ಸದ್ಗುರು ಸಾಧಕ ಬಸವಣ್ಣ
`ಬಸವಣ್ಣ’ ಎನ್ನುವ ಹೆಸರು ಕನ್ನಡಿಗರಿಗೆ ಚಿರಪರಿಚಿತ. ಸುಮಾರು 60 ವರ್ಷಗಳ ಹಿಂದೆ `ಬಸವ ಜಯಂತಿ’ ಎಂದರೆ ವ್ಯವಸಾಯಕ್ಕೆ ಬಳಸುವ `ಎತ್ತುಗಳು’ ಎನ್ನುವ ನಂಬಿಕೆ ಇತ್ತು. ಎತ್ತುಗಳ ಮೈ ತೊಳೆದು, ಕೊಂಬುಗಳಿಗೆ ಬಣ್ಣ ಹಚ್ಚಿ, ಕೊರಳಿಗೆ ಗಂಟೆ ಕಟ್ಟಿ, ಮೈಮೇಲೆ ಜೂಲ ಹಾಕಿ ಊರತುಂಬ ಅವುಗಳ ಉತ್ಸವ ಮಾಡಿದರೆ ಬಸವ ಜಯಂತಿ ಮುಗಿದಂತೆ ಎನ್ನುವುದು ರೂಢಿಯಲ್ಲಿತ್ತು. ಆಗ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು `ಬಸವಣ್ಣ’ ಎಂದರೆ ಎತ್ತಲ್ಲ; 12ನೆಯ ಶತಮಾನದಲ್ಲಿ ನಮ್ಮ ನಿಮ್ಮಂತೆ ಮನುಷ್ಯರಾಗಿ ಜನಿಸಿದ ವ್ಯಕ್ತಿ. ತಮ್ಮ ಸಾಧನೆಯ ಮೂಲಕ ಅಜ್ಞಾನ, ಮೌಢ್ಯ, ಶೋಷಣೆ ಇತ್ಯಾದಿಗಳ ಕೆಸರಲ್ಲಿ ಸಿಕ್ಕವರನ್ನು ಮೇಲೆತ್ತಿದ ಮಹಾಮಾನವ. ಎತ್ತುಗಳ ಹಾಗೆ ಲೋಕಕಲ್ಯಾಣಕ್ಕಾಗಿ ದುಡಿದ ಚೇತನ. ಬಸವ ಜಯಂತಿ ಆಚರಿಸುವುದು ಎಂದರೆ ಎತ್ತಿನ ಮೆರವಣಿಗೆ ಮಾಡುವುದಲ್ಲ. ಬದಲಾಗಿ ಭಕ್ತಿಭಂಡಾರಿ ಬಸವಣ್ಣನವರ ತತ್ವಸಿದ್ಧಾಂತಗಳ ಅರಿವಿನ ಮೆರವಣಿಗೆ ಮಾಡುವುದು ಎಂದು ಜನತೆಯನ್ನು ಜಾಗೃತಗೊಳಿಸುತ್ತ ಬಂದರು. ನಮ್ಮ ಗುರುಗಳಿಗೆ ಬಸವಣ್ಣನವರೇ ತಂದೆ, ತಾಯಿ, ಬಂಧು, ಬಳಗ, ಸರ್ವಸ್ವವೂ ಆಗಿದ್ದರು. ಮಡಿವಾಳ ಮಾಚಿದೇವರ ವಚನ ನಮ್ಮ ಗುರುಗಳಿಗೆ ತುಂಬಾ ಪ್ರಿಯವಾಗಿತ್ತೆನಿಸುವುದು.
ಸುಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ದುಃಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ. ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ.
ಇದು ಕಾರಣ ಬಸವಣ್ಣ ಬಸವಣ್ಣ ಎನುತಿರ್ದೆನು ಕಾಣಾ, ಕಲಿದೇವಯ್ಯ.
ನಮ್ಮ ಎಲ್ಲ ಸಂಕಲ್ಪಗಳೂ ಈಡೆರಿರುವುದು ಬಸವಕೃಪೆಯಿಂದ ಎನ್ನುವ ಕೃತಜ್ಞತಾಭಾವ ನಮ್ಮ ಗುರುಗಳ ಮಾತುಗಳಲ್ಲಿರುತ್ತಿತ್ತು. ಅವರು ತಮ್ಮ ಬದುಕಿನ ಎಲ್ಲ ಸಂದರ್ಭದಲ್ಲೂ ಬಸವಣ್ಣನವರನ್ನು ಸ್ಮರಿಸುತ್ತಿದ್ದರು. ಅವರ ಕಾರ್ಯಕ್ರಮಗಳು ಪ್ರಾರಂಭವಾಗುತ್ತಿದ್ದುದೇ ವಚನಗೀತೆಗಳ ಮೂಲಕ. ಬಸವಣ್ಣನವರನ್ನು ನೆನೆವುದೇ ಅವರಿಗೆ ಭಕ್ತಿ, ಮುಕ್ತಿ ಆಗಿತ್ತು. ಬಸವಣ್ಣನವರು 12ನೆಯ ಶತಮಾನದಲ್ಲಿ ಮಾಡಿದ ಸಮಾಜಮುಖಿ ಕಾರ್ಯಗಳನ್ನು 21ನೆಯ ಶತಮಾನದಲ್ಲೂ ನೆನೆಸಿಕೊಳ್ಳುತ್ತೇವೆ ಎಂದರೆ ಅವರು ಎಷ್ಟು ಶತಮಾನಗಳ ಮುಂದೆ ಇದ್ದರು ಎನ್ನುವುದನ್ನು ಮನಗಾಣಬೇಕು. ಅವರು ಮುಖ್ಯವಾಗಿ ತಳಸಮುದಾಯದ ಕಾಯಕ ಜೀವಿಗಳ ಅಜ್ಞಾನವನ್ನು ಅನುಭವಮಂಟಪದ ಮೂಲಕ ಹೊಡೆದೋಡಿಸಿ ಅವರನ್ನು ಸುಜ್ಞಾನಿಗಳನ್ನಾಗಿ ಮಾಡಿದರು. ಅಸ್ಪೃಶ್ಯತೆ, ಲಿಂಗತಾರತಮ್ಯ, ಅಸಮಾನತೆ, ಹಲವು ದೇವರ ಆರಾಧನೆ, ಧಾರ್ಮಿಕ ಶೋಷಣೆ, ಪಟ್ಟಭದ್ರರ ಅಟ್ಟಹಾಸ, ವೇದ-ಪುರಾಣ-ಶಾಸ್ತ್ರ-ಆಗಮ-ಸ್ವರ್ಗ-ನರಕಗಳ ನಿರಾಕರಣೆ ಹೀಗೆ ಏನೆಲ್ಲ ಸಾಮಾಜಿಕ ಅನಿಷ್ಠಗಳ ವಿರುದ್ಧ ಹೋರಾಡಿ `ಕಾಯವೇ ಕೈಲಾಸ’, `ಕಾಯಕವೇ ಕೈಲಾಸ’, `ಜೀವನೇ ಶಿವ’, `ದೇಹವೇ ದೇವಾಲಯ’ ಎನ್ನುವ ವಿಚಾರಗಳನ್ನು ಎತ್ತಿಹಿಡಿದರು. ಆಗಿನ ಶರಣರೇ ಹೇಳುವಂತೆ ಬಸವಣ್ಣನ ಭಕ್ತಿಭಂಡಾರಿ, ಯುಗದ ಉತ್ಸಾಹ, ಸದಾಚಾರಿ, ಭೃತ್ಯಾಚಾರಿ, ಪೂರ್ವಾಚಾರಿ, ಸಕಲ ಜೀವಾತ್ಮರಿಗೆ ಒಳಿತನ್ನು ಬಯಸಿದವರು. ಮತ್ರ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಈ ಭೂಮಿಗೆ ಬಂದವರು. ಅವರ ಬದುಕು ಪಾರದರ್ಶಕವಾಗಿತ್ತು. ಅವರ ಪ್ರತಿಯೊಂದು ವಚನ `ಜ್ಯೋತಿ’ ಇದ್ದಂತೆ. ಆ ಜ್ಯೋತಿ ಪುಂಜದ ಬೆಳಕಿನಲ್ಲಿ ವ್ಯಕ್ತಿಗತ ಬದುಕಿನ ಕತ್ತಲೆಯನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಮುಂದಿನ ವಚನವನ್ನೇ ನೋಡಿ:
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೆಯೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು,
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ.
`ಸಿಟ್ಟು ತನ್ನ ವೈರಿ, ಶಾಂತಿ ಪರರ ವೈರಿ’ ಎನ್ನುವ ಮಾತೇ ಇದೆ. ಅದನ್ನೇ ಬಸವಣ್ಣನವರ ಈ ವಚನದಲ್ಲಿ ಮನಗಾಣಬಹುದು. ಸಿಟ್ಟು ಅಥವಾ ಕೋಪದಷ್ಟು ಅಪಾಯಕಾರಿ ಮತ್ತೊಂದಿಲ್ಲ. ಹಾಗಾಗಿ ಹಿರಿಯರು `ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡಬೇಡ’, `ಸಿಟ್ಟಿನಲ್ಲಿ ಕೊಯ್ದ ಮೂಗು ಮತ್ತೆ ಅಂಟಿಸಲು ಬರುವುದಿಲ್ಲ’, `ಸಿಟ್ಟು ಬಂದಾಗ ಹತ್ತು ಎಣಿಸು’ ಎಂದು ಬುದ್ಧಿವಾದ ಹೇಳುವರು. ಒಂದು ಕ್ಷಣದ ಕೋಪ ಏನೆಲ್ಲ ಅನಾಹುತ ಮಾಡಬಲ್ಲುದು. ಸರ್ವನಾಶಕ್ಕೂ ಕಾರಣವಾಗಬಲ್ಲುದು. ಸಿಟ್ಟು ಮೊದಲಿಗೆ ಆ ವ್ಯಕ್ತಿಯನ್ನೇ ಬಲಿ ತೆಗೆದುಕೊಳ್ಳುವುದು. ಅದನ್ನೇ ಬಸವಣ್ಣನವರು ತುಂಬಾ ಪರಿಣಾಮಕಾರಿಯಾಗಿ ತಮ್ಮ ವಚನದಲ್ಲಿ ಹೇಳಿದ್ದಾರೆ. ಯಾರೋ ಅವಿವೇಕಿ ನಿಮ್ಮ ಮೇಲೆ ಕೋಪಿಸಿಕೊಂಡರೆ ನೀವೂ ಅವರ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಕೋಪೋದ್ರಿಕ್ತರಾದರೆ ಅದರಿಂದ ನಿಮಗೆ ಆದ ಲಾಭವೇನು, ಅವರಿಗೆ ಆದ ನಷ್ಟವೇನು ಎಂದು ಯೋಚನೆ ಮಾಡಬೇಕು. ಅಂದರೆ ಅವರಂತೆ ನೀವೂ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡದೆ, ಉದ್ವಿಗ್ನತೆಗೆ ಒಳಗಾಗದೆ ಪ್ರಶಾಂತ ಮನದವರಾಗಿ ಬಾಳುವ ಕಲೆ ಕರಗತ ಮಾಡಿಕೊಳ್ಳಬೇಕು ಎನ್ನುವುದು ಬಸವಣ್ಣನವರ ಆಶಯ. ಏಕೆಂದರೆ ಸಿಟ್ಟಿನ ಫಲವಾಗಿ ಮತ್ತೊಬ್ಬರ ಮೇಲೆ ಕೈ ಮಾಡುವ ಪ್ರಸಂಗ ಬರುತ್ತದೆ. ಆಗ ಹಿರಿಯರಾಗಿ ಹೀಗೆ ಮಾಡಬಹುದೇ ಎಂದು ಜನ ಛೀಮಾರಿ ಹಾಕುವರು. ಅವನಿಗೇನೋ ಬುದ್ಧಿ ಇಲ್ಲ. ಅವನಂತೆ ಇವರೂ ಸಿಟ್ಟಾದರೆ ಅವನಿಗೂ ಇವರಿಗೂ ಏನು ವ್ಯತ್ಯಾಸ? ಕೋಪಿಸಿಕೊಂಡವನ ಮೇಲೆ ಕೆಲವರು ಕೈ ಮಾಡದಿದ್ದರೂ ಮನದಲ್ಲೇ ಏನು ಮಾಡಬೇಕೆಂದು ಕುದಿಯುವರು. ಅದರಿಂದ ಬುದ್ಧಿಹೀನರಾಗಿ ಮಾಡಬಾರದ ಕೃತ್ಯಗಳನ್ನು ಮಾಡಬಹುದು. ಅಂಥವರಿಗೆ ಇಲ್ಲಿ ಬಸವಣ್ಣನವರು ಕೊಡುವ ಹೋಲಿಕೆ ಚಿಂತನಾರ್ಹವಾಗಿದೆ. `ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡುವುದೆ’. ನಮ್ಮ ಮನೆಗೆ ಬಿದ್ದ ಬೆಂಕಿ ಮೊದಲು ಸುಡುವುದು ನಮ್ಮ ಮನೆಯನ್ನೇ. ಆನಂತರ ಅಕ್ಕ-ಪಕ್ಕದ ಮನೆಗೆ ಆವರಿಸುವುದು. ಅದರಂತೆ ನಮ್ಮ ಕೋಪ ಮೊದಲು ಸುಡುವುದು ನಮ್ಮನ್ನೇ ಎನ್ನುವ ಸತ್ಯವನ್ನು ಮರೆಯಬಾರದು. ಅದನ್ನು ಬೇಕಾದರೆ `ಹೊಟ್ಟೆಕಿಚ್ಚು’ ಎನ್ನಬಹುದು. ಬೆಂಕಿಗಿಂತಲೂ ಅಪಾಯಕಾರಿ ಹೊಟ್ಟೆಕಿಚ್ಚು. ಹಾಗಾಗಿ ಮನುಷ್ಯ ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿಯೂ ಕೋಪಕ್ಕೆ ಅವಕಾಶ ನೀಡಬಾರದು. ಹಾಗೆ ನೀಡಿದ್ದೇ ಆದಲ್ಲಿ ಏನೆಲ್ಲ ಅನರ್ಥಗಳನ್ನು ಅನುಭವಿಸಿ ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳಬೇಕಾಗುತ್ತದೆ ಎನ್ನುವ ಅರಿವನ್ನು ಮೂಡಿಸಿದ್ದಾರೆ. ಅವರ ಮತ್ತೊಂದು ವಚನವನ್ನು ನಾವು ಆಗಾಗ ಹೇಳಿಕೊಳ್ಳುತ್ತೇವೆ.
ಕಾಣದ ಠಾವಿನಲ್ಲಿ ಜರೆದರೆಂದಡೆ ಕೇಳಿ ಪರಿಣಾಮಿಸಬೇಕು.
ಅದೇನು ಕಾರಣ?
ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ!
ಎನ್ನ ಮನದ ತದ್ದ್ವೇಷವಳಿದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು,
ಕೂಡಲಸಂಗಮದೇವಾ.
ಚಾಡಿಮಾತುಗಳಿಗೆ ಮನಸೋಲದವರು ವಿರಳ. ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಏನೆಲ್ಲ ಆಟ ಆಡುವರು. ಅವರು ಸತ್ಯವನ್ನು ಸುಳ್ಳನ್ನಾಗಿ, ಸುಳ್ಳನ್ನು ಸತ್ಯವನ್ನಾಗಿ ಮಾಡುವ ಜಾಣ್ಮೆ ತೋರುವರು. ಅಂಥವರ ಮಾತುಗಳಿಗೆ ಕಿವಿಕೊಟ್ಟರೆ ನಮಗೇ ಅಪಾಯ. ಏಕೆಂದರೆ ಆ ಪಿಸುಣರು `ಆತ ನಿಮಗೆ ಸ್ವಲ್ಪವೂ ಗೌರವ ಕೊಡದೆ ಹಗುರವಾಗಿ ಮಾತನಾಡಿದ. ಅವನಾಡಿದ ಪದಗಳನ್ನು ನನ್ನ ಬಾಯಿಂದ ಹೇಳಲಾಗುವುದಿಲ್ಲ. ತಾವೂ ಕೇಳಬಾರದು’ ಎಂದು ಬೆಂಕಿಗೆ ತುಪ್ಪ ಸುರಿಯುವ ಕಾರ್ಯ ಮಾಡುವರು. ಇಂಥ ಸಂದರ್ಭಗಳು ಪ್ರತಿಯೊಬ್ಬರ ಬದುಕಿನಲ್ಲೂ ಬರುವುದು ಸಹಜ. ಆಗ ಮನುಷ್ಯ ಹೇಗೆ ವರ್ತನೆ ಮಾಡಬೇಕು ಎನ್ನುವ ನೀತಿಯ ಪಾಠವನ್ನು ಮೇಲಿನ ವಚನದಲ್ಲಿ ಬಸವಣ್ಣನವರು ಹೇಳಿದ್ದಾರೆ. ಈ ವಿಚಾರವಾಗಿ ಅಕ್ಕಮಹಾದೇವಿಯವರ ಮಾತುಗಳೂ ಮನನೀಯವಾಗಿವೆ. ಅವರು ಹೇಳುತ್ತಾರೆ: “ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು” ಎಂದು. ಹೌದು; ಈ ಲೋಕಕ್ಕೆ ಬಂದಮೇಲೆ ಹೊಗಳುವುದು, ತೆಗಳುವುದು, ಚಾಡಿ ಹೇಳುವುದು ಇದ್ದದ್ದೇ. ಅಂಥ ಸಂದರ್ಭದಲ್ಲಿ ನಾವು ಹೇಗೆ ವರ್ತಿಸಬೇಕು ಎನ್ನುವುದು ತುಂಬಾ ಮುಖ್ಯ. ಯಾರೋ ಬಂದು `ನಿಮ್ಮನ್ನು ಆತ ಹೀನಾಯವಾಗಿ ನಿಂದಿಸುತ್ತಿದ್ದ’ ಎಂದು ಚಾಡಿ ಹೇಳುವರು. ಅವರ ಮಾತು ಕೇಳಿ ತಕ್ಷಣ `ಅವನನ್ನು ಒಂದು ಕೈ ನೋಡಿಕೊಳ್ಳುವೆ’ ಎಂದು ಹಗೆತನ ಸಾಧಿಸಲು ಮುಂದಾಗುವರು. ಬದಲಾಗಿ ಹೌದ! ಹಾಗೆ ಬೈದನೇ! ಇನ್ನೊಮ್ಮೆ ಹೇಳು? ನಾನು ಅವನಿಗೆ ಏನನ್ನೂ ಕೊಟ್ಟಿಲ್ಲ, ಅವನಿಂದ ಏನನ್ನೂ ಪಡೆದಿಲ್ಲ. ನನ್ನನ್ನು ಹಾಗೆ ನಿಂದಿಸುವುದರಿಂದ ಅವನಿಗೆ ಸಂತೋಷ ಆಗಿದೆ ಎಂದರೆ ಬೇಕಾದಷ್ಟು