Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಿಂಚೊಂದು ಬಂತು ಹೀಗೆ…
Share:
Articles August 6, 2022 Bayalu

ಮಿಂಚೊಂದು ಬಂತು ಹೀಗೆ…

-ವಿವೇಕಾನಂದ ಹೆಚ್.ಕೆ
ಒಬ್ಬ ವ್ಯಕ್ತಿಯ ಚಿಂತನೆಗಳು ಒಂದು ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿ, ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡು, ಒಂದು ಅನುಭವ ಮಂಟಪ ಎಂಬ ಸಂಸತ್ತಿನ ರೂಪದ ಚರ್ಚಾ ವೇದಿಕೆಯಾಗಿ, 12 ನೆಯ ಶತಮಾನದಲ್ಲಿ ಒಂದು ಬಹುದೊಡ್ಡ ಕ್ರಾಂತಿಯಾಗಿ, ಅದು ಒಂದು ಸಮುದಾಯವಾಗಿ ಬೆಳವಣಿಗೆ ಹೊಂದಿ, 21ನೆಯ ಶತಮಾನದಲ್ಲಿ ಒಂದು ಧರ್ಮದ ರೂಪ ಪಡೆಯಲು ಹೋರಾಟವಾಗಿ ಮಾರ್ಪಾಡಾಗಿ ಈ ಹೊತ್ತಿನಲ್ಲಿ ಒಂದು ದೊಡ್ಡ ಶಕ್ತಿಯಾಗಿ ತನ್ನ ಅಸ್ತಿತ್ವ ಪಡೆದುಕೊಂಡಿರುವ ಐತಿಹಾಸಿಕ ಮಹತ್ವದ ವ್ಯಕ್ತಿ- ಬಸವಣ್ಣ, ಸಾಹಿತ್ಯ- ವಚನಗಳು, ಸಂಸತ್ತು- ಅನುಭವ ಮಂಟಪ, ಕ್ರಾಂತಿ- ಕಲ್ಯಾಣಕ್ರಾಂತಿ, ಸಮುದಾಯ- ಲಿಂಗಾಯತ, ಹೋರಾಟ- ಲಿಂಗಾಯತ ಧರ್ಮ, ಶಕ್ತಿ ಕರ್ನಾಟಕದ ರಾಜಕೀಯದಲ್ಲಿ ಲಿಂಗಾಯತರ ಪ್ರಭಾವಳಿ…

ಬಹುತೇಕ ಜೀಸಸ್, ಪೈಗಂಬರ್, ಗೌತಮ ಬುದ್ಧ, ಮಹಾವೀರ, ಗುರುನಾನಕ್, ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ ರೀತಿಯ ವ್ಯಕ್ತಿತ್ವ ಮತ್ತು ಚಿಂತನೆಗಳು ಮತ್ತು ಕೆಲವು ವಿಚಾರಗಳಲ್ಲಿ ಅವರುಗಳನ್ನು ಮೀರಿ ಸಮಾನತೆಯನ್ನು ಸ್ಥಾಪಿಸಲು ಹೋರಾಡಿದ ಬಸವಣ್ಣ ಒಂದು ರೀತಿಯ ಚಿಂತನೆಗಳಲ್ಲಿ ಅತಿ ಮಾನವ ಶಕ್ತಿ ಇರಬಹುದೇ ಎಂಬ ಅನುಮಾನ ಹುಟ್ಟಿಸುವ ಸಾಮಾನ್ಯ ವ್ಯಕ್ತಿ.

