
ಕರ್ತಾರನ ಕಮ್ಮಟ- ಭಾಗ 3
ಆ ಬೆಳಗಿನ ಬೆಳ್ಳಿಚುಕ್ಕಿ ಮೂಡುವ ಹೊತ್ತಿಗೆ ಅಲ್ಲಮ-ಸಿದ್ಧರಾಮರು ಎದ್ದು ಕಲ್ಯಾಣದತ್ತ ಹೊರಟರು. ದಾರಿಯ ದಣಿವಿಗೆ, ಪ್ರಭುಗಳ ಕಾಲ್ನಡಿಗೆಯ ಆಯಾಸಕ್ಕೆ ಆಸರೆ ಆದೀತೆಂದು ಸಿದ್ಧರಾಮರು ತಮಗೆ ಕದಂಬ ರಾಜ್ಯದ ರಾಜರು ಕೊಡಮಾಡಿದ್ದ ಕುದುರೆಯೊಂದನ್ನು ಹೊಡೆದುಕೊಂಡು ಬಂದರು. ಜೀನವ ಹಾಕಿ, ಲಗಾಮು ಕಟ್ಟಿ ಸಿದ್ಧಗೊಂಡಿದ್ದ ಆ ಬಿಳಿಕುದುರೆಯನ್ನು ಹತ್ತಲು ಎಷ್ಟು ಕೇಳಿದರೂ ಅಲ್ಲಮಪ್ರಭು ಒಪ್ಪಲಿಲ್ಲ. ಹಾಗೆಯೇ ನಡೆಯುತ್ತಾ… ಕುದುರೆಯ ಮೂಗುದಾರದ ಕುಣಿಕೆಯನ್ನು ಎಡಗೈಯಲ್ಲಿ ಹಿಡಿದುಕೊಂಡು ಸಿದ್ದರಾಮರು ಹಿಂದೆಹಿಂದೆ ಅವರ ಮಾತುಗಳಿಗೆ ಹೂಂ ಎನ್ನುತ್ತಾ ಹೊರಟಿದ್ದರೆ… ಮುಂದೆ ಪ್ರಭುದೇವರು ಅರಿವಿನ ವಿಸ್ತಾರದ ಬಯಲು ಹೊಗುವವರಂತೆ ಬೀಸು ಹೆಜ್ಜೆ ಹಾಕುತ್ತಾ ನಡೆದಿದ್ದರು.
ರಾತ್ರೆಗೆ ಉಳಿಸಿದ್ದ ಮಾತುಗಳಿಗೆ ಜೀವಬಂದಂತಾಗಿ ದಾರಿಯುದ್ದಕ್ಕೂ ಇಬ್ಬರೂ ಮಾತಾಡಿಕೊಳ್ಳುತ್ತಲೇ ನಡೆದರು. ಪ್ರಭುವಿನ ಮಾತುಗಳ ಕೇಳುತ್ತಿದ್ದರೆ ಸ್ಥಗಿತವಾಗಿದ್ದ ಬದುಕಿನ ಗುಡ್ಡಕ್ಕೆ ಚಲನೆ ಬಂದಂತಾಗಿತ್ತು. ರಾಮಾ ಸಿದ್ಧರಾಮಾ ಎಂದು ಮಾತಿಗೊಮ್ಮೊಮ್ಮೆ ವಿರಾಮಕೊಟ್ಟು ನೋಡುತ್ತಿದ್ದ ಅಲ್ಲಮರ ಕಣ್ಣೋಟದಲ್ಲಿ ಅರಿವಿನ ಬೆಳಕು ಮಿಂಚುತ್ತಿತ್ತು. ಆದ್ಯರ ಸಂಕೀರ್ತನೆಗಳ ಉಲ್ಲೇಖಿಸುತ್ತಾ ಪೂರ್ವದ ಶಾಸ್ತ್ರ ಪುರಾಣಗಳ ತುದಿ ಹಿಡಿದು ಮೊದಲೆಂಬ ಆರಂಭದ ಅರಿವಿಗೆ ಬರುವ ಮಾತುಗಳನ್ನು ಮನಸ್ಸಿಗೆ ನಾಟುವಂತೆ ಅವರಾಡುತ್ತಿದ್ದರು.
ಮಣ್ಣದಿಬ್ಬದ ಮೇಲೆ ನಿಂತು ದೂರದಲ್ಲಿ ಕಾಣುವ ಕಲ್ಯಾಣವ ಕಂಡರು. ಒಳಗಿನ ಕಲ್ಯಾಣವೇ ಯಥಾವತ್ ಹೊರಗೆ ಕಾಣುತ್ತಿರುವ ಸೋಜಿಗದ ಹಾಗೆ ಅರಮನೆ ಮುಂದೊಂದು ಮಹಾಮನೆ ಕಂಡು ಸಂಭ್ರಮಿಸಿದರು. ಇಲ್ಲಿಯವರೆಗೂ ಹಿಂಬಾಲಕನಂತೆ ತಲೆಯನ್ನು ನೆಲದಲ್ಲಿಟ್ಟು ಬರುತ್ತಿದ್ದ ಕುದುರೆಯು ಚಂಗನೆ ಕತ್ತೆತ್ತಿ ಕಲ್ಯಾಣವ ಕಂಡು ಬಾಲವಲ್ಲಾಡಿಸುತ್ತಾ ಠೇಂಕರಿಸಿತೊಮ್ಮೆ… ಕೈಕೊಸರಿಕೊಳ್ಳುತ್ತಾ ಮುನ್ನುಗ್ಗುವಂತೆ ಚಿನ್ನಾಟವಾಡತೊಡಗಿತು.
“ಇದೇನು ಶಿವಯೋಗಿ..? ಈತನಕ ಹಿಂಬಾಲಿಸುತ್ತಿದ್ದ ಕುದುರೆ ಈಗ ಕೆನೆಯುತ್ತಿದೆಯಲ್ಲಾ..!”
“ನನಗೂ ಸೋಜಿಗದಂತೆ ಕಾಣುತ್ತಿದೆ ಪ್ರಭುವೇ..!”
“ಇದರಲ್ಲಿ ಸೋಜಿಗವೇನು ಬಂತು? ಅದು ಹುಟ್ಟಿದ ಜಾಗವಿದ್ದಿರಬಹುದು ಈ ಕಲ್ಯಾಣ.”
“ಇಲ್ಲ ಪ್ರಭು, ಈ ಕುದುರೆಯನ್ನು ನನಗೆ ದಾನವಾಗಿ ಕೊಟ್ಟವರು ಕದಂಬ ರಾಜರು… ಹಾಗಾಗಿ ಇದು ಸೊಗಲದಿಂದ ಅತ್ತಲ ಸೀಮೆಯ ತಳಿ. ಅಗಾ ನೋಡಿ ನೆಲದಲ್ಲಿ ಮೂಸುತ್ತಿದೆ. ಗಾಳಿಯಲ್ಲಿ ಏನೋ ಹುಡುಕುತ್ತಿದೆ. ಅದರ ಮೈ ನೋಡಿರಿ ಪ್ರಭುವೇ ಉಲ್ಲಸಿತವಾಗಿ ಅದುರಿಸುತ್ತಿದೆ.”
“ಸಿದ್ಧರಾಮ, ಅದು ನಮ್ಮ ಮಾತುಗಳಲ್ಲಿ ಬಂದ ಕಲ್ಯಾಣದ ವರ್ಣನೆಗಳನ್ನು ಕೇಳಿದೆ. ಅದಕಾಗಿ ಅದೂ ಕೂಡ ನಮ್ಮಂತೆಯೇ ಬಸವಣ್ಣನ ಮತ್ತು ಶರಣರ ನಾಡನ್ನು ಕಂಡು ಖುಷಿಗೊಂಡಿದೆ. ಅದರ ಕಣ್ಣಿ ಬಿಚ್ಚಿಬಿಡು ಎತ್ತ ಹೋಗುವುದೋ ನೋಡೋಣ…”
“ಹಾಗೇ ಆಗಲಿ ಪ್ರಭುದೇವಾ…” ಎಂದೆನುತ್ತಾ ಬೆನ್ನ ಮೇಲಿನ ಜೀನವ ತೆಗೆದು, ಮುಖಕ್ಕೆ ಹಾಕಿದ್ದ ಕಲ್ಲಿಯ ತೆಗೆದು, ಲಗಾಮು ಬಿಚ್ಚಿ ಕೈಬಿಟ್ಟರು ನೋಡಾ… ಕುದುರೆಯ ಜೀಟಿಗ್ಗಾಲು ಕೊಟ್ಟು ಪುಟನೆಗೆದು ಮಹಾಮನೆಯತ್ತ ಓಡಿತು. ಇಬ್ಬರ ಕಂಗಳಲ್ಲೂ ಕೌತುಕವಿತ್ತು. ಅದು ಓಡುತ್ತೋಡುತ್ತಾ ಅದರ ಹಿಂದೆಹಿಂದೆ ಅಲ್ಲಮ ಸಿದ್ಧರಾಮರು ನಡೆದು ಬಂದರು. ಆ ಕುದುರೆಯು ಒಬ್ಬೊಬ್ಬ ಶರಣರ ಮನೆಯ ಮುಂದೆಯೂ ಓಡಾಡಿ ಕಟ್ಟಕಡೆಯದಾಗಿ ಮಹಾಮನೆಯ ಮುಂದಿನ ಕಲ್ಯಾಣಿಗೆ ಬಂದು ನಿಂತಿತು.