ನಿಂದಿಸಲಿ. ನಾನೂ ಅದನ್ನು ಕೇಳಿ ಸಂತೋಪಡುವೆ ಎನ್ನುವ ಗುಣ ಬೆಳೆಸಿಕೊಂಡರೆ ಚಾಡಿ ಹೇಳಲು ಬಂದವ ಇವನ ಮುಂದೆ ನನ್ನ ಆಟ ನಡೆಯದು ಎಂದು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೊರಟು ಹೋಗುವನು. ಈ ಗುಣ ಪ್ರತಿಯೊಬ್ಬರಲ್ಲೂ ಬಂದರೆ ಮನಸ್ಸಿನಲ್ಲಿ ಹುಟ್ಟಬಹುದಾದ ಸಿಟ್ಟು, ದ್ವೇಷ, ಅಸೂಯೆ ದೂರವಾಗುವುದು. ಅಂಥವರಿಂದ ದೂರವಿದ್ದು ಶರಣರ ಸಹವಾಸದಲ್ಲಿ ಇರುವ ಸುಬುದ್ಧಿಯನ್ನು ಕರುಣಿಸು ಎನ್ನುವ ಪ್ರಾರ್ಥನೆ ಬಸವಣ್ಣನವರದು. ಇವತ್ತಂತೂ ಇಂಥ ಪ್ರಾರ್ಥನೆಯನ್ನು ಕ್ಷಣ ಕ್ಷಣಕ್ಕೂ ಮಾಡಿಕೊಳ್ಳಬೇಕೆನಿಸುವುದು. ಅದಕ್ಕಾಗಿ ಎಂದಿಗಿಂತ ಇಂದು ಶರಣರ ವಚನಗಳ ಒಡನಾಟ ಬೇಕಾಗಿದೆ. ಶರಣರ ಸಂಗ ನಮ್ಮಲ್ಲಿರುವ ಎಲ್ಲ ಅವಗುಣಗಳನ್ನು ಸುಟ್ಟುಹಾಕುವುದು.
ಅಯ್ಯಾ, ಸಜ್ಜನ ಸದ್ಭಾವರ ಸಂಗದಿಂದ
ಮಹಾನುಭಾವರ ಕಾಣಬಹುದಯ್ಯಾ.
ಮಹಾನುಭಾವರ ಸಂಗದಿಂದ
ಶ್ರೀಗುರುವನರಿಯಬಹುದು.
ಲಿಂಗವನರಿಯಬಹುದು, ಜಂಗಮವನರಿಯಬಹುದು.
ಪ್ರಸಾದವನರಿಯಬಹುದು, ತನ್ನ ತಾನರಿಯಬಹುದು.
ಇದು ಕಾರಣ ಸದ್ಭಕ್ತರ ಸಂಗವನೆ ಕರುಣಿಸು
ಕೂಡಲಸಂಗಮದೇವಾ, ನಿಮ್ಮ ಧರ್ಮ.
ಸಜ್ಜನರ ಸಂಗದಿಂದ ಆಗುವ ಪ್ರಯೋಜನ ಎಂತಹುದು ಎನ್ನುವ ವಿವರಣೆ ಇಲ್ಲಿದೆ. `ಸಗಣಿಯವನೊಂದಿಗೆ ಸರಸಕ್ಕಿಂತ ಗಂಧದವನೊಂದಿಗೆ ಗುದ್ದಾಡುವುದೇ ಲೇಸು’ ಎನ್ನುವ ಲೋಕೋಕ್ತಿ ಈ ಸಂದರ್ಭದಲ್ಲಿ ನೆನಪಾಗುವುದು. ಒಳ್ಳೆಯವರ ಒಡನಾಟದಿಂದ ಒಳ್ಳೆಯದಾಗುತ್ತದೆಯೇ ಹೊರತು ಎಂದಿಗೂ ಕೇಡಾಗುವುದಿಲ್ಲ. `ಹಿಟ್ಟಿನಂತೆ ರೊಟ್ಟಿ’ ಎನ್ನುವ ಮಾತು ಸಹ ಇದಕ್ಕೆ ಪೂರಕವಾಗಿದೆ. ನಾವು ಎಂಥವರ ಒಡನಾಟದಲ್ಲಿದ್ದೇವೆ ಎನ್ನುವುದರ ಮೇಲೆ ನಮ್ಮ ವ್ಯಕ್ತಿತ್ವದ ಅಳತೆ ಮಾಡುವರು. ಕಳ್ಳರ ಸಹವಾಸ ಮಾಡಿದರೆ ನಾವೂ ಕಳ್ಳರಾಗಬಹುದು. ಕಡುಕರ ಸಹವಾಸದಿಂದ ಕುಡುಕರಾಗಬಹುದು. ದುಷ್ಟರ ಸಹವಾಸ ನಮ್ಮನ್ನು ದುಷ್ಟ ಕಾರ್ಯಗಳಿಗೆ ಪ್ರೇರೇಪಿಸಬಹುದು. ಆದುದರಿಂದ ಅಂಥ ದುರ್ಜನರ ವಿಶ್ವಾಸ ಬೆಳೆಸುವುದಕ್ಕಿಂತ ಸಾಧು ಸಜ್ಜನರ ಒಡನಾಟವಿಟ್ಟುಕೊಂಡರೆ ವ್ಯಕ್ತಿತ್ವ ವಿಕಸನ ಹೊಂದಿ ಅದ್ಭುತ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದು. ಬಸವಣ್ಣನವರು ಅಂದು ಕಲ್ಯಾಣದಲ್ಲಿ ಏನೆಲ್ಲ ಸಾಧನೆ ಮಾಡಲು ಸಾಧ್ಯವಾಗಿದ್ದು ಸಜ್ಜನರ ಸಹವಾಸದಿಂದಲೇ. ಅವರು ಶ್ರೀಮಂತರ, ರಾಜಮಹಾರಾಜರ, ಚಾಡಿಕೋರರ ಒಡನಾಟ ಮಾಡಲಿಲ್ಲ. ಬದಲಾಗಿ ತಳಸಮುದಾಯದ ಕಾಯಕ ಜೀವಿಗಳ ಪ್ರೀತಿ, ವಿಶ್ವಾಸ ಗಳಿಸಿ ಅವರನ್ನು ಅಪ್ಪಟ ಶರಣರನ್ನಾಗಿ, ಅನುಭಾವಿಗಳನ್ನಾಗಿ ಪರಿವರ್ತಿಸಿದರು. ಈ ದಿಶೆಯಲ್ಲಿ ಬಸವಣ್ಣನವರ ಕಾರ್ಯ ಇಂದು ಲೋಕಕ್ಕೆ ಬೇಕಾಗಿದೆ. ಅವರು ಲೋಕಕಲ್ಯಾಣ ಕಾರ್ಯಗಳನ್ನು ಮಾಡಲು `ಲಿಂಗವ್ಯಸನ ಮತ್ತು ಜಂಗಮಪ್ರೇಮ’ ಎನ್ನುವ ತತ್ವವನ್ನು ಅವಲಂಬಿಸಿದ್ದು ಅವರ ವಚನಗಳಿಂದ ವೇದ್ಯವಾಗುವುದು. ಇದನ್ನು ಪರಿಣಾಮಕಾರಿಯಾಗಿ ತಮ್ಮ ವಚನದಲ್ಲಿ ಬಿಂಬಿಸಿದ್ದಾರೆ ಪ್ರಭುದೇವರು.
