ಭವಸಾಗರ ದಾಂಟಿಪ ಹಡಗು-ಬಸವಣ್ಣ
ಬಸವಾ ಎಂಬ ಮೂರಕ್ಷರದ ಶಕ್ತಿ ಅಗಾಧ, ಅಸಾಮಾನ್ಯ, ಅನುಪಮ. ಅದರಲ್ಲಿ ಚುಂಬಕ ಶಕ್ತಿ ಅಡಗಿದೆ. ಈ ಜಗತ್ತು ಕಂಡ ಶ್ರೇಷ್ಠ ತತ್ವಜ್ಞಾನಿ, ಅನುಭಾವಿ ಅಲ್ಲಮಪ್ರಭುದೇವರಂಥ ಮಹಾಮಹಿಮರು ಬಸವಾ ಎಂಬ ಮೂರಕ್ಷರ ಕುರಿತು, ‘ಬ’ ಎಂಬಲ್ಲಿ ಎನ್ನ ಭವ ಹರಿಯಿತ್ತು. ‘ಸ’ ಎಂಬಲ್ಲಿ ಸರ್ವಜ್ಞನಾದೆ. ‘ವ’ ಎಂದು ವಚಿಸುವಡೆ ಚೈತನ್ಯಾತ್ಮಕನಾದೆನು. ಇಂತೀ ಬಸವಾಕ್ಷರತ್ರಯವೆನ್ನ ಸರ್ವಾಂಗದಲ್ಲಿ ತೊಳಗಿ ಬೆಳಗುವ ಭೇದವನರಿದು ಆನೂ ನೀನೂ ‘ಬಸವಾ, ಬಸವಾ, ಬಸವಾ’ ಎನುತಿರ್ದೆವಯ್ಯಾ ಗುಹೇಶ್ವರಾ- ಎಂದು ಹಾಡಿ ಹೊಗಳಿದ್ದಾರೆ.
ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಬಸವೇಶ್ವರರು ಅಹಿಂಸೆ, ತ್ಯಾಗ, ವಿನಯ ಇವು ಮೂರು ಗುಣತ್ರಯಗಳು ಪ್ರತಿಯೊಬ್ಬರ ಏಳ್ಗೆಗಾಗಿ ಅತ್ಯವಶ್ಯ ಎಂದು ಸಾರಿದರು. ಬಸವಣ್ಣನವರು ಒಂದು ಅದ್ಭುತ ಶಕ್ತಿ. ಅವರನ್ನು ಕುರಿತು ರಚಿಸಿದ ಪುಸ್ತಕ, ಗ್ರಂಥಗಳಷ್ಟು ಯಾರನ್ನೂ ಕುರಿತು ಈವರೆಗೂ ರಚಿತವಾಗಿಲ್ಲ. ಅಷ್ಟೇ ಅಲ್ಲ, ಸಮಕಾಲೀನರಿಂದ ಇಷ್ಟರಮಟ್ಟಿಗೆ ಹೊಗಳಿಸಿಕೊಂಡವರೂ ಭಾರತದ ಇತಿಹಾಸದಲ್ಲಿ ಕಾಣಸಿಗುವುದಿಲ್ಲ. ಸುಮಾರು ನೂರಕ್ಕೂ ಹೆಚ್ಚು ವಚನಕಾರರು ಮೂರುಸಾವಿರಕ್ಕೂ ಹೆಚ್ಚು ವಚನಗಳಲ್ಲಿ ಆರು ಸಾವಿರಕ್ಕೂ ಹೆಚ್ಚು ಬಾರಿ ಬಸವಾ ಬಸವಾ ಎಂದು ಕೊಂಡಾಡಿದ್ದಾರೆ. ಆ ಶರಣರಾದರೋ ಒಬ್ಬರಿಗಿಂತೊಬ್ಬರು ಮಹಾಜ್ಞಾನಿಗಳು.
ಯಾರಾದರೂ ಬಸವಣ್ಣನವರನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆಂದರೆ ಅದು ಒಂದು ಇರುವೆ ದೈತ್ಯಾಕಾರದ ಆನೆಯನ್ನು ಕಂಡಂತಾಗುತ್ತದೆ ಅಥವಾ ಹುಟ್ಟುಕುರುಡನೊಬ್ಬ ಬೆಟ್ಟದ ಕಲ್ಲೊಂದನ್ನು ಮುಟ್ಟಿ, ಇಡೀ ಬೆಟ್ಟ ಮುಟ್ಟಿದೆ ಎಂಬಂತಾಗುವುದು. ಬಸವಣ್ಣನವರು ಸ್ವಯಲಿಂಗವಾದವರು, ಅಂದರೆ ಪೂಜಿಸಲ್ಪಡುವ ವಸ್ತುವೇ ತಾವಾದರು. ಇಂಥ ಅಪ್ರತಿಮಘನ, ಮಹಾಮಹಿಮ ಬಸವಣ್ಣನವರನ್ನು ಕೆಲವರು ಭಕ್ತನೆಂದೂ, ಕೆಲವರು ಗುರುವೆಂದೂ, ಕೆಲವರು ಜಂಗಮ ಸ್ವರೂಪಿ ಎಂದೂ ಮತ್ತೆ ಕೆಲವರು ಕೇವಲ ಸಮಾಜ ಸುಧಾರಕನೆಂದೂ ತಮ್ಮ ಅರಿವಿನ ಮಟ್ಟಕ್ಕನುಸಾರವಾಗಿ ನುಡಿಯುವರು. ನಾವು ಯಾವ ದಿಕ್ಕಿನಲ್ಲಿ ಬಸವಣ್ಣನವರನ್ನು ಅಳೆಯಲು ಯತ್ನಿಸುತ್ತೇವೆಯೋ ಅಷ್ಟು ಮಾತ್ರ ಅವರು ನಮಗೆ ಕಾಣುತ್ತಾರೆ.
“ಬಸವನ ನಾಮವು ಕಾಮಧೇನು ಕಾಣಿರೊ. ಬಸವನ ನಾಮವು ಕಲ್ಪವೃಕ್ಷ ಕಾಣಿರೊ. ಬಸವನ ನಾಮವು ಚಿಂತಾಮಣಿ ಕಾಣಿರೊ. ಬಸವನ ನಾಮವು ಪರುಷದಖಣಿ ಕಾಣಿರೊ. ಬಸವನ ನಾಮವು ಸಂಜೀವನಮೂಲಿಕೆ ಕಾಣಿರೊ. ಇಂತಪ್ಪ ಬಸವನಾಮಾಮೃತವು ಎನ್ನ ಜಿಹ್ವೆಯ ತುಂಬಿ ಹೊರಸೂಸಿ ಮನವ ತುಂಬಿತ್ತು. ಆ ಮನವತುಂಬಿ ಹೊರಸೂಸಿ ಸಕಲಕರಣೇಂದ್ರಿಯಂಗಳ ತುಂಬಿತ್ತು. ಆ ಸಕಲ ಕರಣೇಂದ್ರಿಯಂಗಳ ತುಂಬಿ ಹೊರಸೂಸಿ ಸರ್ವಾಂಗದ ರೋಮಕುಳಿಗಳನೆಲ್ಲ ವೇಧಿಸಿತ್ತಾಗಿ ನಾನು ಬಸವಾಕ್ಷರವೆಂಬ ಹಡಗನೇರಿ ಬಸವ ಬಸವ ಬಸವಾ ಎಂದು ಭವಸಾಗರವ ದಾಟಿದೆನಯ್ಯಾ ಅಖಂಡೇಶ್ವರಾ.”
