Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿನಗೂ ನನಗೂ ಒಂದೇ ನಿಜ
Share:
Articles January 15, 2026 ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ

ನಿನಗೂ ನನಗೂ ಒಂದೇ ನಿಜ

ಭಯ-ರಕ್ಷಣೆ

ಅರಿವಿನರಿತವ ಕೆಡಿಸಿತ್ತು ಬಡತನವೆಂಬ ರಾಹು
ಉಳ್ಳವನ ಉಳುವೆಯ ಕೆಡಿಸಿತ್ತು ಮೋಹವೆಂಬ ರಾಹು
ಕಾಬವನ ಕಾಣಿಕೆಯ ಕೆಡಿಸಿತ್ತು ಕಾಮವೆಂಬ ಕತ್ತಲೆ
ಎನ್ನ ಮನದ ಭಯಕ್ಕಂಜಿ ನಿಮ್ಮ ಮೊರೆಹೊಕ್ಕೆ ಕೂಡಲಸಂಗಮದೇವಾ.

[ಅಱಿತ=ತಿಳಿವಳಿಕೆ, ಉಳುವೆ=ಉಳಿತಾಯ [?], ಕಾಬವನ=ಕಾಣುವವನ, ಕಾಣಿಕೆ= ಕಾಣ್ಕೆ, ದರ್ಶನ]

ಇದು ಬಸವಣ್ಣನವರ ವಚನ.

ಅರಿವು ಇದ್ದರೂ ಅರಿವಿನ ಬೆಳಕನ್ನು ಬಡತನವೆಂಬ ರಾಹು ಮಸುಕು ಮಾಡುತ್ತದೆ. ಉಳ್ಳವನ ಬದುಕಿಗೆ ಮೋಹವು ರಾಹುವಾಗಿ ಕಾಡುತ್ತದೆ. ಕಾಣುವವನ ಕಾಣ್ಕೆಗೆ ಕಾಮವೆಂಬ ಕತ್ತಲೆ ಕವಿಯುತ್ತದೆ. ನನ್ನ ಮನಸಿನ ಭಯಕ್ಕೆ ಹೆದರಿ ಕೂಡಲಸಂಗಮಾ ನಿಮ್ಮ ಮೊರೆಹೊಕ್ಕಿದ್ದೇನೆ.

ಈ ವಚನವು ಹೆದರಿಕೆ ಹುಟ್ಟಿಸುವ ಸಾಮಾಜಿಕ ಮತ್ತು ವೈಯಕ್ತಿಕ ವಾಸ್ತವಗಳನ್ನು ಹೇಳುತ್ತಿದೆ. ಬಡತನವೆಂಬ ರಾಹು ಹಿಡಿದಾಗ ವ್ಯಕ್ತಿಗೆ ಎಷ್ಟೇ ಅರಿವಿದ್ದರೂ ಆ ಅರಿವು ಅರಳದೆ ಇದ್ದಲ್ಲೇ ಒಣಗಿಹೋಗುತ್ತದೆ. ಮೋಹವೆನ್ನುವ ರಾಹು ಉಳ್ಳವನ ಬದುಕನ್ನು, ಉಳಿತಾಯವನ್ನು, ಹಾಳುಗೆಡವುತ್ತದೆ. ದಿವ್ಯ ದರ್ಶನವನ್ನು ಕಾಣಬಲ್ಲವನ ನೋಟವನ್ನೂ ಕಾಮ ಹಾಳು ಮಾಡುತ್ತದೆ. ಈ ವಿವರಗಳಲ್ಲಿ ಮೋಹ ಮತ್ತು ಕಾಮ ವ್ಯಕ್ತಿಯ ಒಳಗಿನ ಗುಣಗಳೇ ಅಡ್ಡಿಯಾಗುವುದನ್ನು ಹೇಳಿದರೆ ಅರಿವಿಗೆ ಅಡ್ಡಿಯಾಗುವ ಬಡತನ ಸಾಮಾಜಿಕವಾದ್ದು. ಅಂದರೆ ವ್ಯಕ್ತಿಯ ಒಳಗೂ, ವ್ಯಕ್ತಿಯ ಹೊರಗೆ ಸಮಾಜದಲ್ಲೂ ಭಯ ಹುಟ್ಟಿಸುವ ಸಂಗತಿಗಳಿವೆ. ಬೆಳವಣಿಗೆಗೆ ಅಡ್ಡವಾಗುವ ಗ್ರಹಣದಂಥ ಅಡಚಣೆಗಳಿವೆ. ಆದ್ದರಿಂದಲೇ ಮನಸಿನ ಭಯದ ಕಾರಣಕ್ಕೆ ಕೂಡಲಸಂಗಮನ ಮೊರೆಹೊಕ್ಕೆ, ರಕ್ಷಣೆಯನ್ನು ಪಡೆದೆ ಎನ್ನುತ್ತದೆ ವಚನ. ಕೂಡಲಸಂಗಮನು ಇಷ್ಟದೈವ, ಇಷ್ಟದ ದೈವವಾದ್ದರಿಂದಲೇ ಹೆದರಿಕೆಯಿಲ್ಲ ಅರಳುವ ವಿಶ್ವಾಸವಿದೆ.