ಕವಿತ್ವಸಾಧಕರೆಲ್ಲರು ಕಳವಳಿಸಿ ಕೆಟ್ಟರು.
ವಿದ್ಯಾಸಾಧಕರೆಲ್ಲರು ಬುದ್ಧಿಹೀನರಾರು.
ಪವನ ಸಾಧಕರೆಲ್ಲರು ಹದ್ದು ಕಾಗೆಗಳಾದರು.
ಜಲಸಾಧಕರೆಲ್ಲರು ಕಪ್ಪೆ ಮೀನುಗಳಾದರು.
ಅನ್ನಸಾಧಕರೆಲ್ಲರು ಭೂತಪ್ರಾಣಿಗಳಾದರು.
ಬಸವಣ್ಣ, ಸದ್ಗುರುಸಾಧಕನಾಗಿ
ಸ್ವಯಲಿಂಗವಾದ ಕಾಣಾ ಗುಹೇಶ್ವರಾ.
ಎಲ್ಲ ಕಾಲದಲ್ಲೂ ಕವಿಗಳು, ವಿದ್ವಾಂಸರು, ಪವನ ಸಾಧಕರು, ಜಲ ಸಾಧಕರು, ಅನ್ನ ಸಾಧಕರು ಇದ್ದರೆಂಬುದು ಇತಿಹಾಸದಿಂದ ತಿಳಿದುಬರುವುದು. ಆದರೆ ಅವರು ಅವುಗಳ ಮೂಲಕ ಏನನ್ನು ಸಾಧಿಸಬೇಕಾಗಿತ್ತೋ ಅದನ್ನು ಸಾಧಿಸದೆ ಎಂಥವರಾದರು ಎನ್ನುವುದನ್ನು ವಚನದಲ್ಲಿ ತಿಳಿಸಿದ್ದಾರೆ. ಆದರೆ ಬಸವಣ್ಣನವರು ಇವೆಲ್ಲವನ್ನು ಸಾಧಿಸಿ ಅಲ್ಲಿಗೇ ನಿಲ್ಲದೆ ಅವುಗಳ ಮೂಲಕ `ಸದ್ಗುರುಸಾಧಕನಾಗಿ ಸ್ವಯಲಿಂಗವಾದ’ ಎನ್ನುವ ಮಾತು ಮುಖ್ಯವಾದುದು. ಎಷ್ಟೋ ಜನ ಸೃಜನಶೀಲ ಕವಿಗಳಾಗಿದ್ದರೂ ಅವರಿಂದ ಸಮಾಜಕ್ಕೆ ಕಿಂಚಿತ್ತೂ ಪ್ರಯೋಜನ ಆಗುವುದಿಲ್ಲ. ತಮ್ಮ ಕವಿತ್ವದ ಮೂಲಕ ತಾವು ಗೌರವ ಗಳಿಸಿಕೊಂಡು ಸುಖದ ಜೀವನಕ್ಕೆ ಅದನ್ನೇ ರಹದಾರಿಯನ್ನಾಗಿ ಮಾಡಿಕೊಳ್ಳುವರು. ಅವರು ಭ್ರಾಂತಿಗೊಳಗಾಗಿ ಕೆಟ್ಟರು ಎಂದು ಮೂದಲಿಸುವರು ಪ್ರಭುದೇವರು.
