಮಗೇ ತಿಳಿಯದಂತೆ ನಮ್ಮ ಭಾವನೆಗಳನ್ನು, ಮನಸ್ಸನ್ನು ನಿಯಂತ್ರಿಸುವ ಭ್ರಮೆಯ ಬೆನ್ನೇರಿ ಆಯುಷ್ಯ ಪೂರ್ತಿ ಗೊತ್ತು ಗುರಿಯಿಲ್ಲದೆ ದೌಡಾಯಿಸುತ್ತಲೇ ಇರುತ್ತೇವೆ. ಇದಾವ ಕಣ್ಕಟ್ಟಿನಾಟ?
ನಿಜಕ್ಕೂ ಭ್ರಮೆ ಎಂಬುದು ಮಾಯೆಯ (ಮನದ ಮುಂದಣ ಆಸೆ) ಶಿಶುವೇ ಇರಬೇಕು. ಮನುಷ್ಯ ಯಾವುದನ್ನು ಜೀವನದ ಹೆಗ್ಗಳಿಕೆ ಎಂದು ಭಾವಿಸಿದ್ದಾನೋ, ಯಾವ ಪ್ರತಿಷ್ಠೆಗಾಗಿ ಹಪಹಪಿಸುತ್ತಿರುವನೋ, ಯಾವ ಗಳಿಕೆಗಾಗಿ ಜೀವ ತೇಯುವನೋ ಅವು ವಾಸ್ತವದಲ್ಲಿ ಹೆಚ್ಚುಗಾರಿಕೆಯ ಸಂಗತಿಗಳೇ ಅಲ್ಲ. ಆದರೂ ಲೋಕವೇ ಇವುಗಳ ಹಿಂದೆ ಬೀಳುತ್ತದೆ… ಭ್ರಮೆ- ಭ್ರಾಂತಿಗಳಲ್ಲಿ ಗುದ್ದಾಡುತ್ತಾ, ಕಾಲಹರಣ ಮಾಡಿ ವ್ಯರ್ಥವಾಗಿ ಜೀವನ ಮುಗಿಸಿ ಬಿಡುತ್ತದೆ. ಇಂಥವರನ್ನು ಕಂಡೇ, “ಸತ್ಯದ ಹಾದಿ ಅರಿಯದೇ ಹೋದಿರಲ್ಲ” ಎಂದು ಮರುಗುತ್ತಾರೆ ಬಸವಣ್ಣನವರು.
ನಾವು ಬದುಕುತ್ತಿರುವುದು ರಾಗ ದ್ವೇಷಗಳ ಕಲುಷಿತ ವಾತಾವರಣದಲ್ಲಿ. ಲೋಕದ ತುಂಬೆಲ್ಲ ಆವರಿಸಿರುವುದು ಅಹಂಕಾರದ ಹೊಗೆ. ನಮ್ಮ ಹೃದಯದ ಕವಾಟಗಳಿಗೆ ನುಗ್ಗುತ್ತಿರುವುದು ಇದೇ ವಿಷ ಗಾಳಿ. ವರ್ಣರಂಜಿತವಾದ ಆಧುನಿಕ ಜಗತ್ತು ನಮ್ಮ ನಡೆ- ನುಡಿ ಎಲ್ಲದರಲ್ಲೂ ಕೃತಕತೆಯನ್ನು ತಂದೊಡ್ಡಿದೆ. ನಾಲಿಗೆಯು ಹೇಗೆಂದರೆ ಹಾಗೆ ಹೊರಳುತ್ತದೆ, ಮನಸ್ಸು ಕಾಣುವ ಆಕರ್ಷಣೆಗಳಿಗೆಲ್ಲ ಮಾರು ಹೋಗುತ್ತದೆ, ಪರಿಸ್ಥಿತಿಗೆ ತಕ್ಕಂತೆ ಮೈಬಣ್ಣ ಬದಲಾಗುತ್ತದೆ. ನಮ್ಮ ಸುತ್ತಲಿನ ತಂತ್ರಜ್ಞಾನ ನಮ್ಮನ್ನು ಇನ್ನಷ್ಟು ಗೊಂದಲಕ್ಕೆ, ಮತ್ತಷ್ಟು ಆಕರ್ಷಣೆಗಳಿಗೆ ದೂಡುತ್ತಿದೆ. ಇಂದಿನ ಪ್ರಾಪಂಚಿಕ ಬದುಕು ಭ್ರಮೆಗಳನ್ನು ಹಿಡಿಹಿಡಿಯಾಗಿ ಮಾರುತ್ತಿದೆ. ವಸ್ತುಗಳ ಲೋಕದಲ್ಲಿ ಮಾನವನ ಬದುಕು ಬಿಕರಿಗೆ ಇಟ್ಟಂತೆ ಹರಾಜಾಗುತ್ತಿದೆ. ಒಂದು ಕಡೆ ಮಾರುಕಟ್ಟೆಯ ಗಿಮಿಕ್ ಗಳು, ಇನ್ನೊಂದು ಕಡೆ ತಂತ್ರಜ್ಞಾನದ ಆವಿಷ್ಕಾರಗಳು, ಶಿಕ್ಷಣದ ಸ್ಪರ್ಧಾತ್ಮಕ ಮೇಲಾಟಗಳು, ಪರಂಪರೆಯ ಹುಸಿ ಮೌಲ್ಯಗಳು, ಆಧ್ಯಾತ್ಮ ಲೋಕದ ವಹಿವಾಟುಗಳು… ಕಂಪ್ಯೂಟರ್ ಗಳ ಭಯಾನಕ ಕಾಲ್ಪನಿಕ ಆಟಗಳಲ್ಲಿ ಮುಳುಗಿ ಹೋದ ಕೋಟ್ಯಾಂತರ ಮಕ್ಕಳು… ಎಲ್ಲಿ ನೋಡಿದಡಲ್ಲಿ ಭ್ರಮಾಲೋಕದ ವೈಭವ. ದೂರದರ್ಶನ, ಫೇಸ್ ಬುಕ್, ಟ್ವಿಟರ್, ವಾಟ್ಸ್ ಆಪ್ ಗಳು… ಸತ್ಯ ಹಾಗೂ ವಾಸ್ತವ ಜಗತ್ತಿನಿಂದ ಬಲು ದೂರಕ್ಕೆ ಮನಸ್ಸುಗಳನ್ನು ಕೊಂಡೊಯ್ಯುತ್ತವೆ. ರದ್ದಿ ತುಂಬಿಕೊಂಡಿದ್ದೇವೆ, ಮನೆಯಲ್ಲಿ, ಮನಸ್ಸಲ್ಲಿ. ನಮ್ಮದೇ ಎದೆ ಬಡಿತ ಕೇಳಿಸಿಕೊಳ್ಳಲೂ ನಾವು ತಯಾರಿಲ್ಲ. “ತನುವ ಗೆಲಲರಿಯದೆ ಮನವ ಗೆಲಲರಿಯದೆ ಧನವ ಗೆಲಲರಿಯದೆ ಭ್ರಮೆಗೊಂಡಿತ್ತು ಲೋಕವೆಲ್ಲವು” ಎನ್ನುವ ಶರಣರ ಮಾತು ನಮಗೆ ಅಕ್ಷರಶಃ ಒಪ್ಪುತ್ತದೆ.

