ಯೋಗ – ಶಿವಯೋಗ
ಭಾರತೀಯ ಪರಂಪರೆಯಲ್ಲಿ `ಯೋಗ’ ಪ್ರಖ್ಯಾತವಾಗಿದ್ದರೆ ಬಸವಾದಿ ಶಿವಶರಣರು `ಶಿವಯೋಗ’ ಕುರಿತು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಪತಂಜಲಿ ಮಹರ್ಷಿ ಯೋಗದ ಮೂಲ ಗುರುವಾಗಿದ್ದರೆ ಬಸವಣ್ಣನವರು ಶಿವಯೋಗದ ಪಿತಾಮಹರು.
ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ
ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ
ಮಹಾಬೆಳಗ ಮಾಡಿದಿರಲ್ಲಾ.
ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು
ಭಾವದೊಳಗಿಂಬಿಟ್ಟಿರಲ್ಲಾ,
ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾಬೆಳಗ ತಂದು
ಮನಸಿನೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾಬೆಳಗ ತಂದು
ಕಂಗಳೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾಬೆಳಗ ತಂದು
ಕರಸ್ಥಲದೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ ಬೆಳಗಿ ಹೊಳೆಯುತ್ತಿಪ್ಪ
ಅಖಂಡತೇಜವನೆ ಇಷ್ಟಲಿಂಗವೆಂಬ ದೃಷ್ಟವ ತೋರಿ
ನಿಶ್ಚಯವ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ.
ಅಯ್ಯಾ, ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ
ನೀವು ನಿಮ್ಮ ಮಹತ್ವವ ಹುದುಗಿದಿರಲ್ಲಾ,
ಅಯ್ಯಾ, ಎನ್ನ ಆರಾಧ್ಯ ಕೂಡಲಸಂಗಮದೇವಾ,
ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾ.
ನಮ್ಮಲ್ಲಿ ಆಸ್ತಿಕ ಧರ್ಮಗಳಿರುವ ಹಾಗೆ ನಾಸ್ತಿಕ ಧರ್ಮಗಳೂ ಇವೆ. ಬಸವಾದಿ ಶಿವಶರಣರದು ಆಸ್ತಿಕ ಧರ್ಮವಾಗಿದ್ದರೂ ಇತರ ಆಸ್ತಿಕ ಧರ್ಮಗಳಿಗಿಂತಲೂ ವಿಶಿಷ್ಟವಾದುದು. ಬಸವಣ್ಣನವರಿಂದ ಪ್ರತಿಪಾದಿತವಾದದ್ದೇ `ಲಿಂಗಾಯತ’ ಧರ್ಮ. ಇಲ್ಲಿ ದೇವರನ್ನು ಬಾಹ್ಯ ಗುಡಿಗಳಲ್ಲಿ, ಪ್ರತಿಮೆಗಳಲ್ಲಿ ಕಾಣರು. ಬದಲಾಗಿ ದೇಹವನ್ನೇ ದೇವಾಲಯ ಮಾಡಿಕೊಂಡು ತಮ್ಮ ಅಂತರಂಗದಲ್ಲೇ ಆ ದೇವರನ್ನು ಕಾಣುವರು. ಅದನ್ನು ಕಾಣುವ ಪರಿಯನ್ನು ಮನೋಗ್ನವಾಗಿ ಮೇಲ್ಕಂಡ ವಚನದಲ್ಲಿ ವಿವರಿಸಿದ್ದಾರೆ ಬಸವಣ್ಣನವರು. ದೇವರು ಮಾನವನ ಹೃದಯದಲ್ಲೇ ಅವ್ಯಕ್ತವಾಗಿರುವ ಚಿದ್ಬೆಳಗು. ಆ ಚಿದ್ಬೆಳಗನ್ನೇ ಇಷ್ಟಲಿಂಗ ರೂಪದಲ್ಲಿ ಭಕ್ತ ತನ್ನ ಕರಸ್ಥಲಕ್ಕೆ ಹೇಗೆ ಬರಮಾಡಿಕೊಳ್ಳುವನೆಂಬ ವಿವರಣೆ ಹೃದಯಂಗಮವಾಗಿ ಮೂಡಿಬಂದಿದೆ. ಲಿಂಗಾಯತರು ಹೊರಗೆ ದೇವರನ್ನು ಹುಡುಕುವವರಲ್ಲ. ಅವರ ದೇವರು ಅವರ ಅಂತರಂಗದಲ್ಲೇ ಅಡಗಿದೆ. ಆ ದೇವರನ್ನು ದೀಕ್ಷೆಯ ಮೂಲಕ ಗುರು ಕರುಣಿಸುವನು. ಗುರು ಕರುಣಿಸಿದ ಇಷ್ಟಲಿಂಗದ ಅನುಸಂಧಾನ ಮಾಡುವುದೇ ಶಿವಯೋಗ. ಶಿವಯೋಗ ಅಪ್ಪಿಕೊಂಡ ಶರಣನಿಗೆ ಬೇರೆ ಯೋಗದ ಹಂಗಿಲ್ಲ. ಇದನ್ನು ಇನ್ನೂ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ ಶಿವಯೋಗಿ ಸಿದ್ಧರಾಮೇಶ್ವರರು.
ಯೋಗದ ನೆಲೆಯನರಿದೆನೆಂಬಾತ
ಲಿಂಗಾರ್ಚನೆಯ ಮಾಡಯ್ಯ.
ಮನತ್ರಯ ಮದತ್ರಯ ಮಲತ್ರಯಂಗಳ ಕಳೆದು
ತನುತ್ರಯಂಗಳನೇಕೀಭವಿಸಿ
ಲಿಂಗತ್ರಯದಲ್ಲಿ ಶಬ್ದಮುಗ್ದನಾಗಿ
ಲಿಂಗಾರ್ಚನೆಯ ಮಾಡಯ್ಯಾ.
ಅದು ನಿಸ್ತಾರ ಸಮಸ್ತ ಯೋಗಿಗಳ ಮೀರಿದದು
ನಿಮ್ಮ ಕೂಡಿ ಬೆರಸುವ ಶಿವಯೋಗವಿಂತುಟಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
ಪತಂಜಲಿ ಮಹರ್ಷಿಯವರ ಯೋಗದ ನೆಲೆ ಕಲೆಗಳನ್ನೇ ವೈಭವೀಕರಿಸುವವರಿಗೆ ಸಿದ್ಧರಾಮೇಶ್ವರರು ಹೇಳುವುದು: ಆ ಯೋಗದ ಬದಲು ಇಷ್ಟಲಿಂಗಾರ್ಚನೆಯನ್ನು ಮಾಡಬೇಕು ಎಂದು. ಮನತ್ರಯ, ಮದತ್ರಯ, ಮಲತ್ರಯಗಳು ನಿವಾರಣೆಯಾಗಿ, ತನುತ್ರಯಗಳು ಒಂದಾಗಿ, ಲಿಂಗತ್ರಯದಲ್ಲಿ ಶಬ್ದಮುಗ್ಧನಾಗಿ ಲಿಂಗಾರ್ಚನೆ ಮಾಡುವುದು ಸಮಸ್ತ ಯೋಗವನ್ನೂ, ಯೋಗಿಗಳನ್ನೂ ಮೀರಿದ್ದು. ಅಂಥ ಶ್ರೇಷ್ಠತೆ ಶಿವಯೋಗದ್ದು ಎಂದು ವೈಜ್ಞಾನಿಕವಾಗಿ ಖಚಿತಪಡಿಸಿದ್ದಾರೆ. ಸುಬುದ್ಧಿ, ನಿಃಕಾಮ, ಅನುಕೂಲೆ ಇವು ಮನತ್ರಯಗಳು. ತನು, ಮನ, ಧನಗಳು ಮದತ್ರಯಗಳು. ಆಣವ, ಮಾಯಾ, ಕಾರ್ಮಿಕ ಇವು ಮಲತ್ರಯಗಳು. ಮನುಷ್ಯ ಇವೆಲ್ಲವುಗಳ ಉರುಳಿನಿಂದ ಹೊರಬರಬೇಕು. ಸ್ಥೂಲ ತನು, ಸೂಕ್ಷ್ಮ ತನು, ಕಾರಣ ತನುಗಳೇ ತನುತ್ರಯಗಳು. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಇವೇ ಲಿಂಗತ್ರಯಗಳು. ಸಾಧಕ ಇಷ್ಟಲಿಂಗಾರಾಧನೆ ಮಾಡುತ್ತ ಶಿವಯೋಗಿಯಾಗುವ ವಿಧಾನ ಇಲ್ಲಿ ಅಡಕವಾಗಿದೆ. ಶಿವಯೋಗ ಸಾಧಕನ ಬದುಕು ಹೇಗಿರಬೇಕೆಂಬುದನ್ನು ಚೆನ್ನಬಸವಣ್ಣನವರು ವಿವರಿಸುವರು.
ಕರಸ್ಥಲದಲ್ಲಿ ಲಿಂಗವ ಧರಿಸಿ
ಅನ್ಯದೈವಕ್ಕೆ ತಲೆವಾಗದಾತನ ಲಿಂಗವಂತನೆಂಬೆನಯ್ಯಾ.
ಕರಸ್ಥಲದಲ್ಲಿ ಲಿಂಗವ ಧರಿಸಿ ಭವಿಸಂಗವ ಮಾಡದಾತನ
ಲಿಂಗವಂತನೆಂಬೆನಯ್ಯಾ.
ಕರಸ್ಥಲದಲ್ಲಿ ಲಿಂಗವ ಧರಿಸಿದಾತ ಜಡಶೈವರ ಹೊದ್ದಲಾಗದು,
ಶೈವರು ಹೇಳಿದ ಶಾಸ್ತ್ರವ ಓದಲಾಗದು,
ಅನ್ಯಮಂತ್ರ ಅನ್ಯಜಪಮಾಲಿಕೆಯ ಮಾಡಲಾಗದು,
ಲಿಂಗಬಾಹ್ಯ ಸತಿಸುತರ ಸೋಂಕಲಾಗದು.
ಕರಸ್ಥಲದಲ್ಲಿ ಲಿಂಗವ ಧರಿಸಿದಾತ ಉದಯಾಸ್ತಮಾನವೆನ್ನದೆ
ಶಿವಪೂಜೆ ಶಿವಮಂತ್ರ ಶಿವಾರ್ಪಣ ಶಿವಶಾಸ್ತ್ರ
ಶಿವಯೋಗದಲ್ಲಿರುವಾತನೆ ಲಿಂಗವಂತನೆಂಬೆನಯ್ಯಾ.
ಇದಮೀರಿ; ಕರಸ್ಥಲದಲ್ಲಿ ಲಿಂಗವ ಧರಿಸಿ
ತನ್ನ ಮನೆಯಲ್ಲಿ ಅನ್ಯದೈವ ಭವಿಮಿಶ್ರ ಅನ್ಯಬೋಧೆ
ಭವಿಶಾಸ್ತ್ರವುಳ್ಳಾತನ ಶುದ್ಧಭವಿಯೆಂಬೆನಯ್ಯಾ.
ಅದೆಂತೆಂದಡೆ;
“ಅಭಕ್ತಜನಸಂಗಶ್ಚ ಆಮಂತ್ರಂಚ ಅನಾಗಮಃ
ಅನ್ಯದೈವಪರಿತ್ಯಾಗೋ ಲಿಂಗಭಕ್ತಸ್ಯ ಲಕ್ಷಣಂ
ಶಿವಸ್ಯ ಶಿವಮಂತ್ರಸ್ಯ ಶಿವಾಗಮಸ್ಯ ಪೂಜನಂ
ಶಿವಶೇಷಶೀಲಸಂಬಂಧೋ ಲಿಂಗಭಕ್ತಸ್ಯ ಲಕ್ಷಣಂ
ಲಿಂಗಧಾರೀ ಸುಭಕ್ತಶ್ಚ ಲಿಂಗಬಾಹ್ಯಸತೀಸುತಃ
ಅಲಿಂಗಿನೀ ಚುಂಬಕಶ್ಚ ರೌರವಂ ನರಕಂ ವ್ರಜೇತ್ ಎಂದುದಾಗಿ
ಗುರುವಾಕ್ಯವ ಮೀರಿ ನಡೆವ ಮಹಾಪಾತಕರ ಮುಖವ ತೋರದಿರಾ,
ಸೆರೆಗೊಡ್ಡಿ ಬೇಡಿಕೊಂಬೆ, ದಯದಿಂದ ನೋಡಿ ರಕ್ಷಿಸು
ಕೂಡಲಚೆನ್ನಸಂಗಮದೇವಾ.
