Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
Share:
Articles March 9, 2023 ಮಹಾದೇವ ಹಡಪದ

ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ

ತಾನು ವಿವೇಕಿಯಾದಲ್ಲದೆ, ಜ್ಯೋತಿಯ ಬೆಳಗ ಕಾಣಬಾರದು… ಇದು ಸ್ವಾನುಭಾವ ಸುಖಿ ಲಿಂಗಮ್ಮ ತಾಯಿಯ ಮಾತು. ಜಗತ್ತಿಗೆ ವಿವೇಕದ ಬಗ್ಗೆ ಹೇಳುವ ಕಲೆ ಬಹಿರ್ಮುಖ ವ್ಯಾಪಾರದ ಸರಕು ಹೇಗೋ ಹಾಗೆಯೇ ಅಂತರಂಗದ ರಹದಾರಿಯಾಗಿಯೂ ಕಲೆ ಕೆಲಸ ಮಾಡುತ್ತದೆ. ಬಹುಶಃ 770 ಅಮರಗಣಂಗಳಲ್ಲಿ 500 ಕ್ಕೂ ಹೆಚ್ಚು ಗಣಾಧೀಶರು ಕಲಾವಿದರೇ ಆಗಿದ್ದವರು. ಅವರ ಕೌಶಲಭರಿತ ಕಲಾಭಿವ್ಯಕ್ತಿ ಕೇವಲ ಡಾಂಭಿಕವಾದದ್ದಲ್ಲ. ಆಡಂಬರವಲ್ಲ, ತೋರುಗಾಣಿಕೆಯ ಪ್ರಸ್ತುತಿ ಮಾತ್ರವಾಗಿರದೆ ಜನಸಾಮಾನ್ಯರ ಮನಸ್ಸನ್ನು ಸೂಜಿಗಲ್ಲಿನ ಹಾಗೆ ಸೆಳೆಯುವಷ್ಟು ಶಕ್ತಿಯುತವಾದದ್ದು ಆಗಿತ್ತು. ಆದ್ದರಿಂದಲೇ ಬಸವಾದಿ ಪ್ರಮಥರ ವಿಚಾರಗಳು ಅಷ್ಟು ಬೇಗನೇ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ತಲುಪಿದವು. ಅಂಥ ಶಕ್ತಿಯುತವಾದ ಕಲೆಯನ್ನ ಶರಣ ಸಂಕುಲ ಬಹಳ ಬೇಗ ಮರೆತದ್ದು ಯಾಕೆ…? ಅಲೆಮಾರಿ ಸಮುದಾಯಗಳು ಇಂದಿಗೂ ಕಲ್ಯಾಣದ ಕತೆಯನ್ನು ತಮ್ಮ ಕಲಾಭಿವ್ಯಕ್ತಿಯಲ್ಲಿ ಹೇಳುತ್ತಲೇ ಇದ್ದರು ಕೂಡ ಆ ಸಮುದಾಯಗಳನ್ನು ಗುರುತಿಸುವಲ್ಲಿ ಕರ್ನಾಟಕದ ಮಠಗಳು ತಾರತಮ್ಯ ಮಾಡಿವೆ ಎನ್ನುವುದು ಸತ್ಯ.

ಶರಣರು ಜಾತಿಗಳನ್ನು ಮೀರಿಕೊಂಡು ಮಾನವತಾವಾದಿಗಳಾದರೆ ತದನಂತರದ ಸಾಂಸ್ಥಿಕ ಬೆಳವಣಿಗೆಗಳೆಲ್ಲವೂ ಜಾತಿಯ ಮೇಲರಿಮೆಯಲ್ಲಿಯೇ ತಮ್ಮ ಮೈತುರಿಕೆಯನ್ನು ಕೆರೆದುಕೊಂಡದ್ದು ಲಿಂಗಾಯತ ಧರ್ಮಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ಜಾತಿಗಳ ಮೇಲರಿಮೆ ಎನ್ನುವುದು ತಾನು ವಿವೇಕಿಯಾಗುವ ಅಂತರಂಗದ ಆವಿಷ್ಕಾರವನ್ನು ನಾಶ ಮಾಡಿ ಬಾಹ್ಯಾಡಂಬರದ ಸೊಗಸನ್ನೇ ಹೆಚ್ಚುಗಾರಿಕೆಯನ್ನಾಗಿ ಮಾಡಿತು. ಅದರ ಬೆನ್ನುಬಿದ್ದವರೆಲ್ಲರೂ ವಿವೇಕಿಯಾದಂತೆ ನಟಿಸುತ್ತಿದ್ದಾರೆ ಎನಿಸತೊಡಗಿತು. ಹಾಗಾದರೆ ಕಲೆಯ ಮೂಲಕ ಪ್ರಚುರಪಡಿಸಲಾದ ಶರಣರ ತತ್ವ ಯಾವುದು…? ಹಾಗೆ ಪ್ರಚುರಪಡಿಸಿದ ನಿಜವಾದ ಆ ಶರಣಜೀವಿಗಳಿಗೆ ಶರಣರು ಯಾವ ಮಾನ್ಯತೆ ಕೊಟ್ಟಿದ್ದಾರೆ…? ಈ ಬಗೆಯ ಹಲವು ಪ್ರಶ್ನೆಗಳು ಕಾಡತೊಡಗಿದವು. ಆ ಪ್ರಶ್ನೆಗಳಿಗೆ ಉತ್ತರವಾಗಿ ಮಂಟೇದ ಸಿಕ್ಕರು. ಶಿಂದೋಳ್ಳರು, ದಕ್ಕಲಿಗರು, ಬೇಡಜಂಗಮರು, ಕಾರಣಿಕ ನುಡಿಯುವವರು, ಸಾರೋ ಅಯ್ಯನಾರು ಹೀಗೆ ಸಾಲುಸಾಲು ಸಮುದಾಯಗಳು ತಮ್ಮ ಜೀವನವನ್ನು ಶರಣರ ವಿಚಾರಧಾರೆಗಾಗಿಯೇ ಮುಡುಪಿಟ್ಟು ಬದುಕಿರುವ ಸಂಗತಿಗಳು ಕಾಣತೊಡಗಿದವು. ಅವರೆಲ್ಲ ನಡೆ-ನುಡಿ ಬೆಸೆಯುವ ಕಲಾಕಾಯಕ ಜೀವಿಗಳು. ಈಗೀಗ ಐದ ಹತ್ತು ವರ್ಷಗಳಿಂದೀಚೆಗೆ ಅವರೊಳಗೆ ಅಂಬೇಡ್ಕರ್ ಪ್ರಜ್ಞೆ ಎದ್ದು ಕಾಣುತ್ತಿದೆ. ಇದಕ್ಕೂ ಮೊದಲು ಅವರೊಳಗಿದ್ದ ವಿವೇಕ ಬಸವಣ್ಣನವರದ್ದು ಮಾತ್ರವಾಗಿತ್ತು. ಬಸವಾದಿ ಶರಣರ ತತ್ವಪ್ರಚಾರಕ್ಕಾಗಿ, ಅನುಷ್ಠಾನಕ್ಕಾಗಿ ಮಠಗಳನ್ನು ಸ್ಥಾಪಿಸಲಾಯ್ತು, ಮಠಾಧೀಶರನ್ನೂ ನೇಮಿಸಲಾಯ್ತು. ಇಡೀ ಸಮುದಾಯದ ಹಣದ ಹೊಳೆ ಮಠಗಳತ್ತ ಹರಿಯತೊಡಗಿದ್ದೇ ಶರಣರ ತತ್ವಗಳು ಬೋಧೆಯ ಸಂಗತಿಗಳಾದವು. ಲಿಂಗಮ್ಮತಾಯಿ ಹೇಳುವ ಹಾಗೆ ವಾಗ್ಜಾಲವ ಕಲಿತು ನುಡಿಯುವ ಕಾಕು ಮನುಜರ ಪಾಂಡಿತ್ಯ ಪ್ರದರ್ಶನಗಳಾಗತೊಡಗಿದವು. ಅಲ್ಲಿಗೆ ಕಲೆಯ ಮೂಲಕ ಹಲವು ಭಾಷೆಗಳನ್ನು ತಲುಪುವ ಜೀವಂತಿಕೆಯನ್ನು ಕಳೆದುಕೊಂಡವು.

