ಬಸವಣ್ಣವರ ಆಶಯಗಳು
ಹೋರಾಟ ಬಸವಣ್ಣನವರ ಇನ್ನೊಂದು ಹೆಸರು. ಅವರ ಹೋರಾಟ ಒಬ್ಬ ವ್ಯಕ್ತಿಯ ವಿರುದ್ಧ ಅಲ್ಲ, ಒಂದು ಜಾತಿಯ ಅಥವಾ ಕೋಮಿನ ವಿರುದ್ಧ ಅಲ್ಲ; ವ್ಯಕ್ತಿಯ ವಿರುದ್ಧವಾಗಲಿ ಒಂದು ಕೋಮಿನ ವಿರುದ್ಧವಾಗಲಿ ಮಾಡಿದ ಹೋರಾಟ ವ್ಯಾಪಕವಲ್ಲವಾದುದರಿಂದ ಅದಕ್ಕೆ ಅಷ್ಟು ಬೆಲೆಯಿರುವುದಿಲ್ಲ. ಅವರ ಹೋರಾಟ ತಲೆ ತಲಾಂತರದಿಂದ ಬಂದಿದ್ದ, ಗಟ್ಟಿಯಾಗಿ ನೆಲೆನಿಂತಿದ್ದ, ನೆಲೆನಿಂತು ಇಡೀ ಸಮಾಜವನ್ನು ಹಾಳುಗೆಡವಿದ್ದ ಸಂಪ್ರದಾಯದ ವಿರುದ್ಧ. ಅವರ ಹೋರಾಟಕ್ಕೆ ಶ್ರೇಷ್ಠತೆಯನ್ನು ತಂದುಕೊಟ್ಟ ಮತ್ತೊಂದು ಅಂಶವೆಂದರೆ: ಅದು ತಮ್ಮೊಬ್ಬರ ಅಥವಾ ತಮ್ಮ ಜಾತಿಯವರ ಪ್ರಯೋಜನವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿದ ಹೋರಾಟವಲ್ಲ. ಅವರಿಗೆ ಯಾರೋ ದೂರು ಕೊಟ್ಟನಂತರ ಮಾಡಿದ ಹೋರಾಟವೂ ಅದಲ್ಲ. ಶೋಷಣೆಗೊಳಗಾದವರಿಗೆ ಎಷ್ಟು ಅಜ್ಞಾನ ಇತ್ತೆಂದರೆ ತಾವು ಶೋಷಣೆಗೆ ಒಳಗಾಗಿರುವುದೇ ಅವರಿಗೆ ಗೊತ್ತಿರಲಿಲ್ಲ. ಶೋಷಿತರ ಪರವಾಗಿ ಕರುಣೆಯಿಂದ, ಶೋಷಕರ ವಿರುದ್ಧ ಸಾತ್ವಿಕ ಕೋಪದಿಂದ ಮಾಡಿದ ಹೋರಾಟ ಬಸವಣ್ಣನವರದು.
ಬಸವಣ್ಣನವರ ಹೋರಾಟವನ್ನು ಅವರ ಹೊಸ ಸಿದ್ಧಾಂತಗಳಲ್ಲಿ ಕಾಣಬಹುದು. ಅವರ ಸಿದ್ಧಾಂತಗಳು ಹಲವಾದರೂ ಅವುಗಳ ಹಿಂದಿದ್ದ ಆಶಯ ಒಂದೇ: ಸಕಲ ಜೀವಾತ್ಮರಿಗೆ ಲೇಸನೇ ಮಾಡುವುದು. ಇದರ ತುರ್ತು ಆವಶ್ಯಕತೆ ಏನಿತ್ತು ಮತ್ತು ಆ ಬಗ್ಗೆ ಅವರು ಏನು ಮಾಡಿದರು ನೋಡೋಣ. ಬಸವಣ್ಣ ಮಾಡಿದ ಕೆಲಸಗಳನ್ನು ದಾರ್ಶನಿಕ-ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಎಂದು ಮೂರು ಭಾಗ ಮಾಡಬಹುದು.
ಬಸವಣ್ಣನವರಿಗೆ ಹೊಸ ಧರ್ಮವನ್ನು ಸ್ಥಾಪಿಸಬೇಕೆಂಬ ಇಚ್ಛೆಗಿಂತ ಹೊಸ ಸಮಾಜವನ್ನು ರಚಿಸಬೇಕೆಂಬ ಇಚ್ಛೆ ಪ್ರಬಲವಾಗಿತ್ತು. ಧರ್ಮವು ವ್ಯಕ್ತಿಗತ ಎಂಬುದು ಸತ್ಯವಾದರೂ ಅದಕ್ಕಿರುವ ಸಾಮಾಜಿಕ ಆಯಾಮವನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ವ್ಯಕ್ತಿಯು ಒಂದು ಸಮಾಜದ ಸದಸ್ಯ ಎಂದರೆ ಅವನು ಸಮಾಜ ಅನುಸರಿಸುವ ಧರ್ಮವನ್ನು ಅನುಸರಿಸಲೇಬೇಕು. ಇನ್ನೂ ಮುಖ್ಯ ಅಂಶವೆಂದರೆ, ಕೆಲವು ಸಾಮಾಜಿಕ ನಿಯಮಗಳನ್ನು ಇತರರಿಗೆ ಗೊತ್ತಾಗದಂತೆ ಅವನು ಉಲ್ಲಂಘಿಸಬಹುದು, ಆದರೆ ಧಾರ್ಮಿಕ ನಿಯಮಗಳನ್ನು ಉಲ್ಲಂಘಿಸಲಾಗದು. ಅದನ್ನು ಉಲ್ಲಂಘಿಸಿದವನಿಗೆ ಬಹಿಷ್ಕಾರದ ಭಯ ಇರುತ್ತಿತ್ತು. ಮತ್ತೆ ಕೆಲವು ವೇಳೆ ಸಾಮಾಜಿಕ ಮತ್ತು ಧಾರ್ಮಿಕ ನಿಯಮಗಳನ್ನು ವಿಭಜಿಸಲು ಸಾಧ್ಯವಿರುವುದಿಲ್ಲ. ಸಮಾಜದ ಮೇಲೆ ಧರ್ಮಕ್ಕಿದ್ದ ಹಿಡಿತ ಎಷ್ಟು ಗಟ್ಟಿ ಎಂಬುದನ್ನು ಮನಗಂಡಿದ್ದ ಬಸವಣ್ಣನವರು ಸಮಾಜವನ್ನು ಸುಧಾರಿಸಬೇಕೆಂದರೆ ಮೊದಲು ಧರ್ಮವನ್ನು ಸುಧಾರಿಸಬೇಕೆಂದು ತೀರ್ಮಾನಿಸಿದರು. ವಾಸ್ತವವಾಗಿ, ಬಸವಣ್ಣ ವೇದಪ್ರಣೀತ ವರ್ಣಾಶ್ರಮಧರ್ಮಕ್ಕನುಗುಣವಾಗಿದ್ದ ಸಮಾಜವನ್ನು ಸುಧಾರಿಸಲು ಹೋಗದೆ, ಹೊಸಧರ್ಮ ಸ್ಥಾಪಿಸಿ, ಅದಕ್ಕನುಗುಣವಾದ ಹೊಸ ಸಮಾಜ ಕಟ್ಟಲು ಪ್ರಯತ್ನಿಸಿದರು.
