ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ವಚನಕಾರರ, ತತ್ವಪದಕಾರರ, ಸೂಫಿಗಳ ತಾತ್ವಿಕತೆಯ ನೆಲೆಗಳ ಹುಡುಕಾಟದ ಹಿಂದೆ ಕನ್ನಡಕ್ಕೆ ತನ್ನದೇ ಆದ ಕಾವ್ಯ ಮೀಮಾಂಸೆಯೊಂದರ ಶೋಧನೆಯ ಒತ್ತಾಯವಿದೆ. ಈ ನೆಲದ ಕಾವ್ಯವನ್ನು, ದರ್ಶನವನ್ನು ಕಾವ್ಯ ಮೀಮಾಂಸೆಯನ್ನು ಈ ನೆಲದಲ್ಲಿಯೇ ನಿರ್ವಸಿತರನ್ನಾಗಿಸಿ ‘ ಸಂಭ್ರಮಿಸುವ’ ಸಂಭ್ರಮಗಳು ನಮ್ಮ ನಡುವೆ ಈಗ ನಡೆಯುತ್ತಿವೆ. ಕನ್ನಡದ ಬದುಕನ್ನು ಉತ್ತರದ ಯಜಮಾನಿಕೆಗೆ ಒಪ್ಪಿಸಿ ಕೂತಿದ್ದೇವೆ. ಈ ಉತ್ತರವೆನ್ನುವುದೊಂದು ಸಾಂಸ್ಕೃತಿಕ ವಸಾಹತುಶಾಹಿ. ಅದು ದಕ್ಷಿಣವನ್ನು ಎಂದಿನಿಂದಲೂ ಅಪಮಾನಿಸುತ್ತಲೇ ಬಂದಿದೆ. ಅದು ಇಂದಿಗೂ ಎಲ್ಲ ರೀತಿಯ ಅಧಿಕಾರ ಕೇಂದ್ರಗಳನ್ನು ತನ್ನ ಯಜಮಾನಿಕೆಯ ಮುಂದುವರಿಕೆಗೆ ಬಳಸಿಕೊಳ್ಳುತ್ತಲೇ ಇದೆ. ಈ ವಸಾಹತುಶಾಹಿ ನೇರವಾಗಿ ಈ ನೆಲದ ಅಸಲಿ ಕಾವ್ಯ, ದರ್ಶನ, ಮೀಮಾಂಸೆ ಮತ್ತು ಭಾಷೆಗಳನ್ನು ಹೊರಕ್ಕೆ ನಿಲ್ಲಿಸಿ ತನ್ನ ಯಜಮಾನಿಕೆಯನ್ನು ಸ್ಥಾಪಿಸುತ್ತದೆ. ಹಾಗೆ ಹೊರಗೆ ನಿಲ್ಲಿಸಲು ಹಣವನ್ನು, ಅಧಿಕಾರ ಕೇಂದ್ರಗಳನ್ನು, ಜಾಗತೀಕರಣವನ್ನು, ಕಾರ್ಪೊರೇಟ್ ಸಂಸ್ಕೃತಿಯನ್ನು ಬಳಸಿಕೊಳ್ಳುತ್ತದೆ. ಒಟ್ಟಿನಲ್ಲಿ ಈ ನೆಲದ ಜನ ಒಳಕ್ಕೆ ಬರಬಾರದು ಹಾಗೆ ಮಾಡುವುದರಲ್ಲಿ ಅದು ಸಂಭ್ರಮಿಸುತ್ತದೆ. ಮಾದಾರ ಧೂಳಯ್ಯನನ್ನು, ಅಂಬಿಗರ ಚೌಡಯ್ಯನನ್ನು, ಅಲ್ಲಮನನ್ನು ನಾಗಲಿಂಗಜ್ಜನನ್ನು, ಶಿಶುನಾಳ ಶರೀಫನನ್ನು, ಬಕ್ಕಪ್ಪನನ್ನು, ಹಾಗಲವಾಡಿ ಮುದ್ದುವೀರಸ್ವಾಮಿಯನ್ನು, ಬಂಡೆಗುರು, ಗಟ್ಟಿಹಳ್ಳಿ ಅಂಜನಪ್ಪ, ಹಾರಕೂಡ ಚೆನ್ನಬಸವ ಶಿವಯೋಗಿ, ಕೆಸ್ತೂರದೇವ, ರಾಮಪುರದ ಬಕ್ಕಪ್ಪ, ಚೆನ್ನೂರ ಜಲಾಲಸಾಬ, ಖೈನೂರ ಕೃಷ್ಣಪ್ಪ, ಸಿರುಗಾಪುರ ಬಂಡೆಪ್ಪ, ಗೊಬ್ಬೂರ ಹಂಪಣ್ಣ, ಮರಕುಂದಿ ಬಸವಣ್ಣಪ್ಪ, ನೀರಲಕೇರಿ ಬಸವಲಿಂಗ ಶರಣ, ಕೈವಾರ ನಾರೇಯಣ ತಾತ ಮುಂತಾದ ತತ್ವಪದಕಾರರನ್ನು, ಯಮನೂರಪ್ಪ, ಅಬ್ದುಲ್ ಹಸನ್ ಖಾದ್ರಿ, ಖ್ವಾಜಾ ಅಮೀನುದ್ದೀನ್, ಖಾದರಲಿಂಗ, ಅಹಮದ್ ಶಾ ವಲಿ (ಶಾ ಆಲಂಪ್ರಭು), ದಾದಾ ಹಯಾತ್ ಮೀರ್ ಖಲಂದರ್, ಬಾಬಾ ಸಾಹೇಬ (ಪಾನಿಸಾಬ), ಮೀರಾನ್ ಶಾ ಅಬು ಅಲ್ ಹಸನಖಾದ್ರಿ (ಬಿಜಾಪುರ), ಮೀರಾನ್ ಶಾ ಮುಸ್ತಫಾ ಖಾದ್ರಿ, ಮೀರಾನ್ ಶಾ ಖಾಸಿಂ ಖಾದ್ರಿ, (ಬಿಜಾಪುರ), ಲಾಡ್ಲೆ ಶಾ ವಲಿ (ಚಿತಾಪುರ), ಕಲಾದಗಿಯ ಶರ್ಫುದ್ದೀನ್ ಬಾಬಾ, ಶಾ ಅಬುಲ್ ಹುಸನಾ ಖಾದರಿ ಜಗದ್ಗುರು ಬಿಜಾಪುರ, ಶಾ ಮಿರಂಜಿ ಚಿಸ್ತಿ, ಬಿಜಾಪುರ ಹಾಜಿ ರೂಮಿ ಚಿಸ್ತಿ, ಹಾಶಿಂಪೀರಾ ದಸ್ತಗೀರ್ ಖಾದ್ರಿ, ಗುಲಬರ್ಗಾದ ಗೇಸುದರಾಜ್ ಬಂದೇನವಾಜ್ ಮುಂತಾದವರನ್ನು ಇಂದಿಗೂ ಹೊರಗೇ ನಿಲ್ಲಿಸಿದ್ದಾರೆ.
