
ಅನಿಮಿಷ- ಕಾದು ಗಾರಾದ ಮಣ್ಣು(7)
(ಇಲ್ಲಿಯವರೆಗೆ: ಬೆಟ್ಟದಂಥ ಕಷ್ಟಕಾರ್ಪಣ್ಯಗಳನ್ನುಂಡು, ಸಾವಿನ ಜೊತೆಗೆ ಸೆಣಸಾಡುತ್ತಲೇ ಕಲ್ಲು ಮುಳ್ಳಿನ ದಾರಿಗಳನ್ನು ದಾಟಿ ಕೊನೆಗೂ ತ್ರೈಲೋಕ್ಯ ತನ್ನೂರಿಗೆ ಬಂದ. ಹೆಂಡತಿ ಮತ್ತು ಮಗನ ಮುಖ ನೋಡಲು ಹಾತೊರೆಯುತ್ತಿದ್ದವನಿಗೆ ಗೆಳೆಯ ವೆಂಕೋಬ ಸಿಕ್ಕ. ಈಗಿನ ಗರಡಿಮನೆಯ ದಳವಾಯಿಯಾಗಿದ್ದ ಆತ ಗೆಳೆಯನನ್ನು ಗುರುತಿಸಿ ಮಹಾಲೇಖೆಗೆ ಸುದ್ದಿ ಮುಟ್ಟಿಸಿ, ಮನೆಗೆ ಕರೆತಂದ. ಮುಂದೆ ಓದಿ-)
ದಳವಾಯಿ ವೆಂಕೋಬನ ಕೈಯೊಳಗಿನ ದೊಂದಿ ಬೆಳಕು ಆ ಮನೆಯ ಮೂಲೆಗಳಲ್ಲಿ ಅಡಗಿದ್ದ ಕತ್ತಲನ್ನೆಲ್ಲ ಓಡಿಸಿ ಬೆಳಕು ಮಾಡಿದಾಗ ಉಮ್ಮಳಿಸಿ ಬಂದ ಅಳುವನ್ನು ತಡೆತಡೆದುಕೊಳ್ಳುತ್ತ , ‘ಹಿರಿಯಾ’ ಎಂದು ದೀನಳಾಗಿ ಸ್ವರ ತೆಗೆದಳು. ಆಗ ಅದೇ ತಾನೇ ಹೊಸ್ತಿಲ ದಾಟಿ ಬಂದ ತ್ರೈಲೋಕ್ಯ ಚೂಡಾಮಣಿಯ ಧ್ವನಿಯೂ ಗದ್ಗರಿಸುತ ‘ಲೇಖಿ’ ಎಂದಿತು. ಯೌವನವನ್ನು ಮಧುರವಾಗಿಸಿಕೊಂಡು ಮಕ್ಕಳಿಗಾಗಿ ಹಂಬಲಿಸಿದ್ದ ಜೀವಗಳು ಇಂದು ಒಬ್ಬರಿಗೊಬ್ಬರು ಗುರುತು ಸಿಗಲಾರದಷ್ಟು ಹಣ್ಣಾಗಿದ್ದವು. ಹೌದೋ ಅಲ್ಲವೋ ಎಂಬಂತೆ ತದೇಕಚಿತ್ತವಿಟ್ಟು ಆಕೆ ಅವನನ್ನು ನೋಡುವಾಗ ದಳವಾಯಿ ವೆಂಕೋಬನು ‘ನನಗೂ ಗುರುತು ಸಿಗಲಿಲ್ಲ ನೋಡಿ, ಅಷ್ಟ ಬದಲಾಗಿದ್ದಾನ ನಮ್ಮ ಲೋಕ್ಯಾ’ ಆ ದೊಂದಿಯ ಬೆಳಕಿನಲ್ಲಿ ಮಹಾಲೇಖೆಯ ಕಣ್ತುಂಬ ನೀರು ತುಂಬಿದ್ದನ್ನು ಕಂಡ ಮಾಲಿಂಗನ ಹೆಂಡತಿ ಅಬ್ಬೆ ಎಂದು ಮುಂಗೈ ಗಟ್ಟಿಮಾಡಿ ಹಿಡಿದಳು. ವಾರಪಡಸಾಲೆಯ ಮೆಟ್ಟಿಲಿನ ಮೇಲೆ ಕುಳಿತ ತ್ರೈಲೋಕ್ಯನು ತಲೆ ಕೆಳಗೆ ಹಾಕಿ ಅಳುವ ಕಂಗಳನು ಮೊಣಕಾಲಿಗೆ ಒರೆಸಿಕೊಂಡ. ಮಹಾಲೇಖೆ ವಾರಪಡಸಾಲೆಯ ತುದಿಕಟ್ಟೆಗೆ ಕುಳಿತು ಮೂಗೊರೆಸಿಕೊಳ್ಳುತ್ತಾ ಮನೆಯ ಅಂಗಳದ ಹೊರಗೆ ಗವ್ವಗಟ್ಟಿದ್ದ ಕತ್ತಲನ್ನು ದಿಟ್ಟಿಸತೊಡಗಿದಳು.
