ಮಹಾನುಭಾವಿ ಆದಯ್ಯ
ಅನೇಕ ಕನ್ನಡೇತರ ಶರಣರು ಬಸವಣ್ಣನವರ ತತ್ವಕ್ಕೆ ಮಾರು ಹೋಗಿ ಅಂದಿನ ಶರಣ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರಲ್ಲಿ ತೆಲಗು ಮಸಣೇಶ, ಮಾದಾರ ಚೆನ್ನಯ್ಯ, ಬೊಂತಾದೇವಿ ಕಾಶ್ಮೀರದ ಮಹಾದೇವ ಭೂಪಾಲ ಮುಂತಾದವರು ಸೇರಿದ್ದರು. ಅವರಲ್ಲಿ ಆದಯ್ಯನವರೂ ಒಬ್ಬ ಪ್ರಮುಖ ಶರಣರು. ಶ್ರೇಷ್ಠ ವಚನಕಾರರು. ಹರಿಹರ ಕವಿಯು ಆದಯ್ಯನವರ ಜೀವನ ಚರಿತ್ರೆಯನ್ನು ‘ಆದಯ್ಯನ ರಗಳೆ’ಯಲ್ಲಿ ರಸವತ್ತಾಗಿ ಅವರ ಬಗ್ಗೆ ಹೇಳಿದ್ದಾನೆ. ರಾಘವಾಂಕನ ‘ಸೋಮನಾಥ ಚರಿತ್ರೆ’ ಕೃತಿಯಲ್ಲಿ ಆದಯ್ಯನವರ ಭಕ್ತಿಯ ಶ್ರದ್ಧೆಯನ್ನು ಸೊಗಸಾಗಿ ವಿವರಿಸಲಾಗಿದೆ.
ಆದಯ್ಯ ಮೂಲತಃ ಸೌರಾಷ್ಟ್ರದವರು, ಅಂದರೆ ಗುಜರಾತಿಗೆ ಸೇರಿದವರು. ಬನಿಯಾ ಅಥವಾ ಬಣಜಿಗರಾದ ಇವರು ಊರಿಂದ ಊರಿಗೆ ವಲಸೆ ಹೋಗುತ್ತಾ ವ್ಯಾಪಾರ ಮಾಡುತ್ತಿರುತ್ತಾರೆ. ಹಾಗೊಮ್ಮೆ ಆತ ಪುಲಿಗೆರೆಗೆ ಅಂದರೆ ಇಂದಿನ ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿ ವ್ಯಾಪಾರ ವಹಿವಾಟನ್ನು ಆರಂಭಿಸುತ್ತಾರೆ. ಆಗ ಅಲ್ಲಿ ಅವರಿಗೆ ಪದ್ಮಾವತಿ ಎಂಬ ಜೈನ ಕನ್ಯೆಯ ಪರಿಚಯವಾಗುತ್ತದೆ. ಆಕೆಯನ್ನು ಪ್ರೀತಿಸಿ ಮದುವೆಯಾಗಲು ಮುಂದಾಗುತ್ತಾರೆ. ಈ ಮದುವೆಗೆ ಪದ್ಮಾವತಿಯ ತಂದೆ ಒಪ್ಪದಿದ್ದಾಗ ವಾದಕ್ಕೆ ನಿಂತು ಸೌರಾಷ್ಟ್ರದಿಂದ ಸೋಮೇಶ್ವರನನ್ನು ತಂದು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸ್ಥಾಪಿಸಿ ತಾನೊಬ್ಬ ನಿಜ ಶಿವ ಭಕ್ತನೆಂದು ತೋರಿಸುತ್ತಾರೆ ಎಂದು ಕಥೆಯಲ್ಲಿ ಅವರ ಬಗ್ಗೆ ಮಾಹಿತಿ ಸಿಗುತ್ತದೆ.
