ಭಕ್ತನೆಂತಪ್ಪೆ?
ಶರಣರ ದೃಷ್ಟಿಯಲ್ಲಿ ಮಾನವನ ಅಸ್ತಿತ್ವದ ಕೇಂದ್ರ ಬಿಂದು ಜೀವನವೇ ಹೊರತು, ದೇವರು- ಧರ್ಮಗಳಲ್ಲ. ಇಲ್ಲಿ ನಿಂತು ತಮ್ಮ ಸುತ್ತಣ ಲೋಕವನ್ನು, ಅದರ ವ್ಯಾಪ್ತಿಯನ್ನು ಪರಿಭಾವಿಸುವುದು, ಅಂತರಂಗದಲ್ಲಿ ತಿಳಿಯಾಗಿದ್ದು ಸಹಜವಾಗಿ, ಸರಳವಾಗಿ ಬದುಕುವುದು ಅವರ ಧ್ಯೇಯವಾದಂತೆ ತೋರುತ್ತದೆ. ಮೂರು ಹೊತ್ತೂ ಪೂಜೆ ಮಾಡುತ್ತಾ ಕುಳಿತುಕೊಳ್ಳುವುದು, ಯೋಗ-ಧ್ಯಾನಗಳಲ್ಲಿ ದಿನವಿಡೀ ಮುಳುಗಿ ಹೋಗುವುದು, ಸದಾ ದೇವ ನಾಮಸ್ಮರಣೆಯಲ್ಲಿ ಜಪಮಣಿ ಎಣಿಸುವುದು, ಪೂಜಾವ್ರತಗಳನ್ನು, ಏಕಾದಶಿ, ಉಪವಾಸಗಳನ್ನು ಮಾಡುವುದು, ಗುಡಿ-ಗುಂಡಾರಗಳನ್ನು ಸುತ್ತುವುದು, ತೀರ್ಥಕ್ಷೇತ್ರಗಳ ಯಾತ್ರೆ… ಊಹುಂ, ಶರಣರ ಭಕ್ತಿಯ ಪರಿಧಿಯೊಳಗೆ ಇವುಗಳಿಗೆ ಜಾಗವೇ ಇಲ್ಲ. ದೇವರು ಅಥವಾ ಧಾರ್ಮಿಕ ಆಚರಣೆಗಳಿಗಿಂತ ಅವರಿಗೆ ಪ್ರತಿಯೊಬ್ಬರ ವ್ಯಕ್ತಿತ್ವ ವಿಕಾಸ ಮತ್ತು ಆಧ್ಯಾತ್ಮಿಕ ಸಾಧನೆ ಮುಖ್ಯವಾಗಿತ್ತು.
ಷಟಸ್ಥಲವು ಮನೋವಿಕಾಸದ ಯೋಗ ಮಾರ್ಗ. ಮನುಷ್ಯನ ಪರಿಮಿತಿಗಳು ಇಲ್ಲಿ ಆರು ಹಂತಗಳಲ್ಲಿ ಶೂನ್ಯವಾಗುವವು ಮತ್ತು ಕ್ರಮಕ್ರಮವಾಗಿ ವ್ಯಕ್ತಿತ್ವ ವಿಕಾಸವಾಗುತ್ತಾ ಹೋಗುವುದು. ಇದು ಅನಂತ ತತ್ವದ ಜೊತೆಗಿನ ನಿಜವಾದ ತನ್ನ ಅಸ್ಮಿತೆಯನ್ನು (ಐಡೆಂಟಿಟಿ) ಜೀವವು ಅನುಭವಿಸಲು ನೆರವಾಗುವ ಪಥ. ಇದರ ಮೊದಲ ಹೆಜ್ಜೆಯೇ ಭಕ್ತಸ್ಥಲ. ಭಕ್ತಿ ಅಂದರೆ ಶುದ್ಧ ಸುಂದರವಾದ ಪ್ರೇಮ. ಬದುಕಿನ ಬಗ್ಗೆ, ಲೋಕದ ಬಗ್ಗೆ, ಮಾಡುವ ಕ್ರಿಯೆಗಳ ಬಗ್ಗೆ ತಂತಾನೇ ಅರಳಿಕೊಳ್ಳುವ ಉತ್ಕಟವಾದ ಪ್ರೀತಿ. ಈ ದೇಹವೇ ನಾನಲ್ಲ, ಇದರೊಳಗಿನ ವಿಶೇಷ ಚೇತನ ತಾನು ಎಂದು ತಿಳಿದುಕೊಳ್ಳುವವನೇ ಭಕ್ತ. ಆಗ ಆತನ ಆದ್ಯತೆಗಳೇ ಬೇರೆಯಾಗುತ್ತವೆ. ತನ್ನ ನಿಜ ಸ್ವರೂಪದ ನೆಲೆಯನ್ನು ಬೆನ್ನುಹತ್ತುತ್ತಾನೆ. ‘ದೇಹ ಕೇಂದ್ರಿತ’ ಜೀವನ ನಡೆಸುತ್ತಿದ್ದವನು ‘ಜೀವ ಕೇಂದ್ರಿತ’ ಬದುಕಿನತ್ತ ಗಮನ ಕೊಡುತ್ತಾನೆ.