ಹಾಗಾದರೆ ನಮ್ಮ ಮನಸ್ಸು ಯಾಕೆ ಭ್ರಮೆಗಳನ್ನೇ ಹಾಸಿಕೊಂಡು, ಭ್ರಮೆಗಳನ್ನೇ ಹೊದ್ದುಕೊಂಡು, ಭ್ರಮೆಗಳಲ್ಲಿಯೇ ಮುಳುಗಲು ಪ್ರಚೋದಿಸುತ್ತದೆ? ಇದು ವಿಧಿ ನಿಯಮವೋ, ಅಜ್ಞಾನವೋ?

ವಿಧಿ ನಿಯಮವನ್ನು ಒಪ್ಪದ ಶರಣರು ಭ್ರಮೆಯನ್ನು ನೋಡುವ ರೀತಿ ವಿಭಿನ್ನವಾಗಿದೆ. ಹೆಚ್ಚು ವೈಜ್ಞಾನಿಕವಾಗಿದೆ. ಈ ದೇಹ ನಾನು, ಇದರ ಸುತ್ತ ಕಟ್ಟಿಕೊಂಡ ವಿಷಯಾದಿಗಳ ಜಗತ್ತು ನನ್ನದು, ಇದರಲ್ಲಿ ಶಾಶ್ವತವಾಗಿ ವಿರಮಿಸುತ್ತೇನೆ ಎಂಬ ಬುದ್ಧಿಯೇ ಮನುಷ್ಯನ ಮೂಲ ಸಮಸ್ಯೆ. ಸಂಸಾರ ಸಂಗದಲ್ಲಿ ಹುಟ್ಟಿಕೊಳ್ಳುವ ವ್ಯಾಮೋಹ, ಮಮಕಾರಗಳು ತಾವು ಶಾಶ್ವತವೆಂಬ ಭ್ರಾಂತಿಯನ್ನು ಹುಟ್ಟಿಸುತ್ತವೆ. ತನ್ನ ಸೊಬಗಿನ ತೃಪ್ತಿಯಲ್ಲಿ ಮುಳುಗಿ ಬಿಡುವ ಭ್ರಾಂತಿಯೂ ಶರೀರಕ್ಕಿದೆ. ಭ್ರಾಂತಿಯ ಆವರಣಗಳು ಅಸಂಖ್ಯಾತ. ಭ್ರಮೆಯ ಪರಿಕರಗಳು ಅಗಣಿತ. ಲೋಕದ ಎಲ್ಲ ಬಗೆಯ ನೋವು, ಸಂಕಷ್ಟಗಳಿಗೆ ಕಾರಣವಾಗುವ ಭ್ರಮೆಗೆ ಮೂಲ ಕಾರಣ ಈ ಅಜ್ಞಾನವೇ ಎನ್ನುತ್ತಾರೆ ಬಸವಣ್ಣನವರು.
ಅಜ್ಞಾನದಿಂದ ಹುಟ್ಟಿತ್ತು ಅಹಂ ಮಮತೆ,
ಅಜ್ಞಾನದಿಂದ ಹುಟ್ಟಿತ್ತು ಮನಸ್ಸಂಚಲ,
ಅಜ್ಞಾನದಿಂದ ಹುಟ್ಟಿತ್ತು ಇಂದ್ರಿಯೋದ್ರೇಕ,
ಅಜ್ಞಾನದಿಂದ ಹುಟ್ಟಿತ್ತು ದೇಹಮೋಹ,
ಅಜ್ಞಾನದಿಂದ ಹುಟ್ಟಿತ್ತು ಅತಿಕಾಂಕ್ಷೆ,
ಅಜ್ಞಾನದಿಂದ ಹುಟ್ಟಿತ್ತು ತ್ರಿವಿಧಮಲ,
ಅಜ್ಞಾನದಿಂದ ಹುಟ್ಟಿತ್ತು ಸಂಸಾರ,
ಅಜ್ಞಾನದಿಂದ ಹುಟ್ಟಿತ್ತು ರಾಗದ್ವೇಷ,
ಅಜ್ಞಾನದಿಂದ ಹುಟ್ಟಿತ್ತು ಸರ್ವಪ್ರಪಂಚು,
ಅಜ್ಞಾನದಿಂದ ಹುಟ್ಟಿತ್ತು ಸರ್ವದುಃಖ,
ಕೂಡಲಸಂಗಮದೇವಾ, ಈ ಅಜ್ಞಾನಭ್ರಮೆಯ ಕೆಡಿಸಿದಲ್ಲದೆ
ನಿಮ್ಮನೊಡಗೂಡಬಾರದಯ್ಯಾ.

