ಧರ್ಮೋ ರಕ್ಷತಿ ರಕ್ಷಿತಃ
ಆಗ ತಾನೇ ಹುಟ್ಟಿದ ಮಗು ಸ್ವತಃ ದೈವೀ ಸ್ವರೂಪವೇ ತಾನಾಗಿರುವುದು. ಕಾರಣ, ಅದಕ್ಕೆ ಈ ಇಹಲೋಕದ ಯಾವ ಗುಣ ನಡತೆಗಳ ಕಲೆಯೂ ಅಂಟಿರುವುದಿಲ್ಲ. ಪರಮಾತ್ಮನ ಕಳೆಯೇ ಚಿತ್ಕಳೆಯಾಗಿ ಈ ಇಳೆಗೆ ಅವತರಣವಾಗಿರುತ್ತದೆ. ಅದಕ್ಕೆ ಗೊತ್ತಿರುವುದು ಹಸಿವಾದಾಗ ಅಳುವುದು ಮತ್ತು ಹೊಟ್ಟೆ ತುಂಬಿದಾಗ ನಗುವುದು ಇವೆರಡೇ! ಜಗದಗಲ ಮುಗಿಲಗಲದ ಭಾಷೆ ಎಂದರೆ ನಗು ಮತ್ತು ಅಳು ಎರಡೇ! ಉಳಿದೆಲ್ಲಾ ಭಾಷೆಗಳು ಸೀಮಿತ ವ್ಯಾಪ್ತಿ ಮಾತ್ರ. ಧರ್ಮವೂ ಹಾಗೆಯೇ! ಮಗು ಬೆಳೆಯುತ್ತಾ ಹೋದಂತೆ ಸುತ್ತಲಿನ ಪರಿಸರದ ಗುಣಲಕ್ಷಣಗಳು ಅದಕ್ಕೆ ಅಂಟಿಕೊಳ್ಳಲಾರಂಭಿಸುತ್ತವೆ. ಇಂಥಾ ಗುಣಲಕ್ಷಣಗಳು ಕೆಲವೊಮ್ಮೆ ಸಾಧಕವಾಗಿಯೂ ಕೆಲವೊಮ್ಮೆ ಬಾಧಕವಾಗಿಯೂ ಇರುತ್ತವೆ. ಒಬ್ಬ ವ್ಯಕ್ತಿ ಹುಟ್ಟಿನಿಂದ ಸಾಯುವವರೆಗೆ ಸದಾ ಸತ್ಪಥವಿಡಿದು ಜೀವನದ ವಿವಿಧ ಮಜಲುಗಳನ್ನು ಪೂರೈಸಿ ಸಾರ್ಥಕ ಜೀವನ ನಡೆಸಿ ತಾನು ಯಾರಿಗೂ ಹೊರೆಯಾಗದೇ, ಮತ್ತೊಬ್ಬರಿಗೆ ನೆರವಾಗಿ, ಆಸರೆಯಾಗಿ, ಇತರರ ಬಾಳಿಗೆ ಬೆಳಕಾಗಿ, ಸಮಾಜದ ಕಣ್ಮಣಿಯಾಗಿ ಬದುಕಿ, ತನಗಾಗಿ ಮತ್ತೊಂದು ಲೋಕವುಂಟು (ಸ್ವರ್ಗ/ನರಕ), ಮತ್ತೊಂದು ಜನ್ಮವುಂಟು ಎಂಬ ಭ್ರಾಂತಿ ಭ್ರಮೆಗಳಿಗೆ ಒಳಗಾಗದೆ, ಈ ಇಳೆಯಲ್ಲೇ ಪರಲೋಕವೂ ಉಂಟೆಂಬುದನ್ನು ಅರಿತು ಬಾಳಬೇಕು.
