
ಕಂಡದ್ದು- ಕಾಣದ್ದು
ಸಾಧನೆ ಸ್ವಪ್ರಯತ್ನದಿಂದ ಮಾತ್ರ
ಏರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ?
ಕೈದುವ ಕೊಡಬಹುದಲ್ಲದೆ ಕಲಿತನವ ಕೊಡಬಹುದೆ?
ವಿವಾಹವ ಮಾಡಬಹುದಲ್ಲದೆ ಪುರುಷತನವ ಹರಸಬಹುದೆ?
ಘನವ ತೋರಬಹುದಲ್ಲದೆ ನೆನಹ ನಿಲಿಸಬಹುದೆ?
‘ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂಬ ಲೋಕದ ಗಾದೆಮಾತಿನಂತೆ,
ಸದ್ಗುರುಕಾರುಣ್ಯವಾದಡೂ ಸಾಧಿಸಿದವನಿಲ್ಲ, ಸಕಳೇಶ್ವರಾ.
[ಕೈದು-ಆಯುಧ, ನೆನಹ-ಧ್ಯಾನವ]
ಸಕಳೇಶ ಮಾದರಸರ ವಚನ ಇದು. ಒಬ್ಬರು ಇನ್ನೊಬ್ಬರಿಗೆ ಏನು ಕೊಡಬಹುದು, ಕೊಡುವುದರ ಮಿತಿಗಳೇನು ಅನ್ನುವುದನ್ನು ಈ ವಚನ ಹೇಳುತ್ತದೆ. ಕೆರೆಗೆ ಏರಿ ಕಟ್ಟಿಸಬಹುದು ನೀರು ಬರಬೇಕು; ಕೈದು, ಅಂದರೆ ಆಯುಧ, ಕೊಡಬಹುದು, ಆದರೆ ಆಯುಧ ಹಿಡಿದು ಹೋರಾಡಬಲ್ಲ ಶೌರ್ಯ ಮಾತ್ರ ಒಳಗಿನಿಂದಲೇ ಬರಬೇಕು; ಒಳ್ಳೆಯ ಹೆಣ್ಣನ್ನು ನೋಡಿ ಮದುವೆ ಮಾಡಬಹುದು. ಆದರೆ ಬಾಳುವೆ ನಡೆಸಲು ಬೇಕಾದ ಗಂಡಸುತನ, ಒಳಗೇ ಇರಬೇಕು. ಇರಬೇಕು. ಹರಸುವುದರಿಂದ ಪೌರುಷ ಬರುವುದಿಲ್ಲ. ಮಹತ್ತಾದುದನ್ನು ತೋರಬಹುದು, ಆದರೆ ಕಂಡದ್ದು ನೆನಪು ಉಳಿಯಬೇಕಾದರೆ? ಓದಿ ತಿಳಿದದ್ದು ಕಾಲು ಭಾಗ, ಬುದ್ಧಿಯಿಂದ ಅರಿತದ್ದು ಅದಕ್ಕಿಂತ ಮೂರು ಪಟ್ಟು ಹೆಚ್ಚು. ಗುರುವಿನ ಕಾರುಣ್ಯ ದೊರೆಯಬಹುದು ಆದರೆ ಸಾಧನೆಯ ಜವಾಬ್ದಾರಿ ಮಾತ್ರ ಅವರವರದ್ದೇ ಆಗಿರುತ್ತದೆ.
ನಾವು ಏನಾಗುತ್ತೇವೋ ಅದಕ್ಕೆ ನಾವೇ ಜವಾಬ್ದಾರರು. ನಾವು ಹೇಗಿದ್ದೇವೋ ಅದಕ್ಕೂ ನಾವೇ ಜವಾಬ್ದಾರರು. ಶುಭ ಹಾರೈಕೆ ಅನ್ನುವುದು ಕೇವಲ ಹಾರೈಕೆ ಮಾತ್ರ, ಸಾಧನೆ ಮಾತ್ರ ಅವರವರ ಪ್ರಯತ್ನದ ಫಲ.
ಕಂಡದ್ದು-ಕಾಣದ್ದು
ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಿಹೆನೆಂದಡೆ,
ಸಿಕ್ಕದೆಂಬ ಬಳಲಿಕೆಯ ನೋಡಾ.
