
ದಡ ಸೋಂಕದ ಅಲೆಗಳು
ನದಿ ಕೂಡುವ ಕಡಲ ಅಂಚು
ನಿಂತು ಸಂಬಂಧ ಹುಡುಕುತಿರುವೆ
ಕಡಲ ಸೇರುವ ನೀರು
ನದಿ ಯಾವುದು ಕಡಲು ಯಾವುದು
ಸಂಬಂಧ ಅಸಂಬಂಧ
ಎರಡೆಂಬ ಭಿನ್ನ ಅಳಿಯದೇ..
ದಾರಿ ತೋರುವ ಕೈಯ ಹಿಡಿದಿರುವೆ
ಕೈಯ ಕುರುಡು ತೋರದು ದಾರಿ
ನೀರಿರದ ದಾರಿ ನದಿ ಗುರುತು ಮೂಡಿಸಿದೆ
ನೀರಲಿ ನೀರಾಗಿಹ ನೀರು
ನೀರಾಗಿಸಿದೆ ಎನ್ನ
ಮರೆಯ ಆಚೆ ಮರೆಯಬಾರದ ಘನ
ಅರಿಯಲಿಲ್ಲ ಅರಿದಿಲ್ಲ
ಬಲ್ಲತನದ ಭಂಗ ಇನ್ನಿಲ್ಲ
ಅನನ್ಯ ಎಂಬುದೇನು…?
ಭ್ರಮೆ; ಹೇಳಬಾರದ ಶಬ್ದ ಸಂಭ್ರಮ
ಆಹಾ ಕಣ್ಣ ಸುಖವ ನೆಚ್ಚಿ
ಮಣ್ಣು ಮೆಟ್ಟಿದ ಪಾದ ಆಹಾ
ನೆಲ ಮುಟ್ಟದು ಕಣ್ಣು
ಊರು ಹಾಳಾಯಿತು;ಮದ ತಣ್ಣಗಾಯಿತು
ಹೊಗೆ ಇಲ್ಲದ ಬೆಂಕಿ ಸುಟ್ಟ ಊರು
ಕಣ್ಣಿಲ್ಲದವರ ಕಾಡಿತ್ತು
ಹರಿಯುವ ನದಿ ನೀರು
ನಾದವ ಏನೆಂದು ಬರೆಯಲಿ.
Comments 3
ಷಡಕ್ಷರಿ ಎಸ್
Jul 22, 2025ದಡ ಮುಟ್ಟದ ಅಲೆಗಳ ಗುರಿ ಯಾವುದು? ಗಮ್ಯವಿಲ್ಲದ ಜೀವನವನ್ನು ಒಗಟಾಗಿ ಬೆಡಗಿನ ನುಡಿಯಲ್ಲಿ ಕಟ್ಟಿದ ಕವನ ಚೆನ್ನಾಗಿದೆ👌👌👌
ಶಿವಪುತ್ರ ಕಲ್ಲಹಳ್ಳಿ
Jul 31, 2025ದಾರಿ ತೋರುವ ಕೈಗೆ ಕುರುಡಾದರೆ ಏನು ಗತಿ?
ಬಸವಪ್ರಭು ಹತ್ತಿಕಟ್ಟಿ
Aug 2, 2025ದಾರಿ ತೋರುವ ಕೈಯ ಹಿಡಿದಿರುವೆ
ಕೈಯ ಕುರುಡು ತೋರದು ದಾರಿ- ದಿಕ್ಕು ತಪ್ಪಿದ ನಮ್ಮ ಬದುಕಿನ ಕಾರಣ 😒