ಷಣ್ಮುಖ ಶಿವಯೋಗಿ ಶರಣರಿಗೆ ಬಸವಣ್ಣ ಕಾಮಧೇನುವಾಗಿ, ಕಲ್ಪವೃಕ್ಷವಾಗಿ, ಚಿಂತಾಮಣಿಯಾಗಿ, ಪರುಷದ ಖಣಿಯಾಗಿ ಕಂಡಿದ್ದಾರೆ. ಆದರೆ ಜೀವನದಲ್ಲಿ ಒಬ್ಬರಲ್ಲಿಯೂ ಜೀವನೋತ್ಸಾಹ ತುಂಬಲು ಅಸಮರ್ಥರಾದ, ಏನನ್ನೂ ಸಾಧಿಸದ ಇಂದಿನ ಕೆಲವು ಕಾವೀಧಾರಿಗಳು ತಾವು ಗುರುಗಳೆಂದೂ ಬಸವಣ್ಣ ಅವರ ಭಕ್ತನೆಂದೂ ಹೇಳುವುದು ನೋಡಿದರೆ…. ಎಲ್ಲಿಯ ಬಸವಣ್ಣ ಎಲ್ಲಿಯ ಕರ್ಮಠತನ
ಅಲ್ಲಮಪ್ರಭುಗಳಾದಿಯಾಗಿ ಎಲ್ಲ ಶರಣರಿಂದ ಜಗದಕ್ಕಾ ಎಂದು ಕರೆಸಿಕೊಂಡ ಅಕ್ಕಮಹಾದೇವಿ, “ಬಸವಣ್ಣಾ, ನಿಮ್ಮಂಗದಾಚಾರವ ಕಂಡು ಎನಗೆ ಲಿಂಗಸಂಗವಾಯಿತ್ತಯ್ಯಾ. ಬಸವಣ್ಣಾ, ನಿಮ್ಮ ಮನದ ಸುಜ್ಞಾನವ ಕಂಡು ಎನಗೆ ಜಂಗಮಸಂಬಂಧವಾಯಿತ್ತಯ್ಯಾ. ಬಸವಣ್ಣಾ, ನಿಮ್ಮ ಸದ್ಭಕ್ತಿಯ ತಿಳಿದು ಎನಗೆ ನಿಜವು ಸಾಧ್ಯವಾಯಿತ್ತಯ್ಯಾ. ಚೆನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು…” ಎಂದು ಮನತುಂಬಿ ತಮ್ಮ ಜ್ಞಾನಗುರುವಾದ ಬಸವಣ್ಣನವರನ್ನು ಸ್ತುತಿಸಿದ್ದಾರೆ.
ಬಸವಣ್ಣನವರು ಸ್ಥಾಪಿಸ ಬಯಸಿದ ಹೊಸ ಸಮಾಜದಲ್ಲಿ, ಯಾವ ಕಟ್ಟು ಕಟ್ಟಳೆಗಳನ್ನು ಹೇರಲಿಲ್ಲ. ಬದಲಿಗೆ ಜನಮಾನಸವನ್ನು ಹೊಸ ವಿಚಾರಗಳಿಗೆ ತೆರೆದುಕೊಳ್ಳುವಂತೆ ಪ್ರೇರೇಪಿಸಿದರು. ಇದು ಚಿಂತನಾಶಕ್ತಿಯನ್ನು ವೃದ್ಧಿಸುವಲ್ಲಿ ನೆರವಾಗುವುದು.
ಜಗತ್ತಿನ ಅನೇಕ ಧರ್ಮಗಳನ್ನು ಅವಲೋಕಿಸಿದಾಗ ಆ ಧರ್ಮಗಳಲ್ಲಿ ಹೊಸ ವಿಚಾರಗಳಿಗೆ ಅವಕಾಶವೇ ಇಲ್ಲದಂತಾಗಿರುವುದನ್ನು ಕಾಣುತ್ತೇವೆ. ಧರ್ಮಗ್ರಂಥಗಳಲ್ಲಿ ಹೇಳಿರುವುದನ್ನು ಚಾಚೂತಪ್ಪದೆ ನಡೆಯಬೇಕು. ಅಲ್ಲಿ ಸ್ವಚಿಂತನೆಗಳಿಗೆ ಅವಕಾಶವೇ ಇರುವುದಿಲ್ಲ. ಆದರೆ ಬಸವಾದಿ ಶರಣರು ಪ್ರತಿಯೊಬ್ಬರ ಒಳಗೂ ನಡೆಯುವ ಚಿಂತನಗಳಿಗೆ ಪ್ರೋತ್ಸಾಹ ಕೊಟ್ಟರು, ಆ ಚಿಂತನೆಗಳನ್ನು ಸಮಾಜೋದ್ಧಾರಕ್ಕೆ ಸಮರ್ಪಕವಾಗಿ ಬಳಸಿಕೊಂಡರು, ತನ್ಮೂಲಕ ಇಡೀ ಸಮಾಜವನ್ನು ತಮ್ಮೊಟ್ಟಿಗೇ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ಇದನ್ನರಿಯದ ಇಂದಿನ ಕುಹಕಿಗಳು, ಸ್ವಾರ್ಥಿಗಳು ಬಸವಣ್ಣ ಹೊಸ ವಿಚಾರವನ್ನೇನೂ ಕೊಡಲಿಲ್ಲ ಅವರು ವೀರಶೈವ ಮತವನ್ನು ಪ್ರಚಾರಮಾಡಿದರು ಅಷ್ಟೇ ಎಂದು ಬೊಬ್ಬೆ ಹೊಡೆಯುವುದನ್ನು ಕಾಣುತ್ತೇವೆ. ಅವರು ಹೇಳುವಂತೆ ಸೃಷ್ಟಿಯ ಜೊತೆಗೇ ಹುಟ್ಟಿದ ವೀರಶೈವ ಪಂಥದಲ್ಲಿ ಯಾವ ನ್ಯೂನತೆಗಳೂ ಇರದಿದ್ದರೆ ಹೊಸ ವಿಚಾರಗಳನ್ನು ಕೊಡುವ ಅವಶ್ಯಕತೆ ಏನಿತ್ತು? ಇದಾವುದನ್ನೂ ಯೋಚಿಸದ ಕುತರ್ಕಿಗಳು ಬಸವಣ್ಣ ಕೇವಲ ಭಕ್ತ ನಾವು ಅವರ ಗುರು ಎಂದು ಸುಳ್ಳು ಹೇಳಿಕೊಂಡು ತಿರುಗುವುದನ್ನು ಕಾಣುತ್ತೇವೆ.
ಶರಣರು ಸಹಜತೆಗೆ ಒತ್ತು ಕೊಡುತ್ತಾರೆ ಮತ್ತು ಕೃತ್ರಿಮತೆಯನ್ನು ಖಂಡಿಸುತ್ತಾರೆ. ಸಹಜಭಾವವನೊಳಕೊಂಡವನು ಸಹಜವಾಗಿಯೇ ವಿನಯಶೀಲನಾಗಿರುತ್ತಾನೆ. ತಾನು ಸಾಧಿಸಬೇಕೆಂದುಕೊಂಡದ್ದನ್ನೆಲ್ಲಾ ಸಾಧಿಸಿದ ಮೇಲೆ ಅಕ್ಕ, “ಎನ್ನ ಭಕ್ತಿ ಬಸವಣ್ಣನ ಧರ್ಮ, ಎನ್ನ ಜ್ಞಾನ ಪ್ರಭುವಿನ ಧರ್ಮ, ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ. ಈ ಮೂವರು ಒಂದೊಂದ ಕೊಟ್ಟೊಡೆನಗೆ ಮೂರು ಭಾವವಾಯಿತ್ತು. ಆ ಮೂರನು ನಿಮ್ಮಲ್ಲಿ ಸಮರ್ಪಿಸಿದ ಬಳಿಕ ಎನಗಾವ ಜಂಜಡವಿಲ್ಲ ಚೆನ್ನಮಲ್ಲಿಕಾರ್ಜುನದೇವರ ನೆನಹಿನಲ್ಲಿ ನಿಮ್ಮ ಕರುಣದ ಕಂದನಾಗಿದ್ದೆ ಕಾಣಾ ಸಂಗನಬಸವಣ್ಣಾ” ಎಂದು ಹೇಳುವ ಮೂಲಕ ವಿನಯತೆಗೆ ಸಾಕ್ಷಿಯಾಗಿ ನಿಲ್ಲುತ್ತಾರೆ. ಬಸವಣ್ಣನವರ ನಡೆ ನುಡಿಯೇ ಹಾಗೆ. ತನ್ನ ಬಳಿಗೆ ಬಂದವರನ್ನು ತನ್ನಂತೆ ಮಾಡುವ ಪರುಷದ ಗುಣ. ಹಾಗಾಗಿ ಅಕ್ಕ ದೇವರನ್ನು ಅವರಲ್ಲಿಯೇ ಕಾಣುತ್ತಾರೆ, ದೇವರ ಸ್ವರೂಪವನ್ನು ಅದರ ಅಖಂಡತೆಗೆ ಚ್ಯುತಿ ಬಾರದಂತೆ ಅರುಹಿದ ಬಸವಣ್ಣನವರನ್ನು ದೇವರಿಗಿಂತ ಎತ್ತರದಲ್ಲಿ ನೋಡುತ್ತಾರೆ. “ದೇವಲೋಕದವರಿಗೂ ಬಸವಣ್ಣನೆ ದೇವರು. ಮರ್ತ್ಯಲೋಕದವರಿಗೂ ಬಸವಣ್ಣನೆ ದೇವರು… ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆದೇವರು” ಎಂದು ಬಣ್ಣಿಸುತ್ತಾರೆ.
