ತತ್ವಪದಗಳ ಗಾಯನ ಪರಂಪರೆ
ಅರವತ್ತೆಂಟು ಸಾವಿರ ವಚನಗಳ
ಹಾಡಿ ಹಾಡಿ ಸೋತಿತೆನ್ನ ಮನ
ನೋಡಯ್ಯ ಹಾಡುವುದೊಂದೇ ವಚನ
ನೋಡುವುದೊಂದೇ ವಚನ
ವಿಷಯ ಬಿಟ್ಟು ನಿರ್ವಿಷಯನಾಗುವುದೊಂದೇ ವಚನ
ಕಪಿಲಸಿದ್ಧ ಮಲ್ಲಿಕಾರ್ಜುನ.
– ಸಿದ್ಧರಾಮ
ಎನ್ನ ಕಾಯವ ದಂಡಿಗೆಯ ಮಾಡಯ್ಯ
ಎನ್ನ ಶಿರವ ಸೋರೆಯ ಮಾಡಯ್ಯ
ಎನ್ನ ನರವ ತಂತಿಯ ಮಾಡಯ್ಯ
ಎನ್ನ ಬೆರಳ ಕಡ್ಡಿಯ ಮಾಡಯ್ಯ
ಬತ್ತೀಸ ರಾಗವ ಹಾಡಯ್ಯ
ಉರದಲೊತ್ತಿ ಬಾರಿಸು, ಕೂಡಲ ಸಂಗಯ್ಯ.
– ಬಸವಣ್ಣ
ವಚನ ಚಳವಳಿಯ ಕಾಲದಲ್ಲೇ ಬಸವಣ್ಣ, ಸಿದ್ಧರಾಮ ಇಂತಹ ವಚನಗಳನ್ನು ಹಾಡುವ ಮೂಲಕ ಗಾಯನ ಪರಂಪರೆಗೆ ನಾಂದಿ ಹಾಡಿದ್ದಾರೆ. ಆಗ ಬಳಕೆಯಲ್ಲಿದ್ದ ಬತ್ತೀಸ (ಮೂವತ್ತೆರಡು) ರಾಗಗಳನ್ನು ಹಾಡಯ್ಯ ಎಂದಿರುವ ಅದೇ ನಮ್ಮ ಬಸವಣ್ಣ ಮತ್ತೊಂದು ವಚನದಲ್ಲಿ “ನಾದಪ್ರಿಯನು ಅಲ್ಲ, ವೇದಪ್ರಿಯನು ಅಲ್ಲ ಭಕ್ತಿಪ್ರಿಯ ನಮ್ಮ ಕೂಡಲ ಸಂಗಮದೇವ” ಎಂತಲೂ ಗಾಯನ ಪರಂಪರೆಯೊಂದಿಗೆ ಭಕ್ತಿಪ್ರೀತಿ ಪರಂಪರೆ ಕುರಿತು ಹಾಡಿದ್ದಾರೆ.
ಹೌದು, ಈಗಿನದು ಕೂಡಾ ಒಂದು ಬಗೆಯ ಭಕ್ತಿ ಪರಂಪರೆಯ ಯುಗ. ತರಹೇವಾರಿ ಭಕ್ತರ ಸುನಾಮಿ ಕಾಲವಿದು. ದೇಶದ ತುಂಬೆಲ್ಲ ದೇಶಭಕ್ತಿಯ ಮೇಲೋಗರದ ಭಯಂಕರ ಭಕ್ತರ ಮಹಾ ಪ್ರವಾಹ. ಅದು ಮೋದಿ ಭಕ್ತರು, ಸಿದ್ರಾಮಯ್ಯ ಭಕ್ತರು, ಅಲ್ಲಲ್ಲಿ ಕುಮಾರಸ್ವಾಮಿ ಭಕ್ತರು ಹೀಗೆ ರಾಜಕಾರಣದ ಹೆಸರಲ್ಲಿ ಭಕ್ತರು ತುಂಬಿಕೊಂಡಿದ್ದರೆ, ಮತ್ತೊಂದೆಡೆ ಎಡ ಮತ್ತು ಬಲ ಭಕ್ತಿಪಂಥದ ಆಧುನಿಕತೆಯ ಮಹಾಪೂರದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಇಂತಹ ಪ್ರಚಂಡ ಭಕ್ತಿಯ ಚಂಡಮಾರುತಗಳ ನಡುವೆ ಆತ್ಮ ನಿರೀಕ್ಷಣೆ, ಸ್ವವಿಮರ್ಶೆ ಮಾಡಿಕೊಳ್ಳಬೇಕಾದ ವರ್ತಮಾನದ ಸವಾಲುಗಳು ನಮ್ಮ ಮುಂದಿವೆ. ಶತಮಾನಗಳ ಹಿಂದೆಯೇ ಇಂತಹ ಸವಾಲುಗಳನ್ನು ಎದುರಿಸುವ ಕೆಲಸವನ್ನು ತತ್ವಪದಕಾರರು ಮಾಡಿದ್ದಾರೆ. ಆ ಮೂಲಕ ಸಾಂಸ್ಕೃತಿಕ ಪ್ರಜಾಪ್ರಭುತ್ವ ಸ್ಥಾಪಿಸಿದವರು ನಮ್ಮ ತತ್ವಪದಕಾರರು. ಅಂದಿನ ಪ್ರಭುತ್ವ ಎಸಗುವ ಅನಾಚಾರ, ಅತ್ಯಾಚಾರ, ದುರಹಂಕಾರಗಳಿಗೆ ತಕ್ಷಣವೇ ಪದಕಟ್ಟಿ ಹಾಡಿ ಪ್ರತಿಭಟನೆ ತೋರಿದವರು.
ಯಾವುದೇ ಶಾಸ್ತ್ರೀಯ ಚೌಕಟ್ಟು, ಸುಸಂಸ್ಕೃತವೆಂದು ಕರೆಯಬಹುದಾದ ನೆಲೆಗಳಿಲ್ಲದೇ ಜನಪದರ ಸಿರಿಕಂಠಗಳ ಮಟ್ಟುಗಳಲ್ಲಿ ತತ್ವಪದಗಳು ನೆಲದ ಪರಿಮಳ ಬದುಕಿದವು. ತನ್ಮೂಲಕ ಅವು ಜನಪದೀಕರಣಗೊಂಡಿವೆ. ಶಿಷ್ಟದ ಮೂಲಸ್ವರೂಪ ಗುರುತಿಸುವುದೇ ರಾಗವೆಂದು ಕರೆದರೆ ನಮ್ಮ ಜನಪದರು ಅವಕ್ಕೆ ಮಟ್ಟುಗಳೆಂದು ಕರೆದರು. ಹಾಗೆ ನೋಡಿದರೆ ಮಟ್ಟು ಎಂದರೆ ರಾಗದ ತಾಯಿ. ಈಗಲೂ ನಮ್ಮ ಜನಪದರು ರಾಗಕ್ಕೆ ಮಟ್ಟುಗಳೆಂದೇ ಕರೀತಾರೆ. ತತ್ವಪದಗಳು ತಾಯಿಬೇರು ಸ್ವರೂಪದ ಮಟ್ಟುಗಳಲ್ಲೇ ಹೆಚ್ಚು ಹೆಚ್ಚು ಗಟ್ಟಿಗೊಂಡಿವೆ. ಅವು ಪಂಡಿತೋತ್ತಮರ ಶಾಸ್ತ್ರೀಯ ರಾಗಗಳಲ್ಲಿ ಅಲ್ಲವೇ ಅಲ್ಲ. ಪ್ರಾಯಶಃ ಈ ಕಾರಣಕ್ಕಾಗಿಯೇ ಇದ್ದಿರಬಹುದು- ಸುಶಿಕ್ಷಿತರ ವೀಣೆಗಳು ನಮ್ಮ ಕರಿ ಕುಂಬಳಕಾಯಿಯ ಏಕತಾರಿಗಳನ್ನು ಮುಟ್ಟಿಸಿಕೊಳ್ಳದೇ ದೂರ ಇಟ್ಟವು.
ಹೀಗಾಗಿ ತತ್ವಪದ ಗಾಯನವನ್ನು ಜಾನಪದ ಗಾಯನದೊಂದಿಗೆ ಬೆಸೆದು ನೋಡುವ, ಮೂಲ ತತ್ವಪದ ಗಾಯಕರನ್ನು ಜನಪದ ಗಾಯಕರೆಂದೇ ಅಂದಿನ ಕಾಲದ ಕಾವ್ಯಮೀಮಾಂಸಕರು ಕರೆದುಕೊಂಡದ್ದು. ಆಕಾಶವಾಣಿ, ದೂರದರ್ಶನಗಳಲ್ಲಿ ಇವತ್ತಿಗೂ ಜಾನಪದ ಸಂಗೀತದ ಹೆಸರಲ್ಲಿ ತತ್ವಪದಗಳ ಪ್ರಸಾರ ಆಗುವುದನ್ನು ಗಮನಿಸಬಹುದು. ಆದರೆ ಪಂಡಿತರ ಕಾವ್ಯಮೀಮಾಂಸೆಗಿಂತ ಲೋಕಮೀಮಾಂಸೆ ಬಹಳೇ ದೊಡ್ಡದೆಂಬುದು ಇತ್ತೀಚಿನ ತತ್ವಪದ ಮೀಮಾಂಸಕರಿಗೆ ಪಕ್ಕಾ ಅರ್ಥವಾಗಿದೆ.
ಇವತ್ತಿನ ಕಾಲದ ಒಂದು ಅತ್ಯಪರೂಪದ ಸಂಗತಿಯೊಂದನ್ನು ನಾನಿಲ್ಲಿ ಉಲ್ಲೇಖಿಸಲೇಬೇಕಿದೆ. ಏಕತಾರಿಗಳ ಏಕನಾದದ ಕಾಲವೇ ಕಣ್ಮರೆಯಾಯ್ತು, ಅದೊಂದು ಮುಗಿದ ಯುಗ, ಅವು ನೋಡಲು ಕೂಡಾ ಸಿಗುವುದೇ ಇಲ್ಲ, ಎಂಬುದನ್ನು ಸವಾಲಾಗಿ ಸ್ವೀಕರಿಸಿದ ಬೆಂಗಳೂರು ನಗರ ಜಿಲ್ಲೆ ಕುಂಬಳಗೋಡು ಹೋಬಳಿ ಕೆಂಚನಪಾಳ್ಯದ ಹೆಸರಾಂತ ಹಿರಿಯ ತತ್ವಪದಗಾಯಕ, ದಲಿತ ಸಮುದಾಯದ ರಾಮಣ್ಣ ಏನಿಲ್ಲವೆಂದರೂ ವರ್ಷಕ್ಕೆ ಇನ್ನೂರೈವತ್ತಕ್ಕೂ ಹೆಚ್ಚು ‘ಒರಿಜಿನಲ್ ಏಕತಾರಿ’ಗಳನ್ನು ತಯಾರಿಸುತ್ತಾರೆ. ತಯಾರಿಸುವುದಷ್ಟೇ ಅಲ್ಲ, ರಾಮಣ್ಣ ಏಕತಾರಿ ಕುರಿತಾಗಿ ಅನನ್ಯವಾದ ಜ್ಞಾನ ಗಳಿಸಿದ್ದಾರೆ.
ಅನೇಕಮಂದಿ ತತ್ವಪದ ತಜ್ಞರು ರಾಮಣ್ಣನ ಭೆಟ್ಟಿ ಮಾಡಿ ಹತ್ತಾರು ಬಗೆಯ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುತ್ತಾರೆ. ಬೆಂಗಳೂರಲ್ಲಿ ಜರುಗುವ ಏಕತಾರಿ ಜಾತ್ರೆಯಲ್ಲಿ ಅವರ ಏಕತಾರಿಗಳಿಗೆ ಅಪಾರ ಬೇಡಿಕೆ. ಅಂತೆಯೇ ಅವರನ್ನು ಜನರು ‘ಏಕತಾರಿ ರಾಮಣ್ಣ’ನೆಂದೇ ಕರೆಯುತ್ತಾರೆ.
ವಚನ ಚಳವಳಿ ಮತ್ತು ಹರಿದಾಸ ಚಳವಳಿಯ ತರುವಾಯ ಬಹುದೊಡ್ಡ ಮಟ್ಟದ ಜನ ಚಳವಳಿಯಾಗಿ ಹಾಡು ಭಜನೆಗಳ ಮೂಲಕ ಬಹುತ್ವದ ಮಹಾಬಯಲು ರೂಪಿಸಿದ್ದು ತತ್ವಪದ ಚಳವಳಿ. ತತ್ವಪದಕಾರರು ನಮ್ಮ ಬದುಕಿನ ಪ್ರತಿನಿಧಿಗಳು. ನಮ್ಮ ಸಂಸ್ಕೃತಿಯ ಜನನಾಯಕರು. ಅಂತಹ ಸಾಂಸ್ಕೃತಿಕ ನಾಯಕರ ತತ್ವಪದಗಳನ್ನು ಅವರ ಆಶಯಗಳಿಗನುಗುಣವಾಗಿ, ಜೀವಸಂವೇದನೆಯ ಬದುಕಾಗಿಸಿಕೊಂಡು ಹಾಡುವ ಹಾಡುಗಾರರನ್ನು ನಾನು ‘ಸಾಂಸ್ಕೃತಿಕ ಐಕಾನ್’ ಗಳೆಂದು ಕರೆಯಲು ಹೆಮ್ಮೆ ಪಡುತ್ತೇನೆ.
ತತ್ವಪದಕಾರರು ಬದುಕಿದ್ದು ಸಂತಸ – ಸಂಕಟಗಳನ್ನು ಮೀರಿದ ಜಡರಹಿತ ಸರಳ ಅಧ್ಯಾತ್ಮ. ಅಹಮಿಕೆಯನ್ನಳಿದು ಅಂತರಂಗದ ತುಂಬೆಲ್ಲ ಶೂನ್ಯತನವನ್ನೇ ತುಂಬಿ ತುಳುಕಿಸಿಕೊಂಡ ತಾತ್ವಿಕತೆ ಅದು. ಹಾಗೆ ನೋಡಿದರೆ ವರ್ತಮಾನದ ಹಲವು ತಲ್ಲಣಗಳಿಗೆ, ಹತ್ತಾರು ಬಿಕ್ಕಟ್ಟುಗಳಿಗೆ ಉತ್ತರಗಳನ್ನು, ಪರಿಹಾರಗಳನ್ನು ದೊರಕಿಸಿಕೊಡುವ ನಿರ್ಗುಣ ನಿಕ್ಷೇಪವದು. ಅಂತಹ ನಿಕ್ಷೇಪದ ಹುಡುಕಾಟವೇ ತತ್ವಪದಗಳ ಗಾಯನ. ಅದು ಅಂತರಂಗ ಶುದ್ದಿಯ ಅನುಸಂಧಾನ, ಸಾಕ್ಷಾತ್ ಸದ್ಗುರುವಿನ ಗುರುತು ಖೂನ, ಇನ್ನೂ ಮುಂತಾಗಿ ಬಣ್ಣಿಸಬಹುದು.
ನಾನು ಕಂಡುಕೊಂಡಂತೆ ತತ್ವಪದಗಳ ಗಾಯನದಲ್ಲಿ ಶೃತಿ ತಂತಿಗಳದ್ದು ದಿವಿನಾದ ಪಾತ್ರ. ಏಕತಾರಿಯ ನಾದತಂತಿಗಳು ಗುರುಭಕ್ತಿಪಥದ ಒಳನಾಡಿ ಮಿಡಿತದಂತೆ ಮನುಷ್ಯ ಲೋಕದ ಜೀವಸಂವೇದನೆಗಳನ್ನು ಮೀಟುವ ಕಳ್ಳುಬಳ್ಳಿಯ ಜೀವಧ್ವನಿಗಳು. ಅವು ವೀಣೆ, ತಂಬೂರಿ, ಏಕತಾರಿಯ ತಂತಿಗಳಾಗಿರಬಹುದು. ಅವು ಬರೀ ತಂತಿಗಳು ಮಾತ್ರವಲ್ಲ, ನಾದಬಯಲಿನ ಜೀವತಂತುಗಳು. ಸುಮ್ಮನೆ ಹಾಡುಗಾರಿಕೆಗೆ ಮೊದಲು, ಕರಿ ಕುಂಬಳಕಾಯಿಯ ಚೆಂದದ ಏಕತಾರಿಯನ್ನು ಶೃತಿಗೊಳಿಸಿ ಮೀಟುತ್ತಿದ್ದರೆ ಸಾಕು, ಹಾಡುವವರು ಮಾತ್ರವಲ್ಲ ಕೇಳುಗರ ಮುಖ ಮನದ ತುಂಬೆಲ್ಲ ಶಾಂತಚಿತ್ತದ ಕಣ್ತಪನೆಯ ತದೇಕ ಧ್ಯಾನ. ಆರೂಢ, ಅವಧೂತ, ಅಚಲ ಲೋಕದ ದಿವ್ಯದರ್ಶನ.