ಏಕೆಂದರೆ, 21 ನೆಯ ಶತಮಾನದ ಈಗಿನ ಅತ್ಯಾಧುನಿಕ ತಂತ್ರಜ್ಞಾನದ ಕಾಲದಲ್ಲೂ ಜಾತಿ ಧರ್ಮ ಮೌಡ್ಯ ಅಜ್ಞಾನಗಳ ಫಲವಾಗಿ ಮರ್ಯಾದೆ ಹತ್ಯೆಯೂ ಸೇರಿ ಅತ್ಯಂತ ಅನಾಗರಿಕ ಮೃಗೀಯ ವರ್ತನೆಗಳನ್ನು ಈ ಸಮಾಜದಲ್ಲಿ ಕಾಣುತ್ತಿರುವಾಗ ಬದುಕಿನ್ನೂ ಸಂಕೀರ್ಣವಾಗದೆ ಬಹಳ ಸರಳವಾಗಿದ್ದ 12 ಶತಮಾನದಲ್ಲಿಯೇ ಸಮ ಸಮಾಜದ ಕನಸನ್ನು ಕಾಣುವುದು ಮತ್ತು ಅದಕ್ಕಾಗಿ ಹೋರಾಡುವುದು ಊಹಿಸಲೂ ಅಸಾಧ್ಯ. ಅದು ಕೇವಲ ಸಾಮಾನ್ಯ ಸಮಾನತೆಯನ್ನು ಅಲ್ಲ. ವರ್ಣಾಶ್ರಮ ವ್ಯವಸ್ಥೆಯ ಅತ್ಯಂತ ಉಚ್ಚ ಸ್ಥಾನದಲ್ಲಿ ಆಸೀನರಾಗಿದ್ದ ಬ್ರಾಹ್ಮಣರಿಗೂ, ಮನುಷ್ಯರೇ ಅಲ್ಲವೇನೋ ಎಂಬಂತೆ ಊರ ಹೊರಗೆ ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತರಾದವರಾಗಿದ್ದ ಅಸ್ಪೃಶ್ಯರಿಗೂ ಮದುವೆ ಮಾಡಿಸಿ ರಕ್ತ ಸಂಬಂಧ ಬೆಸೆಯುವ ಕ್ರಿಯೆ… ಅಭೂತಪೂರ್ವ ಅಲ್ಲದೇ ಮತ್ತೇನು? ಭಾರತೀಯ ಸಮಾಜದಲ್ಲಿ ಈಗಲೂ ವೇಶ್ಯಾ ವೃತ್ತಿಯನ್ನು ಅತ್ಯಂತ ನಿಕೃಷ್ಟ ಎಂದೇ ಪರಿಗಣಿಸಲಾಗಿದೆ. ಆದರೆ 12 ನೆಯ ಶತಮಾನದಲ್ಲಿಯೇ ವೇಶ್ಯೆಯರನ್ನು ಸಹ ತನ್ನ ಸಮಾನರು ಎಂದೇ ಭಾವಿಸಿ ಅವರಿಗೂ ಅನುಭವ ಮಂಟಪದಲ್ಲಿ ಪ್ರವೇಶ ನೀಡುವುದಲ್ಲದೇ ಸಾಹಿತ್ಯ ರಚನೆಗೆ ಅವಕಾಶ ನೀಡಿ ಸಮಾನತೆ ಮೆರೆಯುವುದು ಅತ್ಯದ್ಭುತ ಮಾನವೀಯತೆಯಲ್ಲವೇ?

ಕೇವಲ ಬಸವಣ್ಣನವರು ಮಾತ್ರವಲ್ಲ, ವಚನ ಸಾಹಿತ್ಯ, ವಚನ ಸಂಸ್ಕೃತಿ, ವಚನ ಚಳವಳಿ, ವಚನಕಾರರ ಜೀವನಶೈಲಿ, ಅದರಿಂದ ಪ್ರೇರಿತವಾದ ಕಲ್ಯಾಣ ಕ್ರಾಂತಿ ಮಾನವೀಯ ಇತಿಹಾಸದ ಮೈಲುಗಲ್ಲುಗಳು. ಈಗಾಗಲೇ ಈ ಬಗ್ಗೆ ಸಾಕಷ್ಟು ಗಂಭೀರ ಚರ್ಚೆಗಳು, ಚಿಂತನೆಗಳು, ಅಧ್ಯಯನಗಳು, ಸಂಶೋಧನೆಗಳು ನಡೆದಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಮಹತ್ವದ ವಿಷಯ ಆ ತಿಳಿವಳಿಕೆಯನ್ನು ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ನಡವಳಿಕೆಯಾಗಿ ಆಚರಣೆಗೆ ತರುವುದು ಹೇಗೆ ಎಂಬ ದೊಡ್ಡ ಸವಾಲು… ಎಲ್ಲಾ ನಿಜ ಶರಣರ ಮುಂದಿದೆ.