ಹೊಲೆಯನು ʻಮೊದಲಿಗʼ

ಹೊಲೆಯ ಹೊಲೆಯನೆಂದು
ಹೊರಗಿರು ಎಂದೆಂಬರು
ಹೊಲೆಯನೆಂತವನಯ್ಯಾ
ತನ್ನ ಹೊಲೆಯ ತಾನರಿಯದೆ
ಮುನ್ನಿನವರ ಹೊಲೆಯನರಸುವ
ಭ್ರಷ್ಟರಿಗೆ ಏನೆಂಬೆನಯ್ಯಾ
ಮಹಾದಾನಿ ಕೂಡಲ ಚೆನ್ನಸಂಗಮದೇವಾ.

ಇದು ಚನ್ನಬಸವಣ್ಣನವರ ವಚನ.

ಹೊಲೆಯನೆಂದು ಮತ್ತೆ ಮತ್ತೆ ಹೇಳುತ್ತಾ ಮನೆಯ ಹೊರಗೆ, ಊರ ಹೊರಗೆ ಇರು ಎನ್ನುತ್ತಾರೆ. ಅವನು ಹೇಗೆ ಹೊಲೆಯ? ತನ್ನೊಳಗಿರುವ ಹೊಲೆತನವನ್ನು ತಿಳಿಯದೆ ಮೊದಲಿಗರಲ್ಲಿ ಹೊಲೆತನವನ್ನು ಹುಡುಕುವವರು ಭ್ರಷ್ಟರು. ಅವರನ್ನು ಏನೆಂದು ಕರೆಯಲಿ ತಿಳಿಯುತ್ತಿಲ್ಲ.

ಹೊಲೆಯ ಎಂಬ ಪದವನ್ನು ಹೊಲಸು ಎಂಬುದರೊಡನೆ ಒಂದುಗೂಡಿಸಿ ಆ ಸಮುದಾಯವನ್ನು ಹೊರಗೆ ಇರಿಸುವ ಪ್ರವೃತ್ತಿಯ ಖಂಡನೆ ಸ್ಪಷ್ಟವಾಗಿದೆ. ಹೊಲೆಯರನ್ನು ಮುನ್ನಿನವರು ಎಂದು ಕರೆದಿರುವುದು ಗಮನಿಸಬೇಕಾದ ಸಂಗತಿ. ಹೊಲದಲ್ಲಿ ಕೆಲಸ ಮಾಡುವವರು ಅನ್ನುವ ಅರ್ಥವೂ ಹೊಲೆಯ ಎಂಬ ಪದಕ್ಕೆ ಇದೆ. ಬೇಸಾಯಕ್ಕೆ ಸಂಬಂಧಿಸಿದ ಪದವಾದ್ದರಿಂದ ಹೊಲೆಯರೆಂದರೆ, ಬೆಳೆಯುವ, ಕಾಪಾಡುವ ಜನಸಮುದಾಯ ಎಂಬುದನ್ನು ಮರೆತಿದ್ದೇವೆ. ಹೊಲಸು ಎಂಬ ಅರ್ಥವನ್ನೇ ಮುಂದುಮಾಡಿದರೂ ಹೊಲಸು ಇರದ ದೇಹ ಯಾವುದಿದೆ? ನಮ್ಮೊಳಗೇ ಇರುವ ಹೊಲಸನ್ನು ಮರೆತು ಮುನ್ನಿನವರನ್ನು, ಸಮಾಜದಲ್ಲಿ ಮೊದಲಿಗರ ಸ್ಥಾನ ಪಡೆಯಬೇಕಾದವರನ್ನು ಹೊರಗೆ ಇರಿಸುವವರನ್ನು ಭ್ರಷ್ಟರೆಂದಲ್ಲದೆ ಬೇರೇನೆಂದು ಕರೆಯಬೇಕು ಎಂಬ ಪ್ರಶ್ನೆಯನ್ನು ಈ ವಚನ ಕೇಳುತ್ತಿದೆ.

ಹುತ್ತವ ಬಡಿದರೆ

ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ
ಅಯ್ಯಾ
ಅಘೋರ ತಪವ ಮಾಡಿದಡೇನು
ಅಂತರಂಗ ಆತ್ಮಶುದ್ದಿಯಿಲ್ಲದವರನೆಂತು ನಂಬುವನಯ್ಯಾ ಕೂಡಲಸಂಗಮದೇವ.