ಮತ್ತೊಂದು ಮಗ್ಗುಲಲ್ಲಿ ಧೇನಿಸಿದರೆ ಚಿತ್ತ ತಣಿಸುವ ತಾಳ, ಚಿನ್ನಿ, ದಮಡಿಗಳದೇ ಚಿದ್ವಿಲಾಸದ ನಾದೋನ್ಮಾದ. ಹೀಗೆ ತಂತಿ, ಲೋಹ, ಚರ್ಮ, ಗಾಳಿ ವಾದ್ಯಗಳು ತತ್ವ ಪದಗಳ ಗಾಯನ ಸಾಂಗತ್ಯಕ್ಕೆ ತಕ್ಕ ಹಾಗೂ ಪಕ್ಕವಾದ್ಯಗಳಾಗಿ ಇನ್ನೂ ಕೆಲವು ಪ್ರಾಕಾರಗಳು ಸಾಥ್ ನೀಡುವುದು, ತೀರಾ ಇತ್ತೀಚಿನ ದಿನಗಳಲ್ಲಿ ಅನೇಕ ಹೊಸತುಗಳೊಂದಿಗೆ ಕಾಣಬಹುದಾಗಿದೆ. ಆದರೆ ಈಗ್ಗೆ ಅರ್ಧ ಶತಮಾನದಷ್ಟು ಹಿಂದಕ್ಕೆ ಹೋಗಿ ನೋಡಿದರೆ ತತ್ವಪದಗಳ ಗಾಯನ ಪರಂಪರೆಯ ಒರಿಜಿನಾಲಿಟಿಯ ಪರಿಚಯವಾಗುತ್ತದೆ. ಪ್ರಾಯಶಃ ಒಂದೆರಡು ನೂರು ವರ್ಷಗಳಷ್ಟು ಹಿಂದಿನ ತತ್ವಪದಕಾರರು ಹುಟ್ಟು ಹಾಕಿದ ತತ್ವಪದಗಳ ಹುಟ್ಟಿನ ಸಮಯದ ಸ್ವಸ್ವರೂಪ, ಮತ್ತದರ ತದ್ರೂಪು ಇದೇ ಇದ್ದಿರಬಹುದೆಂಬ ತೀರ್ಮಾನವನ್ನು ನಾವು ಅಲ್ಲಗಳೆಯಲಾರೆವು.
ಅದೇನೆಂದರೆ: ನಿಗಿ ನಿಗಿ ಕೆಂಡದ ಧುನಿಯ ಸುತ್ತಲೂ ಏಕತಾರಿ, ತಾಳ, ದಮಡಿಗಳ ಸುಮಧುರ ನಾದ ಸನ್ನಿಧಾನದಲ್ಲಿ ಕುಂತು, ಸಾಧುಗಳು ಹಾಡುವ ತತ್ವಪದಗಳ ಸಾಮೂಹಿಕ ಹಾಡುಗಾರಿಕೆ ಅದಾಗಿತ್ತು. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಜರುಗುವ ಜಾತ್ರೆ, ಪುಣ್ಯತಿಥಿಯ ಪತ್ರಿ, ಕಾಂಡ, ಹೆಣದ ಸನ್ನಿಧಾನ, ಆರಾಧನೆ, ಭಜನೆ ಸಪ್ತಾಹಗಳಲ್ಲಿ ತತ್ವಪದ ಹಾಡು ಪರಂಪರೆಯನ್ನು ಗುರುತಿಸಬಹುದು. ಈ ಸಂದರ್ಭಗಳು ಸೇರಿದಂತೆ ಕೆಲವರು ಅಪರೂಪಕ್ಕೆ ಏಕಾಂತದಲ್ಲೂ ಏಕನಾದದ ಹಾಡುಗಾರಿಕೆ ರೂಢಿಸಿಕೊಂಡಿರುತ್ತಾರೆ.
ನನ್ನ ಹುಟ್ಟೂರಿನ ಗವಿ ಭೀಮಾಶಂಕರ ಪರಂಪರೆಗೆ ಸೇರಿದ ಮಹಾಂತಪ್ಪ ಸಾಧುಗಳು ಮತ್ತು ಇನ್ನೂ ಕೆಲವರು ಏಕಾಂಗಿಯಾಗಿ ಏಕತಾರಿ ನುಡಿಸುತ್ತಾ ಏಕನಾದದಲ್ಲಿ ತನ್ಮಯರಾಗುತ್ತಿದ್ದುದನ್ನು ಕಂಡುಂಡಿದ್ದೇನೆ. ಆದರೆ ಭಜನೆಗಳಲ್ಲಿ ಇಬ್ಬರಿಗಿಂತ ಹೆಚ್ಚುಮಂದಿಯ ಪಾಲ್ಗೊಳ್ಳುವಿಕೆಯೇ ಅತ್ಯಧಿಕ. ತತ್ವ ಭಜನೆಯ ಹಾಡುವ ಕ್ರಿಯೆ ಮುಗಿದ ಬೆನ್ನಲ್ಲೇ ಟೀಕುಗಳ ಸಡಗರ. ಅಂದರೆ ಅವರೇ ಹಾಡಿದ ಹಾಡಿನ ಕುರಿತಾದ ವಾದ ಸಂವಾದ. ಇವು ತಾರ್ಕಿಕ ಅಂತ್ಯಕಾಣದ ಬಹು ಗಂಭೀರ ಸ್ವರೂಪದ, ಗಹನತೆಯ ಚರ್ಚೆಗಳಾಗಿರುತ್ತವೆ.
ನಾ ಹೋದ ಮ್ಯಾಲ ನೀ ಹ್ಯಾಂಗ ಇರತಿ/
ನಾ ನಿನ್ನ ಹ್ಯಾಂಗ ಮರೆಯಲಿ ಗುಣವಂತಿ//
ಮೇಲು ನೋಟದಲ್ಲಿ ಇದೊಂದು ಸಖೀಗೀತದ ಪ್ರೇಮಕವಿತೆಯಂತೆ ಗೋಚರಿಸುವ ಈ ಪದದ ಟೀಕು, ಚರ್ಚೆಗಳು ನಾನು ಸಣ್ಣವನಿದ್ದಾಗ ನಮ್ಮ ಮನೆಯ ಭಜನೆಯ ಮ್ಯಾಳದಲ್ಲಿ ಜರುಗುವ ಗಂಭೀರ ಚರ್ಚೆಗಳು. ಅವು ವಸ್ತು ವೈವಿಧ್ಯತೆಯಿಂದ ಕೂಡಿರುತ್ತಿದ್ದವು. ನಮ್ಮನೆಯ ಭಜನೆಯ ರಾತ್ರಿಮ್ಯಾಳದಲ್ಲಿ ‘ಧುನಿ’ ಇರ್ತಿರಲಿಲ್ಲ, ಅದಕ್ಕೆ ಬದಲು ಹಚ್ಚಿಟ್ಟ ಔಡಲೆಣ್ಣೆಯ ತಣ್ಣಗಿನ ಬೆಳಕು ಬೀರುವ ಪಣತೆಯ ದೀಪವಿರುತ್ತಿತ್ತು. ಅದರ ಸುತ್ತಲೂ ಕುಂತು ಭಜನೆಯ ಪದಗಳನ್ನು ಹಾಡುತ್ತಿದ್ದರು. ಅಂತಹ ಮ್ಯಾಳದಲ್ಲಿ ಈ ಚರ್ಚೆ ಜರುಗುತ್ತಿತ್ತು. ಸಹಜವಾಗಿ ನಾ ಹೋದ ಮೇಲೆ ಅಂದರೆ ನಾನು ಎನ್ನುವ ‘ಅಹಂಕಾರ’ ಅಳಿದ ಮೇಲೆ ಎಂಬ ಧ್ವನಿ ಪ್ರಸ್ತಾನದೊಂದಿಗೆ ಯತ್ನಾಳದ ಹರಿಜನರ ಭೀಮಣ್ಣ ಪ್ರಸ್ತಾಪಿಸಿದರೆ, ಕರೀಮಸಾಹೇಬ, ಮಳ್ಳಿ ಗುರವ್ವ, ನಿಂಗಪ್ಪ ಪೂಜೇರಿಯ ತರ್ಕವೇ ಬೇರೆ ಆಗಿರ್ತಿತ್ತು. ತುಸು ಹಿರೀಕನಾದ ನನ್ನಪ್ಪ ಹೇಳುತ್ತಿದ್ದುದೇ ಸಣ್ಣವನಾದ ನನ್ನ ಪಾಲಿಗೆ ವಿಚಿತ್ರವಾಗಿರ್ತಿತ್ತು. ಅಪ್ಪ ಹೇಳುತ್ತಿದ್ದುದು, “ನೀವಿನ್ನೂ ಸುಟ್ಟಿಲ್ಲ. ಸರಿಯಾಗಿ ಸುಡಬೇಕು. ಸುಟ್ಟಾಗಲೇ ತತ್ವ ತಿಳಿಯೋದು. ಮಡಿವಾಳಪ್ಪ ಅರ್ಥ ಆಗೋದು” ಆದರೆ ನನಗೋ! ಗಾಬರಿ!! ಸುಟ್ಟರೆ ಸತ್ತು ಹೋಗ್ತಿವೆಂಬ ಭಯದ ತಿಳಿವಳಿಕೆ. ಹೀಗೆ ಈ ಚರ್ಚೆ ಹಾಡಿನ ಧಾಟಿಯಲ್ಲೇ ಸ್ವರ ಸ್ವಾರಸ್ಯದೊಂದಿಗೆ ಸಾಗುತ್ತಿತ್ತು.
