
ಪ್ರಭುವಿನ ಗುರು ಅನಿಮಿಷ -3
ಮೋಹದ ಬೀಜ ಮೊಳಕೆಯೊಡೆದಿತ್ತು
(ಇಲ್ಲಿಯವರೆಗೆ: ಅತ್ತ ಯುದ್ದ ನಡೆದು ರಾಜರ ಕೈಗಳು ಬದಲಾದಾಗ ಕೈದಿಗಳೆಲ್ಲಾ ಚದುರಿ ಹೋದರು. ಒಂದು ಕಣ್ಣು ಕಳೆದುಕೊಂಡು ಹಣ್ಣಾಗಿದ್ದ ತ್ರೈಲೋಕ್ಯನು ಹೆಂಡತಿ ಮತ್ತು ಮಗುವನ್ನು ಕಾಣುವ ಆಸೆಯಿಂದ ಊರಿಗೆ ಬರುವ ದಾರಿ ಹಿಡಿದ. ಇತ್ತ ಗಂಡ ಬರುವನೆಂಬ ಭರವಸೆಯೇ ಬತ್ತಿಹೋದ ಮಹಾಲೇಖೆ ತನ್ನ ಮಗನ ಬೆಳವಣಿಗೆಯಲ್ಲಿ ಜೀವನದ ದುಃಖ ನುಂಗಿಕೊಂಡಿದ್ದಳು. ಥೇಟು ಅಪ್ಪನಂತೆ ಕಾಣುತ್ತಿದ್ದ ಮಗನ ಆಟಪಾಠಗಳಲ್ಲಿ ದಿನಗಳು ಸರಿಯುತ್ತಿದ್ದವು… ಮುಂದೆ ಓದಿ-)
ಹರೆಯ ಬಲಿಯುವ ಚಲುವೋ ಏನೋ ವಸೂದೀಪ್ಯನ ಮೈ ಬಂಗಾರದ ಬಣ್ಣವಾದಂತೆ ಎಳೆಬಿಸಿಲಿಗೆ ಫಳಫಳ ಹೊಳೆಯುತ್ತಿರುವ ಅನುಭವ ಅವನಿಗಾಯ್ತು. ಅವತ್ತು ಅವನ ದಂಡಿನ ಕೊನೆಯ ದಿನ. ಕಲಿತ ಕೌಶಲವನ್ನು ಆಡಿತೋರುವಾಗ ಮೊಂಡುಗತ್ತಿಯೊಡನೆ ಸಾಮ ಮಾಡುವ ಮೈದಾನದಲ್ಲಿ ಎದುರಾಳಿಯನ್ನು ನೆಲಕ್ಕೆ ಕೆಡುಹಿ ತನ್ನೆಲ್ಲ ಕಸುವನ್ನು ಆ ಮೊಂಡುಗತ್ತಿಯ ತುದಿಯಲ್ಲಿ ನೆಟ್ಟು ನಿಂತಾಗ ದಂಡಿನ ದಳವಾಯಿ ಓಡಿಬಂದು ತಡೆಹಿಡಿದ. ದೂರದ ಬಂಡೆಗಲ್ಲ ಮೇಲೆ ಕುಳಿತು ಇವರ ಕತ್ತಿವರಸೆಯಾಟ ನೋಡುತ್ತಿದ್ದ ಸಿದ್ಧಸಾಧು ವಸೂದೀಪ್ಯನ ಕೈಚಳಕ ಕಂಡು ನಸುನಕ್ಕ. ದಂಡಿನ ಮ್ಯಾಳದಲ್ಲಿ ಇವನದೇ ಮಾತು…ಆ ಕಣ್ಣೋಟದ ತದೇಕಚಿತ್ತ ಅವನ ಶ್ರದ್ಧೆಯನ್ನು ಇಮ್ಮಡಿಸಿತ್ತು. ತ್ರೈಲೋಕ್ಯನ ಬಲ್ಲವರೆಲ್ಲ ಅಂದು ಅವರಪ್ಪನ ನೆನೆದು ಕನಿಕರಿಸಿದರು. ಚಂದ್ರಮೌಳೇಶನ ಗುಡಿಯ ಅವಾರದಲ್ಲಿ ಬದುಕಿದ್ದ ಹೆಂಗಳೆಯರು ಹುಬ್ಬೇರಿಸಿ ಉದ್ಘಾರ ತೆಗೆದರು, ಅವರಲ್ಲಿನ ಮುದಿಸೂಳೆಯೊಬ್ಬಳು ಮೆಲ್ಲಗೆ ಅವನ ಬಳಿಸಾರಿ ಬಂದು ಎರಡೂ ಅಂಗೈ ಮುಖದ ಮೇಲೆ ನಿವಾಳಿಸಿ ಲಟಿಗೆ ಮುರಿದಳು.
ಆ ತ್ರೈಲೋಕ್ಯನೇ ಬಂದು ಅಂಗಳದಲ್ಲಿ ನಿಂತು ಕತ್ತಿ ಝಳಪಿಸಿದ ಹಾಗೆ ನಿನ್ನಾಟ ಕಂಡಿತು ನನ್ನಪ್ಪಾ…! ಆದರೆ ನಿನ್ನ ಕಣ್ಣಿದ್ದಾವಲ್ಲ ಅವು ಶಿವನ ಮೂರನೇ ಕಣ್ಣಿನ ರೂಪ. ಸಾಕ್ಷಾತ್ ಚಂದ್ರಮೌಳಿಯ ಹಾಗಿನ ಜಡೆ ನಿನ್ನದು.
