
ಹೀಗೊಂದು ತಲಪರಿಗೆ (ಭಾಗ-5)
ಜೀವನದಲ್ಲಿ ಲೆಕ್ಕವಿಡದಷ್ಟು ಜನ ನಮಗೆ ಎದುರಾಗುತ್ತಾರೆ. ಅಪರಿಚಿತರಲ್ಲಿ ಹಲವರು ಪರಿಚಿತರಾಗಿ, ಸ್ನೇಹಿತರಾಗಿ, ಆಪ್ತರಾಗಿ ಕೆಲವೊಮ್ಮೆ ಅಪ್ರಿಯರೂ ಆಗಿ ನಮ್ಮ ಜೀವನವನ್ನು ಮುಟ್ಟುತ್ತಿರುತ್ತಾರೆ. ಆದರೆ ಪ್ರಕೃತಿಯಲ್ಲಿ ಪ್ರಕೃತಿಯಂತೆಯೇ ಇರುವ ನಡೆಗಾರರು ಜೀವಿತಾವಧಿಯಲ್ಲಿ ಸಿಗುವುದು ತೀರಾ ದುರ್ಲಭ. ಅಂಥವರು ಹೃದಯವನ್ನು ತಿದ್ದಿ, ನಡೆಯ ದಾರಿಯನ್ನೇ ಬದಲಿಸಬಲ್ಲರು. ಅವರ ಸಾನಿಧ್ಯದಲ್ಲಿ ಪ್ರಶಾಂತತೆಯಿರುತ್ತದೆ. ಉದ್ದುದ್ದನೆಯ ಘನ ಗಾಂಭೀರ್ಯದ ಮಾತುಗಳು ಅಲ್ಲಿರುವುದಿಲ್ಲ. ಅವರೇನೇ ಹೇಳಿದರೂ ಅದು ಸ್ಪಷ್ಟವಾಗಿರುತ್ತದೆ, ನೇರವಾಗಿರುತ್ತದೆ, ಮೌನದಷ್ಟೇ ಆಳವಾಗಿರುತ್ತದೆ. ಅಲ್ಲಿ ಯಾವ ದ್ವಂದ್ವಗಳೂ ಇರಲಾರವು. ಆದರೆ ಕೃತಕತೆಯ ಕಣ್ಣುಗಳಿಗೆ ಅವರು ಕಾಣಲಾರರು. ಜ್ಞಾನದಾಹಿಗಳಿಗೆ ಅವರ ಮಾತುಗಳು ಅನೇಕ ಬಾರಿ ಒಗಟಾಗಿಯೂ, ರಹಸ್ಯವಾಗಿಯೂ ತೋರುವುದುಂಟು. ಆದರೆ ನಿಚ್ಚಳ ನೋಟದಷ್ಟೇ ಪರಿಶುಭ್ರವಾಗಿ ಸಹಜಾತಿ ಸಹಜ ನೆಲೆಯಲ್ಲಿ ಅವರು ಮಾತನಾಡುತ್ತಿರುತ್ತಾರೆ. ಆ ನುಡಿಗಳಿಗೆ ಕಿವಿಯಾದರೆ ನಮ್ಮ ದಾಹಕ್ಕೆ ಅಲ್ಲಿ ಶುದ್ಧ ಸಿಹಿನೀರಿದೆ, ಹಸಿವೆಗೆ ಅಗತ್ಯವಾದ ಪ್ರಸಾದವಿದೆ. ಹಾಗೆ ಸಿಕ್ಕ ತಿಳಿನೀರನ್ನೂ, ಪ್ರಸಾದವನ್ನೂ ನಿಮ್ಮೊಡನೆ ಹಂಚಿಕೊಂಡು ಸೇವಿಸುವ ಭಾಗ್ಯ ಇಲ್ಲಿ ಸಂವಾದದ ರೂಪ ಪಡೆದಿದೆ.
ಮಂಗಳಾ: ಜ್ಞಾನ ಮತ್ತು ಅರಿವು ಬೇರೆ ಬೇರೆ ಅಂದಾಗ ಇವುಗಳ ಮಧ್ಯದಲ್ಲಿರುವ ಅಂತರ ಎಷ್ಟು?
ಸ್ಮಶಾನವಾಸಿ: (ಹತಾಶೆಯಿಂದ) ತಾವು ಬಸವಧರ್ಮೀಯರೆಂದು ಹೇಳಿಕೊಳ್ಳುತ್ತಿರುವವರ ನಡೆ ಮತ್ತು ನುಡಿ ಇವೆರಡರ ಮಧ್ಯೆ ಇರುವ ಅಂತರವೆಷ್ಟೆಂಬುದನ್ನು ಹೇಳುತ್ತೀರಾ? ನಡೆ ಮತ್ತು ನುಡಿಯ ಮಧ್ಯೆ ಇರುವ ಸಹಜಾತಿ ಸಹಜವಾದ ತಾಯ್ಗರುಳ ಬಳ್ಳಿಯ ಸಂಬಂಧ ಕಳಚಿ ಹೋಗಿದ್ದರಿಂದಲ್ಲವೇ ಬಸವ ಧರ್ಮಕ್ಕೆ ನಡೆಕಾರರಿಲ್ಲದೆ ಸೂತಕ ಬಡೆದದ್ದು? ನಡೆಯಿಲ್ಲದ ಕೇವಲ ನುಡಿಯ ಗುಡಿಯೊಳಗೆ ಬಸವಣ್ಣನವರನ್ನು ಕಟ್ಟುವ ತಿಕ್ಕಲು ಪ್ರಯತ್ನದಿಂದಲ್ಲವೇ ಮಾನವ ಕುಲಕ್ಕೆ ಶರಣ ಪಥ ಗ್ರಹಿಸಲು ಕಷ್ಟವಾಗಿ ಕಬ್ಬಿಣದ ಕಡಲೆಯಾದದ್ದು? ಈಗಲಾದರೂ ಲಿಂಗಾಯತ ಧರ್ಮದ ಬಗೆಗಿನ ಜ್ಞಾನದಾ ವ್ಯಾಮೋಹವನ್ನು ಇಷ್ಟಕ್ಕೆ ನಿಲ್ಲಿಸಿ ಶರಣ ಮಾರ್ಗದ ನೆಲ ನಡಿಗೆಯಲ್ಲಿರುವ ಪ್ರಕೃತಿ ತತ್ವದಲ್ಲಿ ಜೀವಿಸಲು ಅನುವಾಗಿರಿ.
ನಿಮ್ಮ ಅಸಂಗತ ಪ್ರಶ್ನೆಗಳಿಂದಾಗಲಿ, ತಲೆಬುಡವಿಲ್ಲದಾ ಅನುಮಾನಗಳಿಂದಾಗಲಿ, ನಿಮ್ಮ ಭ್ರಮೋನ್ಮಾದದ ಸಿದ್ಧಾಂತಗಳಿಂದಾಗಲಿ, ಬಸವ ಧರ್ಮವನ್ನು ನಿಮ್ಮ ಕಲ್ಪನೆಗಳಿಗನುಸಾರವಾಗಿ ಓದಿಕೊಂಡಿರುವ ಪದ್ಧತಿಗಳಿಂದಾಗಲಿ ಶರಣ ಧರ್ಮಕ್ಕೆ ಕಿಂಚಿತ್ತೂ ಪ್ರಯೋಜನವಾಗಲಾರದು. ಏಕೆಂದರೆ ಲಿಂಗಾಯತವು ತಿಳಿವಳಿಕೆಯಿಂದ ತಿಳಿಯಲ್ಪಡುವುದಲ್ಲ. ಸಾಹಸದಿಂದ ನಡೆಯಲನುವಾದಾಗ ಅರಿವಾಗುವಂತಹದ್ದು. ದಾರಿ ನಡೆದಷ್ಟೂ ದೂರ ಕಡಿಮೆಯಾಗುತ್ತಾ ಗುರಿ ಸನಿಹವಾಗುತ್ತದೆಂಬ ಅನುಭಾವ ನನಸಾಗುವ ಪ್ರತ್ಯಕ್ಷಾನುಭೂತಿಯದು. ಹೆಜ್ಜೆ ಹೆಜ್ಜೆಗೂ ಗುರಿ ಸನಿಹವಾಗುವ ಪ್ರಕ್ರಿಯಾ ವಿಲಾಸದ ಸುಖವನ್ನು ನೀವು ಎಂದಾದರೂ ಅನುಭವಿಸಿದ್ದೀರಾ? ನಾಲಿಗೆ ನಡೆಯಲಾರದೆಂಬುದನ್ನು ಈಗಲಾದರೂ ಅರಿಯಿರಿ. ಜ್ಞಾನವು ಸತ್ಯದ ಪಡಿಯಚ್ಚು ಅಲ್ಲ. ಜ್ಞಾನವೆಂಬುದು ಭವಸಂಸಾರ! ಭವಸಂಸಾರವೇ ಜ್ಞಾನ! ಭವ ಜ್ಞಾನದ ಭಾರವನ್ನು ನೆತ್ತಿಯ ಮೇಲೆ ಹೊತ್ತುಕೊಂಡು ಅದರೊಳಗೆ ಅಲ್ಲಮಾದಿ ಶರಣರನ್ನು ಹುಡುಕಿದರೆ ಸಿಗುವರೇ? ಇಲ್ಲ. ಆ ಹೊಲಸು ಬಯಲಾದರೆ ಅಲ್ಲಿದೆ ನಮ್ಮೆಲ್ಲರ ಹಿರಿಯೂರು. ಅದು ಅರಿವೆಂಬ ಕುರುಹಿನ ತವರೂರು. ಶರಣ ಮಹಾಂತರು ನಲೆದಾಡಿ ನಡೆದಾಡಿದ ಆ ಮಹಾಮಹಿಮಾನ್ವಿತ ಸಿರಿಯೂರನ್ನು ಅವರು ಪ್ರಾಣಲಿಂಗಿ ಸ್ಥಲವೆಂದರು.