ವಚನಗಳು, ತತ್ವಪದಗಳು, ಮತ್ತು ಸೂಫಿ -ಈ ಧಾರೆಗಳೆಲ್ಲವನ್ನು ಒಂದೇ ಕಪಾಟಿಗೆ ತುಂಬಲಾಗದು. ಕನ್ನಡದ ಬದುಕಿಗೆ ಇರುವ ಬಹುತ್ವವು ಇಲ್ಲಿ ಪ್ರತಿಫಲಿತವಾಗುತ್ತಿದೆ. ಹಾಗೆಯೇ ಕನ್ನಡದ ಅಸಲಿ ಕಾವ್ಯದನಿಗಳನ್ನು ಹೊರಗೆ ನಿಲ್ಲಿಸಿ ಯಾವುದು ಪ್ರಭುತ್ವಕ್ಕೆ ಅಗತ್ಯವಾದ ಒಪ್ಪಿಗೆಯನ್ನು ಆಯಾ ಕಾಲದಲ್ಲಿ ಸಮೂಹದಿಂದ ಉತ್ಪಾದಿಸಿಕೊಡುತ್ತಿತ್ತೋ ಅದಕ್ಕೆ ಕಾವ್ಯದ ಸ್ಥಾನವನ್ನು ಕೊಟ್ಟಿರುವುದು ಕಂಡುಬರುತ್ತದೆ. ದಿವ್ಯಪ್ರಭುತ್ವವನ್ನು ಮುಂದಿಟ್ಟ ದರ್ಶನಗಳನ್ನು ಮಾತ್ರ ಉಳಿಯಗೊಟ್ಟು ಹಾಗೆ ಮಾಡದವುಗಳನ್ನು ಅಂಚಿಗೆ ತಳ್ಳಲಾಗಿದೆ. ಪ್ರಭುತ್ವವನ್ನು ಸಾರಭೂತಗೊಳಿಸುವ ಚಾಕರಿಯನ್ನು ಕೈಗೊಳ್ಳದ ವಚನಗಳಾಗಲೀ, ಜನಪದ ಕಾವ್ಯಗಳಾಗಲೀ, ತತ್ವಪದಗಳಾಗಲೀ ಕಾವ್ಯವೆಂದು ಪರಿಗಣಿತವಾಗಲೇ ಇಲ್ಲ. ಮೀಮಾಂಸೆಯೂ ಇದಕ್ಕೆ ಹೊರತಲ್ಲ. ಶ್ರಮಣಧಾರೆಗಳ ತಾತ್ವಿಕತೆಯಿಂದ ಪ್ರಣೀತವಾದ ಕಾವ್ಯಮೀಮಾಂಸೆಗೆ ಅಧಿಕಾರ ಕೇಂದ್ರಗಳೆಂದೂ ಮನ್ನಣೆ ನೀಡಿಲ್ಲ..
-2-
ಕನ್ನಡ ಸಾಹಿತ್ಯದ ದಾಖಲೆಗೊಂಡ ಇತಿಹಾಸದಲ್ಲಿ ಅತ್ಯಂತ ವಿಸ್ತಾರವಾದ ಭಾಗವೆಂದರೆ ತತ್ವಪದಗಳೇ. ಈ ಪ್ರಮಾಣದಲ್ಲಿ ಕನ್ನಡಸಾಹಿತ್ಯದ ಯಾವ ಪ್ರಕಾರದಲ್ಲಿಯೂ ಸಾಹಿತ್ಯ ಸೃಷ್ಟಿಯಾಗಿಲ್ಲ ತತ್ವಪದಕಾರರ, ಶರಣರ ತಾತ್ವಿಕತೆಯ ಪ್ರಧಾನ ಆಕರವೆಂದರೆ ಭಾರತೀಯ ಸಿದ್ಧಪರಂಪರೆ. ಬಹುಪಾಲು ಭಾರತೀಯ ಅವೈದಿಕ ಪರಂಪರೆಗಳ ಸಂಗಮಭೂಮಿಯೆಂದರೆ ಸಿದ್ಧಪರಂಪರೆಯೆ. ಇಲ್ಲಿ, ಬೌದ್ಧ ಸಿದ್ಧರು, ಜೈನಸಿದ್ಧರು, ನಾಥ ಸಿದ್ಧರು, ರಸಸಿದ್ಧರು, ಕಾಪಾಲಿಕರು ಮತ್ತು ಇತರ ಎಲ್ಲ ಸಿದ್ಧ ಧಾರೆಗಳೂ ಸಂಗಮಗೊಳ್ಳುತ್ತವೆ. ಚೌರಾಸೀಸಿದ್ಧರ ಪಟ್ಟಿಯಲ್ಲಿ ನಾಗಾರ್ಜುನ, ಭರ್ತೃಹರಿಯಿಂದ ಅಲ್ಲಮನಾಥನವರೆಗೆ ಭಾರತದ ಪ್ರಮುಖ ಸಾಧಕರೆಲ್ಲ ಇದ್ದಾರೆ. ತತ್ವಪದಕಾರರಲ್ಲಿ ಈ ಎಲ್ಲ ಮಾರ್ಗಗಳ ಸಾಧಕರೂ ಕಾಣಬರುತ್ತಾರೆ.
ರೂಢಮಾಗಿ ಮೂರು ನದಿಯು
ಕೂಡಿ ಇರುವ ತಾವಿನಲ್ಲಿ
ಆಡಿ ಬಂದು ಜೋಡಿ ಗಿಳಿಯು
ಕೂಡಿ ಮಾತಾಡುವುದನು
ನೋಡಿದೇನೇ ಪ್ರೌಢಸುಂದರಿ ಆ ಜಾಡ ತಿಳಿದು. . .//ನೋಡಿದೇನೇ ಪ್ರೌಢಸುಂದರಿ//. .