ನಾನು ಎಂಬುದು ಈ ಶರೀರದೊಳಗಿನ ಪ್ರಾಣಪಕ್ಷಿ, ತಾನಿರುವ ಶರೀರಕ್ಕೆ ಹೇಳುವ ವಿವೇಕ ಜ್ಞಾನ ಸತ್ಯವದು. ನಾನು ನಿನ್ನೊಳಗಿನ ಜೀವ ಉಸಿರೆಂಬ ಪ್ರಾಣಪಕ್ಷಿ, ನಾನೇ ಹಾರಿಹೋದ ಮೇಲೆ ಎಲೇ ಶರೀರವೇ ನೀನು ಹೇಗಿರ್ತೀಯಾ ಎಂಬ ತರ್ಕ ಅದಾಗಿರ್ತಿತ್ತು. ಹೀಗೆ ತತ್ವಪದಗಳ ಜಿಜ್ಞಾಸೆಗಳು ಅತ್ಯಂತ ಆಂತಿಕವಾದ ಜೀವ ಸಂವಾದಗಳಾಗಿ, ಗಾಯನಗಳ ಉಪಾಖ್ಯಾನಗಳಾಗಿ ತತ್ವಪದಗಳ ಪರಂಪರೆಯ ಹೆಗ್ಗಳಿಕೆಯನ್ನು ಹೆಚ್ಚಿಸಿವೆ.
ಮತ್ತೆ ಮತ್ತೆ ಪದಕೊಂದು ಪದ. ಒಂದೇ ರಾಗದಲ್ಲಿ ಸಾಲು ಸಾಲಾಗಿ ತೇಲಿ ಬರುವ ಹತ್ತಾರು ಪದಗಳು. ಒಮ್ಮೊಮ್ಮೆ ಶೃತಿ ಬದಲಿಸಿ ಹಾಡುವ ಚಾಕಚಕ್ಯತೆ. ಕೊನೆಗೆ ಪದಗಳ ಮುಕ್ತಾಯಕ್ಕೆ ಕರ್ಪೂರದಾರತಿ ಪದಗಳೊಂದಿಗೆ ಜೈಕಾರಗಳ ಝೇಂಕಾರ. ಕಡೆಯಲ್ಲಿ ಮಂಗಳಾರತಿಯೊಂದಿಗೆ ಮುಗಿಯಿತೆಂದುಕೊಂಡರೆ ಮತ್ತೆ ಸ್ತುತಿಯೊಂದಿಗೆ ಆರಂಭವೇ ಆಗಿರುತ್ತದೆ. ಹೀಗೆ ಈ ತತ್ವಪದಗಳದ್ದು ಆದಿ ಅಂತ್ಯವಿಲ್ಲದ ದಾರಿ, ಹೆದ್ದಾರಿ, ಮಹಾಮಾರ್ಗ. ಒಂದುಬಗೆಯ ಮಹಾಯಾನ.
ತತ್ವಪದಕಾರರು ತಮ್ಮ ಪದಗಳನ್ನು ಕಾಗದದ ಮೇಲೆ ಟಾಕು, ಲೆಕ್ಕಣಿಕೆ ಹಿಡಿದು ಬರೆದವರಲ್ಲ. ಹಾಡುವ ಮೂಲಕ ಪದಗಳನ್ನು ಕಂಠಸ್ಥಗೊಳಿಸಿದರು. ಹಾಡುಗಳನ್ನು ಕಟ್ಟಿದರು. ಕಟ್ಟಿ ಹಾಡಿದರು. ಹಾಡುತ್ತಲೇ ಮುಖಾಮುಖಿಗೊಂಡರು. ಅವೀಗ ಗ್ರಂಥಸ್ಥಗೊಂಡಿವೆ. ಪದಕಟ್ಟಿ ವಿವಿಧ ಮಟ್ಟುಗಳಲ್ಲಿ ಹಾಡುತ್ತಿದ್ದರೆ ಅವರ ಶಿಷ್ಯರಾದವರು ಹಿಮ್ಮೇಳದಲ್ಲಿ ಅನುಕರಿಸಿ ಹಾಡುವ ಮೂಲಕ ಅವು ಜನಸಮುದಾಯದ ಆಸ್ತಿಯಾಗಿ ಜನರ ನಾಲಗೆಯಿಂದ ನಾಲಗೆಗೆ ಸಿರಿಕಂಠದ ಸ್ವರಾಸ್ಥಿಗಳಾಗಿ ಬೆಳೆದು ಬಂದವು. ಅಂತೆಯೇ ಅವು ಲೋಕಸ್ಥ ಸಂಪತ್ತು. ಆಕಡೆ ದೂರದ ನವಲಗುಂದದ ಕಡೆ ಹೊಟ್ಟೆ ತಿಪ್ಪಲಿಗಾಗಿ ಗುಳೆ ಹೋದಾಗ ನನ್ನಪ್ಪ ಸಾಧು ಶಿವಣ್ಣ ತಾನು ಕಲಿತು ಬಂದ ಶಿಶುನಾಳ ಶರೀಫರ, ನಾಗಲಿಂಗ ಯತಿಗಳ ಪದಗಳ ಆ ಕಡೆಯ ಮಟ್ಟುಗಳನ್ನು ಈ ಕಡೆ ತನ್ನೂರಿನ ಕಡಕೋಳದ ಒಡನಾಡಿಗಳಿಗೆ ಮುಮ್ಮೇಳದಲ್ಲಿ ಹಾಡಿ ಕಲಿಸುತ್ತಿದ್ದ.
ಹೀಗೆ ಹೊಸ ಪದಗಳನ್ನು ಹಾಡುತ್ತಲೇ ಕಲಿಸುವ ಮತ್ತು ಕಲಿಯುವ ಬೃಹತ್ ಹಾಡು ಪರಂಪರೆ ಅದಾಗಿತ್ತು. ಈಗಿನಂತೆ ಮೊಬೈಲಿನಲ್ಲಿ ತುಂಬಿಕೊಂಡು ಬಂದು ಕಲಿಯುವ ಯಾವ ಅನುಕೂಲಗಳು ಆಗ ಇರಲಿಲ್ಲ. ಹಲವು ವರ್ಷಗಳ ಹಿಂದೆ ಟೇಪ್ ರೆಕಾರ್ಡರ್ ಗಳ ಕೆಸೆಟ್ ಗಳಲ್ಲಿ ಧ್ವನಿಮುದ್ರಿಸಿಕೊಂಡು ಕೇಳಿ, ಕೇಳಿ ಕಲಿಯುವ ಪದ್ಧತಿಯು ರೂಢಿಯಲ್ಲಿತ್ತು. ಆದರೆ ನೀವೇನೇ ಹೇಳಿ ಗುರುವಿನ ಗರಡಿಯಲ್ಲಿ ಮುಖಾಮುಖಿಯಾಗಿ, ಮುಖಾಬಿಲೆಯಾಗಿ ಕಲಿಯುವ ಹಾಡುಗಾರಿಕೆಯ ಸೊಗಸಿಗಿರುವ ಪ್ರೀತಿ ಸಂಭ್ರಮ ಹಿಂದಿನ ಟೇಪ್ ರೆಕಾರ್ಡರ್ ಗಾಗಲಿ, ಇಂದಿನ ಕೈ ಮುಷ್ಟಿಯಲ್ಲಿರುವ ಮೊಬೈಲ್ ಗಳಿಗೆ ಖಂಡಿತವಾಗಿಯೂ ಇಲ್ಲವೇ ಇಲ್ಲ.
ಹಾಡುಗಬ್ಬಗಳು
ತತ್ವಪದಗಳ ಹೆಸರಲ್ಲೇ ‘ಪದ’ ಇದೆ. ಪದ ಎನ್ನುವ ಪದವೇ ಹಾಡುಗಾರಿಕೆ, ಗಾಯನಕ್ಕೆ ಸಂವಾದಿಯಾಗಿದೆ. ತತ್ವಪದಗಳು ಓದಲು, ಹೇಳಲು, ಮಾತಾಡಲು ಹುಟ್ಟಿಕೊಂಡ ನುಡಿಮಾತುಗಳಲ್ಲ. ಅವೇನಿದ್ದರೂ ಧ್ವನಿ, ರಾಗ, ತಾಳ, ಶೃತಿ, ಲಯಬದ್ದವಾಗಿ ಹಾಡಲು ಹುಟ್ಟಿಕೊಂಡ ತತ್ವಪದ ಗಾಯನ ಪರಂಪರೆಯ ಅನನ್ಯತೆಗಳು. ಆದರೆ ನಮ್ಮ ನಡುವೆ ಹಾಡುವ ಅನೇಕ ತತ್ವಪದಗಾಯಕರಿಗೆ ಇದು ಯಾವ ರಾಗ ಎಂದು ಕೇಳಿ ನೋಡಿ.. ಗೊತ್ತಿಲ್ಲ.. ನಮ್ಮ ಗುರುಗಳು ಹೀಗೇ ಹಾಡ್ತಿದ್ರು ನಾನೂ ಹಾಗೇ ಹಾಡೋದು., ಎಂಬ ಉತ್ತರ ಸಿದ್ದವಾಗಿರ್ತದೆ. ಅಷ್ಟೇ ಯಾಕೆ ಸವಾಲ್ ಜವಾಬ್ ಮಾದರಿಯ ಸಂವಾದಗಳು ಕೂಡಾ ಹಾಡುಗಾರಿಕೆಯಲ್ಲಿ ಜರುಗುವುದನ್ನು ಗುರುತಿಸಬಹುದಾಗಿದೆ.