ಪ್ರಭುಲಿಂಗ ಲೀಲೆಯಲ್ಲಿ ಚಾಮರಸ ಕವಿಯು ಭಕ್ತನಂಗದಲ್ಲಿ ಮಾತ್ರ ಗುರು, ಲಿಂಗ, ಜಂಗಮ, ಪ್ರಸಾದ, ಪಾದೋದಕ, ಅಷ್ಟಾವರಣ ತತ್ವಗಳು ವ್ಯಕ್ತವಾಗುತ್ತವೆ ಎಂದು ಹೇಳಿದ್ದಾನೆ. “ಶಿವನ ಕಾಯವೇ ಭಕ್ತ; ಭಕ್ತನ ಕಾಯವೇ ಶಿವ. ದೇವ ಭಕ್ತನೆಂಬ ಅಂತರವು ಎಲ್ಲಿಹುದೋ?” ಎಂದು ಪ್ರಶ್ನಿಸುತ್ತಾರೆ ಸಿದ್ಧಲಿಂಗ ಯತಿಗಳು. “ಗುರುವಿಂಗೂ ಲಿಂಗಕ್ಕೂ ಜಂಗಮಕ್ಕೂ ಭಕ್ತನಂಗವೆ ಮಂದಿರ” ಎಂಬುದು ಅರಿವಿನ ಮಾರಿತಂದೆ ಶರಣರ ನಿಲುವು. ಮೈಲಾರ ಬಸವಲಿಂಗ ಶರಣರು, “ಹರನಿಂದ ಭಕ್ತನಧಿಕ”, “ಭಕ್ತನು ದ್ವಿತೀಯ ಶಿವನು” ಎನ್ನುತ್ತಾರೆ. ಅಂದರೆ ಭಕ್ತನು ಶಿವನಲ್ಲದೆ ಬೇರೆ ಅಲ್ಲ ಎಂದು ಹೇಳಿದ್ದಾರೆ. ಬಸವಣ್ಣನವರು ಕಟ್ಟಬಯಸಿದ ಸಮತಾ ಸಮಾಜದಲ್ಲಿ ಮೂಲ ಅರ್ಹತೆಯೇ (basic qualification) ಭಕ್ತನಾಗುವುದು. ಹಾಗೆ ಭಕ್ತನಾಗುವ ಮೂಲಕ ಭಕ್ತಿಪಥದ ಪಯಣ ಆರಂಭ. ವೈಯಕ್ತಿಕವಾಗಿ ತನ್ನನ್ನು ಕಂಡುಕೊಳ್ಳುತ್ತಾ, ಸಾಮಾಜಿಕವಾಗಿ ತನ್ನನ್ನು ತೆರೆದುಕೊಳ್ಳುತ್ತಾ ಹೋಗುವ ವಿಕಸನಾ ಪಥ ಇದು. ಗುರುವಾಗಿ, ಲಿಂಗವಾಗಿ, ಜಂಗಮವಾಗಿ ಅರಿವಿನ ನೆಲೆಯಲ್ಲಿ ತನ್ನನ್ನು ವಿಸ್ತರಿಸಿಕೊಳ್ಳುವುದು. “ನೀನೇ ಆ ಹಾದಿಯಾಗುವವರೆಗೆ, ನೀ ನಡೆಯುವ ಮಾರ್ಗವನ್ನು ಪ್ರಯಾಣಿಸುವುದು ಸಾಧ್ಯವಿಲ್ಲ” ಎಂಬ ಗೌತಮ ಬುದ್ಧನ ಮಾತಿನಂತೆ.
ಆಚಾರವನರಿಯದೆ ವಿಭವವಳಿಯದೆ
ಕೋಪವಡಗದೆ ತಾಪ ಮುರಿಯದೆ
ಬರಿದೆ ಭಕ್ತರಾದೆವೆಂದು ಬೆಬ್ಬನೆ ಬೆರೆವವರ ಕೇಡಿಂಗೆ
ನಾನು ಮರುಗುವೆನು ಕಾಣಾ ಗುಹೇಶ್ವರಾ.
ಉತ್ತಮ ಆಚಾರ- ವಿಚಾರಗಳನ್ನು ಬದುಕಿನಲ್ಲಿ ಅರಿತು ಅಳವಡಿಸಿಕೊಳ್ಳುವವ ನಿಜವಾದ ಭಕ್ತ. ಅಂಥವನಿಗೆ ತನ್ನ ಆಸ್ತಿ- ಅಂತಸ್ತು, ಐಶ್ವರ್ಯದ ವಿಷಯದಲ್ಲಿ ಅಹಂಕಾರ ಇರುವುದಿಲ್ಲ. ಕೋಪತಾಪಗಳಿಗೆ ಒಳಗಾಗುವುದಿಲ್ಲ. ಸದಾಚಾರಿಯಾಗದೇ, ಭೋಗ-ವಿಲಾಸಗಳಿಗೆ ಬೀಗದೆ, ಕ್ರೋಧ ಗೆಲ್ಲಲಾರದೆ, ನೋವು-ತಾಪಗಳನ್ನು ದಾಟಿ, ಸಮಾಧಾನ ಅಳವಡಿಸಿಕೊಳ್ಳಲಾರದೇ, ಒಣ ಆಡಂಬರದ ಪೂಜಾದಿಗಳಲ್ಲಿ ತೊಡಗಿ, ತಾವು ಭಕ್ತರಾದೆವೆಂದು ಬೀಗುವುದಾದರೆ ಅದು ಅಧಃಪತನದ ಹಾದಿ. ಇಂಥ ನಿಷ್ಪ್ರಯೋಜಕ ಬದುಕಿಗೆ ನಾನು ಮರುಗುತ್ತೇನೆ ಎನ್ನುತ್ತಾರೆ ಅಲ್ಲಮರು.
ಮುಪ್ಪು- ಮರಣಗಳಿಗೆ ಅಂಜಿ ಹಿಡಿಯುವ ಹಾದಿ ಇದಲ್ಲ. ಹೆದರಿಕೆಯಿಂದ ಮಾಡುವುದು ತೋರಿಕೆಯ ಭಕ್ತಿ. ಆಗಲೂ ಕರ್ಮ ಕೋಟಲೆಗಳು ತಪ್ಪುವುದಿಲ್ಲ. ದುಃಖ ನೀಗುವುದಿಲ್ಲ. ಭಕ್ತನ ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ ಶರಣ ಅಘ್ಘವಣಿ ಹಂಪಯ್ಯ.
ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ,
ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ.
ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ
ತೊತ್ತಾಗಿಪ್ಪುದು.
ಕೋಪವೆಂಥದೆಂದರಿಯ, ತಾಪತ್ರಯಂಗಳು ಮುಟ್ಟಲಮ್ಮವು,
ವ್ಯಾಪ್ತಿಗಳಡಗಿದವು.
ಲಿಂಗವನೊಳಕೊಂಡ ಪರಿಣಾಮಿ.
ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು…
ಭಕ್ತ ಸುಳ್ಳು ಹೇಳಲಾರ, ವ್ಯಸನಗಳ ಗುಲಾಮನಾ��ಲಾರ. ವಿಷಯಂಗಳತ್ತ ಕಣ್ಣೆತ್ತಲಾರ. ಅವನ ಕಾರ್ಯಗಳಲ್ಲಿ ದಯೆ, ಮಾನವೀಯತೆಗಳು ತುಂಬಿರುತ್ತವೆ, ದೇವ ನಾಮ ಸ್ಮರಣೆಯು ಸಹ ಅವನಿಚ್ಛೆಗೆ ಸೇರಿದ್ದು. ಕೋಪ ತಿಳಿಯದು. ತಾಪತ್ರಯಗಳು ಹತ್ತಿರವೂ ಸುಳಿಯಲಾರವು. ಯಾವ ಮಿತಿಗಳೂ ಬಂಧಿಸಿಡಲಾರವು. ಸಮಷ್ಟಿ ಭಾವದಲ್ಲಿ ಕರಗಿ ಹೋದ ಆತನ ಭಕ್ತಿಯ ಪಥವು ಈ ಲೋಕಕ್ಕೇ ಹೊಸದು. ಹೀಗೆ ಶರಣರು ಭಕ್ತಿಪಥಕ್ಕೆ ಹೊಸ ವ್ಯಾಖ್ಯಾನವನ್ನೇ ಬರೆದರು.
ತೋರಿಕೆಯ ಬದಲಾವಣೆ ಭಕ್ತನದಲ್ಲ. ಮನಕ್ಕೆ ಮನ ಸಾಕ್ಷಿ ಎಂಬಂತೆ ಬದುಕುವುದರಿಂದ ಆತ್ಮಸಾಕ್ಷಿ ಅವನಲ್ಲಿ ಜಾಗೃತವಾಗಿರುತ್ತದೆ. ಸತ್ಯವನ್ನು ಅರಸುವುದು ಹೊರಗಲ್ಲಾ, ಒಳಗೆ, ಅಂತರಂಗದ ಕವಾಟಗಳಲ್ಲಿ. ನಮ್ಮನ್ನು ನಾವು ಕಳೆದುಕೊಂಡದ್ದು ಲೋಕದ ಗದ್ದಲಿನಲ್ಲಿ ಅಲ್ಲ. ಮನಸ್ಸಿನ ಜಂಜಾಟಗಳಲ್ಲಿ, ಕ್ಲೇಶಗಳಲ್ಲಿ. ಜೀವವು ತನ್ನ ಭವದ ಸಿಕ್ಕುಗಳನ್ನು ಒಳಗಿನಿಂದಲೇ ಬಿಡಿಸಿಕೊಳ್ಳಬೇಕು.
“ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ,
ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ,
ಮದ ಐದನೆಯ ಭವಿ, ಮತ್ಸರ ಆರನೆಯ ಭವಿ.
ಇಂತೀ ಷಡ್ವಿಧ ಭವಿಯ ತಮ್ಮೆದೆಯೊಳಗೆ ಇಂಬಿಟ್ಟುಕೊಂಡು…” ಭಕ್ತರೆನಿಸಿಕೊಳ್ಳುವವರನ್ನು ಹೀಯಾಳಿಸುತ್ತಾರೆ ಚೆನ್ನಬಸವಣ್ಣನವರು. ಈ ಅವಗುಣಗಳನ್ನೆಲ್ಲಾ ತನ್ನೆದೆಯೊಳಗೆ ಸಾಕಿಕೊಂಡು ಮೇಲೆ ಪೂಜೆ, ಪುನಸ್ಕಾರಗಳನ್ನು ಮಾಡಿದರೆ ಭಕ್ತನಾಗಲಾರ. ಭವಸ್ತರದ ಬವಣೆಗಳನ್ನು ಮೀರದೆ ದುಃಖದಿಂದ ಬಿಡುಗಡೆ ಇಲ್ಲ. ಸಂಕಟ, ತಾಪತ್ರಯಗಳ ಗೋಜಲುಗಳಿಂದ ಮನಸ್ಸನ್ನು ಬಿಡಿಸಿಕೊಳ್ಳುವುದು ಸಾಧ್ಯವಿಲ್ಲ.
ಸಜ್ಜನಸನ್ನಹಿತವಾದ ಭಕ್ತಿ, ಹೊತ್ತಿಗೊಂದು ಪರಿಯುಂಟೆ ಹೇಳಾ? ಒಮ್ಮೆ ಅಹಂಕಾರ ಒಮ್ಮೆ ಕಿಂಕಿಲವೆ? ಮನಕ್ಕೆ ಮನ ಸಾಕ್ಷಿಯಾಗಿ ಮಾಡುವ ಭಕ್ತನಲ್ಲಿ ಗುಹೇಶ್ವರನಿಪ್ಪನಲ್ಲದೆ, ಪ್ರಪಂಚಿನೊಳಗಿಲ್ಲ ಕಾಣಾ ಸಂಗನಬಸವಣ್ಣಾ.
