![ತತ್ವಪದಕಾರರ ಸಾಮರಸ್ಯ ಲೋಕ](https://bayalu.co.in/wp-content/uploads/2023/08/IMG-20230809-WA0004.jpg)
ತತ್ವಪದಕಾರರ ಸಾಮರಸ್ಯ ಲೋಕ
ಭಂವಸೈ ಆಡಿದೆನಾ ಮೋಹರಮ್ಮಕ
ಆಲಾಯಿ ಆಡಿದೆನಾ ಮೋಹರಮ್ಮಕ
ಭವ ಎಂಬ ಭಂವಸೈ ಅರುವಿನ ಆಲಾಯಿ
ಮೂರು ಕೂಡಿದಲೇ ಮೊಹರಂ ಮಾಡಿದೆನಾ || ಪ ||
ತನು ಮಸೂತಿಯೊಳು ನಾ
ಪಂಚ ತತ್ವ ಪಂಜೆಯ ಕೂಡಿಸಿ
ಈಡಾ ಪಿಂಗಳ ಹಸೇನಿ ಹುಸೇನಿ
ಜೀತ ಪೀರ ಮೌಲಾಲಿಗೆ ತನುವನ್ನು ಒಪ್ಪಿಸಿ ನಾ || 1 ||
ನಡೆ ನುಡಿ ಲಾಡಿ ಮಾಡಿದೆ ನಾ
ಹರಕಿಯ ಬೇಡಿ ಕೊರಳೊಳು ಹಾಕಿಕೊಂಡೆ
ಪಂಚಾಕ್ಷರಿ ಮಂತ್ರ ಫಾತೆಯ ಕೊಟ್ಟು
ಕಂದೂರಿ ಮಾಡಿ ಫಕೀರಗೆ ಉಣಸಿದೆ ನಾ || 2 ||
ದುಷ್ಟ ಯಜೀದನು ಸುಖ ಸುಜಾತಿ ಮುಸಲ್ಮಾನನು
ಝರ ಭರ ಝಟಪಟಿ ಖತ್ತಲ್ ರಾತ್ರಿ
ಲಟಪಟ ಘಟವೇರಿ ಪರತರ ದಫನಾಯಿತು
ಖಟಪಟಿ ರಣರಂಗ ದಿಟವಾಯಿತು || 3 ||
ಸತ್ಯುಳ್ಳ ಶರಣರು ಪೀರ ಪೈಗಂಬರರು
ಸತ್ಯವ ತೋರಿದರು ಸತ್ತು ಸಾಯಲ್ದಂಗ
ಇದ್ದು ಇಲ್ಲದಂಗ ಮಕ್ಕಾ ಮದೀನದಲ್ಲಿ
ತಾನೆ ಐಕ್ಯಾದ ಮಡಿವಾಳನು || 4 ||
ಇದು ಹದಿನೆಂಟನೇ ಶತಮಾನದ ಅಂತ್ಯದಲ್ಲಿ ಬಾಳಿದ್ದ ಕಡಕೋಳ ಮಡಿವಾಳಪ್ಪನವರ ತತ್ವಪದ. ಹಿಂದೂ ಮುಸ್ಲಿಂ ತಾತ್ವಿಕತೆಯನ್ನು ಏಕತ್ರಗೊಳಿಸಿ ಧರ್ಮ ಸಮನ್ವಯತೆಯನ್ನು ಸಾರಿದ್ದು ಅನುಪಮವಾಗಿದೆ. ಇಂಥ ನೂರಾರು ತತ್ವಪದಗಳು ಕನ್ನಡ ಸಾಹಿತ್ಯದ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತಿವೆ.
ಎರಡು ಸಾವಿರಕ್ಕೂ ಮಿಕ್ಕು ವರ್ಷಗಳ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತತ್ವಪದಗಳದು ಸಿಂಹಪಾಲು. ರಾಚನಿಕವಾಗಿ ಇದು ಹಾಡುಗಬ್ಬ. ಹಾಗೇ ನೋಡಿದರೆ ಕನ್ನಡದ ಹಾಡುಗಬ್ಬ ಪರಂಪರೆಯು ತುಂಬಾ ಪ್ರಾಚೀನವಾಗಿದೆ. ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗದಲ್ಲಿಯೇ ಹಾಡುಗಬ್ಬಗಳ ಉಲ್ಲೇಖ ದೊರೆಯುತ್ತದೆ. ಆದರೆ ಇಂದು ನಾವು ತತ್ವಪದ ಎಂದು ಗುರುತಿಸಿಕೊಂಡು ಬರುತ್ತಿರುವ ಈ ಹಾಡುಗಬ್ಬ ರೂಪದ ಪ್ರಾರಂಭಿಕ ರೂಪಗಳನ್ನು, ವಚನಗಳನ್ನು ಬರೆದ 12 ನೇ ಶತಮಾನದ ಶಿವಶರಣರಲ್ಲಿಯೇ ಕಾಣುತ್ತೇವೆ. ಬಸವಾದಿ ಶಿವಶರಣರು ವಚನಗಳೊಂದಿಗೆ ಪದಗಳನ್ನು ರಚಿಸಿದ್ದು ಇದೆ. ನೀಲಾಂಬಿಕೆಯ “ನೋಡು ನೋಡು ನೋಡು ಲಿಂಗವೆ | ನೋಡು ಬಸವಯ್ಯನವರು ಮಾಡಿದಾಟವಾ” ಎಂಬ ಗೀತೆಯೊಂದು ಜನಮಾನಸದಲ್ಲಿ ಅಚ್ಚೊತ್ತಿದೆ. ಆದಾಗ್ಯೂ ತತ್ವಪದ ಪ್ರಕಾರಕ್ಕೆ ಭರ್ತಿ ಸುಗ್ಗಿ ಬಂದದ್ದು 17 ನೇ ಶತಮಾನದಲ್ಲಿ ನಿಜಗುಣ ಶಿವಯೋಗಿಯ ಕಾಲಕ್ಕೆ. ಆರೂಢ ತಾತ್ವಿಕತೆಯ ಅನುಸಂಧಾನಿಗಳಾಗಿದ್ದ ನಿಜಗುಣ ಶಿವಯೋಗಿಗಳ ‘ಕೈವಲ್ಯ ಪದ್ಧತಿ’ ಕೃತಿಯು ತತ್ವಪದ ಪ್ರಕಾರದಲ್ಲೊಂದು ಮೈಲಿಗಲ್ಲು.