ಕಲ್ಯಾಣದ ಅನುಭವ ಮಂಟಪದ ವಚನಗಳ ಧ್ವನಿ ಎಲ್ಲೆಡೆ ಹರಡಿಕೊಂಡು ಅದರ ಪರಿಮಳ ಲಕ್ಷ್ಮೇಶ್ವರಕ್ಕೂ ವ್ಯಾಪಿಸಿತು. ತನ್ನ ವ್ಯವಹಾರದಲ್ಲಿ ಮುಳುಗಿದ್ದ ಆದಯ್ಯನವರಿಗೆ ಆಧ್ಯಾತ್ಮಿಕ ಜೀವನದ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ ಒಂದೊಮ್ಮೆ ಆದಯ್ಯನವರು ವ್ಯಾಪಾರಕ್ಕಾಗಿ ಕಳಚೂರ್ಯರ ಕಲ್ಯಾಣಕ್ಕೆ ಹೋದಾಗ ಅಲ್ಲಿ ಶರಣರ ಸಂಪರ್ಕದಿಂದ ಅವರ ಅನುಭಾವದತ್ತ ಆಕರ್ಷಿತನಾಗುತ್ತಾರೆ. ಅವರ ಚಿಂತನೆಯ ಪ್ರಭಾವಕ್ಕೆ ಒಳಗಾಗಿ ತಾವೂ ಶರಣನಾಗುವ ಉತ್ಕಟ ಬಯಕೆಯಿಂದ ಅಲ್ಲಿ ಕೆಲ ಕಾಲ ನಿಲ್ಲುತ್ತಾರೆ. ಬಸವಣ್ಣನವರಿಂದ, ಶರಣರಿಂದ ಲಿಂಗದ ಮಹಿಮೆ ಮತ್ತು ತತ್ವ ತಿಳಿದು ಲಿಂಗಾಯತ ಧರ್ಮ ಸ್ವೀಕರಿಸುತ್ತಾರೆ. ಬನಿಯಾ ಅಥವಾ ಬಣಜಿಗರಾದ ಆದಯ್ಯ ಲಿಂಗಾಯತರಾದ ಮೇಲೆ ಸತ್ಯ ಶುದ್ಧವಾದ ಕಾಯಕ ಮಾಡುತ್ತಾ ಶರಣರ ಅನುಭಾವವನ್ನು ಜನರಿಗೆ ಪರಿಚಯಿಸುತ್ತ, ತಮ್ಮಂತೆ ಅನೇಕ ಬನಿಯಾ-( ಇವರು ವೈಶ್ಯರಲ್ಲ, ಆದರೆ ವ್ಯಾಪಾರಿಗಳು- ಇದರಲ್ಲಿ ಬಹುತೇಕರು ಜೈನರು) ವ್ಯಾಪಾರಿಗಳನ್ನು ಲಿಂಗಾಯತ ಧರ್ಮಕ್ಕೆ ಸೇರಲು ಪ್ರೇರೇಪಿಸುತ್ತಾರೆ. ಇವರಲ್ಲಿ ಜೈನರೇ ಅಧಿಕವಾಗಿದ್ದರು. ಈ ಗುಂಪು ಬಣ ‘ಜಿನ’ ಅಂದರೆ ಜೈನರ ಬಣ, ಮುಂದೆ ಇದೇ ‘ಬಣಜಿಗ’ ಆಗಿರುವ ಸಾಧ್ಯತೆ ಇದೆ.