ಆಕೆ ನಕ್ಕು ತನ್ನ ವಾರಗಿತ್ತಿಯರ ಮಕ್ಕಳನ್ನು ಮುಂದು ಮಾಡಿಕೊಂಡು ಗುಡಿಯ ಪೌಳಿಯತ್ತ ಹೊರಟಳು. ಅವರ ನಡುವೆ ಕೆಂಪಂಚಿನ ದಡಿ ಉಟ್ಟಿದ್ದ ತನ್ನದೇ ಸಮವಯಸ್ಕ ಹುಡುಗಿಯೊಂದು ಆಸೆಗಣ್ಣಿಂದ ನೋಡುವಾಗ ವಸೂದೀಪ್ಯನ ಕಣ್ಣೊಳಗೆ ಮಿಂಚುಮಿನುಗಿ ಮರೆಯಾದ ಅನುಭವವಾಯ್ತು. ಹಿಂದಿನಿಂದ ಬಂದ ತಾಯಿ ಮಹಾಲೇಖೆ ಅವನ ತಲೆಯ ಮೇಲೆ ಕೈಯಾಡಿಸಿ, ಗಲ್ಲ ತಿವಿದು ಮುದ್ದುಮಳೆಗರೆದು ಮಗನ ಸಾಹಸದ ಕತ್ತಿವರಸೆಯಾಟವನ್ನು ಬಗೆಬಗೆಯಾಗಿ ಬಣ್ಣಿಸಿ ಗಂಡನ ನೆನೆದು ಕಣ್ಣೀರು ಸುರಿಸಿದಳು. ಮಾವ ಮಾಲಿಂಗ ಮೊರದ ತುಂಬ ಜೋಳ, ಕೊಬ್ಬರಿಬಟ್ಟಲು, ಅರಿಷಿಣ ಗಂಧ, ಹೂ-ಹಣ್ಣು, ಕರಿಕಂಬಳಿಯನ್ನು ತಂದು ವಸೂದೀಪ್ಯನ ಕೈಗಿಟ್ಟು, “ಚಂದ್ರಮೌಳೇಶನ ಗುಡಿಗೆ ಹೋಗಿ ಈ ಫಲಪುಷ್ಪಗಳನ್ನ ಪೂಜೆಗೊಪ್ಪಿಸಿ, ಆ ಶಿವನ ಸೇವಕರಾದ ಪಾತ್ರದವರಿಗೆ, ಅವನ ಬಾಲಲೀಲೆಗಳನ್ನು ಹಾಡಿಹೊಗಳುವ ಕೀರ್ತನಕಾರರಿಗೆ ನಿನ್ನ ಬಾಲ್ಯದ ಆಭರಣಗಳಾದ ಈ ಬೆಳ್ಳಿ ಕರಂಡಕ, ಹಾಲ್ಗೆಜ್ಜೆಗಳನ್ನು, ನಮ್ಮ ಕೈಲಾದ ಕಾಳುಕಡಿಯನ್ನು ದಾನ-ಧರ್ಮ ಮಾಡಿ ಯಶೋವಂತನಾಗು” ಎಂದು ಹರಸಿದ.
ಸಿದ್ಧಸಾಧುವಿನ ಮನಸ್ಸು ವಿಹ್ವಲಗೊಂಡು ಕನಿಕರಭಾವದಿಂದ ತನ್ನನ್ನು ನೋಡುವ ರೀತಿಯನ್ನು ಗಮನಿಸಿದ ವಸೂದೀಪ್ಯನ ಮನಸ್ಸೊಳಗೆ ಏನೇನೋ ಕಲ್ಪನೆಗಳು ಗರಿಗೆದರಿ ಕುಣಿಯತೊಡಗಿದ್ದವು. ಮಹಾಲೇಖೆ ಮುಂದಾಗಿ ಮೊರದ ಕಾಳುಕಡಿ, ಹೂ-ಹಣ್ಣ ಪತ್ರೆಗಳನ್ನು ಆ ಬೃಹದಾಕಾರದ ನಂದಿದೇವರ ಮುಂದಿರಿಸಿ, ಅಲ್ಲಿಂದಲೇ ಶಿವನಿಗೂ ಅರ್ಪಿಸಲು ಹೇಳಿದಳು. ಕರಿಕಂಬಳಿಯನ್ನು ಗುರುವಾದ ಸಿದ್ಧಸಾಧುವಿಗೂ, ಮೊರದಲ್ಲಿನ ಸಾರಸಾಮಗ್ರಿಯನ್ನು ಅಲ್ಲಿ ನೆರೆದಿದ್ದವರ ಮುಂದಾಳು ಮುದಿಸೂಳೆಗೂ, ಕರಂಡಕ, ಕಿವಿಯೋಲೆ, ಹಾಲ್ಗೆಜ್ಜೆಗಳನ್ನು ಒಬ್ಬೊಬ್ಬರಿಗೆ ಒಂದೊಂದಾಗಿ ದಾನಗೈದು, ತನ್ನೆದೆಯ ಮೇಲಿನ ಅಪರೂಪದ ಜೋಳದ ಕಾಳಿನಷ್ಟಿದ್ದ ನಸುಬೆಳ್ಳಗಿನ ಮುತ್ತಿನ ಸರವನ್ನು ನಾಟ್ಯಮಂಟಪದ ಕಂಬಕ್ಕೊರಗಿ ತನ್ನನ್ನೇ ನೋಡುತ್ತಿದ್ದ ಆ ಕೆಂಪಂಚಿನ ದಡಿಯ ಹುಡುಗಿಗೆ ಕೊಟ್ಟು, ಆ ಬೃಹದಾಕಾರದ ನಂದಿಯ ಹೆಗಲ ಮೇಲಿದ್ದ ಇನಿಯ ರೂಪದ ಶಿವನನ್ನು ಮುಟ್ಟಿ ನಮಸ್ಕರಿಸಿ, ಅಲ್ಲಿ ನೆರೆದಿದ್ದ ಸಮಸ್ತರಿಗೆಲ್ಲ ಶಿರಬಾಗಿ ನಮಿಸಿ ‘ಹರಹರ ಚಂದ್ರಮೌಳೇಶ ಜಯಾಜಯ’ ಎಂದು ಜಯಕಾರ ಹಾಕಿದ. ದಂಡಿನ ದಳವಾಯಿ ಮೂರು ಕಂಕಣದ ಎಲೆಗಳನ್ನು ತೋಳಿಗೊಂದು ಹಣೆಗೊಂದು ಉಡುದಾರಕ್ಕೊಂದೊಂದು ಬಿಗಿಮಾಡಿ ಕಟ್ಟಿ ತ್ರೈಲೋಕ್ಯ ಬಳಸುತ್ತಿದ್ದ ಮಿಂಚುಗತ್ತಿಯನ್ನು ವರೆಯಿಂದ ಹಿರಿದು ಆ ಚಂದ್ರಮೌಳಿಯ ಮಡಿಲಿಗಿಟ್ಟು ಜಯಕಾರ ಕೂಗುತ್ತಲೇ ವಸೂದಿಪ್ಯನ ಕೈಗೆ ಕೊಟ್ಟನು.