ಅಲ್ಲಮಪ್ರಭುದೇವರು, ಬಸವಣ್ಣನವರನ್ನು ತಮ್ಮ ವಚನಗಳಲ್ಲಿ ಕೊಂಡಾಡಿರುವ ರೀತಿ ವಚನಾಸಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. “ಆದಿ ಅನಾದಿ ಎಂಬೆರಡರ ಮೂಲವನೆತ್ತಿ ತೋರಿದನಯ್ಯಾ ಬಸವಣ್ಣನು. ಆದಿ ಲಿಂಗ ಅನಾದಿ ಜಂಗಮವೆಂಬ ಭೇದವ ವಿವರಿಸಿ ತೋರಿದನಯ್ಯಾ ಬಸವಣ್ಣನು. ಕಾಯದ ಜೀವದ ಸಂಬಂಧವ ಅಸಂಬಂಧವ ಮಾಡಿ ತೋರಿದನಯ್ಯಾ ಬಸವಣ್ಣನು. ಎನ್ನ ಆದಿ ಅನಾದಿಯನು ಬಸವಣ್ಣನಿಂದರಿದು ಗುಹೇಶ್ವರಲಿಂಗದಲ್ಲಿ ಸುಖಿಯಾದೆನು ಕಾಣಾ ಚನ್ನಬಸವಣ್ಣ” ಈ ಜಗತ್ತಿಗೆ ಗುರು-ಲಿಂಗ-ಜಂಗಮವೆಂಬ ತ್ರಿವಿಧವನ್ನು ಭೇದಿಸಿ ತೋರಿಸಿಕೊಟ್ಟವರು ಬಸವಣ್ಣ. ಆದರೆ ಗುರು-ಲಿಂಗ-ಜಂಗಮ ತ್ರಿವಿಧಗಳನ್ನು ಎಳ್ಳಷ್ಟೂ ಅರಿಯದ ಅನೇಕರು ತಾವು ಬಸವಣ್ಣನವರಿಗಿಂತ ಶ್ರೇಷ್ಠ ಎಂದು ಊಳಿಡುತ್ತಾರೆ. ಬಸವಣ್ಣ ಯುಗದ ಉತ್ಸಾಹ ಎಂದು ಪ್ರಭುದೇವರು ಮನಸಾರೆ ಅಭಿನಂದಿಸಿದ್ದಾರೆ. ಶರಣರಿಗೆ ಬಸವಣ್ಣನವರನ್ನು ಎಷ್ಟು ಕೊಂಡಾಡಿದರೂ ಸಮಾಧಾನವೇ ಇಲ್ಲ, ಅಷ್ಟು ಎತ್ತರ ಮತ್ತು ವಿಸ್ತಾರ ಬಸವಣ್ಣನವರ ನಿಲುವು.
ಅಲ್ಲಮಪ್ರಭುದೇವರು, “ಸಂಗನಬಸವಣ್ಣನ ಪಾದಕ್ಕೆ ಈರೇಳು ಭುವನವೆಲ್ಲವೂ ಜಯಾ ಜೀಯಾ ಎನುತ್ತಿದ್ದವು” ಎನ್ನುವ ಮೂಲಕ ಅಖಂಡ ಸೃಷ್ಟಿಯೆಲ್ಲವೂ ಬಸವಣ್ಣನ ಪಾದಕ್ಕೆ ಶರಣಾದವು ಎನ್ನುತ್ತಾರೆ, ಕಲ್ಯಾಣವೇ ಪ್ರಣತೆಯಾಗಿ ಭಕ್ತಿರಸವೇ ತೈಲವಾಗಿ, ಆಚಾರವೇ ಬತ್ತಿಯಾಗಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ಮರ್ತ್ಯಲೋಕವೆಲ್ಲವೂ ಆ ಬೆಳಗಿನೊಳಗೆ ತೊಳಗಿ ಬೆಳಗುವಂತಾಯಿತು, ಆ ಅರಿವೆಂಬ ಪ್ರಕಾಶವನ್ನುಂಡು ತುಳಿತಕ್ಕೊಳಗಾದ ಅಸಂಖ್ಯಾತ ಜನ ಶರಣರಾಗಿ ಕಲ್ಯಾಣವೇ ಕೈಲಾಸವಾಯಿತು ಎಂದು ಬಸವ ಹಚ್ಚಿ ಬೆಳಗಿದ ಜ್ಯೋತಿಯನ್ನು ಕೊಂಡಾಡಿದ್ದಾರೆ, ಈ ಬೆಳಗು ಲೋಕದ ಮರೆವಿನ ಕತ್ತಲೆ ತೊಡೆದು ಅರಿವಿನ ಪ್ರಜ್ಞೆಯನ್ನು ಜಾಗೃತಗೊಳಿಸುವುದೇ ಆಗಿತ್ತು. ಅರಿವು ಮತ್ತು ಆಚಾರಗಳ ಸಮನ್ವಯವೇ ಬಸವಣ್ಣ.
ಬಸವಣ್ಣನವರ ಜೀವನ ವಿಧಾನವೇ ಹಾಗಿತ್ತು, ಜೀವ ಜಗತ್ತಿನ ಎಲ್ಲದರೊಳಗೂ ಬೆರೆತು ಯಾವುದಕ್ಕೂ ಅಂಟಿಕೊಳ್ಳದ ನಿರ್ಲಿಪ್ತಭಾವ ಹಾಗೂ ಸದಾ ಸಂತೃಪ್ತಭಾವ. "ನಿಮ್ಮ ಶರಣ ಬಸವಣ್ಣ ಅಚ್ಚಲಿಂಗವ ಹಿಡಿದ ಕಾರಣ, ಬರಿಯ ಲಿಂಗದ ಮಸ್ತಕವಾಯಿತ್ತು ತ್ರಿಜಗದೊಳಗೆ" ಎನ್ನುವ ಮೂಲಕ ಬಸವಣ್ಣ ಈ ಜಗಕ್ಕೆ ದೇವರ ಹೊಸ ಪರಿಕಲ್ಪನೆಯನ್ನು ಕೊಟ್ಟರು ಅದುವೇ ಇಷ್ಟಲಿಂಗ ಎಂದು ಜಗಜ್ಜಾಹೀರು ಮಾಡಿದ್ದಾರೆ. ಆದರೆ ಮಂದಮತಿಗಳಾದ ಕೆಲವರು ಬಸವಣ್ಣ ಪುರಾತನ ವೀರಶೈವ ಮತವನ್ನು ಪ್ರಚಾರಮಾಡಿದರು ಎಂದು ಸುಳ್ಳುಹೇಳಿ ಜನರನ್ನು ಹಾದಿ ತಪ್ಪಿಸುವಲ್ಲಿ ನಿರತರಾಗಿದ್ದಾರೆ.