ತುಮಕೂರು ಜಿಲ್ಲೆಯ ಹರಿಹರಗುರುವಿನ ಒಂದು ತತ್ವಪದ ಹೀಗೆ ಝೇಂಕರಿಸುತ್ತಾ ಹರಿಯುತ್ತದೆ. ಅನುಭಾವದ ಬದುಕಿನಿಂದ ಬದುಕಿಗೆ ಸಾಗುತ್ತಾ ಬಂದಿರುವ ಇಂತಹ ಸಾವಿರಾರು ತತ್ವಪದಗಳು ಅಕ್ಷರ ಮಾಧ್ಯಮಕ್ಕೆ ಈವರೆಗೆ ಬಂದಿಲ್ಲ. ಈಗ ಬಂದಿವೆ. ಹಾಗೆ ಅಕ್ಷರ ಮಾಧ್ಯಮಕ್ಕೆ ಬಂದು ಇವು ಸಫಲವಾಗಬೇಕಿಲ್ಲ. ಹಾಗೆ ನೋಡಿದರೆ ಇವೆಲ್ಲಾ ಸಾಧನಾ ಮಾರ್ಗಗಳು. ಓದುವ/ಹಾಡುವ ಮಾರ್ಗಗಳಲ್ಲ. ಆದರೆ ಕನ್ನಡ ಕಾವ್ಯದ ಸಮೃದ್ಧಪರಂಪರೆಯೊಂದನ್ನು ಸಾಂಸ್ಕೃತಿಕ ರಾಜಕಾರಣದ ಕಾರಣಕ್ಕೆ ಹೊರಗೇ ನಿಲ್ಲಿಸಿರುವ ಅಪರಾಧೀ ಪ್ರಜ್ಞೆಯಿಂದ ಕನ್ನಡ ಸಾಹಿತ್ಯ ಚರಿತ್ರೆ ಬಿಡುಗಡೆ ಪಡೆಯಬೇಕಿದೆ.
ಇದೇ ರೀತಿಯ ಗಂಭೀರ ಊನವೊಂದು ಕರ್ನಾಟಕ ಸಂಗೀತಕ್ಕೆ ಕೂಡ ಉಂಟಾಗಿದೆ. ಕರ್ನಾಟಕ ಸಂಗೀತದ ವಾರಸುದಾರರೆಂದು ತಮ್ಮನ್ನು ತಾವೇ ಗುರುತಿಸಿಕೊಂಡು, ಬಾಗಿಲಲ್ಲಿ ನಿಂತು ವೈಷ್ಣವ ಭಕ್ತಿ ರಚನೆಗಳನ್ನು ಮಾತ್ರ ಕರ್ನಾಟಕ ಸಂಗೀತ ಕೃತಿಗಳೆಂದೂ, ಕನಕ ಪುರಂದರರು ಮಾತ್ರ ವಾಗ್ಗೇಯಕಾರರೆಂದೂ ಅವರ ರಚನೆಗಳನ್ನು ಮಾತ್ರ ಒಳಗೆ ಬಿಟ್ಟುಕೊಂಡು (ಅವರನ್ನು ಹೊರಗೇ ನಿಲ್ಲಿಸಿ!) ಕರ್ನಾಟಕ ಸಂಗೀತ ಸೊರಗಿ ಹೋಗುವಂತೆ ಮಾಡಲಾಗಿದೆ. ರಾಗ, ತಾಳಗಳ ಸೂಚನೆಯ ಸಮೇತ ಸಾವಿರಾರು ತತ್ವಪದಗಳನ್ನು ರಚಿಸಿ ಸಮೂಹದೊಳಗೆ ಹಾಡಿ, ಅಲ್ಲಿಯೇ ಬದುಕಿರುವ ತತ್ವಪದಗಳನ್ನು ಸಂಗೀತ ರಚನೆಗಳೆಂದಾಗಲೀ, ತತ್ವಪದಕಾರರನ್ನು ವಾಗ್ಗೇಯಕಾರರೆಂದಾಗಲೀ ಕರೆಯದೆ ಅವರನ್ನು ಅಸ್ಪೃಶ್ಯರನ್ನಾಗಿಸಿದ ಅಪಖ್ಯಾತಿ ಕರ್ನಾಟಕ ಸಂಗೀತದ ಮಧುರ ಧ್ವನಿಯ ಮಾನಸಿಕಕುಷ್ಠರೋಗಿವಾರಸುದಾರರ ಮೇಲಿದೆ. ಭಕ್ತಿ, ಅದರಲ್ಲೂ ವೈಷ್ಣವ ಭಕ್ತಿಯು ಅವುಗಳಲ್ಲಿ ಇಲ್ಲ ಎನ್ನುವುದೊಂದೇ ಈ ಅಸ್ಪೃಶ್ಯತೆಯ ಆಚರಣೆಗೆ ಕಾರಣವಾಗಿದೆ.
ಭಾರತೀಯತೆಯ ಒಂದು ಲಕ್ಷಣವಾದ ಅಸ್ಪೃಶ್ಯತೆಯೂ ದೇಹವನ್ನು ಅಪಮಾನಿಸುವುದರ ಮೂಲಕವೇ ಅಸ್ತಿತ್ವಕ್ಕೆ ಬರುತ್ತದೆ. ಅಸ್ಪೃಶ್ಯತೆಯನ್ನು ಹೊರತುಪಡಿಸಿ ಭಾರತೀಯತೆಯನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಭಾರತೀಯ ಕಾವ್ಯ ಮೀಮಾಂಸೆ ನಿಂತಿರುವುದೇ ದೇಹದ ಅಪಮಾನ ಮತ್ತು ಆತ್ಮದ ವೈಭವೀಕರಣದ ಮೇಲೆ. ಶ್ರಮಣ ಧಾರೆಗಳಿಗೆ ದೇಹ ಮತ್ತು ಫಲವಂತಿಕೆಯ ಎಲ್ಲ ಆಕರಗಳೂ ನಿಸರ್ಗದ ಗೌರವಾನ್ವಿತ ಸಂಗತಿಗಳು. ಹೆಣ್ಣು ಮತ್ತು ಫಲವಂತಿಕೆಯ ಸಂಕೇತಗಳನ್ನು ಶ್ರಮಣಧಾರೆಗಳ ಮೀಮಾಂಸೆಯು ಸಾಂಸ್ಕೃತಿಕ ಸಂಕೇತಗಳನ್ನಾಗಿಸಿಕೊಂಡಿದೆ. ಜೈನರಯೋಗ-ಭೋಗದ ಸಮನ್ವಯ, ಬೌದ್ಧರಯೋಗಾಚಾರ, ರಸಸಿದ್ಧರ ವಜ್ರಯಾನ, ಎಲ್ಲ ಸಿದ್ಧ ಪಂಥಗಳು ದೇಹ ಸಾಧನೆ, ವಚನಕಾರರ ಕಾಯಕ ತತ್ವ ಮತ್ತು ಸತಿಪತಿಭಾವ ಹಾಗೂ ಸೂಫಿಗಳ ಪ್ರೇಮ ಸರ್ವಸ್ವ ದೇಹದ ಅನುಸಂಧಾನದ ಭಾಗವೇ ಆಗಿವೆ. ವಚನಕಾರರು, ತತ್ವಪದಕಾರರು ಮತ್ತು ಸೂಫಿ ಪರಂಪರೆಗಳಲ್ಲಿ ಕಾಯ ನಿರ್ವಹಣೆ ಪ್ರಧಾನ ಭೂಮಿಕೆಯಲ್ಲಿ ಚರ್ಚಿತವಾಗಿದೆ.
