ನೀರು ನೀರಡಿಸಿದಾಗ
Share:

ನೀರು ನೀರಡಿಸಿದಾಗ

“ನೀರಡಿಕೆಯನ್ನು ನೀಗಿಸುವುದು ನೀರಿನ ಗುಣಧರ್ಮ. ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಬಾಳಬೇಕಾಗಿ ಬಂದಾಗ, ಆ ನೀರು ನೀರಡಿಕೆಯಿಂದ ಬಳಲಬಹುದು. ನಾನು ಉದ್ದಕ್ಕೂ ಹಾಗೆ ಬಳಲಿದವನು, ಬಾಳಿದವನು.”

ಸಂಶೋಧಕ ಎಂ.ಎಂ ಕಲಬುರ್ಗಿಯವರ ಈ ಮಾತು ಅವರ ಇಡೀ ಬದುಕಿಗೆ ಹಿಡಿದ ಕನ್ನಡಿ.

ಎಂ.ಎಂ.ಕಲಬುರ್ಗಿ ಅವರದು ನಾಡನ್ನು ಗೌರವಿಸುವ, ನುಡಿಯನ್ನು ಪ್ರೀತಿಸುವ, ಪರಂಪರೆಯನ್ನು ಶೋಧಿಸುವ ಮನೋಭಾವ. ವಿಸ್ತೃತ ಓದು, ಆಳವಾದ ಚಿಂತನೆ, ಚರಿತ್ರೆಯ ವಿಶ್ಲೇಷಣೆಯಲ್ಲಿ ಸೂಕ್ಷ್ಮದೃಷ್ಟಿ. ಮೌಲ್ಯ ವಿವೇಚನೆಯಲ್ಲಿ ತೀವ್ರ ಆಸಕ್ತಿ, ಸೃಜನಶೀಲ ಮನಸ್ಸು. ಸಂಪ್ರದಾಯವನ್ನು ಒಪ್ಪದ ನಿಷ್ಠುರಮತಿ. ಸತ್ಯವನ್ನು ಹೆಕ್ಕಿ ತೆಗೆಯುವಲ್ಲಿ ದಣಿವಿಲ್ಲದ ದುಡಿಮೆ. ಹೊಸದನ್ನು ಹುಡುಕುವ ಹಂಬಲ. ಕುತೂಹಲದ ಬೆನ್ನು ಬಿದ್ದರೆ ಮುಗಿಯಿತು, ಅಲ್ಲೊಂದು ನಿಜದ ಹೊಳವು ದಕ್ಕಲೇ ಬೇಕು. ಭಾಷೆ, ವ್ಯಾಕರಣ, ಅಲಂಕಾರ, ಛಂದಸ್ಸುಗಳ ಜೊತೆ ಸಾಹಿತ್ಯ ಸ್ವರೂಪಗಳ ಆಳವಾದ ಜ್ಞಾನ. ಶಾಸನ, ನಿಘಂಟು, ಸಾಹಿತ್ಯ, ಜಾನಪದ, ಸಂಪಾದನೆ, ಪರಿಷ್ಕರಣೆ, ಇತಿಹಾಸ… ಈ ಎಲ್ಲ ಕ್ಷೇತ್ರಗಳಲ್ಲೂ ಹರಡಿಕೊಂಡ ವ್ಯಕ್ತಿತ್ವ. ಮುಕ್ತದೃಷ್ಟಿಗೆ ಅವರು ಅಪ್ಪಟ ನಿದರ್ಶನ.