ಒಳ್ಳೆಯ ಆಚಾರಗಳನ್ನು ಅಳವಡಿಸಿಕೊಂಡು ಆರಂಭಿಸಿದ ಹೊಸ ಪಯಣದಲ್ಲಿ ಮನಸ್ಸು ನಿಶ್ಚಲವಾಗಿರುತ್ತದೆ. ಮತ್ತೆ ಡೋಲಾಯ, ದ್ವಂದ್ವಗಳು ಅಲ್ಲಿ ಸುಳಿಯಲಾರವು. ಅಂಥವನ ವ್ಯಕ್ತಿತ್ವ ಸಮಯಕ್ಕೆ ತಕ್ಕಂತೆ ಬದಲಾಗದು. ಒಮ್ಮೆ ಅಹಂ, ಮತ್ತೊಮ್ಮೆ ವಿನಮ್ರತೆಗಳು ಕಾಣಿಸಿಕೊಳ್ಳಲಾರವು.
ಭಕ್ತಿ ಎಂತಹದಯ್ಯಾ
ದಾಸಯ್ಯ ಮಾಡಿದಂತಹದಯ್ಯಾ.
ಭಕ್ತಿ ಎಂತಹದಯ್ಯಾ
ಸಿರಿಯಾಳ ಮಾಡಿದಂತಹದಯ್ಯಾ.
ಭಕ್ತಿ ಎಂತಹದಯ್ಯಾ
ನಮ್ಮ ಬಲ್ಲಾಳ ಮಾಡಿದಂತಹದಯ್ಯಾ.
ಭಕ್ತಿ ಎಂತಹದಯ್ಯಾ
ಕೂಡಲಸಂಗಮದೇವಾ, ನೀ ಬಾಣನ ಬಾಗಿಲ ಕಾದಂತಹದಯ್ಯಾ.
ನಡೆ-ನುಡಿಗಳ ಸಾಮರಸ್ಯವೇ ಭಕ್ತಿ. ನಮ್ಮ ಮಾತು ಮತ್ತು ಕೃತಿಗಳು ಎಷ್ಟರ ಮಟ್ಟಿಗೆ ಒಂದೇ ಇರಬೇಕು ಎಂದು ತಿಳಿಸಲು ಬಸವಣ್ಣನವರು ಕೊಡುವ ನಿದರ್ಶನಗಳನ್ನು ಗಮನಿಸಿ. ನಡೆ- ನುಡಿಯ ಹೊಂದಾಣಿಕೆಯ ಪ್ರತೀಕವಾಗಿ ಮಾತ್ರ ದಾಸಯ್ಯ, ಸಿರಿಯಾಳ ಮತ್ತು ಬಲ್ಲಾಳರ ಉದಾಹರಣೆಗಳನ್ನು ಇಲ್ಲಿ ತೆಗೆದುಕೊಳ್ಳಬೇಕು. (ಅವರ ಕಥೆಯಲ್ಲಿನ ಉಗ್ರ ಮಾರ್ಗಗಳನ್ನಲ್ಲ) ದಾಸಯ್ಯ, ಸಿರಿಯಾಳ ಮತ್ತು ಬಲ್ಲಾಳರು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಎಂಥ ಕಠಿಣ ಪರಿಸ್ಥಿತಿಗೂ ಸಿದ್ಧರಾದಂಥವರು. ಪ್ರಾಣ, ಮಾನಗಳನ್ನೂ ಲೆಕ್ಕಿಸದಂಥವರು. ಅವರ ನಿಷ್ಠುರತೆಗೆ ದೇವರೇ ತಲ್ಲಣಿಸಿ, ಕಾವಲಿಗೆ ನಿಲ್ಲುತ್ತಾನೆ. ಅಂದರೆ ನೇರ ನಡೆ- ನುಡಿಯ ಮನುಷ್ಯನಿಗೆ ಲೋಕವೇ ತಲೆಬಾಗುತ್ತದೆ, ಸಮಾಜವು ಅಂಥ ಮೌಲ್ಯಗಳ ಕಾವಲಿಗೆ ನಿಲ್ಲುತ್ತದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ಓಡುವಾತ ಲೆಂಕನಲ್ಲ, ಬೇಡುವಾತ ಭಕ್ತನಲ್ಲ
ಓಡಲಾಗದು ಲೆಂಕನು, ಬೇಡಲಾಗದು ಭಕ್ತನಲ್ಲ.
ಪರಾವಲಂಬಿ ಬದುಕನ್ನು ಶರಣರು ಒಪ್ಪುವುದಿಲ್ಲ. ಅವರು ಸ್ವಾಭಿಮಾನಿಗಳು. ನಮ್ಮ ಅನ್ನವನ್ನು ನಾವೇ ಸಂಪಾದಿಸಿಕೊಳ್ಳಬೇಕು. ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕು. ಭಕ್ತ ಪರಿಶ್ರಮಿ. ಆತ ಅಪ್ಪಿಕೊಂಡದ್ದು ಶ್ರಮಜೀವನ. ಭಕ್ತನ ಮೂಲಭೂತ ಲಕ್ಷಣವೇ ಕಾಯಕ. ಸಮಯ, ಸಂದರ್ಭಗಳಲ್ಲಿ ಒಡೆಯನಿಗೆ ಬೆಂಗಾವಲಾಗಿ ನಿಲ್ಲದೆ ಹೆದರಿ ಓಡುವವ ಲೆಂಕ(ಸೇವಕ)ನಲ್ಲ. ಕೈಯೊಡ್ಡಿ ಬೇಡಿ ಬದುಕುವವ ಭಕ್ತನಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಬಸವಣ್ಣನವರು.