ಕಂಡುದನೆ ಕಂಡು ಗುರುಪಾದವಿಡಿದಲ್ಲಿ,
ಕಾಣಬಾರದುದ ಕಾಣಬಹುದು ಗುಹೇಶ್ವರಾ.
[ಹಿಡಿದಿಹೆನೆಂದಡೆ=ಹಿಡಿದಿರುವೆನು ಎಂದರೆ; ಗುರುಪಾದವಿಡಿದಲ್ಲಿ-ಗುರುಪಾದವನ್ನು ಹಿಡಿದಲ್ಲಿ]
ಅಲ್ಲಮಪ್ರಭುದೇವರ ವಚನ. ಕಂಡದ್ದನ್ನು ಬಿಟ್ಟು ಕಾಣದಿರುವುದನ್ನು ಹುಡುಕಿ ಹಿಡಿಯುತ್ತೇನೆಂದು ಹೊರಟರೆ ಸಿಕ್ಕದು ಎಂಬ
ಬಳಲಿಕೆಯಷ್ಟೇ ಆಗುತ್ತದೆ. ‘ಕಾಣುತ್ತಿರುವುದು’ ತೀರ ಸಾಮಾನ್ಯವೆಂದೂ ಅರ್ಥಹೀನವೆಂದೂ ಬಗೆದು ಕಾಣದ ಸತ್ಯವನ್ನು ಹುಡುಕಿ ನಾವೆಲ್ಲ ಬಳಲುವುದೇ ಹೆಚ್ಚು. ಕಣ್ಣೆದುರಿಗೆ ಇರುವುದನ್ನು ಸರಿಯಾಗಿ ನೋಡದೆ ಕಾಣದ ಸತ್ಯಕ್ಕೆ ಬಳಲುವುದು ವ್ಯರ್ಥ ಅನ್ನುತ್ತದೆ ಅಲ್ಲಮ ವಚನ.
ಕಂಡುದನೆ ಕಂಡು ಅನ್ನುವಾಗ ʻಕಾಣುʼ ಎಂಬ ಪದದ ಸಮಗ್ರ ಅರ್ಥವನ್ನು ಮನಸ್ಸಿಗೆ ತಂದುಕೊಳ್ಳಬೇಕು. ನೋಡುವುದಕ್ಕೂ ಕಾಣುವುದಕ್ಕೂ ಇರುವ ವ್ಯತ್ಯಾಸವನ್ನೂ ಗಮನಿಸಬೇಕು. ನಾವೆಲ್ಲ ಸಾಮಾನ್ಯವಾಗಿ ಸುಮ್ಮನೆ ನೋಡುವುದೇ ಹೆಚ್ಚು, ಹೊರತು ಗಮನಿಸಿ ಕಾಣುವುದು ಕಡಿಮೆ. ಮರವೊಂದನ್ನು ಒಟ್ಟಾರೆಯಾಗಿ ಸುಮ್ಮನೆ ನೋಡುತ್ತೇವೆ, ಮರದ ಹೆಸರು ಮನಸಿಗೆ ಬರುತ್ತದೆ. ಆದರೆ, ಮರದ ರಂಬೆ, ಕೊಂಬೆ, ಟಿಸಿಲು, ಎಲೆ, ಕಾಂಡ, ತೊಗಟೆ ಇತ್ಯಾದಿಯಾಗಿ ಇರುವುದನ್ನೆಲ್ಲ ಗಮನಿಸಿ ಕಾಣುವುದು ಕಡಿಮೆ. ಆದ್ದರಿಂದಲೇ ಕಣ್ಣೆದುರಿಗೆ ಇರುವುದನ್ನು ಗಮನಿಸಿ ಕಂಡರೆ, ಕಾಣದೆ ಇರುವುದು ಕೂಡ ಕಾಣುತ್ತದೆ ಅನ್ನುತ್ತದೆ ಅಲ್ಲಮ ವಚನ.