ಸಮಾಧಿಯ ಹುಡುಕುತ್ತಾ…
ಅಂದಿನ ಲಕ್ಷ್ಮೇಶ್ವರ (ಪುಲಿಗೆರೆ) ಬಹುತೇಕ ಅನುಭಾವಿಗಳ ವಾಸಸ್ಥಳವಾಗಿತ್ತು. ನಮ್ಮ ತಾಯಿಯ ತವರು ಮುಳಗುಂದದಿಂದ ಕೇವಲ ಹದಿನೈದು ಕಿಲೋಮೀಟರು ಅಂತರದಲ್ಲಿರುವ ಊರು ಲಕ್ಷ್ಮೇಶ್ವರ. ಅಲ್ಲಿನ ಸೋಮನಾಥ ದೇವಾಲಯ ಅತ್ಯಂತ ಪುರಾತನ ಮಂದಿರವಾಗಿದೆ. ಆದಯ್ಯನವರು ಬಣಜಿಗರಾಗಿ, ಜೈನ ಕನ್ಯೆಯನ್ನು ಮದುವೆಯಾಗಿ, ಮುಂದೆ ಜೈನ ಬಸದಿಯಲ್ಲಿಯೇ ಸೋಮನಾಥನ ವಿಗ್ರಹ ಸ್ಥಾಪಿಸುತ್ತಾರೆ. ಅನಂತರ ಶರಣರ ಸಂಪರ್ಕದಲ್ಲಿ ಬಂದು ಬಹು ದೊಡ್ಡ ವಚನಕಾರರಾದಾಗ ತಮ್ಮ ಕಾಯಕದ ನಂತರ ಪ್ರತಿನಿತ್ಯ ಇದೇ ಸೋಮನಾಥ ದೇವಾಲಯದಲ್ಲಿ ಬಂದು ಕುಳಿತು ವಚನಗಳನ್ನು ಬರೆಯುತ್ತಿರುತ್ತಾರೆ. ಇದೇ ಬಸದಿ ಅಥವಾ ಮಂದಿರದಲ್ಲಿ ಅನುಭಾವ ಪಡೆಯುತ್ತಾರೆ ಎಂಬುದು ತಿಳಿಯಿತು. ಈ ಸೋಮನಾಥ ದೇವಸ್ಥಾನದ ಪಕ್ಕದಲ್ಲಿಯೇ ಒಂದು ಪುಟ್ಟ ಗುಡಿಯಿದೆ, ಅದುವೇ ಶ್ರೇಷ್ಠ ಅನುಭಾವಿ ಆದಯ್ಯನವರ ಸಮಾಧಿ.
ಕಲ್ಯಾಣ ಕ್ರಾಂತಿಯ ಪೂರ್ವದಲ್ಲಿಯೇ ಆದಯ್ಯನವರು ತಮ್ಮ ವ್ಯಾಪಾರ ವಹಿವಾಟಿಗಾಗಿ ಲಕ್ಷ್ಮೇಶ್ವರದಿಂದ ಆಗಾಗ ಕಲ್ಯಾಣಕ್ಕೆ ಹೋಗಿ ಬರುವುದು ಸಹಜವಾಗಿತ್ತು. ಕಲ್ಯಾಣ ಕ್ರಾಂತಿಯ ವಚನ ರಕ್ಷಣಾ ಕಾರ್ಯದಲ್ಲಿ ಇವರ ಹೆಸರು ಅಷ್ಟೊಂದು ಕೇಳಿಬರುವುದಿಲ್ಲ. ಆದಯ್ಯನವರು ಪುಲಿಗೆರೆಯಲ್ಲಿ ಐಕ್ಯವಾಗಿದ್ದಾರೆ. ಈಗಲೂ ಪುಲಿಗೆರೆಯಲ್ಲಿ ಅನೇಕ ಸಣ್ಣಪುಟ್ಟ ದೇವಾಲಯಗಳು ಬಸದಿ ಹೋಲುವ ಮಂದಿರಗಳು ಕಾಣ ಬರುತ್ತವೆ.
ಅನುಭಾವಿ ಆದಯ್ಯನವರು ತಮ್ಮ ವಚನಗಳಲ್ಲಿ ‘ಸೌರಾಷ್ಟ್ರ ಸೋಮೇಶ್ವರ’ ಎಂಬ ಅಂಕಿತವನ್ನು ಬಳಸಿದ್ದಾರೆ. ಕೆಲವು ವಚನಗಳಲ್ಲಿ ‘ಮಲ್ಲಿಕಾರ್ಜುನ’ ಎಂಬ ಅಂಕಿತವನ್ನೂ ಕಾಣಬಹುದು. ಆದಯ್ಯನವರು ಬರೆದ ಒಟ್ಟು ವಚನಗಳು 