ಶಿವಯೋಗ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ.
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ.
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ.
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
ದೇವರನ್ನು ನಂಬದಿರುವವರು ವಿರಳ. ಆದರೆ ಆ ದೇವರ ಗುಣ, ಲಕ್ಷಣಗಳನ್ನು ತಿಳಿದು ನಿಜದೇವರು ಎಂದರೆ ಯಾವುದು? ಹೇಗಿದೆ ಎಂದು ಅರಿತವರು ಅಷ್ಟಕ್ಕಷ್ಟೆ. ಪರಂಪರೆಯಿಂದ ಹಿರಿಯರು ಯಾವ ನಂಬಿಕೆ ಇಟ್ಟುಕೊಂಡು ಬಂದಿರುವರೋ ಅದೇ ನಂಬಿಕೆಯನ್ನು ಇಂದಿನವರು ಸಹ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಅವರು ಕಲ್ಲು, ಮಣ್ಣು, ಕಟ್ಟಿಗೆ, ವಿವಿಧ ಲೋಹಗಳಿಂದ ಮಾಡಿದ ವಿಗ್ರಹಗಳನ್ನೇ ದೇವರೆಂದು ಪೂಜಿಸುವರು. ತಮಗೆ ಮನೆ ಕಟ್ಟಿಕೊಳ್ಳುವಂತೆ ದೇವರಿಗೂ ಮನೆ ಕಟ್ಟಿ ಅದಕ್ಕೆ `ದೇವಾಲಯ’ ಎಂದು ಕರೆದರು. ದೇವಾಲಯದಲ್ಲೂ ಜಾತಿ, ಧರ್ಮ, ಬಡತನ, ಶ್ರೀಮಂತಿಕೆ ಇತ್ಯಾದಿ ಹುಡುಕುವ ಅವಿವೇಕತನ ಬೆಳೆಯಿತು. ಹಿಂದುಳಿದವರು, ಬಡವರು, ಶ್ರೀಮಂತರು ತಮಗೆ ಬೇರೆ ಬೇರೆ ದೇವಾಲಯ ಕಟ್ಟಿಕೊಳ್ಳುವರು. ಕೆಲವು ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶವೇ ಇಲ್ಲ. ದೇವಾಲಯಗಳಲ್ಲೂ ತಾರತಮ್ಯ. ಒಬ್ಬರ ದೇವಾಲಯಕ್ಕೆ ಇನ್ನೊಬ್ಬರು ಹೋಗುವಂತಿಲ್ಲ. ಇಂಥವರು ನೈಜ ದೇವರನ್ನು ಅರ್ಥ ಮಾಡಿಕೊಳ್ಳಲು ಎಂದಿಗೂ ಸಾಧ್ಯವಾಗದು. ದೇವಾಲಯಗಳಲ್ಲಿ ಪೂಜಾರಿ ಪುರೋಹಿತರಿಂದ ಮುಗ್ಧ ಭಕ್ತರ ಸುಲಿಗೆ ಬೇರೆ. ಇಂಥ ಪರಿಸ್ಥಿತಿಯನ್ನು ಕಂಡ ಶರಣರ ಚಿಂತನೆ ಬೇರೆ ಆಯಿತು. ಸಾಮಾನ್ಯವಾಗಿ ಎಲ್ಲ ಅನುಭಾವಿಗಳು ದೇವರು ಸರ್ವಜ್ಞ, ಸರ್ವಶಕ್ತ, ಸರ್ವಾಂತರ್ಯಾಮಿ ಎನ್ನುವರು. ಆದರೆ ನಮ್ಮ ದೇವಾಲಯಗಳಲ್ಲಿ ಇರುವ ಯಾವ ದೇವರೂ ಸರ್ವಜ್ಞ, ಸರ್ವಶಕ್ತ, ಸರ್ವಾಂತರ್ಯಾಮಿ ಅಲ್ಲ. ಇದು ತೆರೆದಿಟ್ಟ ಸತ್ಯ.
ಬಸವಣ್ಣನವರ ಮೇಲಿನ ವಚನದಲ್ಲಿ ದೇವರು ಸರ್ವಾಂತರ್ಯಾಮಿ ಎನ್ನುವ ಸತ್ಯವನ್ನೇ ಹೇಳಿದ್ದಾರೆ. ಅದನ್ನು ಸಾಮಾನ್ಯರಿಗೂ ತಿಳಿಯುವ ಹಾಗೆ ವಿವರಿಸಿದ್ದಾರೆ. ದೇವರು ಈ ಜಗತ್ತಿನ ತುಂಬೆಲ್ಲ ಇದ್ದಾನೆ. ಅಷ್ಟೇ ಅಲ್ಲ ಮುಗಿಲಗಲ ಇದ್ದಾನೆ. ಅದಕ್ಕಿಂತಲ್ಲೂ ಹೆಚ್ಚಾಗಿಯೇ ಇದ್ದಾನೆ. ಅಷ್ಟೇ ಅಲ್ಲ; ಆತ ನಿಮ್ಮಗಲ ಎಂದರೆ ಮಾನವನ ಮಿತಿಗೆ ಸಿಲುಕುವಂತಹವನೂ ಆಗಿದ್ದಾನೆ ಎನ್ನುವುದು ವಿಶೇಷ. ಆ ಚೇತನದ ತಲೆ ಬ್ರಹ್ಮಾಂಡವನ್ನೂ ಮೀರಿದ್ದು. ಆತನ ಪಾದಗಳು ಪಾತಾಳದಿಂದಲೂ ಕೆಳಗೆ ಇವೆ. ಇಷ್ಟೊಂದು ಬೃಹತ್ತಾಗಿರುವ ದೇವರು ಅಳತೆಗೆ ಸಿಲುಕುವಂತಹುದಲ್ಲ. ಕಣ್ಣಿಗೆ ಕಾಣುವಂತಹುದಲ್ಲ. ಅದನ್ನು ಯಾವುದಕ್ಕೂ ಹೋಲಿಸಲು ಆಗುವುದಿಲ್ಲ. ಇಂಥ ದೇವರು ಭಕ್ತನ ಕರಸ್ಥಳಕ್ಕೆ ಇಷ್ಟಲಿಂಗದ ರೂಪದಲ್ಲಿ ಬಂದಿದೆ ಎನ್ನುವ ಮಾತು ಬಸವಣ್ಣನವರ ಅನುಭವವೇದ್ಯ ಸಂಗತಿ. ಅಂದರೆ ಸರ್ವಶಕ್ತ, ಸರ್ವಜ್ಞ, ಸರ್ವಾಂತಯಾಮಿ ದೇವರ ಅನುಭವ ಮಾಡಿಕೊಳ್ಳಬಹುದು. ಇಂಥ ದೇವರ ಅನುಭವ ಪಡೆಯುವುದೇ `ಶಿವಯೋಗ’. ಅದನ್ನು `ಲಿಂಗಾಂಗ ಸಾಮರಸ್ಯ’ ಎಂದು ಸಹ ಶರಣರು ಕರೆದಿದ್ದಾರೆ. ಲಿಂಗ ಎಂದರೆ ಬ್ರಹ್ಮಾಂಡವನ್ನು ಸಂಕೇತಿಸುವ ದೇವರ ಕುರುಹು. ಅಂಗ ಎಂದರೆ ಪಿಂಡಾಡದ ಪ್ರತೀಕ. ಅಂಗ ಮೂಲಸ್ವರೂಪದಲ್ಲಿ ಶುದ್ಧವಾಗಿಯೇ ಇತ್ತು. ಅಂದರೆ ಅದು ಪಂಚೇಂದ್ರಿಯಗಳ ಉರುಳಿಗೆ ಸಿಲುಕಿರಲಿಲ್ಲ. ಕಾಮನೆಗಳ ವಾಸನೆಗೆ ತುತ್ತಾಗಿರಲಿಲ್ಲ. ಒಂದರ್ಥದಲ್ಲಿ ಅದೂ ಸಹ ಬ್ರಹ್ಮಾಂಡದ ಕುರುಹಾದ ಲಿಂಗವೇ ಆಗಿತ್ತು. ವಿಷಯವಾಸನೆಗಳ ದಾಸನಾಗಿ, ಇಂದ್ರಿಯಗಳ ಗುಲಾಮನಾಗಿ ಅಂಗ ತಾನೇ ಬೇರೆ, ದೇವರೇ ಬೇರೆ ಎನ್ನುವ ಭ್ರಮೆಗೆ ಒಳಗಾಗಿದ್ದರಿಂದ ಮಾನವ ಸುಖ-ದುಃಖಗಳಿಗೆ, ಹುಟ್ಟು-ಸಾವುಗಳಿಗೆ ಸಿಲುಕಿ ಒದ್ದಾಡುವಂತಾಗಿದೆ.