ಧರ್ಮ ಎನ್ನುವುದು ಮೂರು ಬಗೆಯಲ್ಲಿ ಹೆಚ್ಚು ವ್ಯಾಪಕವಾಗಿ ಹರಡುತ್ತದೆ. ಒಂದು- ರಾಜಾಜ್ಞೆಯ ಮೂಲಕ, ಎರಡು- ಆಚರಿಸಲ್ಪಡುವ ತತ್ವಜ್ಞಾನದ ಮೂಲಕ, ಇಲ್ಲವೇ ಮೂರನೆಯ ಮಾರ್ಗ ಕಲೆಯ ಮೂಲಕ ಮನುಷ್ಯನ ಅಂತರಂಗದೊಳಗೆ ಹೊಕ್ಕು ಅರಿವನ್ನು ವಿಸ್ತರಿಸಬೇಕು. ರಾಜಾಜ್ಞೆಯ ಮೂಲಕ ಹೇರಲ್ಪಟ್ಟ ಧರ್ಮಗಳು ಅಪರೂಪದಲ್ಲಿ ಅಪರೂಪದ ಅಳಿದುಳಿದ ಧರ್ಮಗಳಾಗಿ ಭಾರತದಲ್ಲಿ ಇಂದಿಗೂ ಬದುಕಿವೆ. ಆಚರಣೆಯ ಭಾಗವಾಗಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಕಾಣಿಸಿಕೊಳ್ಳುತ್ತವೆ. ಬೌದ್ಧ ಧರ್ಮ ಕಲೆಯ ಮೂಲಕವೇ ಹೆಚ್ಚು ಪ್ರಚಾರ ಪಡೆದು ಜಗತ್ತಿನ ಶ್ರೇಷ್ಠ ಧರ್ಮವಾಗಿ ಬೇರೆಬೇರೆ ಜನಾಂಗ, ದೇಶ, ಭಾಷೆಗಳಲ್ಲೆಲ್ಲ ಪ್ರಚುರಗೊಂಡಿದೆ. ಇಂದು ಬೌದ್ಧ ಧರ್ಮ ಯಾವ ದೇಶಗಳಲ್ಲೆಲ್ಲ ವ್ಯಾಪಕವಾಗಿದೆಯೋ ಅಲ್ಲೆಲ್ಲ ಬೌದ್ಧ ತತ್ವವು ಗಟ್ಟಿಯಾಗಿ ನೆಲೆ ನಿಲ್ಲಲು ಮುಖ್ಯ ಕಾರಣ ಅವರ ಆಚರಣೆಯಲ್ಲಿ ಕಲೆಯೂ ಸೇರಿಕೊಂಡಿರುವ ವಿಧಾನ ಬಹಳ ವಿಶಿಷ್ಟವಾಗಿದೆ. ಭಾರತದಲ್ಲಿ ಕೂಡ ರಾಮಾಯಣ ಮಹಾಭಾರತದಂತಹ ಕಥಾನಕಗಳು ಕಲೆಯ ಮೂಲಕವೇ ಜನರೊಳಗೆ ವೈದಿಕ ಧರ್ಮದ ಜಾಗೃತಿಯನ್ನು ಮಾಡುತ್ತ ಬಂದಿವೆ. ಹಾಗಾದರೆ ಶರಣರ ತತ್ವಗಳ ಪ್ರಚಾರದ ಮಾದರಿಗಳು ನಮ್ಮೊಳಗೆ ಯಾಕೆ ಘನಗೊಳ್ಳಲಿಲ್ಲ…? ಶರಣರ ವಿಚಾರಗಳಿಗೆ ಪೂರಕವಾದ ವಾತಾವರಣ ಇಂದಿಗೂ ತತ್ವಪದಗಳಲ್ಲಿದ್ದರೂ ಅದು ಜನಸಾಮಾನ್ಯರ ಕಲೆಯಾಗಿ ಯಾಕೆ ಮಾರ್ಪಡಲಿಲ್ಲ ಎನ್ನುವುದು ಸದಾಕಾಲ ನನ್ನಂಥ ಅನೇಕ ಬಸವಬಳ್ಳಿಗಳನ್ನು ಕಾಡುವ ಸಂಗತಿಯಾಗಿತ್ತು. ನಾವು ಆಧುನಿಕವಾಗಿ ಎಷ್ಟೇ ಭಾವುಕ ಪ್ರಪಂಚವನ್ನು ನಟನೆ ನಾಟಕದ ಮೂಲಕ ಸೃಷ್ಟಿಸಿದರೂ ಬಸವಾನುಯಾಯಿಗಳು ಅದನ್ನು ಆ ಕ್ಷಣದ ಮಾತಿನ ತೆವಲಿಗೆ ಸಿಕ್ಕ ವಸ್ತುವಾಗಿ ಮಾತಾಡಿಕೊಳ್ಳತೊಡಗಿದರೆ ಹೊರತು ವಿಚಾರ ಆಚಾರವಾಗಿ ಬದಲಾಗುವ ಯಾವ ಸೂಚನೆಗಳು ಸಿಗದಿದ್ದಾಗ ನಮ್ಮ ಕಲೆಯ ಅಭಿವ್ಯಕ್ತಿಯ ಮಾರ್ಗವನ್ನು ಬದಲಿಸಬೇಕೆಂಬ ಆಲೋಚನೆ ದೃಢವಾಯ್ತು. ಹಳೆಕಾಲದ ಮುದುಕರಿಗೆ ತಲುಪಬೇಕಾದ ಅಗತ್ಯ ಬಸವ ಚಿಂತನೆಗಿಲ್ಲ. ಅದು ಕೇವಲ ಭಜನಾರೂಪದ ಕಲೆ ಮಾತ್ರವಲ್ಲದೆ ರಾಜಕೀಯ ಕಾರಣಕ್ಕೂ ಬಳಕೆಯಾಗುವ ಕಲೆಯಾಗುತ್ತಿದೆ ಎಂಬ ಹೆದರಿಕೆ ನಮ್ಮನ್ನು ಕಾಡತೊಡಗಿತು. ಹಾಗಿದ್ದರೆ ಬಸವಾದಿ ಶರಣರ ನಡೆ-ನುಡಿ ಸಿದ್ಧಾಂತ ವೇದಿಕೆ ಮೇಲಿನವರಿಗೂ ಅಲ್ಲದೆ ವೇದಿಕೆ ಮುಂದೆ ಕುಳಿತ ಎಲೈಟ್ ಸಮುದಾಯದವರಿಗೂ ಮಾತ್ರವಲ್ಲದೆ ಮುಖ್ಯವಾಗಿ ಜನಸಾಮಾನ್ಯರನ್ನು ತಲುಪಲು ಯಾವ ರೂಪದಲ್ಲಿ ಹೋಗಬೇಕೆಂದು ಚಿಂತಿಸುವಾಗ ಹೊಳೆದದ್ದು ಬೀದಿನಾಟಕ! ಹಾದಿಬೀದಿಗಳಲ್ಲಿ ಬೆಳೆದ ಬೃಹತ್ ಜನಸಮೂಹವನ್ನು ಮುಟ್ಟಲು ಬಸವಬಳ್ಳಿಗಳು ಬೀದಿಯ ಮೂಲಕ ಬಸವತತ್ವ ಪ್ರಚಾರಕ್ಕೆ ತೊಡಗಿದೆವು.