“ಸೈತಾನನನ್ನು ದ್ವೇಷಿಸಲೂ ಜಾಗವಿಲ್ಲದಂತೆ ನನ್ನ ಮನಸ್ಸು ಪ್ರೇಮದಿಂದಲೇ ತುಂಬಿ ಹೋಗಿದೆ” ಎನ್ನುತ್ತಾಳೆ ಸಂತ ರಬಿಯಾ. ಸಾಯದಿರುವ, ಕೆಡದಿರುವ ಪ್ರೇಮದ ಹೊರತಾಗಿ ಬೇರೇನೂ ಬೇಡವೆಂದು ಅಕ್ಕ ಹೇಳುತ್ತಾಳೆ. ಉತ್ತರದ ದಾರಿಯಲ್ಲಿ ಪ್ರೇಮಕ್ಕೆ ಅಪಾರವಾದ ಬಡತನ. ರಾಮಾಯಣ ಮಹಾಭಾರತದಲ್ಲೂ ಅದೇ ಗೋಳು. ಅಹಮಿಕೆಗೆ ಯಜಮಾನಿಕೆಗೆ ಪ್ರೀತಿಯಿಂದ ಬಾಳಿಯೇ ಗೊತ್ತಿಲ್ಲ. ಎಷ್ಟು ದುಡ್ಡದೆ? ಯಾವ ಜಾತಿ? ಅಂತಾ ಬಾಗಿಲಲ್ಲೇ ಕೇಳಿ ಅದಕ್ಕೆ ಅಭ್ಯಾಸ. ಹಾಗಾಗಿ ಪ್ರೀತಿ, ಪ್ರೇಮ, ಸಂಗೀತ, ಸಾಹಿತ್ಯ – ಎಲ್ಲ ಅವರಿಗೆ ಸರಕು ಮಾತ್ರ.
ಮೂರ್ತರೂಪದ ಇಂದ್ರಿಯ ಜಗತ್ತನ್ನು ನಿರಾಕರಿಸಿದ ಯಾವ ತಾತ್ವಿಕತೆಯನ್ನೂ ಶರಣರಾಗಲೀ, ತತ್ವಪದಕಾರರಾಗಲೀ, ಸೂಫಿಗಳಾಗಲೀ ಮಾನ್ಯ ಮಾಡುವುದಿಲ್ಲ. ನಮ್ಮೆಲ್ಲರ ಇರುವಿಕೆ ಸಾಕಾರಗೊಳ್ಳುವುದೇ ದೇಹದ ಮೂಲಕ, ಇಂದ್ರಿಯಗಳ ಮೂಲಕ. ದೇಹಶಕ್ತಿಯು ನಿಜವಾಗಿ ಒಂದು ಸಂಭ್ರಮ. ಹಾಗಾಗಿ ಕಾಯಕತತ್ವ ವಚನಕಾರರ ಮತ್ತು ಎಲ್ಲ ಶ್ರಮಣಧಾರೆಗಳ ಪ್ರಧಾನ ನಿಲುವು. ‘ಉತ್ತರಕ್ಕೆ’ ಶ್ರಮ ನಿರಾಕರಣೆಯು ಇತರರನ್ನು ಅನ್ಯಗೊಳಿಸುವ ಸಲಕಕರಣೆಯಾದರೆ ಶ್ರಮಣ ಧಾರೆಗಳಿಗೆ ಶ್ರಮ ಸಮಾನತೆಯ ಸಾಧನ.
ವಚನ ಕೇವಲ ರಚನೆಯಲ್ಲ. ಅದು ಜ್ಞಾನ ಮತ್ತು ಸಾಧನೆ ಎರಡೂ ಏಕೀಭವಿಸಿದ ಯಾನ, ಪ್ರಧಾನವಾಗಿ ಗುರುಮಾರ್ಗ; ದೈವಮಾರ್ಗವಲ್ಲ. ಅಲ್ಲಿ ನಡೆ ನುಡಿ ಒಂದಾಗದ ಜ್ಞಾನ ಜ್ಞಾನವಲ್ಲ. ಗುರು ಮುಖೇನ ಪಡೆದ ಅರಿವು ಸ್ವಯವಾಗಲು ಸಾಧನೆ ಅತ್ಯಗತ್ಯ. ಸಾಧನೆಗೆ ದೇಹವನ್ನೆ ಬಳಸಿ ಅದರ ಹಂಗಿನಿಂದ ಹೊರಬರುತ್ತಾರೆ. ಮೂರ್ತರೂಪದ ಇಂದ್ರಿಯ ಜಗತ್ತನ್ನು ನಿರಾಕರಿಸಿದ ಯಾವ ತಾತ್ವಿಕತೆಯನ್ನೂ ಅಲ್ಲಮನಾಗಲೀ, ಇತರ ವಚನಕಾರರಾಗಲೀ ಮಾನ್ಯ ಮಾಡುವುದಿಲ್ಲ. ಹಾಗಾಗಿ ಸ್ತ್ರೀವಾದಿ ಚಿಂತನೆಗಳು ಕೂಡ ದೇಹಮೀಮಾಂಸೆಯ ಜೊತೆಗೇ ತಮ್ಮ ಯಾನವನ್ನು ನಡೆಸುತ್ತವೆ. ಹೆಣ್ಣಾಗಲೀ ಗಂಡಾಗಲೀ ದೇಹಾಪಮಾನದಿಂದ ಮೊದಲು ಮುಕ್ತವಾಗಿ ಯೋಚಿಸುವ ಕ್ರಮವನ್ನು ಅಲ್ಲಮನು ಮುಂದಿಟ್ಟಿದ್ದಾನೆ.