ಅವರ ‘ಶ್ರೀಗುರುಪದೇಶವನಾಲಿಸಿದಾಗಳಹುದು ನರರಿಗೆ ಮುಕುತಿ’ ಅಥವಾ ‘ಬಳಸದಿರು ಬಾಹ್ಯದೊಳು ಡಂಭವಾ| ನಿನ್ನೊಳಗ ಏಕೋಭಾವದಿಂದ ಒಳಗೂಡು ಶಂಭುವಾ’ ಎಂಬ ಪದಗಳು ವ್ಯಾಪಕವಾಗಿ ನಾಲಿಗೆ ತುದಿಯಲ್ಲಿ ಲಾಸ್ಯವಾಡುತ್ತಿವೆ. ಅವರ ‘ಜ್ಯೋತಿ ಬೆಳಗುತಿದೆ| ವಿಮಲ ಪರಂಜ್ಯೋತಿ ಬೆಳಗುತಿದೆ’ ಪದವಂತೂ ಮಂಗಳಾರತಿ ಪದ ಪರಂಪರೆಗೆ ಹಣೆಮಣಿಯಾಗಿ ನಿಂತಿದೆ. ಇಲ್ಲಿಂದ ತತ್ವಪದ ಪ್ರಕಾರ ಹಿರಿ ಹೊಳೆಯಾಗಿ ಓತೋಪ್ರೇತವಾಗಿ ತುಂಬಿ ಹರಿದಿದೆ. ಮುಪ್ಪಿನ ಷಡಕ್ಷರಿ, ಬಾಲಲೀಲಾ ಮಹಾಂತ ಶಿವಯೋಗಿ, ಶಂಕರಾನಂದ ಶಿವಯೋಗಿ, ಸರ್ಪಭೂಷಣ ಶಿವಯೋಗಿ ಹೀಗೆ ಶರಣ ಪರಂಪರೆಯ ಸಾಧಕರು ವೆಗ್ಗಳ ಪದಗಳನ್ನು ರಚಿಸಿ ಹಾಡುಗಾರಿಕೆ ಮೂಲಕ ಹೆಚ್ಚು ಪ್ರಚುರಗೊಳಿಸಿದರು. ಮುಂದೆ 18, 19 ಮತ್ತು 20 ನೇ ಶತಮಾನಗಳಂತೂ ತತ್ವಪದಗಳ ಸುಗ್ಗಿ ಕಾಲವೆಂದೆ ಗುರುತಿಸಬೇಕು. ಕಡಕೋಳ ಮಡಿವಾಳಪ್ಪ, ಖೈನೂರು ಕೃಷ್ಣಪ್ಪ, ತೆಲಗಬಾಳದ ರೇವಪ್ಪ, ಕಡ್ಲೇವಾಡದ ಸಿದ್ದಪ್ಪ, ಚೆನ್ನೂರು ಜಲಾಲಸಾಹೇಬ, ಕೂಡಲೂರು ಬಸವಲಿಂಗಪ್ಪ, ರಾಮಪೂರದ ಬಕ್ಕಪ್ಪ, ನಿಂಬರಗಿ ನಾರಾಯಣ, ಗೊಗಲ್ಲು ಪರಪ್ಪಯ್ಯ, ಮೋಟ್ನಳ್ಳಿ ಹಸನಸಾಬ್, ಅಸ್ಕಿಯ ಮೋದಿನಸಾಬ್, ಸಾಲಗುಂದಿಯ ಖಾದ್ರಿಪೀರ, ಬಿದನೂರಿನ ಗಂಗಮ್ಮ, ರಾಯಚೂರಿನ ಹನುಮಂತವ್ವ, ಕಂಬಾರ ರಾಚವ್ವ, ತುರುವೆಕೆರೆ ವೀರದಾಸಮ್ಮ, ಬಸವಕಲ್ಯಾಣದ ಫೈಮುದಾ ಫಾತಿಮಾ, ನಾಗಾರ್ಯಾ ಇತ್ಯಾದಿ 500ಕ್ಕೂ ಹೆಚ್ಚು ತತ್ವಪದಕಾರರು ಆಗಿ ಹೋಗಿದ್ದಾರೆ. ಅದರಲ್ಲಿ 20ಕ್ಕೂ ಹೆಚ್ಚು ಮುಸ್ಲಿಂ ತತ್ವಪದಕಾರರು ಕಾಣಿಸಿಕೊಂಡರೆ, 20 ಕ್ಕೂ ಹೆಚ್ಚು ತತ್ವಪದಕಾರ್ತಿಯರು ಸಿಗುತ್ತಾರೆ. ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಜಾತಿ, ಮತ, ಪಂಥಗಳ ಅನುಯಾಯಿಗಳು ಪದಗಳನ್ನು ರಚಿಸಿದ್ದಾರೆ.
ಹಾಗೇ ನೋಡಿದರೆ ಕನ್ನಡದ ನೆಲವು ಹಲವು ತಾತ್ವಿಕ ಅನ್ವೇಷಣೆಗಳಿಗೆ ಆಡಂಬೋಲವಾಗಿದೆ. 12 ನೇ ಶತಮಾನದ ಶಿವಶರಣರ ಅನುಭಾವ ಪರಂಪರೆಯೊಂದಿಗೆ ಉತ್ತರದ ನಾಥ ಪರಂಪರೆಯು ಇಲ್ಲಿ ಕಸಿಗೊಂಡಿದೆ. ಬೌದ್ಧ ತಾತ್ವಿಕರ ಪ್ರಯೋಗ ಭೂಮಿಯಾಗಿರುವ ಇಲ್ಲಿ ಅಚಲ ಸಾಧಕರು ಎಲೆ ಮರೆಯ ಕಾಯಿಯಾಗಿಯೇ ತಮ್ಮ ಸಾಧನಾ ಪ್ರಸ್ಥಾನಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಅದರೊಟ್ಟಿಗೆ ಆರೂಢಿಗಳಿಗಂತೂ ಕನ್ನಡ ನಾಡು ಕನ್ನೆಲವಾಗಿದೆ. ರೇವಣಸಿದ್ಧರ ಕಾರ್ಯಕ್ಷೇತ್ರವಾಗಿರುವ ಇಲ್ಲಿ ಸಿದ್ಧ ಸಾಧಕರು ಕೂಡ ತಮಗಾದ ಆನುಭಾವಿಕ ಹೊಳಹುಗಳನ್ನು ಪದಗಳಲ್ಲಿ ಎರಕ ಹೊಯ್ದಿದ್ದಾರೆ. ಮಧ್ಯಕಾಲದಲ್ಲಿ ಏಷ್ಯಾದ ಮಧ್ಯ ಭಾಗದಿಂದ ಬಂದ ಸೂಫಿಗಳು ಇಲ್ಲಿನ ತಾತ್ವಿಕ ಧಾರೆಗಳೊಂದಿಗೆ ಮಿಳಿತಗೊಂಡು ವಿಶಿಷ್ಟ ಪರಂಪರೆಯೊಂದನ್ನು ನಿರ್ಮಿಸಿದ್ದಾರೆ. ಭಾರತವನ್ನು ಒಳಗೊಂಡಂತೆ ಕರ್ನಾಟಕವು ಹಲವು ಧರ್ಮ, ಮತ, ಪಂಥಗಳ ಪ್ರಯೋಗ ಭೂಮಿಯಾಗಿದೆ. ನಾಡವರ ಚಿತ್ ಚೈತನ್ಯವು ಅಗಾಧ ಆನುಭಾವಿಕ ಪ್ರತಿಭಾ ಸಂಪನ್ನವಾಗಿದೆ. ಹೀಗಾಗಿಯೇ ಇಲ್ಲಿ ಕಾಲಕಾಲಕ್ಕೂ ಶರಣ, ಸಿದ್ಧ, ನಾಥ, ಆರೂಢ, ಅವಧೂತ, ಶಾಕ್ತ, ಸೂಫಿ ಇತ್ಯಾದಿ ತಾತ್ವಿಕ ಧಾರೆಗಳು ಕೊಡುಕೊಳೆ ನಡೆಸಿವೆ. ಹೀಗಾಗಿ ಧರ್ಮ ಸಮನ್ವಯತೆ, ಜಾತ್ಯಾತೀತತೆ, ಲಿಂಗ ನಿರಪೇಕ್ಷತೆ ಇವು ತತ್ವಪದಕಾರರ ಪ್ರಮುಖ ಚಹರೆಗಳಾಗಿ ನಿಂತಿವೆ. ಇವರಿಗೆ ದೇಶವೆಂಬ ಗಡಿಗಳಿಲ್ಲ, ಭಾಷೆಗಳ ಹಂಗಿಲ್ಲ. ಪ್ರದೇಶಗಳ ಮಿತಿಗಳಿಲ್ಲ. ಅಕ್ಷರಶಃ ವಿಶ್ವಾತ್ಮಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡ ಇವರು ಲೋಕಮೋಹದಿಂದ ಅತೀತರಾದರೂ ಲೋಕ ನಿರಾಕರಣಿಗಳಲ್ಲ.
ಕ್ರಿ. ಶ 17 ರಿಂದ 20 ನೇ ಶತಮಾನಗಳಲ್ಲಿ ಕರ್ನಾಟಕವು ಹಲವು ರಾಜಕೀಯ ಸ್ಥಿತ್ಯಂತರಗಳನ್ನು ಕಂಡಿತು. ಅಸಂಖ್ಯ ಚಿಕ್ಕಪುಟ್ಟ ಸಂಸ್ಥಾನಿಕರು ಆಳರಸರಾಗಿ ಪರಸ್ಪರ ಯುದ್ಧ, ದೊಂಬಿ, ಗಲಭೆಗಳಲ್ಲಿ ಪ್ರಜೆಗಳನ್ನು ಬಿಟ್ಟಿ ಕೆಲಸಗಳಲ್ಲಿ ತೊಡಗಿಸಿದ್ದರು. ಒಂದೆಡೆ ರಾಜಕೀಯ ಅತಂತ್ರ, ಇನ್ನೊಂದೆಡೆ ಅಸಹನೀಯ ಪ್ರಾಕೃತಿಕ ಅವಘಡಗಳು, ಮಗದೊಂದೆಡೆ ಪಕ್ಕಾ ಜಮೀನ್ದಾರಿ ಮೌಲ್ಯಗಳು. ಬಡತನ, ಅನಕ್ಷರತೆ, ಜಾತ್ಯಾಂಧತೆ, ಮತೀಯ ಕಲಹಗಳು ಮೇಲಾಗಿ ಎಲ್ಲದಕ್ಕೂ ದೈವ, ಹಣೆಬರಹವೆಂಬ ಮೌಢ್ಯಗಳು. ಈ ಎಲ್ಲವುಗಳಲ್ಲಿ ಸಾಮಾನ್ಯರ ಬಾಳುವೆ ದುಸ್ತರವಾದ ಹೊತ್ತಿನಲ್ಲಿ ಕೈ ಹಿಡಿದು ನಡೆಸಿದವರೇ ಈ ತತ್ವಪದಕಾರರು. ಹೀಗಾಗಿ ಜನಸಾಮಾನ್ಯರ ಬದುಕಿಗೆ ಧೃತಿ, ಶ್ರುತಿಯನ್ನು ಒದಗಿಸಿದ ಈ ಸಂತ, ಮಹಾಂತರು ತಮ್ಮ ನಡೆ ಮತ್ತು ರಾಗೋಚಿತ ಪದಗಳಿಂದ ಜನರನ್ನು ಸಂತೈಸಿದರು. ಎಂಥ ದುರ್ದಮ್ಯ ಪರಿಸ್ಥಿತಿಯಲ್ಲಿಯೂ ನಿರಾಶರಾಗದಂತೆ, ಬದುಕಿನಿಂದ ವಿಮುಖರಾಗದಂತೆ ನೋಡಿಕೊಂಡರು. ಆಧ್ಯಾತ್ಮವೆಂಬುದು ಪೂರ್ವಜನ್ಮದ ಸಂಚಿತ ಪುಣ್ಯದ ಫಲವೆಂದು ನಂಬಿಸಲಾಗಿದ್ದ ಕಟ್ಟುಕತೆಗಳ ಕಟ್ಟನ್ನು ಮುರಿದು ಅನುಭಾವವೆಂಬುದು ಸರ್ವಗ್ರಾಹ್ಯ. ಸಾಧಕರ ಅಂತರಂಗದ ಹುಡುಕಾಟ. ಅಂತೆಯೇ ಅದು ಇಂದ್ರಿಯ ಗಮ್ಯ ಮತ್ತು ಸಾಮಾನ್ಯಾತಿ ಸಾಮಾನ್ಯರು ಅತ್ಯಂತ ಎತ್ತರಕ್ಕೆ ಏರಬಲ್ಲರು ಎಂಬುದನ್ನು ತಮ್ಮ ನಡೆಗಳಿಂದ ತೋರಿಸಿಕೊಟ್ಟರು.