ಬೆನ್ನ ಮೇಲೆ ಕೈಯಾಡಿಸಿ ಸಾಂತ್ವನ ಮಾಡಿದ ದಳವಾಯಿ ತನ್ನ ಜೊತೆಗೆ ಬಂದಿದ್ದ ಹುಡುಗರನ್ನು ಕರೆದುಕೊಂಡು ಹೊರಟು ನಿಂತಾಗ ತ್ರೈಲೋಕ್ಯ ತಲೆಯಾಡಿಸಿದ. ‘ತಾಯಿ ತಡರಾತ್ರಿಯಾಯ್ತು. ನಾಳೆಯ ದಂಡಿನ ಹುಡುಗರ ಕಸರತ್ತಿಗೆ ಹೊತ್ತಾರೆ ಏದ್ದೇಳಬೇಕು ನಮಗೆ ಹೋಗಿ ಬರಲು ಅಪ್ಪಣೆ ಕೊಡು’ ಎಂದಾಗ ಮೆಲುದನಿಯಲಿ ಹ್ಞೂಗುಟ್ಟಿ, ‘ಆಗಲಣ್ಣ’ ಎಂದಳು. ಮಾಲಿಂಗ ಮನೆಯಂಗಳದ ತುದಿವರೆಗೂ ಬಂದು ಬೀಳ್ಕೊಟ್ಟ. ಯಾವ ಮಾಯಕದಲ್ಲೋ ಹೊರಜಗಲಿ ಮೇಲೆ ಬಂದು ಕುಳಿತಿದ್ದ ವಸೂದೀಪ್ಯನ ಕಣ್ಣತುಂಬ ಗುರು ಕಾಣಿಸಿದ್ದ ಸೋಜಿಗವೇ ತುಂಬಿತ್ತು. ಹುಟ್ಟಿಲ್ಲದ ಸಾವಿಲ್ಲದ ಸತ್-ಚಿತ್ ಅದು.
ವಸೂ ಬಾ ಒಳಗೆ, ಉಣ್ಣುವಿಯಂತೆ.
ಹಸಿವಿಲ್ಲ ಮಾವಾ..
ನಿನ್ನ ಅಪ್ಪ ಬಂದಿದ್ದಾರೆ ಮಾರಾಯ, ಅವರು ಉಂಡು ಮಲಗಬೇಕಲ್ಲ. ಬಾ
ಮಾವ ಮಾಲಿಂಗನ ಬಾಲದಂತೆ ವಾರಪಡಸಾಲೆಗೆ ಬಂದಾಗ ಇಡೀ ಮನೆಯ ಗರ್ಭದೊಳಗೆ ಮೌನದ ಗುಂಭ ಹೊಕ್ಕಿತ್ತು. ಅಪ್ಪ ಎಂಬ ದೂರದಲ್ಲೆಲ್ಲೋ ಇದ್ದ ಮರದ ಕೊರಡಿಗೆ ಜೀವ ಬಂದ ಕಲ್ಪನೆಯಂತೆ ಉದ್ದುದ್ದ ಗಡ್ಡ, ಸಿಂಬಿಯಾಗಿದ್ದ ತಲೆಗೂದಲು, ಮುಖದ ಮೇಲೆಲ್ಲ ಗಾಯದ ಗುರುತುಗಳು, ಉದ್ದುದ್ದ ಕೈ- ಕಾಲುಗಳ ಮೇಲೆ ಹಸಿರು ನರಗಳ ಗಂಟು ಅಂಟಂಟು ಚರ್ಮಕ್ಕೆ ಹೊಂದಿಕೊಂಡು ಗುರು ತೋರಿದ ಆ ಕ್ಷಿತಿಜದ ಬೆಳಕಿನಿಂದ ಎದ್ದು ಬಂದಂತೆ ಕಾಣುತ್ತಿದ್ದ. ತ್ರೈಲೋಕ್ಯ ತಲೆ ಎತ್ತಿ ನೋಡಿದಾಗ ವಸೂದೀಪ್ಯ ತಲೆ ಕೆಳಗೆ ಹಾಕಿ ಅಬ್ಬೆಯ ಮಗ್ಗುಲಲ್ಲಿ ಕುಳಿತ.
ವಾರಪಡಸಾಲೆಯ ಮೆಟ್ಟಿಲಿನಿಂದೆದ್ದು ಬಂದು ಅವಳ ತಲೆ ಮುಟ್ಟುತ್ತಲೇ ಲೇಖಿ ಎಂದಾಗ ಆ ತೋಳ ತೆಕ್ಕೆಗೆ ಆತುಕೊಂಡು ಎಳೆಮಗುವಿನಂತಾದ ಮಹಾಲೇಖೆಯು ತನ್ನೆಲ್ಲ ಆಸರ ಬ್ಯಾಸರಗಳನ್ನು ಉಸರ್ಗರೆದಳು. ಆತುಕೊಂಡ ಜೀವಗಳು ಮತ್ತದೇ ಮೌನದಲ್ಲೇ ತುಸುಹೊತ್ತು ಕಳೆದ ಕಾಲದ ಬದುಕಿನ ಬವಣೆಯನ್ನು ನೆನೆಯುತ್ತ ಕಣ್ಣೀರಾದವು. ಇಬ್ಬರೊಳಗೂ ಮಾತು ಮಡುಗಟ್ಟಿದ್ದವು.