ಯಾವುದೇ ಶ್ರಮ ಅಥವಾ ಪ್ರಯತ್ನವಿಲ್ಲದೆ ನಿಮ್ಮ ಚಂಚಲ ಸ್ವಭಾವಗಳಿಂದ ವಿಕಸಿತಗೊಂಡ ಜ್ಞಾನದಿಂದ ಅರಿವನ್ನು ಅರಿವ ಸಾಹಸ ಮಾಡುತ್ತಿದ್ದೀರಿ ಎಂಬುದು ಬಹಳ ದುರದೃಷ್ಟಕರ. ಒದ್ದೆಯಾದ ಬಟ್ಟೆಯೊಂದನ್ನು ಬಲಪ್ರಯೋಗದಿಂದ ಹಿಂಡಿದ ಮಾತ್ರಕ್ಕೆ ಬಟ್ಟೆ ಒಣಗಲಾರದು. ನಿಮ್ಮ ಜ್ಞಾನಗಳನ್ನು ಒಣಗಿಸಿ ನೋಡಿ ನನ್ನ ಮಾತಿನ ಮರ್ಮ ತಿಳಿಯುತ್ತದೆ. ಅರಿವನ್ನು ಜ್ಞಾನಗಳಿಂದ ವಿವೇಚಿಸಬೇಡಿ. ಜೀವ ದೇಹಗಳಿಂದ ಸಮ್ಮಿಳಿತಗೊಂಡು ಸಾಧ್ಯವಾಗಿರುವ ಅಪೂರ್ವವಾದ ಪ್ರಾಣಸಂಚಯಕ್ಕಿಂತ ಮಹತ್ವವಾದದ್ದು ಹಾಗೂ ರೋಮಾಂಚನಕಾರಿಯಾದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಇಡೀ ಜಗದ ನಿಗೂಢ ರಹಸ್ಯವೆಲ್ಲಾ ಪ್ರಾಣದಲ್ಲೇ ಅಡಗಿ ಹೋಗಿದೆ. ಇದು ನಮಗಿರುವ ಪ್ರತ್ಯಕ್ಷ ಅವಕಾಶವೂ ಹೌದು! ಇಂತಹ ಪ್ರತ್ಯಕ್ಷಾನುಭೂತಿಯಿಂದ ಪರಿತ್ಯಕ್ತರಾಗಿ ಪರೋಕ್ಷ ರೂಪದಲ್ಲಿರುವ ಜ್ಞಾನದಲ್ಲಿ ಹುಡುಕಿದರೆ ಸುಖಾ ಸುಮ್ಮನೆ ಕಾಲವೇ ವ್ಯರ್ಥ! ಪ್ರಾಣರೂಪದ ನಾವಿದ್ದೇವೆಯಾದ್ದರಿಂದ ಈ ಪ್ರಾಕೃತಿಕ ಜಗತ್ತನ್ನು ಅನುಸಂಧಿಸುವ ಅಪರೂಪದ ಅವಕಾಶ ನಮಗೆ ಒದಗಿ ಬಂದಿದೆ. ಪ್ರಾಣರೂಪದ ನಾವಿಲ್ಲದಿದ್ದಾಗ ಈ ಜಗತ್ತು ನಮಗಿಲ್ಲ. ನಾವೂ ನಮಗಿಲ್ಲ. ಆದ್ದರಿಂದ ಪ್ರಾಣಸಂಚಯದಲ್ಲಿ ಕನಿಷ್ಟ ಒಂದು ಕ್ಷಣವಾದರೂ ತನ್ಮಯತ್ವವನ್ನು ಹೊಂದದವರು ಹಂದಿಯಂತೆ ತಿಂದು ಸುಖಿಸಿ ಸಾಯಬಹುದಲ್ಲದೆ ಜೀವನ ಪರಮಾರ್ಥ ತಿಳಿಯಲಾರರು. ಶರಣ ಸಾಹಿತ್ಯವು ಪ್ರಾಣಸಂಚಯದ ತಾವನ್ನು ಪ್ರಾಣಲಿಂಗಿಸ್ಥಲ ಎನ್ನುತ್ತದೆ. ಬಿಬ್ಬಿ ಬಾಚಯ್ಯನವರ ಒಂದು ವಚನ ಆ ಸ್ಥಲದಲ್ಲಿ ನಿಮಗ್ನವಾಗುವ ಬಗೆಯೊಂದನ್ನು ಹೇಳುವ ಪರಿ ಹೀಗಿದೆ-
ಬೀಜವಿಲ್ಲದೆ ಬಿತ್ತು ಹುಟ್ಟುವ ತೆರನಾವುದು ?
ತೊಟ್ಟಿಲ್ಲದೆ ಹಣ್ಣು ಇಪ್ಪ ತೆರನಾವುದು ?
ಇಷ್ಟವಿಲ್ಲದೆ ಚಿತ್ತ ಅಪ್ಪುವ ಠಾವಾವುದು ?
ಇಂತೀ ಭೇದದಲ್ಲಿ ಭೇದಕನಾಗಿ
ಎರಡಳಿದು ಛೇದಿಸಿ ನಿಂದಲ್ಲಿಯೆ
ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ
ವಚನ ಸಾಹಿತ್ಯವನ್ನು ಓದುವಾಗ ಅವುಗಳ ಮುಖ್ಯ ಲಕ್ಷ್ಯವನ್ನು ನಾವು ಗಮನಿಸಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಈ ವಚನವನ್ನು ನೋಡಿದಾಗ… ಎಲ್ಲಾ ವಚನಗಳು ಆಹ್ವಾನ ಮತ್ತು ವಿಸರ್ಜನ ಎಂಬೆರಡು ಪ್ರಕ್ರಿಯೆಗಳ ಮೂಲಕ ತಮ್ಮ ಪ್ರಾಮುಖ್ಯತೆಯನ್ನು ಸಾರಿಕೊಳ್ಳುತ್ತವೆ. ಆದ್ದರಿಂದ ವಚನಗಳನ್ನು ಓದುವಾಗ ಯಾವುದರ ಆಹ್ವಾನ? ಯಾವುದರ ವಿಸರ್ಜನ? ಎಂಬಂಶಗಳ ಸ್ಪಷ್ಟತೆಯಿಲ್ಲದಿದ್ದಲ್ಲಿ ವಚನಗಳ ಓದು ಗೋಂಡಾರಣ್ಯವಾಗಿ ಬಿಡುತ್ತದೆ. ಈ ವಚನದಲ್ಲಿ ಆಹ್ವಾನ- ವಿಸರ್ಜನಗಳ ಸೊಗಡನ್ನು ನೋಡೋಣ-
ಈ ವಚನ ಅರಿವಿನ ಆಹ್ವಾನಕ್ಕಾಗಿ ಜ್ಞಾನ ವಿಸರ್ಜನಾ ಕ್ರಿಯೆಯಲ್ಲಿ ಹೇಗೆ ತೊಡಗುತ್ತದೆ ಎಂಬುದಕ್ಕೆ ಒಂದು ನಿದರ್ಶನ. ಸಾಧಕನಲ್ಲಿ ಅರಿವನ್ನು ಆಹ್ವಾನಿಸಿಕೊಳ್ಳಲು ಜ್ಞಾನ ವಿಸರ್ಜನಾ ಕಾರ್ಯ ಜರುಗಲೇ ಬೇಕಾದುದು ಅನಿವಾರ್ಯ. ಯಾವುದಾದರೂ ಒಂದು ಹೊಸತನ್ನು ನಾವು ಪಡೆದುಕೊಳ್ಳಬೇಕೆಂದರೆ ನಾವು ಪೂರ್ವಾರ್ಜಿತವಾದುದನ್ನು ಕಳೆದುಕೊಳ್ಳಲೇ ಬೇಕು ಎಂಬ ನಿಸರ್ಗ ನಿಯಮದ ಅನುಸಾರ ಸಾಧಕನಲ್ಲಿ ಅರಿವಿನ ಸ್ವಾಯತತೆಗಾಗಿ ಜ್ಞಾನದಾ ಸಂರಚನೆಗಳು ವಿಸರ್ಜನೆಗೊಳ್ಳಲೇ ಬೇಕು.
ಶರಣ ಸಾಹಿತ್ಯದಲ್ಲಿ ಕೆಲವೊಮ್ಮೆ ಜ್ಞಾನದ ವಿಡಂಬನೆಯು ಓದುಗರಿಗೆ ಬೆಡಗಿನ ನುಡಿಯಂತೆ ಕಾಣುವುದುಂಟು. ನಿಜವಾಗಲೂ ಇದೊಂದು ದುರಾದೃಷ್ಟಕರ ಪಲಾಯನವಾದ. ಜ್ಞಾನದಾ ವಿಸರ್ಜನಾ ಪ್ರಕ್ರಿಯೆ ಶರಣರಲ್ಲಿರಬಹುದಾದ ಜಾಗೃತಗೊಂಡ ಪೂರ್ಣ ಪ್ರಜ್ಞೆ ಎಷ್ಟೆಂಬುದನ್ನು ತೆರೆದು ತೋರಿಸುತ್ತದೆ. ಶರಣರಲ್ಲಿನ ಪೂರ್ಣಪ್ರಜ್ಞೆಯ ವಿವೇಕ ತಿಳಿದ ಓದುಗ ಯಾರೇ ಇರಲಿ, ಅವರ ಪಾದಗಳಿಗೆ ಶರಣಾಗದಿರಲು ಸಾಧ್ಯವೇ ಇಲ್ಲ. ಅವರಲ್ಲಿನ ಜ್ಞಾನದಾ ವಿಸರ್ಜನಾ ಪ್ರಕ್ರಿಯೆಯನ್ನು ಕಣ್ತುಂಬಿಸಿಕೊಳ್ಳಲು ಮಾನವ ನಿರ್ಮಿತ ಜ್ಞಾನಗಳ ಕುರುಡು ಕಣ್ಣಿಗೆ ಸಾಧ್ಯವೇ ಇಲ್ಲ.