ಮಾನವನ ನಿಜಸ್ವರೂಪವನ್ನು ಮನದಟ್ಟು ಮಾಡುವ ಸದುದ್ದೇಶದಿಂದಲೇ ಬಸವಣ್ಣನವರು ಇಷ್ಟಲಿಂಗ ಪೂಜೆಯನ್ನು ಜಾರಿಯಲ್ಲಿ ತಂದರು. ಶ್ರೀಗುರು ಶಿಷ್ಯನಿಗೆ ಅಂಗ, ಲಿಂಗಗಳ ಸಂಬಂಧವನ್ನು ತಿಳಿಸಿ ಅಂಗತ್ವದಿಂದ ಬಿಡುಗಡೆ ಹೊಂದಿ ಲಿಂಗವೇ ತಾನಾಗಬೇಕು ಎನ್ನುವ ಅರಿವನ್ನು ಮೂಡಿಸುವರು. ಅದಕ್ಕಾಗಿಯೇ ಆತನಿಗೆ ಮೂರು ರೀತಿಯ ದೀಕ್ಷೆಯನ್ನು ಗುರು ಕರುಣಿಸುವನು. ವೇದಾದೀಕ್ಷೆ, ಮಂತ್ರ ದೀಕ್ಷೆ, ಕ್ರಿಯಾದೀಕ್ಷೆ. ದೇವರ ಬಗೆಗಿನ ಅಜ್ಞಾನವನ್ನು ನಿವಾರಿಸಿ ಸರಿಯಾದ ಅರಿವನ್ನು ಮೂಡಿಸುವುದೇ ವೇದಾದೀಕ್ಷೆ. ಶಿಷ್ಯನ ಮಸ್ತಕದ ಮೇಲೆ ಗುರು ತನ್ನ ಹಸ್ತವನ್ನಿರಿಸಿ ಕಿವಿಯಲ್ಲಿ ಮಂತ್ರೋಪದೇಶ ಮಾಡುವುದೇ ಮಂತ್ರ ದೀಕ್ಷೆ. ಶಿಷ್ಯನ ಅಂತರಂಗದ ಬೆಳಕನ್ನೇ ಇಷ್ಟಲಿಂಗ ರೂಪದಲ್ಲಿ ಆತನ ಕರಸ್ಥಲಕ್ಕೆ ಕರುಣಿಸುವುದೇ ಕ್ರಿಯಾದೀಕ್ಷೆ. ದೀಕ್ಷೆ ಎಂದರೆ ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಕರುಣಿಸುವುದು. ಹೀಗೆ ತ್ರಿವಿಧ ದೀಕ್ಷೆಯನ್ನು ಪಡೆದ ಶಿಷ್ಯ ಮುಂದೆ ಬಾಹ್ಯ ದೇವಾಲಯಗಳಿಗೆ ಹೋಗಬೇಕಾಗಿಲ್ಲ. ಮೂಢನಂಬಿಕೆಗೆ ಬಲಿಯಾಗಬೇಕಿಲ್ಲ. ಅರಿವು, ಆಚಾರವುಳ್ಳವನಾಗಿ ಬದುಕನ್ನು ಕಟ್ಟಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಪರಿಚಯವನ್ನೂ ಗುರು ಮಾಡಿಕೊಡುವನು. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ ಇವೇ ಅಷ್ಟಾವರಣಗಳು. ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರ ಇವು ಪಂಚಾಚಾರಗಳು. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಇವು ಷಟ್ಸ್ಥಲಗಳು. ಅಷ್ಟಾವರಣವೇ ಅಂಗವಾಗಿ, ಪಂಚಾಚಾರವೇ ಪ್ರಾಣವಾಗಿ, ಷಟ್ಸ್ಥಲ ಮಾರ್ಗದಲ್ಲಿ ಸಾಗಿ ಲಿಂಗಾಂಗ ಸಮರಸ ಸುಖವನ್ನು ಪಡೆಯಬೇಕು ಎನ್ನುವುದು ಶರಣ ಸಿದ್ಧಾಂತ. ಅದೇ ಶಿವಯೋಗ. ಲಿಂಗ ಪೂಜಕನ ನಡಾವಳಿಕೆ ಹೇಗಿರಬೇಕು ಎಂದು ಬಸವಣ್ಣನವರು ತಮ್ಮ ವಚನದಲ್ಲಿ ತುಂಬಾ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ.
ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ,
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?