ಇದು ಬಸವಣ್ಣನವರ ವಚನ.

ಹುತ್ತವನ್ನು ಬಡಿದರೆ ಹಾವು ಸಾಯುವುದಿಲ್ಲ. ಘೋರವಾದ ತಪಸ್ಸನ್ನು ಮಾಡಿದರೇನಾಯಿತು, ಅಂತರಂಗ ಮತ್ತು ಆತ್ಮ ಶುದ್ಧವಿಲ್ಲದವರನ್ನು ನಂಬಲಾಗದು.

ಬಸವಣ್ಣನವರ ಈ ವಚನ ನಮ್ಮ ಒಳಗು-ಹೊರಗುಗಳ ನಡುವೆ ಅಂತರವನ್ನು ಸೃಷ್ಟಿಸಿಕೊಂಡು ಹೆಣಗುತ್ತಿರುವ ನಮ್ಮೆಲ್ಲರನ್ನೂ ಕುರಿತು ಹೇಳಿದಂತಿದೆ. ಹುತ್ತವನ್ನು ಬಡಿಯುವುದು ಸುಲಭ, ಹಾವನ್ನು ಬಡಿಯುವುದು ಕಷ್ಟ. ನಾಶ ಮಾಡಬೇಕಾದದ್ದು ಹುತ್ತವನಲ್ಲ, ಕೆಟ್ಟದ್ದು ಅನ್ನುವ ಹಾವನ್ನು. ದೇಹವೇ ಹುತ್ತವಾದರೆ ದೇಹದೊಳಗೇ ಇರುವ ಮನಸು, ಮಿದುಳು, ಆತ್ಮಗಳಲ್ಲಿ ಕೆಡುಕೆಂಬ ಹಾವು ವಾಸಮಾಡುತ್ತಿರುತ್ತದೆ. ನಾವು ದಂಡಿಸಬೇಕಾದದ್ದು ಹುತ್ತದಂತೆ ಇರುವ ದೇಹವನ್ನಲ್ಲ, ನಮ್ಮೊಳಗೇ ಇರುವ ಕೆಡುಕು ಎಂಬ ಹಾವನ್ನು. ಒಳಗೆ-ಹೊರಗೆ ಬೇರೆ ಬೇರೆ ಥರ ಇರುವವರನ್ನು ಹೇಗೆ ನಂಬುವುದು? ಬಸವಣ್ಣನವರು ಅನೇಕ ವಚನಗಳಲ್ಲಿ ಅಂತರಂಗ-ಬಹಿರಂಗ, ನುಡಿ-ನಡೆ ಒಂದೇ ಆಗಿರಬೇಕು ಅನ್ನುವುದನ್ನು ಪ್ರತಿಪಾದಿಸುತ್ತಾರೆ. ತಪಸ್ಸು ಅನ್ನುವ ಸಿದ್ಧಿ ಎಷ್ಟು ಮಾಡಿಕೊಂಡರೂ ಅದು ಒಳಗಿನ ಶುದ್ಧಿಗೆ ಸಮನಲ್ಲ, ಅದನ್ನು ನಂಬಲಾಗದು ಎನ್ನುತ್ತಾರೆ. ಕಳಬೇಡ, ಕೊಲಬೇಡ ಎಂಬ ಪ್ರಸಿದ್ಧ ವಚನದ ಜೊತೆಯಲ್ಲಿ ನೋಡಿದರೆ ಕಳವು, ಕೊಲೆ, ಸುಳ್ಳು, ತನ್ನ ಬಗ್ಗೆ ತಾನೇ ಹೊಗಳಿಕೊಳ್ಳುವುದು, ಇತರರನ್ನು ನಿಂದಿಸುವುದು ಇವೆಲ್ಲವು ನಮ್ಮೊಳಗೇ ಇರುವ ಹಾವುಗಳು. ಅವನ್ನು ಬಡಿದು ಇಲ್ಲವಾಗಿಸುವುದೇ ಒಳಗಿನ ಹೊರಗಿನ ಶುದ್ಧಿ ಎಂದು ಹೊಳೆಯುತ್ತದೆ.

ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು

ಸಣ್ಣ ನನೆಯೊಳಗಣ ಪರಿಮಳವ ಹೊರಸೂಸಿ
ಇದಿರಿಂಗೆ ಅರುಹಿಸಬಲ್ಲುದೆ ವಾಯು
ಕೊಡಗೂಸಿನೊಳಗಣ ಮೊಲೆ ಮುಡಿಯ
ಹಡೆದ ತಾಯಿ ತಂದೆಗಳೆಂದಡೆ ಕಾಣಿಸಿಕೊಡಬಲ್ಲರೆ
ಕಾಬವರ ಕಣ್ಣಿಗೆ ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು ರಾಮನಾಥ.