ಲಿಂಗವಂತರಾಗುವುದು ಅಂದುಕೊಂಡಷ್ಟು ಸುಲಭವಿಲ್ಲ. ನಮ್ಮಲ್ಲಿ ವೈದಿಕ ಧಾರ್ಮಿಕಾಚರಣೆಗಳು ಪರಂಪರಾಗತವಾಗಿ ಬೇರು ಬಿಟ್ಟುಕೊಂಡಿವೆ. ಅವುಗಳನ್ನು ಅಷ್ಟು ಸುಲಭವಾಗಿ ಕಿತ್ತೆಸೆಯುವುದು, ಅಂಥ ಆಚರಣೆಗಳಿಂದ ಹೊರಬರುವುದು ಸಾಮಾನ್ಯರಿಗೆ ಇರಲಿ; ಶುದ್ಧ ಬಸವತತ್ವ ಹೇಳುವ ಮಠಾಧೀಶರಿಂದಲೇ ಆಗುತ್ತಿಲ್ಲ. ಹಾಗಾಗಿ ಅವರು ಇಷ್ಟಲಿಂಗ ಧರಿಸಿಯೂ ಬೇರೆ ಬೇರೆ ದೇವಾಲಯಗಳ ಉದ್ಘಾಟನೆ, ಕಳಶಾರೋಹಣ, ಮೂರ್ತಿ ಪ್ರತಿಷ್ಠಾಪನೆ, ಹೋಮಾದಿ ಕ್ರಿಯೆಗಳಲ್ಲಿ ಅನಿವಾರ್ಯವಾಗಿಯೋ, ಸಂತೋಷದಿಂದಲೋ ಭಾಗಿಯಾಗುವರು. ಚೆನ್ನಬಸವಣ್ಣನವರ ದೃಷ್ಟಿಯಲ್ಲಿ ಅವರು ಲಿಂಗವಂತರೇ ಅಲ್ಲ. ಲಿಂಗಪೂಜಕ ಅನಾಚಾರಿಗಳ ಸಂಗ ಮಾಡಬಾರದು. ಶೈವ ಆಚರಣೆಗಳನ್ನು ನಿರಾಕರಿಸಬೇಕು. ಶಾಸ್ತ್ರಗಳ ಸಹವಾಸದಿಂದ ದೂರವಿರಬೇಕು. ಶಿವಪಂಚಾಕ್ಷರಿ ಮಂತ್ರವನ್ನಲ್ಲದೆ ಮತ್ತೇನನ್ನೂ ಪಠಿಸಬಾರದು. ನಿತ್ಯವೂ ಶಿವಪೂಜೆ, ಶಿವಮಂತ್ರ, ಶಿವಾರ್ಪಣ, ಶಿವಶಾಸ್ತ್ರ, ಶಿವಯೋಗದಲ್ಲಿರಬೇಕು. ಇಲ್ಲದಿದ್ದರೆ ಅವರನ್ನು ಶುದ್ಧ ಅನಾಚಾರಿಗಳೆನ್ನುವರು. ಅಂಥವರ ಮುಖವನ್ನು ಎನಗೆ ತೋರದಿರು ಎಂದು ಪ್ರಾರ್ಥಿಸುವರು. ಅವರನ್ನು ಮಹಾಪಾತಕರು ಎನ್ನುತ್ತಲೇ ಅಂಥವರಿಂದ ನನ್ನನ್ನು ರಕ್ಷಿಸು ಎಂದು ಬೇಡಿಕೊಳ್ಳುವರು. ಇಷ್ಟಲಿಂಗಧಾರಿಗಳು ಬಾಹ್ಯವಾಗಿ ಯಾವ ಅಭಿಷೇಕ, ಹೋಮ, ಪೂಜೆ ಇತ್ಯಾದಿಗಳನ್ನು ಮಾಡಬಾರದು. ಇದೊಂದು ತತ್ವ ಜಾರಿಯಲ್ಲಿ ಬಂದಿದ್ದರೆ ನಿಜಕ್ಕೂ ನಮ್ಮ ನಾಡು ನೈಜ ಧರ್ಮದ ನಾಡಾಗುತ್ತಿತ್ತು.
ಇತ್ತೀಚೆಗೆ ವಾಟ್ಸಪ್‍ನಲ್ಲಿ ಗುಜರಾತನ ದೇವಾಲಯದ ದೇವಿಯ ಅಭಿಷೇಕಕ್ಕೆ 16 ಕೊಟಿ ಬೆಲೆ ಬಾಳುವ 5, 5 ಲಕ್ಷ ಕೆ ಜಿ ತುಪ್ಪವನ್ನು ಬಳಸಿದ್ದಾರಂತೆ. ಇದು ಯಾವ ಪುರುಷಾರ್ಥಕ್ಕಾಗಿ? ಹಾಗೆ ನೋಡಿದರೆ ನಮ್ಮಲ್ಲಿ ಅನೇಕ ಜನರು ಮತ್ತು ಮಕ್ಕಳು ತುಪ್ಪದ ಮುಖವನ್ನೇ ನೋಡಿರಲಾರರು. ಅವರಿಗೆ ಹೊಟ್ಟೆತುಂಬ ಊಟ ಸಿಗುವುದೇ ದುಸ್ತರವಾಗಿರುವಾಗ ತುಪ್ಪ ಬಳಸುವುದು ದೂರದ ಮಾತು. ಅಭಿಷೇಕಕ್ಕೆ ಬಳಸಿದ ತುಪ್ಪವನ್ನು ಬಡಬಗ್ಗರಿಗೆ ಹಂಚಿದ್ದರೆ ನಿಜಕ್ಕೂ ದೇವರು ತೃಪ್ತನಾಗಿ ಸತ್ಫಲ ನೀಡಲು ಸಾಧ್ಯವಿತ್ತು. ಆದರೆ ಈ ಬಗ್ಗೆ ನಮ್ಮ ಜನರಿಗೆ ಅರಿವೇ ಇಲ್ಲ. ಮಳೆ ಹೋಯ್ತೆಂದು ಬೇರೆ ಬೇರೆ ಊರುಗಳ ಕಂಡ ಕಂಡ ದೇವರುಗಳನ್ನು ಕೆರೆಯಲ್ಲಿ ಕೂರಿಸಿ ವಾರಗಟ್ಟಲೆ ಪೂಜೆ ಮಾಡಿ ಜನರಿಗೆ ನಿತ್ಯ ದಾಸೋಹ ಮಾಡುವ ಅಜ್ಞಾನಿಗಳಿಗೇನೂ ನಮ್ಮಲ್ಲಿ ಈ ಕಾಲದಲ್ಲೂ ಕೊರತೆ ಇಲ್ಲ. ಮಳೆ ಬರಲಿ ಎಂದು ಊರಿನ, ಊರ ಹೊರಗಿನ ಎಲ್ಲ ಕಾಡುವ, ಬೇಡುವ ದೇವರುಗಳಿಗೆ ಅಭಿಷೇಕ ಮಾಡುವವರೂ ಇದ್ದಾರೆ. ಇದರ ಬದಲು ಸಾಲುಮರದ ತಿಮ್ಮಕ್ಕನಂತೆ ಹತ್ತಾರು ಗಿಡಗಳನ್ನಾದರೂ ನೆಟ್ಟು ಬೆಳೆಸೋಣ ಎನ್ನುವ ವಿವೇಕ ಮೂಡಿ ಕಾರ್ಯೋನ್ಮುಖರಾದರೆ ಮಳೆ ತನ್ನಿಂದ ತಾನೆ ಬರುವುದು. ಆದರೆ ಗಿಡ-ಮರಗಳನ್ನು ಕಡಿಯಲು ತೋರುವ ಉತ್ಸಾಹವನ್ನು ಬೆಳೆಸಲು ತೋರದಿರುವುದೇ ಇಲ್ಲಿಯ ದುರಂತ.