ಬಿಬ್ಬಿ ಬಾಚಯ್ಯನವರು ಈ ವಚನದ ಮೊದಲ ಸಾಲಿನಲ್ಲಿ ಹೇಳುತ್ತಾರೆ- “ಬೀಜವಿಲ್ಲದೆ ಬಿತ್ತು ಹುಟ್ಟುವ ತೆರನಾವುದು? ತೊಟ್ಟಿಲ್ಲದೆ ಹಣ್ಣು ಇಪ್ಪ ತೆರನಾವುದು?”- ಅಂದರೆ ಬೀಜವಿಲ್ಲದೆ ಮೊಳಕೆ ಹುಟ್ಟಿದೆ, ಅದರ ಹುಟ್ಟಿನ ವಿಧಾನ ಗೊತ್ತೆ? ಹಾಗೆಯೇ ತೊಟ್ಟಿಲ್ಲದೆ ಹಣ್ಣು ಮೂಡುವಂತಹ ವಿಧಾನ ನಮ್ಮೊಳಗೊಂದಿದೆ ಗೊತ್ತೆ? ಎಂದು ಅವರು ಭವಭಾರಿಗಳನ್ನು ವಿಡಂಬಿಸುತ್ತಾರೆ.
ಮೊಳಕೆಗೆ ಬೀಜ ಮೂಲ ಮಾತೃ ಹೇಗೆಯೋ ಹಾಗೆ ಹಣ್ಣಿಗೆ ಮೂಲ ಮಾತೃ ತೊಟ್ಟು! ಏಕೆಂದರೆ ತೊಟ್ಟಿಲ್ಲದೆ ಹಣ್ಣಿಗೆ ಅಸ್ತಿತ್ವವೇ ಇಲ್ಲ. ಬೀಜವಿಲ್ಲದೆ ಮೊಳಕೆ ಬರಲು ಸಾಧ್ಯವೇ ಇಲ್ಲ. ಮೊಳಕೆಗೆ ಬೀಜ ಆಧಾರ, ಹಣ್ಣಿಗೆ ತೊಟ್ಟು ಆಧಾರವೆಂಬುದು ನಮಗೆಲ್ಲರಿಗೂ ತಿಳಿದಿರುವ ಸಾಮಾನ್ಯಾಂಶವೇ ಆಗಿದೆ. ಆದರೆ ಇಲ್ಲಿ ಬೀಜವಿಲ್ಲದ ಮೊಳಕೆ, ತೊಟ್ಟಿಲ್ಲದ ಹಣ್ಣು ಉಂಟಾಗಿರುವ ಅಯೋಮಯವೊಂದನ್ನು ಸೂಚಿಸಿ ಹೇಳುತ್ತಿದ್ದಾರೆ. ಈ ಅಯೋಮಯ ತನ್ನ ಊಹೆಗಳಿಂದ ತಾನೇ ಭಾವನಾಲೋಕದೊಳಗೆ ಹುಟ್ಟನ್ನು ಕೊಟ್ಟ ತಲ್ಲಣಗಳಿಗೆ ಸಂಬಂಧಿಸಿದ್ದು.
ಕ್ರೂರಾತಿ ಕ್ರೂರವಾದ ಪ್ರಲೋಭನೆಗಳು, ಅಹಂಭಾವಗಳು, ಬಗೆಬಗೆಯ ಉನ್ಮಾದಗಳು, ಕುತಂತ್ರ, ಕುಚೋದ್ಯ ಅತ್ಯಾಸೆಗಳು, ಅನಗತ್ಯ, ಅಸಮಧಾನ, ಅಸಹನೆಗಳು, ಅಸೂಯೆ ದ್ವೇಷಗಳು, ತೃಪ್ತವಾಗದ ಸುಖ-ಲೋಲುಪತೆಗಳು, ಜಾತಿ, ಮತ, ಸಿದ್ಧಾಂತಗಳು! –ಇವು ತಲ್ಲಣಗಳು.
ಪ್ರಾಣ-ದೇಹ ಸಂಯೋಜನೆಗಳಿಂದ ಆಗುತ್ತಿರುವ ಜೀವ ಸ್ವಾತಂತ್ರ್ಯದ ಆಗುವಿಕೆಗೆ ಭಾವಕೋಶವು ಸಂಪೂರ್ಣ ವಿರುದ್ಧವಾದಂತದ್ದು. ಏಕೆಂದರೆ ಇವು ತನ್ನನ್ನೂ, ಇದಿರನ್ನೂ ಸದಾ ತಲ್ಲಣದಲ್ಲಿಟ್ಟು ಪ್ರತ್ಯಕ್ಷ ಪ್ರಾಣವನ್ನು ಉಪೇಕ್ಷೆಗೊಳಗು ಮಾಡುತ್ತಾ ಕತ್ತಲೆಗೆ ತಳ್ಳುತ್ತಿರುತ್ತವೆ.
ಜ್ಞಾನ ಮತ್ತು ಭಾಷೆ ಕೂಡಿಕೊಂಡು ಭಾವಲೋಕದಲ್ಲಿ ವಿಜೃಂಭಿಸುತ್ತಿರುವ ಈ ತಲ್ಲಣಗಳಿಗೆ ಯಾವುದೇ ಮೂಲವಿಲ್ಲ. ದೇಹ-ಪ್ರಾಣ ಸಂಯೋಜನೆ ರೂಪದಲ್ಲಿರುವ ನಮಗೆ ತಾಯಿ-ತಂದೆ ಎಂಬ ಮೂಲವಿದೆ ಹಾಗೂ ನಮಗೆ ಪ್ರಾಕೃತಿಕ ಜಗತ್ತಿನಲ್ಲಿ ಭೌತಿಕ ವಸ್ತು ನಿದರ್ಶನವಿದೆ. ಆದರೆ ಭಾವಕೋಶದಲ್ಲಿ ಅನುಭವ ಗ್ರಾಹ್ಯವಾಗುತ್ತಿರುವ ಈ ಮೇಲ್ಕಂಡ ಜ್ಞಾನಗಳಿಗೆ ಪ್ರಾಕೃತಿಕ ಜಗತ್ತಿನಲ್ಲಿ ವಸ್ತು ನಿದರ್ಶನಗಳೇನೂ ಇಲ್ಲ. ಮೂಲ ಮಾತಾ-ಪಿತೃಗಳೂ ಇವುಗಳಿಗಿಲ್ಲ. ಭಾಷಾ ರೂಪದ ಪದ ಕಲ್ಪನೆಗಳ ಮೂಲಕ ಸಂಕಲ್ಪ ವಿಕಲ್ಪಗಳ ಗತಿಯನ್ನು ಹೊಂದುತ್ತಿರುತ್ತದೆಯಾದ್ದರಿಂದ ಇವು ಪದಾರ್ಥ ರಹಿತವಾದವುಗಳು. ಮೊಲದ ಕೊಂಬಿನಂತೆ, ಆಕಾಶ ಪುಷ್ಪದಂತೆ, ಬಿಸಿಲ್ಗುದುರೆಯಂತೆ, ಚಂದ್ರಕಾಂತ ಶಿಲೆಯಂತೆ ಇವು ಸರ್ವಶೂನ್ಯವಾಗಿವೆ. ಇಲ್ಲದಾ ಇವುಗಳು ಇದ್ದಂತೆ ಭ್ರಮಾ ರೂಪದಲ್ಲಿ ತೋರುತ್ತಿವೆ.
ನಂತರದ ಸಾಲು- ಇಷ್ಟವಿಲ್ಲದೆ ಚಿತ್ತ ಅಪ್ಪುವ ತಾವಾವುದು?- ಇಷ್ಟ ಅಂದರೆ ಆಸೆ ತಾನೆ? ಮೇಲ್ಕಾಣಿಸಿದ ಪದಾರ್ಥರಹಿತ ಮಾನವ ಸಂರಚನೆಗಳೆಲ್ಲವೂ ಆಸೆ ಎಂಬ ಒಂದೇ ಕಾರಣಕ್ಕಾಗಿ ಚಿತ್ತವನ್ನು ಅಂಟಿಕೊಂಡು ಅಪ್ಪಿಕೊಂಡಿವೆ. ಹಾಗೆ ನೋಡಿದರೆ ಆಸೆ ಎಂಬುದಕ್ಕೂ ತಾಯಿ-ತಂದೆ ಅಥವಾ ಮೂಲ ಎಂಬುದು ಇಲ್ಲವೇ ಇಲ್ಲ ಎಂದಾಯಿತಲ್ಲವೇ? ಆಸೆಯೇ ಎಲ್ಲಾ ಜ್ಞಾನಗಳ ಉತ್ಪಾದಕ ಶಕ್ತಿ! ಆಸೆಗೆ ಪದಾರ್ಥ ರೂಪವಿಲ್ಲ, ನಾಮ ಮಾತ್ರವಿದೆ!