ದಾರ್ಶನಿಕ-ಧಾರ್ಮಿಕ
ಪರಮಾತ್ಮನ ಪರಿಕಲ್ಪನೆಯನ್ನು ಬದಲಾಯಿಸದೆಯೇ ಜನರನ್ನು ಬದಲಾಯಿಸುವುದು ಕಷ್ಟ ಎಂಬುದು ಬಸವಣ್ಣನವರ ಸಿದ್ಧಾಂತ ಆಗಿನ ಕಾಲದ ಭಾರತಕ್ಕಂತೂ ಸತ್ಯವಾಗಿತ್ತು. ಆಗಿನ ಕಾಲದಲ್ಲಿ ಕೆಳಜಾತಿಯ ಜನರು ಅಜ್ಞಾನದಿಂದಾಗಿ ಕಲ್ಲು, ಮೊರ, ಬಿಲ್ಲು, ಮುಂತಾದ ನಿರ್ಜೀವ ವಸ್ತುಗಳನ್ನು ಪೂಜಿಸುತ್ತಿದ್ದರು; ಮಾರಿ ಮಸಣಿ, ಬೀರಪ್ಪ, ಮೈಲಾರ ಮುಂತಾದ ಕ್ಷುದ್ರ ದೈವಗಳನ್ನೂ ಪೂಜಿಸುತ್ತಿದ್ದರು. ಈ ದೈವಗಳು ಭಕ್ತರಿಂದ ಅಂಬಲಿ, ಕೋಳಿ, ಮುಂತಾದ ಆಹಾರವನ್ನು ಕೇಳುತ್ತಿದ್ದವು. ನಿರ್ಜೀವ ವಸ್ತುಗಳಿಗೆ ನಮ್ಮ ಭಕ್ತಿಯೇ ಗೊತ್ತಾಗುವುದಿಲ್ಲವಾದುದರಿಂದ, ಕ್ಷುದ್ರ ದೈವಗಳು ಭಕ್ತರಿಗೆ ಏನನ್ನೂ ಕೊಡುವ ಶಕ್ತಿಯಿಲ್ಲದೆ, ಅವರಿಂದಲೇ ಆಹಾರ ಬೇಡುವುದರಿಂದ, ಅಂಥ ಪೂಜೆ ಅವೈಚಾರಿಕ ಮತ್ತು ನಿಷ್ಪ್ರಯೋಜಕ ಎಂಬುದು ಬಸವಣ್ಣನವರ ನಿಲವು. ಅದೇ ರೀತಿ, ಪ್ರಾಣಿಬಲಿಯನ್ನು ಕೇಳುವ ಇಂದ್ರ, ಅಗ್ನಿ, ಯಮ, ಮುಂತಾದ ವೈದಿಕ ದೈವಗಳ ಮಿತಿಯೂ ಅವರಿಗೆ ಗೊತ್ತಿತ್ತು. ವಿಷ್ಣುವು ರಾಮ, ಕೃಷ್ಣ ಮುಂತಾದ ಅವತಾರಗಳಲ್ಲಿ ಪಟ್ಟ ಕಷ್ಟಗಳನ್ನು ತಿಳಿದಿದ್ದ ಅವರು ಇವರೂ ಪರಮಾತ್ಮ ಎಂಬ ಹೆಸರಿಗೆ ಅರ್ಹರಲ್ಲ ಎಂದು ವಾದಿಸಿದರು. ಬಸವಣ್ಣನವರ ಪ್ರಕಾರ ಶಿವ ಮಾತ್ರ ಈ ಹೆಸರಿಗೆ ಅರ್ಹನಾಗುತ್ತಾನೆ. ಆದರೆ ಶಿವ ಎಂದರೆ ರಾವಣ, ಭಸ್ಮಾಸುರ ಮುಂತಾದವರಿಗೆ ಹೆದರುವ, ರುಂಡಮಾಲಾಧರ, ನಂದಿವಾಹನ, ತ್ರಿಶೂಲ-ಡಮರು ಹಿಡಿದಿರುವ, ಹೆಂಡತಿ-ಮಕ್ಕಳನ್ನುಳ್ಳ ಪುರಾಣದ ಶಿವ ಅಲ್ಲ. ಶಿವ ಎಂದರೆ ಪೌರಾಣಿಕ ಶಿವ ಎಂದು ಯಾರೂ ಅಪಾರ್ಥ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಬಸವಣ್ಣನವರೂ ಇತರರೂ ತಮ್ಮ ವಚನಗಳಲ್ಲಿ ಶಿವ ಎಂಬ ಪದದ ಬದಲು ಹೆಚ್ಚಾಗಿ ಲಿಂಗ ಎಂಬ ಪದವನ್ನೇ ಬಳಸುತ್ತಾರೆ. ಈ ಲಿಂಗ ಮನುಷ್ಯರಿಂದ ಏನನ್ನೂ ಬೇಡುವುದಿಲ್ಲ. ಆದರೆ ಅದರಿಂದ ಪಡೆದ ವಸ್ತುಗಳನ್ನು ನಾವಾಗಿಯೇ ಕೃತಜ್ಞತೆಯಿಂದ (ಭಕ್ತಿಯಿಂದ) ಅದಕ್ಕೆ ಅರ್ಪಿಸಿ, ಅವುಗಳನ್ನು ಪ್ರಸಾದ ರೂಪದಲ್ಲಿ ಬಳಸಬೇಕು.