ನಿಜಕ್ಕೂ ದೈವಕೃಪೆ ಬೇಕೆನ್ನುವವರು ಮುಖ್ಯವಾಗಿ ಮಾಡಬೇಕಾದ್ದು ಕೆರೆ ಕಟ್ಟೆಗಳ ಹೂಳೆತ್ತುವ, ಖಾಲಿ ಸ್ಥಳದಲ್ಲಿ ಗಿಡಗಳನ್ನು ಬೆಳೆಸುವ, ಗಣಿಗಾರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವ, ವಾಯುಮಾಲಿನ್ಯ ನಿವಾರಣೆ ಮಾಡುವ ಪುಣ್ಯದ ಕಾರ್ಯವನ್ನು. ಇಂಥ ಯೋಚನೆ ಜನರಿಗೆ ಬಂದು ಅದರಂತೆ ಕ್ರಿಯಾಶೀಲರಾದರೆ ಮಳೆ ತನ್ನಷ್ಟಕ್ಕೆ ತಾನೇ ಸುರಿದು ಎಲ್ಲ ಜೀವಜಂತುಗಳು ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಗುವುದು. ದೇವರು ಈ ಭೂಮಿ, ಮಳೆ, ಬೆಳೆ, ಗಾಳಿ, ಬೆಳಕು ಕೊಡದಿದ್ದರೆ ನಾವು ಸುಖವಾಗಿರಲು ಖಂಡಿತ ಸಾಧ್ಯವಿರಲಿಲ್ಲ. ಅದನ್ನೇ ತಮ್ಮ ವಚನದಲ್ಲಿ ಪ್ರಸ್ತಾಪಿಸುವ ದಾಸಿಮಯ್ಯನವರು `ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ’ ಎಂದು ಮೂದಲಿಸುವರು. ಈ ನೆಲೆಯಲ್ಲಿ ಜನರು ವಿವೇಕಿಗಳಾಗಿ ಸ್ಥಾವರ ಪೂಜೆಗಾಗಿ ಮಾಡುವ ವೆಚ್ಚ ಮತ್ತು ಶ್ರಮದ ಉಳಿತಾಯ ಮಾಡಿ ತಮ್ಮ ದೇಹವನ್ನೇ ದೇವಾಲಯ ಮಾಡಿಕೊಂಡು ನಿಜಾರ್ಥದಲ್ಲಿ ಶಿವಯೋಗಿಗಳಾಗುವ ಮನಸ್ಸು ಮಾಡಬೇಕು. ಆಗ ಎಲ್ಲಿಯೂ ಗುಡಿ ಕಟ್ಟಬೇಕಾಗಿಲ್ಲ. ತೀರ್ಥಕ್ಷೇತ್ರಗಳನ್ನು ಸುತ್ತಬೇಕಾಗಿಲ್ಲ. ಕಿಚ್ಚು ದೈವವೆಂದು ನಂಬಿ ಅದಕ್ಕೆ ಹವಿಸ್ಸು ಅರ್ಪಿಸಬೇಕಾಗಿಲ್ಲ. ಪೂಜಾರಿ ಪುರೋಹಿತರ ದಾಸರಾಗಬೇಕಿಲ್ಲ. `ಶಿರ ಹೊನ್ನ ಕಳಸ’ ಎನ್ನುವ ಬಸವಣ್ಣನವರ ವಾಣಿಯನ್ನರಿತು ಸುಜ್ಞಾನಿಗಳಾಗಿ ಬಾಳುವುದನ್ನು ರೂಢಿಸಿಕೊಂಡರೆ ಬದುಕು ಹರ್ಷದಾಯಕವಾಗುವುದು. ಅದನ್ನೇ ಹಾವಿನಹಾಳ ಕಲ್ಲಯ್ಯನವರು ತಮ್ಮ ವಚನದಲ್ಲಿ ಸೂಕ್ಷ್ಮವಾಗಿ ಹೇಳುತ್ತಾರೆ:
ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ,
ಪರಿಣಾಮವೆ ತಪ, ಸಮತೆಯೆಂಬುದೆ ಯೋಗದಾಗು ನೋಡಾ.
ಈಸುವನರಿಯದೆ ವೇಷವ ಧರಿಸಿ, ಲೋಚು ಬೋಳಾದಡೆ
ಮಹಾಲಿಂಗ ಕಲ್ಲೇಶ್ವರದೇವರು ನಗುವರು.
`ಸಮತೆ ಸಮಾಧಾನ ನೆಲೆಗೊಳ್ಳದಿದ್ದಡೆ ಆ ಯೋಗ ಅಜ್ಞಾನದಾಗು’ ಎಂದು ಹಾವಿನಹಾಳ ಕಲ್ಲಯ್ಯನವರೇ ಮತ್ತೊಂದು ವಚನದಲ್ಲಿ ಹೇಳಿದ್ದಾರೆ. ಇಂದಂತೂ `ಯೋಗ’ಕ್ಕೆ ಎಲ್ಲಿಲ್ಲದ ಮಾರ್ಕೇಟ್ ಇದೆ. ವಿಶ್ವಯೋಗ ದಿನಾಚರಣೆ ಜಾರಿಗೆ ಬಂದ ಮೇಲಂತೂ ಅನೇಕರು ತಾವು ಯೋಗಿಗಳು ಎಂದು ಸೋಗು ಹಾಕಿ ಸುಲಿಗೆ ಮಾಡುವುದನ್ನೂ ಕಾಣಬಹುದಾಗಿದೆ. ಅದನ್ನೇ ಕಲ್ಲಯ್ಯನವರು ತಮ್ಮ ವಚನದಲ್ಲಿ ವಿಡಂಬಿಸಿದ್ದಾರೆ. ಯೋಗ ಭಾರತೀಯ ಪುರಾತನ ಆಧ್ಯಾತ್ಮಿಕ ವಿದ್ಯೆ ನಿಜ. ಯೋಗ ಎಂದಾಕ್ಷಣ ಕೇವಲ ಹತ್ತಾರು ಆಸನಗಳ ಪ್ರವೀಣರಾಗುವುದಲ್ಲ. ನಿಜವಾದ ಯೋಗ ಚಿತ್ತ ವೃತ್ತಿಗಳನ್ನು ದಮನಗೊಳಿಸಿ ಆನಂದ ಸಾಗರದಲ್ಲಿ ಓಲಾಡುವಂತೆ ಮಾಡುವುದು. ಮಹರ್ಷಿ ಪತಂಜಲಿಯವರು ಹೇಳಿದ ಯೋಗ ಇಂದು ಮರೆಯಾಗಿ ಆಸನಗಳೇ ಯೋಗ ಎನ್ನುವಂತಾಗಿದೆ. ನಿಜವಾದ ಯೋಗ ಬದುಕಿಗೆ ಭರವಸೆ ತುಂಬಬೇಕು. ಜೀವನ ಉಲ್ಲಾಸಮಯವಾಗಿರುವಂತೆ ಪ್ರೇರೇಪಿಸಬೇಕು. ಆದರೆ ಕೇವಲ ದೈಹಿಕ ತೊಂದರೆಗಳ ನಿವಾರಣೆಗೆ ಯೋಗ ಎನ್ನುವಂತಾಗಿರುವುದು ವಿಷಾದನೀಯ.
ಮನುಷ್ಯ ಇಂದಿನ ದಿನಮಾನಗಳಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ರೋಗಗಳಿಂದ ನರಳುತ್ತಿದ್ದಾನೆ. ಅವುಗಳಿಗೆ ನಿಜವಾದ ಔಷಧಿ ಎಂದರೆ ಬದುಕಿನ ವಿಧಾನದಲ್ಲಿ ಬದಲಾವಣೆ ತಂದುಕೊಳ್ಳುವುದು. ದೇಹ, ಬುದ್ಧಿ, ಮನಸ್ಸುಗಳ ಮೇಲೆ ಹತೋಟಿ ಸಾಧಿಸುವುದು. ಇದು ಯೋಗದಿಂದ ಸುಲಭ ಸಾಧ್ಯವೆನ್ನುವುದು ಅನೇಕ ಯೋಗಿಗಳ ಅಭಿಪ್ರಾಯ. ಯೋಗ ಎಂದರೆ ಕೇವಲ ಆಸನಗಳಲ್ಲ. ಅಷ್ಟಾಂಗ ಯೋಗದಲ್ಲಿ ಆಸನವೂ ಒಂದು ಅಷ್ಟೇ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ, ಸಮಾಧಿ ಇವೆಲ್ಲವೂ ಸೇರಿ ಯೋಗ. ಯೋಗ ಎಂದರೆ ಸೇರುವುದು, ಕೂಡುವುದು, ಒಂದಾಗುವುದು. ಶರಣರ ಪರಿಭಾಷೆಯಂತೆ ಲಿಂಗಾಂಗ ಸಾಮರಸ್ಯ ಪಡೆಯುವುದು. ತಾನೇ ದೇವರು, ದೇವರೇ ತಾನು ಎನ್ನುವ ಅವಿನಾಭಾವ ತಳೆಯುವುದು. ಇದಕ್ಕೆ ಬೇಕಾದ ನಿಯಮಗಳು ಹತ್ತು ಹಲವು. ಅವುಗಳನ್ನೇ ಅಷ್ಟಾಂಗ ಯೋಗದಲ್ಲಿ ಹೇಳಲಾಗಿದೆ. `ಯಮ’ ಒತ್ತು ಕೊಡುವುದು ಇಂದ್ರಿಯಗಳ ನಿಗ್ರಹಕ್ಕೆ. ಸತ್ಯ, ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎನ್ನುವ ಮೌಲ್ಯಗಳು `ಯಮ’ ತತ್ವದಲ್ಲಿ ಸೇರಿವೆ.