“ನೋಡಿದೆಯಾ ಸಿದ್ಧರಾಮ.. ನಾವು ದಾರಿಯುದ್ದಕ್ಕೂ ಮಾತಾಡಿದ್ದ ಕಲ್ಯಾಣವನ್ನೇ ಆ ಕುದುರೆಯ ಕಣ್ಗಳೂ ಕಾಣುತ್ತಿವೆ. ಅದೋ.. ನೋಡಲ್ಲಿ ಆ ಅಶ್ವವು ಶರಣರು ಉಂಡು ಹಾಕಿದ ಎಂಜಲೆಲೆಯ ತೊಟ್ಟಿಯ ಮೂಸುತ್ತಿದೆ. ಆಹಾ ಅಲ್ಲೊಂದು ಸೋಜಿಗ ಕುಳಿತಿದೆ ನೋಡಾ… ಗುಪ್ತವಾಗಿ.. ಮಲುಹಣನಂತೆ ಕುಳಿತಿದ್ದಾನಲ್ಲ…”
“ಯಾರ ಕಂಡು ಇಂತೆಂದಿರಿ ಪ್ರಭುದೇವಾ…”
“ತೋರುವೆನಿರು ಸೋಜಿಗವ.. ಭಾವವಿಲಾಸದ ಮಲುಹಣ ತನ್ನ ಪ್ರೇಮಕ್ಕಾಗಿ ಮಲುಹಣಿಯ ಎಂಜಲೆಲೆಯಲ್ಲಿ ಕಾದುಕುಳಿತಿದ್ದು ಪ್ರೇಮ ನಿವೇದಿಸಿಕೊಂಡಂತೆ ಗುಪ್ತವಾಗಿ ಕುಳಿತಿದ್ದಾನೊಬ್ಬ ಗುಪ್ತಭಕ್ತ. ಮಲುಹಣನ ಲೀಲಾವಿಲಾಸದಂತೆ ಇಲ್ಲೊಂದು ವಿಲಾಸ ಅಡಗಿರುವಾಗ ಆ ಬಸವನಿಗೆ ಇದು ತಿಳಿಯದಿರುವುದನು ಏನೆಂಬೆ..?”
ಸಿದ್ಧರಾಮರಿಗೆ ಅಲ್ಲಮರ ಮಾತಿನ ಅರ್ಥವು ಗ್ರಹಿಕೆಗೆ ಸಿಗಲಿಲ್ಲವಾದರೂ.. ಆ ಮಲುಹಣನ ಕತೆ ಕೇಳಬೇಕೆಂಬ ಆಸೆಯು ಮಾತಾಗಿ ನಾಲಿಗೆ ತುದಿಯಲ್ಲಿ ಬರುವಾಗಲೇ ಮಹಾಮನೆಯ ಪರಿಚಾರಕನೊಬ್ಬ ಬಿಂದಿಗೆ ಹಿಡಿದು ನೀರು ತರಲೆಂದು ಕಲ್ಯಾಣಿಯತ್ತ ಬಂದ. ಬಸವಣ್ಣ ಪೂಜೆಯಲ್ಲಿ ನಿರತರಾಗಿದ್ದಾರೆಂದು ಆತ ಹೇಳಿದ್ದೆ ತಡ ಅಲ್ಲಮಪ್ರಭು ಮಿಸುಕದಂತೆ ಅಲ್ಲಿಯೇ ಕಟ್ಟೆಯ ಮೇಲೇರಿ ಕುಳಿತುಬಿಟ್ಟರು. ಸೊನ್ನಲಿಗೆಯಿಂದ ಜೊತೆಯಾಗಿ ಬಂದ ಸಿದ್ಧರಾಮರಿಗೆ ಈಗ ಮತ್ತೊಂದು ಚಮತ್ಕಾರವೇ ನಡೆಯುತ್ತದೆ. ಈ ಚಮತ್ಕಾರಕ್ಕೆ ತಾನು ಸಾಕ್ಷಿಯಾಗುತ್ತೇನೆಂಬ ಕೌತುಕದಲ್ಲಿಯೇ ನಿಂತರು. ಬಸವಣ್ಣ ಬಂದು ಕರೆಯುವವರೆಗೂ ತಾನು ಬರುವುದಿಲ್ಲ ಎಂಬ ಹಠದೊಳಗೂ ಅಲ್ಲಮರು ಲೀಲಾಪುರುಷನಂತೆ ಕಂಡರು. ಒಮ್ಮೆ ಎಳೆಮಗುವಿನಂತೆ, ಮತ್ತೊಮ್ಮೆ ಸಾಕ್ಷಾತ್ ಶಿವನಂತೆ, ಇನ್ನೊಮ್ಮೆ ವೃದ್ಧನಂತೆ, ಹುಚ್ಚನಂತೆ, ದಿವೀನ ಮುಖಮುದ್ರೆಯ ಗಂಧರ್ವನಂತೆ ಕಾಣತೊಡಗಿದರು. ಇವರ ಹಠದ ಸಾಧನೆಯಲ್ಲಿ ನಾನು ತಾನೆಂಬ ಹಮ್ಮಿನ ಕೋಟೆಯನ್ನು ಒಡೆದು ಹಾಕಿ ಈ ಬಯಲಿನೊಳಗೆ ತಾನೊಂದು ಎಕ್ಕೆಯ ಎಲೆಯಂತೆ ಜೀವಿಸಬೇಕೆಂಬಷ್ಟು ಮೆತ್ತಗಾಗಿಸುವ ಅನುವು ತನುವು ತುಂಬಿತ್ತು. ಮಾತಿಗೆ ಮಾತು, ವಾದಕ್ಕೆ ವಾದ ಹುಟ್ಟಿದಾಗಲೇ ತತ್ವಕ್ಕೆ ಹೊಳಪು ಬರುವುದಲ್ಲಾ ಎನಿಸಿತು ಸಿದ್ಧರಾಮರಿಗೆ. ಚನ್ನಬಸವಣ್ಣ ಬಂದರು, ಸಾಕ್ಷಾತ್ ಬಸವಣ್ಣನೇ ನಡೆದು ಎದುರು ಬಂದಾಗ ಎರಡೂ ಕೈಗಳು ತನ್ನತಾನೇ ಜೋಡಿಸಿ ಶರಣು ಹೇಳಬೇಕೆನಿಸಿತು.
“ಬಸವಣ್ಣಾ.. ಕಟ್ಟುವ ಕಲ್ಯಾಣದಲ್ಲಿ ಎಲ್ಲೆಲ್ಲೂ ಒಂದೊಂದು ಅಂಶ ಬಯಲೊಳಗೆ ಬಯಲಾಗಿ ಕಂಡರೂ ಕಾಣದಂತೆ ಕುಳಿತಿದೆ. ಅದನ್ನು ಬಲ್ಲೆಯಾ.. ಇದೋ ಈ ಅಶ್ವವು ಅಂಥದ್ದೊಂದು ಕುರುಹನ್ನು ಹುಡುಕಿಕೊಟ್ಟಿದೆ” ಎಂದು ತಿಪ್ಪೆಯೊಳು ಅವಿತಿದ್ದ ಶರಣರನ್ನು ತೆರೆದು ತೋರಿದರು. ಸಿದ್ದರಾಮನ ಅರಿವಿಗೂ ಬಾರದ ಕುರುಹು ತಾನು ಸಾಕಿದ್ದ ಕುದುರೆಗೆ ತಿಳಿಯಿತಲ್ಲಾ ಎಂದುಕೊಳ್ಳುವಾಗಲೇ.. ಅಲ್ಲಮರ ತುಟಿಯೊಳಗೆ ನಗೆಮೂಡಿ “ಅಯ್ಯಾ ಸಿದ್ಧರಾಮ, ನಿನ್ನ ಮನದೊಳಗೆ ಮೂಡಿರುವ ಚಿಂತೆಯನು ನಾನು ಬಲ್ಲೆನಯ್ಯಾ.. ನೀನು ಕಾಣುವುದೇನೂ ಬೇಡ, ಭಕ್ತಿ ಎನ್ನುವುದು ಆಡಂಬರವಲ್ಲ.. ಈ ಅಖಂಡದೊಳಗೆ ಒಬ್ಬನಾಗಿ ಕಣ್ತೆರೆದು ನೋಡು ಲೋಕದ ಅರಿವು ನಿನ್ನೊಳಗೆ ಬರುತ್ತದೆ. ಹರಿಯುವ ನೀರು, ಬೀಸುವ ಗಾಳಿ, ಸುಡುವ ಬೆಂಕಿ, ಸುತ್ತಲಿನ ಇರುವೆ ಎಂಬತ್ತನಾಲ್ಕು ಲಕ್ಷ ಜೀವರಾಶಿಗಳಲ್ಲೂ ಗುಹೇಶ್ವರನ ಇರುವ ಕಾಣಬೇಕು. ಬಾರಯ್ಯ ಬಾ ಬಾ..” ಎಂದು ಬಲಗೈಯಲ್ಲಿ ಸಿದ್ಧರಾಮರನ್ನೂ ಎಡಗೈಯಲ್ಲಿ ಮರುಳಶಂಕರರನ್ನು ಕರೆದುಕೊಂಡು ಮಹಾಮನೆಯ ಹೊಕ್ಕರು.