ಕಲ್ಯಾಣದಿಂದ ಉಳವಿವರೆಗೆ ಎಂಬ ಅಡಿಬರಹದಲ್ಲಿ ಬಸವಬಳ್ಳಿಗಳಾದ ನಾವು ಎಂಟ-ಹತ್ತು ಜನ ಒಂದು ತಿಂಗಳು ಅರಿವಿನ ಯಾತ್ರೆ ಮಾಡಬೇಕೆಂದು ಹಂಬಲಿಸಿದೆವು. ಈ ಕಲಾಯಾತ್ರೆಯ ಮೂಲ ಪ್ರೇರಕ ನಮ್ಮೆಲ್ಲರ ಅಂತರಂಗದ ಹೆಬ್ಬಯಕೆ. ಆ ಬಲವೊಂದು ಬೆನ್ನಿಗೆ ಇದ್ದುದರಿಂದಾಗಿ ನಾವು ಧೈರ್ಯವಾಗಿ ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆಯನ್ನು ಆರಂಭಿಸಿದೆವು. ಯಾವ ಸಂಘಟಕರಿಗೂ ನಾಲ್ಕು ದಿನಕ್ಕಿಂತ ಮೊದಲು ಹೇಳಬಾರದೆಂದು ನಿರ್ಧರಿಸಿದ್ದೆವು. ಕಾರಣವಿಷ್ಟೆ ಈಗಾಗಲೇ ಬಸವ ಚಿಂತನೆ ಎಲೈಟ್ ರೂಪದಲ್ಲಿ ಹಾಡಿಹೊಗಳುವ ಮೈಕಾಸುರನ ಸಂಗತಿಯಾಗಿರುವುದಲ್ಲದೆ, ರಾಜಕೀಯ ಹಿತಾಸಕ್ತಿಗಳನ್ನು ಒಡಲೊಳಗೆ ಕಾಪಿಟ್ಟುಕೊಂಡ ಹವಳವಾಗಿರುವುದು ನಮ್ಮ ಅನುಭವಕ್ಕೆ ಬಂದಿತ್ತು. ಯಾವುದೇ ಸಂಘಟಕರಿಗೂ, ಹೋರಾಟಗಾರರಿಗೂ, ರಾಜಕೀಯ ಧುರೀಣರಿಗೂ, ಮಠಾಧೀಶರಿಗೂ ನಮ್ಮ ಮೈಕ್ ಕೊಡಬಾರದೆಂದು ಮತ್ತು ಇದು ಪೂರ್ವ ನಿಯೋಜಿತ ಕಾರ್ಯಕ್ರಮವಾಗಿರದೆ, ಏನೂ ಅರಿಯದ ಮುಗ್ಧವಿದ್ಯಾರ್ಥಿಗಳಲ್ಲೂ, ದಾರಿಹೋಕ ಜನರಲ್ಲೂ ಜಾಗೃತಿ ಮೂಡಿಸುವ ಬಸವತಂದೆಯ ವಿಚಾರಗಳ ಅರಿವಿನ ಯಾತ್ರೆ ಮಾಡುವ ಉದ್ದೇಶ ನಮ್ಮದಾಗಿತ್ತು. ನಾವು ಯಾತ್ರೆ ಮಾಡುತ್ತೇವೆಂದು ಘೋಷಿಸಿದ್ದೇ ನಮಗೆ ದಾಸೋಹಿಗಳ ಬಲವೂ ಸಿಕ್ಕಿದ್ದರಿಂದ ನಾವು ಅತಿ ಹೆಚ್ಚು ತತ್ವನಿಷ್ಠರಾಗಿ ಯಾತ್ರೆ ಮಾಡಲು ಸಹಾಯವಾಯ್ತು.

ನಾವು ಮೊದಲೇ ಹೇಳಿಕೊಂಡಂತೆ ಬಸವಬಳ್ಳಿಗಳಷ್ಟೆ ಆದ್ದರಿಂದ ಯಾವುದೇ ಕಾರಣಕ್ಕೂ ಜಾತಿವಾದಿಗಳ ಮನೆಯ ಹೊಸ್ತಿಲು ತುಳಿಯಬಾರದು, ನಮ್ಮಗಳ ಜಾತಿಯ ಪ್ರಶ್ನೆ ಎದುರಾದಲ್ಲಿ ನಾವೆಲ್ಲರೂ ಬಸವಣ್ಣನವರ ಜಾತಿಯವರೆಂದು ಹೇಳಿಕೊಳ್ಳಬೇಕೆಂದುಕೊಂಡಿದ್ದೆವು. ಜಾತಿ ವಿಷಯದಲ್ಲಿ ಒಂದೆರಡು(ಮಠಗಳಲ್ಲಿ) ಕಡೆ ಪ್ರಶ್ನೆ ಎದುರಾದರೂ ನಾವು ಸತ್ಯವನ್ನೇ ಹೇಳಿದೆವು, ಹೊರತು ಮಿಥ್ಯವನಾಡಲಿಲ್ಲ. [ವಚನಗಳದ್ದೇ ಒಂದು ಮಂಟಪ ಕಟ್ಟಿಕೊಂಡಿರುವ ಆ ಮಠಾಧೀಶರಿಗೆ ಬಸವತಂದೆಯ ಕೃಪೆ ದೊರೆಯಲಿ] ಸ್ವತಃ ಕಲ್ಯಾಣದಲ್ಲಿ ಯಾರೋ ಇದು ಹಡಪದ ಜಾತಿಯವರು ಮಾಡುತ್ತಿರುವ ಕಾರ್ಯಕ್ರಮವೆಂದು ಹೆಸರಾಂತ ಪೀಠದ ಅಧ್ಯಕ್ಷರು ಹಡಪದ ಜಾತಿಗೆ ಸಂಬಂಧಪಟ್ಟವರನ್ನೆ ಕರೆಯಿಸಿದ್ದು ಮೊತ್ತಮೊದಲಿಗೆ ನನ್ನೊಳಗೊಂದು ಅಳುಕನ್ನು ಹುಟ್ಟುಹಾಕಿತ್ತು. ಇಂಥ ಭವಿಗಳ ನಡುವೆ ನಾವು ಭಕ್ತರಾಗಿ ಒಂದು ತಿಂಗಳು ಅರಿವಿನ ಯಾತ್ರೆ ಮಾಡಬೇಕಿದೆ ಎಂಬ ಎಚ್ಚರಿಕೆಯ ಗಂಟೆಯೂ ಹೊಡೆದಿತ್ತು. ಕೆಲವು ಮಠಾಧೀಶರಂತೂ ತಮ್ಮ ಬಿಡುವಿನ ಸಮಯದಲ್ಲೇ ಬಂದು ನಾಟಕ ಮಾಡಿರೆಂದೂ ಹೇಳಿದರು. ಆದರೆ ನಾವು ನಿಗದಿ ಪಡಿಸಿದ ಸಮಯಕ್ಕೆ ಆಯಾ ಊರುಗಳಲ್ಲಿ ನಮ್ಮ ಯಾತ್ರೆಯನ್ನು ಯಾವ ಅಹಂಕಾರವಿಲ್ಲದೆ ಜನಗಳ ನಡುವೆ, ಶಾಲೆಯ ಮಕ್ಕಳ ನಡುವೆ ನಡೆಸಿದೆವು. ಹೀಗೆ ಮಾಡಿರುವುದು ನಾವು ತತ್ವಕ್ಕನುಗುಣವಾಗಿಯೇ ಹೊರತು ಮಠಾಧೀಶರನ್ನಾಗಲಿ, ಸಿದ್ಧಾಂತಿಗಳನ್ನಾಗಲಿ ಕಡೆಗಣಿಸುವ ಉದ್ದೇಶದಿಂದಲ್ಲ ಎಂದು ವಿನಮ್ರವಾಗಿ ತಿಳಿಸಲು ಬಯಸುತ್ತೇವೆ.