ಲಿಂಗಾಂಗ ಸಾಮರಸ್ಯದ ನೆಲೆಯಲ್ಲೇ `ಶರಣಸತಿ ಲಿಂಗಪತಿ’ ಎನ್ನುವ ತತ್ವ ಜಾರಿಯಲ್ಲಿದೆ. ಲಿಂಗಯ್ಯ ಪತಿ. ಅದನ್ನು ಪೂಜಿಸುವವರು ಹೆಣ್ಣೇ ಇರಲಿ, ಗಂಡೇ ಇರಲಿ ಅವರು ಸತಿಯರು. ಸತಿಪತಿಯರಲ್ಲಿ ಸಮಾನ ಪ್ರೀತಿ ಇದ್ದಾಗಲೇ ಸುಖ ಸಂಸಾರ. ಅದೇ ರೀತಿ ಲಿಂಗಯ್ಯ ತನ್ನ ಪತಿ ಎಂದು ಅಂಗವುಳ್ಳ ಮಾನವ ಸಮಾನ ಪ್ರೀತಿಯಿಂದ ಲಿಂಗಪತಿಯನ್ನು ಸಂತೃಪ್ತಿಪಡಿಸಬೇಕು. ಪೂಜಕ ಮತ್ತು ಪೂಜ್ಯ ವಸ್ತುವಿನ ನಡುವೆ ಸಮಾನವಾದ ಕಾಂತಿ ಇರಬೇಕು. ಅದಕ್ಕಿಂತ ಮುಖ್ಯವಾದುದು ಸಮಸುಖವನ್ನು ಅನುಭವಿಸಬೇಕು. ಕೊನೆಗೆ ಬಸವಣ್ಣನವರು ಹೇಳುವ ಮಾತು `ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?’ ಎನ್ನುವುದು. ಅಂದರೆ ಲಿಂಗಪೂಜಕ ಲಿಂಗವನ್ನು ಪೂಜಿಸುತ್ತ ಪೂಜಿಸುತ್ತ ಅಂಗ ಭಾವನೆ ಕಳೆದುಕೊಂಡು ಲಿಂಗವೇ ತಾನಾಗಬೇಕು. ಅದನ್ನು ನದಿ ನದಿಯೊಳಗೆ ಬೆರಸಿದಂತೆ ಎನ್ನುವ ಲೌಕಿಕ ನಿದರ್ಶನದ ಮೂಲಕ ವಿವರಿಸಿದ್ದಾರೆ. ಒಂದು ನದಿ ಮತ್ತೊಂದು ನದಿಯಲ್ಲಿ ಸೇರಿದಾಗ ಅದು ತನ್ನ ಅಸ್ತಿತ್ವ ಕಳೆದುಕೊಂಡು ಒಂದರೊಳಗೊಂದು ಸಮರಸವಾಗುವುದು. ಈ ನೆಲೆಯಲ್ಲಿ ಲಿಂಗವ ಪೂಜಿಸಿ ಲಿಂಗವೇ ತಾನಾಗಬೇಕು. ಅದು ನಿಜವಾದ ತನ್ಮಯತೆ. ಮೂಲ ಸ್ವರೂಪದ ಅರಿವು, ಆನಂದ ಅನುಭವಿಸುವುದು. ಅದಕ್ಕಾಗಿಯೇ ಶಿವಯೋಗಿ ಸಿದ್ಧರಾಮೇಶ್ವರರು ಹೇಳುತ್ತಾರೆ:
ಶಿವ ಶಿವಾ, ಶಿವ ಶಿವಾ, ಶಿವ ಶಿವಾ ಎಂದೊಮ್ಮೆ
ಶಿವನಾಗಿ ಶಿವನ ಪೂಜಿಸು ಮನವೆ.
ಹರ ಹರಾ, ಹರ ಹರಾ, ಹರ ಹರಾ ಎಂದೊಮ್ಮೆ
ಹರನಾಗಿ ಪುರಹರನ ಪೂಜಿಸು ಮನವೆ.
ಲಿಂಗವೇ, ಲಿಂಗವೇ ಲಿಂಗವೇ ಎಂದೊಮ್ಮೆ
ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ ಪೂಜಿಸಿ ಲಿಂಗವಾಗು ಮನವೆ.
ಈ ವಚನಕ್ಕೆ ವಿವರಣೆ ಬೇಕಿಲ್ಲವೆನಿಸುತ್ತದೆ. ಶಿವನಾಗಿ ಶಿವನ ಪೂಜಿಸಬೇಕು. ಹರನಾಗಿ ಹರನ ಪೂಜಿಸಬೇಕು. ಲಿಂಗವಾಗಿ ಲಿಂಗವ ಪೂಜಿಸಿ ಕೊನೆಗೆ ಲಿಂಗವೇ ಆಗಬೇಕು. ಆ ರೀತಿಯ ತನ್ಮಯತೆ ಇದ್ದರೆ ಅದೇ ಸಹಜ ಶಿವಯೋಗ. ಈ ನೆಲೆಯಲ್ಲಿ ಬಸವಣ್ಣನವರ ಮತ್ತೊಂದು ವಚನವನ್ನು ನೋಡಬಹುದು.
ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು,
ಆಚಾರವೆಂಬ ಕಾಯಾಯಿತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.
ಭಕ್ತಿಯನ್ನು ಭೂಮಿಗೆ, ಬೀಜವನ್ನು ಗುರುವಿಗೆ ಹೋಲಿಸಿರುವುದು ತುಂಬಾ ಅರ್ಥವತ್ತಾಗಿದೆ. ಬೀಜ ಮೊಳೆಯಬೇಕಾದರೆ ಅದಕ್ಕೆ ಭೂಮಿ ಬೇಕೇ ಬೇಕು. ಬೀಜ ಮೊಳಕೆಯೊಡೆದು ಎಲೆಗಳನ್ನು ಬಿಡುವುದೇ ಲಿಂಗ ಎಂದಿದ್ದಾರೆ. ನೋಡಿ ಲೌಕಿಕದಿಂದ ಅಲೌಕಿಕ ಪ್ರಜ್ಞೆಯನ್ನು ಹೇಗೆ ಮೂಡಿಸುತ್ತಿದ್ದಾರೆ! ಇದು ಮೌಢ್ಯದ ನೆಲೆಯಲ್ಲಿ ಅಲ್ಲ. ಅಲ್ಲಿ ವಿಚಾರವೆಂಬ ಹೂವು ಬಿಡಬೇಕು. ಆಚಾರವೆಂಬ ಕಾಯಿ ಆಗಬೇಕು. ಅಂದರೆ ವಿಚಾರ ಅಥವಾ ಆಚಾರ ಒಂದೇ ಮುಖ್ಯವಾಗುವುದಿಲ್ಲ. ವಿಚಾರವೂ ಬೇಕು; ಆ ವಿಚಾರಕ್ಕನುಗುಣವಾಗಿ ಆಚಾರ ಸಹ ಇರಬೇಕು. ಶರಣರು ಹೇಳುವುದೇ ನಡೆ-ನುಡಿ ಸಿದ್ಧಾಂತವನ್ನು. ಅರಿವು-ಆಚಾರ ಒಂದಾಗುವ ಪ್ರಕ್ರಿಯೆಯನ್ನು. ವಿಚಾರ ಎನ್ನುವ ಹೂವು ಕಳಚಿ ಬಿದ್ದರೆ ಕಾಯಾಗಲು ಸಾಧ್ಯವಿಲ್ಲ. ಕಾಯೇ ಇಲ್ಲವೆಂದರೆ ಹಣ್ಣಾಗಲು ಹೇಗೆ ಸಾಧ್ಯ? ಹಾಗಾಗಿ ವಿಚಾರ, ಆಚಾರ ಎರಡೂ ಮುಖ್ಯವಾಗಬೇಕು. ಆಗಲೇ ಅದು ಕಾಯಾಗಿ ಹಣ್ಣಾಗುವುದು. ಕೊನೆಗೆ ಅದು ನಿಷ್ಪತ್ತಿ ಎನ್ನುವ ಹಣ್ಣಾಗಬೇಕು ಎನ್ನುವರು. ಅದು ಮಾಗಿ ಪರಿಪಾಕವಾಗಬೇಕು. ಮನುಷ್ಯ ಅಂತಹ ನಿಷ್ಟತ್ತಿ ಎನ್ನುವ ಹಣ್ಣಾದಾಗ ಅಂದರೆ ಆಚಾರ, ವಿಚಾರ ಶುದ್ಧನಾಗಿ ಸರಳ, ಆದರ್ಶ ಬದುಕನ್ನು ನಡೆಸಿದಾಗ ದೇವರು ತನಗೆ ಬೇಕೆಂದು ಎತ್ತಿಕೊಳ್ಳುವನು ಎನ್ನುವ ಮಾತು ವಿವರಣೆಗೆ ಮೀರಿದ್ದು. ಆಗ ಆತ ಲಿಂಗವೇ ತಾನಾಗುವನು. ಅದೇ ಲಿಂಗಾಂಗ ಸಾಮರಸ್ಯ. ಶಿವಯೋಗದ ಅಂತಿಮ ಗುರಿ. ಮಾನವ ಸಾಧನೆ ಮಾಡುತ್ತ ಮಾಡುತ್ತ ಯಾವ ಮಟ್ಟ ತಲುಪಬೇಕು ಎನ್ನುವ ಪರಿಯನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ಹೇಳುವುದು ಕಷ್ಟಸಾಧ್ಯ.