ಆ ದಿನ ಇಡೀ ಕಲ್ಯಾಣಕ್ಕೆ ಜೀವಚೈತನ್ಯ ಬಂದಂತಾಗಿ ಹೋಗಿಬರುವ ಪ್ರತಿಯೊಬ್ಬರೂ ಈ ತ್ರಿಮೂರ್ತಿಗಳನ್ನು ವಿಶಿಷ್ಟವಾಗಿ ನೋಡುತ್ತಿದ್ದರು. ಚನ್ನಬಸವಣ್ಣನವರಿಂದ ದೀಕ್ಷೆಯಾಯ್ತಾಗಿ ಸಿದ್ಧರಾಮರ ಮನಸ್ಸು ಎದೆಯ ಮೇಲೆ ನೆಲೆಗೊಂಡ ಮಲ್ಲಿನಾಥನನ್ನು ಮತ್ತೆಮತ್ತೆ ಮುಟ್ಟಿಕೊಳ್ಳುತ್ತಾ.. ಅಲ್ಲೆಲ್ಲೋ ಇದ್ದಾನೆಂದು ಬಗೆಯುವ ಕಪಿಲಸಿದ್ಧ ಮಲ್ಲಿನಾಥ ಇಲ್ಲೇ ಇದ್ದಾನಲ್ಲ ಎಂದುಕೊಳ್ಳುತ್ತಾ ಹಗುರಗೊಂಡರು. ಅಂದಿನ ಅನುಭವ ಮಂಟಪದಲ್ಲಿ ಮೌನಿಯಾಗಿ ಕುಳಿತಿದ್ದು ಶರಣರ ಅನುಭಾವಿಕ ಸಂಗಸುಖವನ್ನು ಅನುಭವಿಸಿದರು. ಒಬ್ಬೊಬ್ಬ ಶರಣನೂ ತನುವ ಸಂತೈಸಿಕೊಳ್ಳುವ ಯೋಗಿಯಂತೆ ಕಂಡರು.
ಆ ರಾತ್ರಿ ಸಿದ್ಧರಾಮರಿಗೆ ಎಷ್ಟೋ ಹೊತ್ತಿನವರೆಗೆ ನಿದ್ದೆಯೇ ಬಾರದಾಯ್ತು. ವಿಚಾರವೆಂಬ ಜ್ಯೋತಿಯ ಬೆಳಕು ಎಲ್ಲೆಲ್ಲೂ.. ಕಲ್ಯಾಣವೆಂಬ ದೇಹದ ಪ್ರಣತೆಯೊಳಗೂ.. ಹೊರಗೂ ಬೆಳಕಾಡುತ್ತಿರುವ ಹಾಗೆ ಭಾಸವಾಯ್ತು. ಶರಣನ ಜಾಗೃತಿಯೇ ಶಿವರಾತ್ರಿ ಕಂಡಾ ಮನವೇ ತಮಗೆ ತಾವೇ ಹೇಳಿಕೊಂಡರು. ಮಹಾಮನೆಯ ದೀಪ ಮಂದವಾಗಿ ಬೆಳಕು ಚಲ್ಲಿತ್ತು, ಎತ್ತರದ ಕಟ್ಟೆಯ ಮೇಲೆ ಮಲಗಿದ್ದ ಪ್ರಭುದೇವರ ಮುಖದಲ್ಲಿ ಪ್ರಸನ್ನಚಿತ್ತತೆ ಮನೆಮಾಡಿರುವುದು ಕಂಡರು.
ನಿದ್ದೆಬಾರದ ಒದ್ದಾಟದಲ್ಲಿ ಅರೆಗತ್ತಲೊಂದು ತನ್ನನ್ನಾವರಿಸುತ್ತಾ ದೂರದ ಎಲ್ಲೋ ಆಳಾಳ ಪಾತಾಳದಲ್ಲೊಂದು ದಾರಿಯಲ್ಲಿ ನಡೆಯುತ್ತಿರಲಾಗಿ ಅಲ್ಲಿ ಕತ್ತಲೇ ತುಂಬಿತ್ತು. ತನ್ನ ಬಿಟ್ಟರೆ ಇಲ್ಲಿ ಮತ್ತಾರು ಇಲ್ಲ ಎಂಬಂತೆ ಧಡಧಡ ಹೆಜ್ಜೆಹಾಕುತ್ತಾ ಕತ್ತಲನ್ನು ಸೀಳಿಕೊಂಡು ಬೆಳಕಿನ ಪುಂಜಗಳಿಂದ ಕಂಗೊಳಿಸುವ ಬೇರಾವುದೋ ಲೋಕ ಕಂಡಂತಾಗಿ ಅತ್ತ ನಡೆದರು. ಆ ಲೋಕವೋ ಕತ್ತಲು ಒಳಗೆ ನುಗ್ಗಿ ಇರುವ ಚೂರು ಬೆಳಕನ್ನು ನುಂಗಿಬಿಟ್ಟೀತೆಂಬ ಭಯದಲ್ಲಿ ತನ್ನ ಸುತ್ತಲೂ ಬೆಳಕಿನ ಪಂಜುಗಳನ್ನು ಕಾವಲಿಗಿಟ್ಟಿತ್ತು. ಹೋಗಹೋಗುತ್ತಿದ್ದಂತೆ ಬೆಳಕಿನ ಪಂಜವೊಂದು ಧುತ್ತನೇ ಜೀವತಳೆದು ಮುಂದೆ ಬಂದಂತಾಗಿ ಬೆಚ್ಚಿದರು.
ಆರು ನೀನು..? ಆರಾರು ನೀನು..?
ನಾನು ಸಿದ್ಧರಾಮ.
ಬರಿಯ ಸಿದ್ಧರಾಮನೇ..!
ಅಲ್ಲಲ್ಲ ನನ್ನನ್ನ ಈ ಲೋಕವು ಶಿವಯೋಗಿ ಎಂದು ಕರೆಯುವುದು.
ಹಾಗಿದ್ದರೆ ನಿನಗಿಲ್ಲಿ ಪ್ರವೇಶವಿಲ್ಲ.
ಹಾಗಂದರೇನು ಅರ್ಥ.. ನಾನು ಬೆಳಕನ್ನು ಬಯಸಿ ಬಂದವನು.
ಇಲ್ಲಿರುವ ಬೆಳಕು ನೀವು ಬಯಸುವ ಹೊರಗಿನ ಬೆಳಕಲ್ಲ.. ಅಂತರಂಗದೊಳಗಿನ ಬೆಳಕು. ಅರಿವಿನ ಬೆಳಕು. ನಾನು ತಾನು ತನ್ನದೆನ್ನುವ ಎಲ್ಲಾ ಅಹಮ್ಮಿನ ಕೋಟೆಗಳನ್ನು ಛಿದ್ರಗೊಳಿಸುವ ಈ ಬೆಳಕನ್ನು ಮುಟ್ಟಲು ನಿನಗೆ ನೀನೇ ದಾರಿಯಾಗಬೇಕು. ಆಗ ನಿನಗಿಲ್ಲಿ ಪ್ರವೇಶ..
ಆ ಬೆಳಕಿನ ಪಂಜವು ಇದ್ದಕ್ಕಿದಂತೆ ಮಾಯವಾಗಿ ಗಾಢವಾದ ಅಂಧಕಾರವೇ ಸುತ್ತಲೂ ನೆಲೆಗೊಂಡಂತಾಗಿ, ಆ ಕತ್ತಲಿನ ಪ್ರಪಾತದ ಆಳಕ್ಕೆ ಜಾರಿಬಿದ್ದಂತಾಗಿ ದಿಢೀರನೇ ಸಿದ್ಧರಾಮರು ಎದ್ದು ಕುಳಿತರು. ಇಡೀ ಮಹಾಮನೆಯ ತಂಬ ನಿಶ್ಚಲವಾಗಿದ್ದ ಮಂದಬೆಳಕು ಈಗ ಆರುವ ಮುನ್ಸೂಚನೆಯಂತೆ ದೀಪದ ಕುಡಿ ಕುಣಿಯತೊಡಗಿತ್ತು. ಏಕಾಂತ ರಾಮಯ್ಯ ಮೂಲೆಯಿಂದೆದ್ದು ಬಂದು ಒಂದು ಹುಟ್ಟಿನಷ್ಟು ಎಣ್ಣೆಯನ್ನು ಪ್ರಣತೆಯಲ್ಲಿ ಹಾಕಿದಾಗ ಚೂರುಚೂರೇ ಮತ್ತೆ ಬೆಳಕು ನಿಶ್ಚಲವಾಯ್ತು. ನಿಮ್ಮ ಶರಣರ ಸಂಗವೇ ಲೇಸೆಂದು ಮನದಲ್ಲಿಯೇ ನೂರುಬಾರಿ ಹೇಳಿದರೂ ಆ ಬೆಳಕಿನ ಪಂಜಿನ ಹಳವಂಡವು ಮತ್ತೆ ಮತ್ತೆ ಕೆಣಕುತ್ತಲೇ ಇತ್ತು.
ಮಳ್ಳಾಮರುದಿನದ ಬೈಗಿಗೆ ಹೊಸಚಲುವೊಂದು ಕಾಣಿಸಿತು. ಆಹಾ ನೋಡಲು ಕಣ್ಣುಗಳಿಗೆ ಸುಗ್ಗಿ. ರಾತ್ರೆಯ ಅನುಭವ ಮಂಟಪದ ಮಾತುಗಳು ತಾವೇ ಎದ್ದು ಕಾಯಕದಲ್ಲಿ ನಿರತವಾದಂತೆ ಕಲ್ಯಾಣವೇ ಎಚ್ಚೆತ್ತ ಚೇತನವಾಗಿತ್ತು. ಜಪತಪ ಪೂಜೆಗಳು ಯಾವ ಲೆಖ್ಖ..? ಅಂಗಾಂಗ ಸಾಮರಸ್ಯದ ಪೂಜಾಫಲ ಸ್ವತಃ ಅನುಭವಕ್ಕೆ ಬರುವಂತೆ ಕಾಣಿಸಿತು. ತಾನು ಬೇರೆ ಕಪಿಲಸಿದ್ಧ ಬೇರೆ ಎಂಬ ಯಾವ ಭಾವವೂ ಆ ದಿನದ ಪೂಜೆಯಲ್ಲಿರಲಿಲ್ಲ. ಇಡೀ ದಿವಸ ಬೆಕ್ಕಸ ಬೆರಗಾಗಿಯೇ ಶರಣರ ಶ್ರದ್ಧೆಯನ್ನು ಕಾಣುತ್ತಾ ತನಗೆ ಈ ಮೊದಲು ಬಸವಣ್ಣನವರ ಬಗ್ಗೆ ಗೊತ್ತಿದ್ದರೂ ಒಮ್ಮೆಯೂ ಬಂದು ಕಾಣಲಿಲ್ಲವಲ್ಲಾ ಎಂದು ನೊಂದುಕೊಂಡರು.