ಯೋಗ ಸಾಧಕನಿಗೆ `ಯಮ’ ಮೊದಲ ಮೆಟ್ಟಿಲು. ಆತ ಜೀವನದುದ್ದಕ್ಕೂ ಸತ್ಯದ ದಾರಿಯಲ್ಲೇ ಸಾಗಬೇಕು. ಎಂಥ ಸಂದರ್ಭದಲ್ಲೂ ಸತ್ಯವನ್ನು ಬಿಟ್ಟುಕೊಡಬಾರದು. ಹರಿಶ್ಚಂದ್ರ ಸತ್ಯಕ್ಕೆ ಹೆಸರಾದುದು ಅವನ ಸತ್ಯ ಪರಿಪಾಲನೆಯಿಂದ. ಅದೇ ತೆರನಾಗಿ ಯೋಗ ಸಾಧಕ ಸತ್ಯದ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಸತ್ಯಪರಿಪಾಲಕ ಎಂದೂ ಹಿಂಸೆಗೆ ಎಡೆಗೊಡುವುದಿಲ್ಲ. ದಯವೇ ಧರ್ಮದ ಮೂಲ ಎಂದು ಯಾವಾಗಲೂ ದಯಾಪರನಾಗಿರುವುದೆ `ಅಹಿಂಸೆ’. ಅವನು ದೈಹಿಕವಾಗಿ, ಮಾನಸಿಕವಾಗಿ ಸಹ ಕದಿಯದಿರುವುದೇ `ಅಸ್ತೇಯ’. ಇವುಗಳ ಜೊತೆ ಬಹುಮುಖ್ಯವಾದುದು ಇಂದ್ರಿಯ ನಿಗ್ರಹ. ಅದೇ `ಬ್ರಹ್ಮಚರ್ಯ’. ಇಂದ್ರಿಯಗಳ ಚೇಷ್ಠೆಗೆ ಮನವೇ ಬೀಜ. ಹಾಗಾಗಿ ಮನಸ್ಸಿನ ಮೇಲೆ ಮೊದಲು ಬ್ರಹ್ಮಚರ್ಯ ಸಾಧಿಸಬೇಕು ಎನ್ನುವಳು ಮಹಾದೇವಿಯಕ್ಕ. `ಅಪರಿಗ್ರಹ’ ಸಹ ಯೋಗ ಜೀವನಕ್ಕೆ ಬೇಕೇ ಬೇಕು. ಅಪರಿಗ್ರಹ ಎಂದರೆ ಇಂದು ನಾಳೆಗೆ, ಮಡದಿ ಮಕ್ಕಳಿಗೆ ಎಂದು ಕೂಡಿಡದಿರುವುದು. ಅಂದರೆ ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು. ಬಸವಣ್ಣನವರು ಸಪ್ತಶೀಲಗಳ ಮೂಲಕ ಯಮ ತತ್ವದಲ್ಲಿ ಬರುವ ಅಂಶಗಳನ್ನು ತುಂಬಾ ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾರೆ. `ಸದಾಚಾರ ಸಂಪನ್ನ’ ಎಂದು ಇದನ್ನೇ ವಚನಕಾರರು ಹೇಳಿರುವುದು.
ಅಷ್ಟಾಂಗ ಯೋಗದಲ್ಲಿ ಎರಡನೆಯದು ನಿಯಮ. ಜೀವನಕ್ಕೆ ಬೇಕಾದ ಕಟ್ಟುಪಾಡುಗಳನ್ನು ತನಗೆ ತಾನೇ ವಿಧಿಸಿಕೊಳ್ಳುವುದು. ಯಮದಲ್ಲಿಯಂತೆಯೇ ನಿಯಮದಲ್ಲೂ ಐದು ತತ್ವಗಳಿವೆ. ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ. ಯಮದಲ್ಲಿ ನೈತಿಕ ಶಿಕ್ಷಣಕ್ಕೆ ಒತ್ತು ನೀಡಿದರೆ ನಿಯಮದಲ್ಲಿ ಆಧ್ಯಾತ್ಮಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಯೋಗ ಸಾಧಕ ಯಮದಲ್ಲಿ ಹೇಳಿರುವ ನೈತಿಕ ಬದುಕನ್ನು ನಡೆಸುತ್ತ ಅಂತರಂಗ ಮತ್ತು ಬಹಿರಂಗ ಶುದ್ಧಿಯನ್ನು ಕಾಯ್ದುಕೊಳ್ಳುವುದೇ `ಶೌಚ’. ಅತಿಯಾದ ಆಸೆಯನ್ನು ಬಿಟ್ಟು ಇದ್ದುದರಲ್ಲೇ ತೃಪ್ತಿ ಪಡೆಯುವುದೇ `ಸಂತೋಷ’. ಬದುಕಿನಲ್ಲಿ ಬರಬಹುದಾದ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವುದೇ `ತಪಸ್ಸು’. ಸದ್ವಿಚಾರಗಳನ್ನು ಪ್ರತಿಪಾದಿಸುವ ಧರ್ಮಗ್ರಂಥಗಳ ಅಧ್ಯಯನ ಮಾಡುತ್ತ ಆದರ್ಶದ ದಾರಿಯಲ್ಲಿ ನಡೆಯುವುದೇ `ಸ್ವಾಧ್ಯಾಯ’. ಇವೆಲ್ಲವುಗಳಿಂದ ಶಿವಸಾಕ್ಷಾತ್ಕಾರ ಸಾಧ್ಯವಾಗುವುದು. ಸರ್ವವನ್ನೂ ಶಿವನಿಗೆ ಸಮರ್ಪಿಸುವುದೇ `ಈಶ್ವರ ಪ್ರಣಿದಾನ’. ಹೀಗೆ ಯೋಗ ಮಾರ್ಗದಲ್ಲಿ ನಡೆಯುವ ವ್ಯಕ್ತಿ ಯಮ, ನಿಯಮಗಳನ್ನು ತನ್ನ ಬದುಕಿನ ತಳಹದಿಯನ್ನಾಗಿ ಮಾಡಿಕೊಂಡಾಗಲೇ ಅವನ ಯೋಗ ಜೀವನಕ್ಕೆ ದಾರಿ ತೆರೆದುಕೊಳ್ಳುವುದು.