ಜಗತ್ತಿನಲ್ಲಿ ಹಲವಾರು ಸಾಂಸ್ಥಿಕ ಧರ್ಮಗಳಿವೆ. ಹಿಂದೂ, ಪಾರ್ಸಿ, ಸಿಖ್, ಜೈನ, ಲಿಂಗಾಯತ, ಬೌದ್ಧ, ಇಸ್ಲಾಂ, ಕ್ರೈಸ್ತ, ಕನ್ಫ಼್ಯೂಷಿಯನ್ ಧರ್ಮಗಳು ಪ್ರಮುಖವಾದವುಗಳು. ಇವುಗಳಲ್ಲಿ ಹಿಂದೂ ಧರ್ಮವು ಮಾತ್ರ ಭೌಗೋಳಿಗ ವ್ಯಾಪ್ತಿಯ ಹಿನ್ನೆಲೆಯಿಂದ ಹುಟ್ಟಿದುದಾಗಿದೆ. ಇದು ಸಿಂಧೂನಾಗರೀಕತೆಯನ್ನು ಅವಲಂಬಿಸಿ ಬೆಳೆದ ಧರ್ಮ. ಇದರಲ್ಲಿ ಏಕರೂಪ ಆಚರಣೆಗಳಾಗಲೀ, ಏಕರೂಪ ನಂಬಿಕೆಗಳಾಗಲೀ ಇಲ್ಲ, ಹಾಗೆಯೇ ಇದು ಏಕ ವ್ಯಕ್ತಿಯಿಂದ ರೂಪಿತವಾದುದೂ ಅಲ್ಲ. ಅಗಣಿತ ಬಗೆಯ ಆಚರಣೆಗಳು, ದೈವೀ ಆರಾಧನೆಗಳು ಮತ್ತು ನಂಬಿಕೆಗಳು ನೈಸರ್ಗಿಕವಾಗಿ ಬೆಳೆದುಬಂದ ಆಚರಣೆಗಳೆಲ್ಲವೂ ಇಲ್ಲಿವೆ. ಹಾಗಾಗಿಯೇ ಇಲ್ಲಿ ಪ್ರಕೃತಿ ಪ್ರಾಣಿ ಪಕ್ಷಿ ನದಿ ಸರೋವರ ಪಂಚಭೂತಗಳು ಎಲ್ಲವನ್ನೂ ದೇವರೆಂದು ಆರಾಧಿಸುವ ಪ್ರವೃತ್ತಿ ಇದೆ. ಈ ಧರ್ಮ ಮಾನವನ ಇತಿಹಾಸದಷ್ಟೇ ಸನಾತನ.
ಹಿಂದೂ ಧರ್ಮವೊಂದನ್ನು ಹೊರತುಪಡಿಸಿ ಜಗತ್ತಿನ ಇತರೆ ಎಲ್ಲಾ ಧರ್ಮಗಳೂ ಆಯಾ ಪ್ರಾಂತ್ಯ ಮತ್ತು ಸಮಾಜದಲ್ಲಿ ರೂಢಿಗತವಾಗಿದ್ದ ಅನಿಷ್ಟ ಆಚರಣೆಗಳನ್ನು, ಪದ್ಧತಿಗಳನ್ನು, ಮೂಢನಂಬಿಕೆಗಳನ್ನು ಕಿತ್ತೆಸೆದು ಸತ್ಯ ಸದಾಚಾರದ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ಜನರ ಜೀವನ ರೂಪುಗೊಳಿಸಿ ಬದುಕನ್ನು ಸರಳೀಕರಿಸಲು ಆಯಾ ಕಾಲಘಟ್ಟದಲ್ಲಿ ಅವತರಿಸಿದ ಮಹಾಪುರುಷರಿಂದ ರೂಪಿಸಲ್ಪಟ್ಟುವಾಗಿವೆ. ಈ ಧರ್ಮಗಳಲ್ಲಿ ಒಬ್ಬ ಧರ್ಮ ಕರ್ತ, ಒಂದೇ ದೇವರೆಂಬ ನಂಬಿಕೆ, ಒಂದೇ ತೆರನಾದ ಆಚಾರ ವಿಚಾರಗಳು ಚಾಲ್ತಿಯಲ್ಲಿರುವುದನ್ನು ನಾವು ಕಾಣುತ್ತೇವೆ.
ಆದರೆ ಧರ್ಮವೆಂದರೇನು? ಧರ್ಮ ಯಾತಕ್ಕಾಗಿ ಬೇಕು?