ತತ್ವಪದ ಕೇವಲ ಸಾಹಿತ್ಯ ರೂಪವಲ್ಲ. ಅದೊಂದು ಅನುಭಾವ ಜನ್ಯ ಹೃತ್ಕಾವ್ಯ. ಅಲ್ಲಿ ಜನಬದುಕು ಅನುರಣಿತವಾಗುತ್ತಿದೆ. ಆದ್ದರಿಂದಲೆ ಅದು ಗುರುಪಂಥೀಯ ಮಾರ್ಗ. ಅಲ್ಲಿ ಕಲ್ಪಿತ ದೇವರಿಲ್ಲ. ಗುರುವೇ ದೇವ, ಧರ್ಮ, ದಾತಾ ಎಲ್ಲ. ಗುರು ಮುಟ್ಟಿ ಗುರುವಾಗುವ ಪ್ರಾಯೋಗಿಕ ಬಟ್ಟೆ. ಮನುಷ್ಯ ನಿರ್ಮಿತ ಎಲ್ಲ ಬೇಲಿ ಭ್ರಮೆಗಳನ್ನು, ಲೌಕಿಕ ರಚನೆಗಳನ್ನು ಮೀರಿ ಸುಮ್ಮನೆ ಸಹಜವಾಗಿ ಬಾಳಿ ಬಯಲಾಗುವ ಪರಿಯನ್ನು ಎಲ್ಲ ತತ್ವಪದಕಾರರು ಸರಳವಾಗಿ ತೋರಿಸಿಕೊಟ್ಟಿದ್ದಾರೆ. ಬ್ರಾಹ್ಮಣ ಗೋವಿಂದ ಭಟ್ಟನಿಗೆ ಶಿಶುನಾಳ ಶರೀಫ ಶಿಷ್ಯನಾದರೆ ಶರೀಫಜ್ಜನಿಗೆ ಎಲ್ಲ ಕುಲಬಾಂಧವರು ಶಿಷ್ಯರಾಗಿದ್ದಾರೆ. ಜಾತಿ ಮೀರಿ ಹುಟ್ಟಿದ ಕಡಕೋಳ ಮಡಿವಾಳಪ್ಪನಿಗೆ ಬ್ರಾಹ್ಮಣ ಖೈನೂರು ಕೃಷ್ಣಪ್ಪ ಶಿಷ್ಯ. ಈತನ ಶಿಷ್ಯಳು ಕಂಬಾರ ರಾಚವ್ವ. ಬಣಜಿಗ ಕೂಡಲೂರು ಬಸಲಿಂಗಪ್ಪನಿಗೆ ಮುಸ್ಲಿಂ ಜಲಾಲ ಸಾಹೇಬ ಶಿಷ್ಯ. ಈತನ ಶಿಷ್ಯ ಗಂಗಾಮತಸ್ಥ ಮೋತಕಪಳ್ಳಿ ಭೀಮರಾಯ. ನೇಕಾರ ನಿಂಬರಗಿ ಮಹಾರಾಜರ ಶಿಷ್ಯ ಬ್ರಾಹ್ಮಣ ಬಾವುಸಾಹೇಬ ಮಹಾರಾಜ. ಇವರ ಶಿಷ್ಯೆ ಐಗೋಳ ಕುಲದ ಶಿವಲಿಂಗವ್ವ ಜತ್ತ. ರಾಯಚೂರಿನ ಹನುಮಂತವ್ವ ಕೋಮಟಿ. ಅವಳ ಶಿಷ್ಯರಲ್ಲಿ ದಲಿತರಾದಿಯಾಗಿ ಎಲ್ಲ ಕುಲದವರಿದ್ದಾರೆ. ಈ ಪರಂಪರೆ ದೀರ್ಘವಾಗಿದೆ. ಗುರುಬೋಧೆ ಪಡೆದು ಶಿಸುಮಕ್ಕಳಾದ ಇವರಿಗೆ ಗುರು ಗದ್ದುಗೆಯೇ ಆನುಭಾವಿಕ ಪ್ರಯೋಗ ಭೂಮಿ.
ಈ ತತ್ವಪದಕಾರರಲ್ಲಿ ಉನ್ನತ ಶಿವಯೋಗಾನುಭಾವಿಗಳು ಇರುವಂತೆ ಸಹಜ ಸದ್ಭಾವಿಗಳು ಇದ್ದಾರೆ. ತಾತ್ವಿಕವಾಗಿ ತುಂಬಾ ಎತ್ತರದ ಪದ ರಚಿಸಿದಂತೆ ತೀರ ಸರಳ ಭಕ್ತಿ ಪರ ಗೀತೆಗಳನ್ನು ಬರೆದವರು ಇದ್ದಾರೆ. ಒಟ್ಟಾರೆ ಇವರಿಗೆ ಇಹದ ಬದುಕು ಪರದ ಹಂಬಲಕ್ಕಿಂತ ದೊಡ್ಡದು. ಹೀಗಾಗಿ ಇವರಿಗೆ ಯಾವುದು ವರ್ಜ್ಯವಲ್ಲ. ಹರಿ-ಹರ-ಹಜರತ್ ಎಲ್ಲವನ್ನು ತತ್ವವಾಗಿ ಕಾಣುವ ಪ್ರಬುದ್ಧತೆ. ಹೋಳಿ ಆಡಿದಂತೆ ಮೊಹರಂ ಆಚರಿಸಬಲ್ಲರು. ಕಾವಿ ಬಟ್ಟೆ ಧರಿಸಿದಂತೆ ಹಸಿರು ರುಮಾಲು ಸುತ್ತಬಲ್ಲರು. ಫಕೀರರಾಗಿ ಫಾತೆ ಕೊಡಬಲ್ಲರು. ಜಂಗಮರಾಗಿ ಲಿಂಗಪೂಜೆ ಮಾಡಬಲ್ಲರು. ಶಾಕ್ತರಾಗಿ ದೇವಿಯನ್ನು ಆವಾಹಿಸಿಕೊಳ್ಳಬಲ್ಲರು. ದೇಹವನ್ನು ದೇಗುಲವಾಗಿಸಿ ಸ್ವಯಂ ಬ್ರಹ್ಮವಾಗಿ ತೂರ್ಯಾವಸ್ಥೆಯಲ್ಲಿ ವಿರಮಿಸಬಲ್ಲರು.