ನೀರು ನೀರಡಿಸುವ ಸಂದರ್ಭ ಪ್ರಪಂಚಕ್ಕೆ ಹೊಸತಲ್ಲ. ಕಲ್ಲುಮುಳ್ಳುಕೊರಕಲುಗಳಲ್ಲಿ ನುಗ್ಗುತ್ತಾ ಹರಿಯುವ ನದಿಗೆ ಮೈಯೆಲ್ಲಾ ಕಾಲು. ಕಲಬುರ್ಗಿಯವರು ಹುಡುಕಾಟವೇ ತಾವಾದಂತೆ ಹರಿದವರು, ಆಪಾದನೆಗಳನ್ನು ಲೆಕ್ಕಿಸದೆ ನುಗ್ಗಿದವರು, ಟೀಕೆಗಳತ್ತ ತಿರುಗದೆ ಧುಮುಕಿದವರು. ಹಾಗೆ ಹರಿಯುವ, ನುಗ್ಗುವ, ಧುಮುಕುವ ಓಟದಲ್ಲಿ ಕಾಲ ಪ್ರವಾಹಕ್ಕೆ ಸೆಡ್ಡು ಹೊಡೆದು ಹರಿಯುತ್ತಲೇ ಇದ್ದವರು. ಅಭಿವ್ಯಕ್ತಿ ಸ್ವಾತಂತ್ರ್ಯ ಇರುವ ತನಕ ಅವರು ಉಸಿರಾಡುತ್ತಲೇ ಇರುತ್ತಾರೆ, ಸ್ಫೂರ್ತಿಯ ಚಿಲುಮೆಯಂತೆ.

ಸರಳ ವ್ಯಕ್ತಿತ್ವದ ಕಲಬುರ್ಗಿ ಅವರದು ನೇರ ಮಾತು, ಮನಮುಟ್ಟುವ ಬರವಣಿಗೆ. ಗಂಭೀರವಾದ ವಿಷಯಗಳನ್ನು ಜನಪ್ರಿಯ ಶೈಲಿಯಲ್ಲಿ ಓದುಗರಿಗೆ ದಾಟಿಸುವ ಕಲೆಯಲ್ಲಿ ಸಿದ್ಧಹಸ್ತರು.

ವೃತ್ತಿಯಲ್ಲಿ ಬೋಧಕರಾಗಿದ್ದರೂ ಪ್ರವೃತ್ತಿಯಲ್ಲಿ ಸಂಶೋಧಕರಾಗಿದ್ದರು. ಭೂತಕಾಲವನ್ನು ಬೇಧಿಸುತ್ತಾ ವರ್ತಮಾನವನ್ನು ಕಟ್ಟಿಕೊಡುವಲ್ಲಿ ಪರಿಣಿತಿ ಸಾಧಿಸಿದ್ದರು. ನೂರಕ್ಕೂ ಹೆಚ್ಚು ಪ್ರಬುದ್ಧ ಸಂಶೋಧನಾ ಬರಹಗಳು ಇರುವ ಮಾರ್ಗ ಸಂಪುಟಗಳು ಅವರ ವಿದ್ವತ್ತಿಗೆ ಸಾಕ್ಷಿ. ಸಾಮಾನ್ಯವಾಗಿ ಪ್ರಚಲಿತ ನಂಬಿಕೆಗಳಿಗೆ ವಿರುದ್ಧವಾಗಿ ಸಂಭವಿಸುವ ಸಂಶೋಧನೆಗಳು ಮನ್ನಣೆ, ಗೌರವ, ಪ್ರಶಸ್ತಿ ಹೂಮಾಲೆಗಳ ಬದಲು ಬೆಂಕಿಯುಂಡೆಗಳನ್ನು, ಅಗ್ನಿಪರೀಕ್ಷೆಗಳನ್ನೂ ತಂದೊಡ್ಡುತ್ತವೆ. “ಈ ರಾಷ್ಟ್ರದಲ್ಲಿ ಸಂಶೋಧಕ ಆಗಾಗ ಸಣ್ಣ ಸಣ್ಣ ಶಿಲುಬೆಗಳನ್ನು ಏರಬೇಕಾಗುತ್ತದೆ. ಅನೇಕ ಅಗ್ನಿಕುಂಡಗಳನ್ನು ದಾಟಬೇಕಾಗುತ್ತದೆ. ಆದರೆ ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕು ದೊಡ್ಡದೆಂಬ ನನ್ನ ನಂಬಿಕೆ ನನ್ನನ್ನು ಈವರೆಗೆ ಉಳಿಸಿದೆ, ಬೆಳೆಸಿದೆ” ಎಂಬ ಅಚಲ ನಂಬಿಕೆಯಿಂದ ಇದ್ದ ಕಲಬುರ್ಗಿಯವರು ಸರ್ಕಾರ ಕೊಟ್ಟ ರಕ್ಷಣಾ ಕಾವಲಿನ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಆ ವಿಶ್ವಾಸದಲ್ಲೇ ಪಿಸ್ತೂಲಿನ ಗುಂಡಿಗೆ ಹಣೆ ಕೊಟ್ಟಿದ್ದು ವಿಧಿಯ ವಿಪರ್ಯಾಸ.