ಬಸವಣ್ಣನವರ ಒಡನಾಡಿಗಳಲ್ಲಿ ಬಹಳಷ್ಟು ಜನ ಅನಕ್ಷರಸ್ಥರಾದ ಕೆಳ ಜಾತಿಯ ಉತ್ಪಾದಕ ವರ್ಗದವರು. ಅಂಬಲಿ, ಪ್ರಾಣಿಬಲಿಯನ್ನು ಬೇಡುವ ದೈವಗಳನ್ನು ಪೂಜಿಸುವುದೇ ಧರ್ಮವಾದರೆ, ಅವರಿಗೆ ಮೋಕ್ಷವನ್ನು ಕೊಡುವ ಧರ್ಮ ಇರಲಿಲ್ಲ ಎಂಬುದು ಬಸವಣ್ಣನವರಿಗೆ ಸ್ಪಷ್ಟವಾಯಿತು. ಆದುದರಿಂದ ಬಸವಣ್ಣನರಿಗಿದ್ದ ಒಂದೇ ದಾರಿಯೆಂದರೆ ಕ್ಷುದ್ರ್ರದೈವಾರಾಧನೆಯಿಂದಲೂ ಇಂದ್ರಾದಿ ದೈವಗಳ ಹೆಸರಿನಲ್ಲಿ ಯಜ್ಞಗಳನ್ನು ಮಾಡುವ ವೈದಿಕ ಧರ್ಮದಿಂದಲೂ ಭಿನ್ನವಾದ ಹೊಸ ಧರ್ಮವೊಂದನ್ನು ಸ್ಥಾಪಿಸುವುದು. ಪರಿಣಾಮ: ಲಿಂಗಾಯತಧರ್ಮ ಸ್ಥಾಪನೆ.
ಬಸವಯುಗದಲ್ಲಿ ಇಂದ್ರ, ಅಗ್ನಿ, ಮುಂತಾದ ಹಲವಾರು ದೈವಗಳ ಆರಾಧನೆ ವ್ಯಾಪಕವಾಗಿತ್ತು. ಬಸವಣ್ಣ ಇಬ್ಬರು ಮೂವರು ದೇವರೆಂದು ಉಬ್ಬುಬ್ಬಿ ಮಾತನಾಡಬೇಡ, ಜಗಕೆ ಒಬ್ಬನೇ ದೈವ ಎಂದು ಒತ್ತಿ ಹೇಳಿದರು. ಒಬ್ಬನಿಗಿಂತ ಹೆಚ್ಚು ದೈವಗಳನ್ನು ಪೂಜಿಸುವುದು ವ್ಯಭಿಚಾರಕ್ಕೆ ಸಮ ಎಂದರು. ಇದರಿಂದ ಅವರು ಎರಡು ಲಾಭಗಳನ್ನು ಕಂಡರು. ಒಂದು ಧಾರ್ಮಿಕ, ಮತ್ತೊಂದು ಸಾಮಾಜಿಕ. 1. ಹಲವಾರು ದೈವಗಳಿಗೆ ನಾವು ಭಕ್ತಿ ತೋರಿಸುವುದರಿಂದ ನಮ್ಮ ನಿಷ್ಠೆ ಹರಿದು ಹಂಚಿಹೋಗುತ್ತದೆ. ಆಗ ಅದು ನಿಷ್ಪ್ರಯೋಜಕವಾಗುತ್ತದೆ. ವಾಸ್ತವವಾಗಿ, ನಾವು ಹಲವಾರು ದೈವಗಳಿಗೆ ತೋರಿಸುವುದು ಬೇಡಿಕೆಯನ್ನೇ ಹೊರತು ಭಕ್ತಿಯನ್ನಲ್ಲ. ಆದುದರಿಂದ ಭಕ್ತಿ ಪರಿಣಾಮಕಾರಿಯಾಗಿರಬೇಕೆಂದರೆ ಅದು ಯಾವ ಬೇಡಿಕೆಯನ್ನೂ ಒಳಗೊಂಡಿರಬಾರದು ಮತ್ತು ಒಂದು ದೈವಕ್ಕೆ ಸೀಮಿತವಾದ ಭಕ್ತಿ ಯಾವುದೇ ಕಾರಣಕ್ಕೂ ಸಡಿಲವಾಗಬಾರದು, ಇಲ್ಲವಾಗಬಾರದು. ಅಂಥ ಭಕ್ತಿಗೆ ನಿಷ್ಠಾಭಕ್ತಿ ಎನ್ನುತ್ತಾರೆ. ನಿಷ್ಠಾಭಕ್ತಿ ಮಾತ್ರ ನಮ್ಮನ್ನು ಮೋಕ್ಷದೆಡೆಗೆ ಒಯ್ಯಬಲ್ಲದು.
2. ಭಾರತದಲ್ಲಷ್ಟೇ ಅಲ್ಲ, ಜಗತ್ತಿನ ಯಾವುದೇ ಧರ್ಮವನ್ನು ನೋಡಿದರೂ ಏಕದೈವೋಪಾಸನೆ ಐಕಮತ್ಯಕ್ಕೆ ದಾರಿ ಮಾಡಿಕೊಟ್ಟಿರುವುದು ಗೊತ್ತಾಗುತ್ತದೆ. ಕೆಲವು ವೇಳೆ ಈ ಐಕಮತ್ಯ ಧರ್ಮ-ಧರ್ಮಗಳಲ್ಲಿ ವೈಷಮ್ಯಕ್ಕೂ ಮತ್ತೆ ಕೆಲವು ವೇಳೆ, ಧರ್ಮಯುದ್ಧಕ್ಕೂ ಎಡೆ ಮಾಡಿಕೊಟ್ಟಿರುವುದುಂಟು. ಆದರೆ, ಬಸವಣ್ಣ ಗಣಪತಿ, ವೀರಭದ್ರ, ಮಾರಿ, ಮಸಣಿ, ಇಂದ್ರ, ಯಮ, ಮುಂತಾದ ದೈವಗಳ ಆರಾಧನೆಯನ್ನು ಬಿಟ್ಟು ಲಿಂಗೋಪಾಸನೆಯೊಂದನ್ನೆ ಮಾಡಲು ಹೇಳಿದುದು ಅನ್ಯಧರ್ಮದವರನ್ನು ದ್ವೇಷಿಸಬೇಕು ಎಂಬ ಉದ್ದೇಶದಿಂದಲ್ಲ, ಅವರಲ್ಲಿ ಅನ್ಯೋನ್ಯಭಾವನೆ ಬೆಳೆಯಲಿ ಎಂಬ ಉದ್ದೇಶದಿಂದ (ಚೆನ್ನಬಸವಣ್ಣ ಹೇಳಿದಂತೆ, ಲಿಂಗಪ್ರದಾನ ಮಾಡಿದುದು ಒಬ್ಬರಿಗೊಬ್ಬರು ದ್ವೇಷಿಸಲಿ ಎಂದಲ್ಲ). ಗಂಡ ಒಂದು ದೈವ, ಹೆಂಡತಿ ಮತ್ತೊಂದು ದೈವದ ಆರಾಧಕರಾಗಿದ್ದರೆ ತಾವಿಬ್ಬರೂ ಒಂದೇ ದೈವದ ಮಕ್ಕಳು (ಶಿವಪುತ್ರರು) ಎಂಬ ಭಾವನೆ ಬೆಳೆಯದಿರಬಹುದು.