2
ಕಣ್ಸನ್ನೆಯಲ್ಲೇ ಹುಟ್ಟಿರಬಹುದಾದ ಮಗುವಿನ ಬಗ್ಗೆ ಕೇಳಲಾಗಿ ವಸೂದೀಪ್ಯನ ತೋರಿಸಿ ಕಣ್ಣೀರೊರೆಸಿಕೊಂಡು ನಕ್ಕಳು. ಭಲೇ ಜಟ್ಟಿಗನನ್ನೇ ಬೆಳೆಸಿದ್ದಿ ಲೇಖಿ ಎಂಬ ಮಾತಿನ ಸನ್ನೆಯನ್ನು ಹೆಂಡತಿಗೆ ದಾಟಿಸಿ ಮಗನ ತಲೆ ಸವರಿದ. ಅವ್ವ ಹೇಳುತ್ತಿದ್ದ ಅಪ್ಪನ ಚಹರೆಯೇ ಇಲ್ಲದ ಅಪರಿಚಿತನನ್ನು ನೋಡುವ ಹಾಗೆ ನೋಡುತ್ತಿದ್ದ. ಕಟ್ಟುಮಸ್ತಾದ ದಳವಾಯಿ ಹೀಗೆ ಸೊರಗಿ ಸಣಕಲಾಗಿ, ಒಕ್ಕಣ್ಣನಾಗಿ, ಗಡ್ಡಮೀಸೆ ಶಿರದ ಮೇಗಳ ಕೂದಲು ಜಡೆಗಟ್ಟಿ ಸಾಧುನಂತಿರುವನಲ್ಲ. ತೊಟ್ಟಬಟ್ಟೆಯೋ ದಿಕ್ಕಿಲ್ಲದ ದಾರಿಹೋಕನಂತಿರುವಾತ ಅಪ್ಪ ಹೌದೋ ಅಲ್ಲವೋ…! ಅಬ್ಬೆ ಅವನ ಹೆಸರು ಕೇಳಿ ಗುಂಭದಂತೆ ಕೂತಿದ್ದವಳು, ಅವನ ಧ್ವನಿ ಕೇಳಿ ಚಡಪಡಿಸಿದಳು. ಹಿರಿಯಾ ಎಂದು ಬಾಯ್ತುಂಬ ಕರೆದಳು. ಅವನ ಒರಟೊರಟು ಎದೆಗೆ ಆತುಕೊಂಡು ಸೆರಗ ತುದಿಯಲ್ಲಿ ದುಃಖ ನೀಗಿಸಿಕೊಂಡು ನಗುವಿನ ಅಳು ಅತ್ತಳು. ಮೌನದ ಹರವು ತಿಳಿಯಾಗಿ ತಿಳವೂ ತಿಳುವಾದ ಝರಿಯಾಗಿ ಆ ಜೀವಗಳಲ್ಲಿ ಮಾತಿನ ಮಡುವು ಕಟ್ಟೆಯೊಡೆಯಿತು.
“ಲೇಖಿ, ನಾಡ ಮೇಲೆಲ್ಲ ಮಕ್ಕಳ ಕಂಡಾಗಲೆಲ್ಲ ನಿನ್ನದೇ ನೆನಪು ಎದೆಯ ಕಲಕುತ್ತಿತ್ತು. ಮಗನನ್ನು ಆಟವಾಡಿಸಬೇಕಿದ್ದ ಕೈಗಳು ಕಲ್ಲಬಂಡೆಯ ಕೆಲಸ ಮಾಡಿದವು. ಕತ್ತಿ-ಕಠಾರಿ-ಈಟಿಯ ಮೇಲೆ ಬೆರಳಾಡಿಸುತ್ತಿದ್ದವ ಉಳಿಯ ಹಿಡಿದು ಮೂರ್ತಿ ಕಟೆಯುತ್ತಿದ್ದೆ. ನಾನು ಕಟೆದ ಆಕಾರಗಳಲ್ಲೆಲ್ಲ ನನ್ನ ಮಗನದೇ ಶಿಲ್ಪ ಕಟೆದೆ”
“ವಸೂದೀಪ್ಯ ಕಣದೊಳಗೆ ಖಡ್ಗ ಹಿಡಿದಾಗ ನಿನ್ನದೇ ಗತ್ತಿತ್ತೋ ಹಿರಿಯಾ… ಥೇಟ್ ನಿನ್ನದೇ ಹೋಲಿಕೆ.”
“ಹೆಸರೇನಂದಿ?”
“ವಸೂದೀಪ್ಯ…”
ಏನೋ ನೆನಪಾದವನಂತೆ ತನ್ನ ಹರಿದ ಅಂಚಡಿಯ ತುದಿಗೆ ಕದ್ದ ದಾರವೊಂದನ್ನು ತೆಗೆದು ವಸೂದೀಪ್ಯನ ಬಲಗೈ ರಟ್ಟೆಗೆ ಕಟ್ಟಿದನು. “ಇದು ಆ ತಾಯಿ ನಿನ್ನ ತೋಳಿಗೆ ಕಟ್ಟುವುದಕ್ಕಾಗಿ ಕೊಟ್ಟಳಪ್ಪಾ, ಆಕೆಯ ಕಣ್ಣೊಳಗೆ ಅಗಾಧವಾದ ರೌದ್ರರಸದ ಧಾರೆಯೇ ತುಂಬಿತ್ತು. ನನ್ನೆಲ್ಲ ಆಯಾಸಗಳನ್ನು ತಿಳಿಗೊಳಿಸಿ ಕುದ್ದು ಹೋಗಿದ್ದ ಈ ಜೀವಕ್ಕೆ ಜೀವತ್ರಾಣ ಕೊಟ್ಟ ತಾಯಿಯ ನೆನಪಿನ ದಾರವಿದು, ಉಚ್ಚದಿರು… ಎಂದೂ ನಿನ್ನ ಅರಿವಿಗೆ ಇಂಬಾಗುವುದೀ ದಾರ.”