ಪ್ರಗತಿಪರ ಚಿಂತಕರು, ವಿಚಾರವಾದಿಗಳು ತೀವ್ರ ಒತ್ತಡಕ್ಕೆ ಒಳಗಾಗುವ ಸಂದರ್ಭಗಳು ಪ್ರತಿ ಕಾಲಮಾನದಲ್ಲೂ ನಡೆದಿವೆ. ಇಸ್ಲಾಂ ರಾಷ್ಟ್ರಗಳಲ್ಲಿ ಇಂಥ ದುರಂತಗಳು ಆಗಾಗ ಸಂಭವಿಸುತ್ತಿದ್ದವು.  ಆದರೆ ಈಗ ಎಲ್ಲೆಡೆ ಅದೇ ಪರಿಸ್ಥಿತಿ. ಪ್ರಪಂಚವು ಅಸಹನೆಯನ್ನೇ ಹೊದ್ದುಕೊಂಡಂತೆ ಇಂದು ಅಶಾಂತಿಯ ಕುದಿಯಲ್ಲಿದೆ. ಪತ್ರಕರ್ತರು, ಕಲಾವಿದರು, ವ್ಯಂಗ್ಯಚಿತ್ರಕಾರರು, ಬರಹಗಾರರು, ವಿಚಾರವಾದಿಗಳು, ಪ್ರಗತಿಪರರು ಮುಕ್ತವಾಗಿ ತೆರೆದುಕೊಳ್ಳುವಂತಿಲ್ಲ. ಒಂದು ಬ್ಲಾಗ್ ಬರಹ, ಒಂದೇ ಒಂದು ಮುಕ್ತ ಅಭಿಪ್ರಾಯವುಳ್ಳ ಟ್ವೀಟ್ ಕೂಡ ಟ್ರೋಲ್ ಗೆ ಮತ್ತು ದ್ವೇಷದ ಆಕ್ರಮಣಕ್ಕೆ ಬಲಿಯಾಗುವಷ್ಟು ಸೂಕ್ಷ್ಮ ವಾತಾವರಣ.

ಮೂರು ವರ್ಷಗಳ ಹಿಂದೆ 2015ರ ಜನವರಿ ತಿಂಗಳಲ್ಲಿ ತಮಿಳಿನ ಖ್ಯಾತ ಲೇಖಕರಾದ ಪೆರುಮಾಳ್ ಮುರುಘನ್ ತಮ್ಮ ‘ಮಧೋರಭಂಗನ್’ ಕಾದಂಬರಿಗೆ ಎದುರಾದ ತೀವ್ರ ಟೀಕೆ ಬೆದರಿಕೆಗಳಿಗೆ ಬೇಸತ್ತು ತಮ್ಮ ಫೇಸ್ ಬುಕ್ ಗೋಡೆಯ ಮೇಲೆ, “ಬರಹಗಾರ ಪೆರುಮಾಳ್ ಮುರುಘನ್ ಸತ್ತು ಹೋದ. ಆತ ದೇವರಲ್ಲದ ಕಾರಣ ಪುನರುತ್ಥಾನವಾಗಲಾರ. ಆತನಿಗೆ ಪುನರ್ಜನ್ಮದಲ್ಲೂ ನಂಬಿಕೆ ಇಲ್ಲ. ಇನ್ಮುಂದೆ ಸಾಮಾನ್ಯ ಶಿಕ್ಷಕ ಪಿ.ಮುರುಘನ್ ಹೆಸರಲ್ಲಿ ಬದುಕುತ್ತಾನೆ, ಅವನ ಪಾಡಿಗೆ ಅವನನ್ನು ಬಿಟ್ಟುಬಿಡಿ” ಎಂದು ಬರೆದುಕೊಂಡಿದ್ದರು. ಈ ಘಟನೆ ನಡೆದು ಏಳು ತಿಂಗಳಿಗೆ ಅಂದರೆ ಅದೇ ವರ್ಷ ಪೆರುಮಾಳ್ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಂದು ಹಾಕಿದ ಅಗೋಚರ ಭಯೋತ್ಪಾದಕ ಶಕ್ತಿಗಳು ಕಲಬುರ್ಗಿಯವರನ್ನು ಸ್ವಾಹಾ ಮಾಡಿದ್ದವು.

