ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಹನ್ನೆರಡನೇ ಶತಮಾನವು ಭಾರತದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದಂಥ ಮಹತ್ತರ ಬದಲಾವಣೆಗೆ ಸಾಕ್ಷಿಯಾಯಿತು. ಈ ಬದಲಾವಣೆಯ ನೆಲ ಇಂದಿನ ಉತ್ತರ ಕರ್ನಾಟಕ ಮತ್ತು ಬದಲಾವಣೆಯ ಮೂಲಪುರುಷ ಬಸವಣ್ಣನವರು. ಅಂದು ಸಮಾಜದಲ್ಲಿ ಮನೆಮಾಡಿದ್ದ ಸಾಮಾಜಿಕ ಶೋಷಣೆ, ಅನೀತಿ, ಧಾರ್ಮಿಕ ಮತ್ತು ಆರ್ಥಿಕ ಅಸಮಾನತೆ, ಮೂಢನಂಬಿಕೆ, ಅಂಧಾನುಕರಣೆ, ಕಂದಾಚಾರ, ಅಂಧಶ್ರದ್ಧೆಗಳಂಥಾ ಜಾಢ್ಯಗಳನ್ನು ಸಮಾಜದಿಂದ ಮೂಲೋತ್ಪಾಟನೆ ಮಾಡಿದರು. ತಾವು ರೂಪಿಸಿದ ಹೊಸ ವ್ಯವಸ್ಥೆಯಲ್ಲಿ ಈ ಸಾಮಾಜಿಕ ಅನಿಷ್ಠಗಳಿಗೆ ಕಿಂಚಿತ್ ಅವಕಾಶವಿಲ್ಲದಂತೆ ನೋಡಿಕೊಂಡರು.
ಲಿಂಗಾಯತ ಎನ್ನುವುದು ಒಂದು ಅರ್ಹತೆ, ಪದವಿ. ಯಾರು ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸಿ ದೇಹವನ್ನೇ ದೇವಾಲಯವೆಂದು ಅರಿತು ಹೊರಗಣ ದೇವಾಲಯಗಳಿಗೆ ಎಡತಾಕುವುದಿಲ್ಲವೋ ಅವರೆಲ್ಲರೂ ಲಿಂಗಾಯತರು. ಲಿಂಗಾಯತ ಧರ್ಮದ ಘನ ಉದ್ದೇಶವೇ ಜನರಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವವನ್ನು ಬಿತ್ತಿ ಬೆಳೆಸುವುದು. ಆದರೆ ಕಾಲಾನಂತರದಲ್ಲಿ ಲಿಂಗಾಯತರೆಂದು ಎನಿಸಿಕೊಂಡವರು ವೈಚಾರಿಕತೆಯ ಹಾದಿ ಬಿಟ್ಟರು. ಗೊಡ್ಡು ಆಚರಣೆಗಳಿಗೆ ಜಾಗ ಕೊಟ್ಟು ಅವುಗಳನ್ನು ಪೋಷಿಸಿಕೊಂಡು ಮುನ್ನಡೆದರು. ನಿಜಕ್ಕೂ ಇದು ಇತಿಹಾಸದ ಒಂದು ದೊಡ್ಡ ಅಣಕ. ಗುಲಾಮಗಿರಿಯನ್ನು ಕಿತ್ತೊಗೆದ ಧರ್ಮದಲ್ಲಿ ಬೇರೊಂದು ರೂಪದಲ್ಲಿ ಮತ್ತೆ ಗುಲಾಮಿ ಭಾವನೆಗಳು ಧರ್ಮದ ಹೆಸರಲ್ಲಿ ಮಹತ್ವ ಪಡೆದವು. ಇದರಲ್ಲಿ ಬಹುಮುಖ್ಯವಾಗಿ ಕಾಣುವುದು ಅಷ್ಟಾವರಣದ ಭಾಗವಾದ ಪಾದಪೂಜೆ ಮತ್ತು ಪಾದೋದಕ.
ಇದೊಂದು ಅತಿ ಸೂಕ್ಷ್ಮವಾದ ವಿಚಾರ. ಅಂದು ಬಸವಣ್ಣನವರ ಕಾಲದಲ್ಲಿ ಪಾದೋದಕವಿತ್ತೇ ಎಂದು ಕೇಳಿದರೆ, ಹೌದು ಅದು ಇತ್ತು. ಹಾಗಾದರೆ ಯಾವ ರೂಪದಲ್ಲಿ ಇತ್ತು? ಎಂದು ಪ್ರಶ್ನಿಸಿದರೆ, ಅದು ಅರಿವಿನ ಹರವಿಯಾಗಿತ್ತು. ಜ್ಞಾನದ ಅನುಭಾವವಾಗಿತ್ತು, ಎಂದು ವಚನಾಧ್ಯಯನ ಮಾಡಿದವರು ನಿಖರವಾಗಿ ಉತ್ತರಿಸುತ್ತಾರೆ. ‘ಪಾದ’ ಎಂದರೆ ‘ಪಥ’ ಎಂದೂ, ಗುರು ಪಾದೋದಕ ಎಂದರೆ ಅರಿವಿನ, ಸುಜ್ಞಾನಭರಿತ ನಡೆ ಎಂದೂ, ಜಂಗಮ ಪಾದೋದಕವೆಂದರೆ ಅರಿವಿನಿಂದುಂಟಾದ ಅನುಭಾವ ಎಂದೂ ವಚನಗಳ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಶರಣರು ನಮಗೆ ವೈಚಾರಿಕ ಚಿಂತನೆಯ ಸ್ವಾತಂತ್ರ್ಯವನ್ನು ಹೇಳಿಕೊಟ್ಟಿದ್ದಾರೆ, ಆ ಹಿನ್ನೆಲೆಯಲ್ಲಿ ಇಂಥ ಆಚರಣೆಗಳನ್ನು ಗಮನಿಸಬೇಕು.