ಹಸಿವು ಯಾರ ಒಡಲನ್ನು ಹೊಕ್ಕಿರಲಿಲ್ಲವೋ ಅಥವಾ ಆ ಹೊತ್ತಿಗೆ ಹೊಟ್ಟೆಯ ಅಡಚಣಿ ಯಾರಿಗೂ ಆಗಿರಲಿಲ್ಲವೋ ಏನೋ ಮೌನವನ್ನು ಸೀಳಿಕೊಂಡು ಮಾಲಿಂಗ ‘ಏಳಿ ಎದ್ದೇಳಿ ದಳವಾಯಿಗಳೇ ಬಿಸಿನೀರು ಕಾಯಿಸಿದ್ದಾಳೆ ಮೈತೊಳೆದುಕೊಂಡು ಉಣ್ಣುವಿರಂತೆ’ ಎಂದಾಗ ಮಾಲಿಂಗನ ಹೆಂಡತಿ ವಸ್ತ್ರವನ್ನು ಇಂಗಳಕಾಯನ್ನು ತಂದು ತ್ರೈಲೋಕ್ಯನಿಗೆ ಕೊಟ್ಟಳು. ಬಿಸಿಬಿಸಿ ಹಬೆಯಾಡುವ ನೀರಲ್ಲಿ ಮಿಂದು ಬಂದು ಚಂದ್ರಮೌಳೇಶನ ಗುಡಿಯ ದಿಕ್ಕಿಗೆ ನಿಂತು ಕೈಮುಗಿದಾಗ ಮಾಲಿಂಗ ಊಟಕ್ಕಿಡಲು ಹೆಂಡತಿಗೆ ಹೇಳಿದ. ಊಟಕ್ಕೆ ಕುಳಿತಾಗಲೂ ಅಪ್ಪನ ಕಣ್ಣು ಮಗನ ಮೇಲೆ ನೆಟ್ಟಿತ್ತು.
ಆತ್ಮದೊಳಗೆ ಕಾಡುತ್ತಿದ್ದ ಹಲಕೆಲವು ಪ್ರಶ್ನೆಗಳು, ಕಳೆದುಕೊಂಡ ಭಾವಗಳು, ಕ್ಷಣಗಳು, ಏನನ್ನೋ ಹುಡುಕಬೇಕಿರುವ ಆತುರದ ನಡವಳಿಕೆ ವಸೂದೀಪ್ಯನಲ್ಲಿ ಕಂಡ. ದಂಡಿನ ಹುಡುಗರು ಮಾತಾಡುತ್ತಿದ್ದ ಮಾತುಗಳೆಲ್ಲವೂ ತನ್ನ ಮಗನ ಬಗ್ಗೆಯೇ ಎಂಬ ಅನುಮಾನ ಮೂಡಿತು. ಮಹಾಲೇಖಗೆ ಮಗನಕಿಂತ ಹೆಚ್ಚಿನದ್ದು ಗಂಡ ಬಂದುದಾಗಿತ್ತು. ಮಗನ ಬದುಕು ಹೆಂಗೋ ಏನೋ ಎಂಬ ಚಿಂತೆಯ ಭಾರವನೆಲ್ಲ ಕಳೆದುಕೊಂಡು ಹಗೂರಾಗುವ ಹಂಬಲ.
“ಆ ಕಾನೋಜದಿಂದ ಹೊರಟು ಊರು ಸೇರುವುದರೊಳಗೆ ನೂರಾರು ಜನರನ್ನು ಕಂಡೆ, ತರತರದ ಭಾಷೆ, ಗುಂಪು, ದಾರಿಹೋಕರು, ಗೊಂಬೆರಾಮರು, ಡೊಂಬರು, ಕಳ್ಳ-ಕಾಕರು, ಗಡಿಪಾರಾದವರು, ಬಂಡುಕೋರರು, ವ್ಯವಹಾರಸ್ಥರು, ಸಾಧು ಸಂತರು ಎಲ್ಲರೊಳಗೂ ಮುಂದೆಲ್ಲೋ ಏನೋ ಒಂದು ಸದಾವಕಾಶ ಸಿಕ್ಕೀತೆಂಬ ಆತುರ ತುಂಬಿದ್ದನ್ನೇ ಕಂಡೆ. ಆದರೆ ಯಾವ ಅವಕಾಶದ ಮೋಹವಿಲ್ಲದ, ಜೀವಕಾರುಣ್ಯದ ಸಜ್ಜನಿಕೆಯ ಹುಡುಗನೊಬ್ಬನನ್ನು ಕಂಡೆ. ಆಹಾ ಅವನ ತಿಳವಳಿಕೆ, ನಡೆ ನುಡಿ ಎಲ್ಲವೂ ನನ್ನನ್ನ ಸೂರೆಗೊಂಡವು. ಅವನು ಅಂದಾಜು ನಮ್ಮ ವಸೂದೀಪ್ಯನಕಿಂತ ಕಡಿಮೆ ವಯದವನು.”
ಒಂದೂ ಮಾತಾಡದೆ ರೊಟ್ಟಿ ಮುರಿದು ಹಿಟ್ಟಿನ ಪಲ್ಯೆಯೊಳಗೆ ಬೆರೆಸಿ ತಿನ್ನುತ್ತಿದ್ದ ವಸೂದೀಪ್ಯ ಕಣ್ಣೆತ್ತಿ ತಂದೆಯ ನೋಡಿದ. ಮಗ ಮೌನ ಮುರಿದು ಮಾತಾಡಲಿ ಎಂದೇ ಕತೆ ಹೇಳುತ್ತಿದ್ದವನಿಗೆ ಹುರುಪು ಬಂದಿತು. ಕೇಳುವ ಕಿವಿಯನ್ನು ಜಾಗರೂಕಗೊಳಿಸಿ ಕೇಳಿಸಿಕೊಳ್ಳದವನಂತೆ ನಟಿಸುತ್ತ ಅಕ್ಕ ಕೊಟ್ಟ ಕೈರೊಟ್ಟಿಯ ತಿಂದೆದ್ದು ಈಚಲು ಚಾಪೆ ಹಾಸಿ ಅಂಗಾತ ಮಲಗಿದ.