ಶರಣರಲ್ಲಿ ಲಿಂಗಾಂಗ ಸಾಮರಸ್ಯ ಎನ್ನುವುದಕ್ಕೆ `ಶೂನ್ಯ ಸಂಪಾದನೆ’ ಇಲ್ಲವೇ `ಬಯಲು’ ಎಂದು ಸಹ ಕರೆಯುವರು. ಶೂನ್ಯ ಅಥವಾ ಬಯಲು ಎಂದರೆ ಏನೂ ಇಲ್ಲದ್ದಲ್ಲ; ಎಲ್ಲವನ್ನೂ ಒಳಗೊಂಡಿದ್ದರೂ ಒಳಗೊಳ್ಳದಂತೆ ಇರುವುದು. ಶೂನ್ಯಪೀಠ, ಶೂನ್ಯಸ್ಥಲ, ಶೂನ್ಯಸಂಪಾದನೆ ಪದಗಳು ಹೇಳುವುದು ಸಹ ಶಿವಯೋಗವನ್ನೇ. ಅಲ್ಲಮಪ್ರಭುದೇವರು ಶೂನ್ಯದ ಬಗ್ಗೆ ತಮ್ಮ ವಚನದಲ್ಲಿ ಹೇಳುವುದನ್ನು ನೋಡಿ:
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ಪೂಜಿಸಿ ಬಯಲಾದೆ ಗುಹೇಶ್ವರಾ.
ಅಂತರಂಗದ ಅನುಭಾವವೇ ಬಯಲು. ಬಯಲು ವಿವರಣೆಗೆ ಮೀರಿದ್ದು. ಬಾಹ್ಯವಾಗಿ ಭೂಮಿ, ಆಕಾಶ ಒಂದಾಗಿರುವುದೆಲ್ಲ ಬಯಲೇ ಎಂದು ಸುಲಭವಾಗಿ ಹೇಳಬಹುದು. ಆದರೆ ಅದನ್ನೂ ಮೀರಿದುದು ಬಯಲು. ಶರಣರ ದೃಷ್ಟಿಯಲ್ಲಿ ಬಯಲು ಎಂದರೆ ಶಿವ ಚೇತನ. ಅದನ್ನು ಗುರು ಬಿತ್ತಬೇಕಾದ್ದು ಶಿಷ್ಯನ ಅಂತರಂಗ ಎನ್ನುವ ಭೂಮಿಯಲ್ಲಿ. ಎಂಥ ಬೀಜ ಬಿತ್ತುತ್ತೇವೆಯೋ ಅಂಥದೇ ಬೆಳೆಯನ್ನು ಪಡೆಯುತ್ತೇವೆ. ಅದರಿಂದ ಅಂಗವೂ ಬಯಲು, ಲಿಂಗವೂ ಬಯಲು. ಅಂಥ ಬಯಲಿನೊಂದಿಗೆ ಅಂದರೆ ಶಿವಚೇತನದೊಂದಿಗೆ ಬೆರೆತು ಸಾಮರಸ್ಯ ಸುಖವನ್ನು ಅನುಭವಿಸುವುದೇ ಬಯಲ ಜೀವನ, ಬಯಲ ಭಾವನೆ. ಶರಣರು ಅಂಥ ಬಯಲಿನೊಳಗೆ ಬಯಲಾದವರು. ಅಂದರೆ ಶಿವಯೋಗದ ಮೂಲಕ ಲಿಂಗಾಂಗ ಸಮರಸ ಸುಖವನ್ನು ಸವಿದವರು. ನಾನು ಸಹ ಆ ಶರಣರ ದಾರಿಯಲ್ಲಿ ನಡೆದು ಲಿಂಗಪೂಜೆಯ ಮೂಲಕ ಲಿಂಗಾಂಗ ಸಮರಸ ಸುಖವನ್ನು ಅನುಭವಿಸಿದೆ ಎನ್ನುವ ಪ್ರಭುದೇವರ ನುಡಿಗಳು ವಿವರಣೆಗಿಂತ ಅನುಭವವೇದ್ಯವಾದವು. ಬಸವಣ್ಣನವರ ಆರಂಭದ ವಚನದಲ್ಲಿ ಹೇಳಿದಂತೆ ಅದು ಜಗದಗಲ, ಮುಗಿಲಗಲ, ಅಗಮ್ಯ, ಅಗೋಚರ, ಅಪ್ರತಿಮ. ಅದನ್ನೇ ಮಹಾಲಿಂಗ ಎಂದು ಕರೆದಿದ್ದಾರೆ. ಅದು ಪರಿಪೂರ್ಣವಾದುದು. ಕಣ್ಣಿಗೆ ಕಾಣುವುದಿಲ್ಲ, ಮಾತಿಗೆ ಸಿಲುಕುವುದಿಲ್ಲ. ಅನುಭವವೇದ್ಯವಾದುದು.
ಮಾನವ ಬಾಹ್ಯ ಅಧಿಕಾರ, ಸಂಪತ್ತು, ವಿಲಾಸಿ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ಸಂಪಾದಿಸುವುದು ಮುಖ್ಯವಲ್ಲ. ಅವನು ನಿಜವಾಗಿಯೂ ಸಂಪಾದನೆ ಮಾಡಬೇಕಾಗಿದ್ದು ಶೂನ್ಯತ್ವ ಅಥವಾ ಬಯಲು. ಆಗಲೇ ಬದುಕಿಗೆ ಒಂದು ದಿವ್ಯತೆ, ಭವ್ಯತೆ ಬರುವುದು. ಈ ನೆಲೆಯಲ್ಲೇ ಪ್ರಭುದೇವರು ಭೂಮಿ, ಹೇಮ, ಕಾಮಿನಿ ನಿನ್ನವಲ್ಲ, ಅವು ಮಾಯೆಯೂ ಅಲ್ಲ. ನಿಜವಾದ ಒಡವೆ ಜ್ಞಾನಸಂಪತ್ತು ಎಂದಿರುವುದು. ಅವರು ಮನದಲ್ಲಿ ಅಡಗಿರುವ ಆಸೆಯೇ ಮಾಯೆ ಎಂದು ಅರಿವಿನ ಕಣ್ಣು ತೆರೆಸಿದ್ದಾರೆ. ಅಕ್ಕ, ಅಲ್ಲಮ, ಬಸವಣ್ಣ ಮುಂತಾದ ಶರಣ-ಶರಣೆಯರು ಹೇಳುವಂತೆ ಆಸೆಯಿಂದ ಮುಕ್ತರಾಗಿ ಸರಳ ಮತ್ತು ಪಂಚಾಚಾರಯುಕ್ತ ಬದುಕನ್ನು ಸಾಗಿಸುವುದೇ ಶೂನ್ಯ ಸಂಪದಾದನೆಗೆ ಸಹಕಾರಿ. ಬಯಲು ಅಥವಾ ಶೂನ್ಯ ಅಂತರಂಗದ ನಿಧಿ. ಈ ನಿಧಿಯನ್ನು ಕಂಡುಕೊಳ್ಳಲು ಸಾಧ್ಯವಾಗುವುದು ಕಾಯಕ, ಶರಣರ ಸಂಪರ್ಕ ಮತ್ತು ಶಿವಯೋಗದಿಂದ. ಶಿವಯೋಗದ ಮೂಲ ಆಶಯವೇ ಪರಮಾನಂದ ಪಡೆಯುವುದು.