ಗುರು ಲಿಂಗ ಜಂಗಮ ಇವು ತತ್ವವಾಚಕ ಪದಗಳೇ ಹೊರತು ವ್ಯಕ್ತಿವಾಚಕ ಶಬ್ದಗಳಲ್ಲ. ಜಂಗಮದಯ್ಯಗಳೆಂದು ಕರೆದುಕೊಳ್ಳುವ ವ್ಯಕ್ತಿಯ ಕಾಲು ತೊಳೆದ ನೀರು ಪವಿತ್ರವಲ್ಲ, ತೀರ್ಥವಲ್ಲ, ಅದು ಕೊಳಕು ನೀರು. ಅದು ಕುಡಿಯಲಿಕ್ಕಾಗಲೀ, ಅಡುಗೆಗೆ ಬಳಸಲಾಗಲೀ ಯೋಗ್ಯವಲ್ಲ, ಅದರಿಂದ ಕರ್ಮ ಹರಿಯುವ ಬದಲು ರೋಗ- ರುಜಿನಗಳು ಬರುವುದು ನಿಶ್ಚಿತ.
ವ್ಯಕ್ತಿಯ ಪಾದಪೂಜೆ ಮತ್ತು ಪಾದೋದಕ ಸೇವನೆಗಳು ಬಸವಪೂರ್ವದಲ್ಲೇ ಇದ್ದ ಅಂಧ ಆಚರಣೆಗಳು. ಇವುಗಳಲ್ಲಿ ಎಳ್ಳಷ್ಟೂ ವೈಚಾರಿಕತೆ ಇರಲಿಲ್ಲ. ಶರಣರು ಇಂಥವುಗಳನ್ನೆಲ್ಲಾ ಧಿಕ್ಕರಿಸಿ, ಇವುಗಳಿಗೆ ತಾತ್ವಿಕವಾಗಿ ಹೊಸ ಅರ್ಥವನ್ನೇ ನೀಡಿದರು. ಇದಕ್ಕೆ ಉತ್ತರ ಹುಡುಕಲು ನಾವು ಮೊದಲು ಬಸವಣ್ಣನವರ ಬಳಿಗೇ ಹೋಗೋಣ!!
ಬಸವಣ್ಣನವರು ಹೊಸಧರ್ಮದ ಸ್ಥಾಪಕರು. ಅಂದರೆ ಧರ್ಮಗುರು, ಲಿಂಗಾಯತ ಧರ್ಮದಲ್ಲಿ ಅವರದು ಪರಮೊಚ್ಚ ಸ್ಥಾನ. ಅವರು ಹಾರುವನಿಂದ ಅಂತ್ಯಜನವರೆಗೆ ಎಲ್ಲರನ್ನೂ ಸಮಾನವಾಗಿ ಕಂಡರು. “ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ. ಕೂಡಲಸಂಗಮದೇವಾ, ಎನಗಿದೇ ದಿಬ್ಯ” ಎಂದು ಹೇಳಿದ ಬಸವಣ್ಣನವರು ಎಂದಾದರೂ ‘ನಾನು ಗುರು, ನೀನು ಶಿಷ್ಯ’ ಎಂಬ ಭಾವದಿಂದ ತಮ್ಮ ಸಹಧರ್ಮೀಯರ ಮನೆಗಳಿಗೆ ಹೋಗಿ, ಭಕ್ತರಿಂದ ತಮ್ಮ ಪಾದಪೂಜೆ ಮಾಡಿಸಿಕೊಡಿರುವುದನ್ನು ನಾವು ಊಹಿಸಲು ಸಾಧ್ಯವೇ? ಖಂಡಿತವಾಗಿಯೂ ಅಸಂಭವ. ಅವರು ಪಾದಪೂಜೆ ಮಾಡಿಸಿಕೊಂಡಿಲ್ಲ, ಪಾದ ತೊಳೆಸಿಕೊಂಡು ಆ ನೀರನ್ನು ಭಕ್ತರಿಗೆ ಕುಡಿಸಲಿಲ್ಲ. ಯಾವ ಶರಣರ ವಚನಗಳಲ್ಲೂ ತಾವು ಬಸವಣ್ಣನವರ ಪಾದಪೂಜೆ ಮಾಡಿದ ಉಲ್ಲೇಖಗಳಿಲ್ಲ. ಉರಿವ ಜ್ಯೋತಿ ಮತ್ತೊಂದು ದೀಪವನ್ನು ಸ್ಪರ್ಶಿಸಿದಾಗ ಎರಡು ಜ್ಯೋತಿಗಳ ನಡುವೆ ಯಾವ ಭಿನ್ನತೆಯೂ ಇರದು, ಹಾಗೇ ಗುರುವಿನಿಂದ ಅನುಗ್ರಹಿತನಾದ ಭಕ್ತನು ಗುರುವೇ ಆಗುವನು. ಬಸವಣ್ಣನವರಿಂದ ಅನುಗ್ರಹಿತರಾದ ಚನ್ನಬಸವಣ್ಣ, ಪ್ರಭುದೇವರು, ಅಕ್ಕನಾಗಮ್ಮ, ಸಿದ್ಧರಾಮೇಶ್ವರರು, ಮಡಿವಾಳ ಮಾಚಿದೇವರಾದಿಯಾಗಿ ಅಸಂಖ್ಯಾತ ಶರಣ ಸಂಕುಲ ಗುರುಸ್ವರೂಪವೇ ಆಯಿತು. ಶರಣೆ ಅಮ್ಮುಗೆ ರಾಯಮ್ಮನವರು ಗುರು-ಶಿಷ್ಯರ ಭೇದವನ್ನು ಕುರಿತು ಸೊಗಸಾಗಿ ಹೇಳಿದ್ದಾರೆ: “ಹೇಳುವಾತ ಗುರುವಲ್ಲ, ಕೇಳುವಾತ ಶಿಷ್ಯನಲ್ಲ, ಹೇಳಿಹೆ ಕೇಳಿಹೆನೆಂಬನ್ನಕ್ಕರ ವಿರಕ್ತಿಸ್ಥಲಕ್ಕೆ ಭಂಗನೋಡಾ, ಅಮುಗೇಶ್ವರಾ.” ಗುರುಮುಟ್ಟಿ ಗುರುವಾಗುವ ಅಭಿನ್ನ ಸಂಸ್ಕೃತಿಯಲ್ಲಿ, ಕಾಲು ತೊಳೆದು ನೀರು ಕುಡಿಯುವ ಭಿನ್ನ ಸಂಸ್ಕೃತಿಗೆ ಜಾಗವೇ ಇಲ್ಲ.
ಪಾದೋದಕದ ನಿಜವಾದ ಅರ್ಥವನ್ನು ತಿಳಿಸಿಕೊಟ್ಟವರು ಬಸವಣ್ಣನವರು ಎಂದು ವೀರ ಗಣಾಚಾರಿ ಮಡಿವಾಳ ಮಾಚಿದೇವರು ಹೇಳುತ್ತಾರೆ: ಗುರುಲಿಂಗಜಂಗಮಕ್ಕೆ ಆಧಾರ ಬಸವಣ್ಣ, ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ, ಸರ್ವಾಪತ್ತಿಗಾಧಾರ ಬಸವಣ್ಣ, ಸ್ವರ್ಗ ಮರ್ತ್ಯ ಪಾತಾಳಕ್ಕೆ ಬಸವಣ್ಣನ ಚೈತನ್ಯವಲ್ಲದಿಲ್ಲ. ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದಾತನಂಬಿಗರ ಚೌಡಯ್ಯ. ಹಳೆಯ ಕಂದಾಚಾರಗಳ ಜಾಗದಲ್ಲಿ ಹೊಸ ಬಗೆಯ ಅರಿವಿನ ಬೆಳಕು ಮೂಡಿಸಿದ ಬಸವಣ್ಣನವರ ಜ್ಞಾನಕ್ಕೆ ತಲೆಬಾಗಿದ್ದಾರೆ ಅಂಬಿಗರ ಚೌಡಯ್ಯನವರು.