ಸಾಂಸ್ಕೃತಿಕವಾಗಿ ಇಂದು ನಾವು ಹೆಚ್ಚುಹೆಚ್ಚು ಜನರನ್ನು ತಲುಪುವ ಅಗತ್ಯವಿದೆ. ಏನೋ ಉದಾರವಾದಿಗಳ ಹಾಗೆ ದಲಿತ ಕೇರಿಗಳನ್ನು ಪ್ರವೇಶಿಸಿ ಪಾವನಗೊಳಿಸಿದೆವು, ದಲಿತರಿಗೂ ಲಿಂಗದೀಕ್ಷೆ ಕೊಟ್ಟೆವು ಎಂಬಂತಹ ಕ್ಲೀಷೆಯ ಮಾತುಗಳನ್ನು ನಾವು ಆಗೀಗ ಕೇಳುತ್ತಿರುತ್ತೇವೆ, ಅಯ್ಯೋ ಸ್ವಾಮಿ ಬಸವಣ್ಣನವರು ರೂಪಿಸಿದ ಧರ್ಮವೇ ದಲಿತ ಸಮುದಾಯದ್ದು, ಕಾಯಕಜೀವಿಗಳದ್ದು ಎಂಬುದನ್ನು ಮರೆವಿನಲ್ಲಿರಿಸಿ ಆಧುನಿಕ ಸುಧಾರಕರ ಹಾಗೆ ವರ್ತಿಸುವುದು ಇಂದು ಹೆಚ್ಚು ರೂಢಿಯಾಗಿಬಿಟ್ಟಿದೆ. ಆದರೆ ಬಸವಣ್ಣನವರ ನಿಜವಾದ ವಾರಸುದಾರರು ಅವರೇ ಎಂಬುದನ್ನ ಪ್ರಸಾರ ಮಾಡುವುದನ್ನ ಮರೆತುಬಿಟ್ಟಿದ್ದೇವೆಯೇ..! ಅದೇ ಕಾರಣಕ್ಕಾಗಿ ನಮ್ಮ ಮಠಗಳನ್ನು, ಬಸವ ತತ್ವದ ಸುಧಾರಕರನ್ನು ಯಾರೂ ಹೆಚ್ಚು ಗುರುತಿಸಲಿಲ್ಲ ಎಂಬ ಬಗ್ಗೆ ಬೇಸರವಿದೆ. ಒಬ್ಬನೇ ಒಬ್ಬ ಮಠಾಧೀಶ ಮ್ಯಾಗ್ಸೆಸೆ ಪ್ರಶಸ್ತಿ, ನೋಬೆಲ್ ಥರದ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿಲ್ಲ. ಜಗತ್ತು ಮೆಚ್ಚುವುದಿರಲಿ, ನಮ್ಮಗಳ ಮನ ಮೆಚ್ಚುವ ಹಾಗೆಯೂ ನಾವುಗಳು ಸಮಾಜದ ನಡುವೆ ಕೆಲಸ ಮಾಡಿಲ್ಲ ಎಂಬ ಸತ್ಯಾಂಶವನ್ನು ಯಾಕೆ ಅರ್ಥಮಾಡಿಕೊಳ್ಳಲಾಗಲಿಲ್ಲ…? ಪ್ರಶಸ್ತಿಯೇ ಮಾನದಂಡವಾಗಬೇಕಿಲ್ಲ ನಮಗೆ ಬಸವಣ್ಣನವರ ಕಾರ್ಯದ ಕಿಂಚಿತ್ತಾದರೂ ನಮ್ಮಿಂದ ಆಗಿದೆಯೇ…? ದರಿದ್ರ ಜಾತಿ ವ್ಯವಸ್ಥೆಗಳ ನಡುವೆ ನಮ್ಮ ಬದುಕಿನ ಅತಿ ಮಹತ್ವದ ಸಾರವನ್ನೆಲ್ಲ ಸುರಿದುಕೊಂಡು ಮೇಲೆಮೇಲೆ ಮಾತ್ರ ಶರಣರ ಭಜನೆ ಮಾಡುತ್ತಿದ್ದೇವೆ ಎನಿಸುವ ಕನಿಷ್ಟ ವಿವೇಕವು ನಮ್ಮನ್ನ ಬಾಧಿಸದಿರುವುದು ದುರಂತ ಸಂಗತಿಯಾಗಿದೆ. ನಾನೊಂದು ಮಠದಲ್ಲಿ ನೌಕರನಾಗಿದ್ದಾಗ ಫಿನ್ಲೆಂಡಿನಿಂದ ಇಬ್ಬರು ದಂಪತಿಗಳು ಪ್ರವಾಸಿಗರ ಹಾಗೆ ಬಂದರು. ಒಂದು ವಾರಗಳ ಕಾಲ ಶಾಲೆಯ ಅತಿಥಿಗೃಹದಲ್ಲಿ ಉಳಿದುಕೊಂಡರು. ಸುತ್ತಲ ಹಳ್ಳಿಗಳಲ್ಲೆಲ್ಲ ಸರ್ವೆ ಮಾಡಿದರು. ಅವರು ಕಟ್ಟಕಡೆಯದಾಗಿ ಫಿನ್ಲೆಂಡ್ ತಲುಪಿ ನನಗೊಂದು ಮೇಲ್ ಮಾಡಿದರು. ನಿಮ್ಮ ಪೂಜ್ಯ ಸ್ವಾಮೀಜಿಯವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ನೀಡುವುದಕ್ಕಾಗಿ ಶಿಫಾರಸ್ಸು ಬಂದಿತ್ತು. ಆ ಕಾರಣಕ್ಕಾಗಿ ನಾವು ಸರ್ವೆ ಮಾಡಲು ಬಂದಿದ್ದೆವು. ನೀವು ನೀಡಿದ ಆತಿಥ್ಯ ನಮಗೆ ಖುಷಿ ಎನಿಸಿತು ಮಹಾದೇವ ಥ್ಯಾಂಕ್ಯೂ ಎಂಬುದಾಗಿ ಬರೆದಿದ್ದರು. ಗುರುಗಳು ಯಾಕೆ ಪ್ರಶಸ್ತಿಯಿಂದ ವಂಚಿತರಾದರು ಎಂಬುದು ನನ್ನನ್ನು ಬಹಳ ದಿನಗಳವರೆಗೆ ಕಾಡಿತು.