ಭ್ರಮೆ ಎನ್ನುವುದು ವೈಯಕ್ತಿಕ ಬಯಕೆಗಳಿಗೆ, ಯೋಚನೆಗಳಿಗೆ ನಮ್ಮನ್ನು ನಿರ್ಬಂಧಿಸುತ್ತದೆ. ಅಹಂ ಮಮತೆ, ಮನಸ್ಸಂಚಲ, ಇಂದ್ರಿಯೋದ್ರೇಕ, ದೇಹಮೋಹ, ಅತಿ ಆಕಾಂಕ್ಷೆ, ತ್ರಿವಿಧಮಲ, ಸಂಸಾರ, ರಾಗದ್ವೇಷ, ಇವೆಲ್ಲವೂ ಅಜ್ಞಾನ ಭ್ರಮೆಯ ರೂಪಗಳು. ಈ ಅಜ್ಞಾನದಿಂದ ಹೊರಬರದ ಹೊರತು ನಿಜವಾದ ಸುಖ ದಕ್ಕಲಾರದು, ಬದುಕಿನ ಸ್ಪಷ್ಟತೆ ಗೋಚರಿಸಲಾರದು.

ಇನ್ನು ಮೂಲಭೂತ ತಿಳಿವಳಿಕೆಯಲ್ಲಿಯೂ ನಮ್ಮಲ್ಲಿ ದೋಷವಿದೆ. ವ್ಯಕ್ತಿಗಳನ್ನೇ ಆಗಲಿ, ಸನ್ನಿವೇಶಗಳನ್ನೇ ಆಗಲಿ ನಾವು ಸರಿಯಾಗಿ ಗ್ರಹಿಸಲು ಎಡವುತ್ತೇವೆ. ಬಹುತೇಕರು ನಾನಾ ವಿಷಯಗಳಲ್ಲಿ ಪೂರ್ವಗ್ರಹ ಪೀಡಿತರಾಗಿರುತ್ತಾರೆ. ಕೋಪ, ದ್ವೇಷ, ದುರಾಸೆ, ಕಾಮನೆ ಮತ್ತು ಅವಿದ್ಯೆಗಳ ಹಿನ್ನೆಲೆಯಲ್ಲಿ ಈಗಿನ ಸನ್ನಿವೇಶವನ್ನು ನೋಡುತ್ತಾರೆ. ಪರಿವರ್ತನಾಶೀಲವಾದ ಜಗತ್ತಿನಲ್ಲಿ ಎಲ್ಲವೂ ಬದಲಾಗುತ್ತಿರುತ್ತವೆ, ಆದರೆ ಬದಲಾವಣೆಗಳನ್ನು ಒಪ್ಪಿಕೊಳ್ಳಲು ಮನಸ್ಸು ನಿರಾಕರಿಸುತ್ತಿರುತ್ತದೆ. ಒಬ್ಬ ವ್ಯಕ್ತಿಯ ಅಥವಾ ಯಾವುದೇ ವಿಷಯ ಕುರಿತ ನಮ್ಮ ಧೋರಣೆಗಳು ಹಿಂದಿನಂತೆಯೇ ಇರುತ್ತವೆ. ಇಂಥ ತಪ್ಪು ಗ್ರಹಿಕೆಗಳು ಹಾದಿ ತಪ್ಪಿಸುತ್ತವೆ.

ಸಂವೇದನೆ, ಗ್ರಹಿಕೆ ಮತ್ತು ಭ್ರಮೆಗಳ ನಡುವೆ ವ್ಯತ್ಯಾಸ ತಿಳಿದುಕೊಂಡರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. ಶಬ್ದ, ರೂಪ, ವಾಸನೆ, ಸ್ಪರ್ಶ ಮತ್ತು ರುಚಿಗಳನ್ನು ಮಿದುಳಿಗೆ ಸಂದೇಶ ರವಾನಿಸಿ ಅರ್ಥೈಸಿಕೊಳ್ಳಬಲ್ಲ ಸಂವೇದನಾ ವ್ಯವಸ್ಥೆ ನಮ್ಮ ದೇಹದ ಅಂಗಾಂಗಗಳಿಗಿದೆ. ಮಿದುಳು ಸಂವೇದನೆಗಳನ್ನು ಅರ್ಥೈಸುವ ವಿಧಾನವನ್ನು ‘ಗ್ರಹಣ ಶಕ್ತಿ’ ಎನ್ನುತ್ತೇವೆ. ಆದರೆ ಮಿದುಳು ಯಾವಾಗಲೂ ಒಂದೇ ರೀತಿಯಲ್ಲಿ ಇವುಗಳನ್ನು ಅರ್ಥೈಸುವುದಿಲ್ಲ. ಅದಾಗಲೇ ನಮ್ಮ ಬುದ್ಧಿಯಲ್ಲಿ ಜಾಗ ಪಡೆದ ನಾನಾ ವಿಷಯಗಳೂ ಗ್ರಹಿಕೆಯ ಜೊತೆ ಸೇರಿಕೊಳ್ಳ��ತ್ತವೆ. ಭ್ರಮೆಗಳು ಜಾಗ ಪಡೆದುಕೊಂಡು ಸತ್ಯವನ್ನು ಮರೆಮಾಚುವುದು ಇಲ್ಲಿಯೇ. ಜಾದೂಗಾರ ತನ್ನ ವೀಕ್ಷಕರನ್ನು ಮೆಲ್ಲನೆ ವಾಸ್ತವದಿಂದ ದೂರಕ್ಕೆ ಕರೆದೊಯ್ದಂತೆ ನಾವು ಕೂಡ ಭ್ರಮಾ ಲೋಕದ ಸೆಳೆತಗಳಲ್ಲಿ ಸಿಕ್ಕಿಕೊಂಡು ಸತ್ಯ ಮತ್ತು ವಾಸ್ತವ ಬದುಕಿನಿಂದ ಬಹಳ ದೂರ ಸರಿಯುತ್ತೇವೆ.
ಗ್ರಹಿಕೆಗಳಲ್ಲಿ ಸ್ಪಷ್ಟತೆ ಇಲ್ಲದೆ ಕುಲ, ಛಲ, ರೂಪ, ಯೌವನ, ವಿದ್ಯೆ, ಧನ, ರಾಜ್ಯ ಮತ್ತು ತಪಗಳೆಂಬ ಅಷ್ಟಮದಂಗಳ ಭ್ರಮೆಯಲ್ಲಿ ಸಿಲುಕಿರುವವರ ಪಾಡು “ಅಂಧಕನ ಮುಂದಣ ಬಟ್ಟೆಯಂತೆ, ಹುಚ್ಚಾನೆಯ ಮುಂದಣ ಬ್ಥಿತ್ತಿಯಂತೆ” ಇರುತ್ತದೆ ಎನ್ನುತ್ತಾರೆ ಹೇಮಗಲ್ಲ ಹಂಪ ಶರಣರು. ಕುರುಡನ ಮುಂದಿನ ಹಾದಿ ಎಷ್ಟು ಸೊಗಸಾಗಿ ಇದ್ದರೂ ಆತ ನಿರ್ಭೀಡೆಯಿಂದ ನಡೆಯಲಾರ. ಭ್ರಮೆಗೀಡಾದವರ ಬದುಕೂ ನಿಜವನರಿಯದೆ, ಎದುರಿಗಿದ್ದ ಮಾರ್ಗವನ್ನೂ ಕಾಣದೆ ತಡಕಾಡುತ್ತಿರುತ್ತದೆ. ಅದೇ ರೀತಿ ಹುಚ್ಚಾನೆಯ ಮುಂದೆ ಗೋಡೆ ಇದ್ದರೆ ಏನಾಗುತ್ತದೆ? ಮದವೇರಿದ ಆನೆ ತನ್ನ ತಲೆಯನ್ನು ಗೋಡೆಗೆ ನಿರಂತರವಾಗಿ ಅಪ್ಪಳಿಸಿಕೊಳ್ಳುತ್ತಲೇ ಇರುತ್ತದೆ. ಪರಿಣಾಮ ಭೀಕರ ನೋವಿನಲ್ಲಿ ಸಾಯುವ ಸ್ಥಿತಿ ತಂದುಕೊಳ್ಳುತ್ತದೆ. ದಾರಿ ತಪ್ಪಿಸುವ ಭ್ರಮೆಗಳು ಪ್ರಾಣಕ್ಕೂ ಸಂಚಕಾರ ತಂದೊಡ್ಡಬಲ್ಲವು.