ಮೂರ್ತಿಪೂಜೆಯ ವಿರುದ್ಧ ಭಾಷಣವೊಂದರಲ್ಲಿ ಮಾತನಾಡಿದ ಕಲಬುರ್ಗಿಯವರ ಮನೆಯ ಮೇಲೆ ಕಲ್ಲು ಎಸೆಯಲಾಯಿತು. ಮೂರ್ತಿ ಪೂಜೆಯ ವಿರುದ್ಧ ಅದುವರೆಗೆ ನಮ್ಮ ಸಮಾಜದಲ್ಲಿ ಯಾರೂ ಮಾತಾಡೇ ಇರಲಿಲ್ಲವೇ? ಅನೇಕಾನೇಕ ಜನ ಇನ್ನೂ ಉಗ್ರವಾಗಿ, ವ್ಯಂಗ್ಯವಾಗಿ ಇದನ್ನು ಮಾತಿನಲ್ಲೂ, ಬರವಣಿಗೆಯಲ್ಲೂ ಖಂಡಿಸಿದ್ದಾರೆ. ಸ್ವತಃ ಅನಂತಮೂರ್ತಿಯವರೇ ಈ ಕುರಿತು ಲಘುವಾಗಿ ಬರೆದಿದ್ದಾರೆ. ಆ ಪ್ರಸಂಗವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದೇ ಈ ಮಹಾದುರಂತಕ್ಕೆ ಕಾರಣ ಏಕಾಯಿತು?

ಕಲಬುರ್ಗಿಯವರು ಹಲವಾರು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ‘ಕವಿರಾಜಮಾರ್ಗ’ದ ಬಗ್ಗೆ, ಹಳಗನ್ನಡ ಕಾವ್ಯ ಪ್ರಕಾರಗಳ ಬಗ್ಗೆ, ಶಾಸನಗಳ ಅಧ್ಯಯನದ ಬಗ್ಗೆ ಬರೆದಾಗ ಸುತ್ತಿಕೊಳ್ಳದ ವಿವಾದಗಳು ಅವರು ಬಸವಣ್ಣನವರ ಬಗ್ಗೆ ಬರೆಯತೊಡಗಿದಾಗ ಹುಟ್ಟಿಕೊಳ್ಳತೊಡಗಿದವು. ವೀರಶೈವ ಇತಿಹಾಸ ಮತ್ತು ಭೂಗೋಲ- ಎಂಬ ಲೇಖನ ಮಹತ್ತರ ಸಂಶೋಧನೆಯೊಂದರ ಮೇಲೆ ಬೆಳಕು ಚೆಲ್ಲುತ್ತದೆ. ತನ್ನದಲ್ಲದ ಶಾಸ್ತ್ರ ಸಂಪ್ರದಾಯ ಮತ್ತು ಆಚಾರಗಳ ಹೊದಿಕೆಯಡಿ ಮುಚ್ಚಿಹೋಗಿದ್ದ ಶರಣ ತತ್ವಗಳನ್ನು ಹೊರತೆಗೆದು ತೋರಿಸುವ ಮೂಲಕ ತಮ್ಮದೇ ಧರ್ಮದ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಅವರು ಗುರಿಯಾಗಬೇಕಾಯಿತು. “ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕು ದೊಡ್ಡದು” ಎಂದು ಹೊರಟ ಅವರ ಸಂಶೋಧನೆಯ ಜಾಡು  ಲಿಂಗಾಯತಕ್ಕೆ ಕಿಲುಬಿನಂತೆ ಅಂಟಿಕೊಂಡ ವೀರಶೈವ ಪದವನ್ನು ಕಾವ್ಯ, ಶಾಸ್ತ್ರ ಮತ್ತು ಶಾಸನಗಳ ಆಧಾರದಿಂದ ತರ್ಕಬದ್ಧವಾಗಿ ಬೇರ್ಪಡಿಸುವಲ್ಲಿ ಮಹತ್ತರ ಪಾತ್ರ ವಹಿಸಿತು. ಬಸವೋತ್ತರ ಕಾಲದ ಈ ಹೆಸರಿಗೆ (ವೀರಶೈವ) ಪ್ರಾಚೀನತೆ ಕಲ್ಪಿಸಲು ನಡೆದ ಐತಿಹಾಸಿಕ ಸತ್ಯಗಳನ್ನು, ಅದನ್ನು ವ್ಯವಸ್ಥಿತವಾಗಿ ಚಲಾವಣೆಗೆ ತರಲು ನಡೆಸಿದ ಹುನ್ನಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಆ ಮೂಲಕ ಲಿಂಗಾಯತ ಸ್ವತಂತ್ರ ಧರ್ಮ ಎಂಬುದಕ್ಕೆ ಭದ್ರ ಬುನಾದಿ ಹಾಕಿದರು. ಕಾಲ ಬುಡದಲ್ಲಿ ಹತ್ತಿದ ಬೆಂಕಿ ಎದೆಯ ತನಕ ಹಬ್ಬಿತ್ತು. ಆದರೂ ಅವರು ಧೃತಿಗೆಡಲಿಲ್ಲ.