[ನನೆ=ಮೊಗ್ಗು, ಅರುಹಿಸು=ತಿಳಿಸು, ಕೊಡಗೂಸು=ಹದಿಹರೆಯದ, ಕಾಬವರ=ಕಾಣುವವರ]

ಪುಟ್ಟ ಮೊಗ್ಗಿನೊಳಗೆ ಇರುವ ಪರಿಮಳವನ್ನು ಹೊರಗೆ ಎಲ್ಲರಿಗೂ ತಿಳಿಸುವಂತೆ ಮಾಡುವುದು ಗಾಳಿ. ಹೆಣ್ಣು ಮಗುವನ್ನು ಹೆತ್ತವರಾದರೂ ಹದಿಹರೆಯದ ಹೆಣ್ಣಾದಾಗ, ದೇಹ ಪಕ್ವವಾದಾಗ, ಅವಳ ಮೊಲೆ ಮುಡಿಗಳು ಇಡಿಯಾಗಿ ಕಾಣುವುದು ʻಕಾಣುವವರʼ ಪಕ್ವವಾದ ಕಣ್ಣಿಗೆ ಮಾತ್ರ.

ಈ ವಚನವು ಬಲು ದೊಡ್ಡ ತಾತ್ವಿಕ ಸತ್ಯವನ್ನು ತಿಳಿಸುತ್ತಿದೆ. ಪಕ್ವಕ್ಕಲ್ಲದೆ ಕಾಣಿಸದು ಪರಿಣಾಮ. ಇದನ್ನು ಸ್ಪಷ್ಟಗೊಳಿಸಲು ಹೆಣ್ಣುಮಗುವಿನ ನಿದರ್ಶನ ಬಳಕೆಯಾಗಿದೆ. ಹೆತ್ತವರೇ ಆದರೂ ತಮ್ಮ ಪುಟ್ಟ ಹೆಣ್ಣುಮಗುವಿನ ಮೊಲೆ ಮುಡಿಗಳ ವಿವರ ಕಾಣಲಾರರು. ಹೆಣ್ಣತನದ ದೇಹ ಲಕ್ಷಣ ಕಾಣಲು ದೇಹವು ಪಕ್ವವಾಗಿ ಕೊಡಗೂಸು, ಹದಿಹರೆಯದ ದೇಹವಾಗಬೇಕು. ಮತ್ತು ಅದು ಕಾಣುವುದು ಕೂಡ ಕಾಣಬಲ್ಲ ಇತರರಿಗೇ ಹೊರತು ಹೆತ್ತವರಿಗಲ್ಲ. ಕಾಣುವವರಿಗೂ ಪಕ್ವತೆ ಬೇಕು. ಇನ್ನೊಂದು ನಿದರ್ಶನ ಮೊಗ್ಗಿನೊಳಗಿನ ಪರಿಮಳ. ಮೊಗ್ಗು ಕೂಡ ಪಕ್ವವಾಗಿ ಅರಳಿದಾಗ, ಗಾಳಿ ಬೀಸಿದಾಗ, ಅಲ್ಲಿ ಸುಳಿದಾಡುವ ಗ್ರಹಿಕೆಯ ಪಕ್ವತೆ ಇರುವ ಇತರ ಮನುಷ್ಯರಿಗೆ ಅದರ ಪರಿಮಳ ತಿಳಿಯುತ್ತದೆ. ವ್ಯಕ್ತವಾಗುವುದಕ್ಕೂ ಅರಿಯುವುದಕ್ಕೂ ಪಕ್ವತೆ ಬೇಕು ಎಂದು ಜೇಡರ ದಾಸಿಮಯ್ಯ ಹೇಳುವಂತಿದೆ.

ಒಕ್ಕಲಿಗನ ತಪ್ಪು ಒಪ್ಪುಗೊಳ್ಳು

ವೇದ ಶಾಸ್ತ್ರವನೋದುವುದಕ್ಕೆ ಹಾರುವನಲ್ಲ
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ
ವ್ಯವಹರಿಸುವುದಕ್ಕೆ ವೈಶ್ಯನಲ್ಲ
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.

ಇದು ಒಕ್ಕಲಿಗ ಮುದ್ದಣ್ಣನವರ ವಚನ.

ವೇದಶಾಸ್ತ್ರಗಳನ್ನು ಓದಬೇಕೆಂದರೆ ನಾನು ಬ್ರಾಹ್ಮಣನಲ್ಲ. ಶತ್ರುಗಳನ್ನು ಇರಿದು ಕೊಂದು ಮೆರೆಯಲು ನಾನು ಕ್ಷತ್ರಿಯನಲ್ಲ. ವ್ಯಾಪಾರ ವ್ಯವಹಾರ ಮಾಡಲು ನಾನು ವೈಶ್ಯನಲ್ಲ. ಉಳುವ ಒಕ್ಕಲುಮಗ ನಾನು. ನನ್ನ ತಪ್ಪನ್ನು ನೋಡದೆ ಒಪ್ಪಿಕೋ.