ನಮ್ಮ ಸಂವೇದನೆಗಳ ಜೊತೆಗೆ ವಿಜ್ಞಾನ, ತಂತ್ರಜ್ಞಾನದ ತಿಳಿವಳಿಕೆಯ ನೆರವೂ ಪಡೆದು ವಿಚಾರ ಮಾಡಿದರೂ, ನಾವು ಸತ್ಯದ ಯಾವುದೋ ಒಂದು ಮಗ್ಗಲನ್ನು ಮುಟ್ಟಿರುತ್ತೇವಷ್ಟೇ. ನೈಜ ಜಗತ್ತಿನ ಸಂಪೂರ್ಣ ವಿಸ್ತಾರ ನಮ್ಮ ಗ್ರಹಿಕೆಯಿಂದಾಚೆಗೇ ಉಳಿದು ಬಿಡುತ್ತದೆ. ಲೋಕದ ಅಗಾಧತೆಯೇ ಹಾಗಿದೆ. ನಾವು ಕೇಳಿದ್ದು, ಓದಿದ್ದು, ಕಲಿತದ್ದು ಎಲ್ಲವೂ ಒಬ್ಬರಲ್ಲಾ ಒಬ್ಬರು ಹೇಳಿದ ಅಭಿಪ್ರಾಯಗಳೇ. ಯಾವುದೂ ಪೂರ್ಣ ಸತ್ಯವಾಗಿರಲಾರದು. ಇನ್ನು ನಾವು ನೋಡುವುದು ಕೂಡ ನಮ್ಮ ದೃಷ್ಟಿಕೋನದ ಗ್ರಹಿಕೆಯೇ ಆಗಿರುತ್ತದೆ ವಿನಃ ನೈಜತೆಯನ್ನಲ್ಲ. ಹೀಗಾಗಿ ನಾವು ಯಾವುದನ್ನೂ ಅವು ಇದ್ದ ಹಾಗೆ ನೋಡುವುದಿಲ್ಲ, ನಮಗೆ ಇಷ್ಟವಾದಂತೆ, ನಮ್ಮ ಮನಸ್ಸು ಬಯಸುವಂತೆ ನೋಡುತ್ತೇವೆ. ಶರಣ ಆದಯ್ಯನವರು ಇದನ್ನು ಹೀಗೆ ಹೇಳುತ್ತಾರೆ:
ಕಂಡೆ ಕಾಣೆನೆಂಬುದು ಕಂಗಳ ಭ್ರಮೆ,
ಕೂಡಿದೆನಗಲಿದೆನೆಂಬುದು ಕಾಯ ಭ್ರಮೆ,
ಅರಿದೆ ಮರೆದೆನೆಂಬುದು ಚಿದೋಹಂ ಭ್ರಮೆ,
ಓದು ವೇದಂಗಳ ಜಿನುಗು ಉದುಮನದ ಭ್ರಮೆ,
ಇಹ ಪರಂಗಳನಾಸೆಗೆಯ್ವುದು ಜೀವ ಭ್ರಮೆ,
ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ.