403. ಇವುಗಳಲ್ಲದೆ ಅನೇಕ ಸ್ವರ ವಚನಗಳನ್ನೂ ಬರೆದಿರುವುದು ಗಮನಾರ್ಹವಾಗಿದೆ. ಆದಯ್ಯನವರ ವಚನಗಳಲ್ಲಿ ಸಾಂಸಾರಿಕ, ಸಾಹಿತ್ಯಿಕ ಅಂಶಗಳಿಗಿಂತ ಶರಣ ಧರ್ಮದ ತಾತ್ವಿಕ ಚಿಂತನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಅನುಭಾವದಲ್ಲಿ ಅಲ್ಲಮರಿಗೆ ಸರಿದೂಗುವ ಅಪ್ರತಿಮ ವಚನಕಾರರು ಆದಯ್ಯ. ಸುಂದರ ಭಾಷೆಯ ಬಳಕೆ, ವಿಷಯ ನಿರೂಪಣೆ, ವಚನಗಳಲ್ಲಿನ ಸಾಂಗತ್ಯ, ಶೈಲಿ, ಅದ್ಭುತವಾಗಿವೆ. ಆದಯ್ಯ ತಮ್ಮ ವಚನಗಳಲ್ಲಿ ರೇವಣ ಸಿದ್ಧಯ್ಯ, ಮರುಳ ಸಿದ್ಧಯ್ಯ, ಏಕೋರಾಮಯ್ಯ, ಪಂಡಿತಾರಾಧ್ಯರ ಹೆಸರುಗಳನ್ನು ವ್ಯಕ್ತಪಡಿಸಿರುವದರಿಂದ ಇವರು ನೇರವಾಗಿ ಕಲ್ಯಾಣದ ಅನುಭಾವ ಮಂಟಪದಲ್ಲಿ ಪಾಲ್ಗೊಳ್ಳದಿರುವುದೇ ಕಾರಣ. ಅಷ್ಟೇ ಅಲ್ಲ ಆದಯ್ಯನವರ ನಿಲುವನ್ನು ಪ್ರಶಂಸಿಸಿ ಇತರ ವಚನಕಾರರ ವಚನಗಳು ಹೆಚ್ಚಾಗಿ ಕಂಡು ಬರುವುದಿಲ್ಲ. ಈ ಕಾರಣದಿಂದ ಇವರು ತನ್ನ ಕಾಯಕ ಭೂಮಿಯಾದ ಪುಲಿಗೆರೆಯಲ್ಲಿಯೇ ಬಹುಕಾಲ ನೆಲೆಸಿ ಅಲ್ಲಿಯೇ ಐಕ್ಯರಾದರೆಂದು ತಿಳಿಯಬಹುದು.
ತಾತ್ವಿಕ ನಿಲುವು
ಆದಯ್ಯನವರು ವೇದ ಆಗಮ ಶಾಸ್ತ್ರಗಳನ್ನು ವಿರೋಧಿಸಿದ್ದಾರೆ. ವೈದಿಕ ಕರ್ಮಕಾಂಡಗಳ ಬೆನ್ನು ಹತ್ತಿದವರನ್ನು ಕಂಡು ಮಮ್ಮಲ ಮರುಗಿದ್ದಾರೆ. ಆದಯ್ಯನವರ ವಚನಗಳಲ್ಲಿ ಇದು ವ್ಯಕ್ತವಾಗಿದೆ:
ವೇದಂಗಳ ಹಿಂದೆ ಹರಿಯದಿರು ಹರಿಯದಿರು.
ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು.
ಪುರಾಣಂಗಳ ಹಿಂದೆ ಬಳಸದಿರು ಬಳಸದಿರು.
ಆಗಮಂಗಳ ಹಿಂದೆ ತೊಳಲದಿರು ತೊಳಲದಿರು.
ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು
ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು.