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರಾ
ಕನ್ನಡ ಕಾವ್ಯ ಮೀಮಾಂಸೆ ಈ ಜೈವಿಕ ನಿಲುವನ್ನು ಕಟ್ಟಿಕೊಂಡಿರುವ ಬಗೆಯಲ್ಲಿಯೇ ಉತ್ತರದ ಪಿತೃಪ್ರಧಾನ ಪರಂಪರೆಗಿಂತ ಭಿನ್ನವಾಗಿ ಯೋಚಿಸಿದೆ. ಶೂನ್ಯತೆಯನ್ನು ವಿವರಿಸಿಕೊಳ್ಳಲು ಅದು ತಾಯಿಗರ್ಭವನ್ನು ಸಮಾನ ರೂಪಕವಾಗಿ ಬಳಸಿದೆ. ಉಬ್ಬಿದ ತಾಯಿಯ ಹೊಟ್ಟೆ, ಹುತ್ತದ ಬಿಲ, ನೀರು ಹರಿವಲ್ಲಿನ ಮಡಿಕೆಗಳ ನಡುವಿನ ಸಂಕೇತವನ್ನು ನಾಡಿನ ಉದ್ದಗಲಕ್ಕೂ ಪೂಜಿಸುವ ಜೀವನ ಕ್ರಮವು ಹೆಣ್ಣನ್ನು ಮಾಯೆಯಾಗಿ ಕಾಣಲಾರದು.
ಸಂಸ್ಕೃತ ಕಾವ್ಯ ಮೀಮಾಂಸೆಯು ಶ್ರೇಷ್ಠತೆಯನ್ನು ದೇಹದಿಂದ ಆತ್ಮಕ್ಕೆ, ದೇಹದಿಂದ ದೇವಾಲಯಕ್ಕೆ, ಪ್ರೇಮದಿಂದ ಭಕ್ತಿಗೆ, ಬಯಲಿನಿಂದ ಸ್ಥಾವರಕ್ಕೆ ವರ್ಗಾಯಿಸಿತು. ಶ್ರಮಣಧಾರೆಗಳು ಮೀಮಾಂಸೆಯನ್ನು ಸಮೂಹಪರವಾಗಿಸಲು ಆತ್ಮತತ್ವದಿಂದ ಕಾಯಕತತ್ವಕ್ಕೆ, ದೇವಾಲಯದಿಂದ ದೇಹಕ್ಕೆ, ಭಕ್ತಿಯಿಂದ ಪ್ರೇಮಕ್ಕೆ, ಸ್ಥಾವರದ ಬಂಧನದಿಂದ ಬಯಲಿಗೆ ವರ್ಗಾಯಿಸಿದವು. ಒಂದರ ಪ್ರಯಾಣ ಸರ್ವಾಧಿಕಾರದ ಕಡೆಗಾದರೆ ಇನ್ನೊಂದು ಸಮೂಹ ಮತ್ತು ಪ್ರಜಾಪ್ರಭುತ್ವದ ಕಡೆಗೆ.
ಸೂಸಲಾಡುವ ದೇಹ:
ದೇಹವು ತನ್ನ ಸಹಜ ಘನತೆಯನ್ನು ಉಳಿಸಿಕೊಂಡು ಅರ್ಥವಂತವಾಗಿ ಚಲನಶೀಲವಾಗಲು ಭೂಮಿಕೆಯನ್ನು ಅನುವು ಮಾಡಲು ಪ್ರಯತ್ನಿಸಿದ್ದು ಸಿದ್ಧ ಪರಂಪರೆ. ನಿರಂತರವಾಗಿ ಕಾಯ್ದುಕೊಂಡ ಈ ಅಂತಃಶಕ್ತಿಯು ಸಿದ್ಧಪರಂಪರೆಯಲ್ಲಿ ಗುಪ್ತಗಾಮಿನಿಯಂತೆ ಸದಾ ಪ್ರವಹಿಸುತ್ತಿರುತ್ತದೆ. ಅದರ ಒಂದು ಮಾದರಿ ಇದು:
ಮುಡಚಟ್ಟಿನೊಳು ಬಂದು, ಮುಟ್ಟೀ ತಟ್ಟೀ ಎನುತೀರಿ
ಮುಡಚಟ್ಟು ಎಲ್ಯಾದ್ಹೇಳಣ್ಣ
ಮುಟ್ಟಾದ ಮೂರು ದಿನಕೆ ಹುಟ್ಟಿ ಬಂದಿದಿ ನೀನು
ಮುಡಚಟ್ಟು ಎಲ್ಯಾದ್ಹೇಳಣ್ಣ ||ಮುಡಚಟ್ಟಿನೊಳು|| ||ಪಲ್ಲವಿ||
ತೊಗಲೊಳು ತೊಗಲೊಕ್ಕು ತಗಲಿ ಬಂದವ ನೀನು
ತಗಲ ಮಾತಾಡುವುದೇನಣ್ಣ
ಇದರ ಬಗೆಯ ತಿಳಿಯದೆ ವಗದು ಮಾತಾಡಿದರೆ
ನಗಿಗೇಡಿ ಕಾಣುತಾದಣ್ಣ ||ಮುಡಚಟ್ಟಿನೊಳು|| ||1||
ಊರ ನರಕವ ತಿಂದು ಬೋರ್ಯಾಡ್ಹಿಂಡುವ ಎಮ್ಮಿ
ಹಾಲಿನ ಸವಿ ನೋಡಣ್ಣ
ಅದರ ಸ್ವಾದ್ಹತಿ ನೀ ಉಂಡು ಗಂಡಾಗಿ ಕುಂತೀದಿ
ಶೀಲ ಎಲ್ಲಿ ಉಳಿತ್ಹೇಳಣ್ಣ ||ಮುಡಚಟ್ಟಿನೊಳು|| ||2||
ಊರ ಬಾವಿಯ ನೀರು ದಾರಾದರು ತರುವರು
ನಿನ್ನ ನೀರ ಬ್ಯಾರ್ಯಾವೇನಣ್ಣ
ಲಂಡೇನ್ಹಳ್ಳ ಬಂದು ನದಿಯ ಕೂಡಿದ ಮೇಲೆ
ನೈವೇದ್ಯ ಹೇಗಾದವು ಹೇಳಣ್ಣ ||ಮುಡಚಟ್ಟಿನೊಳು|| ||3||
ಸೂಸಲಾಡುವ ದೇಹ ಸೋಸಿ ನೀರವ ಮಾಡಿ
ಮಡಿ ಮಾಡಿಕೊಳ್ಳಬೇಕಣ್ಣ
ನಮ್ಮ ಧೀರ ಮಹಾಂತೇಶನ ಬಿಡದೆ ಕೊಂಡಾಡಿದರೆ
ಕಡಿತನಕ ಮಡಿಯಾಗುವುದಣ್ಣ
–ಕಡಕೋಳ ಮಡಿವಾಳಪ್ಪ
ದೇಹದ ಮೇಲಿನ ಅಧಿಕಾರ ಸ್ಥಾಪನೆಗೆ ಹಾತೊರೆಯುವ ಎಲ್ಲ ಸಂಸ್ಥೆಗಳನ್ನೂ ವಚನಕಾರರು, ತತ್ವಪದಕಾರರು, ಸಿದ್ಧರು ಗೇಲಿ ಮಾಡಬಲ್ಲರು. ಚಿದಾನಂದಾವಧೂತ ಅಥವಾ ಅವನ ಶಿಷ್ಯನದಿರಬಹುದಾದ ಈ ತತ್ವಪದ ಅದನ್ನು ಲಘು ಹಾಸ್ಯದೊಡನೆ ಮಾಡುತ್ತದೆ.