ಈ ವಚನವು ದುಡಿಯುವ ಜನವರ್ಗದ ಸ್ಥಿತಿಯ ಚಿತ್ರಣವಾಗಿದೆ. ವರ್ಣಾಶ್ರಮಗಳು ಜಾತಿ ಪದ್ಧತಿಯಾಗಿ ಸ್ಥಿರಗೊಂಡ ಕಾಲದ ಅಳಲು ಈ ವಚನದಲ್ಲಿದೆ. ವೇದ, ಶಾಸ್ತ್ರ, ಪುರಾಣಗಳ ಓದು ತಿಳಿವಳಿಕೆ ಬ್ರಾಹ್ಮಣರಿಗೆ ಮೀಸಲು, ಆಯುಧ ಹಿಡಿದು ಯುದ್ಧಕ್ಕೆ ಹೋಗಿ ಕಾದಾಡಿ, ಕೊಂದು ಗೆಲುವು ಪಡೆಯುವುದು, ಕೀರ್ತಿಗಳಿಸುವುದು ಕ್ಷತ್ರಿಯರಿಗೆ ಮೀಸಲು. ವ್ಯಾಪಾರ, ವಾಣಿಜ್ಯಗಳ ನಿರ್ವಹಣೆ ವೈಶ್ಯರಿಗೆ ಮೀಸಲು. ಇವು ಮೂರೂ ವರ್ಣಗಳಿಗೆ ಸೇರದ ಒಕ್ಕಲು ಕೆಲಸ ಮಾಡುವವರು ಶೂದ್ರರೆಂದಾದರೆ ಅವರಿಗೆ ಶಿಕ್ಷಣ, ಆಡಳಿತ, ವ್ಯಾಪಾರಗಳಿಗೆ ಪ್ರವೇಶವಿಲ್ಲ. ಹಾಗಾಗಿ ಯಾವುದನ್ನು ಸರಿ, ಯಾವುದನ್ನು ತಪ್ಪು ಎಂದು ನಿರ್ಧರಿಸುವ ಅಧಿಕಾರ, ಹಕ್ಕು ಶೂದ್ರರಿಗೆ ಇಲ್ಲ, ಮಿಕ್ಕ ಮೂರು ವರ್ಣಗಳಿಗೆ ಇವೆ. ಒಕ್ಕಲಿಗನಾಗಿ ನಾನು ಇಡೀ ಸಮುದಾಯವನ್ನು ಸಾಕಿದರೂ ನಾನು ಮಾಡುತ್ತಿರುವುದು ತಪ್ಪೋ ಸರಿಯೋ ಅರಿಯೆ, ನೀನೇ ನನ್ನ ಕಾಪಾಡಬೇಕು ಎಂದು ಮುದ್ದಣ್ಣ ತನ್ನ ಇಷ್ಟದೈವವನ್ನು ಬೇಡುವುದು ಇಲ್ಲಿದೆ.
ಹಾಗೆ ದುಡಿಮೆಯನ್ನೇ ನಂಬಿದ ದೊಡ್ಡ ಜನ ಸಮುದಾಯ ಈಗಲೂ ಅಧಿಕಾರ, ಶಿಕ್ಷಣ, ದುಡ್ಡು, ಮೂಲ ಸೌಕರ್ಯಗಳಿಂದ ವಂಚಿತವಾಗಿಯೇ ಉಳಿದಿರುವುದು ಎಷ್ಟು ದೊಡ್ಡ ದುರಂತ.

ನಿನಗೂ ನನಗೂ ಒಂದೇ ನಿಜ

ಅಂಬುವಿಲ್ಲದಿರ್ದಡೆ ಅಂಬುಜವನಾರು ಬಲ್ಲರು
ನೀರಿಲ್ಲದಿರ್ದಡೆ ಹಾಲನಾರು ಬಲ್ಲರು
ನಾನಿಲ್ಲದಿರ್ದಡೆ ನಿನ್ನನಾರು ಬಲ್ಲರು
ನಿನಗೆ ನಾ ನನಗೆ ನೀ
ನಿನಗೂ ನನಗೂ ಬೇರೊಂದು ನಿಜವುಂಟೆ ನಿಃಕಳಂಕ ಮಲ್ಲಿಕಾರ್ಜುನಾ.

[ಅಂಬು= ನೀರು, ಅಂಬುಜ= ನೀರಿನಲ್ಲಿ ಹುಟ್ಟಿದ ತಾವರೆ]

ಇದು ಮೋಳಿಗೆ ಮಾರಯ್ಯನವರ ವಚನ.