ಕೂಡುವುದು, ಅಗಲುವುದು ದೇಹದ ಭ್ರಮೆ. ಅರಿವು- ಮರೆವುಗಳು ಚಿತ್ತದ (ಮನಸ್ಸಿನ) ಭ್ರಮೆ, ಜೀವದ ವಿಹ್ಲತೆಗಳಿಂದ ಸೃಷ್ಟಿಯಾದ ಕಲ್ಪನೆಗಳು ಇಹ-ಪರಗಳು. ದೇವರು ಕೂಡ ಸಕಲ ಭ್ರಮೆಗಳ ಒಟ್ಟು ರೂಪ ಎನ್ನುತ್ತಾರೆ ಆದಯ್ಯ. ನಮ್ಮ ಯೋಚನೆಗಳು, ನಮ್ಮ ನೋಟಗಳು, ನಮ್ಮ ಭಾವನೆಗಳು, ನಮ್ಮ ಅನಿಸಿಕೆಗಳು ಯಾವುವೂ ಸಂಪೂರ್ಣ ನಿಜದ ನೆಲೆಯ ಮೇಲಿಲ್ಲ. ಹೀಗಿರುವಾಗ ನಾವು ತಿಳಿದುಕೊಂಡದ್ದೇ ಪೂರ್ಣ ಸತ್ಯವೆಂದು ಹೇಳುವುದು ಅದೇ ಅಂತಿಮವೆಂದು ವಾದಿಸುವುದು ಎಷ್ಟರಮಟ್ಟಿಗೆ ಸರಿ?

ದೇವರನ್ನು ಅರಿತವರ, ದಿವ್ಯತೆಯನ್ನು ಅನುಭವಿಸಿದವರ ಸಂಖ್ಯೆ ತೀರಾ ಕಡಿಮೆ. ಆದರೆ ದೇವರ ಬಗ್ಗೆ ತಾವು ಪಾರಂಗತರು ಎಂದು ಹೇಳಿಕೊಳ್ಳುವವರು ಎಲ್ಲೆಡೆ ತುಂಬಿ ಹೋಗಿದ್ದಾರೆ. ಇಂಥವರು ದೊಡ್ಡ ಭ್ರಮಾ ಲೋಕವನ್ನೇ ಸೃಷ್ಟಿಸಬಲ್ಲರು. ಒಂದು ಕಡೆ ಶಾಸ್ತ್ರ ಜ್ಞಾನ, ಮತ್ತೊಂದು ಕಡೆ ಮಾತಿನ ಚಾತುರ್ಯ. ತಮ್ಮ ಭ್ರಾಂತಿಯಲ್ಲಿ ಜನರನ್ನೂ ಮುಳುಗಿಸಬಲ್ಲ ಕಲೆ ಅವರಿಗೆ ಕರಗತವಾಗಿರುತ್ತದೆ. ಅವರ ಬಣ್ಣದ ಮಾತುಗಳಲ್ಲಿ ಅನುಭಾವವೇ ಇರುವುದಿಲ್ಲ. ಆಚಾರ ವಿಚಾರಗಳಲ್ಲಿ ಶುಚಿತ್ವ ಕಾಣುವುದಿಲ್ಲ. ಆದರೆ ಸಾಧನೆ ಸಿದ್ಧಿಗಳ ದೊಡ್ಡ ಯಾದಿಯೇ ಅವರನ್ನು ವರ್ಣಿಸುತ್ತದೆ. ತಮ್ಮನ್ನು ದೇವಮಾನವರೆಂದೋ, ಅವತಾರ ಪುರುಷರೆಂದೋ ತಿಳಿದುಕೊಂಡಿರುವ ಇಂಥವರ ಭ್ರಮೆಯನ್ನು ಬಿಡಿಸುವುದು ಸುಲಭವಲ್ಲ. ಇಂಥ ಭ್ರಮಾಧೀನರನ್ನು ‘ವೇಷಧಾರಿಗಳು’ ಎನ್ನುವ ಅಕ್ಕ, ದೇವರ ಬಗ್ಗೆ ಸ್ಪಷ್ಟತೆಯೇ ಇಲ್ಲದ ಇಂಥವರನ್ನು ಕಂಡರೆ ನಾಚಿಕೆಯಾಗುತ್ತಿದೆ ಎನ್ನುತ್ತಾಳೆ.
ಅಯ್ಯಾ, ಸರ್ವಮೂಲಹಂಕಾರವಿಡಿದು
ಕುಲಭ್ರಮೆ ಛಲಭ್ರಮೆ ಜಾತಿಭ್ರಮೆ,
ನಾಮ ವರ್ಣ ಆಶ್ರಮ ಮತ ಶಾಸ್ತ್ರಭ್ರಮೆ,
ತರ್ಕಭ್ರಮೆ ರಾಜ್ಯಭ್ರಮೆ, ಧನ ಧಾನ್ಯ ಪುತ್ರ ಮಿತ್ರಭ್ರಮೆ,
ಐಶ್ವರ್ಯ ತ್ಯಾಗ ಭೋಗ ಯೋಗಭ್ರಮೆ,
ಕಾಯ ಕರಣ ವಿಷಯಭ್ರಮೆ,
ವಾಯು ಮನ ಭಾವ ಜೀವ ಮೋಹಭ್ರಮೆ,
ನಾಹಂ ಕೋಹಂ ಸೋಹಂ ಮಾಯಾಭ್ರಮೆ ಮೊದಲಾದ
ಬತ್ತೀಸ ಪಾಶಭ್ರಮಿತರಾಗಿ ತೊಳಲುವ ವೇಷಧಾರಿಗಳ ಕಂಡು
ಶಿವಶಕ್ತಿ ಶಿವಭಕ್ತ ಶಿವಪ್ರಸಾದಿ ಶಿವಶರಣ ಶಿವೈಕ್ಯ
ಶಿವಜಂಗಮವೆಂದು ನುಡಿಯಲಾರದೆ ಎನ್ನ ಮನ ನಾಚಿ
ನಿಮ್ಮಡಿಗಬ್ಥಿಮುಖವಾಯಿತ್ತಯ್ಯಾ ಚೆನ್ನಮಲ್ಲಿಕಾರ್ಜುನಾ.