ಪರಮಾನಂದ ಭೌತಿಕ ಸಂಪತ್ತಿನಿಂದ ಸಿಗದು. ಸಿಕ್ಕರೂ ಅದು ತಾತ್ಕಾಲಿಕ. ಅದಕ್ಕಾಗಿಯೇ ಪ್ರಭುದೇವರು `ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ’ ಎಂದಿದ್ದಾರೆ. ಸಾಗರದಷ್ಟು ಸುಖ ಪಡೆಯಬೇಕೆಂದರೆ ಶಿವಯೋಗ ಸಾಧಕರಾಗಬೇಕು. ಮನುಷ್ಯ ಲೌಕಿಕವಾಗಿ ವಿದ್ಯೆ, ಅಧಿಕಾರ, ಸಂಪತ್ತು ಹೀಗೆ ಏನೇನನ್ನೋ ಸಂಪಾದಿಸಿದರೂ ಪ್ರಯೋಜನವಿಲ್ಲ. ಬದಲಾಗಿ ಅವನು ಸಂಪಾದನೆ ಮಾಡಬೇಕಾದ್ದು ಶೂನ್ಯತ್ವವನ್ನು. ಇದು ನೀರು ಆವಿಯಾಗಿ, ಮೋಡವಾಗಿ, ಮಳೆ ಸುರಿಸಿ ನದಿ, ಸಮುದ್ರ ತುಂಬಿ ಮತ್ತದೇ ನೀರು ಆವಿಯಾಗುವ ಪರಿ. ಮನುಷ್ಯ ಈ ಲೋಕಕ್ಕೆ ಬಂದಿರುವುದು ಕೇವಲ ಉಂಡುಟ್ಟು ಸುಖಿಸುವುದಕ್ಕಲ್ಲ. ಹುಟ್ಟಿ ಮತ್ತೊಂದು ದಿನ ಸಾಯುವುದಕ್ಕೂ ಅಲ್ಲ. ಆತ ಬಂದಿರುವುದು ಬಯಲಿನಲ್ಲಿ ಬಯಲಾಗುವುದಕ್ಕೆ. ಆದರೆ ಆತ ಅರಿಷಡ್ವರ್ಗಗಳಿಗೆ ಬಲಿಯಾಗಿ ಬಯಲಿನತ್ತ ಸಾಗದಂತಾಗಿದೆ. ಅವನು ಕಣ್ಣಿದ್ದೂ ಕುರುಡನಾಗಿದ್ದಾನೆ. ಕಾಲಿದ್ದೂ ಹೆಳವನಾಗಿದ್ದಾನೆ. ಕಿವಿಗಳಿದ್ದೂ ಕಿವುಡನಾಗಿದ್ದಾನೆ. ಬಾಯಿದ್ದೂ ಮೂಕನಾಗಿದ್ದಾನೆ. ಇದಕ್ಕೆಲ್ಲ ಕಾರಣ ಅವನು ಶಿವಯೋಗ ಸಾಧಕನಾಗಬೇಕು ಎನ್ನುವ ಗುರಿಯನ್ನು ಮರೆತದ್ದು. ಅದಕ್ಕಾಗಿಯೇ ಮಹಾದೇವಿಯಕ್ಕನವರು ಹೇಳುವುದು:
ಲಿಂಗವೆನ್ನೆ ಲಿಂಗೈಕ್ಯವೆನ್ನೆ, ಸಂಗವೆನ್ನೆ ಸಮರಸವೆನ್ನೆ.
ಆಯಿತೆನ್ನೆ ಆಗದೆನ್ನೆ, ನೀನೆನ್ನೆ ನಾನೆನ್ನೆ.
ಚೆನ್ನಮಲ್ಲಿಕಾರ್ಜುನಯ್ಯಾ,
ಲಿಂಗೈಕ್ಯವಾದ ಬಳಿಕ ಏನೂ ಎನ್ನೆ.
`ಲಿಂಗೈಕ್ಯವಾದ ಬಳಿಕ ಏನೂ ಎನ್ನೆ’ ಎನ್ನುವ ಮಾತು ತುಂಬಾ ಪ್ರಮುಖವಾದುದು. ಲಿಂಗೈಕ್ಯ ಎಂದರೆ ದೈಹಿಕವಾಗಿ ಸ್ಥಾವರವಾಗುವುದು, ಸಾಯುವುದು ಎಂದಲ್ಲ. ದೇಹ ಜಂಗಮವಾಗಿರುವಾಗಲೇ ಲಿಂಗೈಕ್ಯ ಸ್ಥಿತಿಯನ್ನು ತಲುಪುವುದು. ಲಿಂಗೈಕ್ಯವಾಗಲು ಪೂರಕ ಅಂಶಗಳು ಕಾಯಕ, ದಾಸೋಹ, ಇಷ್ಟಲಿಂಗ ನಿಷ್ಠೆ. ಇವುಗಳ ಮೂಲಕವೇ ವ್ಯಕ್ತಿ ಶೂನ್ಯ ಸಂಪಾದನೆ ಮಾಡಬೇಕು. ಬಯಲಿನಲ್ಲಿ ಬಯಲಾಗಬೇಕು. ಲಿಂಗಾಂಗ ಸಮರಸ ಸುಖವನ್ನು ಸವಿಯಬೇಕು. ಹೀಗಾಗಿ ಲಿಂಗಾಯತ ಧರ್ಮ ಎಲ್ಲರಿಗೂ ತೆರೆದ ಬಾಗಿಲು ಇದ್ದಂತೆ. ಆದರೆ ಇಲ್ಲಿರುವ ನಿಯಮಗಳು ಅಷ್ಟು ಸರಳವಲ್ಲ. ಅದಕ್ಕಾಗಿಯೇ ಬಸವಣ್ಣನವರು ಲೋಕದ ಜನರ ಬದುಕಿಗೆ ಕನ್ನಡಿ ಹಿಡಿಯುವ ಕಾರ್ಯವನ್ನು ಪರೋಕ್ಷವಾಗಿ ತಮ್ಮ ವಚನಗಳ ಮೂಲಕ ಮಾಡಿದ್ದಾರೆ.
ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆ ಎನ್ನ ಬಾಳುವೆ.
ಸಂಸಾರಸಂಗವ ಬಿಡದು ನೋಡೆನ್ನ ಮನವು.
ಈ ನಾಯಿತನವ ಮಾಣಿಸು-
ಕೂಡಲಸಂಗಮದೇವಯ್ಯಾ, ನಿಮ್ಮ ಧರ್ಮ.