ನೀರು ಇರದಿದ್ದರೆ ನೀರಿನಲ್ಲಿ ಹುಟ್ಟಿದ ತಾವರೆಯೂ ಇರುವುದಿಲ್ಲ. ನೀರು ಇರದಿದ್ದರೆ ಹಾಲು ಕೂಡ ಯಾರಿಗೂ ಅರ್ಥವಾಗದು. ನಾನು ಇರದಿದ್ದರೆ, ದೇವರೇ, ನಿನ್ನನ್ನು ಯಾರು ತಿಳಿಯುತ್ತಿದ್ದರು. ನನಗೆ ನೀನು ಬೇಕು, ನಿನಗೆ ನಾನು ಬೇಕು. ಇದಲ್ಲದೆ ನಿನಗೂ ನನಗೂ ಬೇರೆ ನಿಜವುಂಟೇ?

ಬದುಕಿನಲ್ಲಿ ಅರ್ಥವೆಂಬುದು ವಿರೋಧಗಳನ್ನೇ ಆಧರಿಸಿ ಸೃಷ್ಟಿಯಾಗುತ್ತದೆ. ಒಳ್ಳೆಯದು, ಬೆಳಕು, ಸತ್ಯ ಇಂಥ ಪದಗಳಿಗೆ ಅರ್ಥ ನಿಗದಿಯಾಗುವುದೇ ಕೆಟ್ಟದು, ಕತ್ತಲು, ಸುಳ್ಳು ಇತ್ಯಾದಿ ವಿರುದ್ಧಗಳು ಇರುವುದರಿಂದ. ಅದೇ ರೀತಿಯಲ್ಲಿ ನಾನು ಮತ್ತು ನೀನು ಕೂಡ. ನಾನು ಎಂಬ ಭಾಷೆಯನ್ನು ಹುಟ್ಟಿಸಿಕೊಂಡ ಮನುಷ್ಯ ಇರದಿದ್ದರೆ ನೀನು ಎಂಬ ದೇವರೂ ಇರುತ್ತಿರಲಿಲ್ಲ. ನೀರಿಲ್ಲದೆ ತಾವರೆ, ನೀರಿಲ್ಲದೆ ಹಾಲು ಅರ್ಥವಾಗದು, ಹಾಗೇ ನನ್ನ ಮತ್ತು ದೇವರ ಸಂಬಂಧ. ಈ ಸಂಬಂಧ ಮಾತ್ರ ವಿರುದ್ಧವೆಂದು ತಿಳಿಯಲಾಗಿರುವ ಎರಡೂ ಸಂಗತಿಗಳಿಗೆ ನಿಜ. ಅದು ನನಗೆ ಬೇರೆ, ನಿನಗೆ ಬೇರೆ ಅಲ್ಲ, ನಿಜ ಒಂದೇ ಎಂದು ಹೇಳುತ್ತಿರುವವರು ಮೋಳಿಗೆ ಮಾರಯ್ಯ. ಈತ ಅರಸನಾಗಿದ್ದವರು, ಶರಣರಾಗಿ ಕಟ್ಟಿಗೆಯ ಹೊರೆ ಅಥವ ಮೋಳಿಗೆಯನ್ನು ಹೊತ್ತು ತರುವ ಕೆಲಸ ಮಾಡುತಿದ್ದರು ಎಂಬ ಐತಿಹ್ಯವಿದೆ. ವಿರುದ್ಧಗಳಿಗೆ ಸಮಾನವಾದ ಸತ್ಯವಿದೆ ಅನ್ನುವ ಅರಿವು ಮಾರಯ್ಯನವರಿಗೆ ಬದುಕಿನಿಂದಲೇ ಮೂಡಿರಬಹುದು.

ಲೋಕದ ಭಜನೆ

ರತ್ನದ ಸಂಕೋಲೆಯಾದಡೆ ತೊಡರಲ್ಲವೆ
ಮುತ್ತಿನ ಬಲೆಯಾದಡೆ ಬಂಧನವಲ್ಲವೆ
ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ
ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ
ಜನನ ಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ.

[ತಲೆಹೊಯ್ದಡೆ= ತಲೆ ಹೊಡೆದರೆ, ಸಾಯದಿರ್ಪರೆ= ಸಾಯದಿರುವರೇ]
ಇದು ಅಕ್ಕಮಹಾದೇವಿಯವರ ವಚನ.

ಸರಪಳಿಯು ರತ್ನಖಚಿತವೇ ಆಗಿರಬಹುದು. ಅದು ಕಾಲು ಹಾಕುವುದಕ್ಕೆ ತೊಡಕು, ಅಲ್ಲವೇ. ಮುತ್ತುಗಳನ್ನು ಪೋಣಿಸಿ ಮಾಡಿದ ಬಲೆಯೇ ಆಗಿರಬಹುದು. ಅದು ಬಂಧನ ಅಲ್ಲವೇ. ಕತ್ತಿ ಚಿನ್ನದ್ದೇ ಆಗಿರಬಹುದು. ಅದರಲ್ಲಿ ತಲೆ ಹೊಡೆದರೆ ಸಾಯದೆ ಇರುತ್ತಾರೆಯೇ. ಲೋಕದ ಮೆಚ್ಚುಗೆ, ಕೊಂಡಾಟದ ಭಕ್ತಿಯಲ್ಲಿ ಸಿಕ್ಕಿಕೊಂಡರೆ ಜನನ, ಮರಣ ಬಿಡುವುದೇ.

