Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾಥರು ಮತ್ತು ಶರಣರು-2
Share:
Articles April 5, 2026 ಡಾ. ಬಸವರಾಜ ಸಬರದ

ನಾಥರು ಮತ್ತು ಶರಣರು-2

ಕರ್ನಾಟಕದಲ್ಲಿ ಅನೇಕ ನಾಥ ಸಾಧಕರಿದ್ದಾರೆ. ಅವರ ಬಗೆಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಕರ್ನಾಟಕದ ನಾಥಪಂಥವು ಬಹುಮುಖಿ ನೆಲೆಗಳಿಂದ ಕೂಡಿದ್ದು, ಬಹುಚಿಂತನೆಯ ಸೂಕ್ಷ್ಮತೆಗಳು ಅಲ್ಲಿವೆ. ಭಾರತೀಯ ಭಕ್ತಿ ಪಂಥಗಳ ತೌಲನಿಕ ಅಧ್ಯಯನ ಮಾಡಿದಾಗ ಆಯಾ ಪಂಥಗಳ ನಡುವೆ ಸಾಮ್ಯತೆ-ಭಿನ್ನತೆ ಕಾಣಿಸಿಕೊಳ್ಳುವುದು ಸಹಜ. ಅಂತಹದೇ ಸಾಮ್ಯತೆ-ಭಿನ್ನತೆಗಳು ನಾಥಪಂಥ ಹಾಗೂ ವಚನ ಚಳವಳಿಯಲ್ಲಿ ಕಾಣಿಸಿಕೊಂಡಿವೆ. ಈ ಎರಡೂ ಭಕ್ತಿ ಪಂಥಗಳ ನಡುವಿರುವ ಸಾಮ್ಯತೆಯ ಅಂಶಗಳನ್ನಿಲ್ಲಿ ಗುರುತಿಸಲಾಗಿದೆ.

1) ನಾಥಪಂಥಕ್ಕೆ ಶೈವ ಧರ್ಮದ ಪಾಶುಪತ – ಕಾಪಾಲಿಕಗಳ ಮೂಲಬೇರುಗಳಿರುವುದರಿಂದ ಸಹಜವಾಗಿಯೇ ಅವೈದಿಕ ನೆಲೆಯಲ್ಲಿ ಬೆಳೆದು ಬಂದಿದೆ. ವಚನ ಚಳವಳಿ ವೈದಿಕಶಾಹಿಯನ್ನು ಒಪ್ಪುವುದಿಲ್ಲಾ. ಹೀಗಾಗಿ ಇವೆರಡೂ ಅವೈದಿಕವಾಗಿವೆ.

2) ಅವಧೂತರೆಂದರೆ ಅತ್ಯಾಶ್ರಮಿಗಳು, ಅತ್ಯಾಶ್ರಮಿಗಳೆಂದರೆ ವರ್ಣಾಶ್ರಮವನ್ನು ಮೀರಿದವರು. ಅವಧೂತರಾಗುವುದರ ಮೂಲಕ ನಾಥಪಂಥವು ಚಾತುರ್ವರ್ಣ ಧರ್ಮವನ್ನು ಉಲ್ಲಂಘಿಸಿದೆ. ವಚನ ಚಳವಳಿ ಚಾತುರ್ವರ್ಣದ ವಿರುದ್ಧವೇ ಹೋರಾಟವನ್ನು ಪ್ರಾರಂಭಿಸಿದೆ. ಹೀಗಾಗಿ ಇವೆರಡೂ ಚಾತುರ್ವರ್ಣದ ವಿರೋಧಿಗಳಾಗಿವೆ.

3) ನಾಥಪಂಥದ ಪ್ರಮುಖ ಸಾಧಕನಾದ ಗೋರಖನಾಥನು ವಾಮಾಚಾರದ ವಿರುದ್ಧ ನೇರವಾಗಿ ಪ್ರತಿಭಟಿಸಿದ್ದಾನೆ. ವಚನಕಾರರು ವಾಮಾಚಾರ ಮತ್ತು ಮೌಢ್ಯತೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ.

4) ನಾಥಪಂಥವು ಗುರು ಪಂಥವಾಗಿರುವುದರಿಂದ, ಗುರು ಪಂಥಗಳಲ್ಲಿ ಪುಸ್ತಕದ ವಿದ್ಯೆಗೆ ಮಹತ್ವವಿಲ್ಲ. ವೇದ -ಶಾಸ್ತ್ರ -ಪುರಾಣಗಳನ್ನು ನಂಬುವ ಯೋಗಿಗಳಿಗೆ ಮುಕ್ತಿ ಸಿಗುವುದಿಲ್ಲವೆಂದು ಗೋರಖನಾಥ ಹೇಳಿದರೆ, ವೇದ – ಶಾಸ್ತ್ರ – ಪುರಾಣಗಳ ವಿರುದ್ಧ ವಚನ ಚಳವಳಿ ವಿವರವಾಗಿ ಹೇಳಿದೆ: “ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನ್ನಿಕ್ಕುವೆ, ಆಗಮದ ಮೂಗ ಕೊಯಿವೆ” ಎಂದು ಬಸವಣ್ಣನವರು ನೇರವಾಗಿಯೇ ವಿರೋಧಿಸಿದ್ದಾರೆ.

5) ನಾಥಪಂಥವು ಸಂಕರ ಪಂಥವಾಗಿದೆ. ಇಲ್ಲಿ ಜಾತಿಯ ಮಾತೇ ಬರುವುದಿಲ್ಲ. ಇದೇ ರೀತಿ ವಚನ ಚಳವಳಿಯು ಜಾತಿ – ವರ್ಣ – ವರ್ಗ – ಅಸಮಾನತೆಯನ್ನು ನೇರವಾಗಿಯೇ ವಿರೋಧಿಸಿದೆ.

6) ನಾಥರು, ದೇವರು – ಆತ್ಮ – ಪುನರ್ಜನ್ಮ – ವರ್ಣಾಶ್ರಮಗಳನ್ನು ಒಪ್ಪುವುದಿಲ್ಲ. ಸ್ವರ್ಗ – ನರಕಗಳನ್ನು ನಂಬುವುದಿಲ್ಲ. ವಚನಕಾರರೂ ಇವುಗಳನ್ನು ಒಪ್ಪುವುದಿಲ್ಲ.

7) ನಾಥಪಂಥದಲ್ಲಿ ಕೆಳ ಜಾತಿಗಳು – ಕೆಳ ಸಮುದಾಯಗಳು ತಮ್ಮ ಅಸ್ಮಿತೆ ಕಂಡುಕೊಂಡಿವೆ. ವಚನ ಚಳವಳಿಯಲ್ಲೂ ಅಸ್ಪೃಶ್ಯರು- ದುಡಿವ ವರ್ಗದವರೇ ಬೆನ್ನೆಲುಬಾಗಿದ್ದು, ತಾವು ಮಾದಾರ ಚೆನ್ನಯ್ಯನ ಗೋತ್ರದವರೆಂದು ಹೇಳಿಕೊಂಡಿದ್ದಾರೆ.

8) ಗೋರಖನಾಥನು ದೇಹವನ್ನು ಪವಿತ್ರವೆಂದು ಹೇಳಿದ್ದಾನೆ. ಬಸವಣ್ಣ ದೇಹವೇ ದೇಗುಲವೆಂದು ಹೇಳಿದ್ದಾರೆ.

9) ನಾಥರ ಯೋಗ ದರ್ಶನವು ದೇಹ – ಮನಸ್ಸುಗಳ ಸಮನ್ವಯ ಸಿದ್ಧಾಂತವಾಗಿದೆ. ವಚನಕಾರರೂ ದೇಹ-ಮನಸ್ಸುಗಳ ಸಮನ್ವಯವನ್ನು ಹೇಳುತ್ತಾರೆ.

10) ನಾಥಪಂಥವು ದ್ವೈತವನ್ನು ವಿರೋಧಿಸುತ್ತದೆ. ಜೀವ – ದೇವರಲ್ಲಿ ಅದು ಭಿನ್ನತೆಯನ್ನು ಕಾಣುವುದಿಲ್ಲ. ವಚನಕಾರರಲ್ಲಿ ಜೀವ- ದೇವರಲ್ಲಿ ಬೇಧವಿಲ್ಲಾ.

11) ನಾಥಪಂಥಗಳಲ್ಲಿ ಸಾಂಕೇತಿಕ ಭಾಷೆಯಿದೆ. ಇದನ್ನವರು ಉಲಟಾ ಬಾಂಸಿಯೆಂದು ಕರೆದಿದ್ದಾರೆ. ಶರಣರೂ ಬೆಡಗಿನ ಭಾಷೆ ಬಳಸಿದ್ದಾರೆ.

12) ನಾಥಪಂಥದಲ್ಲಿ ಮಚೇಂದ್ರನಾಥ – ಗೋರಖನಾಥ ಮಹಾಸಾಧಕರಾಗಿದ್ದರೆ. ಶರಣರಲ್ಲಿ ಅಲ್ಲಮಪ್ರಭು – ಬಸವಣ್ಣ ಮಹಾನುಭಾವಿಗಳಾಗಿದ್ದಾರೆ.

13) ನಾಥಫಂಥ ಗುರು ಪಂಥವಾಗಿರುವದರಿಂದ ಇಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಶರಣರಲ್ಲಿಯೂ ಕೂಡ ಗುರುವಿಗೆ ಪ್ರಮುಖ ಸ್ಥಾನವಿದ್ದು, ಗುರು-ಲಿಂಗ-ಜಂಗಮರಿಗೆ, ತನು-ಮನ-ಧನಗಳನ್ನು ನೀಡಬೇಕೆಂದು ಹೇಳಲಾಗಿದೆ.