ಪ್ರಭುದೇವರು ಮೊದಲಬಾರಿ ಕಲ್ಯಾಣಕ್ಕೆ ಬಂದಾಗ ಬಸವಣ್ಣನವರನ್ನು ಕಾಣಬೇಕೆಂಬ ತುಡಿತ ಹೇಗಿತ್ತೆಂದರೆ, "ಅದ್ವೈತವೆಂಬ ಶಿಶುವೆನ್ನ ಕರಸ್ಥಲವ ಸೋಂಕಲೊಡನೆ ಎನ್ನ ತನ್ನಂತೆ ಮಾಡಿತ್ತಾಗಿ, ಎನ್ನ ನಾನೆಂಬ ವಿಚಾರವು ಅರತು ಹೋಯಿತ್ತು ಕೇಳಾ. ಮತ್ತೆ ಅನ್ಯವಿಚಾರವನೆಂತೂ ಅರಿಯೆನು. ಎನ್ನ ಪೂರ್ವಾಪರವ ನಿಮ್ಮಿಂದಲರಿಯಲೆಂದು ಬಂದು ನಿಮ್ಮ ಮರೆಹೊಕ್ಕೆನಾಗಿ, ಸಂಗನಬಸವಣ್ಣನ ಮಹಿಮೆಯ ನಾನೆತ್ತ ಬಲ್ಲೆನು? ಗುಹೇಶ್ವರನ ಸಾಕ್ಷಿಯಾಗಿ ಸಂಗನಬಸವಣ್ಣ ನಿನ್ನ ಅಂತರಂಗದೊಳಗೆ ಬೆಳಗುತ್ತೈದಾನೆ. ಎನಗೊಮ್ಮೆ ಬಸವಣ್ಣನ ಘನವ ತಿಳುಹಿ ಕೊಡಾ ಚೆನ್ನಬಸವಣ್ಣಾ"
ಬಸವಣ್ಣ ಅಪ್ರತಿಮ ಸಿದ್ಧಿಪುರುಷ ಅವರ ಬಗ್ಗೆ ತಿಳಿಯಬೇಕೆಂಬ ಕುತೂಹಲ. ಅದಕ್ಕಾಗಿ ಅವರ ಪರಿಚಯ ಮಾಡಿಕೊಡೆಂದು ಚೆನ್ನಬಸವಣ್ಣನವರನ್ನು ಬೇಡುವ ರೀತಿ ಬಸವಣ್ಣನವರ ಸಾಧನೆ ಮತ್ತು ವ್ಯಕ್ತಿತ್ವ ಯಾವ ಮಟ್ಟದ್ದಾಗಿರಬಹುದು! ಊಹಿಸಲೂ ಅಸಾಧ್ಯ!
ಬಸವಣ್ಣನವರು ಪರಮಾತ್ಮ ಹಾಗೂ ಭಕ್ತರನ್ನು ಬೆಸೆಯುವ ಕೊಂಡಿ. ಅವರನ್ನು ಕಂಡಾಕ್ಷಣವೇ ಮೇರೆಮೀರಿದ ಆನಂದವುಂಟಾಗಿ "ಬಸವಣ್ಣಾ ನಿನ್ನ ಕಂಡು ಎನ್ನ ತನು ಬಯಲಾಯಿತ್ತು. ನಿನ್ನ ಮುಟ್ಟಿ ಮುಟ್ಟಿ ಎನ್ನ ಕ್ರೀ ಬಯಲಾಯಿತ್ತು. ನಿನ್ನ ನೆನೆ ನೆನೆದು ಎನ್ನ ಮನ ಬಯಲಾಯಿತ್ತು. ನಿನ್ನ ಮಹಾನುಭಾವವ ಕೇಳಿ ಕೇಳಿ ಎನ್ನ ಭವಂ ನಾಸ್ತಿಯಾಯಿತ್ತು. ನಮ್ಮ ಗುಹೇಶ್ವರಲಿಂಗದಲ್ಲಿ ನೀನು ಅಜಾತನೆಂಬುದ ನೆಲೆಮಾಡಿ ಭವಪಾಶಂಗಳ ಹರಿದಿಪ್ಪೆಯಾಗಿ, ನಿನ್ನ ಸಂಗದಿಂದಲಾನು ಬದುಕಿದೆನು!” ಎನ್ನುತ್ತಾರೆ. ಪ್ರಭುದೇವರು ಸಾಧನೆಯ ಉತ್ತುಂಗದಲ್ಲಿದ್ದರೂ ಅಹಂ ಎಳ್ಳಷ್ಟೂ ಇರಲಿಲ್ಲ ಅದೇ ಭಾವ ಬಸವಣ್ಣ ಮತ್ತು ಎಲ್ಲಾ ಶರಣರದ್ದೂ, ಆದ್ದರಿಂದಲೇ ಅಲ್ಲಿ ೭೭೦ ಅಮರಗಣಂಗಳು ಒಟ್ಟಿಗೇ ಸೇರಿ ಒಂದೇ ವಿಚಾರದ ಮೇಲೆ ಚರ್ಚಿಸಿ, ತೀರ್ಮಾನಿಸಿ ಅಸಂಖ್ಯಾತ ವಚನಗಳನ್ನು ರಚಿಸಲು ಸಾಧ್ಯವಾಗಿದ್ದು. ಇದೇ ನಿಜವಾದ ನಾಯಕತ್ವ ಗುಣ.
ಅವಿರಳಜ್ಞಾನಿ, ಚಿನ್ಮಯಜ್ಞಾನಿ, ಷಟ್ಸ್ಥಲಬ್ರಹ್ಮಿ ಎಂದೆಲ್ಲಾ ಶರಣ ಸಮೂಹದಿಂದ ಕರೆಸಿಕೊಂಡ ಚೆನ್ನಬಸವಣ್ಣನವರು, ಬಸವಣ್ಣನವರ ಸೋದರಳಿಯನಾದರೂ ಅವರನ್ನು ಗುರುವೆಂದೇ ಭಾವಿಸಿದವರು. ಸೋದರಮಾವ ಎಂಬ ಸಲಿಗೆ ಹತ್ತಿರವೂ ಸುಳಿಯಲಿಲ್ಲ. ಬಸವಣ್ಣನವರೇ ಇಷ್ಟಲಿಂಗ ಜನಕರೆಂದು ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ "ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು……" ಬಸವಣ್ಣಾ ಪ್ರಥಮಾಚಾರ್ಯ ನೀನೆ, ಬಸವಣ್ಣಾ ಲಿಂಗಾಚಾರ್ಯ ನೀನೆ, ಬಸವಣ್ಣಾ ಜಂಗಮಾಚಾರ್ಯ ನೀನೆ, ಬಸವಣ್ಣಾ ಪ್ರಸಾದಾಚಾರ್ಯ ನೀನೆ, ಬಸವಣ್ಣಾ ಎನಗೆ ಸರ್ವಾಚಾರ್ಯ ನೀನೆ, ಬಸವ ಬಿಲ್ಲಾಳಾಗಿ, ಹೊಸಭಕ್ತಿ ಅಂಬಾಗಿ, ಎಸೆದನಯ್ಯಾ ಆ ಲಿಂಗವನು ಗುರಿಮಾಡಿ. ಶಿಶುವ ಬಾಣ ಕೊಂಡು, ಬಸುರಮಧ್ಯವ ತಾಗೆ, ಹೊಸದೆಸೆಗಳೆಲ್ಲಾ ಕಾಣಬಂದವಯ್ಯಾ! ಬಸವಣ್ಣ ಇಷ್ಟಲಿಂಗವನ್ನು ಮುಂದುಮಾಡಿ ಸಮಾಜದ ಓರೆಕೋರೆಗಳನ್ನು ತಿದ್ದಿ, ಅಂಟು ಜಾಡ್ಯಗಳನ್ನು, ಕಂದಾಚಾರಗಳನ್ನು, ಮೂಢನಂಬಿಕೆಗಳನ್ನು ಕಿತ್ತೆಸೆಯುತ್ತಾರೆ, ಆಗ ಜಗತ್ತು ಸುಜ್ಞಾನದ ಬೆಳಕನ್ನು ಕಾಣುವಂತಾಗುತ್ತದೆ. ಶಿವಾಚಾರದ ಧ್ವಜವನೆತ್ತಿ ಮೆರೆದನಯ್ಯಾ ಬಸವಣ್ಣನು ಬಸವಣ್ಣನ ನಿಲವ ಹೊಗಳುವುದು ಎನ್ನಳವಲ್ಲ, ನಿನ್ನವಳಲ ಎಂದು ಬಸವಾ ಬಸವಾ ಎಂದರೂ ಇನ್ನೂ ಏನೋ ಕೊರತೆ ಬಸವಣ್ಣನವರನ್ನು ಸ್ತುತಿಸುವುದರಲ್ಲಿ ಚೆನ್ನಬಸವಣ್ಣನವರಲ್ಲಿ ಕಾಡುತ್ತಿದೆ! ಎಷ್ಟು ಕೊಂಡಾಡಿದರೂ ಸಮಾಧಾನವಿಲ್ಲ. ಇದಲ್ಲವೇ ಗುರು- ಶಿಷ್ಯರ ನಡುವಿನ ಬಾಂಧವ್ಯ. ಬಸವಣ್ಣ ಎಲ್ಲಿಯೂ ತಮ್ಮನ್ನು ಗುರು ಎಂದು ಹೇಳಿಕೊಳ್ಳಲಿಲ್ಲ ಬದಲಿಗೆ ಚೆನ್ನಬಸವಣ್ಣನವರಿಗೆ ನೀನೇ ನನಗೆ ಗುರು ಎಂದು ಹಲವು ಬಾರಿ ಹೇಳಿದ್ದಾರೆ. ಯಥಾ ಗುರು ತಥಾ ಶಿಷ್ಯ!