**** **** ****
ಶರಣರ ಸಂಗದಲ್ಲಿ ವಾರೊಪ್ಪತ್ತು ದಿನ ಕಳೆದ ಮೇಲೆ ಕುದುರೆಯು ತಾನೇ ಹುಡುಕಿಕೊಂಡು ಸಿದ್ಧರಾಮರ ಬಳಿಬಂದು ಅವರ ಮೈಗೆ ಮುಖ ಉಜ್ಜಿದಾಗಲೇ ಅವರಿಗೆ ಸೊನ್ನಲಿಗೆಗೆ ಹೋಗಬೇಕೆಂಬುದು ನೆನಪಾಯ್ತು.
“ನಿಜದ ನೆಲೆಯನ್ನು ಅರಿತಾದ ಮೇಲೆ ಕಾಯಕನಿರತನಾಗಬೇಕು ಸಿದ್ಧರ ಸಿದ್ಧರಾಮ ನೀನಿನ್ನು ಹೊರಡು” ಎಂದು ಅಲ್ಲಮರು ಒಡನುಡಿದರು. ಆ ಮಾತು ಶ್ರೀಗಿರಿಯಲ್ಲಿ ಮಲ್ಲಯ್ಯನು ಹೇಳಿದಂತೆಯೇ ಮತ್ತೊಮ್ಮೆ ಕೇಳಿಸಿತು. ದೇಹಕ್ಕಂಟಿದ ಅವಗುಣಗಳನ್ನು ಶಮನ ಮಾಡುವ ಧಾವಂತ ಆ ದಿವಸದಲ್ಲಿದ್ದರೆ ಈ ದಿವಸ ಮನಸಿಗಂಟಿದ ರೋಗವನ್ನು ಕಳೆಯುವ ದಿವ್ಯ ಔಷಧಿಯು ಸಿಕ್ಕಿತ್ತು. ಶರಣರನ್ನು ಬಿಟ್ಟು ಹೋಗಲಾಗದಂತೆ ಮನಸ್ಸು ಚಡಪಡಿಸುತ್ತಿದ್ದರೂ ನಿಜಸುಖದ ಸಕೀಲನ್ನು ತೆರೆದು ತೋರಿದ ಅಲ್ಲಮರಿಗೂ, ಬಸವಣ್ಣನಿಗೂ, ದೀಕ್ಷಾಗುರು ಚನ್ನಬಸವಣ್ಣನಿಗೂ ಶರಣುಶರಣಾರ್ಥಿ ಹೇಳಿದರು. ತಾಯಿ ನೀಲಾಂಬಿಕೆ ದಾರಿಯ ದಣಿವಿಗೆಂದು ಬುತ್ತಿಗಂಟು ತಂದುಕೊಟ್ಟರು… ಒಲ್ಲದ ಮನಸ್ಸಿನಿಂದಲೇ ಸಿದ್ಧರಾಮರು ಸೊನ್ನಲಿಗೆಯತ್ತ ಹೊರಟರು.
ಗಾಳಿಯಂತೆ ಹಗೂರಾಗಿದ್ದ ಸಿದ್ಧರಾಮರು ಬೆನ್ನ ಮೇಲೇರಿ ಕುಳಿತದ್ದೆ ಕುದುರೆಯು ಚಂಗನೇ ಜಿಗಿದು ಗಾಳಿಯಷ್ಟೇ ವೇಗವಾಗಿ ದಾರಿ ಹರದಾರಿ, ಯೋಜನಗಳನ್ನು ದಾಟುತ್ತಲೇ ಓಡಿತು. ಗಿಡಮರಗಳು ಎಡ-ಬಲಕಾಗಿ ಹಿಂದೆ ಸರಿಯುತ್ತಾ ಇರುವುದೆಲ್ಲವೂ ಇದೆ ಆದರೆ ಕಾಣಿಸುವುದು ತುಸುಮಾತ್ರ, ಈ ಅವಸರದ ಜಿಗಿತದಲ್ಲಿ ಇರುವುದರೊಳಗೆ ಸತ್ಯ ಕಂಡುಕೊಳ್ಳಬೇಕಲ್ಲವೇ..! ಗುಡ್ಡವೇರಿ ಗುಡ್ಡವಿಳಿದಾಗ ಆ ಎರಡೂ ಗುಡ್ಡಗಳ ನಡುವಿನ ಹಳ್ಳದಲ್ಲಿ ಯಾರೋ ಅಳುತ್ತಿರುವಂತೆ ಕೇಳಿತು. ಓಡುತ್ತಿದ್ದ ಕುದುರೆಯ ಗಕ್ಕನೇ ನಿಂತಿತು.
ಗಿಡಗಂಟೆಗಳ ನಡುವೆ ಒಬ್ಬ ಗೋಳಾಡುತ್ತಿರುವುದ ಕಂಡವರೇ ಸಿದ್ಧರಾಮರು ಕುದುರೆಯಿಂದಿಳಿದು ಸಿದ್ಧರಾಮರು ಆ ಅಳುವ ಆಗುಂತಕನ ಕಡೆಗೆ ನಡೆದು ಬಂದರು. ಬೋರಲಾಗಿ ಬಿದ್ದು ಮೈಯ ಚರ್ಮವು ಕಿತ್ತುಬರುವ ಹಾಗೆ ಪರಪರಾ ತುರಿಸಿಕೊಳ್ಳುತ್ತಾ ದಶದಿಕ್ಕಿನ ದೇವದೇವರುಗಳಿಗೆಲ್ಲ ಹಿಡಿಶಾಪ ಹಾಕುತ್ತಿದ್ದ. ತುರಿಕೆಯ ಸುಖದಲ್ಲಿ ಕೆರೆದುಕೊಂಡದ್ದು ಹಸಿಗಾಯವಾಗಿ ಮೈಯಿಂದ ಕೀವು ಒಸರುತ್ತಿತ್ತು. ಯಾರೋ ಹಿಂದೆ ಬಂದು ನಿಂತಿದ್ದಾರೆಂದು ತಿಳಿದಿದ್ದೆ ಅಳು ನಿಲ್ಲಿಸಿ ಮುಖ ಮೇಲಕ್ಕೆತ್ತಿ ಹಿಂತಿರುಗಿ ನೋಡಿದ.
“ಓ ಬಂದೆಯಾ.. ಧೂಳಮಾಂಕಾಳಯ್ಯ…”
“ಬೊಮ್ಮಣ್ಣಾ..!”
“ಇದೋ ನೋಡಿಲ್ಲಿ ಹುಣ್ಣುಗಳು.. ಮೈಗಂಟಿಕೊಂಡು ಹಗಲು ರಾತ್ರಿ ಎಂಬುದನ್ನು ಒಂದು ಮಾಡಿ ಗೋಳಾಡಿಸುತ್ತಿವೆ.”
“ಇದೇನಿದು ಹೀಗೆ..? ನೀವು ಕಪಿಲಸಿದ್ಧಾಶ್ರಮಕ್ಕೆ ಬಂದು ತೋರಿಸಿದ್ದರೆ ಈ ಹುಣ್ಣುಗಳು ಈ ತೆರನಾಗಿ ಮೈಗೆ ಅಂಟಿಕೊಳ್ಳುತ್ತಿರಲಿಲ್ಲ. ಒಮ್ಮೆಯಾದರೂ ಬಂದು ಕಾಣಬಾರದಿತ್ತೆ?”
“ಓ ನಿನ್ನನ್ನು ಕಾಣಲು ಬರಲಿಕ್ಕೆ ನಾನು ಯಾರು.. ಒಬ್ಬ ಯಕಃಶ್ಚಿತ್ ಗೌಡನಾಗಿದ್ದೇನೆ. ಅಪ್ಪ ಬದುಕಿದ್ದಾಗ ಇಡೀ ಊರು ಗೌಡನ ಆಳ್ವಿಕೆಯಲ್ಲಿತ್ತು. ಈಗ ಗುಡ್ಡರಿಗೆ ಗೌಡನಕಿಂತ ನೀನು ಮೆಚ್ಚು.”
“ಬೊಮ್ಮಣ್ಣಾ… ನಾನೂ ಈಗ ಯಕಃಶ್ಚಿತ್ತನೇ…”
“ಏನು..? ನೀನು ಯಕಃಶ್ಚಿತ್ತನೇ.. ಈ ಗುಡ್ಡರ ಕಣ್ಣಲ್ಲಿ ದೈವವಾಗಿದ್ದೀಯ, ಪವಾಡಪುರುಷ. ಅಪ್ಪ ಸಾಯೋವರೆಗೂ ನಿನ್ನ ಚಿಂತೆಯಲ್ಲೇ ನೊಂದುಕೊಂಡರು. ನಿನ್ನ ಗೊಡ್ಡ ಭಕ್ತ ಗುಡ್ಡರೋ…”
“ಬೊಮ್ಮಣ್ಣಾ..”
ಬೊಮ್ಮಣ್ಣನು ಕಣ್ಣಲ್ಲಿ ಕೆಂಡ ಕಾರುತ್ತಲೇ ಏಳಲು ಅನುವಾದಾಗ ಮುಗ್ಗರಿಸಿ ಮುಂದಕ್ಕೆ ಬೀಳುವಾಗ ಸಿದ್ಧರಾಮರು ಅವರ ಕೈ ಹಿಡಿದೆತ್ತಿದರು.