ಕೆಲವರು ವಿದ್ಯೆಯ ಮೂಲಕ ವಿದ್ವತ್ತನ್ನು ಸಂಪಾದಿಸಿ ಅದನ್ನು ತಮ್ಮ ಸ್ವಾರ್ಥಕ್ಕಾಗಿ ದುರ್ವಿನಿಯೋಗ ಮಾಡಿಕೊಳ್ಳುವರು. ಅವರ ವಿದ್ಯೆ, ವಿದ್ಯತ್ತು ಲೋಕದ ಜನರಿಗೆ ದೂರದ ಗುಡ್ಡ ಅಷ್ಟೆ. ಅಂಥವರು ಬುದ್ಧಿಗೆಟ್ಟವರು, ಮತಿವಿಕಲರು ಎಂದು ಛೇಡಿಸುವರು. ಕೆಲವರು ಗಾಳಿಯಲ್ಲಿ ತೇಲುವ ಸಾಧನೆ ಮಾಡಿದ್ದೇವೆ ಎಂದು ಜನರನ್ನು ದಿಕ್ಕುತಪ್ಪಿಸುವರು. ತಮ್ಮ ಸಾಧನೆಯನ್ನೇ ಸುಲಿಗೆಗೆ ಸಾಧನವಾಗಿ ಮಾಡಿಕೊಳ್ಳುವರು. ಪ್ರಭುದೇವರು ಅವರನ್ನು ಹದ್ದು, ಕಾಗೆಗೆ ಹೋಲಿಸುವರು. ಮತ್ತೆ ಕೆಲವರು ತಾವು ಜಲಸಾಧಕರೆಂದು ಹೇಳಿಕೊಂಡು ನೀರಿನ ಮೇಲೆ ತೇಲುವರು. ಅದರಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ. ಅಂಥವರನ್ನು ಕಪ್ಪೆ, ಮೀನುಗಳೆಂದು ಹೀಗಳೆವರು. ಯಾಕೆಂದರೆ ಅವು ಸಹ ನೀರಿನಲ್ಲಿ ತೇಲುತ್ತವೆ. ಅವುಗಳಿಗಿಂತ ಮಹತ್ವದ ಸಾಧನೆ ಇವರದೇನಲ್ಲ ಎನ್ನುವ ಮೂದಲಿಕೆ ಇಲ್ಲಿದೆ. ಕೆಲವರು ನಿರಾಹಾರಿಗಳಾಗಿ ಎಷ್ಟು ದಿನ ಬೇಕಾದರೂ ಇರಬಲ್ಲೆವು. ಅಂಥ ವಿದ್ಯೆ ನಮಗೆ ಕರಗತವಾಗಿದೆ ಎಂದು ಕೊಚ್ಚಿಕೊಳ್ಳುವರು. ಅಂಥವರಿಂದ ಸಮಾಜಕ್ಕೆ, ಜನರಿಗೆ ಕಿಂಚಿತ್ತೂ ಲಾಭವಾಗದು. ಅವರನ್ನು ಭೂತಪ್ರಾಣಿಗಳು ಎನ್ನುವರು.
ಬಸವಣ್ಣನವರು ನಿಜಾರ್ಥದಲ್ಲಿ ಕವಿಗಳು. ಅವರ ಕವಿತ್ವದ ಫಲಶೃತಿಗಳೇ ವಚನಗಳು. ಆ ವಚನಗಳಲ್ಲಿ ಲೋಕದ ಜನರ ಬದುಕು ಹಸನಾಗಬೇಕು ಎನ್ನುವ ಸಾಮಾಜಿಕ ಕಳಕಳಿ ಇದೆ. ಅವರು ತಮಗೆ ಭಾಷೆಯ ಮೇಲೆ ಹಿಡಿತವಿದೆ ಎಂದು ಜನರಿಗೆ ಅರ್ಥವಾಗದ ಕವನ ಬರೆಯುವುದಿಲ್ಲ. ದೇವಭಾಷೆ ಎನ್ನುವ ಸಂಸ್ಕೃತ ಬಿಟ್ಟು ಅಚ್ಚಕನ್ನಡದಲ್ಲಿ ಸ್ಫುಟವಾಗಿ ತಮ್ಮ ಭಾವನೆಗಳನ್ನು ಹೊರಹಾಕಿದರು. ಅವರ ಕವಿತ್ವ ಅಜ್ಞಾನಿಗಳ ಶೋಷಣೆಗಾಗಿ, ತಮ್ಮ ಉದರಪೋಷಣೆಗಾಗಿ ದುರ್ಬಳಕೆ ಆಗಲಿಲ್ಲ. ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದು ತಮ್ಮ ಉದ್ದೇಶ ಎಂದರು. ಅಷ್ಟಕ್ಕೆ ನಿಲ್ಲದೆ ಶಿವಸಾಕ್ಷಾತ್ಕಾರಕ್ಕಾಗಿ `ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂದರು. ತಮಗೆ ವಿದ್ಯೆ ವಿದ್ವತ್ತು ಇದೆ ಎಂದು ಅವರು ವೇದ, ಶಾಸ್ತ್ರ, ಪುರಾಣಗಳ ಕತೆಯನ್ನೇ ಹೇಳುತ್ತ ದೊಡ್ಡವರಂತೆ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ಅವುಗಳಲ್ಲಿರುವ ದೋಷಗಳನ್ನು ಹೊರಹಾಕಿ ಎಲ್ಲರ ಬದುಕಿಗೆ ಮುಟ್ಟುವ, ತಟ್ಟುವ ಸರಳ, ಅರ್ಥಪೂರ್ಣ ವಚನಗಳನ್ನು ಹೇಳುತ್ತ ಬಂದರು. ಬಸವಣ್ಣನವರು ತತ್ವಗಳ ಮೂಲಕ ಭಕ್ತಿ ಭಂಡಾರಿ ಎನ್ನುವ ಪ್ರಖ್ಯಾತಿ ಪಡೆದರು. ಅವರ ಭಕ್ತಿ ಪರಮಪ್ರೇಮದ ಸಂಕೇತ. ಅಲ್ಲಿ ಇವನಾರವ, ಇವನಾರವ ಎನ್ನದೆ ಎಲ್ಲರನ್ನೂ ಪ್ರೀತಿಸುವ, ಗೌರವಿಸುವ, ಮೇಲೆತ್ತುವ ಜೀವಕಾರುಣ್ಯ ಗುಣವಿತ್ತು. ಬಸವಣ್ಣನವರು ಪವನ ಸಾಧನೆ, ಜಲ ಸಾಧನೆ, ಅನ್ನ ಸಾಧನೆ ಮಾಡದೆ ಗುರುವಾಗಿ ಮಾರ್ಗದರ್ಶನ ಮಾಡುವ ಮೂಲಕ ತಮ್ಮ ಮತ್ತು ಲೋಕದ ಜನರ ಬದುಕನ್ನು ಹಸನಾಗಿಸುವ ಕಾಯಕ ಮಾಡಿದರು. ಹಾಗಾಗಿ ಅವರೇ ದೇವರಾದರು ಎನ್ನುವ ಪ್ರಭುದೇವರ ಮಾತುಗಳಲ್ಲಿ ಮನುಷ್ಯ ಎಂಥ ಗುರುವಾಗಬೇಕು ಎನ್ನುವ ಸೂಚನೆ ಇದೆ. ಬಸವಣ್ಣನವರು ಅಂಥ ಗುರುವಾಗಿದ್ದರು ಎನ್ನುವ ಗೌರವವೂ ಇದೆ. ಬಸವಣ್ಣನಂಥ ಗುರುವಾದರೆ ಅಲ್ಲಿ ಆತ್ಮಕಲ್ಯಾಣದ ಜೊತೆಗೆ ಲೋಕಕಲ್ಯಾಣವನ್ನೂ ಬಯಸಲು ಸಾಧ್ಯವಾಗುವುದು. ಬಸವಣ್ಣನವರು ಕವಿಯಾಗಿ, ವಿದ್ವಾಂಸರಾಗಿ, ತತ್ವಸಾಧಕರಾಗಿ, ಲಿಂಗನಿಷ್ಠೆಯನ್ನು ಮೈಗೂಡಿಸಿಕೊಂಡಿದ್ದರೂ ಅದರ ಫಲ ಸಮಾಜದ ಸರ್ವ ಜನಾಂಗದವರಿಗೂ ದೊರೆಯಬೇಕು ಎನ್ನುವ ಕಳಕಳಿ ಹೊಂದಿದ್ದರು. ಅದಕ್ಕೆ ಅನುಗುಣವಾಗಿ ನಡೆದುಕೊಂಡರು. ಚೆನ್ನಬಸವಣ್ಣನವರು ತಮ್ಮೊಂದು ವಚನದಲ್ಲಿ `ಬಸವಣ್ಣ ಜಂಗಮ ಸಾಧಕನಾಗಿ ಸ್ವಯಲಿಂಗವಾದ’ ಎನ್ನುವರು. ಜಂಗಮ ಎಂದರೆ ಜಗತ್ತು, ಜಂಗಮ ಎಂದರೆ ಜನತೆ, ಜಂಗಮ ಎಂದರೆ ಜೀವಜಾಲ. ಬಸವಣ್ಣನವರು ಜಗದ ಕಲ್ಯಾಣ, ಜನರ ಕಲ್ಯಾಣ, ಸಕಲ ಜೀವಾತ್ಮರ ಕಲ್ಯಾಣಕ್ಕಾಗಿ ತಮ್ಮೆಲ್ಲ ಶಕ್ತಿ-ಸಾಮರ್ಥ್ಯವನ್ನು ಸದ್ಬಳಕೆ ಮಾಡಿದ ಕಾರಣ ಅವರು ಸ್ವಯಲಿಂಗವಾದರು ಎನ್ನುವ ಮಾತಿನಲ್ಲಿ ಅತಿಶಯೋಕ್ತಿ ಏನಿಲ್ಲ. ನಿಜಕ್ಕೂ ಕವಿಗಳು, ವಿದ್ಯಾವಂತರು, ತತ್ವ ಬಲ್ಲವರು, ವಿವಿಧ ಸಾಧಕರು ಬಸವಣ್ಣನವರ ಬದುಕಿನಿಂದ ಕಲಿಯಬೇಕಾದ್ದು ಅಪಾರವಾಗಿದೆ. ಬಸವಣ್ಣನವರಂತೆ ಸರ್ವರ ಏಳಿಗೆಗಾಗಿ, ಸಮಾನತೆಗಾಗಿ, ಕಲ್ಯಾಣಕ್ಕಾಗಿ ತಮ್ಮ ಸ್ಥಾನದ ಹಮ್ಮು ಬಿಮ್ಮು ಬಿಟ್ಟು `ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ತತ್ವದಡಿ ಬದುಕನ್ನು ಕಟ್ಟಿಕೊಳ್ಳಬೇಕು. ಆಗಲೇ ಆತ್ಮಕಲ್ಯಾಣ, ಲೋಕಕಲ್ಯಾಣ ಸಾಧಿತವಾಗುವುದು. ಬಸವಣ್ಣ ಅವೆರಡನ್ನೂ ಸಾಧಿಸಿದವರು ಎನ್ನುವ ಕಾರಣಕ್ಕಾಗಿಯೇ ಅವರನ್ನು ಇಂದಿಗೂ ಲೋಕಪೂಜ್ಯರು, ಮಾರ್ಗದರ್ಶಕರು, ಜಗದಣ್ಣ, ಜಗದ್ಗುರು ಎನ್ನುವುದು. ಅಂಥ ಬಸವಣ್ಣನವರು ಈ ಲೋಕಕ್ಕೆ ಬಂದಾಗ ಏನಾಯಿತು, ಅವರು ಹೋದಮೇಲೆ ಹೇಗಾಯಿತು ಎನ್ನುವ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ನಾಗಲಾಂಬಿಕೆಯವರು.
ಬಸವಣ್ಣ ನೀವು ಮತ್ರ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗೆಲ್ಲಾ ಪಸರಿಸಿತ್ತಲ್ಲಾ!
ಅಯ್ಯಾ, ಸ್ವರ್ಗ ಮತ್ರ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು?
ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ.
ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ.
ಮತ್ರ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ.
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ
ಪ್ರಾಣಲಿಂಗವಾಗಿ ಹೋದೆಯಲ್ಲಾ ಸಂಗನಬಸವಣ್ಣಾ!
ಮೊದಲು ಉದಾಹರಿಸಿದ ಪ್ರಭುದೇವರ ವಚನಕ್ಕೂ ಮತ್ತು ಈಗ ಹೇಳಿದ ನಾಗಲಾಂಬಿಕೆಯವರ ಈ ವಚನಕ್ಕೂ ಎಷ್ಟೊಂದು ಹೋಲಿಕೆ ಇದೆ ಎನ್ನುವುದನ್ನು ಗಮನಿಸಬೇಕು. ಬಸವಣ್ಣ ಇದ್ದಾಗ ಇಲ್ಲಿ ಭಕ್ತಿ ಎಲ್ಲೆಡೆ ಪಸರಿಸಿತ್ತು, ಅವರು ಶಿವಸಾನಿಧ್ಯ ಸೇರಿದ ನಂತರ `ಮತ್ರ್ಯಲೋಕದ ಮಹಾಮನೆ ಶೂನ್ಯವಾಯಿತ್ತು’ ಎನ್ನುವರು. ಹಾಗಂತ ಬಸವಣ್ಣ ದೈಹಿಕವಾಗಿ ನಮ್ಮ ಕಣ್ಮುಂದೆ ಇಲ್ಲ ಎಂದು ನಿರಾಶರಾಗುವ ಅಗತ್ಯವಿಲ್ಲ. ಅವರ ಜೀವನಾನುಭವದ ನುಡಿಮುತ್ತುಗಳು ವಚನಗಳ ರೂಪದಲ್ಲಿ ನಮ್ಮ ಕಣ್ಮುಂದೆ ಇವೆ. ಅವುಗಳ ಬೆಳಕಿನಲ್ಲಿ ಮತ್ತೆ ಆತ್ಮಕಲ್ಯಾಣ, ಲೋಕಕಲ್ಯಾಣಕ್ಕೆ ಮುಂದಾಗುವ ಸಂಕಲ್ಪ ಮಾಡೋಣ. ಆಗಲೇ ಬಸವಜಯಂತಿಯ ಆಚರಣೆ ಸಾರ್ಥಕ ಮತ್ತು ಅರ್ಥಪೂರ್ಣ.