ಬಸವಣ್ಣ ಮರ್ತ್ಯಲೋಕಕ್ಕೆ ಬಂದ ಕಾರಣವನ್ನು ಚೆನ್ನಬಸವಣ್ಣನವರು "ಬಸವಣ್ಣ ಮರ್ತ್ಯಲೋಕಕ್ಕೆ ಬಂದು ಮಹಾಮನೆಯ ಕಟ್ಟಿ, ಭಕ್ತಿಜ್ಞಾನವೆಂಬ ಜ್ಯೋತಿಯನೆತ್ತಿ ತೋರಲು ಸುಜ್ಞಾನವೆಂಬ ಪ್ರಭೆ ಪಸರಿಸಿತಯ್ಯಾ ಜಗದೊಳಗೆ. ಬೆಳಗಿನೊಳು ತಿಳಿದು ನೋಡಿ ಹರೆದಿದ್ದ ಶಿವಗಣಂಗಳೆಲ್ಲ ನೆರೆದು ಕೂಡಿತಯ್ಯಾ. ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಬಸವಣ್ಣನ ಕೃಪೆಯಿಂದ ಪ್ರಭುದೇವರ ನಿಜವನರಿದು ನಿಶ್ಚಿಂತರಾದರಯ್ಯಾ ಶಿವಗಣಂಗಳೆಲ್ಲರು" ಹೀಗೆ ತಿಳಿಸಿದ್ದಾರೆ. ಕರ್ಮಯೋಗಿ, ಶಿವಯೋಗಿ ಎಂದೆಲ್ಲಾ ಅಭಿದಾನಗಳನ್ನು ಹೊಂದಿ ಶರಣಸಾಹಿತ್ಯಕ್ಕೆ ಅಪ್ರತಿಮ ಕೊಡುಗೆಯನ್ನಿತ್ತವರಲ್ಲಿ ಸಿದ್ಧರಾಮೇಶ್ವರರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಬಹುಶಃ ಸಿದ್ಧರಾಮೇಶ್ವರರು ಬಳಸಿರುವಷ್ಟು ‘ಬಸವ’ ಎಂಬ ಪದವನ್ನು ಕಲ್ಯಾಣದ ಮತ್ಯಾವ ಶರಣರೂ ಬಳಸಿಲ್ಲ. ಬಸವಣ್ಣನವರ ಮೇರು ಗುಣಕ್ಕೆ ಬಸವಣ್ಣನವರೇ ಸಾಟಿ! ಮತ್ತಾರನ್ನೂ ಹೋಲಿಕೆ ಮಾಡಿದರೆ ಅದು ಗುರುವಿಗೆ ಮಾಡುವ ಅಪಚಾರವಾಗುವುದು. ಪ್ರಭುದೇವರು ಸಿದ್ಧರಾಮೇಶ್ವರರನ್ನು ಸೊನ್ನಲಿಗೆಯಿಂದ ಬಸವಣ್ಣನವರನ್ನು ಪರಿಚಯಿಸಲೆಂದೇ ಕಲ್ಯಾಣಕ್ಕೆ ಕರೆದುಕೊಂಡು ಬರುತ್ತಾರೆ. ಬಸವಣ್ಣನವರನ್ನು ಕಂಡ ಸಿದ್ಧರಾಮೇಶ್ವರರು, "ಪಾವನವಾದೆನು ಬಸವಣ್ಣಾ, ನಿಮ್ಮ ಪಾವನಮೂರ್ತಿಯ ಕಂಡು. ಪರತತ್ವವನೈದಿದೆ ಬಸವಣ್ಣಾ, ನಿಮ್ಮ ಪರಮಸೀಮೆಯ ಕಂಡು. ಪದ ನಾಲ್ಕು ಮೀರಿದೆ ಬಸವಣ್ಣಾ, ನಿಮ್ಮ ಪರುಷಪಾದವ ಕಂಡು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದೆ; ಬಸವಣ್ಣಾ, ಬಸವಣ್ಣಾ, ಬಸವಣ್ಣಾ, ನೀನು ಗುರುವಾದೆಯಾಗಿ." ಗುರುವಿಂಗಾದಡೆಯು ಬಸವಣ್ಣನೆ ಬೇಕು; ಲಿಂಗಕ್ಕಾದಡೆಯು ಬಸವಣ್ಣನೆ ಬೇಕು; ಜಂಗಮಕ್ಕಾದಡೆಯು ಬಸವಣ್ಣನೆ ಬೇಕು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆ ಬೇಕು. ನೋಟದ ಭಕ್ತಿ ಬಸವನಿಂದಾಯಿತ್ತು; ಕೂಟದ ಜ್ಞಾನ ಬಸವನಿಂದಾಯಿತ್ತು ಕಾಣಾ. ಎಲ್ಲಿಯ ಶಿವಜ್ಞಾನ ಎಲ್ಲಿಯ ಮಾಟಕೂಟ ಬಸವನಲ್ಲದೆ? ನಿಮ್ಮ ಧರ್ಮವಯ್ಯಾ ಈ ಭಕ್ತಿಯ ಪಥವು… ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮಗೂ ಎನಗೂ ಬಸವಣ್ಣನ ಧರ್ಮವಯ್ಯಾ…” ಎಂದು ಹೇಳುವ ಮೂಲಕ ಇಷ್ಟಲಿಂಗದ ಪರಿಕಲ್ಪನೆಯ ಸೂತ್ರಧಾರಿ ಬಸವಣ್ಣನವರೇ ಎಂದು ಸಾರಿದ್ದಾರೆ, ಹೊಸ ಧರ್ಮದ ಸೂತ್ರಧಾರಿ ಬಸವಣ್ಣನವರೇ ಎಂಬುದು ಸ್ಪಷ್ಟವಾಗುವುದು.
ಶರಣ ಉರಿಲಿಂಗಪೆದ್ದಿ, “…ಆ ಬಸವಣ್ಣನಿಂದುದಯವಾದ ಮಹಾಜ್ಞಾನವೆಂಬ ಚಿದ್ವಿಭುತಿಯನ್ನು ಧರಿಸಿದವರೆಲ್ಲರೂ ಸಾಕ್ಷಾತ್ ದೇವ ಸ್ವರೂಪವೇ ಆಗುವರು…” ಎಂದು ಅರುಹಿದ್ದಾರೆ.
ಬಸವೋತ್ತರ ಯುಗದ ಜಗತ್ತಿನ ಇತರೆ ತತ್ವಜ್ಞಾನಿಗಳು ಹಾಗೂ ಸಮಾಜವಿಜ್ಞಾನಿಗಳು ಬಸವಣ್ಣನವರ ಕುರಿತು ಏನು ಅಭಿಪ್ರಾಯ ಹೊಂದಿದ್ದಾರೆ ಎಂಬುದರ ಪಕ್ಷಿನೋಟ.