ಆ ದೈವವನ್ನು ಒಲಿಸಿಕೊಳ್ಳಲು ನಾವು ಪ್ರಾಣಿಬಲಿಸಹಿತ/ರಹಿತ ಯಜ್ಞಯಾಗಾದಿಗಳನ್ನು ಮಾಡಬಾರದು. ಅದನ್ನು ಗುಡಿಯಲ್ಲಿರುವ ಸ್ಥಾವರಲಿಂಗದ ರೂಪದಲ್ಲಾಗಲಿ ವಿಗ್ರಹರೂಪದಲಾಗಲಿ ಪೂಜಿಸಲಾಗದು. ಇಷ್ಟಲಿಂಗವೆಂದರೆ ನಮ್ಮಲ್ಲೆ ಇರುವ ಚೈತನ್ಯದ ಅರಿವು ಮೂಡಿಸುವ ಸಂಕೇತ. ಅದನ್ನು ಏಕಾಂತದಲ್ಲಿ ಅನುಸಂಧಾನಿಸಬೇಕೇ ಹೊರತು ಸಾಮೂಹಿಕವಾಗಿ ಅಲ್ಲ. ಅದು ನಮ್ಮ ಸ್ವಂತ ಚೈತನ್ಯವಾದುದರಿಂದ ಅದನ್ನು ನಾವೇ ಕಂಡುಕೊಳ್ಳಬೇಕು. ಹಸಿದವನು ತಾನೇ ಉಣ್ಣಬೇಕೇ ಹೊರತು, ತನ್ನ ಪರವಾಗಿ ಬೇರೆಯವರಿಗೆ ಉಣ್ಣಲು ಹೇಳುವುದು ಹಾಸ್ಯಾಸ್ಪದ. ಅದರಂತೆ, ನಮಗೆ ಭಕ್ತಿಯ ಹಸಿವಾದಾಗ ನಾವೇ ಆ ದಾರಿಯಲ್ಲಿ ನಡೆಯಬೇಕೇ ಹೊರತು, ಅರ್ಚಕರಿಗೆ ಪೂಜಿಸಲು ಹೇಳುವುದು ಅಥವಾ ಯಾಜ್ಞಿಕರಿಂದ ಯಜ್ಞ ಮಾಡಿಸುವುದು ಹಾಸ್ಯಾಸ್ಪದ. ಅಲ್ಲದೆ, ಇಷ್ಟಲಿಂಗ ಧರಿಸಿರುವುದರಿಂದ, ಉತ್ಪಾದಕ ವರ್ಗಕ್ಕೆ ಸೇರಿದ ಬಸವಣ್ಣನವರ ಅನುಯಾಯಿಗಳಿಗೆ ದೂರದ ಗುಡಿಗಳಿಗೆ ಹೋಗಿ ಅರ್ಚಕರು ಬರುವವರೆಗೆ ಕಾಯುತ್ತಾ ಕಾಲವ್ಯಯ ಮಾಡುವುದು ತಪ್ಪಿತು.
ಬಾದರಾಯಣನ ಪ್ರಕಾರ ಶೂದ್ರನಿಗೆ ಉಪನಯನ ಸಂಸ್ಕಾರವಿಲ್ಲ, ಆ ಸಂಸ್ಕಾರವಿಲ್ಲದೆ, ವೇದಾಧ್ಯಯನದ ಅಧಿಕಾರವಿಲ್ಲ, ವೇದಾಧ್ಯಯನವಿಲ್ಲದೆ ಬ್ರಹ್ಮವಿದ್ಯೆಯಿಲ್ಲ, ಬ್ರಹ್ಮವಿದ್ಯೆಯಿಲ್ಲದೆ ಮೋಕ್ಷವಿಲ್ಲ. ಬಾದರಾಯಣ ಸ್ತ್ರೀಯರಿಗೆ ಮೋಕ್ಷವಿಲ್ಲ ಎಂದು ನೇರವಾಗಿ ಹೇಳದಿದ್ದರೂ ಆಮೇಲೆ ಅವನ ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದ ಶಂಕರ, ರಾಮಾನುಜ ಮತ್ತು ಮಧ್ವರು ಉಪನಯನ ಸಂಸ್ಕಾರವಿಲ್ಲದ ಸ್ತ್ರೀಯರಿಗೂ ಮೋಕ್ಷವಿಲ್ಲ ಎಂದು ವಾದಿಸಿದರು. ದುರದೃಷ್ಟವಶಾತ್, ಅವೈದಿಕರಾದ ಜೈನರೂ ಸ್ತ್ರೀಯರಿಗೆ ಈ ಜನ್ಮದಲ್ಲಿ ಮೋಕ್ಷವಿಲ್ಲ, ಈ ಜನ್ಮದಲ್ಲಿ ಸತ್ಕರ್ಮ ಮಾಡಿ ಮುಂದಿನ ಜನ್ಮದಲ್ಲಿ ಗಂಡಸಾಗಿ ಹುಟ್ಟಿ, ಮೋಕ್ಷ ಪಡೆಯಬಹುದು ಎಂದು ವಾದಿಸಿದರು.
ಮೇಲ್ವರ್ಗದವರಿಗಷ್ಟೇ ಮೋಕ್ಷ ಎಂಬ ವೈದಿಕ ಸಿದ್ಧಾಂತ ಅವೈಚಾರಿಕ, ಅಮಾನುಷ ಎಂಬುದು ಬಸವಣ್ಣನವರಿಗೆ ಸ್ಪಷ್ಟವಾಯಿತು. ಅವರ ಜೊತೆಯಲ್ಲಿದ್ದವರಲ್ಲಿ ಬಹಳಷ್ಟು ಜನ ಶೂದ್ರರೆ. ಅವರಿಗೆ ಉಪನಯನ ಸಂಸ್ಕಾರವಾಗಲಿ ವೇದಾಧ್ಯಯನವಾಗಲಿ ಇರಲಿಲ್ಲ. ಆದರೂ ಅವರನ್ನು ಮೋಕ್ಷಕ್ಕೆ ಅರ್ಹರನ್ನಾಗಿ ಮಾಡಬೇಕೆಂಬ ಛಲದಿಂದ ಅವರೆಲ್ಲರಿಗೂ ಲಿಂಗಪ್ರದಾನ ಮಾಡಿದರು. ಅವರ ಹೊಸ ಧರ್ಮದಲ್ಲಿ ಲಿಂಗಧಾರಿಗಳೆಲ್ಲ ಕುಲೀನರು, ಸಮಾನರು, ಮೋಕ್ಷಕ್ಕೆ ಅರ್ಹರು. ಈ ಮಾತು ಲಿಂಗ ಧರಿಸಿದ ಬ್ರಾಹ್ಮಣರಿಗೆ ಅನ್ವಯಿಸುವಂತೆ ಶೂದ್ರ, ಅತಿಶೂದ್ರರಿಗೂ ಅನ್ವಯಿಸುತ್ತಿತ್ತು, ಗಂಡಸರಿಗೆ ಅನ್ವಯಿಸುವಂತೆ ಸ್ತ್ರೀಯರಿಗೂ ಅನ್ವಯಿಸುತ್ತಿತ್ತು.