ಉತ್ತರ ಕರ್ನಾಟಕದ ಕೆಲವು ಪ್ರಾಂತ್ಯಗಳಲ್ಲಿ ಹರದೇಶಿ ನಾಗೇಶಿ ಶೈಲಿಯಲ್ಲಿ ಅಪರೂಪಕ್ಕೆ ಇವುಗಳನ್ನು ಹಾಡುತ್ತಿದ್ದರೆಂಬುದನ್ನು ಗಮನಿಸಬಹುದು. ಕೆಲವು ಕಡೆ ಪಾರಿಜಾತದ ಶೈಲಿಯ ಭಜನೆಗಳು ಪ್ರಸಿದ್ದ. ಆಲಾಪನೆಗಳಿಗೆ ಸಣ್ಣಾಟದ ಹಾಡುಗಾರಿಕೆ. ಮುಮ್ಮೇಳದಲ್ಲಿ ಹಾಡುವ ಮುಖ್ಯ ಗಾಯಕ ನಿಂತು ಚಳ್ಳಮ ನುಡಿಸುತ್ತಾ ಹಾಡುತ್ತಿದ್ದರೆ ಪೇಟಿ, ತಬಲ, ದಮಡಿ, ತಾಳಗಳನ್ನು ಹಿನ್ನೆಲೆಯಾಗಿ ನುಡಿಸುತ್ತಾ ಹಿಮ್ಮೇಳದಲ್ಲಿ ನಾಲ್ಕಾರು ಮಂದಿ ಕುಂತು ಹಾಡುತ್ತಾರೆ. ತಳಸಮುದಾಯದ ಮಹಿಳೆಯರು ಕೂಡಾ ಇಂತಹ ಗಾಯನದಲ್ಲಿ ನಿಪುಣರು. ನಮ್ಮೂರು ಪಕ್ಕದ ತೆಲಗಬಾಳದ ದಲಿತ ಮಹಿಳೆ ಮಾದಿಗರ ನಿಜಗವ್ವ ಪಾರಿಜಾತ ಶೈಲಿಯ ತತ್ವಪದಗಳ ಗಾಯನದಲ್ಲಿ ಎತ್ತಿದ ಕೈ. ನಮ್ಕಡೆ ಅಲಾಯಿ, ಸುಗ್ಗಿ, ಸೋಬಾನೆ, ಹಂತಿ, ಬೀಸುವಕಲ್ಲು, ಗೀಗೀಪದ, ಅಲ್ಲದೆ ಮದುವೆಗಳಲ್ಲಿ ಜರುಗುವ ಚ್ಯಾಜದ… ಹೀಗೆ ಇನ್ನೂ ಅನೇಕ ಜನಪದರ ಸಂಪ್ರದಾಯ, ಆಚರಣೆಗಳ ಸಂದರ್ಭಗಳಲ್ಲಿ ತತ್ವಪದಗಳನ್ನು ಸಂದರ್ಭೋಚಿತ ಪ್ರಾಕಾರಗಳಲ್ಲಿ ಹಾಡುವುದನ್ನು ಖುದ್ದು ಕಂಡಿದ್ದೇನೆ ಮತ್ತು ಕೇಳಿದ್ದೇನೆ.
ಎಲ್ಲ ಬಗೆಯ ತಾರತಮ್ಯಗಳನ್ನು ಮೀರಿದ ಭಜನೆಯ ಗಾಯನ ಸಮೂಹ ಅದಾಗಿರುತ್ತಿತ್ತು. ಇವರೆಲ್ಲರೂ ನಮ್ಮೂರ ಗವಿ ಭೀಮಾಶಂಕರ ಅವಧೂತರ ಶಿಶುಮಕ್ಕಳಾಗಿರ್ತಿದ್ದರು. ಲಿಂಗ, ಜಾತಿ, ಮತ, ಮಠ, ಪೀಠ, ಎಲ್ಲ ಮದಗಳ ಹಂಗು ಹರಕೊಂಡವರು. ನನ್ನ ಅಪ್ಪ ಅವ್ವ ಕೂಡಾ ಭೀಮಾಶಂಕರರ ಶಿಶುಮಕ್ಕಳು. ನಾನು ನಂಬುವ ಬಹುಮುಖ್ಯವಾದ ಸ್ಥಳೀಯ ಸಾಂಸ್ಕೃತಿಕ ಪರಂಪರೆ ಇದಾಗಿತ್ತು. ಹೀಗೆ ಭಾರತವು ನನ್ನೂರಿನಂತಹ ಹತ್ತು ಹಲವು ಮನುಷ್ಯ ಸಂಸ್ಕೃತಿಗಳ ಬಹುತ್ವವನ್ನು ಬದುಕಿದ ದಿವ್ಯಭೂಮಿ.
ಇವತ್ತಿಗೂ ಮಡಿವಾಳಪ್ಪನವರ ಜಾತ್ರೆಯ ಸಂದರ್ಭದಲ್ಲಿ ಗವಿ ಭೀಮಾಶಂಕರರ ಗವಿ ಪೌಳಿ ಮುಂದೆ ಬೃಹತ್ತಾದ ನಿಗಿ ನಿಗಿ ಕೆಂಡದ ಧುನಿಯ ಸುತ್ತಲೂ ಆಂಧ್ರ, ಮಹಾರಾಷ್ಟ್ರ ಮೊದಲಾದ ಕಡೆಯಿಂದ ಆಗಮಿಸಿದ ಬೇರೆ ಬೇರೆ ಪ್ರದೇಶಗಳ ಹತ್ತಾರು ಸ್ಥಳೀಯ ತತ್ವಪದ ಸಂಸ್ಕೃತಿ ಪರಂಪರೆಯ ಫಲಕುಗಳಂತೆ ನೂರಾರು ಮಂದಿ ಸಾಧುಗಳ ಬೃಹತ್ ಸಮೂಹವೇ ಇರ್ತದೆ. ಅವರು ಸುಡುವ ಕೆಂಡದ ಧುನಿಗೆ ಸರಾಯಿ ಸುರಿದು ಅದನ್ನು ಅಭಿಷೇಕ ಪೂಜೆಯಂತೆ ತತ್ವಪದಗಳ ಗಾಯನ ಸಮಾರಾಧನೆ ಸುರುವಿಟ್ಟುಕೊಳ್ಳುತ್ತಾರೆ. ಆಮೇಲಿನ ತತ್ವಾವತಾರಗಳು ಹೇಳಲಸದಳ. ಅದನ್ನೆಲ್ಲ ಮುದ್ದಾಂ ಕಂಡು ಕೇಳಿಯೇ ಕಣ್ಮನ ತುಂಬಿಸಿಕೋಬೇಕು.
ಇನ್ನು ಅತ್ತ ದಕ್ಷಿಣ ಕರ್ನಾಟಕದ ಕಡೆಯ ಹಾಡುಗಾರಿಕೆಯ ಮಟ್ಟು, ಶೈಲಿ, ಬಳಕೆಯ ವಾದ್ಯಗಳು, ಹಾಡಿನ ಆಚರಣೆಗಳು ತುಸು ಭಿನ್ನವಾಗಿವೆ. ಅಲ್ಲಿ ಸಹಜವಾಗಿ ಕಂಸಾಳೆ ಢಾಳಾಗಿ ಕಾಣಿಸುತ್ತದೆ. ಸಹಜವಾಗಿ ಉತ್ತರ ಕರ್ನಾಟಕ ಪ್ರಾಂತ್ಯಗಳಲ್ಲಿ ಉತ್ತರಾದಿಯ ಪ್ರಭಾವವಾಗಿದ್ದರೆ ಹಳೆ ಮೈಸೂರು ಭಾಗಗಳಲ್ಲಿ ದಕ್ಷಿಣಾದಿ ಸಂಗೀತದ ಪ್ರಭಾವ ಇರುವುದನ್ನು ಹಿರಿಯ ಸಂಗೀತ ವಿದ್ವಾಂಸರು ಗುರುತಿಸುತ್ತಾರೆ. ಅದರಲ್ಲೂ ದಕ್ಷಿಣದವರಾದ ನಿಜಗುಣ ಶಿವಯೋಗಿಗಳು ಸೇರಿದಂತೆ ಅನೇಕ ವಾಗ್ಗೇಯಕಾರರ ಗಾಯನ ಪರಂಪರೆಯನ್ನು ಗಂಭೀರವಾಗಿ ಗುರುತಿಸಬಹುದು. ಹಿಂದುಸ್ತಾನಿ ಸಂಗೀತದ ಪ್ರಭಾವಕ್ಕೆ ಮುನ್ನ ಕರ್ನಾಟಕದಾದ್ಯಂತ ದಕ್ಷಿಣಾದಿ ಶೈಲಿಯೇ ಪ್ರಚಲಿತವಿತ್ತೆಂದು ನಮ್ಮ ನಡುವಿನ ಹಿರಿಯ ಸಂಗೀತ ವಿದ್ವಾಂಸರಾದ ಕಲಕೇರಿ ಗುರುಸ್ವಾಮಿ ಅವರ ಅನುಭವದ ಮಾತುಗಳು ಇಲ್ಲಿ ಉಲ್ಲೇಖನೀಯ.