ಅಜ್ಞಾತ ತತ್ವಪದವೊಂದು ಹೀಗಿದೆ-
ಹುಸೇನ ಸಾಹೇಬರ ಬದಿಯಲಿ ಹೋಗಿ
ಹಸನಾಗಿ ನಾವು ಬಂದೇವು || ಪ ||
ಮಸೂತಿಯೊಳಗಿನ ಮೂಲವ ತಿಳಿದು |
ದೀನ ದಯಾಳನ ನೆನದೇವು || ಉ.ಪ ||
ಹಸಿರು ಹಳದಿ ಬಿಳಿದು ಕೆಂಪು
ಕುಶಲದ ಚೌಕಿಯ ಕಂಡೇವೋ
ಮುಸಲರಗೂಡ ಫಕೀರರಾಗಿ
ಸವಿ ಸವಿ ಪ್ರಸಾದ ಉಂಡೇವೋ || 2 ||
ಖತಾಲವೆಂಬೋ ಕತ್ತಲೆಯೊಳಗೆ
ಸುತ್ತೆಲ್ಲ ಜ್ಯೋತಿಯ ಕಂಡೇವು
ಉತ್ತರ ಪಶ್ಚಿಮ ನವಬಾಜ ವಾದ್ಯವು
ಅದರ ಭ್ರಮಿ ನಾವು ಗೊಂಡೇವೋ || 3 ||
ಖಾಲಿಯೆಂಬುವ ಡೋಲಿಯ ಮುರಿದು
ಒಳಗಿನ ಮೂಲವ ತಿಳಿದೇವೋ
ಕಲಬುರಗಿ ಸಿದ್ಧೇಶ್ವರನ
ಬಾಲರಾಗಿ ನಾವು ಪಡಕೊಂಡೇವೋ ||4 ||
ಅನುಭಾವಿ ಕವಿ ಇಲ್ಲಿ ರೇವಣಸಿದ್ಧನ ಗದ್ದುಗೆಯ ಬಳಿ ತಾದ್ಯಾತ್ಮ ಅನುಭವಿಸುವಂತೆ ಹುಸೇನ ಸಾಹೇಬನ ದರ್ಗಾದಲ್ಲಿಯೂ ತಾದ್ಯಾತ್ಮ ಅನುಭವಿಸಬಲ್ಲ. ಖತಲ್ ರಾತ್ರಿ ಎಂಬುದು ಇಸ್ಲಾಂನ ಆಚರಣೆಯಾದರೆ ಸುತ್ತೆಲ್ಲ ಜ್ಯೋತಿ ಕಾಣಿಸುವುದು ಶಿವಯೋಗಾನುಭವ. ಮುಸಲರಗೂಡ ಸವಿ ಸವಿಯಾದ ಪ್ರಸಾದ ಉಂಡು ಫಕೀರರಾಗುವುದು ಅದೆಷ್ಟು ಉದಾತ್ತ ಭಾವ ಅಲ್ಲವೆ? ಇದೆ ಮಾತನ್ನು ಚೆನ್ನೂರಿನ ಜಲಾಲ ಸಾಹೇಬ ಹೇಳುವುದು ಹೀಗಿದೆ-
ಜಂಗಮನಾಗಬೇಕಾದರೆ ಮನ
ಲಿಂಗ ಮಾಡಿಕೊಂಡಿರಬೇಕು
ಅಂಗದ ಗುಣ ಅಳಿದಿರಬೇಕು
ನಿಸ್ಸಂಗನಾಗಿ ಶರಣರ ಕೂಡಿರಬೇಕು || ಪ ||
ಶಿವಾಯನಮ ಎನುತಲುಸಿರು
ಹೋಗುದು ಕಂಡು ಹಿಡಿದಿರಬೇಕು
ಹಂಬಲಿಸಿದ ಘೋಷ ಝೇಂಕಾರ ತಾಳವಿರಬೇಕು
ದಾಸನಾಗಿ ಮಲ ಕೀಲ ತೊಳೆದು ತಾ ಕುಳಿತಿರಬೇಕು || 1 ||
ಅಂಗದ ಗುಣಗಳು ಎಲ್ಲವು ಅಳಿದು
ಇಂಡಾ ಪಿಂಗಳ ಖೂನವಿಟ್ಟಿರಬೇಕು
ಕಂಗಳನು ತಾ ಮುಚ್ಚಿ ನಿರತನಾಗಿ
ಮಂಗಳ ಪ್ರಭೆಯೊಳು ಮುಳುಗಿರಬೇಕು || 2 ||
ಹಸಿರು ಹಳದಿ ಕೆಂಪು ಬಿಸಲಿನ ಖೂನ
ಹಸುರಾಗಿ ಹೊಳಪು ತಿಳಿ ತೋರಿರಬೇಕು
ಹೊಸ ಧಾತು ಕೋಲು ಮುಂಚು ಹಿಡಿದು
ಈಶ ಬಸಲಿಂಗೇಶನೋಳು ತಾನರಿತು ಬೆರತಿರಬೇಕು || 3 ||
ಆದ್ದರಿಂದಲೇ ಜಲಾಲ ಸಾಹೇಬ ಅನುಯಾಯಿಗಳ ಬಾಯಲ್ಲಿ ಜಲಾಲ ಶರಣನಾಗಿದ್ದಾನೆ. ಶರಣ ಮಾರ್ಗದ ಅನುಸಂಧಾನಿಯಾಗಿದ್ದ ಈತ ಬಸವ ಪುರಾಣ ಹೇಳಿಸಿ ಆ ಹೊತ್ತು ಕರ್ಮಠ ಮುಸ್ಲಿಂರು ಮತ್ತು ಜಾತಿವಾದಿ ಲಿಂಗಾಯತರ ಕೆಂಗೆಣ್ಣಿಗೆ ಗುರಿಯಾದದ್ದು ಇದೆ. ನಿಜಾಂ ಇಲಾಖೆಯಲ್ಲಿದ್ದ ಈತ ಬಸವ ಪುರಾಣ ಓದಿಸಲೆಂದು ಆ ಹೊತ್ತು ಆಳರಸ ನಿಜಾಂನಿಂದ ಹುಕುಂ ಪತ್ರ ತಂದು ಬಸವ ತತ್ವಗಳನ್ನು ಎತ್ತಿ ಹಿಡಿಯುತ್ತಾನೆ. ಸೂಫಿ, ಶರಣ ತತ್ವಗಳನ್ನು ಮೇಳೈಸಿಕೊಂಡಿರುವ ನೂರಾರು ಪದಗಳು ದೊರೆಯುತ್ತವೆ. ತತ್ವಪದಕಾರರು ಎಲ್ಲ ತಾತ್ವಿಕತೆಯನ್ನು ಅನುಸಂಧಾನಿಸ ಬಲ್ಲರಾದರೆ ಎಲ್ಲ ಮತ ಪಂಥದಲ್ಲಿನ ಕಂದಾಚಾರಗಳನ್ನು ಹಳಿಯಲು ಬಲ್ಲರು.