ಜಾಗತೀಕರಣದ ನಂತರ ಭಾರತೀಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ವೇಗವಾಗಿ ಬದಲಾವಣೆ ಹೊಂದುತ್ತಿದೆ ಮತ್ತು ಅದು ಶರಣ ಸಂಸ್ಕೃತಿಗೆ, ಶರಣರ ವಿಚಾರಧಾರೆಗೆ ಬಹುತೇಕ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ.
ದಿನೇ ದಿನೇ ವಿವಿಧ ವರ್ಗಗಳ ನಡುವೆ ಅಸಮಾನತೆ ಹೆಚ್ಚಾಗುತ್ತಿದೆ. ಮಾನವೀಯ ಸಂಬಂಧಗಳು ನಶಿಸುತ್ತಿವೆ. ಕೆಟ್ಟ ಮತ್ತು ಭ್ರಷ್ಟ ಹಣ ಮುಂಚೂಣಿಗೆ ಬಂದಿದೆ. ಆಧ್ಯಾತ್ಮವೂ ಸೇರಿ ಎಲ್ಲವೂ ವ್ಯಾಪಾರೀಕರಣಗೊಂಡಿದೆ.

ಇಂತಹ ಸಂದರ್ಭದಲ್ಲಿ ವಿಶ್ವದಲ್ಲಿಯೇ ವಿನೂತನ ಪ್ರಯೋಗಾತ್ಮಕ ಯಶಸ್ವಿ ಪ್ರಯೋಗ ಬಸವ ತತ್ವದ ಆಧಾರದ ಮೇಲೆ ಸ್ಥಾಪಿತವಾದ ಮಠ ಸಂಸ್ಕೃತಿ. ಮುಖ್ಯವಾಗಿ ಅನ್ನ ದಾಸೋಹ, ಅಕ್ಷರ ದಾಸೋಹ, ಆಶ್ರಯ ದಾಸೋಹ ಎಂಬ ತ್ರಿವಿಧ ದಾಸೋಹಗಳ ಮೂಲಕ ಸಮಾಜದ ಅತ್ಯಂತ ದುರ್ಬಲ ವರ್ಗದವರಿಗೆ ಬದುಕು ನೀಡುವುದು ಮತ್ತು ಆ ಮುಖಾಂತರ ಮಾನವೀಯ ಮೌಲ್ಯಗಳನ್ನು ಮತ್ತೊಂದು ತಲೆಮಾರಿಗೆ ವರ್ಗಾಯಿಸುವ ಬಹುದೊಡ್ಡ ಜವಾಬ್ದಾರಿ ಈ ಮಠ ಸಂಸ್ಕೃತಿಯ ಮುಖ್ಯ ಆಶಯ. ‘ದಯೆಯೇ ಧರ್ಮದ ಮೂಲವಯ್ಯ’ ಎಂಬ ತತ್ವದ ಅಡಿಯಲ್ಲಿ ಇವುಗಳ ಕಾರ್ಯನಿರ್ವಹಿಸುತ್ತದೆ.

ಇದು ಒಂದು ಹಂತದವರೆಗೆ ಕೆಲವು ಲೋಪಗಳ ಮಧ್ಯೆಯೂ ಸಾಕಷ್ಟು ಉತ್ತಮ ರೀತಿಯಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದವು. ಆದರೆ ಆಧುನಿಕತೆಯ ಪ್ರಭಾವ, ರಾಜಕೀಯ ಒಳ ನುಸುಳುವಿಕೆಯಿಂದ ಮಠ ಸಂಸ್ಕೃತಿ ಇಂದು ಬೃಹತ್ತಾಗಿ ಬೆಳೆಯುತ್ತಿದ್ದರೂ ತನ್ನ ಮೌಲ್ಯಗಳನ್ನು ಕಳೆದುಕೊಂಡಿವೆ. ಶಿಕ್ಷಣ ಆರೋಗ್ಯ ವಸತಿ ಶಾಪಿಂಗ್ ಮಾಲ್, ದುಬಾರಿ ಕಟ್ಟಡಗಳು, ಭಾರಿ ಬೆಲೆಯ ವಾಹನಗಳು, ಜಾತಿಗೊಂದು ಮಠಗಳು, ಬಹಿರಂಗವಾಗಿ ನಿರ್ದಿಷ್ಟ ಪಕ್ಷಗಳ ಬೆಂಬಲ ಮುಂತಾದ ಕಾರಣಗಳಿಂದ ಮಠಗಳ ಸರ್ವಸಂಗ ಪರಿತ್ಯಾಗಿ ಎಂಬ ಪರಿಕಲ್ಪನೆಯೇ ಸಾರ್ವಜನಿಕ ಅನುಮಾನಗಳಿಗೆ ಕಾರಣವಾಗಿದೆ.