ಸಂತ-ಸಾಧು-ಸನ್ಯಾಸಿಗಳು ಮದ್ದುಕೊಡುವುದರ ದೊಡ್ಡಪರಂಪರೆ ನಮ್ಮಲ್ಲಿದೆ. Healers ಎಂದು ಕರೆಯುವವರು ನಮ್ಮ ಸಂಪ್ರದಾಯದಲ್ಲಿ ಪವಾಡಪುರುಷರಾಗಿದ್ದಾರೆ. ಅವರು ದನಕರು, ಮನುಷ್ಯರಿಗೆ ಮಾತ್ರ ಮದ್ದು ಕೊಡುವವರಷ್ಟೆ ಆಗಿರದೇ ಮೆದುಳಿಗೂ ಮದ್ದು ಅರೆಯುವ ಪವಾಡಪುರುಷರು. ಅಂಥ ಮಹಾತ್ಮರ ಹೆಸರಿನಲ್ಲಿ ಮಠ ಕಟ್ಟಿಕೊಂಡು ಸಕಲೆಂಟು ಸೌಭಾಗ್ಯಗಳನ್ನು ಅನುಭವಿಸುತ್ತ ಮತ್ತದೇ ಜಾತಿ ಸಂಕೋಲೆಯೊಳಗೆ ಸಿಕ್ಕಿಕೊಂಡ ವ್ಯವಸ್ಥೆಯಿಂದ ಆಚೆಬಂದು ನಾವು ಬಸವತತ್ವವನ್ನು ಮನೆಮನೆಗೆ ಒಯ್ಯಬೇಕಿದೆ. ಹಾಗಾಗಿ ನಾವು ಬಸವತತ್ವದ ಬಗ್ಗೆ ಅಪಾರ ಅಭಿಮಾನವಿಟ್ಟುಕೊಂಡು ದಾಸೋಹ ಮಾಡುವ ಸಕಲಶರಣರಲ್ಲಿ ವಿನಂತಿಸುವುದಿಷ್ಟೆ “ಲಿಂಗಾಯತ ಧರ್ಮವು ಸಾಂಸ್ಥಿಕವಾಗಿ ರೂಪುಗೊಳ್ಳುವಾಗ ಎಲೈಟ್ ವಿಧಾನವನ್ನು ಅನುಸರಿಸಿದ್ದರಿಂದ ನೀವು ನೀಡುವ ದಾಸೋಹವು, ಯಾವುದೋ ಒಬ್ಬ ಮಠಾಧೀಶನ ವರ್ಚಸ್ವಿ ಪ್ರದರ್ಶನಕ್ಕೆ ಖರ್ಚಾಗುತ್ತಿದೆ. ಅದು ಧರ್ಮಪ್ರಸಾರದ ವಿಧಾನವಲ್ಲ ಎನ್ನುವುದನ್ನು ನಾವುಗಳು ಮೊದಲು ಅರಿಯಬೇಕಿದೆ. ಹಾಗಾಗಿ ನಿಮ್ಮ ದಾಸೋಹದ ಹಣ ಬಸವಾದಿ ಶರಣರ ಮೂರ್ತಿಗಳನ್ನು ನಿಲ್ಲಿಸುವುದಕ್ಕೋ, ಉದ್ಯಾನವನಗಳಿಗೋ, ಬೃಹತ್ ಸಮಾವೇಶಗಳಿಗೋ ಖರ್ಚಾಗುವುದು ಸರಿಯೆನಿಸಿದರೆ ನೀವು ಉದಾರ ದಾಸೋಹಿಗಳಾಗಿರಿ. ಅದಕ್ಕಿಂತ ಭಿನ್ನವಾಗಿ ಸಕಲೆಂಟು ಜಾತಿಗಳ ಜನರನ್ನು ಬಸವಣ್ಣನವರ ಆಶಯದಲ್ಲಿ ನಡೆಸುವ ಉದ್ದೇಶಕ್ಕಾಗಿ ನಿಮ್ಮ ದಾಸೋಹ ಬಳಕೆಯಾಗುವ ಅಪೇಕ್ಷೆ ಇದ್ದಲ್ಲಿ ನೀವು ಧರ್ಮಕ್ಕಾಗಿ ದಿನಕ್ಕೆ ಕೇವಲ ಹತ್ತು ರೂಪಾಯಿ ತೆಗೆದಿರಿಸಿ, ವರ್ಷಕ್ಕೆ 3600 ರೂಗಳಷ್ಟನ್ನು ಬಸವಬಳ್ಳಿಗಳಿಗೆ ನೀಡುವಿರಾದರೆ ಬಸವತತ್ವದ ನಿಜಾಚರಣೆಗಳನ್ನು ಮನೆಮನೆಗೆ ತಲುಪಿಸುವ ಬಗ್ಗೆ ನಾವು ಯೋಚಿಸುತ್ತೇವೆ” ಎಂದು ವಿನಂತಿಸುತ್ತೇವೆ.