ಯಾವ ಆಚಾರ ಮತ್ತು ವಿಚಾರಗಳು ಮಾನವನನ್ನು ದುರಾಚಾರದಿಂದ – ಸದಾಚಾರದೆಡೆಗೆ, ಮೌಢ್ಯದಿಂದ – ವೈಚಾರಿಕತೆಯೆಡೆಗೆ, ಅಜ್ಞಾನದಿಂದ – ಸುಜ್ಞಾನದೆಡೆಗೆ, ಅಪಕ್ವತೆಯಿಂದ – ಪಕ್ವತೆಯೆಡೆಗೆ, ಅಪರಿಪೂರ್ಣತೆಯಿಂದ – ಪರಿಪೂರ್ಣತೆಯೆಡೆಗೆ, ಅಬದ್ಧತೆಯಿಂದ – ಬದ್ಧತೆಯೆಡೆಗೆ ಪರಿವರ್ತಿಸಿ ಆತನ ವ್ಯಕ್ತಿತ್ವವನ್ನು ಔನ್ನತ್ಯಕ್ಕೇರಿಸುವ ಮೂಲಕ ಆತನು ಸಮಾಜಕ್ಕೆ ಆಭರಣದ ರೀತಿ ಶೋಭಿಸುವಂತೆ ಮಾಡಬಲ್ಲವೋ ಅಂಥಾ ಆಚಾರ ಮತ್ತು ವಿಚಾರಗಳ ಸಮನ್ವಯತೆಗಳ ಸಮುಚ್ಛಯವೇ ಧರ್ಮ. ಧರ್ಮವು ಮಾನವನ ಏಳ್ಗೆಗಾಗಿರಬೇಕೇ ಹೊರತು ಧರ್ಮಕ್ಕಾಗಿ ಮಾನವನ ಜೀವನವಲ್ಲ. ಒಂದು ವೇಳೆ ಯಾವುದಾದರೂ ಒಂದು ಧರ್ಮ ಅದರ ಉಳಿವಿಗಾಗಿಯಾಗಲೀ, ಅಸ್ತಿತ್ವಕ್ಕಾಗಿಯಾಗಲೀ ಅಥವಾ ವಿಸ್ತರಣೆಗಾಗಿಯಾಗಲೀ ಮಾನವನ ಬಲಿದಾನವನ್ನು ಬೇಡುವುದಾದರೆ ಅದು ಧರ್ಮವೇ ಅಲ್ಲ. ಏಕೆಂದರೆ ಅದು ಮಾನವನ ಬದುಕನ್ನು ಕಸಿದುಕೊಂಡಿರುತ್ತದೆ. ಬದುಕನ್ನು ಕಟ್ಟಿ ಕೊಡಬೇಕಾದ ಧರ್ಮ ಬದುಕನ್ನು ಕಸಿಯುವುದಾದರೆ ಅದು ಧರ್ಮ ಹೇಗಾದೀತು ಅಲ್ಲವೇ!?
ಯಾವುದೇ ಒಂದು ಧರ್ಮ ಅದರ ಮೂಲ ಸ್ಥಾಪಕರಿಂದ ಅಂಕುರಿಸಲ್ಪಟ್ಟಾಗ ಅದು ಶುದ್ಧರೂಪದಲ್ಲಿರುತ್ತದೆ. ಅದರ ಉದ್ದೇಶ
- ಸಮಾಜದ ಜನರ ಜೀವನವನ್ನು ಉನ್ನತ ಮಟ್ಟಕ್ಕೆ ಏರಿಸುವುದು,
- ಅವರಲ್ಲಿ ಮಾನಸಿಕ ಸದೃಢತೆ, ಆತ್ಮವಿಶ್ವಾಸ ತುಂಬುವುದು,
- ಅವರ ಜೀವನದಲ್ಲಿ ಸತ್ಚಿಂತನೆ ಸದಾಚಾರಗಳನ್ನು ಬಿತ್ತಿ ಬೆಳೆಯುವುದು,
- ದೇವರು-ಧರ್ಮ ಕುರಿತು ಅಂಧಶ್ರದ್ಧೆ ಕಳೆದು ವೈಜ್ಞಾನಿಕ ಮತ್ತು ಸಾತ್ವಿಕ ಮನೋಭಾವ ಬೆಳೆಸುವುದು,
- ಸಮಾಜದಲ್ಲಿ ಪರಸ್ಪರ ನಂಬಿಕೆ ಸಹಬಾಳ್ವೆ ಸಹಜೀವನ ಭ್ರಾತೃತ್ವ ಮುಂತಾದ ಸದ್ಗುಣಗಳನ್ನು ಬಿತ್ತಿ ಬೆಳೆಯುವುದು.
ಎಲ್ಲಾ ಧರ್ಮಗಳೂ ಶಾಂತಿ ಸಮನ್ವಯ ಮತ್ತು ಸಂಯಮವನ್ನೇ ಬೋಧಿಸಿವೆ. ಯಾವುದೇ ಧರ್ಮದ ಕತೃವೂ ತನ್ನ ಧರ್ಮವು ಜಗತ್ತಿನ ತುಂಬಾ ವ್ಯಾಪಿಸಬೇಕು ಇತರ ಧರ್ಮಗಳ ಮೇಲೆ ಸವಾರಿ ಮಾಡಬೇಕು ಅವುಗಳನ್ನು ನಾಮಾವಶೇಷ ಮಾಡಬೇಕು ಎಂಬ ಯಾವ ದುರ್ಗುಣಗಳೂ ಅಲ್ಲಿರುವುದಿಲ್ಲ. ಕಾಲ ಗತಿಸಿದಂತೆ ಮುಂದೆ ಬರುವ ಆಯಾ ಧರ್ಮದ ಅನುಯಾಯಿಗಳು ಇಂಥಾ ಅವಗುಣಗಳನ್ನು ಧರ್ಮದ ಪಠ್ಯದೊಳಗೆ ತೂರಿಸಿ ಮುಗ್ಧ ಜನರನ್ನು ಹುರಿದುಂಬಿಸಿ ಅವರನ್ನು ಧಾರ್ಮಿಕ ಕುರುಡರನ್ನಾಗಿಸಿ ಸಮಾಜ ಬಾಹಿರರನ್ನಾಗಿ ಮಾಡಿ ಅವರಿಂದ ಅನಾಹುತಗಳನ್ನು ಮಾಡಿಸುವುದನ್ನು ನಾವು ದಿನನಿತ್ಯ ಕಾಣುತ್ತೇವೆ. ಯಾವುದೇ ಧರ್ಮ ಮೂಲದಲ್ಲಿ ರಕ್ತ ಪಿಪಾಸುವಲ್ಲ ಎಂಬುದನ್ನು ನಾವು ಮನಗಾಣಬೇಕು.