ಕೋಲು ಕೋಲೆನ್ನಿರೇ | ಸದ್ಗುರುವಿನ
ಕೀಲು ಮೇಲೆನ್ನಿರೇ ||ಪ||
ಅತ್ತೆ ಹೆಸರು ಹಳೆಯ ಚಾಪೆ
ಮಾವನ ಹೆಸರು ಮಂಚದ ಕಾಲು
ಎನ್ನ ಹೆಸರು ಕಲ್ಲಬಿಲ್ಲಿ
ಗಂಡನ ಹೆಸರು ಟಕ್ಕಟಕ್ಕಿ / ಕೋಲೆನ್ನಿರೇ/ ||1||
ಹತ್ತಿ ಬಿತ್ತಿ ಬತ್ತಿ ಕಾಣೆ
ಬತ್ತ ಬಿತ್ತಿ ಬಾನ ಕಾಣೆ
ಮನೆಯ ತುಂಬ ಮಕ್ಕಳ ಹಡೆದು
ಗಂಡನ ಸುಖವ ಕಾಣಲಿಲ್ಲ /ಕೋಲೆನ್ನಿರೇ/ ||2||
ಗಂಡ ದಂಡಿಗೋಗುವಾಗ
ಅರಗಿನ ಮುದ್ರೆ ಮಾಡಿ ಹೋದ
ಅರಗಿನ ಮುದ್ರೆ ಹಾರು ಹೊಡೆದು
ಆರು ಮಕ್ಕಳ ಹಡೆದೆನವ್ವ /ಕೋಲೆನ್ನಿರೇ/ ||3||
ದಂಡಿಗೋಗೊ ಅಣ್ಣಗಳಿರಾ
ದಂಡಿಗೋಗೊ ಅಪ್ಪಗಳಿರಾ
ದಂಡಿನಾಗೆ ನನ್ನ ಗಂಡನ ಕಂಡರೆ
ಮಿಂಡನ ಕಟ್ಟಿಕೊಂಡು ಹೋದಳೆನ್ನಿ /ಕೋಲೆನ್ನಿರೇ/ ||4||
ಗುಡ್ಡಕ್ಕೆ ನೆರಳಿಲ್ಲ ಗುರುವಿಗೆ ಸಮನಿಲ್ಲ
ಸ್ವಾಮಿ ಚಿದಾನಂದನ ಮಹಿಮೆ ತಿಳೀಲಿಲ್ಲ ||ಕೋಲೆನ್ನಿರೇ||…
ವೈದಿಕ ವ್ಯವಸ್ಥೆಯ ಕುತಂತ್ರಗಳಾದ ಲಿಂಗಭೇದ, ಪಾವಿತ್ರ್ಯದ ಸಂಕೋಲೆಗಳು, ದೇಹವನ್ನು ಕಲ್ಪಿತ ಆತ್ಮನಿಗೆ ಅರ್ಪಿತಮಾಡುವ ಧಾರ್ಮಿಕ ಸಂಕಥನಗಳು ಎಲ್ಲವೂ ಸಿದ್ಧರಿಗೆ, ವಚನಕಾರರಿಗೆ ವಂಚನೆಯ ಹುನ್ನಾರಗಳಂತೆಯೇ ಗೋಚರಿಸುತ್ತವೆ. ಈ ವಂಚನೆಯ ವಿರುದ್ಧವಾಗಿ ಹುಟ್ಟಿಕೊಂಡ ಪಂಚ ‘ಮ’ಕಾರ ಸಾಧನೆಗಳು ಆತ್ಮ ಸಾಧನೆಯ ಪಂಥಗಳಿಗೆ ವಿಕಾರಗಳಂತೆ ಕಾಣಿಸಿದವು. ಆದರೆ ಆತ್ಮಸಾಧನೆಯ ನೆಪದಲ್ಲಿ ಮಾಡಿದ ದೇಹಾಪಮಾನವು ಗಂಭೀರ ಅಪರಾಧವಾಗಿ ಕಾಣಿಸಲೇ ಇಲ್ಲ. ವರ್ಣಾಶ್ರಮ ವ್ಯವಸ್ಥೆಯನ್ನು ಗುಣ ಮತ್ತು ಹುಟ್ಟಿನ ಸಿದ್ಧಾಂತಗಳ ಮೂಲಕ ಜಾರಿಗೊಳಿಸಿದ ವೈದಿಕ ವ್ಯವಸ್ಥೆಯು ಆಚರಣೆಗೆ ಹುಟ್ಟಿನ ಸಿದ್ಧಾಂತವನ್ನು, ವಿಚಾರಕ್ಕೆ ಗುಣಸಿದ್ಧಾಂತವನ್ನೂ ಯಶಸ್ವಿಯಾಗಿ ಅನ್ವಯಗೊಳಿಸಿಕೊಂಡಿತು. ಇಂತಹ ವೈದಿಕ ತಾತ್ವಿಕತೆಯನ್ನು ಅನ್ವಯಗೊಳಿಸಿಕೊಂಡು ನಡೆಸುವ ವಚನವ್ಯಾಖ್ಯಾನದ ಉದ್ಯೋಗವಿನ್ನೂ ಯಗ್ಗಿಲ್ಲದೇ ನಡೆದೇ ಇರುವುದು ಮಾತ್ರ ವರ್ತಮಾನದ ವ್ಯಂಗ್ಯಗಳಲ್ಲೊಂದು.