ಕಲ್ಯಾಣದ ಪರುಷಕಟ್ಟೆಯಿಂದ ಆರಂಭವಾದ ನಮ್ಮ ಯಾತ್ರೆ ನಿರಂತರವಾಗಿ ಉಳವಿ ಬಂದು ತಲುಪುವವರೆಗೂ ಯಾರೆಲ್ಲರ ಅರಿವನ್ನು ವಿಸ್ತರಿಸಿದೆಯೋ ಗೊತ್ತಿಲ್ಲ. ಸ್ವತಃ ಬಸವಬಳ್ಳಿಗಳೆಲ್ಲರ ಮನಸ್ಸನ್ನು ಜಾಗೃತಗೊಳಿಸಿತ್ತು. ಅರಿವು-ಆಚಾರ-ಷಟಸ್ಥಲ ಜ್ಞಾನ, ಶರಣರ ತಾತ್ವಿಕ ಚಿಂತನೆ ಎಲ್ಲವೂ ಶರಣರ ಬದುಕಿನ ಕತೆಗಳೊಟ್ಟಿಗೆ ಕೊಂಚಕೊಂಚ ಅರಿವಾಗತೊಡಗಿತ್ತು. ಈ ಯಾತ್ರೆಯುದ್ದಕೂ ನಾವು ಯಾವೆಲ್ಲ ಊರುಗಳಲ್ಲಿ ಕಡೆಗಣಿಸಲ್ಪಡುವ ಕಣ್ಣೋಟದಿಂದ ನೋಡುತ್ತಿದ್ದರೋ ಅದೇ ಕಣ್ಣುಗಳು ನಮ್ಮ ಯಾತ್ರೆ ಮತ್ತು ಬೀದಿನಾಟಕ ಮುಗಿದ ಮೇಲೆ ತುಂಬು ಹೃದಯದ ಸತ್ಕಾರಕ್ಕೂ ಒಳಗಾಗುತ್ತಿದ್ದೆವು. ಕೆಲವು ಕಡೆಗಳಲ್ಲಿ ತೀರ ಪ್ರಸಾದಕ್ಕೂ ತೊಂದರೆಯಾದಲ್ಲಿ ಹಿಂದಿನ ಊರಿನ ಶರಣರ ಬುತ್ತಿ ನಮ್ಮನ್ನು ಕಾಯುತ್ತಿತ್ತು. ಕಂಡಗೂಳಿಯ ರೊಟ್ಟಿಯ ಬುತ್ತಿಯು ನಮ್ಮನ್ನು ಕಾದ್ರೊಳ್ಳಿಯವರೆಗೂ ಕಾಪಾಡಿದ್ದು ಅವಿಸ್ಮರಣೀಯ ಸಂಗತಿ. ಕಹಿ ಅನುಭಗಳಿಗಿಂತ ಹೆಚ್ಚು ನಾವು ಸಿಹಿನೆನಹುಗಳನ್ನು ಮೆಲಕು ಹಾಕಿಕೊಳ್ಳಲು ಬಯಸುತ್ತೇವೆ. ಶರಣರು ಸತ್ಯಕ್ಕಾಗಿ ಎಳೆಹೂಟೆ ಶಿಕ್ಷೆಯನ್ನೇ ಅನುಭವಿಸಿದರು. ಬಹುಶಃ ಅಂದು ಶರಣರು ಅಂತರ್ಜಾತಿ ವಿವಾಹ ನಡೆಸಿದ್ದು ತಪ್ಪಾಯ್ತೆಂದು ಒಪ್ಪಿಕೊಂಡಿದ್ದರೆ ಅದು ನಮ್ಮ ಸಿದ್ಧಾಂತದ ಮೊದಲ ಸೋಲಾಗಿರುತ್ತಿತ್ತು. ಆದರೆ ಶರಣರು ಅಂಜುಗುಳಿಗಳಲ್ಲ, ಮರಣವೇ ಮಹಾನವಮಿ ಎಂದು ಸತ್ಯಕ್ಕಾಗಿ ಶಿಕ್ಷೆಯನ್ನು ಒಪ್ಪಿ ನಡೆದಂತೆ ನುಡಿದರು- ನುಡಿದಂತೆ ನಡೆದವರು. ಅವರು ಅನುಭವಿಸಿದ ಕಷ್ಟಗಳ ನಡುವೆ ನಾವೊಂದು ಸೂಕ್ಷ್ಮಾತಿ ಸೂಕ್ಷ್ಮ ಕಣ ಮಾತ್ರ ಎಂಬ ಅರಿವು ನಮ್ಮೊಳಗಿತ್ತು.

ನಮ್ಮನ್ನು ಹನ್ನೆರಡನೇ ಶತಮಾನದ ಶರಣರು ಎಂದೇ ಭಾವಿಸಿ ಬರಮಾಡಿಕೊಂಡ ಶರಣಬಂಧುಗಳ ಪ್ರೀತ್ಯಾದಾರ ನಮ್ಮ ಹುಮ್ಮಸ್ಸನ್ನು ಇಮ್ಮಡಿಯಾಗಿಸಿದೆ. ಕಲ್ಯಾಣದಿಂದ ಉಳವಿವರೆಗಿನ ನಮ್ಮ ಯಾತ್ರೆಯಲ್ಲಿ ಎಳೆಹೂಟೆ ಶಿಕ್ಷೆಗೆ ಸಂಬಂಧಿಸಿದ ಬೀದಿನಾಟಕವೂ ಜಾಗೃತಗೀತೆಗಳನ್ನು ನಾವು ತೊಂಬತ್ತೆರಡು ಕಡೆಗಳಲ್ಲಿ ನಿರಂತರ ಒಂದು ತಿಂಗಳು ನಡೆಸಿದ್ದೇವೆ, ತತ್ವಪ್ರಸಾರಕ್ಕೆ ಈ ಅವಧಿ ಬಹಳ ಸಣ್ಣದಾದರೂ ಇನ್ನಷ್ಟು ಕಡೆಗಳಲ್ಲಿ ನಾವು ಯಾತ್ರೆ ಮಾಡುವ ಅಗತ್ಯವಿದೆ. ಆ ಬಸವಾದಿ ಶರಣರ ಕೆಲಸಕ್ಕೆ ವಿರಮಿಸಬಾರದು ಸದೋದಿತ ಚಾಲ್ತಿಯಲ್ಲಿರಬೇಕೆಂಬ ಬಯಕೆ ಇದ್ದು, ಈ ಕುರಿತಾಗಿ ಮತ್ತಷ್ಟು ಕನಸುಗಳು ಇದ್ದಾವೆ ಅವುಗಳನ್ನು ನಾವು ಮಾಡಿ ತೋರಿಸಲು ಬಯಸುತ್ತೇವೆಂದು ವಿನಂತಿಸಿಕೊಳ್ಳುತ್ತಲೇ ಈ ಅರೆಬರೆ ಅನುಭವದ ಮಾತುಗಳನ್ನು ಪೋಣಿಸಲು ಕಾರಣೀಕರ್ತರಾದ ಬಯಲು ಮ್ಯಾಗ್ಜೀನ್ ಓದುಗರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಆವೇಶದಲ್ಲಿ ಏನಾದರೂ ತಪ್ಪು ಮಾತುಗಳನ್ನಾಡಿದ್ದರೆ ಮನ್ನಿಸುವಿರೆಂಬ ಭಿನ್ನಹ ನನ್ನದು.

Previous post ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
Next post ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)

Related Posts

ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
Share:
Articles

ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ

February 11, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಜ ಎಂದಲ್ಲಿ ಜನನ ನಾಸ್ತಿಯಾಗಿ, ಗ ಎಂದಲ್ಲಿ ಗಮನ ನಾಸ್ತಿಯಾಗಿ, ಮ ಎಂದಲ್ಲಿ ಮರಣ ನಾಸ್ತಿಯಾಗಿ, ಅರಿತು ತಿರುಗುವುದು ಸ್ವಯ ಚರ ಪರವಲ್ಲದೆ, ಕೂಟಕ್ಕೆ ನೆರೆದ ಅಗುಳಾಸೆಯ...
ಲಿಂಗಾಯತ ಧರ್ಮದ ನಿಜದ ನಿಲುವು
Share:
Articles

ಲಿಂಗಾಯತ ಧರ್ಮದ ನಿಜದ ನಿಲುವು

April 29, 2018 ಡಾ. ಎಸ್.ಎಮ್ ಜಾಮದಾರ
ಪ್ರಜಾವಾಣಿ ದಿನಪತ್ರಿಕೆಯ ಸಂಪಾದಕೀಯ ಪುಟದಲ್ಲಿ ‘ಲಿಂಗಾಯತವು ಪ್ರತ್ಯೇಕ ಸ್ವತಂತ್ರ ಧರ್ಮವೇ?’ ಎಂಬ ನನ್ನ ಲೇಖನಕ್ಕೆ ಪ್ರತಿಕ್ರಿಯೆ ಎನ್ನುವಂತೆ ಡಾ ಚಿದಾನಂದ ಮೂರ್ತಿಯವರು 13...