ವೇದಗಳ ಹಿಂದೆ ಹರಿಯದಿರು ಹರಿಯದಿರು- ಮತ್ತೆ ಮತ್ತೆ ಅರ್ಥವಿಲ್ಲದ ವೇದಗಳ ಹಿಂದೆ ಹೋಗುವ ಕಾರಣವನ್ನು ಕೇಳುತ್ತಾರೆ. ಶಾಸ್ತ್ರಂಗಳ ಹಿಂದೆ ಸುಳಿಯದಿರು ಎಂದು ಹೇಳುತ್ತಾ ಶಾಸ್ತ್ರಗಳ ಬಳಕೆಯನ್ನು ಖಂಡಿಸುತ್ತಾರೆ. ಶಾಸ್ತ್ರಗಳು ಸುಳ್ಳು ಹೇಳುತ್ತವೆ ಎಂದು ಎಚ್ಚರಿಸುತ್ತಾರೆ. ಪುರಾಣಂಗಳ ಹಿಂದೆ ಬಳಸದಿರು ಬಳಸದಿರು- ಅಂದರೆ ಜೊಳ್ಳು ಕಥೆ ಹೇಳುವ ಪುರಾಣಗಳಿಗೆ ಜೋತು ಬೀಳದಿರು ಎಂದಿದ್ದಾರೆ. ಅನವರತ ಚಿಂತನೆಗಳ ಅನುಭಾವವಿರುವಾಗ ಆಗಮಗಳ ಹಿಂದೆ ಹೋಗಿ ತೊಳಲುವ ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಕೊನೆಯದಾಗಿ ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು- ಎನ್ನುವುದು ಅರ್ಥಪೂರ್ಣ ಮಾತು. ಸೃಷ್ಟಿಯ ಸಂಕೇತ ಜೈವಿಕ ಚಿತ್ಕಳೆ ಇಷ್ಟಲಿಂಗಾಕಾರದ ಕುರುಹು ಕೈಯಲ್ಲಿ ಇರುವಾಗ ವೇದ ಶಾಸ್ತ್ರ ಪುರಾಣ ಆಗಮಗಳ ಹಿಂದೆ ಹೋಗಿ ಹೋಗಿ ಪರದಾಡುವುದು ಶಬ್ದಕ್ಕೆ ಬಳಲಿದಂತೆ ಎನ್ನುವುದು ಆದಯ್ಯನವರ ನಿಲುವು.
ಇದೇ ರೀತಿಯ ಇನ್ನೊಂದು ವಚನ:
ವೇದಾಗಮಂಗಳು ಹೋದ ಸರಣಿಯಲ್ಲಿ ಹೋದರಲ್ಲದೆ
ದ್ವೈತಾದ್ವೈತಕ್ಕೆ ನಿಲುಕದ ನಿಜವ ಕಂಡವರಾರನೂ ಕಾಣೆ.
ವಾಣಿಯ ಹಂಗಿನಲ್ಲಿ ಉಲಿದುಲಿದು ಹೋದರಲ್ಲದೆ
ಉಲುಹಡಗಿದ ನಿಲವ ಕಂಡವರಾರನೂ ಕಾಣೆ.
ತನು ಕರಣ ಭುವನ ಭೋಗಂಗಳ ಕಂಡಲ್ಲದೆ
ಸೌರಾಷ್ಟ್ರ ಸೋಮೇಶ್ವರಲಿಂಗದುಳುಮೆಯ ಕಂಡು
ಸುಖಿಯಾದವರಾರನೂ ಕಾಣೆ.
ಅನೇಕರು ವೇದ ಆಗಮಗಳು ಹೋದ ದಾರಿಯಲ್ಲಿ ಹೋದರಲ್ಲದೆ ದ್ವೈತಾದ್ವೈತಗಳ ನಿಲುವಿಗೆ ನಿಲುಕದ ನಿಜದ ಪರಿಯನ್ನು ಯಾರೂ ಕಾಣಲಿಲ್ಲ. ಅಂದರೆ ವೇದ ಆಗಮಗಳು ಬೋಧನೆಗೆ ಮಾತ್ರ ಸೀಮಿತವಾಗಿವೆ. ಅವುಗಳಲ್ಲಿನ ಅಂತಃಶಕ್ತಿಯ ಅರಿವನ್ನು, ಅದರ ನಿಜದ ನಿಲುವನ್ನು ಅಥವಾ ಆ ಅರಿವಿನ ಎತ್ತರಕ್ಕೆ ನಿಲುಕಿದವರನ್ನು ಕಾಣೆನು ಎನ್ನುತ್ತಾರೆ ಆದಯ್ಯ.
ವಾಣಿಯ ಹಂಗಿನಲ್ಲಿ… ಶಬ್ದಗಳ ಹಂಗಿನಲ್ಲಿ ಅಂದರೆ ಪ್ರವಚನ, ಪುರಾಣ ಕೇಳಿ ಆ ಉನ್ಮಾದದಲ್ಲಿ ಉಲಿದುಲಿದು ಹೋಗುವ ಜನ ಆ ಉಲುಹಿನಲ್ಲಿ ಅಡಗಿದ ನಿಜದ ನಿಲುವನ್ನು ಕಾಣಲಾರರು.