“ಆತ ಹೊಳೆಯ ಸುಳಿಯೊಳಗೆ ಜಿಗಿದು ಈಸುವಷ್ಟು ಅವನ ಮನಸ್ಸು ದೃಢ. ಈ ಲೋಕದ ಭ್ರಮೆಗಳೇ ಭೂತ, ಅವುಗಳಿಂದ ಮನುಷ್ಯ ಮತ್ತಷ್ಟು ಗಲಿಬಿಲಿಗೊಳ್ಳುತ್ತಾನೆ ಹೊರತು ಸತ್ಯದ ಬಗೆಗಿನ ಅರಿವು ಮನುಷ್ಯನಿಗೆ ಸಮೀಪ ಸುಳಿಯಲಾರವು ಎನ್ನುವ ತಿಳವಳಿಕೆ ಆತನಿಗೆ ಈಗಲೇ ಬಂದುಬಿಟ್ಟಿದೆ. ಆತನನ್ನ ಕಂಡಾಗ ನನಗೂ ಮಗ ಹುಟ್ಟಿದ್ದರೆ ಇವನದೇ ವಯಸ್ಸಿನವ ಆಗಿರಬಹುದು. ಇಲ್ಲ ಇವನಕಿಂತ ದೊಡ್ಡವನೇ ಇದ್ದಿರಬಹುದು ಎನಿಸಿತ್ತು.”
“ಏನವನ ಹೆಸರು…”
“ಅರಸ.. ಬಸವರಸ. ಬಹಳ ದೂರ ಏನಿಲ್ಲ ಲೇಖಿ. ಕಪ್ಪಡಿಸಂಗಮದ ಆಶ್ರಮದಲ್ಲಿದ್ದಾನೆ. ನನ್ನ ಮಗನನ್ನು ಕಂಡಾಗ ಆತನೊಳಗಿನ ತೇಜಸ್ಸು ಮತ್ತೆ ನೆನಪಾಯ್ತು.”
ಉಂಡು ಕೈತೊಳೆದು ಬಂದು ಮಾಲಿಂಗನ ಕೈಹಿಡಿದು ಆ ಕೈಗಳಿಗೆ ತಲೆಯಾನಿಸಿ, ‘ಶರಣೆಂದೆನು ಮಾಲಿಂಗ’ ಎಂದು ಕರುಣಾದ್ರ ಕಂಗಳಲ್ಲಿ ಭಾವುಕನಾದ. ಉಂಡ ಪರ್ಯಾಣಗಳ ಎತ್ತಿಟ್ಟು ಬಂದ ಮಹಾಲೇಖೆ ಮಗನ ಮಗ್ಗುಲಲ್ಲೇ ಗಂಡನಿಗೂ ಚಾಪೆ ಬಿಡಿಸಿದಳು.
“ನರಸವ್ವಕ್ಕ ನನ್ನ ಪಾಲಿನ ದೇವರಾದಳು. ಅಂದು ಮಳಖೇಡದ ದಂಡಿನವರು ನನ್ನ ಹಿಡಿದೊಯ್ಯುವಾಗ ಬಸುರಿ ಹೆಂಡತಿಯನ್ನ ನರಸಕ್ಕನ ಸುಪರ್ದಿಗೆ ಒಪ್ಪಿಸಿ ಕೈ ಮುಗಿದದ್ದೆ. ದೇವರಂತೆ ಹೆಂಡತಿ ಮಗನಿಗೆ ಆಸರೆ ಕೊಟ್ಟಳು. ಆಕೆ ಹೋಗಿ ಎಷ್ಟು ದಿನವಾಯ್ತು ಮಾಲಿಂಗ..?”
“ಬರುವ ಪಂಚಮಿಗೆ ವರ್ಷ ಎರಡಾದವು ದಳವಾಯಿಗಳೆ. ಅವತ್ತು ಹೊಳೆ ತುಂಬಿ ಬಂದಿತ್ತು, ಧೋ ಅಂತ ಮಳೆಯೂ ಇತ್ತು. ಅವ್ವ ಹೋದ ತಿಂಗಳೊಳಗೆ ನನಗೆ ಮಗಳಾಗಿ ಹುಟ್ಟಿದಳು. ನೀವು ದಣಿದಿದ್ದೀರಿ, ಈಗ ಮಲಗಿ ನಿದ್ರಿಸಿ. ಆಯಾಸ ಕಳೆದ ಮೇಲೆ ಮಾತೆಲ್ಲವೂ ಕತೆಗಳೇ ಆಗತಾವೆ.”