ಎಷ್ಟೆಲ್ಲಾ ತಪ್ಪು ಗ್ರಹಿಕೆಗಳು ನಮ್ಮನ್ನು ದಿಕ್ಕುಗೆಡಿಸಲು ಹೊಂಚು ಹಾಕುತ್ತಿರುತ್ತವೆ ಎನ್ನುವುದನ್ನು ಅಕ್ಕನ ಈ ವಚನ ಹೇಳುತ್ತದೆ. ಒಂದಲ್ಲ, ಎರಡಲ್ಲ, ಮೂವತ್ತೆರಡು ಬಗೆಯ ಭ್ರಾಂತಿಗಳಿಂದ ತುಂಬಿರುವ ಮನುಷ್ಯರನ್ನು ಅಕ್ಕ ಇಲ್ಲಿ ಗುರುತಿಸಿದ್ದಾಳೆ. ಈ ಎಲ್ಲ ಭ್ರಮೆಗಳಿಗೂ ಮೂಲವಾದದ್ದು ಅಹಂಕಾರ ಎಂಬುದು ಅಕ್ಕನ ಅಭಿಮತ.

ನಮ್ಮ ಭಯ ಹಾಗೂ ಅಭದ್ರತೆಗಳಿಗೆ ಬಹುತೇಕ ಭ್ರಮೆಯೇ ಕಾರಣ. ನಮ್ಮ ಆಲೋಚನೆಗಳನ್ನಾಗಲಿ, ಭಾವನೆಗಳನ್ನಾಗಲಿ ವಿವೇಚಿಸಲು ನಾವು ಸೋಲುತ್ತಲೇ ಇರುತ್ತೇವೆ. ನಮ್ಮನ್ನೇ ನಾವು ಸರಿಯಾಗಿ ಅರ್ಥಮಾಡಿಕೊಂಡಿರುವುದಿಲ್ಲ. ಇನ್ನು ನಮ್ಮೊಂದಿಗಿರುವವರ ಬಗ್ಗೆ, ನಮ್ಮ ಸಂಬಂಧಗಳ ಬಗ್ಗೆ ಎಲ್ಲಾ ಗೊತ್ತಿರುವಂತೆ ವರ್ತಿಸುತ್ತೇವೆ. ನಮಗೆ ಎಲ್ಲವೂ ಗೊತ್ತು, ನಾವೇ ಪಂಡಿತರು, ನಮ್ಮದೇ ಅಂತಿಮ ಎಂಬ ಭ್ರಮೆಯಲ್ಲಿರುತ್ತೇವೆ. ಭ್ರಮೆಯೇ ಅಹಂಗೆ ಆಸರೆ. ಅಹಂ ಎನ್ನುವುದು “ಒಡಲಲ್ಲಿ ಹುಟ್ಟಿತ್ತು, ಭ್ರಮೆಯಲ್ಲಿ ಬೆಳೆಯಿತ್ತು” ಎನ್ನುತ್ತಾರೆ ಅಲ್ಲಮರು. ಏನನ್ನೋ ಗ್ರಹಿಸಿ ತೆಗೆದುಕೊಳ್ಳುವ ನಿರ್ಧಾರಗಳು ಎಷ್ಟೋ ಬಾರಿ ಜೀವನ ಪರ್ಯಂತ ಪರಿತಪಿಸುವಂತೆ ಮಾಡುತ್ತವೆ. ಉದಾಹರಣೆಗೆ ಮಳೆಬಿಲ್ಲಿನ ಅಂದಕ್ಕೆ ಮನ ಸೋಲದವರಾರು? ಅದನ್ನು ಹಿಡಿಯಲೆಂದು ಇನ್ನೂ ಹತ್ತಿರ ಹೋದರೆ ಏನಾಗುವುದು? ಮಳೆಬಿಲ್ಲೇ ಮಾಯವಾಗುವುದು. ನಮ್ಮಲ್ಲಿ ಮೂಡುವ ಬಹುತೇಕ ಭಾವನೆಗಳು ಹೀಗೇ. ಕಲ್ಪನೆಗಳು ಹಿತವೆನಿಸುತ್ತವೆ. ಹಿಡಿಯ ಹೋದರೆ ಕಾಣದಾಗುತ್ತವೆ. ಭ್ರಮೆಗಳು ತುಂಬಿದ ಭಾವನೆಗಳು ಹಳ್ಳಹಿಡಿಸುತ್ತವೆ. ಕೇವಲ ಕಲ್ಪನೆಗಳಲ್ಲಿಯೇ ನಾವು ಕಳೆದು ಹೋಗಿರುತ್ತೇವೆ. ಇದನ್ನೇ ಶರಣರು ‘ಭಾವ ಭ್ರಮೆ’ ಎನ್ನುತ್ತಾರೆ.

ಗಾಢ ಭ್ರಮೆಯಲ್ಲಿ ಸಿಲುಕಿದವರಿಗೆ ಅದರ ಕಲ್ಪನೆಯೇ ಇರುವುದಿಲ್ಲ. ಕೆಲವರು ಇರುತ್ತಾರೆ. ಇತ್ತ ಅಜ್ಞಾನಿಗಳೂ ಅಲ್ಲ, ಅತ್ತ ಸುಜ್ಞಾನಿಗಳೂ ಅಲ್ಲ. ಪೂರ್ಣಜ್ಞಾನಿಗಳಲ್ಲದ ಅವರಿಗೆ ನಿಜವನ್ನು ತಿಳಿಯುವ ಬಯಕೆಯೂ ಇರುವುದಿಲ್ಲ. ಅಜ್ಞಾನವೇ ತೊಟ್ಟಿಲಾದಾಗ ಅದರೊಳಗೆ ಮಲಗಿದ ಜ್ಞಾನದ ಶಿಶುವು ಕಣ್ಣು ಬಿಟ್ಟು ನೋಡುವುದೆಂದು? ಭ್ರಮೆಯು ಭ್ರಾಂತಿಯಾಗಿ ಯುಗಯುಗಗಳನ್ನು ಆಳುತ್ತಿರುವ ಅದ್ಭುತ ಚಿತ್ರಣವನ್ನು ಅಲ್ಲಮಪ್ರಭುದೇವರ ವಚನದಲ್ಲಿ ಕಾಣಬಹುದು.
ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ !
ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು.