ಚಿನ್ಮಯಜ್ಞಾನಿ ಚನ್ನಬಸವಣ್ಣನವರು, ಸದಾಚಾರವನ್ನಳವಡಿಸಿಕೊಂಡ ಭಕ್ತನ ಕಾಯದಲ್ಲಿ ಸತ್ಯದ ಅರಿವಿನಿಂದ ಪ್ರಾಪ್ತಿಯಾದ ಅನುಭಾವವೇ ಪಾದೋದಕ, ಆ ಅನುಭಾವದ ಪರಿಣಾಮವೇ ಪ್ರಸಾದ ಎಂದು ವಿವರಣೆ ನೀಡುತ್ತಾರೆ:
ನಿತ್ಯನೆಂಬ ಭಕ್ತನ ಮನೆಗೆ ಘನಚೈತನ್ಯವೆಂಬ ಜಂಗಮ ಬಂದಡೆ, ಜಲವಿಲ್ಲದ ಜಲದಲ್ಲಿ ಪಾದಾರ್ಚನೆಯ ಮಾಡಿದಡೆ, ಮಾಡಿದ ಆ ಪಾದೋದಕವೆ ಮಹಾಪದವಯ್ಯಾ, ಪಾದೋದಕದಲ್ಲಿ ಪರಮಪರಿಣಾಮಿ ಕೂಡಲಚೆನ್ನಸಂಗಾ ನಿಮ್ಮ ಶರಣ. ಜಲವಿಲ್ಲದ ಜಲ ಎನ್ನುವ ಮಾತನ್ನು ಇಲ್ಲಿ ಗಮನಿಸಬೇಕು. ಶರಣರದು ವೈಚಾರಿಕ ನಡೆ-ನುಡಿ. ಪಾದಪೂಜೆಯ ಅರ್ಥಹೀನ ಆಚರಣೆಗೆ ಅಲ್ಲಿ ಕವಡೆಯ ಕಿಮ್ಮತ್ತೂ ಇರುವುದಿಲ್ಲ. ಹೀಗಿರುವಾಗ ಮತ್ತೆ ಪಾದಪೂಜೆಯ ಸಂಪ್ರದಾಯವನ್ನು ಮುಂದಿನ ದಿನಗಳಲ್ಲಿ ಆರಂಭಿಸಿದ ಕೆಲವು ಕುಹಕಿಗಳು ಶರಣರ ಹೆಸರಿನಲ್ಲಿ ಪಾದೋದಕಕ್ಕೆ ಸಂಬಂಧಿಸಿದ ಖೊಟ್ಟಿ ವಚನಗಳನ್ನು ಸೇರಿಸುವ ಪ್ರಯತ್ನ ಮಾಡಿರುವುದನ್ನು ಗಮನಿಸಬೇಕು.
ಮಾದಾರ ಚೆನ್ನಯ್ಯನವರು ಪಾದ ಪೂಜೆ, ಪಾದೋದಕಗಳ ಒಳ ಅರ್ಥಗಳನ್ನು ಮತ್ತಷ್ಟು ಸ್ಪಷ್ಟವಾಗಿ ವಿವರಿಸಿದ್ದಾರೆ:
“ಪಾದೋದಕ ಪಾದೋದಕವೆಂದು ಒಪ್ಪವಿಟ್ಟು ನುಡಿವಿರಿ. ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿರ್ದರೆ ಕೇಳಿರಿ. ಪಾದೋದಕವೆ ಪರಾತ್ಪರಾನಂದವು. ಆ ಆನಂದವೆ ಚಿದ್ಬಿಂದು; ಆ ಚಿದ್ಬಿಂದುವೆ ಪಾದೋದಕ. ಆ ಪಾದೋದಕವ ಶ್ರೀಗುರು ಲಿಂಗ ಜಂಗಮದ ದ್ವಿಪಾದದ ಭ್ರೂಮಧ್ಯಸ್ಥಾನದಲ್ಲಿರ್ದುದನರಿದರ್ಚಿಸಿದ ಪರಿಣಾಮವೆ ಚಿದಾನಂದ ಬಿಂದು ತೊಟ್ಟಿಟ್ಟುದೆ ಪಾದೋದಕವು. ಈ ಭೇದವನರಿದು ಕೊಳಬಲ್ಲರೆ ಪಾದೋದಕವೆನಬಹುದು. ಇದನರಿಯದೆ ಕೆರೆ ಬಾವಿ ಹಳ್ಳ ಹೊಳೆ ಚಿಲುಮೆ ನೀರ ತಂದು ಮನೆಗೆ ಬಂದಲ್ಲಿ ಅಗ್ಗಣಿಯೆಂಬಿರಿ. ಜಂಗಮದ ಪಾದದ ಮೇಲೆರದರೆ ತೀರ್ಥವೆಂಬಿರಿ. ತೀರ್ಥವೆಂದುಕೊಂಡು ತೃಷೆಯನಡಗಿಸಿ, ಕಡೆಯಲ್ಲಿ ಮೂತ್ರವ ಬಿಟ್ಟುಬಂದೆವು. ಹೊರಗಗ್ಗಣಿಯ ತನ್ನಿ ಎಂಬ ಜಲವು ತೀರ್ಥವಲ್ಲ. ಕೊಟ್ಟಾತ ಗುರುವಲ್ಲ, ಕೊಂಡಾತ ಭಕ್ತನಲ್ಲ. ಇವರಿಬ್ಬರ ನಡತೆ ಎಂತಾಯಿತ್ತೆಂದಡೆ: ಎಕ್ಕಲ ಅಮೇಧ್ಯವ ತಿಂದು ಒಂದರ ಮೋರಿಯ ಒಂದು ಮೂಸಿ ನೋಡಿದಂತಾಯಿತ್ತೆಂದಾತ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.” ಶರಣನ ಅನುಭಾವದ ಅಮೃತವೇ ಪಾದೋದಕ. ಹೊರಗಣ ಜಲ, ಜಲವೇ ಹೊರತು ತೀರ್ಥವಲ್ಲ, ಪಾದೋದಕವಲ್ಲ ಎಂದು ವಿಮರ್ಶಾತ್ಮಕವಾಗಿ ಹೇಳುತ್ತಾ, ಪಾದಪೂಜೆ ಮಾಡಿಸಿಕೊಳ್ಳುವವನನ್ನೂ, ಪಾದಪೂಜೆ ಮಾಡುವವನನ್ನೂ ಹೀನಾಯವಾಗಿ ಟೀಕಿಸಿದ್ದಾರೆ ಚೆನ್ನಯ್ಯನವರು. ಪಾದ ತೊಳೆಯುವುದು ಮತ್ತು ತೊಳಿಸಿಕೊಳ್ಳುವುದು ಎರಡೂ ಅಸಹ್ಯಕರ.
ಪಾದೋದಕದ ಅರ್ಥವನ್ನು ವ್ಯಾಖ್ಯಾನಿಸುವ ಬೆಡಗಿನ ವಚನ ನೋಡಿ: “ಓಂ ನಮಃ ಶಿವಾಯವೆಂಬ ಮೂಲಮಂತ್ರದಿಂದ ಗಿರಿಜೆ ಪಾದೋದಕವ ಮಾಡಿಕೊಂಡು ಬಂದು ನಿಂದು ಗೊಡ್ಡಿನ ಮೇಲೆ ತಳಿದಳು. ತಳಿಯಲು ಗೊಡ್ಡುಗಳು ಕಾಮಧೇನುಗಳಾಗಿ ಕರೆಯಲು, ಆ ಕಾಮಧೇನುಗಳು ಕರೆದ ಕಾರಣದಿಂದ ಅಲ್ಲಿ ಕ್ಷೀರಸಮುದ್ರ ಹುಟ್ಟಿತು ನೋಡಾ, ಜಂಗಮಲಿಂಗಪ್ರಭುವೆ.” ಲಿಂಗಾನುಸಂಧಾನದಿಂದ ಸಾಧಕನಲ್ಲಿ ಜಾಗೃತವಾಗುವ ಅಂತ:ಶಕ್ತಿಯೇ ಗಿರಿಜೆ, ಅದರ ಪರಿಣಾಮವಾಗಿ ಉಂಟಾಗುವ ಅನುಭಾವವೇ ಪಾದೋದಕ. ಆ ಅನುಭಾವದಿಂದ ಸಾಧಕನ ಅಂಗೇಂದ್ರಿಯಗಳೆಲ್ಲಾ ಲಿಂಗೇಂದ್ರಿಯಗಳಾಗಿ ಆತ್ಮ-ಪರಮಾತ್ಮ ಶರಧಿಯೊಡಗೂಡಿ ಸಮರಸವಾಗುವುದು, ಇದೇ ಪರಮಾನಂದ ಭಾವ, ಭಾವಸಮರಸ.
ಅನೇಕ ಶರಣರು ಪಾದೋದಕ ತತ್ವದ ಮರ್ಮವನ್ನು ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ಈ ಕೆಳಗೆ ಕೆಲವನ್ನು ಪ್ರಸ್ತುತ ಪಡಿಸಲಾಗಿದೆ. “ಗುರು ತನ್ನ ವಿನೋದಕ್ಕೆ ಗುರುವಾದ, ಗುರು ತನ್ನ ವಿನೋದಕ್ಕೆ ಲಿಂಗವಾದ, ಗುರು ತನ್ನ ವಿನೋದಕ್ಕೆ ಜಂಗಮವಾದ, ಗುರು ತನ್ನ ವಿನೋದಕ್ಕೆ ಪಾದೋದಕವಾದ, ಗುರು ತನ್ನ ವಿನೋದಕ್ಕೆ ಪ್ರಸಾದವಾದ, ಗುರು ತನ್ನ ವಿನೋದಕ್ಕೆ ವಿಭೂತಿಯಾದ, ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ. ಇಂತೀ ಭೇದವನರಿಯದೆ, ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು…” ಎನ್ನುತ್ತಾರೆ ಅಕ್ಕಮಹಾದೇವಿ.