“ನನ್ನ ಮುಟ್ಟಬೇಡ ದೂರ ಸರಿಯತ್ತ. ಊರಿಗೆ ಉಪಕಾರಿ ಮನೆಗೆ ಮಾರಿ ನೀನು. ಆ ನಿನ್ನ ಶಿಷ್ಯನೊಬ್ಬನಿದ್ದಾನಲ್ಲ.. ಏನವನ ಹೆಸರು..? ಕಲ್ಲಯ್ಯ.. ನಿನ್ನ ಆಶ್ರಮದ ಪಾರುಪತ್ಯಗಾರನವನು. ಅವನದು ಏನು ಮದ ಅಂತೀಯ.. ನಿನ್ನ ಒಡಹುಟ್ಟಿದ ಅಣ್ಣನೇ ನಿನ್ನ ಆಶ್ರಮದಲ್ಲಿ ಛೀ..ಥೂ ಎನಿಸಿಕೊಳ್ಳುವುದು ನಿನಗೆ ಖುಷಿಯಲ್ಲವೇ…”
“ಬೊಮ್ಮಣ್ಣ ಹೀಗೆ ಹಠಮಾಡುವುದು ಸಲ್ಲದು. ಬಾ ನನ್ನೊಡನೆ ಔಷಧಿ ಮಾಡುತ್ತೇನೆ.”
“ನಿನ್ನ ಆರೈಕೆ ಯಾವನಿಗೆ ಬೇಕು. ಬೇಡ ನಿನ್ನ ಸಹವಾಸ.. ರೋಗ ಎಳೆಯದಿರುವಾಗ ನಿನಗೆ ತೋರಿಸಲು ಬಂದರೆ ನನ್ನನ್ನು ನಾಯಿಯ ಹಾಗೆ ಕಂಡೆ.”
“ಏನು..?”
“ಹೌದು. ಎರಡು ಮೂರು ಬಾರಿ ನಿನ್ನ ಆಶ್ರಮಕೆ ಎಡತಾಕಿದೆ. ಒಮ್ಮೆ ಬಂದಾಗ ಶಿವಯೋಗಿಗಳು ಮಲ್ಲಿನಾಥನ ಪೂಜೆಯಲ್ಲಿದ್ದಾರೆ ಸಂಜೆ ಬನ್ನಿರಿ ಎಂದು ಹೇಳಿದ ಆ ಕಲ್ಲಯ್ಯ. ಸಂಜೆ ಬಂದಾಗಲೂ ಅದೇ ನೆಪ ಹೇಳಿದ. ನಾನು ಸಿಟ್ಟುಗೊಂಡು ಮಲ್ಲಯ್ಯನ ಗುಡಿ ಹೊಕ್ಕು ನೋಡಿದರೆ ನೀನು ಮೈಮರೆತು ಕುಳಿತುಬಿಟ್ಟಿದ್ದೆ. ಮರುದಿನ ಬಂದಾಗ ಹೊರಗೆಲ್ಲೋ ಹೋಗಿದ್ದಾರೆ ಶಿವಯೋಗಿಗಳು ಎಂದ. ಹೀಗೆ ಬಂದಾಗಲೊಮ್ಮೆ ಏನೇನೋ ಸಬೂಬುಗಳನ್ನು ಕೇಳಿಕೇಳಿ ಸಾಕಾಗಿ ಹೋಗಿತ್ತು. ನೀನು ಸಣ್ಣವನಿದ್ದಾಗ ಇದೇ ಹೆಗಲ ಮೇಲೆ ಹೊತ್ತು ತಿರುಗಿದ್ದೇನೋ ಧೂಳಯ್ಯ.. ಮುಂಗಾಲೂರಿ ಒಂದೊಂದೆ ಹೆಜ್ಜೆ ಮುಂದೆ ಅಡಿ ಇಟ್ಟಾಗ ಇಡೀ ಊರಿಗೆ ಸಿಹಿ ಹಂಚಿದ್ದೇನೋ ಧೂಳಯ್ಯ.. ನೀನು ಹೇಳದೆ ಕೇಳದೆ ಶ್ರೀಗರಿಗೆ ಹೋದಾಗ ಬಿಕ್ಕಿಬಿಕ್ಕಿ ಅತ್ತಿದ್ದೆನೋ ಧೂಳಯ್ಯ. ಬೇಡವಯ್ಯ ಇಷ್ಟೊಂದು ಕಠೋರನಾಗಬೇಡ.. ಅಂದು ಮನೆ ಬಿಟ್ಟವನು ಮತ್ತೆ ಮನೆಯ ಕಡೆ ಇಣುಕಲಿಲ್ಲ. ಇಂದು ಹೀಗೆ ಅಬ್ಬೆಪಾರಿಯಾಗಿ ಪಾಪಿಯಂತೆ ಮೈಯಲ್ಲಾ ಹುಣ್ಣುಗಳು ಚಿಗಿತು ಸಾವಿನ ಮನೆ ಬಾಗಿಲಿಗೆ ಬಂದು ನಿಂತರೂ ನಿನ್ನ ಅರಿವಿಗೆ ನಾವು ಬಾರದಾದೆವು.”
“ಬೊಮ್ಮಣ್ಣ.. ಅವನು ಕಠಿಣವಾದ ತಪ-ಜಪಗಳಿಂದ ರೂಪುಗೊಂಡಿದ್ದ ಸಿದ್ಧರಾಮನಾಗಿದ್ದ. ಇಂದು ಮೆದುವಾದ ಶರಣನು ನಾನು ಬಾರಯ್ಯ ನನ್ನೊಡನೆ…”
ಬೊಮ್ಮಣ್ಣನ ಕಣ್ಣಾಲಿಗಳನ್ನು ಕೈಯಾರೆ ಒರೆಸಿದ ಸಿದ್ದರಾಮರು ಅವನನ್ನು ಹಿಡಿದೆತ್ತಿ ಕುದುರೆಯ ಮೇಲೆ ಕುಳ್ಳಿರಿಸಿದರು. ಎಷ್ಟೋ ದಿನದಿಂದ ಯಾರೂ ಮುಟ್ಟಲಾರದ ಸ್ಥಿತಿಯಲ್ಲಿದ್ದ ಅವನ ಕರುಳೊಳಗೆ ಏಕಾಂತದ ತಂತಿ ಮಿಡಿದಂತಾಗಿ ಬೊಮ್ಮಣ್ಣ ಎಷ್ಟೋ ಹೊತ್ತಿನವರೆಗೂ ಬಿಕ್ಕಿಬಿಕ್ಕಿ ಅಳುತ್ತಲಿದ್ದ. ಸೊನ್ನಲಿಗೆ ಮುಟ್ಟಬೇಕಿದ್ದ ಕುದುರೆಯ ಲಗಾಮನ್ನು ಕೈಗೆ ತೆಗೆದುಕೊಂಡು ಎಡಕಾಗಿ ಭೀಮಾನದಿಯ ದಿಕ್ಕಿಗೆ ನಡೆಯತೊಡಗಿದ. ಅಲ್ಲಿಂದ ಮುಂದೈದು ಹರದಾರಿ ನಡೆದಾದ ಮೇಲೆ ಕರೀನೆಲದಲ್ಲಿ ತಿಳಿಯಾಗಿ ಹರಿಯುವ ಎರೇಹಳ್ಳ ಸಿಕ್ಕಿತು. ಆ ಹಳ್ಳದಲ್ಲಿ ಎರೆ ಮರುಳನ್ನು ಆಚೀಚೆ ಎತ್ತಿಹಾಕಿ ಬೊಮ್ಮಣ್ಣನನ್ನು ಅದರಲ್ಲಿ ಮಲಗಿಸಿದರು. ಮುಖವೊಂದನ್ನು ಬಿಟ್ಟು ಇಡೀ ದೇಹವನ್ನು ಸಮಾಧಿ ಮಾಡುವಂತೆ ಎರೆ ಮಣ್ಣೊಳಗೆ ಹುದುಗಿಸಿ ಕಾದು ಕುಳಿತರು.
ತುರಿಕೆಯನ್ನು ತುರಿಸಿಕೊಳ್ಳಲು ಸಾಧ್ಯವಾಗದಂತೆ ಒದ್ದಾಡುತ್ತಿದ್ದ ಬೊಮ್ಮಣ್ಣ, “ಅಯ್ಯಾ ಶಿವಯೋಗಿ.. ನೊವೆಯನ್ನು ತುರಿಸಿಕೊಳ್ಳಬೇಕು. ಹೊರಗೆಳೆಯೋ ಮಾರಾಯ” ಎಂದು ಪರಿಪರಿಯಾಗಿ ಅಂಗಲಾಚಿದರೂ ಸಿದ್ದರಾಮರು ಕೇಳಿಯೂ ಕೇಳದಂತೆ ಸುಮ್ಮನೇ ಕುಳಿತಿದ್ದರು. ಎದೆಯ ಮೇಲಿನ ಲಿಂಗವನ್ನು ಮುಟ್ಟಿಕೊಳ್ಳುತ್ತಲೇ ನೀಲಮ್ಮ ತಾಯಿ ಕಟ್ಟಿಕೊಟ್ಟ ದಾರಿಯ ಬುತ್ತಿ ನೆನಪಾಗಿ, ಹಳ್ಳದ ಮತ್ತೊಂದು ಮಡುವಿನಲ್ಲಿ ಮಿಂದು ಬಂದು ಲಿಂಗಪೂಜೆಯನ್ನು ಪ್ರಸನ್ನವದನರಾಗಿ ಮಾಡಿಮುಗಿಸಿ ಬುತ್ತಿಯ ಬಿಚ್ಚಿ ಊಟ ಮಾಡಿದರು. ಸೂರ್ಯ ಮರೆಯಾಗಿ ಕತ್ತಲಾವರಿಸಿದಾಗ ಕಟ್ಟಿಗೆಯನ್ನಾರಿಸಿ ತಂದು ಬೊಮ್ಮಣ್ಣನಿಗೆ ಸಮೀಪದಲ್ಲಿಯೇ ಚಕಮಕೀ ಕಲ್ಲಿನಿಂದ ಕಿಡಿ ಹೊತ್ತಿಸಿ ಬೆಂಕಿ ಮಾಡಿದರು. ಬೊಮ್ಮಣ್ಣನ ಒಂದು ಬದಿಯಲ್ಲಿ ಕುದುರೆ ಮಲಗಲು ಮತ್ತೊಂದು ಬದಿಯಲ್ಲಿ ಸಿದ್ಧರಾಮರು ಜೀನವ ಹಾಸಿಕೊಂಡು ಮಲಗಿದರು. ರಾತ್ರಿಯೆಲ್ಲ ಬೊಮ್ಮಣ್ಣನ ಮೈಕೆರೆತ ಹೆಚ್ಚಾದಂತೆ ಕಿರುಚಿಕೊಳ್ಳುತ್ತಾ ನೋವುಣ್ಣುತ್ತಾ ಹೇಗೆ ಮಲಗಿಸಿದ್ದರೋ ಹಾಗೆ ಮಣ್ಣೊಳಗೆ ಮಲಗಿಬಿಟ್ಟಿದ್ದನು.