ಹಲವಾರು ವಿಚಾರಧಾರೆಗಳ, ಅನುಭಾವಗಳ ಸೆಲೆಯ ಮುಕ್ತ ಪರಂಪರೆಯ ಇತಿಹಾಸ ಭಾರತದ್ದು. ವಿಭಿನ್ನ ವಿಚಾರಧಾರೆಗಳ ನಡುವೆ ಸ್ವೀಕಾರ- ಸಂಯೋಜನೆಗಳಲ್ಲಿ ಸಂಸ್ಕೃತಿಯನ್ನು ಹಿಗ್ಗಿಸಿಕೊಂಡವರು ಭಾರತೀಯರು. ಬುದ್ಧ, ಬಸವ, ದಾಸರು, ನಾರಾಯಣಗುರು, ಗಾಂಧಿ, ಅಂಬೇಡ್ಕರ್ ಇನ್ನೂ ಅನೇಕರು ತಮ್ಮ ತಮ್ಮ ವಿಚಾರಗಳನ್ನು ಪರಂಪರೆಗೆ ಪೋಣಿಸಿದರು. ಅಮಾನವೀಯವಾದುದನ್ನು ಖಂಡಿಸಿದರು. ಈ ಸಾಮರಸ್ಯದ ಜೊತೆಯಲ್ಲೇ ತಾತ್ವಿಕ ಮುಕ್ತತೆಯನ್ನು ದೌರ್ಬಲ್ಯವೆಂದು ಪರಿಗಣಿಸಿದ ಮೂಲಭೂತವಾದದ ಕುದಿಯೂ ಪರಂಪರೆಯೊಂದಿಗೆ ಸೇರಿಕೊಂಡಿತು. ಆ ಮೂಲಭೂತವಾದಕ್ಕೆ ಶ್ರೇಷ್ಠತೆಯ ವ್ಯಸನ. ಸಮಾಜದ ಮೇಲೆ ತನ್ನ ಹಿಂದಿನ ಪಾರಮ್ಯವನ್ನು, ಯಜಮಾನಿಕೆಯನ್ನು ಉಳಿಸಿಕೊಳ್ಳುವ ಹಠ.