ಕಾಣಬಲ್ಲ ಗಮನಕ್ಕೆ ಕಾಣಿಸದ ಸಂಗತಿ ಯಾವುದೂ ಇರಲಾರದು. ದರ್ಶನವೆಂದರೆ ಕಾಣುವುದೇ ಅಲ್ಲವೇ! ಬುದ್ಧಿ ಇದನ್ನು ಒಪ್ಪೀತು, ಆದರೆ ಕಾಣುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ನಮಗೆ ಅಡ್ಡಿಯಾಗಿರುವುದಾದರೂ ಏನು?
ಯಾಕೆ ಇದನ್ನೆಲ್ಲ ಕಲಿಸಲಿಲ್ಲ?
ಕಚ್ಚುವ ಹಾವ ಹಿಡಿವುದಕ್ಕೆ ಗಾರುಡವ ಕಲಿಸಿದುದಿಲ್ಲ
ಕುತ್ತುವ ಹಸುವಿನ ಕೊಂಬ ಹಿಡಿಯ ಕಲಿಸಿದುದಿಲ್ಲ
ಇದು ನಿನಗೆ ದಿಂಡೆಯತನವೊ ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ.
[ಗಾರುಡ-ಹಾವಿನ ವಿಷವನ್ನು ಇಲ್ಲವಾಗಿಸುವ ಗರುಡ ಮಂತ್ರ, ದಿಂಡೆ-ಬಂಡೆ, ಮರದ ಬೊಡ್ಡೆ, ರೂಕ್ಷತೆ, ತುಂಟತನ; ನಿರಂಗ- ದೇಹವಿರದ]
ಮೋಳಿಗೆ ಮಾರಯ್ಯನವರ ವಚನ. ಮನುಷ್ಯನನ್ನು ದೇವರೇ ಸೃಷ್ಟಿಮಾಡಿದ ಎಂದುಕೊಂಡರೆ ಅವನು ಏನೇನನ್ನೂ ಕಲಿಸದೆ ನಮ್ಮನ್ನೆಲ್ಲ ಸೃಷ್ಟಿಮಾಡಿ ಭೂಮಿಗೆ ಕಳುಹಿಸಿಬಿಟ್ಟಿದ್ದಾನೆ. ಕಚ್ಚಲು ಬರುವ ಹಾವನ್ನು ಪಳಗಿಸಲು ಗರುಡ ಮಂತ್ರವನ್ನು ಮನುಷ್ಯರಿಗೆ ಕಲಿಸಲಿಲ್ಲ, ತಿವಿಯಲು ಬರುವ ಹಸುವಿನ ಕೊಂಬು ಹಿಡಿದು ಬಗ್ಗಿಸಲು ಕಲಿಸಲಿಲ್ಲ. ಹೀಗೆ ಬದುಕಲು ಅಗತ್ಯವಾದ ವಿದ್ಯೆ ಕಲಿಸದೆ ಇದ್ದದ್ದು ದೇವರ ದಿಂಡಿಗತನವೋ? ದಿಣ್ಡೆ ಎಂಬ ಮಾತಿಗೆ ಬಂಡೆ, ಮರದ ಬೊಡ್ಡೆ ಅನ್ನುವ ಅರ್ಥಗಳಲ್ಲದೆ ರೂಕ್ಷತೆ, ತುಂಟತನ ಅನ್ನುವ ಅರ್ಥಗಳೂ ಇವೆ. ಕೇಡಿನಿಂದ ಪಾರಾಗುವುದು, ಕೇಡನ್ನು ಪಳಗಿಸುವುದು ಇದೇ ನಾವು ಕಲಿಯಬೇಕಾದದ್ದು, ದೇವರು ನಮಗೆ ಕಲಿಸದೆ ಇರುವುದು!