ತನು ಕರಣ… ವ್ಯಕ್ತಿಯು ತನ್ನ ಸುಖಕ್ಕಾಗಿ, ತನ್ನ ಪಂಚೇಂದ್ರಿಗಳ ಸುಖಕ್ಕಾಗಿ ಭುವನ ಮನೆ ಸಂಸಾರಗಳ ಭೋಗಗಳಿಗೆ ಮಿಡಿಯುವನಲ್ಲದೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಆ ತತ್ವಗಳ ಉಳುಮೆಯ ಕಂಡು ಸುಖಿಯಾಗಲಾರ.
ಶಬ್ದ ಸ್ಪರ್ಶ ರೂಪ ರಸ ಗಂಧಗಳಿಗೆ ಬೆರಗಾಗುವ ಮನುಷ್ಯ ತನ್ನೊಳಗಿನ ಅಂತರಂಗದ ಅನುಭಾವಕ್ಕೆ ಮಿಡಿಯುವುದಿಲ್ಲ ಎಂದು ಮರುಗುವ ಆದಯ್ಯನವರು, ತನ್ನಲ್ಲಿ ಉತ್ತಮ ಗುಣಗಳ ಉಳುಮೆ ಮಾಡಿ ಆ ಫಲವನ್ನು ಅನುಭವಿಸುವ ಸುಖವನ್ನು ಉಣ್ಣುವ ಸಾಧಕರನ್ನು ಕಾಣೆನು ಎಂದಿದ್ದಾರೆ. ಸುಂದರ ಲಿಂಗಾನುಸಂಧಾನದ ಪರಾಕಾಷ್ಠತೆ ಇದಾಗಿದೆ.
ಅಂಗವು ಲಿಂಗವೇಧೆಯಾದ ಬಳಿಕ
ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ
ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ?
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ನಿರ್ದೇಹಿಗಳು.
ಶರಣರು ತಮ್ಮನ್ನು ಲಿಂಗ ಅಂದರೆ ಸಮಾಜಕ್ಕೆ ಅರ್ಪಿಸಿಕೊಂಡ ಮೇಲೆ ಮತ್ತೆ ಬೇರೆ ದೇಹವನ್ನು ಕಾಣರು. ತತ್ವ ದಿಟಗೊಂಡ ಸಜ್ಜನಿಕೆಯ ಮೌಲ್ಯವೇ ದೇಹ ಭಾವ ಅಳಿದ ಲಿಂಗ ತತ್ವ. ಇಂಥ ದಿಟ ಶರಣರು ದೇಹವಿಲ್ಲದ ನಿರ್ದೇಹಿಗಳು.
ಆದಯ್ಯನವರ ಬೆಡಗಿನ ವಚನಗಳಲ್ಲಿ ಗಹನವಾದ ಆಧ್ಯಾತ್ಮಿಕ ಮೌಲ್ಯಗಳು ಅಡಗಿವೆ.
ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು,
ಒಬ್ಬನ ರೂಹು ಹೋಗುತ್ತ ಬರುತ್ತದೆ.
ಮೂವರನೊಂದೆಡೆಗೆ ತಂದಡೆ ಏನಹರೆಂಬುದ ನೋಡಿಕೊಳ್ಳಿರಣ್ಣಾ.
ಕಂಡಡೆ ಉಣಲಿಲ್ಲ, ಕಾಣದಿರ್ದಡೆ ಉಣದಿರಲಿಲ್ಲ.
ಇದೇನು ಸೋಜಿಗವಯ್ಯಾ ಸೌರಾಷ್ಟ್ರ ಸೋಮೇಶ್ವರಾ.
ಈ ವಚನದಲ್ಲಿ ನಿರಾಕಾರ ಸಾಕಾರದ ರೂಪಗಳ ಮಧ್ಯೆ ಲಿಂಗವೆಂಬ ಆಕಾರವು ನಿರಾಕಾರವಾಗುತ್ತ ತನ್ನ ರೂಪದ ಹಂಗು ಹರಿದುಕೊಳ್ಳುತ್ತಾ ಮತ್ತೆ ಮತ್ತೆ ಆಕಾರವಾಗಿ ಕರಸ್ಥಲಕ್ಕೆ ಬಂದು ನಿರಾಕಾರದ ತತ್ವಕ್ಕೆ ಸಾಗುವ ಸುಂದರ ಪಯಣವನ್ನು ಅದ್ಭುತವಾಗಿ ವಿವರಿಸಿದ್ದಾರೆ ಆದಯ್ಯ.