ಈಗ ನಮ್ಮೆಲ್ಲರ ಮುಂದೆ ಬಹುದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯ ನೆರವೇರಿಸಬೇಕಾದ ಸವಾಲು ಎದುರಾಗಿದೆ. ಈಗ ನಾವೆಲ್ಲರೂ ಒಂದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಿದೆ.

ಶರಣ ಎಂಬುದು ಒಂದು ಸಾಹಿತ್ಯ ಮಾತ್ರವಲ್ಲ, ಸಂಸ್ಕೃತಿ ಮಾತ್ರವಲ್ಲ, ಒಂದು ಚರ್ಚಾಗೋಷ್ಟಿ ಮಾತ್ರವಲ್ಲ, ಒಂದು ಚಳವಳಿ ಮಾತ್ರವಲ್ಲ, ಒಂದು ಬಂಡಾಯ ಮಾತ್ರವಲ್ಲ ಅದು ಒಂದು ಜೀವನ ವಿಧಾನ, ಅದು ಒಂದು ಸಾಮಾಜಿಕ ಪರಿಕಲ್ಪನೆ, ಅದು ಒಂದು ಸಾಮುದಾಯಿಕ ಪ್ರಜ್ಞೆ, ಅದು ಒಂದು ಬದುಕಿನ ಸಾರ್ಥಕತೆಯ ಮಾರ್ಗದರ್ಶನ.

ಇದನ್ನು ಇಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಾಗಿದೆ.
ಅಂದರೆ,
ಮತ್ತೆ ಕಲ್ಯಾಣ ಒಂದು ಅದ್ಭುತ ಚಿಂತನೆ.
ಗೆಳೆಯರೆ ಒಮ್ಮೆ ಸಮಾನತೆಯ ಸಮಾಜವನ್ನು ಕಲ್ಪಿಸಿಕೊಳ್ಳಿ.

ಇಡೀ ಕರ್ನಾಟಕದಲ್ಲಿ ಯಾರು ಯಾರನ್ನು ಬೇಕಾದರೂ ಕಾನೂನಿನ ಅಡಿಯಲ್ಲಿ ಜಾತಿಯ ಭೇದವಿಲ್ಲದೆ ಮದುವೆಯಾಗಬಹುದು. ಯಾವುದೇ ಜಾತಿಯ ಸಂಘಟನೆ ಅಥವಾ ಸಮಾವೇಶ ಇರುವುದಿಲ್ಲ. ಜಾತಿಯೇ ಇಲ್ಲದ ಮೇಲೆ ಜಾತಿ ಆಧಾರಿತ ಮೀಸಲಾತಿ ಇರುವುದಿಲ್ಲ. ಎಲ್ಲಾ ಮಂದಿರ ಮಸೀದಿ ಚರ್ಚುಗಳು ಎಲ್ಲರಿಗೂ ಮುಕ್ತ ಪ್ರವೇಶ. ಜಾತಿ ರಹಿತ ಚುನಾವಣೆ. ಅರ್ಹರಿಗಷ್ಟೇ ಮತ. ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಹಿಂಸೆ ಇರುವುದೇ ಇಲ್ಲ.
ಅಬ್ಬಾ ಎಷ್ಟೊಂದು ಸುಂದರ ಅಲ್ಲವೇ!

ಮನುಷ್ಯ ನಾಗರಿಕ ಜೀವನ ನಡೆಸಲು ಮತ್ತೆ ಕಲ್ಯಾಣದ ಅವಶ್ಯಕತೆ ಇದೆ. ಆದರೆ ಅದು ಬಸವೇಶ್ವರರ ಸಮಾನತೆಯ ಕಲ್ಪನೆಯಾಗಿರಬೇಕೆ ಹೊರತು ಇಂದಿನ ರಾಜಕಾರಣಿಗಳ, ಮಠಾಧೀಶರುಗಳ, ಸ್ವಾರ್ಥ ನಾಯಕರ, ಸಂಕುಚಿತ ವಿಚಾರವಾದಿಗಳ ಕಲ್ಯಾಣವಲ್ಲ.