ದೇವರು ನಿರಂಗ, ದೇಹವಿಲ್ಲದವನು. ಸಾವಿಲ್ಲದ, ಕೇಡಿಲ್ಲದ, ರೂಪವಿರದ ಶಕ್ತಿ. ಅಥವಾ ಅವನು ಬಂಡೆಯಂತೆ ಇರುವವನು. ಅವನಿಗೆ ಒಳಿತು, ಕೆಡುಕು ಎರಡೂ ಇಲ್ಲ. ಕಲಿಸಬೇಕಾದುದನ್ನು ಕಲಿಸದೆ, ನೀವೇ ಕಲಿತುಕೊಳ್ಳಿ ಎಂದು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ತುಂಟನಂತೆ ಸುಮ್ಮನೆ ಇದ್ದಾನೆ! ಸೃಷ್ಟಿಯಲ್ಲಿ ಒಳಿತು ಕೆಡುಕು ಎರಡೂ ಇಲ್ಲ. ನಿಸರ್ಗವೂ ನಿರ್ಗುಣವಾದದ್ದು. ವಿಷ, ತಿವಿಯುವ ಕೊಂಬು ಇವು ಹಾವಿಗೆ, ಗೂಳಿಗೆ ಸಹಜ, ಮತ್ತು ಅಗತ್ಯ. ಕೆಡುಕು-ಒಳಿತು ಅನ್ನುವ ವ್ಯತ್ಯಾಸವನ್ನು ಕಲಿಯಬೇಕಾದದ್ದು, ಒಳಿತನ್ನು ಬೆಳೆಸಿಕೊಳ್ಳಬೇಕಾದದ್ದು ಮನುಷ್ಯರದೇ ಹೊಣೆ ಎನ್ನುವಂತಿದೆ ಈ ವಚನ.
ಕಲ್ಲಿನಲಿ ಕಠಿಣ
ಕಲ್ಲಿನಲ್ಲಿ ಕಠಿಣ, ಖುಲ್ಲರಲ್ಲಿ ದುರ್ಗುಣ,
ಬಲ್ಲವರಲ್ಲಿ ಸುಗುಣ ಉಂಟೆಂದೆಲ್ಲರೂ ಬಲ್ಲರು.
ಇಂತೀ ಇವು ಎಲ್ಲರ ಗುಣ.
ಅಲ್ಲಿಗಲ್ಲಿಗೆ ಸರಿಯೆಂದು ಗೆಲ್ಲ ಸೋಲಕ್ಕೆ ಹೋರದೆ ನಿಜವೆಲ್ಲಿತ್ತು
ಅಲ್ಲಿಯೆ ಸುಖವೆಂದನಂಬಿಗ ಚೌಡಯ್ಯ.
[ಖುಲ್ಲರಲ್ಲಿ-ದುಷ್ಟರಲ್ಲಿ]
ಅಂಬಿಗ ಚೌಡಯ್ಯನವರ ವಚನ. ಕಲ್ಲಿನಲ್ಲಿ ಕಾಠಿಣ್ಯವಿದೆ, ಕೆಟ್ಟವರಲ್ಲಿ ದುರ್ಗುಣ ಇದೆ, ಬಲ್ಲವರಲ್ಲಿ ಸದ್ಗುಣ ಇದೆ ಅನ್ನುವುದು ಎಲ್ಲರಿಗೂ ಗೊತ್ತಲ್ಲವೇ? ಸರಿ ಮತ್ತೆ. ಇದು ಸರಿ, ಅದು ತಪ್ಪು ಎಂಬ ಹೋರಾಟವೇಕೆ? ಇರುವ ನಿಜವನ್ನು ಇರುವಂತೆ ಒಪ್ಪಿದಾಗಲೇ ಸುಖ ಅಲ್ಲವೇ?
ಗೆಲ್ಲುವ ಹಟ ಇದೆಯಲ್ಲ ಅದೇ ಸುಖಕ್ಕೆ ತೊಡಕು. ಲೋಕವನ್ನು ಬದಲಾಯಿಸಬೇಕೆಂಬ ಹಟವೂ ಅಷ್ಟೇ. ಎರಡೂ ಹೋರಾಟಗಳೇ. ಹೋರಾಟ ಇದ್ದಾಗ ಸುಖ ಎಲ್ಲಿರುತ್ತದೆ. ಅಲ್ಲಿಗಲ್ಲಿಗೆ ಸರಿ; ಇರುವುದೆಲ್ಲ ಇರುವ ಹಾಗೆ ಇದೆ, ಅದೇ ಸತ್ಯ ಎಂದು ಒಪ್ಪಿಕೊಂಡರೆ ಸಾಕು. ಆದರೆ ಅದೇ ಅತ್ಯಂತ ಕಷ್ಟದ ಕೆಲಸವೂ ಹೌದಲ್ಲವೇ? ನಮ್ಮ ಶಿಕ್ಷಣ, ಸಂಸ್ಕೃತಿ, ಧರ್ಮ ಎಲ್ಲವೂ ಇರುವುದನ್ನು ಇನ್ನು ಹೇಗೋ ಮಾಡಲು ಪ್ರಯತ್ನಿಸುವುದನ್ನೇ ಕಲಿಸುತ್ತವೆ!