ಕಡಕೋಳ ಮಡಿವಾಳಪ್ಪನವರ ಈ ಪದವನ್ನು ನೋಡಬಹುದು-
ಮುಲ್ಲನುದಯದಿ ಮಸೂತಿಯಲಿ ನಿಂದಲ್ಲಲ್ಲಂದರಲ್ಲಿಲ್ಲ
ಗುಲ್ಲು ಮಾಡಿ ತಾ ಕೂಗಲು
ಮಾಳಿಗಿಯೊಳಗೀನ ಇಲಿಗಳು ಒಂದು ಉಳಿಲಿಲ್ಲ || ಪ ||
ಉದಯದೊಳು ವಿಪ್ರರು ನದಿಯೊಳು ಮುಳುಗುತ ಮಾಧವ ಹರಿಯೆನಲ್ಲಿಲ್ಲ
ಅಧಿಕನು ಸೂರ್ಯನೆಂಬುತ ಕ್ಷತ್ರಿಯರು ಮುದದಿ ಪ್ರಾರ್ಥಿಸಿದರಲ್ಲಿಲ್ಲ
ಚದುರತನದಿ ವೈಶ್ಯರು ನಗರೇಶ್ವರ ಗೋವಿಂದಯೆನಲ್ಲಿಲ್ಲ
ಒದಗಿ ಶೂದ್ರರು ಬಹು ದೈವಂಗಳ ಅರ್ಚಿಸಿದರಲ್ಲಿಲ್ಲ || 1 ||
ಭುವನದಿ ಜಂಗಮ ಭಕ್ತಿ ಜ್ಞಾನ ವೈರಾಗ್ಯ ನಡಸಿದರಲ್ಲಿಲ್ಲ
ಶಿವಭಕ್ತರು ಶಿವಲಿಂಗ ಪೂಜೆ ದಾಸೋಹ ಮಾಡಿದರಲ್ಲಿಲ್ಲ
ಭವ ದುಃಖ ಸಂಸಾರೆಂಬುತ ಕಳಿದು ಸನ್ಯಾಸ್ಯಾದರಲ್ಲಿಲ್ಲ
ತವೆ ಮದವೆಂದನ್ನವನು ಉಳಿದು ಅಮೃತ ಸೇವಿಸಿದರಲ್ಲಿಲ್ಲ || 2 ||
ಅಷ್ಟಾಂಗ ಯೋಗಂಗಳಲ್ಲಿ ತಾ ಕಷ್ಟವ ಬಿಟ್ಟರಲ್ಲಿಲ್ಲ
ದೃಷ್ಟಯೆನುತ ತಾ ಮುದ್ರಿಯನಿಟ್ಟು ನೋಡಿದರಲ್ಲಿಲ್ಲ
ದೃಷ್ಟವಾದ ಮಹತ್ವಗಳ ತೋರಿ ಶ್ರೇಷ್ಟ ಎನಿಸಿಕೊಂಡರಲ್ಲಿಲ್ಲ
ನಿಷ್ಟೆಯಿಂದ ಗುಡ್ಡದ ಮಹಾಂತನ ನೆಟ್ಟನೆ ತಿಳಿ ಜನ್ಮಿರಲಿಲ್ಲ || 3 ||
ಹೀಗೆ ಈ ಅವಧೂತರು ಸಮಾಜದಲ್ಲಿನ ಕೊಳೆ ಕಸಗಳನ್ನು ಯಾವ ಮುಲಾಜಿಲ್ಲದೆ ಟೀಕಿಸಿದರು ಮತ್ತು ಅವುಗಳ ಉಚ್ಛಾಟನೆಗಾಗಿ ಟೊಂಕ ಕಟ್ಟಿ ನಿಂತರು. ಮತ ಮೌಢ್ಯಗಳನ್ನು ಇವರಷ್ಟು ಉಗ್ರವಾಗಿ ವಿಡಂಬಿಸಿದವರು ಇನ್ನೊಬ್ಬರಿಲ್ಲ. ಪುರೋಹಿತಶಾಹಿ, ಅಧಿಕಾರಶಾಹಿ, ರಾಜ್ಯಶಾಹಿಗಳನ್ನು ಎದುರು ಹಾಕಿಕೊಂಡು ಜನಸಾಮಾನ್ಯರ ಬದುಕಿನ ಕಾವಲುಗಾರರಾಗಿ ನಿಂತರು. ಅಂತೆಯೇ ಈ ತತ್ವಪದಕಾರರು ಜನಸಾಮಾನ್ಯರ ಸಾಂಸ್ಕೃತಿಕ ನಾಯಕರಾಗಿ, ದೈವಗಳಾಗಿ ಕಂಗೊಳಿಸಿದರು. ತತ್ವಪದಕಾರರು ಮುದ್ದಾಂ ಸಾಹಿತಿಗಳಲ್ಲ. ಕವಿಗಳಾಗಬೇಕೆಂದೂ ಹೊರಟವರಲ್ಲ. ದಿನ ನಿತ್ಯದ ಬದುಕಿನಲ್ಲಿ ಎದುರಾದ ಪ್ರಸಂಗಗಳಿಗೆ ಸ್ಪಂದಿಸುತ್ತ ಆಡಿದ ಮಾತುಗಳೇ ಹಾಡಾಗಿ ಹರಿದದ್ದು ಇದೆ. ಅವರಲ್ಲಿ ಬಹುತೇಕರು ಆಶುಕವಿಗಳು. ಸವಾಲ್ ಜವಾಬ್ ಮಾದರಿಯಲ್ಲಿಯೂ ಇವು ರಚನೆಯಾಗಿವೆ.
ತತ್ವಪದಕಾರರಿಗೆ ಭಾಷಾ ಗಡಿಗಳಿಲ್ಲ. ಅವರು ಸಲೀಸಾಗಿ ಏಕ ಕಾಲಕ್ಕೆ ಹಲವು ಭಾಷೆಗಳನ್ನು ಮೇಳೈಸಿಕೊಂಡು ಎಲ್ಲರನ್ನು ಅಪ್ಪಿಕೊಂಡು ನಡೆಯಬಲ್ಲರು. ಉದಾಹರಣೆಗಾಗಿ ಈ ಪದವನ್ನು ನೋಡಬಹುದು.