14) ನಾಥರು ಶಬ್ದ ಪ್ರಮಾಣವನ್ನು – ಗ್ರಂಥ ಪ್ರಮಾಣವನ್ನು ನಿರಾಕರಿಸಿದ್ದಾರೆ. ಶರಣರೂ ಶಬ್ದ ಪ್ರಮಾಣವನ್ನು ಒಪ್ಪುವುದಿಲ್ಲ. ಶರಣರಿಗೆ ಯಾವುದೇ ಧಾರ್ಮಿಕ ಗ್ರಂಥವಿಲ್ಲ. ಶಬ್ದವೆಂಬುದು ಸೂತಕವೆಂದವರು ಹೇಳಿದ್ದಾರೆ.

15) ನಾಥಪಂಥವು ಅನುಭವ ಪ್ರಾಮಾಣ್ಯವನ್ನು ಒಪ್ಪುತ್ತದೆ. ಶರಣರೂ ಅನುಭವಕ್ಕೆ ಮಹತ್ವದ ಸ್ಥಾನ ಕೊಟ್ಟಿದ್ದಾರೆ. ಅನುಭವದಿಂದಲೇ ಅನುಭಾವವನ್ನು ಕಂಡುಕೊಂಡಿದ್ದಾರೆ.

16) ಪ್ರಮಾಣ ಗ್ರಂಥವಾದ ‘ಸಿದ್ಧ ಸಿದ್ಧಾಂತ ಪದ್ಧತಿ’ ಯಲ್ಲಿ ವಿಭೂತಿ, ಕೌಪೀನ, ಕಪ್ಪರ, ಶಂಖ, ಪಾದುಕೆ, ಕುಂಡಲ, ಜಪಮಾಲೆಗಳ ಬಗೆಗೆ ಹೇಳಲಾಗಿದೆ. ಶರಣರು ಅಷ್ಟಾವರಣಗಳಲ್ಲಿ ಇವುಗಳನ್ನು ಕಂಡುಕೊಂಡಿದ್ದಾರೆ.

17) ನೇಪಾಳವು ನಾಥಪಂಥದ ತವರು, ಮಂಗಳೂರಿನ ಕದರಿ, ನಾಥರ ಪ್ರಮುಖ ಸಾಧನಾ ಕೇಂದ್ರ. ಬಸವಕಲ್ಯಾಣವು ಶರಣರ ಚಳವಳಿಯ ಕೇಂದ್ರಸ್ಥಾನವಾಗಿದ್ದು, ಕೂಡಲಸಂಗಮ ಬಸವಣ್ಣನವರ ಐಕ್ಯಸ್ಥಾನವೆಂದು ನಂಬಲಾಗಿದೆ.

18) ನಾಥರ ತಂತ್ರಸಾಧನೆ ವೇದದ ವಿರುದ್ಧವಾಗಿತ್ತು. ಶ್ರೀಶೈಲ ಎಲ್ಲ ತಂತ್ರ ಸಾಧನೆಗಳ ಕೇಂದ್ರವಾಗಿತ್ತು. ಅನುಭವ ಮಂಟಪ ಕಲ್ಯಾಣ ಶರಣರ ಕ್ರಾಂತಿಯ ತಾಣವಾಗಿತ್ತು.

19) ನಾಥರಲ್ಲಿ ಕೆಳವರ್ಗದಿಂದ ಬಂದ ಅನೇಕ ಸಾಧಕರಿದ್ದಾರೆ. ಅವರಲ್ಲಿ ಕಸಗೂಡಿಸುವ ಜಾಡಮಾಲಿ ಸಮಾಜದ ಜಾಲಂದರನಾಥರು ಮುಖ್ಯರಾದರೆ, ರೇವಣಸಿದ್ಧರು ಕುರುಬ ಸಮುದಾಯದಿಂದ ಬಂದ ಸಾಧಕರಾಗಿದ್ದಾರೆ. ಶರಣರ ಚಳವಳಿ ಕಾಯಕ ಜೀವಿಗಳ ಚಳವಳಿಯಾಗಿದೆ. ಅಲ್ಲಿ ದಲಿತರು, ಅಸ್ಪೃಶ್ಯರು, ಕೆಳ ವರ್ಗದ ಶೂದ್ರರೇ ಪ್ರಮುಖರಾಗಿದ್ದಾರೆ. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಹಿರಿಯ ಸಮಕಾಲೀನ ಶರಣರಾಗಿದ್ದಾರೆ.

20) “ದುಸ್ತರವಾದ ಮಾಯಾನದಿಯನ್ನು ದಾಟುವುದಕ್ಕೆ ಭಕ್ತಿಯೆಂಬ ದೋಣಿ ಬಿಟ್ಟರೆ ಬೇರೆ ಸಾಧನಗಳಿಲ್ಲ” ವೆಂದು ನಾಥರು ಹೇಳಿದ್ದಾರೆ. “ವೇದಪ್ರಿಯನಲ್ಲ, ನಾದ ಪ್ರಿಯನಲ್ಲ ಭಕ್ತಿ ಪ್ರಿಯ ನಮ್ಮ ಕೂಡಲಸಂಗಮದೇವ” ಎಂದು ಶರಣರು ಹೇಳಿದ್ದಾರೆ.

21) ನಾಥರಲ್ಲಿಯೂ ಕೆಲವು ಯೋಗಿನಿಯರ ಪ್ರಸ್ತಾಪವಿದೆ. ಚೌರಾಸಿ ಸಿದ್ಧರಲ್ಲಿ ಮಣಿಭದ್ರಾ, ಮೇಖಲಿಪಾ, ಕನಖಲಿಪಾ ಎಂಬ ಮೂರು ಯೋಗಿನಿಯರು ಬರುತ್ತಾರೆ. ರಾಜತ್ವವನ್ನು ಬಿಟ್ಟು ನಾಥದೀಕ್ಷೆ ಪಡೆದ ಶೃಂಗಾರ ಶತಕದ ಕವಿ ಭರ್ತೃಹರಿಯ ಜತೆಯಲ್ಲಿದ್ದ ಪಿಂಗಳಾದೇವಿ ಎಂಬ ಯೋಗಿನಿಯ ಪ್ರಸ್ತಾಪ ಬರುತ್ತದೆ. ನಾಥರ ಬಾರಾ ಪಂಥಗಳಲ್ಲಿ ಒಂದಾದ ಆಯಿಪಂಥದ ಸ್ಥಾಪಕಿ ಭಗವತಿ ವಿಮಲಾದೇವಿಯು ಯೋಗಿನಿಯಾಗಿದ್ದು, ಈಕೆ ಗೋರಖನ ಶಿಷ್ಯಳಾಗಿದ್ದಾಳೆ. ಮಹಾರಾಷ್ಟ್ರದ ನವನಾಥರಲ್ಲಿ ಗೌರಾಯಿ, ಗಂಗಾದೇವಿ, ಮುಕ್ತಾಯಿಯರು ಬರುತ್ತಾರೆ. ನಾಥರ ಪವಿತ್ರ ಕ್ಷೇತ್ರವಾದ ತ್ರ್ಯಂಬಕೇಶ್ವರವು ಕೌಳಗಿರಿಯ ಬುಡದಲ್ಲಿದೆ. ಈ ಕೌಳಗಿರಿ ಕೌಳಯೋಗಿನಿಯರ ತಾಣವಾಗಿತ್ತು. (ವಿವರಗಳಿಗೆ ನೋಡಿ: “ಕರ್ನಾಟಕ ನಾಥಪಂಥ”, ರಹಮತ್ ತರೀಕೆರೆ, ಪು:81, 2009) ಹೀಗೆ ನಾಥ ಪಂಥದಲ್ಲಿ ಯೋಗಿನಿಯರ ಪ್ರಸ್ತಾಪವಿದ್ದರೆ, ವಚನ ಚಳವಳಿಯಲ್ಲಿ ನೂರಾರು ಶರಣೆಯರ ಪ್ರಸ್ತಾಪವಿದ್ದು, ಅದರಲ್ಲಿ 39 ವಚನಕಾರ್ತಿಯರಿದ್ದಾರೆ. ಅಕ್ಕಮಹಾದೇವಿ, ಮುಕ್ತಾಯಕ್ಕ, ಅಕ್ಕಮ್ಮ, ಸೂಳೆಸಂಕವ್ವೆ, ಕಾಳವ್ವೆ, ಗೊಗ್ಗವ್ವೆ ಈ ಮೊದಲಾದವರನ್ನು ಹೆಸರಿಸಬಹುದಾಗಿದೆ.

22) ಲೋಕದ ಎಲ್ಲರನ್ನೂ ಭೇದಭಾವವಿಲ್ಲದೇ ಕಾಣಬೇಕೆಂದು ನಾಥ ದರ್ಶನ ಹೇಳಿದರೆ, ಸಕಲಜೀವಿಗಳಿಗೂ ಲೇಸನೇ ಬಯಸಬೇಕೆಂದು ಶರಣರು ಹೇಳಿದ್ದಾರೆ. ಒಬ್ಬ ನಾಥನು ಮತ್ತೊಬ್ಬ ನಾಥನನ್ನು ಭೇಟಿಯಾದಾಗ ‘ಆದೇಶ’ ಎಂದು ನಮಸ್ಕರಿಸುತ್ತಾರೆ. ಒಬ್ಬ ಶರಣ ಮತ್ತೊಬ್ಬ ಶರಣನನ್ನು ಕಂಡಾಗ ‘ಶರಣು ಶರಣಾರ್ಥಿ’ ಎಂದು ನಮಿಸುತ್ತಾರೆ.