ಧರ್ಮೋ ರಕ್ಷತಿ ರಕ್ಷಿತಃ : (ಧರ್ಮವನ್ನು ನೀನು ರಕ್ಷಿಸಿದೆಯಾದರೆ ಧರ್ಮವು ನಿನ್ನನ್ನು ರಕ್ಷಿಸುತ್ತದೆ)
ಧರ್ಮ ಎಂಬ ಪದದ ಅರ್ಥವನ್ನೇ ನಾವು ಸರಿಯಾಗಿ ಅರಿತಿಲ್ಲ. ನಮ್ಮ ಅರಿವಿನ ಮಿತಿಯಲ್ಲಿ ಧರ್ಮವೆಂದರೆ ಹಿಂದೂ, ಪಾರ್ಸಿ, ಸಿಖ್, ಜೈನ, ಲಿಂಗಾಯತ, ಬೌದ್ಧ, ಇಸ್ಲಾಂ, ಕ್ರೈಸ್ತ, ಕನ್ಫ಼್ಯೂಷಿಯನ್ ಇತ್ಯಾದಿ. ಇವೆಲ್ಲಾ ಸಾಂಸ್ಥಿಕ ಧರ್ಮಗಳು. ಇವೆಲ್ಲಾ ಧರ್ಮಗಳ ಮೂಲ ಆಶಯ ಮಾನವಧರ್ಮ ಪರಿಪಾಲನೆ, ಅಂದರೆ ಮನುಷ್ಯತ್ವವನ್ನು ಅರಿತು ಅದರಂತೆ ಬಾಳುವುದು. ಆದರೆ ಇಂದಿನ ಜನಾಂಗ ಮನುಷ್ಯತ್ವವನ್ನು ಮರೆತು ತಾನು ನಂಬಿದ ಧರ್ಮದ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನೂ ಕೊಡಲು ತಯಾರಾಗಿ ಅನ್ಯರ ಪ್ರಾಣ ಹರಣವನ್ನೂ ಮಾಡಿ ರಕ್ತಪಿಪಾಸುಗಳಂತೆ ವರ್ತಿಸುತ್ತಿದೆ. ಆಯಾ ಧರ್ಮಗಳ ಪೂಜಾರಿಗಳು ಧರ್ಮದ ನಶೆಯನ್ನು ಜನಮಾನಸದಲ್ಲಿ ತುಂಬಿ ಜನರನ್ನು ಧರ್ಮಗುರುಡು ಮಾಡುತ್ತಿದ್ದಾರೆ. ನೀನು ಧರ್ಮವನ್ನು ಉಳಿಸಲು / ಬೆಳೆಸಲು ನಿನ್ನ ಜೀವನವನ್ನು ಮುಡಿಪಾಗಿಟ್ಟರೆ ನಿನಗೆ ಮುಂದೆ ಸ್ವರ್ಗ ಪ್ರಾಪ್ತಿಯುಂಟಾಗುವುದು ಎಂದು ನಂಬಿಸಿ ಮುಗ್ಧ ಭಕ್ತರನ್ನು ಹಾದಿ ತಪ್ಪಿಸುತ್ತಿದ್ದಾರೆ. ಇರುವುದೊಂದೇ ಜನ್ಮ, ಸ್ವರ್ಗ ನರಕಗಳು ಏನಿದ್ದರೂ ಈ ಭೂಮಿಯಲ್ಲೇ ಈ ಜನ್ಮದಲ್ಲೇ ಅನುಭವಿಸಬೇಕು. ಮತ್ತೊಂದು ಜನ್ಮವೆಂಬುದಿಲ್ಲ. ಆದರೆ ಇಂದಿನ ಧರ್ಮ ಪ್ರಚಾರಕರೆನಿಸಿಕೊಂಡವರು ಬರೀ ಭ್ರಮೆಯ ಸುತ್ತ ಸುತ್ತಿ ಇಹದ ಬಾಳನ್ನು ತಮ್ಮಷ್ಟಕ್ಕೆ ತಾವೇ ನರಕ ಮಾಡಿಕೊಳ್ಳುತ್ತಾ ಇತರರ ಬಾಳನ್ನೂ ನರಕ ಸದೃಶ ಮಾಡುವರು.