ಇಂತೀ ಬೇಧದಲ್ಲಿ ಬೇಧಕನಾಗಿ- ಈ ವಾಕ್ಯ ಬಹಳ ಪ್ರಮುಖವಾದದ್ದು. ಎಲ್ಲಾ ಭಾವ ಲೋಕದಾ ಜ್ಞಾನಗಳ ತಾಯಿ ಆಸೆ ಎಂದಾಯ್ತು! ಆಸೆಗೂ ಮೂಲವಿಲ್ಲವೆಂದಾಯ್ತು. ಹಾಗಾದರೆ ತಾಯಿ, ತಂದೆ, ಪ್ರಕೃತಿ –ಈ ಮೂರೂ ಮೂಲಗಳಿಂದ ಉಂಟಾಗಿರುವ ನನ್ನ ಪ್ರಾಣ ಪ್ರಮುಖವೋ? ಇಲ್ಲವೆ ಪ್ರಾಣದ ಪರಾವಲಂಬಿಯಾಗಿ ನನ್ನನ್ನು ಅಂಟಿರುವ ಮೂಲವಿಲ್ಲದಾ ಆಸೆ ಪ್ರಮುಖವೋ? ಎಂಬ ಎರಡರ ಬೇಧವನ್ನು ಬೇಧಿಸಿ…
ಎರಡಳಿದು ಛೇಧಿಸಿ ನಿಂದಲ್ಲಿಯೇ- ಆಸೆ ಮತ್ತು ಇದರಿಂದಾದ ಅಸಂಖ್ಯಾತ ಭಾವ ಸಂತತಿ- ಈ ಎರಡನ್ನೂ ಕತ್ತರಿಸಿ ತುಂಡು ಮಾಡಿ ನಿಂದಲ್ಲಿಯೇ ಏಣಾಂಕಧರ ಸೋಮೇಶ್ವರ ಲಿಂಗದಲ್ಲಿ ಪ್ರಾಣಲಿಂಗಿ ಸ್ಥಲ!
ಇದಲ್ಲವೇ ಅಂತರಂಗ ಶುದ್ಧಿ? ಅಂತರಂಗದ ಸಮಪಾತಳಿಗಿಳಿದು ತನ್ನ ಲೀಲಾ ವಿಲಾಸ ವಿಕೋಪಗಳನ್ನು ತನ್ನೊಳಗೆ ತಾನೇ ತಿಳಿದು ಅವುಗಳ ಅನಿತ್ಯತೆಯನ್ನು ಬಯಲುಗೊಳಿಸಿದ್ದು ಅರಿವಿನ ಸ್ವಾನುಭಾವದಿಂದ! ಈ ಧೀಶಕ್ತಿ ಕನ್ನಡದಲ್ಲಿ ಶರಣರಿಗಲ್ಲದೆ ಬೇರೆಯವರಿಗೆ ಅಳವಲ್ಲ. ಈ ಬೆರಗು ಅಲ್ಲಮರಲ್ಲಿ ಅನುರಣಿಸಿರುವುದನ್ನು ನಾವು ವಚನಗಳಲ್ಲಿ ಕಾಣಬಹುದು.
ತಾನಿರ್ದು ತನ್ನನರಿಯದೆ ಇನ್ನೆಂದಿಗೆ ಶರಣನಪ್ಪನಯ್ಯಾ?
ಪವನಸ್ಥಾನವನರಿದ ಬಳಿಕ, ಬಂದು ಬಂದು ಸುಳಿಯಲಿಲ್ಲ.
ಇದರಂತುವನಾರು ಬಲ್ಲರು ಗುಹೇಶ್ವರಾ_ನಿಮ್ಮ ಶರಣರಲ್ಲದೆ?
(ಪವನಸ್ಥಾನ= ಚಿತ್ತ= ಆಸೆ)
ಮಂಗಳಾ: ಶರಣರು ಜ್ಞಾನವನ್ನು ವಿಸರ್ಜಿಸಿ ಅರಿವನ್ನು ಏಕೆ ಧರಿಸಿದರು? ಅರಿವಿನ ಲಕ್ಷಣ ಮತ್ತು ನಿಗೂಢ ತತ್ವಗಳೇನು?
ಸ್ಮಶಾನವಾಸಿ: ಜ್ಞಾನದ ಮೂಲ ಆಸೆ! ಜ್ಞಾನ ಸಂತತಿ ಅಗಣಿತವಾದದ್ದು. ಆಸೆಯ ಜ್ಞಾನ ಅಸಂಖ್ಯಾತ ಕೇಡುಗಳನ್ನು ಸೃಷ್ಟಿಸುತ್ತಿರುತ್ತದೆ ಎಂಬುದು ನಿಮಗೆ ಈಗಾಗಲೇ ಮನವರಿಕೆಯಾಗಿರಬೇಕು. ಆದರೆ ಅರಿವು ಸದಾ ಎಚ್ಚರದಲ್ಲಿರುತ್ತದೆ. ಅರಿವು ಸದಾ ಮುಕ್ತಾವಸ್ಥೆಯಲ್ಲಿರುತ್ತದೆ. ಒಂದು ಕ್ಷಣ ಇಡೀ ವಿಶ್ವದಲ್ಲಿರುವ ಎಲ್ಲಾ ಮಾನವರು ಅರಿವಿಗರಾದರೆ ದೇಶ- ದೇಶಗಳ ಮಧ್ಯೆ ಯುದ್ಧಗಳು ನಿಂತು ಹೋಗುತ್ತವೆ. ಮನುಷ್ಯ- ಮನುಷ್ಯರ ನಡುವೆ ನಡೆಯುತ್ತಿರುವ ಕಗ್ಗೊಲೆ, ಹಿಂಸೆ, ಅತ್ಯಾಚಾರಗಳು ಇಲ್ಲವಾಗಿ, ಯಾರೂ, ಯಾವುದೂ ನಿತ್ಯವಲ್ಲವೆಂಬ ಸತ್ಯ ಮುನ್ನೆಲೆಗೆ ಬಂದು ಪ್ರೀತಿ, ವಿಶ್ವಾಸ, ಸಹಕಾರ, ಸಮೃದ್ಧಿ, ಸಾಮರಸ್ಯದಿಂದ ಬಾಳುವೆ ಮಾಡಲು ಅನುವಾಗುತ್ತಾರೆ. ಒಬ್ಬರನ್ನೊಬ್ಬರು ಶೋಷಿಸಿಕೊಂಡು ಜೀವಿಸುವ ಬದಲು ಎಲ್ಲರೂ ಜವಾಬ್ದಾರಿಯುತವಾಗಿ ದುಡಿದದ್ದನ್ನು ಹಂಚಿ ತಿಂದು ಪ್ರಶಾಂತವಾಗಿ ಬಾಳುತ್ತಾರೆ. ಮುಕ್ತತೆ ಎಂದರೆ ಇಲ್ಲಿಂದ ಪ್ರಾರಂಭವಾಗಬೇಕಲ್ಲವೇ?
ಈ ಪ್ರಶ್ನೆಯಲ್ಲಿ ಮುಂದುವರಿದು… ಅರಿವಿನ ಲಕ್ಷಣ ಮತ್ತದರ ನಿಗೂಢ ತತ್ವಗಳೇನೆಂದು ಕೇಳಿದ್ದೀರಿ. ಅರಿವಿನ ಮುಖ್ಯ ಲಕ್ಷಣ ಸ್ವಾನುಭವ! ಅರಿವಿಗೆ ಮಾತಿಲ್ಲ, ಅದು ಸಂಜ್ಞೆಗಳ ಮೂಲಕ ಶರೀರವನ್ನು ನಿರಂತರ ಕ್ರಿಯೆಯಲ್ಲಿಡುತ್ತದೆ. ಒಂದು ಕ್ಷಣಕ್ಕೆ ಜ್ಞಾನವು ಸಾವಿರ ರೀತಿಯಲ್ಲಿ ಚಂಚಲವಾಗಿರುತ್ತದೆ. ಅರಿವು ಒಂದು ಕ್ಷಣಕ್ಕೆ ಸಾವಿರಾರು ಕ್ರಿಯೆಗಳನ್ನು ಮಾಡುತ್ತಿರುತ್ತದೆ. ನೀವು ನಿದ್ದೆ ಮಾಡುತ್ತಿದ್ದಾಗ, ಕೆಲಸ ಮಾಡುವಾಗ, ಓದುವಾಗ, ಊಟ ಮಾಡುವಾಗ, ರಮಿಸುವಾಗ, ಜಗಳವಾಡುವಾಗ, ವಿಶ್ರಾಂತವಾಗಿದ್ದಾಗ… ಅರಿವು ಇಡೀ ಶರೀರದ ಎಲ್ಲಾ ಕ್ರಿಯೆಗಳಲ್ಲಿ ಮಗ್ನವಾಗಿರುತ್ತದೆ. ಒಂದು ಕ್ಷಣ ಅದು ವಿಶ್ರಾಂತ ಸ್ಥಿತಿಗೆ ತಲುಪಿದರೆ ನಮ್ಮ ಪ್ರಾಣವೇ ಹಾರಿಹೋಗುತ್ತದೆ. ಆದ್ದರಿಂದ ಅರಿವು ಅಥವಾ ಪ್ರಜ್ಞೆ ನಿರಂತರ ಪ್ರಕ್ರಿಯೆಯಲ್ಲಿಯೇ ಇರುತ್ತದೆ.