ಭಾರತದ ಪ್ರಧಾನ ಸಂಪ್ರದಾಯದ ಬೇರುಗಳನ್ನು ಅಲುಗಾಡಿಸಲು ಕೈ ಹಾಕಿದವರೆಲ್ಲ ಹೀಗೆ ಸಾವಿಗೆ ಗುರಿಯಾಗಿದ್ದಾರೆ. ತಾವೊಬ್ಬ ಅಪ್ಪಟ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದ ಗಾಂಧೀಜಿ ಕೂಡ ಹಿಂದೂವಾದಿಯಿಂದಲೇ ಹತ್ಯೆಗೊಳಗಾದ ಸೂಕ್ಷ್ಮತೆಯನ್ನು ಗಮನಿಸಬೇಕು. “ಹಿಂದೂ ಸಮಾಜದ ಪರಿಧಿ ಬಿಂದುವಲ್ಲಿದ್ದವರನ್ನು ಅದರ ಮಧ್ಯ ಕೇಂದ್ರಕ್ಕೆ ತರುವ ಮೂಲಕ ಗಾಂಧಿ ಭಾರತೀಯ ಸಮಾಜದ ಮೂಲ ಚಹರೆಯನ್ನೇ ಬದಲಿಸಿ ಬಿಡುವ ಭಯ ಹುಟ್ಟಿಸಿದ್ದು ಅವರ ಹತ್ಯೆಗೆ ಮುಖ್ಯ ಕಾರಣವಾಯಿತು” ಎಂದು ಬರೆಯುತ್ತಾರೆ ಖ್ಯಾತ ಚಿಂತಕ ಡಾ. ಅಶಿಶ್ ನಂದಿ.

ಧರ್ಮದ ಅಫೀಮು ಏರಿಸಿಕೊಂಡ ಮೂಲಭೂತವಾದಿಗಳು ಜಗತ್ತಿನ ತುಂಬಾ ಎಲ್ಲಾ ಧರ್ಮಗಳಲ್ಲೂ ಇದ್ದಾರೆ. ಸತ್ಯದ ಪ್ರತಿಪಾದನೆಯಾದಾಗಲೆಲ್ಲಾ ತಮ್ಮ ನಂಬಿಕೆಗೆ ನೋವಾಯಿತು ಎಂಬ ಕಾರಣಕ್ಕೆ ಕೈಗೆ ಹತ್ಯಾರಗಳನ್ನು ಎತ್ತಿಕೊಳ್ಳುತ್ತಾರೆ. ಹಿಂದೆಮುಂದೆ ನೋಡದೆ ಎಗರಿ ಬೀಳುತ್ತಾರೆ. ಶಾಂತಿ, ಪ್ರೀತಿಯ ಸಂದೇಶ ಹೊತ್ತ ಕ್ರಿಶ್ಚಿಯನ್ನರು ಧರ್ಮದ ಕಾರಣವಾಗಿಯೇ ಇತಿಹಾಸದುದ್ದಕ್ಕೂ ರಕ್ತ ಹರಿಸಿದ್ದಾರೆ. ಇಸ್ಲಾಂ ಹೆಸರಲ್ಲೂ ಬೆಚ್ಚಿ ಬೀಳಿಸುವ ಹತ್ಯಾಕಾಂಡಗಳು ನಡೆಯುತ್ತಿವೆ.

ಕಲಬುರ್ಗಿಯವರ ಹತ್ಯೆಯ ಹಿಂದಿನ ಅಸಹನೆಯ ಕ್ರೌರ್ಯಕ್ಕೆ ಆಳವಾದ ಐತಿಹಾಸಿಕ ಬೇರುಗಳಿವೆ. ಇವುಗಳ ಮೂಲ ಹುಡುಕುತ್ತಾ ಬುದ್ಧ, ಬಸವ, ದಯಾನಂದ ಸರಸ್ವತಿಯವರ ಕಾಲಕ್ಕೆ ಹೋಗುವುದು ಬೇಡ. ತೀರಾ ಈಚಿನ ಗಾಂಧೀಜಿಯ ಹತ್ಯೆಯನ್ನುಸೂಕ್ಷ್ಮವಾಗಿ ನೋಡಿದಲ್ಲಿಇದರ ಸಂಕೀರ್ಣತೆಯನ್ನು  ಅರಿಯಬಹುದು.