ದೇಸಿಯ ನಮ್ಮ ಜನಪದರು ಇವತ್ತಿಗೂ ಮೈ ಮನ ತುಂಬಿ ತತ್ವಪದ ಹಾಡುತ್ತಿರುವಾಗ ಸಣ್ಣದೊಂದು ನುಡಿ ಮರೆತು ಹೋಗಿದ್ದರೆ ಅದನ್ನು ನೆನಪಿಸಲು ಸಹಗಾಯಕ ಅದನ್ನು ಹಾಡಿಯೇ ತೋರಿಸುತ್ತಾನೆಯೇ ಹೊರತು, ನುಡಿದು ಮಾತಲ್ಲಿ ಹೇಳಿ ತೋರಿಸಲಾರ. ಹೀಗಾಗಿ ತತ್ವಪದಗಳು ಮಾತಾಡುವ ನುಡಿ ಪ್ರಭೇದಗಳಲ್ಲ, ಅವು ಹಾಡುಗಬ್ಬಗಳು. ಅಂತೆಯೇ ಅವುಗಳನ್ನು ಹಾಡಿಯೇ ಆನಂದಿಸಬೇಕು. ಮಾತಾಡಿ ಅಲ್ಲ. ಕೆಲವೊಮ್ಮೆ ಮರೆತು ಹೋದ ತತ್ವಪದಗಳನ್ನು ನೆನಪಿಸಿಕೊಳ್ಳಲು ಹಾಡಿನ ಧಾಟಿ, ರಾಗಗಳನ್ನು ಗುನುಗಿ, ಗುನಗಿ ಇಲ್ಲವೇ ಆಯಾ ರಾಗಗಳನ್ನು ಆಲಾಪಿಸಿಕೊಳ್ಳುವ ಮೂಲಕ ಮರೆತುಹೋದ ತತ್ವಪದಗಳನ್ನು ಜ್ಞಾಪಿಸಿಕೊಳ್ಳುವುದುಂಟು.
ಅಂದರೆ ತತ್ವಪದಗಳಿಗೆ ಗಾಯನ ಅಥವಾ ಹಾಡುಗಾರಿಕೆಯ ರಾಗ ಧ್ವನಿಮೂಲಗಳು ಅಕ್ಷರ ಪದಗಳಷ್ಟೇ ಪ್ರಮುಖವಾದುವು. ನಾನಿಲ್ಲಿ ‘ಧ್ವನಿಮೂಲ’ ಎಂಬುದನ್ನು ರಸಾಸ್ವಾದನೆಯ ಮಹತ್ವದ ರಾಗ ಸಂಯೋಜನೆಯಾಗಿ ಮಾತ್ರ ಗುರುತಿಸದೇ ಗುಣಭಾವ ಸಂವೇದಿಯಾಗಿ ಗುರುತಿಸುತ್ತೇನೆ. ಹೀಗಾಗಿ ತತ್ವಪದಗಳ ಒಳಮರ್ಮ ಅರ್ಥೈಸುವುದೆಂದರೆ ಅವುಗಳನ್ನು ಓದಿ, ಮಾತಾಡಿ ಅರಿಯಲು ಬಾರದು. ಅದೇನಿದ್ದರೂ ಹಾಡಿಯೇ, ಹಾಡಿದ್ದನ್ನು ಆಲಿಸಿಯೇ ಅರ್ಥೈಸಿಕೊಳ್ಳಬೇಕು. ಅದೊಂದು ಸಹೃದಯತೆಯ ಸುದೀಪ್ತ ಸಂಬಂಧ. ಅವಿನಾಭಾವದ ದಿವ್ಯಾನುಭೂತಿ. ಸಂವೇದನಾಶೀಲ ಸಂತೈಕೆ. ಆನುಭಾವಿಕ ಉಲ್ಲಾಸ. ಅವರ್ಣನೀಯ ಸಂತೃಪ್ತಿ. ಜೀವಬನಿಯ ತುಂಬೆಲ್ಲ ಗುರುನಾಥನ ಭಾವಾವಾಹನೆ. ಶಿಶುವಾಗಿ, ಸತಿಯಾಗಿ ಅವನೊಂದಿಗಿನ ಆತ್ಮಾನುಸಂಧಾನ. ಇದೆಲ್ಲವೂ ನಿರ್ದೇಹಿ ಗಾಯನದಲ್ಲಿ ಸುಕೃತಗೊಳ್ಳುವ ಅಮೂರ್ತ ಆಹ್ಲಾದ. ಅದನ್ನು ಅನುಭಾವಿಸಿಯೇ ಪಡೆಯುವಂತಹದ್ದು. ಅದು ಬಡಿವಾರದ ಬಾಹ್ಯ ಸಡಗರ ಸಂಭ್ರಮವಲ್ಲ. ಹಾಡುವುದೆಂದರೆ ಅದು ಒಣ ಹಾಡುಗಾರಿಕೆ ಆಗಿರಲಾರದು. ಏಕತಾರಿಯೊಂದಿಗೆ ತಾದಾತ್ಮ್ಯಗೊಂಡು ನಾಭಿಯಿಂದ ಹುಟ್ಟಿಬರುವ ಮಧುರ ಪ್ರೀತಿಯ ಆರ್ದ್ರನಾದ ಉಕ್ಕಿಸುತ್ತಲೇ ಪರಮ ಸಾಕ್ಷಾತ್ಕಾರದ ವಾತಾವರಣ ನಿರ್ಮಾಣಗೊಳಿಸುವುದು. ಅವರ ಪಾಲಿಗದು ಆತ್ಮ ಪರಮಾತ್ಮಗಳ ಅನುಸಂಧಾನವೇ ಆಗಿರುವಂತಹದ್ದು.
ಸುಗಮ, ಶಾಸ್ತ್ರೀಯ, ಗಝಲ್ ಝಲಕ್ಕುಗಳು
ಎಪ್ಪತ್ತರ ದಶಕದವರೆಗೂ ಪರಂಪರಾಗತ ಸಂಪ್ರದಾಯದ ಭಜನೆ ಸ್ವರೂಪಗಳಲ್ಲೇ ತತ್ವಪದಗಳನ್ನು ಹಾಡಲಾಗುತ್ತಿತ್ತು. ಸುಗಮ ಮತ್ತು ಶಾಸ್ತ್ರೀಯ ಇವೆರಡೂ ಅಲ್ಲದ ಅತ್ತ ಜನಪದವೂ ಅಲ್ಲದ ಗಝಲ್, ಕವ್ವಾಲಿ ಶೈಲಿಯ ತತ್ವಪದ ಗಾಯನ ಕೆಲವು ವರ್ಷಗಳಿಂದ ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿ ಜನಪ್ರಿಯ ಆಗುತ್ತಲಿದೆ. ತತ್ವಪದಗಳನ್ನು ೧೯೭೨ ರಷ್ಟು ಹಿಂದೆಯೇ ಸುಗಮದಲ್ಲಿ ಹಾಡಿದವರು ನಮ್ಮ ಕಲಕೇರಿ ಗುರುಸ್ವಾಮಿ. ತದನಂತರ ಕಡಕೋಳ ಮಡಿವಾಳಪ್ಪನವರ ತತ್ವಪದಗಳನ್ನು ಮೋಡಿ ಮಾಡುವಂತೆ ಗಝಲ್ ಶೈಲಿಯಲ್ಲಿ ಹಾಡಿದ ಮೊದಲಿಗರೆಂದರೆ ಎಲ್ಲರ ಬಾಯಲ್ಲೂ ‘ಕಾಕಾ’ ಎಂದೇ ಪ್ರಸಿದ್ದರಾಗಿದ್ದ ರವೀಂದ್ರ ಹಂದಿಗನೂರ.
ಆಮೇಲೆ ಎಂಬತ್ತರ ದಶಕಾರಂಭದಲ್ಲಿ ಶಿಶುನಾಳ ಶರೀಫರ ತತ್ವಪದಗಳನ್ನು ಒಂದಷ್ಟು ನವೀನ ರೀತಿಯ ಸುಗಮದಲ್ಲಿ ಹಾಡುವ ಮೂಲಕ ಶಿವಮೊಗ್ಗ ಸುಬ್ಬಣ್ಣ ಹಾಗೂ ಸಿ. ಅಶ್ವಥ್ ತತ್ವಪದಗಳಿಗೆ ಹೊಸ ಆಯಾಮ ದಕ್ಕಿಸಿಕೊಟ್ಟರೆಂದು ಬಹುಪಾಲು ಸುಶಿಕ್ಷಿತ ಮಂದಿ ಭಾವಿಸಿಕೊಂಡರು. ಆದರೆ ಅದರಿಂದ ತತ್ವಪದಗಳಿಗೆ ಮಾತ್ರವಲ್ಲ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಯಾವ ಫಾಯದೆಯೂ ಆಗಲಿಲ್ಲ. ಆದರೊಂದು ಮಾತ್ರ ಖರೇವಂದ್ರೇ… ಹಾಡಿದವರು, ಹಾಡಿಸಿದವರು, ಕೆಸೆಟ್ ಕಂಪನಿಯವರು ಮಾತ್ರ ಉದ್ಧಾರವಾದರು. ಅದರಿಂದ ಅವರು ಯಥೇಚ್ಛವಾದ ಹಣ, ಹೆಸರು, ಕೀರ್ತಿಯನ್ನಂತು ಪಡಕೊಂಡರು.