ವಚನಕಾರರು ಸಹ ಪ್ರಾಣ ರೂಪದ ಅರಿವು ಅಥವಾ ಪ್ರಜ್ಞೆಯನ್ನು ಅಭಿವ್ಯಕ್ತಿಸಲಾಗದು ಎಂದೇನೂ ಹೇಳಲಿಲ್ಲ. ಒಂದು ಸೂಜಿ ಮೊನೆಯಷ್ಟು ಜಾಗವೂ ಖಾಲಿಯಿಲ್ಲದಷ್ಟು ಇಡೀ ದೇಹವನ್ನೆಲ್ಲಾ ಪ್ರಜ್ಞೆ ಪಸರಿಸಿಕೊಂಡು ಸಂಜ್ಞೆ ಮತ್ತು ಸೂಚನೆಗಳ ಮೂಲಕ ಶರೀರದಲ್ಲಿ ಪ್ರವಹಿಸುತ್ತಿರುತ್ತದೆ.
ಅರಿವು ಕಲ್ಪನಾ ರಹಿತವಾದದ್ದು. ನಮ್ಮ ಶರೀರದಲ್ಲಿ ನಮಗೆ ತಿಳಿಯದಂತೆ ನಡೆಯುತ್ತಿರುವ ಸಾವಿರಾರು ಕ್ರಿಯೆಗಳು ಅರಿವಿನಿಂದಲೇ ನಡೆಯುತ್ತಿರುತ್ತವೆ. ಆದರೆ ಅರಿವಿನ ಕ್ರಿಯೆಗಳನ್ನು ನಮ್ಮ ಜ್ಞಾನೇಂದ್ರಿಯ ಅನುಭವಗಳಾದ ಸ್ಪರ್ಶ, ರೂಪ, ರಸ, ಶಬ್ದ, ಗಂಧಾದಿಗಳಿಂದ ತಿಳಿಯಲಾಗದು. ಮಾನುಷ ಸಂರಚನೆಗಳಿಂದಲೂ ತಿಳಿಯಲಾಗದು. ಅಂತರಂಗದಾ ಸಮಪಾತಳಿಯಿಂದ ಕ್ಷಣಕ್ಷಣ ಪ್ರವಹಿಸುತ್ತಿರುವ ಶಕ್ತಿ ಮತ್ತು ಶಾಖದ ಸಂಜ್ಞೆಗಳನ್ನು ಗಂಭೀರವಾದ ಒಳನೋಟದಿಂದ ಪರಿಗ್ರಹಿಸಬಹುದು. ಗಂಭೀರ ಒಳನೋಟಕ್ಕಾಗಿ ಪರಿಶುದ್ಧಗೊಂಡ ಮನಸ್ಸು ಬೇಕು. ಸದಾ ಈ ಕ್ಷಣದ ಜರೂರಿನ ಕಾಯಕದಲ್ಲಿ ನಿಮಗ್ನವಾಗಿರುವುದನ್ನು ಸ್ವಲ್ಪ ಸ್ವಲ್ಪ ಅಭ್ಯಾಸ ಮಾಡುತ್ತಾ ಹೋದರೆ, ಮನಸ್ಸು ತಂತಾನೇ ತಿಕ್ಕಿ ತೊಳೆದ ಪಾತ್ರೆಯಂತಾಗುತ್ತದೆ. ನಿತ್ಯ ಕಾಯಕದಲ್ಲಿ ಸಂಕಲ್ಪ-ವಿಕಲ್ಪಗಳು ದುರ್ಬಲವಾಗುತ್ತಾ ಮನಸ್ಸು ಬಿರುಗಾಳಿಯಿಲ್ಲದಾ ಕಡೆ ಬೆಳಗುವ ಜ್ಯೋತಿಯಂತೆ ನಿಶ್ಚಲ ಸ್ಥಿತಿಯನ್ನು ಹೊಂದುತ್ತಾ ಹೋಗುತ್ತದೆ. ಮನಸ್ಸು ಪರಿಶುದ್ಧಗೊಂಡಷ್ಟೂ ಈ ಪ್ರಕೃತಿಯ ರಹಸ್ಯ ಮತ್ತು ತನ್ನ ಬದುಕಿನ ನಿಗೂಢತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಪಾರಮಾರ್ಥಿಕ ಸತ್ಯಗಳ ಚಿಲುಮೆ ಉಕ್ಕಲಾರಂಭಿಸುತ್ತದೆ. ಅನಿತ್ಯದ ರಹಸ್ಯ ಬಯಲಾಗುತ್ತಾ ಸಾಗುತ್ತದೆ. ಭೌತಿಕ ಜಗತ್ತಿನ ಎಲ್ಲಾ ಹಿಂದಿನ ಸ್ಥಿತಿಗಳೂ ಬದಲಾಗುತ್ತಾ ಯಾವುದಕ್ಕೂ ಶಾಶ್ವತ ಅಸ್ತಿತ್ವವಿಲ್ಲದಿರುವ ಸತ್ಯ ಹೃದ್ಗೋಚರವಾಗತೊಡಗುತ್ತದೆ. ಆದ್ದರಿಂದ ಅರಿವೇ ಅನುಭಾವದ ಹುಟ್ಟೂರು. ಅರಿವು ಅಂತಃಸ್ಪೃಹೆಯಾದಂತೆಲ್ಲಾ ಮನಸ್ಸಿನಲ್ಲಿ ಹೊಸ ಹೊಸ ಚಿಂತನೆಗಳು ಉದಯವಾಗುತ್ತಾ ಹೋಗುತ್ತವೆ. ಜೀವನದ ಭಾರ ತಿಳಿಯಾಗುತ್ತಾ ಮನಸ್ಸು ಆಳ-ನಿರಾಳದಲ್ಲಿ ತನ್ಮಯತೆಯನ್ನು ಹೊಂದುತ್ತಾ ಹೋಗುತ್ತದೆ.
ಶರಣರು ಅರಿವನ್ನು ಧರಿಸಿದುದರ ಹಿಂದಿನ ನಿಗೂಢತೆ ಏನು? ನೋಡೋಣ…
ಅಯ್ಯಾ, ಅರಿವು ಏಕಾಗಿ ಧರಿಸಿದರು ಹೇಳಾ ನಿಮ್ಮ ಶರಣರು ?
ಅರಿವು ಆಕಾರಕ್ಕೆ ಬಂದಲ್ಲಿ ಪ್ರಕೃತಿ ಆಯಿತ್ತು.
ಅರಿವು ಹಿಂದಾಗಿ ಪ್ರಕೃತಿ ಮುಂದಾಯಿತ್ತು.
ಪ್ರಕೃತಿ ಸ್ವಭಾವವನಳಿಯಬೇಕೆಂದು
ಕಲಿದೇವರದೇವ ಇಷ್ಟಲಿಂಗವಾಗಿ
ಅಂಗದಲ್ಲಿ ಬೆಳಗಿದನು ನೋಡಾ, ಅಲ್ಲಮಯ್ಯ.
ಅರಿವು ಆಕಾರಕ್ಕೆ ಬಂದಲ್ಲಿ ಪ್ರಕೃತಿಯಾಯಿತ್ತು- ಅರಿವು ಬಹಿರಂತರ್ಗತ ರೂಪಿ, ಅಂದರೆ ಅದು ಕೇವಲ ನಮ್ಮ ಶರೀರದೊಳಗೆ ಮಾತ್ರ ಇರುವಂತಹದ್ದಲ್ಲ. ಅದು ಹೊರಗಿನ ಪ್ರಕೃತಿಯನ್ನೂ ಒಳಗೊಂಡಿದೆ. ಅನಂತ ಸ್ವರೂಪದ ಪ್ರಕೃತಿಪ್ರಜ್ಞೆ ನಮ್ಮೊಳಗನ್ನೂ ಒಳಗೊಂಡಿದೆ. ಈ ರೀತಿಯ ಅನಂತ ಆಕಾರದಲ್ಲಿ ನೋಡಿದರೆ ಪ್ರಾಣ-ದೇಹ ಸಂಯುಕ್ತವಾಗಿರುವ ನಾನು ಅನಂತವಾದ ಪ್ರಕೃತಿ ಆಕಾರವೇ ಆಗಿದ್ದೇನೆಂಬುದರ ತಿಳಿವನ್ನು ಈ ವಾಕ್ಯವು ಉದ್ಧರಿಸುತ್ತದೆ.
ಅರಿವು ಹಿಂದಾಗಿ ಪ್ರಕೃತಿ ಮುಂದಾಯಿತ್ತು- ಅತ್ಯುತ್ಕೃಷ್ಟ ಅನುಭಾವವನ್ನೂ, ಜೀವನದ ಪರಮಾರ್ಥ ತತ್ವವನ್ನೂ ಗ್ರಹಿಸಲು ಸಾಧ್ಯವಾದದ್ದು ತನ್ನ ಅರಿವಿನಿಂದಲೇ ಅಲ್ಲವೇ? ಇಂತಹ ಪರಮಾರ್ಥ ಸ್ವರೂಪದ ತನ್ನೊಳಗಣ ಅರಿವು ಕೂಡ ಎಂದೆಂದಿಗೂ ನಿಲ್ಲದಾಯಿತಲ್ಲಾ? ಏಕೆಂದರೆ ಎಲ್ಲಿಯ ತನಕ ಈ ಶರೀರದೊಳಗೆ ಪ್ರಾಣ ಸಾಧ್ಯವಿರುವುದೋ ಅಲ್ಲಿಯತನಕ ಮಾತ್ರ ನನ್ನ ಅರಿವು ನನಗೆ ಲಭ್ಯವಿರುತ್ತದೆ. ಸತ್ತ ನಂತರ ನನ್ನ ಅರಿವು ನನಗೆ ಅಲಭ್ಯ. ಆದ್ದರಿಂದ ಅರಿವು ಹಿಂದಾಯಿತು, ಪ್ರಕೃತಿ ಮುಂದಾಯಿತು.