ವಸೂದೀಪ್ಯನ ಎಡಬಲಕಿನ ಚಾಪೆಯಲ್ಲಿ ಮಹಾಲೇಖೆ ತ್ರೈಲೋಕ್ಯರು ಬಂದು ಮೈಚಾಚಿ ಮಲಗಿದರು. ಗಂಡಹೆಂಡತಿ ಮಾತಾಡಿಕೊಳ್ಳಬೇಕಿದ್ದ ಅದೆಷ್ಟೋ ಮಾತುಗಳನ್ನು ಆ ದಿನದ ಕತ್ತಲಿಗರ್ಪಿಸಿ ನಿರುಮ್ಮಳಾಗಿ ಮಹಾಲೇಖೆ ನಿದ್ದೆಗೆ ಜಾರಿದಳು. ಆದರೆ ಮಗನ ಮಗ್ಗುಲಲ್ಲಿ ಮೈಯೊಡ್ಡಿದ್ದ ತ್ರೈಲೋಕ್ಯನಿಗೆ ಆಯಾಸವೇ ಹಾರಿತ್ತು. ಮಗ ಮಲಗಿಲ್ಲವೆಂಬುದು ಅವನ ಉಸಿರಾಟದಿಂದಲೇ ತಿಳಿಯುತ್ತಿತ್ತು. ಅವನ ಚಿತ್ತದೊಳಗೆ ಅದೇನು ಕನಸುಗಳು ಗರಿಗೆದರಿದ್ದವೆಂದರೆ ಈ ಲೋಕದ ಭ್ರಮೆಗಳನ್ನು ಮೀರಿಕೊಳ್ಳುವ ಕಲ್ಪನೆ ಗರಿಬಿಚ್ಚಿತ್ತು… ‘ಯಾರೀ ಬಸವರಸ..! ಹೊಳೆಯ ಸುಳಿಯೊಳಗೆ ಜಿಗಿದು ಈಸಬಲ್ಲಾತ ಜಗದ ಜಂಜಡಗಳನ್ನು ಈಸಿ ಪಾರಾಗುವ ದಾರಿ ತಿಳಿದವನೇ ಇದ್ದಿರಬೇಕು. ಈ ಬಗೆಯ ಮನಸ್ಸಿನ ಹತೋಟಿಯನ್ನು ಸಾಧಿಸುವುದಾದರೂ ಹೇಗೆ..? ಕುದುರೆಗಳ ಪಳಗಿಸುವ ಹಾಗೆ ಈ ಮನಸ್ಸನ್ನು…’
“ನಿದ್ದೆ ಬರಲಿಲ್ಲವೇನೋ ನನ್ನಪ್ಪಾ. ನಿನ್ನ ಈ ವಯಸ್ಸಿಗೆ ಸಹಜವಾದ ಭಾವನೆಗಳು ನಿನ್ನ ಬೆನ್ನ ಬಿದ್ದಿದ್ದಾವೆ. ಅದುವೋ ಇದುವೋ ಯಾವದು ನನ್ನ ಮುಂದಲ ದಾರಿ ಎಂಬ ಗೊಂದಲವನ್ನು ಬಗೆಹರಿಸಿಕೊಂಡು ತೂಕದ ಮಾರ್ಗದಲ್ಲಿ ನಡೆಯಬೇಕಿದೆ ಮಗನೇ… ನನಗೆ ಗೊತ್ತು ನಿದ್ದೆ ಬಂದಿಲ್ಲ ನಿನಗೆ. ನನ್ನ ಲೇಖಿ ಹುಲಿಯಂತೆ ಸಾಕಿದ್ದಾಳೆ. ಕೊಡಬೇಕಾದ ವಿದ್ಯೆಯನ್ನೂ ಕೊಡಿಸಿದ್ದಾಳೆ…”
ಈ ಕ್ಷಣ ಕಲ್ಪನೆಯಲ್ಲಿದ್ದ ವಸೂದೀಪ್ಯನಿಗೆ ಅಪ್ಪನ ಮಾತು ಕಿರಿಕಿರಿಯಾಯ್ತು.
ಅಂಗಾತ ಮಲಗಿದ್ದಾತ ಕವುಚಿಕೊಂಡು ಮಲಗಿದ. ಇಲ್ಲಿಂದ ಕಪ್ಪಡಿಸಂಗಮದ ದಾರಿ ಎಷ್ಟು ದಿನವಾದೀತು. ಈಗ ಹೊರಟರೆ ಕತ್ತಲು ಕೂಡ ಭ್ರಮೆಯ ದೆವ್ವವಾಗಿ ದಾರಿ ತಪ್ಪಿಸುತ್ತದೆ. ನಾಳೆ ಹೊರಟರೇ.. ಯಾವ ಊರುಗಳ, ಯಾವ ಗುಡ್ಡಗಳ ಗುರುತು ದಾಟಬೇಕು.
“ದಂಡಿನ ಹುಡುಗರು ನಿನ್ನ ಬಗ್ಗೆ ಮಾತಾಡುವುದ ಕೇಳಿಸಿಕೊಂಡೆ ನನ್ನಪ್ಪಾ. ಚೆಲ್ಲು ಚಂಚಲಾಗುತ್ತಿರುವ ಮನಸ್ಸನ್ನು ಈಗ ಹುರಿಗೊಳಿಸಿಕೊ. ನಿನ್ನ ಬದುಕಿನ ದಾರಿ ನಿನಗೆ ಗೋಚರಿಸುವುದು. ಏನೊಂದು ತಪ್ಪು ಮಾಡದ ನಾನು ಅನುಭವಿಸಿದ್ದು ಸಾಕು. ನಿನ್ನ ಬದುಕಿನ ಬೆಳಕಲ್ಲಿ ಕೊನೆಗಾಲ ಕಳೆಯಲು ಬಂದಿದ್ದೇನೆ.”