ಅಲ್ಲಾ ಯಾರಿಗೂ ತಿಳಿಯೋಣಿಲ್ಲ
ವೇದ ಮುನಿಯೇ ಬಲ್ಲಾ
ಸಬ್ ಘಟ ಪೂರಣ ಮೌಲಾ
ಸಂತವರರ ಖೂಣ ಬಲ್ಲಾ
ಶೇಷಾಧಿಕ ಶಿಣಲೆ ಪರಿ ತೋ
ಪಾಪ್ತ ನಹೀ ತ್ಯಾಲಾ || ಪ ||
ಸಬ ಹಿತ ಕೇಳರಿ ಮಾತಾ
ಸ್ವರೂಪ ಲಾವುನಿ ಚಿತ್ತಾ
ಮೇರಾ ಮೇರಾ ಕಹತ್
ಯಾರಿಗಿ ತಿಳಿಯದ ಮಾತಾ
ಅಂತರ್ ಬಾಹೇರ ವ್ಯಾಪಕ ಝಾಲಾ
ಯೋಗಿ ಮುನಿ ಜನ ಧ್ಯಾಸಾ || 1 ||
ಕನ್ನಡ, ಹಿಂದಿ ಮತ್ತು ಮರಾಠಿ ಮೂರು ಭಾಷೆಗಳ ನೇಯ್ಗೆ ತಾತ್ವಿಕತೆಯ ಸಮನ್ವಯತೆಯಲ್ಲಿಯೂ ವಿಸ್ತರಿಸಿಕೊಂಡಿದೆ. ಕನ್ನಡ, ಉರ್ದು ಮಿಶ್ರಿತ ಹಾಗೂ ಕನ್ನಡ ತೆಲಗು ಮಿಶ್ರಿತ ಪದಗಳು ಸಾಕಷ್ಟು ರಚನೆಯಾಗಿವೆ. ಕಾರಣ ಈ ಸಂತರು ನಿರಂತರ ಸಂಚಾರಿಗಳು. ಅವರು ಪ್ರಾದೇಶಿಕ ಗಡಿಗಳನ್ನು ಮೀರಿ ತಮ್ಮ ಆನುಭಾವಿಕ ಛವಿಯನ್ನು ಬೆಳೆಸಿಕೊಂಡಿದ್ದರು. ಎಲ್ಲೆಲ್ಲಿ ನಿಂತರೋ ಅಲ್ಲಿನ ಜನತೆಯನ್ನು ಗಮನದಲ್ಲಿಟ್ಟು ಬರೆದರು. ಇವರ ಬರೆಹಕ್ಕೆ ಎರಡು ಪ್ರಧಾನ ಉದ್ದೇಶಗಳಿದ್ದಂತೆ ತೋರುತ್ತದೆ. ಮೊದಲನೆಯದು ತನ್ನ ತಾನರಿವ ಪರಿ. ಇನ್ನೊಂದು ತನ್ನ ಸುತ್ತಲಿನ ಜನಮಾನಸದ ಅರಿವನ್ನು ವಿಸ್ತರಿಸುವುದು. ಹೀಗೆಂದೆ ತತ್ವಪದಗಳು ಹಾಡು ಪಠ್ಯಗಳು. ಅಕ್ಷರಸ್ಥರಲ್ಲದ ಸಮುದಾಯಗಳಿಗೂ ಸಲೀಸಾಗಿ ತಲುಪಿ ಅವರ ಪ್ರಜ್ಞೆಯನ್ನು ಬಡಿದೆಬ್ಬಿಸಬೇಕು. ತತ್ವಪದಗಳು ರಚನೆಯಾಗುತ್ತಿದ್ದಂತೆ ಭಜನಾ ಗೋಷ್ಠಿಗಳಲ್ಲಿ ಚಲಿಸತೊಡಗುತ್ತವೆ. ಭಜನೆ ಎಂಬುದು ಸಮುದಾಯಗಳ ಸಹ ಭಾಗಿದಾರಿಕೆ. ಎಲ್ಲರೂ ಸೇರಿ ಎಲ್ಲರೊಂದಿಗೆ ಹಾಡಬೇಕು. ಹಾಡುವುದು ಇಲ್ಲಿ ಪ್ರದರ್ಶನ ಕಲೆಯಲ್ಲ. ಅದೊಂದು ವ್ರತಾಚರಣೆ. ಹಾಡುತ್ತ ಹಾಡುತ್ತ ಅರಿವು ಮೂಡಬೇಕು. ಶಿಷ್ಯ-ಪ್ರಶಿಷ್ಯ ಬಳಗ ಬೆಳ್ಳಂಬೆಳಗಿನವರೆಗೆ ಪದ ನದಿಯನ್ನು ಹರಿಸತೊಡಗಿದರೆ ಅಲ್ಲಿ ತತ್ವಾನುಸಂಧಾನವು ನಾದ ಲಹರಿಯಾಗಿ ಹರಿಯತೊಡಗುತ್ತದೆ. ಒಂದರ್ಥದಲ್ಲಿ ಭಜನೆ ಮೇಳಗಳೆಂದರೆ ಅವು ಜನಮಾನಸವನ್ನು ಊಧ್ರ್ವಮುಖವಾಗಿಸುವ ಟಂಕಶಾಲೆಗಳು. ಹೊರಗಿನ ನಾದ ಗುಂಫನ ಒಳಗೆ ಬೆಳಗುತ್ತದೆ. ಒಳಗಿನ ಬೆಳಕು ಬಯಲಿನ ಅನಂತತೆಯಲ್ಲಿ ಚೆಲ್ಲುವರೆಯುತ್ತದೆ. ಅನೇಕ ತತ್ವಪದಕಾರರು ಸ್ವಯಂ ಹಾಡುಗಾರರು ಆಗಿದ್ದರು. ದಟ್ಟವಾದ ಸಂಗೀತ ಜ್ಞಾನವನ್ನು ಮೈಗೂಡಿಸಿಕೊಂಡವರು ಇದ್ದರು. ಏನಿದ್ದರೂ ಅವರದು ಸಕಲ ಜೀವಾತ್ಮರ ಲೇಸಿನ ಮಾರ್ಗ. ಮನುಷ್ಯ ನಿರ್ಮಿತ ಎಲ್ಲ ಕಿಲ್ಬಿಷಗಳನ್ನು ಕಳೆದುಕೊಂಡು ಶುದ್ಧಾಂತಃಕರಣದಲ್ಲಿ ನೆಲೆ ನಿಂತು ಮನ ಉನ್ಮನವಾಗಬೇಕು. ಒಳ ಹೊರಗು ಒಂದಾಗಿ ಎಲ್ಲ ತತ್ವದ ಎಲ್ಲೆ ಮೀರಿ ಹೋಗುವುದೇ ಪರಮ ಗುರಿ ಎಂದಿದ್ದಾರೆ.
ವಿಶ್ವಾತ್ಮಕತೆಯಲ್ಲಿ ವಿರಮಿಸುವ ಈ ತತ್ವಪದಗಳು ಜನಸಾಮಾನ್ಯರ ಹೊತ್ತಿಗೆ ಒದಗಿ ಬಂದ ದಿವ್ಯೌಷಧಗಳಂತೆ ಕೆಲಸ ಮಾಡಿವೆ. ಮನುಷ್ಯರು ಒಳ ಹೊರಗಿನ ಕೇಡುಗಳನ್ನು ನಿವಾರಿಸಿಕೊಂಡು ಬದುಕು ಪೂರೈಸಿಕೊಳ್ಳುವ ಪರಿಯನ್ನು ಅವು ಯಾವ ಸಂಕೀರ್ಣತೆ ಇಲ್ಲದೆ ಸರಳವಾಗಿ ತಿಳಿಸಿಕೊಡುತ್ತಿವೆ. ಇವುಗಳ ವೈಶಿಷ್ಠ್ಯವೆಂದರೆ 17ನೇ ಶತಮಾನದಿಂದ ಹೆದ್ದೊರೆಯಾಗಿ ಈ ತತ್ವಪದ ಪರಂಪರೆಯು ಈ ಕ್ಷಣಕ್ಕೂ ಹರಿಗಡಿಯದಂತೆ ಪ್ರವಹಿಸಿಕೊಂಡು ಬರುತ್ತಿದೆ. ತತ್ವಪದಕಾರರ ಗುರು ಗದ್ದುಗೆಗಳಲ್ಲಿ ಶಿಷ್ಟ ಲೋಕದ ಹಂಗಿಲ್ಲದ ಅನುಸಂಧಾನಿಗಳು ಈ ಕ್ಷಣಕ್ಕೂ ಪದಗಳನ್ನು ಬರೆಯುತ್ತಿದ್ದಾರೆ ಮತ್ತು ಬದುಕುತ್ತಿದ್ದಾರೆ. ಕನ್ನಡದಲ್ಲಿ ಇಷ್ಟು ಅಖಂಡವಾಗಿ, ವೈವಿಧ್ಯಪೂರ್ಣವಾಗಿ ಪ್ರಯೋಗಗೊಂಡ ಸಾಹಿತ್ಯ ಪ್ರಕಾರ ಇನ್ನೊಂದಿಲ್ಲ. ಆದರೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅದಕ್ಕೆ ದಕ್ಕಬೇಕಾದ ಸ್ಥಾನ ಕಲ್ಪಿಸಿಲ್ಲ ಎಂಬುದು ತುಂಬಾ ಸೋಜಿಗ ಎನಿಸುತ್ತದೆ. ಅದಕ್ಕೆ ಕಾರಣ ಏನೇ ಇರಲಿ, ಅದು ಚರಿತ್ರೆಯನ್ನು ಊನಗೊಳಿಸಿದೆ ಎಂಬುದಂತೂ ಸುಳ್ಳಲ್ಲ.