ಭಕ್ತ ನಿರಭಿಮಾನಿ, ಕ್ಷಮಾಶೀಲ ಮತ್ತು ಶಾಂತ. ಭಕ್ತನಾಗುವುದೆಂದರೆ ಸುಲಭದ ಹಾದಿಯಲ್ಲ. ಮೊದಲು ಸದ್ಭಾವವು ಅಳವಡಬೇಕು. ತನು ಮನ ಧನಗಳ ವಿಷಯದಲ್ಲಿ ಅಹಂಭಾವ ನಶಿಸಿರಬೇಕು. ಭೃತ್ಯ ಭಾವದಲ್ಲಿ ಅಂದರೆ ಸೇವಾ ಕೈಂಕರ್ಯದಲ್ಲಿ ದಾಸೋಹ ಮಾಡಬೇಕು. ಇದಾವ ಆಂತರಿಕ ಬದಲಾವಣೆಗಳು ಇಲ್ಲದೆ ನಾನು ಭಕ್ತ ಎಂದು ಹೇಳಿಕೊಳ್ಳುವವ ‘ಶಬ್ದ ಸೂತಕಿ’ ಎನ್ನುತ್ತಾರೆ ಪ್ರಭುದೇವರು. ನಿಜವಾದ ಭಕ್ತನಲ್ಲಿ ‘ತನ್ನಿಂದಲೇ ಆಯಿತ್ತು’ ಎನ್ನುವ ಭಾವವೇ ಸುಳಿಯಲಾರದು. ತನು ಮನ ಮತ್ತು ಧನಗಳನ್ನು ಗುರು- ಲಿಂಗ ಮತ್ತು ಜಂಗಮಕ್ಕೆ ನೀಡಿ ನಾನು ಭಕ್ತನಾದೆ ಎಂದು ಹೇಳಿಕೊಳ್ಳುವವ ನಿಜವಾದ ಭಕ್ತನಲ್ಲ. ಅವರವರ ಸೊತ್ತನ್ನು, ಅವರವರಿಗೆ ಸಲ್ಲಬೇಕಾದುದನ್ನು ಅವರವರಿಗೆ ಅರ್ಪಿಸುತ್ತಿದ್ದೇನೆ ಎಂಬ ಮನಸ್ಥಿತಿ ಅವನದಾಗಿರಬೇಕು. ಅಲ್ಪ ಮನದವ ಭಕ್ತನಾಗಲಾರ. ಅದಕ್ಕೆ “ತಾನು ಭೋಗಿಸುವಂತಹ ಸಕಲದ್ರವ್ಯಂಗಳೆಲ್ಲವನು, ಜಂಗಮಕ್ಕೆ ಕೊಟ್ಟು ತಾನು ಕೊಳುವುದೇ ಭಕ್ತನ ಕ್ರಮ” ಎನ್ನುತ್ತಾಳೆ ಶರಣೆ ಅಕ್ಕಮ್ಮ.
ಜೀವನಲ್ಲಿ ದೇವನ ಅಸ್ತಿತ್ವವನ್ನು ತೋರಿಸುವುದೇ ಭಕ್ತಿ ಪಥ. ಅದಕ್ಕಾಗಿ ತನು ಮನಗಳು ಸಜ್ಜಾಗಬೇಕು. ಆದರೆ ಸಂಸಾರದ ಬಾಹುಗಳು ಅನಂತ. ನಡೆದಲ್ಲೆಲ್ಲಾ ನೆರಳಂತೆ ಹಿಂಬಾಲಿಸುತ್ತವೆ. ಸಹಜ ಸ್ವಭಾವ ಮನುಷ್ಯನನ್ನು ನಿಯಂತ್ರಿಸುತ್ತಲೇ ಇರುತ್ತದೆ. ರಾಗ ದ್ವೇಷಗಳು ಅವನನ್ನು ಛಿದ್ರಗೊಳಿಸುತ್ತಲೇ ಇರುತ್ತವೆ. ಅಹಂಕಾರ- ಮಮಕಾರಗಳು ಸೀಮಾರೇಖೆ ಹಾಕುತ್ತವೆ. ಲೋಕದಲ್ಲಿ ಹುಟ್ಟಿ ಲೋಕದ ಜಾಲಕ್ಕೆ ಸಿಲುಕದಿರುವುದು ಹೇಗೆ? ಜಪ-ತಪಗಳಿಂದ ಇದಕ್ಕೆಲ್ಲಾ ಮುಕ್ತಿಯಿಲ್ಲ. “ಕೋಟ್ಯಾನುಕೋಟಿ ಜಪವ ಮಾಡಿ ಕೋಟಲೆಗೊಳ್ಳಲದೇಕೆ?” ಎಂದು ಬಿಡುಗಡೆಯ ನಿಜವಾದ ಹಾದಿ ಬೇರೆಯೇ ಇದೆ ಎಂದು ಬಸವಣ್ಣನವರು ಸೂಚಿಸುತ್ತಾರೆ. ಶರಣರು ಹಿಡಿದ ಹಾದಿಯ ಬಗೆಗಿನ ಶ್ರದ್ಧೆ, ನಂಬಿಕೆಗಳಿಂದ, ಅವರ ಒಡನಾಟದಿಂದ, ಅನುಭಾವ ಚರ್ಚೆಗಳಿಂದ ಪೂರ್ವಾಶ್ರಯಗಳನ್ನು ಕಳೆದುಕೊಳ್ಳಬಹುದು. ಹೀಗೆ ದೇಹ ಪ್ರಕೃತಿಯ ಹುಟ್ಟು ಗುಣಗಳನ್ನು ಮೀರಿದಾಗಲೇ ಬದುಕು ಊರ್ಧ್ವಮುಖಿಯಾಗಿ ಚಲಿಸಬಲ್ಲದು. ಆಗ ಜೀವನಲ್ಲಿ ನಿರಂತರ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇದೊಂದು ರೂಪಾಂತರ ಪ್ರಕ್ರಿಯೆ. ಭಕ್ತನ ಪರಿವರ್ತಿತ ಸ್ಥಿತಿಯನ್ನು ಸುಂದರವಾಗಿ ಅರ್ಥೈಸುವ ವಚನ ಹೀಗಿದೆ:
ಭಕ್ತ ಭಕ್ತನೆಂಬರು,
ಪೃಥ್ವಿಯ ಪೂರ್ವಾಶ್ರಯವ ಕಳೆಯನಲರಿಯದನ್ನಕ್ಕ,
ಅಪ್ಪುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ತೇಜದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ವಾಯುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ಆಕಾಶದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ಸೋಮಸೂರ್ಯರ ಕಳೆಗಳ ಪೂರ್ವಾಶ್ರಯವ
ಕಳೆಯಲರಿಯದನ್ನಕ್ಕ,
ಆತ್ಮನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,_
ಭಕ್ತರೆಂದು ಲಿಂಗವ ಪೂಜಿಸುವವರ ಕಂಡು
ನಾನು ಬೆರಗಾದೆ ಗುಹೇಶ್ವರಾ.