ತ್ರೈಲೋಕ್ಯ ಉಸಿರ್ಗರೆದು ಆಕಳಿಸುತ್ತಲೇ ಕಣ್ಮುಚ್ಚಿದ. ಈಗ ಕಲ್ಪಕ ಹಕ್ಕಿ ಬಂದು ವಸೂದೀಪ್ಯನ ಬೆನ್ನೇರಿ… ಊರು ತೊರೆದು ನಿಜದ ಸುಖ ಹುಡುಕುವ ಚಿತ್ರಾವಳಿಯನ್ನು ತಲೆಯೊಳಗೆ ಹಾಕಿತು. ಥೇಟ್ ಚಂದ್ರಲಾಳ ನೃತ್ಯದ ಒಂದೊಂದು ನಿಲುವು, ನೋಟ, ನಡೆ, ಕಾಲ್ಗೆಜ್ಜೆ ಕುಣಿತದ ರಸಾಸ್ವಾದ ಈ ವಿಚಿತ್ರದ ಕಲ್ಪನೆಯಲ್ಲಿತ್ತು. ಹೇಗೆ ಹೋಗುವುದು, ಸಂಗಮದ ದಾರಿಯನ್ನು ಯಾರ ಕೇಳುವುದು, ಕರಡಿಗುಡ್ಡ ದಾಟಿದರೆ ಮುಂದೆ ಯಾವ ಊರು ಬಂದೀತು. ಕಾಡೊಳಗೆ ಎದುರಾಗುವ ಹುಲಿ, ಹುಲ್ಲೆ, ಚಿಗರಿ, ಚಿರತೆಗಳ, ಸರಿದಾಡುವ ಸರಿಸೃಪಗಳು ಎದುರಾದರೆ ಹೇಗೆ ಪಾರಾಗುವುದು..! ಸಂಗಮದಲ್ಲಿ ಆ ಬಸವರಸ ಎಂಬ ಬಾಲಕನ ಹುಡುಕುವುದು ಹೇಗೆ..? ಆಶ್ರಮವೆಂದರೆ ಶಾಸ್ತ್ರ ಪುರಾಣಗಳ ಪಾರಾಯಣ, ಮಂತ್ರೋಚ್ಚಾರ, ಸ್ವರಭ್ಯಾಸಗಳ ಶಾಲೆಯೋ ನಮ್ಮಂತೆ ದಂಡಿನ ಹುಡುಗರ ಶಾಲೆಯೋ… ಕಂತೆಭಿಕ್ಷೆಯ ಬೇಡಲು ಬರುವ ಮಹಾಕೂಟದ ಆಚಾರ್ಯರ ಗಿಂಡಮಾಣಿಗಳಿಗೆ ಆ ಕಪ್ಪಡಿಸಂಗಮದ ಬಗ್ಗೆ ತಿಳಿದಿರಬೇಕು. ನಾಳೆ ಹೊತ್ತಾರೆ ಎದ್ದು ಮಹಾಕೂಟದ ಆಶ್ರಮಕ್ಕೆ ಹೋಗಿ ವಿಚಾರಿಸಲೇ ಎಂಬಂಥ ನೂರೆಂಟು ಕಲ್ಪಕಗಳ ಹರಡಿಕೊಂಡು ನಿದ್ದೆ ಎನ್ನುವುದು ಹಾರಿಹೋಗಿ ಯಾವಾಗಲೋ ಕೋಳಿಕೂಗಿಗೆ ಮುನ್ನ ನಿದ್ದೆಯ ಮಂಪರು ಕಣ್ಣರೆಪ್ಪೆಗೆ ಬಡಿದಾಗ ಎಚ್ಚರವೋ ನಿದ್ದೆಯೋ ಎಂಬಂಥ ಭ್ರಮೆಯಲ್ಲೆ ಮಲಗಿದ.
ತ್ರೈಲೋಕ್ಯ ಬಂದಿದ್ದಾನೆಂಬ ಸುದ್ದಿ ರಾತ್ರೆಗೆ ಊರ ಸಂಚಾರ ಹೊರಟಿದ್ದರಿಂದ ಮಳ್ಳಾಮರುದಿನ ಊರಿನ ಹಿರಿಯರು, ಕುಲಸ್ಥರು, ವಾಲಗದವರು, ದಂಡಿನ ಗೆಳೆಯರು, ಏಳೂರ ನಾಯಕರು, ಪಾತ್ರದವರು ಒಬ್ಬೊಬ್ಬರಾಗಿ ಬಂದು ಮಾತಾಡಿಸುತ್ತಿದ್ದರು. ಮತ್ತೆ ಬಂದಾನಿಲ್ಲವೋ ಎಂಬ ಆತಂಕದ ಜೊತೆಜೊತೆಗೆ ಬಂದೆಯಲ್ಲಾ ಮಾರಾಯ ಎನ್ನುವ ಆದರದ ಮಾತು ಕತೆಗಳು ನಡೆದಿದ್ದವು. ಬಂದವರೆದುರಿಗೆ ಅದದೇ ಕಾನೋಜದ ದಟ್ಟ ಕಾನನದ ಕತೆ ಹೇಳಿ ಸಾಗಹಾಕುವುದು ನಡೆದಿತ್ತು. ಗಾಢ ನಿದ್ದೆಯಾವರಿಸಿದ್ದ ವಸೂದೀಪ್ಯನ ಕಿವಿಯೊಳಗೆ ನಗುವಿನ, ಕಕ್ಕುಲಾತಿಯ ಮಾತುಗಳು ಎಲ್ಲೋ ಹೊಳೆದಂಡೆಯ ಬಾಗಿನ ಕೊಡುವಾಗಿನ ದನಿಯಂತೆ ಅನಿಸತೊಡಗಿದವು. ಕನಸೋ ನಿಜವೋ.. ಕಣ್ಣುಬಿಟ್ಟಾಗ ಸೂರ್ಯನೆಂಬೋ ಬೆಳಕಿನ ಬೆಂಕಿ ಉಂಡಿ ಮಾರುದ್ದ ಮೇಲೆ ಮೇಲೆ ಬಂದಿದ್ದ. ಬಂದವರ ಎದುರಿಗೆ ತಡವಾಗಿ ಎದ್ದದ್ದು ನಾಚಿಕೆ ಎನಿಸಿ ಹಿಡಿಯಷ್ಟಾದ. ಅಡುಗೆ ಮನೆಗೆ ಹೊಂದಿಕೊಂಡಿದ್ದ ಬಚ್ಚಲೊಳಗೆ ಹೋಗಿ ಇದ್ದಿಲು ಹದವಾಗಿ ಉಪ್ಪಿನ ಹಳಕು ಬಾಯೊಳಗೆ ಜಗಿದು ಹಲ್ಲುತಿಕ್ಕಿ, ಮುಖ ಕೈಕಾಲು ತೊಳೆದು, ನಡುಮನೆಯ ಕಂಬಕ್ಕೆ ಆಧಾರವಾಗಿಟ್ಟಿದ್ದ ಮಲ್ಲಯ್ಯನೆಂಬ ಲಿಂಗಕ್ಕೂ ಬೋರಮ್ಮನೆಂಬ ಕೋಲಿಗು ಕೈ ಮುಗಿದು ಹೊರಬಂದ.