ಮೂವರನೊಂದೆಡೆಗೆ ತಂದಡೆ… ಇಂತಹ ಆಕಾರ, ಸಾಕಾರ ಮತ್ತು ನಿರಾಕಾರ ರೂಪದಲ್ಲಿ ಕಂಡು ಕಾಣಲರಿಯದೇ ಕೂಡುವ ಮೂರು ಸ್ಥಿತಿಗಳನ್ನು ಒಂದೆಡೆ ತಂದರೆ ಏನಾಗಬಹುದೆಂಬುದನ್ನು ನೀವೇ ನೋಡಿಕೊಳ್ಳಿ ಎನ್ನುತ್ತಾರೆ.
ಕಂಡಡೆ ಉಣಲಿಲ್ಲ… ಸಾಕಾರ ರೂಪವು ತನ್ನ ಮುಂದಿನ ಪ್ರಸಾದವನ್ನು ಉಣಲಾರದು. ಆದರೆ ರೂಪವಿಲ್ಲದ ಆತ್ಮದ ಪ್ರಾಣಲಿಂಗವು ಹೊರಗಿನ ಪದಾರ್ಥವನ್ನು ಉಣದೆ ಇರದು.
ಆಕಾರವು ಬಯಸುವದಿಲ್ಲ. ನಿರಾಕಾರದ ಜ್ಞಾನ ಆತ್ಮ ಜ್ಯೋತಿ. ಪ್ರಾಣಲಿಂಗವು ಲಿಂಗ ಸಮಾಜವು ಜಂಗಮ ಸಮಾಜವು ಉಣದೆ ಇರಲಾರದು. ಇದು ಎಂತಹ ಸೋಜಿಗ ಸೌರಾಷ್ಟ್ರ ಸೋಮೇಶ್ವರಾ ಎಂದು ಪ್ರಶ್ನಿಸಿಕೊಂಡಿದ್ದಾರೆ.
ಸಮಷ್ಟಿಯ ಉಳಿವು ಹುಟ್ಟು ಚರಾಚರ ಪಕ್ಷಿ ಪ್ರಾಣಿಗಳ ಬಗ್ಗೆ ಚಿಂತಿಸುವ ಆದಯ್ಯನವರ ಒಂದು ವಚನ:
ಬ್ರಹ್ಮವೆಂಬ ವೃಕ್ಷದಲ್ಲಿ ಫಲಪತ್ರಕುಸುಮಂಗಳೆಂಬ
ಸಚರಾಚರಂಗಳಷ್ಟಮೂರ್ತಿಗಳಾಗಿ
ಆಗಿ ಆಗಿ ಅಳಿವುತ್ತಿ��್ಪವಯ್ಯಾ.
ಇದಕ್ಕೆ ಶ್ರುತಿ:
ಬ್ರಹ್ಮಣೋ ವೃಕ್ಷಾನ್ಮಹತೋ ಪತ್ರಂ ಕುಸುಮಿತಂ ಫಲಂ
ಚರಾಚರಾಷ್ಟಮೂರ್ತಿಂ ಚ ಫಲಿತಂ ಫಲಶೂನ್ಯವತ್
ಇಂತೆಂದುದಾಗಿ,
ಅಷ್ಟಮೂರ್ತಿಗಳು ನಷ್ಟವಾದಲ್ಲಿ
ಸೌರಾಷ್ಟ್ರ ಸೋಮೇಶ್ವರಲಿಂಗ ನಷ್ಟವಾಯಿತ್ತೆಂಬ
ಮಿಟ್ಟಿಯ ಭಂಡರನೇನೆಂಬೆನಯ್ಯಾ..