ಧರ್ಮವೆಂಬುದು ಮನುಷ್ಯರಿಂದ ರಕ್ಷಿಸಿಕೊಳ್ಳುವುದಲ್ಲ ಬದಲಿಗೆ ಮನುಷ್ಯರನ್ನು ರಕ್ಷಿಸಬೇಕು. ಶರಣರು ಧರ್ಮವೆಂದರೇನೆಂದು ನಮಗೆ ಸರಿಯಾಗಿ ಅರುಹುತ್ತಾರೆ. ದಯೆ ಅನುಕಂಪ ಸಹಿಷ್ಣುತೆಗಳು ಧರ್ಮದ ಜೀವಾಳವೆನ್ನುವರು ಪ್ರವಾದಿ ಬಸವೇಶ್ವರರು. “ದಯವಿಲ್ಲದ ಧರ್ಮವದೇವುದಯ್ಯಾ ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ. ದಯವೇ ಧರ್ಮದ ಮೂಲವಯ್ಯಾ, ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.” ದಯೆಯಿಲ್ಲದ ಧರ್ಮವುಂಟೇ? ದಯೆಯಿಲ್ಲದವನನ್ನು ದೇವರು ಹೇಗೆ ಸ್ವೀಕರಿಸಿಯಾನು?
ಧರ್ಮೋ ರಕ್ಷತಿ ರಕ್ಷಿತಃ ಎಂದರೇನು?
ಸೃಷ್ಟಿಯಲ್ಲಿ ಸೂರ್ಯ ಚಂದ್ರ ನಕ್ಷತ್ರಾದಿಗಳು ನಿತ್ಯ ತಮ್ಮ ಕಾರ್ಯ ಮಾಡುತ್ತವೆ. ಭೂಮಿ ನಮ್ಮನ್ನು ಸಲಹುತ್ತದೆ, ತಂದೆ ತಾಯಿ ತಮ್ಮ ಮಕ್ಕಳನ್ನು ಸಲಹುತ್ತಾರೆ, ನದಿ ಹರಿಯುತ್ತದೆ, ಹೀಗೆ ಅನೇಕ ಪ್ರಕೃತಿದತ್ತ ಕ್ರಿಯೆಗಳು ಸಹಜವಾಗಿ ನಮಗರಿವಿಲ್ಲದಂತೆ ನಿತ್ಯ ನಡೆದೇ ಇರುತ್ತವೆ. ಇದು ಪ್ರಕೃತಿ ಸಹಜಧರ್ಮ. ಹಾಗೆಯೇ ಮಾನವ ಸಹಜಧರ್ಮವೆಂದರೆ, ಪರೋಪಕಾರ, ಸುಳ್ಳನ್ನಾಡದಿರುವುದು, ದ್ರೋಹ ಬಗೆಯದಿರುವುದು, ಕಳ್ಳತನ ಮಾಡದಿರುವುದು, ಕಪಟತನ ಇಲ್ಲದಿರುವುದು, ಅನ್ಯರ ಅಪಹಾಸ್ಯ ಹಿಂಸೆ ಮಾಡದಿರುವುದು, ಇತ್ಯಾದಿ ಸದ್ಗುಣಗಳೇ ಮಾನವ ಸಹಜ ಧರ್ಮ. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.” ಎಷ್ಟು ಸರಳವಾಗಿ ದೇವರನ್ನು ಒಲಿಸುವ ಪರಿಯನ್ನು ಬಸವಣ್ಣನವರು ತೋರಿಸಿಕೊಟ್ಟಿದ್ದಾರೆ!! ಇಂಥಾ ಅತ್ಯಂತ ಸರಳ ಆಚಾರ ವಿಚಾರಗಳನ್ನು ಬಿಟ್ಟು ಏನೂ ಅರ್ಥವಾಗದ ಹುಸಿ ತತ್ವಗಳ ಹಿಂದೆ ಹಾಯ್ದು ನಮಗಿರುವ ಒಂದೇ ಒಂದು ಜೀವನವನ್ನು/ ಜನ್ಮವನ್ನು ನರಕ ಮಾಡಿಕೊಳ್ಳುತ್ತಿದ್ದೇವಲ್ಲಾ! ಈ ಜನ್ಮ ಕಳೆದ ಬಳಿಕ ಮತ್ತೆ ಜನ್ಮವನ್ನು ಹಸನು ಮಾಡಿಕೊಳ್ಳಲು ಸಿಗುತ್ತದೇನು? ಇಲ್ಲ. ಎಲ್ಲವೂ ಇಲ್ಲಿಯೇ ಕೊನೆ. ಇಲ್ಲಿ ಸರಿಯಾಗಿ ಬದುಕಿದರೆ ದೇವನ ಪಾದಕ್ಕೆ ಸಂದಂತೆ, ಇಲ್ಲಿ ಸಲ್ಲದವನು ಎಲ್ಲಿಯೂ ಸಲ್ಲಲು ಸಾಧ್ಯವಿಲ್ಲ ಎಂದು ಬಸವಣ್ಣನವರು ಹೇಳುತ್ತಾರೆ “ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ, ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ. ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು ಕೂಡಲಸಂಗಮದೇವಾ.”