ಒಳಿತು ಮತ್ತು ಕೆಡುಕುಗಳ ಹೋರಾಟವೆಂದೇ ನಮ್ಮ ಇಡೀ ನಾಗರಿಕತೆಯ ಕಥೆಯನ್ನು ವಿವರಿಸಬಹುದು. ಇಂಥ ಹೋರಾಟವೇ ಅನಗತ್ಯವೆಂದು ಚೌಡಯ್ಯನವರ ವಚನ ಹೇಳುವಂತೆ ತೋರುತ್ತದೆ. ಅಥವಾ ಒಳಿತು-ಕೆಡುಕು ಅನ್ನುವುದು ನಾವು ನೋಡುವ ಕೋನ, ನಮ್ಮ ನಿಲುವನ್ನು ಅವಲಂಬಿಸಿದ್ದು, ಗೆಲ್ಲುವ ಆಸೆಯಿಂದ ಪ್ರಚೋದನೆ ಘರ್ಷಣೆ ಹುಟ್ಟುತ್ತದೆ. ಭಕ್ತಿ ಅನ್ನುವುದು ಏನೋ ಆಗುವ ಆಸೆಗಿಂತ ಅಂತರಂಗದಲ್ಲಿ, ಬಹಿರಂಗದಲ್ಲಿ ಸಂಘರ್ಷವಿಲ್ಲದೆ ʻಇರುವುದನ್ನುʼ ಅಪೇಕ್ಷಿಸುವ ಮನೋಧರ್ಮವಾಗಿ ಕಾಣುತ್ತದೆ.
ಸ್ವಾರಸ್ಯದ ಮಾತೆಂದರೆ ನಿಜವೆಲ್ಲಿತ್ತು ಅಲ್ಲಿಯೇ ಸುಖ ಅನ್ನುವ ಸಾಲು ಖುಲ್ಲರಲ್ಲೂ ನಿಜವಿದ್ದರೆ ಅದನ್ನು ಒಪ್ಪುವುದೇ ಸರಿ ಎಂದೂ ಹೇಳುವಂತೆ ತೋರುತ್ತದೆ.
ಇಲ್ಲಿಯೇ ಇದ್ದಾರೆ
ಇದಿರೆನ್ನ ಹಳಿವವರು ಮತಿಯ ಬೆಳಗುವರು.
ಮನದ ಕಾಳಿಕೆಯ ಕಳೆವವರೆನ್ನ ನಂಟರು.
ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ,
ಹೇಯೋಪಾದಿಯ ತೋರುವವರು.
ಇದು ಕಾರಣ, ನಾನನ್ಯ ದೇಶಕ್ಕೆ ಹೋಗೆನು.
ಸಕಳೇಶ್ವರದೇವರ ತೋರುವರೊಳರಿಲ್ಲಿಯೆ.