Comments 17

  1. MADHU B N
    Mar 10, 2023 Reply

    ಈ ತೆರನಾದ ಒಂದು ಮಿಂಬಲೆಯ ಬಯಲು ಅಸ್ತಿತ್ವದಲ್ಲಿರುವುದೇ ಶರಣ ದನಿಯ ಬಲ. ವಿದ್ಯಾರ್ಥಿ ದೆಸೆಯಲ್ಲಿಯೇ ಹಿರೇಮಲ್ಲೂರ ಈಶ್ವರನ್ ಅವರ ಪುಸ್ತಕ ಓದಿದ ತರುವಾಯ ಲಿಂಗಾಯತ ವೆನ್ನುವುದು ಒಂದು ಅಪೂರ್ವವಾದ ಜನಧರ್ಮ ಜಾತಿಯಾಗಿ ಕೆಳಜಾರಿದ್ದು ನಿಜವಿರಬಹುದೇ ಎಂಬ ಅನುಮಾನವಿತ್ತು. ಆಮೇಲೆ ಲಂಕೇಶರನ್ನು, ಕಲಬುರಗಿಯವರನ್ನು ಓದಿಕೊಂಡ ಮೇಲೆ ನಿಜದರುಶನದ ಹಾದಿಯಲ್ಲಿ ಹಲವು ಹೊಳಹುಗಳು ಎದೆಗಿಳಿದವು. ಶರಣತ್ವವನ್ನು ಜತನದಿಂದ ಪೋಷಿಸಿದವರನ್ನೇ ಜಾತಿಯ ಅಮಲಲ್ಲಿ ಕೆಳದೂಡಿದ ಅನ್ಯಾಯ ಯಾವ ಕಾಲಕ್ಕೂ ಮರೆಯಲಾಗದು. ಮಹಾದೇವರ ಬರಹ ಲಿಂಗಾಯತ್ವದ ಪ್ರಸಾರದ ಸಲುವಾಗಿ ಬಯಲು ನಾಟಕದ ಆಸರೆಗೊಂಡ ಪರಿಯನ್ನು ಸಿಹಿಕಹಿ ನೆನಪುಗಳೊಂದಿಗೆ ನಿರೂಪಿಸಿದ್ದಾರೆ. ಬರಹದ ಆಶಯ ಮುಂದಾಳುಗಳ ಸಂಕುಚಿತನವನ್ನು ಸೂಚ್ಯವಾಗಿ ಹೊರತರುವಲ್ಲಿ ಯಶಸ್ವಿಯಾಗಿದೆ.

  2. ಜಯಪ್ರಕಾಶ್ ಅಂಗಡಿ
    Mar 12, 2023 Reply

    ಕಲ್ಯಾಣದಿಂದ ಉಳವಿಯವರೆಗೆ ನಡೆದ ಬಸವಬಳ್ಳಿಗಳದು ನಿಜಕ್ಕೂ ಸಾಹಸ ಯಾತ್ರೆ- ನಾನು ಇದುವರೆಗೆ ಕಂಡು ಕೇಳರಿಯದ ವಿನೂತನ ಪ್ರಯತ್ನಕ್ಕೆ ಈ ಯುವ ಸಮೂಹ ಕೈಹಾಕಿದ್ದು ಬಹಳ ಸಂತೋಷ ತಂದಿತು. ಲೇಖಕರ ಅನುಭವದ ಮಾತುಗಳು ಅವರ ಉತ್ಸಾಹ ಮತ್ತು ಅಭಿಮಾನಕ್ಕೆ ಕನ್ನಡಿ ಹಿಡಿಯುತ್ತವೆ. ಇಂಥ ಯಾತ್ರೆಗಳು ಆಗಾಗ ನಡೆಯುತ್ತಿರಲಿ. ವಂದನೆಗಳು.

  3. ಉಮಾಶಂಕರ ಗುಬ್ಬಿ
    Mar 12, 2023 Reply

    ಸರ್, ನೀವು ಮುಂದಿನ ವಚನ ಪ್ರಯಾಣ ಯಾವಾಗ ಆರಂಭಿಸುವಿರಿ ದಯಮಾಡಿ ನಮಗೂ ತಿಳಿಸಿ, ನಾವೂ ನಿಮ್ಮೊಂದಿಗೆ ಹೆಜ್ಜೆ ಹಾಕುತ್ತೇವೆ. ಆರ್ಥಿಕ ಸಹಕಾರವನ್ನೂ ಜೊತೆಗೆ ತರುತ್ತೇವೆ.

  4. BHARATH
    Mar 12, 2023 Reply

    Excellent way of explaining, and nice piece of writing.

  5. Veeranna Kamathagi
    Mar 13, 2023 Reply

    ಅಣ್ಣಾ, ಬಸವಾನುಯಾಯಿಗಳೆನ್ನುವವರೇ ಜಾತಿವಾದದಿಂದ ಹೊರಬಂದಿಲ್ಲಾ, ಒಳಪಂಗಡಗಳ ಮಧ್ಯೆ ಒಂದಾಗದಷ್ಟು ದೊಡ್ಡ ದೊಡ್ಡ ಬಿರುಕುಗಳಿವೆ, ಈ ಕಾಲಕ್ಕೆ ನಾವೆಲ್ಲಾ ಶರಣರ ಮಕ್ಕಳೆನ್ನುವ ಕಾಲ ಬರುತ್ತದೆಂಬ ಭರವಸೆ ನಿಮಗಿದೆಯೇ?

  6. Rudramuni S
    Mar 14, 2023 Reply

    ಸಾಂಸ್ಕೃತಿಕವಾಗಿ ಬಸವಾದಿ ಶರಣರನ್ನು ಜನಸಾಮಾನ್ಯರ ನಡುವೆ ಒಯ್ಯುವುದು ಬಹಳ ಮುಖ್ಯ. ಸಂಗೀತ, ನೃತ್ಯ, ನಾಟಕ, ಚಿತ್ರಕಲೆ, ಸಿನೆಮಾ… ಎಲ್ಲ ಮಾಧ್ಯಮಗಳಲ್ಲೂ ನಿಮ್ಮಂಥ ತತ್ವ ನಿಷ್ಠರು ತಮ್ಮ ಪ್ರತಿಭೆ ತೋರಲಿ.

  7. ಸೋಮಶೇಖರ ಮಧುಗಿರಿ
    Mar 15, 2023 Reply

    ಜಾತಿಗಳನ್ನು ಮೀರಿ ಮಾನವತೆಯನ್ನು ಎತ್ತಿಹಿಡಿದ ಶರಣರನ್ನು ಮತ್ತೆ ಜಾತಿಯ ಸಂಕೋಲೆಗಳಲ್ಲಿ ಬಂಧಿಸಿ ಹಿಡಿಯ ಹೊರಟವರು ಪಾಪಿಷ್ಟರು. ನಿಮ್ಮ ಕಲಾ ಯಾತ್ರೆಯ ಅನುಭವಗಳ ಗಂಟನ್ನು ಓದುತ್ತಾ ನೋವು, ಖುಷಿ ಒಟ್ಟೊಟ್ಟಿಗೆ ಆಯಿತು. ಬೀದಿನಾಟಕದ ಪ್ರಯೋಗದಲ್ಲಿ ತೊಡಗಿಕೊಂಡ ನಿಮ್ಮ ಗುಂಪಿನ ಎಲ್ಲ ಸದಸ್ಯರಿಗೂ ಪ್ರಣಾಮಗಳು.