ಪ್ರಕೃತೀ ಸ್ವಭಾವವನಳಿಯಬೇಕೆಂದು ಕಲಿದೇವರ ದೇವ ಇಷ್ಟಲಿಂಗವಾಗಿ ಅಂಗದಲಿ ಬೆಳಗಿದನು ನೋಡಾ ಅಲ್ಲಮಯ್ಯಾ- ಈ ದೀರ್ಘವಾದ ಸಾಲಿನಲ್ಲಿ ‘ಪ್ರಕೃತಿ ಸ್ವಭಾವವನಳಿಯಬೇಕೆಂದು’ ಎಂಬ ಕಿರು ಸಾಲನ್ನು ಗಮನಿಸಬೇಕು. ಪ್ರಕೃತಿ ಸ್ವಭಾವವೇನು ಎಂದು ಸಾಮಾನ್ಯ ಅನುಭವದಿಂದ ವಿವೇಚಿಸಿ ನೋಡಿದರೂ ಸಾಕು. ಅದು ಸದಾ ಬಗೆಬಗೆಯ ಜೀವಿಗಳನ್ನು ಸೃಷ್ಟಿಸಿಕೊಳ್ಳುತ್ತಲಿರುತ್ತದೆ. ಆಯಾ ಜೀವಿಗಳಿಗೆ ಈ ಪ್ರಕೃತಿ ಅವಕಾಶ ಮತ್ತು ಅನ್ನ ಸಿಗುವ ಸಲಕ್ಷಣವನ್ನೂ ಹೊಂದಿದೆ. ಪ್ರಕೃತಿ ಸಂಬಂಧವಿಲ್ಲದಿದ್ದರೆ ಇಲ್ಲಿ ಯಾವ ಜೀವಿಯೂ ಹುಟ್ಟಲಾರದು ಮತ್ತು ಬಾಳಲಾರದು. ಆದರೆ ಜೀವಸೃಷ್ಠಿ ಎಂಬುದು ಪ್ರಕೃತಿಯ ವಿಫಲ ಪ್ರಯತ್ನವೆನ್ನಲೇ ಬೇಕು!!! ಏಕೆಂದರೆ ಬದಲಾವಣೆಗೆ ಪ್ರಕೃತಿ ಅಧೀನವಾಗಿ ತನ್ನನ್ನು ತಾನು ಆಗುಮಾಡಿಕೊಳ್ಳುತ್ತಿರುವುದರಿಂದ ಹುಟ್ಟಿದ ಪ್ರತಿ ಜೀವಿಯೂ ಬದಲಾವಣೆಯೊಳಗೆ ಸಿಲುಕಿ ದುರ್ಬಲವಾಗುತ್ತಾ ಒಂದು ದಿನ ಸಾಯಬೇಕಾಗಿರುತ್ತದೆ. ಪ್ರಕೃತಿ ತತ್ವ ಬದಲಾವಣೆ ನಿಯಮಗಳಿಗೆ ತನ್ನನ್ನು ದೂಡಿಕೊಂಡಿರುವುದರಿಂದ ಯಾವ ಜೀವಿಯನ್ನೂ ಅದು ಶಾಶ್ವತಗೊಳಿಸಲಾಗದೆ ತನ್ನ ಆಗುವಿಕೆಯ ನಿರಂತರತೆಯನ್ನು ಕಾಪಿಟ್ಟುಕೊಳ್ಳಲು ಮತ್ತೆ ಮತ್ತೆ ಅಸಂಖ್ಯಾತ ಜೀವಿಗಳನ್ನು ಸೃಷ್ಟಿಸುತ್ತಲೇ ಇರಬೇಕಾದ ಜಾಡಿಗೆ ತಗುಲಿಕೊಂಡಿದೆ.
ಈಗ ಇಲ್ಲಿ ಒಂದು ಕ್ಷಣ ಯೋಚಿಸಿ… ಯಾವ ಜೀವಿಯೂ ತಾನು ಹುಟ್ಟದ ಮುನ್ನ ತಾನು ಹುಟ್ಟಬೇಕೆಂದು ಆಶಿಸುವುದಿಲ್ಲ. ಹುಟ್ಟಿದ ನಂತರ ಸಾವು ಎಂಬುದು ಬಂದೇ ತೀರುತ್ತದೆ. ಈ ಜನನ-ಮರಣಗಳ ಫಲವನ್ನು ಎಲ್ಲಾ ಜೀವಿಗಳು ಅನುಭವಿಸಲೇ ಬೇಕು. ಹುಟ್ಟು-ಸಾವುಗಳ ಮಧ್ಯೆ ಇರುವ ಜೀವಿತ ಕಾಲ ಮರಣಕ್ಕಿಂತಲೂ ಕ್ಲಿಷ್ಟಕರ. ಏಕೆಂದರೆ ಸಾಯುವ ಜೀವಿ ವರ್ಷಾನುಗಟ್ಟಲೇ ಸಾಯಲಾರ! ಇದು ಪ್ರಕೃತಿಯ ಸ್ವಭಾವ!! ಈ ಅನಗತ್ಯವಾದ ಪ್ರಕೃತಿ ಸ್ವಭಾವವನ್ನು ಅಳಿಸಿ ಹಾಕಿ ಪ್ರಕೃತಿಗೂ ಮತ್ತು ತನಗೂ ಬಿಡುಗಡೆಯನ್ನು ಕೊಡಬೇಕು. ಇಡೀ ಪ್ರಕೃತಿ ತತ್ವ ಸದಾ ತಲ್ಲಣಗಳಲ್ಲಿ ಆಗುತ್ತದೆ. ತನ್ನೊಳಗೂ ಹೊರಗೂ ಪ್ರಕೃತಿಯ ತತ್ವಕ್ಕೂ ಬಿಡುಗಡೆ ಕೊಡಬೇಕೆಂದು… ಈ ಬಿಡುಗಡೆಯನ್ನು ಸಾಧಿಸಿಕೊಳ್ಳಲು ‘ಇಷ್ಟಲಿಂಗ’ ಎಂಬ ಪ್ರಜ್ಞೆ ಅಂಗದೊಳಗೆ ಬೆಳಗಿತು ನೋಡಾ ಅಲ್ಲಮಯ್ಯಾ!!!
***** ***** *****
ಕೊಟ್ಟು- ಪಡೆದು ನಡೆಯುತ್ತಿರುವ ಜೀವನ ಪ್ರಯಾಣದಲ್ಲಿ ಕೊನೆಯಲ್ಲಿ ಏನನ್ನೂ ಒಯ್ಯಲಾರದ ಸತ್ಯ ಪ್ರತಿನಿತ್ಯ ನಮ್ಮ ಸುತ್ತಲೂ ಅನಾವರಣಗೊಳ್ಳುತ್ತಲೇ ಇರುತ್ತದೆ. ಆದರೆ ನಾವು ಅದನ್ನು ಗ್ರಹಿಸುವಲ್ಲಿ ವಿಫಲರಾಗುತ್ತಿರುತ್ತೇವೆ. ಆದ್ದರಿಂದಲೇ ನಮ್ಮ ವರ್ತನೆಗಳು ನಾವಿಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತೇವೆ ಎನ್ನುವಂತಿರುತ್ತವೆ. ಆದರೆ ನಮ್ಮ ಸಮಯ ಇನ್ನೂ ಬಹು ದೂರವಿದೆ ಎಂಬ ಪೂರ್ವನಿಯೋಜಿತ ತಿಳುವಳಿಕೆಯೊಂದು (ಡಿಫಾಲ್ಟ್ ನಾಲೆಜ್) ನಮ್ಮ ಜ್ಞಾನಕೋಶದಲ್ಲಿ ಅದ್ಹೇಗೋ ಜಾಗ ಪಡೆದುಕೊಂಡು ಉಳಿದೆಲ್ಲ ಮನಸ್ಸಿನ ಸಂಚಯಕ್ಕೆ ಅದೇ ಮೂಲ ಕಾರಣವಾಗುತ್ತಿರುತ್ತದೆ. ನಮ್ಮನ್ನು ನಮ್ಮಿಂದಲೇ ಬೇರ್ಪಡಿಸುವ ಜ್ಞಾನವನ್ನು ಅದರ ಎಲ್ಲಾ ಲಕ್ಷಣಗಳ ಮೂಲಕ ಗೊತ್ತು ಮಾಡಿಕೊಳ್ಳದಿದ್ದರೆ ನಮ್ಮಲ್ಲೇ ಇರುವ ಅರಿವು ನಮಗೆ ಕೊನೆಯ ತನಕ ದಕ್ಕದೇ ಹೋಗುತ್ತದೆ.