Comments 10
ಮಲ್ಲಿಕಾರ್ಜುನ ಕಡಕೋಳ
Sep 8, 2023ತತ್ವಪದಕಾರರ ಸಾಮರಸ್ಯ ಲೋಕ-
ಬಾಳಿ ಮೀನಾಕ್ಷಿ ಅವರ ಬಯಲು ಬರಹ ಚೆನ್ನಾಗಿದೆ.
VIJAYAKUMAR KAMMAR
Sep 8, 2023ತತ್ವಪದಕಾರರ ಸಾಮರಸ್ಯ ಲೋಕ- ಸುಂದರ ಚಿತ್ರಣ. ಅದ್ಭುತ ನಿರೂಪಣೆ. 🙏🙏
ಬಸಲಿಂಗಪ್ಪ ದೇವರಗುಡ್ಡ
Sep 11, 2023ಮನುಷ್ಯ ನಿರ್ಮಿತ ಎಲ್ಲ ಬೇಲಿ ಭ್ರಮೆಗಳನ್ನು, ಲೌಕಿಕ ರಚನೆಗಳನ್ನು ಮೀರಿ ಸುಮ್ಮನೆ ಸಹಜವಾಗಿ ಬಾಳಿ ಬಯಲಾಗುವ ಪರಿಯನ್ನು ಎಲ್ಲ ತತ್ವಪದಕಾರರು ಸರಳವಾಗಿ ತೋರಿಸಿಕೊಟ್ಟಿದ್ದಾರೆ… ಲೇಖನ ಬಲು ಸೊಗಸಾಗಿದೆ ತಾಯಿ🙏🏽
ಈಶ್ವರಯ್ಯ ಹಿರೆಕೆರೂರು
Sep 13, 2023ಸತ್ಯುಳ್ಳ ಶರಣರು ಪೀರ ಪೈಗಂಬರರು, ಸತ್ಯವ ತೋರಿದರು- ಇದು ನಮ್ಮ ಭಾರತ, ಸೌಹಾರ್ದ ಬದುಕಿನ ಭಾರತ! ತತ್ವಪದಕಾರರು ಶರಣರಲ್ಲದೆ ಬೇರಾರೂ ಅಲ್ಲಾ ಅನಿಸುತ್ತದೆ. ‘ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಜಾತಿ, ಮತ, ಪಂಥಗಳ ಅನುಯಾಯಿಗಳು ಪದಗಳನ್ನು ರಚಿಸಿದ್ದಾರೆ.’ ಎನ್ನುವ ಮಾತು ಹಾಲುಂಡಂತಿದೆ.
ಶೋಭಾದೇವಿ ಅಮರಶೆಟ್ಟಿ, ಧಾರವಾಡ
Sep 17, 2023ಮೀನಾಕ್ಷಿ ಬಾಳಿಯವರು ತತ್ವಪದಕಾರರ ಆಶಯಗಳನ್ನು ಅತ್ಯಂತ ಸರಳವಾಗಿ ಮನಮುಟ್ಟುವಂತೆ ವಿವರಿಸಿದ್ದಾರೆ 👌👌👍🏻👍🏻🙏
ಡಾ. ಮೈತ್ರ ಗದಿಗೆಪ್ಪಗೌಡರ
Sep 17, 2023ನಿಜಕ್ಕೂ ಮನೋಜ್ಞ ಲೇಖನ …ಹೊಟ್ಟೆ ತುಂಬಿತು ಓದಿ!
Sharanu
Sep 18, 2023ಬಯಲು ವೆಬ್ ಸೈಟ್ ನಲ್ಲಿ ಬಹಳ ಉಪಯುಕ್ತ ಲೇಖನಗಳು ಇವೆ, ಇದರಿಂದ ಬಹಳಷ್ಟು ಮಾಹಿತಿ ಸಿಗುತ್ತಿದೆ.
Abhishekh Solapur
Sep 18, 2023Bahuth badiya, super madam 🫡
ಶಾಂತಾ ಬಾಳಪ್ಪ
Sep 26, 2023ಎಂಥ ಚಂದದ ಲೇಖನ ಬರೆದಿದ್ದೀರಿ ಅಕ್ಕಾ. ತತ್ವಪದಕಾರರು ನಮ್ಮ ಆಜೂಬಾಜೂ ಇರುವ ಸತ್ವ ಸಾಧಕರು. ಅವರ ಬದುಕು ಎಷ್ಟು ಸರಳ, ನೇರ ಹಾಗೂ ಶುದ್ಧ ಎನ್ನುವುದನ್ನು ಕಣ್ಣಾರೆ ಕಂಡಿದ್ದೇನೆ. ನನ್ನ ಅವ್ವ-ಅಪ್ಪ- ಅಣ್ಣ ಎಲ್ಲರೂ ಗುರು ಮಕ್ಕಳೇ. ಸಂಜೆ ಆದರೆ ಪಡಸಾಲೆಯಲ್ಲಿ ಅವರ ಗಾಯನ ಶುರು. ಬೆಂಗಳೂರಿಗೆ ಬಂದು ಸೇರಿದ ನಾನು ಇವನ್ನೆಲ್ಲಾ ತುಂಬಾ ಮಿಸ್ ಮಾಡ್ಕೋತಾ ಇದೀನಿ.
ಮಹಾದೇವಪ್ಪ ಕವಳಿ
Sep 26, 2023ಕೋಮು ಸೌಹಾರ್ದದ ಭಾರತಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದು ಸಿಗಲಿಕ್ಕಿಲ್ಲ. ಸಾಮರಸ್ಯದ ಹೆಣಿಗೆಯಲ್ಲಿರುವ ಭಾರತೀಯ ಮನಸ್ಸು ಹೀಗೆಯೇ ಉಳಿಯಲೆಂದು ಅಡಿಗಡಿಗೆ ಆಶಿಸುವಂತಾಯಿತು. Beautiful writeup.