ನಾವು ಬದುಕುತ್ತಿರುವ ಈ ಇಳೆಯೇ ಮತ್ರ್ಯಲೋಕ ಇಲ್ಲಿ ಸಮಾಜಕ್ಕೆ ಹೊರೆಯಾಗದೇ ನೆರಳಾಗಿ ಬದುಕಿದರೆ ಆತನ ಜೀವನ ಸಾರ್ಥಕವೆನಿಸುವುದು, ಹಾಗಲ್ಲದೇ ಇಲ್ಲಿ ಸಮಾಜಕ್ಕೆ ಹೊರೆಯಾಗಿ, ಕಂಟಕಪ್ರಾಯನಾಗಿ ಬದುಕಿದರೆ ಅವನ ಜೀವನ ನಿಷ್ಪ್ರಯೋಜಕವಾಗಿ ಅವನು ಎಲ್ಲಿಯೂ ಸಲ್ಲುವುದಿಲ್ಲ. ಕಡೆಗೆ ಯಾವ ದೇವರ ಒಲುಮೆಗೋಸ್ಕರ ತನ್ನ ಬಾಳನ್ನು ಹಾಳು ಮಾಡಿಕೊಂಡನೋ ಆ ದೇವರಿಗೂ ಅಂಥಾ ವ್ಯಕ್ತಿ ಬೇಡವಾಗುತ್ತಾನೆ. ಪ್ರತಿಯೊಬ್ಬ ಜೀವಿಯಲ್ಲಿಯೂ ದೇವನಿದ್ದಾನೆ, ಆ ಜೀವಿಯ ಹತ್ಯೆ ದೇವನಿಗೆ ಪ್ರಿಯವೇ? ಖಂಡಿತಾ ಇಲ್ಲ!
ಮಾನವನು ಧರ್ಮ ವಿಚಾರದಲ್ಲಿ ಪ್ರಾಣಿ ಪಕ್ಷಿ ನಿಸರ್ಗಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಕೆಲವರು ಹೇಳುತ್ತಾರೆ ಅವನು ಕಾಡುಮನುಷ್ಯನ ಹಾಗೆ, ಪ್ರಾಣಿಯ ತರ ಬದುಕುತ್ತಾನೆ, ಸಂಸ್ಕಾರವಿಲ್ಲ ಇತ್ಯಾದಿಯಾಗಿ ಹಳಿಯುವುದನ್ನು ಕಾಣುತ್ತೇವೆ. ವಾಸ್ತವವಾಗಿ ನಾವು ಪ್ರಾಣಿಗಳಿಂದ ಬಹಳಷ್ಟು ಕಲಿಯಬೇಕು. ಪ್ರಾಣಿಗಳು ಯಾವುದೋ ಧರ್ಮಪಾಲನೆಗಾಗಿ ಇತರ ಸ್ವಜಾತೀಯ ಪ್ರಾಣಿಗಳನ್ನು ಕೊಲ್ಲುವುದಿಲ್ಲ, ಹೊಟ್ಟೆ ತುಂಬುವಷ್ಟು ತಿನ್ನುತ್ತವೆ, ಮನುಷ್ಯನಂತೆ ನಾಳೆಗಾಗಿ ಸಂಗ್ರಹಿಸುವುದಿಲ್ಲ. ಮೋಸ ಕುಟಿಲ ವಂಚನೆ ಸುಳ್ಳು ತಟವಟ ಇತ್ಯಾದಿ ನಕಾರಾತ್ಮಕ ಗುಣಗಳು ಅವುಗಳಲ್ಲಿಲ್ಲ. ಸಹಬಾಳ್ವೆಯಂಥಾ ಸದ್ಗುಣಗಳು ಅವುಗಳಲ್ಲಿ ಮೇಳೈಸಿವೆ. ಈ ಸದ್ಗುಣಗಳನ್ನು ಮಾನವನು ಅಳವಡಿಸಿಕೊಳ್ಳುವುದೇ ನಿಜವಾದ ಧರ್ಮದ ಅಳವಡಿಕೆ. ಈ ಗುಣಗಳಿಲ್ಲದೆ ಕೇವಲ ದೇವರು ಧರ್ಮವೆಂದು ಬಾಳುವ ಜೀವನವದು ವ್ಯರ್ಥ.