ಬೆಳಗಾಗೆಚ್ಚರಗೊಂಡು ಕಣ್ಣುಬಿಟ್ಟರೆ ಇಡೀ ಮೈಯೇ ಭೂಮಿಯೊಳಗಿಳಿದು ಹೋಗಿದೆ ಎನ್ನುವಷ್ಟು ಆಯಾಸವಾಗಿತ್ತು. ಸಿದ್ಧರಾಮ ಸಿಂಬಿ ತೊಪ್ಪಲನ್ನು ಹಳ್ಳದ ನೀರೊಳಗೆ ತೇಲಿಬಂದ ಬಿಳಿಹಿಟ್ಟನಂತದೆ ರ್ಯಾವೆಯೊಳಗೆ ಕಲಸಿ ಅರೆಯುತ್ತಿದ್ದ. ‘ಅಪ್ಪಾ ಶಿವಯೋಗಿ ನನಗೆ ಹಸಿವಾಗುತ್ತಿದೆ’ಎಂಬುದಾಗಿ ದೀನಸ್ವರದಲ್ಲಿ ಕರೆದಾಗ, ಮುಗುಳ್ನಗುತ್ತಲೇ ದೇಹದ ಮೇಲಿನ ಮಣ್ಣರಾಶಿಯನ್ನು ಓಸರಿಸಿ. ಅಂಗೈಮೇಲೆ ಎತ್ತಿಕೊಂಡು ನೀರಿನ ಮಡುವಿಗೊಯ್ದು ಇಡೀ ಮೈಯನ್ನು ಸ್ವಚ್ಚವಾಗಿ ಒರೆಸೊರಸಿ ತೊಳೆದರು. ಸಿದ್ಧಮಾಡಿಟ್ಟುಕೊಂಡಿದ್ದ ನಂಜಿನ ರಸವನ್ನು ಕುಡಿಸಿ, ಮೈಗೆಲ್ಲ ರಸ ಸವರಿ.. ನೆನ್ನೆ ಉಳಿದಿದ್ದ ಮಹಾಮನೆಯ ಬುತ್ತಿಯನ್ನು ಬಿಚ್ಚಿ ಊಟ ಮಾಡಿಸಿದರು.
ಬಿಸಿಲೇರುತ್ತಿದ್ದಂತೆ ದೇಹಕ್ಕೊಂದು ಚೈತನ್ಯ ಬಂದಂತಾಗಿ ದೇಹದ ಅವಯವಗಳು ಇನ್ನೂ ಇದ್ದಾವೆಂಬುದು ಬೊಮ್ಮಯ್ಯನ ಅರಿವಿಗೆ ಬರಲಾರಂಭಿಸಿತು. ಗಂಭೀರವದನನಾಗಿದ್ದ ಸಿದ್ಧರಾಮ ಈ ದಿನ ಧೂಳಯ್ಯನಂತೆ ಎಳೆಮಗುವಾಗಿ ಕಂಡನು. ‘ಅಯ್ಯಾ ಸಿದ್ದರಾಮ ನರಕದ ಬಾಗಿಲೊರಗೆ ಹೋಗಿದ್ದ ನನ್ನನ್ನು ಬದುಕಿಸಿದೆ ನನ್ನಪ್ಪಾ, ನೀನು ಶಿವಯೋಗಿಯೇ ಹೌದು. ನನ್ನ ಮಾತು ನಿನ್ನ ನೋಯಿಸಿದ್ದರೆ ಕ್ಷಮೆ ಇರಲಿ ನನ್ನಪ್ಪಾ’ಎಂದು ತಮ್ಮನೆಂಬ ಸಿದ್ಧರಾಮರ ಕಾಲು ಹಿಡಿದುಕೊಂಡು ಬಿಕ್ಕಿಬಿಕ್ಕಿ ಗಳಗಳ ಅಳತೊಡಗಿದನು. ಸಿದ್ಧರಾಮರು ಅವನನ್ನು ಸಮಾಧಾನಪಡಿಸುತ್ತಲೇ ತಮ್ಮ ಮೈಮೇಲಿನ ವಸ್ತ್ರವನ್ನು ಹೊದಿಸಿ, ಬೊಮ್ಮಯ್ಯನನ್ನು ಕುದುರೆಯ ಮೇಲೆ ಕೂರಿಸಿಕೊಂಡು ಸೊನ್ನಲಿಗೆಯತ್ತ ಹೊರಟರು.
ಊರಹಾದಿಗೆ ಮರಳಿದಾಗ ಸಿದ್ಧರಾಮರನ್ನು ಹುಡುಕಿಕೊಂಡು ಕಲ್ಯಾಣದತ್ತ ಹೊರಟಿದ್ದ ಓಲೆಕಾರ ಸಿಕ್ಕನು. ಹಾವಿನಾಳದ ಕಲ್ಲಯ್ಯನವರು ಸೌರಾಷ್ಟ್ರದಿಂದ ವ್ಯಾಪಾರಿಯೊಬ್ಬ ಬಂದಿದ್ದು ವಿಷಮಜ್ವರ ನೆತ್ತಿಗೇರಿರುವ ಸೂಚನೆಯಿದೆ ಔಷಧಿ ನೀಡಲು ತ್ವರೆಯಿಂದ ಬರಬೇಕೆಂಬ ಸುದ್ದಿಕೊಟ್ಟಿದ್ದರು. ಓಲೇಕಾರನಿಂದ ಪತ್ರದ ಸಾರಾಂಶ ಕೇಳಿ ತಿಳಿದವರೇ ಈ ಕೂಡಲೇ ಬರುತ್ತಿರುವುದಾಗಿ ತಿಳಿಸಿರಿ ಎಂದು ಮರು ಉತ್ತರ ಕೊಟ್ಟು ಬೊಮ್ಮಣ್ಣನಿಗೆ ಆಯಾಸವಾಗದಂತೆ ನಿಧಾನಗತಿಯಲ್ಲಿ ನಡೆಯತೊಡಗಿದರು.
**** **** ****
ಓಲೆಕಾರನ ಸುದ್ದಿ ಸೊನ್ನಲಿಗೆ ಮುಟ್ಟಿದ್ದೆ ತಡ ಗುಡ್ಡರೊಳಗಿನ ಹಲವು ಅನುಮಾನಗಳಿಗೆ ಉತ್ತರ ಸಿಕ್ಕಂತಾಗಿತ್ತು. ವಾರದ ಹಿಂದೆ ಒಬ್ಬ ಚರಮೂರ್ತಿಯೊಂದಿಗೆ ನಡೆದ ವಾಗ್ಯುದ್ಧದಲ್ಲಿ ಸಿದ್ಧರಾಮ ಶಿವಯೋಗಿಗಳು ಸೋತು ಶರಣರಾದರೆಂದು ಹಾಗಾಗಿ ಅವರು ಆ ಅಲ್ಲಮನೆಂಬ ಯೋಗಿಯ ಶಿಷ್ಯರಾಗಿ ದೇಶಾಂತರ ಹೋದರೆಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಆ ಇಬ್ಬರೂ ಯೋಗಿಗಳಲ್ಲಿ ಯಾರು ಹೆಚ್ಚು-ಕಡಿಮೆ ಎಂಬ ಪರೀಕ್ಷೆಗಾಗಿ ಕಲ್ಯಾಣದ ಪ್ರಧಾನಿ ಬಸವಣ್ಣನಲ್ಲಿಗೆ ನ್ಯಾಯ ತೀರ್ಮಾನಕ್ಕೆ ಹೋಗಿದ್ದಾರೆಂಬ ಊಹಾಪೋಹದ ವದಂತಿಗಳು ಭಕ್ತರ ಕಿವಿಗಳಲ್ಲಿ ಹರಿದಾಡುತ್ತಿದ್ದವು. ಈಗ ನಮ್ಮ ಸಿದ್ಧರಾಮ ಶಿವಯೋಗಿಗಳು ನಮಗೆ ಸಿಕ್ಕರಲ್ಲ ಎಂಬ ಸಂತಸದಿಂದ ಗುಡ್ಡರೆಲ್ಲ ಸೇರಿಕೊಂಡು ಶಿವಯೋಗಿಯ ಸ್ವಾಗತಕ್ಕಾಗಿ ಕೊಂಬು-ಕಹಳೆ ನಗಾರಿ-ಡೊಳ್ಳುಗಳಾದಿಯಾಗಿ ತಾಳಗಳನ್ನು ಹಿಡಿದುಕೊಂಡು ಕಲ್ಯಾಣದ ಮಾರ್ಗಕ್ಕೆ ಎದುರಾಗಿ ಬಂದರು. ಇನ್ನು ಕೆಲವರು ಸಿದ್ಧರಾಮರು ಮಲ್ಲಯ್ಯನ ಪೂಜೆ ಮಾಡದೆ ವಾರಗಳ ಕಾಲವಾಯ್ತು ಬಂದವರೇ ಮಲ್ಲಿನಾಥನ ಲಿಂಗಕ್ಕೆ ಪೂಜೆಗೆ ಅಣಿಮಾಡಿರಿ ಎಂದು ಹೇಳುತ್ತಾರೆಂದು ಭಾವಿಸಿಕೊಂಡು ಪೂಜಾಸಾಮಗ್ರಿ, ಹೂ-ಬಿಲ್ವಪತ್ರೆ, ಕ್ಷೀರ, ತುಪ್ಪಾದಿಯಾಗಿ ಪ್ರಸಾದಕ್ಕೆ ವ್ಯವಸ್ಥೆ ಮಾಡತೊಡಗಿದರು.