ಅಬ್ಬೆ ಬಂದವರೆದುರು ನಗುತುಂಬಿ ಮಾತಾಡುತ್ತಿದ್ದಳು. ಅಪ್ಪನೋ ತನ್ನ ಒಂದು ಕಾಲು ಕೈಕಂಬವಾಗಿ ಇಟ್ಟುಕೊಂಡು ಮತ್ತೊಂದು ಕಾಲನ್ನು ನಿಗಚಿಕೊಂಡು ಸುಖಾಸನದಲ್ಲಿ ಕುಳಿತಿದ್ದ. ದಾರಿದಣಿವಿಗೆ ತತ್ತರಾಣಿಯ ನೀರನ್ನು ಬಗಲಿಗೆ ಹಾಕಿಕೊಂಡು ಹಾದಿಗೆ ಊರುಗೋಲಾಗಿ ಬೆತ್ತವೊಂದನ್ನು ಹಿಡಿದುಕೊಂಡು ಉಟ್ಟಬಟ್ಟೆಯಲ್ಲೆ ಮನೆಯ ಹೊಸ್ತಿಲು ದಾಟುವಾಗ.. ‘ವಸೂದೀಪ್ಯ’ ಗಗ್ಗರು ಗರಸಾದ ಅಪ್ಪನ ದನಿ ಕೇಳಿತು. ಹಿಂತಿರುಗಿ ನೋಡಿದಾಗ ಎಲ್ಲಿಗೆ ಸವಾರಿ ಎಂಬಂತೆ ಒಂಟಿಕಣ್ಣಲ್ಲೆ ಸನ್ನೆ ಮಾಡಿದ. ಇಲ್ಲೆ ಕಾಡಿಗೆ ಎಂಬಂತೆ ವಸೂದೀಪ್ಯನೂ ಮಹಾಕೂಟದ ಗುಡ್ಡದ ಕಡೆ ಕೈಮಾಡಿ ತೋರಿಸಿದಾಗ ಅಪ್ಪ ಮುಗುಳ್ನಕ್ಕು ಸಮ್ಮತಿಸಿದ.
(ಮುಂದುವರೆಯುವುದು)
Comments 7
ಸುರೇಶ್ ನಂದಗಾಂವ
Jun 22, 2025ಯುವಕ ಬಸವಣ್ಣನನ್ನು ಸಾಂದರ್ಭಿಕವಾಗಿ ಕತೆಯಲ್ಲಿ ಸೇರಿಸಿಕೊಂಡ ರೀತಿ ಸಹಜವಾಗಿ ಮೂಡಿಬಂದಿದೆ. ಎಲ್ಲಿಯ ತ್ರೈಲೋಕ್ಯ… ಎಲ್ಲಿಯ ಬಸವ… ಎಲ್ಲಿಯ ವಸೂದೀಪ್ಯ…
ಭರತ್ ಸಿ
Jun 22, 2025ಶರಣರ ಕತೆಗಾರರಾದ ಮಹಾದೇವ ಹಡಪದ ಅಣ್ಣಾ… ನಿಮ್ಮ narration superb👌👌
ಮನೋಹರ ಭದ್ರಾವತಿ
Jun 26, 2025ಕಣ್ಣಿಗೆ ಕಾಣುವಂತೆ ಅಕ್ಷರದಲ್ಲಿ ಬರೆಯುವುದು ಸುಲಭವಲ್ಲಾ… ಕತೆ ಓದುತ್ತಿದ್ದರೆ ಸಾಕ್ಷಾತ್ ಆ ದಿನಗಳು, ಆ ಮನೆಗಳು, ಆ ಊರು, ಆ ಜನ… ಎಲ್ಲರೂ ಕಣ್ಣೆದುರೇ ಬರುತ್ತಾರೆ… ಅಣ್ಣಾ, ಶರಣರ ಕತೆ ಬರೆಯುವ ದೊಡ್ಡ ಕೆಲಸಕ್ಕೆ ಕೈ ಹಾಕಿದ್ದೀರಿ, ನಿಮಗೆ ಶರಣರ ಆಶೀರ್ವಾದ ಇರಲಿ🫡
Prabhulunga Patil
Jul 1, 2025Story telling technique is fantastic and story depth is amazing.
ಲಿಂಗರಾಜು ಕೊಪ್ಪ
Jul 1, 2025ವಸೂದೀಪ್ಯ ಅನಿಮಿಷರ ಪೂರ್ವದ ಹೆಸರೇ? ಕೇಳಲಿಕ್ಕೆ ಎಷ್ಟು ಸುಂದರವಾಗಿದೆ!!! ಆದರೆ ಅರ್ಥ ಗೊತ್ತಾಗಲಿಲ್ಲ.
Bhuvanesh Shiggavi
Jul 4, 2025ಎಲ್ಲಿಂದ ಎಲ್ಲೆಲ್ಲಿಗೋ ಒಯ್ದು ದಡ ಸೇರಿಸುವ ಹೊತ್ತಿಗೆ ಜೀವ ಹದವಾಗಿರುತ್ತದೆಯೇ ಅಥವಾ ಹೈರಾಣಾಗಿರುತ್ತದೋ?
ಮಹೇಂದ್ರ ಕುದುರೆಮುಖ
Jul 9, 2025ಕತೆ ಕಾವ್ಯವಾಗಿ, ಮಹಾಕಾವ್ಯವಾಗಿ ಮನಸ್ಸನ್ನು ಸೂರೆಗೊಂಡಿದೆ