೧. ಆರ್ಥರ್ ಮೈಲ್ಸ್: "ಬಸವಣ್ಣನವರನ್ನು ಕುರಿತು ಪೌರಾಣಿಕ ಕತೆಗಳು ಏನೇ ಹೇಳಲಿ, ಅವರು ಭಾರತದ ಮೊಟ್ಟಮೊದಲ ಸ್ವತಂತ್ರ ವಿಚಾರವಾದಿ ಆಗಿದ್ದರೆಂಬ ವಿಷಯ ಅತ್ಯಂತ ಸ್ಪಷ್ಟವಾಗಿದೆ. ಅವರನ್ನು ಭಾರತ ದೇಶದ ಲೂಥರ್ ಎಂದು ಕರೆಯಬಹುದು". (ದಿ ಲ್ಯಾಂಡ್ ಆಫ್ ಲಿಂಗಂ ಗ್ರಂಥದಿಂದ)
೨. ಸಿ. ಪಿ. ಬ್ರೌನ್: ಇಡೀ ಜಗತ್ತಿನ ಅನೇಕ ದಾರ್ಶನಿಕರನ್ನು ಕುರಿತು ಅಭ್ಯಾಸ ಮಾಡಿದ್ದೇನೆ. ಅವರ ಆಲೋಚನೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಆದರೆ ಯಾರೊಬ್ಬರೂ ಕರ್ನಾಟಕದ ಶಿವಶರಣರಂತೆ ಅದನ್ನು ಜಾರಿಗೆ ತರಲು ಪ್ರಯತ್ನಿಸಿರುವುದು ವಿರಳ. ೮೦೦ ವರ್ಷಗಳ ಹಿಂದೆ ಅಂಥಾದ್ದೊಂದು ತಂಡ ಬಸವಣ್ಣನವರ ನೇತೃತ್ವದಲ್ಲಿ ಕೆಲಸ ಮಾಡಿದೆ. ಈ ದೃಷ್ಟಿಯಲ್ಲಿ ಕರ್ನಾಟಕದಲ್ಲಿರುವ ಲಿಂಗಾಯತ ಸಮುದಾಯವನ್ನು ನಾನು ಒಂದು ಸುದೈವೀ ಸಮುದಾಯವೆಂದು ಕರೆಯಬಯಸುತ್ತೇನೆ. (೧೮೪೦ ರಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದರು)
೩. ಫ್ರೊ. ಆರ್. ಡಿ. ರಾನಡೆ: ಬಸವಣ್ಣ, ಪ್ರಭುದೇವ, ಚನ್ನಬಸವಣ್ಣ, ಸಿದ್ಧರಾಮ ಮೊದಲಾದವರ ವ್ಯಕ್ತಿತ್ವ ವಿಚಾರಧಾರೆಯ ಅನುಭಾವವನ್ನು ಗ್ರೀಸ್ ದೇಶದ ಪ್ಲೇಟೋ, ಸಾಕ್ರೆಟೀಸ್, ಫಿಡೋ ಇವರ ವಿಚಾರಧಾರೆಯಾನುಭಾವಗಳಿಗೆ ಹೋಲಿಸುತ್ತಾರೆ. ಹಾಗೆಯೇ ಕ್ರಿಶ್ಚಿಯನ್ ಧರ್ಮಗುರುಗಳಾದ ಜೀಸಸ್ ಕ್ರೈಸ್ತ, ಸೇಂಟ್ ಪಾಲ್, ಸೇಂಟ್ ಅಗಸ್ತನೀಸ್ ಮತ್ತು ಮಾರ್ಟೀನ್ ಲೂಥರ್ ಅವರು ಪ್ರಭು, ಬಸವಣ್ಣ, ಸಿದ್ಧರಾಮ ಮತ್ತು ಚೆನ್ನಬಸವಣ್ಣನವರನ್ನು ಅನುಭಾವದಲ್ಲಿ ಹೋಲಿಸುತ್ತಾರೆ. ಇವರೆಲ್ಲಾ ಜಗದ್ವಂದ್ಯರಾಗಿದ್ದಾರೆ.
೪. ರಾಷ್ಟ್ರಕವಿ ಕುವೆಂಪು: ಬಸವ ಮಾರ್ಗದ ಅನುಷ್ಠಾನಮಾತ್ರದಿಂದ ಜಗತ್ತಿನಲ್ಲಿ ಶಾಂತಿ ಕ್ಷೇಮ ಸೌಹಾರ್ದಗಳನ್ನು ನೆಲೆಗೊಳಿಸಬಹುದು. ಸಾಹಿತ್ಯ ಕ್ರಾಂತಿಯ ಮೂಲಕ ಸಾಮಾಜಿಕ ಕ್ರಾಂತಿಯನ್ನು ಸಾಮಾನ್ಯ ಜನರಲ್ಲಿ ಹರಡಬಹುದೆಂಬ ಉಪಾಯವನ್ನು ಬಳಸಿ ಬಸವಣ್ಣನವರು ಯಶಸ್ವಿಯಾಗಿದ್ದಾರೆ. ಕರ್ನಾಟಕದ ಮಟ್ಟಿಗಾದರೂ ಆತ್ಮಗೌರವ ಆಂದೋಲನ ಪ್ರಾರಂಭಿಸಿದವರೇ ಹನ್ನೆರಡನೇ ಶತಮಾನದ ಬಸವಾದಿ ಶರಣರು.
೫. ಆರ್. ಆರ್. ದಿವಾಕರ್: ತತ್ವಜ್ಞಾನಕ್ಕಿಂತ ಧರ್ಮಾಚಾರದಲ್ಲಿ, ಧರ್ಮಾಚಾರಕ್ಕಿಂತ ನೀತಿ ಮಾರ್ಗದ ಪ್ರಸ್ತಾಪನೆಯಲ್ಲಿ, ನೀತಿಮಾರ್ಗಕ್ಕಿಂತ ಸಮಾಜ ಸುಧಾರಣೆಯಲ್ಲಿ ಬಸವಣ್ಣ ಹೆಚ್ಚಿನ ಕರ್ತೃತ್ವವನ್ನು, ಆತ್ಮವಿಶ್ವಾಸವನ್ನು , ದೂರ ದೃಷ್ಟಿಯನ್ನು ತೋರಿಸಿದನು. ಇದು ಅವನ ವ್ಯವಹಾರಿಕ ದೃಷ್ಟಿಯನ್ನು, ಜ್ಞಾನ-ಭಕ್ತಿ-ಕರ್ಮಗಳ ಸಮ್ಮಿಳನ ಮಾಡುವ ಶೈಲಿಯನ್ನು ವ್ಯಕ್ತಗೊಳಿಸುವುದು. ಈ ಅವರ ಮಹತ್ಕಾರ್ಯದಲ್ಲಿ ಮಿಕ್ಕ ಶರಣರೆಲ್ಲರೂ ಸಹಾಯ ಸಹಕಾರ ನೀಡಿದ್ದರು. ಬಸವಣ್ಣನವರೇ ಇವೆಲ್ಲವುಗಳಿಗೆ ಮೂಲ ಕಾರಣರೂ, ಮುಖ್ಯ ಚಾಲಕರೂ, ಮಧ್ಯಬಿಂದುವೂ ಆಗಿದ್ದರೆಂದು ದೃಢವಾಗಿ ಹೇಳಬಹುದು.
೬. ರಾಬರ್ಟಸನ್ ಇಂಗ್ಲೆಂಡ್: ಕಾರ್ಲಮಾರ್ಕ್ಸ್ ಸಿದ್ಧಾಂತವು ಕಾಯಕದ ಗೌರವ ಹೇಳಿದರೆ, ಬಸವಣ್ಣನವರ ಸಿದ್ಧಾಂತವು ಕಾಯಕದ ಗೌರವದ ಜೊತೆಗೆ ಕಾಯಕದ ದೈವತ್ವವನ್ನು ಹೇಳುತ್ತದೆ.