ನಾಯಿಯ ದೃಷ್ಟಾಂತದ ಮೂಲಕ ಮಾನವನ ಬದುಕಿನ ಅವಲೋಕನ ಮಾಡಿದ್ದಾರೆ. ಒಂದು ಕತ್ತಿಯನ್ನು ಹರಿತವಾಗುವಂತೆ ಮಸೆದು ಅದು ಮತ್ತೆ ತುಕ್ಕು ಹಿಡಿಯದಿರಲಿ ಎಂದು ಅದರ ಮೇಲೆ ತುಪ್ಪವನ್ನು ಸವರಿದ್ದಾರೆ ಎಂದು ಭಾವಿಸಿ. ಆ ತುಪ್ಪದ ಆಸೆಯಿಂದ ನಾಯಿ ಕತ್ತಿಯನ್ನು ನೆಕ್ಕಿದಾಗ ಅದರ ನಾಲಗೆ ಕೊಯ್ದು ರಕ್ತ ಒಸರುವುದು. ಆ ರಕ್ತವನ್ನೇ ಸವಿಯುವ ನಾಯಿ ಅದು ಕತ್ತಿಯನ್ನು ನೆಕ್ಕುವುದರಿಂದಲೇ ದೊರೆಯುತ್ತದೆ ಎನ್ನುವ ಭ್ರಮೆಯಿಂದ ಮತ್ತೆ ಮತ್ತೆ ನೆಕ್ಕಲಾರಂಭಿಸಿ ಕೊನೆಗೆ ತಾನೇ ಸಂಕಷ್ಟ ಅನುಭವಿಸುವುದು. ಅದರಂತೆ ಮನುಷ್ಯ ವಿಷಯವಾಸನೆಗಳಿಗೆ ಮರುಳಾಗಿ ಅವುಗಳ ಅನುಭವದಲ್ಲೇ ಪರಮಸುಖ ಇದೆ ಎಂದು ಭ್ರಮಿಸುವನು. ಅದರಿಂದ ತಾನು ಸಂಕಷ್ಟದಲ್ಲಿ ಸಿಲುಕುವೆನೆಂಬ ವಿವೇಕ ಆತನಿಗಿಲ್ಲ. ಇದೂ ಒಂದುರೀತಿಯಲ್ಲಿ ನಾಯಿತನ. ಇಂಥ ನಾಯಿತನದಿಂದ ನನ್ನನ್ನು ಮುಕ್ತಗೊಳಿಸು ಎಂದರೆ ಜನರನ್ನು ಮುಕ್ತಗೊಳಿಸು ಎನ್ನುವ ಮಾನವೀಯ ಕಳಕಳಿ ಬಸವಣ್ಣನವರದು. ಅಂದರೆ ಲೌಕಿಕ ವಿಷಯಗಳಲ್ಲೇ ಮುಳುಗೇಳುವ ಮಾನವರನ್ನು ಶಿವಯೋಗದತ್ತ ಕರೆದೊಯ್ಯುವ ಪ್ರಯತ್ನ ಅವರದು.
ಸಂಸಾರವೆಂಬುದೊಂದು ಗಾಳಿಯ ಸೊಡರು,
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ.
ಇದ ನಚ್ಚಿ ಕೆಡಬೇಡ.
ಸಿರಿಯೆಂಬುದ ಮರೆದು, ಪೂಜಿಸು ನಮ್ಮ ಕೂಡಲಸಂಗಮದೇವನ.
ಸಂಸಾರ ಎಂದರೆ ಕಾಮನೆಗಳು. ಅವು ಗಾಳಿಗೆ ಒಡ್ಡಿದ ದೀಪವಿದ್ದಂತೆ. ವಿವಿಧ ಕಾಮನೆಗಳ ಬಯಕೆ ಬದುಕನ್ನೇ ಕಿತ್ತುಕೊಳ್ಳುವುದು ಎನ್ನುವ ಎಚ್ಚರ ನೀಡಿದ್ದಾರೆ. ಈ ಕಾಮನೆಗಳ ತೃಪ್ತಿಗಾಗಿ ಸಂಪತ್ತು ಬೇಕು. ಆದರೆ ಈ ಸಂಪತ್ತು ಕೂಡ ಸಂತೆಯ ಮಂದಿ ಇದ್ದಂತೆ. ಜನರು ಬೆಳಗ್ಗೆ ಸಂತೆಗೆ ಬರುವರು. ತಮ್ಮ ತಮ್ಮ ವ್ಯಾಪಾರ ಮುಗಿಯುತ್ತಲೇ ಅಲ್ಲಿಂದ ನಿರ್ಗಮಿಸುವರು. ಇದೇ ರೀತಿ ಕಾಮನೆ ಮತ್ತು ಸಂಪತ್ತು ಸಹ ಕ್ಷಣಿಕವಾದವು. ಅಶಾಶ್ವತವಾದವುಗಳನ್ನೇ ಶಾಶ್ವತ ಎಂದು ನಂಬಿ ಶಾಶ್ವತವಾದ ಲಿಂಗಾಂಗ ಸಾಮರಸ್ಯದ ರಹಸ್ಯವನ್ನರಿಯದೆ ಕೆಡಬೇಡಿ ಎನ್ನುವ ಕಳಕಳಿಯೂ ಬಸವಣ್ಣನವರದಾಗಿದೆ. ಅವರ ಆಶಯ ಶಿವಯೋಗ ಸಾಧನೆಯ ಮೂಲಕ ಶೂನ್ಯ ಸಂಪಾದನೆ ಅಥವಾ ಬಯಲಿನ ಸಂಪಾದನೆ ಮಾಡಿಕೊಳ್ಳಬೇಕು ಎನ್ನುವುದು. ಈ ಮತ್ರ್ಯಲೋಕ ಕರ್ತಾರನ ಕಮ್ಮಟ ಇದ್ದಂತೆ. ಅಂದರೆ ಇದು ಶಿವನ ಟಂಕಸಾಲೆ. ಇಲ್ಲಿ ಸಲ್ಲುವಂತೆ ಬಾಳಿದರೆ ಶಿವನಲ್ಲೂ ಸಲ್ಲಲು ಸಾಧ್ಯವಾಗುವುದು. ಭೂಮಿಗೆ ಬೀಜ ಬಿತ್ತಿದಾಗ ಬೆಳೆಗಿಂತ ಕಳೆಯೇ ಹೆಚ್ಚಾದರೆ ನಿರೀಕ್ಷಿಸಿದ ಬೆಳೆ ಪಡೆಯಲು ಸಾಧ್ಯವಾಗುವುದಿಲ್ಲ. ಕೃಷಿಕ ಆ ಕಳೆಯನ್ನು ಬೇರುಸಮೇತ ಕಿತ್ತು ಹಾಕಿದಾಗ ಮಾತ್ರ ಹುಲುಸಾದ ಬೆಳೆ ಪಡೆಯಲು ಸಾಧ್ಯವಾಗುವುದು. ಹಾಗೆನೆ ಮಾನವ ತನ್ನ ಅಂತರಂಗದೊಳಗೆ ಶಿವ ಬೀಜ ಬಿತ್ತಿದ್ದರೂ ಸಂಸಾರ, ಸಂಪತ್ತಿಗೆ ಅಂಟಿಕೊಂಡರೆ ಅದೇ ಭಯಂಕರ ಕಳೆಯಾಗುವುದು. ಆ ಕಳೆ ಪರಮಾನಂದದ ಬದಲು ದುಃಖದ ಸಾಗರದಲ್ಲಿ ಮಾನವನನ್ನು ಮುಳುಗಿಸಿಬಿಡಬಲ್ಲುದು. ಮನುಷ್ಯನ ಪಂಚೇಂದ್ರಿಯಗಳೇ ಸಂಸಾರ, ಸಿರಿ ಎನ್ನುವ ಕಳೆ ಬೆಳೆಯಲು ಕಾರಣವಾಗುವವು. ಬರೀ ಕಳೆ ಅಲ್ಲ; ಶಿವ ಬೆಳೆಯನ್ನು ನಾಶ ಮಾಡುವ ಪ್ರಳಯದ ಕಸ. ಈ ನೆಲೆಯಲ್ಲಿ ಪ್ರಭುದೇವರ ವಚನವನ್ನು ಗಮನಿಸಬಹುದು.