ತೊಡಕು, ಬಂಧನ, ಸಾವು ಇವು ಆಗುತ್ತವೆ ಅನ್ನುವುದು ಮುಖ್ಯವೇ ಹೊರತು ತೊಡಕಿಗೆ ಕಾರಣ, ಬಂಧನಕ್ಕೆ ಕಾರಣ, ಸಾವಿಗೆ ಕಾರಣ ಆಗಿರುವುದು ಬೆಲೆಬಾಳುವ ರತ್ನ, ಮುತ್ತು, ಚಿನ್ನ ಅನ್ನುವುದಲ್ಲ. ಸ್ವಾತಂತ್ರ್ಯ ಮುಖ್ಯ ಅನ್ನುವುದಾದರೆ ಯಾವ ಬಗೆಯ ತೊಡಕೂ, ಬಂಧನವು, ಸಾವಿನ ಶಿಕ್ಷೆಯೂ ಇರಬಾರದು. ಅದೇ ರೀತಿಯಲ್ಲಿ ನಿಜವಾದ ಬಿಡುಗಡೆ ದೊರೆಯಬೇಕಾದರೆ ತೋರಿಕೆಯ ಭಕ್ತಿ, ಲೋಕದ ಮೆಚ್ಚುಗೆಗಾಗಿ ಮಾಡುವ ಭಕ್ತಿ, ಭಜನೆಗಳು ಬಿಡುಗಡೆ ತರಲಾರವು. ಇಷ್ಟದೈವಕ್ಕೆ ನಿಜವಾದ ಭಕ್ತಿ ತೋರುವುದು ಮುಖ್ಯವೆಂದು ಮಹದೇವಿ ಅಕ್ಕ ಹೇಳುತಿದ್ದಾರೆ. ಲೋಕದ ಮೆಚ್ಚುಗೆ, ತಿರಸ್ಕಾರಗಳು ಶಾಶ್ವತವಾಗಿ ಉಳಿಯುವುದಿಲ್ಲ, ಹಾಗಾಗಿ ಅದನ್ನು ನೆಚ್ಚಿದರೆ, ಹಂಬಲಿಸಿದರೆ ಅದೇ ಗೀಳು ಆಗುತ್ತದೆಯೇ ಹೊರತು ಬಿಡುಗಡೆ ಸಿಗುವುದಿಲ್ಲ.

ಕರ್ತಾರನ ಕಮ್ಮಟ

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು ಕೂಡಲಸಂಗಮದೇವ.

[ಮರ್ತ್ಯಲೋಕ= ಸಾವು ಇರುವ ಲೋಕ, ಮಣ್ಣಿನ ಲೋಕ; ಕರ್ತಾರ= ಮಾಡಿದವನು ಸೃಷ್ಟಿಕರ್ತ; ಕಮ್ಮಟ= ಟಂಕಸಾಲೆ; ಸಲ್ಲು= ಚಲಾವಣೆಯಾಗು]

ಮರ್ತ್ಯಲೋಕವು ಸೃಷ್ಟಿಕರ್ತನ ಟಂಕಸಾಲೆ. ಇಲ್ಲಿ ಚಲಾವಣೆಗೆ ಯೋಗ್ಯವಾಗಿರುವ ನಾಣ್ಯ ಕರ್ತಾರನ ಲೋಕದಲ್ಲೂ ಚಲಾವಣೆಗೆ ಸಲ್ಲುತ್ತದೆ. ನಾಣ್ಯದ ಹಾಗೆ ಇಲ್ಲಿ ಸಲ್ಲದ ಮನುಷ್ಯರು ಸೃಷ್ಟಿಕರ್ತ ಇರುವ ಲೋಕದಲ್ಲೂ ಸಲ್ಲರು.