23) ತಾಲ, ಓಷ್ಠ ನಾ ಪಾರಸಂ ಮುಂತಾದವರನ್ನು ಕಪಾಲಪಟಾನ ಅಮರೀಪಾ, ಖರ್ಪಧಾರಣ, ಸ್ವಕೀಯವೀರ್ಯವನ್ನು ತಾನೇ ದ್ರವೀಕರಿಸಿ ಪಾನ ಮಾಡುವುದು, ಲೇಪ ಮಾಡುವುದು ಮುಂತಾದ ಅಬದ್ಧ ಕಾರ್ಯ ಮಾಡುವವರಿಗೆ ಯಾವುದೇ ಫಲ ದೊರೆಯದೆಂದು ಗೋರಖನಾಥನು ಹೇಳಿದ್ದಾನೆ. (ಸಿದ್ಧ ಸಿದ್ಧಾಂತ ಪದ್ಧತಿ 6-80) “ಕಾಪಾಲಿಕಾಚರಣೆಯನಾಚಾರಿಸುವವರಲ್ಲ ಶರಣರು” ಎಂದು ಅಲ್ಲಮಪ್ರಭು ಹೇಳಿದ್ದಾರೆ (ವ. 1613). ಗೋರಖನಾಥನು ಅಬದ್ಧ ಕಾರ್ಯ ಮಾಡಬಾರದೆಂದು ತನ್ನ ‘ಸಿದ್ಧ ಸಿದ್ಧಾಂತ ಪದ್ಧತಿ’ಯಲ್ಲಿ ಹೇಳಿದ್ದ. ಆದರೆ ಕಾಪಾಲಿಕರಲ್ಲಿ ಈ ಆಚರಣೆಗಳಿರುವುದನ್ನು ಅಲ್ಲಮಪ್ರಭು ವಿಡಂಬಿಸಿದ್ದಾರೆ.

24) ಅಲ್ಲಮಪ್ರಭು ತನ್ನ ಗುರುಪರಂಪರೆಯನ್ನು ಹೇಳಿಕೊಂಡಿರುವ ವಚನದಲ್ಲಿ ‘ಗಣನಾಥ’ ಎಂಬ ಪದವು ಎಲ್ಲನಾಥರ ಹೆಸರಿನೊಂದಿಗೆ ಜೋಡಣೆಯಾಗಿದೆ. ಆದರೆ ಈ ವಚನವು ‘ಹೆಚ್ಚಿನ ವಚನಗಳಲ್ಲಿ’ ಸೇರಿದೆ.
ಅನಾದಿಗಣನಾಥನ ಶಿಷ್ಯನು ಆದಿಗಣನಾಥನು
ಆದಿಗಣನಾಥನ ಶಿಷ್ಯನು ಆಧ್ಯಾತ್ಮಗಣನಾಥನು
ಆಧ್ಯಾತ್ಮ ಗಣನಾಥನ ಶಿಷ್ಯನು ವ್ಯೋಮಸಿದ್ಧ ಗಣನಾಥನು
ವ್ಯೋಮಸಿದ್ಧ ಗಣನಾತನ ಶಿಷ್ಯನು ಬಸವನೆಂಬ ಗಣನಾಥನು
ಬಸವನೆಂಬ ಗಣನಾಥನ ಶಿಷ್ಯನು ಅನಿಮಿಷನೆಂಬ ಗಣನಾಥನು
ಅನಿಮಿಷನೆಂಬ ಗಣನಾಥನ ಶಿಷ್ಯನು ಅಲ್ಮಪ್ರಭುವೆಂಬ ಗಣನಾಥನು. -ಅಲ್ಲಮಪ್ರಭು (ಸ.ವ.ಸಂ. 2, ವ: 759)

“ಅನಾದಿವಿಡಿದು ಬಂದ ಅನುಪಮ ಲಿಂಗವು, ಗುಹೇಶ್ವರನೆಂಬ ಹೆಸರನೊಳಕೊಂಡು ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾ” ಎಂದು ವಚನದ ಕೊನೆಯಲ್ಲಿ ಹೇಳಲಾಗಿದೆ. ಅಲ್ಲಮಪ್ರಭು, ಸಿದ್ಧರಾಮರ ಮುಂದೆ ತನ್ನ ಗುರು ಪರಂಪರೆ ಹೇಳಿದ್ದಾರೆ. ಆದರೆ ಇಲ್ಲಿ ಬರುವ ನಾಥರ ಹೆಸರುಗಳಾವುವೂ ನವನಾಥರ ಹೆಸರುಗಳಲ್ಲ. ಇವರಲ್ಲಿ ಬಸವನೆಂಬ ಗಣನಾಥ ಕೂಡ ಇದ್ದಾರೆ. ಅಲ್ಲಮಪ್ರಭು ತನ್ನ ಗುರು ಪರಂಪರೆಯಲ್ಲಿ ಈ ನಾಥರ ಹೆಸರನ್ನು ಹೇಳಿರುವಂತೆ, ಮುಂದೆ ಬಂದ ನಾಥರು ಅಲ್ಲಮಪ್ರಭುವಿನ ಹೆಸರನ್ನು ತಮ್ಮ ರಚನೆಗಳಲ್ಲಿ ಹೇಳಿದ್ದಾರೆ:
ಶ್ರೀ ಆದಿನಾಥ ಮತ್ಸ್ಯೇಂದ್ರನಾಥ ಶಾಖರಾನಂದ ಭೈರವಾಃ…
ಕಾವೇರೀ ಪೂಜ್ಯಪಾದಸ್ಚ ನಿತ್ಯನಾಥೋ ನಿರಂಜನಃ
ಕಪಾಲಿ ಬಿಂದುನಾಥಚ್ಛ ಕಾಕಂಢೀಶ್ವರಾಹ್ವಯಃ
ಅಲ್ಲಾಮಃ ಪ್ರಭುದೇವಶ್ಚ ಘೋಷಾಚೋಲೀ ಚ. ಟಿಂಚಿಣಿಃ…
-ಸಿದ್ಧಸಾಹಿತ್ಯ, ಮ.ಸು. ಕೃಷ್ಣಮೂರ್ತಿ, ಪು. 153

ನಾಥರು ಅಲ್ಲಮಪ್ರಭುವನ್ನು, ಅಲ್ಲಮಪ್ರಭು ನಾಥರನ್ನು ತಮ್ಮ ರಚನೆಗಳಲ್ಲಿ ಸ್ಮರಣೆ ಮಾಡಿದ್ದಾರೆ. ಹೀಗಾಗಿ ನಾಥರಿಗೂ ವಚನಕಾರರಿಗೂ ಆಧ್ಯಾತ್ಮ ಸಂಭಂಧವಿರುವುದನ್ನು ಕಾಣಬಹುದು. ಹೀಗೆ ಅನೇಕ ವಿಷಯಗಳಲ್ಲಿ ನಾಥರಿಗೂ-ಶರಣರಿಗೂ ಸಾಮ್ಯತೆ ಇದೆ. ಇವೆರಡೂ ಅವೈದಿಕ ನೆಲೆಯಲ್ಲಿ ಹುಟ್ಟಿದ ಭಕ್ತಿ ಪಂಥಗಳು.

ಭಿನ್ನತೆಗಳು:

ನಾಥರಲ್ಲಿ, ಶರಣರಲ್ಲಿ ಅನೇಕ ಸಾಮ್ಯತೆಗಳಿರುವಂತೆ, ಹಲವು ಭಿನ್ನತೆಗಳೂ ಇವೆ.
1) ನಾಥಪಂಥದಲ್ಲಿ ಕಾಪಾಲಕರು – ಕೌಳರು ಇರುವುದರಿಂದ, ಅವರ ಆಚರಣೆಗಳನ್ನು ಶರಣರು ನೇರವಾಗಿಯೇ ವಿರೋಧಿಸಿದ್ದಾರೆ: “ಒಲೆಯಡಿಯನುರುಹಿದಡೆ, ಗೋಳಕನಾಥನ ಕೊರಳ ಸುತ್ತಿತ್ತು…..”
-ಬಸವಣ್ಣ (ಸ.ವ.ಸಂ.1, 931)

ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ
ತನುವಿಕಾರ ಮನವಿಕಾರ ಇಂದ್ರಿಯ ವಿಕಾರದ ಹಿರಿಯರ ನೋಡಾ… -ಅಲ್ಲಮಪ್ರಭು (ಸ.ವ.ಸಂ.2, 129)

ಬಸವಣ್ಣ, ಅಲ್ಲಮಪ್ರಭು ಇನ್ನೂ ಮುಂತಾದ ಶರಣರು ನಾಥರ ವಿಕಾರಗಳನ್ನು ನೋಡಿ ವಿಡಂಬಿಸಿದ್ದಾರೆ.

2) ಯೋಗ ಸಾಧನೆಯೇ ಅಂತಿಮ ಗುರಿಯೆಂದು ತಿಳಿದಿದ್ದ ನಾಥರು ಸದಾ ಯೋಗ ಸಾಧನೆಯಲ್ಲಿಯೇ ಮಗ್ನರಾಗಿರುತ್ತಿದ್ದರು. ಶರಣರಿಗೆ ಕಾಯಕವೇ ಶಿವಯೋಗವಾಗಿತ್ತು.

3) ನಾಥ ಪಂಥವು ಮೂಲತಃ ಗುರುಪಂಥವಾಗಿದೆ. ಗುರು ಪಂಥದಲ್ಲಿ ಗುರುವಿಗೆ ಶಿಷ್ಯನು ಶಿಶುಮಗನಾಗಿರುತ್ತಾನೆ. ಅರಿವೇ ಗುರುವೆಂದು ನಂಬಿದ ಶರಣ ಮಾರ್ಗದಲ್ಲಿ ಶಿಷ್ಯನು ಗುರು ಮುಟ್ಟಿ ಗುರುವಾಗುತ್ತಾನೆ.