ಕರಿಯು ಸ್ಪರ್ಶನೇಂದ್ರಿಯದಿಂದ ಬಂಧನವಡೆದಳಿಯಿತ್ತು.
ಪತಂಗನು ರೂಪೇಂದ್ರಿಯದಿಂದ ಬಂಧನವಡೆದಳಿಯಿತ್ತು.
ಭೃಂಗನು ಗಂಧೇಂದ್ರಿಯದಿಂದ ಬಂಧನವಡೆದಳಿಯಿತ್ತು.
ಕುರಂಗನು ರಸನೇಂದ್ರಿಯದಿಂದ ಬಂಧನವಡೆದಳಿಯಿತ್ತು.
ಇಂತೀ ಒಂದೊಂದು ಇಂದ್ರಿಯೋದ್ರೇಕದಿಂದ
ಒಂದೊಂದು ಪ್ರಾಣಿಯು ಪ್ರಳಯವಾಯಿತ್ತು.
ಪಂಚೇಂದ್ರಿಯಂಗಳ, ಒಂದು ಘಟದಲ್ಲಿ ತಾಳಿಹ ಮನುಷ್ಯ ಪ್ರಾಣಿಗಳಿಗೆ,
ಮರವೆ ಎಡೆಗೊಂಡು ದೇಹಮೋಹಭ್ರಾಂತು ಮುಸುಕಿ
ಮಾಹೆಯ ಬಾಯ ತುತ್ತಹುದು
ಚೋದ್ಯವೇನು ಹೇಳಾ ಗುಹೇಶ್ವರಾ?
ಇಲ್ಲಿ ಪ್ರಭುದೇವರು ಕೊಡುವ ನಿದರ್ಶನಗಳನ್ನು ಗಮನಿಸಬೇಕು. ಆನೆ, ದೀಪದ ಹುಳು, ದುಂಬಿ, ಜಿಂಕೆ ಇವುಗಳು ತಮ್ಮ ಒಂದು ಇಂದ್ರಿಯದಿಂದಲೇ ಬಂಧನಕ್ಕೆ ಒಳಗಾಗಿ ನಾಶವಾಗುವವು. ಮನುಷ್ಯ ಐದು ಇಂದ್ರಿಯಗಳನ್ನು ತನ್ನೊಳಗೆ ಅಡಗಿಸಿಕೊಂಡಿದ್ದು ಅವನಿಗೆ ಮರವೆ ಆವರಿಸಿ, ದೇಹಮೋಹದ ಭ್ರಾಂತಿ ಮುಸುಕಿ, ಮಾಯೆಯ ಬಾಯಿಗೆ ತುತ್ತಾಗದಿರಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಆತ ನಡೆಯಬೇಕಾದ ದಾರಿ ಯಾವುದು ಎನ್ನುವುದನ್ನು ಪರೋಕ್ಷವಾಗಿ ನೆನಪಿಸಿದ್ದಾರೆ. ಇದರಿಂದ ಅರಿಯಬೇಕಾದ್ದು ಮನುಷ್ಯ ಅಂಗದಿಂದ ಲಿಂಗವಾಗುವ ಕಡೆ ಹೆಜ್ಜೆ ಹಾಕಬೇಕು ಎಂದು. ಅದನ್ನೇ ಶಿವಯೋಗ ತಿಳಿಸಿಕೊಡುವುದು. ಹಾವಿನಹಾಳ ಕಲ್ಲಯ್ಯನವರು `ಇಹಪರದಾಸೆಯಿಲ್ಲದಿಹುದೆ ಶಿವಯೋಗ’ ಎನ್ನುವರು. ಚನ್ನಬಸವಣ್ಣನವರು `ಕರಸ್ಥಲದಲ್ಲಿ ಲಿಂಗವ ಧರಿಸಿದಾತ ಉದಯಾಸ್ತಮಾನವೆನ್ನದೆ ಶಿವಪೂಜೆ ಶಿವಮಂತ್ರ ಶಿವಾರ್ಪಣ ಶಿವಶಾಸ್ತ್ರ ಶಿವಯೋಗದಲ್ಲಿರುವಾತನೆ ಲಿಂಗವಂತನೆಂಬೆನಯ್ಯಾ’ ಎಂದು ಸುದೀರ್ಘ ವಚನದಲ್ಲಿ ಹೇಳಿದ್ದಾರೆ. ಅಂಬಿಗರ ಚೌಡಯ್ಯನವರು ಈ ವಿಚಾರವಾಗಿ ಹೇಳುವುದನ್ನು ಗಮನಿಸಿ:
ಬೇಗ ಬೇಗನೆ ಗತಿಪಥದ ಜ್ಞಾನವ ಮಾಡಿಕೊಂಡು
ನೀಗಿರೊ ನಿಮ್ಮ ಭವಬಂಧನದ ಸಾಗರವನು.
ಪ್ರಾಣತ್ಯಾಗವು ಈಗಲೋ ಆಗಲೋ ಯಾವಾಗಲೋ
ಎಂದರಿಯಬಾರದು.
ರೋಗ ರುಜೆಗಳಿಗೆ ಆಗರವು ನಿಮ್ಮ ಒಡಲು.
ತನು-ಮನ-ಪ್ರಾಣವ ನೆಚ್ಚದಿರು,
ನಾಗಭೂಷಣನ ಪಾದಪೂಜೆಯ ಮಾಡಿ,
ಶಿವಯೋಗದಲಿ ಲಿಂಗವನೊಡಗೂಡಿ ಸಾಗಿ ಹೋಗುವವರನು ಭವಗೇಡಿ ಎಂದಾತ
ನಮ್ಮ ಅಂಬಿಗರ ಚೌಡಯ್ಯ.
Comments 10
PROF SOMASHEKHARAPPA
Jul 5, 2021Mangalaravarige Vandanegalu. Bayalu sanchikeya mukhaputa channagide mattu arthagarbitavaagide Jotege lekhanagalu sahaa. Nimma nisvaartha
seevege samaaja nijakku runiyaagirutthade. Pandithaaradhyara nudugalu yaavattu nammellara mana muttuva haagu mana thattuva swaroopaddavugalu.Shre-egalu nammelara daarideepa.
Vandanegalu mattomme .
Prof Somashekharappa
ಗುರುರಾಜ್ ಹೊಸಳ್ಳಿ
Jul 6, 2021ಪೂಜ್ಯ ಗುರುಗಳೇ, ಸಹಜ ಶಿವಯೋಗ ಎಂದು ಕೆಲವು ಸ್ವಾಮಿಗಳು ಹೇಳಿಕೊಡುತ್ತಿದ್ದಾರಲ್ಲಾ, ಅದು ಶರಣರು ಹೇಳಿಹೋದ ಶಿವಯೋಗವೇ… ಹಾಗೆ ಶಿವಯೋಗವೆಂದುಕೊಂಡು ಇಷ್ಟಲಿಂಗ ಯೋಗ ಮಾಡಿಸುವವರ ಕುರಿತು ನನಗೆ ಅನುಮಾನಗಳಿವೆ, ಅದಕ್ಕೆ ತಮ್ಮಲ್ಲಿ ಈ ಪ್ರಶ್ನೆ ಕೇಳಿದ್ದೇನೆ.