[ಇದಿರೆನ್ನ=ಎದುರಿನಲ್ಲಿ ನನ್ನ; ಕಾಳಿಕೆ=ಕಲ್ಮಶ; ತೋರುವವರೊಳರಿಲ್ಲಿಯೆ=ತೋರುವವರು ಇದ್ದಾರೆ ಇಲ್ಲಿಯೇ]
ಇದು ಸಕಲೇಶಮಾದರಸರ ವಚನ. ಬೇರೆಯ ಊರಿಗೆ ಹೋಗಿ ನೆಲೆಸುವ ಆಸೆಯಾದರೂ ಯಾಕೆ? ಬೇರೆಯ ಜನ, ಬೇರೆಯ ವಾತಾವರಣ, ಬೇರೆಯ ರೀತಿಯ ಬದುಕಿನ ಆಸೆಯೇ ಅದಕ್ಕೆ ಕಾರಣ. ಆದರೆ, ಸಕಲೇಶಮಾದರಸರು ಹೇಳುವ ಈ ಮಾತು ಕೇಳಿ. ಎಲ್ಲಿ ಹೋದರೂ ನನ್ನ ಟೀಕಿಸುವವರು, ನಿಂದಿಸುವವರು ಇದ್ದೇ ಇರುತ್ತಾರೆ. ಅವರು ನನ್ನ ಮತಿಯನ್ನು ಬೆಳಗುತ್ತಾರೆ. ಎಲ್ಲಿ ಹೋದರೂ ನನ್ನ ಆತ್ಮೀಯರಾಗುವ ನಂಟರು ಬೇಕು, ಅವರು ನನ್ನ ಮನಸ್ಸಿನ ಕಲ್ಮಶ (ಕಾಳಿಕೆ)ಯನ್ನು ಕಳೆಯುತ್ತಾರೆ. ಎಲ್ಲಿಗೆ ಹೋದರೂ ದುರಾಚಾರಿಗಳು ಇದ್ದೇ ಇರುತ್ತಾರೆ. ಅವರು ನನ್ನೊಳಗೇ ಇರುವ ಕೆಡುಕಿಗೆ ಕನ್ನಡಿ ಹಿಡಿಯುತ್ತಾರೆ. ಇಲ್ಲಿ ಇರುವ ನಿಂದಕರು, ನಂಟರು, ದುಷ್ಟರು ಬೇರೆ ಊರಲ್ಲಿಯೂ ಇರುತ್ತಾರೆ, ಅಲ್ಲವೇ? ನನ್ನನ್ನು ನನಗೇ ತೋರುವವರು ಇಲ್ಲೇ ಇರುವಾಗ ಅನ್ಯದೇಶಕ್ಕೆ ಹೋಗಲೊಲ್ಲೆ.
ಕೊಲೆ, ಸುಳ್ಳು, ಮೋಸ, ದ್ರೋಹ, ಅತ್ಯಾಚಾರ, ಇಂಥ ಸಲ್ಲದ ನಡವಳಿಕೆಯನ್ನು ಸೂಚಿಸುವ ಪದಗಳು ಎಲ್ಲ ಮನುಷ್ಯ ಭಾಷೆಗಳಲ್ಲೂ ಇದ್ದೇ ಇವೆ. ಅಂದರೆ ನಾವಿರದ ಇನ್ನೊಂದು ಊರು, ದೇಶ, ಭಾಷೆ ಈಗ ಇರುವ ಊರಿಗಿಂತ ಉತ್ತಮ ಅನ್ನುವುದು ಭ್ರಮೆ. ನಾವು ಯಾವ ಊರಿನಲ್ಲಿ, ದೇಶದಲ್ಲಿ ಇದ್ದೇವೆ ಅನ್ನುವುದಕ್ಕಿಂತ ನಾವು ಇರುವಲ್ಲಿ ಎಂಥ ಸಂಬಂಧಗಳನ್ನು ಕಟ್ಟಿಕೊಂಡಿದ್ದೇವೆ, ಆ ಬಂಧಗಳಿಂದ ನಮ್ಮನ್ನು ನಾವು ಹೇಗೆ ಅರಿತುಕೊಳ್ಳುತ್ತೇವೆ ಅನ್ನುವುದು ಮುಖ್ಯವಲ್ಲವೇ?
Comments 10
Mahadev
Jul 10, 2025ಸರ್ ನಿಮ್ಮ ದಿನಕ್ಕೊಂದು ವಚನ ನನಗೆ ಬಹಳ ಹಿಡಿಸಿತ್ತು ಈಗ ಬಯಲುವಿನಲ್ಲಿ ನಿಮ್ಮ ವಚನಗಳ ವಿವರದ ಲೇಖನ ಓದಿ ಖುಷಿಯಾಯ್ತು
ವನಿತಾ ಹೊಸೂರು
Jul 14, 2025ಯಾಕೆ ಇದನ್ನೆಲ್ಲ ಕಲಿಸಲಿಲ್ಲ… ವಚನ ವ್ಯಾಖ್ಯಾನ ತಲೆ ಕೆಡಿಸಿಕೊಳ್ಳುವಷ್ಟು ಚನ್ನಾಗಿದೆ. ಸರಳ, ಸಹಜ ನಿರೂಪಣೆಗಳು ಸೊಗಸಾಗಿವೆ ಸರ್.