ಈ ವಚನದಲ್ಲಿ ಎರಡು ಸಂಗತಿಗಳಿವೆ. ಮೊದಲನೆಯದು—ಈ ಲೋಕ, ದೇವಲೋಕ ಅನ್ನುವುದು ಬೇರೆ ಬೇರೆ ಅಲ್ಲ. ಎರಡನೆಯದು- ಕರ್ತಾರನು ಟಂಕಿಸಿದ ಇಲ್ಲಿ ಸಲ್ಲುವ ನಾಣ್ಯ ಅವನ ಲೋಕದಲ್ಲೂ ಚಲಾವಣೆಗೆ ಯೋಗ್ಯವಾಗಿರುತ್ತದೆ. ಇಲ್ಲಿ ಅಯೋಗ್ಯವಾದದ್ದು ಕರ್ತಾರನ ಲೋಕದಲ್ಲೂ ಬೆಲೆ ಪಡೆಯಲಾರದು. ಪರಲೋಕದ ಚಿಂತೆಗಿಂದ ಈ ಲೋಕದಲ್ಲಿ ಸಲ್ಲುವ ನಾಣ್ಯವಾಗಿ ಬದುಕುವುದು ಮುಖ್ಯ ಎಂಬ ನಿಲುವು ಗಮನಾರ್ಹ. ನಾಣ್ಯ ಎಂಬ ಮಾತಿಗೆ ನೈತಿಕತೆ, ಕೀರ್ತಿ, ನೇರವಂತಿಕೆ ಎಂಬ ಅರ್ಥಗಳೂ ಇವೆ. ಹಾಗಾಗಿ ನಾಣ್ಯಕ್ಕೆ ಮೌಲ್ಯ ನಿಗದಿಯಾಗುವಂತೆಯೇ ವ್ಯಕ್ತಿಗಳ ನೈತಿಕತೆ, ನೇರವಂತಿಕೆಗಳು ಅವರ ಮೌಲ್ಯವನ್ನು ನಿರ್ಧರಿಸುತ್ತವೆ. ಮರ್ತ್ಯಲೋಕದಲ್ಲಿ ಜನ ಒಪ್ಪಿ ಚಲಾವಣೆಯಾದರೆ ಅದು ದೇವಲೋಕದಲ್ಲೂ ಸಲ್ಲುವ ಜೀವ-ನಾಣ್ಯವೇ ಆಗಿರುತ್ತದೆ. ಇದೇ ಭಾವವನ್ನು ʻದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ, ಕಾಣಿ ಭೋʼ ಎಂಬ ವಚನದಲ್ಲೂ ಕಾಣಬಹುದು.

Previous post ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
Next post ಅನುಭವ ಮಂಟಪದ ಸುತ್ತ (ಭಾಗ-1)
ಅನುಭವ ಮಂಟಪದ ಸುತ್ತ (ಭಾಗ-1)

Related Posts

ಸತ್ಯ, ಪರೋಪಕಾರ, ಬ್ರಹ್ಮಚರ್ಯ
Share:
Articles

ಸತ್ಯ, ಪರೋಪಕಾರ, ಬ್ರಹ್ಮಚರ್ಯ

February 6, 2025 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
‘ನಾವು ಲೋಕೋದ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇವೆಂದು ಯಾರೂ ತಿಳಿದುಕೊಳ್ಳಬಾರದು. ನಮ್ಮ ಪ್ರಯತ್ನ ನಮ್ಮ ಏಳೆಗೆಗಾಗಿ, ನಮ್ಮ ಬಾಳು ಸಫಲಗೊಳ್ಳುವುದಕ್ಕಾಗಿ, ನಮ್ಮ...
ಶರಣನಾಗುವ ಪರಿ
Share:
Articles

ಶರಣನಾಗುವ ಪರಿ

June 3, 2019 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ವ್ಯಕ್ತಿಯ ವ್ಯಕ್ತಿತ್ವ ವಿಕಸನ ಅವನ ಪಂಚೇಂದ್ರಿಯಗಳು, ಮನಸ್ಸು, ಬುದ್ಧಿ ಮತ್ತು ಹೃದಯದ ಸದ್ಭಾವನೆಗಳನ್ನು ಅವಲಂಬಿಸಿದೆ. ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ಇವೇ...

Comments 1

  1. ಬಸವಲಿಂಗ ತೋರಣಕಲ್
    Jan 20, 2026 Reply

    ನಿಮ್ಮ ವಚನ ವಿಶ್ಲೇಷಣೆ ಓದುವುದೇ ಏನೋ ಸೊಗಸು. ಸರಳ ನಿರೂಪಣೆಯಲ್ಲಿ ವಿಚಾರಗಳನ್ನು ತಿಳಿಹೇಳುತ್ತೀರಿ ಸರ್.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಧಾರ್ಮಿಕ ಮೌಢ್ಯಗಳು
ಧಾರ್ಮಿಕ ಮೌಢ್ಯಗಳು
February 5, 2020
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
January 15, 2026
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
ಹಾದಿಯ ಹಣತೆ…
ಹಾದಿಯ ಹಣತೆ…
June 12, 2025
ಲಿಂಗದ ಹಂಗೇ…
ಲಿಂಗದ ಹಂಗೇ…
September 10, 2022
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
March 6, 2024
Copyright © 2026 Bayalu