ಶ್ರಮಣ ಧಾರೆಗಳ ಜೋಳಿಗೆ – ಹೆಣ್ಣು:
ಕನ್ನಡ ಶ್ರಮಣ ಪರಂಪರೆಯ ಜೋಗಿಗಳ/ಸಿದ್ಧರ/ನಾಥರ/ತತ್ವಪದಕಾರರ/ಅವಧೂತರ/ಸನ್ಯಾಸಿಗಳ ಸ್ಯಾಫ್ರನ್ ಕಲರ್ ಜೋಳಿಗೆಯು ಹೆಣ್ಣಿನ ಮುಟ್ಟಿನ ರಕ್ತದಲ್ಲಿ ಅದ್ದಿದ ಬಟ್ಟೆ ಎನ್ನುತ್ತಾರೆ. ಅನ್ನಕ್ಕೆ ಒಡ್ಡುವುದು ಈ ಜೋಳಿಗೆಯನ್ನೇ. ಉಣ್ಣುವ ಅನ್ನವೂ ಅಲ್ಲಿಗೇ ಬಿದ್ದು ಬರಲಿ ಎಂಬುದೇ ಇಲ್ಲಿನ ಗ್ರಹಿಕೆ ಇದ್ದಂತಿದೆ. ಸಂಭೋಗದ ಅಭಿನಯವೇ ಆಗಿರುವ ಉಳುಮೆಯಿಂದ ಪಡೆಯುವ ಅನ್ನವು ಭೂಮಿ ಎಂಬ ಹೆಣ್ಣಿನ ಕ್ಷೇತ್ರ ಭಿಕ್ಷೆಯೇ ಆಗಿರುವುದನ್ನು ಇದು ಸೂಚಿಸುತ್ತಿದೆ. ಫಲವಂತಿಕೆಯ ಲಾಂಛನವಾದ ಮುಟ್ಟು ಆರ್ಯಕಲ್ಪನೆಯಲ್ಲಿ ಮೈಲಿಗೆಯಾದರೆ ಶ್ರಮಣಧಾರೆಗಳ ಪರಂಪರೆಯ ಪಾಲಿಗೆ ನಿಸರ್ಗಸಹಜವಾಗಿ ಅದು ಎಲ್ಲ ಹುಟ್ಟಿನ ಸಾಧ್ಯತೆಯಾದ ಶೂನ್ಯತೆಯಾಗಿದೆ.
ಕಸುಬು, ಕೌಶಲ ಮತ್ತು ದೇಹ – ಮೀಮಾಂಸೆಯ ತ್ರಿವಳಿ:
ತಾನು ಪ್ರತಿನಿತ್ಯ ಒಡನಾಡುವ ಮೆಟ್ಟಿನ ಕಸುಬಿನ ಜೊತೆಯೇ ತನ್ನ ದೇಹವನ್ನು ಸಮೀಕರಿಸಿರುವ ಮಾದಾರ ಧೂಳಯ್ಯನ ಈ ವಚನ ಪ್ರಾಚೀನ ತಮಿಳು ಕಾವ್ಯಮೀಮಾಂಸೆಯ ಆಶಯವನ್ನು ಮತ್ತೆ ಕಟ್ಟುತ್ತಿದೆ. ಕಾವ್ಯ ಮೀಮಾಂಸೆಯೆಂದರೆ ಧ್ವನಿ, ರಸ, ಔಚಿತ್ಯ, ಅಲಂಕಾರಗಳೆಂಬ ಭಾಷಿಕ ಆಭರಣಗಳಷ್ಟೆ ಎಂದುಕೊಂಡ ಕಾವ್ಯಮೀಮಾಂಸೆಯ ಧಾರೆಗೆ ಮೀಮಾಂಸೆಯೆಂದರೆ ಅನ್ನ, ಹಸಿವು, ದೇಹ ಮತ್ತು ಕಸುಬುಗಳೆನ್ನುವುದನ್ನು ಪರಿಚಯಿಸಿದವರು ವಚನಕಾರರು.
ಕಟ್ಟಿದೆ ಘಟದಟ್ಟೆಯ ಹೊಲಿದು
ಇಕ್ಕಿದೆ ಚತುರ್ವಿಧದ ನಾಲ್ಕು ಗುಂಟವ ಬಲಿದು
ಗುಂಟದ ದ್ವಾರದಲ್ಲಿ ಉಭಯ ಸಂಚನ ಬಾರ ತೆಗೆದು
ತೊಡಕು ಬಂಧವನಿಕ್ಕಿ ಅಡಿಯ ಬಿಡದಂತೆ
ಹಿಂದಣ ಮುಡ ಮುಂದಣ ಉಂಗುಷ್ಠಕ್ಕೆ
ಒಂದನೊಂದು ಜಾರದಂತೆ ಬಂಧಿಸಿ
ಸಕಲೇಂದ್ರಿಯವೆಂಬ ಉಭಯವ ಸಂಧಿಸಿ ಕುಣಿಕೆಯನಿಕ್ಕಿ
ಕಾಮದ ಒಡಲ ಮಾದಿಗ ಬಂದೆ
ಘಟ ತೋಕುಳು ತೊಗಲು ಹದ ಬಂದಿತ್ತು
ಹೊತ್ತು ಹೋದಿಹಿತಣ್ಣಾ
ಮೆಟ್ಟಡಿಯ ಕೊಂಡ ರೊಕ್ಕವ ಕೊಡಿ
ಒಪ್ಪಿದರಿರಲಿ ಒಪ್ಪದಿದ್ದಡೆ
ಮೂರು ಮುಖದಪ್ಪಗೆ ಕೊಟ್ಟಿಹೆ
ತಪ್ಪಡಿಯ ಮೆಟ್ಟಿ ಹೋಗುತ್ತಿದ್ದೇನೆ
ಚನ್ನಯಪ್ರಿಯ ಧೂಳನ ಧೂಳಿಗೊಳಗಾಗಿ
ತನ್ನ ದೇಹ ಮತ್ತು ಕಸುಬು ಮತ್ತು ಕೌಶಲಗಳನ್ನು ಮಾತ್ರ ನಂಬಿ ಬದುಕುವ ಈ ಸ್ವಾಭಿಮಾನವು ದೈವವನ್ನೂ ದೇವಸ್ಥಾನದ ಹಂಗಿನಿಂದ ಬಿಡಿಸಿ, ಭಕ್ತರಿಂದ ದೂರಮಾಡಿ ಮೆಟ್ಟಿನ ಅಟ್ಟೆಯನ್ನು ಚುಚ್ಚುವ ಉಳಿಯ ಮೊನೆಯ ಬಳಿ ತರಬಲ್ಲದು. ದೇಹದ ಮೂಲಕ ನಡೆಯುವ ಎಲ್ಲ ಗ್ರಹಿಕೆಯ ಉದ್ಯೋಗವೂ ಪ್ರತ್ಯಕ್ಷಪ್ರಮಾಣವನ್ನು ಮಾನ್ಯಮಾಡುವಂತೆ ಸಾಮಾನ್ಯಮಾನವ ಮತಿ ಒತ್ತಾಯಿಸುತ್ತದೆ. ಕಣ್ಣಾರೆ ಕಾಣದ ಹೊರತು, ಕಿವಿಯಾರೆ ಕೇಳದ ಹೊರತು ನಂಬಬಾರದು ಇತ್ಯಾದಿ ಕಂಡದ್ದನ್ನು ಕೇಳಿದ್ದನ್ನು ನಿಜವೆಂದು ಸ್ಥಾಪಿಸಬಯಸುತ್ತದೆ. ಆದರೆ ಈ ಕಾಣುವ, ಕೇಳುವ, ಮುಟ್ಟುವ ಪ್ರಕ್ರಿಯೆಯನ್ನು ಮತ್ತು ಅದು ಮುಂದಿಡುವ ಪ್ರತ್ಯಕ್ಷ ಪ್ರಮಾಣವನ್ನು ನಿರಾಕರಿಸುವ ಮಾದಾರ ಧೂಳಯ್ಯನೆಂಬ ವಚನಕಾರ ಮುಂದಿಡುವ ರೀತಿ ಇದು:
ಕಂಗಳ ಸೂತಕದಿಂದ ಕಾಣಿಸಿಕೊಂಬುದು
ಮನದ ಸೂತಕದಿಂದ ನೆನೆಯಿಸಿಕೊಂಬುದು
ಕಾಯದ ಸೂತಕದಿಂದ ಮುಟ್ಟಿಸಿಕೊಂಬುದು
ಮೂರರ ಸೂತಕದಲ್ಲಿ ಗಾರಾಗುತ್ತ
ಮೀರಿ ಕಾಬ ಅರಿವು ಸೂರೆಯೇ
ನೆನಹಿಂಗೆ ಮುನ್ನವೆ ನೆನೆಯಿಸಿಕೊಂಡು
ಅರಿವುದಕ್ಕೆ ಮುನ್ನವೆ ಅರುಹಿಸಿಕೊಂಡು
ಬಂದದನರಿಯದೆ ಕುರುಹಿನ ಹಾವಸೆಯಲ್ಲಿ
ಮರೆದು ಒರಗುತಿಹರ ಕಂಡು
ಮರೆಮಾಡಿದೆಯಲ್ಲಾ ಕಾಮಧೂಮ ಧೂಳೇಶ್ವರಾ.