ತತ್ವಪದಗಳ ತಾತ್ವಿಕಾನುಸಂಧಾನ, ಪದಾನುಭೂತಿಯ ವಿವೇಕಪ್ರಜ್ಞೆ ಅವತ್ತಲ್ಲ ಅದರಿಂದ ಇವತ್ತಿಗೂ ಫಲಿಸಿಲ್ಲ. ಆದರೆ ವ್ಯವಸ್ಥಿತವಾಗಿ ಎಂಬಂತೆ ಒಂದು ವರ್ಗ, ಸಮುದಾಯದ ಕೆಲವು ಮನಸುಗಳಲ್ಲಿ ಗಾಯಕರು ಮಾತ್ರ ಉಳಕೊಂಡರು. ತತ್ವಪದಗಳು, ಪದಕಾರರು ಉಳಿಯಲಿಲ್ಲ. ಇತ್ತೀಚಿನ ಮತ್ತೊಂದು ಬೆಳವಣಿಗೆ ಗಮನಿಸುವುದಾದರೆ ರಘು ದೀಕ್ಷಿತ್ ಎಂಬ ಪಾಪ್ ಗಾಯಕ ಪಟ್ಟಾಪಟ್ಟಿ ಲುಂಗಿ ಕಟ್ಟಿಕೊಂಡು, ಕೈಯಲ್ಲಿ ಸ್ಟೈಲಾಗಿ ಗಿಟಾರ ಹಿಡಕೊಂಡು ಅದೇನೋ ಫ್ಯೂಜನ್ನೋ.. ಕನ್ ಫ್ಯೂಜನ್ನೋ.. ಎಂಬ ವಿಖ್ಯಾತ ಶೈಲಿಯ ಅಲ್ಬಮ್ ಸಾಂಗ್ “ನಿನ್ನ ಪೂಜೆಗೆ ಬಂದೆನು ಮಹಾದೇಶ್ವರಾ” ಎಂಬ ಹಾಡುಗಾರಿಕೆ ಆರಂಭಿಸಿ ಕಳೆದ ಕೆಲವು ವರ್ಷಗಳಿಂದ ಶಿಶುನಾಳ ಶರೀಫರ ತತ್ವಪದಗಳಿಗೆ ಅಮರಿಕೊಂಡರು.
ಇವರ ಹುಚ್ಚಾಟದ ಈ ಹಾಡುಗಾರಿಕೆ ಹೈಸ್ಕೂಲ್, ಕಾಲೇಜು, ವಿ.ವಿ. ವಾರ್ಷಿಕೋತ್ಸವದ ವೇದಿಕೆಗಳಲ್ಲಿ ಹುಸಿ ಸಂಸ್ಕೃತಿ ಮತ್ತು ಹುಚ್ಚು ಅಮಲಿನ ಬೀಜ ಬಿತ್ತಲು ಹೆಚ್ಚು ನೆರವಾಯಿತು. ಅದೀಗ ಸೀಮೋಲಂಘನಗೊಂಡು ವಿದೇಶಗಳ ದೇಶಾವರಿ ಸನ್ನಿವೇಶಗಳಲ್ಲಿ ಗಿಟಾರ, ನೂರಾರು ಚಿತ್ರ ವಿಚಿತ್ರ ವಾದ್ಯಗಳ ನಶೆಯ ಭಂಗಿಗಳಲ್ಲಿ “ಗುಡು ಗುಡಿಯ ಸೇದಿ ನೋಡಿರಣ್ಣ” ಎಂಬ ಕೆಲವು ಪದಗಳನ್ನು ಪಾಶ್ಚಾತ್ಯ ಸಂಗೀತ ಶೈಲಿಯಲ್ಲಿ ಹಾಡುವ ವಿಕೃತಿ, ವಿಕಾರಗಳು ವಿಜೃಂಭಣೆಯ ಶಿಖರ ತಲುಪಿವೆ. ತತ್ವಪದಗಳೊಂದಿಗಿನ ಅದೊಂದು ನೈಚ್ಯಾನುಸಂಧಾನವೆಂದೇ ಹೇಳಬಹುದು.
ಹೆಚ್ಚು ಕಳವಳ ತರಿಸದ ತುಸು ಸಹನೀಯವಾದ ಇನ್ನೊಂದು ಬೆಳವಣಿಗೆ ಏನೆಂದರೆ ಆಧುನಿಕೋತ್ತರ ಮಾದರಿ ಎಂಬಂತೆ ಕರ್ರಗಿನ ಗಡ್ಡದ, ಜಡೆ ಕಟ್ಟಿಕೊಂಡ ಗಾಯಕನೊಬ್ಬನ ಹಾಡುಗಾರಿಕೆ. ಈತ ಭಯಂಕರ ಬುದ್ಧಿಜೀವಿಗಳ, ಪ್ರಗತಿಪರರ ಪರಮಗಂಭೀರ, ಕ್ಲಾಸಿಕ್ ಎಂಬ ಸ್ವ ಘೋಷಿತ ಸಭೆಗಳಲ್ಲಿ ಗಂಭೀರವಾಗಿ ಏಕತಾರಿ ನುಡಿಸುತ್ತಾ ಹಾಡುವ ಉಲ್ಲಾಸಗಳು ಹುಟ್ಟಿಕೊಂಡಿವೆ. ಆಧುನಿಕ ತತ್ವಪದಗಳ ನಶ್ವರತೆಯ ಸ್ವರದ ಪ್ಯಾಥೋ ತಂಗಾಳಿಯ ಸಂಪುಳಕವದು.
ಹೊಸ ಟ್ರೆಂಡ್ ಗಾಯನದ ನಾಲ್ಕೂರು ನಾದಮಣಿಗಳು ಷೋಕೇಸ್ ಗೊಂಬೆಗಳಂತೆ ಮಿಂಚುತ್ತಿದ್ದಾರೆ. ಇದನ್ನೆಲ್ಲ ಮೂಕ ವಿಸ್ಮಯದಿಂದ ಆವಾಹಿಸಿಕೊಳ್ಳುವ ಉಮೇದಿನ ವರ್ಗಕ್ಕೆ ತತ್ವಪದಗಳ ಕುರಿತು ತಪ್ಪು ತಪ್ಪು ಗ್ರಹಿಕೆಗೆ ಹಾದಿ ಹುಟ್ಟಿಕೊಳ್ಳುತ್ತಿವೆ. ಆದರೆ ಓದು ಬರಹ ಬಾರದ ಜನಸಂಸ್ಕೃತಿ ಭಜನೆಗಳ ನಮ್ಮ ದೇಸಿ ಗಾಯಕರ ಬೆರಗು ಬೆಡಗಿನ ಜವಾರಿ ಗಾಯನಗಳಲ್ಲಿ ಮೂಲ ತತ್ವಪದಕಾರರ ಜೀವಾಳವೇ ತುಂಬಿಕೊಂಡಿರುತ್ತವೆ. ಅವು ಇವತ್ತಿಗೂ ತಾಯ್ತನದ ಪ್ರೀತಿ, ಅಂತಃಕರಣ ಉಳಿಸಿಕೊಂಡಿರುವುದು ನಮ್ಮ ಈ ಕಾಲದ ಪುಣ್ಯ. ಸುಗಮ, ಶಾಸ್ತ್ರೀಯ, ಗಝಲ್, ನಾಟಕ, ರಿಯಾಲಿಟಿ ಷೋಗಳಲ್ಲಿ ಬಳಕೆಯಾಗಿ ಕೇಳಿ ಬರುವ
ಕೇಳೋ ಜಾಣ/ ಧ್ಯಾನದಿಂದ ಶಿವಧ್ಯಾನ ಮಾಡಣ್ಣ//
ಬಾಯಿಲೊಂದಾಡ್ತೀರಿ/ ಮನಸಿನ್ಯಾಗೊಂದು ಮಾಡ್ತೀರಿ//
ಇಂತಹ ಜನಪ್ರಿಯ ಮಾದರಿಯ ಹೊಸ ಹೊಸ ಬಗೆಯ ಗಾಯನದ ಪ್ರಯೋಗಗಳಿಂದಾಗಿ ತತ್ವಜ್ಞಾನ ಪದಸಂಸ್ಕೃತಿಯ ಅರಿವು ಹೆಚ್ಚಿಸುವ, ಜನಮಾನಸದ ಅಂತಃಪ್ರಜ್ಞೆ ಜಾಗೃತಗೊಳಿಸುವ ಸಣ್ಣಕಾರ್ಯವೂ ಸಾಧ್ಯವಾಗಿಲ್ಲ. ಇಂತಹ ದುರಿತ ಕಾಲದಲ್ಲಿ ಮತ್ತೆ ಮತ್ತೆ ನಾವು ನಮ್ಮ ಹಳ್ಳಿಗಳಲ್ಲಿ ಅಳಿದುಳಿದ ಹಿರಿಯ ಭಜನೆಕಾರರ ಬಳಿಗೇ ಹೋಗಬೇಕಿದೆ. ಅಷ್ಟೇ ಯಾಕೆ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮನೆ ಮನೆ ಬಾಗಿಲುಗಳಿಗೆ ಗುರುದೈವ ಭಿಕ್ಷೆಗೆ ಬರುವ ದರವೇಸಿ, ಫಕೀರ, ಬಾವಾಗಳ ಸೂಫಿಗಾಯನ, ಮರಾಠಿ ಅಭಂಗಗಳ ಸಂತವಾಣಿ ಪರಂಪರೆ… ಒಟ್ಟಾರೆಯಾಗಿ ಲೋಕ ಸಂಗೀತ ಮನೋಧರ್ಮದಲ್ಲಿ ತತ್ವಪದಗಳ ಗಾಯನ ಪರಂಪರೆ ನೆಲೆಗೊಂಡಿದ್ದು ಆ ಮೂಲಕ ಪದಗಳ ಮೋಕ್ಷ ಪಡೆಯಬೇಕಿದೆ.