ಸದ್ಗುಣಗಳನ್ನು ಪಾಲಿಸುವಾತನಿಗೆ ಸಹಜವಾಗಿ ಆ ಸದ್ಗುಣಗಳೇ ರಕ್ಷಣೆ ನೀಡುವವು. ಇದನ್ನೇ ‘ಧರ್ಮೋ ರಕ್ಷತಿ ರಕ್ಷಿತಃ’ ಎಂದಿರುವರು ಹಿರಿಯರು. ಪ್ರಕೃತಿ ಸಹಜ ಧರ್ಮವೇ ಎಲ್ಲ ಮಾನವರ ಸಹಜ ಧರ್ಮವಾಗಬೇಕು. ಇದನ್ನೇ ಕುವೆಂಪುರವರು- “ಎಲ್ಲ ಮತ, ಧರ್ಮಗಳ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರು ಓ ನನ್ನ ಚೇತನ” ಎಂದಿರುವರು. ಅದನ್ನು ಪಾಲಿಸಿದರೆ ಭೂಮಿಯಿದು ಕಲ್ಪನೆಯ ಸ್ವರ್ಗವನ್ನು ಮೀರಿಸೀತು, ಅಲ್ಲವೇ?
Comments 10
Shivaraj Shivalli
Jan 9, 2019ಪ್ರಸ್ತುತ ಸಮಾಜ ಓದಲೇ ಬೇಕಾದ ಲೇಖನ. ಧರ್ಮದ ಬಗ್ಗೆ ಏನೂ ತಿಳಿಯದೇ ಕೇವಲ ಒಣ ಪ್ರತಿಷ್ಟೆಗಾಗಿ ಧರ್ಮವನ್ನು ದುರುಪಯೋಗ ಮಾಡಿಕೊಳ್ಳುವ ಜನರಿಗೆ ತಿಳಿಸಿಹೇಳಲು ಸೂಕ್ತ ಮಾಹಿತಿ ನೀಡುತ್ತದೆ. ಪಂಚಾಕ್ಷರಿಯವರಿಗೆ ಧನ್ಯವಾದಗಳು.
-ಶಿವರಾಜು ಶಿವಳ್ಳಿ
ವೀರಣ್ಣ ನಾಯಕ್, ಚಿಕ್ಕಮಗಳೂರು
Jan 9, 2019ಎಲ್ಲರೊಂದಿಗೆ ಹೊಂದಿಕೊಂಡು ನಿಸರ್ಗವನ್ನು ರಕ್ಷಿಸಿ ಬದುಕುವುದನ್ನು ಬಿಟ್ಟು, ದೇವರನ್ನೇ ಧರ್ಮವೆಂದು ತಿಳಿದಿರುವ ಮೂಢರಿಗೆ ಧರ್ಮ ಗೊತ್ತಾಗುವುದಿಲ್ಲ, ಬಿಡಿ. ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ.
ಶಿವಬಸಪ್ಪ ಕಟಗೇರಿ
Jan 9, 2019ಎಂಥ ಆನಂದ ಆಗತೈತಿ, ಇಂಥ ಬರಹಗಳನ್ನ ನೋಡ್ತಾ ಇದ್ರ, ಭಾಳ ಛಲೋ ಅದಾವು ಎಲ್ಲಾ ವಿಚಾರಗಳು, ಛಲೋ ವಿಚಾರ ಮಾಡಾಕ, ಛಲೋ ಬದಕಾಕ ಬಯಲು ಬೇಕು. ನನಗಂತೂ ಭಾಳ ಆನಂದ ಆತು. ಹಿಂಗ ಬರೀರಿ, ಹಿಂಗ ವಿಚಾರ ಮಾಡ್ರಿ, ಜನ ಬಯಲ ಹುಡಕೊಂಡು ಬರ್ತಾರ, ಖರೇನ.