ದೇಹವನ್ನು ಸುಸ್ಥಿತಿಯಲ್ಲಿಡಲು ಸ್ಥಿರವಾದ ಭಂಗಿಯನ್ನು ಅನುಸರಿಸುವುದೇ `ಆಸನ’. ದೈಹಿಕ ವ್ಯಾಯಾಮಕ್ಕಾಗಿಯೂ ಆಸನಗಳನ್ನು ಹಾಕುವ ಪದ್ಧತಿ ಇದೆ. ಆಸನಗಳಿಂದ ದೇಹದ ಸಮತೋಲನ ಕಾಯ್ದುಕೊಳ್ಳಲು, ರೋಗಮುಕ್ತವಾಗಲು ಸಾಧ್ಯ. ವಜ್ರಾಸನ, ಸೂರ್ಯ ನಮಸ್ಕಾರ, ಪದ್ಮಾಸನ, ಶೀರ್ಷಾಸನ, ಹಲಾಸನ, ಊಷ್ಟ್ರಾಸನ, ಮಕರಾಸನ ಹೀಗೆ ಹಲವಾರು ಆಸನಗಳಿವೆ. ಬಹುತೇಕ ಆಸನಗಳನ್ನು ಪ್ರಾಣಿ, ಪಕ್ಷಿ, ಗಿಡಮರಗಳನ್ನು ನೋಡಿ ಕಲಿತಿರಬೇಕು. ಹಾಗಾಗಿ ಆಸನಗಳಿಗೆ ವೃಕ್ಷಾಸನ, ಭುಜಂಗಾಸನ, ಊಷ್ಟ್ರಾಸನ, ಮಕರಾಸನ ಎಂದೆಲ್ಲ ಹೆಸರಿಡಲಾಗಿದೆ. ಆಸನಗಳಿಂದ ಮಂಡಿನೋವು, ಸೊಂಟನೋವು, ಕತ್ತು ನೋವು, ಕೀಲು ನೋವು ಇತ್ಯಾದಿಗಳನ್ನು ಗುಣಪಡಿಸಿಕೊಳ್ಳುವರು. ಹಾಗಂತ ಬರೀ ಆಸನಗಳೇ ಯೋಗವಲ್ಲ ಎನ್ನುವುದನ್ನು ಮರೆಯಬಾರದು.
ಆಸನಗಳ ನಂತರ ಬರುವುದು ಪ್ರಾಣಾಯಾಮ. ಅಂದರೆ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವುದು. ಉಸಿರನ್ನು ಮೂಗಿನ ಮೂಲಕ ತೆಗೆದುಕೊಳ್ಳುವುದು, ಒಳಗೆ ಹಿಡಿದಿಡುವುದು, ಹೊರಗೆ ಬಿಡುವುದು ಈ ಕ್ರಿಯೆಯೇ ಪ್ರಾಣಾಯಾಮ. ಇದಕ್ಕೆ ಪೂರಕ, ಕುಂಭಕ, ರೇಚಕ ಎನ್ನುವರು. ಸರಾಗವಾಗಿ ಉಸಿರಾಟ ಮಾಡುತ್ತಿದ್ದರೆ ಆರೋಗ್ಯ ಸಮಸ್ಥಿತಿಯಲ್ಲಿರುವುದು. ರೋಗಬಾಧೆ ಕಡಿಮೆ ಆಗುವುದು. ಗಂಟಲು ಮತ್ತು ಮೂಗಿನ ತೊಂದರೆ ನಿವಾರಿಸಿಕೊಳ್ಳಲು ಪ್ರಾಣಾಯಾಮ ತುಂಬಾ ಸಹಕಾರಿ. ಸರಾಗವಾಗಿ ಉಸಿರಾಟ ನಡೆಯದಿದ್ದಾಗಲೇ ಮನುಷ್ಯ ತೊಂದರೆಗೀಡಾಗುವನು. ಹಾಗಾಗಿ ಮೂಗಿನ ಎರಡೂ ಹೊರಳೆಗಳಿಂದ ಉಸಿರಾಟ ತೆಗೆದುಕೊಳ್ಳುವ, ಬಿಡುವ ಕ್ರಿಯೆ ಸರಾಗವಾಗಿ ನಡೆಯುತ್ತಿರಬೇಕು. ಕೆಲವರು ಮಲಗಿದಾಗ ಬಾಯಿಂದ ಇಲ್ಲವೇ ಒಂದೇ ಮೂಗಿನ ಹೊರಳೆಯಿಂದ ಉಸಿರಾಟ ನಡೆಸುತ್ತಿದ್ದರೂ ಅದು ಅವರಿಗೆ ಗೊತ್ತೇ ಇರುವುದಿಲ್ಲ. ಅದು ಕಾರಣವಾಗಿಯೇ ತಲೆನೋವು, ಗಂಟಲನೋವು ಇತ್ಯಾದಿ ಅನುಭವಿಸುವರು. ಪ್ರತಿದಿನ ಪ್ರಾಣಾಯಾಮ ಮಾಡುತ್ತಿದ್ದರೆ ಉಸಿರಾಟ ಏರುಪೇರಾಗದೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಿ ನೆಮ್ಮದಿಯ ಜೀವನ ನಡೆಸಲು ಸಹಾಯವಾಗುವುದು. ಪ್ರಾಣಾಯಾಮದಲ್ಲೂ ಹಲವು ವಿಧಗಳಿದ್ದು ಅವುಗಳನ್ನು ಅರ್ಹ ಗುರುವಿನ ಮೂಲಕ ಸಾಧನೆ ಮಾಡಬೇಕು ಎನ್ನುವರು.