“ಗುರುವಿಂದಾದ ಬಯಲು, ಬಯಲಿಂದಾದ ಬ್ರಹ್ಮವೆ ಲಿಂಗ, ಆ ಲಿಂಗದಿಂದೊಗೆದ ಅವಯವಂಗಳೆ ಜಂಗಮ, ಆ ಜಂಗಮದ ಪರಮಾನಂದವೆ ಪಾದೋದಕ. ಆ ಪಾದೋದಕ ಪರಿಣಾಮದ ಸುಖ ಪರಮ ಪ್ರಸಾದ, ಮತ್ತಾ ಪ್ರಸಾದದ ಪ್ರಚುರವೆ ಪ್ರಣಮಾನಂದ ಪರಂಜ್ಯೋತಿ, ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ” ಎಂಬುದು ಹಡಪದ ಅಪ್ಪಣ್ಣನವರ ನಿಲುವು. ಜಕ್ಕಣಯ್ಯ ಶರಣರು ಹೇಳುತ್ತಾರೆ:
“ಈ ಲೋಕದೊಳಗೆ ಶೀಲವಂತರೆಂದು ಪಾದೋದಕ ಪ್ರಸಾದವ ಕೊಂಬರಯ್ಯ. ಬ್ರಹ್ಮನನಳಿದು ಭಕ್ತನಾಗಿ ಆಚಾರಲಿಂಗವ ನೆಲೆಯಂಗೊಂಡರೆ ಪಾದ ಪೂಜೆಯೆಂದೆಂಬೆನಯ್ಯ. ವಿಷ್ಣುವನಳಿದು ಮಹೇಶ್ವರನಾಗಿ ಗುರುಲಿಂಗವ ನೆಲೆಯಂಗೊಂಡರೆ ಪಾದೋದಕವೆಂದೆಂಬೆನಯ್ಯ. ರುದ್ರನನಳಿದು ಪ್ರಸಾದಿಯಾಗಿ ಶಿವಲಿಂಗವ ನೆಲೆಯಂಗೊಂಡರೆ ಮಹಾಪ್ರಸಾದಿಯೆಂದೆಂಬೆನಯ್ಯ. ಇಂತೀ ಪಾದೋದಕ ಪ್ರಸಾದವನರಿತು, ಆ ಪಾದೋದಕ ಪ್ರಸಾದವ ಕೊಳ್ಳ ಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.” ಬ್ರಹ್ಮನನಳಿದು ಎಂದರೆ ಸ್ಥೂಲಕಾಯದ ಲೌಕಿಕ ಅಂಗಗುಣಗಳನ್ನು ಅಳಿದು, ವಿಷ್ಣುವಳಿದು ಎಂದರೆ ಸೂಕ್ಷ್ಮ ತನುವಿನಲ್ಲಿಯ ಅಹಂಕಾರವಳಿದು, ರುದ್ರನನಳಿದು ಎಂದರೆ ಭಾವ ನಿರ್ಭಾವವಾಗಿ ಎಂದರ್ಥ.
ಇನ್ನು ಚೆನ್ನಬಸವಣ್ಣನವರು, “ಕರುಣಜಲ ವಿನಯಜಲ ಸಮತಾಜಲ: ಕರುಣಜಲವೆ ಗುರುಪಾದೋದಕ: ವಿನಯಜಲವೆ ಲಿಂಗಪಾದೋದಕ; ಸಮತಾಜಲವೆ ಜಂಗಮಪಾದೋದಕ. ಗುರುಪಾದೋದಕದಿಂದ ಸಂಚಿತಕರ್ಮನಾಸ್ತಿ. ಲಿಂಗ ಪಾದೋದಕದಿಂದ ಪ್ರಾರಬ್ಧಕರ್ಮನಾಸ್ತಿ. ಜಂಗಮಪಾದೋದಕದಿಂದ ಆಗಾಮಿಕರ್ಮನಾಸ್ತಿ. ಇಂತೀ ತ್ರಿವಿಧೋದಕದಲ್ಲಿ ತ್ರಿವಿಧ ಕರ್ಮನಾಸ್ತಿ. ಇದು ಕಾರಣ- ಕೂಡಲಚೆನ್ನಸಂಗಮದೇವಾ ತ್ರಿವಿಧೋದಕವ ನಿಮ್ಮ ಶರಣನೆ ಬಲ್ಲ.” ಎಂದು ಹೊಸ ಬಗೆಯ ವಿವರಣೆಯನ್ನೇ ನೀಡುತ್ತಾರೆ. ಕರುಣೆ, ವಿನಯ ಹಾಗೂ ಚಿತ್ತಸಮತೆಗಳೇ ಪಾದೋದಕವವೆಂದು ಹೇಳುವ ರೀತಿಯಂತೂ ಬಹಳ ಅರ್ಥಗರ್ಭಿತವಾಗಿ ತೋರುತ್ತದೆ.
ಸಾಧಕನಲ್ಲಿ ಆವಿರ್ಭವಿಸುವ ಪರಿಪೂರ್ಣತೆಯ ಅರಿವೇ ಪಾದೋದಕ ಎಂದು ಮಡಿವಾಳ ಮಾಚಿದೇವ ಶರಣರು ತಿಳಿಸಿದ್ದಾರೆ: “ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣನೆಂದೆಂಬರು. ನಾನದ ಮನದಲ್ಲಿ ಹಿಡಿದು ಮಾತಾಡುವೆನಲ್ಲದೆ ಕ್ರೀಯಿಂದ ಕಾಣೆ. ಸತ್ತೆ ಗುರು, ಚಿತ್ತೆ ಲಿಂಗ, ಆನಂದವೆ ಜಂಗಮ. ನಿತ್ಯವೆ ಪ್ರಸಾದ, ಪರಿಪೂರ್ಣವೆ ಪಾದೋದಕ ವೆಂಬುದನವಗ್ರಹಿಸಿ ನಿಂದು, ಜಂಗಮಕ್ಕೆ ಭಕ್ತನಾದೆನಯ್ಯಾ. ನಿತ್ಯನಾಗಿ ನಿಮ್ಮ ಜಂಗಮಕ್ಕೆ ವಂದಿಸುವೆ. ಆನಂದದಿಂದ ನಿಮ್ಮ ಜಂಗಮದ ಪಾದೋದಕವ ಕೊಂಬೆ. ಪರಿಪೂರ್ಣನಾಗಿ ನಿಮ್ಮನರ್ಚಿಸಿ ಪೂಜಿಸಿ ಪರವಶನಪ್ಪೆ ನಾನು. ಭಕ್ತಿಪ್ರಸಾದ ಮುಕ್ತಿಪ್ರಸಾದ ನಿತ್ಯಪ್ರಸಾದವ ನಿಮ್ಮ ಜಂಗಮದಲ್ಲಿ ವರವ ಪಡೆದು, ಕಲಿದೇವರದೇವಾ, ನಿಮ್ಮ ಶರಣ ಪ್ರಭುದೇವರ ಶ್ರೀಪಾದದಲ್ಲಿ ಮನಮಗ್ನನಾಗಿರ್ದೆನಯ್ಯ.” ಶ್ರೀಪಾದವೆಂದರೆ ಜ್ಞಾನ ಎನ್ನುವ ಅರ್ಥ ಸ್ಪಷ್ಟವಾಗಿ ತೋರುತ್ತದೆ.