Comments 19
ಮಲ್ಲಿಕಾರ್ಜುನ ಮಹಾಲಿಂಗಪುರ
Dec 12, 2021ಬೀಜವಿಲ್ಲದೆ ಬಿತ್ತು ಹುಟ್ಟುವ ತೆರನಾವುದು?- ವಚನದ ಭಾವಾರ್ಥದಲ್ಲಿ ಇಡೀ ಶರಣ ದರ್ಶನವೇ ಇಟ್ಟಂತೆ ಮಾತನಾಡಿದ್ದಾರೆ! ವಚನಗಳನ್ನು ಹೇಗೆ ಓದಬೇಕು, ಹೇಗೆ ತಿಳಿಯಬೇಕು ಎನ್ನುವುದನ್ನು ತೋರಿಸಿಕೊಟ್ಟ ಸ್ಮಶಾನವಾಸಿ ಶರಣರಿಗೆ ಎಷ್ಟು ಕೃತಜ್ಞತೆ ಅರ್ಪಿಸಿದರೂ ಸಾಲದು….
Rudrappa bengaluru
Dec 12, 2021ಜ್ಞಾನ ಮತ್ತು ಅರಿವುಗಳ ನಡುವೆ ವ್ಯತ್ಯಾಸ ಇದೆ ಎನ್ನುವುದು ಗೊತ್ತಿತ್ತು, ಆದರೆ ಅದರ ಆಳ ಗೊತ್ತಿರಲಿಲ್ಲ. ತಲಪರಿಗೆಯ ಸಂವಾದ ನಿಜಕ್ಕೂ ಪ್ರಸಾದದಂತಿದೆ ಅಕ್ಕಾ.
Umapathy Beluru
Dec 12, 2021ಒಮ್ಮೆ ಓದಿದ್ದೇನೆ. ಗಹನವಾದ ವಿಷಯಗಳನ್ನು ಚರ್ಚಿಸಿದ್ದೀರಿ. ಇನ್ನೂ ಎರಡು-ಮೂರು ಸಲವಾದರೂ ಓದಬೇಕು, ಮನನ ಮಾಡಿಕೊಳ್ಳಬೇಕು. ಇಲ್ಲಿ ಉಲ್ಲೇಖಿಸಲಾದ ವಚನಗಳು, ಅವುಗಳ ಹಿಂದಿನ ಮಾರ್ಮಿಕವೆನಿಸುವ ಅರ್ಥವ್ಯಾಪ್ತಿಗಳು ನಿಜಕ್ಕೂ ಪ್ರಸಾದದಂತೆಯೇ ಇದೆ. ಶರಣಾರ್ಥಿಗಳು!
Praveen B
Dec 12, 2021ಜ್ಞಾನದಿಂದ ಅರಿವನ್ನು ಅರಿಯುವುದು ಸಾಧ್ಯವಿಲ್ಲ ಎಂದು ಲೇಖನದುದ್ದಕ್ಕೂ ವಿಶೇಷ ಒತ್ತು ನೀಡಿ ಹೇಳಲಾಗಿದೆ. ಹಾಗಾದರೆ ಏನು ಮಾಡುವುದು? ಜ್ಞಾನವನ್ನು ಒಣಗಿಸಿ ನೋಡಿ ಎನ್ನುತ್ತಾರೆ… ಹಾಗೆಂದರೆ ಜ್ಞಾನವನ್ನು ಬಿಟ್ಟು ನೋಡಬೇಕೆ? ನಮ್ಮ ತಲೆಯಲ್ಲಿ ತುಂಬಿ ಹೋಗಿರುವ ಜ್ಞಾನ ಎಲ್ಲವನ್ನೂ ತಿಳಿದುಕೊಳ್ಳಲು ತಾನೇ ಮುಂದಾಗಿ ಹೋಗುತ್ತದಲ್ಲಾ…..
ಶೈಲೇಶ್ ಬಿದರಕುಂದಿ
Dec 12, 2021ಹಿಂದಿನ ಎಲ್ಲಾ ತಲಪರಿಗೆಯ ಲೇಖನಗಳನ್ನು ಓದಿದೆ… ವಿಭಿನ್ನವಾದ ಪ್ರಶ್ನೋತ್ತರ ಮಾಲಿಕೆ ಕಣ್ತೆರೆಸುವಂತಿದೆ. ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತಿವೆ. ನಮ್ಮ ವಿಚಾರಗಳನ್ನು ಒರೆಗೆ ಹಚ್ಚಿ ನೋಡುವಂತಿವೆ. ನಮ್ಮ ಆಚಾರಗಳ ದೋಷಗಳನ್ನು ತೋರಿಸುವಂತಿವೆ. ನಮ್ಮ ನಿಲುವುಗಳನ್ನೇ ಬದಲಿಸಿಕೊಳ್ಳಲು ಸೂಚಿಸುವಂತಿವೆ.
Shantkumar Harlapur
Dec 14, 2021ಅಯ್ಯಾ, ಅರಿವು ಏಕಾಗಿ ಧರಿಸಿದರು ಹೇಳಾ….- ಅದ್ಭುತ ನಿರ್ವಚನ. ಆಸೆಯ ಮೂಲದ ಜ್ಞಾನ ಮತ್ತು ಅರಿವಿನ ಕುರಿತು ಆಳವಾದ ಲೇಖನ.
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
Dec 14, 2021ಈ
ಬೆಳಕಿಗೆ
ಗಾಳಿ ಹಂಗೇ
ಉರಿಯುವ ದೀಪಕೆ ಗಾಳಿ
ಹಂಗು ಕತ್ತಲಾಗದೆ ಬೆಳಗ
ಹರಿದವರ ಅರಿದು ಕಂಡ ಜ್ಞಾನ ನನದಲ್ಲ
ಅರಿದವರ ಅರಿವಿಗೆ ನಾನು ಶರಣು.
Vijayakumar Honnalli
Dec 14, 2021ಎಳೆಎಳೆಯಾಗಿ ಅರಿವಿನ ಮೀಮಾಂಸೆಯನ್ನು ಬಿಡಿಸಿದ ಬಹಳ ಮುಖ್ಯವಾದ ಪ್ರಶ್ನೋತ್ತರ ಮಾಲಿಕೆ ಇದು. ಅರಿವಿನ ಒಳಹೊಕ್ಕು ಬದುಕಿದ ಶರಣರು ನಿಜಕ್ಕೂ ಕಾಲಾತೀತರು, ಅಪ್ರತಿಮರು. ವಚನಗಳು ಅರಿವಿನ ಉತ್ಪನ್ನಗಳು! ಜ್ಞಾನಪೀಪಾಸಿಗಳಾದ ನಾವು ಬಹುಶಃ ಅವರ ಕಾಲ ದೂಳಿಗೂ ಸಮನಾಗಲಿಕ್ಕಿಲ್ಲ!!! ಈ ಅರಿವಿನ ಔತಣ ನೀಡಿದ ಶರಣರಿಗೆ ಪ್ರಣಾಮಗಳು.
ಪಂಚಾಕ್ಷರಿ ಹ.ವೀ
Dec 15, 2021ತಲೆಬುಡವಿಲ್ಲದ ಸಿದ್ಧಾಂತಗಳಿಂದ, ಬಸವ ಧರ್ಮವನ್ನು ನಮ್ಮ ಕಲ್ಪನೆಗಳಿಗನುಸಾರವಾಗಿ ಓದಿಕೊಂಡಿರುವ ಪದ್ಧತಿಗಳಿಂದಾಗಿ ನಮಗೆ ಯಾವ ಪ್ರಯೋಜನವೂ ಉಂಟಾಗದು. ಶರಣರ ಭಾವಸ್ಪರ್ಷದ ಅನುಭಾವ ದೊರಕೊಳ್ಳದು. ಅತ್ಯಂತ ಉದಾತ್ತ ವಿಚಾರಗಳು.
ಶರಣಾರ್ಥಿ
ಶಾರದಾ ಜವಳಿ
Dec 15, 2021ಅನುಭಾವಕ್ಕೆ ಕರೆದೊಯ್ಯುವ ಅರಿವಿನ ಸಾಕ್ಷಾತ್ಕಾರವನ್ನು ವಚನಗಳ ಬೆನ್ನಲ್ಲಿ ಸಾದರಪಡಿಸಿದ ರೀತಿ ನಿಜವಾಗಿಯೂ ನನಗೆ ಬಹಳ ಹಿಡಿಸಿತು. ಇಂತಹ ಸಂವಾದಗಳು ನಮಗೆ ದಾರಿದೀಪವಾಗಿ ಬರಲಿ.
Shankara Gowda, Vijayapur
Dec 19, 2021ಅರಿವು- ಜ್ಞಾನ, ಜ್ಞಾನ- ಅರಿವು- ತಬ್ಬಿಬ್ಬು ಮಾಡುವ ಶಬ್ದಗಳಲ್ಲಿ ಅಡಗಿ ಕೂತಿರುವ ಮರ್ಮವ ತಿಳಿದು ದಂಗಾಗಿ ಹೋದೆ. ಅದ್ಭುತ ವಿಶ್ಲೇಷಣೆ. ಶರಣರ ಅನುಭಾವಕ್ಕೆ ಶಿರಬಾಗಿ ನಮಿಸುತ್ತಿದ್ದೇನೆ.
Lingaraju Kotagi
Dec 19, 2021ವಚನಗಳು ಸರಳ ಭಾಷೆ ತಿಳಿಯಾದ ಕನ್ನಡದಲ್ಲಿದ್ದರೂ ಅವುಗಳಲ್ಲಿ ಅಡಕವಾಗಿರುವ ಒಳಾರ್ಥಗಳನ್ನು ಗ್ರಹಿಸುವುದು ಸುಲಭವಲ್ಲ. ವಚನ – ನಿರ್ವಚನಗಳನ್ನು ಓದುತ್ತಲೇ ಇರುತ್ತೇನೆ. ಆದರೆ ಪ್ರಸ್ತುತ ಲೇಖನದಲ್ಲಿ ತಾವು ಬಿಡಿಸಿದ ಗಂಭೀರ ಹೊಳಹುಗಳನ್ನು ನಾನು ಇದುವರೆಗೆ ಎಲ್ಲಿಯೂ ನೋಡಲಿಲ್ಲ. ಲೇಖನ ಓದುತ್ತಿದ್ದರೆ ವಚನಗಳನ್ನು ಹೊಸದಾಗಿ ನೋಡಿದ ದಿವ್ಯಾನುಭವವಾಯಿತು. ಶರಣು ಶರಣಾರ್ಥಿ.