ಅಜ್ಞಾನದ ಆಶ್ರಯದಲ್ಲಿ ತನ್ನ ಇರುವನ್ನೇ ಮರೆತು ಜ್ಞಾನವೆಂಬ ಶಿಶು ಮಲಗಿದೆ. ಅದು ಎಚ್ಚರಗೊಳ್ಳದಂತೆ ತೊಟ್ಟಿಲಿಗೆ ಹಗ್ಗ ಕಟ್ಟಿ ತೂಗಲಾಗುತ್ತಿದೆ. ಸಕಲ ವೇದ ಶಾಸ್ತ್ರಗಳೇ ಅಜ್ಞಾನ ತೊಟ್ಟಿಲಿನ ನೇಣು. ವೇದಗಳಲ್ಲಿರುವುದೇ ಸತ್ಯ ನಿತ್ಯ, ಶಾಸ್ತ್ರಗಳೇ ಅಂತಿಮ ಎಂದು ಭ್ರಾಂತಿಯೆಂಬ ತಾಯಿ ಹಾಡುವ ಜೋಗುಳ ಜ್ಞಾನವನ್ನು ಎದ್ದೇಳದಂತೆ, ಪ್ರಶ್ನಿಸದಂತೆ ಪೋಷಿಸುತ್ತಿದೆ. ಭ್ರಾಂತಿಯ ಜೋಗುಳ ಎಷ್ಟು ಮತ್ತು ಬರಿಸುತ್ತದೆಂದರೆ ಜ್ಞಾನೋದಯವಾಗದಂತೆ ನೋಡಿಕೊಳ್ಳತ್ತದೆ. ಪೀಳಿಗೆಯಿಂದ ಪೀಳಿಗೆಗೆ ಇವುಗಳನ್ನೇ ಪಠಿಸುತ್ತಾ ಬಂದ ಮನುಷ್ಯನಲ್ಲಿ ‘ಪರಿಶುದ್ಧ ಜ್ಞಾನ’ ಜಾಗೃತವಾಗುವುದು ಯಾವಾಗ? ಅಲ್ಲಮರು ಅದಕ್ಕೂ ಈ ವಚನದಲ್ಲೇ ಉತ್ತರ ಕೊಟ್ಟಿದ್ದಾರೆ. ನೇಣಿನಂತೆ ಜ್ಞಾನವನ್ನು ಅದುಮುತ್ತಿದ್ದ, ಎಂದೋ ರಚಿತವಾದ ವೇದಾದಿ ಶಾಸ್ತ್ರಂಗಳ ಹಗ್ಗ ಹರಿದು ಅಜ್ಞಾನವೆಂಬ ತೊಟ್ಟಿಲು ಮುರಿಯಬೇಕು. ಆಗ ಮಾತ್ರ ನೆತ್ತಿಗೇರಿದ ತಪ್ಪು ಕಲ್ಪನೆಗಳು ಮಾಯವಾಗುತ್ತವೆ, ಅಂಧಾನುಕರಣೆ ನಿಲ್ಲುತ್ತದೆ. ಅನುಭಾವ ಜಾಗೃತವಾಗುತ್ತದೆ. ಮತಿಯ ಮಾಲಿನ್ಯದಿಂದ ಕವಿದ ಭ್ರಮೆಯಿಂದ ಹೊರ ಬಂದ ಜೀವಕ್ಕೆ ‘ಜ್ಞಾನದ ಬೆಳಕು’ ಕಾಣಿಸುತ್ತದೆ.

ಮನುಷ್ಯ ನಿರ್ಮಿಸಿಕೊಂಡ ವ್ಯವಸ್ಥೆಯೊಳಗೆ ಎಷ್ಟೆಲ್ಲಾ ಮೇಲಾಟ, ಕಿತ್ತಾಟಗಳಿವೆ. ಹುಸಿ ಮೌಲ್ಯಗಳು ಜಗತ್ತನ್ನಾಳುತ್ತಿವೆ. ಶರಣರು ತಮ್ಮ ನೂರಾರು ವಚನಗಳಲ್ಲಿ ಭ್ರಮೆಗಳ ಬಗ್ಗೆ ಎಚ್ಚರಿಸುತ್ತಲೇ ಬಂದಿದ್ದಾರೆ. “ಕೋಪ ತಾಪವ ಬಿಟ್ಟು, ಭ್ರಾಂತಿ ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೆ…” ಎನ್ನುತ್ತಾರೆ ಅಲ್ಲಮಪ್ರಭುದೇವರು. ಆಸೆ, ಕಲ್ಪನೆಗಳ ದೊಡ್ಡ ಭ್ರಮಾಲೋಕ ನಮ್ಮೊಳಗೇ ಇದೆ. ಬೇರೆಯವರಿಂದ ಹಂಬಲಿಸುವ ನಿರೀಕ್ಷೆಗಳು, ನಮ್ಮ ಸಾಮರ್ಥ್ಯವನ್ನೇ ಅರಿಯಲಾರದ ದೌರ್ಬಲ್ಯಗಳು… ನಾನೇ ಸರಿ, ಬೇರೆಯವರು ಬದಲಾಗಬೇಕು ಎಂದು ತಳೆಯುವ ಧೋರಣೆಗಳು… ನಮ್ಮನ್ನು ಅರ್ಥಮಾಡಿಕೊಳ್ಳದೇ, ನಮ್ಮ ಸಂಬಂಧಗಳನ್ನು ಅರ್ಥಮಾಡಿಕೊಳ್ಳದೆ ಯಾವುದೋ ಪೂರ್ವಾಗ್ರಹಕ್ಕೆ ಒಳಗಾದ ಮನಸ್ಸಿನ ಲೆಕ್ಕಾಚಾರಗಳನ್ನೊಮ್ಮೆ ನೋಡಿಕೊಳ್ಳಿ. ನಮ್ಮನ್ನು ಲಪಟಾಯಿಸುವ ಭ್ರಮೆಗಳು ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತವೆ. ಮನಸ್ಸಿನಲ್ಲಿ ಹುಟ್ಟುವ ಒಂದು ಚಿಕ್ಕ ಭಾವ ಕೂಡ ಭ್ರಮೆಯ ಪೋಷಣೆಯಲ್ಲಿ ಹೆಮ್ಮರವಾಗಿ ಬೆಳೆಯಬಲ್ಲದು. “ವಾಸ್ತವಕ್ಕಿಂತ ಚಿತ್ತಭ್ರಾಂತಿಯನ್ನು ಕೊಲ್ಲುವುದು ಬಹಳ ಕಷ್ಟಕರ” ಎನ್ನುತ್ತಾಳೆ ಆಂಗ್ಲ ಲೇಖಕಿ ವರ್ಜಿನಿಯಾ ವೂಲ್ಫ್. ವಿಭಿನ್ನ ಭಾವ ವಿಭಾವಗಳಲ್ಲಿ ಮನಸ್ಸು ದಿಕ್ಕು ತಪ್ಪುತ್ತದೆ. ಅರ್ಥವಿಲ್ಲದ ಭ್ರಮೆಗಳಲ್ಲಿ ದಷ್ಟಪುಷ್ಟವಾಗಿ ಬೆಳೆಯುತ್ತದೆ.