ಪೃಥ್ವಿ, ಅಪ್, ತೇಜ್, ವಾಯು, ಆಕಾಶ (ಪಂಚಭೂತಗಳು) ಮತ್ತು ಆತ್ಮ, ಸೂರ್ಯ, ಚಂದ್ರ- ಇವು ಅಷ್ಟ ಪ್ರಕೃತಿಗಳು. ಇವುಗಳ ಅನಂತ ರೂಪವೇ ವಿಶ್ವ. ಇವುಗಳ ವ್ಯಷ್ಟಿ ರೂಪವೇ ನಮ್ಮ ದೇಹ. ಇಲ್ಲಿ ಆತ್ಮ ಎಂದರೆ ಜೀವ, ಸೂರ್ಯ ಎಂದರೆ ಬುದ್ಧಿ ಮತ್ತು ಚಂದ್ರ ಎಂದರೆ ಮನಸ್ಸು. ಇವುಗಳ ಆಶ್ರಯದಲ್ಲಿ ಸಾಗುವ ಬದುಕು ಎಲ್ಲಾ ವಿಷಯಗಳ ಆಗರ. ಕರ್ಮ ಕೋಟಲೆಗಳ ಸಾಗರ.
ಸಂಸಾರಿಗೆ ಜಗತ್ತು ಮತ್ತು ದೇಹ ಎರಡೂ ಭೋಗ ಭೂಮಿ. ಭೋಗಿಸುವ ಭಾವವು ದುರ್ಬಳಕೆಗೆ, ಶೋಷಣೆಗೆ ದಾರಿ ಮಾಡಿಕೊಡುತ್ತದೆ. ಸೃಷ್ಟಿ ತನಗಾಗಿ ಎಂಬ ಸ್ವಾರ್ಥದ ವಾಸನೆಯಲ್ಲೇ ಮನುಷ್ಯನ ಕ್ರೌರ್ಯದ ಮುಖಗಳಿವೆ. ಪೂರ್ವಾಶ್ರಯವನ್ನು ಕಳೆದುಕೊಳ್ಳುವುದೆಂದರೆ, ಸೃಷ್ಟಿಯನ್ನು ಭೋಗ ಭಾವದಿಂದ ಕಾಣದೇ ಜೀವಭಾವದಿಂದ ಕಾಪಾಡುವುದು. ಅದೇ ರೀತಿ ದೇಹವನ್ನು ಕೇವಲ ಉಪಭೋಗದ ಸಾಧನ, ಕಾಮಾದಿಗಳ ತಾಣ ಎಂದುಕೊಳ್ಳದೆ ಸಾಧನೆಯ ನೆಲೆ ಎಂದು ಅರಿಯಬೇಕು. ಈ ದೇಹವು ನಿಸರ್ಗದ ಅತ್ಯದ್ಭುತ ಸೃಷ್ಟಿ. ಅದ್ಭುತವಾದ ದೇಹದಲ್ಲಿ ಅದ್ಭುತ ಶಕ್ತಿ ಇದೆ. ಆನಂದ ಅನುಭವಿಸುವ ಸಾಧನವಾಗಿ ದೇಹ ಪಳಗಬೇಕು, ಕ್ಷಣಿಕ ಭೋಗ ಲಾಲಸೆಗಳಿಗೆ ದಣಿದು, ಕ್ಷಯಿಸಿ ಹೋಗಬಾರದು ಎಂದು ವಿವೇಕ ಎಚ್ಚರಿಸಬೇಕು. ಆಗ ಸಂಸಾರದಲ್ಲಿದ್ದೂ ಸಾಂಸಾರಿಕ ತಾಪದಿಂದ ಮುಕ್ತಿ ಹೊಂದುವುದು ಹೇಗೆಂದು ಭಕ್ತ ಅರಿಯಬಲ್ಲ.
ಭವವು ಹಿಂಗಿದಲ್ಲಿ ಅಭವು ಹತ್ತಿರವಾಗುವುದು. ಭವದ ನೆನಹು ದೂರವಾದಾಗ ಪರಮ ಸತ್ಯದ ಜಾಡು ಗೋಚರಿಸುತ್ತದೆ. ಬಾಳಿನ ನಿಜವಾದ ಹಾದಿ ದಕ್ಕಿದ ತೃಪ್ತಿ ಭಾವ ಮೂಡುತ್ತದೆ. ಹಿಂದಿನ ಲೌಕಿಕದ ಜಂಜಾಟ ಮನಸ್ಸಿನಿಂದ ಮರೆಯಾಗುತ್ತದೆ. ಅದೇ ನಿತ್ಯ ಸತ್ಯ ಪಥ. ಭವ ಪಥದಿಂದ ದೂರವಾದ ಶಿವಪಥ. ಸುಖದುಃಖಗಳನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುವ ಭಾವ ಮೂಡಿದರೆ ಅಲ್ಲಿಗೆ ಕೋಟಳೆಗಳ ಚಕ್ರದಿಂದ ಮುಕ್ತಿ ಸಿಕ್ಕಂತೆ. ಇದೇ ಭಕ್ತನ ನಡೆ. ಇದೇ ಭಕ್ತಿಯ ಹಿರಿಮೆ.