Comments 10
ರಾಜೀವ ನಾಯಕ
May 7, 2021ಬಸವ ಜಯಂತಿಯ ಪ್ರಯುಕ್ತ ವಿಶೇಷ ಲೇಖನ ಚೆನ್ನಾಗಿ ಮೂಡಿಬಂದಿದೆ.
ರಾಜೀವ ನಾಯಕ
May 7, 2021Fantastic article sir
Lakshman Kollur
May 12, 2021ಪ್ರತಿಯೊಂದು ವಚನ `ಜ್ಯೋತಿ’ ಇದ್ದಂತೆ. ಆ ಜ್ಯೋತಿ ಪುಂಜದ ಬೆಳಕಿನಲ್ಲಿ ವ್ಯಕ್ತಿಗತ ಬದುಕಿನ ಕತ್ತಲೆಯನ್ನು ಸುಲಭವಾಗಿ ಕಳೆದುಕೊಳ್ಳಬಹುದು… ಸತ್ಯವಾದ ಮಾತು. ಆದರೆ ವಚನಗಳು ತೋರಿಸುವ ಬೆಳಕಲ್ಲಿ ನಡೆಯುವುದು ಸುಲಭದ ಮಾತಲ್ಲ. ಅವು ಪ್ರಾಮಾಣಿಕತೆಯನ್ನು ಬೇಡುತ್ತವೆ. ನ್ಯಾಯನಿಷ್ಠುರತೆಯನ್ನು ಬಯಸುತ್ತವೆ. ಅಂತಹ ಕೆಚ್ಚು ಯಾರಲ್ಲಿದೆ?
Revanasiddhaiah
May 12, 2021`ಲಿಂಗವ್ಯಸನ ಮತ್ತು ಜಂಗಮಪ್ರೇಮ’ – ಬಸವಾದಿ ಪ್ರಮಥರು ಅನುಸರಿಸಿದ ತತ್ವಗಳು. ಇವುಗಳ ಮರ್ಮವನ್ನು ತಿಳಿಸಕೊಡಿ ಗುರುಗಳೇ. ಲಿಂಗ ವ್ಯಸನ ಎಂದರೇನು? ಜಂಗಮಪ್ರೇಮವೆಂಬುದು ಯಾವುದು?
Sunanda Kr
May 15, 2021ಪ್ರಸ್ತುತತೆಗೆ ಸೂಕ್ತ ಲೇಖನ
ಹಾಲಪ್ಪ ಗರವಿ
May 16, 2021ಚಾಡಿ ಮಾತು, ಸೇಡು, ಸಿಟ್ಟು… ಇವುಗಳನ್ನೆಲ್ಲಾ ಬಿಟ್ಟು ಬದುಕುವ ಕಲೆ ತೋರಿಸಿದ ಬಸವಣ್ಣನವರ ವಚನಗಳನ್ನು ಸೊಗಸಾಗಿ ಚಿತ್ರಿಸಿದ ಲೇಖನ.
ಕಮಲಕ್ಕ ಜಯನಗರ
May 16, 2021ನಿಮ್ಮಂಥ ಕೆಲವರಾದರೂ ಸ್ವಾಮಿಗಳು ಬಸವಣ್ಣನವರನ್ನು ಮುಂದಿನ ಜನಾಂಗಕ್ಕೆ ನೇರವಾಗಿ, ಸ್ಪಷ್ಟವಾಗಿ ಬೋಧಿಸುತ್ತಿರುವುದು ನಮ್ಮ ಸಮಾಜದ ಪುಣ್ಯ. ಕಲೆ, ನಾಟಕ, ಸಂಗೀತಗಳ ಮೂಲಕ ಶರಣರ ಸಂದೇಶಗಳನ್ನು ಸಾರುವ ತಮ್ಮ ಶ್ರಮ ನಿಜಕ್ಕೂ ಅಭಿನಂದನೀಯವಾಗಿದೆ.
ಕಮಲಕ್ಕ
ಬಸವರಾಜು ಉಪ್ಪಿನ್
May 16, 2021ನಿನ್ನೆಯ ಬಸವ ಜಯಂತಿ ಕಾರ್ಯಕ್ರಮದಲ್ಲಿ ತಮ್ಮ ಮಾತುಗಳನ್ನು ಕೇಳಿದೆ. ನಿಮ್ಮ ಮಾತು- ಬರವಣಿಗೆಗಳಲ್ಲಿ ಬಹಳ ಸಾಮ್ಯತೆ ಇದೆ. ಮನೆಮಂದಿಯೆಲ್ಲಾ ತುಂಬಾ ಇಷ್ಟಪಟ್ಟೆವು ಗುರುಗಳೇ. ಈ ಲೇಖನವನ್ನೂ ಎಲ್ಲರೂ ಓದಿದೆವು. ಚೆನ್ನಾಗಿದೆ. ಶರಣು.
ಶೋಭಾ ಅಮರಶೆಟ್ಟಿ, ಭಾಲ್ಕಿ
May 17, 2021ಬಸವಣ್ಣನವರ ಕುರಿತಾದ ಪಂಡಿತಾರಾಧ್ಯ ಗುರುಗಳ ಲೇಖನ ಚೆನ್ನಾಗಿದೆ.
ಹಾಲಪ್ಪ ಗುಡಗಿ
May 24, 2021ನಿಮ್ಮ ಲೇಖನವನ್ನು ತಪ್ಪದೇ ಓದುತ್ತೇನೆ. ಗುರುಗಳಿಗೆ ಪ್ರಣಾಮಗಳು.