4) ನಾಥರು ಕಾಯವಾದಿಗಳು, ಶರಣರು ಕಾಯಕ ಜೀವಿಗಳು, ಕಾಯಕವೇ ಕೈಲಾಸವೆಂದು ನಂಬಿದವರು.

5) ನಾಥರದು ಆಧ್ಯಾತ್ಮ ಸಾಧನೆಯಾದರೆ, ಶರಣರದು ಅನುಭಾವ ಸಾಧನೆಯಾಗಿದೆ. ಆಧ್ಯಾತ್ಮ ವ್ಯಕ್ತಿಗತವಾಗಿದೆ, ಅನುಭಾವ ಸಮಾಜ ಮುಖಿ.

6) ನಾಥರ ಆದಿದೈವ ಕಾಳಭೈರವ, ಶರಣರು ಈ ಭೈರವನನ್ನು ಕುಂಟ ಭೈರವನೆಂದು ವಿಡಂಬಿಸಿದ್ದಾರೆ.
ಜಕ್ಕಿ ಜನ್ನಿ ಎಕ್ಕನಾತಿ ಮಾಯಿರಾಣಿ
ಕುಕ್ಕನೂರ ಬಸದಿ ಚೌಡಿ ಮೈಲಾರ
ಜಿನ್ನನು ಕುಂಟಭೈರವ ಮೊದಲಾದ
ಭೂತ ಪ್ರೇತ ಪಿಶಾಚಿ ದೇವರೆಲ್ಲರು… -ಮಡಿವಾಳ ಮಾಚಿದೇವ (ಸ.ವ.ಸಂ. 8. ವ. 606)

7) ನಾಥರು ಭಂಗಿ ಸೇವನೆ ಮಾಡುತ್ತಿದ್ದರು, ಮದ್ಯಪಾನ ಮಾಡುತ್ತಿದ್ದರು. ಇದನ್ನು ಶರಣರು ನೇರವಾಗಿಯೇ ವಿರೋಧಿಸಿದರು. ಮದ್ಯಪಾನಿಗೆ ಲಿಂಗದೀಕ್ಷೆ ಮಾಡಬಾರದೆಂದು ಚೆನ್ನಬಸವಣ್ಣ ತನ್ನ ವಚನವೊಂದರಲ್ಲಿ ಹೇಳಿದ್ದಾರೆ:
ಮದ್ಯಪಾನಿಗೆ ಲಿಂಗಸಾಹಿತ್ಯವ ಮಾಡಿದಾತ
ಹಿಂಗದೆ ನರಕದಲಾಳುತ್ತಿಪ್ಪನು.
ಮಾಂಸಾಹಾರಿಗೆ ಲಿಂಗ ಸಾಹಿತ್ಯವ ಮಾಡಿದಾತನ
ವಂಶಕ್ಷಯವೆಂದುದು… -ಚೆನ್ನಬಸವಣ್ಣ (ಸ.ವ.ಸಂ. 3. ವ- 156)

8) ನಾಥರು ಆರಾಧಿಸುವ ಭೈರವನು ತ್ರಿಶೂಲ ಹಿಡಿದು, ಅಸುರರ ಮಾಲೆಗಳನ್ನು ಕೊರಳೊಳಗೆ ಹಾಕಿಕೊಂಡಿದ್ದಾನೆ. ಆದರೆ ಶರಣರು ಈ ಭೈರವ ಶಿವನನ್ನು ವಿಡಂಬಿಸಿದ್ದಾರೆ:
ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ
ಬ್ರಹ್ಮಕಪಾಲವಿಲ್ಲ, ಭಸ್ಮ ಭೂಷಣನಲ್ಲ… -ಅಂಬಿಗರ ಚೌಡಯ್ಯ (ಸ.ವ.ಸಂ. 6, ವ. 46)
“ಎಸಗುವ ಸಂಸಾರ ಕುರುಹಿಲ್ಲದಾತಂಗೆ ಹೆಸರಾವುದಿಲ್ಲ”ವೆಂದು ಅಂಬಿಗರ ಚೌಡಯ್ಯ ಈ ವಚನದ ಕೊನೆಯಲ್ಲಿ ಹೇಳಿದ್ದಾರೆ. ಶಿವ ಮತ್ತು ಭೈರವನ ಬಗೆಗೆ ನಾಥರು ಮತ್ತು ಶರಣರಲ್ಲಿ ಭಿನ್ನಾಭಿಪ್ರಾಯಗಳಿವೆ.

9) ನಾಥರು ಮಂತ್ರವಿದ್ಯೆಯನ್ನು ಒಪ್ಪುತ್ತಾರೆ. ಅವರಲ್ಲಿ ಅನೇಕ ಮಾಂತ್ರಿಕರಿದ್ದಾರೆ. ಶರಣರು ಮಂತ್ರ-ತಂತ್ರಗಳನ್ನು ಒಪ್ಪುವುದಿಲ್ಲ. ತಮ್ಮ ಅನೇಕ ವಚನಗಳಲ್ಲಿ ಈ ವಿಷಯ ಕುರಿತು ಶರಣರು ವಿಡಂಬನೆ ಮಾಡಿದ್ದಾರೆ.

10) ನಾಥರು ಯಾತ್ರೆಗೆ ಹೋಗುತ್ತಿದ್ದರು. ಪುಣ್ಯಕ್ಷೇತ್ರಗಳಲ್ಲಿ ವಾಸಿಸುತ್ತಿದ್ದರು. ಕಾಶಿಯ ವಿಶ್ವನಾಥ, ಕೇದಾರದ ಕೇದಾರನಾಥ ಪರಂಪರೆಗಳು ನಾಥರಲ್ಲಿವೆ. ಆದರೆ ಶರಣರು ತೀರ್ಥಕ್ಷೇತ್ರಗಳನ್ನು ನಿರಾಕರಿಸಿದರು.
ಕಾಶಿಯಾತ್ರೆಗೆ ಹೋದೆನೆಂಬ
ಹೇಸಿಮೂಳರ ಮಾತ ಕೇಳಲಾಗದು
ಕೇದಾರಕ್ಕೆ ಹೋದೆನೆಂಬ
ಹೇಸಿ ಹೀನರ ನುಡಿಯನಾಲಿಸಲಾಗದು! -ಅಂಬಿಗರ ಚೌಡಯ್ಯ (ಸ.ವ.ಸಂ. 6, ವ-112)

ಈ ವಚನದಲ್ಲಿ ಅಂಬಿಗರ ಚೌಡಯ್ಯ ಕಾಶಿ ಯಾತ್ರೆಗೆ ಹೋಗುವವರನ್ನು ಹೇಸಿಮೂಳರೆಂದು ಕರೆದಿದ್ದಾರೆ. ಕೇದಾರಕ್ಕೆ ಹೋಗುವವರನ್ನು ದೇಸಿಹೀನರೆಂದು ವಿಡಂಬಿಸಿದ್ದಾರೆ.

11) ನಾಥರಲ್ಲಿ ವಜ್ರಕಾಯದವರಿದ್ದರು. ದೇಹವನ್ನು ಬೆಳೆಸುವುದಾಗಲಿ, ಅದನ್ನು ದಂಡಿಸುವುದಾಗಲಿ ಮುಖ್ಯವಲ್ಲವೆಂದು ಹೇಳಿದ ಶರಣರು, ದೇಹವನ್ನು ದೇವಾಲಯವನ್ನಾಗಿ ಮಾಡಿಕೊಂಡರು.
“ಕಾಯ ಬಲಿದಡೆ ಮಾಯೆ ಬಲಿವುದು, ಮಾಯೆ ಬಲಿದಡೆ ಛಾಯೆ ಬಲಿವುದು
ಕಾಯ ಮಾಯ ಛಾಯೆ ಬಲಿದಡೆ ಸಿದ್ಧನವನಲ್ಲ!
ಕಾಯ ಮಾಯ ಛಾಯದಾಗಿನ ದಾಯವನು ನೆರೆಕಳೆದನಾದಡೆ
ರಾಯನಾತನು ಸಿದ್ಧರಲಿ ಗೋರಕ್ಷ ಕೇಳೆಂದ”
ಎಂದು ಹೇಳಿದ ಪ್ರಭು ತಮ್ಮ ಇನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾರೆ:
ಕಾಯವುಳ್ಳನ್ನಕ್ಕ ಶರಣರ ಸಂಗದಿಂದ ಅರಿಯಬೇಕು
ಜೀವವುಳ್ಳನ್ನಕ್ಕ ಅರಿವಿನ ಮುಖದಿಂದ ಅರಿಯಬೇಕು -ಅಲ್ಲಮಪ್ರಭು (ಸ.ವ. ಸಂ. 2, ವ: 1107)