ಯಾವುದೇ ಸಂಸ್ಕೃತಿ ಇರಲಿ ಅದು ಬದುಕಿನಲ್ಲಿ ಸಹಜವಾಗಿ ಸಂಭವಿಸಿ ಪರಂಪರೆಯ ರೂಪದಲ್ಲಿ ಮುನ್ನಡೆಯುವಂಥದು. ಸಂಸ್ಕೃತಿಯು ಪ್ರಚಾರವಾಗಿ, ಭಾಷಣರೂಪ ಪಡೆದಾಗ ಅದರ ವಾರಸುದಾರರು ಹುಟ್ಟಿಕೊಳ್ಳುತ್ತಾರೆ. ಸಾಂಸ್ಕೃತಿಕ ವಾರಸುದಾರಿಕೆಯನ್ನು ಹೊತ್ತುಕೊಂಡ ಹೆಗಲುಗಳು ಉಗ್ರರೂಪ ತಾಳುತ್ತವೆ. ದಾಖಲೆಗಳ ಪ್ರಕಾರ ಗಾಂಧೀಜಿಯನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ ಮತ್ತು ಆತನ ಸಹಚರ ಆಪ್ಟೆ ಸುಸಂಸ್ಕೃತ ಹಿನ್ನೆಲೆಯುಳ್ಳವರು. ಸೌಮ್ಯ ಸ್ವಭಾವದ ಉತ್ಸಾಹಿ ಯುವಕರು. ಗಾಂಧಿ ಹತ್ಯೆಗೈದ ಗೋಡ್ಸೆ ಮುಖದಲ್ಲಿ ಪಶ್ಚಾತ್ತಾಪದ ಸಣ್ಣ ಎಳೆಯೂ ಇರಲಿಲ್ಲ. ಧರ್ಮದ ತನ್ನ ವಾರಸುದಾರಿಕೆಗೆ ಗಾಂಧಿ ರೂಪದಲ್ಲಿ ಒದಗಿದ ಆಪತ್ತನ್ನು ತಾನೇ ತೊಡೆದು ಹಾಕಿದ ಆತ್ಮತೃಪ್ತಿ ಇತ್ತು. ಧರ್ಮದ ಮತ್ತು ಏರಿದರೆ ಅದು ಅಂಧತೆಯ ಅಪರಾವತಾರಗಳನ್ನು ತಾಳುತ್ತದೆ. ಈ ದಿನಗಳಲ್ಲಿ ಆ ಅಪರಾವತಾರದ ಮನಸ್ಸುಗಳು ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ ಮತ್ತು ಗೌರಿಯವರಂಥ ಚಿಂತಕರನ್ನು ಬಲಿತೆಗೆದುಕೊಳ್ಳುತ್ತವೆ.

ಇದೇ ಆಗಸ್ಟ್ 30ಕ್ಕೆ ಕಲಬುರ್ಗಿಯವರು ಹತ್ಯೆಯಾಗಿ ಮೂರು ವರ್ಷ, ಗೌರಿ ಹತ್ಯೆಯಾಗಿ ಸೆಪ್ಟೆಂಬರ್ 5ಕ್ಕೆ ಒಂದು ವರ್ಷ. ಎಚ್ಚರಿಕೆಯ ಗಂಟೆಯಾಗಿ ಈ ವಾರವನ್ನು “ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ”ವನ್ನಾಗಿ ಆಚರಿಸಲಾಗುತ್ತಿದೆ. ಸತ್ಯದ ಬೆಳಕನ್ನು ಹಿಡಿಯಲೆತ್ನಿಸುವ ಮನಸ್ಸುಗಳಿಗೆ ಕಾಲ ಬುಡದಲ್ಲಿ ಹತ್ತಿದ ಬೆಂಕಿ ಇಡೀ ಶರೀರವನ್ನೇ ಆವರಿಸಿಕೊಳ್ಳುವುದು ಗಮನಕ್ಕೇ ಬರುವುದಿಲ್ಲ. ಕ್ರೌರ್ಯಕ್ಕೆ ಕ್ರೌರ್ಯ ಉತ್ತರವಲ್ಲ. ದ್ವೇಷವನ್ನು ಪ್ರೀತಿಯಿಂದ ಗೆಲ್ಲಲು ಕಲಿಸುವ ಸಂಸ್ಕೃತಿ ನಮ್ಮದು. ಆದರೆ ಜಗದ ದಾಹ ತಣಿಸುವ ನೀರೇ ನೀರಡಿಸಿ ನಿಂತಾಗ ಪ್ರಕೃತಿ ಕೂಡ ಅಸಹಾಯಕತೆಯಿಂದ ಕೈ ಚೆಲ್ಲುತ್ತದೆ. ಆಗ ದುರಂತಗಳು ಸಂಭವಿಸುತ್ತವೆ.