ಇಂದ್ರಿಯಗಳ ಬಹಿರ್ಮುಖತೆಯನ್ನು ನಿಯಂತ್ರಣಗೊಳಿಸಿ ಅಂತರ್ಮುಖಿಯಾಗಿಸುವುದು `ಪ್ರತ್ಯಾಹಾರ’. ಯಾವುದಾದರೂ ಆಂತರಿಕ ವಸ್ತುವಿನ ಮೇಲೆ (ನಾಭಿ, ಹೃದಯ ಇತ್ಯಾದಿ) ಚಿತ್ತವನ್ನು ಕೇಂದ್ರೀಕರಿಸುವುದು `ಧಾರಣಾ’. ಏಕಾಗ್ರ ಚಿತ್ರದಿಂದ ಧ್ಯಾನಿಸುವುದೇ `ಧ್ಯಾನ’. ಚಿತ್ತದ ಏಕಾಗ್ರತೆಯ ಕೊನೆಯ ಹಂತವೇ `ಸಮಾಧಿ’. ಮನಸ್ಸು ಧ್ಯಾನಿಸುವ ವಸ್ತುವಿನಲ್ಲಿ ಲೀನವಾಗುವುದು. ಬಾಹ್ಯ ಜಗತ್ತಿನ ಅರಿವಿಲ್ಲದೆ ತನ್ನೊಳಗೆ ತಾನು ಅಮಿತಾನಂದ ಅನುಭವಿಸುವುದು. ಇಷ್ಟೆಲ್ಲ ಯೋಗದ ವಿಧಾನಗಳನ್ನು ಅನುಸರಿಸುವ ಬದಲು ಶಿವಯೋಗ ಮಾಡಿದರೆ ಎಲ್ಲ ಯೋಗಗಳೂ ಶಿವಯೋಗದಲ್ಲಿ ಅಡಕವಾಗಿರುತ್ತವೆ. ಹಾಗಾಗಿ ಶರಣರು ಒತ್ತು ಕೊಟ್ಟದ್ದು ಶಿವಯೋಗಕ್ಕೆ. ಇದರಿಂದ ಮನಸ್ಸು, ಬುದ್ಧಿ, ದೇಹದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುವುದು. ಜೊತೆಗೆ ಸಮಸಮಾಜದ ನಿರ್ಮಾಣಕ್ಕೆ ಪ್ರೇರಕವಾಗುವುದು. ಆರಂಭದಲ್ಲೇ ಹೇಳಿದಂತೆ 2015 ರಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಾರಂಭವಾದಂದಿನಿಂದ ಯೋಗಕ್ಕೆ ಅಪಾರ ಬೇಡಿಕೆ ಇರುವಂತೆ ತೊರುವುದು. ಆದರೆ ಮನುಷ್ಯ ತೋರಿಕೆಗಾಗಿ ಯೋಗದ ಹಿಂದೆ ಹೋಗುವುದು ಸರಿಯಲ್ಲ. ಅದಕ್ಕಾಗಿಯೇ ಶರಣರು ಶಿವಯೋಗಕ್ಕೆ ಮಹತ್ವ ನೀಡಿದ್ದು. ಶಿವಯೋಗ ಪ್ರದರ್ಶನದ ಸರಕಲ್ಲ; ಆತ್ಮದರ್ಶನದ ಬೆಳಕು. ಇಲ್ಲಿ ನೆರೆಮನೆಯ ದುಃಖಕ್ಕೆ ಅಳದೆ ಮೊದಲು ಅವರವರ ಮನವನ್ನು, ತನುವನ್ನು ಸಂತೈಸಿಕೊಳ್ಳುವ ಕಾರ್ಯ ನಡೆಯುವುದು. ಈ ನೆಲೆಯಲ್ಲಿ ಜಕ್ಕಣಯ್ಯನವರ ವಚನ ವಿಶೇಷ ಬೆಳಕು ಚೆಲ್ಲುವಂತಿದೆ.
ಕಾಯ ನನ್ನದೆಂದು ನಚ್ಚಬೇಡಿರೋ,
ಜೀವ ನನ್ನದೆಂದು ನಚ್ಚಬೇಡಿರೋ.
ಕಾಯ ಜೀವವೆಂಬ ಪ್ರಕೃತಿಯನಳಿದು, ಶಿವಯೋಗದಲ್ಲಿ ನಿಂದು,
ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
ಮನುಷ್ಯನಿಗೆ ಅನೇಕ ರೀತಿಯ ಮೋಹಗಳು ಕಾಡುತ್ತಿರುತ್ತವೆ. ಹಾಗಾಗಿ ದೇಹ, ಜೀವ ಶಾಶ್ವತ ಎನ್ನುವ ಭ್ರಮೆ ಇರುತ್ತದೆ. ಅಂಥವರಿಗೆ ಜಕ್ಕಣಯ್ಯನವರು ದೇಹ, ಜೀವವನ್ನು ಶಾಶ್ವತವೆಂದು ನಂಬಬೇಡಿ. ಬದಲಾಗಿ ಅವುಗಳ ಪ್ರಕೃತಿಗುಣಗಳನ್ನು ಅಳಿದು ಶಿವಯೋಗದಲ್ಲಿ ನಿರತರಾಗಬೇಕು ಎನ್ನುವ ಸಂದೇಶ ನೀಡುವರು. ಶಿವಯೋಗಿ ಸಿದ್ಧರಾಮೇಶ್ವರರು `ಶಿವಶಕ್ತಿವಿಯೋಗವಪ್ಪ ಯೋಗವಿಲ್ಲವಯ್ಯಾ’ ಎಂದು ತಿಳಿಹೇಳಿದ್ದಾರೆ. ಹಾಗಾಗಿ ಮನುಷ್ಯ ಶಿವಯೋಗದಲ್ಲಿ ನಿರತನಾಗಬೇಕು. ಅದರಲ್ಲೇ ಯೋಗದ ಎಲ್ಲ ಅಂಶಗಳೂ ಅಡಕವಾಗಿವೆ.
Comments 12
Jagannatha Patil
Aug 3, 2019ನಿಮ್ಮ ಮಾತು ನಿಜ ಗುರುಗಳೆ, ವ್ಯಾಯಾಮವನ್ನು ಯೋಗವೆಂದು ಬೊಬ್ಬೆ ಇಡುವ ಜನರನ್ನು ಕಂಡರೆ ನಗೆ ಬರುತ್ತದೆ. ಸಂಪೂರ್ಣ ಬದುಕನ್ನು ತುಂಬಿರುವ ಯೋಗ ಬಸವಣ್ಣನವರ ಶಿವಯೋಗ. ಮತ್ತಷ್ಟು ಆಳವಾಗಿ ನಮಗೆ ಶಿವಯೋಗವನ್ನು ತಿಳಿಸಿಕೊಡಿ ಗುರುಗಳೆ.
Kavyashree
Aug 4, 2019ತನುತ್ರಯಂಗಳನೇಕೀಭವಿಸಿ
ಲಿಂಗತ್ರಯದಲ್ಲಿ ಶಬ್ದಮುಗ್ದನಾಗಿ
ಲಿಂಗಾರ್ಚನೆಯ ಮಾಡಯ್ಯಾ.
ಸಿದ್ಧರಾಮೇಶ್ವರರ ಈ ವಚನದಲ್ಲಿ ಶಿವಯೋಗ ಕೂಡಿ ಬೆರಸುವಂತಹುದು ಎಂದು ಹೇಳಿದ್ದಾರೆ. ಕೂಡಿ ಬೆರಸುವ ಶಿವಯೋಗವು ಅಷ್ಟಾಂಗಯೋಗಕ್ಕಿಂತ ಭಿನ್ನವಾದುದು. ಅದರ ಪರಿಯನ್ನು ವಿವರಿಸಿ ಕೊಡಬೇಕೆಂಬುದು ಸ್ವಾಮಿಗಳಲ್ಲಿ ನನ್ನ ಪ್ರಾರ್ಥನೆ.
-ಕಾವ್ಯಶ್ರೀ ಬಾದಾಮಿ
ಸೋಮಶೇಖರ, ಹಾಸನ
Aug 7, 2019ಶಿವಯೋಗದ ಹಾದಿ, ಲಿಂಗಾಂಗ ಸಮರಸ ಒಂದೆಯೇ? ಎರಡೂ ಲೇಖನಗಳು ಒಂದು ಮತ್ತೊಂದರ ಮುಂದುವರಿಕೆಯಂತೆ ಪೂರಕವಾಗಿವೆ. ಸ್ವಾಮೀಜಿ ಪೀಠಿಕೆ ಹಾಕಿದ್ದಾರೆ, ನಾಗರಾಜ್ ಶರಣರು ಬಿಡಿಬಿಡಿಯಾಗಿ ಗಾಢವಾಗಿ ಮಹತ್ವವನ್ನು ತೋರಿಸಿದ್ದಾರೆ.