ಶೂನ್ಯ ಸಂಪಾದನೆಯಲ್ಲಿ ಗೋರಕ್ಷನ ಸಂಪಾದನೆಯೂ ಒಂದಾಗಿದೆ. ಇಲ್ಲಿ ಬಂದಿರುವ ಗೋರಕ್ಷನಿಗೂ, ಗೋರಖನಾಥನಿಗೂ ಸಂಬಂಧವಿಲ್ಲ. ಅಲ್ಲಮಪ್ರಭು ಈ ಗೋರಕ್ಷನೊಂದಿಗೆ ನಡೆಸುವ ಸಂಭಾಷಣೆಯಲ್ಲಿ ವಜ್ರಕಾಯದ ಬಗೆಗೆ ಸ್ಪಷ್ಟಪಡಿಸಿದ್ದಾರೆ.
ನಾಥ ದರ್ಶನವು ಅನೇಕ ದರ್ಶನಗಳಿಂದ ಕೂಡಿದೆ. ಅದೊಂದು ಸಂಕರ ರೂಪಿ ಪಂಥ. ಕೌಳ, ಕಾಪಾಲಿಕ, ಪಾಶುಪತ, ಈ ಮೊದಲಾದ ಶೈವ ಶಾಖೆಗಳು ನಂತರದ ಕಾಲದಲ್ಲಿ ನಾಥ ಪಂಥದಲ್ಲಿ ಸೇರಿಕೊಂಡವು. ಕೌಳ ಪಂಥದಿಂದ ಬಂದ ನಾಥರು ಕೆಳಜಾತಿ ಹೆಣ್ಣನ್ನು ಮುದ್ರೆಯನ್ನಾಗಿ ಮಾಡಿಕೊಂಡು ಸಾಧನೆಯ ಹೆಸರಿನಲ್ಲಿ ಭೋಗಲೋಲುಪರಾಗಿದ್ದರು. ಶರಣರು ಇಂತಹ ಭೋಗಲೋಲುಪರನ್ನು ನೇರವಾಗಿ ವಿರೋಧಿಸಿದ್ದಾರೆ. ಭಕ್ತನ ಮನ ಹೆಣ್ಣಿನೊಳಗಾದರೆ ವಿವಾಹವಾಗಿ ಕೂಡುವುದೆಂದು ಸಿದ್ಧರಾಮೇಶ್ವರರು ಸ್ಪಷ್ಟಪಡಿಸಿದ್ದಾರೆ.
ದಾಸಿಯ ಸಂಗ ಎರಡನೆಯ ಪಾತಕ
ವೇಶಿಯ ಸಂಗ ಮೂರನೆಯ ಪಾತಕ
ಮೀಸಲಳಿದ ಪರಸ್ತ್ರೀಯರ ಸಂಗ ಪಂಚಮಹಾಪಾತಕ. –ಹಡಪದ ಅಪ್ಪಣ್ಣ (ಸ.ವ. ಸಂ. 9, ವ:959)

12) ಹೆಣ್ಣಿನ ಬಗ್ಗೆ ಅನುಮಾನ ಮತ್ತು ಭಯವನ್ನು ಹೊಂದಿದ್ದ ನಾಥರು, ಹೆಣ್ಣನ್ನು ಮಾಯೆಯೆಂದೇ ತಿಳಿದಿದ್ದರು. ಆದರೆ ಶರಣರು ಹೆಣ್ಣನ್ನು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನನೆಂದು ಗೌರವಿಸಿದರು. ಹೊನ್ನು, ಹೆಣ್ಣು, ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆಯೆಂದು ಅಲ್ಲಮಪ್ರಭು ಸ್ಪಷ್ಟಪಡಿಸಿದರು.

13) ನಾಥಪಂಥದ ಕೌಳರು ಪಂಚಮಕಾರವಾದಿಗಳಾಗಿದ್ದರು. ಮಧು – ಮದಿರೆ ಇವರಿಗೆ ಅನಿವಾರ್ಯವಾಗಿತ್ತು. ಪಂಚ ಮಕಾರಗಳನ್ನು ಶರಣರು ನೇರವಾಗಿ ತಿರಸ್ಕರಿಸಿದರು.
ಕಾಳಾಮುಖಿ ಕಂಗೆಟ್ಟ, ಶೈವ ಸೈವೆರಗಾದ
ಪಾಶುಪತಿ ಪಥವರಿಯ, ಮಹಾವೃತಿ ಮದದಲಳಿದ
ಕಾಪಾಲಿ ಮರುಳಾಗಿ ತಿರುಗಿದ… -ಚೆನ್ನಬಸವಣ್ಣ (ಸ.ವ.ಸಂ. 3, ವ: 604)

14) ನಾಥರು ಮತ್ತು ಕೌಳನಾಥರು ಶಕ್ತಿ ದೇವತೆಗಳ ಆರಾಧಕರಾಗಿದ್ದರು. ಚುಂಚನಗಿರಿಯಲ್ಲಿ ಕಂಬದಮ್ಮ, ಲುಂಕೆ ಮಲೆಯಲ್ಲಿ ತುಪ್ಪದಮ್ಮ, ಚಂದ್ರಗುತ್ತಿಯಲ್ಲಿ ಗುತ್ತೆಮ್ಮ, ಕದ್ರಿಯಲ್ಲಿ ಮರುಳು ಧೂಮಾವತಿ, ಏಕನಾಥ – ಜೋಗನಾಥರ ಆವರಣದಲ್ಲಿಯೇ ಎಲ್ಲಮ್ಮ ನೆಲೆಸಿದ್ದಾಳೆ. ಸವದತ್ತಿ ಗುಡ್ಡದಲ್ಲಿ ಜೋಗಪ್ಪಗಳು ಕಾಣಿಸಿಕೊಳ್ಳುತ್ತಾರೆ. ಅಲ್ಲಿ ಜೋಗುಳದ ಬಾವಿಯಿದೆ. ನಾಥಪಂಥದ ಜೊಗಿಗಳೇ ಜೋಗಪ್ಪಗಳಾಗಿದ್ದಾರೆ. ನಾಥಪಂಥದ ಲಾಂಛನವಾದ ತ್ರಿಶೂಲವು ಶಕ್ತಿಯ ಸಂಕೇತವಾಗಿದೆ.
ಶರಣರಲ್ಲಿ ತನ್ನ ತಾನು ತಿಳಿಯುವುದೇ ಸಾಧನೆಯ ಮಾರ್ಗ. ಇಷ್ಟಲಿಂಗ ಅದರ ಪ್ರತೀಕ. ಹಾಗಾಗಿ ಅವರು ಭೈರವ, ಜೋಗಿಗಳನ್ನು ತಮ್ಮ ವಚನಗಳಲ್ಲಿ ವಿಡಂಬಿಸಿದ್ದಾರೆ:
ಭೈರವನನಾರಾಧಿಸಿ ಬಾಹಿರವೋದರಯ್ಯಾ
ಮೈಲಾರನನಾರಾಧಿಸಿ ಕುರುಳ ಬೆರಳ ಕಡಿಸಿಕೊಂಡು ನಾಯಾಗಿ ಬಗಳುತ್ತಿಪ್ಪರು. -ಚೆನ್ನಬಸವಣ್ಣ (ಸ.ವ.ಸಂ. 3, ವ-146)

15) ಶರಣರಲ್ಲಿ ಭಕ್ತಿಗೆ ಮಹತ್ವದ ಸ್ಥಾನವಿದೆ. ಭಕ್ತಿಯ ಹೆಸರಿನಲ್ಲಿ ಅನೇಕ ವಿಚಾರಗಳನ್ನು ಮಾಡುತ್ತಿದ್ದ ಕೌಳನಾಥರನ್ನು ಚೆನ್ನಬಸವಣ್ಣ ತೀವ್ರವಾಗಿ ವಿಡಂಬಿಸಿದ್ದಾನೆ.
ಶೈವ ಸೈವೆರಗಾದ, ಪಾಶುಪತಿ ಪಥವನರಿಯ
ಕಾಳಾಮುಖಿ ಕಂಗೆಟ್ಟ, ಮಹಾವ್ರತಿ ಮದವೇರಿದ
ಸನ್ಯಾಸಿ ಪಾಷಂಡಿಯಾದ, ಕಾಪಾಲಿ ಮರುಳಾಗಿ ತಿರುಗಿದ
ಈ ಆರು ಭಕ್ತಿ ಸ್ಥಲಕ್ಕೆ ಸಲ್ಲವು ಕೇಳಿರಣ್ಣಾ. – ಚೆನ್ನಬಸವಣ್ಣ (ಸ.ವ.ಸಂ.2, ವ:1688)

ವಜ್ರಯಾನದ ಸಾಧಕರಿಗಿಂತ, ಶೈವ ಸಾಧಕರೇ ನಾಥ ಪಂಥದಲ್ಲಿ ಹೆಚ್ಚಾಗಿದ್ದರು. ಇಂತಹ ಪಾಶುಪತ – ಕಾಳಾಮುಖ ನಾಥರನ್ನು ಮತ್ತು ಅವರ ಭಕ್ತಿಯ ಮಾರ್ಗವನ್ನು ನಿರಾಕರಿಸಲಾಗಿದೆ.

16) ಭಕ್ತಿಯ ಹೆಸರಿನಲ್ಲಿ ನಾಥರು ಅನೇಕ ವಾಮಾಚಾರಗಳನ್ನು ಮಾಡುತ್ತಿದ್ದರು. ಮದ್ಯಪಾನ ಮಾಡುತ್ತ, ಭಂಗಿ ಸೇದುತ್ತ, ಸದಾ ನಿಶೆಯಲ್ಲಿರುತ್ತಿದ್ದರು. ಇಂತವರಿಂದ ಭಕ್ತಿ ಮಾರ್ಗ ಬೆಳೆಯದೆಂದು ಅಲ್ಲಮಪ್ರಭು ಸ್ಪಷ್ಟಪಡಿಸಿದ್ದಾರೆ:
ಕೊಂಕಣ ದ್ವೀಪದಲ್ಲಿ ಒಂದು ಕಪಿ ಹುಟ್ಟಿತ್ತು
ತಮವ ಮಾಡುವ ಸಪ್ತ ಋಷಿಗಳ ನುಂಗಿತ್ತು
ನವನಾಥಸಿದ್ಧರ ತೊತ್ತಳದುಳಿಯಿತ್ತು… – ಅಲ್ಲಮಪ್ರಭು (ಸ.ವ.ಸಂ.2, ವ: 371)

ಇಂತಹ ಇನ್ನೂ ಅನೇಕ ವಚನಗಳಲ್ಲಿ ನಾಥರ ಬಗೆಗೆ, ಅವರ ಆಚರಣೆಗಳ ಬಗೆಗೆ ಅವರು ನಂಬಿದ್ದ ಸಿದ್ಧಾಂತಗಳ ಬಗೆಗೆ ಶರಣರು ವಿಡಂಬನೆ ಮಾಡಿದ್ದಾರೆ. ಅವರ ನಿಲುವುಗಳನ್ನು ವಿರೋಧಿಸಿದ್ದಾರೆ.