ಸಿದ್ಧರಾಮೇಶ್ವರರು, “ಅಯ್ಯಾ, ನೀವೆನ್ನ ಕರಸ್ಥಲಕ್ಕೆ ಬಂದಿರಾಗಿ ಆನು ತನುಪ್ರಾಣ ಇಷ್ಟಲಿಂಗಿಯಾದೆನು. ಅಯ್ಯಾ, ನಿನ್ನ ಪ್ರಸಾದ ಪಾದೋದಕಕ್ಕೆ ಯೋಗ್ಯನಾದೆ. ಅಜಾತನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಆನು ನೀನೆಂಬ ಕನ್ನಡವಿನ್ನೇಕಯ್ಯ?” ಇಲ್ಲಿ ನಿನ್ನ ಪ್ರಸಾದ ಪಾದೋದಕಕ್ಕೆ ಎಂದು ಹೇಳುವಾಗ, ಆತ್ಮ ಪರಮಾತ್ಮರ ಮಿಲನ ಸಾಮರಸ್ಯದ ಅನುಭಾವ ಎಂದಾಗುವುದು.
ಕಾಡಸಿದ್ಧೇಶ್ವರ ಶರಣರು ಹೇಳುತ್ತಾರೆ: “ಪಾದೋದಕ ಪಾದೋದಕವೆಂದು ಕೊಂಬಿರಿ, ಎಲ್ಲರಿಗೆ ಎಲ್ಲಿಹುದೋ ಪಾದೋದಕ? ಈ ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಪಾದೋದಕವೆಂಬುದು ಪಾತಾಳಾದಿ ಪರಲೋಕಾಂತ್ಯಮಾದ ಅಖಿಳಕೋಟಿ ಬ್ರಹ್ಮಾಂಡಗಳ ಗರ್ಭೀಕರಿಸಿಕೊಂಡಿರ್ದ ಪರಿಪೂರ್ಣತ್ವವೇ ಪಾದೋದಕ. ಪಾದೋದಕವೆಂಬುದು ಶರಣನ ಥಳಥಳಿಸಿ ಹೊಳೆಯುವ ಸರ್ವಾಂಗವನೊಳಕೊಂಡ ಚಿದ್ರಸವೇ ಪಾದೋದಕ…” ಎನ್ನುವರು. ಜೀವಾತ್ಮನ ಪರಿಪೂರ್ಣತ್ವವೇ ಪಾದೋದಕವೆಂದಿದ್ದಾರೆ. ಸಾಧಕನು ಪರಿಪೂರ್ಣಾವಸ್ಥೆ ತಲುಪಿದಾಗ ಆತನ ಸರ್ವಾಂಗದಲ್ಲಿಯೂ ಸದಾಚಾರವನ್ನಳವಡಿಸಿಕೊಂಡು ಭಾವ-ನಿರ್ಭಾವವಾಗಿ ಅನುಭವಿಸುವ ಸಂತೃಪ್ತಿಯೇ ಚಿದಮೃತ/ಚಿದ್ರಸ, ಆ ಚಿದ್ರಸವೇ ಪಾದೋದಕ ಎನ್ನುತ್ತಾರೆ ಶರಣರು.
ಹೇಮಗಲ್ಲ ಹಂಪ ಶರಣರು, “ಶಿವ ಗುರುವೆಂದು ನಂಬಿಪ್ಪಾತನೆ ಶಿವಭಕ್ತ. ಶಿವ ಲಿಂಗವೆಂದು ನಂಬಿಪ್ಪಾತನೆ ಶಿವಭಕ್ತ. ಶಿವ ಜಂಗಮವೆಂದು ನಂಬಿಪ್ಪಾತನೆ ಶಿವಭಕ್ತ. ಶಿವ ಪಾದೋದಕ ಪ್ರಸಾದವೆಂದು ನಂಬಿಪ್ಪಾತನೆ ಶಿವಭಕ್ತ. ಗುರು ಲಿಂಗ ಜಂಗಮದ ಪಾದೋದಕ ಪ್ರಸಾದದ ಬಂದ ಬಟ್ಟೆಯನರಿಯದೆ ಬರಿದೆ ಭಕ್ತರೆಂದು ಅನ್ಯವನಾಶ್ರಯಿಸಿ ಅನ್ಯದೈವಕೆರಗುವ ಕುನ್ನಿಮಾನವರನೆಂತು ಭಕ್ತರೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ”
ಇಲ್ಲಿ ಶಿವನೇ (ಆತ್ಮದ ಅರಿವೇ) ಪಾದೋದಕ ಸ್ವರೂಪಿ ಎಂದು ನಿವೇದಿಸಿದ್ದಾರೆ.