Dr. Nandeesh Hiregowdar
Aug 7, 2019ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ
ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ
ಮಹಾಬೆಳಗ ಮಾಡಿದಿರಲ್ಲಾ…
ಬಸವಣ್ಣನವರ ವಚನ ಶಿವಯೋಗದ ದರ್ಶನ ಮಾಡಿಸುವಂತೆ ಇದೆ. ಯೋಗ, ವ್ಯಾಯಾಮ, ಶಿವಯೋಗ- ಎಲ್ಲವೂ ಬೇರೆ ಬೇರೆ ಎಂದು ತಿಳಿಸಿಕೊಟ್ಟ ಪೂಜ್ಯರಿಗೆ ಶರಣಾರ್ಥಿ.
ಮೂರ್ತಿ ಪಿಎಚ್
Aug 9, 2019ಮತ್ತೆ ಕಲ್ಯಾಣದಲ್ಲಿ ನಾವು ನಿಮ್ಮ ಜೊತೆ ಇದ್ದೇವೆ. ಶಿವಯೋಗದ ಲೇಖನ ಬಹಳ ಚೆನ್ನಾಗಿದೆ. ಶರಣಾರ್ಥಿ ಗುರುಗಳಿಗೆ. ??
Mariswamy Gowdar
Aug 13, 2019ಅಷ್ಟಾಂಗಯೋಗದ ಕುರಿತು ವಿವರವಾಗಿ ತಿಳಿಸಿದ್ದೀರಿ. ಶಿವಯೋಗ ಅದಕ್ಕಿಂತ ಹೇಗೆ ಭಿನ್ನ ಎಂಬುದು ತಿಳಿಯಿತು. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಎನ್ನುವ ಲಿಂಗತ್ರಯಗಳನ್ನು ಸಾಧಿಸುವ ಪರಿಕ್ರಮವನ್ನು ಕುರಿತು ಹೆಚ್ಚಿನ ಮಾಹಿತಿ ನೀಡಬೇಕೆಂದು ಬುದ್ಧಿಯವರಲ್ಲಿ ನಮ್ಮ ಬಿನ್ನಹ.
ಶಿವಲಿಂಗಪ್ಪ ರಾಯಚೂರು
Aug 17, 2019ಶಿವಯೋಗ ಕುರಿತು ನಮ್ಮಲ್ಲಿ ಸಂಶೋಧನೆಗಳು ನಡೆಯಬೇಕು ಎಂದು ತಪೋವನದ ಕುಮಾರಸ್ವಾಮಿಗಳು ಹೇಳುತ್ತಿದ್ದರು. ಆಸಕ್ತರಿಗೆ ತರಬೇತಿ ನೀಡುವ ತಾಣಗಳು ಎಲ್ಲಿವೆ? ತಮ್ಮಲ್ಲಿ ಆ ಅವಕಾಶ ಇದ್ದರೆ ಅಲ್ಲಿಗೇ ಬರುತ್ತೇವೆ. ನಾವು ಐದು ಜನ ಇದ್ದೇವೆ ಆಸಕ್ತರು. ದಯಮಾಡಿ ತಿಳಿಸಬೇಕು.
Shashidhar banavara
Aug 18, 2019`ಸಮತೆ ಸಮಾಧಾನ ನೆಲೆಗೊಳ್ಳದಿದ್ದಡೆ ಆ ಯೋಗ ಅಜ್ಞಾನದಾಗು’ ಎಂದು ಹಾವಿನಹಾಳ ಕಲ್ಲಯ್ಯನವರ ವಚನವು ಶಿವಯೋಗಕ್ಕೆ ಕನ್ನಡಿ ಹಿಡಿದಂತಿದೆ. ಸ್ವಾಮಿಗಳ ಲೇಖನ ಮಾರ್ಕೆಟ್ ಯೋಗಗಳ ಬಂಡವಾಳವನ್ನು ಬಯಲು ಮಾಡುವಂತಿದೆ.
Devaraj B.S
Aug 19, 2019ಇಷ್ಟಲಿಂಗದ ಅನುಸಂಧಾನ ಮಾಡುವ ಕ್ರಮಗಳನ್ನೂ ತಿಳಿಸಿದ್ದರೆ ನನ್ನಂತವರಿಗೆ ಹೆಚ್ಚಿನ ಪ್ರಯೋಜನವಾಗುತ್ತಿತ್ತು. ನಿತ್ಯದ ಲಿಂಗಪೂಜೆಯಲ್ಲಿ ಶಿವಯೋಗವನ್ನು ಹೇಗೆ ಅಳವಡಿಸಿಕೊಳ್ಳುವುದು ಎಂಬುದು ತಿಳಿಯುತ್ತಿಲ್ಲ. ಬುದ್ಧಿಯವರು ಮಾರ್ಗದರ್ಶನ ಮಾಡಬೇಕು.
vidhyadhara swamy
Aug 20, 2019ಅಷ್ಟಾಂಗಯೋಗವನ್ನು ವಿವರವಾಗಿ ಬರೆದಂತೆ ಶಿವಯೋಗದ ಬಗೆಗೆ ಆಳವಾದ ವಿವರಣೆ ನೀಡಿದ್ದರೆ ಚೆನ್ನಾಗಿರುತ್ತಿತ್ತು. ಸ್ವಾಮಿಗಳ ಸ್ವಾನುಭವ ನಮಗೆ ಮಾರ್ಗದರ್ಶನ ನೀಡುತ್ತದೆ ಎನ್ನುವ ನಂಬಿಕೆ.
Karibasappa hanchinamani
Aug 21, 2019ಶಿವಯೋಗದ ಸ್ಥೂಲ ಪರಿಚಯ ನೀಡುವ ನಿಮ್ಮ ಬರಹದಲ್ಲಿ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಆದರೆ ಕರಸ್ಥಲದಲ್ಲಿ ಲಿಂಗವ ಧರಿಸಿ… ವಚನದಲ್ಲಿ ಬರುವ ಶಿವಪೂಜೆ ಶಿವಮಂತ್ರ ಶಿವಾರ್ಪಣ ಶಿವಶಾಸ್ತಗಳ ವಿವರಣೆ ಏನು? ಅದೇ ವಚನದಲ್ಲಿರುವ ಶಿವಶೇಷಶೀಲಸಂಬಂಧೋ ಲಿಂಗಭಕ್ತಸ್ಯ ಲಕ್ಷಣಂ
ಲಿಂಗಧಾರೀ ಸುಭಕ್ತಶ್ಚ ಲಿಂಗಬಾಹ್ಯಸತೀಸುತಃ… ಸಾಲುಗಳ ವಿವರವೇನು? ದಯವಿಟ್ಟು ವಿವರಿಸಬೇಕೆಂದು ಸ್ವಾಮಿಗಳಲ್ಲಿ ಪ್ರಾರ್ಥನೆ.
sharada A.M
Aug 26, 2019ಲೇಖನ ಚೆನ್ನಾಗಿದೆ. ಕಾಯ ಜೀವವೆಂಬ ಪ್ರಕೃತಿಯನಳಿದು, ಶಿವಯೋಗದಲ್ಲಿ ನಿಲ್ಲಬೇಕು ಎನ್ನುತ್ತಾರೆ. ಹಾಗೆ ಪ್ರಕೃತಿಯನಳಿಯುವುದು ಹೇಗೆ? ಶಿವಯೋಗದ ಹೆಜ್ಜೆಗಳನ್ನು ವಿವರವಾಗಿ ಬರೆಯಿರಿ ಸ್ವಾಮೀಜಿ.