ದೂರದಲ್ಲಿ ಬಿಳಿಕದುರೆ, ಬೊಮ್ಮಯ್ಯ ಸಿದ್ಧರಾಮರು ಕಾಣಿಸಿದ್ದೇ ತಡ ಗುಡ್ಡರು ಕೊಂಬುಕಹಳೆ ಊದಿದರು, ವಾಲಗದವರು ವಾದ್ಯಗಳನ್ನು ಹದವಾಗಿ ಹಿಡಿದು ನುಡಿಸತೊಡಗಿದರು. ಗುಡ್ಡರ ಮುತ್ತೈದೆಯರು ಆರತಿ ತಟ್ಟೆಯನ್ನೆತ್ತಿಕೊಂಡು ಮುಂದೆ ಬಂದರು. ಶಿವಯೋಗಿಗಳು ಗುಡ್ಡರ ಯಾವ ಉಪಚಾರವನ್ನೂ ಸ್ವೀಕರಿಸದೆ ಬೊಮ್ಮಯ್ಯನನ್ನು ಕರೆದುಕೊಂಡು ನೆಟ್ಟನೇ ಆಶ್ರಮಕ್ಕೆ ಬಂದು ತಮ್ಮ ಏಕಾಂತ ಗೃಹವನ್ನು ಹೊಕ್ಕರು.
ಮೈ ಹುಣ್ಣುಗಳಲ್ಲಿ ಕೀವು ಬಸಿದು ಹುಚ್ಚನಂತೆ ಒರಲುತ್ತಾ ಓಡಾಡುತ್ತಿದ್ದ ಬೊಮ್ಮಯ್ಯ ಸಾವನ್ನು ಗೆದ್ದು ಬಂದವನಂತೆ ಕೊಂಚ ಗೆಲುವಾಗಿರುವುದನ್ನು ಕಂಡು ಅಚ್ಚರಿಗೊಂಡರು. ಓಹೋ ಇದು ಶಿವಯೋಗಿಗಳು ಪವಾಡ ಮಾಡಿ ಅಣ್ಣನನ್ನು ನರಕದ ಬಾಗಿಲಿಂದೆತ್ತಿದರೆಂದುಕೊಂಡರು. ಅತ್ತ ಮಲ್ಲಯ್ಯನ ಗುಡಿಯಲ್ಲಿ ಸಿದ್ಧರಾಮರು ಪೂಜೆಗೆ ಬರುತ್ತಾರೆಂದು ಕಾದುಕುಳಿತಿದ್ದ ಸಹಾಯಕರು ಅವರು ನೆಟ್ಟನೆ ಏಕಾಂತದ ಮನೆ ಹೊಕ್ಕುದ ಕಂಡು ವಿಚಲಿತರಾದರು. ಹಾವಿನಾಳ ಕಲ್ಲಯ್ಯನವರಿಗೂ ಇದೇನಚ್ಚರಿ ಎನಿಸಲು ಸ್ವಲ್ಪಹೊತ್ತು ವಿಶ್ರಾಂತಿ ಪಡೆದು ಸ್ನಾನಕರ್ಮಗಳನ್ನು ಮುಗಿಸಿಕೊಂಡು ಹೊರಬರುತ್ತಾರೆಂಬ ನಂಬಿಕೆಯಲ್ಲಿ ನಿಂತಿದ್ದರು.
ಸೂರ್ಯ ನೆತ್ತಿಯ ಮೇಲೆ ಬಂದರೂ ಸಿದ್ಧರಾಮ ಶಿವಯೋಗಿಗಳು ಏಕಾಂತದ ಮನೆಯಿಂದಾಚೆಗೆ ಬರಲಿಲ್ಲ. ಪ್ರಯಾಣದ ಕಾರಣದಿಂದ ಆಯಾಸಗೊಂಡಿರಬಹುದು ಎಂಬ ಆತಂಕದಲ್ಲಿ ಹಾವಿನಾಳ ಕಲ್ಲಯ್ಯ ಮನೆಯೊಳಗೆ ಬಂದರು. ಅಲ್ಲಿ ಮೂಲೆಯಲ್ಲಿ ಬೊಮ್ಮಣ್ಣ ಹುಲ್ಲುಮದೆಯ ಹಾಸಿಗೆಯ ಮೇಲೆ ಮಲಗಿದ್ದರೆ ನಡುಮನೆಯ ದೀಪದ ಕಂಬದ ಕೆಳಗೆ ಶಿವಯೋಗಿಗಳು ಅಂಗೈಯಲ್ಲೇ ಮಲ್ಲಿನಾಥನನ್ನು ಪ್ರತಿಸ್ಠಾಪಿಸಿಕೊಂಡು ಧ್ಯಾನದೊಳಗೆ ಒಂದಾಗಿ ಹೋಗಿದ್ದರು. ಪೂಜಿಸುವ ಹಂಬಲಕ್ಕಾಗಿಯೇ ಲಿಂಗದ ಮೇಲೆ ಲಿಂಗವ ಸ್ಥಾಪಿಸಿಕೊಂಡಿದ್ದ ಮಹಾನುಭಾವರು ಮತ್ತೊಂದು ಲಿಂಗದೊಳಗೆ ತಲ್ಲೀನವಾಗಿದ್ದರು.
ಅವರು ಪೂಜೆಯಿಂದೆದ್ದವರೆ.. ಕಲ್ಲಯ್ಯನಿಗೆ ಸನ್ನೆಮಾಡಿ ಪ್ರಸಾದಕ್ಕೆ ವ್ಯವಸ್ಥೆ ಆಗಿದೆಯ ಎಂದು ಕೇಳಿದರು ಹೌದೆಂದು ಗೋಣಾಡಿಸಿದಾಗ, ಭಕ್ತನೊಬ್ಬ ಕೊಟ್ಟಿದ್ದ ಬೆಳ್ಳಿ ಪಾತ್ರೆಯನ್ನು ತಾವೇ ತಮ್ಮ ಕೈಯಾರೆ ತೊಳೆದುಕೊಂಡು ಊಟದ ಮನೆಗೆ ಬಂದು ಊಟ ಹಾಕಿಸಿಕೊಂಡು ಊಟಮಾಡಿದರು. ಬೊಮ್ಮಯ್ಯನಿಗೂ ಊಟದ ವ್ಯವಸ್ಥೆ ಮಾಡಿ ಸೌರಾಷ್ಟ್ರದಿಂದ ಬಂದಿದ್ದ ರೋಗಿಯನ್ನು ಕಂಡು ಔಷಧಿ ಕೊಟ್ಟರು. ಹೊತ್ತು ಮುಳುಗಿದ ಮೇಲೆ ಗುಡ್ಡರು ಒಬ್ಬೊಬ್ಬರಾಗಿ ಮಲ್ಲಯ್ಯನ ಗುಡಿಗೆ ಬರತೊಡಗಿದರು. ಮಲ್ಲಯ್ಯನ ನಾಮಸ್ಮರಣೆಯೊಂದಿಗೆ ಶಿವಯೋಗಿಗಳು ಪೂಜಿಸುವ ಚಲುವು ನೋಡುವುದೇ ಒಂದು ಖುಷಿಯ ಸಂಗತಿ. ಆದರೆ ಈ ದಿನ ಎಷ್ಟೊತ್ತು ಕಾದರೂ ಶಿವಯೋಗಿಗಳು ಗುಡಿಯ ಕಡೆಗೆ ಬರಲೇ ಇಲ್ಲ.
ಯಾರೋ “ಇವತ್ತು ಶಿವಯೋಗಿ ಪೂಜೆ ಮಾಡಲಾರರಂತೆ, ಹಾಗಾಗಿ ಎಲ್ಲರೂ ಏಕಾಂತದ ಮನೆಯ ಮುಂದಿನ ಅಂಗಳಕ್ಕೆ ಬರಬೇಕೆಂದು ಕರೆಕಳಿಸಿದ್ದಾರೆ” ಎಂದು ಹೇಳಿದಾಗ ಎಲ್ಲರಿಗೂ ಸೋಜಿಗವಾಯ್ತು.