ಬಸವ ಬಾರೈ, ಮರ್ತ್ಯಲೋಕದೊಳಗೆ ಭಕ್ತರುಂಟೆ ಹೇಳಯ್ಯಾ
ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯಾ.
ನಾನೊಬ್ಬನೆ ಭಕ್ತನು,
ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮ,
ಲಿಂಗ ನೀನೇ ಅಯ್ಯಾ ಕೂಡಲಸಂಗಮದೇವಾ.
ದೇವರು ಭಕ್ತರನ್ನು ಅರಸುತ್ತಿದ್ದಾನೆ, ಅಂದರೆ ಸಮಷ್ಟಿಗೆ ಭಕ್ತನ ಅಗತ್ಯವಿದೆ ಎಂಬುದನ್ನು ಮತ್ತು ತಾನು ಭಕ್ತನಾಗುವ ಮೂಲಕ ಮರ್ತ್ಯಲೋಕದ ಎಲ್ಲ ಭಕ್ತರನ್ನೂ ದೇವಸ್ವರೂಪಿಯಾಗಿ ಕಾಣಬೇಕೆಂಬ ಸಂದೇಶವನ್ನೂ ಅತ್ಯಂತ ಪರಿಣಾಮಕಾರಿಯಾಗಿ ಇಲ್ಲಿ ತಿಳಿಸಿದ್ದಾರೆ. ದೇವ ಸ್ವರೂಪಿಯಾದ ಸಮಷ್ಟಿಯ ಎದುರು ತಾನು ಭಕ್ತ ಎಂದುಕೊಳ್ಳುವ ಮಧುರಾತಿ ಮಧುರ ಭಾವವು ನಿಜವಾದ ಭಕ್ತನಿಂದ ಮಾತ್ರವೇ ಸಾಧ್ಯ.
ಅರ್ಥಪ್ರಾಣಾಭಿಮಾನ ನಿಮ್ಮದೆಂಬೆ,
ಮತ್ತೆಯೂ ಆಸೆ ಬಿಡದನ್ನಕ್ಕ ಭಕ್ತನೆಂತಪ್ಪೆನಯ್ಯಾ
ಶರಣನೆಂತೆನಿಸುವೆನಯ್ಯಾ,
ಕೂಡಲಸಂಗನ ಶರಣರ ಸಕಲರತಿಗೆ ಸಲ್ಲದನ್ನಕ್ಕ.
ನಾನು ಗಳಿಸುವ ಹಣ, ಪ್ರಾಣ ಮತ್ತು ನನ್ನತನ ಎಲ್ಲವೂ ದೇವರಿಗೆ ಸೇರಿದ್ದು, ಸಮಷ್ಟಿಗೆ ಸಂಬಂಧಿಸಿದ್ದು ಎಂದು ಅಂದುಕೊಂಡರೂ ಮನಸ್ಸು ಮತ್ತೆ ಮತ್ತೆ ಆಸೆಯ ಬೆನ್ನು ಹತ್ತುವುದಾದರೆ ನಾನು ಹೇಗೆ ಭಕ್ತನೆಂದು ಕರೆದುಕೊಳ್ಳಲಿ? ಶರಣನೆಂದು ಅನ್ನಿಸಿಕೊಳ್ಳಲಿ? ಎಂದು ತಮ್ಮನ್ನೇ ಕೇಳಿಕೊಳ್ಳುತ್ತಾರೆ ಬಸವಣ್ಣನವರು.
ತನ್ನನ್ನು ತಾನೇ ನಿಕಷಕ್ಕೆ ಒಡ್ಡಿಕೊಳ್ಳುವ, ತೀಡಿಕೊಳ್ಳುವ, ನಿರ್ಣಯಿಸಿಕೊಳ್ಳುವ ತೆರೆದ ಹೃದಯ ಭಕ್ತನಿಗೆ ಬೇಕು. ಆಗಲೇ ಸ್ವ ಸುಧಾರಣೆ ಸಾಧ್ಯ. ಆತ್ಮ ವೀಕ್ಷಣೆಯ ಮೂಲಕ ಬಸವಣ್ಣನವರು ಆ ಹಾದಿ ತೋರಿಸಿಕೊಡುತ್ತಾರೆ. ಹೆಜ್ಜೆ ಹೆಜ್ಜೆಗೂ ತಮ್ಮನ್ನು ಒರೆಗೆ ಹಚ್ಚಿ ನೋಡಿಕೊಳ್ಳುತ್ತಾರೆ.
ನೆಲ್ಲ ಗಿಡುವಿನೊಳಗೆ ನಾನೊಂದು ಹುಲ್ಲಾಗಿ ಹುಟ್ಟಿದೆನಯ್ಯಾ.
ಆನು ಭಕ್ತನೆಂದೆಂಬೆನೆ, ಆನು ಯುಕ್ತನೆಂದೆಂಬೆನೆ
ಆನು ಕೂಡಲಸಂಗನ ಶರಣರೊಕ್ಕುದನುಂಡಡೆ,
ಪಾದರಕ್ಷೆಗೆ ಸರಿಯಹೆನೆ
ಹೀಗೆ ಬಸವಣ್ಣನವರು ಪದೇಪದೇ ತಮ್ಮನ್ನು ಪ್ರಶ್ನಿಸಿಕೊಂಡರು. ಅನುಮಾನವಿದ್ದಲ್ಲಿ ಕೊಡವಿಕೊಂಡರು. ಲೌಕಿಕ ವ್ಯಾಮೋಹಗಳಾಗಲಿ, ಉನ್ನತ ಪದವಿಯ ಅಹಮ್ಮಿಕೆಯಾಗಲಿ ಹತ್ತಿರ ಸುಳಿಯದಂತೆ ನೋಡಿಕೊಂಡರು. ಹೀಗಾಗಿ ವಿನಯದ ಸಾಕಾರ ರೂಪವೇ ಆಗಿ ನಿಂತರು. ಅದೇ ಕಾರಣಕ್ಕೆ ಅವರ ವ್ಯಕ್ತಿತ್ವಕ್ಕೆ ಸೂಜಿಗಲ್ಲಿನ ಸೆಳೆತವಿತ್ತು. ಭಕ್ತಿ ಎಂದರೆ ಬಸವ. ಬಸವ ಎಂದರೆ ಭಕ್ತಿ ಎನ್ನುವಷ್ಟು ಸಾಮ್ಯತೆ ಏರ್ಪಟ್ಟಿತ್ತು.