“ಇದು ಬಳಸಿಕೊಳ್ಳುವಾಗ ಜೋಲಿತಪ್ಪದಿರು ಜೋಕೆ, ಹೆಣ್ಣೆಂಗಸು, ಎಳೆಮಕ್ಕಳು, ಮುದುಕತದುಕರು, ಶರಣುಬಂದವರು, ಪಶುಪಕ್ಷಿ ಪ್ರಾಣಿ ಆಗುಂತಕ ಅಲೆಮಾರಿ ಅಬ್ಬೆಪಾರಿಗಳ ಮೇಲೆ ವಿನಾಕಾರಣ ಎತ್ತದಿರು ಆಯುಧವ. ಜೀವ ಉಳಿಸಿಕೊಳ್ಳುವ ಹೊತ್ತು ಬಂದಾಗಲೂ ಚಣಕಾಲ ಚಿಂತಿಸಿ ಒರೆಯಿಂದ ಹಿರಿದುಕೋ ಕತ್ತಿಯ. ವೈರಿಯನ್ನು ಅರಿಯುವ ಜಾಗೃತ ಮನಸ್ಸು ನಿನ್ನದಾಗಿದೆ. ನಿನ್ನ ನೆಲ, ನಿನ್ನ ರಾಜ, ನಿನ್ನ ಜನ, ನಿನ್ನ ಪಶುಪ್ರಾಣಿ ನಿನ್ನದೆಂಬ ಆವರಣದೊಳಗೆ ಆಪತ್ತು ಬಂದಾಗ ಈ ವೀರಗತ್ತಿ ನಿನ್ನ ಎದೆಯ ಮಟ್ಟದಲ್ಲಿ ವೈರಿಯ ರಕ್ತ ಸುರಿಸುವಂತಾಗಲಿ… ವಂಚಿಸದಿರು ವೈರಿಯನ್ನು ಅವನಿಗೂ ನಿನ್ನಂಥದೆ ಬದುಕಿರುವ ಕಾರಣ ಎದೆಗೆ ಎದೆ ಕೊಟ್ಟು ಹೋರಾಡಿ ಗೆಲ್ಲು. ತಂತ್ರ ಕುಯುಕ್ತಿಗಳು, ಹಾಸ್ಯ ಅಪಹಾಸ್ಯಗಳು, ಗರ್ವದ ದರ್ಪಗಳು ಸಲ್ಲದು ವೀರನಿಗೆ. ನೀ ಈ ನೆಲದ ದಂಡಿನ ವೀರನಾಗಿ ಹಡೆದವರಿಗೂ, ಕಲಿಸಿದ ಗುರುಕುಲಕ್ಕೂ, ಸಾಕಿಸಲಹುವ ನಾಡಿಗೂ ಕೀರ್ತಿ ತರುವಂತವನಾಗು ವಸೂದಿಪ್ಯ… ವಸೂದೀಪ್ಯನಿಗೊಂದ ಸಲ ಉಘೆ ಅನ್ನಿರಪ್ಪಾ..”
ಉಘೆಉಘೆ ವಸೂದೀಪ್ಯ… ಉಘೆ ಉಘೆ..
ಮೂಲೋಕದ ಗಂಡ,
ಉರಿವ ಕಿಚ್ಚಿನ ಗುಂಡು,
ರಣಕಲ್ಲಿನ ರಣಗಾರ ವಸೂದೀಪ್ಯ ಬೆಂಕಿಯ ಚಂಡು
ಉಘೆ ಉಘೆ..