ಇಡೀ ವ್ಯಕ್ತಿತ್ವವೇ ಎಲ್ಲಾ ವಿಷಯಗಳಲ್ಲಿ ಸಮಾನತೆಯನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಕಲ್ಯಾಣ ಕೇವಲ ಕನಸಿನ ಮಾತಾಗುತ್ತದೆ. ಆದರೂ, ಮತ್ತೆ ಕಲ್ಯಾಣಕ್ಕಾಗಿ ಆ ಕನಸನ್ನು ನನಸು ಮಾಡಲು ಮನಸ್ಸುಗಳ ಅಂತರಂಗದ ಚಳವಳಿ ಸದಾ ಜಾರಿಯಲ್ಲಿರುತ್ತದೆ ಅದು ವಾಸ್ತವವಾಗುವವರೆಗೂ…

ಕ್ಷಮಿಸೋ ತಂದೆ ನಿನ್ನದೇ ಧರ್ಮ ಮಾಡಿದ್ದಕ್ಕೆ,
ಕ್ಷಮಿಸೋ ಅಪ್ಪ ನಿನ್ನದೇ ಜಾತಿ ಮಾಡಿದ್ದಕ್ಕೆ,
ಕ್ಷಮಿಸೋ ಅಣ್ಣ ನಿನ್ನ ವಚನಗಳನ್ನು ಕೇವಲ ಗೋಡೆ ಬರಹಗಳಾಗಿಸಿದ್ದಕ್ಕೆ…
ನೀ ಹುಟ್ಟಿದಾ ಸ್ಥಳ ತೀರ್ಥಕ್ಷೇತ್ರವಾಯಿತು,
ನೀ ಬರೆದ ವಚನಗಳು ಧರ್ಮಗ್ರಂಥಗಳಾದವು,
ನೀ ನುಡಿದ ಮಾತುಗಳು ದೈವವಾಣಿಯಾದವು,
ನಿನ್ನ ಮೂರ್ತಿಯೇ ಗರ್ಭಗುಡಿಯ ದೇವರಾಯಿತು,
ನಿನ್ನ ಹೆಸರಲ್ಲೇ ಸಂಘ ಸಂಸ್ಥೆಗಳಾದವು,
ನಿನ್ನ ಹೆಸರಲ್ಲೇ ಮಠಗಳಾದವು,
ನಿನ್ನ ಹೆಸರಲ್ಲೇ ಉದ್ದಿಮೆಗಳಾದವು,
ನಿನ್ನ ಹೆಸರಲ್ಲೇ ವ್ಯಾಪಾರಿ ಶಿಕ್ಷಣ ಸಂಸ್ಥೆಗಳಾದವು,
ವಿದೇಶಕ್ಕೂ ಹಾರಿತು ನಿನ್ನ ಖ್ಯಾತಿ,
ನಿನ್ನ ಮೇಲಿನ ಸಂಶೋದನೆಗಳು ಅಸಂಖ್ಯಾತ,
ನಿನ್ನ ಹೆಸರಿಲ್ಲದೆ ರಾಜಕೀಯ ಮಾಡದಂತಾಯಿತು,
ಒಟ್ಟಿನಲ್ಲಿ ನಮ್ಮೆಲ್ಲರ ಸರ್ವಶಕ್ತ, ದ್ಯೆವಾಂಶಸಂಭೂತ ಆರಾಧ್ಯ ದೈವವಾದೆ…