೭. ಜೆ. ಪಿ. ಸೌಟನ್: ಬಸವಣ್ಣನವರು ೧೨ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪಿಸಿದರು. ಈ ಕಾರ್ಯದಲ್ಲಿ ಅನೇಕ ಶರಣರು ಅವರೊಂದಿಗೆ ಸಹಕರಿಸಿದರು. (ರೆವೊಲೂಶನ್ ಆಫ್ ದಿ
ಡೈನಿಸ್ಟಿಕ್ಸ್ ಗ್ರಂಥದಿಂದ)
೮. ಡೇವಿಡ್. ಎನ್. ಲೊರೆಂಜಿನ್: ಸಮಾಜ ಸುಧಾರಣೆಯ ಕಳಕಳಿಯುಳ್ಳವರಾದ ಕಾಳಾಮುಖರು ಬಸವಣ್ಣನವರ ಪೂರ್ವದಲ್ಲಿ ಸಂಘಟಿತರಾಗಿದ್ದರು. ಬಸವಣ್ಣನವರ ಹೊಸ ಸಮಾಜ ಸುಧಾರಣೆಯಲ್ಲಿ ಇವರು ಸಹಕರಿಸಿದರು. ಇವರ ಎಲ್ಲಾ ಮಠಗಳು ವೀರಶೈವ ಮಠಗಳಾಗಿ ಪರಿವರ್ತಿತವಾದದ್ದು ಸ್ಪಷ್ಟವಾಗಿ ತಿಳಿದು ಬರುತ್ತದೆ. (ದಿ ಕಾಪಾಲಿಕಾಸ್ ಮತ್ತು ಕಾಳಾಮುಖಾಸ್ ಗ್ರಂಥದಿಂದ)
೯. ಆರ್. ಬ್ಲೆಕ್. ಮೈಕೇಲ್: ಲಿಂಗಾಯತರು ೧೨ನೇ ಶತಮಾನದ ಶರಣ ಚಳುವಳಿಯ ಮೂಲಪುರುಷರಾದ ಹೆಸರಾಂತ ಬಸವೇಶ್ವರ ವಚನಗಳನ್ನಾಧರಿಸಿ ಸಂಸ್ಕೃತದಲ್ಲಿರುವ ಹಿಂದೂ ಕೃತಿಗಳನ್ನು ತಿರಸ್ಕರಿಸಿದರು. ಬಸವಣ್ಣನವರೇ ಹೇಳುವಂತೆ ಲಿಂಗಾಯತರು ಶುದ್ಧ ಶಾಖಾಹಾರಿಗಳಾಗಿರುವರು. ಜಾತಿ ಪದ್ಧತಿಗ್ಸಳನ್ನು ತಿರಸ್ಕರಿಸುವವರು ಆಗಿದ್ದಾರೆ. ( ರಿಲಿಜನ್ ಆಫ್ ವೀರಶೈವ ಗ್ರಂಥದಿಂದ)
೧೦. ಡಾ. ಹಿರೇಮಲ್ಲೂರ ಈಶ್ವರನ್: ಲಿಂಗಾಯತ ಸಂಸ್ಕೃತಿಯ ಅಗ್ರ ಪಿತೃ ಬಸವಣ್ಣ. ವ್ಯಕ್ತಿ ವಿವೇಕವಾದದಲ್ಲಿ ಸ್ವಕೀಯತೆಯನ್ನು ಮೆರೆಯುವ ಸಮುದಾಯದಲ್ಲಿ ಅಚಲ ನಂಬುಗೆಯನ್ನು ತಳೆದ ವಿಚಾರವಾದಿಯಾಗಿ ತೋರುತ್ತಾರೆ. ಬುದ್ಧನಿಗೂ ಮಾರ್ಗಸಂಪ್ರದಾಯವನ್ನು, ಸಂಸ್ಕೃತಿಯನ್ನು ಭೇದಿಸುವುದಕ್ಕೆ ಆಗಲಿಲ್ಲ. ಭಾರತದಲ್ಲಿ ಅಂತಹಾ ಪ್ರಯತ್ನದ ಆರಂಭವಾದುದು ಬಸವಣ್ಣನಿಂದ. ಅಪ್ಪಟ ಜನಪದ ಸಮಷ್ಟಿ ಸಂಸ್ಕೃತಿ.
೧೧. ಸಿದ್ದಯ್ಯ ಪುರಾಣಿಕರು: ಮೊದಲು ಬಸವ ಭಕ್ತ, ನಾನೀಗ ಬಸವನಭಕ್ತರ ಭಕ್ತ, ಬಸವನ ಬಳಿದೊತ್ತು ಬಳಗದೊತ್ತು! ನನಗೀಗ ಲಿಂಗಾಯತನೆಂದು ಕರೆಯುವುದಕ್ಕಿಂತ ಬಸವಾಯತನೆಂದು ಕರೆಯುವುದು ಹೆಚ್ಚು ಸೂಕ್ತ, ಸಮಂಜಸ ನಾನು ಬಸವಮತದ ಅನುಯಾಯಿ ನಾನು ಬಸವಾಯತ.
೧೨.ಎಂ. ಆರ್. ಸಾಖರೆಯವರು:ಜನಸಾಮಾನ್ಯರ ಮಧ್ಯೆ ಧರ್ಮ ಒಯ್ದು ಅವರೆಲ್ಲರೂ ಈ ಧರ್ಮವನ್ನಳವಡಿಸಿಕೊಳ್ಳುವಂತೆ ಮಾಡಿದ ಶ್ರೇಯಸ್ಸು ಬಸವನೊಬ್ಬನಿಗೆ ಸಲ್ಲುತ್ತದೆ. ಆತ ಪ್ರಾಯೋಗಿಕವಾಗಿ ಇಡೀ ಜನಸಮುದಾಯಕ್ಕೆ ಮಾದರಿಯಾದ ಬದುಕು ನಡೆಸಿದ. ಇಡೀ ಸಮುದಾಯವನ್ನು ಕಾಯಕ ತತ್ವದ ಮೇಲೆ ಕಟ್ಟಿದ ಬಸವನಿಗೆ ಮತ್ತೊಮ್ಮೆ ನಾವು ಋಣಿಯಾಗಬೇಕು.
ಈ ನುಡಿಗಳು ಸಾಧನೆಯ ಹಿಮಾಲಯವನ್ನು ಏರಿದ ಮಹನೀಯರ ಅನುಭವದ ನುಡಿಗಳು, ಅವರು ಬೆಟ್ಟದ ಮೇಲೇರಿ ನೋಡುತ್ತಿದ್ದರೆ ಬಸವಣ್ಣ ಇನ್ನೂ ಮೇಲೆ ಮೇಲೆ ಅನಂತ ದಿಗಂತದತ್ತ ಕಾಣುತ್ತಿದ್ದಾರೆ. ಆದರೆ ಏನನ್ನೂ ಸಾಧಿಸದ, ಹಿಮದ ಪ್ರಪಾತದಲ್ಲಿ ಬಿದ್ದು, ಕೊಳಚೆಯ ನೀರಿನಲ್ಲಿ ವಿಲವಿಲ ಒದ್ದಾಡುತ್ತಾ ಅದೇ ಸ್ವರ್ಗವೆಂಬಂತೆ ಹಂದಿಯ ಬಾಳನ್ನು ಬಾಳುತ್ತಿರುವ ಅನೇಕಾನೇಕ ಅಜ್ಞಾನಿಗಳು ಬಸವಣ್ಣ ನಮಗಿಂತ ಕೆಳಗಿನವ, ನಾವೇ ಶ್ರೇಷ್ಠ ಎಂದು ಅಹಂಕರಿಸುತ್ತಿದ್ದಾರೆ. ನಾನು ಎಂಬ ಅಹಂಕಾರವೇ ಇವರಿಗೆ ಮುಳುವಾಗಿ ಮಡುವಿನೊಳಗೆ ಮುಳುಗುತ್ತಿದ್ದರೆ, ನಿರಹಂಕಾರವೆಂಬ ಬೆಂಡು, ಬಸವಣ್ಣನೆಂಬ ಗುರು ಮಾತ್ರ ನಮ್ಮನ್ನು ಮೇಲೆತ್ತಿ ಉದ್ಧರಿಸಲು ಸಾಧ್ಯ!
Comments 5
Prakash Patil
May 2, 2018ಉತ್ತಮ ಬರಹ, ಬಸವರಾಜರ ವ್ಯಕ್ತಿ, ವ್ಯಕ್ತಿತ್ವದ ಬಗ್ಗೆ ಅವರ ಸಮಕಾಲೀನ ವಚನಕಾರರ ಮತ್ತು ನಂತರದ ಅನೇಕರು ಹೇಳಿದ ಮಾತುಗಳುನು ಒಂದೆಡೆ ಸೇರಿಸಿ ಓದಲು ಕೊಟ್ಟ, ಬಸವಣ್ಣನವರ ಕುರಿತ ಈ ಬರಹ ಸಕಾಲಿಕ, ಬಸವ ಪ್ರಣೀತ ಲಿಂಗಾಯತ ಚಳುವಳಿ ಕಾವು ಇರುವಾಗ ಬಂದಿರುವ ಈ ಬರಹ ಒಂದು ಉತ್ತಮ ಪ್ರಯತ್ನ. ಶರಣ ಅಣ್ಣಾವರಿಗೆ ಶರಣು ಶರಣಾರ್ತಿಗಳು ?
kishan Bhadravathi
May 4, 2018ಬಸವಣ್ಣನವರದು ಅದ್ಭುತ ವ್ಯಕ್ತಿತ್ವ. ತಿಳಿದುಕೊಂಡಷ್ಟು ಕುತೂಹಲ ಹೆಚ್ಚಿಸುವ, ಆಸಕ್ತಿ ಹುಟ್ಟಿಸುವ ಅವರ ಜೀವನವನ್ನು ವಿವರಿಸುವ ಪ್ರಯತ್ನ ಈ ಲೇಖನ. ವಚನಗಳೊಂದಿಗೆ ಇನ್ನಷ್ಟು ವಿವರಣೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.