ಭ್ರಮೆಗಳಿಂದ ದೂರವಾಗುವುದು ಜೀವನಪರ್ಯಂತ ನಡೆಸುವ ಒಂದು ಸ್ವವಿಮರ್ಶಾ ಪ್ರಕ್ರಿಯೆ. ಸತ್ಯದೊಂದಿಗೆ ಅನುಸಂಧಾನ ನಡೆಸುತ್ತಿದ್ದರೆ ವಾಸ್ತವದ ಸ್ಪಷ್ಟತೆ ಇರುತ್ತದೆ. ಆಗಾಗ ತನ್ನ ಇರುವನ್ನು ಸಾಬೀತು ಮಾಡಲು ಅಹಂ ಎದ್ದೆದ್ದು ನಿಲ್ಲುತ್ತಿರುತ್ತದೆ. ತನ್ನತನವನ್ನು ಕರಗಿಸಿಕೊಳ್ಳುವಲ್ಲಿಯೇ ಭ್ರಮೆಯ ನಿರಸನವಿದೆ. ಮುಖವಾಡಗಳನ್ನು ಕಳಚಿ ಬದುಕುವುದೆಂದರೆ ನೈಜವಾಗಿರುವುದು, ಸಹಜವಾಗಿ ಆ ಮುಗಿಲು, ಈ ಗಿಡ, ಆ ಹೂವಿನಷ್ಟೇ ಸರಳವಾಗಿರುವುದು. ಆಗ ಭ್ರಮಾ ಲೋಕ ಹತ್ತಿರವೂ ಸುಳಿಯದು. ನಂಬಿಕೆ ಎನ್ನುವುದು ಕೂಡ ಮನಸ್ಸಿಗೆ ಬೇಲಿ ಹಾಕುವಂತಿರಬಾರದು. ಅದು ಯಾವುದೇ ನಂಬಿಕೆಯಾಗಿರಲಿ, ಇದೇ ಅಂತಿಮ ಎನ್ನುವಂತಿರಬಾರದು. ಶರಣರು ಹಾಗೆ ಬದುಕಿದರು. ಯಾವುದೇ ಸಿದ್ಧ ಸಿದ್ಧಾಂತಕ್ಕೆ ಅಂಟಿಕೊಳ್ಳಲಿಲ್ಲ. ಅನುಗಾಲವು ಅವರ ಚಿತ್ತ, ಮನಸ್ಸುಗಳು ಅನುಭಾವಕ್ಕೆ ತೆರೆದುಕೊಂಡಿದ್ದವು. ಅವರು ವಾಸ್ತವದ ಕಣ್ಣಿನಿಂದ ಬದುಕನ್ನು ಕಂಡರು. ಹೀಗಾಗಿ ಅವರಲ್ಲಿ ಭ್ರಮೆಗಳು ಹುತ್ತ ಕಟ್ಟಲಿಲ್ಲ. ಮರಿ ಹಾಕಲಿಲ್ಲ. ಭ್ರಮಾ ಲೋಕದ ನೆರಳೂ ಅವರ ಮೈ ಸೋಂಕಿದಂತೆ ಕಾಣುವುದಿಲ್ಲ.

Previous post ಮನೆ ನೋಡಾ ಬಡವರು
ಮನೆ ನೋಡಾ ಬಡವರು
Next post ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ

Related Posts

ಬಸವತತ್ವ ಸಮ್ಮೇಳನ
Share:
Articles

ಬಸವತತ್ವ ಸಮ್ಮೇಳನ

June 10, 2023 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಅನುಭಾವಿ ಅಲ್ಲಮಪ್ರಭುದೇವರು `ಬಸವಣ್ಣ ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು’ ಎಂದು ಅವರ ಗುರುತ್ವವನ್ನು ಗೌರವಿಸಿದ್ದಾರೆ. ಬಸವಣ್ಣನವರು ಎಲ್ಲರಿಗೂ...
ಮಹದೇವ ಭೂಪಾಲ ಮಾರಯ್ಯನಾದದ್ದು…
Share:
Articles

ಮಹದೇವ ಭೂಪಾಲ ಮಾರಯ್ಯನಾದದ್ದು…

March 5, 2019 ಮಹಾದೇವ ಹಡಪದ
ಹಿಮ ಕರಗಿ ನೀರಾಗಿ ಭೋರೆಂದು ಹರಿಯುವ ಕಾಲವದು. ಎಷ್ಟೋ ದಿವಸದ ಮೇಲೆ ಸೂರ್ಯನು ಆಕಾಶದಲ್ಲಿ ಕಾಣಿಸಿಕೊಂಡಾಗ ಇಡೀ ಮಾಂಡವ್ಯಪುರವೇ ಮೈಚಳಿಬಿಟ್ಟು ಓಡಾಡಲು ಶುರುಮಾಡಿತ್ತು. ಆಕಾಶವೇ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ಶರಣ- ಎಂದರೆ…
ಶರಣ- ಎಂದರೆ…
March 6, 2020
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
December 6, 2020
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
Copyright © 2026 Bayalu