Umapathy Beluru
Dec 19, 2021ಅರಿವು ಮತ್ತು ಪ್ರಜ್ಞೆ ಸಮಾನಾರ್ಥಕ ಪದಗಳು ಎಂದು ಗೊತ್ತಾಯಿತು. ಪ್ರಕೃತಿಗೂ- ಅರಿವಿಗೂ, ಅರಿವಿಗೂ- ಜೀವಕ್ಕೂ ಇರುವ ಅನ್ಯೋನ್ಯ ಸಂಬಂಧವನ್ನು ವಚನದ ಹಿನ್ನೆಲೆಯಲ್ಲಿ ತೋರಿಸಿದ ರೀರಿ ಅದ್ಭುತವಾಗಿದೆ. ತಲಪರಿಗೆಯ ಸಂವಾದಗಳು ಸಂಗ್ರಹಯೋಗ್ಯ ಬರಹಗಳು.
ಬಸವರಾಜ ಹಂಡಿ
Dec 20, 2021ಈ ಲೇಖನ ಬಗ್ಗೆ ನಾನು ಏನು ಅಂತ ಹೇಳಲಿ. ಇದನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ ಆದರೆ ನಮಗೆ ಏನಾದರೂ ಹೇಳಲು ಶಬ್ದಗಳೇ ಸಾಧಕಗಳು.
ಲೇಖನದಲ್ಲಿ ಬರೆದ ಹಾಗೆ ಅರಿವುಗೆ ಭಾಷೆ/ಶಬ್ದಗಳು ಇಲ್ಲ. ಅರಿವನ್ನು ಸಂಜ್ಞೆಗಳ ಮುಖಾಂತರ ಹೇಳ/ವ್ಯಕ್ತ ಹೇಳಬಹುದು. ಈ ಲೇಖನದ ಬಗ್ಗೆ ಸಹ ಸಂಜ್ಞೆಗಳ ಮುಖಾಂತರ ಹೇಳಬಹುದು.
ಲೇಖನ ಓದುವಾಗ, ಓದಿದ ನಂತರ ಹಾಗು ಓದಿದ ದಿನ ನಾನು ಪೂರ್ತಿಯಾಗಿ ಈ ಲೇಖನದ ಗುಂಗಿ/ನಶೆನಲ್ಲಿ ಇದ್ದೆ. ಸ್ಮಶಾನವಾಸಿಯ ೧೨ನೆಯ ಶತಮಾನದ ಶರಣನಾಗಿ ನನಗೆ/ಮಂಗಳಾ ಶರಣೆಯ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾನೆ ಅಂತ ಬಾಸವಾಗುತಿತ್ತು. ಕ್ಷಣ ಕ್ಷಣವೂ ಅನುಭವ ಮಂಟಪ ನನ್ನ ತಲೆಯಲ್ಲಿ ಸುಳಿಯುತಿತ್ತು. ಇಲ್ಲಿಯವರೆಗೆ ನಾವು ಜ್ಞಾನದಲ್ಲಿ ಮುಳುಗಿ ಮುಳುಗಿ ಎದ್ದ ಆಯ್ತು ಆದರು ಅನುಭಾವ ನಮ್ಮ ಸಮೀಪ ಸುಳಿಯಲಿಲ್ಲ. ಇಲ್ಲಿಯವರೆಗೆ ಜೀವಿಸಿದ ಜೀವನ ವ್ಯರ್ಥ ಆಯ್ತು ಅಂತ ಅನಿಸುತ್ತಿದೆ.
ನಮ್ಮನು ಅರಿವಿನ ಬೆಳಕಿಗೆ ದೂಡಿದ ಸ್ಮಶಾನವಾಸಿ ಹಾಗು ಮಂಗಳಾ ಶರಣೆಗೆ ನಾವು ಚಿರಋಣಿ. ನಿಮ್ಮಿಬ್ಬರಿಗೂ ಶರಣು ಶರಣಾರ್ಥಿಗಳು.
Vivekananda Jigali
Dec 23, 2021Wonderful article… crystal clear thoughts
ಕಲ್ಲೇಶಪ್ಪ ಕಮತಗಿ
Dec 23, 2021ಇದು ಲೇಖನವಲ್ಲ, ಅನುಭಾವ ದರ್ಶನ!! ಅರಿವು ಯಾಕಾಗಿ ಧರಿಸಿದರು ನೋಡಾ… ವಚನ ವಿವರಣೆ ನನಗೆ ಸಂಪೂರ್ಣವಾಗಿ ಅರ್ಥವಾಗದೇ ಹೋದರೂ ಅಲ್ಲಿ ವ್ಯಕ್ತವಾದ ಅನುಭಾವ ನನ್ನನ್ನು ಬಹಳ ಪ್ರಭಾವಿಸಿತು. ಬಿಬ್ಬಿ ಬಾಚಯ್ಯನವರ ವಚನಾರ್ಥವಂತೂ ಅದ್ಭುತವಾಗಿ ಮೂಡಿಬಂದಿದೆ.
Rajashekhar Nippani
Dec 27, 2021ಬಿಬ್ಬಿಬಾಚಯ್ಯನವರ ವಚನ ಪ್ರಾಣಲಿಂಗಿ ಸ್ಥಲದ್ದು ಎಂದು ತಾವು ಗುರುತಿಸಿದ ಪರಿ ನಿಜಕ್ಕೂ ಕುತೂಹಲ ಹುಟ್ಟಿಸಿದೆ. ಇದೇ ಸಂದರ್ಭದಲ್ಲಿ “ಪ್ರಾಣಸಂಚಯದಲ್ಲಿ ಕನಿಷ್ಟ ಒಂದು ಕ್ಷಣವಾದರೂ ತನ್ಮಯತ್ವವನ್ನು ಹೊಂದದವರು ಹಂದಿಯಂತೆ ತಿಂದು ಸುಖಿಸಿ ಸಾಯಬಹುದಲ್ಲದೆ ಜೀವನ ಪರಮಾರ್ಥ ತಿಳಿಯಲಾರರು” ಎಂದು ಹೇಳಿದ್ದೀರಿ. ಪ್ರಾಣಸಂಚಯದಲ್ಲಿ ತನ್ಮಯವಾಗುವುದು ಎಂದರೆ ಲಿಂಗಪೂಜೆಯಲ್ಲಿ ಲೀನವಾಗುವುದೇ?
ನಾಗೇಶ್ ಪಿ.
Dec 28, 2021ಜ್ಞಾನವೇ ಶ್ರೇಷ್ಠ ಎಂದು ನಂಬಿ, ಅದರ ಸಂಪಾದನೆಯಲ್ಲಿ ದಿನರಾತ್ರಿಗಳನ್ನು ಕಳೆದಿದ್ದೇನೆ. ಈಗ ಅರಿವು ಮುಖ್ಯ ಜ್ಞಾನವಲ್ಲ ಎಂದು ವಚನಗಳ ಆಧಾರ ನೀಡಿದ್ದೀರಿ. ವಚನ ಅಧ್ಯಯನ ಜ್ಞಾನ ಸಂಪಾದನೆಯಲ್ಲವೇ ಎಂಬ ಗಲಿಬಿಲಿಯಲ್ಲಿ ಈ ಪ್ರಶ್ನೋತ್ತರ ಮಾಲಿಕೆಯನ್ನು ಹಲವು ಬಾರಿ ಓದಿದೆ. ಜ್ಞಾನ ಸಂಪಾದನೆಗೆ ಮಿತಿಯೇ ಇರುವುದಿಲ್ಲ. ಅದು ಅತೃಪ್ತಿಯಲ್ಲೇ ಇರುವುದರಿಂದ ಮತ್ತಷ್ಟು ಓದಿ ತಿಳಿಯುವ ಹಂಬಲ ಇದ್ದೇ ಇರುತ್ತದೆ. ಶರಣರು ಆ ದಾರಿಗೆ ಹೋಗಲೇ ಇಲ್ಲ!! ಅರಿವಿನ ಹಾದಿ ಹುಡುಕಿಕೊಂಡರು- ಒಂದೊಳ್ಳೆಯ ಬರವಣಿಗೆಯನ್ನು ಓದಿಸಿದ್ದಕ್ಕೆ ಬಯಲು ಬ್ಲಾಗಿಗೆ ಶರಣುಗಳು. ಹಿರಿಯರಿಗೆ ನಮನಗಳು.
Manjunath G
Jan 4, 2022ಸಂವಾದ ಕುತೂಹಲಕಾರಿಯಾಗಿದೆ. ನನಗೊಂದು ಸಂದೇಹ-ಅರಿವನ್ನು ಆಹ್ವಾನಿಸಿಕೊಳ್ಳಲು ಕಳೆದುಕೊಳ್ಳಬೇಕಾದದ್ದು ಅಜ್ಞಾನವಲ್ಲವೇ? ಜ್ಞಾನವೆಂದು ಹೇಳಿದ್ದೀರಿ…