ಆದರೆ…

ನೀನು ಕಂಡ ಆದರ್ಶ ಸಮಾಜದ ಕನಸು ಮಾತ್ರ ನನಸಾಗಲಿಲ್ಲ,
ನಿನ್ನ ಕನಸಿನ ಸಮಾನತೆ ಸಾಧ್ಯವಾಗಲಿಲ್ಲ,
ಜಾತಿ ವ್ಯವಸ್ಥೆ ಈಗ ಹೆಬ್ಬಂಡೆಯಾಗಿ ಮತ್ತಷ್ಟು ಗಟ್ಟಿಯಾಗಿದೆ,
ಮೌಡ್ಯವಂತೂ ವಿಜ್ಞಾನವನ್ನು ನುಂಗಿ ಅಜ್ಞಾನವಾಗಿ ಮನೆಮನೆಯ ಆಚರಣೆಯಾಗಿದೆ,
ಪ್ರಜಾಪ್ರಭುತ್ವ ಸರ್ವಾಧಿಕಾರಿ ದುಷ್ಟ ಭ್ರಷ್ಟರ ಮುಖವಾಡವಾಗಿದೆ,
ಅನುಭವ ಮಂಟಪ ಬುದ್ದಿಹೀನರ ಜಟ್ಟಿಕಾಳಗವಾಗಿದೆ,
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದೇನೋ ಹೇಳಿದೆ,
ಆದರೆ ಜಂಗಮ ಅಳಿದು ಸ್ಥಾವರ ಶಾಶ್ವತವಾಗಿದೆ,
ಹೊಲಸು ತಿನ್ನುವವನೇ ಹೊಲೆಯ ಎಂದೇನೋ ಹೇಳಿದೆ,
ಆದರೆ ಹೊಲಸು ತಿಂದೂ ಹೊಲಸಾಡುವವನು ಶ್ರೇಷ್ಠನಾದ,
ಅಯ್ಯಾ ವಿಶ್ವ ಗುರುವೇ, ಸಮಾನತೆಯ ಹರಿಕಾರನೆ,
ನೀನೇ ಜಾತಿಯಾದೇ, ನೀನೇ ಧರ್ಮವಾದೆ, ನೀನೇ ದೇವರಾದೆ,
ಇದಕ್ಕಾಗಿ ನಿನ್ನನ್ನು ನಾನು ಮಾತ್ರ ಕ್ಷಮಿಸುವುದಿಲ್ಲ,
ಇದನ್ನು ಹೇಳಿದರೆ ನಿನ್ನ ಜನ ಕಲ್ಲಿನಲ್ಲಿ ಹೊಡೆಯುತ್ತಾರೆ,
ಆತ್ಮಸಾಕ್ಷಿಗೆ ಓಗೊಟ್ಟು ಕರುಳು ಕಿವುಚುವ ವಾಸ್ತವ ತೆರೆದಿಟ್ಟರೆ ಕೊಲ್ಲುತ್ತಾರೆ,
ಅದಕ್ಕೆ ನಾನವರನ್ನು ಟೀಕಿಸುವುದಿಲ್ಲ,
ನಿನ್ನನ್ನೇ ಬೈದು, ಕಣ್ಣೀರು ಹಿಂಗುವಂತೆ ಅತ್ತು ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ…
ಆದರೂ…

ಅಯ್ಯಾ ಬಸವಣ್ಣ,
ಸಮಾನತೆಗಾಗಿ ಅದರಿಂದ ಸಮಾಜದ ನೆಮ್ಮದಿಗಾಗಿ ಒಂದೇ ಒಂದು ಸಾರಿ ಮತ್ತೊಮ್ಮೆ ಹುಟ್ಟಿ ಬಾ,
ಅಲ್ಲಿಯವರೆಗೂ ನಿನಗಾಗಿ ಕಾಯುತ್ತಲೇ ಇರುತ್ತೇನೆ…
ಒಟ್ಟಿನಲ್ಲಿ ಕನ್ನಡ ನಾಡಿನ ಒಂದು ಚಿಂತನೆ ವಿಶ್ವಮಾನ್ಯವಾಗುವ ದಿನಗಳ ನಿರೀಕ್ಷೆಯಲ್ಲಿ…

Previous post ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
Next post ‘ಅಲ್ಲಮ’ ಎಂಬ ಹೆಸರು
‘ಅಲ್ಲಮ’ ಎಂಬ ಹೆಸರು

Related Posts

ನಾನು ಯಾರು? ಎಂಬ ಆಳ-ನಿರಾಳ
Share:
Articles

ನಾನು ಯಾರು? ಎಂಬ ಆಳ-ನಿರಾಳ

March 6, 2020 ಕೆ.ಆರ್ ಮಂಗಳಾ
ತನ್ನ ತಾನರಿಯದೆ ತನ್ನ ತಾ ನೋಡದೆ, ತನ್ನ ತಾ ನುಡಿಯದೆ, ಅನ್ಯರ ಸುದ್ದಿಯ ನುಡಿದಾಡುವ ಕುನ್ನಿಗಳಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ. ಅವನು...
ಕಾಯವೇ ಕೈಲಾಸ
Share:
Articles