17) ನವನಾಥ ಸಿದ್ಧರ ಸಾಧನೆ ಅಪ್ರತಿಮವಾದುದು. ಆದರೆ ಅ ಸಾಧನೆಯ ಮಾರ್ಗವು ಶರಣರಿಗೆ ಸರಿ ಕಾಣಲಿಲ್ಲ. ಕೊನೆಗೆ ಬಂದ ಕಪಿಯಿಂದ ಆ ಸಿದ್ಧಾಂತ ನಾಶವಾಯಿತೆಂದು ಬಸವಣ್ಣ ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ:
ಒಲೆಯಡಿಯನುರುಹಿದಡೆ
ಗೋಳಕನಾಥನ ಕೊರಳ ಸುತ್ತಿತ್ತು
ಮಹೀತಳನ ಜತೆ ಸೀಯಿತ್ತು, ಮರೀಚಕನ ಶಿರ ಬೆಂದಿತ್ತು. -ಬಸವಣ್ಣ ( ಸ.ವ.ಸಂ. 1, ವ:931)

ಈ ವಚನದಲ್ಲಿ ಗೋರಖನಾಥನನ್ನು ಗೋಳಖನಾಥನೆಂದು ಕರೆದಿದ್ದಾರೆ.

18) ನಾಥಪಂಥ ಪ್ರಾರಂಭವಾದ ಸಂದರ್ಭದಲ್ಲಿ ಸ್ತ್ರೀಯರಿಗೆ ದೀಕ್ಷೆಯಿರಲಿಲ್ಲ. ನಂತರದ ವರ್ಷಗಳಲ್ಲಿ ಮಹಿಳಾ ಸಾಧಕಿಯರೂ ನಾಥಪಂಥದ ಪರಿಚಾರಿಕೆಯರಾದರು. ಆದರೆ ಶರಣರಲ್ಲಿ ಪ್ರಾರಂಭದಿಂದಲೇ ಬಹುಸಂಖ್ಯೆಯ ಶರಣರೆಯರು ವಚನ ಚಳವಳಿಯನ್ನು ಪ್ರವೇಶಿಸಿದರು. ಶರಣರಿಗೆ ಸಮಾನವಾಗಿ ಸಾಧನೆ ಮಾಡಿ ತೋರಿಸಿದರು.

19) ಲೈಂಗಿಕತೆಯನ್ನು ಆಧ್ಯಾತ್ಮದ ಚೌಕಟ್ಟಿನಲ್ಲಿ ತರುವ ಕೌಳರ ತಾಂತ್ರಿಕ ಪ್ರಯೋಗಗಳನ್ನು ಅಲ್ಲಮಪ್ರಭು ಮೊದಲಾದ ಶರಣರು ನಿರಾಕರಿಸಿದರು. ಕಾಪಾಲಿಕ – ಕೌಳರನ್ನು ಕೂಡಿಸಿಕೊಂಡು ನಡೆದ ನಾಥಪಂಥದ ತಾಂತ್ರಿಕ ಮಾರ್ಗದ ಅವನತಿಯನ್ನು ಅಲ್ಲಮಪ್ರಭು ಹೀಗೆ ಹೇಳಿದ್ದಾರೆ:
ಆಸೆಯೆಂಬ ಶೂಲದ ಮೇಲೆ, ವೇಷವೆಂಬ ಹೆಣನ ಕುಳ್ಳಿರಿಸಿ
ಧರೆಯ ಮೇಲುಳ್ಳ ಹಿರಿಯರು ಹೀಂಗೆ ಸವೆದರು ನೋಡಾ !
ಆಸೆಯ ಮುಂದಿಟ್ಟುಕೊಂಡು ಸುಳಿವ ಹಿರಿಯರ ಕಂಡು
ಹೇಸಿಕೆಯಾಯಿತ್ತು ಗುಹೇಶ್ವರಾ. -ಅಲ್ಲಮಪ್ರಭು (ಸ.ವ.ಸಂ. 2, ವ:466)

20) ಸಮಸ್ತ ಜೀವಜಂತುಗಳು ಸಾಯುವುದಕ್ಕಾಗಿಯೇ ಜನ್ಮ ಪಡೆಯುತ್ತವೆ. ಜನ್ಮವನ್ನು ಪಡೆಯುವದಕ್ಕಾಗಿಯೇ ಸಾಯುತ್ತವೆ ಎಂಬ ನಾಥರ ವಿಚಾರಧಾರೆಯನ್ನು ಶರಣರು ಒಪ್ಪಲಿಲ್ಲ. ಶರಣರಲ್ಲಿ ಪುನರ್ಜನ್ಮದ ಪರಿಕಲ್ಪನೆಯೇ ಇಲ್ಲ.

21) ಉತ್ತರಾಪಥದ ಮೇಲೆ ಮೇಘವರ್ಷ ಕರೆಯಲು
ಆ ದೇಶದಲ್ಲಿ ಬರನಾಯಿತ್ತು!
ಆ ದೇಶದ ಪ್ರಾಣಿಗಳೆಲ್ಲರೂ ಮೃತರಾದರು! -ಅಲ್ಲಮಪ್ರಭು (ಸ.ವ.ಸಂ. 2, ವ: 227)

ಈ ವಚನದಲ್ಲಿ ಅಲ್ಲಮಪ್ರಭು ಹೇಳಿರುವ ಉತ್ತರಾಪಥವೆಂದರೆ ಅದು ಕೌಳ ಶೈವದ ಒಂದು ಮಾರ್ಗವಾಗಿದೆ. ಮೇಘ ವರ್ಷವೆಂದರೆ ವಿಷಯೇಂದ್ರಿಯದ ಮಳೆ. ಈ ಕೌಳ ಮಾರ್ಗದ ವಾಮಾಚರದ ವಿಷಯಾಸಕ್ತಿಯಲ್ಲಿ ಮುಳಗಿದವರೆಲ್ಲ ಮೃತರಾದರೆಂದು ಹೇಳಿರುವ ಅಲ್ಲಮರ ಈ ವಚನವು ನಾಥರ ದುಃಸ್ಥಿತಿಯನ್ನು ಹೇಳುತ್ತದೆ.

22) ಬೌದ್ಧ ಮತ್ತು ಶೈವ ವಿಚಾರಧಾರೆಗಳ ಪ್ರೇರಣೆ ಪ್ರಭಾವಗಳಿಂದ ಹುಟ್ಟಿದ ನಾಥ ಪಂಥವು ಹಠಯೋಗದ ತಳಹದಿಯ ಮೇಲೆ ನಿಂತಿದೆ. ಗೋರಖನಾಥನು ಆರಂಭಿಸಿದ ಯೋಗ ಪ್ರಧಾನವಾದ ನಾಥ ಸಂಪ್ರದಾಯದ ಬಗೆಗೆ ಅನೇಕ ಶರಣರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

ಶೂನ್ಯ ಸಂಪಾದನೆಗಳಲ್ಲಿ ಬರುವ ಗೋರಕ್ಷನ ಪ್ರಸಂಗವು ಜನಪ್ರಿಯವಾದುದಾಗಿದೆ. ಬಹಳಷ್ಟು ಓದುಗರು ಮತ್ತು ಕೆಲವು ವಿದ್ವಾಂಸರು ಗೋರಕ್ಷನೇ ಗೋರಖನಾಥನೆಂದು ತಿಳಿದುಕೊಂಡಿದ್ದಾರೆ. 10ನೇ ಶತಮಾನದ ಗೋರಖನಾಥನಿಗೂ, 12ನೇ ಶತಮಾನದ ಗೋರಕ್ಷನಿಗೂ ಯಾವುದೇ ಸಂಬಂಧವಿಲ್ಲ. 12ನೇ ಶತಮಾನದಲ್ಲಿ ಬರುವ ಗೋರಕ್ಷನು ವಜ್ರಕಾಯಿಯಾಗಿದ್ದು, ಈತನು ನಾಥ ಸಾಧಕ. ಮಚೇಂದ್ರನಾಥ ಮತ್ತು ಗೋರಖನಾಥರನ್ನು ಶರಣರಲ್ಲಿ ಅಲ್ಲಮಪ್ರಭು – ಬಸವಣ್ಣ ಇವರಿಗೆ ಹೋಲಿಸಲಾಗುತ್ತಿದೆ. ಈ ಹೋಲಿಕೆ ಸರಿಯಾದುದಲ್ಲ. ಅಲ್ಲಮರ ವ್ಯಕ್ತಿತ್ವವೇ ಬೇರೆ. ಮಚೇಂದ್ರನಾಥರ ವ್ಯಕ್ತಿತ್ವವೇ ಬೇರೆ.