ಬ್ರಹ್ಮವೆಂಬ ವೃಕ್ಷದಲ್ಲಿ… ಸೃಷ್ಟಿ ಹುಟ್ಟು ಎಂಬ ಮರದಲ್ಲಿ ಫಲ ಪತ್ರ ಕುಸುಮಗಳೆಂಬ ಸಸ್ಯಗಳು, ಸಚರಾಚರ ಅಷ್ಟ ಮೂರ್ತಿಗಳು, ಮಾನವ, ಪ್ರಾಣಿ, ಕೀಟಗಳು, ಜಲಚರ ಭೂಚರ ವಾಯು ಸಂಚಾರಿ ಪಕ್ಷಿಗಳು, ಸರಿಸೃಪಗಳು, ಅಂಡಜಗಳು ಮುಂತಾದ ಅಷ್ಟ ತರದ ಜೀವಗಳು ಆಗಿ ಆಗಿ ಅಳಿವು ಕಾಣುತ್ತವೆ.
ಶ್ರುತಿಯು ಹೇಳುವಂತೆ ಬ್ರಹ್ಮವೆಂಬ ವೃಕ್ಷದಲ್ಲಿ ಪತ್ರಂ ಕುಸುಮಿತಂ ಫಲಂ ಹುಟ್ಟುತ್ತವೆ ಜನ್ಮ ತಾಳುತ್ತವೆ. ಚರಾಚರ ಅಷ್ಟ ಬಗೆಯ ಜೀವಿಗಳು ಹುಟ್ಟಿ ಶೂನ್ಯವಾಗುತ್ತವೆ.
ಅಷ್ಟಮೂರ್ತಿಗಳು ನಷ್ಟವಾದಲ್ಲಿ… ಸೃಷ್ಟಿಯೊಳಗಿನ ಜೈವಿಕ ಸಸ್ಯಗಳು, ಪುಷ್ಪ ಕುಸುಮಗಳು, ಪತ್ರಗಳು, ಚರಾಚರ ಜೀವಿಗಳು ನಾಶವಾದ ಮಾತ್ರಕ್ಕೆ ಅಥವಾ ಅಳಿದು ಹೋದ ಮಾತ್ರಕ್ಕೆ ಸೌರಾಷ್ಟ್ರ ಸೋಮೇಶ್ವರಲಿಂಗ ನಷ್ಟವಾಯಿತ್ತೆಂದು ಹೇಳಲಾದೀತೆ? ಹಾಗೆ ಹೇಳುವ ಮಿಟ್ಟಿಯ ಭಂಡರನ್ನು ನಾನು ನಂಬೆನು ಎಂದು ಟೀಕಿಸಿದ್ದಾರೆ. ಸೃಷ್ಟಿ ಸ್ಥಿತಿ ಲಯಗಳ ತತ್ವಗಳನ್ನಾಧರಿಸಿ, ಲಯವು ಮತ್ತೆ ಆರಂಭಕ್ಕೆ ಮೂಲವಾಗುತ್ತದೆ ಎಂದು ಸೂಚಿಸುತ್ತಾ ಸೃಷ್ಟಿ ಸಮಷ್ಟಿಗೆ ಸಾವಿಲ್ಲ, ಅದು ನಿರಂತರ ವಿಕಸನಗೊಳ್ಳುವುದು. ಅದುವೇ ಚೈತನ್ಯ, ಕರಸ್ಥಲದೊಳಗಿನ ಲಿಂಗ ಜಂಗಮ ಎನ್ನುತ್ತಾರೆ ಆದಯ್ಯ.
ಇಂತಹ ಅಪೂರ್ವ ವಚನಕಾರರಾದ ಆದಯ್ಯ ಗುಜರಾತದಿಂದ ಕನ್ನಡ ನೆಲಕ್ಕೆ ಬಂದು ಇಲ್ಲಿನ ಶರಣ ಚಳುವಳಿಯಲ್ಲಿ ಪಾಲ್ಗೊಂಡು ಅಂಗ ಲಿಂಗ ಅಭೇದ್ಯದ ಅರಿವನ್ನು ನೀಡಿ ವ್ಯಷ್ಟಿ ಸಮಷ್ಟಿಯ ಬಂಧನದ ಜೊತೆಗೆ ಪ್ರಗತಿ ಕಾಣುವ ಹಂಬಲ, ಚಿಂತನೆ ಹೊಂದಿದ್ದು ಶ್ಲಾಘನೀಯವಾಗಿದೆ.