ಕಾಯವೇ ಕೈಲಾಸ

April 29, 2018 ಕೆ.ಆರ್ ಮಂಗಳಾ
ದೇಹಕ್ಕೂ ಮತ್ತು ನನಗೂ ಸಂಬಂಧವೇನು? ಇಂಥದೊಂದು ಪ್ರಶ್ನೆ ಯಾರಾದರೂ ಕೇಳಿದರೆ ತಲೆ ಸರಿ ಇದೆಯೇ? ಎಂಬ ಮರುಪ್ರಶ್ನೆ ಬಾಣದಂತೆ ತೂರಿ ಬರುವುದು ನಿಶ್ಚಿತ. ಆದರೆ ಆಧ್ಯಾತ್ಮ ಲೋಕದಲ್ಲಿ...

Comments 10

  1. ಕೆ ಎಸ್ ಮಲ್ಲೇಶ್
    Aug 7, 2022 Reply

    ಶ್ರೀ ಹೆಚ್.ಕೆ ವಿವೇಕಾನಂದರ “ಮಿಂಚೊಂದು ಬಂತು ಹೀಗೆ” ಲೇಖನ ಓದಿದೆ. ತನ್ನ ಸರಳ ವಾಕ್ಯಗಳ ಮೂಲಕ ಅತ್ಯಂತ ಗಂಭೀರ ವಿಚಾರಗಳನ್ನು ನನ್ನ ಮನಮುಟ್ಟುವಂತೆ ಲೇಖಕರು ನಿರೂಪಿಸಿದ್ದಾರೆ.

  2. INDUDHAR, TUMKUR
    Aug 8, 2022 Reply

    I am truly pleased to read this weblog posts which carries lots of useful information, thanks for providing such knowledge.

  3. Halappa Bel
    Aug 10, 2022 Reply

    ಇವತ್ತಿನ ಪರಿಸ್ಥಿತಿಗೆ ಯಾಕೆ ನಮಗೆ ಬಸವಣ್ಣ ಬೇಕು ಅಂತ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿವೇಕಾನಂದರ ಬರವಣಿಗೆ ಓದಿಸಿಕೊಂಡು ಹೋಗುತ್ತದೆ, ಮಾತ್ರವಲ್ಲಾ ನಮ್ಮ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.

  4. ಜಯದೇವ ಹಾಲೂರು
    Aug 16, 2022 Reply

    ವಿವೇಕಾನಂದ ಸರ್, ನಿಮ್ಮ ನಿತ್ಯದ ಬರಹಗಳನ್ನು ಗಮನಿಸುತ್ತಿರುತ್ತೇನೆ, ಬಹಳ ಚೆನ್ನಾಗಿ ಬರೆಯುವಿರಿ. ನಮ್ಮ ಬಯಲು ಬ್ಲಾಗಿನಲ್ಲಿ ನಿಮ್ಮ ಲೇಖನ ಓದಿ ಖುಷಿಯಾಯಿತು. ಲೇಖನದುದ್ದಕ್ಕೂ ಬಸವಣ್ಣನವರ ಕುರಿತಾಗಿ ನಿಮ್ಮ ಕಳಕಳಿ ಮನಸ್ಸನ್ನು ಸೆರೆಹಿಡಿಯುತ್ತದೆ.

  5. Ganesh Pavate
    Aug 16, 2022 Reply

    I discovered your blog using msn. This is a very neatly written article.

  6. ಪರಮೇಶಪ್ಪಾ ರಾಯದುರ್ಗಾ
    Aug 22, 2022 Reply

    ಅನ್ನ ದಾಸೋಹ, ಅಕ್ಷರ ದಾಸೋಹ, ಆಶ್ರಯ ದಾಸೋಹ ಎಂಬ ತ್ರಿವಿಧ ದಾಸೋಹಗಳ ಮೂಲಕ ಸಮಾಜದ ಅತ್ಯಂತ ದುರ್ಬಲ ವರ್ಗದವರಿಗೆ ಬದುಕು ನೀಡುತ್ತಿರುವ ಮಠಗಳು ಇವತ್ತು ರಾಜಕೀಯ ತಾಣಗಳಾಗಿರುವುದು ದೊಡ್ಡ ದುರಂತವೇ ಸರಿ ಸರ್.