  8. ಶಿವಲಿಂಗಯ್ಯ ಮೈಲಾರ
    Mar 15, 2023 Reply

    ಪ್ರಚಾರದ ಅಬ್ಬರ ಹಾಗೂ ಹೊಗಳಿಕೆಗಳ ಭರಾಟೆಗಳಿಂದ ದೂರವಿದ್ದು ಬಸವ ಸಂದೇಶವನ್ನು ಜನಮನಕ್ಕೆ ಮುಟ್ಟಿಸಿದ ಸೇವೆ ಅನುಪಮವಾದದ್ದು.

  9. VIJAYAKUMAR KAMMAR
    Mar 18, 2023 Reply

    ಉಳ್ಳವರ ಎಡಬಿಡಂಗಿತನ ಮತ್ತು ದಬ್ಬಾಳಿಕೆಯನ್ನು ಬಿಂಬಿಸುವ ಉತ್ತಮ ಲೇಖನ. 🙏🙏

  10. Srinath Rayasam
    Mar 19, 2023 Reply

    ಬುದ್ಧ ಬಸವಣ್ಣನವರನ್ನು ಕೈಬಿಟ್ಟು ಎಷ್ಟೋ ವರ್ಷಗಳಾಗಿವೆ , ಈಗ ಉಳಿದಿರೋದು ಅಂಬೇಡ್ಕರ್ ಮಾತ್ರ , ಅದೂ ಸಾಮಾಜಿಕ ಸೌಲಭ್ಯಗಳನ್ನು ಪಡೆಯುವುದಕ್ಕೆ ಮಾತ್ರ !

  11. ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ
    Mar 19, 2023 Reply

    ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ 👌👍. ತುಂಬಾ ಚೆನ್ನಾಗಿ ಬರೆದಿದ್ದಾರೆ…🙏🏻🙏🏻

  12. Geetha Naik
    Mar 23, 2023 Reply

    ಲಿಂಗಾಯತರು ಶರಣರ ದಾರಿಯಿಂದ ಕವಲೊಡೆದು ಶತಮಾನಗಳೇ ಉರುಳಿದವು. ಎಲ್ಲಿಯ ಬಸವಾದಿ ಶರಣರು, ಎಲ್ಲಿಯ ಇವತ್ತಿನ ಲಿಂಗಾಯತ!! ಇನ್ನು ಮಠಗಳ ಕುರಿತು ಮಾತನಾಡುವುದೇ ಬೇಡ ಎನುವಷ್ಟು ಜಿಗುಪ್ಸೆ ಬಂದಿದೆ. ಇಂತಹ ಕಲಬೆರಕೆಯ ವಾತಾರಣದಲ್ಲಿ ಬಸವಬಳ್ಳಿಗಳಂತಹ ಮನಸ್ಸುಗಳು ಇವೆಯಲ್ಲಾ, ಅದೇ ಚೂರು ತಂಗಾಳಿ ಎನಿಸಿತು.

  13. ಬಸವರಾಜ ಹಂಡಿ
    Mar 23, 2023 Reply

    ಮಹಾದೇವ ಹಡಪದ ಶರಣರ.ಲೇಖನ ಬಹಳ ತೀಕ್ಷ್ಣವಾಗಿ ನಮ್ಮ ಕಪಾಳಿಗೆ ನಾವೇ ಹೊಡೆದಂತೆ ಲೇಖವಾಗಿದೆ.
    ದಾಸೋಹವನ್ನು ಯಾವ ರೀತಿಯಾಗಿ ದುರುಪಯೋಗ ಆಗಿದೆ ಎಂಬುದನ್ನು ಬಹಳ ಗಟ್ಟಿಯಾಗಿ ಹೇಳಿದ್ದಾರೆ. ದಾಸೋಹ ಅನ್ನುವದನ್ನು ಎಲೈಟ್ ಜನರ ಜೂಜಾಟ ಆಟ ವಾಗಿದೆ. ಜೂಜಾಟನಲ್ಲಿ ಗೆದ್ದವರು ಮಠಾಧೀಶರು.
    ಬರುವ ವರ್ಷ ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ ಯನ್ನು ಇನ್ನೂ ಯೋಜಾನಬದ್ದವಾಗಿ ಮಾಡೋಣ.
    ನಾವು ಜೀವಿಸವರಗೆ ಈ ಯಾತ್ರೆಯನ್ನು ಪ್ರತಿವರ್ಷ ಮಾಡೋಣ. ನಾವು ನಿಮ್ಮ ಜೊತೆ ಗುರು ಲಿಂಗ ಜಂಗಮ (ತನು ಮನ ಧನ) ಸಹಿತವಾಗಿ ಇರುತ್ತವೆ.

    ನಿಮ್ಮ ಬಸವ ಸೇವೆಗೆ ದನ್ಯವಾದಗಳು.
    ಶರಣು ಶರಣಾರ್ಥಿಗಳು.

  14. Manjunatha Swamy
    Mar 28, 2023 Reply

    ವಿಶ್ವಗುರು ಬಸವಣ್ಣನವರನ್ನು ಸಮಾನತೆ, ಕಾಯಕ ದಾಸೋಹ ತತ್ವ, ಜಗತ್ತಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿಕೊಟ್ಟ ಮಹಾನ್ ಚೇತನ ಎನ್ನುವುದು ಮರೆತರೆ, ಅದರ ಫಲ ಅನುಭವಿಸಲೇಬೇಕು.

  15. Basavaraj Karehole, Bengaluru
    Mar 29, 2023 Reply

    ಯಾರು ನಮಗೆ ಶಕ್ತಿ ಕೊಟ್ಟರೋ, ಯಾರು ನಮಗೆ ದಾರಿ ತೋರಿಸಿದರೋ ಅವರನ್ನು ಬಿಟ್ಟು ನಮ್ಮನ್ನು ನಾಶಮಾಡುವವರ ಜೊತೆ ಹೋಗುತ್ತಿದ್ದೇವೆ. ಅದು ಡಬಲ್ ನೆಗಟಿವ್ ಇಂಪ್ಯಾಕ್ಟ್. ಇದನ್ನ ಮಹಾದೇವ ಹಡಪದ ಅವರು ಸರಿಯಾಗಿಯೇ, ವೈಜ್ಞಾನಿಕವಾಗಿಯೇ ತಮ್ಮ ಲೇಖನದಲ್ಲಿ ಮಾತಾಡಿದ್ದಾರೆ. ಅವರು ಎತ್ತಿದ ವಿಚಾರಗಳು ಬಸವಣ್ಣನವರು ಮಾಡಿದ ಕೆಲಸವನ್ನು ಗುರುತಿಸುವ ಅಗತ್ಯವನ್ನು ಹೇಳುತ್ತವೆ. ಅವರ ಜೊತೆಗೊಂದು ಗೂಗಲ್ ಮೀಟ್ ಮಾಡಿ, ಮುಂದಿನ ನಡೆಗಳ ಬಗೆಗೆ ಚರ್ಚೆ ಮಾಡೋಣ ಎನ್ನುವುದು ನನ್ನ ಅನಿಸಿಕೆ.

  16. Kashinath
    Apr 4, 2023 Reply

    ♥️🙏

  17. Prakash G S
    May 14, 2023 Reply

    MahadeV hadapad articlE Very nice , will support whole hartedely

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
September 10, 2022
ನೆಲದ ನಿಧಾನ
ನೆಲದ ನಿಧಾನ
April 29, 2018
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಹಾಯ್ಕು
ಹಾಯ್ಕು
September 6, 2023
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
Copyright © 2025 Bayalu