ಸಾಮಾಜಿಕ:
ಬಸವಣ್ಣನವರ ಕಾಲದಲ್ಲಿ ಮನುವಾದಿ ಸಮಾಜವಿತ್ತು. ಅಂದರೆ, ಸಮಾಜ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ನಾಲ್ಕು ಭಾಗವಾಗಿತ್ತು. ಅವರಲ್ಲಿ ಬ್ರಾಹ್ಮಣ ಅತ್ಯಂತ ಶ್ರೇಷ್ಠ, ಶೂದ್ರ ಕನಿಷ್ಠ, ಇನ್ನೂ ಕನಿಷ್ಠರಾದ ಅತಿಶೂದ್ರರು ಅಸ್ಪೃಶ್ಯರು. ಈ ವರ್ಣಗಳಲ್ಲಿ ರಕ್ತ ಸಂಬಂಧ ಏರ್ಪಡದಂತೆ ವಿಧಿಸಲಾಯಿತು. ಮೊದಲು ಈ ವರ್ಣಗಳ ಜನರು ತಮ್ಮ ತಮ್ಮ ಉದ್ಯೋಗಗಳನ್ನು ಆರಿಸಿಕೊಳ್ಳಲು ಸ್ವತಂತ್ರರಿದ್ದರು. ಆದರೆ ಮುಂದೆ ಬ್ರಾಹ್ಮಣ ಮಾತ್ರ ಯಜ್ಞಮಾಡಬೇಕು, ಕ್ಷತ್ರಿಯ ಮಾತ್ರ ರಾಜ್ಯಭಾರ ಮಾಡಬೇಕು, ವೈಶ್ಯ ಮಾತ್ರ ಕೃಷಿ ಮತ್ತು ವ್ಯಾಪಾರ ಮಾಡಬೇಕು ಎಂಬ ಶಾಸನ ರೂಢಿಗೆ ಬಂತು. ಶೂದ್ರನ ಉದ್ಯೋಗವೇನಿದ್ದರೂ ತ್ರೈವರ್ಣಿಕರ ದಾಸನಾಗಿರುವುದು. ಜೊತೆಗೆ ಬ್ರಾಹ್ಮಣ ವೈಶ್ಯ ಅಥವಾ ಕ್ಷತ್ರಿಯ ಅಥವಾ ಶೂದ್ರನಾಗಬಾರದು, ಕ್ಷತ್ರಿಯ ಬ್ರಾಹ್ಮಣ ಅಥವಾ ವೈಶ್ಯನಾಗಬಾರದು, ಶೂದ್ರ ಮೇಲಿನ ಯಾವ ವರ್ಣದವನೂ ಆಗಬಾರದು, ಎಂಬ ಶಾಸನದ ಜೊತೆಗೆ ಒಂದು ವರ್ಣದವನು ಮತ್ತೊಂದು ವರ್ಣದವನ ಉದ್ಯೋಗ ಮಾಡಬಾರದು ಎಂಬ ಶಾಸನವೂ ಜಾರಿಗೆ ಬಂತು.
ಇದರ ಪರಿಣಾಮವಾಗಿ, ತ್ರೈವರ್ಣಿಕರು ಶೂದ್ರರನ್ನೂ ಅಸ್ಪೃಶ್ಯರನ್ನೂ ಅಮಾನುಷವಾಗಿ ಕಾಣಲು ಪ್ರಾರಂಭಿಸಿದರು. ಮನುವಿನ ಪ್ರಕಾರ ಶೂದ್ರನಿಗೆ ಸ್ವಂತ ಆಸ್ತಿಮಾಡಿಕೊಳ್ಳುವ ಅಧಿಕಾರವಿಲ್ಲ. ಅವನು ಯಾವಾಗಲೂ ತ್ರೈವರ್ಣಿಕರ ದಾಸ. ಒಡೆಯರು ಕೊಟ್ಟ ಕೂಲಿಯಿಂದ ಮಾತ್ರ ಅವನು ಜೀವಿಸಬೇಕು. ಅವನ ಬಳಿಯಿರುವ ಯಾವುದೇ ವಸ್ತುವನ್ನು ಬ್ರಾಹ್ಮಣನು ಯಾವುದೇ ಸಂಕೋಚವಿಲ್ಲದೆ ಕಿತ್ತುಕೊಳ್ಳಬಹುದು. ಇದನ್ನು ವಿರೋಧಿಸುತ್ತಾ ಬಸವಣ್ಣನವರು ಎಲ್ಲರೂ ಹುಟ್ಟ್ಟುವುದು ಸ್ತ್ರೀ-ಪುರುಷ ಸಮಾಗಮದಿಂದಲೇ, ಎಲ್ಲರಿಗೂ ಆಸೆ ರೋಷಗಳಿರುತ್ತವೆ ಮತ್ತು ಯಾರ ಆತ್ಮಕ್ಕೂ ಜಾತಿಯಿಲ್ಲ ಎಂಬುದು ನಿಜವಾದರೆ, ಬ್ರಾಹ್ಮಣ ಮೇಲು, ಶೂದ್ರ ಕೀಳು ಎಂಬುದು ಕೇವಲ ದುಷ್ಟರ ಕುತರ್ಕ ಎಂದು ವಾದಿಸಿದರು.