  7. ದೇವಕಿ ಮೂರ್ತಿ
    Aug 22, 2022 Reply

    ಶರಣ ಎಂಬುದು ಒಂದು ಸಾಹಿತ್ಯ ಮಾತ್ರವಲ್ಲ, ಸಂಸ್ಕೃತಿ ಮಾತ್ರವಲ್ಲ, ಒಂದು ಚರ್ಚಾಗೋಷ್ಟಿ ಮಾತ್ರವಲ್ಲ, ಒಂದು ಚಳವಳಿ ಮಾತ್ರವಲ್ಲ, ಒಂದು ಬಂಡಾಯ ಮಾತ್ರವಲ್ಲ ಅದು ಒಂದು ಜೀವನ ವಿಧಾನ, ಅದು ಒಂದು ಸಾಮಾಜಿಕ ಪರಿಕಲ್ಪನೆ, ಅದು ಒಂದು ಸಾಮುದಾಯಿಕ ಪ್ರಜ್ಞೆ, ಅದು ಒಂದು ಬದುಕಿನ ಸಾರ್ಥಕತೆಯ ಮಾರ್ಗದರ್ಶನ… ಲೇಖನ ಬಹಳ ಚೆನ್ನಾಗಿದೆ.

  8. ಆನಂದಯ್ಯ ಚರಂತಿಮಠ
    Aug 22, 2022 Reply

    ಲೇಖನದ ಒಂದೊಂದು ವಿಚಾರಗಳೂ ಮನಮುಟ್ಟುವಂತಿವೆ… ವಿವೇಕಾನಂದ ಅಣ್ಣನವರ ಮಾತುಗಳು ತುಂಬಾ ಚೆನ್ನಾಗಿವೆ.

  9. Mahadevappa, Shiruru
    Aug 24, 2022 Reply

    ಕ್ಷಮಿಸೋ ತಂದೆ ನಿನ್ನದೇ ಧರ್ಮ ಮಾಡಿದ್ದಕ್ಕೆ, ಕ್ಷಮಿಸೋ ಅಪ್ಪ ನಿನ್ನದೇ ಜಾತಿ ಮಾಡಿದ್ದಕ್ಕೆ… ಎನ್ನುವ ಮಾತುಗಳು ಲಿಂಗಾಯತರ ಹೀನ ಅವಸ್ಥೆಯನ್ನು ಎತ್ತಿ ಎತ್ತಿ ತೋರಿಸುತ್ತವೆ. ಯಾವುದನ್ನು ಬಸವಣ್ಣನವರು ಬೇಡವೆಂದರೋ ಅವುಗಳನ್ನೇ ಕಣ್ಣಿಗೊತ್ತಿಕೊಂಡು ಬದುಕುತ್ತಿರುವ ಲಿಂಗಾಯತರೇ ಬಸವಣ್ಣನವರ ನಿಜವಾದ ಶತೃಗಳು.

  10. ರಾಜೇಶ್ವರಿ ಗಜೇಂದ್ರಗಡ
    Sep 9, 2022 Reply

    ಜಗತ್ತಿನಲ್ಲೇ ವಿನೂತನ ಪ್ರಯೋಗ ಮಾಡಿ ತೋರಿಸಿದ ಬಸವಾದಿ ಶರಣರ ಕಾರ್ಯಗಳನ್ನು, ವಿಚಾರಗಳನ್ನು ಯಾಕೆ ನಾವು ಕನ್ನಡದ ಗಡಿಯನ್ನು ಕೂಡ ದಾಟಿಸಲು ವಿಫಲರಾಗಿದ್ದೇವೆ? ಇಂತಹ ಅಮೂಲ್ಯ ಚಿಂತನೆಗಳು ನಮ್ಮ ಜಾತಿಜಾತಿಯ ಕಿತ್ತಾಟದಲ್ಲಿ ಕಳೆದುಹೋಗಿವೆ ಎನಿಸುವುದಿಲ್ಲವೇ? ಶರಣ ವಿವೇಕಾನಂದರ ಚಿಂತನೆ ಬಹಳ ಚೆನ್ನಾಗಿ ಮೂಡಿಬಂದಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
ವೀರ
ವೀರ
April 29, 2018
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಅನುಭಾವ ಮತ್ತು ಅನಿರ್ವಚನೀಯತೆ
ಅನುಭಾವ ಮತ್ತು ಅನಿರ್ವಚನೀಯತೆ
March 12, 2022
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
February 11, 2022
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
Copyright © 2023 Bayalu