ಕರ್ನಾಟಕದ ನಾಥರ ಚರಿತ್ರೆಯನ್ನು ಬರೆಯುವಾಗ ಇಲ್ಲಿರುವ ಅನೇಕ ನಾಥ ಕೇಂದ್ರಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಮಂಗಳೂರಿನ ಕದ್ರಿಯ ಜೋಗಿಮಠ, ವಿಟ್ಲದ ಜೋಗಿಮಠ, ಕುಂದಾಪುರದ ಹಲವರಿ ಕೋಡಶಾಹಿಮಠ, ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿಯ ಜೋಗಿಮಠ, ಬೆಳಗಾವಿ ಜಿಲ್ಲೆಯ ಖಾನಾಪುರದ ಹಂಡಿ ಬಡಿಗನಾಥ ಮಠ, ಲುಂಕೆಯ ಮಲೆ ಮಠ, ಖಾನಾಪುರ ತಾಲೂಕಿನ ಡೊಂಗರಗಾಂವಿನಲ್ಲಿರುವ ಸಿದ್ಧ ಮಚೇಂದ್ರನಾಥ ದಾದಾಕಾ ಮಠ, ಕಿರುವಳೆಯಲ್ಲಿರುವ ಶ್ರೀಗುರು ಗೋರಕ್ಷನಾಥ ಮಠ, ಸವದತ್ತಿಯ ಎಲ್ಲಮ್ಮನ ಗುಡ್ಡದಲ್ಲಿರುವ ಜೋಗಿನಾಥ ಮಠ ಈ ಮುಂತಾದ ನಾಥ ಮಠಗಳ ಸಂಶೋಧನೆ ನಡೆದು, ನಾಥರ ಸ್ಮಾರಕಗಳ ಬಗೆಗೆ ಕೃತಿ ತರುವುದು ಬಹುಮಹತ್ವದ ವಿಷಯವಾಗಿದೆ. ಈಗಾಗಲೇ ಶರಣರ ಸ್ಮಾರಕಗಳ ಬಗೆಗೆ ಕೃತಿಗಳು ಪ್ರಕಟವಾಗಿವೆ.

ಬೀದರ- ಕಲಬುರಗಿ ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿರುವ ಜೋಗಿಮಠಗಳಿರದಿದ್ದರೂ, ಇಲ್ಲಿ ಅನೇಕ ಜೋಗಿಗಳಾಗಿ ಹೋಗಿದ್ದಾರೆ. ಜೋಗಿನಾಥರ ಅಧ್ಯಯನವೇ ವಿಶೇಷವಾದುದಾಗಿದೆ. ಈ ಪ್ರದೇಶಗಳಲ್ಲಿ ಇಂದಿಗೂ ನಾಥರ ಹೆಸರುಗಳೇ ಪ್ರಧಾನವಾಗಿ ಕಾಣಿಸಿಕೊಳ್ಳುತ್ತವೆ. ಹಿಂದಿನ ಸಚಿವರಾಗಿದ್ದ ದಿವಂಗತ ವೈಜನಾಥ ಪಾಟೀಲ, ವಿಶ್ವನಾಥ ಪಾಟೀಲ, ಕಾಶೀನಾಥ ಬೇಲೂರ, ಇವರೆಲ್ಲ ಲಿಂಗಾಯತ ಸಚಿವರಾಗಿದ್ದು ಈ ಪ್ರದೇಶದಲ್ಲಿ ನಾಥರಿಗೂ – ಲಿಂಗಾಯತರಿಗೂ ಇರುವ ಸಂಬಂಧದ ಬಗೆಗೆ ಹೆಚ್ಚಿನ ಅಧ್ಯಯನವಾಗಬೇಕಾಗಿದೆ. ಇವರೆಲ್ಲ ಬಸವಣ್ಣನವರ ಕಾಲಕ್ಕೆ ದೀಕ್ಷೆ ಪಡೆದು ಲಿಂಗಾಯತರಾಗಿದ್ದಾರೆ. ಆದರೆ ಇವರ ಪೂರ್ವಜರು ನಾಥ ಪರಂಪರೆಗೆ ಸೇರಿರಬಹುದಾಗಿದೆ. ಶರಣರ ಉದಯಕ್ಕೂ ಮೊದಲು ಈ ಪ್ರದೇಶದಲ್ಲಿ ನಾಥರು – ಜೈನರು ಹೆಚ್ಚು ಸಂಖ್ಯೆಯಲ್ಲಿದ್ದರು. ಈ ಜೈನರು – ನಾಥರು ಬಸವಣ್ಣನವರಿಂದ ದೀಕ್ಷೆ ಪಡೆದು ಲಿಂಗಾಯತರಾಗಿರಬಹುದು. ಏಕೆಂದರೆ ದೀಕ್ಷ ಲಿಂಗಾಯತರು ಈ ಪ್ರದೇಶವನ್ನು ಬಿಟ್ಟರೆ ಬೇರೆ ಪ್ರದೇಶಗಳಲ್ಲಿ ಕಾಣಿಸುವುದಿಲ್ಲ. ಇವರ ಬಗೆಗೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಬೀದರ ಜಿಲ್ಲೆಯಲ್ಲಿ ಮಚೇಂದ್ರನಾಥ ಎಂಬ ಹೆಸರನ್ನು ಹೆಚ್ಚಾಗಿ ದಲಿತರು ಇಟ್ಟುಕೊಂಡಿದ್ದಾರೆ. ಹೀಗಾಗಿ ಮಚೇಂದ್ರನಾಥನಿಗೂ – ದಲಿತರಿಗೂ ಇರುವ ಸಂಬಂಧದ ಬಗೆಗೆ ಅಧ್ಯಯನಗಳು ನಡೆಯಬೇಕಾಗಿದೆ. ಶರಣರಿಗೆ ಬೌದ್ಧ ಚಿಂತನೆ ಬಂದದ್ದು ನಾಥರ ಮೂಲಕವೆಂಬ ಚರ್ಚೆಯಿದೆ. ನಾಥರಲ್ಲಿರುವ ವೈಚಾರಿಕತೆಗೆ ಬೌದ್ಧರ ವಜ್ರಯಾನ ಪಂಥವೇ ಮುಖ್ಯ ಕಾರಣ. ಹೀಗಾಗಿ ಬೌದ್ಧ – ನಾಥ – ಶರಣ ಚಿಂತನೆಗಳ ಬಗೆಗೆ ತೌಲನಿಕ ಅಧ್ಯಯನ ನಡೆಯಬೇಕಾದ ಅಗತ್ಯವಿದೆ.

ಕೂಡಲಸಂಗಮವು 12ನೆಯ ಶತಮಾನಕ್ಕಿಂತ ಮೊದಲು ನಾಥ ಕೇಂದ್ರವಾಗಿತ್ತು. ಸಂಗಮನಾಥ ದೇವಾಲಯ ಅಲ್ಲಿದೆ. ಅಂತೆಯೇ ಅದು ಕಪ್ಪಡಿ ಸಂಗಮವಾಗಿತ್ತು. ನಾಥರಲ್ಲಿ ಕಪ್ಪಡಿಯೆಂಬ ಪದಕ್ಕೆ ವಿಶಿಷ್ಟವಾದ ಅರ್ಥವಿದೆ. ಬಸವಣ್ಣನವರು ಕೂಡಲಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದ ಅಲ್ಲಿ ನಾಥ ಮಠವಿದ್ದುದ್ದರಿಂದ ಬಸವೇಶ್ವರ ನಾಥ ಪಂಥದ ಅನುಯಾಯಿಯೆಂದು ಕಪಟರಾಳ ಕೃಷ್ಣರಾಯರಂತಹ ಸಂಶೋಧಕರು ಹೇಳಿರುವುದುಂಟು. ಬಸವಣ್ಣ ಶೈವ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದ ಮಾತ್ರಕ್ಕೆ ಬ್ರಾಹ್ಮಣನಾಗಲಿಲ್ಲ. ಕೂಡಲಸಂಗಮದಲ್ಲಿ ಓದಿದಾಕ್ಷಣ ನಾಥನಾಗಲಿಲ್ಲ. ಈ ಎಲ್ಲ ನೆಲೆಗಳನ್ನು ದಾಟಿ ಬಂದ ಬಸವಣ್ಣನವರು ಲಿಂಗಾಯತ ಧರ್ಮದ ಸಂಸ್ಥಾಪಕರಾದರು. ಈ ಸತ್ಯವನ್ನರಿಯದ ಕೆಲವರು ತಮಗೆ ತಿಳಿದಂತೆ ಮಾತನಾಡುತ್ತಾರೆ. ಅಲ್ಲಮ, ಬಸವಣ್ಣ, ಸಿದ್ಧರಾಮರಂತಹ ಶರಣರನ್ನು ನಾಥ ಪರಂಪರೆಗೆ ಸೇರಿಸಿಬಿಡುತ್ತಾರೆ. ಯಾರು ಏನೇ ಹೇಳಲಿ, ಏನೇ ಬರೆಯಲಿ ಸತ್ಯವಾವುದೆಂಬುದನ್ನು ಪ್ರಾಜ್ಞರು ತಿಳಿದುಕೊಳ್ಳಬೇಕು.