ಗುರು:
ಮನುಪೂರ್ವಯುಗದಲ್ಲಿ ಯಾರು ಬ್ರಹ್ಮಜ್ಞಾನವನ್ನು ಪಡೆಯುತ್ತಾರೋ ಅವರು ಗುರುಗಳು ಎಂಬ ಹೆಸರಿಗೆ ಅರ್ಹರಾಗುತ್ತಿದ್ದರು. ಅವರಲ್ಲಿ ಕೆಲವರ ಜಾತಿ ಅಥವಾ ಕಸುಬುಗಳು (ಮನುವಿನ ಪ್ರಕಾರ) ಕೀಳು. ಮಾರ್ಕಂಡೇಯ (ಮಾತಂಗಿಯ ಮಗ), ಅಗಸ್ತ್ಯ (ಕಬ್ಬಿಲ), ದೂರ್ವಾಸ (ಮೋಚಿ), ಕೌಂಡಿನ್ಯ (ಕ್ಷೌರಿಕ), ಕಶ್ಯಪ (ಕಮ್ಮಾರ) ಮುಂತಾದ ಶೂದ್ರರೂ ಅತಿಶೂದ್ರರೂ ಮಹಾನ್ ಋಷಿಗಳೆಂದು ಪ್ರಸಿದ್ಧರಾಗಿದ್ದಾರೆ. ಆದರೆ ಬ್ರಾಹ್ಮಣರು ಮಾತ್ರ ಋಷಿಗಳಾಗಬೇಕು, ಅವರು ಮಾತ್ರ ಗುರುಗಳಾಗಬಲ್ಲರು ಎಂಬ ಶಾಸನ ಬಂದ ಮೇಲೆ ಅರ್ಹತೆಯಿಲ್ಲದವರೆಲ್ಲಾ ಗುರುಗಳಾದರು. ಬಸವಣ್ಣ ಇದನ್ನು ವಿರೋಧಿಸಿ, ಗುರುವಾಗಲು ಅರಿವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಮಾನದಂಡವೇ (‘ಅರಿವೇ ಗುರು’) ಹೊರತು ಜಾತಿಯಲ್ಲ ಎಂದರು. ಗುರುವೇ ಜಾತಿಭೇದ ಮಾಡುವವನಾದರೆ ಅವನಿಂದ ಜಾತಿಭೇದ ನಿರ್ಮೂಲನೆ ಅಸಾಧ್ಯ. ಅದಕ್ಕೇ ಬಸವಣ್ಣನವರು ಗುರುವಿನ ಲಕ್ಷಣ ಅರಿವೇ ಹೊರತು, ಜಾತಿಯಲ್ಲ ಎಂದುದು. ಇದು ಕೇವಲ ಇತರರಿಗೆ ಮಾಡಿದ ಬೋಧನೆಯಲ್ಲ. ಸ್ವತಃ ತಾವೇ ಮಾದಾರ ಚೆನ್ನಯ್ಯ, ಕಕ್ಕಯ್ಯ ತನ್ನ ಗುರುಗಳು ಎಂದೂ, ಅವರಿಂದ ಭಕ್ತಿಯನ್ನು ಕಲಿತೆ ಎಂದೂ ನಿಸ್ಸಂಕೋಚವಾಗಿ ಹೇಳುತ್ತಾರೆ.
ಜಂಗಮ:
ಜಂಗಮರು ಬಸವಪೂರ್ವಯುಗದಲ್ಲಿಯೂ ಇದ್ದರು. ತಾವು ಶಿವನ ಅವತಾರವೆಂದೂ ಭಕ್ತಿಯನ್ನು ಪರೀಕ್ಷಿಸುವವರೆಂದೂ ಹೇಳಿಕೊಳ್ಳುತ್ತಾ ತಿರುಗುತ್ತಿದ್ದ ಅವರು ಯಾವ ಸಂಕೋಚವೂ ಇಲ್ಲದೆ ಭಕ್ತರ ಮುಂದೆ ಅಸಹ್ಯ ಬೇಡಿಕೆಗಳನ್ನು ಮಂಡಿಸುತ್ತಿದ್ದರು. ಸಿರಿಯಾಳ-ಚೆಂಗಳೆಯರ ಏಕಮಾತ್ರ ಪುತ್ರನ ಮಾಂಸದಡುಗೆಯನ್ನು ಕೇಳಿದುದು, ಸಿಂಧು ಬಲ್ಲಾಳನ ಪತ್ನಿಯನ್ನೇ ಕೇಳಿದುದು ಇಂಥ ಅಸಹ್ಯಕರ, ಅಮಾನುಷ ಬೇಡಿಕೆಗೆ ಉದಾಹರಣೆಗಳು. ಅವರಿಗೆ ಯಾವ ಕಾಯಕವೂ ಇರಲಿಲ್ಲ. ಭಕ್ತರನ್ನು ಪರೀಕ್ಷಿಸುವ ನೆಪದಲ್ಲಿ ಬೇಡುವುದೊಂದೇ ಅವರ ಕಾಯಕವಾಗಿತ್ತು. ಇಂಥ ಜಂಗಮರ ಬಗ್ಗೆ ಬಸವಣ್ಣನವರಿಗೆ ಜುಗುಪ್ಸೆ ಹುಟ್ಟಿರಲು ಸಾಕು. ಅವರು ಸಮಾಜಕ್ಕೆ ಜಂಗಮ ಬೇಡವೇ ಬೇಡ ಎನ್ನದೆ, ಜಂಗಮ ಪರಿಕಲ್ಪನೆಯನ್ನು ಸಂಪೂರ್ಣ ಬದಲಿಸಿದರು. ಅವರ ವಚನಗಳ ಪರಿಶೀಲನೆಯಿಂದ ಜಂಗಮ ಎಂದರೆ ಒಬ್ಬ ಮಾದರಿ ವ್ಯಕ್ತಿ. 1. ಲಿಂಗ ಅಚಲ ಅಥವಾ ಸ್ಥಾವರವಾದರೆ, ಲಿಂಗವಾದವನು ನಡೆದಾಡುವ ಲಿಂಗ (ಜಂಗಮಲಿಂಗ). 2. ಭಕ್ತರಲ್ಲಿ ಧಾರ್ಮಿಕ ಮತ್ತು ನೈತಿಕ ಸುಧಾರಣೆ ಮಾಡುವ ಸಲುವಾಗಿ ಊರೂರು ತಿರುಗುವವನು. 3. ಜಂಗಮರು ಈ ಕಾಯಕ ಮಾಡಬೇಕಾದುದರಿಂದ ಮೊದಲು ತಾವು ಶುದ್ಧರಾಗಿರಬೇಕು; ಅನಂತರವಷ್ಟೇ ಇತರರನ್ನು ಶುದ್ಧ ಮಾಡಲು ಅರ್ಹತೆ ಪಡೆಯುತ್ತಾರೆ. ಈ ಮಾನದಂಡದ ಪ್ರಕಾರ ಬಸವಪೂರ್ವದ ಜಂಗಮರು ಆ ಹೆಸರಿಗೇ ಅರ್ಹರಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಒಂದು ಆರೋಗ್ಯಕರ ಸಮಾಜದಲ್ಲಿ ಕಳ್ಳರು, ಸುಳ್ಳರು, ವಿಷಯಲಂಪಟರು, ಸೋಮಾರಿಗಳು ಇರಬಾರದು. ಜಂಗಮ ಕಾಯಕ ಮಾಡುವವರು ಅಂಥವರನ್ನು ಹುಡುಕಿ ಅವರನ್ನು ತಿದ್ದಿ ಮತ್ತೆ ನೈತಿಕ, ಧಾರ್ಮಿಕರನ್ನಾಗಿ ಮಾಡಬೇಕು. ತಮ್ಮ ಕಾಯಕ ಕಡೆಗಣಿಸಿದವರನ್ನು ಮತ್ತೆ ಕಾಯಕದ ದಾರಿಗೆ ತರಬೇಕು.