ನಿಂತ ಜನರೆಲ್ಲ ಹೂ-ಪತ್ರೆಗಳನ್ನು ತಲೆಯ ಮೇಲೆ ಹಾಕಿ ತಂದೆ ತ್ರೈಲೋಕ್ಯನ ನೆನೆದು ಹರಸಿ ಹಾರೈಸಿದರು. ದಂಡಿನ ಮೇಳದ ಹುಡುಗರ ಕೈಗೆ ಹರಿತವಾದ ಕತ್ತಿಗಳನ್ನು ನೀಡುವುದೆಂದರೆ ಅದು ಆಡುವ ಮಕ್ಕಳ ಕೈಗೆ ಆಟಿಗೆ ಆಯುಧ ನೀಡುವಷ್ಟು ಸಸಾರದ ಕೆಲಸವಲ್ಲ. ಅವರೊಳಗೆ ಧೈರ್ಯವೂ, ಸಾಹಸದ ಹೆಚ್ಚುಗಾರಿಕೆಯೂ, ವಯಸ್ಸಿನ ಮದವೂ ಮೇಳೈಸಿ ಬರುವ ಹೊತ್ತಿಗೆ ಸರಿಯಾದ ಗುರುವೂ ಬೇಕು. ಈ ಕಂಕಣ ಕಾರ್ಯವೆಲ್ಲವೂ ನೆರವೇರಿಸಿ ಪೂರೈಸಿದಾಗ ಮೂಡಣದಲ್ಲಿ ಮೂಡಿದ್ದ ಆ ಸೂರ್ಯದೇವ ಪಡುವಣದತ್ತ ಬಾಗಿ ತಾ ನಿಂತ ನೆರಳು ಅಂಗುಲಂಗುಲ ಬೆಳೆದು ಆ ತನ್ನದೇ ನೆರಳಿನ ತಲೆಯು ಅಷ್ಟುದ್ದದಲ್ಲಿ ಹೋಗಿ ಬಿದ್ದಿತ್ತು. ಅಲ್ಲಿ ಸಿದ್ಧಸಾಧು ಅದೇ ಆ ಕಂಬಳಿಯನ್ನು ಹಾಸಿಕೊಂಡು ವಜ್ರಾಸನದಲ್ಲಿ ಕುಳಿತು ಮುಳುಗುವ ದಿನದ ಬೆಳಕಿನ ಕಿರಣಗಳನ್ನು ದಿಟ್ಟಿಸಿ ನೋಡುತ್ತ ಕುಳಿತಿದ್ದ.
ಗುರುವೇ…
ಕೈಸನ್ನೆಯಲ್ಲಿ ಕುಳಿತುಕೊಳ್ಳಲು ಹೇಳಿ. ತಾವು ನೆಟ್ಟಿದ್ದ ದೃಷ್ಟಿಯನ್ನು ತಿಳಿಗೊಳಿಸಿ, ಕುಳಿತ ಭಂಗಿಯನ್ನು ಬದಲಿಸಿ ಕಣ್ಣಿಗೆ ಕಣ್ಣು ಕೊಟ್ಟು ನೋಡಿದರು. ಅವರ ಕಣ್ಣೊಳಗೆ ಆ ಬೆಳಕಿನ ಮೃದುಕಿರಣಗಳು ಮಿಂಚುಹುಳದಂತೆ ಮಿನುಗುತ್ತಿರುವ ಸೋಜಿಗ ಕಂಡು ಕಣ್ಣರಳಿಸಿದ.
ಇದೇನು ಗುರುವೇ ನಿಮ್ಮ ಕಣ್ಣೊಳಗೆ ಅಡಗುವ ಬೆಳಕು ಕಂಡೆ..! ಇದ್ಯಾವ ಸೋಜಿಗ.
ನಕ್ಕು ಮಾತನಾಡುವ ಮನಸ್ಸಿಲ್ಲದ ಮೌನದ ಉಸಿರೊಂದನ್ನು ಬಸಿರೊಳಗೆ ತುಂಬಿಕೊಂಡು ನಿಧನಿಧಾನಕ್ಕೆ ಕಣ್ಣುಜ್ಜಿಕೊಂಡು ಸುಮ್ಮನೇ ಕುಳಿತರು. ಅದೇ ಸರಿ ಹೊತ್ತಿಗೆ ಕಾಲ್ಗೆಜ್ಜೆಗಳ ಝಳಕ್ ಝಳಕ್ ಸದ್ದಿನೊಂದಿಗೆ ಸುತ್ತಲೂ ಬೆಳಕಿನ ದೊಂದಿಗಳನ್ನು ಹೊತ್ತಿಸಿ ಗುಡಿಯ ನಾಟ್ಯಮಂಟಪದಲ್ಲಿ ದೇವರ ಮುಂದೆ ತೂಗುವ ದೀಪಗಳನ್ನು ಹೊತ್ತಿಸಿ, ನಾಗಸ್ವರದವರ ವಾದ್ಯಗಳನ್ನು ನಮಿಸಿ ಪಾತ್ರದ ಹೊಸಹುಡುಗಿಯರು ರಂಗಪ್ರವೇಶ ಮಾಡುವ ತಯಾರಿ ನಡೆಸಿದ್ದರು. ಅಂದು ಅರಸೀಬೀದಿಯ ರಾಣಿಯೂ ಮತ್ತವರ ಪರಿವಾರದವರು, ಊರಿನ ರಸಿಕರು ಒಬ್ಬೊಬ್ಬರಾಗಿ ಬಂದು ಗುಡಿಯ ಆವರಣದಲ್ಲಿ ಸೇರತೊಡಗಿದರು. ಕೊಂಬು-ಕಹಳೆ ನಗಾರಿ ಜಾಂಗಟೆಯ ಮೇಳದೊಂದಿಗೆ ಚಂದ್ರಮೌಳೇಶನಿಗೆ ಎತ್ತಿದ ಆ ಕನಕದಾರತಿಯ ಬೆಳಕಿಗೆ… ಕತ್ತಲೆಂಬುದು ಅಡಗಿಕೊಳ್ಳಲು ತಡಕಾಡುತ್ತ ನೆರಳಾಗಿ ಅವರಿವರ ಹಿಂದೆ ಓಡಾಡುತ್ತಿತ್ತು. ಸಿದ್ಧಸಾಧುವೂ ಮೊದಲಾಗಿ ತಾಯಿ ಮಹಾಲೇಖೆ, ಮಾವ ಮತ್ತವನ ಮಕ್ಕಳೂ ಆ ಕನಕದಾರತಿಯ ಮೇಲೆ ಕೈಯಿಟ್ಟು ಅಲ್ಲಿ ಬಿಸಿ ತಾಕಿತೋ ಎನ್ನುವಷ್ಟರ ಆ ಶಾಖವನ್ನು ತಲೆಯ ಮೇಲೆ ಸವರಿಕೊಂಡು ನಾಟ್ಯಮಂಟಪದ ಕಡೆ ಮುಖವೊಡ್ಡಿ ಕುಳಿತರು.