ಶಿವಬಸಪ್ಪ
ಕಟಗೇರಿ
ನರೇಂದ್ರ ನಾಯಕ್
Jan 10, 2019ಸಮಾಜಕ್ಕೆ ಹೊರೆಯಾಗಿ ಬಾಳದೇ ನೆರಳಾಗಿ ಬಾಳುವುದೇ ಸಾರ್ಥಕ ಜೀವನ, ಅದೇ ಧರ್ಮ ಎಂಬ ನಿಮ್ಮ ವಿಚಾರವನ್ನು ಇವತ್ತಿನ ಆಸ್ತಿಕರು ಒಪ್ಪುವುದು ಕಷ್ಟ. ದೇವಸ್ಥಾನಗಳ ಸುತ್ತ ನಮ್ಮ ಧರ್ಮದ ನಂಬಿಕೆ ಸುತ್ತುತ್ತಿರುವಾಗ ಇದೆಲ್ಲ ಹೇಗೆ ಅರ್ಥವಾಗುತ್ತದೆ? ಕಷ್ಟ, ಕಷ್ಟ, ಬಲು ಕಷ್ಟ ಸ್ವಾಮಿ.
pro shivaranjini
Jan 12, 2019ಧರ್ಮದ ಉದ್ದೇಶಗಳನ್ನು ಹೊಸ ರೀತಿಯಲ್ಲಿ ತೋರಿಸುವ ಲೇಖನ ವಿಚಾರಯೋಗ್ಯ.
Ganga Hiramath
Jan 13, 2019ಇವತ್ತು ಬಯಲು ಬ್ಲಾಗಿನ ಈ ತಿಂಗಳ ಎಲ್ಲಾ ಬರಹಗಳನ್ನು ಓದಿದೆ, ಮನಸ್ಸು ತೃಪ್ತಿಯಾಗುವಷ್ಟು ಹೊಸ ವಿಚಾರಗಳು ನನ್ನ ಮನಸ್ಸನ್ನು ತುಂಬಿದವು. ಸಮಾಧಾನ, ಸಂತೋಷ ನೀಡುವ ಲೇಖಕರಿಗೆಲ್ಲ ನನ್ನ ವಂದನೆಗಳು.
Giridhar Tonde
Jan 16, 2019ಮನುಷ್ಯರಿಂದ ರಕ್ಷಿಸಿಕೊಳ್ಳುವ ಧರ್ಮವೂ ಒಂದು ಧರ್ಮವೇ? ಇಷ್ಟಾದರೂ ಜ್ಞಾನ ಈ ಜನಕ್ಕಿಲ್ಲವಲ್ಲ, ಧರ್ಮದ ಹೆಸರಲ್ಲಿ ನಾಯಿ ನರಿಗಳಂತೆ ಕಚ್ಚಾಡಿ ಸಾಯುತ್ತಾರೆ. ಲೇಖನ ಪ್ರಸ್ತುತವಾಗಿದೆ.
ರಾಜಶೇಖರ ಪಾಟೀಲ್, ಗುಲ್ಬರ್ಗಾ
Jan 16, 2019ಬಹುಶಃ ಶರಣರಷ್ಟು ಸರಳವಾಗಿ ಧರ್ಮವನ್ನು ವ್ಯಾಖ್ಯಾನಿಸಿದವರು ಯಾರೂ ಇರಲಿಕ್ಕಿಲ್ಲ. ಆದರೆ ಅವರ ಧರ್ಮವೇ ಇಂದು ಅಪಾಯದಲ್ಲಿರುವುದಕ್ಕೆ ಯಾರು ಹೊಣೆ? ಭಕ್ತರೋ, ಸ್ವಾಮಿಗಳೋ, ಮಠಗಳೋ, ಆಶ್ರಮಗಳೋ?
Shivasagar Rate
Jan 25, 2019ಶಿವಶಂಕರ ರಾಠೆ
ಧರ್ಮ ನಿಜಕ್ಕೂ ಮನುಷ್ಯನಿಗೆ ಬೇಕೆ? ನಾವೇಕೆ ಅದನ್ನು ಕಾಪಾಡಬೇಕು ಎಂಬ ಮೂಲ ಪ್ರಶ್ನೆಗಳಿಗೆ ನಿಮ್ಮ ಲೇಖನ ಸರಿಯಾದ ಉತ್ತರ ಕೊಡುತ್ತದೆ. ನನಗೆ ಅನಿಸುತ್ತದೆ ಲಿಂಗಾಯತ ಮಾಮೂಲಿ ಚೌಕಟ್ಟಲ್ಲಿ ಸಿಕ್ಕಿಕೊಳ್ಳುವ ಧರ್ಮವಲ್ಲ. ಅದು ಮಹಾಸಾಗರ.
Prasanna R.M
Jan 25, 2019ಮನುಷ್ಯನನ್ನು ಪೋಷಿಸುವಂಥವು ಅವನಲ್ಲಿರುವ ಸದ್ಗುಣಗಳು. ಆ ಸದ್ಗುಣಗಳ ಮೊತ್ತವೇ ಧರ್ಮ ಎನ್ನುವ ವಿಚಾರ ಬಹಳ ಹಿಡಿಸಿತು. ಲೇಖನ ಚೆನ್ನಾಗಿದೆ.