ಶರಣರು ಜಾತ್ರೆ – ಉತ್ಸವಗಳ ವಿರೋಧಿಯಾಗಿದ್ದರು. ದೇವಸ್ಥಾನಗಳಿಂದ ದೂರವಿದ್ದರು. ಆದರೆ ನಂತರದ ವರ್ಷಗಳಲ್ಲಿ ಒಬೊಬ್ಬ ಶರಣರಿಗೂ ಒಂದೊಂದು ದೇವಸ್ಥಾನ ನಿರ್ಮಾಣವಾದವು. ಜಾತ್ರೆಗಳು ಪ್ರಾರಂಭವಾದವು. ಸೊಲ್ಲಾಪುರದಲ್ಲಿ ಸಿದ್ಧರಾಮನ ಜಾತ್ರೆ, ಉಳುವಿಯಲ್ಲಿ ಚೆನ್ನಬಸವಣ್ಣನ ಜಾತ್ರೆ ಹೀಗೆ… ಇಂತಹ ಜಾತ್ರೆಗಳ ಬಗೆಗೆ ಇಂತಹ ದೇವಸ್ಥಾನಗಳ ಬಗೆಗೆ ಅಧ್ಯಯನ ನಡೆದಿಲ್ಲ. ನಾಥರ ಜಾತ್ರೆಗಳಂತೂ ಪ್ರಸಿದ್ಧವಾಗಿವೆ. ಈ ಎಲ್ಲ ದೇವಸ್ಥಾನ – ಮಠಗಳ ಜಾತ್ರೆಗಳ ಬಗೆಗೆ ತೌಲನಿಕ ಅಧ್ಯಯನ ನಡೆದರೆ, ಜಾತ್ರೆಯಲ್ಲಿನ ಆಚರಣೆಗಳ ಮೂಲಕ ಮಠ-ದೇವಸ್ಥಾನಗಳಲ್ಲಿ ನಡೆಯುವ ಪೂಜೆಗಳ ಮೂಲಕ ಸಾಂಸ್ಕೃತಿಕ ಸಂಗತಿಗಳು ಹೊರಬರುತ್ತವೆ. ಹೀಗಾಗಿ ಈ ಅಧ್ಯಯನಗಳಿಗೆ ಮಹತ್ವದ ಸ್ಥಾನವಿದೆ. ನಾಥರು ಮತ್ತು ಶರಣರ ಹೆಸರಿನಲ್ಲಿ ನಡೆಯುತ್ತಿರುವ ಇಂದಿನ ಜಾತ್ರೆಗಳಲ್ಲಿ ಗೋರಖನಾಥ – ಬಸವಣ್ಣ ಇವರ ಮೂಲ ಸಿದ್ಧಾಂತಗಳು ಕಾಣಿಸುವುದಿಲ್ಲ. ಬದಲಾಗಿ ಅವು ಜನಪದೀಕರಣಗೊಂಡು ತಮ್ಮದೇ ಆದ ರೀತಿಯಲ್ಲಿ ಬೆಳೆದ ಸಂಕರರೂಪಗಳಾಗಿವೆ. ಈ ಸಂಕರತನವನ್ನು ವಿರೋಧಿಸದೆ ಸೂಕ್ಷ್ಮ ಅಧ್ಯಯನಕ್ಕೊಳಪಡಿಸಿ ಕರ್ನಾಟಕದ ಭಕ್ತಿಪಂಥಗಳ ಹೊಸ ಬೆಳವಣಿಗೆಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ನಾಥರಲ್ಲಿ, ಅದರಲ್ಲಿಯೂ ಗೋರಖನಾಥನು ವಿಚಾರವಾದಿಯಾಗಿದ್ದನೆಂದು ತಿಳಿದುಬರುತ್ತದೆ. ಮಚೇಂದ್ರನಾಥನು ಬೌದ್ಧ ತಾಂತ್ರಿಕ ಪಂಥದವನೆಂದು ಕೆಲವರು ಹೇಳುತ್ತಾರೆ. ಆದರೆ ಬೌದ್ಧ ವಜ್ರಯಾನ ಪಂಥಕ್ಕೆ ಶೈವ ರೂಪ ಕೊಟ್ಟವನು ಗೋರಖನಾಥ. ಹೀಗಾಗಿ ಈ ಇಬ್ಬರು ನಾಥರ ಬಗೆಗೆ ವಿಶೇಷ ಅಧ್ಯಯನಗಳು ನಡೆಯಬೇಕಾಗಿದೆ. ಕರ್ನಾಟಕದಲ್ಲಿ ನಾಥರೂ – ಕಾಪಾಲಿಕರೂ ಕೂಡಿಕೊಂಡ ಬಳಿಕ ಅನೇಕ ಕಾಪಾಲಿಕ ಆಚರಣೆಗಳು ಈ ಪಂಥದಲ್ಲಿ ಮುಂದುವರೆದವು. ಇಂತಹ ಕಾಪಾಲಿಕರ ಮೌಢ್ಯಾಚರಣೆಗಳನ್ನು ಕಂಡು ಶರಣರು ನಾಥರನ್ನು ವಿರೋಧಿಸುವುದುಂಟು. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳಲಾರದ ಕೆಲವು ವಿದ್ವಾಂಸರು ಶರಣರ ಬಗೆಗೆ ಬೀಸು ಹೇಳಿಕೆಗಳನ್ನು ಕೊಡುವುದು ಎಷ್ಟರಮಟ್ಟಿಗೆ ಸರಿ? ಡಾ. ರಹಮತ್ ತರೀಕೆರೆ ‘ಕರ್ನಾಟಕದ ನಾಥಪಂಥ’ ಎಂಬ ತಮ್ಮ ಕೃತಿಯಲ್ಲಿ ಹೀಗೆ ಹೇಳಿದ್ದಾರೆ: “ವೈದಿಕ ವಿರೋಧಿಯಾದ ಶರಣರು, ನಾಥರ ಕಾಪಾಲಿಕರ ವಿಷಯ ಬಂದಾಗ ವೈದಿಕ ನಿಲುವನ್ನೇ ತಳೆಯುತ್ತಾರೆ. ಉದಾ- ಅವರು ನಾಯಿಯನ್ನು ಅಪಾವಿತ್ರ್ಯದ ಸಂಕೇತವಾಗಿಸಿದರು. ಭೈರವಾರಾಧನೆಯ ಬಲಿ, ಮಾಂಸಾಹಾರ, ಮದ್ಯಪಾನಗಳನ್ನು ತಿರಸ್ಕರಿಸಿದರು. ಶರಣರು ಗೋರಖನನ್ನು ಸೋಲಿಸುವ ಕಥನಗಳು ಹುಟ್ಟಿದ್ದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು.” (ಕರ್ನಾಟಕದ ನಾಥಪಂಥ, ಪು: 97, 2009 ಕ.ವಿ.ವಿ. ಹಂಪಿ)

ತಮ್ಮ ಬದುಕಿನುದ್ದಕ್ಕೂ ವೈದಿಕತೆಯನ್ನು ವಿರೋಧಿಸುತ್ತ ಬಂದ ಶರಣರು ಹೇಗೆ ವೈದಿಕ ನಿಲುವನ್ನು ತಾಳುತ್ತಾರೆ? ಮೌಢ್ಯಾಚರಣೆಗಳು ಹೊರಗಿರಲಿ, ಒಳಗಿರಲಿ, ಶರಣರು ಅವುಗಳನ್ನು ವಿರೋಧಿಸುತ್ತ ಬಂದಿದ್ದಾರೆ. ವೈದಿಕರ ಮೌಢ್ಯಾಚರಣೆಗಳನ್ನು ವಿರೋಧಿಸಿದಂತೆ ಶರಣರು, 63 ಪುರಾತನ ಮೌಢ್ಯಾಚರಣೆಗಳನ್ನೂ ವಿರೋಧಿಸಿದ್ದಾರೆ. “ದಾಸನ ಹಾಗೆ ವಸ್ತ್ರವ ಕೊಟ್ಟವನಲ್ಲ”ವೆಂದು ತಮ್ಮ ಸಮಕಾಲೀನ ಶರಣರ ಹಿಂಸಾಭಕ್ತಿಯನ್ನು, ದಾನಭಕ್ತಿಯನ್ನು ವಿರೋಧಿಸಿದ್ದಾರೆ. ಶರಣರನ್ನು ಕುರಿತು ಹೀಗೆ ಬೀಸು ಹೇಳಿಕೆ ಕೊಡುವುದು ಸರಿಯಾದುದಲ್ಲ.

Previous post ನಿನ್ನದೊಂದು ಸ್ಪರ್ಶ
ನಿನ್ನದೊಂದು ಸ್ಪರ್ಶ
Next post ಅನುಭವ ಮಂಟಪ: ಮುಂದೇನು?
ಅನುಭವ ಮಂಟಪ: ಮುಂದೇನು?

Related Posts

ಮೈಸೂರು ಜನಗಣತಿಯ ಮಹತ್ವ (1871)
Share:
Articles

ಮೈಸೂರು ಜನಗಣತಿಯ ಮಹತ್ವ (1871)

March 9, 2023 ಡಾ. ವಿಜಯಕುಮಾರ ಬೋರಟ್ಟಿ
ಇತ್ತೀಚಿನ ದಿನಗಳಲ್ಲಿ (ಅಂದರೆ 21ನೇ ಶತಮಾನದ ಎರಡನೇ ದಶಕದಲ್ಲಿ) ಲಿಂಗಾಯತರಲ್ಲಿ ಮೂಡಿರುವ ಧಾರ್ಮಿಕ-ಪ್ರತ್ಯೇಕತೆಯ ಚಳುವಳಿಯ ಕೂಗು ವಚನ-ಆಧಾರಿತವಾದುದು. ವಚನಗಳ ಆಶಯದಂತೆ...
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
Share:
Articles

ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು

January 4, 2020 ಪದ್ಮಾಲಯ ನಾಗರಾಜ್
ಈ ಲೇಖನ ಓದಿದ ಬಳಿಕ ಬಸವಾನುಯಾಯಿಗಳು ತಬ್ಬಿಬ್ಬಾಗಬಹುದೆಂದು ನಾನು ಬಲ್ಲೆ. ಸುಮಾರು ಎಂಟು ನೂರು ವರ್ಷಗಳಷ್ಟು ಹಳೆಯದಾದ ವಚನಗಳಲ್ಲಿರುವ ‘ಭವ’ ಮತ್ತು ‘ಲಿಂಗ’ ಎಂಬ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ಸುತ್ತಿ ಸುಳಿವ ಆಟ
ಸುತ್ತಿ ಸುಳಿವ ಆಟ
May 6, 2021
ಲಿಂಗಾಚಾರ
ಲಿಂಗಾಚಾರ
May 6, 2021
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ಐನಸ್ಟೈನ್ ಮತ್ತು ದೇವರು
ಐನಸ್ಟೈನ್ ಮತ್ತು ದೇವರು
October 5, 2021
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಸುಮ್ಮನೆ ಇರು
ಸುಮ್ಮನೆ ಇರು
December 6, 2020
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
December 9, 2025
Copyright © 2026 Bayalu