ಪೂರ್ವರಂಗದ ಕಥಾಭಾಗವಾಗಿ ಕೀರ್ತನಕಾರರು ತಪೋನಿರತ ಧ್ಯಾನಸ್ಥ ಶಿವನ ಅನುಗ್ರಹ ಬೇಡಿ ಹಾಡಿದರು. ನಂತರದಲ್ಲಿ ದಕ್ಷನ ಯಜ್ಞಕ್ಕೆ ಬರುವ ದಾಕ್ಷಾಯಣಿಯ ಮನಸಿನ ತೊಳಲಾಟವನ್ನು ರಾಗವಾಗಿ ಎತ್ತಿಕೊಂಡಾಗ ಆ ಭಾವಕ್ಕೆ ದೇಹವನ್ನು ಹಿಡಿಯಾಗಿಸಿ ತನ್ನ ತವರುಮನೆಯಲ್ಲಿಯೇ ತನ್ನ ಬರವನ್ನು – ಹೀಗೆ ಅವಮಾನಿಸುವ ಹೇವರಿಕೆಯನ್ನು ಅನುಭವಿಸುತ್ತ, ಕಾಲ್ಗೆಜ್ಜೆಯ ಸದ್ದನ್ನು ಅಡಗಿಸುತ್ತಾ, ನಿಧನಿಧಾನ ಆ ಮಂಟಪದ ಸುತ್ತ ನೋಡುತ್ತಾ… ಅರಳಿಸಬೇಕಾದ ಮುಖಭಾವ, ಕಣ್ಣುಗಳನ್ನು, ನಗುವನ್ನು ನುಂಗಿಕೊಳ್ಳುತ್ತ ಬಂದ ಆ ನಟಿ ಕ್ರುದ್ಧಳಾಗಿ ಶಿವನನ್ನು ಕೂಗಿ ಕರೆದು ಆ ದಕ್ಷನ ಯಜ್ಞಕುಂಡಕ್ಕೆ ಬೀಳುವಾಗ ವಸೂದೀಪ್ಯನ ಇಡೀ ದೇಹ-ದ್ವನಿ-ಮನಸ್ಸು ಆ ದೃಶ್ಯದಲ್ಲಿ ತಲ್ಲೀನಗೊಂಡಿತ್ತು. ಇಷ್ಟುದಿನ ತಾನು ಕಾಣದ ಲೋಕವೊಂದನ್ನು ತಮ್ಮ ದೇಹದ ಚಲನೆ, ನಿಲುವು, ಭಂಗಿ, ಮುಖಭಾವಗಳಲ್ಲಿ ಸೃಷ್ಟಿಸುತ್ತಿರುವ ಈ ಹೊಸ ಚೆಲುವು ವಸೂದೀಪ್ಯನ ಮನಸೂರೆಗೊಂಡಿತ್ತು. ಗಿರಿರಾಜ ಮೇನೆಯರ ಮಗಳಾಗಿ ಹುಟ್ಟಿದ ಗಿರಿಜೆಯ ಪಾತ್ರಧಾರಿ ರಂಗಕ್ಕೆ ಬಂದು ಹೂಗಳನ್ನು ಶಿವನೆಡೆಗೆ ಚೆಲ್ಲಿ ಮಾದಕ ಕಣ್ಣೊಳು ಆ ಚಂದ್ರಮೌಳಿಯನ್ನು ನೋಡುತ್ತಾ ನಿಂತ ಆ ಮುಗ್ಧಮುಖ ಸೂಜಿಗಲ್ಲಿನಂತೆ ಸೆಳೆಯಿತು.
ಅವಳು ಕೆಂಪಂಚಿನ ದಡಿಯ ದಟ್ಟಿ ತೊಟ್ಟಿದ್ದ ಅದೇ ಹುಡುಗಿ…
ಶಿವನ ತಪೋಭಂಗಗೊಳಿಸಿ ಒಲಿಸಿಕೊಳ್ಳಲು ಹವಣಿಸುವ ಮಾದಕ ನಿಲುವು, ಮೋಹದ ಕಣ್ಣೋಟ, ಗರಿಬಿಚ್ಚಿ ಗಿಲಗಲನೇ ಕುಣಿಯುವ ನವಿಲ ನಾಟ್ಯ ಎಲ್ಲವೂ… ಇನ್ನೆಲ್ಲೋ ಅಲ್ಲ ವಸೂದೀಪ್ಯನ ಎದೆಯೊಳಗೆ ಮೆಲು ಹೆಜ್ಜೆ ಹಾಕಿದ ಗೆಜ್ಜೆಯ ಸದ್ದಿನಂತೆ ಸ್ವ ಅನುಭವದಾಚೆಗಿನ ಅನೂಹ್ಯ ಆನಂದವನ್ನೇ ಸೃಷ್ಟಿಸಿತ್ತು. ಭಲೇ.. ಭೇಷ್ ಎಂಬ ಉದ್ಘಾರಗಳು, ಮದ್ದಳೆಯ ಪೆಟ್ಟಿಗೆ ಸರಿಯಾಗಿ ಬಲತೊಡೆಯ ಮೇಲೆ ಕೈ ಪೆಟ್ಟು ಕೊಟ್ಟುಕೊಳ್ಳುತ್ತ ಕಣ್ಮುಚ್ಚಿ ಕುಳಿತಿದ್ದ ಸಿದ್ಧಸಾಧು ಆ ಶಿವ ಉರಿಗಣ್ಣು ಬಿಟ್ಟು ಮನ್ಮಥನ ಸುಟ್ಟು ಭಸ್ಮ ಮಾಡುವ ಗಳಿಗೆಗೆ ಸರಿ ಕಣ್ಣಬಿಟ್ಟರು. ವಸೂದಿಪ್ಯನ ಮನದೊಳಗೆ ನಡೆದಿರುವ ಕೋಲಾಹಲವನ್ನು ಮುಖದ ಚಹರೆಯಲ್ಲಿ ಕಂಡು ಚಣ ಗಾಬರಿಯಾದರೂ ನಕ್ಕು ಮೈದಡವಿದರು. ಗುರುಗಳೇ..