ದೇವಯ್ಯ ಗಜೇಂದ್ರಗಡ
Jul 14, 2025“ಭಕ್ತಿ ಅನ್ನುವುದು ಏನೋ ಆಗುವ ಆಸೆಗಿಂತ ಅಂತಂಗದಲ್ಲಿ, ಬಹಿರಂಗದಲ್ಲಿ ಸಂಘರ್ಷವಿಲ್ಲದೆ ʻಇರುವುದನ್ನುʼ ಅಪೇಕ್ಷಿಸುವ ಮನೋಧರ್ಮವಾಗಿ ಕಾಣುತ್ತದೆ.” ಮನನಯೋಗ್ಯ ಮಾತುಗಳು.
ವಿರೇಶ್ ಮತ್ತಿಕಟ್ಟಿ
Jul 14, 2025ವಚನಗಳನ್ನು ನೀವು ಬಿಡಿಸಿ ಹೇಳುವ ಪರಿ ಅನನ್ಯವಾಗಿದೆ. ಕರಾರುವಕ್ಕಾಗಿ ಹೀಗೆ ಬಿಡಿಸಿ ಬರೆಯುವುದು ಸರಳವಲ್ಲಾ….. ಹಾಗೆಯೇ ವಚನಕಾರರ ಬಗೆಗೂ ಒಂದಷ್ಟು ಮಾಹಿತಿ ಕೊಡುವುದಾದರೆ ನನ್ನಂತ ಎಳೆಯರಿಗೆ ಸಹಾಯ ಮಾಡಿದಂತಾಗುತ್ತದೆ.
Asha kiran
Jul 16, 2025The vachanas selected and the way explan given is fant
Asha Kiran, Bengaluru
Jul 16, 2025ಬೇರೆ ಬೇರೆ ಶರಣರ ವಚನಗಳನ್ನು ಸಂಗ್ರಹಣೆ ಮಾಡಿ, ತುಂಬಾ ಚೆನ್ನಾಗಿ illustrate ಮಾಡುತ್ತಾರೆ. ವಚನಗಳು ಬೇಗ ಅರ್ಥವಾಗಲ್ಲಾ. ಎಷ್ಟು ಚೆನ್ನಾಗಿ ಬಿಡಿಸ್ತಾರೆ… ಭಾಷೆ ಮತ್ತು flow ಲೇಖನವನ್ನು ಓದಿಸಿಕೊಂಡು ಹೋಗುತ್ತವೆ.
ರಮೇಶ್ ಹಡಪದ, ಲಿಂಗಸುಗೂರ
Jul 16, 2025ತುಂಬಾ ಸೊಗಸಾಗಿದೆ ಬರವಣಿಗೆ👌👌
Kumbi Veerappa Chandrasekhar
Jul 18, 2025Excellent.
ಅಡಿವೆಪ್ಪ ಕುಂಚೂರು
Jul 22, 2025ಯೋಚನೆಗೆ ಹಚ್ಚುವ ವಚನಗಳನ್ನ ಆಯ್ಕೆ ಮಾಡಿಕೊಂಡಿದ್ದೀರಿ. ಸೊಗಸಾಗಿ ವಿವರಿಸಿದ್ದೀರಿ. ವಂದನೆಗಳು.
ಗೋಪಾಲ ಎಂ
Jul 25, 2025ಪರದೇಶಕ್ಕೆ ಹೋಗಿ ನೆಲೆಸಬೇಕೆಂಬ ಬಯಕೆಯುಳ್ಳವರು ಅವಶ್ಯವಾಗಿ ಸಕಲೇಶಮಾದರಸರ ವಚನವನ್ನು ಗಮನಿಸಬೇಕಾಗಿ ನನ್ನ ಪ್ರಾರ್ಥನೆ🙏🏻