ಕೃಪೆ: ಸಂಯುಕ್ತ ಕರ್ನಾಟಕ

Comments 7

  1. gangadhara Navale
    Sep 6, 2018 Reply

    Akka, very good article. It gave the overall situation of the society.

  2. ಡಾ.ಪಂಚಾಕ್ಷರಿ ಹಳೇಬೀಡು
    Sep 8, 2018 Reply

    ಉತ್ತಮ ಶೀರ್ಷಿಕೆಯೊಂದಿಗೆ ಅತ್ಯುತ್ತಮ ಲೇಖನ.

  3. Vinay Kanchikere
    Sep 9, 2018 Reply

    ಚಿಂತಕ ಆಶಿಶ್ ನಂದಿ ಗಾಂಧಿ ಬಗ್ಗೆ ಹೆಳಿದ ಮಾತುಗಳು ಸಂಪೂರ್ಣ ಸತ್ಯ. ನೂರಕ್ಕೆ ನೂರು. ಅದೇ ಕಾರಣ ಕಲಬುರ್ಗಿ ಅವರನ್ನು ಬಲಿ ತೆಗೆದುಕೊಂಡಿದ್ದು ಎನ್ನುವಲ್ಲಿ ಸಂದೇಹವೇ ಇಲ್ಲ. ಎಲ್ಲರೂ ಇದರ ಮರ್ಮವನ್ನ ತಿಳಿದುಕೊಳ್ಳಬೇಕು. ಅತ್ಯುತ್ತಮ ಲೇಖನ ಮೇಡಂ.

  4. akkamma katagere
    Sep 16, 2018 Reply

    ಕಲಬುರ್ಗಿಯವರ ಭಾಷಣ ಕೇಳಿದ್ದೆ, ಲೇಖನಗಳನ್ನು ಓದಿದ್ದೆ, ಅವರು ಬಹಳ ಪ್ರಾಮಾಣಿಕರು, ತಮ್ಮ ವಿಚಾರಗಳಲ್ಲಿ, ಬದುಕಿನಲ್ಲಿ ಹೆಸರಾಗಿದ್ದವರು. ನಿನ್ನ ಬರವಣಿಗೆ ಚೆನ್ನಾಗಿದೆ, ಇಂದಿನ ಪರಿಸ್ಥಿತಿಯನ್ನು ತೋರಿಸುತ್ತದೆ.

  5. Jahnavi Naik
    Sep 19, 2018 Reply

    ಅಕ್ಕಾ, ಸುಂದರವಾದ ಲೇಖನ. ಕಲಬುರ್ಗಿಯವರ ಹತ್ಯೆಯ ಹಿನ್ನೆಲೆ ಓದುತ್ತಾ ಕಣ್ಣು ಮಂಜಾದವು.

  6. shobhadevi
    Sep 19, 2018 Reply

    ಅವಸರವಸರವಾಗಿ ಓದಿ ಮುಗಿಸಿದೆ, ಬಹಳ ಚೆನ್ನಾಗಿದೆ, ಮತ್ತೊಮ್ಮೆ ಓದಿ ವಿವರವಾಗಿ ತಿಳಿಸುವೆ.

  7. dr. Malleshappa Pattar
    Sep 25, 2018 Reply

    ಸ್ವೀಕಾರ- ಸಂಯೋಜನೆಗಳಲ್ಲಿ ಸಂಸ್ಕೃತಿಯನ್ನು ಹಿಗ್ಗಿಸಿಕೊಂಡ ಭಾರತೀಯರಿಗೆ ಈಗ ಏನಾಗಿದೆ? ಕಲಬುರ್ಗಿಯವರನ್ನು ಬಲಿ ತೆಗೆದುಕೊಂಡ ಮನಸ್ಸುಗಳು ನಮ್ಮ ನಡುವೆ, ನಮ್ಮಂತೆ ಇರುವುದು ಗಾಬರಿ ಹುಟ್ಟಿಸುವ ಬೆಳವಣಿಗೆ. ಅರ್ಥಪೂರ್ಣ ಲೇಖನ.

Leave a Reply to ಡಾ.ಪಂಚಾಕ್ಷರಿ ಹಳೇಬೀಡು Cancel reply

Your email address will not be published. Required fields are marked *