ಅದು, ಆಟ. ಮನದೊಳಗೆ ಎದ್ದಿರುವ, ಏಳಬಹುದಾದ ಕಾಮಾಸಕ್ತಿಯನ್ನು ಸುಟ್ಟುಕೊಂಡು ಸಂಸಾರದ ನೊಗ ಕಟ್ಟಿಕೊಳ್ಳುವ ಶಿವನ ಆಟವದು. ಈಗ ಜರಗುವ ಗಿರಿಜಾಕಲ್ಯಾಣ ಇದೆಯಲ್ಲ ಅದು ಬದುಕಿಗೆ ಮಾದರಿ. ಪ್ರತಿಯೊಬ್ಬನೂ ಆ ಪರಶಿವನ ಹಾಗೆ ಒಂದು ಸಲ ಕೋಪಾವಿಷ್ಠನಾಗಿ ತನ್ನ ಅಂತರಂಗದೊಳಗೆ ಮೂಡುವ ಮೋಹವನ್ನು ಕೊಂದುಕೊಳ್ಳುತ್ತಾನೆ. ಲೀಲೆಯದು… ತಾನೇ ತನ್ನ ಕೈಯಾರೆ ಕೊಂದುಕೊಂಡ ಮದನಭಾವವನ್ನು ಮತ್ತೊಮ್ಮೆ ಕರುಣೆಯ ಮೂಲಕ ಹುಟ್ಟಿಸಿಕೊಂಡು ಮದುವೆಯಾಗಿ ಸೃಷ್ಟಿಕಾರ್ಯದಲ್ಲಿ ತೊಡಗುತ್ತಾನೆ.
ಸೃಷ್ಟಿಕಾರ್ಯ..?
ಹೌದು, ವಿಕೃತವಾದ ಸೆಳೆತ ಅಳಿದ ಮೇಲೆ ನವಿರಾದ ಪ್ರೇಮ ಹುಟ್ಟುವುದಪ್ಪಾ.
ಪ್ರೇಮ..?
ಪ್ರೇಮ ಎನ್ನುವುದು ಮನಸಿನ ವ್ಯಾಪಾರ. ಅದು ಮೋಹದ ಬಲೆಯೊಳಗಿದ್ದರೆ ಕೇವಲ ದೇಹದ ಸುಖ ಬಯಸುವ ಗೀಳಾಗುತ್ತದೆ. ಅದರ ಮೇರೆಯನ್ನು ಮೀರಿ ನಡೆದರೆ ನಿಜವಾದ ಸುಖ ದಕ್ಕುತ್ತದೆ. ನೀನು ಅರಿವಿನ ನಿಜಸುಖದ ಸಂಗವ ಬಯಸು ಮಗು. ಅಗಾ ನೋಡಲ್ಲಿ ಆ ಶಿವನೇ ಮತ್ತೆ ಮನ್ಮಥನನ್ನು ಬದುಕಿಸಿದ. ಲೋಕಕಲ್ಯಾಣಕ್ಕೆ ಯಾವ ಜೀವದ ಹಾನಿಯೂ ಆಗಬಾರದು ಮಗು. ಆ ಶಿವನೂ ಶಿವೆಯೂ ನಮ್ಮೊಳಗೇ ಇದ್ದಾರೆ. ಅವರು ಸೃಷ್ಟಿಸಿರುವ ಅಸಂಖ್ಯ ಭಾವಗಳೂ ಈ ದೇಹವೆಂಬೋ ಭಾವಿಯಲ್ಲಿದ್ದಾವೆ ಅಂತ ನಾಗಾರ್ಜುನ ಹೇಳತಾನೆ.
ಗುರುಗಳಲ್ಲಿ ಕೇಳಬೇಕಾದ ಅಸಂಖ್ಯ ಪ್ರಶ್ನೆಗಳಿದ್ದರೂ ಅವರು ಇಂದಿನಿಂದು ಮುಂದಲ ಹುಣ್ಣಿವೆತನಕ ಮಹಾಕೂಟದ ಗುಹೆಯಲ್ಲಿ ಅನುಷ್ಠಾನಕ್ಕೆ ಕೂರುವವರಿದ್ದರು. ಗಿರಿಜಾಕಲ್ಯಾಣ ಆಟ ಮುಗಿದು, ಮೂಡಣದಲ್ಲಿ ಚುಳುಚುಳು ಬೆಳಕು ಮೂಡಿ ಅನುಷ್ಠಾನಕ್ಕೆ ಹೊರಡುವ ಮೊದಲು ವಸೂದೀಪ್ಯನ ತಲೆಯ ಮೇಲೆ ಕೈಯಿಟ್ಟು ಹರಸಿದರು.