ಈ ಮೇಲಿನ ಎಲ್ಲಾ ಶರಣರ ವಚನಗಳನ್ನು ಅಧ್ಯಯನ ಮಾಡಿದ ಯಾರೇ ಆಗಲೀ, ವ್ಯಕ್ತಿಪೂಜೆ, ವ್ಯಕ್ತಿಪಾದಪೂಜೆ, ಕಾಲುತೊಳೆದ ಪಾದೋದಕಗಳನ್ನು ಪವಿತ್ರವೆಂದು ಭಾವಿಸುವುದು ಮೂರ್ಖತನ ಎಂದು ಅರ್ಥವಾಗುವುದು. ಸರ್ವಜ್ಞ ಹೇಳಿರುವಂತೆ ಸತ್ಯದ ನಡೆ ತೀರ್ಥ, ಸತ್ಯದ ನುಡಿ ತೀರ್ಥ, ಹರಿವ ನೀರೆತ್ತಣ ತೀರ್ಥ ಎಂಬ ಪ್ರಶ್ನೆ ಇಂಥ ಆಚರಣೆಗಳಿಂದ ದೂರವಿರಲು, ಧಿಕ್ಕರಿಸಲು ಸೂಚಿಸುತ್ತದೆ.
ಶರಣ ತತ್ವವು ವ್ಯಕ್ತಿಪೂಜೆಯನ್ನು ಖಂಡಿಸುತ್ತದೆ ಹಾಗೂ ಆತ್ಮ ಸಾಕ್ಷಾತ್ಕಾರವನ್ನು ಬೆಂಬಲಿಸುತ್ತದೆ. ತನ್ನನ್ನು ತಾನರಿಯುವ ಮಾರ್ಗವನ್ನು ತೋರಿಸುತ್ತದೆ. ಇಲ್ಲಿ ಅವೈಜ್ಞಾನಿಕ, ಅವೈಚಾರಿಕ ಆಚರಣೆಗಳಿಗೆ ಮತ್ತು ಅನಾಚಾರಗಳಿಗೆ ಅವಕಾಶವಿಲ್ಲ. ಮಹಾಮನೆಯ ಶರಣರು ಅರಿವಿನ ಬೆಳಕನುಟ್ಟು ಜಗಕ್ಕೆಲ್ಲಾ ಬೆಳಕಾದವರು.
ಯಾವುದೇ ಧರ್ಮ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬೆಳೆಯಬೇಕಾದರೆ ಅದು ಪ್ರಗತಿಪರ ವಿಚಾರ ಮತ್ತು ಆಚಾರಗಳನ್ನು ಒಳಗೊಳ್ಳುವ ಜೊತೆಗೆ ಚಲನಶೀಲವಾಗಿರಬೇಕು. ಅಂದರೆ ಧರ್ಮವು ಜಂಗಮವಾಗಬೇಕು. ಇಲ್ಲವಾದಲ್ಲಿ ಜಡ ಸಂಪ್ರದಾಯಗಳ ಕಟ್ಟನ್ನು ಹಿಡಿದು ಅದರೊಳಗೇ ಬಂಧಿಯಾಗುವುದರಿಂದ ಅಲ್ಲಿ ವೈಚಾರಿಕತೆಗೆ ಜಾಗವಿಲ್ಲದಂತಾಗಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗುವುದು. ಆದ್ದರಿಂದ ಸದಾ ಬದಲಾವಣೆ ಬಯಸುವ, ಹೊಸತನ್ನು ಹುಡುಕುವ ಯುವಜನತೆ ಹಾಗೂ ವೈಚಾರಿಕ ಮನಸ್ಸುಗಳು ಇಂಥ ಗೊಡ್ಡು ಆಚರಣೆಗಳಿಂದ ತುಂಬಿದ ಧರ್ಮವನ್ನು ಸಂಪೂರ್ಣ ತಿರಸ್ಕರಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಚಲನಶೀಲ ವಿಚಾರಗಳಿಂದ ಕೂಡಿದ ಶರಣ ಧರ್ಮದಲ್ಲಿ ದುರುದ್ದೇಶದಿಂದ ಸೇರಿಸಲಾದ ಇಂಥ ಅನಾಚಾರಗಳನ್ನು ಎತ್ತಿ ಹೊರಹಾಕಿದಲ್ಲಿ ಶರಣರ ವೈಚಾರಿಕ ಮನಸ್ಸುಗಳಿಗೆ ನಿಜವಾದ ಗೌರವ ಸಲ್ಲಿಸಿದಂತೆ. ಅಲ್ಲದೆ ಮುಂದಿನ ತಲೆಮಾರುಗಳಿಗೆ ವಚನ ಧರ್ಮವನ್ನು ಯಶಸ್ವಿಯಾಗಿ ದಾಟಿಸಬಹುದು.