ಆರ್ಥಿಕ:
ಕಾಯಕ-ದಾಸೋಹ: ಅತ್ಯಂತ ಶ್ರೀಮಂತ ಎನಿಸಿಕೊಂಡ ದೇಶಗಳಲ್ಲೂ ಬಡವರು, ನಿರ್ಗತಿಕರು, ಭಿಕ್ಷುಕರು ಇರುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಬಸವಣ್ಣ ಕಾಯಕ-ದಾಸೋಹ ಸಿದ್ಧಾಂತವನ್ನು ರೂಪಿಸಿದರು. ಕೆಲವು ರಾಜರು ಜನರಿಂದ ಕಾಯಕ ಮಾಡಿಸಿಕೊಂಡು ಅವರಿಗೆ ತಕ್ಕ ಪ್ರತಿಫಲ ಕೊಡುತ್ತಿರಲಿಲ್ಲ. ದುಡಿಯುವವರಿಗೆ ತಕ್ಕ ಪ್ರತಿಫಲ ಕೊಡದಿದ್ದರೆ ಯಾರೂ ಮನಸ್ಸಿಟ್ಟು ದುಡಿಯುವುದಿಲ್ಲ ಎಂದು ಮನಗಂಡ ಬಸವಣ್ಣ ಪ್ರತಿಫಲ ಕೊಡಬೇಕೆಂದು ವಾದಿಸಿದರು. ಕೆಲವರು ತಾವು ನಿರ್ಗತಿಕರೆಂದು ಭಿಕ್ಷೆ ಬೇಡಿದರೆ, ಮತ್ತೆ ಕೆಲವರು ತಾವು ಸನ್ಯಾಸಿಗಳು, ಜಂಗಮರು ಎಂಬ ಅಧಿಕಾರದಿಂದ ಭಿಕ್ಷೆ ಬೇಡುತ್ತಿದ್ದರು. ಸ್ವಾಭಿಮಾನವನ್ನು ಬಲಿಕೊಟ್ಟು ಭಿಕ್ಷೆ ಬೇಡುವುದು ಸರಿಯಲ್ಲ ಎಂಬುದನ್ನು ತಿಳಿದಿದ್ದ ಬಸವಣ್ಣ ಎಲ್ಲ ಸಶಕ್ತರೂ ಕಾಯಕ ಮಾಡಬೇಕು, ಹೆಚ್ಚು ದುಡಿಯಬೇಕು, ಇಲ್ಲದವರಿಗೆ, ಕಾಯಕ ಮಾಡಲಾಗದವರಿಗೆ ದಾಸೋಹ ಮಾಡಬೇಕು ಎಂದರು. ಎಲ್ಲರೂ ಸನ್ಯಾಸಿಗಳಾಗಿ ಭಿಕ್ಷೆ ಬೇಡಲು ಪ್ರಾರಂಭಿಸಿದರೆ, ಭಿಕ್ಷೆ ಕೊಡುವವವರಾದರೂ ದುಡಿಯಬೇಕು ಎಂಬುದು ಒಂದು ಕಾರಣದಿಂದ, ಸನ್ಯಾಸ ಶ್ರೇಷ್ಠ ಆಶ್ರಮವಲ್ಲ ಎಂಬ ಮತ್ತೊಂದು ಕಾರಣದಿಂದ ಭಿಕ್ಷೆ ಮಾಡುವುದನ್ನು ವಿರೋಧಿಸಿದರು.
ಇದನ್ನೆಲ್ಲ ಪರಿಶೀಲಿಸಿದರೆ ಬಸವಣ್ಣ ಸ್ಥಾಪಿಸಿದ ಲಿಂಗಾಯತಧರ್ಮ, ಸ್ಥಾಪಿಸಲಿಚ್ಛಿಸಿದ ಸಮಾಜ ವೈದಿಕವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಂದರೆ, ಲಿಂಗಾಯತಧರ್ಮ ಹಿಂದೂ (ವೈದಿಕ) ಅಲ್ಲ ಎಂದು ಮೊದಲು ಘೋಷಿಸಿದವರು ಅವರೇ. ನಮ್ಮಲ್ಲಿ ಕೆಲವರು ಅದನ್ನು ಕೇವಲ ಅನುಮೋದಿಸುತ್ತಿದ್ದೇವೆ, ಅಷ್ಟೇ.
Comments 10
G.B.Patil
Jul 5, 2021ಶೂದ್ರರಿಗೆ ಉಪನಯನದ ಸಂಸ್ಕಾರವಿಲ್ಲ, ಉಪನಯನದ ಸಂಸ್ಕಾರವಿಲ್ಲದೆ, ವೇದಾಧ್ಯಯನದ ಅಧಿಕಾರವಿಲ್ಲ, ವೇದಾಧ್ಯಯನವಿಲ್ಲದೆ ಬ್ರಹ್ಮವಿದ್ಯೆಯಿಲ್ಲ ಬ್ರಹ್ಮವಿಧ್ಯೆಯಿಲ್ಲದೆ ಮೋಕ್ಷಯಿಲ್ಲ…. , ಈ ಬ್ರಾಹ್ಮಣ್ಯವನ್ನು ಇದಕ್ಕಿಂತ ಚನ್ನಾಗಿ ಹೇಳಲು ಸಾಧ್ಯವಿಲ್ಲ.
Umashankara Bengaluru
Jul 7, 2021ಬಸವಣ್ಣನವರ ಆಶಯಗಳಂತೆ ನಡೆದರೆ ಲಿಂಗಾಯತ ಸಮಾಜ ಅಷ್ಟೇ ಏಕೆ ಭಾರತವೇ ಉದ್ಧಾರವಾಗುತ್ತದೆ.