ಬಸವರಾಜ ಹಂಡಿ
May 4, 2018ಶರಣ ಡಾ ಪಂಚಾಕ್ಷರಿ ಬರೆದ ಈ ಲೇಖನ ಅತಿ ಸಂತೋಷವನ್ನು ಉಂಟು ಮಾಡುವ ಲೇಖನ. ಶಬ್ದಗಳಲ್ಲಿ ವರ್ಣಿಸಲು ಆಗದಷ್ಟು ಸುಂದರವಾಗಿ ಸರಳವಾಗಿ ಮೂಡಿ ಬಂದಿದೆ. ಇಷ್ಟು ಪರಿಣಾಮಕಾರಿ ಮೂಡಿ ಬರಲು ಕಾರಣವೇನೆಂದರೆ ಪ್ರತಿ ವಾಕ್ಯದಲ್ಲಿ ಬಸವ ಎಂಬ ನಾಮಮೃತವು ಉಲ್ಲೇಖವಾಗಿದೆ. ಬಸವ ಎಂಬದು ಅಯಸ್ಕಾಂತ ಪ್ರತಿಯೊಂದುನ್ನು ತನ್ನಲ್ಲಿ ಜಗ್ಗಿಕೊಳ್ಳುವ ಶಕ್ತಿ ಇದೆ.
ಬುದ್ಧಿಗೇಡಿಗಳು ಮರಳರು ಇಂತ ಬಸವಣ್ಣನ್ನು ತಮ್ಮ ಭಕ್ತ ಅಂತೆ ಬೋಗುಳುತ್ತಾವೆ. ಇಂತವರನ್ನು(ಪಂಚ್ಗಪೀಡೆಗಳನ್ನು) ಜೀವಂತ ಸಮಾಧಿ ಮಾಡಬೇಕು.
ವೀರಶೈವದವರು ಹಾಗು ಪಂಚಪೀಡೆಗಳು ತಮ್ಮ ವೀರಶೈವ ತತ್ವವನ್ನು ಬಸವಣ್ಣ ಪ್ರಚಾರ ಮಾಡಿದಂತೆ ಸುಮ್ಮನೆ ಇಲ್ಲ ಸಲ್ಲದ್ದನ್ನು ಹೇಳುತ್ತಾರೆ.. ಅಯ್ಯೊ ಇವಕ್ಕೆ ಏನು ಗೊತ್ತು ಬಸವಣ್ಣನ ಬಗ್ಗೆ. ಚಿಕ್ಕವಯಿಸಿನಲ್ಲಿ ಅಸಾಮನತೆಯನ್ನು ವಿರೋಧಿಸಿದ ಮಾಹಾನ ದಿರ ವೀರ ಬಸವಣ್ಣ.
ದೇವರ ಆಗಬಹುದು ಸೃಷ್ಟಿಯನ್ನು ತಯಾರು ಮಾಡುವ ಶಕ್ತಿಯನ್ನು ಹೊಂದಿದವರು ಆಗಬಹುದು ಆದರೆ ಬಸವಣ್ಣ ಹಾಗೂ ಬಸವಣ್ಣನ ತರ ಆಗಲಿಕ್ಕೆ ಸಾದ್ಯನೆಯಿಲ್ಲ ಹಾಗು ಆಗಲೇಬಾರದು.
ಬಸವಣ್ಣ ಅಂದರೆ ಏನು ಅಂತ ಶಬ್ದಗಳಲ್ಲಿ ಹೇಳಲಾಗದು, ಮನಸ್ಸಿನಲ್ಲಿ ಊಯಿಸಲಾಗದು ಹಾಗೂ ಭಾವದಲ್ಲಿ ಭಾವಿಸಲಾಗದು. ಇವು ಎಲ್ಲವನ್ನು ಮೀರಿದವ ಬಸವಣ್ಣ.
ಈಗಾದರು ನಮ್ಮ ನಿಮ್ಮ ಮನಸ್ಸಿನಲ್ಲಿ ಬೆಳಗುತ್ತಿರುವ ಜ್ಯೋತಿಯ ಬಸವಣ್ಣ. 12ನೆಯ ಶತಮಾನದಲ್ಲಿ ಕಲ್ಯಾಣದಲ್ಲಿ ಬೆಳುಗುತ್ತಿತ್ತು ಈಗಾದರು ಸಹ ಬೆಳಗುತ್ತಿದೆ.
ಇಷ್ಟಲಿಂಗದ ಅವಿಸ್ಕಾರ/ಸಂಶೋಧನೆ ಬಹಳ ಅದ್ಭುತವಾದದ್ದು. ನಿರಾಕರವನ್ನು ಆಕರವಾಗಿ ಮಾಡಿದ್ದರಿಂದ ಇಡಿ ಸೃಷ್ಟಿಯ ರಹಸ್ಯವನ್ನು ಅರಿಯಲು ಸಾಧ್ಯವಾಯಿತು. ಇಂತ ಜ್ಞಾನವನ್ನು ಅಡ್ಡಪಲ್ಲಿಕೆದಲ್ಲಿ ಸವಾರಿ ಮಾಡುವ ಪಂಚಪೀಡೆಗಳಿಗೆ ಗೊತ್ತು ಆಗಲು ಸಾದ್ಯನೆ ಇಲ್ಲ.
ಪ್ರಭುದೇವರ ಹಾಗೂ ಶರಣರ ವಚನಗಳ ಮುಖಾಂತರ ಬಸವಣ್ಣನ ಬಗ್ಗೆ ಕಲ್ಪಿಸಿಕೊಳ್ಳುಲು ಸಾಧ್ಯವಾಯಿತು. ಬಸವಣ್ಣ ತಮ್ಮ ವಚನಗಳಲ್ಲಿ ತಮ್ಮ ಬಗ್ಗೆ ಏನು ಹೇಳಿಕೊಂಡಿಲ್ಲ.
ನಾಯಕ ಅಂದರೆ ಕೇವಲ ಬಸವಣ್ಣ ಮಾತ್ರ. ತನ್ನ ತರ 770 ಅಮರ ಗಣಗಳಿಗೆ ತಯಾರು ಮಾಡಿದ ಬಸವಣ್ಣ.
ಸಿದ್ಧರಾಮ ಶರಣರನ್ನು ಬಸವಯೋಗಿ ಅಂತ ಕರೆಯುತ್ತಾರೆ.
ಕಳೆದ 2-3 ಶತಮನಗಲ್ಲಿ ಸಹ ಬ್ರಿಟಿಷರು ಮೊದಲು ಮಾಡಿ ಕವಿಗಳು ತತ್ವಜ್ಞಾನಿಗಳು ಬಸವಣ್ಣನ್ನು ಹೊಗಳಿದ್ದಾರೆ.
ಇಷ್ಟು ಸುಂದರವಾಗಿ ಲೇಖನ ಬರೆಯಲು ಪಂಚಾಕ್ಷರಿ ಶರಣರಗೆ ಬಸವಣ್ಣನೆ ಪ್ರೇರಣೆಯ ಕಾರಣ. ಪಂಚಾಕ್ಷರಿ ಶರಣರನ್ನು ದೊಡ್ಡ ಬಸವ ಅನುಯಾಯಿ. ಬಸವಣ್ಣ ಬಗ್ಗೆ ಬಹಳ ಜ್ಞಾನ ಇದೆ .
ನಿಮ್ಮ ಅದ್ಬುತ ಲೇಖನಕ್ಕೆ ನಮ್ಮೆಲ್ಲರಿಂದ ಧನ್ಯವಾದಗಳು ಹಾಗು ಶರಣು ಶರಣಾರ್ಥರಿಗಳು.
ವೀರಣ್ಣ
May 4, 2018ನನ್ನ ಜಿವ ಮಾನದಲ್ಲಿ ಒದಿದ ಅತ್ತ್ಯುಮ ಲೆಖನ.
paramesappa t.N
May 8, 2018Beautiful article, I liked it