ಕನ್ನಡದ ನಿಂದ ನಿಲುವನ್ನರಿಯಲು, ಕನ್ನಡದ ಅಸಲಿ ಚಹರೆಗಳನ್ನು ಗುರುತಿಸಿಕೊಳ್ಳಲು ಕಲ್ಯಾಣದ ಬಾಗಿಲಿಗೆ ಹೋಗಿ ನಿಲ್ಲುವುದು ಕನ್ನಡದ ಮಟ್ಟಿಗೆ ಒಂದು ಸಂಪ್ರದಾಯವೇ ಆಗಿದೆ. ಇಂದಿಗೂ ಕನ್ನಡದ ನಿನ್ನೆಗಳನ್ನು ವ್ಯಾಖ್ಯಾನಿಸುವ ಮಾದರಿಗಳನ್ನು ಅದು ಮುಂದಿಡುತ್ತಲೇ ಇದೆ.
Comments 6
ಶೇಖರ್ ಗಾಣಿಗೇರ
Jan 6, 2020ಈ ಲೇಖನ ಓದುವುದು ಮಿಸ್ಸಾಗಿತ್ತು. ಮತ್ತೆ upload ಮಾಡಿದ್ದಕ್ಕೆ ಧನ್ಯವಾದಗಳು. ನಟರಾಜ್ ಬೂದಾಳು ಅವರ ವಿಚಾರಗಳು ನಾವು ಶರಣರನ್ನು ಭಿನ್ನವಾಗಿ ನೋಡುವಂತೆ ಪ್ರಚೋದಿಸುತ್ತವೆ.
Shashidhar banavara
Jan 8, 2020ವಚನಗಳ ಮತ್ತೂ ಸರಳೀಕರಣದ ರೂಪಗಳೇ ತತ್ವಪದಗಳು. ಇಬ್ಬರೂ ಅನುಭಾವಿಗಳು, ತತ್ವಪದಕಾರರ ಮೇಲೆ ವಚನಕಾರರ ಪ್ರಭಾವವಿದ್ದಂತೆ, ವಚನಕಾರರ ಮೇಲೆ ತತ್ವಪದಕಾರರ ಪ್ರಭಾವವೂ ಇದ್ದಂತೆ ಕಾಣುತ್ತದೆ.
Vishalakshi Dharawad
Jan 12, 2020ಮುಡಚಟ್ಟಿನೊಳು ಬಂದು, ಮುಟ್ಟೀ ತಟ್ಟೀ ಎನುತೀರಿ
ಮುಡಚಟ್ಟು ಎಲ್ಯಾದ್ಹೇಳಣ್ಣ…. ಹೆಣ್ಣಿನ ಕುರಿತಾದ ದೇಸಿ ಸಂತರ ವಿಚಾರಗಳನ್ನು ತಿಳಿದು ಬಹಳ ಆನಂದವಾಯಿತು.
ಪ್ರಭು ದೇವಟಗಿ
Jan 16, 2020ಶರಣರ, ತತ್ವಪದಕಾರರ ಮತ್ತು ಸೂಫಿ ಸಂತರ ಕುರಿತಾಗಿ ಅನೇಕ ಮಹತ್ತರ ಸಂಗತಿಗಳನ್ನು ತಿಳಿಸಿಕೊಟ್ಟ ನಟರಾಜ್ ಬೂದಾಳು ಶರಣರಿಗೆ ಶರಣಾರ್ಥಿಗಳು. ಎಲ್ಲರೂ ಅವಶ್ಯವಾಗಿ ಓದಲೇ ಬೇಕಾದ ಲೇಖನ.
Girish Mysuru
Jan 20, 2020ಬಯಲು ಬ್ಲಾಗಿನ ಮೂಲಕ ನನಗೆ ಡಾ. ನಟರಾಜ್ ಬೂದಾಳು ಅವರ ಪರಿಚಯವಾಯಿತು. ಅವರ ಪುಸ್ತಕಗಳು ಬಹಳ ವಿದ್ವತ್ಪೂರ್ಣವಾಗಿವೆ, ಅದರಲ್ಲೂ ಪ್ರತ್ಯೇಕ ಬುದ್ದ ಅಲ್ಲಮ ಪುಸ್ತಕ ನನಗೆ ಬಹಳ ಪ್ರಿಯವಾಯಿತು. ಅಕ್ಕಾ, ಉತ್ತಮ ಲೇಖಕರನ್ನು ನನಗೆ ಪರಿಚಯಿಸಿದ್ದಕ್ಕಾಗಿ ಥ್ಯಾಂಕ್ಸ.
Kamalesh Jevergi
Jan 30, 2020ತತ್ವಪದಕಾರರ, ಸೂಫಿಗಳ ಕುರಿತು ಮತ್ತಷ್ಟು ತಿಳಿದುಕೊಳ್ಳಬೇಕು, ಸರ್, ಬಹಳ ವಿಚಾರಗಳನ್ನು ತಿಳಿಸಿಕೊಟ್ಟಿದ್ದಕ್ಕೆ ವಂದನೆಗಳು.