Omkarappa Bellur
Jul 7, 2021ಭಕ್ತಿಯೆಂಬ ಭೂಮಿಗೆ ಗುರುವೆಂಬ ಬೀಜ… ಶಿವಯೋಗದ ಬಗ್ಗೆ ಯಾವ ಶರಣರ ವಚನಗಳಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತದೆ ಸ್ವಾಮೀಜಿ? ನನಗೆ ಶಿವಯೋಗ ಕಲಿಯಬೇಕೆನ್ನುವುದು ಬಹಳ ದಿನಗಳ ಬಯಕೆ, ದಯವಿಟ್ಟು ಮಾರ್ಗ ತೋರಿಸಿ.
yariswamy
Jul 12, 2021ಎಲ್ಲಾ ಯೋಗಗಳಿಗಿಂತ ಶ್ರೇಷ್ಠವಾದದ್ದು ಶಿವಯೋಗ, ಇದೇ ರಾಜಯೋಗ ಎಂದು ಹೇಳುವುದನ್ನು ಕೇಳಿದ್ದೇನೆ, ಇದು ನಿಜವೇ ಆಗಿದ್ದಲ್ಲಿ ಯಾಕೆ ಇದು ಪ್ರಚಲಿತವಾಗಿಲ್ಲವೆಂದರೆ- ಇದಕ್ಕೆ ಕೇವಲ ಲಿಂಗಾಯತರಿಗೆ ಮಾತ್ರ ಇದು ಸೀಮಿತವಾಗಿದ್ದು ಕಾರಣವಾಗಿರಬಹುದು ಅಥವಾ ಶಿವಯೋಗದ ಕುರಿತಾಗಿ ನಿಜವಾದ ಅರಿವು ಕಡಿಮೆಯಿರುವುದೂ ಕಾರಣವಾಗಿರಬಹುದು. ನನಗೂ ಶಿವಯೋಗದ ಸ್ಪಷ್ಟ ಕಲ್ಪನೆ ಇಲ್ಲವೆಂದು ಒಪ್ಪಿಕೊಳ್ಳುತ್ತಲೇ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ.
Sharada A.M
Jul 12, 2021`ಇಹಪರದಾಸೆಯಿಲ್ಲದಿಹುದೆ ಶಿವಯೋಗ’ ಎನ್ನುವ ಹಾವಿನಹಾಳ ಕಲ್ಲಯ್ಯ ಶರಣರ ವಚನದಲ್ಲಿ ಶಿವಯೋಗದ ರಹಸ್ಯವಿದೆ ಎನ್ನುವುದು ನನ್ನ ಭಾವನೆ.
Gurudevappa Birolli
Jul 14, 2021ಲಿಂಗವ ಪೂಜಿಸಿ ಫಲವೇನಯ್ಯಾ- ಎನ್ನುವ ವಚನದಲ್ಲಿ ಕೂಡಲಸಂಗಮದೇವರನ್ನು ಹೇಗೆ ಪೂಜಿಸಬೇಕೆಂದರೆ
ನದಿಯೊಳಗೆ ನದಿ ಬೆರಸಿದಂತೆ ಎಂದಿದ್ದಾರೆ ಬಸವಣ್ಣನವರು. ಹಾಗೆ ನದಿಯೊಳಗೆ ನದಿ ಬೆರಸಿದಂತೆ ಮಾಡುವ ಪರಿಯೇ ಶಿವಯೋಗದ ರಹಸ್ಯ. ಶಿವಯೋಗವು ರಹಸ್ಯ ವಿದ್ಯೆ ಎನ್ನುತ್ತಾರೆ ನಮ್ಮೂರ ಅಯ್ಯನವರು. ಗೃಹಸ್ತರಿಗೆಲ್ಲಾ ಆಗದ ಮಾತು ಎಂದು ಬಿಡುತ್ತಾರೆ. ಬಸವಣ್ಣ ಗೃಹಸ್ತರಲ್ಲವೇ ಎಂದು ಕೇಳಿದರೆ ಅವರು ದೈವಾಂಶರು ಎಂದು ಬಾಯಿ ಮುಚ್ಚಿಸುತ್ತಾರೆ. ಶಿವಯೋಗ ರಹಸ್ಯದ ಕುರಿತು ಲೇಖನ ಪ್ರಕಟಿಸುವಿರಾ?
Gurumallesh
Jul 17, 2021ಲಿಂಗಾಂಗ ಸಾಮರಸ್ಯ ಮತ್ತು ಶಿವಯೋಗ ಎರಡೂ ಒಂದೇ ಪರಿಕಲ್ಪನೆಗಳು. ಆದರೆ ದುರದೃಷ್ಟವಶಾತ್ ದೀಕ್ಷೆ ನೀಡುವ ಯಾವ ಗುರುಗಳೂ ಇದರ ಕುರಿತು ನಮಗೆ ಹೇಳಿಕೊಡುವುದಿಲ್ಲ. ಇಷ್ಟಲಿಂಗ ಯಾಕೆ ಹಾಕಿಕೊಳ್ಳಬೇಕು? ಅದಂತೂ ಜಾತಿಯ ಕುರುಹಲ್ಲ, ಅದನ್ನು ಧರಿಸುವ ಉದ್ದೇಶವೇ ಲಿಂಗಾಂಗ ಸಾಮರಸ್ಯದ ಸಾಧನೆ.
ಉಮೇಶ್ ಕಾರಿಸೊಪ್ಪು
Jul 18, 2021ಶಿವನಾಗಿ ಶಿವನ ಪೂಜಿಸು, ಹರನಾಗಿ ಪುರಹರನ ಪೂಜಿಸು ಎಂದು ಬಸವಣ್ಣನವರು ತಮ್ಮ ಮನಸ್ಸನ್ನು ಕೋರಿಕೊಂಡಿದ್ದಾರೆ. ವಚನ ತುಂಬಾ ತುಂಬಾ ಅರ್ಥಗರ್ಭಿತವಾಗಿದೆ ಗುರುಗಳೇ.
Lingaraj Patil
Jul 19, 2021ಈಗ ಓದಿ ಮುಗಿಸಿದೆ. ಎಲ್ಲಾ ಲೇಖನಗಳು ಚೆನ್ನಾಗಿವೆ.
Kumaraswamy Nagamangala
Aug 5, 2021ಶಿವಯೋಗದಿಂದ ದೈಹಿಕ ಕಾಯಿಲೆಗಳು ಕೂಡ ದೂರವಾಗುತ್ತವೆ ಎಂದು ಕೇಳಿದ್ದೇನೆ. ಶರಣರು ಕೊಟ್ಟ ಈ ಯೋಗವನ್ನು ಶುದ್ಧ ರೂಪದಲ್ಲಿ ಯಾವ ಮಠದಲ್ಲಿ ಕಲಿಸಲಾಗುತ್ತಿದೆ, ದಯವಿಟ್ಟು ತಿಳಿಸುವಿರಾ ಗುರುಗಳೇ