Karibasappa hanchinamani
Jul 12, 2021ಬಸವಣ್ಣನವರು ನಿಸ್ಸಂದೇಹವಾಗಿ ಹೊಸ ಸಿದ್ಧಾಂತವನ್ನು ನೀಡಿದ್ದಾರೆ. ಅವರ ಪೂರ್ವದಲ್ಲಿದ್ದ ಗುರು, ಲಿಂಗ, ಜಂಗಮ ಪರಿಕಲ್ಪನೆಗಳು ಬಸವಣ್ಣನವರಲ್ಲಿ ಹೇಗೆ ಭಿನ್ನವಾಗಿದ್ದವು ಎನ್ನುವುದರ ಕುರಿತಾದ ತಾವು ತಿಳಿಸಿದ ವೈಚಾರಿಕ ನಿರೂಪಣೆಯನ್ನು ನಾನು ಒಪ್ಪುತ್ತೇನೆ ಸರ್.
ಜಯದೇವಪ್ಪ ಗಾಣಿಗ
Jul 12, 2021ಹೊಸ ಧರ್ಮವನ್ನು ಕೊಟ್ಟ ಬಸವಣ್ಣನವರು ಹೇಗೆ ದಾರ್ಶನಿಕ ಸಮಾಜವಾದಿ ಎನ್ನುವುದು ಇನ್ನೂ ಹೆಚ್ಚು ಹೆಚ್ಚು ಸಮಾಜದಲ್ಲಿ ಪ್ರಚಲಿತವಾಗಬೇಕು. ಇಂತಹ ಲೇಖನಗಳು ಆ ಕೆಲಸ ಮಾಡಬಲ್ಲವು. ಥ್ಯಾಂಕ್ಯೂ ಸರ್.
ತೋಂಟದಾರ್ಯ ಸಿರಾ
Jul 12, 2021ಶೋಷಿತರ ಪರವಾಗಿ ಕರುಣೆಯಿಂದ, ಶೋಷಕರ ವಿರುದ್ಧ ಸಾತ್ವಿಕ ಕೋಪದಿಂದ ಮಾಡಿದ ಹೋರಾಟ ಬಸವಣ್ಣನವರದು- ತಮ್ಮ ಮಾತು ಅಕ್ಷರಶಃ ನಿಜ.
Girish Mysuru
Jul 13, 2021ಬಸವಣ್ಣನವರಿಗಾಗಲಿ, ಶರಣರಿಗಾಗಲಿ ತಾವೊಂದು ಹೊಸ ಧರ್ಮ ಸೃಷ್ಟಿಸಬೇಕೆಂಬ ಅಭಿಲಾಶೆಗಿಂತ ತಾವೊಂದು ನಿಜದ ಹಾದಿಯಲ್ಲಿ ನಡೆಯಬೇಕು… ಆ ನಡೆ ತಾನಾಗೇ ನಿಲ್ಲುತ್ತದೆನ್ನುವ ವಿಶ್ವಾಸವಿತ್ತೆಂದು ನನಗೆ ಅನಿಸುತ್ತದೆ ಸರ್.
Vishwanath Hiramath
Jul 17, 2021ನನ್ನ ಅಚ್ಚುಮೆಚ್ಚಿನ ಜಾಲತಾಣ ಬಯಲು. ಲೇಖನಗಳೆಲ್ಲಾ ತುಂಬಾ ಚೆನ್ನಾಗಿವೆ. ನನ್ನ ಸ್ನೇಹಿತರೊಂದಿಗೆ, ಬಂಧುಗಳೊಂದಿಗೆ ಈ ಲಿಂಕನ್ನು ಶೇರ್ ಮಾಡಿಕೊಳ್ಳುತ್ತೇನೆ. ನನ್ನ ದೊಡ್ಡಪ್ಪ ಇಲ್ಲಿನ ಲೇಖನಗಳನ್ನೆಲ್ಲಾ ಪ್ರಿಂಟ್ ತೆಗೆದುಕೊಂಡು ಓದುತ್ತಾರೆ.
Rudrappa B
Jul 18, 2021ನಿಜ ಸರ್, ಶ್ರೀಮಂತ ರಾಷ್ಟ್ರಗಳಲ್ಲೂ ಬಡವರು, ಭಿಕ್ಷುಕರು ಇದ್ದೇ ಇರುತ್ತಾರೆ. ಕಾಯಕ-ದಾಸೋಹ ತತ್ವಗಳನ್ನು ಪ್ರತಿಯೊಂದು ದೇಶ ರಾಷ್ಟ್ರನೀತಿಯನ್ನಾಗಿ ರೂಪಿಸಿಕೊಂಡರೆ ಎಲ್ಲರೂ ಸಮಾನವಾಗಿ ಬದುಕಬಹುದು. ನಮ್ಮ ದೇಶದಲ್ಲಿ ಮೊದಲು ಇದು ಜಾರಿ ಬರಬೇಕು. ಯಡಿಯೂರಪ್ಪನವರಾದರೂ ಇದರ ಮಹತ್ವವನ್ನು ತಿಳಿದುಕೊಂಡು ಹೊಸ ಹೆಜ್ಜೆ ಇಡಬೇಕು… ಅಯ್ಯೋ… ಇದನ್ನೆಲ್ಲಾ ನಿರೀಕ್ಷಿಸುವುದು ಮಹಾಮೂರ್ಖತನವೇ ಬಿಡಿ.
Deveerappa Katagi
Jul 21, 2021ಮಾಡುವ ಕೆಲಸಕ್ಕೆ ಫಲ ಅಪೇಕ್ಷಿಸಬೇಡ ಎನ್ನುವ ವೈದಿಕ ಸಂಸ್ಕೃತಿಯಲ್ಲಿ ಎಂತಹ ಮೋಸ ಅಡಗಿದೆ! ನನಗೂ ಬಹಳ ವರ್ಷ ಇದರ ಸೂಕ್ಷ್ಮತೆ ಗೊತ್ತೇ ಇರಲಿಲ್ಲ. ಶರಣರು ಕಾಯಕಕ್ಕೆ ತಕ್ಕ ಫಲ ಪಡೆಯಬೇಕೆಂದರು, ಮತ್ತು ಅದನ್ನು ತನಗೂ ಮತ್ತು ಮಿಕ್ಕಿದಲ್ಲಿ ಸಮಾಜಕ್ಕೂ ಬಳಸಬೇಕೆಂದರು. ನಿಜಕ್ಕೂ ಇದು ಜನಸಾಮಾನ್ಯರ ಧರ್ಮ.
ವಿಜುಕುಮಾರ್, ಧಾರವಾಡ
Aug 5, 2021ಪ್ರೊಫೆಸರ್, ನಿಮ್ಮ ಲೇಖನಗಳನ್ನು ತಪ್ಪದೇ ಓದುತ್ತೇನೆ.