ವಸೂದೀಪ್ಯ… ಮಾತು ಕೂಡ ಎಂಜಲು. ಈ ಮಾತಿನ ಬೆನ್ನುಬೀಳದೆ ಮೌನದ ಗುಹೆಯೊಳಗೆ ಹೊಕ್ಕು ಕೂರಬೇಕಿದೆ ನಾನು. ನಿನ್ನ ಕಲಿಕೆ ಮುಗಿಯಿತೆಂದು ಭಾವಿಸಿ ಮದುವೆ ಮಾಡಿಕೊಂಡು ಮಕ್ಕಳ ಮಾಡಿಕೊಂಡು ಲೋಕ ರೂಢಿಯಂತೆ ಬದುಕಿ ಬಾಳು. ನಿನ್ನೊಳಗೆ ಏನೆ ಪ್ರಶ್ನೆಗಳು ಏನಿದ್ದರೂ ನಿನ್ನೊಳಗೆ ನೀನೆ ಕೇಳಿಕೋ.. ಅಲ್ಲಿ ಅರಿವಿನ ಬೆಳಕಿದೆ. ಒಂದೊಮ್ಮೆ ಆ ಕಲಿಕೆಯ ಗರ್ಭಗುಡಿ ಹೊಕ್ಕು ಅರಿವಿನ ಬೆಳಕು ಕಾಣುವ ಸದಿಚ್ಚೆ ನಿನ್ನೊಳಗಿದ್ದರೆ ಅದು ನಿನ್ನ ಕೈಹಿಡಿದು ಮುನ್ನಡೆಸಲಿ… ಮಂಗಳವಾಗಲಿ.
ಮೊದಲೇ ಕಟ್ಟಿಟ್ಟಿದ್ದ ಲ್ಯಾವಿಗಂಟನ್ನು ತಲೆಯ ಮೇಲಿಟ್ಟುಕೊಂಡು, ಬಗಲಿಗೆ ಜೋಳಿಗೆ ನೇತಾಕಿಕೊಂಡು ಆ ಸಪೂರ ದೇಹದ ಸ್ವಾಮಿ ಸಿದ್ಧಸಾಧು ಮಹಾಕೂಟೇಶನ ಗುಡ್ಡದತ್ತ ನಡೆದರು.
(ಮುಂದುವರೆಯುತ್ತದೆ)
Comments 10
ಗುಣಶಂಕರ ಪಲ್ಲೇದ
Oct 24, 2024ಅನಿಮಿಷ ಯೋಗಿಯ ಕತೆ ಸಂಚಿಕೆಯಿಂದ ಸಂಚಿಕೆಗೆ ಕುತೂಹಲ ಹುಟ್ಟಿಸುತ್ತಿದೆ.
ಮೈಸೂರು ಮಹದೇವ
Oct 28, 2024ಅಲ್ಲಮಪ್ರಭು ತಂದೆಯವರ ಗುರು ಅನಿಮೀಷ ಗುರುವಿನ ಬಗ್ಗೆ ಬರೆಯುತ್ತಿರುವ ನಿಮ್ಮ ಲೇಖನ ಓದುಗರ ಮನಸ್ಸುನ್ನು ಹಿಡಿದಿಟ್ಟುಕೊಂಡು ಸಾಗುತ್ತದೆ. ಮೊದಲಿಗೆ ಲೇಖನ ದೀರ್ಘವಾಗಿದೆ ಎನಿಸಿದರೂ ಈ ಸಂಸಾರದ ಜಂಜಾಟದಲ್ಲಿ ಓದುವುದಕ್ಕೆ ಸಮಯವಿಲ್ಲ ಎಂದು ಎನಿಸಿದರೂ ಈ ಲೇಖನದ ರುಚಿ ಸ್ವಲ್ಪ ಹತ್ತಿದರೆ ಸಾಕು ಒಂದೇ ಓದಬೇಕು ನೆಲೆಸುತ್ತದೆ.
ಕಥೆಯಲ್ಲಿ ನಾವುಗಳು ಇದ್ದೀವಿ ಅನ್ನೊ ಹಾಗೆ ಭಾಸವಾಯಿತು. ನಮ್ಮ ಅವ್ವ ಅಜ್ಜಿ ಹೇಳುತ್ತಿದ್ದ ಕಥೆಗಳ ತರಹ ನೀವು ನಿರೂಪಣೆ ಮಾಡಿದ್ದೀರಿ ಅಣ್ಣಾವ್ರೆ.
ಒಂದು ಚಲನಚಿತ್ರವನ್ನು ನೋಡಿದ ಹಾಗೆ ಅನುಭವ ಆಗುತ್ತದೆ.
ಇನ್ನು ಹೆಚ್ಚು ಹೆಚ್ಚು ಸೃಜನಶೀಲತೆ, ಸಾಮಾಜಿಕ ಕಳಕಳಿಯ ಬಗ್ಗೆ ಬೆಳಕು ಚೆಲ್ಲುವ ಲೇಖನಗಳು ನಿಮ್ಮಿಂದ ಹೊರಹೊಮ್ಮುಲಿ ಎಂದು ಪ್ರಾರ್ಥಿಸುತ್ತೇನೆ. ಶರಣು ಶರಣಾರ್ಥಿಗಳು.
ಸುವರ್ಣಾ ಗಂಗಾಧರ, ಚಿಲಕವಾಡಿ
Oct 30, 2024ಅನಿಮಿಷ ಯೋಗಿಯ ಕತೆ ಬಹಳ ಸೊಗಸಾಗಿ ಬರುತ್ತಿದೆ. ಶರಣರ ಕತೆಗಳನ್ನು ನಿಮ್ಮಿಂದ ಕೇಳುವುದೇ ಚಂದ ಅಣ್ಣಾವರೆ.