ಮಾವಿನ ಕಾಯೊಳಗೆ ಒಂದು ಎಕ್ಕೆಯಕಾಯಿ ನಾನಯ್ಯ.
ಆನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ.
ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯಾ…
ಭಕ್ತಿಯ ರೂಪವೇ ಆದ ಬಸವಣ್ಣನವರು ತಮ್ಮ ಭಕ್ತತನವನ್ನೇ ಅನುಮಾನಿಸುತ್ತಾರೆಂದರೆ ಉಳಿದ ಶರಣರು ಅದೆಷ್ಟು ಎಚ್ಚರಿಕೆ ವಹಿಸಿ ಭಕ್ತನಾಗುವ ಯೋಗ್ಯತೆಯನ್ನು ಸಂಪಾದಿಸಿರ ಬೇಡ? ತಮ್ಮ ವಿಚಾರಗಳಿಗೆ ತಕ್ಕಂತೆ ಬದುಕನ್ನು ಬೆಸೆದುಕೊಳ್ಳಲು ಅವರೂ ಅಡಿಗಡಿಗೆ ತಮ್ಮನ್ನು ವಿಮರ್ಶಿಸಿಕೊಳ್ಳುತ್ತಲೇ ಹೋದರು. ಗುಣ- ದೋಷಗಳನ್ನು ಮುಚ್ಚುಮರೆಯಿಲ್ಲದೆ ಬರೆದಿಟ್ಟರು. ಸ್ವಭಾವದ ಎಲ್ಲ ಅಂಕುಡೊಂಕುಗಳನ್ನು ಎತ್ತಿ ತೋರಿಸುತ್ತಲೇ ಸರಿಪಡಿಸಿಕೊಂಡರು. ಹೀಗಾಗಿ ತಾವು ಅಂದುಕೊಂಡಿದ್ದ ಭಕ್ತಿಯ ಆದರ್ಶವನ್ನು ‘ಮುಖವಾಡ’ ಮಾಡಿಕೊಳ್ಳದೆ ವ್ಯಕ್ತಿತ್ವ ಅದನ್ನು ಸಂಪೂರ್ಣವಾಗಿ ಜೀರ್ಣಿಸಿಕೊಂಡು ನಿಲ್ಲುವುದು ಸಾಧ್ಯವೆಂದು ತಮ್ಮ ಬದುಕಿನ ನಿದರ್ಶನದ ಮೂಲಕವೇ ತೋರಿಸಿಕೊಟ್ಟರು.
ಭಕ್ತಿಯ ನೆಲೆಯಲ್ಲಿ ಶರಣರು ಹೀಗೆ ತಮ್ಮ ಪ್ರಜ್ಞೆಯನ್ನು ವಿಸ್ತರಿಸಿಕೊಂಡರು. ಭಾವನೆಗಳ ಆದಿ, ಛಲದ ಹಾದಿ, ಸಮಾಜಮುಖಿ ನಿಲುವು, ನಿಷ್ಠುರ ನಡೆ, ಮಾನವೀಯ ಸೆಲೆ ಎಲ್ಲಕ್ಕೂ ಅವರಿಗೆ ಭಕ್ತಿಯೇ ಆಧಾರವಾಯಿತು. ಸ್ವ ವಿಮರ್ಶೆಗೆ, ಆತ್ಮ ನಿರೀಕ್ಷಣೆಗೆ, ಆತ್ಮ ನಿವೇದನೆಗೆ ಸೋಪಾನವಾಯಿತು. ಆ ಭಕ್ತಿಯ ಬೆಳಕಿನಲ್ಲಿ ಅವರು ಆಂತರಿಕ ಸ್ವಾತಂತ್ರ್ಯವನ್ನು ಅನುಭವಿಸಿದರು. ವೈಚಾರಿಕತೆಗೆ ಕಾವು ಕೊಟ್ಟರು. ಕ್ರಾಂತಿಯ ಕಿಡಿ ಹಚ್ಚಿದರು, ಇತಿಹಾಸಕ್ಕೆ ಹೊಸ ತಿರುವು ಕೊಟ್ಟರು. ಮನಸ್ಸಿನಲ್ಲಿ ಎಷ್ಟು ಸ್ವತಂತ್ರರೋ, ನಿರ್ಭೀತರೋ ನಿಜ ಜೀವನದಲ್ಲೂ ಹಾಗೆಯೇ ಬದುಕಲು ಅವರಿಗೆ ಸಾಧ್ಯವಾಯಿತು. ರಾಜಾಡಳಿತದ ಸಾಮ್ರಾಜ್ಯವೊಂದರಲ್ಲಿ ಸ್ವಚ್ಛಂದವಾಗಿ, ಯಾರ ಹಂಗಿಲ್ಲದೆ ತಮ್ಮ ಕಾಯಕವನ್ನು ನೆಚ್ಚಿಕೊಂಡು ದಿಟ್ಟರಾಗಿ ಬಾಳಲು ಅವರಿಗೆ ಶಕ್ತಿ ನೀಡಿದ್ದೇ ಭಕ್ತಿ.