Comments 12
ಸೋಮಶೇಖರ, ಹಾಸನ
Feb 8, 2021ತತ್ವಪದಕಾರರ ಗಾಯನವನ್ನು ನಾನೂ ಕೇಳುತ್ತಾ ಬೆಳೆದವನು. ಬಾಲ್ಯದ ಆ ದಿನಗಳನ್ನು ನಿಮ್ಮ ಲೇಖನ ನೆನಪಿಗೆ ತಂದು ಕಣ್ಣಲ್ಲಿ ನೀರು ಜಿನುಗಿತು… ಆ ದಿನಗಳು ಬಹುತೇಕ ನನ್ನೂರಲ್ಲಿ ಮರೆಯಾಗಿ ಹೋಗಿವೆ…. ಮೈಮರೆಸುವ ಆ ಹಾಡುಗಳನ್ನು ಎಂದಿಗೂ ಮರೆಯಲಾರೆ.
Deveerappa Katagi
Feb 10, 2021ಜಾನಪದಕ್ಕೆ ಹತ್ತಿರವಾಗಿರುವ ತತ್ವಪದಗಳಲ್ಲಿ ಅನುಭಾವದ ಪ್ರವಾಹವೇ ಇದೆ. ಸುವಿಸ್ತಾರವಾದ ಲೇಖನ ಗೊತ್ತಿಲ್ಲದ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿತು. ಮಲ್ಲಿಕಾರ್ಜುನ ಶರಣರಿಗೆ ಶರಣಾರ್ಥಿ.
Basavaraj Bengaluru
Feb 10, 2021ಕೆಂಚನಪಾಳ್ಯದ ಹಿರಿಯ ತತ್ವಪದಗಾಯಕ, ದಲಿತ ಸಮುದಾಯದ ರಾಮಣ್ಣನವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವವರು ಇಲ್ಲದಿದ್ದರೆ ಕಾಲದ ಮರೆಯಲ್ಲದು ಕಣ್ಮರೆಯಾಗಿ ಬಿಡುತ್ತದೆ.
kalavathi Harsha
Feb 10, 2021ತತ್ವಪದಗಳನ್ನು ಶಾಲಾಪಠ್ಯಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಶಿಷ್ಟ ಪರಂಪರೆಯ ಪ್ರಾತಿನಿಧ್ಯದಲ್ಲಿ ಸೂಕ್ತ ಬೆಂಬಲ ಹಾಗೂ ಪ್ರಚಾರ ಸಿಗದೇ ಮರೆಯಾಗುತ್ತಿರುವ ತತ್ವಪದಗಳು ಬದುಕನ್ನು ನಿಜವಾಗಿ ಅರಳಿಸುವ ಶಕ್ತಿಯುಳ್ಳವುಗಳು. ತತ್ವಪದಕಾರರ ಜೀವನ ದೃಷ್ಟಿಯನ್ನು ಪರಿಚಯಿಸುವ ಕೆಲಸ ತಮ್ಮಿಂದ ಆಗಲೆಂದು ಲೇಖಕರಲ್ಲಿ ಪ್ರಾರ್ಥನೆ.
Vijaya Ilkal
Feb 12, 2021ಬಯಲು ಓದದಿದ್ದರೆ ಸಮಾಧಾನವೇ ಆಗುವುದಿಲ್ಲ, ನೀವು ನಂಬುತ್ತೀರೋ ಇಲ್ಲವೋ ಪ್ರತಿನಿತ್ಯ ಯಾವುದಾದರೊಂದು ಬಯಲು ಲೇಖನ ಓದುತ್ತಲೇ ನಾನು ಮಲಗುವುದು. ತತ್ವಪದ ಗಾಯನ ಪರಂಪರೆಯ ಬಗೆಗಿನ ಲೇಖನ ತುಂಬಾ ಚೆನ್ನಾಗಿದೆ. ಹೊಸ ಹೊಸ ವಿಚಾರಗಳ ಬಯಲು ನನ್ನ ಮೆಚ್ಚಿನ ಜಾಲತಾಣ.
ಶಂಕರಗೌಡ ನೀಲಸಾಗರ
Feb 14, 2021ಈ ಹಾಡು ಪರಂಪರೆಯನ್ನು ಇವತ್ತಿನ ಪಾಪ್ ಗಾಯಕರು ತಮ್ಮ ಪ್ರಸಿದ್ದಿಗಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಯಾವುದೇ ತತ್ವ ಪ್ರಚಾರಕ್ಕಾಗಿ ಅಲ್ಲ, ಇವರೇ ದೊಡ್ಡ ಅಪಾಯಕಾರಿ ಜನಗಳು. ನೀವು ಹೇಳೋದು ಖರೆ.
Jeevan koppad
Feb 14, 2021Having read this I thought it was really informative. I appreciate you spending some time and energy to put this information together.
Indudhar
Feb 16, 2021ಮಡಿವಾಳಪ್ಪನವರ ತತ್ವಪದಗಳೆಂದರೆ ನನಗೆ ಬಹಳ ಸಂತೋಷ. ಎಷ್ಟು ಅರ್ಥಗರ್ಭಿತವಾಗಿರುತ್ತವೆ! ಮಡಿವಾಳಪ್ಪನವರ ಜಾತ್ರೆಯ ವಿಶೇಷ ಓದಿ ನಾನೊಮ್ಮ ಅಲ್ಲಿ ಹೋಗಲೇ ಬೇಕೆನಿಸಿದೆ. ಅದು ಯಾವಾಗ ನಡೆಯುತ್ತದೆ? ಬಹುಶಃ ಪದಕಾರರನ್ನು ಬೇಟಿ ಮಾಡಲು ಇದು ಒಳ್ಳೆಯ ಸಂದರ್ಭ.
Lalithamma
Feb 18, 2021ನಾ ಹೋದ ಮ್ಯಾಲ ನೀ ಹ್ಯಾಂಗ ಇರತಿ/
ನಾ ನಿನ್ನ ಹ್ಯಾಂಗ ಮರೆಯಲಿ ಗುಣವಂತಿ//… ಆಹಾ!! ತತ್ವಪದದ ಜೇನು ಇಂತಹ ಅನುಭಾವಿಕ ಪದಗಳಲ್ಲಿದೆ. ಲೇಖನ ಬಹಳ ಮಾಹಿತಿ ಒದಗಿಸಿತು.
Veeresh S. Belgavi
Feb 22, 2021ಸುಶಿಕ್ಷಿತರ ವೀಣೆಗಳು ಕರಿ ಕುಂಬಳಕಾಯಿಯ ಏಕತಾರಿಗಳನ್ನು ಮುಟ್ಟಿಸಿಕೊಳ್ಳದೇ ದೂರ ಇಟ್ಟರೇನಂತೆ ತತ್ವಪದಗಳು ಸದಾ ಕಾಲ ಎಲ್ಲ ಜನರ ಮನಸ್ಸಿಗೆ ಮತ್ತು ಬದುಕಿಗೆ ಹತ್ತಿರವಾಗುತ್ತಾ ಬಂದಿವೆ. ಅವುಗಳ ದನಿ ಹೃದಯದ ದನಿ.
Padma
Feb 22, 2021Pretty nice post. I just stumbled upon your blog. I have really enjoyed surfing around the blog posts. Very nice colors and theme.
Umesh Patri
Mar 4, 2021It’s actually a nice and helpful piece of information.