Veeresh D
Nov 1, 2024ಇಡೀ ಕತೆಯನ್ನು ಒಂದೇ ಬಾರಿಗೆ ಓದಬೇಕೆನಿಸುತ್ತದೆ. ಬಾಲಕ ಅನಿಮಿಷ ಯೌವನಕ್ಕೆ ಬಂದಾಗ ತಪ್ಪಿಸಿಕೊಳ್ಳಲಾಗದ ಕಾಮ, ಪ್ರೇಮಗಳ ಬಲೆ ಅವನನ್ನು ಆವರಿಸಿದ ರೀತಿಯನ್ನು ಮಹಾದೇವ ಹಡಪದ ಅವರು ಸೊಗಸಾಗಿ ಚಿತ್ರಿಸಿದ್ದಾರೆ.
ಡಾ. ಶಿವಕುಮಾರ ಕಣಸೋಗಿ, ದಾವಣಗೆರೆ
Nov 3, 2024ಮಹಾದೇವ ಹಡಪದ ಒಳ್ಳೆಯ ನಾಟಕಕಾರ, ನಟ, ನಿರ್ದೇಶಕ. ಅವರಿಂದ ಅಕ್ಕಮಹಾದೇವಿ, ಅಲ್ಲಮಪ್ರಭು ಮತ್ತು ಬಸವಣ್ಣನನ್ನು ಕುರಿತು ನಾಟಕ ಬರೆಯಿಸಿ. ವಿಭಿನ್ನ ರೀತಿಯ ನಾಟಕವಿದ್ದರೆ ಒಳ್ಳೆಯದು.🙏🙏
ಸುದೀಪ್ ಪಾಟೀಲ, ಬಳ್ಳಾರಿ
Nov 5, 2024ತಂದೆ ಮಗ ಇಬ್ಬರ ಭೇಟಿಯಾಗುತ್ತದೆಂದು, ವರ್ಷಗಳ ಅಗಲಿಕೆಯನ್ನು ನೀಗುವ ಕಾಲ ಬಂತೆಂದು ಭಾವಿಸಿದ್ದೆ. ಈ ಸಲ ಕತೆ ಬೇರೆಯದೇ ತಿರುವು ಪಡೆದುಕೊಂಡಿದೆ. ಹುಡುಗನಿಗೆ ಈಗ ಯೌವನದ ಪ್ರಾಯವಲ್ಲವೆ? ಕತೆಗಾರರಾದ ನೀವು ಸರಿಯಾಗಿ ಪಾತ್ರವನ್ನು ಬೆಳೆಸುತ್ತಿದ್ದೀರಿ…
ಭೀಮನಗೌಡ ಔರಾದ್
Nov 11, 2024ಅಣ್ಣಾ, ಅನಿಮಿಷ ಯೋಗಿಯ ಕತೇನ ನೀವೇ ನಾಟಕ ಮಾಡಿ, ನಿರ್ದೇಶಿಸಬೇಕು. ಕತೆಯ ಪರಿಸರ, ಸನ್ನಿವೇಶಗಳು ಕಣ್ಣಿಗೆ ಕಟ್ಟುವಂತಿವೆ.
ನಂಜಪ್ಪ ತಾತಾ, ಶಿಗ್ಗಾವಿ
Nov 11, 2024ಶರಣರ ಕತೆ ಬರೆಯುವ ಸಾಹಸಕ್ಕೆ ಕೈ ಹಾಕಿದ್ದೀರಿ, ಒಳ್ಳೆಯದಾಗಲಿ, ಶುಭಹಾರೈಕೆಗಳು.
ಶಿವಬಸಪ್ಪ ಬಾಗಲಕೋಟೆ
Nov 12, 2024ವಸೂದೀಪ್ಯನ ಗುರುಗಳ ಮಾತು ಅವನ ಮುಂದಿನ ದಿನಗಳಿಗೆ ದಿಕ್ಸೂಚಿಯಂತಿವೆ. ಆಯ್ಕೆಯ ಹೊಣೆ ಶಿಷ್ಯನ ಹೆಗಲಿಗೇ ಬಿಟ್ಟು, ಮೌನಕ್ಕೆ ಹೋದ ಗುರುವಿನ ಅಂತರಾಳ ಏನಿತ್ತು? ತಾನಾಗಿಯೇ ಶಿಷ್ಯ ಅರಸಿಕೊಳ್ಳಲಿ ಎನ್ನುವ ಸೂಚನೆ ಇದೆಯೇ?
ಮಹಾದೇವ
Nov 13, 2024ಕತೆಯ ಪ್ರತಿ ಕಂತುಗಳನ್ನು ಓದಿ….
ಪ್ರತಿಕ್ರಿಯಿಸುತ್ತಿರುವ ತಮಗೆಲ್ಲರಿಗೂ ಆಭಾರಿ.
ಸಣ್ಣದೊಂದು ಕತೆ ಬರೆಯಲು ಹೊರಟವನಿಗೆ ಹೀಗೆ ಅನಿಮಿಷಯೋಗಿಗಳು ದೊರೆಯುತ್ತಿರುವುದರ ಬಗ್ಗೆ ನನಗೂ ಸೋಜಿಗವಾಗುತ್ತಿದೆ. ಈ ಕತೆಯನ್ನು ಬರೆಯಿಸಿದ ಅಕ್ಕನಿಗೆ ಶರಣು….
ಓದುವ ತಮಗೂ ಶರಣು ಶರಣಾರ್ತಿಗಳು