ಅಲ್ಲಿ ಅಂಗಳದಲ್ಲಿ ಕರಿಕಂಬಳಿಯನ್ನು ಹಾಸಿ ಗುಡ್ಡರೆಲ್ಲ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಒಬ್ಬೊಬ್ಬರಾಗಿ ಬಂದು ಅಲ್ಲಿ ಕೂರುತ್ತಲೇ ಸಿದ್ಧರಾಮರೂ ಬಂದು ಅವರ ನಡುವೆ ಒಬ್ಬರಾಗಿ ಕುಳಿತರು. ಈ ದಿನದ ಶಿವಯೋಗಿಗಳ ನಡವಳಿಕೆಯಲ್ಲಿ ಸೋಜಿಗದ ಮೇಲೆ ಸೋಜಿಗ ಕಾಣುತ್ತಿದ್ದ ಗುಡ್ಡರ ಕಂಗಳಲ್ಲಿ ಏನಾಗುತ್ತಿದೆ ಎಂಬ ಗೊಂದಲ ಶುರುವಾಗಿತ್ತು. ತಂತುಣಿಯ ನಾದವು ಸ್ವರವನ್ನು ಹದವಾಗಿ ಹಿಡಿದು ಕುದುರೆ ಜಂವೆಯನ್ನು ಶೃತಿಗೊಳಿಸಿದಾಗ ಸಿದ್ಧರಾಮರು ಕುಳಿತಿದ್ದ ಗುಡ್ಡರ ನಡುವಿನಿಂದ ಹಾಡಿನ ಸೊಲ್ಲನ್ನತ್ತಿಕೊಂಡರು.
ಭಕ್ತನಾದಡೆ ಬಸವಣ್ಣನಂತಾಗಬೇಕು
ಜಂಗಮವಾದಡೆ ಪ್ರಭುವಿನಂತಾಗಬೇಕು.
ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಪೂರೈಸಿದಾಗ ಇಡೀ ಸಭೆಯೇ ಸ್ತಬ್ಧವಾಗಿ ಆ ಸ್ವರದ ಪಲ್ಲವಿಯನ್ನು ಮತ್ತೆಮತ್ತೆ ಗುಣುಗಿಕೊಳ್ಳತೊಡಗಿತು. ಈಗ ಸಿದ್ಧರಾಮರು ತಮ್ಮ ಕಂಚಿನ ಕಂಠದ ಮೂಲಕ ಆದಿಯಲ್ಲಿ ಕಪಿಲಸಿದ್ದ ಮಲ್ಲಿನಾಥನನ್ನು ನೆನೆದು ಸೊನ್ನಲಿಗೆ ಅನುಭವಮಂಟಪವನು ಶುರುಮಾಡಿದರು.
ಲಿಂಗ-ಜಂಗಮ-ಕಾಯಕ-ಪಾದೋದಕ-ಪ್ರಸಾದ ಇತ್ಯಾದಿಯಾಗಿ ಶರಣರ ನಿಷ್ಠೆಯನ್ನು ಗುಡ್ಡರಿಗೆ ಕತೆ ಮಾಡಿ ಹೇಳಲಾರಂಭಿಸಿದಾಗ ಆ ಸೊನ್ನಲಿಗೆ ಪುರದ ಗುಡ್ಡರೆಲ್ಲಾ ಮೈಮರೆತವರಂತೆ ಕಲ್ಯಾಣದ ಶರಣರ ನಡೆನುಡಿಗಳನ್ನು ಆಲಿಸತೊಡಗಿದರು.
Comments 14
Mariswamy Gowdar
Sep 7, 2019ಕಲ್ಯಾಣದ ಭೇಟಿ ಮನಮುಟ್ಟುವಂತಿತ್ತು. ಕಲ್ಯಾಣ ಪಟ್ಟಣ, ಅಲ್ಲಿನ ಶರಣ ಸಮಾಜ….. ನೆನೆದುಕೊಂಡರೇ ಮೈ ರೋಮಾಂಚನವಾಗುತ್ತದೆ.
Jahnavi Naik
Sep 7, 2019ಒಂದು ತಿಂಗಳವರೆಗೆ ಕಥೆಯನ್ನು ಕಾಯುವುದು ಬಹಳ ಕಷ್ಟ. ಕಥೆಗಾರರು ಮೋಡಿ ಮಾಡುವಂತೆ ಬರೆಯುತ್ತಾರೆ. ಒಂದೇ ಬಾರಿಗೆ ಓದಲು ಮನಸ್ಸು ಹಾತೊರೆಯುತ್ತದೆ. ಬಯಲು ನನಗೆ ಕಾಯುವ ಸಹನೆಯ ಪಾಠ ಹೇಳಿಕೊಡುತ್ತಿದೆ.
Harsha m patil
Sep 8, 2019ಸಿದ್ದರ ಸಿದ್ಧರಾಮಯ್ಯನವರ ಕತೆ ಎಷ್ಟು ವಿಸ್ತಾರವಾಗಿದೆ! ಶಿವಯೋಗಿ ಶರಣನಾದ ಸಂದರ್ಭವನ್ನು ಇನ್ನಷ್ಟು ವಿವರಿಸಬಹುದಿತ್ತು. ಕತೆಯ ಹಂದರ ಸುಂದರವಾಗಿದೆ. ಕತೆಗಾರರಿಗೆ ವಂದನೆ.
ಸಿದ್ದು ದೊರಗ
Sep 8, 2019ಕೇವಲ ವಾರೊಪ್ಪತ್ತು ದಿನಗಳಷ್ಟೇ ಸಿದ್ದರಾಮರು ಕಲ್ಯಾಣದಲ್ಲಿ ಕಳೆದರೆ? ನನಗೇಕೋ ಸಂದೇಹ ಬರುತ್ತಿದೆ, ಯಾಕೆಂದರೆ ಕಲ್ಯಾಣದ ಶರಣರ ಕುರಿತಂತೆ ವಿವರವಾಗಿ ಬರೆದವರು ಸಿದ್ಧರಾಮಯ್ಯನವರು. ಕೇವಲ ಕೆಲವೇ ದಿನಗಳಲ್ಲಿ ಇದು ಸಾಧ್ಯವಿಲ್ಲ. ದಯವಿಟ್ಟು ಈ ವಿಷಯವನ್ನು ಪರಿಶೀಲಿಸಿರಿ.
ಮಹಾದೇವ
Sep 9, 2019ಸಿದ್ಧರಾಮ ಶರಣರ ಕಲ್ಯಾಣದ ನಂಟು ಈಗತಾನೇ ಆರಂಭವಾಗಿದೆ…
ಸಿದ್ದು ದೊರಗ
Sep 11, 2019Thank you sir. ನನಗೆ ಅದೇ ಆಶ್ಚರ್ಯವಾಗಿತ್ತು. ಕಲ್ಯಾಣದ ವಿವರಗಳನ್ನು ಓದಲು ಉತ್ಸುಕನಾಗಿದ್ದೇನೆ.
Ravindra Desai
Sep 9, 2019ಕತೆ ವಾವ್! ಹಿಂದಿನ ಭಾಗಗಳ ಸಾರಾಂಶ ಕೊಟ್ಟು ಹಾಕಿದ್ದರೆ ಚೆನ್ನಾಗಿತ್ತು.
ಗೀತಾ ಬೆಣಕಲ್
Sep 11, 2019ಚಿತ್ರದಲ್ಲಿ ತೋರಿಸಿದ್ದು ಕಲ್ಯಾಣದ ಕೋಟೆಯೇ? ಅದ್ಭುತವಾಗಿದೆ. ನಿಮ್ಮ ಬರವಣಿಗೆ ಮತ್ತು ಚಿತ್ರಗಳು ನಮ್ಮನ್ನು ಆ ಲೋಕಕ್ಕೇ ಒಯ್ಯುತ್ತವೆ. ಕೆಲವು ಕಡೆಯಂತೂ ಮೋಡಿ ಮಾಡಿ ಬಿಡುತ್ತದೆ.
Vinay Kanchikere
Sep 15, 2019ಸಿದ್ದರಾಮೇಶ್ವರರು ವೇದ್ಯರಾಗಿದ್ದರೆ? ಅವರ ಕಾಯಕ ಯಾವುದಿತ್ತು ಎಂದು ನಾನು ತಲೆಕೆಡಿಸಿಕೊಂಡಿದ್ದೆ. ಕತೆಗಾರ ಮಹಾದೇವ ಹಡಪದರಿಗೆ ಶರಣು, ಚನ್ನಾಗಿ ಬರೆಯುತ್ತೀರಿ ಸರ್.
SIDDHALINGAIAH TUMKUR
Sep 16, 2019ಸರ್, ಕತೆ ಚೆನ್ನಾಗಿ ಹೊಂಟಿದೆ. ಕುತೂಹಲ ಹುಟ್ಟಿಸಿದೆ, ಸಿದ್ದರಾಮಯ್ಯನವರು ಕಲ್ಯಾಣ ಕ್ರಾಂತಿಯ ವೇಳೆ ಎಲ್ಲಿದ್ದರು? ಕಾಯುತ್ತಿದ್ದೇನೆ….. ಮುಂದಿನ ಕಂತಿಗೆ.
Pro Mallikarjuna
Sep 18, 2019ಸಿದ್ದರಾಮೇಶ್ವರರಂತೆ ಬಸವಣ್ಣನವರ ಬಳಿಯೂ ಅವರ ಒಂದು ಕುದುರೆಯಿತ್ತು. ಅದರ ಹೆಸರು ಮರೆತುಹೋಗಿದೆ. ಆ ಕುದುರೆಯೊಂದಿಗಿನ ಅವರ ಸಂಬಂಧ ವರ್ಣನೆಗೆ ಸಾಧ್ಯವಿಲ್ಲದಂತಹುದು, ಸಿದ್ದರಾಮೇಶ್ವರರ ಕುದುರೆಯ ಪ್ರಕರಣ ಸಹಜವಾಗಿ ಮೂಡಿಬಂದಿದೆ.
Nagaraj G.N
Sep 22, 2019It is very interesting story
jeevan koppad
Sep 23, 2019Relation between Siddaramaiah and His Brother is heart touching!
vidhyadhara swamy
Sep 25, 2019ಶರಣರ ಜೀವನ ಚರಿತ್ರಯ ಜೊತೆಗೆ 12ನೆ ಶತಮಾನವನ್ನು ಕಟೆದು ನಿಲ್ಲಿಸುವ ಕತೆಗಾರರಿಗೊಂದು ಸಲಾಮ್.